“ನಾನು ಪಯಣಿಗ ಎಲ್ಲಿ ನೆಲ ನೀರ್
ಗಾಳಿ ನನ್ನನು ಕರೆವುವೋ”-

‘ಕಾಶ್ಮೀರ’ ಎಂಬ ಕವನ ಸಂಗ್ರಹದ ‘ಮುನ್ನುಡಿ’ ಎಂಬ ಕವಿತೆಯಲ್ಲಿ ಕವಿ ವಿನಾಯಕರು ಹೇಳಿರುವ ಈ ಮಾತುಗಳು ಅವರ ಕಾವ್ಯಧರ್ಮದ ಸೂತ್ರದಂತಿವೆ.ನೆಲದ ಮೇಲೆ, ನೀರ ಮೇಲೆ, ನಭದ ಮೇಲೆ ವಿನಾಯಕರು ಕೈಕೊಂಡ ಪ್ರವಾಸ ಕಥನವೇ ಅವರ ಕಾವ್ಯ. ಕನ್ನಡದಲ್ಲಿ ಇಷ್ಟು ಸಮೃದ್ಧವಾಗಿ ಪ್ರವಾಸ ಸಾಹಿತ್ಯವನ್ನು ಬೆಳೆಯಿಸಿದವರು ವಿರಳ. ‘ಸಮುದ್ರದಾಚೆಯಿಂದ’ ಮತ್ತು ‘ಸಮುದ್ರದೀಚೆಯಿಂದ’-ಎಂಬ ಕೃತಿಗಳೆರಡೂ, ಯಾವುದನ್ನು ನಾವು ಇವತ್ತು ಪ್ರವಾಸ ಸಾಹಿತ್ಯವೆಂದು ಕರೆಯುತ್ತೇವೋ ಆ ವರ್ಗಕ್ಕೆ ಸೇರಿದ ಬರೆಹಗಳಾದರೂ, ಈ ಬರೆಹಗಳ ಹಿಂದೆ-ಮುಂದೆ ಹರಹಿದ ಇವರ ಕಾವ್ಯವೆಲ್ಲವು ಒಂದು ರೀತಿಯಲ್ಲಿ ಪ್ರವಾಸ ಕಥನವೇ ಆಗಿರುವುದು ಗಮನಿಸಬೇಕಾದ ಸಂಗತಿ. ಕಾವ್ಯದ ಪ್ರೇರಣೆಗಳು-ನಮ್ಮ ಕನ್ನಡ ಕವಿಗಳ ಕಾವ್ಯೋದ್ಯೋಗವನ್ನು ನೋಡಿದರೆ-ಒಬ್ಬೊಬ್ಬರಿಗೆ ಒಂದೊಂದು ತೆರನಾಗಿವೆ. ಆದರೆ ವಿನಾಯಕರಿಗಂತೂ ಕಾವ್ಯದ ಮುಖ್ಯ ಪ್ರೇರಣೆ ಪ್ರವಾಸ. ಪ್ರವಾಸದ ಗುರಿ ಉದ್ದೇಶಗಳು ಏನಿದ್ದರೂ, ಪ್ರವಾಸ ಕಾಲದಲ್ಲಿ ಇವರ ಮನಸ್ಸು ಒಂದು ರೀತಿಯಲ್ಲಿ ದೈನಂದಿನ ಯೋಗಕ್ಷೇಮದ ವೇದನೆಯಿಂದ ಪಾರಾಗಿ, ಕವಿ ಸಹಜವಾದ ಮನೋಧರ್ಮದ ನೆಲೆಗೆ ನಿಲ್ಲುತ್ತದೆ. ನಿಜವಾದ ಅರ್ಥದಲ್ಲಿ ಕವಿ ಮನೋಧರ್ಮವೆಂಬುದು ನಿಜವಾದ ಪ್ರವಾಸಿಯ ಮನೋಧರ್ಮಕ್ಕೆ ಸಂವಾದಿಯಾಗುತ್ತದೆ. ಈ ಒಂದು ಮನೋಧರ್ಮ ವಿನಾಯಕರಲ್ಲಿ ಆಗಾಗ ಸ್ಥಾಯಿತ್ವವನ್ನು ಪಡೆಯುವುದರಿಂದಲೇ ಈ ಕಾವ್ಯ ಪ್ರವಾಸ ಸ್ಫೂರ್ತ್ಯಾನುಭವಗಳಿಂದ ರಮ್ಯವಾಗಿದೆ. ಮತ್ತು ಅವರ ಬರಹವೆಲ್ಲ ಬಹುಮಟ್ಟಿಗೆ ಈ ಪಯಣಿಗನ ಮನೋಧರ್ಮವನ್ನು ಅಭಿವ್ಯಕ್ತಪಡಿಸುತ್ತದೆ. ಕವಿ ಸ್ಟೀಫನ್‌ಸ್ಪೆಂಡರ್ ಹೇಳುತ್ತಾನೆ:  ‘To feel strange, to retain through-out life the sense of being a voyager on the earth come from another sphere to whom every thing remains wonderful, hortyfying, and new, is I suppose to be an artist’-ಎಂದು. ಕೆಲಮಟ್ಟಿನ ಅರ್ಥದಲ್ಲಿ ವಿನಾಯಕರಕಾವ್ಯ ಈ ಮಾತಿಗೆ ಒಂದು ವ್ಯಾಖ್ಯಾನದಂತಿದೆ.

ಅವರ ‘ಸಮುದ್ರ ಗೀತೆಗಳು’ ನೀರ ಮೇಲೆ ಕೈಕೊಂಡ ಪ್ರವಾಸಾನುಭವದ ಕಥನವಾಗಿದೆ. ಇದು ವಿನಾಯಕರ ಕಾವ್ಯ ಮಾರ್ಗದಲ್ಲಿ ಮೊದಲ ವಿಶಿಷ್ಟ ಮೈಲಿಗಲ್ಲು. ಕನ್ನಡ ಸಾಹಿತ್ಯದಲ್ಲಿಯೇ ಸಮುದ್ರವನ್ನು ಕುರಿತ ಅನುಭವ ಇಷ್ಟು ಸೊಗಸಾಗಿ, ಇಷ್ಟು ಪ್ರಾಮಾಣಿಕವಾಗಿ ಬಂದದ್ದು ಇದೇ ಮೊದಲು- ರತ್ನಾಕರವರ್ಣಿಯಂಥ ಹಿಂದಿನ ಕವಿಗಳ ಕೆಲವೊಂದು ವರ್ಣನೆಗಳನ್ನು ಬಿಟ್ಟರೆ. ಈ ವಸ್ತುವೈವಿಧ್ಯ ಅದನ್ನು ಹಿಡಿದಿರಿಸಿದ ನೂತನ ವಿಧಾನ ನಿಜವಾಗಿಯೂ ಹೊಸ ಮಾರ್ಗ ನಿರ‍್ಮಾಣದ ಸಂಕೇತದಂತಿದೆ.

