ಗದ್ದರಿಸಿ ಮಳಿರಾಯ ಬಿದ್ದಾನ ಭೂಮಿಮ್ಯಾಲ
ಎದ್ದಾನ ಒಕ್ಕಲಿಗ ಬೆಳತಾನ
ಎದ್ದಾನ ಒಕ್ಕಲಿಗ ಬೆಳತಾನ ಕೂರಿಗಿ ಕುಂಟೆ
ಬಿದ್ದಾವೊ ಬಡಿಗೇರ ಅರಮನಿಗೊ ||

ಬಡಗೇರ ಮನಿದಿಂಡ ಕಂಬಾರಮನಿ ತಂದು ಹೊಂಬಲ
ಹಸನಾಗಿ ಕೂರಿಗಿ ಹಾಕೊ ತಮ್ಮ ಲಗು ಮಾಡ್ಯೊ ||

ಬನ್ನೀಯ ಗಿಡ ಕಡಿದು ಬಣ್ಣಾದ ಕೂರಿಗಿ ಹಾಸಿ
ಮಂಡಿ ಕಟ್ಟಿಸಿದೆ ಬಿಗ ಬಿಗದು
ಮಂಡಿ ಕಟ್ಟಿಸಿದೆ ಬಿಗ ಬಿಗದು ಮುತ್ತೈದೆಯ
ಉಡಿ ತುಂಬಿಸಿದೆ ಕೂರಿಗ್ಯೊ ||

ಕೂರಿಗಿ ಒಯ್ದಾನ ಹೊಲದಾಗ ಇಳಿಸ್ಯಾನ
ಗಂಗೆ ಹೊಲ ನೋಡಿ ನಿಂತಾನ
ಗಂಗೆ ಹೊಲ ನೋಡಿ ನಿಂತಾನ ಒಕ್ಕಲಿಗ
ಮುಂಚೆ ಕೂರಿಗಿ ಹಿಡಿದಾನೊ ||

ಬೆಳ್ಳಾನ ಎರಡೆತ್ತು ಬೆಳ್ಳೀಯ ಬಾರಕೋಲ
ಬಂಗಾರ ಎಳಿಸೆಡ್ಡಿ ಬಲಗೈಯ್ಗೆ
ಬಂಗಾರ ಎಳಿಸೆಡ್ಡಿ ಬಲಗೈಯ್ಗೆ ಹಿಡಕೊಂಡು
ಹೊನ್ನ ಬಿತ್ತ್ಯಾರ ಹೊಳಿಸಾಲೊ ||

ಹಸನಾಗಿ ಹೊಡಿ ತಮ್ಮ ಸೋಸಿ ನೇಗಿಲು ಕುಂಟೆ
ಹಸನಿ ಭರಣಿ ಕೃತಿಕ ರೋಣಿಯ
ಹಸನಿ ಭರಣಿ ಕೃತಿಕ ರೋಣಿಯ ಹೊಸ ನೀರ
ಕುಡಿದಾಳ ಭೂಂತಾಯಿ ||

ಕೂರಿಗ್ಹಾಕುದ ಮೊದಲು ಬೋರಗಲ್ಲಿಗಿ ಹೋಗಿ
ಸೇರ‍್ಹಿಡಿ ಬೀಜ ನಿಧಿ ಒಯ್ದು
ಸೇರ‍್ಹಿಡಿ ಬೀಜ ನಿಧಿ ಒಯ್ದು ಬಿತ್ತಿದರ
ಐಸಿರಿ ನಮ್ಮ ಹೊಲದಾಗೊ ||

ಹಂತೀಯ ಕಟ್ಟಬೇಕು ಸಂತೋಷಪಡಬೇಕು
ಹುಲಿಗೆಂಬ ಶಬ್ದಾ ನೆನಿಬೇಕು
ಹುಲಿಗೆಂಬ ಶಬ್ದಾ ನೆನಿಬೇಕು ಹೆಸರಾದ
ಬೆಳೆಯ ಬೆಳಿಬೇಕೋ ||

ಕಡಿಯೆತ್ತಿನ ಹೆಂಡಿಯ ಹಿಡಿದು, ಕಲಸಿ ಬೂದ ಮಾಡಿ
ಹತ್ತು ಎತ್ತಿನ ಬಾಲ ಕಿತ್ತಿ, ಹಚ್ಚಿದರೊ ಬೂದಕಟ್ಟಿದರೊ ||

ಹನ್ನೆರಡೆತ್ತಿನ ಬಾರಿ ಹೊನ್ನ ಮೇಟಿಕಂಬ
ಬಾಸಿಂಗ್ದ ಕೊಳಗ ಬಲಗೈಯ
ಬಾಸಿಂಗ್ದ ಕೊಳಗ ಬಲಗೈಯ ಕಂದಯ್ಯ
ರಾಸಿ ಅಳಿಯೋದಕ ಬೆಳಗಾಯ್ತೊ ||

ಬಾರಪ್ಪ ಮಳಿದೇವ ಬಾರದೆಲ್ಲಿಗಿ ಹೋಗಿದ್ದಿ
ಬಡವರು ಬಾಯ ಬಿಡತಾರ
ಬಡವರು ಬಾಯ ಬಿಡತಾರ ಅಡಿವ್ಯಾನ
ಫಲವೆದ್ದು ಕೈಯ ಮುಗದಾವ