“ಮೈಸೂರು ಮಲ್ಲಿಗೆಯನ್ನು ತಂಗಾಳಿಗೊಡ್ಡಿದ ನರಸಿಹಸ್ವಾಮಿಯವರ ಪ್ರತಿಭೆ ಅಪ್ಸರೆಯಂತೆ, ಈ ಲಾವಣ್ಯವು ಮಣ್ಣು ನೆಲದಿಂದ ಬಂದುದಲ್ಲ ಎನಿಸಿಬಿಟ್ಟಿದೆ” ಎಂದು ಕವಿವರ‍್ಯ ದ.ರಾ. ಬೇಂದ್ರೆಯವರೂ, “ಮೈಸೂರು ಮಲ್ಲಿಗೆ ಕಸ್ತೂರಿಯ ನೆಲದಲ್ಲಿ ಕಾಮನ ಬಿಲ್ಲನ್ನು ಬಿತ್ತಿ ಬೆಳೆಯಿಸಿದ ಹೊದೋಟ” ಎಂದು ಪಂಡಿತೋತ್ತಮರಾದ ಡಿ.ಎಲ್. ನರಸಿಂಹಾಚಾರ್ಯರೂ ಪ್ರಶಂಸಿಸಿದ್ದಾರೆ. ಕವಿಗಳಿಂದ, ಪಂಡಿತರಿಂದ ಪ್ರಶಂಸೆಗಳಿಗೆ ಪಾತ್ರವಾದ ‘ಮೈಸೂರು ಮಲ್ಲಿಗೆ’ ಎಂಬ ಕವನ ಸಂಗ್ರಹ ಬಹುಸಂಖ್ಯೆಯ ಮುದ್ರಣಗಳನ್ನು ಕಂಡಿದೆ ಎಂದರೆ, ಅದು ಎಷ್ಟರಮಟ್ಟಿಗೆ ಜನಮನವನ್ನು ಸೂರೆಗೊಂಡಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೈಸೂರು ಮಲ್ಲಿಗೆಯಿಂದ ಹಿಡಿದು, ಐರಾವತ, ಇರುವಂತಿಗೆ, ದೀಪದ ಮಲ್ಲಿ, ಉಂಗುರ ಇತ್ಯಾದಿ ಸಂಗ್ರಹಗಳವರೆಗೆ ಬಳ್ಳಿವರಿದ ಅವರ ಒಲವಿನ-ಚೆಲುವಿನ ಕವಿತೆಗಳು ಬದುಕಿನ ಸುಕುಮಾರ ಮುಖವನ್ನು ಮಾತ್ರ ಚಿತ್ರಿಸುತ್ತಾ, ಉಳಿದ ಅಂಶಗಳನ್ನು ಕಡೆಗಣಿಸುವ ಪರಿಮಿತಿಗೆ ಒಳಗಾಗಿವೆ ಎಂಬ ವಿಮರ್ಶಕರ ಅಭಿಪ್ರಾಯವನ್ನು ಗಮನಿಸಿದರೂ, ಅವರ ಈ ಕವಿತೆಗಳ ಅನುಭವದ ಪ್ರಾಮಾಣಿಕತೆಯನ್ನಾಗಲಿ ಅಭಿವ್ಯಕ್ತಿಯ ಕೌಶಲವನ್ನಾಗಲಿ ಯಾರೂ ಮೆಚ್ಚದಿರಲು ಸಾಧ್ಯವಿಲ್ಲ.

ಶೃಂಗಾರ ಅತ್ಯಂತ ಮೋಹಕವಾದ ರಸ. ಆದುದರಿಂದಲೆ ಕಾವ್ಯ ಪರಂಪರೆಯಲ್ಲಿ ಬಹುಪಾಲು ಅದಕ್ಕೆ ಮೀಸಲು. ಆದರೆ ಅದನ್ನು ಔಚಿತ್ಯದ ಗೆರೆ ಮೀರದಂತೆ ನಿರ್ವಹಿಸುವುದು ತುಂಬ ಕಷ್ಟ. ಸಂಸ್ಕೃತ ಸಾಹಿತ್ಯದಲ್ಲಿ ಶೃಂಗಾರವನ್ನು ಕಾವ್ಯವಸ್ತುವನ್ನಾಗಿ ಮಾಡಿಕೊಂಡು ಯಶಸ್ವಿಯಾಗಿ ನಿರ್ವಹಿಸಿದವನು ಅಮರುಕ ಕವಿ. ಇಂಗ್ಲಿಷ್ ಸಾಹಿತ್ಯದಲ್ಲಿಯೂ ಶೃಂಗಾರವನ್ನು ತೂಕ ತಪ್ಪದೆ ನಿರ್ವಹಿಸಿದ ಕವಿತೆಗಳು ಸಾಕಷ್ಟಿವೆ. ಹಳಗನ್ನಡ ಕಾವ್ಯದಲ್ಲಿಯೂ ಶೃಂಗಾರ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಆದರೆ ಅಲ್ಲಿಯೂ ಶೃಂಗಾರ ರಸತ್ವಕ್ಕೇರದೆ ಕೇವಲ ಭಾವದ ಮಟ್ಟದಲ್ಲಿ ಮತ್ತು ಅಷ್ಟಾದಶ ವರ್ಣನೆಯ ಒಂದು ಅಂಗವಾದ ಶೃಂಗಾರ ಚಿತ್ರಣದ ನಿಯಮವನ್ನು ತುಂಬುವ ಉದ್ದೇಶದಲ್ಲಿ ನಿಂತದ್ದೇ ಹೆಚ್ಚು. ಜನಪದ ಗೀತೆಗಳಲ್ಲಿ ನಿಸ್ಸಂಕೋಚವಾದ ಸಹಜವಾದ ಪ್ರಣಯವನ್ನು ಕುರಿತ ಅಭಿವ್ಯಕ್ತಿ ಸಾಕಷ್ಟಿವೆ. ಹೊಸಗನ್ನಡದ ನವೋದಯ ಕವಿಗಳಲ್ಲಿ ಪ್ರಮುಖರಾದ ಕುವೆಂಪು, ಬೇಂದ್ರೆ, ಪು.ತಿ.ನ. ಅವರೂ ಹಲವು ಪ್ರೇಮ ಕವನಗಳನ್ನು ಬರೆದಿದ್ದಾರೆ. ಆದರೆ ನರಸಿಂಹಸ್ವಾಮಿಯವರ ಸಾಧನೆ ಎಂದರೆ, ಪ್ರೇಮವನ್ನೆ ತಮ್ಮ ಕಾವ್ಯದ ಪ್ರಧಾನ ವಸ್ತುವನ್ನಾಗಿ ಮಾಡಿಕೊಂಡು ಯಶಸ್ವಿಯಾದ ಕವಿತೆಗಳನ್ನು ರಚಿಸಿರುವುದು.

ಕೆ.ಎಸ್.ನ. ಅವರ ಪ್ರೇಮ ಕವನಗಳಿಗೆ ಹಿನ್ನೆಲೆಯಾಗಿ, ಇವರ ಸಮಕಾಲೀನರಾದ ಕೆಲವು ಹಿರಿಯ ಕವಿಗಳ ಪ್ರೇಮ ಕವನಗಳನ್ನು ಕುರಿಕು ಸ್ಥೂಲವಾಗಿ ಸಮೀಕ್ಷಿಸುವುದು ತಪ್ಪಾಗಲಾರದು: ಕುವೆಂಪು ಅವರು ಪ್ರೇಮವನ್ನು ವಸ್ತುವನ್ನಾಗಿಸಿಕೊಂಡು ತಕ್ಕಷ್ಟು ಕವಿತೆಗಳನ್ನು ಬರೆದಿದ್ದಾರೆ. ಆದರೆ ‘ಪ್ರೇಮ ಕಾಶ್ಮೀರ’, ‘ಚಂದ್ರಮಂಚಕೆ ಬಾ ಚಕೋರಿ’, ‘ಅನುತ್ತರಾ’- ಇಂಥ ಕವನ ಸಂಗ್ರಹಗಳಲ್ಲಿ ವಿಶೇಷವಾಗಿ ಅವರ ಬೇರೆ ಬೇರೆಯ ಕವನಸಂಗ್ರಹಗಳಲ್ಲಿ ಕ್ವಚಿತ್ತಾಗಿ ಪ್ರೇಮ ಕವನಗಳು ಕಾಣಿಸಿಕೊಂಡಿವೆ. ಕುವೆಂಪು ಅವರು ಮೊದಮೊದಲು ಸನ್ಯಾಸ ಜೀವನಕ್ಕೆ ಹಂಬಲಿಸಿ, ಆನಂತರ ದಾಂಪತ್ಯ ಜೀವನವನ್ನು ಒಪ್ಪಿಕೊಂಡ ಕಾರಣದಿಂದಲೊ ಏನೊ, ಅವರ ಪ್ರೇಮ ಕವನಗಳು ಸಾಕಷ್ಟು ತೀವ್ರವೂ ಸಹಜವೂ ಆಗದೆ,ಗಂಡು-ಹೆಣ್ಣಿನ ಸಂಬಂಧವನ್ನು ಆದರ್ಶೀಕರಿಸುವ, ಮನುಷ್ಯ ಸಹಜವಾದ ಭೋಗವನ್ನು ಈ ದೈವೀಲೀಲೆಯ ಒಂದು ಭಾಗವೆಂದು ಸಂತೈಸಿಕೊಳ್ಳುವ ಆಧ್ಯಾತ್ಮದ ಮುಸುಕಿನೊಳಗೆ ಆಶ್ರಯವನ್ನು ಪಡೆಯುತ್ತವೆ. ಪ್ರಕೃತಿಯನ್ನು ಕುರಿತ ಕವನಗಳಂತೆಯೇ ಅವರ ಎಷ್ಟೋ ಪ್ರೇಮ ಕವನಗಳೂ, ದೊಡ್ಡ ತತ್ವಗಳನ್ನು ಪ್ರತಿಪಾದಿಸುವ ಮಾಧ್ಯಮಗಳಾಗುತ್ತವೆಯೆ ಹೊರತು ನಿಸ್ಸಂಕೋಚವಾದ ಮತ್ತು ಸಹಜವಾದ ಮಾನವ ಭಾವಗಳ ತೀವ್ರಾಭಿವ್ಯಕ್ತಿಯಾಗುವುದಿಲ್ಲ. ‘ಕವಿಗೀ ಸಂಸಾರವೆ ಪೂಜೆ’, ಸಹಧರ‍್ಮಿಣಿ ಜಗನ್ಮಾತೆಯ ಅಂಶ, ಸಂಸಾರ ಒಂದು ತಪೋವನ, ಭೋಗವೇನಿದ್ದರೂ ಆ ಶಿವ-ಶಿವಾಣಿಯ ಲೀಲೆ-ಎಂಬಂಥ ಅನಗತ್ಯವಾದ ಆದರ್ಶದ ನಿಲುವಿಗೇರುವುದರ ಮೂಲಕ, ಅವರ ಪ್ರೇಮಕವಿತೆಗಳು ತೀರಾ ವೈಯಕ್ತಿಕವೂ, ಪರಿಮಿತವೂ ಆಗಿ, ಹೆಚ್ಚೆಂದರೆ ವಿಸ್ಮಯಕ್ಕೆ ಪಾತ್ರವಾಗುತ್ತದೆ.