‘ಪಯಣ’ದಿಂದ ಮೊದಲಾಗಿ, ‘ಸಮುದ್ರ ಗೀತ’ಗಳಿಂದ ಹೊಸ ಕ್ಷಿತಿಜವನ್ನು ತೆರೆದ ಇವರ ಕವಿತೆ ‘ನವ್ಯಕಾವ್ಯ’ ಎಂಬ ಸಣ್ಣ ಕವನ ಸಂಗ್ರಹದ ಪ್ರಯೋಗ ಶಾಲೆಯ ಮೂಲಕ ಹಾಯ್ದು ‘ಉಗಮ’ (೧೯೫೫) ಎಂಬ ಕವನ ಸಂಗ್ರಹದಲ್ಲಿ ಬೇರೊಂದು ಪರಿಣತ ನಿಲುವನ್ನು ಪಡೆದಿದೆ. ನೀರಿನ ತಾಳ ಲಯಗಳನ್ನು ‘ಸಮುದ್ರ ಗೀತ’ಗಳಲ್ಲಿ ಕೇಳಿದ ಕವಿಯ ಮನಸ್ಸು ‘ಉಗಮ’ದಲ್ಲಿ ಇಳೆಯ ಛಂದಸ್ಸುಗಳ ರಮ್ಯಾದ್ಭುತಗಳನ್ನು ಕಂಡು ಬೆರಗಾಗಿದೆ. ಪರ್ವತಾರಣ್ಯಗಳ ಉತ್ತುಂಗ ವೀಚಿಗಳಲ್ಲಿ ನಿಬಿಡಾರಣ್ಯಗಳ ರುದ್ರ ರಮಣೀಯತೆಯಲ್ಲಿ, ಆ ಎಲ್ಲ ಸೌಂದರ್ಯದ ಬಹಿರಂಗ ರಹಸ್ಯದಂತೆ ಹರಿಯುವ ಹೊಳೆಯೊಂದರ ಉಗಮವನ್ನು ಗುರುತಿಸುವ ಸಾಧಕನ ಪ್ರತಿಮೆಯಲ್ಲಿ ಬದುಕಿನ ಮೂಲ ಸೆಲೆಗಳನ್ನು ಹುಡುಕುವ ಹಂಬಲವಾಗಿ ಅಭಿವ್ಯಕ್ತವಾಗಿದೆ. ಮತ್ತೆ ಇದೇ ಕಣ್ಣು ‘ಕಾಶ್ಮೀರ’ವೆಂಬ ಸಂಗ್ರಹದಲ್ಲಿ ‘ಇಂದಿನ ನಾಳೆ’ಯಲ್ಲಿ, ಈ ನೆಲದ, ಜಲದ, ಜನದ, ಮನದ, ಬಣ್ಣಗಳನ್ನು ಒರೆಹಚ್ಚಿ ನೋಡುವ ಚಿಂತನೆಯಲ್ಲಿ ನಿಂತಿದೆ. ಅವರ ‘ದ್ಯಾವಾ ಪೃಥಿವಿ’ಯಲ್ಲಿ ‘ತ್ರಿಶಂಕುವಿನ ಪ್ರಜ್ಞಾಪ್ರಭಾತ’ದಲ್ಲಿ, ನೆಲದ ನೀರಿನ ಮತ್ತು ನಭದ ವಿವಿಧ ದೃಶ್ಯಾನುಭವಗಳ ಒಂದು ಶ್ರೀಮಂತಿಕೆಯೇ ಸೂರೆಯಾಗಿದೆ. ಇಷ್ಟು ಸಮೃದ್ಧವಾದ ರೀತಿಯಲ್ಲಿ ಪ್ರವಾಸಾನುಭವಗಳನ್ನೆ ಕಾವ್ಯಾನುಭವಗಳನ್ನಾಗಿ ಮಾಡಿಕೊಂಡದ್ದು ‘ಪ್ರವಾಸಾನುಭವ’ದಂಥ ವಸ್ತುವೊಂದು ಕನ್ನಡ ಕಾವ್ಯಲೋಕದೊಳಕ್ಕೆ ಗೋಕಾಕರ ಮೂಲಕ ಬಂದಿತೆಂಬುದು ವಿಶೇಷದ ಸಂಗತಿಯಾಗಿದೆ.

ವಿನಾಯಕರ ಕಾವ್ಯೋದ್ಯೋಗದ ಮತ್ತೊಂದು ಮುಖ್ಯವಾದ ಲಕ್ಷಣವೆಂದರೆ ಅವರ ಪ್ರಯೋಗ ಪರಿಣತಿ. ಹೊಸದನ್ನು ಕಾಣುವ ಮತ್ತು ಕಟ್ಟುವ ಅವ್ಯಾಹತವಾದ ಪ್ರಯತ್ನ ಅವರಿಂದ ನಡೆಯುತ್ತ ಬಂದಿದೆ. ನೃಪತುಂಗನು ಹೇಳಿದ ಒಂದು ಮಾತು, ಕನ್ನಡಿಗರನ್ನು ಕುರಿತು ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’- ಎನ್ನುವುದು; ಆದರೆ ವಿನಾಯಕರು ‘ಕುರಿತೋದುತ್ತ’ ನಿರಂತರವಾದ ಚಿಂತನ ಹಾಗೂ ಪರಿಶ್ರಮದ ಹೊಸಗನ್ನಡದ ‘ಕಾವ್ಯ ಪ್ರಯೋಗ ಪರಿಣತಮತಿ’ಗಳಾಗಿದ್ದಾರೆ. ಇವರು ಹೊಸಗನ್ನಡ  ನವೋದಯ ಕಾಲದ ಉತ್ಸಾಹ ಆದರ್ಶಗಳ ಆವರಣದೊಳಗಿನಿಂದ ಹಾಯ್ದು ಬಂದರೂ, ಅವರು ತಮ್ಮದೇ ಆದ ವಿಶಿಷ್ಟಾಭಿವ್ಯಕ್ತಿಯ ಪ್ರಯೋಗಶಾಲೆಯ ವಿಜ್ಞಾನಿಗಳಾಗಿದ್ದಾರೆ. ಒಂದು ರೀತಿಯಲ್ಲಿ ಇವರು ಅನೇಕ ನೂತನ ಉದ್ಘಾಟಕರಾಗಿದ್ದಾರೆ. ಅವರು ನಿರ್ಮಿಸಿದ ಹಾದಿಯಲ್ಲಿ ಅವರಿಗಿಂತ ಯಶಸ್ವಿಯಾಗಿ ಮುನ್ನಡೆದ ಕವಿಗಳು ಇದ್ದರೂ, ಆ ಮಾರ್ಗ ನಿರ್ಮಾಣ ಮಾಡಿ ನಿರ್ದೇಶನ ಮಾಡಿದ ಹೆಸರು ಅವರಿಗೆ ಸಲ್ಲತಕ್ಕದ್ದು.

