‘ನಡೆದು ಬಂದ ದಾರಿ ಕಡೆಗೆ
ತಿರುಗಿಸಬೇಡ-
ಕಣ್ಣ-
ಹೊರಳಿಸಬೇಡ’

ಎಂದು ಮೊದಲಾಗುವ ಗೋಪಾಲಕೃಷ್ಣ ಅಡಿಗರ ‘ನಡೆದು ಬಂದ ದಾರಿ’ ಕವನ ಸಂಗ್ರಹ ಪ್ರಕಟವಾಗುವ ಹೊತ್ತಿಗೆ, ಐವತ್ತರ ದಶಕದ ಹೊಸ್ತಿಲಲ್ಲಿ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸಿದ್ದ ನನಗೆ, ‘ನಡೆದು ಬಂದ ದಾರಿ ಕಡೆಗೆ ತಿರುಗಿಸಬೇಡ, ಕಣ್ಣ ಹೊರಳಿಸಬೇಡ’ ಎಂಬ ಈ ಘೋಷಣೆಯನ್ನು  ಓದಿ ಆದ ಕಸಿವಿಸಿ ಅಷ್ಟಿಷ್ಟಲ್ಲ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪ್ರೊ. ಡಿ.ಎಲ್. ನರಸಿಂಹಾಚಾರ್, ವಿ.ಸೀ., ತ.ಸು.ಶಾಮರಾಯರು, ಕುವೆಂಪು ಇಂಥವರ ಶಿಷ್ಯನಾಗಿ, ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡಿ ಕನ್ನಡ ಸಾಹಿತ್ಯದ ‘ನಡೆದು ಬಂದ ದಾರಿ’ ತಕ್ಕ ಮಟ್ಟಿಗೆ ಪರಿಚಯ ಮಾಡಿಕೊಂಡ ನನಗೆ, ನಮ್ಮ ಕವಿಗಳು ತಮಗಿಂತ ಹಿಂದಿನ ಕವಿ-ಕಾವ್ಯ ಪರಂಪರೆಯೊಂದಿಗೆ ಸೃಜನಾತ್ಮಕ ಪ್ರತಿಕ್ರಿಯೆಯನ್ನು ಅತ್ಯಂತ ಪ್ರೀತಿ ಗೌರವಗಳ ಮೂಲಕ ತೋರುತ್ತ ತಮ್ಮ ಸ್ವಂತಿಕೆಯನ್ನು ಹೇಗೆ ಸಾಧಿಸಿಕೊಂಡರೆಂಬುದನ್ನು ಬಲ್ಲ ನನಗೆ, ‘ನಡೆದು ಬಂದ ದಾರಿ ಕಡೆಗೆ ತಿರುಗಿಸಬೇಡ, ಕಣ್ಣ ಹೊರಳಿಸಬೇಡ’ ಎಂಬ ಅಡಿಗರ ಈ ಘೋಷಣೆ, ತೀರಾ ವಿಲಕ್ಷಣವೂ, ಪರಂಪರೆಯ ವಿರೋಧಿಯೂ ಎಂಬಂತೆ ತೋರಿತು. ಮತ್ತು ಪರಂಪರೆಯ ಬಗ್ಗೆ ನನಗಿದ್ದ ತಿಳವಳಿಕೆಯನ್ನು ಕುರಿತು ಪುನರಾಲೋಚಿಸುವಂತೆ ಮಾಡಿತು.

ಹಾಗಾದರೆ ಅಡಿಗರು ಪರಂಪರೆಯ ವಿರೋಧಿಯೆ? ಪರಂಪರೆಯನ್ನು ವಿರೋಧಿಸಿ ಒಳ್ಳೆಯ ಕವಿತೆಯನ್ನು ಬರೆಯಲು ಸಾಧ್ಯವೆ? ಹಾಗಿದ್ದರೆ ಅವರು ನಿರಾಕರಿಸಿದ ಈ ಪರಂಪರೆ ಯಾವುದು? ಅದು ಭಾರತೀಯವೇ? ಅಥವಾ ಕನ್ನಡದ್ದೆ?