ಕುವೆಂಪು ಅವರಲ್ಲಿ ಪ್ರೇಮವನ್ನು ಕುರಿತ ಕವನಗಳು ತತ್ವದ ಪ್ರತಿಪಾದನೆಗೆ ಮಾಧ್ಯಮವಾದಂತೆ, ನವೋದಯದ ಇನ್ನೊಬ್ಬ ಕವಿಯಾದ ಪು.ತಿ.ನ. ಅವರಲ್ಲಿ ಪ್ರೇಮ ಕವಿತೆಗಳು ಚಿಂತನೆಯ ಮಾಧ್ಯಮವಾಗುತ್ತದೆ. ಅವರ ‘ಅಹಲ್ಯೆ’ ‘ಗೋಕುಲ ನಿರ್ಗಮನ’ದಂಥ ಗೀತರೂಪಕಗಳಲ್ಲಿ ಕಾಮ-ಪ್ರೇಮಗಳನ್ನು ಕುರಿತ ಚಿಂತನೆಯೆ ಪ್ರಧಾನವಾಗಿದೆ. ಇನ್ನೂ ಹಲಕೆಲವು ಕವನಗಳಲ್ಲಿ ಬರುವ ಪ್ರಣಯ, ರಾಧಾ-ಕೃಷ್ಣ, ಶಿವ-ಶಿವೆ, ನಳ-ದಮಯಂತಿ ಇತ್ಯಾದಿ ಪೌರಾಣಿಕ ಪಾತ್ರ ಮಾಧ್ಯಮಗಳಲ್ಲಿ ಮೈದೋರಿದೆ. ಆದರೆ ಅವರ ‘ಗಣೇಶದರ್ಶನ’ದಲ್ಲಿ ಮಾತ್ರ ಮೂರು ನಾಲ್ಕು ವಿಲಕ್ಷಣವಾದ ಪ್ರೇಮ ಕವನಗಳಿವೆ.

ಬೇಂದ್ರೆಯವರ ಪ್ರೇಮ ಕವನಗಳು, ಈಗ ಹೇಳಿದ ಇಬ್ಬರು ಕವಿಗಳ ಕವನಗಳಿಂದ ಭಿನ್ನ ರೀತಿಯವಾಗಿವೆ. ಬೇಂದ್ರೆಯವರು ಜನಪದ ಕಾವ್ಯ ಸತ್ವದಿಂದ ಮೂಲ ಸ್ಫೂರ್ತಿಯನ್ನು  ಪಡೆದ ಕಾರಣದಿಂದ, ಅವರ ಎಷ್ಟೋ ಪ್ರೇಮ ಕವನಗಳು ಸತ್ವಪೂರ್ಣವೂ, ಸಹಜವೂ ಆಗಿವೆ. ಸಾಂಸಾರಿಕ ಜೀವನದ ಕಹಿ-ಸಿಹಿಗಳೂ, ತಾಪ-ವಿಷಾದಗಳೂ, ಹೊಸಹರೆಯದ ಉತ್ಸಾಹ-ಸಂಭ್ರಮಗಳೂ, ಪ್ರೀತಿಯನ್ನು ಕುರಿತ ಚಿಂತನ-ಚರ್ಚೆಯ ಕವಿತೆಗಳೂ ತುಂಬ ವೈವಿಧ್ಯಮಯವಾಗಿ ಕಾಣಿಸುತ್ತವೆ. ಒಂದು ರೀತಿಯಲ್ಲಿ ಕೆ.ಎಸ್.ನ. ಅವರಲ್ಲಿ ಇಲ್ಲದ ಆಳ ಅಗಲಗಳು ಬೇಂದ್ರೆಯವರ ಕೆಲವು ಪ್ರೇಮ ಕವನಗಳಲ್ಲಿ ಇವೆ ಎನ್ನುವುದು ಗಮನಿಸಬೇಕಾದ ಸಂಗತಿ. ‘ಪೋರ-ಪೋರಿ’, ‘ಆ ಮುಖಾ-ಈ ಮುಖ’, ‘ಅನಂತ ಪ್ರಣಯ’, ‘ನಾನು ಬಡವಿ-ಆತ ಬಡವ’, ‘ಹಳ್ಳದ ದಂಡ್ಯಾಗ’, ‘ನೀ ಹೀಂಗ ನೋಡಬ್ಯಾಡ ನನ್ನ’, ‘ಮನದನ್ನೆ’, ‘ಸಖೀಗೀತ’-ಇಂಥ ಕೆಲವು ಕವನಗಳನ್ನು ನಿದರ್ಶನಕ್ಕೆ ನೋಡಿದರೆ ಸಾಕು.

ಹೊಸಗನ್ನಡದಲ್ಲಿ ಮೊಟ್ಟಮೊದಲಿಗೆ ‘ಪ್ರೇಮ’ವನ್ನೆ ವಸ್ತುವನ್ನಾಗಿ ಮಾಡಿಕೊಂಡು ಕವಿತೆಗಳನ್ನು ಬರೆದವರಲ್ಲಿ ದಿವಗಂತ ತೀ.ನಂ.ಶ್ರೀಯವರೆ ಮೊದಲಿಗರು. ಅವರ ‘ಒಲುಮೆ’ ಕನ್ನದಡಲ್ಲಿ ಮೊದಲು ಬಂದ ಈ ಬಗೆಯ ಕವನ ಸಂಗ್ರಹ. ಆನಂತರ ಬಂದದ್ದು, ಕೆ.ಎಸ್.ನ. ಅವರ ‘ಮೈಸೂರು ಮಲ್ಲಿಗೆ’. ‘ಪ್ರೇಮ’ವನ್ನು ವಸ್ತುವನ್ನಾಗಿ ಆರಿಸಿಕೊಂಡು ಸಮೃದ್ಧಿಯನ್ನು ತಂದವರು ಅವರೊಬ್ಬರೆ. ಪ್ರೇಮದ ಚಿತ್ರಣವನ್ನು ಆದರ್ಶೀಕರಿಸುವುದರ ಮೂಲಕ ಅದಕ್ಕೆ ಏನೊ ಇಲ್ಲದ ದೈವಿಕತೆಯನ್ನು ತಂದುಕೊಡಬಹುದೆಂಬ ಭ್ರಮಗೆ ಒಳಗಾಗದೆ, ಗಂಡು-ಹೆಣ್ಣಿನ ಪ್ರೇಮವನ್ನು ಗಂಡು ಹೆಣ್ಣಿನ ಪ್ರೇಮವೆಂಬಂತೆ ಚಿತ್ರಿಸಿ, ಮನುಷ್ಯ ಸಹಜವಾದ ಭಾವನೆಗಳ ಬೆಲೆಯನ್ನು ಎತ್ತಿಹಿಡಿದ ಶ್ರೇಯಸ್ಸು ನರಸಿಂಹಸ್ವಾಮಿಯವರಿಗೆ ಸಲ್ಲುತ್ತದೆ.

ಕೆ.ಎಸ್.ನ. ಅವರ ಪಾಲಿಗೆ ಕವಿತೆ ಬದುಕಿನ ಎಲ್ಲ ರೀತಿಯ ಅನುಭವಗಳ ಪರಿಣಾಮವೇ ಆದರೂ, ಅದರಲ್ಲಿ ಒಲವಿನ, ಚೆಲುವಿನ ಅನುಭವಕ್ಕೆ ಮೊದಲ ಮಣೆ. ಬದುಕಿನಲ್ಲಿ ಇರುವುದು ಬರಿ ಸುಖವೊಂದೆ, ದುಃಖ ಎಂಬುದಿಲ್ಲ ಅಥವಾ ಇದ್ದರೂ ತಮ್ಮ ಅನುಭವಕ್ಕೆ ಬಂದಿಲ್ಲ ಎಂಬುದು ಅಭಿಪ್ರಾಯವಲ್ಲ. ಅವರೇ ಒಂದೆಡೆ-

“ದುಃಖಮಯವೀ ಬದುಕು ಎನ್ನುವವ ಕವಿಯೆ?
ಸುಖವೆಂಬುದಿಲ್ಲವೇ ದುಃಖದನುಭವಿಗೆ?
ದುಃಖ ದಿನದಿನ ಬಂದು ಇರಿದಿರಿದು ಪೋಗೆ
ಹರ್ಷ ವರ್ಷಕ್ಕೊಮ್ಮೆ ಇಣಿಕಿನೋಡೆ
ಬದುಕಿಗೂ ಸಾವಿಗೂ ನಡುವೆ ನಿಂದು
ಈ ಭೂಮಿ ಈ ಚೆಲುವು ನಮ್ಮದೆಂದು
ಹೊತ್ತ ಹೊರೆ ಬಲು ಹಗುರವೆನ್ನದವ ಕವಿಯೆ?”