೧೯೩೬-೩೭ರಷ್ಟು ಹಿಂದೆಯೇ  ಬರೆದು ೧೯೪೦ರಲ್ಲಿ ಪ್ರಕಟವಾದ ಅವರ ‘ಸಮುದ್ರ ಗೀತ’ಗಳಲ್ಲಿ ಕಾಣುವ ವಸ್ತು ಹಾಗೂ ಛಂದೋ ವೈವಿಧ್ಯಗಳು ಆಗಿನ ಕನ್ನಡ ಕಾವ್ಯದ ಪರಿಸರದಲ್ಲಿ ಕ್ರಾಂತಿಕಾರಕವಾದ ನೂತನ ಪ್ರಯೋಗಗಳಾಗಿ ಕಂಡವು. ವಚನಕಾರರಿಂದ ಸ್ಫೂರ್ತಿಯನ್ನು ಪಡೆದ ವಿನಾಯಕರು, ೧೯೩೬ರಷ್ಟು ಹಿಂದೆಯೇ ಮುಕ್ತ ಛಂದಸ್ಸು ಕಂಡುಕೊಂಡು, ೧೯೫೦ರ ವೇಳೆಗೆ ಉಗಮಿಸಿದ ನವ್ಯಕಾವ್ಯದ ರೂಪಾಂಶದ ಮೊದಲ ಮಾದರಿಗಳನ್ನು ಸಿದ್ಧಪಡಿಸಿದರು. ಆನಂತರ ೧೯೫೦ರ ವೇಳೆಗೆ ಅವರು ಮುಂಬೈ ಸಾಹಿತ್ಯ ಸಮ್ಮೇಳನದಲ್ಲಿ ನವ್ಯಕಾವ್ಯದ ಘೋಷಣೆಯನ್ನೂ ಮತ್ತು ಅದಕ್ಕೆ ‘ವೃತ್ತಿ’ ರೂಪವಾದ ‘ನವ್ಯಕಾವ್ಯ’ ಎಂಬ ಸಣ್ಣ ಕವನ ಸಂಗ್ರಹವನ್ನೂ ಪ್ರಕಟಿಸಿದರು. ಆದರೂ ನವ್ಯಕಾವ್ಯದ ಪ್ರಾದುರ್ಭಾವವನ್ನು ಐತಿಹಾಸಿಕವಾಗಿ ‘ಸಮುದ್ರಗೀತ’ಗಳ ಕಾಲಕ್ಕೆ (೧೯೪೦) ಒಯ್ದು ಮುಟ್ಟಿಸಬಹುದಾಗಿದೆ. “ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು” ಎಂಬ ನಿಶ್ಚಯದ ಉದ್ಗಾರದಿಂದ ಮೊದಲಾದ ಅಂದಿನ ಸ್ವಚ್ಛಂದ ಪ್ರಯೋಗ-

ಬೇಡಯ್ಯ ಬಂಧಗಳ ಬಂದಿವಾಸ
ಬರೆದದ್ದೇ ಬಂಧುರವಾಗಬಹುದು
ಸಾಕಯ್ಯ ವೃತ್ತಗಳಾವರ್ತ
ನಿನ್ನ ಮಣಿತವಿರಲಿ ಸಮುದ್ರದ ಕುಣಿತದಂತೆ

ಎಂಬ ಉದ್ಘೋಷದಲ್ಲಿ ಅಂದಿನ ಕಾವ್ಯಬಂಧಗಳನ್ನು ಮುರಿದು ಸ್ವಚ್ಛಂದ ಛಂದಸ್ಸಿನ ಕಡೆ ತಿರುಗುವ ಉತ್ಸಾಹ ಪ್ರಕಟವಾಗಿದೆ.ಇದೇ ಮನೋಧರ್ಮ ೧೯೫೫ರ ವೇಳೆಗೆ ‘ಉಗಮ’ ಸಂಗ್ರಹದಲ್ಲಿ-

ಇಲ್ಲಿರುವುದು ಮುಕ್ತಛಂದ
ಇದೇನು ತ್ರಿಶಂಕು ಕಾವ್ಯ ಸೃಷ್ಟಿಯೆಂದು
ಕೆಲವರು ಕಣ್ ಕಿಸಿಯಬಹುದು
ತಾಳ-ಮೇಳವಿಲ್ಲದ ಸಂಗೀತವೆಂದು
ಹಲವರು ಗೀಳ್ ಮಾಡಬಹುದು
ಹೃದಯವು ಹಾಕಿದ್ದೇ ತಾಳ
ಅದು ಹಾಡಿದ್ದೇ ಸಂಗೀತ
ಅದು ಬರೆದದ್ದೇ ಕಾವ್ಯ

ಇಲ್ಲಿ ಈ ಕವನದುದ್ದಕ್ಕೂ ಹೃದಯದ ಮಿಡಿತವಿದೆ ಎಂದು ಹೇಳುವಲ್ಲಿ ‘ಸಮುದ್ರ ಗೀತ’ಗಳಿಂದ ‘ಉಗಮ’ದ ತನಕ, ತಾವು ಸ್ವಚ್ಛಂದ ಛಂದ ಅಥವಾ ಮುಕ್ತಛಂದದಲ್ಲಿ ಕೈಕೊಂಡ ಪ್ರಯೋಗಗಳ ಬಗ್ಗೆ ಓದುಗರಲ್ಲಿ ಮೂಡಿದ ಪ್ರತಿಕ್ರಿಯೆಯನ್ನೂ ಮತ್ತು ತಮ್ಮ ನೂತನಮಾರ್ಗದ ಸಮರ್ಥನೆಯನ್ನೂ ಗುರುತಿಸಬಹುದು. ‘ಸಮುದ್ರಗೀತ’ಗಳ ಆನಂತರ, ಈ ಮುಕ್ತಛಂದದ ಮತ್ತೊಂದು ಪರಿಣತ ಕೃತಿ ‘ಉಗಮ’ವೇ.

