ಮೊನ್ನಿsನ ಬರದಾಗ ಕುಸುಬಿsಯ ಮಾರಿದರಲ್ಲ | ಕೋಲು ಕೋಲಣ್ಣ ಕೋಲ
ಅಣ್ಣಾಗಾದರು ಮಕ್ಕಳಿಲ್ಲ ತಮ್ಮsಗಾದರೂ ಮಕ್ಕಳsವ | ಕೋ

* * * *

ಏ ಅಣ್ಣಾ ಏ ಅಣ್ಣಾ ಸೊಲಗಿ ಜ್ವಾಳಾ ಕಡಾ ಕೊಡು | ಕೋ
ಸೊಲ್ಲಿಗಿ ಜ್ವಾಳಾ ಕಡನೆ ಕೊಟ್ಟsರ ನಟ್ಟ ಕಡಿಯsಲಿ ಹ್ವಾದೇನಂದಾ | ಕೋ
ಬಿರಿ ಬಿರಿ ಹ್ವಾದsನಲ್ಲ ಗಾದ ಮೆತ್ತಿಗಿ ತಗೆದsನಲ್ಲ | ಕೋ
ಗಾದ ಮೆತ್ತಗಿ ತಗೆದsನಲ್ಲ ಸೊಲ್ಲಿಗಿ ಜ್ವಾಳಾ ಕೊಟ್ಟsನಲ್ಲ | ಕೋ
ಸೊಲ್ಲಿಗಿ ಜ್ವಾಳಾ ಒಯ್ದಕೇರಿ ಹೆಣತಿ ಕೈಯಲಿ  ಕೊಟ್ಟಾನಲ್ಲಾ | ಕೋ
ಒಲೀಮ್ಯಾಲ ಎಸsರಿಟ್ಟು ಒಡಿಲಾಕಾದರು ಕುತ್ತsಳಲ್ಲ | ಕೋ
ನೆರಮನಿ ನೆಗಿಯಾಣಿ ಬೆಂಕಿಗಾದರು ಬಂದಾಳsಲ್ಲ | ಕೋ
ಬೆಂಕಿsಗಾದರು ಬಂದsಳಲ್ಲs ಜ್ವಾಳದ ಗುರುತಾ ಹಿಡಿsದಳಲ್ಲs | ಕೋ
ಒಲಿಮ್ಯಾಲಿನ ಎಸsರದಾಗ ಹಿಡಿಗಲ್ಲ ವಗೆದsಳಲ್ಲ | ಕೋ
ಬೀಸಿದ ಹಿಟ್ಟಿನಾಗ ಬೂದಿ ಮಣ್ಣಾ ಕಲಸ್ಯಾಳಲ್ಲ | ಕೋ
ಮರದಾಗಿನ ಜ್ವಾಳಗೋಳು ಉಡಿಯಲ್ಲಾದರು ತಕ್ಕೊಂಡs | ಕೋ