(ಐರಾವತ; ಪು. ೧೧)

ಎಂದು ಹೇಳುತ್ತಾರೆ. ಇದು ಅವರ ನಿಲುವು; ನಂಬಿಕೆ. ಇದನ್ನು ‘ಪಲಾಯನವಾದ’ ಎನ್ನುವುದು ವಿಮರ್ಶೆಯ ಕುಹಕವಾದೀತು. ಬದುಕನ್ನು ನೋಡುವ ರೀತಿ ಒಬ್ಬೊಬ್ಬರಿಗೆ ಒಂದೊಂದು ತೆರನಾಗಿರುತ್ತದೆ. ಕೆ.ಎಸ್.ನ. ಅವರು ಕಂಡ ಬದುಕು, ಅವರ ಅನುಭವದ ತೆಕ್ಕೆಗೆ ಒಗ್ಗಿದ ಬದುಕು. ಅದರಾಚೆಗೂ ಬದುಕು ಇದೆ; ಇರುತ್ತದೆ. ಆದರೆ ತನಗೆಟುಕಿದ ಬದುಕಿನ ಅನುಭವಗಳಿಗೆ ಕವಿ ಪ್ರಾಮಾಣಿಕವಾಗಿ ಪಡಿಮಿಡಿದು, ತಕ್ಕ ಮಾಧ್ಯಮದಲ್ಲಿ ಅಭಿವ್ಯಕ್ತಿ ನೀಡಿದ್ದಾನೆಯೆ ಅಥವಾ ಸೋತಿದ್ದಾನೆಯೆ ಎನ್ನುವುದು ಮುಖ್ಯವಾದದ್ದು.

ಕೆ.ಎಸ್.ನ. ಅವರ ಪ್ರೇಮ ಕವನಗಳ ವಸ್ತು ಹೊಸ ಹರಯದ ದಂಪತಿಗಳನ್ನು ಕುರಿತದ್ದು. ಅದರಲ್ಲೂ ಈ ದಾಂಪತ್ಯ ಜೀವನದ ಒಂದು ಹಂತದವರೆಗೆ, ಎಂದರೆ ಒಂದು ಮಗುವಾಗುವ ಅಥವಾ ಅದುವರೆಗಿನ ಸೀಮಿತ ವಲಯ ಇವರ ಅನೇಕ ಕವಿತೆಗಳ ವಸ್ತು. ಆದುದರಿಂದ ಈ ಲೇಖನದಲ್ಲಿ ‘ಪ್ರೇಮ ಚಿತ್ರಣ’ ಎಂದರೆ ಸಾಂಸಾರಿಕ ಜೀವನದ ಹಂತದವರೆಗಿನ ಚಿತ್ರಣ ಎಂದು ಅರ್ಥ.

ಅವರ ಮೊದಲ ಕವನ ಸಂಗ್ರಹ ‘ಮೈಸೂರು ಮಲ್ಲಿಗೆ’ಯ ತುಂಬ ಈ ಹೊಸ ಹರಿಯದ ಬೆರಗು ಮಿರುಗುತ್ತದೆ.

“ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ”

ಎಂಬ ನಲ್ಲೆಯ ಪ್ರಶಂಸೆ,

“ಮದುವೆಯಾಗಿ ತಿಂಗಳಿಲ್ಲ
ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲ
ಬರುವಳೆನ್ನ ಶಾರದೆ
ಹಿಂದೆ ಮುಂದೆ ನೋಡದೆ
ಎದುರು ಮಾತನಾಡದೆ.”

ಎಂದು ಲೋಕಕ್ಕೆ ಡಂಗುರ ಹೊಡೆಯುವ ನಿಸ್ಸಂಕೋಚ ಉತ್ಸಾಹವು, ನಮ್ಮ ಸಮಾಜದ ಕೌಟುಂಬಿಕ ಜೀವನದಲ್ಲಿ ಆದ ಮುಖ್ಯ ಬದಲಾವಣೆಯನ್ನು ಸೂಚಿಸುತ್ತದೆ. ಈ ಒಂದು ವಯಸ್ಸಿನ ಉತ್ಸಾಹ ಮತ್ತು ತರ್ಕಗಳಿಗೆ ಯಾವ ವಿಚಾರದ ಹಿನ್ನೆಲೆಯೂ ಇಲ್ಲ; ಇರಲೂ ಬೇಕಾಗಿಲ್ಲ. ಒಬ್ಬ ತರುಣ, ತರುಣಿಯನ್ನು ಕುರಿತು-

“ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ”

ಎಂದು ಮದುವೆಯಾಗುವ ಕಾರಣವನ್ನು ಹೀಗೆ ತರ್ಕಿಸಿದರೆ, ಅದು ಅರ್ಥವಿಲ್ಲದ ತರ್ಕವೆ.ಈ ಬಗೆಯ ‘ಅವಿಚಾರಿತ ರಮಣೀಯತೆ’ ಇಂಥ ಕವನಗಳಲ್ಲಿರುವುದು ಅಸಹಜವೇನಲ್ಲ. ಮದುವೆಯಾದ ಮೊದಲ ದಿನಗಳ ಉತ್ಸಾಹ, ಸಂಭ್ರಮ, ಲಜ್ಜೆ, ಕಾತರ, ಜಾಣ್ಮೆ ಇತ್ಯಾದಿಗಳನ್ನು ಕೆ.ಎಸ್.ನ. ಅವರು ಅನೇಕ ಕವಿತೆಗಳಲ್ಲಿ ಹಿಡಿದಿರಿಸಿದ್ದಾರೆ; ತನ್ನ ನಲ್ಲೆಯ ಮನೆಯಿಂದ ಹೊರಡಲಾರದೆ ಹೊರಟು, ‘ಎಂದು ಬರುವಿರಿ’ ಎಂದ ಅವಳ ಪ್ರಶ್ನೆಗೆ, ‘ಇನ್ನೊಂದು ತಿಂಗಳಲ್ಲಿ’ ಎಂದು ಹೇಳಿ, ತನಗರಿವಿಲ್ಲದೆ ತಡ ಮಾಡಿ ರೈಲು ತಪ್ಪಿಸಿಕೊಂಡ ನಲ್ಲನನ್ನು ಕಂಡು ಹೊಸ ಹೆಣ್ಣು ‘ತಿಂಗಳಾಯಿತೆ’ ಎಂದು ಕೇಳುವಲ್ಲಿನ ಜಾಣ್ಮೆ; (ತಿಂಗಳಾಯಿತೆ? ಮೈ. ಮ. ಪು. ೭೭) ಒಂದು ಹುಣ್ಣಿಮೆಯಿರುಳು ನಲ್ಲೆಯ ಮನೆಗೆ ಬಂದ ರಾಯರು ಮಡದಿ ‘ಒಳಗಿಲ್ಲ’ದ ಕಾರಣ, ಮಾವ-ನಾದಿನಿಯರ ಆತಿಥ್ಯದಿಂದ ಅನುಭವಿಸಿದ ಪೇಚಾಟ; (ಮಾವನ ಮನೆಯಲ್ಲಿ: ಮೈ.ಮ.ಪು.೨೮) . ಒಂದಿರುಳು ತನ್ನ ಮಡದಿಯನ್ನು ಕುರಿತು ‘ನಮ್ಮೂರು ಚಂದವೋ ನಿಮ್ಮೂರು ಚಂದವೋ’ ಎಂದು ಪ್ರಶ್ನಿಸುವ ಸೊಗಸು; (ಪ್ರಶ್ನೆಗೆ ಉತ್ತರ: ಮೈ.ಮ.ಪು.೫೯) ಹಳೆಯ ನೆನಪನ್ನು ಮೆಲುಕು ಹಾಕುತ್ತ, ಹೊಸ ಹೆಂಡತಿ ‘ಹತ್ತು ವರ್ಷದ ಹಿಂದೆ ಸುತ್ತೂರ ತೇರಿನಲ್ಲಿ ಅತ್ತಿತ್ತ ಅಲೆದವರು ನೀವಲ್ಲವೆ? (ನೀನಲ್ಲವೆ? ಐರಾವತ: ಪು. ೨೦) ಎಂದು ನೆನಸಿಕೊಂಡು ಗಂಡನ ಸ್ವಭಾವವನ್ನು ಲೇವಡಿ ಮಾಡುವ ತುಂಟತನ’, ಪಗಡೆಯಾಟಕ್ಕೆ ಕೂತಿರುವಾಗ ‘ನನ್ನ ತುಟಿಗಳಲಿರಲು ತಾಂಬೂಲ ರಾಗ, ನಿಮ್ಮ ತುಟಿ ಕೆಂಪಾದುದೇಕಿನಿಯ ಬೇಗ’ (ಪಗಡೆಯಾಟ: ಮೈ.ಮ.ಪು.೨೭) ಎಂಬ ಚಾಟೂಕ್ತಿ; ಹೆಂಡತಿ ತವರುಮನೆಗೆ ಹೋದಾಗ,

“ಹೊಸಿಲು ಬಳಿ ಬಂದೊಡನೆ ಬಾಗಿಲನು ತೆರೆವಾಕೆ
ಹೆಸರೇನು ಎನುವಾಕೆ ಮನೆಯೊಳಿಲ್ಲ,
ಬಿಸಿಲೊಳಗೆ ನೆಳಲೊಳಗೆ ಪಕ್ಕದಲಿ ನಗುವಾಕೆ
ಹಸುರು ಕುಪ್ಪಸದಾಕೆ ಮನೆಯೊಳಿಲ್ಲ.”

