ಹಿತ್ತಲ್ಹೀರಿ ಕಾಯೇ ಬಚ್ಚಲ ಬದನೀ ಕಾಯೇ
ಚಪ್ಪರಕೆ ಹಬ್ಬಿರುವ ಘನ ಜ್ಯವಳಿ

ಚಪ್ಪರಕೆ ಹಬ್ಬಿರುವ ಘನ ಜ್ಯವಳೀ ಪಲ್ಯೇವೆ
ನಿತ್ರೆ ನೀಲವ್ವ ಸವದಾಳೇ

ನಿತ್ರೇನೇ ನೀಲವ್ವಾ ಸವದಂತಾ ಪಲ್ಯೇವ
ಹದಬಂದು ಕಣಕಾಲಿಗೆ ಇಳಿವ್ಯಾಳೆ

ಮುಕ್ಕಾ ಹೆಸರೀನಾಕೇ ಅಕ್ಕೀಯ ಸುರಿವಾಳೇ
ಮತ್ತೊಂದಾ ಕಣಕಾಲಿಗೆ ಇಳಿವ್ಯಾಳೆ

ಸದಾ ಹೆಸರೀನಾಕೇ ಅಕ್ಕೀಯ ಸುರಿವಾಳೇ
ಮತ್ತೊಂದಾ ಕಣಕಾಲಿಗೆ ಇಳಿವ್ಯಾಳೆ

ಆ ಉರಿಗ್ಯಾಳಾ ನೀರೇನೇ ಹಾರೂತಾ ತೋರೂತಾ
ಏನಕ್ಕಿನ್ಹಾ ಕೀ ಸುಳಿಯಾ – ಮಳ್ಳಲಿ

ಏಲಕ್ಕೀನೇ ಹಾಕಿ ಸುಳಿ – ಮಳ್ಳಿದಾ ನೀರೂಗಳಾ
ದಾರಿ ಬಚ್ಚಿಲಿಗೇ ಹಿಡುದಾಳೇ

ದಾರೇನೇ ಬಚ್ಚಲಿಗೇ ಹಿಡುದಂತಾ ನೀರುಗಳೇ
ನಿಂಗಣ್ಣ ಜಳಕಾವಾ ಮಾಡುತ್ತಾನೇ

ನಿಂಗಣ್ಣ ಜಳಕಾವಾ ಮಾಡ್ಯಾನೇ ಆಗಿನ್ನ
ದೇವರೂ ಮನಿಯಾಕೇ ಬರುತಾನೇ

ದೇವಾರಾ ಮನಿಯಾಕೇ ಬಂದಾನೆ ನಿಂಗಣ್ಣ
ಕೋರೀಯಾ ಅಂಗಿ ತೊಟ್ಟಿದ್ದಾನೇ

ಎಲ್ಲಾರೂ ಮಾಡ್ಯಾರೇ ಲಿಂಗ ಪೂಜೆ ಲಿಂಗ ಪೂಜೆ
ನಮ್ಮ ಗೊರುವಯ್ಯ ಮಾಡ್ಯಾನೆ ಹೆಂಗುಸರ ಪೂಜೆ
ಲಿಂಗಯ್ಯ ಮಾತನಾಡೂ || ಲಿಂಗಯ್ಯ ದಯವಾಗೂ ||

