ಕೇರೀ ಕಾಳಯ್ಯ ಗೌಡ
ಅವ್ನಿಗೊಬ್ಬಳು ಮಗಳ್ ಹುಟ್ಟಿ
ಹಾಲುಂಬಾ ಯೇಳಿದಲ್ಲಿ
ತಾಯಿಯಾರು ಸಂದೇಹೋಳು

ಅಪ್ಪ ಕಾಳಯ್ಯ ಗೌಡಾ
ಸಾಕೀದ ಸಲಗೀದಾ
ಹುಟ್ಟಿ ಮೂರು ವರುಸಾವ್ಕೇ
“ಕೇಳಿಕೇಳಿ ಅಪ್ಪಯ, ಕೇಳೀ

ನಾ ಹೀಗೇ ವಿದ್ದೂ ಚಂದವಲ್ಲಾ
ನಾ ಹುಟ್ಟಿ ಕಸಬಾ ಮಾಡಲುಬೇಕೇ”
ಲಂದೂ ಲಮ್ಮೆ ಹೇಳೂಲಂಗೂ
ನಂಗ್ಯೇಳೂ ಶಾರಾ ಹೂಗಿನ ಶಾರಾ

ಹೂಗಿನಾ ಶರವಾ ಕಡದೀ ಕೋಡೂ
ಹೂಗಿನಾ ಶರವಾ ಕಡದೀ ಕೊಟ್ಟಾ
ಸಾಗರ ಪೇಟೇಗೆ ಹೋಗೋ ನೀನು
ಹೂಗಿನ ಗಿಡವಾ ಕೊಂಡೇ ಬಾರೋ

ಹೂಗಿನ ಗಿಡವಾ ಕೊಂಡೇ ಬಂದಾ
ಗನಾ ಮಾಡೀ ನೆಟ್ಟಿಕೊಟ್ಟಾ
ಹೂಗಿಗೆ ನೀರಾ ಹೊಯ್ತೇಲಿದ್ಲು
ನೀರ ಹೊಯ್ದು ಮೊಕೆಯಾದೋ

“ಕೇಳೋ ಕೇಳೋ ಲಪ್ಪಯ, ಕೇಳೀ
ಹೂಗೆಲ್ಲಾ ಮೊಗ್ಗೆ ಬಂದೋ
ನನಗೆ ಹೂಗಿನ ಶಿಬ್ಬಲು ಬೇಕೋ
ಹೂಗನಾರೂ ಹೊತ್ತೀ ಹೋಪಕೇ

ಲಷ್ಟು ಮಾತಾ ಕೇಂಬರಾಗೇ
ಹೂಗಿನ ಶಿಬ್ಬಲ ಕೊಂಬಲ್ ಹೋದಾ
ಸಾಗರ ಪೇಟೆಗೆ ಸೆಡೀದಾಸೇ
ಹೂಗಿನ ಶಿಬ್ಬಲ ಕೊಂಡೀಕೊಂಡಾ

ಹೂಗಿನ ವಸ್ತು ಕೊಂಡೀಕಂಡಾ
ಮನೀಗಾರೂ ಬರೂವನೇ
ಕೇರೀ ಕಾಳಯ್ಯ ಗೌಡನು
ಮಗಳೂ ಹೂಗಿನ ಮಲ್ಲೂ

ಹೂಗಂಬ್ ಹೂಗಾ ಕೊಯ್ದಳು
ಕಟ್ಟೇ ಶಿಬ್ಬಲ ತಂದೀಕೊಂಡೊ
ಶಿಬ್ಬಲ ತುಂಬಾ ಹೂಗಾತುಂಬೀ
ಬಿಶಲಿಗೇ ಸುತ್ತುಗಿ ಹಿಡುಕಂಡು

ಹೂಗಿನ ಶಿಬ್ಬಲ್ ಹೊತ್ತೀಕಂಡೂ
ಸಾಗರ ಪೇಟೀಗ್ ಹೋಗೂವಾಕೇ
ಸೌನಿ ಅವಳಾ ನಡೀದಾಳ
ಆನೀ ಮಾವ್ತಾ ಲಂಬನ್ನಾ

ಆನಿಗ ಶರಪಳಿ (ಸರಗೀ) ಹಾಕೀಕೊಂಡು
ಆನೀ ಸರಪಳಿ ದಾಟಿ ಹೋಳು
“ಕೇಳೀ, ಕೇಳೀ ಅರ‍್ಸಗಳ, ಕೇಳಿ
ನಾ ಪಟ್ಟಾದಾ ಮರಿಯಾನೆ