ಅವರ ‘ದ್ಯಾವಾಪೃಥಿವೀ’ (೧೯೫೭) ಮತ್ತು ‘ತ್ರಿಶಂಕುವಿನ ಪ್ರಜ್ಞಾಪ್ರಭಾತ’ (೧೯೬೫)-ಇವೆರಡೂ, ಒಂದೇ ಮಾದರಿಗೆ ಸೇರುವ ಕೃತಿಗಳು. ಈ ಎರಡರಲ್ಲೂ, ನೆಲ-ಜಲ-ನಭದ ನಿಸರ್ಗರಮ್ಯತೆ, ಪುರಾಣಪ್ರಜ್ಞೆಯ ಹಂತದಲ್ಲಿ ಮಾನವೀಯ ಮೌಲ್ಯಗಳ ವಿವೇಚನೆಯಲ್ಲಿ ಕವಿ ಮನಸ್ಸು ನಿಂತ ರೀತಿ ಪ್ರಕಟವಾಗಿದೆ. ಅವರ ‘ತ್ರಿವಿಕ್ರಮರ ಆಕಾಶಗಂಗೆ’ (೧೯೪೫) ಮತ್ತು ‘ಇಂದಿಲ್ಲ ನಾಳೆ’ (೧೯೬೫)-ಇವೆರಡೂ ವಸ್ತುವಿನ ಸಾಮ್ಯತೆಯಿರದಿದ್ದರೂ ತಂತ್ರದ ಸಾಮ್ಯತೆಯನ್ನುಳ್ಳ ಪ್ರಯೋಗಗಳು. ಇವೆರಡನ್ನೂ ವಿನಾಯಕರು ‘ಹೊಸ ಬಗೆಯ ಚಂಪೂ ಕಾವ್ಯ’ಗಳೆಂದು ಕರೆದಿದ್ದಾರೆ. ವಿನಾಯಕರ ಇನ್ನೊಂದು ಗಮನಿಸಬೇಕಾದ ಕೃತಿ ‘ಬಾಳದೇಗುಲ’ದಲ್ಲಿ ಎನ್ನುವುದು. ಮಾನವ ಜೀವನದ, ವ್ಯಕ್ತಿತ್ವದ ಮಾದರಿಗಳನ್ನು ಕುರಿತ ಚಿಂತನೆಯ ಶಿಲ್ಪಮಂದಿರವಾಗಿ, ಶ್ರೀನಿವಾಸರ ‘ನವರಾತ್ರಿಯ ತಂತ್ರವನ್ನು ಸ್ವಲ್ಪಮಟ್ಟಿಗೆ ಹೋಲುತ್ತದೆ. ‘ತ್ರಿಶಂಕುವಿನ ಪ್ರಜ್ಞಾ ಪ್ರಭಾತ’ (೧೯೬೫)ವೆನ್ನುವುದು ಅವರ ಅಭಿಪ್ರಾಯದಲ್ಲಿ ‘ಮಹಾ ಕಾವ್ಯದ ಒಂದು ಮಿಡಿ.’ ಒಟ್ಟಿನಲ್ಲಿ ವಿನಾಯಕರ ಕಾವ್ಯೋದ್ಯೋಗದಲ್ಲಿ ಹಂತದಿಂದ ಹಂತಕ್ಕೆ ಪ್ರಯೋಗ ಪರಿಣತವಾದ ಮನಸ್ಸನ್ನು ಕಾಣಬಹುದು. ಆದರೆ ಇವರ ಎಲ್ಲಾ ಪ್ರಯೋಗಗಳಲ್ಲಿಯೂ, ಸಂಪ್ರದಾಯದ ವಿರುದ್ಧವಾಗಿ ಬಂಡೆದ್ದು, ತನ್ನಿಂದಲೇ ಯಾವುದೋ ಒಂದು ಮಹಾಕ್ರಾಂತಿಯಾಗುತ್ತದೆ ಎಂಬ ಪ್ರಜ್ಞಾಪೂರ್ವಕವಾದ ಪ್ರಚಾರಾತ್ಮಕ ರಭಸವಿಲ್ಲದಿರುವುದು ಬಹಳ ಹಿತವಾದ ಅಂಶವಾಗಿ ಅವರ ವ್ಯಕ್ತಿತ್ವದ ಸಮತೂಕಕ್ಕೆ ಸಾಕ್ಷಿಯಾಗಿದೆ. ಇವರ ಪ್ರಯೋಗಗಳೆಲ್ಲ, ಸದ್ದಿಲ್ಲದೆ, ಸಹಜವಾಗಿ, ಪರಂಪರೆಯೊಳಗಿನಿಂದಲೇ ಹಾಯ್ದು ಹೊರಗೆ ಬಂದವು. ಈ ಪ್ರಯೋಗಗಳಲ್ಲಿ, ಎಲ್ಲವೂ ಅಲ್ಲದಿದ್ದರೂ ಕೆಲವಂತೂ ಸಮಕಾಲೀನ ಕಾವ್ಯದ ಮೇಲೆ ಮಹತ್ವದ ಪರಿಣಾಮವನ್ನುಮಾಡಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ನಿರಂತರ ಪ್ರಯೋಗಶೀಲವಾದ ಪ್ರವೃತ್ತಿಯನ್ನು ತುಕ್ಕು ಹಿಡಿಯದಂತೆ ಉದ್ದಕ್ಕೂ ಅವರು ಉಳಿಸಿಕೊಂಡು ಬಂದದ್ದು ಗಮನಿಸಬೇಕಾದ ವಿಷಯವಾಗಿದೆ.

