ಅಗಸಾರ ವುಡುಗಿ ಕಡುಚೆಲ್ವೆ ನಾರಿ
ಮಡಿಯಾನ ಎತ್ತಿಕಂಡು | ಓಡೋಡಿ
ಈಗ ವೊರಟಾಳೆ ನಾರಿ |

ಸೂಳೆ ಬ್ರಮ್ಮಣ್ಣ ಇಬ್ಬರು ಸೇರಿ
ಓಡೋಡಿ ವನಕೆ ವೋದರು ನಾರಿ |

ವೋದೋರು ವೋದಂಗೆ ವೂವಿನ ವನದಾಗೆ
ಓಡೋಡಿ ಓಡೋಡಿ ವೋದರು ನಾರಿ |

ಅಡಕೇಯ ತ್ವಾಟಕ್ಕೆ ವೋದಾನೆ ಬ್ರಮ್ಮಣ್ಣ
ಅಡಕೇಯ ತ್ವಾಟ ನೋಡುತಾಳೆ ನಾರಿ |

ನಿಂಬೆಯ ವನಕೆ ವೋದಾನೆ ಬ್ರಮ್ಮಣ್ಣ |
ರೆಂಬೇರು ಇಬ್ಬರು ಅಲ್ಲೆ ಅವ್ರೆ ನಾರಿ |

ಬಾಳೆಯ ತ್ವಾಟಕ್ಕೆ ಪೋದನೆ ಬ್ರಮ್ಮಣ್ಣ
ಅಕ್ಕದೀರು ಇಬ್ಬರು ಅಲ್ಲೆ ಅವ್ರೆ ನಾರಿ |

ಎಲ್ಲಾನು ನೋಡವನೆ ಓಡೋಡಿ ಬಂದವನೆ
ವೂವಿನ ತ್ವಾಟಕ್ಕೆ ಬಂದವ್ನೆ ನಾರಿ |

ವೂವಿನ ವನದಾಗೆ ಬಂದಾರೆ ಅವರಿಬ್ರು
ಕೂತೂ ಪಗಡೇಯನಾಡುತಾರೆ ನಾರಿ |

ಬ್ರಮ್ಮಣ್ಣನಾ ಜತೆ ದಾಯ ಪಗಡೆನಾಡುವಾಗ
ಬಂಗಾರದ ಬಳೆ ನುಗ್ಗುನುರಿ ನಾರಿ |

ಓಡೋಡಿ ಬಂದಾಳೆ ಏನೊಂದ ಏಳುತಾಳೆ
ಅತ್ತ್ಯಮ್ಮ ಆಗಲೇ ಏನಂದೆ ನಾರಿ |

ಉಟ್ಟಿದ್ದ ಸೀರೆಯ ನೆರಿಗೆಲ್ಲ ಕಲಕಿದ್ದೋ
ಬಂಗಾರದಾಬಳಿ ಯಾಕೆ ಒಡದೋ ನಾರಿ |

ಅಣ್ಣ ರಾಮಣ್ಣನ ಮನೆಯಿಂದೆ ಕುಂತಿದ್ದೆ
ಆಳಾದ ಎಮ್ಮೆಯ ಕೊಂಬ ತಗಲಿ ನಾರಿ |

ಆಳಾದ ಎಮ್ಮೆಯ ಕಂಬು ತಗಲಿ ನನ
ಬಂಗಾರದ ಬಳೆ ಒಡೆದೋದೊ ನಾರಿ |

ಎಮ್ಮೇ ಕರಸಿರಿ ಎಮ್ಮೆಯ ನಿಲಸಿರಿ
ಏನಂದೆ ಅವಳು ಏಖತಾಳೆ ನಾರಿ |

ನನ್ಯಾಕೆ ಕರಸೀರಿ ನನ್ಯಾಕೆ ನಿಲಸೀರಿ |
ಬಂಗಾರದ ಬಳೆಗಳ ಯಾಕೆ ಒಡದೆ ಎಮ್ಮೆ |

ಸೂಳೇರ ಬ್ರಮ್ಮಣ್ಣ ದಾಯ ಪಗಡೆನಾಡುವಾಗ
ಬಂಗಾರದಾ ಬಳೆ ನುಗ್ಗು ನುರಿ ನಾರಿ |

ಉಟ್ಟಿದ್ದ ಸೀರೆಯ ನರಿಗೇನೆ ಕಲಕಿದ್ದೋ
ನನ್ಯಾಕೆ ನೀವು ಕರಸೀರಿ ನಾರಿ |

ಏನೊಂದೆ ಸಾಪವ ಕೊಡುತಾಳೆ ಕಡುಚಲ್ವೆ
ಕುಡಿನೀರು ಕುಗ್ಗಲಿ ಮಡಿಹುಲ್ಲು ಬಾಡಾಲಿ
ಮಲಗಿದ್ದ ಮಗ್ಗುಲೆ ಗೆದ್ದಲತ್ಲಿ ನಾರಿ |