* * * *

ಎಂಟು ಮಕ್ಕಳ ಕರಕೊಂಡು ತವರಮನಿಗಿ ಹೋಗೀದಾಳ | ಕೋ
ಏ ಅತಿಗಿ ಏ ಅತಿಗಿ ಸೇರ ಜ್ವಾಳಾ ಕಡಾ ಕೊಡ | ಕೋ
ಸೇರ ಜ್ವಾಳಾ ನಮ್ಮಲ್ಲಿಲ್ಲಾ ಹೇರ ಜ್ವಾಳಾ ನಮ್ಮಲ್ಲಿಲ್ಲಾ | ಕೋ |
ಅಟ್ಟು ಮಕ್ಕಳ ಕೈsಯಾ ತುತ್ತ ರೊಟ್ಟಿ ಕೊಡು ಅವ್ವಾ | ಕೋ
ತುತ್ತ ರೊಟ್ಟಿ ಬೇಡಲಿಕ್ಕ ಬೆಕ್ಕಿಗಾರೆ ಒಂದಿದಿಯಾನ | ಕೋ
ಅಸೂ ಮಕ್ಕಳೆ ಕರೆದುಕೊಂಡು ಅಳೂತ ಕರೂತ ಮನಿsಗಿ ಬಂದ್ಳ | ಕೋ
ತಾಳಿನಾರೆ ತಗೊಂಡಾಳ ಅಂಗೀಡಗಾರೆ ಹೋಗಿದಾಳ | ಕೋ
ಅದ್ದನಕ್ಕಿ ಕೊಡಿರೆಪ್ಪಾ ದುಡ್ಡಿsನಿಸಾ ಕೊಡಿರೆಪ್ಪಾ | ಕೋ
ಅದ್ದsನಕ್ಕಿ ಯಾರಿsಗವ್ವಾ ದುಡ್ಡಿsನಿಸಾ ಯಾರಿsಗವ್ವಾ | ಕೋ
ಅದ್ದನಕ್ಕಿ ಮಕ್ಕಳಿಗೆಪ್ಪಾ ದುಡ್ಡಿನಿಸಾ ಹೆಗ್ಗಣಿಗೆಪ್ಪಾ | ಕೋ
ಅದ್ದನಕ್ಕಿ ತಕ್ಕೊಂಡಾಳೆ ಮನಿsಗಾರೆ ಬಂದೀದಾಳ | ಕೋ
ಕುದುಕುದು ಬಾನಿನಾಗ ದುಡ್ಡಿsನಿಸಾ ಸುರುವೀದಾಳ | ಕೋ
ನೀಲವ್ಗ ನಿಂಬೆವ್ಗ ಒಂದೇ ಎಡಿ ಮಾಡಿದಾಳ | ಕೋ
ಗಂಗವ್ಗ ಗೌರವ್ಗ ಒಂದೇ ಎಡಿ ಮಾಡಿದಾಳ | ಕೋ
ಬೀಮಣ್ಣಗ ಕಾsಮಣ್ಣಗ ಒಂದೇ ಎಡಿ ಮಾಡಿದಾಳ | ಕೋ
ರಾಮಣ್ಣಾ ಲಕ್ಷ್ಮೀಮಣಗ ಒಂದೇ ಎಡಿ ಮಾಡಿದಾಳ | ಕೋ
ಗಂಡ ಹೆಂಡsರ ನಡುವ ಒಂದೇ ಎಡಿ ಮಾಡಿದಾಳ | ಕೋ
ನೀಲವ್ಗ ನಿಂಬೆವ್ಗ ತನ್ನ ಬಲಕ ಹಾಕಿದಾಳ | ಕೋ
ಗಂಗವ್ಗ ಗವರವ್ಗ ತನ್ನ ಎಡಕ ಹಾಕಿದಾಳ | ಕೋ
ರಾಮಣಗ ಲಕ್ಷುಮಣಗ ಗಂಡನ ಬಲಕ ಹಾಕಿದಾಳ | ಕೋ
ಬೀಮಣಗ ಕಾಮಣಗ ಗಂಡನ ಎಡಕ ಹಾಕಿದಾಳ | ಕೋ
ಗಂಡ ಹೆಂಡsರಿಗಿ ನಟ್ಟ ನಡು ಹಾಕಿದಾಳ | ಕೋ

* * * *

ಬಾಗಿಲಿಕ್ಕsಲಕ್ಹೋಗಿ ಏನಂತಾಳ ನೀಲವ್ವಾ | ಕೋ
ಮಾಯsದ ನನ್ನ ಅಣ್ಣಾ ಮಲ್ಲಡಕಾರೆ ಹೋಗಿದಾನ | ಕೋ
ದಿಕ್ಕಿಗಿಲ್ಲದ ಬರ ನಮ್ಮ ಮಕ್ಕಳ ಸುತ್ತ ಬಂದಿತ್ತೇನ | ಕೋ
ರಾಜಾಕಿಲ್ಲದ ಬರ ನಮ್ಮ ರಾಯರ ಸುತ್ತ ಬಂದಿತ್ತೇನ | ಕೋ

