‘ಮುಖ್ಯ ಬೇಕಾದದ್ದು ಜೀವಂತಗತಿ, ಹೊಸನೆತ್ತರಿನ ಕೊಡುಗೆ’-ಎಂದು ೧೯೬೫ರಲ್ಲಿ ಪ್ರಕಟವಾದ ‘ನೆಲ-ಮುಗಿಲು’ ಕವನ ಸಂಗ್ರಹದ ಕವಿತೆಯೊಂದರಲ್ಲಿ ಹೇಳುವ ಕಣವಿಯವರ ಕಾವ್ಯ, ಕಳೆದ ಈ  ಮೂವತ್ತು ವರ್ಷಗಳ  ಅವಧಿಯಲ್ಲಿ ಈ ಮಾತನ್ನು ನಿಜ ಮಾಡಿದೆ. ಅವರ ಕಾವ್ಯದ ‘ಜೀವಂತಗತಿ’ ಮೊಟ್ಟಮೊದಲ ಸಂಗ್ರಹಗಳಾದ ‘ಕಾವ್ಯಾಕ್ಷಿ’ ಮತ್ತು ‘ಭಾವಜೀವಿ’ಗಳಲ್ಲಿ ಕಾಣಿಸಿಕೊಂಡದ್ದು, ಈ ಹಲವು ವರ್ಷಗಳ ನಡುವಣ ಕಾಲದ ಯಾವ ಕಾವ್ಯಪಂಥಗಳ ದಾಳಿಗೂ ಹೊಯ್ದಾಡದೆ ತನ್ನ ನಿಶ್ಚಿತ ನೆಲೆಯನ್ನು ಕಾಯ್ದುಕೊಂಡು, ಕನ್ನಡ ಕಾವ್ಯ ಶರೀರಕ್ಕೆ ‘ಹೊಸ ನೆತ್ತರಿನ ಕೊಡುಗೆ’ಯನ್ನು ಕೊಟ್ಟಿದೆ.

ತಮ್ಮ ಬಹುಸಂಖ್ಯೆಯ ಕವನ ಸಂಕಲನಗಳ ಮೂಲಕ ಹಾದುಬಂದ ಕಣವಿಯವರ ಕಾವ್ಯಜೀವನ, ಮೂಲತಃ ಪರಿಸರ ಸಂವೇದಿಯಾದದ್ದು. ಬದುಕಿನ ಯಾವುದೇ ಒಂದು ಸಿದ್ಧಾಂತಕ್ಕೂ ಗಂಟು ಹಾಕಿಕೊಂಡು ಸ್ಥಗಿತವಾಗದೆ, ತನ್ನ ಅಭಿರುಚಿಗೆ ಹಾಗೂ ಕಾವ್ಯ ಪ್ರಜ್ಞೆಗೆ ಒಳಗಾದುದೆಲ್ಲಕ್ಕೂ ನಂಟುಹಾಕಿಕೊಳ್ಳುತ್ತ ಚಲನಶೀಲವಾಗಿ ತನ್ನ ಜೀವಂತಗತಿಯನ್ನು ಪ್ರಕಟಿಸಿಕೊಂಡಿದೆ. ಸಮಕಾಲೀನ ಕವಿ-ಕಾವ್ಯಗಳ ಪ್ರಭಾವದ ಬೆಳಕಿಗೆ ಮೈಯೊಡ್ಡಿದರೂ, ಮನಸ್ಸನ್ನು ಮಾತ್ರ ತಮ್ಮ ಸಹಜಾನುಭವದ ಕಮ್ಮಟವನ್ನಾಗಿ ಮಾಡಿಕೊಂಡು, ಮಾನವೀಯತೆ, ನಿಸರ್ಗಪ್ರಿಯತೆ, ಮೌಲ್ಯಪ್ರಜ್ಞೆ, ಅನುಭಾವಿಕತೆ ಇತ್ಯಾದಿ ಮೂಲದ್ರವ್ಯವನ್ನು ತಮ್ಮ ವ್ಯಕ್ತಿತ್ವದಲ್ಲಿ ಕರಗಿಸಿಕೊಂಡು, ತಮ್ಮ ಅಭಿವ್ಯಕ್ತಿಯನ್ನು ರೂಪಿಸಿಕೊಂಡವರು. ಹೆಜ್ಜೆಯಿಂದ ಹೆಜ್ಜೆಗೆ ಬದಲಾಗುತ್ತ, ಬೆಳೆದವರು.

ಅವರ ‘ಕಾವ್ಯಾಕ್ಷಿ’ ಮತ್ತು ‘ಭಾವಜೀವಿ’ ಸಂಕಲನಗಳು ಪ್ರಕಟವಾದದ್ದು ೧೯೪೯-೫೦ರಂದು. ಈ ಕಾಲ ನವೋದಯ ನಡುಹಗಲಿನ ಕಾಲ. ಕುವೆಂಪು, ಬೇಂದ್ರೆ, ಪು.ತಿ.ನ., ಮಧುರಚೆನ್ನ ಇಂಥವರು ಹೊಸದಾಗಿ ಬರೆಯುವವರ ಪಾಲಿಗೆ ಸವಾಲುಗಳಾಗಿ ನಿಂತ ಕಾಲ. ಈ ಪರಿಸರದಲ್ಲಿ ಬಂದ ಕಣವಿಯವರ ‘ಭಾವಜೀವಿ’ ಮಧುರಚೆನ್ನರ ‘ನನ್ನ ನಲ್ಲ’ಕ್ಕೆ ತಕ್ಕಮಟ್ಟಿಗೆ ಋಣಿಯಾದರೂ, ಅಂದಿನ ಯುವ ಕವಿ ಕಣವಿಯವರ ಕಾವ್ಯಜೀವನದ ಕಥೆಯ ಗಣಿಯಾಗಿದೆ. ತಾನು ಕವಿಯಾಗುತ್ತಿರುವುದನ್ನು ಕಂಡುಕೊಂಡ ಕವಿಜೀವವೊಂದರ ಸಂಭ್ರಮ, ಉಲ್ಲಾಸ, ಪರಿಶೀಲನೆ, ಇತ್ಯಾದಿಗಳೆ ಇದರ ವಸ್ತು. ತಾನು ಏನಾಗಿದ್ದೇನೆ, ಏನಾಗಿರಬೇಕು ಎಂಬುದನ್ನು ಮನದಟ್ಟುಮಾಡಿಕೊಳ್ಳುವ ದಿಕ್ಕಿನಲ್ಲಿ, ತನಗೆ ತಾನೇ ಮಾತನಾಡಿಕೊಂಡಂತಿರುವ ಒಂದು ನಿರರ್ಗಳ ಭಾವನಾಲಹರಿ ಇದು. ‘ನಾಗರಿಕ ನಾಗರವು ಹುತ್ತುಕಟ್ಟದ ಹಳ್ಳಿ’ಯ ವಾತಾವರಣದಲ್ಲಿ ಯಾವ ಯಾವ ನೆನಪುಗಳು, ಯಾವ ಯಾವ ಅನುಭವಗಳು, ಯಾವ ಯಾವ ಪ್ರಭಾವಗಳು ಸಂಚುಹೂಡಿ ತಮ್ಮನ್ನು ಕವಿಯನ್ನಾಗಿ ರೂಪಿಸಿದವು-ಎಂಬುದನ್ನು ನಿರೂಪಿಸುವ ಈ ಕಥನದ ‘ಜೀವಂತಗತಿ’ ಆಶ್ಚರ್ಯಕರವಾಗಿದೆ. ಎಲ್ಲೂ, ಯಾವೊಂದು ಮಾತಿಗೂ ತಡಕಾಡದೆ, ಹಸುರು ಕಣಿವೆಯ ನಡುವೆ ಜುಳುಜುಳನೆ ಹರಿಯುವ ಹಳ್ಳದಂತೆ ತೋರುವ ಈ ಬರವಣಿಗೆ, ತನ್ನ ಸಹಜ ಪ್ರಸನ್ನ ಕವಿತಾಗುಣದಿಂದ ಚೇತೋಹಾರಿಯಾಗಿದೆ. ಮುಂದಿನ ಎಲ್ಲ ಕವನ ಸಂಗ್ರಹಗಳಲ್ಲೂ, ಇದೇ ನಿರಾಯಾಸ ಪದರಚನಾ ಕೌಶಲ, ಕಣವಿಯವರು ಸಹಜ ಕವಿಯೆಂಬುದನ್ನು ಸ್ಥಿರಪಡಿಸಿದೆ.