(ಮೈ.ಮ.ಪು. ೩೩)

ಎಂದು ಕೊರಗುವ ಪಾಡು; ಈ ಹೊತ್ತಿನಲ್ಲೇ ಹೂವಾಡಗಿತ್ತಿ ಬಂದು ಹೂವು ಬೇಕೇ ಎಂದು ಕೇಳಿ ಇರುವ ವಿರಹವನ್ನು ಕೆರಳಿಸಿ ಹೋದಾಗ, ತೌರೂರಿನಿಂದ ಬಂದ ನಲ್ಲೆಯ ಕಾಗದ, ‘ತೌರುಸುಖದೊಳಗೆನ್ನ ಮರೆತಿಹಳು ಎನ್ನದಿರಿ’ ಎಂದು ತನ್ನ ಒಲವನ್ನು ಸ್ಥಿರೀಕರಿಸುವ ನೆಮ್ಮದಿ; ಬಳೆಗಾರ ಚನ್ನಯ್ಯ ತನ್ನ ನಲ್ಲೆಯ ಊರಿನಿಂದ ಬಂದು ‘ಬಳೆಯ ತೊಡಿಸುವುದಿಲ್ಲ ನಿಮಗೆ’ ಎಂಬ ಪೀಠಿಕೆಯೊಡನೆ, ತೌರೂರಿನಲ್ಲಿ ನಿಂತು ತಡಮಾಡಿದ ಮಡದಿಯ ಮೇಲೆ ಮುನಿದ ಗಂಡನನ್ನು ಸಮಾಧಾನಪಡಿಸುವ ಸಲಿಗೆ; (ಬಳೆಗಾರನ ಹಾಡು. ಮೈ.ಮ.ಪ. ೬೩) ತೌರೂರಿನಿಂದ ಬರುವ ಮಡದಿಗಾಗಿ ಇರುಳು ರೈಲು ನಿಲ್ದಾಣದಲ್ಲಿ ಕಾದು ತಪಿಸುವ ಕಾತರ; (ಅರಸೀಕೆರೆಯಲ್ಲಿ: ದೀಪದ ಮಲ್ಲಿ ಪು. ೨೪) ತೌರಿನಿಂದ ಗಂಡನ ಮನೆಗೆ ಬಂದ ಮಡದಿ ತಾನಿಲ್ಲದ ವೇಳೆಯಲ್ಲಿ ಆಗಿರುವ ಮನೆಯ ಅವ್ಯವಸ್ಥೆಯನ್ನು ಕಂಡು ‘ಮಂಗಳವೆ ಮನೆಗೆ’ ಈ ಪಾಡು? (ಐರಾವತ, ಪು. ೧೭)ಎಂದು ಕೊರಗುವುದು; ಮನೆಗೆ ತಡಮಾಡಿ ಬಂದ ಗಂಡನನ್ನು ಕುರಿತು ತಪ್ಪಲೆಯ ತುಂಬ ನಕ್ಷತ್ರದೊಲು ಬಿರಿದನ್ನ ಆರಿ ಅಕ್ಷತೆಯಾದ ಮೇಲೆ, ಈಗ ಸರಿಹೊತ್ತಿನಲ್ಲಿ ಬಂದಿರಾ?, (ಅಪರಾಧಿ; ‘ದೀಪದ ಮಲ್ಲಿ’ ಪು.೨೩) ಎಂದು ಆಕ್ಷೇಪಿಸುವ ವೈಖರಿ-ಇತ್ಯಾದಿ ಚಿತ್ರಗಳಿಂದ, ಹೊಸ ಹರಯದ ಈ ದಾಂಪತ್ಯ ಜೀವನದ ರಮ್ಯ ನಾಟಕ ಕವಿತೆ ಕವಿತೆಗಳಲ್ಲಿ ಅಭಿನಯಿಸಲ್ಪಡುತ್ತದೆ. ಸರಳ ಸಾಧಾರಣದ ಈ ಬಗೆಯ ಬದುಕಿನಲ್ಲಿ ಎಂಥ ಚೆಲುವಿದೆ, ಎಂಬುದನ್ನು ಈ ಕವಿತೆಗಳು ಎತ್ತಿ ಹಿಡಿಯುತ್ತವೆ. ಆದರೆ ದಾಂಪತ್ಯ ಜೀವನದ ಕೇವಲ ಒಂದು ಮುಖವನ್ನು ಕುರಿತ ಈ ಚಿತ್ರಣಗಳಲ್ಲಿ, ಅದೇ ಬದುಕಿನೊಳಗಿರುವ ಘರ್ಷಣೆ, ಬವಣೆ, ವಿಷಾದ ಇತ್ಯಾದಿಗಳು ಕಾಣುವುದೆ ಇಲ್ಲ. ಈ ಕವಿತೆಗಳಲ್ಲಿ ಕಾಣುವ ಗಂಡ ಹೆಂಡಿರು ಬಹಳ ಸರಸಿಗಳು; ಬಹಳ ಒಳ್ಳೆಯವರು. ಅವರಿಗೆ ಅಂತಹ ತಾಪತ್ರಯಗಳೇನೂ ಇಲ್ಲ. ಹೀಗಾಗಿ ಸರಸ ದಾಂಪತ್ಯದ ಸಂತೋಷವಷ್ಟೇ ಪ್ರಧಾನವಾಗಿರುವುದು ಈ ಕವನಗಳಿಗಿರುವ ಒಂದು ಮಿತಿ. ಎಷ್ಟೋ ಕವಿತೆಗಳು ಹೆಚ್ಚು ಆಳವಿಲ್ಲದ, ಸೊಗಸಾದ ಚಿತ್ರಗಳು ಮಾತ್ರ. ಇವರ ಕವನಗಳಲ್ಲಿ ಪ್ರೇಮ ಚಿತ್ರಣವಿದೆಯೆ ಹೊರತು ಅದನ್ನು ಕುರಿತ ಚಿಂತನೆಯಿಲ್ಲ. ಪ್ರೇಮ ತತ್ವ (Love’s Philosophy)ವಾಗಲಿ, ಸಾಂಸಾರಿಕ ಜೀವನದಲ್ಲಿ ಸಂಘರ್ಷವಾಗಲಿ, ನೋವು ಸಂಕಟವಾಗಲಿ ತೀವ್ರವಾಗಿ ಬಂದಿಲ್ಲ. ಈ ಕವಿತೆಗಳು ಬೇಕೆಂದೇ ಒಂದು ಪರಿಮಿತಿಗೆ, ಕೇವಲ ಮನೆಯೊಳಗಣ, ಹೆಚ್ಚೆಂದರೆ ತೌರೂರಿನಿಂದ ಗಂಡನ ಮನೆಯವರೆಗಿನ ವ್ಯವಹಾರಕ್ಕೆ ಸೀಮಿತವಾಗುವುದರಿಂದ, ಎಲ್ಲವೂ ಒಂದು ರೀತಿಯಲ್ಲಿ ರಮ್ಯವಾಗಿ, ಕೋಮಲವಾಗಿ ಚಿತ್ರಿತವಾಗಿವೆ. ಅಲ್ಲದೆ ಅಲ್ಲಿ ಕಾಣುವ ಕವನಗಳು ಮುಖ್ಯ ಪಾತ್ರಗಳ ಮೇಲೆ ಸುತ್ತಣ ಸಮಾಜದ ಯಾವ ಒತ್ತೂ (Stress) ಬೀಳುವುದಿಲ್ಲ. ಕಾರಣ, ಈ ಕವಿತೆಗಳಿಗೆ ಮನೆ-ಸಂಸಾರವಷ್ಟೆ ಕೇಂದ್ರ; ಅದರಾಚೆಯ ಸಮಾಜವಾಗಲಿ ಅಥವಾ ಬದುಕಿನ ಬೇರೆ ಬೇರೆಯ ಪರಿಣಾಮಗಳ ಪ್ರಭಾವವಾಗಲಿ ಅಪ್ರಕೃತ. ಬೇಂದ್ರೆಯವರಲ್ಲಿನ ‘ಹಳ್ಳದ ದಂಡ್ಯಾಗ’, ‘ಮನದನ್ನೆ’, ‘ನೀ ಹೀಂಗ ನೋಡ ಬ್ಯಾಡ ನನ್ನ’, ‘ಹೆಣದ ಹಿಂದೆ’, ‘ಪುಟ್ಟ ವಿಧವೆ’ ಇತ್ಯಾದಿ ಕವಿತೆಗಳಲ್ಲಿ ಗಂಡು ಹೆಣ್ಣಿನ ಬದುಕು ಕೇವಲ ರಮ್ಯವಾಗುವುದರಾಚೆಗೆ, ಎಂಥ ಅನಿರೀಕ್ಷಿತ ಆಘಾತ, ಹೊಯ್ದಾಟ, ದಾರುಣತೆಗಳಿಗೆ ಒಳಗಾಗ ಬಲ್ಲುದೆನ್ನುವುದನ್ನು ಕಾಣಬಹುದು. ಈ ಸಮಗ್ರತೆ ಕೆ.ಎಸ್.ನ. ಅವರಲ್ಲಿ ಕಾಣುವುದಿಲ್ಲ. ಈ ದೃಷ್ಟಿಯಿಂದ ನರಸಿಂಹಸ್ವಾಮಿಯವರ ಪ್ರೇಮ ಕವಿತೆಗಳಲ್ಲಿ ಆಳವಿಲ್ಲ; ಒಂದು ರೀತಿಯಲ್ಲಿ ಬದುಕಿನ ಕೆಲವು ಮುಖಗಳನ್ನು ಬೇಕೆಂದೇ ಒತ್ತಟ್ಟಿಗೆ ಸರಿಸಿ ಬಿಟ್ಟಿದ್ದಾರೇನೋ ಎಂಬ ಸಂಶಯಕ್ಕೆ ಅವಕಾಶವಾಗುತ್ತದೆ.