ಹಿಂಡಾಕ ಎಮ್ಮೀ ಎಲ್ಲಾ ಹಿಂಡೆಮ್ಮ ತರುತೇನೇ
ಹಂಗ್ಸರಿಂಬಾಲಾ ಬರುಬಾರಾದೇ – ಲಿಂಗಣ್ಣ ದಯವಾಗೂ ||

ಹಿಂಡೇನೆ ಎಮ್ಮೀಗೇ ನಮಿಗೇನೂ ಕಡಿಮೆ ಇಲ್ಲಾ
ಸುಮ್ಮನಾ ನಾ ಬಾರೊ ಹಿಂದಾಕ್ಕೆ ಲಿಂಗಣ್ಣ ದಯವಾಗೂ ||

ಹಿಂಡಾಕ ಆಕಳಿಲ್ಲ ಹಿಂಡು ಆಕಳ ತರುತೀನೀ
ಹಂಗ್ಸರಿಂಬಾಲಾ ಬರೂಬಾರಾದೇ ಲಿಂಗಣ್ಣ ದಯವಾಗೂ ||

ಹಿಂಡೇನೇ ಆಕಳಿಗೆ ನಮಿಗೇನೂ ಕಡಿಮಿಲ್ಲಾ
ಸುಮ್ಮನಾ ಬಾರೋ ಹಿಂದಾಕೆ ಲಿಂಗಣ್ಣ ದಯವಾಗೂ ||

ನಿಂತಲ್ಲಿ ನೀಲವ್ವನಾ ಸ್ರಾಪುಣಿಕ ಲಿಂಗಣ್ಣ ದಯವಾಗು
ತೆಗ್ಗೊಂದಾ ಹತ್ಯಾನೆ ತವರೊಂದಾ ಇಳುದಾನೆ
ಕರಿ ಆಲದ ಮರನಾ ಬಯಲಾಗೆ ದೊರಿ ಬಾಗಲಾಗೇ ||
ಹಿಡಿರೊ ಮೋಜಿನ ಕಾಹಳಿಯಾ ||

ನೀರ ತೋರೊ ಅಣ್ಣುಗಳಾ ನೀರ ತೋರೊ ತಮ್ಮಗಳಾ
ಕೋಮಲಾಗೇ ಸೋತೆ ಹೇಳಬೇಕೂ – ದೊರಿ ಬಾಗಲಾಗೇ
ಆಕೇನೆ ನೋಡಿದರೆ ಶೀಲನಂತರ ಮಗಳೂ
ನೀನಾ ನೋಡಿದರೆ ಗೊರುವಯ್ಯ – ದೊರಿ ಬಾಗಲಾಗೇ
ಊರಾಕಾ ಗೊರುವಯ್ಯ ಹೋಗುತಾನೇ – ದೊರಿ ಬಾಗಲಾಗೇ
ಕೋಮಾಲಿ ಮನೆಗೆ ಹೋಗಿದ್ದಾನೆ – ದೊರಿ ಬಾಗಲಾಗೇ
ಬ್ಯಾಳೀ ನೀಡಿದರೆ ಒಲ್ಲ, ಬೆಲ್ಲಾ ನೀಡಿದರೆ ಒಲ್ಲಾ
ಮತ್ತೇನ ನೀಡಬೇಕೂ ಗೊರವಯ್ಯಾ – ದೊರಿ ಬಾಗಿಲಾಗೇ
ಏಳೇಳು ಕೋಮಾಲಿ ವ್ಯಾಳೇವೂ ಆಗ್ಯಾವೇ
ಬೇಗಾನೇ ನೀರಾ ತರ ಹೇಳಿ

ನಾ ನೀರಾ ತರಾಕೇ ಹಂಗಾ ಬಂದವಳಲ್ಲಾ
ನಮ್ಮಪ್ಪ ಗೌಡ್ಯೀರನಾ ಕಳಿವ್ಯಾನೇ
ನಿಮ್ಮೇನೆ ಗೌಡೀನೇ ಹಾಲ ಬಾನುಣ್ಣಿಸೀ
ಸಾಮ ಸಾಲ್ಯಾಗೇ ಮಲಗ್ಹಾಸೆ
ಏಳೇಳೆ ಕೋಮಾಲೇ ವ್ಯಾಳೇವೂ ಆಗ್ಯಾವೇ
ಬೇಗಾನೇ ನೀರಾ ತರ ಹೇಳಿ