‘ಭಾವಜೀವಿ’ ಹಾಗೂ ‘ಕಾವ್ಯಾಕ್ಷಿ’ ಎರಡಲ್ಲೂ, ಕಣವಿಯವರ ಭಾವಜೀವನ ಅರಳುವ ಪರಿ ಚಿತ್ರಿತವಾಗಿದೆ. ಮೋಡಗಳ ಕರುಮಾಡದಿಂದ ಓರ್ವ ಯಕ್ಷಕನ್ಯೆ ಇಂದ್ರ ಚಾಪವನ್ನು ಕರಗಿಸುತ ಹನಿಯಾಗಿ ಸುರಿಸಿದಳಂತೆ; ಆಗ ಈ ಮುಗ್ಧ ಕವಿಯ ಕಾವ್ಯಾಕ್ಷಿ ತೆರೆಯಿತಂತೆ; ‘ತನಗೆ ತಾನೆ ತಿಳಿಯದಂತೆ ತುಳುಕಿತಹಹ ಭಾವನಾ’-ಇದು ಕಣವಿಯವರು ತಮ್ಮಲ್ಲಿ ಕಾವ್ಯೋದಯವಾದ ಬಗೆಯನ್ನು ವರ್ಣಿಸಿರುವ ರೀತಿ. ವಾಸ್ತವವಾಗಿ ಇದು ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಹಾಗೂ ಕನ್ನಡ ನವೋದಯಕವಿಗಳ ಕಾವ್ಯಕಲ್ಪನೆ. ಈ ಕಾವ್ಯಾಕ್ಷಿಗೆ ಮುಖ್ಯವಾಗಿ ಕಾಣುವುದು ನಿಸರ್ಗ ರಮ್ಯತೆ.

ಶಿವನ ಕವನವು ಭುವನ, ಲಾಸ್ಯತಾಂಡವ ಮಿಲನ
ಪ್ರಕೃತಿಯೌಪಾಸನೆಯು ನಿತ್ಯವಿರಲಿ
(ಕಾವ್ಯಾಕ್ಷಿ, ಪುಟ. ೧೭)

ಎಂಬ ಆಶಯದೊಂದಿಗೆ-

ದೈತ್ಯದರ್ಪದ ದುರುಳ ದಾರುಣದ ಹೋರಟೆಗೆ
ಎಂದೆಂದು ನನ್ನ ತಲೆ ಬಾಗದಿರಲಿ:
ಸಾತ್ವಿಕರ ತಾತ್ವಿಕರ ಹಿರಿಜೀವದೌನ್ನತ್ಯ
ವಿಶ್ವಭಾವಾತ್ಮರಿಗೆ ನಮನವಿರಲಿ.

(ಅಲ್ಲೇ, ಪುಟ. ೧೭)

ಎಂಬ ತಾತ್ವಿಕ ನಿಲುವನ್ನೂ, ಕವಿ ಮೈಗೂಡಿಸಿಕೊಳ್ಳುತ್ತಾನೆ. ಮುಖ್ಯವಾಗಿ ಇದು ವ್ಯಕ್ತಿತ್ವ ನಿರ್ಮಾಣದ ಹಂತ; ಏನೇನು ಇದ್ದರೆ ತನ್ನ ವ್ಯಕ್ತಿತ್ವ ಮೌಲಿಕವಾದದ್ದಾಗುವುದೋ ಅದೆಲ್ಲವೂ ಮೈಗೂಡಲಿ ಎಂಬ ಆಶಯವೇ ಇಲ್ಲಿ ಪ್ರಧಾನ. ಈ ಕಾಲದ ಕವಿತೆಯಲ್ಲಿ-ಒಂದರ್ಥದಲ್ಲಿ ಸ್ವಾತಂತ್ರ್ಯಪೂರ್ವ ಕವಿತೆಯಾದರೂ-ಸ್ವಾತಂತ್ರ್ಯಪೂರ್ವದ ಆಸೆ – ಕನಸು – ಆದರ್ಶಗಳು ಇನ್ನೂ ದನಿಗೂಡುತ್ತಲೇ ಇದ್ದುವೆಂಬುದನ್ನು ಇಲ್ಲಿ ಮರೆಯುವಂತಿಲ್ಲ. ‘ಭಾವಜೀವಿ’ಯಲ್ಲಿನ ಕವಿತೆಗಳಲ್ಲಿಯಂತೆ, ‘ಕಾವ್ಯಾಕ್ಷಿ’ಯ ಕವಿತೆಗಳಲ್ಲೂ,

ಆನಂದನಂದನನೊ, ಚಂದನದಿ ಮಿಂದವನೊ
ಉದಯಗಿರಿ ಹೊಂದೇರನೇರಿದವನು
(ಕಾವ್ಯಾಕ್ಷಿ, ಪುಟ. ೧೯)

ಎಂಬ ಚಂದ್ರೋದಯ ವರ್ಣನೆಯಲ್ಲಾಗಲಿ,

ಗಾಳಿಗೂಡಿ ಕಿರುಮೋಡವಾಗಿ ಬಾನೆಲ್ಲ ಅಲೆಯುವಾಸೆ
ಬಾನದೇಗುಲದಿ ನಮ್ರನಾಗಿ ಮೈದುಂಬಿ ನಿಲ್ಲುವಾಸೆ
ಮಳೆಯ ಬಿಲ್ಲು ಮೈದೊಡವ ಧರಿಸಿ ಮಣಿಹನಿಗಳಾಗುವಾಸೆ
ಚಂದ್ರನೆದೆಯ ತಿಳಿಯೊಲವನುಂಡು ಶ್ರೀಕಾಂತಿ ಪಡೆಯುವಾಸೆ

(ಕಾವ್ಯಾಕ್ಷಿ, ಪುಟ. ೪೪)

ಎಂದು, ‘ಮೇಘೋಪಾಸನೆ’ಯಲ್ಲಿ ಮೈದುಂಬಿನಿಲ್ಲುವ ಭಾವುಕತೆಗಳು, ಭಾವದ ರಮ್ಯತೆಗೆ, ಭಾಷೆಯ ಲಾಲಿತ್ಯಕ್ಕೆ ಸಾಕ್ಷಿಯಾಗುತ್ತ, ಈ ಕಾಲದ ಕನಸುಗಾರಿಕೆ, ಆದರ್ಶಪರತೆ, ಇತ್ಯಾದಿಗಳ ದಾಖಲೆಯಾಗಿವೆ.

ಕಣವಿಯವರ ಮುಂದಿನ ಕವನಸಂಗ್ರಹ ‘ಆಕಾಶಬುಟ್ಟಿ’ ಪ್ರಕಟವಾದದ್ದು ೧೯೫೩ರಲ್ಲಿ. ಅದು ಸ್ವಾತಂತ್ರ್ಯೋತ್ತರ ಪರಿಸರದ ಉತ್ಸಾಹವಿನ್ನೂ ಬಿಸಿಯಾಗಿದ್ದ ಕಾಲ. ಹೊಸ ನಾಡನ್ನು ಕಟ್ಟುವ, ಪ್ರಜಾಪ್ರಭುತ್ವದ ಬಗೆಗೆ ಅಭಿಮಾನ ಪಟ್ಟುಕೊಳ್ಳುವ ಕಾಲ. ಈ ಕಾಲದ ಈ ಸಂಗ್ರಹದ ಮೊದಲ ಕವಿತೆ ‘ಆಕಾಶಬುಟ್ಟಿ’ ಹೊಸ ಆಸೆ, ಭರವಸೆಗಳನ್ನು ಮೇಲುನಾಡಿಗೆ ತೇಲಿಬಿಡುವ ಊರ್ಧ್ವ ಗಮನಾಭಿಲಾಷೆಯನ್ನು ಪ್ರಕಟಿಸಿದರೂ, ಈ ಸಂಗ್ರಹದ ಬಹುಪಾಲು ಕವಿತೆಗಳು ವಾಸ್ತವದ ಕಡೆಗೆ ಮುಖಮಾಡಿರುವುದು ಕಣವಿಯವರ ಕಾವ್ಯಜೀವನದ ಹೊಸ ತಿರುವನ್ನು ಸೂಚಿಸುತ್ತವೆ. ಅನ್ನಬಹುದು. ಸ್ವಾತಂತ್ರ್ಯೋತ್ತರ ಪರಿಸರದ ಹೊಸಬಾಳನ್ನು ಒಪ್ಪಿಕೊಳ್ಳುವ ಹೊಸ ತರುಣರನ್ನು ಕುರಿತು-

ಹೊಸ ಜಗವು ರೂಪುಗೊಂಡಿಹುದೀಗ; ಹೊಸ ಬಾಳು
ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು-
ಹಳೆಯ ಕಾಲದ ರೂಢಿ-ಜಡಮತೀಯರನೆಲ್ಲ
ಬಿಟ್ಟುಬಿಡಿ ಅವರವರ ಪಾಡಿಗಿನ್ನು-

(ಹೊಸಬಾಳು ನಮ್ಮದಿದೆ: ಪು. ೩)

