ಬಪ್ಪಿಂಗ್ನೋ ಬಂಮ್ಮಿಂಗ್ನೋ
ಏನೆಂದ ೧ಪಂತ ಮಾಡಿದರು
“ಪಗದೆ ಆಟ ಆಡಬೇಕು
ನೀ ಸೋತರೆ ನಿನ ತಂಗಿ
ನನಗೆ ಆದರೆ ಕೊಡಬೇಕು
ನಾ ಸೋತರೆ ನನ ತಂಗಿ
ನಿನಗೆ ಆದರೆ ಕೊಡತೇನೆ”
ಅಂದೇಳಿ ಪಂತ ಮಾಡಿಕೊಂಡು
ಪಗಡಿ ಆಟ ಹೂಡಿದರು
ಬಪ್ಪಿಂಗ್ನೋ ಬ್ರಾಹ್ಮಣ
ಬಮ್ಮಿಂಗ್ನೋ ಹೊಲೆಯನು
ಬಮ್ಮಿಂಗ ೨ಪಗಡೆಲೂಡಿದ
ಬಪ್ಪಿಂಗ್ನ ಕೈಯಲ್ಲಿ
ಗೆಲಲಿಕ್ಕೆ ಆಗಲಿಲ್ಲ
ಯೆರಡಂಬು ಪಗಡೆ ಹೂಡಿದ
ಗೆಲಲಿಕ್ಕೆ ಆಗಲಿಲ್ಲ
ಮೂರಂಬು ಪಗಡೆ ಹೂಡಿದ
ಬಪ್ಪಿಂಗ್ನ ಕೈಯಲಿ
ಗೆಲಲಿಕ್ಕೆ ಆಗಲಿಲ್ಲ
ಬಪ್ಪಿಂಗ್ನ ಹೂಡಿದ (ಆಟ)
ಬಮ್ಮಿಂಗು ಗೆದ್ದಿದಾಲೊ
ಎರಡಂಬು ಪಗಡೆ ಹೂಡಿದ
ಬಮ್ಮಿಂಗ್ನು ಗೆದ್ದಿದಾಲೆ
ಮೂರಂಬು ಪಗಡೆ ಹೂಡಿದ
ಬಮ್ಮಿಂಗ್ನು ಗೆದ್ದಿದಾಲೊ
“ನೀ ಆಡಿದ ಮಾತಿನ ಪರಕಾರ
ಲಗ್ನಕೆ ಯಾವಾಗ ಬರಬೇಕೊ ?”
“ಮೇಲೆ ಬರುವ ಸುಕ್ರವಾರ
ದಿಬ್ಬಣತಕ್ಕಡ್ಂ ಬಾರಪ್ಪ
ನನ್ನsಲು ತಂಗಿನ
ಲಗ್ನಮಾಡಿ ಕೊಡುತೇನೆ
ಅಂದೇಳಿ ಬಪ್ಪಿಂಗ್ನು
ಮನೆಗೆಂದು ನಡೆದಾನ
ಕೋಣೆಯ ವಳಗೋಗಿ
ಕರಿಯ ಕಂಬಳಿ ಮುಸುಕಿಟ್ಟಿ
ಮಂಚದ ಮೇಲೆ ಮಲಗಿದ
ತಾಯಿಯು ಅಂಬೋಳು
ಒಳಗೋಗಿ ನೋಡಿತು
ಕೇಳಲ್ಲೊ ನನ್ನ ಮಗನೆ
ಯಾಕಿನ್ನು ಮಲಗಿದೆ ?
ಊಟಕ್ಕಾದರು ಏಳಪ್ಪ
ಯಾರು ನಿನಗೆ ಬೈದಾರು ?
ಯಾರು ನಿನಗೆ ಹೊಡೆದಾರು ?
ಊಟಕ್ಕಾದರು ಏಳು ಮಗನೆ,
“ಯಾರು ನನಗೆ ಹೊಡಿಲಿಲ್ಲ
ಯಾರು ನನಗೆ ಬೈಯಲಿಲ್ಲ
ಪಗಡೆ ಆಟಕೆ ಕುಂತಿದೆ
ಗೆಲಲಿಕ್ಕೆ ಆಗಲಿಲ್ಲ
ಬಮ್ಮಿಂಗ ಅಂಬೊನಿಗೆ
೨ಬಾಶೆಯ ಕೊಟ್ಟಿದೆ
ತಂಗಿಯ ಕೊಡುತೇಳಿ
ಕೇಳಲ್ಲೆ ನನ್ನ ತಾಯಿ”
ಅಷ್ಟಂಬು ಮಾತಿಗೆ
“ಚಿಂತೆಯ ಮಾಡಬೇದ
ಲಗ್ನಮಾಡಿ ಕೊಡುತೆನ್ನು
ಊಟಕ್ಕಾದರು ಏಳಪ್ಪ”
ಅಷ್ಟಂಬು ಮಾತು ಕೇಳಿ
ಸ್ನಾನಕ್ಕೆ ನಡೆದಾನು
ಸಾನವ ಮಾಡಿದ
ಊಟಕ್ಕೆ ನಡೆದಿದ
ತಾಯಿ ಮಗನು ಇಬ್ಬರು
ಊಟವ ಮಾಡಿದರು
ಸುಕ್ರವಾರ ದಿನದಲ್ಲಿ
ಬಮ್ಮಿಂಗ ಅಂಬವನು
ದಿಬ್ಬಣ ತಕ್ಕಂಡ್ ಬಂದಿದ
ದಿಬ್ಬಣ ಬಂದದು ನೋಡಿದನು
ತಂಗಿನಾದರು ಕರೆದಿದಾನು
ಸೃಂಗಾರವ ಮಾಡಿದ
ಲಗ್ನಮಾಡಿ ಕೊಡುವನು
“ಕರಕಂಡ ಹೋಗಪ್ಪ”
ಅಂದೇಳಿ ನುಡಿದಾನು
ದಿಬ್ಬಣಾರು ಹೋಗಿತು
ಅತ್ತೆಯು ಅಂಬೋಳು
ಸೊಸೆಯ ಕುಡಿನ್ನೆ
“ಊಟನಾದರೂ ಮಾಡಂತು”
ಊಟಕಾದರೂ ಹೋಗಿತು
ವಂದಂಬು ತುತ್ತು ಕಲಸಿತು
ಕೈತಪ್ಪಿ ಬಿದ್ದಿತು
ಎರಡಂಬು ತುತ್ತು ಕಲಸಿತು
ಬಾಯಿಗೆ ಹೋಗಲಿಲ್ಲ
ಮೂರಂಬು ತುತ್ತು ಕಲಸಿತು
ಉಣಲಿಕ್ಕೆ ಆಗಲಿಲ್ಲ
ಕೈ ಬಾಯಿ ತೊಳದಿತು
ಅಪ್ಪನ ಮನೆಗೀಗೆ
ಹಿಂತುರುಗಿ ಬಂದಾಳು
“ಕೇಳಕೆ ನನ ತಾಯಿ,
ಹೊಟ್ಟೆ ಹಸು ಆಗತದೆ
ಊಟಕಾದರು ಬಡಸವ್ವ”
ಅಂದೇಳಿ ನುಡಿದಾಳು
“ಹೊಟ್ಟೆ ಹಸು ಆದರೆ
ಹಾದಿ ಮಣ್ಣು ತಿನ್ನವ್ವ
ಕೊಟ್ಟವನ ಮನೆಗೆ ಹೋಗವ್ವ”
ಅಂದೇಳಿ ತಾಯಿ ನುಡಿದಾಳು
ಕದವನ್ನೇ ಹಾಕಿತು
ಒಳಗೇಯ ಕುಂತಾಳು
ಮಗಳೀಗೆ ಏನ ಮಾಡಿತು ?
ತಾಯಿ ಬೇಡದಿಂದ ಮಗಳೀಗೆ
ಜೀವಿದ್ದು ಪಲವೇನು ?’
ಅಂದೇಳಿ ಬಾವಿಲಿ ಬಿದ್ದಿತ್ತು
ಪ್ರಾಣವು ಹೋಗಿತ್ತು