ನಾ ನೀರಾ ತರಾಕೇ ಹಂಗಾ ಬಂದವಳಲ್ಲಾ
ನಮ್ಮಪ್ಪ ಗೌಡ್ಯೀರನಾ ಕಳಿವ್ಯಾನೇ

ನಿಮ್ಮೇನೇ ಗೌಡ್ಯೀರನಾ ತುಪ್ಪಾ – ಬಾನುಣ್ಣಿಸೀ
ಪಟ್ಟೆ ಮಂಚಾಕೇ ಮಲಗೂಸೇ

ನಾವೇನೇ ನೀರುಗಳಾ ಎಂದೆಂದೂ ತಂದಿಲ್ಲಾ
ಕಾಯೇ ಕರ್ಪೂರಾ ತಾರಲೀ ಬೇಕೂ

ಅಂಗ್ಡೀಗೇ ಕೋಮಾಲೀ ಹೋಗುತ್ತಾಳೆ
ಕಾಯಿ ಕರ್ಪೂರಾ ಕೊಂಡಿದ್ದಾಳೇ

ಕಾಯಿನೇ ಕರ್ಪೂರಾ ಕೊಂಡಾಳೇ ಕೋಮಾಲೀ
ಅರಮನಿಗೆ ತಾನೇ ಬರುತಾಳೆ

ನೀರುಗಳಾ ನಾ ಇನ್ನಾ ಎಂದೆಂದೂ ತಂದಿಲ್ಲಾ
ಇದು ಏನೂ ಗ್ರಾಚಾರಾ ಬಂತೂ ಎನಗೆ

ಓಣಿ ಒಳ ಅಣ್ಣುಗಳಾ ಓಣಿ ಒಳ ತಮ್ಮುಗಳಾ
ನೀವಾ ನೀರೀಗೆ ಬರುತೀರೇನು

ಆಗಾಲಾ ತಂದೀವೀ ಈಗಲೂ ಇಳಿದೀವಿ
ನಾವ ನೀರೀಗೆ ಬರದಿಲ್ಲಾ

ಓಣ್ಯಾಳ ಅಕ್ಕಗಳಾ ಓಣ್ಯಾಳ ಅವ್ವುಗಳಾ
ನೀವು ನೀರೀಗೇ ಬರತೀರೇನೆ

ಆಗಾಲಾ ತಂದೀವಿ ಈಗಲಾ ಎಳೆದೀವಿ
ನಾವ ನೀರೀಗೇ ಬರೋದಿಲ್ಲಾ

ನೀರೀಗೆ ಕೋಮಾಲಿ ಹೋಗುತ್ತಾಳೆ – ಕೋಲೆನ್ನಾ ಕೋಲೆ

ಕೋಮಾಲಿ ಬರುವೂದೇ ಗೊರುವಯ್ಯಾ ನೋಡ್ಯಾನೇ
ಈರ ಕ್ಯಾಕೀಯ ಹೊಡೆಯುತ್ತಾನೆ
ಈರಾನೇ ಕ್ಯಾಕೀಯಾ ಹೊಡುದಾನೆ ಗೊರುವಯ್ಯಾ
ಕೊಕ್ಕಾರ ಮೀಸಿ ತಿರುವುತಾನೇ

ಕೊಕ್ಕಾರ ಏ ಮೀಸೀ ತಿರುವಾನೇ ಗೊರುವಯ್ಯಾ
ಈರಾ ಕ್ಯಾಕೀಯಾ ಹೊಡವುತಾನೆ

ಈರ‍್ಯಾನೇ ಕ್ಯಾಕೀಯಾ ಹೊಡುದಾನೆ ಗೊರುವಯ್ಯಾ
ಕೋಮಲಿ ಬಾವೀಗೀ ಬರೂತ್ತಾಳೇ

ಕೋಮಾಲೀ ಬಾವೀಗೇ ಬಂದಾಳೇ ಆಗಿನ್ನ
ಕೈಕಾಲು ಮ್ವಾರಿ ತೊಳೆದಾಳೇ

ಕೈಕಾಲೂ ಏ ಮ್ವಾರಿ ತೊಳೆದಾಳೇ ಕೋಮಾಲಿ
ಗಂಗಮ್ಮನ ಪೂಜೆ ಮಾಡುತ್ತಾಳೆ

ಗಂಗಮ್ಮನಾ ಪೂಜೆ ಮಾಡ್ಯಾಳೇ ಕೋಮಾಲೀ
ತೆರಿ ಒಡದೂ ಕೂಡ ತುಂಬುತ್ತಾಳೆ

ತೆರಿ ಒಡದು ಎ ಕೂಡಾ ತುಂಬ್ಯಾಳೇ
ನೆಲ ಬಿಟ್ಟು ಮೇಲಕ್ಕಾ ಏಳ-ವಲ್ಲದೇ

ಬಾವಿ ಕಟ್ಟೀ ಮ್ಯಾಲೇ ಗೊರುವಯ್ಯಾ ಕುಂತಾನೇ ಏನೇನಾ ಮೋಡಿ
ಒಗುದಾನೇ (ಏನೇನಾ ಮಂತ್ರ ಜಪಿಸ್ಯಾನೆ)
ಇನ್ನೊಮ್ಮೆ ಪೂಜೆ ಮಾಡಲಿ ಬೇಕೇ
ಮತ್ತೊಮ್ಮೆ ಪೂಜೆ ಮಾಡುತ್ತಾಳೆ