ಸೌಂದರ್ಯ ಪ್ರಜ್ಞೆ ಚಿಂತನಪರತೆ ಇವೆರಡೂ ಅವರ ಕಾವ್ಯದ ಶ್ವಾಸಕೋಶಗಳಿದ್ದಂತೆ. ‘ಸಮುದ್ರಗೀತ’, ‘ಕಾಶ್ಮೀರ’, ‘ದ್ಯಾವಾಪೃಥಿವೀ’-ಇತ್ಯಾದಿ ಕೃತಿಗಳಲ್ಲಿ ನೀರಮೇಲೆ, ನೆಲದಮೇಲೆ ನಭದ ಮೇಲೆ ಪ್ರವಾಸ ಮಾಡಿದಾಗ ಅವರ ಕಣ್ಣು ಕಂಡ ವೈವಿಧ್ಯಗಳು ವರ್ಣೋಜ್ವಲವಾಗಿ ನಿರೂಪಿತವಾಗಿವೆ. ಅದರಲ್ಲೂ ವಿಮಾನಯಾನದ ಅನುಭವಗಳನ್ನು ವಿನಾಯಕರಷ್ಟು ಸೊಗಸಾಗಿ ಕೊಟ್ಟವರು, ಕನ್ನಡದಲ್ಲಂತೂ ಯಾರೂ ಇಲ್ಲ. ಅವರ ‘ತ್ರಿಶಂಕುವಿನ ಪ್ರಜ್ಞಾ ಪ್ರಭಾತ’ದ ವಸ್ತು ಪೌರಾಣಿಕವಾದದ್ದಾದರೂ, ತ್ರಿಶಂಕುವಿನ ನಭೋಯಾತ್ರೆ, ವಿನಾಯಕರ ಗಗನಯಾನದ ಅನುಭವದಿಂದ ಸಮೃದ್ಧವಾಗಿದೆ. ಆದರೆ ಈ ಸೌಂದರ್ಯದ ವರ್ಣನೆ ಕೇವಲ ಯಥಾಸ್ವಾರೂಪ ಕಥನವಾಗಿಯಾಗಲಿ, ಅಥವಾ ಕಲ್ಪನಾ ನಿರ್ಮಿತವಾದುದಾಗಲಿ ಆಗದೆ,ಅದರ ಹಿನ್ನೆಲೆಗೆ ಚಿಂತನೆಯ ನೆಲೆಗಟ್ಟನ್ನು ಹೊಂದಿದೆ. ಈ ಚಿಂತನೆಯಲ್ಲಿ ಮತ್ತೆರಡು ಅಂಶಗಳು ಮೇಳವಿಸಿವೆ. ಅವು ಐತಿಹಾಸಿಕ ಹಾಗೂ ಪುರಾಣ ಪ್ರಜ್ಞೆ. ಯಾವ ಒಂದು ವಸ್ತು-ಸಂಗತಿಯನ್ನಾಗಲಿ ಕಂಡು, ಅದರ ಚೆಲುವನ್ನು ವರ್ಣಿಸುತ್ತಿರುವಾಗಲೇ ವಿನಾಯಕರ ಕಣ್ಣು ಆ ಸಂಗತಿಯ ಹಿಂದಿನ ಪುರಾಣೇತಿಹಾಸಗಳನ್ನೂ ಒಟ್ಟಿಗೇ ಗ್ರಹಿಸುತ್ತದೆ. ‘ಸಮುದ್ರಗೀತ’ಗಳಲ್ಲಿ ಕಡಲಿನ ವರ್ಣನೆಯಿದ್ದರೂ ಕಡಲು ಅವರ ಮನಸ್ಸಿನಲ್ಲಿ ಸುಪ್ತವಾದ ಪುರಾಣಪ್ರಪಂಚ ಸ್ಮರಣೆಗಳನ್ನು ಎಚ್ಚರಗೊಳಿಸಿ ಅವುಗಳನ್ನು ಅಭಿವ್ಯಕ್ತಿಯ ಪ್ರತಿಮಾಸಾಮಗ್ರಿಯಾಗಿಸುತ್ತದೆ. ‘ದ್ಯಾವಾ ಪೃಥಿವಿ’ಯಕವನಗಳಲ್ಲೂ ಅಷ್ಟೆ. ವಿಮಾನ ಪ್ರವಾಸದಲ್ಲಿ ಕಂಡ ಮೋಡದ ನಾಡಿನ ದೃಶ್ಯ ವೈಭವಗಳೆಲ್ಲವೂ ಅವರಲ್ಲಿ ಅಡಕವಾದ ಪುರಾಣಸ್ಮರಣೆಗಳನ್ನು ಉದ್ದೀಪನಗೊಳಿಸುತ್ತವೆ. ಇದರ ಜೊತೆಗೆ,  ಆಯಾ ದೇಶಗಳ ಇತಿಹಾಸದ ಸ್ಮರಣೆಯೂ ಕೂಡಿಕೊಳ್ಳುತ್ತದೆ. ನಿಜವಾಗಿ ನೋಡಿದರೆ, ಇದೊಂದು ರೀತಿಯಲ್ಲಿ ಅಖಂಡವಾಗಿ ಕಾಣುವ ವಿಧಾನ. ಯಾವುದೊಂದನ್ನೂ ಅದರ ಪೌರಾಣಿಕ-ಐತಿಹಾಸಿಕ ಹಿನ್ನೆಲೆಯ ಸಮೇತ ಎತ್ತಿ ನೋಡಿ, ತನ್ನ ಸಮಕಾಲೀನ ಅನುಭವದಲ್ಲಿ ಒರೆಗೆ ಹಚ್ಚುವ ಚಿಂತನಪರತೆಯಲ್ಲಿ ಸಮಗ್ರಾನುಭವದ ಗ್ರಹಿಕೆಯ ಪ್ರಯತ್ನವಿದೆ. ಆಫ್ರಿಕಾ ದೇಶವನ್ನು ಕಂಡಾಗ, ಅದರ ಗತ ಇತಿಹಾಸ, ವರ್ತಮಾನದಲ್ಲಿ ಅದು ಬಿಳಿಯರ ಗುಲಾಮನಾಗಿ ಪಡುವ ಬವಣೆ, ಇವರ ಚೆಂತನೆಯ ವಸ್ತುವಾಗುತ್ತದೆ; ಕೋರ್ಸಿಕಾದ್ವೀಪವನ್ನು ಕಂಡಾಗ ನೆಪೋಲಿಯನ್ನನ ಚರಿತ್ರೆ, ಅಮೇರಿಕಾವನ್ನು ಕಂಡಾಗ ಅಲ್ಲಿನ ನಾಗರಿಕತೆಯ ಇತಿಹಾಸ ಚಿಂತನೆಯ ವಸ್ತುವಾಗುತ್ತದೆ. ಇದೆಲ್ಲ ವಿನಾಯಕರ ವಿಶೇಷವಾದ ವಿದ್ವತ್ತಿನ ಪರಿಣಾಮ. ತನ್ನ ದೇಶದ್ದು ಮಾತ್ರವಲ್ಲ, ಪ್ರಪಂಚದ ಬೇರೆ ಬೇರೆಯ ದೇಶದ ಇತಿಹಾಸ-ಕಾವ್ಯ ಪುರಾಣಗಳ ಅಧ್ಯಯನದಿಂದ ಬಳಸಿದ ಅನುಭವವನ್ನೂ ತಮ್ಮದನ್ನಾಗಿ ಮಾಡಿಕೊಂಡದ್ದರಿಂದಲೇ, ಅವರಿಗೆ ವಿಶ್ವದ ಯಾವೊಂದು ಸಂಗತಿಯೂ, ಅದರ ಪುರಾಣೇತಿಹಾಸಗಳ ಸಮೇತ ಕಣ್ಣೆದುರಿಗೆ ಬಂದು ಚಿಂತನೆಯಲ್ಲಿ ಚರ್ವಿತವಾಗುತ್ತದೆ. ಯಾವುದನ್ನೂ ಹೀಗೆ ಪುರಾಣೇತಿಹಾಸದ ಮೂಲಕವೇ ನೋಡುವುದು ಅವರ ಕಾವ್ಯದ ಪ್ರಧಾನವಾದ ತಂತ್ರಗಳಲ್ಲಿ ಒಂದಾಗಿರುವುದಲ್ಲದೆ, ಎಷ್ಟೋ ವೇಳೆ ಇದೊಂದು ಹವ್ಯಾಸವೂ ಆದಂತೆ ಭಾಸವಾಗುತ್ತದೆ.