ಎಂದು ಉಪನ್ಯಾಸ ಕೊಡುವ, ಸಮಾಜದ ಹುಳುಕು ಕೊಳಕುಗಳನ್ನು ಕಂಡು,ಕನಲಿ, ಕೊಡಲಿ ಎತ್ತುವ (ಕೊನೆಯ ಎಚ್ಚರಿಕೆ, ಪು. ೮) ಉದ್ದೇಶದಿಂದ ಕಣವಿಯವರು ಬರೆದ ಈ ಹಲವು ಕವಿತೆಗಳು, ಅಂದು ಪ್ರಕರ್ಷಾವಸ್ಥೆಗೆ ಬಂದ ಪ್ರಗತಿಶೀಲ ಚಳುವಳಿಯ ಘೋಷಣೆಗಳಂತೆ ತೋರುತ್ತವೆಯೇ ವಿನಾ, ನಿಜವಾದ ಕಾವ್ಯವಾಗಿಲ್ಲ. ಯಾಕೆಂದರೆ, ವ್ಯಗ್ರತೆ ಕಣವಿಯವರ ವ್ಯಕ್ತಿತ್ವದ ಅಥವಾ ಕಾವ್ಯದ ಮೂಲದ್ರವ್ಯವಲ್ಲ. ‘ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ’ (ಮಾತು. ಪು.೩೭) ಎಂಬ ಶ್ರದ್ಧೆಯ ಕವಿಯಿಂದ ನಾವು ರೊಚ್ಚನ್ನು, ವ್ಯಗ್ರತೆಯನ್ನು ನಿರೀಕ್ಷಿಸುವುದು ಸರಿಯಲ್ಲ. ಆದರೆ ತಾತ್ವಿಕವಾಗಿ ಕಣವಿಯವರ ನಿಲುವು ಬದಲಾಗಿದೆ ಎಂಬುದನ್ನು ಈ ಕೆಲವು ಕವಿತೆಗಳು ಸೂಚಿಸುತ್ತವೆ ಎಂಬುದಂತೂ ನಿಜವೆ. ಅವರ ‘ಪ್ರಜಾಪ್ರಭುತ್ವ’ ಎಂಬ ಕವಿತೆ (ಪು. ೨೪) ಈ ನಿಲುವನ್ನು, ನಿಜವಾದ ಕಾವ್ಯರೂಪದಲ್ಲಿ ಹಿಡಿದಿರಿಸಿದೆ. ಬಿರು ಬೇಸಗೆಯ ಸಂಜೆಯ ಸೂರ‍್ಯ ಮುಳುಗಿ, ತಂಪಾದ ಇರುಳು ಹರಡಿಕೊಂಡ ಪರಿಯನ್ನು ಚಿತ್ರಿಸುವ ಈ ಕವಿತೆ, ಪ್ರಜಾಪ್ರಭುತ್ವ ನೆಲೆಗೊಂಡ ರೀತಿಯ ಸಂಕೇತವಾಗಿದೆ. ಲೋಗರೆಡೆ ಕೆಕ್ಕರಿಸಿ ನೋಡುತ್ತ ಮುಳುಗುವ ಮುದಿ ಸಿಂಹದಂಥ ಸೂರ್ಯ; ಸಂಜೆಯ ಮಬ್ಬು ಕಪ್ಪು ಬಾವುಟವೆತ್ತುವ ರೀತಿ; ಪಕ್ಷಿ ಸಂಕುಲದ ಜಯಕಾರ; ಹಗಲ ಉರಿಬಿಸಿಲ ಸಾಮ್ರಾಜ್ಯ ಪಡುಗಡಲಲ್ಲಿ ಹಡಗನ್ನೇರಿದ್ದು; ಬಿತ್ತರದ ಬಾನಿನಲ್ಲಿ ಚಿಕ್ಕೆಗಳ ಪ್ರಜಾಪ್ರಭುತ್ವ; ಬೇರೆ ಬೇರೆ ಗ್ರಹಮಂಡಲಗಳ ಮಂತ್ರಿಮಂಡಲ; ಸರ್ವರಿಗೂ ಸಮಪಾಲಾಗಿ ಸುರಿಯುವ ತಂಪಾದ ಬೆಳುದಿಂಗಳಿನ ಇರುಳು-ಇತ್ಯಾದಿಗಳಿಂದ, ಭಾರತೀಯ ಪರಿಸರದ ರಾಜಕೀಯ ಬದಲಾವಣೆಯನ್ನು ಒಂದು ಪ್ರತಿಮೆಯಲ್ಲಿ ಕಡೆದಿಟ್ಟಿರುವುದು ಈ ಕವಿತೆಯ ವಿಶೇಷವಾಗಿದೆ. ಇದರ ಜತೆಗೆ, ‘ಪಥಿಕ’ (ಪು. ೬೦) ‘ಸೃಷ್ಟಿ ನೋಂತು ನಿಂದದೆ’ (ಪು. ೬೫) ‘ನಿಯಮೋಲ್ಲಂಘನ’ (ಪು. ೭೦) ಇಂಥ ಕವಿತೆಗಳಲ್ಲಿ ನಿಸರ್ಗ ಪರವಾದ ಪ್ರೀತಿ ಮಡುಗಟ್ಟಿದೆ. ಈ ಸಂಗ್ರಹದಲ್ಲಿ ಸಾಮಾಜಿಕವಾದ ಎಚ್ಚರ ಕಾಣಿಸಿದರೂ, ಆ ಕಾರಣಕ್ಕೆ ತಮ್ಮ ಸುತ್ತಣ ನಿಸರ್ಗವನ್ನು ಕವಿಯ ಕಣ್ಣು ಮರೆಯುವುದಿಲ್ಲ. ಹಿಂದಿನ  ಸಂಗ್ರಹಗಳಲ್ಲಿನ ಬೆರಗುಗಣ್ಣು, ತನ್ಮಯತೆ, ರಮ್ಯತೆಗಳು ಇಲ್ಲಿ ಇದ್ದರೂ, ನಿಸರ್ಗವನ್ನು ಸಮಕಾಲೀನ ಸಂದರ್ಭದಲ್ಲಿರಿಸಿ ನೋಡುವ ಪ್ರಯತ್ನದ ಜತೆಗೆ, ನಿಸರ್ಗವನ್ನು ಕುರಿತ ಚಿಂತನೆಗಳೂ ಹೊಳಹುದೋರಿವೆ. ವಾಸ್ತವವಾಗಿ ಕಣವಿಯವರ ನಿಲುವು ಈ ಲೋಕದ ಬಗೆಗೆ ಒಬ್ಬ ಪಥಿಕನದು. ದಾರಿ ನಡೆಯುವ ಪಥಿಕ, ದಾರಿ ನಡೆಯುತ್ತಲೇ ಎಲ್ಲವನ್ನೂ ನೋಡುತ್ತಾ, ಅನುಭವಗಳನ್ನು ಬುತ್ತಿಕಟ್ಟಿಕೊಳ್ಳುತ್ತಾ ಹೋಗಬೇಕು-

ಪ್ರಕೃತಿ ತನ್ನೆದೆಯ ಮಧುವಾಟಿಕೆಯ ತೆರೆದಿರಲು
ಅದನು ತಣಿ ಹೀರದೆಯೆ ಸಾಗಬಹುದೆ?
ಯಾರಿಗೀ ಸುಂದರತೆ? ಯಾರಿಗೀ ಪರವಶತೆ?
ಯಾರ ಸುಖಕೀ ಸೃಷ್ಟಿ ನಿನಗಲ್ಲದೆ?

(ಪಥಿಕ, ಪು. ೬೦)

ಎನ್ನುವ ಈ ಪ್ರಶ್ನೆ ಬೆಳೆಯುವ ಕವಿ, ಬದುಕಿನಿಂದ ಅತ್ತ ಇತ್ತ ಎಳೆಯುವ ಕವಿಗಳಿಗೆ ಹಾಕಿದ ಸವಾಲೂ ಆಗಿದೆ.