ಮತ್ತೊಮ್ಮೆ ಏ ಪೂಜೇ ಮಾಡ್ಯಾಳೇ ಕೋಮಾಲೇ
ತರಿ ಒಡದೂ ಕೊಡ ತುಂಬುತ್ತಾಳೆ

ತೆರಿ ಒಡೆದೂ ಏ ಕೊಡಾ ತುಂಬ್ಯಾಳೇ ಕೋಮಾಲೇ
ನೆಲಬಿಟ್ಟು ಮೇಲಕ್ಕಾ ಏಳವಲ್ಲಾದೇ

ಇದು ಏನ ಗಾಚಾರಾ ಬಂತೂ ಎನಗೆ
ದುಂಡೀಲಿ ಕೊಡ ಒಡಿಯಲಿ ಬೇಕೇ

ದುಂಡೀಯಾ ತಂದಾಳೇ ಕೊಡದಾ ಮ್ಯಾಲೆ ಹಾಕಿಯಾಳೇ
ದುಂಡೊಡಿತೂ ಕೊಡ ಒಡಿಯಲಿಲ್ಲಾ

ಇದು ಏನ ಗಾಚಾರಾ ಬಂತೂ ಎನಗೆ
ಕೊಡಗಾಳಾ ಬಿಟ್ಟು ಹೋಗಲಿ ಬೇಕೇ

ಮುಂದಾಕಾ ಮುರ‍್ಹೆಜ್ಜೆ ಹೋಗ್ಯಾಳೇ ಕೋಮಾಲೀ
ಕೊಡಗಳಿಂಬ್ಹಾಲ ಬರುತಾವೆ

ಇದು ಏನ ಗಾಚಾರಾ ಬಂತವ್ವ ಎನಗೆ – ಕೋಲೆನ್ನಾ ಕೋಲೆ

ಬಾವಿಯಾ ಹತ್ಯಾಳೇ ಸುತ್ತ ಮುತ್ತಾ ನೋಡ್ಯಾಳೇ
ಬಾವಿ ಕಟ್ಟಿ ಮ್ಯಾಲೇ ಗೊರವಯ್ಯಾ

ಬಾವಿನೇ ಕಟ್ಟಿ ಮೇಲೇ ಗೊರವಯ್ಯಾ ಕುಂತಾನೇ
ಬಾರೋ ಅಣ್ಣಯ್ಯಾ ಕೊಡಾ ಹೊರುಸೊ

ಅಣ್ಣೀನೇ ಏ ಅಂತಾ ಕರಿಬ್ಯಾಡೇ ಕೋಮಾಲೀ
ಮಾವಾಂತಾ ಕರಿಯಲೆ ಬೇಕೇ

ನಿಮ್ಮಪ್ಪ ನನಗೇ ಸೋದರ ಮಾವ
ಬಾರೊ ಮಾವಯ್ಯಾ ಕೊಡ ಹೊರಸೊ

ಕೊಡಾನಾ ಹೊರಿಸ್ಯಾನೇ ಮುಂದಾಕಾ ಬಿಟ್ಟಾನೇ
ಹಿಂದಾಲಾ ಸೆರಗಾ ಹಿಡುದಾನೇ

ಯಾಕೋ ಮಾವಯ್ಯಾ ಸೆರಗ್ಹಿಡುದೀ
ಈವತ್ತ ರಾತ್ರಿ ತಿರೂಗಿ ಬರಾಲೇಬೇಕೇ
ಬರುತ್ತೇನೆ ಮಾವಯ್ಯ ಬಿಡೂ ಸೆರಗಾ

ಗಂಗಮ್ಮನ ಆಣಿ ಇಟ್ಟುಕೋಳೇ
ಗಂಗಮ್ಮನ ಆಣಿ ಬರುತೀನಿ ಮಾವಾ
ಕೊಡಗಳಾ ಆಣಿ ಇಟ್ಟುಕೋಳೇ
ಕೊಡಗಳಾ ಆಣಿ ಬರುತೀನಿ ಮಾವಾ
ಡಬ್ಬೀಯಾ ಆಣಿ ಇಟ್ಟುಕೋಳೆ
ಡಬ್ಬೀಯಾ ಆಣಿ ಬರುತೀನಿ ಮಾವಾ