ಭಾರತದ್ದಾಗಲಿ, ಬೇರೆ ದೇಶದ್ದಾಗಲಿ ಯಾವ ಸಂಗತಿಯನ್ನೆತ್ತಿಕೊಂಡರೂ ಅದು ಆ ದೇಶದ ತ್ರಿಕಾಲಬದ್ಧವಾದ ಒಂದು ಅಂಶವೆಂಬಂತೆ ನೋಡುವುದು ವಿನಾಯಕರ ಒಂದು ವೈಶಿಷ್ಟ್ಯವಾದರೂ, ಇದು ಪುರಾಣೇತಿಹಾಸಗಳ ಸ್ಮರಣೆಯನ್ನು ಮೀರಿ ಕಡೆಗೆ ಮೌಲ್ಯಗಳ ವಿವೇಚನೆಯಲ್ಲಿ ನಿಲ್ಲುವುದು ವಿಶೇಷದ ಸಂಗತಿ. ಹೀಗಾಗಿ ಕಣ್ಣಿಗೆ ಕಂಡ ನೋಟದ ಸೌಂದರ‍್ಯ-ವಿಕೃತಿಗಳ ವರ್ಣನೆ; ಪುರಾಣೇತಿಹಾಸಗಳ ಸ್ಮರಣೆ; ಮಾನವತೆಯ ಮೌಲ್ಯಗಳ ವಿವೇಚನೆ-ಈ ಮುಪ್ಪುರಿಗಳು ಅವರ ಕಾವ್ಯದ ಪ್ರಧಾನವಾದ ಅಂಶಗಳಾಗಿವೆ. ವಿನಾಯಕರು ಮೂಲತಃ ಮಾನವತಾವಾದಿಗಳು. ಅದರಲ್ಲಿಯೂ ವಿಶ್ವಮಾನವತೆಯ ಕನಸನ್ನು ಕಟ್ಟಿಕೊಂಡವರು. ಇದರಿಂದಾಗಿ ಜಗತ್ತಿನ ಯಾವೊಂದು ಭಾಗದಲ್ಲಿ ಯಾವ ಯಾವ ಅರೆ-ಕೊರೆಗಳನ್ನು, ಅನ್ಯಾಯ-ದಬ್ಬಾಳಿಕೆಗಳನ್ನು ಕಂಡರೂ ಅದನ್ನು ತಮ್ಮದೆಂಬಂತೆ ಅನುಭವಿಸಿ ವ್ಯಕ್ತಿ ಹಾಗೂ ರಾಷ್ಟ್ರ ಸ್ವಾತಂತ್ರ್ಯಗಳ, ಪರವಾದ ನಿಲುವನ್ನು ತಾಳುತ್ತಾರೆ. ಆಫ್ರಿಕದ ನಿಸರ್ಗದ ಚೆಲುವನ್ನು ಬಣ್ಣಿಸಿಯೂ ಅದು ಬಿಳಿಯರ ದಬ್ಬಾಳಿಕೆಗೆ ತುತ್ತಾಗಿರುವ ಸಂಗತಿಯನ್ನು ನೆನೆದು, ‘ಹೆದರಬೇಡ ಆಫ್ರಿಕವೆ, ಬರಬಹುದು ನಿನ್ನ ಹುಣ್ಣಿಮೆ ನಾಳೆ’ ಎಂಬ ಆಶ್ವಾಸನವನ್ನು ವ್ಯಕ್ತಪಡಿಸಿದ್ದಾರೆ. ಅಮೇರಿಕವನ್ನು ಕಂಡಾಗ, ಅದರ ಸಂಪತ್ ಸಮೃದ್ಧಿ ಮತ್ತು ಯಂತ್ರ ವಿಜ್ಞಾನ ಪ್ರಗತಿಯನ್ನು ಮೆಚ್ಚಿಕೊಂಡರೂ ಅಲ್ಲಿನ ನಿಗ್ರೋಗಳನ್ನು ಅಮೇರಿಕನ್ನರು ನಡೆಸಿಕೊಳ್ಳುವ ಅಸ್ಪೃಶ್ಯ ನೀತಿಯನ್ನು ಮತ್ತು ಅಮೇರಿಕಾದ ಆದಿನಿವಾಸಿಗಳಿಗೆ ಒದಗಿದ ದುಃಸ್ಥಿತಿಯನ್ನು ಕುರಿತು ‘ಇಂದಿಲ್ಲ ನಾಳೆ’ಯಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸ್ವಾತಂತ್ರ್ಯಪ್ರಿಯತೆ ವಿನಾಯಕರಿಗೆ, ಗಾಂಧಿಯುಗದ ಪರಮ ಮೌಲ್ಯವಾಗಿ ಮೈಗೂಡಿದೆ. ಇವರು ಅದರ ಪ್ರತಿನಿಧಿಯೆಂಬಂತೆ ಈ ಮೌಲ್ಯವನ್ನು ತಮ್ಮ ಕವಿತೆಗಳಲ್ಲಿ ಎತ್ತಿ ಹಿಡಿದಿದ್ದಾರೆ. ‘ಸಮುದ್ರಗೀತ’ಗಳನ್ನು ಬರೆದ ಕವಿ ವಿನಾಯಕರು ಸ್ವಾತಂತ್ರ್ಯಪೂರ್ವದ ಗುಲಾಮ ನಾಡಿನ ಪ್ರಜೆ; ‘ಇಂದಿಲ್ಲನಾಳೆ’ಯನ್ನು ಬರೆದ ಕಾಲಕ್ಕೆ ಇವರು ಸ್ವತಂತ್ರಭಾರತದ ನಿಯೋಗಿ. ಎರಡೂ ಮುಖಗಳಲ್ಲಿ ಅಭಿವ್ಯಕ್ತವಾದ ಮನೋಧರ್ಮ ಮತ್ತು ಚಿಂತನೆ ಅಭ್ಯಾಸ ಯೋಗ್ಯವಾಗಿವೆ. ಸ್ವಾತಂತ್ರ್ಯಪೂರ್ವ ಭಾರತದ ಪ್ರಜೆಯಾಗಿ ಆಳರಸರ ನೆಲವಾದ ಇಂಗ್ಲೆಂಡಿನಲ್ಲಿ-

