ಕೋಲು ಕೋಲೇ, ಕೋಲನ್ನ ಕೋಲೆ, ಕೋಲು ಕೋಲೆ || ಪ ||

ಚಿನ್ನದ ಸಿಂಗಿನಾದ, ರನ್ನಾದ ಪಾತರೆ
ಪನ್ನಂಗದ ಹರಿನಾಮ ತಿರಿಶೂಲವೊ-ಸಣ್ಣನಾಮ       || ಅಪ ||

ಅಣ್ಣಯ್ಯ ನೀನು ಪಡಿಮಾಡು, ಕೋಲು ಕೋಲೆ …
ಆಚೆ ಕೇರಿಲಿ ಒಬ್ಬ ಜೋಗಿ ದೇವರಾಡುತಾರೆ
ಓಡಿಬನ್ನಿ ದೇವರೆಲ್ಲ ನೋಡಿ ಬರುವಾಣ ಕೋಲು ಕೋಲೆ …
ನೋಡಿಬಂದ ಬಾಲರೆಲ್ಲ ಮರದಲ್ಲಿ ಪಡಿದಾನ ತಂದು
ಕೊಳ್ಳೋ ಜೋಗಪ್ಪ ನಿನ್ನ ಪಡಿದಾನ, ಕೋಲು ಕೋಲೆ …
ಅಲ್ಲಲ್ಲಿ ದಾನವು ಅಲ್ಲಲ್ಲಿ ಧರ್ಮವು
ತಂದಿಡೆ ನಾರಿ ನೀ ಇತ್ತಿತ್ತವ, ಕೋಲು ಕೋಲೆ …
ಅತ್ತತ್ತ ಬಂದರೆ ಅತ್ತೆ ಮಾವದಿರು ಬೈಯ್ಯುತ್ತಾರೆ
ಕೊಳ್ಳೋ ಜೋಗಪ್ಪ ನಿನ್ನ ಪಡಿದಾನ, ಕೋಲು, ಕೋಲೆ …
ಇತ್ತಿತ್ತ ಬಂದರೆ ಅತ್ತೆ ಮಾವದಿರು ಬೈಯಲಿಕ್ಕೆ
ಆನೆಸಾಲು ಕದ್ದೆನೇನೆ? ಕುದುರೆ ಸಾಲು ಕದ್ದೆನೇನೆ,
ಹೆರರ ಹೆಣ್ಣಿಗೆ ನಾ ಬಿದ್ದೆನೇನೆ? ಕೋಲು ಕೋಲೆ …
ಚಗಡಿ ಕಾಯಂಗೆ ಚಿಗ್ತಾವು ಕಿರಿಜಡೆ
ಭಕ್ತರೊಳಗೆ ನಮ್ಮ ಜೋಗಿ ಚಲುವನೆಂದಳೊ, ಕೋಲು ಕೋಲೆ
ಭಕ್ತರೊಳಗೆ ನಮ್ಮ ಜೋಗಿ ಚಲುವಾನ ಕೈಯಾಳ
ಚಿಕ್ಕಿ ಉಂಗುರಕೆ ನಾರಿ ಮನಸೋತಳೋ ಕೋಲು ಕೋಲೆ
ಉದ್ದಿನ ಕಾಯಂಗೆ ತಿದ್ಯಾವೆ ಕಿರಿಜಡೆ
ಸಿದ್ಧರೊಳಗೆ ನಮ್ಮ ಜೋಗಿ ಚಲುವಾ ಕೋಲು, ಕೋಲೆ …
ಸಿದ್ಧರೊಳಗೆ ನಮ್ಮ ಜೋಗಿ ಚಲುವಾನ ಕೈಯ್ಯಾಳ
ಮುದ್ರೆ ಉಂಗುರಕೆ ನಾರಿ ಮನಸೋತಳೊ, ಕೋಲು, ಕೋಲೆ …
ಇದ್ದ ಬದ್ದ ಬಟ್ಟೆನೆಲ್ಲ ಗಂಟು ಮಟ್ಟೆ ಕಟ್ಟಿಕೊಂಡು
ಎದ್ದಾಳು ಜೋಗಿ ದೇವರಿಂದುಗಡೆ, ಕೋಲು ಕೋಲೆ …
ಕೊತ್ನಗಟ್ಟ ಕೋರಿಗಟ್ಟ ಹತ್ತಲಾರೆ ಇಳಿಯಲಾರೆ …
ಹೊತ್ತು ಕೊಳ್ಳೆ ನಾರಿ ನನ್ನ ಗಂಟು ಮೊಟ್ಟೆಯ ಕೋಲು, ಕೋಲೆ …
ಮುದ್ದಿನಂಥ ಮನೆಯ ಬಿಟ್ಟೆ, ಗೆಜ್ಜೆ ಕಾಲಿನ ಮಗುವ ಬಿಟ್ಟೆ
ಲಜ್ಜೆಗೆಟ್ಟ ಜೋಗಿ ಕುಟ್ಟೆ ನಾ ಬರಬಹುದೆ, ಕೋಲು, ಕೋಲೆ …
ಎಂಟೂರ ತಿರುಗಿದೆ ಸೊಂಟ ಕೊಂದು ಅರಿಬಿಲ್ಲ
ಗಂಟುಮೋರೆ ಜೋಗಿ ಕೊಟ್ಟೆ ನಾ ಬರಬಹುದೆ, ಕೋಲು, ಕೋಲೆ …
ಏಳೂರ ತಿರುಗಿದೆ ಹೋಳು ಸೆರೆ ಹುಟ್ಟಲಿಲ್ಲ
ಹಾಳುಮೋರೆ ಜೋಗಿ ಕುಟ್ಟಿ ನಾ ಬರಬಹುದೇ, ಕೋಲು ಕೋಲೆ …
ಬೀಸೋತೊಳು ಬೆರಗಾದೊ ನಡೆಯೊ ಕಾಲು ಹಪ್ಪಳಾದೊ
ಬಾಯಳು ತಂಬುಲವೆಲ್ಲ ಹುಡಿ, ಹುಡಿ, ಕೋಲು ಕೋಲೆ …
ಬಾಯಳು ತಂಬುಲವೆಲ್ಲ ಹುಡಿ ಹುಡಿ ಜೋಗಪ್ಪ
ಎಲ್ಲಿ ಜೋಗಪ್ಪ ನಿನ್ನರಮನೆ, ಕೋಲು ಕೋಲೆ …
ಕೊತ್ನಗಟ್ಟ ಕೋಟಿಗಟ್ಟ ಎಪ್ಪತ್ತು ಏಳು ಗಟ್ಟ …
ಅಲ್ಲಿ ಕಾಣೆ ನಾರಿ ಸುಖದರಮನೆ, ಕೋಲು, ಕೋಲೆ …

