ಹಟ್ಟಿಲರಗ್ವಾಡೆ ಹಿತ್ತಲೇಲಿ ಸೇದೂಬಾವಿ
ಚಿತ್ತಾರಗೇದ ಅರಮನೆಯ ಒಳಗಿರುವ | ಚಿಕ್ಹೆಣ್ಣೆ
ಕುಡಿಯೋಕೆ ನೀರುಂಟೆ ಕಡುಜಾಣೆ

ಕುಡಿನೀರು ಕೊಡುವೋಕೆ ಅತ್ತಿಲ್ಲ ಮಾವಿಲ್ಲ
ಚಿಕ್ಕೊನು ಮೈದಾಳು ಮನೇಲಿಲ್ಲ | ದೊರೆಮಗನೆ
ನೀ ಹೋಗಯ್ಯ ಹರಿವೊ ಜಲಧೀಗೆ

ಹರು ನೀರು ಹಚ್ಚಾಗೆ ಕೆರೆ ನೀರು ಕೆಂಪೀಗೆ
ನೀ ಕೊಟ್ಟ ನೀರು ಕಡು ರುತಿಯು

ನಾ ಕೊಟ್ಟ ನೀರು ಕಡು ರುತಿಯಾದರೆ
ನಿನಗಿಂಟ ಚಲುವ ಮನೆಯಾತ | ಕಂಡರೆ
ನಿನ್ನ ಬೆನ್ನೇಲಿ ಬಿಡುವರು ಬಿಳಿಯಂಬ

ಬೆನ್ನೆಲಿ ಬುಟ್ಟಂಬ ಬೆಳ್ಳಲ್ಲಿ ತಗಿಸೂವೆ
ಸುರಗಿರಿ ಕೆಂಬಲ್ಲ ರತ್ನದ | ಕ್ವಾಟೀಲಿರುವ
ತಿರುಗಿ ನೋಡೂನ ಹೆಸರೇನೆ

ಆರು ಪೆಟ್ಟೇಲಿ ಬಣ್ಣ ಮ್ಯಾಲೊಂದ ಬಾಚಣಿಗೆ
ತಂದಿವ್ನಿ ನೋಡೆ ಬೆಲೆಹೆಣ್ಣೆ

ಹತ್ತ ಪೆಟ್ಟೀಲಿ ಬಣ್ಣ ಮ್ಯಾಲೊಂದ ಬಾಚಣಿಗೆ
ತಂದಿವ್ನಿ ನೋಡೆ ಬೆಲೆಹೆಣ್ಣೆ | ನಾನೀಗ
ಇಸ್ತ್ರೆ ತೋಳೇಲಿ ವರಗೂವೆ

ಇಸ್ತ್ರೆ ತೋಳೇಲಿ ವರಗಿದರೆ ದೊರೆಮಗನೆ
ದಂಡ ಕೊಟ್ಟೀನು ಅರಸೀಗೆ

ದಂಡ ನಾ ಕೊಡುವೆ ಹಿಂಡೆಮ್ಮೆ ಹೊಡಿಸೂವೆ
ನನ್ನ ಹೆಂಡರು ಮಕ್ಕಳ ಕೈಸೆರೆಯ ಕಳುವೇನು | ಈ ಮನೆಯ
ಕಡುಜಾಣೆ ನನಗೆ ಒಲಿದಾರೆ

ಉದ್ದುದ್ದನ ತ್ವಾರ ದೊಡ್ಡಮುತ್ತ ನಾ ಕೊಡುವೆ
ದೊಡ್ಡ ಮಾಳಿಗೇಲಿ ಇರಸೂವೆ | ಈ ಮನೆಯ
ಬುದ್ಧಿವಂತೆ ನನಗೆ ಒಲಿದಾರೆ

ಉದ್ದುದ್ದನ ತ್ವಾರ ದೊಡ್ಡ ಮುತ್ತು ನನಗುಂಟು
ದೊಡ್ಡ ಮಾಳಿಗೆ ಮಿಗಿಲುಂಟು | ನಂಗೌಡರ
ಉದ್ದೀನ ಗದ್ದೆ ಬೆಳಿಯಾಲೊ

ಕಡಕಡಲೆ ತ್ವಾರ ಕಡದ್ಹವಳ ನಾ ಕೊಡುವೆ
ಕಡೆಯ ಮಾಳಗೇಲಿ ಇರಸೂವೆ | ಈ ಮನೆಯ

ಕಡುಜಾಣೆ ನನಗೆ ಒಲಿದಾರೆ

ಕಡಕಡಲೆ ತ್ವಾರ ಕಡದ್ಹವಳ ನನಗುಂಟು
ಕಡೆಯ ಮಾಳಿಗೆ ಮಿಗಿಲುಂಟು | ನಂಗೌಡರ
ಕಡಲೇಯ ಗದ್ದೆ ಬೆಳಿಯಾಲೊ

* * * *

ಜ್ವಾಳಾದ ಹೊಲಕೆ ಕೂಳ ಕೊಂಡ್ಹೋಗಳೆ
ಜಾಣೆ ಒಕ್ಕಲಗಿತ್ತಿ ಕಡುಚೆಲುವ | ನೀನೀಗ
ಇತ್ತೊಂದ ತುತ್ತ ನೀದೋರೆ