(ಪ್ರತಿ ಸಾಲಿಗೂ ಲೋಲೊಲೊಲದುಂಬೆ ಅನ್ನಬೇಕು)

ಪಾಠಾಂತರಗಳು :

೧) ಅಕ್ಕಮಹಾದೇವಿಯ ಹಾಡು; ಕಾಪಸೆ ರೇವಪ್ಪ, ಮಲ್ಲಿಗೆದಂಡೆ, ಸಮಾಜ ಪುಸ್ತಕಾಲಯ, ಧಾರವಾಡ – ೧೯೭೦ ಪು.ಸಂ. ೪೩-೪೫

೨) ನೀಲಗಂಗ-ಮಾದ್ರಮಲ್ಲ; ಕೃಷ್ಣಯ್ಯ ಎಸ್.ಎ. ಬಾಚಿಗೊಂಡನಹಳ್ಳಿ ಮತ್ತು ಏಣಗಿ

ಬಸಾಪುರದ ಜನಪದ ಗೀತೆಗಳು, ಪ್ರಾದೇಶಿಕ ಜನಪದ ರಂಗ ಕಲೆಗಳ ಅಧ್ಯಯನ ಕೇಂದ್ರ, ಉಡುಪಿ – ೧೯೯೨ ಪು.ಸಂ. ೧೩೭-೧೩೮

೩) ಸಣ್ಣಮ್ಮ; ನಾಯಕ ಎನ್.ಆರ್. ಪಾಠಾಂತರ ಕಥನ ಕವನಗಳು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು – ೧೯೯೭ ಪು.ಸಂ. ೪೭-೫೯

೪) ಹರಿಗೋಲು; ಚಂದ್ರಯ್ಯ ಬಿ.ಎನ್. ಜಾನಪದ ಕಥನಗೀತೆಗಳು, ಶರತ್ ಪ್ರಕಾಶನ  ಮೈಸೂರು – ೧೯೭೯ ಪು.ಸಂ. ೭೧-೭೭

೫) ನಡಿ ಹೆಣ್ಣೆ ನಮ್ಮ ಮನಿಗೋಗಾನಾ; ಹಿರಿಯಣ್ಣ ಅಂಬಳಿಕೆ, ತಂಬೂರಿ ಸಂಪ್ರದಾಯದ ಕಾವ್ಯಗಳು – ೧೯೮೦ ಪು.ಸಂ. ೩೭೧-೭೩

೬) ನಿನ ಮಕವ ಸಿಗಲಿಲ್ಲ; ಹಕಾರಿ ದೇವೇಂದ್ರಕುಮಾರ, ಜಾನಪದ ಸಾಮಾಜಿಕ ಕಥನಗೀತೆಗಳಲ್ಲಿ ದುಃಖಾಂತ ನಿರೂಪಣೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು – ೧೯೮೫, ಪು.ಸಂ. ೩೯೦-೩೯೩.*      ಬಪ್ಪಂಗ – ಬಮ್ಮಿಂಗ; ಹೆಗಡೆ ಎಲ್.ಆರ್. ಮುಕರಿ ಮತ್ತು ಹೊಲೆಯರ ಪದಗಳು, ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು-೧೯೭೯ ಪು.ಸಂ. ೫೧-೫೪.