ಮತ್ತೆ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಪ್ರಕಟವಾದ ಕವನ ಸಂಗ್ರಹಗಳು ಎರಡು. ಒಂದು ‘ಮಧುಚಂದ್ರ’ (೧೯೪೫) ಇನ್ನೊಂದು ‘ದೀಪಧಾರಿ’ (೧೯೫೬). ‘ಮಧುಚಂದ್ರ’ ಅದರ ಹೆಸರೇ ಸೂಚಿಸುವಂತೆ, ಪ್ರೇಮಗೀತೆಗಳನ್ನು ಪ್ರಧಾನವಾಗಿ ಉಳ್ಳ ಸಂಕಲನ. ಈ ಸಂಗ್ರಹದ ‘ಗಿರಿಗಿರಿ ಗಿಂಡಿ’, ಬೇಂದ್ರೆಯವರ ‘ಪಾತರಗಿತ್ತಿ ಪಕ್ಕಾ’ದ ನಂತರ ಬಂದ, ಅದೇ ಬಗೆಯ ಲವಲವಿಕೆಯನ್ನುಳ್ಳ, ತುಂಬ ಖುಷಿ ಕೊಡುವ ಕವಿತೆಯಾಗಿದೆ. ಮನೆಯೊಳಗಣ ದಾಂಪತ್ಯ ಜೀವನದ ಹಲವು ಸೊಗಸಾದ ಚಿತ್ರಗಳು ಈ ಸಂಗ್ರಹದಲ್ಲಿವೆ. ಹಾಗೆಯೆ ಮಗುವನ್ನು ಕುರಿತ, ಈ ಸಂಗ್ರಹದ, ಹಾಗೂ ಮುಂದಿನ ಸಂಗ್ರಹವಾದ ‘ದೀಪದಾರಿ’ಯಲ್ಲಿನ ಎರಡು ಕವಿತೆಗಳು ಬೇರೆಯಾಗಿಯೇ ಗಮನಿಸಬೇಕಾದವುಗಳು. ಈ ಬಗೆಯ ಕವಿತೆಗಳು, ಹೊಸಗನ್ನಡ ಕಾವ್ಯ ಸಂದರ್ಭದಲ್ಲಿ ತೀರಾ ವಿರಳ. ಪ್ರೀತಿ, ಪ್ರಣಯ, ವಾತ್ಸಲ್ಯ ಇತ್ಯಾದಿಗಳ ಕಡೆ ಕಣ್ಣು ಹಾಯಿಸಲು ವ್ಯವಧಾನವಿಲ್ಲದ ಒಂದು ಮನಃಸ್ಥಿತಿ, ‘ದೀಪಧಾರಿ’ ಪ್ರಕಟವಾಗುವ ವೇಳೆಗೆ-ಅಂದರೆ ೧೯೫೬ರ ವೇಳೆಗೆ-ಸಾಹಿತ್ಯದ ಸಂದರ್ಭದಲ್ಲಿ ಪ್ರಾಪ್ತವಾಗಿತ್ತು. ಕಾಮದ ಕಾವ್ಯ (Poetry of Sex) ಪ್ರೇಮದ ಕಾವ್ಯ (Poetry of Love) ವನ್ನು  ಹಿಂದೆ ಹಾಕತೊಡಗಿತ್ತು. ನಿಸರ್ಗಕೇಂದ್ರದಿಂದ ಕಾವ್ಯ, ನಗರಕೇಂದ್ರಕ್ಕೆ ಸ್ಥಳಾಂತರಿತವಾಗಿತ್ತು; ಮೆಚ್ಚುವಕಾವ್ಯ ಚುಚ್ಚುವ ಕಾವ್ಯವಾಗಿ ಪರಿವರ್ತನೆ -ಯಾಗತೊಡಗಿತ್ತು. ಉತ್ತಮ ಕಾವ್ಯ ನಿರ್ಮಿತಿಗಿಂತ, ರಚಿತವಾದ ಕಾವ್ಯದ ಸಮರ್ಥನೆ ಮುಖ್ಯವಾಗಿತ್ತು.

ಈ ಸಂದರ್ಭದಲ್ಲಿ ಪ್ರಕಟವಾಯಿತು ಕಣವಿಯವರ ‘ದೀಪಧಾರಿ’. ಈ ಕಾಲ ಅಡಿಗರೂ ಮತ್ತು ಅವರ ನವ್ಯಕಾವ್ಯ ಪ್ರೇಮಿಗಳೂ, ನವ್ಯ ಕಾವ್ಯದ ಬಗೆಗೆ ಭಾಷ್ಯ ಬರೆಯುತ್ತಿದ್ದ ಕಾಲ. ನವೋದಯ ಕವಿಗಳ ಬಗೆಗೆ, ಕಾವ್ಯದ ಬಗೆಗೆ ಮತ್ತು ಅಂಥದೊಂದು ಮನೋಧರ್ಮದ ಬಗೆಗೇ ಅರುಚಿಯನ್ನು ಹುಟ್ಟಿಸುತ್ತಿದ್ದ ಕಾಲ. ಈ ಸಂದರ್ಭದಲ್ಲಿ ನವೋದಯ ಕಾವ್ಯ ಮಾರ್ಗದಿಂದ ಪುಷ್ಟರಾಗಿ, ನವೋದಯ ಕವಿಗಳ ಬಗೆಗೆ ಗೌರವವನ್ನೂ ಇರಿಸಿಕೊಂಡ ಕಣವಿಯವರಂಥ ಕವಿಗಳಿಗೆ, ಈ ಗುಂಪಿನಲ್ಲಿ ಗೋವಿಂದವಾಗದೆ, ತಮ್ಮ ನೆಲೆಯನ್ನು ಕಾಯ್ದುಕೊಳ್ಳುವುದೇ ಮುಖ್ಯವಾದ ಸಮಸ್ಯೆ ಹಾಗೂ ಸವಾಲಾಗಿತ್ತು. ಮುಂದೆ ಹತ್ತು ವರ್ಷಗಳ ಕಾಲ ನವ್ಯಕಾವ್ಯದ ವಿಮರ್ಶಕರು ಮಾತೆತ್ತಿದರೆ, ‘ಅಡಿಗರು ಬರೆಯುವ ಸಂದರ್ಭದಲ್ಲಿ’ ಎಂಬುದನ್ನೆ ವಿಮರ್ಶೆಯ ಮೂಲವಾಕ್ಯವನ್ನಾಗಿ ಮಾಡಿಕೊಂಡು, ಈ ಸಂದರ್ಭದಲ್ಲಿ ಅಡಿಗರಂತೆ ಬರೆಯದೆ ಬೇರೆಯಾದವರೂ ಇದ್ದರು ಎಂಬುದನ್ನೆ ಗಮನಕ್ಕೆ ತೆಗೆದುಕೊಳ್ಳದೆ, ‘ಅಡಿಗರು ಬರೆಯುವ ಸಂದರ್ಭದಲ್ಲಿ’ ಎಂಬುದನ್ನೆ ರಾಗ-ತಾನ-ಪಲ್ಲವಿಗಳಲ್ಲಿ ವಿಸ್ತರಿಸುತ್ತಾ ತಮ್ಮ ಜಾಣತನವನ್ನು ಪ್ರದರ್ಶಿಸಿದರು. ಅಂದರೆ ಈ ಒಂದು ಮಹಾವಾಕ್ಯದ ಉದ್ದೇಶ, ‘ಅಡಿಗರು ಬರೆಯುವ ಸಂದರ್ಭ ಎಂದರೆ ಬೇರೆ ಇನ್ನಾರೂ ಬರೆಯದ ಸಂದರ್ಭ; ಅಥವಾ ಬೇರೆಯವರು ಬರೆದರೂ ಅವರು ಅಡಿಗರ ಪ್ರಭಾವ ಅಥವಾ ಅನುಕರಣೆಗೆ ಒಳಗಾಗುವ ಸಂದರ್ಭ’ ಎಂಬುದನ್ನು ಸ್ಪಷ್ಟಪಡಿಸುವುದು.  ಆದರೆ ವಾಸ್ತವ ಸ್ಥಿತಿ ಬೇರೆಯೆ ಆಗಿತ್ತು.  ಅದೆಂದರೆ: ‘ಅಡಿಗರು ಬರೆಯುವ ಸಂದರ್ಭ’ದಲ್ಲಿ, ಅವರಿಗಿಂತ ಬೇರೆ ಬೇರೆಯಾಗಿ ಬರೆಯುವ ಹಲವರು ಇದ್ದರು, ಮತ್ತು ಅವರು ಇಂದೂ ಬರೆಯುತ್ತಿದ್ದಾರೆ ಎನ್ನುವುದು. ಹೀಗೆ ಬೇರೆಯಾಗಿ ಬರೆದವರಲ್ಲಿ ಮತ್ತು ಬರೆಯುತ್ತಿರುವವರಲ್ಲಿ ಕಣವಿಯವರೂ ಮುಖ್ಯರಾದವರು  ಎಂಬುದನ್ನು ಗಮನಿಸಬೇಕಾಗಿದೆ. ಕಣವಿಯವರು ನವ್ಯಕಾವ್ಯದ ಈ ಪರಿಸರದಲ್ಲಿ ‘ದೀಪಧಾರಿ’ಯನ್ನು ಪ್ರಕಟಿಸುವುದರ ಮೂಲಕ, ತಾವು ಹಿಂದೆ ಬರೆದಿದ್ದಕ್ಕಿಂತ ಭಿನ್ನವಾಗಿ ಹಾಗೂ ‘ಅಡಿಗರು ಬರೆಯುವ ಸಂದರ್ಭ’ದಿಂದಲೂ ಬೇರೆಯಾಗಿ ಬರೆದರೆಂಬುದನ್ನು ಇಲ್ಲಿ ಹೇಳಬೇಕಾಗಿದೆ. ನವ್ಯಕಾವ್ಯದಿಂದಾಗಿ ರೂಪುಗೊಂಡ ಮುಕ್ತಛಂದಸ್ಸು, ವಾಸ್ತವಮುಖತೆ, ಸಾಮಾಜಿಕ ಎಚ್ಚರ, ವ್ಯಂಗ್ಯ-ವಿಡಂಬನೆಗಳನ್ನು ಕಣವಿಯವರ ಕವಿತೆ ಹಿಡಿದುಕೊಂಡಿತಾದರೂ, ಕಣವಿಯವರು ತಮ್ಮ ವ್ಯಕ್ತಿತ್ವದ ಮೂಲದ್ರವ್ಯಗಳಾದ ನಿಸರ್ಗಪ್ರಿಯತೆ ಮಾರ್ದವತೆ, ಅನುಭಾವಿಕದೃಷ್ಟಿ, ಮಾನವೀಯತೆ, ಮೌಲ್ಯಪ್ರಜ್ಞೆ- ಇತ್ಯಾದಿಗಳನ್ನು ಬಿಟ್ಟುಕೊಡಲಿಲ್ಲ. ಹೀಗಾಗಿ ಅವರೇ ಹೇಳಿಕೊಂಡಿರುವಂತೆ, ‘ಭಾವಗೀತೆ ಹಾಗೂ ನವ್ಯ ಮಾರ್ಗಗಳ ನಡುವೆ ನಿರ್ಮಾಣಗೊಂಡಿರುವ ಕಂದರಕ್ಕೆ ಇದು ಸೇತುವೆ’ (ದೀಪಧಾರಿ: ಮುನ್ನುಡಿ)ಯಾಯಿತು. ಹೀಗೆ ಕಣವಿಯವರು ನವೋದಯ ಹಾಗೂ ನವ್ಯ ಮಾರ್ಗಗಳೆರಡರ ಸತ್ವವನ್ನು ಬೆಸೆಯುವುದರಲ್ಲಿ ಸಫಲರಾದರು. ನವ್ಯಕಾವ್ಯದ ನಗರ ಗೊಂದಲಗಳ ಅಬ್ಬರದ ನಡುವೆಯೂ-

