‘ಸಮುದ್ರವ ಸೆರೆ ಹಿಡಿದವರುಂಟೆ?’

ಸಮುದ್ರ ವರ್ಣನೆಯಿಂದಲೆ ಕಾವ್ಯ ಆರಂಭವಾಗಬೇಕೆಂಬ ಪರಂಪರೆಯನ್ನು ಒಪ್ಪಿಕೊಂಡ ನಮ್ಮ ಹಳೆಯ ಕವಿಗಳಲ್ಲಿ ರತ್ನಾಕರವರ್ಣಿಯೊಬ್ಬನ ಹೊರತು, ಉಳಿದ ಯಾರೂ ಈ ಮೇಲಿನ ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ಕೊಡಲಿಲ್ಲವೆಂದೇ ಹೇಳಬೇಕಾಗಿದೆ. ಪಂಪನಿಂದ ಹಿಡಿದು ಮುದ್ದಣನ ತನಕ ಬರೆದ ಕವಿಗಳಲ್ಲಿ, ಬಹು ಮಟ್ಟಿಗೆ ತಮ್ಮ ತಮ್ಮ ಕೃತಿಗಳಲ್ಲಿ ಅಷ್ಟಾದಶವರ್ಣನೆಯ ಪ್ರಧಾನಾಂಶವಾದ ‘ಸಮುದ್ರ ವರ್ಣನೆ’ಯನ್ನು ಮಾಡುವ ನಿರ್ಬಂಧವನ್ನು ಒಪ್ಪಿಕೊಂಡರೂ, ಅವರವರ ಆ ವರ್ಣನೆಯ ‘ಅಬ್ದ ಶಬ್ದಗಳ ಪ್ರಾರಬ್ಧ’ದಲ್ಲಿ, ಅವರಿಗೆ ಆ ‘ಮಹಾಬ್ಧಿಯ ಕಣ’ವೊಂದೂ ಸೆರೆಸಿಕ್ಕದಾಯಿತು.ಆದರೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ‘ಸಮುದ್ರವ ಸೆರೆ ಹಿಡಿದವರುಂಟೆ?’ ಎಂಬ ಪ್ರಶ್ನೆಗೆ, ಉತ್ತರ, ‘ಉಂಟು’ ಎಂದು. ಹಾಗೆ ಸಮುದ್ರವನ್ನು ಸೆರೆ ಹಿಡಿದವರಲ್ಲಿ ಒಬ್ಬರು ಕಾರಂತರು; ಮತ್ತೊಬ್ಬರು ವಿನಾಯಕರು. ಒಬ್ಬರು ಗದ್ಯರೂಪದಲ್ಲಿ, ಮತ್ತೊಬ್ಬರು ಪದ್ಯರೂಪದಲ್ಲಿ. ಆದರೆ ಕಾರಂತರಲ್ಲಿ ಕಡಲ ತೀರದಗಲಕ್ಕೂ ಹಬ್ಬಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಸೌಂದರ್ಯದ ಕಡೆಗಾಗಲಿ, ಅದರ ನಿಜವಾದ ಮಕ್ಕಳ ಬದುಕಿನ ಬಗೆಗಾಗಲಿ, ಅವರಿಗೆ ಹಾಗೂ ಅವರ ಕಾದಂಬರಿಯೊಳಗಣ ಪಾತ್ರಗಳಿಗೆ ಅಂತಹ ತನ್ಮಯತೆಯೇ ಇಲ್ಲ. ಇವರಿಗಿಂತ ಭಿನ್ನವಾಗಿ ಕಡಲನ್ನು ಅದರ ಅಸಂಖ್ಯವೈವಿಧ್ಯ ಹಾಗೂ ಸೌಂದರ್ಯಗಳೊಂದಿಗೆ ಗ್ರಹಿಸಿ, ಉತ್ಸಾಹದಿಂದ ಚಿತ್ರಿಸಿದವರು ಬಹುಶಃ ಗೋಕಾಕರೊಬ್ಬರೇ.

ವಿನಾಯಕರು ಮೂಲತಃ ಪ್ರವಾಸಸ್ಫೂರ್ತ ಕವಿ. ನೆಲದ ಮೇಲೆ ನೀರ ಮೇಲೆ, ನಭದ ಮೇಲೆ ಹೊರಟ ‘ಪಯಣ’ದ ಹಾದಿಯಲ್ಲಿ ಈ ‘ಕಲೋಪಾಸಕ ಕಂಡ, ಉಂಡ ಅನುಭವಗಳೇ ಅವರ ಕಾವ್ಯದ ಮುಖ್ಯವಸ್ತುಗಳಾಗಿವೆ. ಈ ಬಗೆಯ ‘ದ್ಯಾವಾಪೃಥಿವಿ’ಯ ದೃಶ್ಯಗಳು ಅವರ ಕಾವ್ಯದಲ್ಲಿ ಲೆಕ್ಕವಿಲ್ಲದಷ್ಟಿವೆ. ಅವರ ‘ಸಮುದ್ರ ಗೀತಗಳು’ ಇಂಥದೊಂದು ಪಯಣದ ಸಂದರ್ಭದಲ್ಲಿ ಹೊಮ್ಮಿದವು. ಕವಿಗೆ ಚಿರಪರಿಚಿತವಾದ ನೆಲದ ನಂಟು ಹರಿದು, ಸಮುದ್ರದ ಗಂಟು ಅನಿವಾರ‍್ಯವಾದಾಗ, ಅನೇಕ ದಿನಗಳ ಕಾಲ ಜಲಮಯ ಜಗತ್ತಿನಲ್ಲಿ ಬದುಕಬೇಕಾಗಿ ಬಂದಾಗ, ಸಮುದ್ರದ ನವನವ ಉನ್ಮೇಷಶಾಲಿನಿಯಾದ ರೂಪಗಳನ್ನು ಕಂಡು-ಉಂಡಾಗ, ಕವಿಗೆ ಈ ತನ್ನ ಅನುಭವಕ್ಕೆ ಯಾವ ರೂಪವನ್ನು ಕೊಡಲಿ ಎಂಬ ಪ್ರಶ್ನೆ ಕಾಡಿದಾಗ, ‘ಸಮುದ್ರವ ಸೆರೆ ಹಿಡಿದವರುಂಟೆ?’ ಎಂಬ ಪ್ರಶ್ನೆಯ ರೂಪದ ಸವಾಲು ಮುಂದೆ ನಿಲ್ಲುತ್ತದೆ. ಹಾಗೆಯೆ ಈ ಸಮುದ್ರವನ್ನು ಸೆರೆ ಹಿಡಿಯಲು ಹೊರಟ ತಮ್ಮ ಹಿಂದಿನ ಕವಿಗಳ ಸಾಹಸ ಹಾಗೂ ಅದರಲ್ಲಿ ಕಂಡ ಸೋಲು ನೆನಪಿಗೆ ಬಂದು ತನ್ನ ಈ ಮಹದನುಭವಕ್ಕೆ ಬೇರೊಂದು ನವೀನ ಅಭಿವ್ಯಕ್ತಿಯನ್ನು ಕೊಡಬೇಕೆಂಬ ಸಂಕಲ್ಪ ‘ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು’ ಎಂಬ ಪ್ರತಿಜ್ಞೆಯಾಗಿ ನಿಲ್ಲುತ್ತದೆ ‘ಸಮುದ್ರದ ಗೀತ’ಗಳ ಮೊದಲ ಪದ್ಯವಾದ ‘ಪ್ರತಿಜ್ಞೆ’ ಎನ್ನುವುದು ಕವಿ ವಿನಾಯಕರಿಗೆ ಒದಗಿದ ಈ ಹೊಸ ಸಂವೇದನೆಗಳಿಗೆ, ಹೊಸ ಅಭಿವ್ಯಕ್ತಿಯನ್ನು ಕೊಡುವ ಕಾವ್ಯ ಪ್ರಜ್ಞೆಯ ಉದ್ಘೋಷವಾಗಿದೆ. ಈ ಮನಃಸ್ಥಿತಿಯಲ್ಲಿ-

ಅಬ್ಜ ಶಬ್ದಗಳ ಪ್ರಾರಬ್ಧದಲಿ ಸಹ
ಮಹಾಬ್ಧಿಯ ಕಣವೊಂದು ಸೆರೆಸಿಕ್ಕದಯ್ಯ!
ಕೊಡದಿರು ಶರಧಿಗೆ ಶಟ್ಪದಿಯ ದೀಕ್ಷೆಯನು
…………………………………………
ಉಕ್ಕಲಿ ಚಿಮ್ಮಲಿ ಸಮುದ್ರ ಸ್ವಾತಂತ್ರ್ಯ
ಮಿಕ್ಕಲಿ ಮೀರಲಿ ಮುನ್ನೀರ ನಿರ್ವಯಲು
ಜರ್ಜರವಾದುದೆಲ್ಲ ಮುಳುಗಿ ಹೋಗಲಿ ಜಲಸಮಾಧಿಯಲ್ಲಿ
ಹೊಸದೆಲ್ಲ ಹುಟ್ಟಿ ಬರಲಿ-ಹೃದಯದಾಳದಲ್ಲಿ
ಬೇಡಯ್ಯ! ಬಂಧಗಳ ಬಂದಿವಾಸ;
ಬರೆದದ್ದೆ ಬಂಧುರವಾಗಬಹುದು
ಸಾಕಯ್ಯ: ವೃತ್ತಗಳಾವರ್ತ:
ನಿನ್ನ ಮಣಿತವಿರಲಿ ಸಮುದ್ರದ ಕುಣಿತದಂತೆ!