* * * *

ಏ ಅವ್ವಾ ಏ ಅವ್ವಾ ನೀಲಾನ ಸುದ್ದಿ ಕೇಳಿರೇನ | ಕೋ
ಮೊನ್ನೆ ಯಾರೆ ಬಂದಿದಳವ್ವಾ ಸೇರ ಜ್ವಾಳಾ ಬೇಡಿದಳಪ್ಪಾ | ಕೋ
ಸೇರ ಜ್ವಾಳಾ ಬೇಡಿದರ ಹೇರ ಜ್ವಾಳಾ ಕೊಡುದಿತ್ತ | ಕೋ
ಮಕ್ಕುವಳsಗಿತ್ತಿ ಬಡಿವ್ಯಾದರ ಇದ್ವಾಳವ್ವ ಕೋ
ಹೇರು ಜ್ವಾಳಾ ತೆಗೆದುಕೊಂಡು ತಂಗೀ ಊರಿಗೆ ಹೋಗಿದಾನ | ಕೋ
ನೀರಿಗಿ ಬಂದ ಅವ್ವಗಳಿರ‍್ಯಾ ನೀಲನ ಸುದ್ದಿ ಕೇಳಿದಿರೇನ | ಕೋ
ಆಕಿ ಸುದ್ದಿ ಕೇಳಿಲ್ಲಪ್ಪಾ ಆಕಿ ಮನಿಗಿ ಹೋಗಿಲ್ಲಪ್ಪಾ | ಕೋ
ಹೇರ ಜ್ವಾಳಾ ತೆಗೆದುಕೊಂಡು ತಂಗಿ ಮನಿಗಿ ಬಂದಿದಾನ | ಕೋ
ಹೊತ್ತುಹೊಂಟು ಇಟ್ಟೊತ್ತಾಯ್ತು ತಂಗಿ ಸುಳಿವ ಕಾಣಲಿಲ್ಲ | ಕೋ
ಬೆಳsಗನಾಗಿ ಇಟ್ಟೊತ್ತಾಯ್ತು ಬೀಗನ ಸುಳುವ ಕಾಣಲಿಲ್ಲ | ಕೋ
ಬಿಸsಲ ಬಿದ್ದು ಇಟ್ಟೊತ್ತಾಯ್ತು ಮಕ್ಕಳ ಸುದ್ದಿ ಕಾಣಲಿಲ್ಲ | ಕೋ
ಬಾಗಿಲ ತೆರಿದು ನೋಡೂತಾನಾ ಹತ್ತು ಹೆಣ ಬಿದ್ದೀದಾವ | ಕೋ
ಹತ್ತರ ಗೂಡ ಹನ್ನೊಂದಂತ ಪೇಟಗಟಾರ ಮಾಡಿಕೊಂಡ | ಕೋ
ನೀಲವ್ವನ ನಿಂಬೆವ್ವನ ನಿಂಬಿ ಬನದಾಗಿಟ್ಟಿದಾರ | ಕೋ
ಗಂಗವ್ವನ ಗೌರವ್ವನ ಬಾಳೀ ಬನದಾಗಿಟ್ಟಿದಾರ | ಕೋ
ರಾಮಣಗ ಲಕ್ಷ್ಮೀಮಣಗ ತೆಂಗಿನ ಬನದಾಗಿಟ್ಟಿದಾರ | ಕೋ
ಗಂಡಹೆಂಡsರನೊಯ್ದು ಶಿವನ ಪಾದದಲಿಟ್ಟೀದಾರ | ಕೋ
ಮಾಯsದ ಅಣ್ಣನ ಒಯ್ದು ತಂಗೀ ಪಾದದಲಿಟ್ಟಿದಾರ | ಕೋ

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು :

೧) ಬರಗಾಲದ ಬವಣೆ; ಮತಿಘಟ್ಟ ಕೃಷ್ಣಮೂರ್ತಿ, ಕನ್ನಡ ಜನಪದ ಸಾಹಿತ್ಯ ಭಂಡಾರ, (ಸಂ. ೧) ಗೀತೆಗಳು, ಗುರುಮೂರ್ತಿ ಪ್ರಕಾಶನ, ಬೆಂಗಳೂರು, ೧೯೭೫ ಪು.ಸಂ. ೨೧೫-೨೧೬.

೨) ಬರದ ಹಾಡು, ನಾಗೇಗೌಡ ಎಚ್.ಎಲ್. ದುಂಡಮಲ್ಲಿಗಿ ಹೂವ ಬುಟ್ಟೀಲಿ ಬಂದಾವ, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ೧೯೯೫, ಪು.ಸಂ. ೧೫೪-೧೫೭.

೩) ಮಳೀಹಾಡು, ಕಾಪಸೆರೇವಪ್ಪ ಮಲ್ಲಿಗೆದಂಡೆ, ಸಮಾಜ ಪುಸ್ತಕಾಲಯ, ಧಾರವಾಡ, ೧೯೭೦, ಪು.ಸಂ. ೩೧-೩೨.*      ಬರದ ಹಾಡು, ಕಾಪಸೆ ರೇವಪ್ಪ, ಮಲ್ಲಿಗೆದಂಡೆ, ಸಮಾಜ ಪುಸ್ತಕಾಲಯ, ಧಾರವಾಡ, ೧೯೭೦, ಪು.ಸಂ. ೪೬-೪೯.