ಹನುಮಪ್ಪನ ಗುಡಿಗೇ ಬಾರಲೀ ಬೇಕೇ
ಬರುತ್ತೇನೆ ಮಾವಯ್ಯ ಬಿಡು ಸೆರಗಾ

ಊರಾಗಾ ಗೊರವಯ್ಯಾ ಹೋಗುತ್ತಾನೆ | ದೊರಿ ಬಗಲಾಗೇ
ಅಂಗಾಡಿ ಮನೆಗೆ ಹೋಗುತ್ತಾರೆ | ದೊರಿ ಬಾಗಲಾಗೇ

ಎಲಿ-ಗಳಾ ಕೊಂಡಾನೇ ಅಡಿಕೆಗಳಾ ಕೊಂಡಾನೇ
ಜಾಯಿಕಾಯಿ ಸತ್ತೂರಿ ಕೊಂಡಿದ್ದಾನೆ | ದೊರಿ ಬಾಗಲಾಗೇ

ಜಾಯಕಾಯ ಪತ್ತೂರಿ ಕೊಂಡಾನೇ ಗೊರುವಯ್ಯಾ
ಹನುಮಪ್ಪನ ಗುಡಿಗೆ ಹೋಗುತ್ತಾನೆ | ದೊರಿ ಬಾಗಲಾಗೇ

ಹಾಸೀಗಿನಾದಾರೇ ಏನೆಂದೂ ಹಾಸ್ಯಾನೇ
ಕೋಮಾಲಿಗೆ ಏನೆ ನನಗೇನ | ದೊರಿ ಬಾಗಲಾಗೇ

ಅಡಿಕೆಗಳಾ ಐದಾವೇ ಎಲೆಗಳಾ ಐದಾವೆ
ಕೋಮಾಲಿ ಸುಣ್ಣ ತರಲಿಲ್ಲ | ದೊರಿ ಬಾಗಲಾಗೇ

ಮುಂಗೋಳಿ ಕೂಗ್ಯಾವೆ ಮೂಡಲ ಹರೂದಾವೇ
ಸತ್ತಂಗ ಗೊರವಯ್ಯ ಬಿದ್ದಿದ್ದಾನೇ | ದೊರಿ ಬಾಗಲಾಗೇ

ಊರಾಳಾ ಗೌಡಾರಾ ರೈತರ ಸ್ಯಾನಾಬಾವಾ
ಅವರೆಲ್ಲರ ಬಂದು ನೋಡುತ್ತಾರೇ | ದೊರಿ ಬಾಗಲಾಗೇ

ಯಾವೂರಾ ಗೊರವಯ್ಯ ಸತ್ತಿದ್ದಾನೆ | ದೊರಿ ಬಾಗುಲಾಗೇ
ಒಳ್ಳೇಯ ಕಟ್ಟೀಗೆ ತರಸ್ಯಾರೇ | ದೊರಿ ಬಗುಲಾಗೇ