ಎಂಬ ಮೊದಲ ಪದ್ಯವೇ ಹೊಸ ಕಾವ್ಯ ಪ್ರಜ್ಞೆಯ ಉದ್ಘೋಷವಾಗಿದೆ. ಸಮುದ್ರ ವರ್ಣನೆಗೆ ಅದುವರೆಗೂ ಒಪ್ಪಿಕೊಂಡು ಬಂದ ‘ರೀತಿ’, ಈ ಹೊಸ ಅನುಭವಕ್ಕೆ ಒಗ್ಗತಕ್ಕದಲ್ಲವೆಂಬ ಎಚ್ಚರದ ಉತ್ಸಾಹವೆ ಈ ಪ್ರತಿಜ್ಞೆಯ ಸ್ಥಾಯಿಯಾಗಿದೆ. ಕಡಲಿನ ಈ ಸ್ವಾತಂತ್ರ್ಯ ನೆಲದ ನಿಯತಿಯಿಂದ ಭಿನ್ನವಾದ ಕಾರಣ, ಈ ಸಮುದ್ರ ಸ್ವಾತಂತ್ರ್ಯಕ್ಕೆ ಅಭಿವ್ಯಕ್ತಿಯನ್ನು ನೀಡಬೇಕಾದರೆ, ತನ್ನ ಕಾವ್ಯದಲ್ಲಿ ಹಾಗೂ ತನ್ನ ಪರಿಸರದಲ್ಲಿ ಇದುವರೆಗೂ ಪರಿಚಿತವಾದ ‘ರೀತಿಗಳು’ ಇನ್ನು ಸಲ್ಲವು ಎಂಬ ಎಚ್ಚರವನ್ನು ಪಡೆದ ಕವಿ, ತನ್ನ ನೂತನಾಭಿವ್ಯಕ್ತಿಯ ಬಗೆಗೆ ಓದುಗರನ್ನು ಕುರಿತು-

ಸ್ವಚ್ಛಂದ ಛಂದದಲ್ಲಿ
ಜಲಕ್ರೀಡಾ ವೃತ್ತದಲ್ಲಿ
ಅನುದಿನವು ತೆರೆಗಳು ಹಿಡಿವ ತಾಳಲಯದಲ್ಲಿ
ಗೀತವನೊರೆದೆನೆಂದು ಗೀಳ್ ಮಾಡಬೇಡ     (ಪು. ೩)

ಎಂದು ಬಿನ್ನವಿಸಿಕೊಳ್ಳುತ್ತಾನೆ. ಇಲ್ಲಿ ಆಗಲೇ ಕವಿ ವಿನಾಯಕರ ಕವಿತೆ ‘ಸ್ವಚ್ಛಂದ ಛಂದದ’ ಕಡೆಗೆ ತಿರುಗುತ್ತಿರುವುದರ ಸೂಚನೆ ಇದೆ. ಈ ಕವಿತೆಗಳನ್ನು ಬರೆದ ಕಾಲಕ್ಕೆ-ಎಂದರೆ ಇದು ೧೯೪೦ ರಂದು ಮೊದಲ ಸಲ ಪ್ರಕಟವಾದರೂ, ಇವುಗಳನ್ನು ಬರೆದದ್ದು, ವಿನಾಯಕರೆ ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ ಸೆಪ್ಟೆಂಬರ್ ೧೯೩೬-೩೮ ರಂದು-ಹೊಸಗನ್ನಡ ಕಾವ್ಯ ಪರಿಸರದಲ್ಲಿ ‘ಸ್ವಚ್ಛಂದ ಛಂದಸ್ಸು’ ಇದ್ದಿಲ್ಲವೆಂದೇ ಹೇಳಬಹುದು. ಹಾಗೆ ನೋಡಿದರೆ ಕನ್ನಡ ಕಾವ್ಯದಲ್ಲಿ ನಿಜವಾದ ಸ್ವಚ್ಛಂದ ಅಥವಾ ಮುಕ್ತ ಛಂದಸ್ಸು ಅದರ ಸಮಸ್ತ ವೈವಿಧ್ಯತೆಗಳೊಂದಿಗೆ ಕಾಣಿಸಿಕೊಂಡದ್ದು ಐವತ್ತರ ದಶಕದ ನವ್ಯ ಕಾವ್ಯ ಸಂದರ್ಭದಲ್ಲಿಯೇ. ಇದಕ್ಕೂ ಒಂದೂವರೆ ದಶಕಗಳ ಮೊದಲೇ ‘ಸ್ವಚ್ಛಂದ ಛಂದ’ವನ್ನು ಮೊದಲು ಪ್ರಯೋಗಿಸಿ ತೋರಿಸಿದ್ದು ಮತ್ತು ಮುಂದಿನ ನವ್ಯ ಕಾವ್ಯದ ಛಂದೋರೂಪವೊಂದಕ್ಕೆ ಪ್ರೇರಣೆ ನೀಡಿದ್ದು ಇಲ್ಲೆ, ಈ ಸಮುದ್ರಗೀತಗಳಲ್ಲಿ ಎಂದು ತೋರುತ್ತದೆ. ಸಮುದ್ರ ಸ್ವಾತಂತ್ರ್ಯವನ್ನು ಕಂಡು-ಉಂಡು, ಈ ಅನುಭವವನ್ನು ಸೆರೆಹಿಡಿಯುವ ಪ್ರಯತ್ನದಲ್ಲಿ ‘ಅನುದಿನವೂ ತೆರೆಗಳು ಹಿಡಿವ ತಾಳಲಯ’ವೆ ಈ ಸ್ವಚ್ಛಂದ ಛಂದಸ್ಸಿಗೆ ಪ್ರೇರಣೆಯಾದವು. ಹೀಗೆ ಸಮುದ್ರಗೀತಗಳ ಮೊದಲ ಪದ್ಯವಾದ ‘ಪ್ರತಿಜ್ಞೆ’ ಎನ್ನುವುದರಲ್ಲಿ ವಿನಾಯಕರ ಹೊಸ ಕಾವ್ಯ ಪ್ರಜ್ಞೆಯ ಘೋಷಣೆಯಿದೆ; ಹೊಸ ಅನ್ವೇಷಣೆಯ ಅಭಿವ್ಯಕ್ತಿಗೆ ಕೊಟ್ಟ ಹೆಸರಿದೆ; ಇದರ ಬಗ್ಗೆ ಓದುಗರ ಗಮನವನ್ನು ಸೆಳೆಯುವ ಕೋರಿಕೆ ಇದೆ.

ಈ ಸಮುದ್ರ ಗೀತಗಳಲ್ಲಿ ಕಡೆಯ ಭಾಗವಾದ ‘ಆತ್ಮವೃತ್ತ’ವನ್ನು ಬಿಟ್ಟರೆ, ನಾಲ್ಕು ಭಾಗಗಳಿವೆ: ಕಡಲು;  ಕಡಲುತೀರ; ಹಡಗ; ಮತ್ತು ಬ್ರಿಟಿನ್ನಿನ ದ್ವೀಪದಲ್ಲಿ. ಈ ನಾಲ್ಕೂ ಒಂದೇ ಪಯಣದ ನಾಲ್ಕು ಮುಖಗಳು.ಈ ನಾಲ್ಕು ವಿಭಾಗದಲ್ಲಿಯೂ ಕಂಡ ನೋಟ, ನಡೆಸಿದ ಚಿಂತನೆ ಒಂದಕ್ಕಿಂತ ಒಂದು ಭಿನ್ನವೆಂಬಂತೆ ತೋರಿದರೂ, ಅವು ಒಂದಕ್ಕೊಂದು ಪೂರಕ. ವಿಸ್ಮಯ; ಪುರಾಣ; ಇತಿಹಾಸ ಮತ್ತು ಚಿಂತನ-ಈ ನಾಲ್ಕು ಈ ನಾಲ್ಮೊಗದ ಹಿಂದಿನ ಹುರುಳು.

ಮೊದಲ ಭಾಗವಾದ ಕಡಲು ವಿಸ್ಮಯವನ್ನು ಸ್ಥಾಯಿಯಾಗಿ ಉಳ್ಳದ್ದು. ಸಮುದ್ರ ಗೀತಗಳ ಮೊದಲ ಕವಿತೆಯಾದ ‘ಪ್ರಜ್ಞೆ’ಯ ನಂತರ ಎರಡನೆಯ ಪದ್ಯವಾದ ‘ಕಂಡೆ’ ಎಂಬುದು ಈ ವಿಸ್ಮಯದ ನಾಂದಿಯಾಗಿದೆ-

ಕಂಡೆ! ನಿನ್ನನ್ನು ಮೊದಲಿಗೊಮ್ಮೆ ಕಂಡೆ
ಓ ಸನಾತನ ಸಮುದ್ರರಾಜ!
ಸಂಕ್ರಾಂತಿ ಪುರುಷ ಓ!
ಹಳೆಯದನ್ನೆಲ್ಲ ಒಳಗೊಳಗೆ ಕಾಯ್ದು
ಹೊಸದನೆಲ್ಲ ಹೊರಗೆ ಸೂರೆಗೆಯ್ದು
ಚಿರಸನಾತನವಾಗಿ
ಪುನರ್ವವವಾಗಿ
ಸಲಿಲ ಲೀಲೆಯಲ್ಲಿರುವ ಚೈತನ್ಯನೆ
ಸುಮನೋಹರ ಮೂರ್ತಿ!
ಕಂಡೆ!
ನಿನ್ನನ್ನು ಮೊದಲಿಗೊಮ್ಮೆ ಕಂಡೆ!              (ಪುಟ. ೫)