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು :

೧) ಜೋಗಿಯ ಹಿಂದ್ಹೋದ್ರೆ; ಕಂಬಾಳು ಸಿದ್ಧಗಂಗಯ್ಯ, ಮಾತಾಡು ಮಲ್ಲಿಗೆ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೩ ಪು.ಸಂ. ೫೦-೫೧.

೨) ಜೋಗಿಯ ಜೊತೆಗಾತಿ; ಮತಿಘಟ್ಟ ಕೃಷ್ಣಮೂರ್ತಿ, ಕನ್ನಡ ಜನಪದ ಸಾಹಿತ್ಯ ಭಂಡಾರ ಗುರುಮೂರ್ತಿ ಪ್ರಕಾಶನ ಬೆಂಗಳೂರು ೧೯೭೫ ಪು.ಸಂ. ೧೬೦-೧೬೧.*      ಚಿಕ್ಕಿ ಉಂಗುರಕೆ ನಾರಿ ಮನ ಸೋತಳೋ; ಹಕಾರಿ ದೇವೇಂದ್ರಕುಮಾರ, ಜಾನಪದ ಸಾಮಾಜಿಕ ಕಥನಗೀತೆಗಳಲ್ಲಿ ದುಃಖಾಂತ ನಿರೂಪಣೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೧೯೮೫ ‘ಪು.ಸಂ. ೩೬೩-೩೬೪.