ಒಬ್ಬರಿಗಟ್ಟಡುಗೆ ಇಬ್ಬರಿಗೆ ಆದಾವೆ
ಇಬ್ಬಂದಿರಿಗಾರ ದೊರೆಮಗನೆ | ನನ್ನೋರು
ಒಬ್ಬರಿಗೆ ಧಾರೆ ಎರದವರೆ

ಹಳ್ಳಾದ ಹೊಲಕ ಕೂಳ ಕೊಂಡ್ಹೋಗೂಳೆ
ಉತ್ತುಮೊಕ್ಕಲಗಿತ್ತಿ ಕಡುಚಲುವೆ | ನೀನೀಗ
ಮತ್ತೊಂದ ತುತ್ತ ನೀದೋರೆ

ಇಬ್ಬಂದಿಗಾರ ದೊರೆಮಗನೆ ನನ್ನೋರು
ಒಬ್ಬರಿಗೆ ಧಾರೆ ಎರದವರೆ

ಹೊಲೆಯ ನೇದ ಬಟ್ಟೆ ತಲೆಮ್ಯಾಲೆ ಹಾಕಿಕೊಂಡು
ಮೂಡಲಾಗಿ ಹೊಲವ ಉಳುವಾ (ನ) | ಒಕ್ಕಲಮಗನ
ನೀ ಏನ ಮೆಚ್ಚೀದೆ ಬೆಲೆ ಹೆಣ್ಣೆ

ಹೊಲೆಯ ನೇದ ಬಟ್ಟೆ ತಲೆಮ್ಯಾಲೆ ಹಾಕೊಂಡು
ಮೂಡಲಾಗಿ ಹೊಲವ ಉಳುವಾ (ನ) | ಒಕ್ಕಲಮಗನ
ನೀ ಏನ ಮೆಚ್ಚೀದೆ ಬೆಲೆ ಹೆಣ್ಣೆ

ಹೊಲೆಯ ನೇದಬಟ್ಟೆ ತಲೆಮ್ಯಾಲೆ ಹಾಕಿಕೊಂಡು
ಮೂಡಲಾಗಿ ಹೊಲವ ಉಳುವಾ (ನ) | ಒಕ್ಕಲುಮಗನ
ಭಾವಾವ ನೋಡೊ ದೊರೆಮಗನೆ

ಮಾದಗ ನೇದ ಮಿಣಿಯ ಮಂಡೆಮ್ಯಾಲ್ಹಾಕೊಂಡು
ತೆಂಕಲಾಗಿ ಹೊಲವ ಉಳುವಾ (ನ) | ಒಕ್ಕಲುಮಗನ
ನೀ ಏನ ಮೆಚ್ಚೀದೆ ಬೆಲೆಹೆಣ್ಣೆ

ಮಾದಗ ನೇದ ಮಿಣಿಯ ಮಂಡೆಮ್ಯಾಲ್ಹಾಕೊಂಡು
ತೆಂಕಲಾಗಿ ಹೊಲವ ಉಳುವಾ (ನ) | ಒಕ್ಕಲುಮಗನ
ಚಂದಾವ ನೋಡೊ ದೊರೆಮಗನೆ

ಹತ್ತು ಬೆರಳಿಗೆ ಹತ್ತು ತೆತ್ತೇಸ್ಹೊನ್ನುಂಗುರ
ಎತ್ತೀಗೆ ಹುಲ್ಲ ಇರುವೋನ | ಒಕ್ಕಲ ಮಗನ
ನೀನೇನ ಮೆಚ್ಚೀದೆ ಬೆಲೆಹೆಣ್ಣೆ

ಹತ್ತು ಬೆರಳಿಗೆ ಹತ್ತು ತೆತ್ತೇಸ್ಹೊನ್ನುಂಗುರ
ಎತ್ತೀಗೆ ಹುಲ್ಲ ಇರುವೋನ | ಒಕ್ಕಲಮಗನ
ಅಂದಾವ ನೋಡೋ ದೊರೆಮಗನೆ