ಎಂಬ ಈ ಪದ್ಯದಲ್ಲಿ ಹೊಸತೇನೂ ಇರದಿದ್ದರೂ ಸಮುದ್ರವನ್ನು ಮೊಟ್ಟ ಮೊದಲಿಗೆ ಕಂಡು ಪಟ್ಟ ಸಂಭ್ರಮಾನುಭವದ ವಿಸ್ಮಯದ ಉದ್ಗಾರವಿದೆ. ಈ ಸಮುದ್ರಗೀತಗಳಲ್ಲಿ ಈ ಬಗೆಯ ವಿಸ್ಮಯವೆ ಬೇರೆ ಬೇರೆಯ ರೀತಿಯಲ್ಲಿ ವ್ಯಾಖ್ಯಾನಿತವಾಗಿದೆ. ಈ ವ್ಯಾಖ್ಯಾನಕ್ಕೆ ಸಾಮಗ್ರಿಯಾಗಿ ಸಮುದ್ರ ಸಂಬಂಧಿಯಾದ ಭಾರತೀಯ ಪುರಾಣವೆ ವಿನಾಯಕರಿಗೆ ಅಭಿವ್ಯಕ್ತಿಯ ಮಾಧ್ಯಮವಾಗುತ್ತದೆ. ಕಡಲು ಒಮ್ಮೆ ‘ಗೋಪುರಗಳ ಕಟ್ಟಿ ಗೋಪುರಗಳನಳಿಸುವ ರುದ್ರ ಪುರುಷ’ನಾಗಿ, ‘ಮಾರುತಿ ಬಲಭೀಮ’ನಾಗಿ, ‘ತ್ರಿಪುರಾಂತಕನಾಗಿ’, ‘ನಟಸಾಮಾಟ್ರನಾಗಿ’ ಕಾಣುತ್ತದೆ. ತೆರೆತೆರೆಗಳ ಏರಿಳಿತ ‘ಅರುಣನ ಕುದುರೆಗಳಂತೆ’ ‘ಕಿನ್ನರ ಕಿಂಪುರುಷರ ನೌಕೆಗಳಂತೆ’ ‘ಕಾಳ ರಕ್ಕಸರ ಕೋರೆ ಹಲ್ಲುಗಳಂತೆ’ ‘ಹೆಡೆಯಲ್ಲಿ ಪುಷ್ಪರಾಗವಿಹ ಕಾಳಸರ್ಪಗಳಂತೆ’ ‘ಮತ್ತ ಗಜದಂತೆ’ ಕಾಣುತ್ತದೆ. ಈ ಕಡಲು ಮತ್ಸ್ಯಕೂರ್ಮವರಾಹಾದಿ ಅವತಾರಗಳ ನೆಲೆವನೆಯಾಗಿ, ದೇವ ದಾನವರು ಮೇರು ಪರ್ವತವನ್ನಿರಿಸಿ ಮಥಿಸಿ ಕಾಮಧೇನು ಕಲ್ಪವೃಕ್ಷ, ಅಮೃತಾದಿಗಳನ್ನು ಪಡೆದ ಸ್ಥಳವಾಗಿ ತೋರುತ್ತದೆ. ಈ ಎಲ್ಲಾ ಪುರಾಣ ಸ್ಮರಣೆಯ ಉಪಮಾ ಪರಂಪರೆಗಳಲ್ಲಿ ವಿನಾಯಕರು ಯಾವ ಹೊಸ ಸಂಕೇತಗಳನ್ನಾಗಲೀ ಪ್ರತಿಮೆಗಳನ್ನಾಲೀ ನಿರ್ಮಿಸುವುದಿಲ್ಲ. ಇದು ಸಮುದ್ರವನ್ನು ಕುರಿತು ವರ್ಣನಾತ್ಮಕ ವಿಧಾನದಲ್ಲಿ ಹೊನಲುವರಿದ ಭಾವಗೀತಾತ್ಮಕವಾದ ವ್ಯಕ್ತಿತ್ವದ ವಿಸ್ಮಯದ ವಿವರಣೆ ಮಾತ್ರವಾಗಿದೆ. ಕವಿ ವಿನಾಯಕರು ಮುಂದೆ ೧೯೫೦ರಲ್ಲಿ ಇದೇ ಸ್ವಚ್ಛಂದ ಛಂದಸ್ಸಿನಲ್ಲಿ ಬರೆದ ‘ನವ್ಯ ಕವಿತೆ’ಗಳಿಗೂ, ೧೯೩೬-೩೮ರಲ್ಲಿ ಬರೆದ ಈ ಸಮುದ್ರಗೀತೆಗಳಿಗೂ ಇರುವ ಪ್ರಧಾನವಾದ ವ್ಯತ್ಯಾಸವೇ ಇದು. ಸಮುದ್ರ ಗೀತಗಳಲ್ಲಿ ನವ್ಯಕಾವ್ಯಕ್ಕೆ ಉಚಿತವಾದ ‘ರೀತಿ’ಯನ್ನು ಕಂಡುಕೊಂಡರು; ‘ನವ್ಯ ಕವಿತೆ’ಗಳಲ್ಲಿ ನವ್ಯಕಾವ್ಯದ ‘ದೃಷ್ಟಿ’ಯನ್ನು ಪಡೆದುಕೊಂಡರು. ಆದಕಾರಣ ಈ ಸಮುದ್ರ ಗೀತೆಗಳಲ್ಲಿ ‘ರೀತಿ’ಯೊಂದೆ ಹೊಸದು; ಒಳಗಿನ ತಿರುಳು ಮಾತ್ರ ನವೋದಯ ಕಾಲದ ವಿಸ್ಮಯಮೂಲವಾದ ಭಾವನಾನಿರೂಪಣೆಯ ವಯ್ಯಕ್ತಿಕವಾದ ಅಭಿವ್ಯಕ್ತಿಯಾಗಿದೆ. ಇಲ್ಲಿ ಕಡಲಿನ ಅನುಭವಗಳನ್ನು ಸಂಕೇತ-ಪ್ರತಿಮೆಗಳಲ್ಲಿ ಹರಳುಗೊಳಿಸುವ ಬದಲು, ಅದರ ವಿಸ್ಮಯವನ್ನು, ಚಿಂತನೆಯ ಮೂಲಕ ವ್ಯಾಖ್ಯಾನಿಸುವ, ವಿವರಿಸುವ ಪ್ರಯತ್ನದ ಕಡೆಗೆ ಗಮನವನ್ನು ಕೊಡಲಾಗಿದೆ. ‘ಒಂದೇ ಒಂದು ಮಾತನು ನೂರೊಂದು ಸಲ ಸಾರುವೆನು’ (ಪು. ೧೮) ಎಂದು ವಿನಾಯಕರು ಹೇಳಿಕೊಂಡಿರುವ ಮಾತು ಇಲ್ಲಿ ಸರಿಯಾಗಿದೆ. ಆದರೂ-

ಸೆರೆಸಿಕ್ಕ ನಾಯಕನ ಬಿಡಿಸಿಕೊಳಲೆಳಸುವ ಸೈನ್ಯದಂತೆ
ಶತ್ರುಗಳ ಚದುರಿಸಿ ಚಕ್ರವರ್ತಿಯ ಪಡೆವ ಸಾಮ್ರಾಜ್ಯದಂತೆ
ಬಂಧನದಲಿದ್ದ ಲೋಕನಾಯಕನ ಬಿಡುಗಡೆಗೆದ್ದ ನಾಡವರಂತೆ
ರೇಗುತಿದೆ, ಕಾಡುತಿದೆ, ಗದ್ದರಿಸಿ ಬೇಡುತಿದೆ, ನೋಡು ಸಾಗರವು!
……………………………………………..
ಪೆಡಂಭೂತಗಳು ಕುಣಿಯುವುವು-ತೆರೆಗಳ ಹೆಡೆಗಳ ಮೇಲೆ
ಕೊಳ್ಳಿ ದೆವ್ವಗಳು ಬಳ್ಳಿಗಟ್ಟುವುವು-ಕರಿನೀರ ಕಂದರದಲ್ಲಿ.
ಪ್ರಳಯಕೌತಣವೀಯುವುದು ಬ್ರಹ್ಮರಾಕ್ಷಸರ ಶಂಖನಾದ

(ಪುಟ. ೨೨)

ಎನ್ನುವ ಈ ತೆರೆತೆರೆಯಾದ ಮಾಲೋಪಮೆಗಳಲ್ಲಿ ಮತ್ತು

ಅಪರಂಪಾರವಾದ ಆಕಾರವೆ
ಇಂತೇಕೆ ಅಬ್ಬರಿಸಿ ನಿಂತೆ?

(ಪುಟ. ೨೪)

ಎನ್ನುವ ಪ್ರಶ್ನೆಯಲ್ಲಿ; ಮತ್ತು

ಚೌಕೆಂದರೆ ಚೌಕು
ದುಂಡೆಂದರೆ ದುಂಡಗೆ
ಇಹುದೆಂದರೆ ಇಹುದು
ಇಲ್ಲವೆಂದರೆ ಇಲ್ಲ
ಇದೆಂತಹ ಮಾಟ ಸಮುದ್ರನಾಥ!
(ಪುಟ. ೧೧)

ಎಂಬ ಸ್ವಭಾವೋಕ್ತಿಯಲ್ಲಿ ಮತ್ತು ಈ ಕಡಲು ಬೆಳಗಿನಲ್ಲಿ, ಬೈಗಿನಲ್ಲಿ, ನಡುಹಗಲಲ್ಲಿ, ನಡು ರಾತ್ರಿಯಲ್ಲಿ, ಕಗ್ಗತ್ತಲಲ್ಲಿ, ಬೆಳುದಿಂಗಳಲ್ಲಿ ಕಾಣಿಸಿದ ರೀತಿಗಳನ್ನು ವರ್ಣಿಸುವ  ಅನುಭವ ಇಷ್ಟೊಂದು ವೈವಿಧ್ಯಮಯವಾಗಿ, ವಾಸ್ತವವಾಗಿ ಜೀವಂತವಾಗಿ ಕನ್ನಡ ಕಾವ್ಯದಲ್ಲಿ ಅಭಿವ್ಯಕ್ತವಾಗಿದ್ದು ಇದೇ ಮೊದಲು ಎಂಬ ಸಂಗತಿ ಗಮನಿಸಬೇಕಾದದ್ದಾಗಿದೆ.