ಹುಲ್ಲಾ ನೀರಾ ಹುಟ್ಟಲಿಲ್ಲೇ
ಜೋಯ್ಸರ ಮನಿಗೋಡೀ ಹೋದಾ
ಕೇಳೀ ಕೇಳೀ ಜೋಯ್ಸರೆ, ಕೇಳೀ
ನನ ಪಟ್ಟದು, ಮರೀಯಾನೀ

ಹುಲ್ಲಾ ನೀರಾ ಮುಟ್ಟಾಲಿಲ್ಲಾ
ಆಗೇಲೇನಾ ಮಾಡಾಲಂದಾ
“ಕೇಳೀ ಸ್ವಾಮೀ” ಲಂದೂ ಹೇಳೀ
ಆಗೇಲಾರೂ ಹೇಳೂವಾರೂ

“ಆನೇಯಾರೂ ಲಂಬಾರೀಗಾ
ಕೇಳೀ ಕಾಳಯ್ ಗೌಡ್ನಾರೂ,
ಮಗಳೂ ಹೂಗಿನ ಮಲ್ಲೂ
ಆನೀ ಸರಪಳಿ ದಾಟೀ ಹೋಳು

ಆನೆ ಅವ್ವ ಮೇನೆ ಮನಸಾ ಹೊತ್ತ
ಆನೀಗಾರೂ ಕೊಡಬೇಕೂ”
ಎಂದೂಲಾರೂ ಹೇಳೂವಾಗೂ
ಲಷ್ಟು ಮಾತಾ ಕೇಳಿಕಂಡೂ

ನಾ ಅರದಾರಾಜೀ ಬಿಡುತೇನಿ
ಅವಳಾ ನೀವ್ ಆಸ್ತೀ ಕೊಡುಬೇಕೇ
ಆ ಊರಂತಾ ಅರಸೂ ಅವ
ಕಾಳಯ್ಯಗೌಡಾಗೆ ಕರಿಯಾ ಬಿಟ್ತು

ಕೇಳಾ ಕೇಳಾ ಕಾಳಯ್ ಗೌಡಾ
ನಿನ್ನ ಮಗಳೇ ಹೂಗಿನಮಲ್ಲು
ಆನೀಗಾವ್ತೀ ಕೊಡಲು ಬೇಕು
ಲಂದು ವಮ್ಮೋ ಹೇಳುವಾರು

“ಕೇಳಿ ಕೇಳಿ ಸ್ವಾಮೀ, ಕೇಳೀ
ನನ್ನಾ ಮಗಳೇ ಹೂಗಿನ ಮಲ್ಲು
ಆನೀಗ್ ಆವ್ತೀ ಕೊಡಲಾರೆ”
ಲಂದೂಲಾರೂ ಹೇಳೂವಾಗೇ

ನಿನ್ಗೆ ರಕ್ತದ ರಾಜು ಬಿಟ್ಟಿ ಕೊಡುವೆ
ಕಳಸೀ ಬಿಚ್ಚೀ  ಹೊನ್ನಲಳವೇ”
ಕೇರೀ ಕಾಳಯ್ಯಗೌಡ
ಮನಿಗೊಮ್ಮೆ ಬರತೇಲಿದ್ದಾ

ಯಂತಾಕ್ ಕರದೀಯಪ್ಪಾ ?
ನಿನ್ನ ಮಗಳೆ ಹೂಗಿನ ಮಲ್ಲು
ಆನೀಗ್ ಆವ್ತೀ ಕೊಡುಲಂದ್ರೂ
“ನೀ ಹೆದ್ರಲಾ ಬಾರಾ ತಂದೇ

ಕಳಸೀ ಬಿಚ್ಚೀ ಹೊನ್ನಾಅಳಸೋ
ಅರದರಾಜು ಬಿಡಿಸಿಕೋಳೋ
ಲಂದೂಲೆಮ್ಮೆ ಹೇಳೀ ಕೊಂಡಾ
ಅರದಾ ರಾಜೂ ಬಿಟ್ಟು ಕೊಡುವೆ

ಕಳಶೀಲೆ ಹೊನ್ನಾ ಅಳಸೀಕಂಡಾ
ಮನಿಗಾರೂ ಬಂದಾನಾಗ
ಹೂವಮ್ಮ ಹೂಗಿನ ಮಲ್ಲು
ಹೂಗಿನ ಶಿಬ್ಬಲ ಹೊತ್ತಿಕಂಡೂ

ಬೇಕಂಬ್ ಹೂಗಾ ಮುಡುಕಂಡೂ
ಹೂಗಿನ ಶಿಬ್ಬಾಲ್ ಹೊತ್ತಿಕಂಡ್ಲು
ಕೇರಿ ಮೇನೇ ನೆಡೂವಾಂಗೇ
“ಯಾರಪ್ಪಾ ಲಾನೀ ಮಾವ್ತಾ ?