ಕಡಾಯದೇಲಿ ನೀರು ಗಡಗುಟ್ಟಿ ಕಾದಾವೆ
ಹಣ್ಣೊಕ್ಕಲ ಮಗ ಶನಿವಾರ | ಮೀದ ನೀರ
ನೀ ನಾಯಾಗಿ ಉಳ್ಳೊ ದೊರೆಮಗನೆ

ಕೊಪ್ಪರಿಕೇಲಿ ನೀರು ಉಕ್ಕುಕ್ಕಿ ಕಾದಾವು
ಉತ್ತುಮೊಕ್ಕಲ ಮಗ ಸ್ವಾಮಾರ | ಮೀದ ನೀರ
ನೀ ಕತ್ತೆಯಾಗಿ ಮೀಯೊ ದೊರೆಮಗನೆ

ಎಣ್ಣೇಲಿ ಬೆಂದೊ ಹನ್ನೆರಡು ಕಜ್ಜಾಯ
ಹೆಣ್ಣೊಕ್ಕಲ ಮಗ ಶನಿವಾರ | ಉಂಡೆಲೆಯ
ನೀ ನಾಯಾಗಿ ನೆಕ್ಕೊ ದೊರೆಮಗನೆ

ತುಪ್ಪದೇಲಿ ಬೆಂದೊ ಇಪ್ಪತ್ತು ಕಜ್ಜಾಯ
ಉತ್ತು ಮೊಕ್ಕಲ ಮಗ ಸ್ವಾಮಾರ | ಉಂಡೆಲೆಯ
ನೀ ಬೆಕ್ಕಾಗಿ ನೆಕ್ಕೊ ದೊರೆಮಗನೆ

ಎಷ್ಟು ಹೇಳಿದರೂ ಕೇಳೊಲ್ಲೊಕ್ಕಲಗಿತ್ತಿ
ಹಾಸೆ ಮುತ್ತೀನ ಜೋತುರವ | ಕಡುಜಾಣೆ
ನಿನ್ನ ಸಂಗಡರಗಳಿಗೆ ಇರುವೇನು

ಆರುವರ ಕೊಟ್ಟಿ ಆರು ವಲ್ಲಿಯ ನೆಯ್ಸಿ
ಲಾಳದ ಕೊಳವೇಲಿ ಅಡಗಿರುವ | ಜೋತುರವ
ಹಾಸಿದರೆ ನಿನ್ನೊಡಲು ಉರಿಯಾದೆ

ನಮ್ಮತ್ತೆ ಮಾವರು ಒಪ್ಪಿ ಮತ್ತೆ ಬಂಧುಗರೊಪ್ಪಿ
ಮುಕ್ಕಣ್ಣೇಶ್ವರರು ವನಗೂಡಿ | ಬಂದೈರದಾಲಿ
ಹೋದರೆ ನಿನ್ನೊಡಲು ಉರಿಯಾದೆ

ಅತ್ತೆ ಮಾವರು ಒಪ್ಪಿ ಮತ್ತೆ ಬಂಧುಗರೊಪ್ಪಿ
ದಾಯದೋರೊಪ್ಪಿ ಗುರುವೊಪ್ಪಿ | ತಂದವರೆ
ನಾನ್ಯಾವ ಗಂಗೇಲಿ ಕಳಿಯಾಲೊ

ಎಲ್ಲಾನು ಗೆದ್ದಲ್ಲೆ ಜಲ್ಲಾಳೊಕ್ಕಲಗಿತ್ತಿ
ಕೊಳ್ಳೆನನ ಕಯ್ನ ಬಿಳಿಯೆಲೆಯ | ನನ್ನೂರ
ಹಳ್ಳದಿಂದಾಚೆ ನೆನಕೊಳ್ಳೆ

ನೆನೆವೆ ನನ್ನಪ್ಪಾನ ನೆನೆವೆ ನನ್ನವ್ವಾನ
ನೆನೆವೆ ನನ್ನೇಳ ಬಳಗಾವ | ದೊರೆಮಗನೆ
ನಿನ್ಯಾಕೆ ನೆನೆಯೊಲೊ ನನ್ನ ಹಳೆಗೆರವ

ನೆನೆವೆ ನನ್ನಪ್ಪಾನ ನೆನೆವೆ ನನ್ನವ್ವಾನ
ನೆನೆವೆ ನನ್ನೇಳ ಬಳಗಾವ  | ನನ್ನೂರ
ಹೊಸಮಾರಿ ನನ್ನ ಮುರಿಯಲೊ

ಹೊಸಮಾರಿ ನಿನ್ನ ದೆಸೆಯೋರ ಮುರಿಯಾಲಿ
ನನ್ನ ವಸ್ತ್ರದಲ್ಲಿರುವ ಹಣಕಾ(ಸು) | ಸೊಂದುಂಟಾದ್ರೆ
ಇಸ್ತ್ರೆರೈವಾರ ತರುವೇನು