ಎರಡನೆಯ ಭಾಗವಾದ ‘ಕಡಲತೀರ’ದಲ್ಲಿ ಪ್ರಧಾನವಾದದ್ದು ಇತಿಹಾಸದ ಸ್ಮರಣೆ. ಮೊದಲ ಭಾಗವಾದ ‘ಕಡಲು’, ಪ್ರಧಾನವಾಗಿ ಕವಿಗೂ ಕಡಲಿಗೂ ಆದ ಆತ್ಮೀಯ ಸಂಬಂಧದ ವಿಸ್ಮಯೋದ್ಗಾರಗಳಿಗೂ, ಅದರೊಂದಿಗೆ ಎದ್ದು ಬಂದ ಪುರಾಣ ಸ್ಮರಣೆಗಳಿಗೂ ನಿದರ್ಶನವಾದರೆ, ಎರಡನೆಯ ಭಾಗವಾದ ‘ಕಡಲತೀರ’ ಈ ಪಯಣದ ಬೇರೊಂದು ಪರಿಸರವನ್ನು ತೆರೆಯುತ್ತದೆ. ಹಡಗು, ಏಡನ್, ಆಫ್ರಿಕಾ, ಸುಯೆಜ್, ಕ್ರೀಟ, ಸ್ತ್ರಾಂಬೋಲಿ, ಕೋರ್ಸಿಕಾ, ನೇಪಲ್ಸ್, ಇತ್ಯಾದಿ ತೀರಗಳ ಬದಿಯಲ್ಲಿ ಸರಿಯುವಾಗ, ಈ ಭೂನಿಸರ್ಗದ ವೈಶಿಷ್ಟ್ಯದ ಜತೆಗೆ ಆಯಾ ಪ್ರದೇಶಗಳ ಇತಿಹಾಸದ ನೆನಪೂ ವಿನಾಕರ ಕಾವ್ಯಪ್ರಜ್ಞೆಯಲ್ಲಿ ಹಾಯ್ದು ಹೋಗುತ್ತದೆ.ಇಲ್ಲಿ ಆಗಲೇ ಕವನದ ಛಂದಸ್ಸು ಹಿಂದಿನ ಸಮುದ್ರ ಸ್ವಾತಂತ್ರ್ಯದ ಸಂಕೇತವಾದ ಸ್ವಚ್ಛಂದಗತಿಯಿಂದ, ಬೇರೊಂದು ಕಟ್ಟುಪಾಡಿನೊಳಗೆ ಬಂದಿರುವುದನ್ನು ಗುರುತಿಸಬಹುದು. ಆಯಾ ದೇಶಗಳ, ಪ್ರದೇಶಗಳ ಹತ್ತಿರ ಹಡಗು ಸರಿಯುವಾಗ ಅಲ್ಲಿನ ನಿಸರ್ಗದ ವಿಲಕ್ಷಣತೆ, ಆ ನಾಡಿನ ಐತಿಹಾಸಿಕ ಹಿನ್ನೆಲೆ; ಮತ್ತು ಅದನ್ನು ಕುರಿತ ವಯ್ಯಕ್ತಿಕವಾದ ಚಿಂತನೆ ಇಲ್ಲಿ ಕಾವ್ಯದ ಮುಖ್ಯ ವಿಷಯವಾಗಿದೆ. ಏಡನ್ನಿನ ಹಾಳು-ಬೀಳಿನ ರೂಕ್ಷತೆಯಲ್ಲಿ ಆ ಜನಕ್ಕೆ ತಂಪನ್ನು ತಂದ ಪೈಗಂಬರನ ಸ್ಮರಣೆ; ಆಫ್ರಿಕಾವನ್ನು ಕಂಡಾಗ, ಅದು ಬಿಳಿಯರ ದಬ್ಬಾಳಿಕೆಗೆ ಪಟ್ಟ ಪರಿಭವ ಮತ್ತು ‘ಹೆದರಬೇಡ ಆಫ್ರಿಕವೆ, ಬರಬಹುದು ನಿನ್ನ ಹುಣ್ಣಿಮೆ ನಾಳೆ’ (ಪುಟ. ೩೩) ಎಂಬ ಆಶ್ವಾಸನೆ; ಸುಯೆಜ್ ಕಾಲುವೆಯನ್ನು ಕಂಡಾಗ ಆಫ್ರಿಕಾ ಮತ್ತು ಏಷ್ಯಾವನ್ನು ಬೇರ್ಪಡಿಸಿ ನೂರು ಕಲಹಗಳಿಗೆ ನಾಂದಿಯಾದ ಸಂಗತಿ; ಕ್ರೀಟ್ ಅನ್ನು ಕಂಡಾಗ ಹೋಮರನ ನೆನಪು; ಸ್ತ್ರಾಂಬೋಲಿಯನ್ನು ಕಂಡಾಗ ವಿಸೂವಿಯಸ್ ಅಗ್ನಿ ಪರ್ವತದಿಂದ ಮತ್ತೆ ಮತ್ತೆ ಒದಗಿದ ಅನಾಹುತಗಳನ್ನು ಲೆಕ್ಕಿಸದೆ ಅಲ್ಲೇ ಬದುಕುವ ಜನದ ಧೈರ್ಯದ ಪ್ರಶಂಸೆ; ಕೋರ್ಸಿಕಾ ಕಂಡಾಗ ನೆಪೋಲಿಯನ್ನನ ವೀರ ಜೀವನದ ಸ್ಮರಣೆ ಮತ್ತು ಅವನ ಬದುಕನ್ನು ಕುರಿತ ವ್ಯಾಖ್ಯಾನ ಇತ್ಯಾದಿಗಳನ್ನು ನೋಡಿದರೆ ವಿನಾಯಕರು ಆ ಮೊದಲೆ ತಮ್ಮ ನಿಶ್ಚಿತವಾದ ಪಯಣದ ಹಾದಿಯ ಇತಿಹಾಸವನ್ನೋದಿಕೊಂಡು, ಅಥವಾ ತಮ್ಮ ಅಭ್ಯಾಸದಿಂದ ಆಗಲೇ ತಮ್ಮೊಳಗೆ ಕೂಡಿಸಿಕೊಂಡ ಯುರೋಪಿನ ಇತಿಹಾಸಾನುಭವಕ್ಕೆ, ಈ ಪಯಣದ ಹಾದಿಯಲ್ಲಿ ಅಲ್ಲಲ್ಲಿ ಅಂದಂದು, ಆಯಾ ನಾಡುಗಳನ್ನು ಕಂಡಾಗ ಮಾಡಿದ ವ್ಯಾಖ್ಯಾನದಂತಿದೆ. ಈ ಸಮುದ್ರಗೀತಗಳ ಮೊದಲ ಭಾಗದಲ್ಲಿ ಪ್ರಧಾನವಾದ ವಿಸ್ಮಯ, ಪುರಾಣದ ನೆರವಿನಿಂದ ಅಭಿವ್ಯಕ್ತವಾದರೆ, ಎರಡನೆಯ ಭಾಗದಲ್ಲಿ ಚಿಂತನೆ ಇತಿಹಾಸದ ನೆರವಿನಿಂದ ಅಭಿವ್ಯಕ್ತವಾಗಿದೆ.

ಮೂರನೆಯ ಭಾಗವಾದ ‘ಹಡಗ’ ಈ ಹಿಂದಿನ ಭಾಗಗಳಿಂದ ಭಿನ್ನವಾದದ್ದು. ಇಲ್ಲಿ ಹಿಂದಿದ್ದ ವಿಸ್ಮಯವಾಗಲಿ, ಇತಿಹಾಸವಾಗಲಿ ಪ್ರಧಾನವಾಗಿಲ್ಲ. ಇಲ್ಲಿನ ಕಾವ್ಯಶಕ್ತಿ ಹಿಂದಿನೆರಡು ಭಾಗಗಳಲ್ಲಿಯಂತೆ ಕೇವಲ ವಿವರಣಾತ್ಮಕವಾದ ವ್ಯಾಖ್ಯಾನ ವಿಧಾನದಲ್ಲಿ ಮಾತ್ರ ನಿಲ್ಲದೆ, ಕ್ವಚಿತ್ತಾಗಿ ಸಂಕೇತ-ಪ್ರತಿಮಾ ನಿರ್ಮಾಣಗಳ ಮೂಲಕ,ಬದುಕಿನ ದಾರುಣವಾದ ಜೀವನಾನುಭವಗಳನ್ನು ಕಾಣಿಸುವ ಕಡೆಗೆ ಮುಂದುವರಿದಿದೆ. ಹಡಗಿನ ಮೇಲೆ ನಿಂತು ವಿವಿಧ ಕಾಲಮಾನಗಳಲ್ಲಿ, ಅಪಾರವಾದ ಜಲರಾಶಿಯನ್ನು ಕಂಡಾಗಿನ ವಿಸ್ಮಯವಾಗಲಿ, ಕಡಲತೀರದ ನಾಡುಗಳನ್ನು ಕಂಡಾಗ ಅವುಗಳ ಐತಿಹಾಸಿಕ ನೆಲೆಯಲ್ಲಿ ನಡೆಸಿದ ಚಿಂತನೆಯ ಪ್ರತಿಕ್ರಿಯೆಯಾಗಲಿ ಇಲ್ಲಿ ಇಲ್ಲ. ತಾನು ನಿಂತ ಹಡಗನ್ನೇ ಒಮ್ಮೆ ನೋಡಿಕೊಂಡಾಗ, -ನಿಂತ ನೆಲೆಯಿಂದಾಚೆಯ ದೃಶ್ಯದಲ್ಲಿ ತಲ್ಲೀನವಾಗದೆ- ದೃಷ್ಟಿಯನ್ನು ತಾನು ನಿಂತ ಕೇಂದ್ರದ ಕಡೆ ತಿರುಗಿಸಿದಾಗ. ತಾನು ನಿಂತ ಹಡಗು ಒಂದು ವಿಲಕ್ಷಣ ಪ್ರಾಣಿಯಂತೆ ತೋರಿದೆ ಹಡಗನ್ನು ಕುರಿತು ಮೊದಲ ಪದ್ಯ ‘ಉಂಟು’ ಎನ್ನುವುದರಲ್ಲಿ, ಮೊದ ಮೊದಲು ರಮ್ಯತೆಯೇ ಕಾಣಿಸಿದೆ. ತೇಲುವ ಹಡಗು ‘ಅಂಚೆಯಂತೆ ಕತ್ತರಿಸಿ ತೆರೆಗಳನ್ನು ಚಂಚುವಿನಿಂದ’ ‘ಪ್ರಾರ್ಥನ ರಥದಂತೆ’ ‘ಮೇಘ ಶ್ಯಾಮನ ಮೈಬಣ್ಣದ ಸಲಿಲದಿಂದ ತನಿವೆಣ್ಣೆಯ ತೆಗೆವ ಗೋಪಿಯಂತೆ’ ಕಂಡರೂ, ಕ್ರಮೇಣ ಆ ಹಡಗದ ಆಕಾರ-ವಿಕಾರಗಳ ವಿಲಕ್ಷಣತೆಯ ಅನುಭವವಾಗ ತೊಡಗಿದಂತೆ, ಆ ರಮ್ಯ ಭಾವನೆಗಳು ಉದುರಿಹೋಗಿ-