ಅಡಿಗರ ಕಾವ್ಯ ನಿರ್ಮಿತಿಯನ್ನು ಒಟ್ಟಾರೆಯಾಗಿ ನೋಡಿದಾಗ ಮಾತ್ರ ಅಡಿಗರ ಈ ಘೋಷಣಾವಾಕ್ಯಗಳ ನಿಜವಾದ ಅರ್ಥ ತಿಳಿಯುತ್ತದೆ. ಅದೇನೆಂದರೆ ಅಡಿಗರು ಅಂದು ನಿರಾಕರಿಸಿದ್ದು ಭಾರತೀಯವಾದ ಅಥವಾ ಮತ್ತಾವುದೇ ಮೌಲಿಕವಾದ ಪರಂಪರೆಯನ್ನಲ್ಲ. ಯಾಕೆಂದರೆ ಭಾರತೀಯ ಪರಂಪರೆಯ-ವೇದ ಉಪನಿಷತ್ತು  ಪುರಾಣ, ಮಹಾಕಾವ್ಯ ಇತ್ಯಾದಿ ರೂಪದ ಪರಂಪರೆಯ ಪರಿಚಯವನ್ನು ಅವರು ಗಾಢವಾಗಿ ಮಾಡಿಕೊಂಡಿದ್ದರು ಎನ್ನುವುದನ್ನು, ಅವರ ಕಾವ್ಯ ಸಂದರ್ಭದ ಮೈಯೊಳಗೆ ಕಾಣಿಸಿಕೊಳ್ಳುವ ಸಂಕೇತ, ಪ್ರತೀಕ, ಪ್ರತಿಮೆಗಳು ಸ್ಪಷ್ಟಪಡಿಸುತ್ತವೆ. ಹಾಗೆಯೆ ‘ಮೂಲ ಕತ್ತಲಿನಲ್ಲಿ ಮುಳುಗಿ ಹೋಗುತ್ತಿರುವ ಪರಂಪರಾಗತ ತಿಳಿವ ಎತ್ತುವುದು’-ಅಷ್ಟೇ ಅಲ್ಲ ಅದನ್ನು ಕಾಲದ ಅಗತ್ಯಕ್ಕೆ ತಕ್ಕಹಾಗೆ ‘ಆಧುನಿಕಗೊಳಿಸುವುದು’- ನಮ್ಮ ಕರ್ತವ್ಯವಾಗಬೇಕು ಎಂಬ ಎಚ್ಚರವನ್ನೂ ಅವರು ಪ್ರತಿಪಾದಿಸುತ್ತಾರೆ. ಈ ದೃಷ್ಟಿಯಿಂದ ‘ನಡೆದು ಬಂದ ದಾರಿ’ ಎಂಬ ಕವಿತೆಯ ಮೊದಲ ಪಂಕ್ತಿಗಳು ನಮ್ಮ ದೇಶದ ಪರಂಪರೆಯ ನಿರಾಕರಣೆಗೆ ಸಂಬಂಧಪಟ್ಟ ಮಾತುಗಳಲ್ಲ. ಹಾಗೆಯೆ ಇವು ಕನ್ನಡ ಸಾಹಿತ್ಯ ಸಂದರ್ಭದ ಹಳಗನ್ನಡ ಸಾಹಿತ್ಯ ಪರಂಪರೆಯನ್ನು ಕುರಿತ ಪ್ರತಿಕ್ರಿಯೆಗಳೂ ಅಲ್ಲ. ಯಾಕೆಂದರೆ ನಮ್ಮ ಪ್ರಾಚೀನ ಕನ್ನಡ ಕಾವ್ಯಪರಂಪರೆ, ಅಡಿಗರಿಗೆ ಹಾಗೂ ಅವರ ಜತೆಗೆ ಬರೆದ ನವ್ಯ ಲೇಖಕರಿಗೆ ‘ನಡೆದು ಬಂದ ದಾರಿ’ಯಾಗಿರಲೇ ಇಲ್ಲ.