ಒಳ್ಳೇಯಾ ಏ ಕಟ್ಟೀಗೇ ತರಿಸ್ಯಾರೇ ಅವರಿನ್ನಾ
ಸಿದಗೀಯಾ ಅವರು ಕಟ್ಟುತ್ತಾರೆ | ದೊರಿ ಬಾಗುಲಾಗೇ

ಸಿದಗೀಯದರಕ ಗೊರವಯ್ಯನ ಇಡುತಾರೇ | ದೊರಿ ಬಾಗುಲಾಗೇ

ಸಿದಿಗ್ಯಾಕೆ ಗೊರವಯ್ಯನಾ ಇಟ್ಟಾರೆ ಅವರಿನ್ನೂ
ಕೋಮಾಲೆ ತಿಪ್ಪೀಗೀ ಹೊರುತಾರೇ

ಕೋಮಾಲೇ ತಿಪ್ಪೀಗೀ ಹೊತ್ತಾರ ಅವರನ್ನೂ
ಕೋಮಾಲೆ ತಿಪ್ಪಾಗೇ ಹುಗುದಾರೇ

ಏಳೇಳೇ ಕೋಮಾಲೇ ವ್ಯಾಳೇವೂ ಆಗ್ಯವೇ
ಬೇಗಾನೆ ಸಗಣಿ ಬಳಿ ಏಳೇ

ಪಟ್ಟೇದಂಚಿನ ಸೀರೆ ಮೇಲಾಕೆ ಕಟ್ಯಾಳೇ
ಕೋಮಾಲಿ ಸೆಗಣಿ ಬಳಿತಾಳೆ

ಕೋಮಾಲೀ ಏ ಸಗಣೀ ಬಳುದಾಳೆ ಆಗಿನ್ನೂ
ಕೋಮಾಲೀ ತಿಪ್ಪೀಗಿ ಹೊರುತ್ತಾಳೆ

ಓಣಿಯೊಳ ಅಣ್ಣುಗಳಾ ಓಣಿಯೊಳಾ ತಮ್ಮುಗಳಾ
ನಮ್ಮ ತಿಪ್ಪೀಗೀ ಕಣ್ಣೀ ಬಂದಿದ್ದಾವೊ

ಓಣಿಯೊಳ ಅಕ್ಕಗಳಾ ಓಣಿಯೊಳ ಅವ್ವಗಳಾ
ನಮ್ಮ ತಿಪ್ಪೀಗೀ ಕಣ್ಣ ಬಂದಿದ್ದಾವ

ನೀನೇನೆ ನೋಡಿದರೇ ಬುದ್ಧಿವಂತರಾ ಮಗಳೂ
ಆ ಮೋಡಿ ನಮಗಾ ತಿಳಿಯೂವೆ

ಬುಟ್ಟೀಯ ಒಗುದಾಳೇ ಹಿಂದಾಕೆ ತಿರುಗ್ಯಾಳೇ
ಹಿಂದಲ ಸೆರಗಾ ಹಿಡುದಾನೇ

ಏನಂದು ನೀನು ಹೇಳಿದ್ದೆ ಲೇ
ಎಲ್ಲಾರಿದ್ದಿದು ಮನಿಯಾಗೆ
ಈರಿ ಬಳಾಕಾ ಬರಲೇ ಬೇಕೇ
ಬರುತ್ತೇನೆ ಮಾವಯ್ಯ ಬಿಡ ಜಡಿಯಾ
ನಿಂಬೆಣ್ಣ ಮಾಡಿ ಜಡಿಯಾಗಿಟ್ಟಾ

ಗಂಗಾಳೂ ಐದಾವೇ ಚೆರಿಕಾಗಳೂ ಐದಾವೇ
ನಮ್ಮ ಕೋಮಾಲೀ ಇಲ್ಲಲ್ಲೇ ಮನಿಯಾಗೆ

ಹಂಡೇವು ಐದಾವೇ ಕೊಡಪಾನ ಐದಾವೇ
ನಮ್ಮ ಕೋಮಾಲೀ ಇಲ್ಲಲ್ಲೇ ಮನಿಯಾಗೆ

ಓಣಿಯೊಳಾ ಅವ್ವಗಳಾ ಓಣಿಯೊಳಾ ಅಕ್ಕಗಳಾ
ನಮ್ಮ ಕೋಮಾಲೀ ಇಲ್ಲಲ್ಲೇ ಮನಿಯಾಗೆ

ಊರಾಗೋಲಿಲೇ ಒಡದಿದ್ದಲ್ಲೇ
ನಿನ್ನ ಸೊಸಿಯಾ ಕಳ್ಳರೊಯಿದ್ರೆ

ಪ್ರತಿ ಮೊದಲನೆಯ ಹಾಗೂ ಎರಡನೆಯ ಸಾಲಿನ ಅಂತ್ಯದಲ್ಲಿ “ಕೋಲೆನ್ನ ಕೋಲೆ” ಎಂದು  ಹಾಡಲಾಗುತ್ತದೆ. ಚರಣದ ಅಂತ್ಯದಲ್ಲಿ “ದೊರಿ ಬಾಗಿಲಾಗೇ” ಸೂಚಿತವಾದಲ್ಲಿ “ಹಿಡಿರೋ ಮೋಜಿನ ಕಹಳಿಯಾ” ಎಂದು ಹಾಡಲಾಗುತ್ತದೆ.*      ಗೊರವಯ್ಯ; ಕೃಷ್ಣಯ್ಯ ಎಸ್.ಎ. ಬಾಚಿಗೊಂಡನಹಳ್ಳಿ ಮತ್ತು ಏಣಗಿ ಬಸಾಪೂರದ ಜನಪದ ಗೀತೆಗಳು ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ – ೧೯೯೨ ಪು.ಸಂ. ೮೬-೯೪