ಅಟ್ಟಂ ಬಟ್ಟಂ ಅರಣ್ಯದೊಳಗಿಂದ
ಸಪ್ತ ಸಮುದ್ರಗಳ ವ್ಯಾಪ್ತಿಯೊಳಗಿಂದ
ವಿಂಧ್ಯಾಚಲದಂತೆ ಗಂಭೀರವಾಗಿ
(ಪುಟ. ೪೮)

ಕವಿಯ ಪ್ರತಿಮಾನಿರ್ಮಿತಿ ಪರ್ವತಾರಣ್ಯಗಳ ನೆನಪಿಗೆ ನುಗ್ಗುತ್ತದೆ.ಆದರೆ, ಒಡನೆಯೆ-

ಹಡಗವಲ್ಲಯ್ಯಾ ಇದು
ಹಡಗಡಕ ನಿಶಾಚರ
ಅಹಿರಾವಣ ಮಹಿರಾವಣ
ಶೂರ್ಪನಖಿಯ ಆಪ್ತಬಂಧು
(ಪುಟ. ೪೯)

ಎನ್ನುವ ರಾಕ್ಷಸ ಸ್ಮರಣೆಗಳಿಂದ ಉಚಿತವಾದ ಅಭಿವ್ಯಕ್ತಿಯನ್ನು ತಾಳಿದೆ. ಹಡಗು ಒಂದು ರಾಕ್ಷಸ ಪ್ರವೃತ್ತಿಯ ಪ್ರತೀಕವಾಗಿ ಚಿತ್ರಿತವಾಗಿದೆ. ಅಷ್ಟೇ ಅಲ್ಲ, ಹಡಗ-

ಹೇಗೆ ಕಣ್ಣ ಬಿಡುತಿದೆ ನೋಡು
ಒಕ್ಕಣ್ಣ ರಾಕ್ಷಸನಂತೆ,
ಹೇಗೆ ಒದ್ದಾಡುತಿದೆ ನೋಡು
ಚಿಗರೆಯ ಮೆದ್ದ ಹೆಬ್ಬಾವಿನಂತೆ
…………………………..
ಮಿಕಿ ಮಿಕಿ ನೋಡುತಿದೆ ನೋಡು
ಇಲಿಯ ಗುದ್ದುಗಳಂಥ ದಿಟ್ಟಿಗಳಿಂದ
ಮೈತುಂಬ ದೀಪ ಹಚ್ಚಿಕೊಂಡು
ಹೊಟ್ಟೆ ತುಂಬ ಇದ್ದಲಿಯಿರಿಸಿ
ತನ್ನ ಸ್ನಾಯುವಿನ ಮೇಲೆ
ಧಮನಿಯ ಕೆಳಗೆ
ಓಡಾಡಿಸುತ್ತಿದೆ ನಮ್ಮನ್ನು
(ಪುಟ. ೫೦)

ಎಂಬ ವರ್ಣನೆಯಿಂದ ಹಡಗು ಈ ಬಗೆಯ ವಿಕೃತಿಗೆ, ವಕ್ರತೆಗೆ, ರೂಕ್ಷತೆಗೆ ಸಂಕೇತವಾಗುತ್ತದೆ “ಹಡಗದ ಯಂತ್ರಗಳ ಅಂಗಾಂಗಗಳು; ನೃತ್ಯ ಶಾಲೆಯ ಸ್ವಚ್ಛಂದ ಜೀವನ; ಹಡಗಕ್ಕೆ ಕಲ್ಲಿದ್ದಲಿಯನ್ನು ಉಣಿಸುವ, ಬಿಳಿಯರ ದಾಸ್ಯದಲ್ಲಿ ಬೆನ್ನು ಮುರಿಯುವಂತೆ ದುಡಿಯುವ ಕರಿಯರ ಕೀಳು ಬಾಳುವೆ; ಯಂತ್ರಯುಗದ ಪರಿಣಾಮವಾಗಿ ಬೆಳೆದ ಅನ್ಯಾಯ ಅನೀತಿಗಳೆಲ್ಲ ಬಂದು ಸೇರಿದ ಹಾಗೆ” ಕಂಡು, ಈ “ಹಡಗು ಚಿಗರೆಯ ಮೆದ್ದ ಹೆಬ್ಬಾವಿನಂತೆ”[1] ಮಾನವತೆಯ ಮೌಲ್ಯಗಳನ್ನೆಲ್ಲಾ ನುಂಗಿದ ಆಘಾತವನ್ನು ಕವಿ ಅನುಭವಿಸುತ್ತಾನೆ. ಹಡಗಿನ ಒಳಭಾಗದ ನೌಕಾಯಂತ್ರಕ್ಕೆ ಪ್ರವೇಶಿಸಿದ ಕೂಡಲೆ ‘ರವರವನರಕ’ ‘ಯಮಲೋಕ’ಗಳ ನೋಟವೇ ಬಂದಂತಾಗಿ-

ನಿಲ್ಲಲು ನೆಲವಿಲ್ಲದಾಯ್ತು, ಮರೆಹೋಗಲು ಮರುಕವಿಲ್ಲವಾಯ್ತು,
ಕಣ್ಗೆ ಕತ್ತಲೆಯಾಯ್ತು-

ಅಯ್ಯೊ! ಸತ್ತೆ! ಸತ್ತೆ! ಸತ್ತೆ!!

(ಪುಟ. ೬೧ )

ಎಂದು ಕವಿ ಜೀವ ಬೆಬ್ಬಳಿಸುತ್ತದೆ. ಈ ಹಡಗ ಆಧುನಿಕ ಯಂತ್ರ ನಾಗರಿಕತೆಯ ಪ್ರತೀಕವಾಗಿ, ಕ್ರೌರ‍್ಯ, ದಾಸ್ಯ, ಅನ್ಯಾಯ, ಕೃತಕತೆಗಳ ಭಯಂಕರ ಲೋಕವಾಗಿ, ಕವಿಚೇತನವನ್ನು ಒಂದು ನಿರಾಸೆಯ ಅಂಚಿಗೆ ನೆಲೆಯಿಲ್ಲದ ಕಂದರದ ಕಡೆಗೆ ಒಯ್ಯುತ್ತದೆ. ಆದರೆ ವಿನಾಯಕರ ಮೂಲ ಕಾವ್ಯಪ್ರಜ್ಞೆ ಈ ನೈರಾಶ್ಯದ ನೆಲೆಗೆ ನಿಲ್ಲತಕ್ಕದ್ದಲ್ಲ; ಅದನ್ನು ಹಾದು ಮುಂದೆ ಹೋಗತಕ್ಕದ್ದು. ಬದುಕಿನ ಕ್ರೌರ‍್ಯ, ಅನ್ಯಾಯ, ಯಾಂತ್ರಿಕತೆ, ಕೃತಕತೆಗಳ ವಿಕೃತಿಯಿಂದ ಒದಗುವ ಆಘಾತ ಕವಿಯನ್ನು ತತ್ತರಿಸುವಂತೆ ಮಾಡಿದರೂ ನೆಲೆಗೆಡಿಸುವುದಿಲ್ಲ. ಹುಟ್ಟಿನೊಡನೆ ಕೂಡಿಬಂದ ಶ್ರದ್ಧೆಯನ್ನಾಗಲಿ, ಆದರ್ಶಪರತೆಯನ್ನಾಗಲೀ, ಕವಿ ಕೈಬಿಟ್ಟು, ತತ್ಕಾಲಕ್ಕೆ ತಾನು ಕಂಡ ನೈರಾಶ್ಯವನ್ನೆ ದೊಡ್ಡದು ಮಾಡಿ ಹುಯ್ಯಲಿಡುವುದಿಲ್ಲ. “ಹಡಗದ ವಾಸ್ತವಿಕ ಜೀವನ ಕಾವ್ಯದ ವಿಶೇಷ ಸಾಮಗ್ರಿಯಾಗಿ ಕವಿಯನ್ನು ಕೆರಳಿಸುತ್ತದೆ. ಆದರೆ ಕವಿಯ ಆದರ್ಶಪ್ರಿಯತೆ ಮಾತ್ರ ಇದರ ಆಘಾತದಿಂದ ಕಡಮೆಯಾಗುವುದಿಲ್ಲ. ಆದರೆ ಅದೊಂದು ಜೀವನವನ್ನಳೆಯುವ ಮಾನದಂಡವಾಗಿ ನಿಲ್ಲುತ್ತದೆ.”[2] ಆದುದರಿಂದಲೆ ಕವಿ-

ಅಲ್ಲ! ನರಕವಲ್ಲವಿದು ಮಾನವನು ನಿರ್ಮಿಸಿದ ಯಂತ್ರಶಾಲೆ-
…………………………………………………….
ನೋಡು ಸಮುದ್ರವ ಕೊರೆದು ನಡೆದೀಮಹಾ ಯಂತ್ರವನು!
ಅನುಭವಿಸಿದರ ರುದ್ರಭಯಂಕರ ಸೌಂದರ್ಯವನು
ಭವ್ಯ ವಿಭವವನು, ಕ್ರಮವನು, ಸಿಸ್ತನು!
ಯಂತ್ರಾಗಾರವಹುದಿದು ಕಬ್ಬಿಣದಿ ವಿಜ್ಞಾನ-ಕವಿಯೊರೆದ ಮಹಾಕಾವ್ಯ!

(ಪುಟ. ೬೧, ೬೨)

ಒಂದು ಮಾಟವಿದೆ ಮೋಟು ಮರದಂಥ ಈ ಹಡಗದಲ್ಲಿ
ಒಂದು ಕ್ರಮವಿದೆ-ಯಂತ್ರಯುಗದ ಈ ಭ್ರಮೆಯಲ್ಲಿ!
ಅಂದವಿದೆ-ಚಂದವಿದೆ ಸಹ! ತಿಳಿದು ನೋಡಲೀಗ!