ಈ ಹಿನ್ನೆಲೆಯಿಂದ ಹೇಳುವುದಾದರೆ ತನಗೆ ಹಿಂದಿನ ಹಳಗನ್ನಡ ಸಾಹಿತ್ಯ ಪರಂಪರೆಗೆ ಸೃಜನಾತ್ಮಕ ಪ್ರತಿಕ್ರಿಯೆಯನ್ನು ತೋರಿಸುವುದರ ಮೂಲಕ ಹೊಸ ರೂಪ ಹಾಗೂ ಭಾಷೆಗಳನ್ನು ಕಂಡುಕೊಂಡ ‘ನವೋದಯ’ ಕಾವ್ಯ ಸಂದರ್ಭದಲ್ಲಿ ತಮ್ಮ ಕಾವ್ಯ ನಿರ್ಮಿತಿಯನ್ನು ಪ್ರಾರಂಭಿಸಿ, ಅದರಲ್ಲಿ ಒಂದಷ್ಟು ದೂರ ನಡೆದು ಬಂದ ಅಡಿಗರ ಈ ಪ್ರತಿಜ್ಞಾ ವಾಕ್ಯವು, ನಿಸ್ಸಂದೇಹವಾಗಿಯೂ ನವೋದಯ ಕಾವ್ಯ ಸಂಪ್ರದಾಯವನ್ನು ಕುರಿತ ಪ್ರತಿಕ್ರಿಯೆಯಾಗಿದೆ. ಈ ದೃಷ್ಟಿಯಿಂದ ‘ನಡೆದು ಬಂದ ದಾರಿ ಕಡೆಗೆ ತಿರುಗಿಸಿಬೇಡ, ಕಣ್ಣ ಹೊರಳಿಸಬೇಡ’ ಎಂಬ ಈ ಉಕ್ತಿ ಮೂಲತಃ ಪರಂಪರೆಯ ನಿರಾಕರಣೆಯ ಮಾತಲ್ಲ; ತಮ್ಮ ಬರಹ ಹಾಗೂ ಆಲೋಚನೆಗಳನ್ನು ನಿಯಂತ್ರಿಸುತ್ತಿದ್ದ  ನವೋದಯದ ‘ ನಡೆದು ಬಂದ ದಾರಿ’ಯ ಪ್ರಭಾವದಿಂದ ತಪ್ಪಿಸಿಕೊಂಡು ತನ್ನತನವನ್ನು ಅನನ್ಯವಾಗಿ ರೂಪಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದ  ಸೃಜನಶೀಲ ಕವಿಯೊಬ್ಬನ ಪ್ರತಿಕ್ರಿಯೆ ಎಂದು ಭಾವಿಸುವುದೇ ಸರಿಯಾದದ್ದು. ಆದರೆ ಅಡಿಗರು ತಮಗೆ ತತ್‌ಪೂರ್ವದ ನವೋದಯ ಸಂಪ್ರದಾಯವನ್ನು ಹೀಗೆ ಪ್ರಜ್ಞಾಪೂರ್ವಕವಾಗಿ ನಿರಾಕರಿಸುವುದರ ಮೂಲಕ, ತಾವು ‘ಅನನ್ಯ’ವಾಗಲು ಪ್ರಯತ್ನಿಸುವ ಸಂದರ್ಭದಲ್ಲಿ, ಅವರು ತಮ್ಮ ಸಮಕಾಲೀನರಾದ ಹಿರಿಯ ಹಾಗೂ ನೆಲೆನಿಂತ ಕವಿಗಳ ಬಗ್ಗೆ ‘ಹಳೆಯ ಮನೆಯ ಮಂದಿ’ ‘ಪುಷ್ಪಕವಿಯ ಪರಾಕು’ ‘ಅರ್ಥವಾಗುವ ಹಾಗೆ ಬರೆಯಬೇಕು’ ಎಂಬಿತ್ಯಾದಿ ಕವಿತೆಗಳ ಮೂಲಕ ತೋರಿದ ಪ್ರತಿಕ್ರಿಯೆ, ಅನಗತ್ಯವಾದ ವ್ಯಂಗ್ಯ, ಅಸಹನೆ ಹಾಗೂ ಸಿನಿಕತನಗಳಿಂದ ಕೂಡಿದೆ ಎಂಬುದನ್ನು ಮರೆಯದೆ, ಹೇಳಬಹುದಾದ ಮಾತೆಂದರೆ, ಅಡಿಗರ ಕವಿತೆಯ ಬಹು ಮುಖ್ಯವಾದ ಲಕ್ಷಣ ಹೊಸತನ ಹಾಗೂ ವ್ಯಕ್ತಿ ವಿಶಿಷ್ಟತೆಯ ಅದಮ್ಯವಾದ ಅನ್ವೇಷಣೆಯ ಹಠಯೋಗವೇ ಆಗಿದೆ.