ಆನೀ ಶರಿಂಗ ಕಡಿಯೋ ಬಾರೋ’
ಅಂದುಲೊಮ್ಮೆ ಹೇಳುವಾಂಗೋ
ಆನೀ ಶರಿಯಾ ಕಡದಾ ಬಿಟ್ಟಾ
ಪಟ್ಟಾದಾ ಮರೀಯಾನೇ

ಅವಳ ಬೆನ್ನಕೂಡೀ ಹೋದವಾನೀ
ಮೂರಾ ಹರಳಾ ಹಕ್ಕೀ ಕಂಡಾ
ಮಂತರಸೀ ಲಿಟ್ಟಲವಳೂ
ಮಾದೊಡ್ಡ ಪರ್ವತವಾದೋ

(ಅವಳ್ ಹೆಕ್ಕಂಡ್ಲು)
ಆಗ್ ಹತ್ತೀ ಹತ್ತೀ ಸೋತೇ ಬಿಟ್ಟು
ಬೆನ್ನಗೂಡೀ ಹೋದವಾನೀ
ಹಿಂತಿರಗೀ ನೋಡೀಳಾಗೇ
ಆನೆ ಹತ್ತೀ ಸೋತೀ ಬಿಟ್ಟ :

ಹಿಂದ ತಿರಗೀ ನೋಡೀಳಾನೀ
ಮುಂದೆ ಮುಂದೆ ಹೋಗೂವಂಗೇ
ಆನೆ ಬೆನ್ನಗೂಡೀ ಹೋದವಾಲೇ
ಆನೆ ಹಿಂತಿರ‍್ಗ್ ನೋಡೀಕಂಡೂ

ಮತ್ತೊಂದೆ ಹರಳಾ ಹೊಡದೇ ಬಿಟ್ಲು
ಅಲ್ಲೊಂದ್ ಹೊಳಿಯೇ ಆಗೀ ಹೋಯ್ತೂ
ಹೊಳೀಕಿಂದ ಲಚೇ ಅವಳೂ
ಹೊಳ್ಯಕಿಂದೆ ಲೀಚೇಲಾನೀ
“ಕೇಳೆ ಕೇಳೆ ತಾಯೇ, ಕೇಳೇ

ನಾ ಹೊಳಿಕಿಂದೆ ಲೀಚೆ ನೀನೂ
ಹೊಳ್ಯಕಿಂದೆ ಆಚೇ ನಾನು
ನೀನೇ ನನ್ನಾ ಯೇರೀ ಬಾರೆ
ನಾ ನಿನ್ನಾ ಪಡದಾ ಮಗಾ
ನೀನೇ ನನ್ನ ಪಡದಾ ತಾಯೀ

ಮನೀಗ್ ಹೋಪೋ “ಲಂದವಾನೀ
“ಪಟ್ಟದಾ ಮರಿಯಾನೇ
ನಿನ್ನ ನಂಬಗಿ ನನಗಿಲ್ಲ”
“ಕೇಳೆ ಕೇಳೆ ತಾಯೇ, ಕೇಳೇ

ಆನೇ ಆರೂ ಹೇಳೂವಾಗೂ
“ಕೇಳೊ ಕೇಳೋ ಲಾನಿ ಮಾವ್ತಾ,
ಆನೆಗೆ ಶರಿಯಾ ಲಾಕೋ ಬಾರೋ”
ಆನೆಯಾರೂ ಸೋತೇ ಹೋದೋ
ಪೇಟೇ ಮೇನೇ ಬರೂವಾಂಗೇ

ಆನೆ ಸೋತೂ ಬಂದಾವಾಲೇ”
ಅಷ್ಟು ಮಾತಾ ಕೇಳೀಕಂಡಾ
ಆನೇ ಸರಿಯಾ ಹಾಕೀ ಬಿಟ್ಟಾ
ಕಳಸೀ ಬಿಚ್ಚೀ ಹೊನ್ನಾನಳದೋ

ಪ್ರತಿ ಸಾಲಿನ ತುದಿಗೆ ತಂದನಾನಾ ಅನ್ನಬೇಕು.*        ಹೂಗಿನ ಮಲ್ಲು; ಹೆಗಡೆ ಎಲ್.ಆರ್. ಮಾಚಿಯ ಕಥನಗೀತೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು – ೨೦೨ ಪು.ಸಂ. ೧೦೨-೧೦೬