(ಪುಟ. ೫೧)

ಎನ್ನುವ  ನಿಲುವಿಗೆ ನಿಲ್ಲುತ್ತಾನೆ. ಬದುಕಿನ ಅಸ್ತವ್ಯಸ್ತತೆಯಲ್ಲಿಯೂ, ಅಲ್ಲೋಲ ಕಲ್ಲೋಲಗಳಲ್ಲಿಯೂ, ಅನ್ಯಾಯ, ವಕ್ರತೆ, ವಿಕೃತಿಗಳಲ್ಲಿಯೂ, ತತ್ಕಾಲಕ್ಕೆ ಮೂಡುವ ಯಾವುದೋ ನೈರಾಶ್ಯವಷ್ಟೇ ಅಲ್ಲದೆ, ಅದರ ಹಿಂದೆ ಯಾವುದೋ ಒಂದು ಕ್ರಮ, ಒಂದು ಶಿಸ್ತು, ಒಂದು ಅಂದವೂ ಇದೆ ಎನ್ನುವ ಪ್ರಜ್ಞೆ ಕವಿಯಲ್ಲಿ ಎಚ್ಚರವಾಗುತ್ತದೆ. ಈ  ಒಂದು ದೃಷ್ಟಿ ಮತ್ತು ಎಲ್ಲದರ ಹಿಂದಿರುವ ಯಾವುದೋ ಅಗೋಚರವಾದ ನಿಯಮವನ್ನು ನೆಮ್ಮುವ ಶ್ರದ್ಧೆ ಕವಿ ವಿನಾಯಕರ ತಲೆಮಾರಿನ ದೊಡ್ಡ ಕವಿಗಳ ಜೀವನ ಶ್ರದ್ಧೆಯೂ ಹೌದು.

ನಾಲ್ಕನೆಯ ಭಾಗವಾದ ‘ಬ್ರಿಟನ್ನಿನ ದ್ವೀಪದಲ್ಲಿ’ ಬ್ರಿಟನ್ನಿನ ಜೀವನದ ವಿಲಾಸ ವೈಭವಗಳಿಗೆ, ಅಲ್ಲಿನ ನಿಸರ್ಗದ ರಮ್ಯತೆಗೆ ಕವಿ ಮೆಚ್ಚುಗೆಯನ್ನು, ಒಲವನ್ನು ತೋರಿಸಿದರೂ, ಈ ವಿಲಾಸ-ಚೆಲುವುಗಳ ಹಿನ್ನೆಲೆಯಲ್ಲಿ ಭಾರತೀಯನಾದ ಕವಿ, ತನ್ನ ನಾಡಿನ ದುಸ್ಥಿತಿಯನ್ನು ನೆನೆದು ಪಟ್ಟ ವಿಷಾದವೆ ಸ್ಥಾಯಿಯಾಗಿದೆ. ಪಾಶ್ಚಾತ್ಯ ದೇಶಿಗಳಿಗೆ ವಿದ್ಯಾಭ್ಯಾಸಕ್ಕೆಂದು ಹೋದ ಎಷ್ಟೋ ಭಾರತೀಯರು, ಅಲ್ಲಿನ ವಿಲಾಸ ವೈಭವಗಳಿಗೆ ಚೆಲುವಿಗೆ ಮಾರುಹೋಗಿ ತಮ್ಮ ನಾಡನ್ನೇ ಮರೆಯುವುದುಂಟು. ಆದರೆ ಸ್ವಾತಂತ್ರ್ಯಪೂರ್ವದಲ್ಲಿ, ಭಾರತವನ್ನೂ ಬ್ರಿಟನ್ನಿನ ದಾಸ್ಯದಲ್ಲಿ ಬದುಕುತ್ತಿದ್ದ ಕಾಲದಲ್ಲಿ ಇಂಗ್ಲೆಂಡಿಗೆ ಹೋದ ವಿನಾಯಕರೊಳಗಿನ ರಾಷ್ಟ್ರಪ್ರಜ್ಞೆಯುಳ್ಳ ದೇಶಭಕ್ತ, ಇಂಗ್ಲೆಂಡನ್ನು ನೋಡಿ, ಕೆರಳಿ-

ನಿನ್ನ ನಾಡಿದು ನಂದವನವೆನ್ನುತಿದ್ದೆನು: ಆಂಗ್ಲದೇವಿ!
ಆದರೆ ನಿನ್ನ ಸೌಂದರ್ಯವು ಭಯಾನಕವಾಗಿಹುದೆನಗೆ!
…………………………………………………
ನೀನು ಆಂಗ್ಲ ನಾನು ಭಾರತೀಯ-
ಬಾರದಿಲ್ಲಿ ಹೃದಯದ ಸಂಪತ್ತು!
ನೀನು ಸುಂದರಳಹುದು: ಆದರೆ ನಿನ್ನ ಸೌಂದರ್ಯವ
ಗಮನಿಸಲಾರೆ: ಕ್ಷಮಿಸೆನ್ನನು ಆಂಗ್ಲದೇವಿ!
(ಪುಟ. ೬೬)

ಎಂದು ಧೈರ್ಯವಾಗಿ, ಆದರೆ ನಯವಾಗಿ ಪ್ರತಿಕ್ರಿಯೆಯನ್ನು ತೋರಿಸುತ್ತಾನೆ. ಅಷ್ಟೇ ಅಲ್ಲ, ಈ ಸೌಂದರ‍್ಯ ವಿಲಾಸಗಳ ತವರುಮನೆಯಾದ ಇಂಗ್ಲೆಂಡ್ ತನ್ನ, ತನ್ನಂಥವರ ನಾಡನ್ನು ಶೋಷಿಸಿ ಮುಂದುವರಿದಿದ್ದೆಂಬ ಕಹಿಯನ್ನು ಬಲ್ಲ ಕವಿ-

ನಿನ್ನ ಮಕ್ಕಳು ಹಿಂಡಿ ಹಿಪ್ಪೆ ಮಾಡಿದ ಸಿಪ್ಪೆ ನಾನು-
ನನ್ನ ಬಣ್ಣನೆ ನಿನಗೇಕೆ ಬೇಕು?
………………………………………………
ನನ್ನ ನಾಡಿನ ಹಾಡಿಗೆಂದು ಮುಡಿಪಿರಲಿ ನನ್ನ ಜೀವ
(ಪುಟ. ೬೬)

ಎಂದು ಕಟುವಾಗಿ ನಿವೇದಿಸಿಕೊಳ್ಳಲೂ ಹಿಂಜರಿಯುವುದಿಲ್ಲ. ಈ ಆಂಗ್ಲ ಭೂಮಿಯ ನಡುವೆ, ಈ ಕವಿ ತಾನು ವಿದೇಶೀಯನೆಂಬ, ಈ ದೇಶದ ಗುಲಾಮನೆಂಬ ನೋವನ್ನು ಅನುಭವಿಸಿ-

ಆಂಗ್ಲ ಭೂಮಿಯಲಿಂದು ವನವಾಸವಿದ್ದು
ನೇಹಿಗರ ತೊರೆದೊಲವಿನುಪವಾಸಬಿದ್ದು
ಎಲ್ಲೆಡೆಗೆ ಸಾರ್ವಭೌಮರ ನೆಲದ ಮೇಲೆ
ಆಳೆಂಬ ತಿಳಿವಿನಂಕುಶ ತಿವಿವ ವೇಳೆ
ಬೀದಿ ಹೋಗುವ ನಾಯಿ ಕೂಡ ಬೊಗಳುವುದು
ಎಲ್ಲಿಂದಲೋ ಹಕ್ಕಿ ಕೂಡ ತೆಗಳುವುದು
(ಪುಟ. ೬೩

ಎಂಬ ಪರಾಭವ ಭಾವವನ್ನನುಭವಿಸಿದ್ದು, ಸ್ವಾತಂತ್ರ್ಯಪೂರ್ವ ಭಾರತದ ಸಂವೇದನೆಯನ್ನು ಕವಿ ವಿನಾಯಕರು ಪಟ್ಟ ತೀವ್ರತೆಯನ್ನು ಸೂಚಿಸುತ್ತದೆ. ಸ್ವಾತಂತ್ರ್ಯಪೂರ್ವದ ಸಮಕಾಲೀನ ಪ್ರಜ್ಞೆಯ ಅತ್ಯುತ್ತಮ ಅಭಿವ್ಯಕ್ತಿಯಾಗಿಯೂ ಇದು ಗಮನಾರ್ಹವಾಗಿದೆ. ಇಷ್ಟೇ ಅಲ್ಲದೆ, ಕವಿ, ತಾನು ಕಲಿಯಲೆಂದು ಹೋದ ರೀತಿಯನ್ನು ಕೂಡ ವಿಮರ್ಶೆಯ ಒರೆಗಲ್ಲಿಗೆ ಹಚ್ಚಿನೋಡಿ-

ಇಲ್ಲಿ ಸಾಮ್ರಾಜ್ಯವಿತ್ತು ಸಕಲ ಸಂಪತ್ತಿತ್ತು
ಕುಬೇರನ ಖಜಾನೆಯಿತ್ತು!
ಇಂದಿಗೆ ಭಾರತೀಯರಿಗೆ ತಿನ್ನಲು ಕೂಳಿಲ್ಲ
ಕುಡಿಯಲು ನೀರಿಲ್ಲ!
ಇದೊಂದು ಪರಮ ವಿಚಿತ್ರ!
……………………………………
ಇಂದು ಬ್ರಿಟನ್ನಿಗೆ ನಡೆದಿಹರು ಜೊತೆಗಾರರು
ಹಿಡಿಹೊನ್ನಾಸೆಗೆ ನಾನು-ವಿದ್ಯೆಯ ಪಡೆಯಲೆಂದು
ಇದೊಂದು ಪರಮ ವಿಚಿತ್ರ
(ಪುಟ. ೮೫)

ಎಂದು ತಾನು ಆಳರಸರ ನೆಲಕ್ಕೆ ಹಿಡಿ ಹೊನ್ನಿನಾಸೆಗೆ, ಹೊಟ್ಟೆಯ ಪಾಡಿಗೆ ವಿದ್ಯೆ ಕಲಿಯಲು ಬಂದ ವಿಚಿತ್ರಕ್ಕೆ ವಿಷಾದ ಪಡುತ್ತಾನೆ. ಪರತಂತ್ರದ ವಿಷಾದ, ಸ್ವಾತಂತ್ರ್ಯದ ಹಂಬಲ, ಆತ್ಮಗೌರವದ ದೃಢತೆ ಮತ್ತು ಸ್ವಾತ್ಮ ವಿಮರ್ಶೆ-ಇವು ೧೯೩೬-೩೮ರ ಕಾಲದ ಕವಿತೆಯಲ್ಲಿ ನಿಜವಾಗಿಯೂ ಸತ್ವಪೂರ್ಣ ಸಂಗತಿಗಳಾಗಿವೆ, ಮಾತ್ರವಲ್ಲ, ಕವಿ ವಿನಾಯಕರ ವ್ಯಕ್ತಿತ್ವದ ಲಕ್ಷಣವನ್ನು ಸ್ಫುಟಪಡಿಸುತ್ತವೆ.