ಈ ಅನನ್ಯತೆಯ ಅಥವಾ ಹೊಸತನದ ಹಂಬಲ ಅವರ ಕಾವ್ಯಜೀವನದ ಪ್ರಾರಂಭದ ‘ಭಾವತರಂಗ’ ಸಂಗ್ರಹದಿಂದಲೇ ಪ್ರಾರಂಭವಾಗಿ, ಉದ್ದಕ್ಕೂ ಎರಡು ಮುಖ್ಯ ಪ್ರತೀಕಗಳ ಮೂಲಕ ಅಭಿವ್ಯಕ್ತವಾಗಿದೆ. ಒಂದು, ಕಡಲ ತಳದೊಳಗೆ ಮುಳುಗಿ ತಳದಾಣಿ ಮುತ್ತುಗಳನ್ನು ಹುಡುಕುವ ‘ಕುಂಗನ’ ಪ್ರತೀಕ; ಎರಡನೆಯದು, ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿ ಗೆರೆಮಿರಿವ ಚಿನ್ನದ ಅದಿರನ್ನು ಶೋಧಿಸುವ ಗಣಿ ಕೆಲಸದವನ ಪ್ರತೀಕ. ಅಂದರೆ ಅಡಿಗರ ಪಾಲಿಗೆ ಕವಿತೆ ಎನ್ನುವುದು ಅತ್ಯಂತ ಕಷ್ಟಕರವಾದ ಒಂದು ಶೋಧನೆ. ಇದು ಅನುಭವದ ಶೋಧನೆ ಹೇಗೋ ಹಾಗೆ ಅನುಭವದ ಅಭಿವ್ಯಕ್ತಿಗಾಗಿ ಪರಂಪರಾಗತವಾದ ಭಾಷೆಯನ್ನು ಶೋಧನೆಗೆ ಗುರಿಪಡಿಸುವ ಒಂದು ನಿರಂತರ ಹೋರಾಟ. ಈ ಎಲ್ಲ ಸಂಗತಿಗಳ ಹಿನ್ನೆಲೆಯಿಂದ ಹೇಳುವುದಾದರೆ, ಅಡಿಗರ ಕಾವ್ಯದ ಮುಖ್ಯ ಸತ್ವ ಅವರ ಪ್ರಖರವಾದ ವೈಚಾರಿಕ ವಿಚಿಕಿತ್ಸಕ ಮನೋಧರ್ಮದಲ್ಲಿದೆ. ಆದರೆ ಇದು ಪು.ತಿ.ನ. ಹಾಗೂ ಗಂಗಾಧರ ಚಿತ್ತಾಲರಲ್ಲಿಯಂತೆ ಕೇವಲ ತಾತ್ವಿಕವಾದದ್ದಲ್ಲ; ಅದು ಅತ್ಯಂತ ಸಾಮಾಜಿಕ ಹಾಗೂ ವಾಸ್ತವ ಸಮಕಾಲೀನತೆಯ ವಿಮರ್ಶೆಯಾಗಿದೆ. ‘ಇರುವುದಕ್ಕೂ ಇರಬೇಕಾದ್ದಕ್ಕೂ’ ನಡುವಿನ ಕಂದರಗಳನ್ನು ಅಡಿಗರ ಹಾಗೆ ನಿಷ್ಠುರವಾಗಿ ತೋರಿಸಿಕೊಟ್ಟವರು ಬಹುಶಃ ಬೇರೆ ಯಾರೂ ಇರಲಾರರೆಂದೇ ತೋರುತ್ತದೆ.