ಆದರೂ ಕೆ.ಎಸ್.ನ. ಅವರು ದಾಂಪತ್ಯ ಜೀವನವನ್ನು ಕುರಿತು ಬರೆದ ಕೆಲವು ಕವಿತೆಗಳಲ್ಲಿ ವೈಯಕ್ತಿಕ, ಸಾಮಾಜಿಕ, ಸಂಘರ್ಷಗಳು ಕಾಣುವುದಿಲ್ಲವಾದರೂ, ಅವುಗಳಲ್ಲಿ ಬೇರೆಯ ತಾತ್ವಿಕ ಅರ್ಥವನ್ನೂ, ಬದುಕಿನ ಆಳವಾದ ಸತ್ಯಗಳನ್ನು ಧ್ವನಿಸುವ ರಮ್ಯತೆಯನ್ನೂ ಕಾಣಬಹುದಾಗಿದೆ. ತೌರೂರಿಂದ ಮಡದಿ, ಮುನಿದ ಗಂಡನಿಗೆ ಹೀಗೆ ಕಾಗದ ಬರೆಯುತ್ತಾಳೆ- ‘ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ’ ಎಂಬ ಪೀಠಿಕೆಯೊಂದಿಗೆ ಆರಂಭವಾದ ಪತ್ರದಲ್ಲಿ,

“ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುದು ಶ್ರೀ ತುಳಸಿ ಕೃಷ್ಣ ತುಳಸಿ;
ನೀಲಾಂಬರದ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ”

(ಹೆಂಡತಿಯ ಕಾಗದ, ಮೈ.ಮ.ಪು. ೩೩)

ಎಂಬ ಮಾತು ಬರುತ್ತದೆ. ಇದರ ವಾಚ್ಯಾರ್ಥ, ಬೆಳಿಗ್ಗೆ, ಸಂಜೆ ನಿಮ್ಮ ನೆನಪು, ನಿಮ್ಮ ಒಲವಿನ ನೆನಕೆ ನನಗಿದೆ ಎನ್ನುವುದಷ್ಟೆ. ಆದರೆ ಭಾರತೀಯಳಾದ ಈ ಹಳ್ಳಿಯ ಹೆಣ್ಣುಮಗಳ ಮನಸ್ಸಿನಲ್ಲಿ ನಿಜವಾದ ದಾಂಪತ್ಯ ಪ್ರೇಮದ ಅರ್ಥ ಎಷ್ಟೊಂದು ಪರಂಪರಾಗತವಾದ ಸಂಕೇತಗಳ ಮೂಲಕ ನೆಲೆಯಾಗಿದೆ ಎನ್ನುವುದು ಇಲ್ಲಿರುವ ಸ್ವಾರಸ್ಯ. ಬೆಳಿಗ್ಗೆ ಬೃಂದಾವನದ ಹಣೆಗೆ ಕುಂಕುಮನ್ನಿಡುವ ಈ ಧಾರ್ಮಿಕ ವಿಧಿಯಜೊತೆಯಲ್ಲೇ, ಅಲ್ಲಿ ಶ್ರೀ ತುಳಸಿ ಕೃಷ್ಣ ತುಳಸಿಯನ್ನು ಕಂಡು ದಾಂಪತ್ಯ ಅರ್ಥವಂತಿಕೆಯನ್ನು ನೆನೆಯುವ, ಹಾಗೆಯೆ ಇರುಳ ಚಂದಿರನ ಜೊತೆಗೆ ರೋಹಿಣಿಯನ್ನೂ ಕಾಣುವ ಈ ಹೆಣ್ಣು, ತಮ್ಮ ದಾಂಪತ್ಯವೂ ಈ ರೀತಿಯದಾಗಬೇಕೆಂದು ಆಶಿಸುವುದರ ಜತೆಗೆ, ಸದ್ಯಕ್ಕೆ ಗಂಡನ ಮನೆಯಿಂದ ತೌರೂರಿಗೆ  ಬಂದು ದೂರದಲ್ಲಿರುವ ತನ್ನ ಏಕಾಕಿತನದಲ್ಲೂ, ತನಗೆ ಗಂಡನ ಬಗೆಗಿರುವ ಒಲವು ಎಂಥದೆಂಬುದನ್ನು ಹೇಳಿರುವ ರೀತಿ ಸೊಗಸಾಗಿದೆ. ಒಂದು ಧಾರ್ಮಿಕವಾದ ದೈನಂದಿನ ಆಚರಣೆಯ ಸಂಕೇತದಲ್ಲಿ, ನಿಜವಾದ ದಾಂಪತ್ಯ ಪ್ರೇಮದ ಬೆಸುಗೆಯನ್ನು ಧ್ವನಿಸುವ ಈ ಒಂದು ಚಿತ್ರ, ಕೆ.ಎಸ್.ನ. ಅವರ ಈ ಪ್ರೇಮ ಕವಿತೆಯ ವಸ್ತು ನಗರ ಜೀವನದಿಂದ  ದೂರವಾದ ಪರಂಪರೆಯ ಪ್ರಜ್ಞೆಯುಳ್ಳ ಜಾನಪದ ವಲಯದಿಂದ ಎತ್ತಿಕೊಂಡದ್ದು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಒಂದು ಮನೆಯಲ್ಲಿ ಹುಟ್ಟಿ ಮತ್ತೊಂದು ಮನೆಯನ್ನು ಬೆಳಗಬೇಕಾದ ಹೆಣ್ಣನ್ನು ಕುರಿತು-

“ಹುಟ್ಟಿದುದು ಬೆಟ್ಟದಲಿ ಹರಿಯುವುದು ಬಯಲಿನಲಿ
ತುಂಬು ಹೊಳೆ ನಾಡ ನಗಿಸಿ”

(ಒಬ್ಬಳೇ ಮಗಳು: ಮೈ.ಮ.ಪು. ೩೦)

ಎಂದು ಒಬ್ಬಳೇ ಮಗಳ ಅಗಲಿಕೆಯಿಂದ ಕೊರಗುವ ಮಾವನಿಗೆ ಅಳಿಯ ಹೇಳುವ ಸಮಾಧಾನದ ಈ ಮಾತಿನಲ್ಲಿ, ನಿಸರ್ಗದ ಒಂದು ವ್ಯಾಪಾರದೊಂದಿಗೆ, ಹೆಣ್ಣಿನ ಬದುಕನ್ನು ಸಹಜವಾಗಿ ಸಮೀಕರಿಸುವ ಈ ಪ್ರತಿಮೆ, ಹೆಣ್ಣಿನ ಬಗೆಗೆ ಭಾರತೀಯ ಪರಂಪರೆಯಲ್ಲಿರುವ ಹಲವು ಗೌರವ ಭಾವನೆಗಳನ್ನು-ಲಾಲನೆ, ಪಾಲನೆ, ಪೋಷಣೆ, ಸಮೃದ್ಧಿಗಳನ್ನು ಧ್ವನಿಸುತ್ತದೆ.ಹರಿಯುವ ಹೊಳೆ ದಾರಿಯುದ್ದಕ್ಕೂ ನೆಲಕ್ಕೆ ಹಾಲೂಡಿಸಿ ಸಸ್ಯ ಸಮೃದ್ಧಿಗೊಳಿಸುವ ಈ ಕ್ರಿಯೆ ಹೆಣ್ಣಿನ ಬದುಕಿಗೆ ಪ್ರತಿಮೆಯಾಗಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಕೆ.ಎಸ್.ನ. ಅವರ ಇನ್ನೊಂದು ಕವಿತೆ ‘ತುಂಗಭದ್ರೆ’ಯಲ್ಲಿ, ಸಂಸಾರವನ್ನು ಒಂದು ಸಾಗರಕ್ಕೆ ಹೋಲಿಸಿ, ಗಂಡ ಒಂದು ದಡವಾದರೆ, ಹೆಂಡತಿ ಒಂದು ದಡ ಎಂದು ಹೇಳಿ, ಈ ಎರಡು ದಡಗಳ ನಡುವೆ ಮನೆಯ ಮಗು ಹಡಗಿನಂತೆ ಓಡಾಡುತ್ತದೆ ಎನ್ನುತ್ತಾರೆ. ಅಷ್ಟೆ ಅಲ್ಲ,ಈ ಮಗುವಿಗೆ ‘ಒಂದು ದಡ ಗದರಿದರೆ ಮತ್ತೊಂದು ದಡವಿಹುದು, ಅಲ್ಲಿ ತಂಗಿದರೆ ಜೀವಕ್ಕೆ  ಮಂಗಳವೆನ್ನುವ’ ನಂಬಿಕೆ-ಆ ನಂಬಿಕೆ ಎಲ್ಲಿಂದ ಬಂತೋ ಹೇಗೆ ಬಂತೋ-ಇದೆಯಂತೆ. ಈ ಸಂದರ್ಭದಲ್ಲಿ ಕವಿ ಒಂದು ವ್ಯಾಖ್ಯಾನ ಮಾಡುತ್ತಾರೆ: ‘ಈ ಮಗುವಿಗಿರುವ ಈ ಸರಳವಾದ ನಂಬಿಕೆ, ಆ ಧೈರ್ಯ ನನಗಿಲ್ಲ; ನನ್ನಂಥ ಎಷ್ಟೋ ಬಾಳಿಗೆ ಇಲ್ಲ’ (ತುಂಗಭದ್ರೆ: ದೀಪದ ಮಲ್ಲಿ ಪು. ೪೨) ಎಂದು. ಮೇಲು ನೋಟಕ್ಕೆ ಹೇಳಿಕೆ (statement)ಯಂತೆ ತೋರುವ ಈ ಮಾತು ಕಾವ್ಯದ ಪರಿಸರದಲ್ಲಿ, ನಂಬಿಕೆಗಳನ್ನು ತೂಗಿ ನೋಡುವ ಚಿಂತನೆಯಾಗಿ ಎಂಥ ಆಳವಾದ ಸತ್ಯವನ್ನು ಧ್ವನಿಸುತ್ತದೆ ಎಂಬುದನ್ನು ಗಮನಿಸಬಹುದು. ‘ಇರುವಂತಿಗೆ’ ಕವನ ಸಂಗ್ರಹದಲ್ಲಿ ‘ಸಣ್ಣಸಂಗತಿ’ ಎಂಬ ಕವಿತೆ (ಪು. ೪೭) ತಾಯ ಪಕ್ಕದಲ್ಲಿ ಮಲಗಿರುವ ಮಗು ನಟ್ಟಿರುಳು ತನ್ನ ಹೊದಿಕೆಯನ್ನು ಕಿತ್ತೆಸೆದಾಗ, ಮತ್ತೆ ಮತ್ತೆ  ತಾಯಿಯ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುವ ‘ಸಣ್ಣ ಸಂಗತಿ’ಯನ್ನು ಹೇಳುತ್ತದೆ. ಕವಿತೆ ಹೀಗಿದೆ-