ನಾಲ್ಕು ದಶಕಗಳಷ್ಟು ಹಿಂದೆ, ಕನ್ನಡದ ನವೋದಯ ಕಾವ್ಯವಿನ್ನೂ ಹಳೆಯ ಬಂಧಗಳ ಬಂದಿವಾಸದಿಂದ ಮುಕ್ತವಾಗಲು ಹೋರಾಡುತ್ತಿದ್ದ ಆ ಕಾಲದಲ್ಲಿ ರಚಿತವಾದ ಈ ‘ಸಮುದ್ರಗೀತಗಳು’ ಕಾವ್ಯ ವಸ್ತುವಿನ ಹೊಸತನದಿಂದ ಮಾತ್ರವಲ್ಲದೆ, ಅವುಗಳ ರೀತಿಯಿಂದಲೂ ಮಹತ್ವದವುಗಳಾಗಿವೆ. ಸಮುದ್ರಯಾನದಂತಹ ಅನುಭವವೆ ಕನ್ನಡ ಕವಿಯ ವಸ್ತುವಾದ ಕಾರಣದಿಂದ, ಈ ಕಾವ್ಯದ ವಿಷಯ ವೈವಿಧ್ಯ ಮತ್ತು ವಿಸ್ತಾರ ಬಂದದ್ದು ಕನ್ನಡ ಕಾವ್ಯಕ್ಕೆ ಹೊಸತು. ಈ ಹೊಸ ಅನುಭವದ ಒತ್ತಡದಿಂದ ಹೊಸ ತಂತ್ರ-ರೀತಿಗಳ ಆವಿಷ್ಕಾರವಾಗಿ, ಕವಿಯ ಕಾವ್ಯ ಪ್ರಜ್ಞೆಗೆ ‘ಕ್ರಾಂತಿಯ ತೀವ್ರತೆ’ ಸಹಜವಾಗಿಯೇ ಬಂದಿದೆ. ಈ ಕವನ ಸಂಗ್ರಹದ ಮೊದಲ ಪದ್ಯವಾದ ‘ಪ್ರತಿಜ್ಞೆ’ ಎಂಬುದರಲ್ಲಿ ಈ ಅಂಶ ಹೇಗೆ ಬಂದಿದೆ ಎಂಬುದನ್ನಾಗಲೆ ಹಿಂದೆ ಪ್ರಸ್ತಾಪಿಸಲಾಗಿದೆ. ಶ್ರೀ ಕುರ್ತಕೋಟಿಯವರು ವಿನಾಯಕರ ಪ್ರಯೋಗಗಳನ್ನು ಕುರಿತು “ವಿನಾಯಕರ ಪ್ರಯೋಗಗಳು ಮುಂದಿನ ತಲೆಮಾರಿನವರಿಗೆ ಮಹತ್ವದ್ದೆನಿಸಲಿಕ್ಕಿಲ್ಲ. ಇದಕ್ಕೆ ಕಾರಣವೆಂದರೆ ವಿನಾಯಕರು ಸಂಪ್ರದಾಯದ ನಿರ್ಮಾಣದಲ್ಲಿ ಶ್ರದ್ಧೆಯನ್ನು ಕಳೆದುಕೊಳ್ಳಲಿಲ್ಲ. ಅವರ ಪ್ರಯೋಗಗಳು ಸಂಪ್ರದಾಯ ವಿರುದ್ಧವಾಗಿ ನಡೆದ ಪ್ರತಿಕ್ರಿಯೆಗಳಲ್ಲ.”[3] ಎಂದು ಅಭಿಪ್ರಾಯ ಪಡುತ್ತಾರೆ. ಈ ಅಭಿಪ್ರಾಯದ ಮೊದಲ ವಾಕ್ಯವನ್ನು ಬಿಟ್ಟರೆ, ಉಳಿದದ್ದು ವಿನಾಯಕರ ಕಾವ್ಯ ಪ್ರಯೋಗದ ಮುಖ್ಯ ಲಕ್ಷಣವನ್ನು ಹೇಳುತ್ತದೆ ಎಂದು ಒಪ್ಪಿದರೂ, ಯಾವ ಒಂದು ಪ್ರಯೋಗವೇ ಆಗಲಿ ಮಹತ್ವದ್ದೆನಿಸಬೇಕಾದರೆ, ಸಂಪ್ರದಾಯ ನಿರ್ಮಾಣದಲ್ಲಿ ಶ್ರದ್ಧೆಯನ್ನು ಕಳೆದುಕೊಂಡು, ಸಂಪ್ರದಾಯದ ವಿರುದ್ಧವಾಗಿ ನಡೆದ ಪ್ರತಿಕ್ರಿಯೆಗಳಾಗಿರಬೇಕು ಎನ್ನುವ ಮಾತನ್ನು ಒಪ್ಪಲಾಗುವುದಿಲ್ಲ ಪ್ರಯೋಗ ಎಂದರೆ ಪರಂಪರೆಯ ವಿರುದ್ಧ ಬಂಡೆದ್ದು ನಿಂತುದರ ಪರಿಣಾಮವೆ ಆಗಬೇಕಾಗಿಲ್ಲ. ಪ್ರಯೋಗಕ್ಕೆ ನಿಂತವರು ಕೆಲವುವೇಳೆ ಹಿಂದಿನ ಪರಂಪರೆಯ ನಿಸ್ಸತ್ವಗಳ ಬಗ್ಗೆ ಘೋಷಿಸುವ ಅಂಶದಲ್ಲಿ ಈ ಒಂದು ಮನೋಧರ್ಮ ವ್ಯಕ್ತವಾಗುವಂತೆ ತೋರುವುದೇನೋ ನಿಜ; ಆದರೆ ಸಂಪ್ರದಾಯಕ್ಕೆ ವಿರೋಧವಾಗಿ ಪ್ರತಿಕ್ರಿಯೆಯನ್ನು ತೋರುವುದರ ಮೂಲಕ ಹೊಸತನವನ್ನು ಸಾಧಿಸಿದವರು ಕೂಡಾ, ಮತ್ತೆ ಸಂಪ್ರದಾಯದ ಸತ್ವಗಳ ಬಗ್ಗೆ ಕಳಕಳಿಯನ್ನು ವ್ಯಕ್ತಪಡಿಸುವ ಮತ್ತು ಅದರಲ್ಲಿ ತಾವೂ ಬೇರೂರದೆ ಬೆಳೆಯಲಾರೆವೆಂಬ ಎಚ್ಚರವನ್ನು ಪ್ರಕಟಿಸುತ್ತಾರೆಂಬುದನ್ನೂ ಮರೆಯಬಾರದು. ಅಲ್ಲದೆ ಕಾವ್ಯ ಪ್ರಯೋಗದಲ್ಲಿ ಈ ಒಂದು ಪ್ರತಿಕ್ರಿಯಾ ರೂಪದ ರಭಸ-ಆವೇಶಗಳಿಲ್ಲದೆಯೂ ಸಂಪ್ರದಾಯದೊಳಗಿನಿಂದಲೇ ದಾರಿ ಮಾಡಿಕೊಂಡು ಹೊಸತು ಆವಿರ್ಭವಿಸಲು ಸಾಧ್ಯ ಎಂಬುದೂ ಗಮನಿಸಬೇಕಾದ ವಿಚಾರ. ಸುತ್ತಣ ಪ್ರಕೃತಿಯಲ್ಲಿ ಕಾಣಿಸಿಕೊಳ್ಳುವ ಎಲ್ಲ ಬದಲಾವಣೆಗಳೂ ಹೀಗೇ ಆಗುತ್ತವೆ ಎಂಬುದು ತಿಳಿದ ವಿಷಯ. ಈ ಪ್ರಕೃತಿ ಸಹಜವಾದ ನಾವೀನ್ಯತೆ ಈ ಸಮುದ್ರಗೀತೆಗಳಲ್ಲಿದೆ. ಯಾವ ಒಂದು ಕಾವ್ಯಪ್ರಯೋಗವಾಗಲಿ ಮಹತ್ವದ್ದೆನಿಸಬೇಕಾದರೆ ಕೇವಲ “ಸಂಪ್ರದಾಯದ ವಿರುದ್ಧವಾಗಿ ನಡೆದ ಪ್ರತಿಕ್ರಿಯೆ”ಯಿಂದಲ್ಲ; ಅವುಗಳೊಳಗಣ ಸಾರ್ವಕಾಲಿಕ ಸತ್ವದಿಂದ. ಅಲ್ಲದೆ ಎಲ್ಲ  ಕಾವ್ಯ ಪ್ರಯೋಗಗಳಿಗೂ ಅವುಗಳ ಕಾವ್ಯ ಮೌಲ್ಯದಿಂದ ಬೇರೆಯಾಗಿಯೇ ನೋಡಬಹುದಾದ ಐತಿಹಾಸಿಕ ಮಹತ್ವವೂ ಒಂದುಂಟು. ಈ ಎರಡು ದೃಷ್ಟಿಗಳಿಂದ ನೋಡಿದರೂ,  ನಲವತ್ತು ವರ್ಷಕ್ಕೂ ಹಿಂದೆ ರಚಿತವಾದ ಈ ‘ಸಮುದ್ರಗೀತಗಳು’ ಅದರ ಮುಂದಿನ ತಲೆಮಾರಿನವರಾದ ನಮ್ಮ ಪಾಲಿಗೆ ಮಹತ್ವದವುಗಳೆನಿಸುತ್ತವೋ ಇಲ್ಲವೋ, ಆ ಭವಿಷ್ಯದ ಮಾತು ನಮಗೆ ಅಪ್ರಕೃತ.

ವಿನಾಯಕರ ಈ ಪ್ರಯೋಗಗಳು ಸಂಪ್ರದಾಯದ ಸತ್ವವನ್ನು ಸಮನ್ವಯಿಸಿಕೊಂಡು ಆವಿರ್ಭವಿಸಿದವು ಎನ್ನುವ ಮಾತು ಅವರ ವ್ಯಕ್ತಿತ್ವದ ಪ್ರಧಾನ ಲಕ್ಷಣವನ್ನು ವ್ಯಾಖ್ಯಾನಿಸುತ್ತದೆ. ಕಾವ್ಯವೆಂಬುದು ಮೂಲತಃ ಒಂದು ವಿಶಿಷ್ಟವ್ಯಕ್ತಿತ್ವದ ಅಭಿವ್ಯಕ್ತಿಯೆಂಬುದು ನಿರ್ವಿವಾದವಾದ ಸಂಗತಿ. ಪ್ರಯೋಗಪ್ರಿಯತೆ; ಪುರಾಣೇತಿಹಾಸಗಳ ಪ್ರಜ್ಞೆ; ಚಿಂತನಪರತೆ; ಮಾನವೀಯ ಮೌಲ್ಯಗಳಲ್ಲಿ ಶ್ರದ್ಧೆ; ಸ್ವಾತಂತ್ರ್ಯ ಮತ್ತು ಆತ್ಮಪ್ರತ್ಯಯಗಳ ಬಗ್ಗೆ ತೀವ್ರವಾದ ಹಂಬಲ; ಮತ್ತು ವಿರ್ಮಶನ ಬುದ್ಧಿ-ಇವುಗಳನ್ನು ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡು ಅಭಿವ್ಯಕ್ತವಾದ ಈ ‘ಸಮುದ್ರ ಗೀತಗಳು’ ಹನ್ನೆರಡನೆಯ ಶತಮಾನದಂದು ಮೊದಲಾದ ವಚನಕಾರರ ಮುಕ್ತ ಛಂದೋವಿಧಾನದ ಸತ್ವವನ್ನು ಒಳಗೊಂಡು, ಇವತ್ತಿನ ಆಡುಮಾತಿನ ಸೊಗಸನ್ನು ಕೂಡಿಸಿಕೊಂಡು, ವಿರೋಧಾಭಾಸಗಳನ್ನು ರಚನೆಯ ಮೂಲವನ್ನಾಗಿಸಿಕೊಂಡು, ಇಂದಿನ ನವ್ಯಕಾವ್ಯದ ರೂಪರೇಷೆಗಳನ್ನು ಬಹು ಹಿಂದೆಯೇ ಪ್ರಕಟಿಸಿದ್ದು ಮಹತ್ವದ ಸಂಗತಿಯಾಗಿದೆ. ಅಷ್ಟೇ ಅಲ್ಲ ಕನ್ನಡ ಕಾವ್ಯ ರಸಿಕರು ಗೋಕಾಕರ ಕಾವ್ಯದ ಬಗ್ಗೆ ಮೊಟ್ಟ ಮೊದಲು ಆಸಕ್ತಿಯನ್ನು ತಾಳಲು ಪ್ರಾರಂಭಿಸಿದ್ದು ಅವರ ‘ಸಮುದ್ರ ಗೀತಗಳು’ ಕೃತಿಯ ಮೂಲಕವೇ.

‘ಸಮುದ್ರ ಗೀತ’ಗಳ ವಿಶೇಷತೆಯನ್ನು ಕುರಿತು ಇನ್ನೂ ಒಂದು ಮಾತನ್ನು ಹೇಳಬೇಕಾಗಿದೆ. ಅದೆಂದರೆ ‘ಸಮುದ್ರ ಗೀತ’ಗಳು ರಚಿತವಾದದ್ದು ನವೋದಯ ಕಾವ್ಯ ತನ್ನ ಉತ್ಸಾಹ ಹಾಗೂ ರಭಸಗಳ ಮೂಲಕ ಉತ್ಕರ್ಷವನ್ನು ಪಡೆದುಕೊಳ್ಳುತ್ತಿದ್ದ ಮೂವತ್ತರ ದಶಕದಲ್ಲಿ. ಆಗ ಧಾರವಾಡದ ‘ಗೆಳೆಯರ ಗುಂಪಿ’ನ ಬೆಳಕಿನಲ್ಲಿ ತಮ್ಮ ಕಾವ್ಯ ಕಾಯಕವನ್ನು ಕೈಕೊಂಡಿದ್ದ ಗೋಕಾಕರು, ಅಂದು ಸಾಕಷ್ಟು ಪ್ರಚಲಿತವಾದ ಭಾವಗೀತಾತ್ಮಕ ಪದ್ಯಬಂಧಗಳ ಮಧ್ಯೆ, ತಮ್ಮದೇ ಆದೊಂದು ಕಾವ್ಯರೂಪವನ್ನು ಆವಿಷ್ಕಾರ ಮಾಡಿಕೊಳ್ಳಲು ಪ್ರಯತ್ನಿಸಿ ಅದರ ಪರಿಣಾಮವಾದ ‘ಸಮುದ್ರ ಗೀತಗಳು’  ಕೃತಿಯನ್ನು ಬರೆದದ್ದು, ಕನ್ನಡ ಕಾವ್ಯದ ದೃಷ್ಟಿಯಿಂದ ಮಾತ್ರವಲ್ಲ ಗೋಕಾಕರ ಕಾವ್ಯ ಪ್ರಯೋಗದ ದೃಷ್ಟಿಯಿಂದಲೂ ಮಹತ್ವದ ಸಂಗತಿಯಾಗಿದೆ. ಗೋಕಾಕರ ಈ ಹೊಸ ಪ್ರಯೋಗಗಳ ಹಿಂದೆ ಹನ್ನೆರಡನೆ ಶತಮಾನದ ಶಿವಶರಣರ ವಚನಗಳ ಪ್ರೇರಣೆಯಿದೆ ಮತ್ತು ಗೋಕಾಕರು ಅದನ್ನು ಸಮರ್ಥವಾಗಿ ಬಳಸಿಕೊಂಡರು ಎಂಬುದು ಗುರುತಿಸಿಕೊಳ್ಳಬೇಕಾದ ವಿಷಯವಾಗಿದೆ. ವಾಸ್ತವವಾಗಿ ‘ಗೆಳೆಯರ ಗುಂಪಿ’ನ ಕಾವ್ಯಮಾರ್ಗವು ಉತ್ತರ ಕರ್ನಾಟಕದ ಸಂತ ಸಾಹಿತ್ಯದಿಂದ ಹಾಗೂ ಅರವಿಂದರ ಸಾಕಷ್ಟು ಪ್ರೇರಣೆಯನ್ನು ಪಡೆದುಕೊಂಡದ್ದು ನಿಜವಾದ ಮಾತಾಗಿದೆ. ಆದರೆ ಗೋಕಾಕರು  ಆ ಗುಂಪಿನ ಅನೇಕರಂತೆ ಅರವಿಂದರ ಆಧ್ಯಾತ್ಮಿಕತೆಯನ್ನೂ, ಪೂರ್ಣಮಾನವತ್ವದ ಕಲ್ಪನೆಯನ್ನು ಸ್ವೀಕರಿಸಿದರೂ, ಕರ್ನಾಟಕದ ಶಿವಶರಣರ ವಚನಗಳ ಮುಕ್ತ ಛಂದೋರೂಪವನ್ನು ಹೊಸ ಕಾಲದ ಅಗತ್ಯಗಳಿಗೆ ಅಳವಡಿಸುವ ಪ್ರಯೋಗದ ಮೂಲಕ, ತಮ್ಮ ವಿಶಿಷ್ಟತೆಯನ್ನು ಕಂಡುಕೊಂಡರು ಮತ್ತು ಅದರ ಪರಿಣಾಮವೇ ಅವರ ‘ಸಮುದ್ರ ಗೀತಗಳು’. ವಸ್ತು ಹಾಗೂ ಛಂದೋರೂಪದ ದೃಷ್ಟಿಯಿಂದ ಗೋಕಾಕರ ‘ಸಮುದ್ರ ಗೀತಗಳು’ ಇಂದಿಗೂ ತಮ್ಮ ಹೊಸತನ ಹಾಗೂ ಹೊಳಪನ್ನು ಉಳಿಸಿಕೊಂಡಿರುವುದಕ್ಕೆ ಕಾರಣ, ಅವು ನಿಜವಾದ ಪ್ರಯೋಗ ಪರಿಣತಿಯ ಅಭಿವ್ಯಕ್ತಿಗಳಾಗಿವೆ ಎನ್ನುವುದೇ ಆಗಿದೆ.

ನವೋದಯ-೧೯೭೬


[1] ಹೇಮಂತ ಕುಲಕರ್ಣಿ : ‘ಸಮಗ್ರ ಗೀತಗಳು’ ಕೃತಿ ಕಾವ್ಯಪರಿಚಯದಲ್ಲಿ, ಪು. vii.

[2] ಅಲ್ಲೆ

[3] ಕೆ.ಡಿ. ಕುರ್ತುಕೋಟಿ : ಯುಗಧರ್ಮ ಹಾಗೂ ಸಾಹಿತ್ಯದರ್ಶನ, ಪು. ೬೦.