ಈ ಬಗೆಯ ಶೋಧನೆಗೆ ಅಥವಾ ವಿಮರ್ಶೆಗೆ ಅಗತ್ಯವಾದಂಥ ಒಂದು ವ್ಯಕ್ತಿ ವಿಶಿಷ್ಟತೆಯ ನಿರ್ಮಾಣದ ಬಗ್ಗೆ ಅವರು ವ್ಯಕ್ತಪಡಿಸುವ ತುಡಿತ ಹಾಗೂ ಪ್ರಯತ್ನಗಳು ಅವರ ಕಾವ್ಯದ ನಾಡಿಯಲ್ಲಿ ಮಿಡಿಯುತ್ತವೆ. ಇದು ತಾನು ಪರಿಪೂರ್ಣನೆಂಬ ಭ್ರಮೆಯಿಂದ ನಿಂತು ಲೋಕವನ್ನು ನಿಷ್ಠುರ ವಿಮರ್ಶೆಗೆ ಗುರಿಪಡಿಸುವ ‘ಧೀರೋದಾತ್ತ’ನ ಸೋಗಿಗೆ ದಕ್ಕತಕ್ಕದ್ದಲ್ಲ; ಅದು ತನ್ನನ್ನೂ ನಿಷ್ಠುರ ವಿಮರ್ಶೆಯ ನಿಕಷಕ್ಕೆ ಒಡ್ಡಿಕೊಳ್ಳಬಲ್ಲಂಥವರಿಂದ ಸಾಧ್ಯ-ಎಂಬ ಎಚ್ಚರ ಅಡಿಗರ ಕಾವ್ಯದಲ್ಲಿದೆ. ವಾಸ್ತವವಾಗಿ ಇದು ದ್ವಿಮುಖ ಬಂಡಾಯದಿಂದ ನಿಷ್ಪನ್ನವಾಗುವ ಒಂದು ಮನಸ್ಸಿನ ಪರಿಪಾಕ. ತಮ್ಮದೊಂದು ಕವಿತೆಯಲ್ಲಿ ಅಡಿಗರೇ ವ್ಯಕ್ತಪಡಿಸುವಂತೆ-

‘ಎಲ್ಲಕ್ಕಿಂತ ಮುಖ್ಯವಾಗಿ, ನಿರಂತರವಾಗಿ
ತಾನೇ
ತನ್ನ ವಿರುದ್ಧ
ಸಾರಬೇಕಾಗುತ್ತದೆ ಧರ್ಮಯುದ್ಧ
ಜೀವನದುದ್ದ’

ಈ ಹೋರಾಟ, ತಾನು ತನ್ನದೇ ಆದೊಂದು ಸಿಂಹಾಸನವನ್ನು-‘ಚಿನ್ನದ್ದೊ ರನ್ನದ್ದೊ, ಕಬ್ಬಿಣದ್ದೊ ಮರದ್ದೊ ಅಥವಾ ಬರೀ ಮಣ್ಣಿನದೋ’-ಹುಡುಕಿ ತೆಗೆದು ಆಸನಾರೂಢನಾಗುವವರೆಗೂ ನಡೆಯುವ ಪ್ರಯತ್ನ. ಯಾರೋ ಏರಿ, ಬಿಟ್ಟುಕೊಟ್ಟ ಸಿಂಹಾಸನದ ಮೇಲೆ ಕೂತು ದರ್ಬಾರು ಮಾಡುವ ಅನುಕರಣಪಟುತ್ವವಲ್ಲ; ಮೂಲತಃ ತನ್ನ ವ್ಯಕ್ತಿತ್ವಕ್ಕೆ ತನ್ನದೆ ಛಾಪನ್ನು ರೂಪಿಸಿಕೊಳ್ಳುವ ಸಾಹಸ. ನಿಜವಾದ ತನ್ನತನವನ್ನು ಅಥವಾ ‘ಒರಿಜಿನಾಲಿಟಿ’ಯನ್ನು ಕಂಡುಕೊಳ್ಳುವ ಹೋರಾಟ. ಇದೇ ‘ನವ್ಯತೆ’.