“ನಟ್ಟಿರುಳ ಕರಿ ಮುಗಿಲ ನೀರ್-ತುಂಬಿಗಳ ನಡುವೆ
ಹುಣ್ಣಿಮೆಯ ಕಣ್ಣು ತೆರೆದಿದೆ. ತಾರೆ ಬಂದಿವೆ
ಬಾನ ಬೀದಿಗೆ. ಅತ್ತ ಹಿಡಿದ ಸೋನೆಯ ಶೃತಿಗೆ
ಗಾಳಿಯೇ ಹಾಡುತಿದೆ. ಇತ್ತ ಈ ಮನೆಯೊಳಗೆ
ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲಿ
ಕಣ್ಣರ್ಧ ಮುಚ್ಚಿ ಮಲಗಿದೆ, ಅದೂ ಬರಿ ಮೈಲಿ!
ನಿದ್ದೆಗಣ್ಣಿನಲೆ ಪಕ್ಕದ ತಾಯಿ ಕೈ ನೀಡಿ
ಮತ್ತೆ ಹೊದಿಕೆಯನು ಸರಿಪಡಿಸುವಳು. ಮಗು ತಿರುಗಿ
ಹೊದಿಕೆಯನೆ ಕಿತ್ತೆಸೆದು ಮಲಗುವುದು ಬರಿ ಮೈಲಿ!
ಸಣ್ಣಗಿದೆ ದೀಪ ಎಲ್ಲೊ ಒಂದು ಮೂಲೆಯಲಿ”

‘ಸಣ್ಣ ಸಂಗತಿ’ ಎಂಬ ಕವಿತೆಯ ಈ ಭಾಗದ ಚಿತ್ರದಲ್ಲಿ, ಆಕಾಶಕ್ಕೆ ಹುಣ್ಣಿಮೆಯ ಕಣ್ಣು ತೆರೆದ, ಬಾನ ಬೀದಿಗೆ ತಾರೆ ಬಂದ, ಸೋನೆಯ ಶ್ರುತಿಗೆ ಗಾಳಿಯೇ ಹಾಡುವ ಪ್ರಾಕೃತಿಕ ಘಟನೆಗಳ ಚೌಕಟ್ಟಿನೊಳಗೆ, ಮತ್ತು ಆ ದೊಡ್ಡ ಘಟನೆಗಳೊಂದಿಗೆ, ಮನೆಯೊಳಗೆ ಮಲಗಿದ ಮಗು ಹೊದಿಕೆಯನ್ನು ಕಿತ್ತೆಸೆಯುವ ಮತ್ತು ತಾಯಿಯ ಕೈ ಹೊದಿಕೆಯನ್ನು ಸರಿಪಡಿಸುವ ‘ಸಣ್ಣ ಸಂಗತಿ’ಯನ್ನು ವರ್ಣಿಸಲಾಗಿದೆ. ಆದರೆ ಈ ಸಣ್ಣ ಸಂಗತಿ ವಾಸ್ತವವಾಗಿ, ಸದಾಕಾಲ ಕಾಪಾಡುವ ಕರುಣೆಯೊಂದರ ಸಂಕೇತವಾಗಿ ಬಂದಿದೆ. ಆದರೆ ಮೇಲೆ ಕಾಣಿಸಿರುವ ಕವಿತೆಯ ಭಾಗಕ್ಕೆ, ಕೆ.ಎಸ್.ನ. ಅವರ ಕವಿತೆ ನಿಂತಿದ್ದರೆ ಚೆನ್ನಾಗಿತ್ತು ಎನ್ನಿಸುತ್ತದೆ, ಅವರು ಈ ಪದ್ಯವನ್ನು ಮತ್ತೆ ನಾಲ್ಕು ಸಾಲುಗಳಲ್ಲಿ ಮುಂದುವರಿಸಿ ವಿವರಿಸದಿದ್ದರೆ. ಏಕೆಂದರೆ ಈ ಕವಿತೆ-

“ನಿದ್ದೆ ಎಚ್ಚರಗಳಲಿ ಪೊರೆವ ಕೈ ದುಡಿಯುತಿದೆ
ಅದನು ಲೆಕ್ಕಿಸದೆ ಮಗು ಹೊದಿಕೆಯನು ಒದೆಯುತಿದೆ”

ಎಂದು ಮುಕ್ತಾಯವಾಗುತ್ತದೆ. ಈ ಮುಕ್ತಾಯದ ವಾಚ್ಯ ವಿವರಣೆಯ ಮಾತುಗಳಿಲ್ಲದಿದ್ದರೆ, ಈ ‘ಸಣ್ಣ ಸಂಗತಿ’ ತುಂಬಾ ಗಹನವಾದ ತತ್ವದ ಸಂಕೇತವಾಗಬಹುದಾಗಿತ್ತು ಎನ್ನಿಸುತ್ತದೆ. ಇದಕ್ಕಿಂತ ಈ ಸಾಂಕೇತಿಕತೆ ಇನ್ನೂ ಯಶಸ್ವಿಯಾಗಿರುವುದು, ‘ಹೀಗಾಯಿತು’ (ದೀಪದ ಮಲ್ಲಿ ಪು. ೩೬) ಮತ್ತು ‘ಮನೆಯಿಂದ ಮನೆಗೆ’ (ಮನೆಯಿಂದ ಮನೆಗೆ ಪು. ೨೫) ಎಂಬ ಎರಡು ಕವಿತೆಗಳಲ್ಲಿ. ಮೊದಲನೆಯ ಕವಿತೆ ವಸ್ತು ಇದು: ಗಂಡ ಮನೆಯಲ್ಲಿ ಇಲ್ಲದಾಗ, ಅವನನ್ನು ಕೇಳಿಕೊಂಡು ಯಾರೋ ಬಂದು ಹೋಗಿರುತ್ತಾರೆ. ಸಂಜೆ ಮನೆಗೆ ಬಂದಾಗ, ಈ ಸಂಗತಿಯನ್ನು ತಿಳಿದ ಗಂಡ ಬಂದವರು ಯಾರು ಎಂದು ಹೆಂಡತಿಯನ್ನು ಕೇಳಿದಾಗ, ಆಕೆ-

“ಇನ್ನು ನನ್ನನು ಕೇಳಿ ಕೊಲ್ಲದಿರಿ ನಾನರಿಯೆ-
ನವರಿಂದ ನಿಮಗೇನು? ಮತ್ತೆ ಬಹರು-
ಮತ್ತೆ ಬರುವರು ನಾಳೆ, ಇದ್ದು ಕೇಳಿರಿ ನೀವೆ:
ಬಂದೆ ಬರುವರು -ಎಂದು ನಕ್ಕು ನುಡಿದು”

ತನ್ನ ಪಾಡಿಗೆ ತಣ್ಣಗೆ ಮಲಗುತ್ತಾಳೆ. ಇತ್ತ ನಿದ್ದೆ ಬಾರದ ಗಂಡ, ಬಂದವರು ಯಾರಿರಬಹುದು ಎಂದು ಚಿಂತಿಸುತ್ತಾ-

“ಇಂಥವರು ಒಂದೆ ಸಲ ಬಂದು ತೆರಳುವುದಿಲ್ಲ-
ಒಂದು ಗಳಿಗೆಗೆ ಭೂಮಿ ಸ್ವರ್ಗವಹುದೆ?
ಮತ್ತೆ ಬಹರೆಂದಿವಳು ಆಡಿದುದು ಸಟೆಯಲ್ಲ
ಮಳೆ ಬೆಳಸು ಬದುಕೆಲ್ಲ ಇದರಿಂದಲೆ!”

ಎಂದು ಸಮಾಧಾನ ಮಾಡಿಕೊಳ್ಳುತ್ತಾನೆ. ‘ಯಾರೋ ಬಂದಿದ್ದರು’ ಎಂಬ ಸಾಧಾರಣ ಸಂಗತಿ ಈ ಕವಿತೆಯಲ್ಲಿ ಏರಿರುವ ಎತ್ತರ ಆಶ್ಚರ್ಯಕರವಾಗಿದೆ. ‘ಮನೆಯಿಂದ ಮನೆಗೆ’ ಎಂಬ ಕವಿತೆ ಬಾಡಿಗೆ ಮನೆಯಿಂದ ಬಾಡಿಗೆಯ ಮನೆಗೆ ಸಂಸಾರ ಬದಲಾಯಿಸುವ ಸಂಗತಿಯನ್ನು ಎರಡು ಸ್ತರಗಳಲ್ಲಿ, ಅಲ್ಲಿ ಎರಡು ಸ್ತರಗಳಿಗೆ ಯಾವ ಗೊಂದಲವೂ ಆಗದ ಹಾಗೆ ನಿರ್ವಹಿಸುತ್ತದೆ. ಮನೆಯಿಂದ ಮನೆಗೆ ಬದಲಾಯಿಸುವ ಸಾಮಾನ್ಯ ಸಂಗತಿ, ತನ್ನ  ವಾಸ್ತವ ಸಹಜವಾದ ಅಂಶಗಳನ್ನಿರಿಸಿಕೊಂಡೂ ಬದುಕು-ಸಾವುಗಳ ಸಂಗತಿಯನ್ನು ಧ್ವನಿಸುವ ರೀತಿ ಸೊಗಸಾಗಿದೆ ಕವಿತೆಯಲ್ಲಿ. ಕಡೆಯಲ್ಲಿ-

“ಮನೆಯಿಂದ ಮನೆಗೆ, ಹೊರಮನೆಯಿಂದ ಹೊರಮನೆಗೆ
ಮೊದಲ ಮನೆಯಿಂದ
ಆದರವಿರದ, ಕದವಿರದ, ಹೆಸರಿರದ ಇನ್ನೊಂದು ಮನೆಗೆ
ಹೊಸತು ಹಳೆಯದು ಎಲ್ಲ ಯಾತ್ರೆ ಹೊರಟಿದ್ದೇವೆ.
ಅಲ್ಲಿ ತಡೆಯುವರಿಲ್ಲ;
ಒಳಗೆ ಕರೆಯುವರಿಲ್ಲ;
ಇನ್ನೊಂದು ಮನೆಯಿಲ್ಲ;
ಹೊರಮನೆಯ ನೆರಳಿಲ್ಲ;
ಹೋದವರು ಹಿಂತಿರುಗಿ ಬರಲು ಹಾದಿಗಳಿಲ್ಲ
ಅದೇ ಕಡೆಯ ಮನೆ!
ಬಾಂದಳದ ತಾರೆಗಳ ಓರೆಗಣ್ಣಿನ ಕೆಳಗೆ ಆಗಾಗ ಬೀಸುವುದು ಬಯಲು ಗಾಳಿ.”