ಸಾಲಾಗಿ ನವಿಲು ಗರಿಗೆದರಿ ನರ್ತಿಸಿದಂತೆ
ಮುಂಜಾವದಲಿ ಬೇಲಿ ತುಂಬ ನೀಲಿಯ ಹೂವು

(ದೀಪಧಾರಿ. ಪು. ೧)

ಗಳನ್ನು ಕಾಣುವ ಕಣ್ಣನ್ನು ಹೊಸತನದ ಹೆಸರಿನಲ್ಲಿ ಮಾರಿಕೊಳ್ಳಲಿಲ್ಲ. ‘ಮಧ್ಯಾಹ್ನದ ಮಜಲು’ (ಪು. ೮) ಕವಿತೆ, ನಮ್ಮ ಪರಿಸರದ ಯಥಾವತ್ತಾದ ಚಿತ್ರಗಳನ್ನು, ನಿಸರ್ಗವನ್ನು ಕುರಿತ ಅವರ ಹಿಂದಿನ ಕವಿತೆಗಳಿಗಿಂತ ಭಿನ್ನವಾದ ಆಯಾಮದಲ್ಲಿ ಕೊಡುತ್ತದೆ. ಆಫೀಸು ಕಾರಕೂನನ ಕುರ್ಚಿ, ಹಸುರು ಜೊಂಡಿನ ಹೊಂಡದಲ್ಲಿ ಈಸುವ ಎಮ್ಮೆ, ಗೋಡೆಯಲ್ಲಿ ಶಿಲುಬೆಗೇರಿದ ಗಡಿಯಾರ, ಹೀಗೆ ಯಾವ ಆದರ್ಶೀಕರಣದ ಮಾತೂ ಇಲ್ಲದೆ, ವಾಸ್ತವವನ್ನು ಒಂದು ಮೌಲ್ಯವೆಂಬಂತೆ ಒಪ್ಪಿಕೊಳ್ಳುತ್ತದೆ. ‘ಸೇದಿ ಬಿಸಾಡಿರುವ ಸಿಗರೇಟು ತುಂಡಿನೊಲು ದೂರದಲಿ ಕಾಣಿಸಿತು ಮಂಕುಚಿಕ್ಕೆ’-ಎಂಬಂಥ ಮಾತಿನಲ್ಲಿ, ನವೋದಯ ‘ರಮ್ಯತೆ’ಯಿಂದ ಬೇರೆಯಾದ ಮನೋಧರ್ಮವನ್ನು ಕಣವಿಯವರು ಪ್ರಕಟಿಸಿದರು. ಮನುಷ್ಯನ ವ್ಯಕ್ತಿತ್ವ ಹೇಗೆ ಬರಿಯ ನೆರಳಾಗಿದೆ ಎಂಬುದನ್ನು (ನೆರಳು: ಪು. ೨೧) ಹೇಳುತ್ತ ಗತವೈಭವದ ಪರಂಪರೆಯ ಹಿನ್ನೆಲೆಯಲ್ಲಿ ವರ್ತಮಾನದ ವೈಫಲ್ಯದ ವಿವೇಚನೆಯನ್ನು ‘ಪಣತಿ’ (ಪು. ೩೫) ಎಂಬ ಕವಿತೆಯಲ್ಲಿ ಮಾಡಿದ್ದಾರೆ. ‘ಕೊನೆಯ ನಿಲ್ದಾಣ’ (ಪು. ೪೧) ರೈಲುಗಾಡಿಯ ಪಯಣದ ಪ್ರತೀಕದಲ್ಲಿ, ಇಡೀ ವಾಸ್ತವ ಬದುಕಿನ ಅಸ್ತವ್ಯಸ್ತತೆ ಹಾಗೂ ಅರ್ಥಹೀನತೆಯನ್ನು ತುಂಬ ಸೊಗಸಾಗಿ ಚಿತ್ರಿಸುತ್ತದೆ. ಮಕ್ಕಳನ್ನು ಕುರಿತ ಎರಡು ಕವಿತೆಗಳು, ‘ಋತುಸಂಸಾರ’ ‘ಕಾಲಾತೀತ’ ‘ಮನೆಕಿಟಕಿ’ ‘ಮಧುರ ಚನ್ನರ ನೆನಪಿಗೆ’-ಇವು ಈ ಸಂಗ್ರಹದ ಇತರ ಸಾರ್ಥಕ ಕವಿತೆಗಳು. ಒಟ್ಟಿನಲ್ಲಿ ‘ಆಕಾಶ ಬುಟ್ಟಿ’ಯಲ್ಲಿ ಕಾಣಿಸಿಕೊಂಡ ಹೊಸ ತಿರುವು, ‘ದೀಪದಾರಿ’ ಸಂಗ್ರಹದ ಅನೇಕ ಕವಿತೆಗಳಲ್ಲಿ ಬೇರೊಂದು ಹದವನ್ನು ಪ್ರಕಟಿಸಿಕೊಂಡಿದೆ.