ಎಮ್ಮೇಯ ಸಿಗಸೀರಿ ಎಮ್ಮೇಯ ಬಗಸೀರಿ
ಕಲ್ಲೂಗಾಣಾ ಕಾಕಿ ಅರಸೀರಿ ನಾರಿ |

ನನ್ಯಾಕೆ ಸಿಗುಸೀರ ನನ್ಯಾಕೆ ಬಗಸೀರ
ಕಲ್ಲಗಾಣಾಕ್ಹಾಕಿ ಅರಸ್ತೀರ ನಾರಿ |

ಸೂಳೆ ಬ್ರಮ್ಮಣ್ಣ ದಾಯಪಗಡೆನಾಡುವಾಗ
ಬಂಗಾರದ ಬಳೆಗಳೆನುಗ್ಗನುರಿ ನಾರಿ |

ಚಿನ್ನದ ಸಿವಡೂಡಿ ರನ್ನದ ಕೊಡವೊತ್ತು
ಓಡೋಡಿ ನೀರಿಗೆ ವೋಗುತಾಳೆ ನಾರಿ |

ಓದೋಳು ಓದಂಗೆ ಆಗಲೆ ಅಳಿಚ್ಯಾಳೆ
ಏಳುಮಾರುದ್ದ ಮಂಡೆಗಳ ನಾರಿ |

ಬಿಚ್ಚೀದ ಮಂಡೇಲಿ ಒಂದೆ ಕೂಡಲ ಕಿತ್ತು
ಕುಣಿಕೇಯ ಮಾಡ್ಯಾಳೆ ಕಡು ಚಲ್ವೆ ನಾರಿ |

ಕೊಡಗಳ ಅವಳು ಎಳೆದಾಳು ಕಡುಚಲ್ವೆ
ವೊತ್ತುಕೊಂಡು ಅವಳು ಬರುತಾಳೆ ನಾರಿ |

ಕೊಡಗಳ ವೊತ್ತುಕೊಂಡು ಬರುವಾಗ್ಗೆ ಬೀದ್ಯಾ |
ಸೂಳೇಬ್ರಮ್ಮಣ್ಣ ಸತ್ತ ಸುದ್ದಿ ನಾರಿ |

ಸೂಳೇ ಬ್ರಮ್ಮಣ್ಣ ಸತ್ತ ಸುದ್ದಿ ಕೇಳ್ಯಾಳೆ
ವೊತ್ತಿದ್ದ ಕೊಡವ ನೆಲಕೊಗದು ನಾರಿ |

ನೆಲಕಾನೆ ಒಗುದಾಳೆ ಸಿವದುಕ್ಕ ಮಾಡ್ಯಾಳೆ
ಸೀತೆಯ ಗೋಳ ಮಾಡ್ಯಾಳೆ ನಾರಿ |

ಸಿವಗೋಳ ಮಾಡುವಾಗ ಸೀತೆ ದುಕ್ಕ ಮಾಡುವಾಗ
ಸಿವನೂ ಪಾರ್ವತೆ ಬಂದರಾಗ ನಾರಿ |

ಬಂದೋರು ಬಂದಂಗೆ ಏನೊಂದು ಕೇಳುತಾರೆ
ಯಾಕಲ ಕಡುಚೆಲ್ವೆ ಸಿಮದುಕ್ಕ ನಾರಿ |

ಅತ್ತೆ ಕಾಣದಂಗೆ ಮಾವ ನೋಡದಂಗೆ
ಯಾರೊಂದ ಕಾಣದಾಂಗೆ ಮಡಗಿದ್ದೆ ನಾರಿ |

ಯಾರೊಂದ ಕಾಣದಂಗೆ ಮಡಗಿದ್ದೆ ಕೊಡಗಳು
ಈವತ್ತೆ ಬಿದ್ದು ಒಡದೋದೋ ನಾರಿ |

ಮಣ್ಣೀನ ಕೊಡಗಳು ಅಲ್ಲಾವೆ ಕಡು ಚಲ್ವೆ
ಸೂಳೆ ಬ್ರಮ್ಮಣ್ಣ ಸತ್ತ ಸುದ್ದಿ ನಾರಿ |

ಸೂಳೇರ ಬ್ರಮ್ಮಣ್ಣ ಸತ್ತ ಸುದ್ದಿ ಕೇಳಿನ್ನ
ಗೋಳುದುಕ್ಕ ನೀನು ಮಾಡುತೀಯ ನಾರಿ |*      ಸೂಳೇರ ಬ್ರಮ್ಮಣ್ಣ ಸತ್ತ ಸುದ್ದಿ ಕೇಳಿ; ಕಂಬಾಳು ಸಿದ್ಧಗಂಗಯ್ಯ ಬಿ, ಮಾತಾಡು ಮಲ್ಲಿಗೆ, ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು – ೧೯೭೩, ಪು.ಸಂ. ೪೩-೪೫.