ನೀನು ಆಂಗ್ಲ ನಾನು ಭಾರತೀಯ-
ಬಾರದಿಲ್ಲಿ ಹೃದಯದ ಸಂಪತ್ತು
ನೀನು ಸುಂದರಳಹುದು, ಆದರೆ ನಿನ್ನ ಸೌಂದರ್ಯವ
ಗಮನಿಸಲಾರೆ; ಕ್ಷಮಿಸೆನ್ನನು ಆಂಗ್ಲದೇವಿ!
ನಿನ್ನ ಮಕ್ಕಳು ಹಿಂಡಿ ಹಿಪ್ಪೆಮಾಡಿದ ಸಿಪ್ಪೆ ನಾನು
ನನ್ನ ಬಣ್ಣನೆ ನಿನಗೇಕೇ ಬೇಕು?
ನನ್ನ ನಾಡಿನ ಹಾಡಿಗೆಂದು ಮುಡುಪಿರಲಿ ನನ್ನ ಜೀವ

(ಸಮುದ್ರ ಗೀತೆಗಳು, ಪು. ೬೬)

ಎಂಬ ಪಕ್ರಿಯೆಯನ್ನು ಪ್ರಕಟಿಸಿದ ಈ ಕವಿ, ಸ್ವಾತಂತ್ರ್ಯೋತ್ತರ ಭಾರತದ ಪ್ರಜೆಯಾದಾಗ, ಇತ್ತೀಚೆಗಿನ  ಕೃತಿಗಳಲ್ಲಿ ಪೂರ್ವ-ಪಶ್ಚಿಮ ದೇಶಗಳ ಪ್ರತಿಯಲ್ಲಿರುವ ಅಂತರವನ್ನು ಕುರಿತು, ಆಂತರಿಕ ಮೌಲ್ಯಗಳ ಅಂತರವನ್ನು ಕುರಿತು ಇಂದಲ್ಲ ನಾಳೆ ಅಮೇರಿಕಾದವರ ಗುರಿಯ ಕಡೆ ಹೋಗಲೆಳೆಸುವ ನಾವು ಯಾವ ಹಾದಿಯನ್ನು ಹಿಡಿಯಬೇಕು, ಯಾವ ಸಮತೂಕವನ್ನು ಕಾಯ್ದುಕೊಳ್ಳಬೇಕು, ಯಾವ ಅರ್ಥಮೌಲ್ಯಗಳ  ವಿನಿಮಯವನ್ನು ಮಾಡಿಕೊಳ್ಳಬೇಕು, ಎಂಬ ಚಿಂತನೆಯನ್ನು ಪ್ರಕಟಿಸುತ್ತಾರೆ. ‘ಇಂದಿಲ್ಲ ನಾಳೆ’ ಕವನ ಸಂಗ್ರಹದಲ್ಲಿ ಮೂಡಣ ಪಡುವಣದ ಸಂಘರ್ಷವೇ ಪ್ರಧಾನವಾಗಿದೆ. ಅವರು ಈ ಎಲ್ಲ ಪ್ರವಾಸ ಕಥನಗಳಲ್ಲಿ, ಅವರು ವಿದೇಶಗಳಿಗೆ ಹೋಗಿ ಅದರ ವೈಭವ-ಪ್ರಗತಿಗಳಿಗೆ ಬೆರಗಾದರೂ, ಅದನ್ನು ಹೊಗಳಿ ಹಾಡುವ, ಹಾಗೆಯೇ ನಮ್ಮ ದೇಶದ ಸ್ಥಿತಿಯನ್ನು ಹೋಲಿಸಿ ಭಾರತದ ಬಗ್ಗೆ ಸಣ್ಣ ಭಾವನೆ ತಾಳುವ ಹವ್ಯಾಸ ಕಾಣುವುದಿಲ್ಲ. ಜಗತ್ತನ್ನೇ ಸುತ್ತಿಬಂದರೂ, ಭಾರತದ ಆಂತರಿಕ ಮೌಲ್ಯಗಳಲ್ಲಿ ಬೇರೂರಿದ ಈ ಕವಿ-

ಇದು ನನ್ನ ಭಾರತ
ಪಡುವಣದಂತೆ ಬೆಳೆಯದಿದ್ದರೇನಂತೆ
ಇದು ಬೆಳೆಯುವ ನಾಡು
ಅಮೇರಿಕೆಯಂತೆ ಬಲಾಢ್ಯರಾಗದಿದ್ದರೇನಂತೆ
ಇದು ಭವಿಷ್ಯತ್ತಿನ ನಾಡು.
(ಇಂದಿಲ್ಲ ನಾಳೆ: ಪು. ೨೭೪)

ಎನ್ನುವ ಆಶಾವಾದದಲ್ಲಿ ನಿಲ್ಲುತ್ತಾರೆ. ಎಲ್ಲಕ್ಕೂ ಮಿಗಿಲಾಗಿ ಅವರ ಕಾವ್ಯದ ಮುಖ್ಯಲಕ್ಷಣವನ್ನು ಅವರದೇ ಮಾತುಗಳಲ್ಲಿ ಹೇಳುವುದಾದರೆ-

ಒಂದೇ ಭೂಗೋಲದಾ ವಿವಿಧ ವಿಸ್ತಾರದಲ್ಲಿ
ಕಡಲುಗಳ ತೀರದಲ್ಲಿ
ಮನುಕುಲದ ಪುರುಷಾರ್ಥಗಳ ಕುರಿತು ಗೆಯ್ದ ಮನನ
ಗೂಢ ದರ್ಶನದ ಖಿನನ

(ಇಂದಿಲ್ಲ ನಾಳೆ: ಪು.೫೦)

ಎಂಬ ಈ ಪಂಕ್ತಿಗಳನ್ನು ನೆನೆದರೆ ಸಾಕು.