ಒಂದರ್ಥದಲ್ಲಿ ಅಡಿಗರ ಪಾಲಿಗೆ ನವ್ಯತೆ ಅನ್ನುವುದು ಅನನ್ಯತೆಗೆ ಪರ್ಯಾಯವಾದದ್ದು. ಅದುವರೆಗೂ ಸಿದ್ಧವಾದ ಕ್ರಮವೊಂದರ ಪುನರಾವರ್ತನೆಗೆ ಹೊರತಾದ ಮತ್ತು ಅನನ್ಯವಾದ ತನ್ನದೇ ಗುಣ-ರೂಪ ಜೀವಂತಿಕೆಯನ್ನುಳ್ಳ ವ್ಯಕ್ತಿತ್ವದ ಅಭಿವ್ಯಕ್ತಿ. ಅಡಿಗರು ‘ವಿಶಿಷ್ಟತೆ’ಯಂತೆಯೆ ‘ಸಮಾನತೆ’ಯನ್ನು ಒಂದು ಮೌಲ್ಯವನ್ನಾಗಿ ಪರಿಗಣಿಸುತ್ತಾರಾದರೂ, ಸಮಾನತೆಯ ಹಾಗೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ವ್ಯಕ್ತಿತ್ವದ ಚಹರೆಗಳನ್ನು ತೊಡೆದುಹಾಕುವ ರಾಜಕೀಯ ಕುತಂತ್ರಗಳಿಗೆ ಅವರು ಕಡುವಿರೋಧಿ. ಈ ಹೊತ್ತು ನಮ್ಮ ಪ್ರಜಾಪ್ರಭುತ್ವವಾದೀ ಪರಿಸರದಲ್ಲಿ ಮನುಷ್ಯ ಸ್ವತಂತ್ರನಾಗಿದ್ದಾನೆಂಬುದೇನೋ ನಿಜ; ತನ್ನನ್ನು ನಿಯಂತ್ರಿಸುವ, ತನ್ನ ವ್ಯಕ್ತಿತ್ವದ ಚಹರೆಗಳನ್ನು ತೊಡೆದುಹಾಕುವ ಎಲ್ಲ ಬಗೆಯ ವ್ಯವಸ್ಥೆಗಳನ್ನೂ ವಿರೋಧಿಸಿ ದಿಟ್ಟತನದಿಂದ ನಿಲ್ಲುವ ವ್ಯಕ್ತಿ ವಿಶಿಷ್ಟತೆಯ ನಿರ್ಮಾಣವೇ ಮನುಷ್ಯನು ಸೃಜನ ಶೀಲನಾಗಲು ಅಗತ್ಯವಾದದ್ದು ಎಂಬ ತಿಳಿವಳಿಕೆಯನ್ನು ಅಡಿಗರ ಕಾವ್ಯ ವಿಶೇಷ ರೀತಿಯಿಂದ ಎತ್ತಿಹಿಡಿಯುತ್ತದೆ.

‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು?’-ಎಂಬ ಕವಿತೆಯಿಂದ ಕಾಣಿಸಿಕೊಂಡ ಅಡಿಗರ ಅನುಭಾವಿಕ ಅನ್ವೇಷಣೆ ಮನೋಧರ್ಮವೊಂದು, ಅವರ ಕಾವ್ಯದಲ್ಲಿ ಉದ್ದಕ್ಕೂ ಒಳವಿದ್ಯುತ್ತಿನಂತೆ ಹರಿದುಬಂದಿದೆ. ವಾಸ್ತವದ ಪ್ರಚಂಡ ನಿಷ್ಠುರ ವಿಮರ್ಶನ ಪ್ರಜ್ಞೆಯ ಅಂತರಾಳದಲ್ಲಿಯೇ ಮನುಷ್ಯನ ಹಾಗೂ ಅತೀತದ ಗೂಢಗಳ ಅನ್ವೇಷಣೆಯ ಅನುಭಾವಿಕ ಹಂಬಲವೂ ಅಡಿಗರ ಕಾವ್ಯದ ಮೂಲದ್ರವ್ಯವಾಗಿದೆ. ಅವರ ಇತ್ತೀಚಿನ ‘ಚಿಂತಾಮಣಿಯಲ್ಲಿ ಕಂಡ ಮುಖ’ ಎಂಬ ಕವಿತೆ ಈ ಮನೋಧರ್ಮದ ದೀಪಶಿಖೆಯಂತಿದೆ. ತನ್ನ ವ್ಯಕ್ತಿತ್ವದ ಇನ್ನೊಂದು ಭಾಗವಾದ ಅಥವಾ ಪ್ರತಿರೂಪವಾದ ಆ ‘ಪರಮಾಪ್ತ ಮುಖ’ದ ಕ್ಷಣ ಸಾಕ್ಷಾತ್ಕಾರ ಹಾಗೂ ನಿರಂತರ ವಿರಹ ಸಮುದ್ರದಲ್ಲಿ ಅದರ ಹುಡುಕಾಟ ಅತ್ಯಂತ ಅದ್ಭುತವಾಗಿ ಈ ಕವಿತೆಯಲ್ಲಿ ಅಭಿವ್ಯಕ್ತವಾಗಿದೆ.

ಕಳೆದ ಹಲವು ದಶಕಗಳಿಂದ ಹಿಡಿದು, ಇದೀಗ ಇತಿಹಾಸದ ಒಂದು ಭಾಗವಾಗುವತನಕ ಕಾವ್ಯವನ್ನು ಅತ್ಯಂತ ಗಂಭೀರವಾದ ಕಲೆಗಾರಿಕೆಯೆಂಬಂತೆ ನಿರ್ವಹಿಸಿದವರು ಅಡಿಗರು. ಅವರ ಕಾವ್ಯಕ್ಕೆ ಸಂವಾದಿಯಾಗಿ ಅವರು ಉದ್ದಕ್ಕೂ ವೈಚಾರಿಕ ಗದ್ಯವನ್ನೂ ಬರೆದಿದ್ದಾರೆ. ಅಡಿಗರ ಸಮಗ್ರ ಸಾಧನೆಯನ್ನು ಗುರುತಿಸಲು ಬಯಸುವವರು, ಈ ಎರಡನ್ನೂ ಒಟ್ಟಿಗೇ ಹಿಡಿದು ನೋಡುವುದು ಅಗತ್ಯವಾಗಿದೆ. ಅಡಿಗರ ಕಾವ್ಯದ ಜತೆಗೆ ಅವರ ಕಾವ್ಯವನ್ನು ಕುರಿತ ಚರ್ಚೆಯೂ ಸಮಾನಾಂತರವಾಗಿ ಬೆಳೆದಿದೆ. ಇಷ್ಟರಮಟ್ಟಿಗೆ ಸಮಕಾಲೀನತೆಯಲ್ಲಿ ಚರ್ಚೆಗೆ ಗುರಿಯಾದ ಹಾಗೂ ತಮ್ಮ ಕಾವ್ಯಸಂದರ್ಭದಿಂದಾಗಿ ‘ನವ್ಯ ವಿಮರ್ಶೆ’ಯನ್ನು ಬೆಳೆಯಿಸಿದ ಮತ್ತು ಉದ್ದಕ್ಕೂ ಗಟ್ಟಿಯಾದ ಕಾವ್ಯವನ್ನೆ ಬರೆಯಬೇಕೆಂಬ ಪಟ್ಟುಹಿಡಿದು ನಿಶ್ಚಿತವಾದ ಎತ್ತರವನ್ನು ಕಾಯ್ದುಕೊಂಡ ಕವಿಗಳು ತೀರಾ ವಿರಳ.

-೧೯೯೨