ಕಣವಿಯವರ ಮುಂದಿನ ಹೆಜ್ಜೆಗಳಾದ ‘ಮಣ್ಣಿನ ಮೆರವಣಿಗೆ’ (೧೯೬೦) ಮತ್ತು ‘ನೆಲಮುಗಿಲು’ಗಳನ್ನು (೧೯೬೫) ಒಟ್ಟಾಗಿಯೇ ಅವರ ಕಾವ್ಯಜೀವನದ ಪರಿಣತ ಹಂತವೆಂದು ಪರಿಗಣಿಸಬೇಕು. ಈ ಹೊತ್ತಿಗಾಗಲೇ ನವ್ಯ ಕಾವ್ಯ ತನ್ನ ಅಬ್ಬರವನ್ನು ತಗ್ಗಿಸಿಕೊಂಡು, ಬಹುಮಟ್ಟಿಗೆ ಚಿಂತನಪರವಾಗತೊಡಗಿತ್ತು. ನವ್ಯ ಕಾವ್ಯದ ಕಾಲದಲ್ಲಿ ಕನ್ನಡ ಕಾವ್ಯದ ‘ವಸ್ತು’ವಿಗೆ ಹೊಸ ಆಯಾಮಗಳು ಪ್ರಾಪ್ತವಾಯಿತೆಂಬುದು, ಗಮನಿಸಬೇಕಾದ ಸಂಗತಿ. ನಿಸರ್ಗವನ್ನು ಕುರಿತ ಪ್ರೀತಿಯಿಂದ ತಕ್ಕಮಟ್ಟಿಗೆ ಈ ಕಾವ್ಯ ವಿಮುಖವಾದರೂ, ವ್ಯಂಗ್ಯ-ವಿಡಂಬನೆ ಇತ್ಯಾದಿ, ಮಾಮೂಲು ಧೋರಣೆಗಳು ಸ್ವಲ್ಪ ಮಿತಿಮೀರಿತು ಅನ್ನಿಸಿದರೂ, ಮನುಷ್ಯನ ಅಂತರಂಗ ಪ್ರಪಂಚಕ್ಕೆ ಪಾತಾಳ ಗರುಡವನ್ನು ಇಳಿಸಿದ್ದು, ಮತ್ತು ವಾಸ್ತವದಾಚೆಯ ಗೂಢಗಳ ಅನ್ವೇಷಣೆಗೆ ತೊಡಗಿದ್ದು ವಿಶೇಷದ ಸಂಗತಿ. ಇದೆಲ್ಲಕ್ಕಿಂತ ಮಿಗಿಲಾಗಿ, ಈ ಕಾಲದ ಕವಿತೆ ಮುಖ್ಯವಾಗಿ ಮೂರು ವಸ್ತುಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದಂತೆ ತೋರುತ್ತದೆ: ಒಂದು ಮನುಷ್ಯ ಮತ್ತು ಈ ಭೂಮಿ, (Earth and the Man), ಇನ್ನೊಂದು, ‘ಕಾಲ ಮತ್ತು ಮನುಷ್ಯ’ (Time and Man), ಮತ್ತೊಂದು, ‘ಕಾಮ ಮತ್ತು ಮನುಷ್ಯ’ (Sex and Man)-ಈ ಮೂರು ಈ ಕಾಲದ ಬಹುತೇಕ ಕವಿಗಳ ಚಿಂತನೆಯ ಮುಖ್ಯ ವಸ್ತುಗಳಾಗಿವೆ. ಈ ಮೂರು ವಸ್ತುಗಳನ್ನು ಮೂಲಮಾನ- ವನ್ನಾಗಿರಿಸಿಕೊಂಡು ನವ್ಯ ಕಾವ್ಯದ ಸಾಧನೆ-ಸಿದ್ಧಿಗಳನ್ನು ವಿವೇಚಿಸುವ ಕೆಲಸ ಇನ್ನೂ ಆಗಬೇಕಾಗಿದೆ. ಅಡಿಗ, ಕೆ.ಎಸ್.ನ., ಕಣವಿ, ಶರ್ಮ, ಜಿ.ಎಸ್.ಎಸ್.-ಇವರೆಲ್ಲರೂ[1] ಈ ಮೂರು ವಸ್ತುಗಳನ್ನು ಕುರಿತು ಬರೆದಿದ್ದಾರೆ. ಕಣವಿಯವರು ‘ಮಣ್ಣಿನ ಮೆರವಣಿಗೆ’ ಹಾಗೂ ‘ನೆಲ ಮುಗಿಲು’ಗಳಲ್ಲಿ  ನೆಲ ಮತ್ತು ಮನುಷ್ಯನಿಗಿರುವ ಸಂಬಂಧವನ್ನು (ಮಣ್ಣಿನ ಮೆರವಣಿಗೆ: ಶಿಶು ಕಂಡ ಕನಸು), ಮನುಷ್ಯ ಮತ್ತು ಕಾಲಕ್ಕೆ ಇರುವ ಸಂಬಂಧವನ್ನು (ಕಾಲ ನಿಲ್ಲುವುದಿಲ್ಲ; ಕಾಲಪುರುಷನಲ್ಲಿ ಕವಿಗಳ ಕೋರಿಕೆ) ವಿವೇಚನೆ ಮಾಡಿದ್ದಾರೆ. ‘ಮಣ್ಣಿನ ಮೆರವಣಿಗೆ’ಯ ಕೆಲವು ಕವಿತೆಗಳಲ್ಲಿ, ಮೊದಲು ಎಳೆಯ ಬೆರಗುಗಣ್ಣಿಗೆ ಪರಿಚಿತವಾದ ಈ ‘ನೆಲ’ದ ಸೊಗಸುಗಳು, ಒಗಟುಗಳು, ಬೆಳೆಬೆಳೆದಂತೆ ಅನುಭವಕ್ಕೆ ಬರುವ ಅದರ ವಾಸ್ತವಗಳು ಇತ್ಯಾದಿಗಳ ಜತೆಗೇ ತಾನು ನೆಲದಮೇಲೆ ನಿಂತ ಪರಿಸರ, ಈ ಅಪೂರ್ವ ಬೆಳಕುಗಳ, ವಿಶ್ವದ ಹಿನ್ನೆಲೆಯಲ್ಲಿ ಎಷ್ಟೊಂದು ಅಸ್ತವ್ಯಸ್ತವಾಗಿದೆ, ಶೋಚನೀಯವಾಗಿದೆ ಎಂಬುದನ್ನೂ ಗುರುತಿಸುವ ‘ಸಮಗ್ರತೆ’-ಕಾಣಿಸುತ್ತದೆ. ಈ ಲೋಕದ ಬೆರಗುಗೊಳಿಸುವ ಚೆಲುವಿನಲ್ಲಿ ತಲ್ಲೀನವಾಗುವುದರಲ್ಲಿಯೇ ತೃಪ್ತಿಯಿದೆ ಎಂದುಕೊಳ್ಳುತ್ತಿದ್ದ ಹಿಂದಿನ ನಿಲುವು ಕೇವಲ ಭಾವಾತಿರೇಕದ್ದು ಎಂಬ ಅರಿವಾಗಿ, ಈ ಲೋಕದ ಬೆರಗು-ಚೆಲುವುಗಳ ನಡುವೆ, ಬದುಕನ್ನು ಕಲಕುವ ವಾಸ್ತವಗಳು, ನಂಬಿಕೆಗಳ ಬೇರನ್ನೆ ಅಲುಗಿಸುವ ಘಟನೆಗಳು ನಮ್ಮ ವ್ಯಕ್ತಿತ್ವದ ಒಂದು ಭಾಗವೆಂದು ಒಪ್ಪಿಕೊಳ್ಳುವ ಬೆಳವಣಿಗೆ ಈ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ‘ಒಟ್ಟಿನಲ್ಲಿ ಪರಿಸ್ಥಿತಿ ತುಂಬಾ ಶೋಚನೀಯ’ (ಪು. ೪), ‘ದಾರಿಯಲಿ ಬರುವ ಸೇತುವೆಯೆಲ್ಲ ಭದ್ರವೊ’  (ಪು. ೧೭)-ಎಂಬ ಭಯ-ಸಂಶಯಗಳು ಕವಿಯನ್ನು ಕಾಡುತ್ತವೆ. ‘ನೆಲ ಮುಗಿಲು’ ಸಂಗ್ರಹದ ‘ಕಾಲ ನಿಲ್ಲುವುದಿಲ್ಲ’ ಎಂಬ ಕವಿತೆ, ಕಾಲ ಮತ್ತು ಮನುಷ್ಯನ ಸಂಬಂಧವನ್ನು ಕುರಿತದ್ದಾಗಿದೆ. ಕಾಲದ ಕಲ್ಪನೆಯನ್ನು, ಬದುಕಿನ ವಿವಿಧ ನೆಲೆಗಳ ಹಿನ್ನೆಲೆಯಲ್ಲಿ, ವ್ಯಾಖ್ಯಾನಿಸಲಾಗಿದೆ. ಬದುಕಿನ ವಿವಿಧ ಪರಿವರ್ತನೆಗಳ ಮೂಲಮಾನದಲ್ಲಿ, ಕಾಲವೆಂಬ ಅಮೂರ್ತ ಕಲ್ಪನೆಯನ್ನು ಮೂರ್ತಗೊಳಿಸುವ ಈ ಕವಿತೆ, ನಿಜವಾದ ‘ಕಾಲ’ದ ಅರಿವಿನಿಂದ ವ್ಯಕ್ತಿತ್ವಕ್ಕೆ ಬರುವ ಪರಿಣತಿಯನ್ನು ಚಿತ್ರಿಸುತ್ತದೆ. ನೆಲ ಮತ್ತು ಮನುಷ್ಯ, ಕಾಲ ಮತ್ತು ಮನುಷ್ಯ ಈ ಎರಡನ್ನು ಕುರಿತಂತೆ ಮಾತ್ರ ಅಲ್ಲ, ಬೇರೆಯ ಇನ್ನಿತರ ವಸ್ತುಗಳ ಬಗೆಗೂ ಕಣವಿಯವರು ಕಣ್ಣು ತೆರೆದು ನೋಡಿದ್ದಾರೆ. ಈ ಎರಡು ಕವನ ಸಂಗ್ರಹದಲ್ಲಿ ಅವರ ಕಾವ್ಯ ಕೇವಲ ಅಂದಿನ ಸಾಹಿತ್ಯಕ ವಾತಾವರಣಕ್ಕೆ ಮಾತ್ರ ಬದ್ಧವಾಗದೆ, ಸಮಗ್ರ ದೇಶದ ವಾತಾವರಣಕ್ಕೆ ಪ್ರತಿಸ್ಪಂದಿಸಿದೆ. ೧೯೬೦ ರಿಂದ ೧೯೬೫ರ ಅವಧಿಯ ಈ ಕಾಲ, ನಾಡನ್ನು ಕಟ್ಟುವ ವಿವಿಧ ಕ್ರಿಯಾ ಚಟುವಟಿಕೆಗಳ ಕಾಲ: ಹಾಗೆಯೇ ಚೀನಾ ದೇಶದ ಧಾಳಿಯಿಂದ ಈ ರಾಷ್ಟ್ರ ತತ್ತರಿಸಿದ ಕಾಲ, ನೆಹರೂ ಅವರ ನಿಧನದಿಂದ ಆಘಾತಗೊಂಡ ಕಾಲ. ಈ ಪರಿಸರಕ್ಕೆ ಕಣವಿಯವರ ಕಾವ್ಯ ದನಿಗೊಟ್ಟಿದೆ. ‘ಮಣ್ಣಿನ ಮೆರವಣಿಗೆ’ ಸಂಗ್ರಹದ ‘ಅಪರಾವತಾರ’ (ಪು. ೧೦), ‘ಲಾಗ’ (ಪು. ೩೨); ನೆಲ ಮುಗಿಲು ಸಂಗ್ರಹದ ‘ಜಗದೇಕಮಲ್ಲ’ (ಪು. ೨೮) ಕವಿತೆಗಳಲ್ಲಿ ಸಮಕಾಲೀನ ರಾಜಕೀಯದ ಭ್ರಷ್ಟಾಚಾರಗಳನ್ನೂ, ರಾಜಕಾರಣಿಗಳನ್ನೂ ವಿಡಂಬಿಸಿದ್ದಾರೆ. ಹಾಗೆಯೆ ‘ರಾಷ್ಟ್ರದ ಕರೆ’, ‘ಇಂದೆ ಸೀಮೋಲ್ಲಂಘನ’, ‘ನೆಹರೂ ಶ್ರದ್ಧಾಂಜಲಿ’, ‘ಭಾರತ ಸುಪುತ್ರನ ಕೊನೆಯ ಬಯಕೆ’ (ನೆಲಮುಗಿಲು. ಪು. ೪೫; ೪೭; ೫೦; ೫೨) ಇತ್ಯಾದಿ ಕವಿತೆಗಳಲ್ಲಿ ಭಾರತೀಯ ಪ್ರಜಾಪ್ರಭುತ್ವಕ್ಕೆ ಒದಗಿದ ಆತಂಕ, ಆಘಾತಗಳನ್ನೂ ಚಿತ್ರಿಸಲು ಮರೆಯುವುದಿಲ್ಲ. ಜೊತೆಗೆ ‘ಜೀರ್ಣೋದ್ಧಾರ’, ‘ನಾಳಿನ ನವೋದಯ’ (ಮಣ್ಣಿನ ಮೆರವಣಿಗೆ ಪು. ೧೮; ೨೬), ‘ಹೊಸ ಬಾಳಿನ ಯೋಜನೆ’ (ನೆಲಮುಗಿಲು: ಪು. ೧೮) ಈ ಕವಿತೆಗಳಲ್ಲಿ ರಾಷ್ಟ್ರನಿರ್ಮಾಣದ, ಹಾಗೂ ಈ ರಾಷ್ಟ್ರದ ಏಳು-ಬೀಳುಗಳ ಪರಿಯನ್ನು ಬಿಂಬಿಸಲಾಗಿದೆ. ಈ ಕವಿತೆಗಳಲ್ಲಿ ಎಷ್ಟೋ, ಕಾವ್ಯ ದೃಷ್ಟಿಯಿಂದ ಉತ್ಕೃಷ್ಟವಾಗಿಲ್ಲವೆಂಬುದು ನಿಜ; ಆದರೆ ಇವುಗಳು ಕಣವಿಯವರ ಕವಿ ಮನೋಧರ್ಮ ಈ ರಾಷ್ಟ್ರಜೀವನದೊಂದಿಗೆ ಸದಾ ಎಚ್ಚರವಾಗಿತ್ತೆಂಬುದನ್ನು ಗುರುತಿಸುವ ದಾಖಲೆಗಳಾಗಿವೆ. ಸ್ವಾತಂತ್ರ್ಯೋತ್ತರ ಪರಿಸರದಲ್ಲಿ ಈ ದೇಶದ ಆಗುಹೋಗುಗಳ ಬಗೆಗೆ ಒಂದು ರೀತಿಯಲ್ಲಿ ತುಟಿ ಬಿಗಿದುಕೊಂಡು, ಕೇವಲ ವ್ಯಂಗ್ಯ-ವಿಡಂಬನೆಗಳಿಗೆ ಮಾತ್ರ ಬಾಯಿ ತೆರೆಯಲು ಮುಂದಾಗುತ್ತಿದ್ದ ‘ನವ್ಯ’ರ ನಡುವೆ, ಈ ದೇಶದ ಘಟನಾ ಪರಂಪರೆಗಳ ಬಗೆಗೆ ಸ್ಪಂದಿಸುತ್ತ, ಮೆಚ್ಚಬೇಕಾದುದನ್ನು ಮೆಚ್ಚುತ್ತಾ, ಮೆಚ್ಚಲಾಗದ್ದನ್ನು ಚುಚ್ಚುತ್ತಾ ಕಣವಿಯವರ ಕಾವ್ಯ, ಉದ್ದಕ್ಕೂ ಪರಿಸರ ಪ್ರಜ್ಞೆಯನ್ನು ಪ್ರಕಟಿಸಿಕೊಂಡಿದೆ. ಅವರ ಮುಂದಿನ ಕೆಲವು ಕವಿತೆಗಳಲ್ಲಿಯೂ ೧೯೭೪ರ ವರೆಗಿನ ಅವಧಿಯಲ್ಲಿ ನಡೆದ ಈ ದೇಶದ ಹೊಯ್ದಾಟಗಳನ್ನು, ರಣವಿಕ್ರಮಗಳನ್ನು, ಲಾಲ್ ಬಹದೂರ್‌ಶಾಸ್ತ್ರಿಯವರಂಥ ವ್ಯಕ್ತಿತ್ವದ ಬಗೆಗೆ ಪ್ರಶಂಸೆಯನ್ನೂ ಅಭಿವ್ಯಕ್ತ ಪಡಿಸಿದ್ದಾರೆ. ಆದರೆ ಈ ಪರಿಸರದ ನಡುವೆ ಅವರು ನಿಸರ್ಗದ ಬಗೆಗಿನ ರುಚಿಯನ್ನು ಕಳೆದುಕೊಳ್ಳುವುದಿಲ್ಲ; ದೈನಂದಿನ ಪ್ರೀತಿ-ವಾತ್ಸಲ್ಯಗಳ ಬಗೆಗೆ ಮುಕ್ತ ಕಂಠದಿಂದ ದನಿಗೊಡದೆ ಇರುವುದಿಲ್ಲ. ‘ನಿಂತಲ್ಲಿಯೇ ನೀಲಿಗಟ್ಟಿರುವ ಆಕಾಶ’ವನ್ನೂ. ‘ಕಿಟಕಿಯಾಚೆಗೆ ದೂರ ಬೆಟ್ಟ ಬಯಲುಗಳಲ್ಲಿ ಮುಂಗಾರು ಮಳೆ ಬೆಳೆದ ಭಾವ ಮೇಳವನ್ನೂ,’ ‘ದಿಗಂತದಲಿ ಇಳಿಬಿಟ್ಟಿರುವ ಗಿರಿಸಾನುಗಳ ನೀಲತೆರೆ ಮೇಲೆ ಚಂದ್ರನು ಬರಿಯ ದುಂಡುಗೆರೆ’ಯಾಗಿರುವುದನ್ನೂ ಕಾಣುವುದರ ಜತೆಗೆ,