ವಿನಾಯಕರ ಕಾವ್ಯದಲ್ಲಿ ರೂಪವೈವಿಧ್ಯದ ಹಾಗೆ ವಸ್ತುವೈವಿಧ್ಯವೂ ಗಮನಿಸುವಷ್ಟಿದೆ. ಪುರಾಣ, ಇತಿಹಾಸ, ಪ್ರವಾಸಾನುಭವ, ಸೌಂದರ‍್ಯೋಪಾಸನೆ, ಆತ್ಮನಿರೀಕ್ಷಣೆ, ಚಿಂತನಪರತೆ ಇತ್ಯಾದಿ ವಸ್ತುಗಳಲ್ಲದೆ, ಆಧುನಿಕ ವೈಜ್ಞಾನಿಕ ಪ್ರಜ್ಞೆ  ಅಂತರ್‌ರಾಷ್ಟ್ರೀಯ ವ್ಯಾಪ್ತಿಯಲ್ಲಿ ಅಭಿವ್ಯಕ್ತವಾಗಿದೆ. ಯಂತ್ರಯುಗದ ವಿಸ್ಮಯಗಳೂ ಅಪೂರ್ವವಾದ ರೀತಿಯಲ್ಲಿ ಕಾವ್ಯರೂಪವನ್ನು ಇವರಲ್ಲಿ ತಾಳಿವೆ. ನಿದರ್ಶನಕ್ಕೆ ಅವರು ‘ಇಂದಿಲ್ಲ ನಾಳೆ’ ಎಂಬ ಪುಸ್ತಕದಲ್ಲಿ, ಬಹು ರತ್ನಾವಸುಂದರಾ, ಭೂಗರ್ಭಶಾಸ್ತ್ರೀಯ ಸಂಗ್ರಹಾಲಯವನ್ನು ಕುರಿತು, ಪ್ರಾಣಿಸಂಗ್ರಾಹಾಲಯವನ್ನು ಕುರಿತು, ಫೋರ್ಡ್ ಕಂಪನಿಯ ಮೋಟಾರು ಸೃಷ್ಟಿಯ ಗರ್ಭಕೋಶವನ್ನು ಕುರಿತು ಅವರು ಬರೆದಿರುವ ಕವಿತೆಗಳನ್ನು ನೋಡಬಹುದು. ನಮಗೆ ತಿಳಿದ ಮಟ್ಟಿಗೆ ಈ ವಸ್ತುಗಳು ಕನ್ನಡ ಕಾವ್ಯಕ್ಕೆ ಅಪರಿಚಿತ-ವಿನೂತನ. ಇಷ್ಟಲ್ಲದೆ ವಿನಾಯಕರ ಕಾವ್ಯದಲ್ಲಿ ನೂತನ ಪುರಾಣ ನಿರ್ಮಿತಿ ಹಾಗೂ ಹಳೆಯ ಪುರಾಣಕ್ಕೆ ಹೊಸ ಅರ್ಥವನ್ನು ಕೊಡುವ ಪ್ರಯತ್ನ-ಎರಡೂ ನಡೆದಿವೆ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ.

ಕಾವ್ಯವು ವ್ಯಕ್ತಿತ್ವದ ಅಭಿವ್ಯಕ್ತಿ-ಎನ್ನುವುದು, ವಿನಾಯಕರು ಎತ್ತಿಹಿಡಿದ ಒಂದು ಸೂತ್ರ. ವಿನಾಯಕರ ಕಾವ್ಯದಲ್ಲಿ ಭಾರತೀಯ ಪರಂಪರೆ ಹಾಗೂ ಆಧುನಿಕ ಪ್ರಗತಿಯ ಸಮಾವೇಶ, ಪೂರ್ವ-ಪಶ್ಚಿಮದ ಸಾಹಿತ್ಯ ಸಂಸ್ಕೃತಿಗಳ ಸಂಗಮ, ನವೋದಯ ಹಾಗೂ ನವ್ಯದ ಸಮನ್ವಯ-ಇವುಗಳನ್ನು ಕಾಣಬಹುದು. ನವೋದಯ ಕಾಲದ ಅನೇಕ ಕವಿಗಳಂತೆ ವಿನಾಯಕರು ಸಮೃದ್ಧಿಯಾದ ಸಾಹಿತ್ಯ ನಿರ್ಮಾಣದ ಹವ್ಯಾಸವನ್ನು ಬೆಳೆಯಿಸಿಕೊಂಡು ಬಂದವರು. ಅದರಲ್ಲಿ ಜರಡಿ ಹಿಡಿಯಬೇಕಾದದ್ದು ಎಷ್ಟೋ ಇದೆ. ಅವರ ಕಾವ್ಯದ ಭಾಷೆ ಎಷ್ಟೋ ಕಡೆ ಸಮರ್ಪಕವಾದ ಅಭಿವ್ಯಕ್ತಿಯ ಅಭಾವದಿಂದ ಸೋಲುತ್ತದೆ; ವರದಿಯ ರೂಪದ ದೀರ್ಘತೆಗೆ ಎಳೆಯುತ್ತದೆ.  ಅವರ ಕೆಲವು ಕಾವ್ಯ ಪ್ರಯೋಗಗಳು ಮಹತ್ವದವೆಂದೆನಿಸಲಾರದೆ ಹೋಗುತ್ತವೆ. ಇಷ್ಟೆಲ್ಲಾ ಆದರೂ ಅವರು ಹಿಡಿದ ವಸ್ತುವೈವಿದ್ಯ, ಕಡೆದು ನಿಲ್ಲಿಸಿದ ಛಂದೋವೈವಿಧ್ಯ, ಅವರ ಚಿಂತನೆಯ ರಮ್ಯತೆ-ಇದೆಲ್ಲವೂ ಕನ್ನಡ ಕಾವ್ಯದಲ್ಲಿ ಹೊಸ ಹಾದಿಗಳನ್ನು ತೆರೆದು, ಹೊಸ ಆಸೆ ಭರವಸೆಗಳನ್ನು ಬೆಳೆಯಿಸಿದ ಉಜ್ವಲ ವ್ಯಕ್ತಿತ್ವವೊಂದನ್ನು ಕನ್ನಡದ ಜನ ಮನದಲ್ಲಿ ಮೂಡಿಸುತ್ತವೆ.

ನವೋದಯ-೧೯೭೬