ಈರುಳ್ಳಿ ಹಾಕೋರು ಈರುಳ್ಳಿ ಬೆಳೆಯೋರು
ಈರುಳ್ಳಿ ನೀರ ತಿರುವೋರು | ನಮ್ಮ ಬೀಗಾರು
ನೀರಗಣ್ಣಿನೋರು ನಮ್ಮ ಜರದೋರು ||

ಬೆಳ್ಳುಳ್ಳಿ ಹಾಕೋರು ಬೆಳ್ಳುಳ್ಳಿ ಬೆಳೆಯೋರು
ಬೆಳ್ಳುಳ್ಳಿ ನೀರ ಬಿಡುವೋರು | ನಮ್ಮ ಬೀಗಾರು
ಚಿಂತಲಿರುವೋರು ನಮ್ಮ ಜರದೋರು ||

ಅತ್ತಿ ಹಣ್ಣಿನಂಗೆ ಹತ್ತಾಳು ಬಂದಿದ್ದಾರೆ
ಹತ್ತಾರು ಬರಿಯ ಮುದುಕರು | ನಮ್ಮ ಬೀಗಾರು
ಹತ್ತಲಾರದೆ ಕೆಳಗೆ ಇದ್ದಾರೆ ||

ಆಲದ ಹಣ್ಣಿನಂಗೆ ಆರಾಳು ಬಂದಿದ್ದಾರೆ
ಆರಾಳು ಬರಿಯ ಮುದುಕರು | ನಮ್ಮ ಬೀಗಾರು
ಹಾಕಲಾರದೆ ಕೆಳಗವರೆ ||

ನಾವು ಬಂದ ಇಷ್ಟೊತ್ತಿಗೆ ಬೋನ ಮಾಡಬಹುದು
ಬೋನ ಮಾಡಿ ನೀರ ಕೊಡಬಹುದು || ನಮ್ಮ ಬೀಗಾತಿ
ಗುಡ್ಡಕ್ಕೆ ಹೋಗ್ಯವಳೆ ಸೌದೆಗೆ ||

ನಾವು ಬಂದ ಇಷ್ಟೊತ್ತಿಗೆ ಬೋನ ಮಾಡಬಹುದು
ಬೋನ ಮಾಡಿ ನೀರ ಕೊಡಬಹುದು | ನಮ್ಮ ಬೀಗಾತಿ
ಕಾಡಿಗೆ ಹೋಗ್ಯವಳೆ ಸೌದೇಗೆ ||

ಹಟ್ಟಿಯ ನೋಡಿದರೆ ಹಟ್ಟಿಯೊಂದು ಐಸಿರಿ
ಹಟ್ಟಿಯಾಗಲು ತಗ್ಗು ಮೊಳದುದ್ದ | ನಮ್ಮ ಬೀಗಾತಿ
ಬಿಟ್ಟೋಗಿ ಏಸೊಂದು ದಿನವಾಯ್ತು ||

ಕೋಣೆಯ ನೋಡಿದರೆ ಕೋಣೆಯೊಂದು ಐಸಿರಿ
ಕೋಣೆಯೊಂದು ತಗ್ಗು ಮೊಳದುದ್ದ | ನಮ್ಮ ಬೀಗಾತಿ
ಓಡೋಗಿ ಏಸೊಂದು ದಿನವಾಯ್ತು ||