ಎಂದು ಮುಕ್ತಾಯವಾಗುವ ಪಂಕ್ತಿಗಳಿಂದ, ಬದುಕು-ಸಾವಿನ ಪಯಣವನ್ನು ಈ ಕವಿತೆ ಮನಸ್ಸಿಗೆ ತಂದುಕೊಡುವುದಾದರೂ, ಈ ಮೇಲೆ ಕಾಣಿಸಿರುವಲ್ಲಿ, ಮೊದಲು ನಾಲ್ಕು ಪಂಕ್ತಿಗಳು ಮತ್ತು ಕಡೆಯ ಒಂದು ಪಂಕ್ತಿ ಮಾತ್ರ ಇದ್ದಿದ್ದರೆ, ಆಗಬಹುದಾಗಿದ್ದ ಪರಿಣಾಮ ತೀವ್ರತೆ, ನಡುವೆ ಬರುವ ಆರು ಪಂಕ್ತಿಗಳ ಕಾರಣದಿಂದ ಶಿಥಿಲವಾಗಿದೆ. ಕಾವ್ಯದ ತತ್ವವನ್ನೂ, ಸಂದೇಶವನ್ನೂ ನೇರವಾಗಿ ಹೇಳಿಬಿಡುವ ಈ ವಾಚ್ಯ ಚಾಪಲ್ಯವನ್ನು ತತ್ಕಾಲಕ್ಕೆ ಕಡೆಗಣಿಸಿ ನೋಡಿದರೂ, ಕೆ.ಎಸ್.ನ. ಅವರ ಪ್ರೇಮ ಹಾಗೂ ಸಂಸಾರ ಜೀವನವನ್ನು ಕುರಿತ ಕೆಲವು ಕವಿತೆಗಳಲ್ಲಾದರೂ, ತೀರ ಸರಳ ಸಾಧಾರಣ ಸಂಗತಿಗಳ ಮೂಲಕ, ಅಸಾಧಾರಣವಾದ ಚಿಂತನೆಗಳು, ಸತ್ಯಗಳು, ಬದುಕಿನ ಪಾರಂಪರಿಕ ಶ್ರದ್ಧೆಗಳು, ಅನಾಯಾಸವಾಗಿ ಅಭಿವ್ಯಕ್ತಿಗೊಂಡಿವೆ ಎಂಬುದು ಸಮಾಧಾನದ ಸಂಗತಿಯಾಗಿದೆ.

ಕೆ.ಎಸ್.ನ. ಅವರ ಕವಿತೆ ಒಂದು ರೀತಿಯಲ್ಲಿ ಜಾನಪದ ಸಂಪ್ರದಾಯಕ್ಕೆ ಸೇರಿದ್ದು. ಇದು ಅವರು ಕಾವ್ಯಕ್ಕೆ ಬಳಸುವ ಭಾಷೆಯಲ್ಲಿ ಕಾಣುವುದಿಲ್ಲ, ಅವರ ಕವಿತೆಯ ವಸ್ತುಗಳಲ್ಲಿ ಕಾಣುತ್ತದೆ. ಅವರ ಭಾಷೆ ಆಡುಮಾತಿಗೆ ಸಮೀಪವಾದ ಶಿಷ್ಟ ಭಾಷೆಯಂತೆ ತೋರಿದರೂ, ಅವರ ಅನುಭವದ ಸಾಮಗ್ರಿ-ಹಿಂದಿನ ಕೆಲವು ಸಂಗ್ರಹಗಳ ಮಟ್ಟಿಗೆ-ನಗರ ಪರಿಸರದ್ದಲ್ಲ; ಗ್ರಾಮಾಂತರ ಪರಿಸರದ್ದು. ಅವರ ಕವಿತೆಯಲ್ಲಿ ಬರುವ ಹೆಣ್ಣುಗಳ ಹೆಸರನ್ನು ನೋಡಿ: ಜಾನಕಿ, ಮೀನಾಕ್ಷಿ, ಗೌರಿ, ಕಾಮಾಕ್ಷಿ, ಸೀತಾದೇವಿ, ಚಂದಮ್ಮ ಇವರೆಲ್ಲ ಹಳ್ಳಿಯ ಬಾವಿಯಿಂದ ನೀರು ಸೇದಿ ತರುವ, ಬೆಳಗಾಗ ವೃಂದಾವನದ ತುಳಸಿಗೆ ಕುಂಕುಮವಿರಿಸುವ, ಹಸಿರು ಕುಪ್ಪಸದ, ತಲೆತುಂಬ ಹೂವು ಮುಡಿಯುವ, ಬಳೆಗಾರ ಚನ್ನಯ್ಯನಿಂದ ಒಪ್ಪುವ ಬಳೆ ತೊಡುವ, ಚೆಲುವೆಯರು. ಇವರ ಊರುಗಳ ಹೆಸರುಗಳು-ಹೊನ್ನೂರು, ನವಿಲೂರು, ತಾವರೆಗೆರೆ, ಸಿರಿಗೆರೆ, ಚಿತ್ರವಳ್ಳಿ ಇತ್ಯಾದಿಗಳು. ಈ ತೌರೂರದಾರಿ ‘ತೆಂಗುಗಳು ತಲೆದೂಗಿ, ಬಾಳೆಗಳು ತೋಳ ಬೀಸಿ’ ಕರೆಯುವ ಬಂಡಿಯ ದಾರಿ. ‘ತೆಂಗುಗರಿಗಳ ಮೇಲೆ ತುಂಬು ಚಂದಿರ ಬಂದು ಬೆಳ್ಳಿ ಹಸುಗಳ’ ಹಾಲನ್ನು ಕರೆಯುವ ಇರುಳಿನ ಪರಿಸರ. ಈ ಪರಿಸರದಲ್ಲಿ ಬಳೆಗಾರ ಚೆನ್ನಯ್ಯ, ಹೂವಾಡಗಿತ್ತಿ, ಸಂತೆಗೆ ಹೋಗಿ ಬರುವ ಹೆಣ್ಣುಗಳು, ನಡೆದಾಡುತ್ತಾರೆ. ಈ ವ್ಯಕ್ತಿಗಳು ಇರುವುದು ಹಳ್ಳಿಯಲ್ಲಿ. ಆದರೆ ಹಳ್ಳಿಯ ಕೆಲವು ನಿಸರ್ಗದೃಶ್ಯಗಳು ಮತ್ತು ಆ ಹಳ್ಳಿಯ ಕೆಲವು ವ್ಯಕ್ತಿಗಳು ಇವುಗಳನ್ನು ಬಿಟ್ಟರೆ, ಈ ಹಳ್ಳಿಗಳು, ಈ ಕವಿತೆಗಳಲ್ಲಿ ಬರುವ ಹೆಣ್ಣಿನ ಮತ್ತು ಈ ಹೆಣ್ಣನ್ನು ಕೈ ಹಿಡಿದು, ಬಹುಶಃ ನಾಗರಿಕವಾದ ದೂರದ ಊರಿನ ಗಂಡಿನ ಪ್ರೇಮ ಜೀವನಕ್ಕೆ ಕೇವಲ ಹಿನ್ನೆಲೆಯಾಗಿ ಬರುತ್ತವೆ. ಜಾನಪದ ಗೀತೆಗಳಲ್ಲಿ ನಾವು ಕಾಣುವಂಥ ತಂದೆ-ತಾಯಿ, ಅಕ್ಕ-ತಂಗಿ, ಗೆಳೆಯ-ಗೆಳತಿ ಇತ್ಯಾದಿ ಸಂಬಂಧಗಳನ್ನು ಸೂಚಿಸುವ ಸಮಷ್ಟಿ ಬದುಕಿನ ಚಿತ್ರಣ ಕಾಣುವುದಿಲ್ಲ; ಅದರ ಬದಲು ಕೇವಲ ಒಂದು ಗಂಡು ಮತ್ತೊಂದು ಹೆಣ್ಣಿಗೆ ಮಾತ್ರ ಸಂಬಂಧಿಸಿದಂತೆ ಚಿತ್ರಿತವಾದ ಈ ವ್ಯವಹಾರ ಒಂದು ರೀತಿಯಲ್ಲಿ ತನ್ನಷ್ಟಕ್ಕೆ ಸೀಮಿತವಾಗುತ್ತ, ಒಂದು ಬಗೆಯ ಏಕಾಕಿತನದಿಂದ ಅತೃಪ್ತಿಯನ್ನು ಹುಟ್ಟಿಸುವಂಥದ್ದಾಗಿದೆ.

