ಸುಕ್ರ ಸೂಲ್ದಿಗ ಒತ್ತೀಲಿ ಬೆಳ್ಳಿ ದೇವ
ನಾಲೋರಿಗಿಂತ ಹಿರಿಯೋನು | ತಿಂಗಳುಮಾವ
ನಾರೀರ ಕುರುವ ಅರಿಯನು

ಮೂಡ ಮೂಡಿದ ಪಡುವ ನಿದ್ರೆಗೈದ
ತಾವರೆಗೆರಿಯಲ್ಲಿ ತಳುಗಿದ | ಸೂಲ್ದಿಗ
ಹ್ಯಾಗೆ ಮೂಡಿದನೆ ಜನರಿಗೆ

ಹೊಲೆಯರ‍್ಹಟ್ಟೀಲಿ ಎಳಿಯ ಬೇವಿನಮರ
ಹಣ್ಣಾದರೇನೆ ಕಿರಿಕಯ್ಯೋ | ತಿಂಗಳುಮಾವ
ಚೆಂದಾದರೇನೆ ಮದುವಿಲ್ಲ

ಹೂಲೆಯರಟ್ಟೀಲಿ ಎಳೆಯ ಬೇವಿನಮರ
ಎಳಕಾದರೇನೆ ಫಲವಿಲ್ಲ | ತಿಂಗಳು ಮಾವ
ಚೆಲುವಾದರೇನೆ ಮದುವಿಲ್ಲ

ಸೂಲ್ದಿಗ ರಾಯಗೆ ನಾಲ್ವರು ಮಡದೀರು
ರಾಜೂಜೊಬ್ಬಳು ರತುನಾಜಿ | ಗಂಗಳ ಬೆಳಗಿ
ಮಾಲಿಂಗಗೆಡೆಮಾಡೆ ಪದುಮಾಜಿ

ಹತ್ತಿ ಕಡಿಲಿಲ್ಲ ಅಗೆದು ನಿಲ್ಲಲಿಲ್ಲ
ನಡುರಾಜ್ಯವದಲ್ಲಿರುವೋನೆ | ತಿಂಗಳುಮಾವನ
ಹಡೆದಮ್ಮನ್ಯಾರೆ ಧರಿಯೊಳಗೆ

ತಿಂಗಳು ಮಾವಗೆ ತಂಗೇರೇಳು ಮಂದಿ
ತಿಂಗುತಿಂಗಳಿಗೆ ತವರೀಗೆ | ಹೋಯ್ತೀನೆಂದು
ತಿಂಗಳ ಬೆಳಕೆ ಹಗಲಾದೊ

ಆರಾಳುದ್ದ ವಾರೇಲಿ ಸೇದೋಬಾವಿ
ವಾರೆಯ ಕಲ್ಲ ಮರಿಮಾಡಿ | ತಿಂಗಳುಮಾವ
ಹೊತ್ರೆ ಪೂಜಿಗೆ ನಡದಾನೆ

ಹತ್ತಾಳುದ್ದ ಒತ್ತೀಲಿ ಸೇದೋಬಾವಿ
ಒತ್ತಿಯ ಕಲ್ಲ ಮರಿಮಾಡಿ | ತಿಂಗಳುಮಾವ
ಹೊತ್ರೆ ಪೂಜಿಗೆ ನಡದಾನೆ

ಅಚ್ಚಚ್ಚ ಬೆಳದಿಂಗಳೇ
ನನ್ನೂರ ಹಾಲಿನಂಥ ಹಿಂದಿಂಗಳೇ || ಪ ||
ಒಂದಾರ ಮೆಣಸ
ನಿನಗಾಗಿ ನಾ ತಂದೆ
ಬಾಣತಿ ನನ ಕಂದ
ಬೀಗತಿಯೇ
ಹಾವಿನ ಹಂದಳವೇ
ಚೇಣಿನ ಚಂದಲವೇ
ಕೂಸು ಬಾಸಿಂಗವೇ
ಕುಂದು ಲೋಲಾಕವೇ …..