ಯುಗ ಯುಗದ ವಿಸ್ಮೃತಿಯ ಬಾವಿತಳದಿಂದ ಕಪ್ಪಲಿ ಹೊಡೆದು
ಜೀವಕ್ಕೆ ನೀರು ಹಾಯಿಸುವ ಜುಳು ಜುಳು ನಿನಾದ

(ಮಣ್ಣಿನ ಮೆರವಣಿಗೆ, ಪು. ೩೫)

ವನ್ನೂ ಕೇಳಬಲ್ಲರು. ಮಗಳು ‘ರಂಜನಾ’ಳ ಬಾಲಲೀಲೆಯ ಸೊಗಸನ್ನು ವರ್ಣಿಸುತ್ತಲೇ ಮಳೆಗಾಲವನ್ನು ಕುರಿತು ಮೈದುಂಬಿ ಕವಿತೆಗಳನ್ನು ಬರೆಯುತ್ತಾರೆ. ಮಳೆಗಾಲವನ್ನು ಕುರಿತು ‘ನೆಲಮುಗಿಲು’ ಸಂಗ್ರಹದಲ್ಲೇ ಎರಡು ಕವಿತೆಗಳಿವೆ. ಇದಕ್ಕೆ ಹಿಂದಿನ ಮತ್ತು ಮುಂದಿನ ಸಂಕಲನಗಳಲ್ಲಿ ಇರುವ ‘ಮಳೆಗಾಲ’ವನ್ನು ಕುರಿತ ಕವಿತೆಗಳನ್ನೆಲ್ಲ ಒಟ್ಟಿಗೆ ಇರಿಸಿಕೊಂಡು ನೋಡಬೇಕು. ಹೊಸಗನ್ನಡ ಕವಿಗಳಲ್ಲಿ ಮಳೆಗಾಲವನ್ನು ಕುರಿತು ಕಣವಿಯವರಂತೆ ತನ್ಮಯವಾಗಿ ಬರೆದವರಿಲ್ಲವೆಂದೇ ಹೇಳಬೇಕು. ಕುವೆಂಪು ಅವರಿಗೆ ಸೂರ‍್ಯೋದಯ, ಬೇಂದ್ರೆಯವರಿಗೆ ಶ್ರಾವಣ, ಕಣವಿಯವರಿಗೆ ಮಳೆಗಾಲ, ತುಂಬ ಅಚ್ಚುಮೆಚ್ಚಿನ ಹಾಗೂ ತನ್ಮಯತೆಯ ವಸ್ತುಗಳಾಗಿವೆ. ಕಣವಿಯವರ ಕಾವ್ಯದ ಮತ್ತೊಂದು ವಿಶೇಷತೆ ಇರುವುದು ಅವರ ಸಾನೆಟ್‌ಗಳಲ್ಲಿ. ‘ನೆಲಮುಗಿಲು’ ಸಂಗ್ರಹದ ‘ಪ್ರತಿಮೆ’ ‘ಪ್ರತಿಬಿಂಬ’ ಎಂಬ ಭಾಗದಲ್ಲಿರುವ ಮತ್ತು ಮುಂದಿನ ಅವರ ಇನ್ನೆರಡು ಕವನ ಸಂಗ್ರಹಗಳಲ್ಲಿಯೂ ಕಾಣಿಸಿಕೊಳ್ಳುವ ಸಾನೆಟ್‌ಗಳು ಕಣವಿಯವರ ಕಾವ್ಯಶಿಲ್ಪದ ಮಾದರಿಗಳಾಗಿವೆ. ಶ್ರೀನಿವಾಸ, ಬೇಂದ್ರೆ, ಕುವೆಂಪು ಮತ್ತು ಪು.ತಿ.ನ. ಅವರಿಗಿಂತಲೂ ಭಿನ್ನವಾದ ಹಾಗೂ ವಿಶಿಷ್ಟವಾದ ಸಾನೆಟ್‌ಗಳ ರಚನೆ ಕಣವಿಯವರದು. ಅವರ ಒಂದೊಂದು ಸಾನೆಟ್‌ಗಳು, ಹರಳುಗೊಂಡ ಭಾವದ ಪ್ರತಿಮೆಗಳಂತಿವೆ. ತಮ್ಮ ಪ್ರೀತಿ-ವಿಶ್ವಾಸ -ಅಭಿಮಾನ- ಗೌರವಗಳಿಗೆ ಪಾತ್ರರಾದ ವ್ಯಕ್ತಿಗಳ ಗುಣ – ಸ್ವಭಾವಗಳನ್ನು ಕುರಿತು ಕಣವಿಯವರು ಬರೆದಷ್ಟು ‘ಸಾನೆಟ್’ಗಳನ್ನು, ಬಹುಶಃ ಕನ್ನಡದಲ್ಲಿ ಬೇರೆ ಯಾರೂ ಬರೆದಿರಲಾರರೆಂದೇ ನನ್ನ ತಿಳಿವಳಿಕೆ. ಪ್ರೀತಿ, ವಿಶ್ವಾಸ-ಗೌರವಗಳು ಮಾನವೀಯ ಸಂಬಂಧಗಳಲ್ಲಿ ತೀರಾ ಮೌಲಿಕವಾದವುಗಳೆಂಬ ಅಂಶವನ್ನು ಈ ರಚನೆಗಳ ಮೂಲಕ ಎತ್ತಿ ಹೇಳುವುದರ ಜತೆಗೆ, ಕಣವಿಯವರ ವ್ಯಕ್ತಿತ್ವದ ಲಕ್ಷಣವನ್ನೂ ಸಾನೆಟ್‌ಗಳು  ತೆರೆದು ತೋರುತ್ತವೆ. ಕಣವಿಯವರ ಕಲೆಗಾರಿಕೆ (craftmanship) ಈ ಸಾನೆಟ್‌ಗಳಲ್ಲಿ ಒಂದು ಪರಿಣತೆಯ ನೆಲೆಗೆ ನಿಂತಿದೆ.

ಮುಂದಿನ ‘ಎರಡು ದಡ’ (೧೯೬೯) ಮತ್ತು ‘ನಗರದಲ್ಲಿ ನೆರಳು’ (೧೯೭೪)-ಈ ಸಂಗ್ರಹಗಳು, ಕಣವಿಯವರ ಕಾವ್ಯದ ಭಾಷೆ ಬೇರೊಂದು ಆಯಾಮವನ್ನು ಪಡೆಯುತ್ತಿರುವುದರ ದಾಖಲೆಗಳಾಗಿ ಮಾತ್ರ ಗಮನಾರ್ಹವಾಗಿವೆ. ಈ ಸಂಗ್ರಹಗಳಲ್ಲಿ ‘ನಂಬಿಕೆ’ (ಎರಡು ದಡ: ಪು. ೩೯), ‘ನಗರದಲ್ಲಿ ನೆರಳು’ ‘ಗುಬ್ಬಿ’ (ನಗರದಲ್ಲಿ ನೆರಳು ಪು. ೧೨೨) ಇಂಥ ಕೆಲವು ಕವಿತೆಗಳು ಸಾರ್ಥಕವಾದವುಗಳೆನ್ನಿಸಿದರೂ, ಒಟ್ಟಿನ ಮೇಲೆ ತೀರಾ ವಿಶೇಷವಾದ್ದೇನನ್ನೂ ಈ ಸಂಗ್ರಹಗಳು-ಆಗಲೇ ಪ್ರಸ್ತಾಪಿಸಿರುವಂತೆ ಕೆಲವು ಸಾನೆಟ್‌ಗಳನ್ನು ಹೊರತುಪಡಿಸಿ-ಕೊಡುವಂತೆ ತೋರುವುದಿಲ್ಲ. ಹಾಗೆ ನೋಡಿದರೆ, ಕನ್ನಡ ಕಾವ್ಯವೇ, ಈ ಕಳೆದ ಹತ್ತು ಹದಿನೈದು ವರ್ಷಗಳಿಂದ ತನ್ನ ಕಾವನ್ನು ತಕ್ಕಷ್ಟು ಕಳೆದುಕೊಂಡಿದೆ; ಮತ್ತು ಹೊಸ ಸಾಧ್ಯತೆಗಳ ಅನ್ವೇಷಣೆಯಲ್ಲಿದೆ. ಹೀಗಿರುವಾಗ ಕಣವಿಯವರ ‘ಎರಡು ದಡ’ಗಳ ನಡುವೆ ಅಷ್ಟೇನೂ ಹೊಸ ನೀರು ಹರಿದಂತೆ ತೋರದಿರುವುದು ಆಶ್ಚರ್ಯವೇನೂ ಅಲ್ಲ. ಆದರೆ, ಶಾಂತಿನಾಥ ದೇಸಾಯಿಯವರು ಹೇಳುವಂತೆ ಇದು ‘ಇನ್ನೊಂದು ಸಾಧನೆಯ ಸಿದ್ಧತೆ’ ಎಂಬುದನ್ನು ಗಮನಿಸಬೇಕು.[2] ಈಗಾಗಲೇ ತಮ್ಮ ಕಾವ್ಯದ ಸೊಗಸಿನಿಂದ, ಕನ್ನಡ ಜನಮನವನ್ನು ಗೆದ್ದುಕೊಂಡಿರುವ ಕಣವಿಯವರ ವ್ಯಕ್ತಿತ್ವ, ಸದಾ ನಿರಾತಂಕ ಮನಃಸ್ಥಿತಿಯ, ಯಾವ ಒಳ್ಳೆಯದರ ಬಗೆಗೂ ರುಚಿಯನ್ನು ಕಳೆದುಕೊಳ್ಳದ, ಯಾವ ರೋಚಕವಾದ ಪಕ್ಷ ಪಂಥಗಳಿಗೂ ತನ್ನನ್ನು ಗಂಟು ಹಾಕಿಕೊಂಡು ಸೀಮಿತಗೊಳಿಸಿಕೊಳ್ಳದ, ಮಾನವೀಯ ಸಂಬಂಧಗಳಲ್ಲಿ ನಂಬಿಕೆಯನ್ನು ಕಳೆದುಕೊಳ್ಳದ, ಮತ್ತು ಅದಮ್ಯವಾದ ಜೀವನ ಪ್ರೀತಿಯ-ನಿಲುವುಗಳಿಂದ, ಈಗಾಗಲೇ ಬದಲಾಗುತ್ತಿರುವ ಕಾವ್ಯ ಪರಿಸರದಲ್ಲಿ ಯಾವ ಹೊಸ ಹೆಜ್ಜೆಗಳನ್ನು ಮೂಡಿಸಬಲ್ಲದೆಂಬ ಬಗೆಗೆ ಕಾದು ನೋಡಬೇಕಾಗಿದೆ.

ನವೋದಯ-೧೯೭೬


[1] ರಾಮಚಂದ್ರ ಶರ್ಮರು ಮಖ್ಯವಾಗಿ ಭೂಮಿ ಮತ್ತು ಮನುಷ್ಯ; ಕಾಮ ಮತ್ತು ಮನುಷ್ಯ, ಈ ಸಂಬಂಧವನ್ನು ಕುರಿತು ಬರೆದರೆ, ಉಳಿದವರು ಮುಖ್ಯವಾಗಿ, ಭೂಮಿ ಮತ್ತು ಮನುಷ್ಯ, ಕಾಲ ಮತ್ತು ಮನುಷ್ಯ-ಇವುಗಳ ಸಂಬಂಧವನ್ನು ಕುರಿತು ಬರೆದರು.

[2] ‘ನಗರದಲ್ಲಿ ನೆರಳು’ ಸಂಗ್ರಹದ ಒಳ ಪುಟಗಳಲ್ಲಿ.

(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)