ಆದರೂ ಕೆ.ಎಸ್.ನ. ಅವರ ಶಿಲ್ಪ ಯಾರನ್ನೂ ಬೆರಗುಗೊಳಿಸುವಂಥದು. ಬೇಲೂರು-ಹಳೆಬೀಡಿನ ಶಿಲಾಬಾಲಿಕೆಯರಂತೆ, ಇವರ ಕವಿತೆಯ ಕಟ್ಟಡದಿಂದ ಬೇರ್ಪಡಿಸಿ ನೋಡುವಂಥ ಎಷ್ಟೋ ಬಿಡಿ ಬಿಡಿ ಚಿತ್ರಗಳ ಮೋಹಕತೆ, ಮಾನವ ಜೀವನದ ಹಾಗೂ ನಿಸರ್ಗದ ಸೌಂದರ್ಯಗಳ ಸಮ್ಮೇಳನದಿಂದ ಬಂದುದಾಗಿದೆ. ನಲ್ಲೆಯ ಚೆಲುವನ್ನು-

“ಅವಳೊಮ್ಮೆ ಹೆರಳ ಕೆದರಿ
ಕಪ್ಪುಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ
ದೂರದಲಿ ಗಿರಿಯ ಮೇಲೆ
ಇಳಿದಂತೆ ಇರುಳ ಮಾಲೆ.”

ಎಂದಾಗ, ತನ್ನ ಹೆಣ್ಣು ‘ಹಳ್ಳಿಯೆರಡರ ಮುದ್ದು ಬಳ್ಳಿ’ ಎಂದಾಗ, ‘ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ ಹುಚ್ಚು ಹೊಳೆ ಮುಂಗಾರಿನುರುಳು’ ಎನ್ನುವಾಗ ಈ ಬಿಡಿಯಾದ ಚಿತ್ರ ನೆನಪಿನ ನಾಲಗೆಯ ಮೇಲೆ ಬಹುಕಾಲ ಮಧುರವಾಗಿ ನಿಲ್ಲುತ್ತದೆ. ‘ಇರುವಂತಿಗೆ’ ಸಂಗ್ರಹದಲ್ಲಿ, ಮದುವೆಯ ಹಿಂದಿನ ಇರುಳು, ಬಹುಶಃ ತನಗೆ ಒಪ್ಪದ ಮದುವೆಯನ್ನು ಕುರಿತು ಪರಿತಪಿಸುವ ಸಿಂಗಾರಗೊಂಡ ಮದುವಣಗಿತ್ತಿಯ ಮನಸ್ಸನ್ನು ಕುರಿತು-

“ಮದುವೆಯ ಹೆಣ್ಣು; ನಾಳೆಯೆ ಮದುವೆ; ಇವಳೇಕೆ
ಮೂಲೆಯ ಹಿಡಿದು ಮಲಗಿಹಳು?
ಬಿಳಿ ವಲ್ಲಿ ಬೆನ್ನ ಹತ್ತಿರವಿಹುದು; ಹೂದಂಡೆ
ಹೆರಳಲ್ಲಿ; ಮಾತಿಲ್ಲ; ಉಸಿರು. “

ಎಂದು ಮೊದಲಾಗುವ ಈ ಕವಿತೆ, ಮತ್ತು ‘ಉಂಗುರ’ ಕವನಸಂಗ್ರಹದಲ್ಲಿ ‘ಮನೆಗೆ ಬಂದ ಹೆಣ್ಣು’ (ಪು. ೪೦) ಮೂರು ದಿನಗಳಲ್ಲಿ ಹೇಗೆ ಹೊಸ ಮನೆಯ ಆವರಣಕ್ಕೆ ಹೊಂದಿಕೊಂಡಳೆಂಬುದನ್ನು ಚಿತ್ರಿಸಿರುವ ಪರಿ ಕೆ.ಎಸ್.ನ. ಅವರ ಅಪೂರ್ವ ಶಿಲ್ಪಕ್ಕೆ ನಿದರ್ಶನಗಳು. ಇದರ ಜೊತೆಗೆ ‘ಅಕ್ಕಿಯಾರಿಸುವಾಗ’ ಎಂಬ ಕವಿತೆಯನ್ನು ಸೇರಿಸಿಕೊಂಡು ನೋಡಿದರೆ, ಈ ಮೂರು ಕವಿತೆಗಳು ಒಂದು ಘಟನೆಯನ್ನು ಅನುಕ್ರಮವಾಗಿ ಕೂಡಿಸಿ ಕೊಡುತ್ತದೆ. ಇಲ್ಲಿ-

“ಅಕ್ಕಿಯಾರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು
ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೆ
ಸಿಂಗಾರ ಕಾಣದ ಹೆರಳು.”

ಎಂದು ಮೊದಲಾಗುವ ಈ ಕವಿತೆಯಲ್ಲಿ,

“ಕಲ್ಲು ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಜಲ್ಲೆನುವ ಬಳೆಯ ಸದ್ದು.”

ಎಂಬ ಪಂಕ್ತಿಯಂತೂ, ದೃಶ್ಯವೊಂದನ್ನು ಸಚಿತ್ರವಾಗಿ ಸಶಬ್ದವಾಗಿ ಹಿಡಿದು ನಿಲ್ಲಿಸುತ್ತದೆ. ಈಗ ಹೆಸರಿಸಿದ ಮೂರು ಕವಿತೆಗಳು ಕನ್ನಡದಲ್ಲಿ ಅತ್ಯಂತ ಅಪೂರ್ವವಾದ ಕವಿತೆಗಳೆಂಬುದು ನಮ್ಮಭಾವನೆ.

ಕೆ.ಎಸ್.ನ. ಅವರು ಮೊದಮೊದಲು ಕೇವಲ ಚೆಲುವು-ಒಲವುಗಳ ಸೀಮೆಯನ್ನು ಗೆದ್ದು ತಮ್ಮದನ್ನಾಗಿ ಮಾಡಿಕೊಂಡರೂ, ಅವರ ಕಾವ್ಯಪ್ರಜ್ಞೆ ಆನಂತರದ ಕವಿತೆಗಳಲ್ಲಿ, ಅದರಾಚೆಯ ಬದುಕಿನ ವಿಸ್ತಾರಗಳನ್ನೂ ಒಳಗೊಂಡಿದೆ. ‘ಮೈಸೂರು ಮಲ್ಲಿಗೆ’ಯಿಂದ ಪ್ರಾರಂಭವಾಗಿ ‘ಇರುವಂತಿಗೆ’ಯವರೆಗೆ, ಒಂದು ಬಗೆಯ ಸುಕುಮಾರ ಪ್ರೇಮಲೋಕದ ಹರಹನ್ನು ಚಿತ್ರಿಸುವ ಕೆ.ಎಸ್.ನ. ಅವರ ಕವಿತೆ, ಆನಂತರ ‘ಶಿಲಾಲತೆ’, ‘ತೆರೆದ ಬಾಗಿಲು’ ಸಂಗ್ರಹದಲ್ಲಿ ಬದುಕಿನ ಬೇರೆ ಬಗೆಯ ಅನುಭವ ವಿಸ್ತಾರಗಳನ್ನು ಚಿಂತನೆಗೆ ಗುರಿಪಡಿಸುತ್ತದೆ. ಆದರೂ ಅವರ ಒಟ್ಟು ಕವಿತೆಯೊಳಗೆ ಮತ್ತೆ ಮತ್ತೆ ಕಾಣಿಸುವ ಮುಖ್ಯ ಪ್ರತೀಕಗಳಾದ ‘ಮನೆ’ ‘ದೀಪ’ ‘ಹೂವು’ಗಳು, ಪ್ರಧಾನವಾಗಿ ‘ಕುಟುಂಬಕ್ಷೇಮ’ವನ್ನು ಮಹತ್ವದ ಮೌಲ್ಯವನ್ನಾಗಿ, ಪ್ರತಿಪಾದಿಸುತ್ತವೆ. ಕುಟುಂಬದೊಳಗಿನ ಬದುಕು ನೆಟ್ಟಗಾದರೆ, ಸಮಾಜದ ಹಾಗೂ ಸಮಷ್ಟಿಯ ಬದುಕು ನೆಟ್ಟಗಾಗುತ್ತದೆ ಎಂಬ ನಂಬಿಕೆಯೆ ಇಲ್ಲಿ ಮುಖ್ಯವಾಗಿದೆ. ಮತ್ತು ಈ ಕೌಟುಂಬಿಕ ಸಂಬಂಧಗಳ ಪರಿಭಾಷೆಯಲ್ಲಿಯೇ, ಅವರ ಮುಂದಿನ ಕವಿತೆಗಳು, ಭೂಮಿಗೂ ಮನುಷ್ಯನಿಗೂ ಹಾಗೂ ಸೃಷ್ಟಿಕರ್ತನಿಗೂ ಇರಬಹುದಾದ ಸಂಬಂಧಗಳನ್ನು ವ್ಯಾಖ್ಯಾನಿಸುತ್ತವೆ. ಒಂದು ಬಗೆಯ ಉದಾರ ಮಾನವತಾವಾದಿಯ ವಾಸ್ತವದ ನಿಷ್ಠೆಯೆ ಇವರ ಕವಿತೆಯ ಧೋರಣೆಯಾಗಿದೆ. ಅದು ಸಾಂಪ್ರದಾಯಿಕವಾದ ಆಧ್ಯಾತ್ಮಿಕ ನಿಲುವುಗಳನ್ನು ನಿರಾಕರಿಸಿ, ಬದುಕನ್ನು ಅದರ ಎಲ್ಲ ಸೊಗಸು ಹಾಗೂ ಸಮೃದ್ಧಿಗಳ ಮೂಲಕ ಒಪ್ಪಿಕೊಳ್ಳುವ ಹಾಗೂ ಒಲಿಯುವ ಅದಮ್ಯವಾದ ಜೀವನ ಪ್ರೀತಿಯನ್ನು ವೈಭವಿಸುತ್ತದೆ. ಈ ಜೀವನ ಪ್ರೀತಿಯ ಮೊದಲ ಹಂತವಾಗಿ ‘ಮೈಸೂರು ಮಲ್ಲಿಗೆ’ಯ ಪ್ರೇಮಲೋಕ, ಕಾವ್ಯರಸಿಕರನ್ನು ಯಾವ ಕಾಲಕ್ಕೂ ಪರವಶಗೊಳಿಸುವ ಮೋಹಕತೆಯನ್ನು ಪಡೆದುಕೊಂಡಿದೆ.

ನವೋದಯ-೧೯೭೬