ಕುಣಕೊಂತ ಬಂದಾಳ
ಯಕ್ಕಲೀಗ ಜೋಗವ್ವ
ಹಡ್ಡಲಗಿ ಹೊತ್ತಾಳ ಗರದಿ
ಗುಡ್ಡದ ಯಲ್ಲವ್ವ
ನೋಡೋನ ಬರ್ರೆವ್ವಾ
ಕಲ್ಲವ್ವ ಮಲ್ಲವ್ವಾ
ಕುಣಕೋಂತ ಬಂದಾಳ
ಯಕ್ಕಲಿಗೆ ಜೋಗವ್ವ       ೧

ಕೊಳ್ಳಾಗ ಹಾಕ್ಯಾಳ
ಕವಡಿಯ ಹಾರ
ಬಗಲಾಗ ಇಟ್ಟಾಳ
ದೇವಿಯ ಭಂಡಾರ
ಬಿಟ್ಟಾಳ ನೋಡವ್ವ
ತಲಿತುಂಬ ಜಡಿಯ
ನೋಡೋಣ ಬರ್ರೆವ್ವಾ
ಸಂಗವ್ವ ಮಂಗವ್ವಾ        ೨

ಗುಡ್ಡವ ಹತ್ತ್ಯಾಳ
ಸವದತ್ತಿ ಬಿಟ್ಟಾಳ
ಮನಿ ಮನಿ ತಿರಗ್ಯಾಳ
ಜನರಿಗೆ ಹರಸ್ಯಾಳ
ಭಂಡಾರ ಹಚ್ಚ್ಯಾಳ
ಉಧೋ ಉಧೋ ಅಂದಾಳ        ೩

ವಲ್ಲಿಯ ಉಟ್ಟಾಳ
ಅಂಗಾರ ಇಟ್ಟಾಳ
ಸಂಸಾರ ಬಿಟ್ಟಾಳ
ದೇವಿಯ ಹೊತ್ತಾಳ
ಯಲ್ಲಮ್ಮನ ನೆನಸ್ಯಾಳ
ಗಂಡಸರನ್ನು ಕುಣಿಸ್ಯಾಳ
ಯಕ್ಕಲೀಗ ಜೋಗವ್ವ      ೪