ಕನ್ನಡದ ಮೊದಲ ಪಂಕ್ತಿಯ ಕತೆಗಾರರಾದ ಮಾಸ್ತಿಯವರ ಸಣ್ಣ ಕತೆಗಳು ಮೊದಲು ಪ್ರಕಟವಾಗತೊಡಗಿದ್ದು ೧೯೧೮-೧೯ ರಲ್ಲಿ. ಆದರೆ ಅವರ ಮೊದಲ ವಿಮರ್ಶೆಯ ಲೇಖನ ಪ್ರಕಟವಾದದ್ದು, ೧೯೧೫ರಷ್ಟು ಹಿಂದೆಯೇ ಎಂಬುದು ಸ್ವಾರಸ್ಯವಾದ ಸಂಗತಿಯಾಗಿದೆ. ಶ್ರೀಮತಿ ತಿರುಮಲಾಂಬ ಎಂಬ ಲೇಖಕಿಯವರು ಸತೀಹಿತೈಷಿಣೀ ಗ್ರಂಥಮಾಲೆಯ ಮೂಲಕ ಪ್ರಕಟಿಸಿದ ಏಳು ಕಾದಂಬರಿಗಳನ್ನು ಕುರಿತು ಮಾಸ್ತಿಯವರು ಬರೆದ ವಿಮರ್ಶೆಯ ಲೇಖನ, ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಕೃಷ್ಣಸೂಕ್ತಿ ಎಂಬ ಪತ್ರಿಕೆಯಲ್ಲಿ ಸುಮಾರು ೧೯೧೫ರಲ್ಲಿ ಪ್ರಕಟವಾಯಿತೆಂದು ತಿಳಿದು ಬರುತ್ತದೆ. ಶ್ರೀನಿವಾಸರು ಬರೆದ ಈ ಮೊದಲ ವಿಮರ್ಶಾ ಲೇಖನದ ಧೋರಣೆ ಬಹುಮಟ್ಟಿಗೆ ಈ ದಿನ ಬರುತ್ತಿರುವ ವಿಮರ್ಶೆಗಳನ್ನು ಹೋಲುತ್ತದೆ. ಅದು ತುಂಬ ವಸ್ತುನಿಷ್ಠವಾಗಿಯೂ, ನಿಷ್ಪಕ್ಷಪಾತದ್ದೆಂಬಂತೆಯೂ ತೋರುತ್ತದೆಯಾದರೂ ಅಂದಿನ ಕಾಲಕ್ಕೆ ಕೊಂಚ ಕಟುವಾಯಿತೇನೋ ಎಂದು ಅನ್ನಿಸುತ್ತದೆ. ನಮಗೆ ಅನ್ನಿಸುವುದಿರಲಿ, ಮಾಸ್ತಿಯವರಿಗೇ ಅದನ್ನು ಬರೆದು ಪ್ರಕಟಿಸಿದ ಕೆಲವು ವರ್ಷಗಳ ಮೇಲೆ ಹಾಗೆ ಅನ್ನಿಸಿತೆಂಬುದು, ೧೯೨೬ ರಂದು ಪ್ರಕಟವಾದ ಮೊದಲ ವಿಮರ್ಶೆಯ ಸಂಪುಟದ ಮುನ್ನುಡಿಯಲ್ಲಿ ದಾಖಲೆಯಾಗಿದೆ. ‘ವಿಮರ್ಶೆ-೧’ರ ಮುನ್ನುಡಿಯಲ್ಲಿ “ಸತೀಹಿತೈಷಿಣಿ ಮತ್ತು ಇನ್ನು ಇತರ ಗ್ರಂಥಮಾಲೆಗಳ ಕರ್ತ್ರಿಯವರಾದ ಶ್ರೀಮತಿ ತಿರುಮಲಾಂಬ ಅವರು ಆಸಾಧಾರಣವಾದ ದೇಶ ಸೇವೆಯನ್ನೂ, ಭಾಷಾ ಸೇವೆಯನ್ನು ಮಾಡಿಯೂ ಮಾಡುತ್ತಲೂ ಇದ್ದಾರೆಂಬುದನ್ನು ನಾನು ಬೇರೆ ಹೇಳಬೇಕಾಗಿಲ್ಲ. ಗ್ರಂಥಕರ್ತಿಯವರ ವಿಷಯದಲ್ಲಿ ಆ ಗೌರವ ಇಲ್ಲದಿದ್ದರೆ ನಾನು ಆ ವಿಮರ್ಶೆಯನ್ನು ಬರೆಯುತ್ತಿರಲಿಲ್ಲ. ಆದರೆ ಆ ವಿಮರ್ಶೆಯಲ್ಲಿ ಒಂದೆರಡು ಕಡೆ ಮಾತುಗಳು ಸ್ವಲ್ಪ ಕಠಿಣವಾದುವೆಂದು ಈಚೆಗೆ ನನಗೆ ತೋರಿದೆ. ನಮ್ಮಲ್ಲಿ ಇಂಗ್ಲಿಷನ್ನು ಕಲಿತು ಕನ್ನಡವನ್ನು ನೋಡುವವರು ಹೊಸದರಲ್ಲಿ ಇಂಗ್ಲಿಷಿನ ಉತ್ತಮ ಕೃತಿಗಳಿಗೆ ಸಮಾನವಾದ ಕೃತಿಗಳು ಕನ್ನಡದಲ್ಲಿ ಬರದೇ ಇದ್ದರೆ ಬಹಳ ಅಸಮಾಧಾನ ಪಡುವೆವು. ಈ ರೀತಿಯ ಗುಣಮಾಪನದ ಆಶಯವೇನೋ ಉಚ್ಚವಾದದ್ದು. ಆದರೆ ಹೀಗೆ ಮಾಪನ ಮಾಡುವಲ್ಲಿ ಯಾವ ಭಾಷೆಯಲ್ಲಾಗಲಿ ಬಹು ಜನರು ಬರೆದು ಬರಹದ ಸಂಪ್ರದಾಯಗಳು ಏರ್ಪಟ್ಟ ಮೇಲೆ ಉತ್ತಮ ಕಾವ್ಯ ಬಂದೀತಲ್ಲದೆ ಒಮ್ಮೆಗೆ ಬರಲಾರದು ಎಂಬುದನ್ನು ನಾವು ಮರೆತಂತಾಗುತ್ತದೆ. ಒಂಬತ್ತು ವರ್ಷದ ಹಿಂದೆ ‘ಸತೀಹಿತೈಷಿಣಿ’ ಗ್ರಂಥಮಾಲೆಯನ್ನು ಕುರಿತು ವಿಮರ್ಶಿಸುವಲ್ಲಿ ಈ ಭಾವಕ್ಕೆ ನಾನು ಸಾಕಾದಷ್ಟು ಗಮನ ಕೊಡಲಿಲ್ಲ. ಅಲ್ಲದೆ ಆಗ್ಗೆ ನಾನು ಕನ್ನಡದಲ್ಲಿ ಒಂದೆರಡು ಪುಸ್ತಕಗಳನ್ನೂ ಬರೆದಿರಲಿಲ್ಲ”-ಎನ್ನುತ್ತಾರೆ.

೧೯೨೬ ರಂದು ಪ್ರಕಟವಾದ ತಮ್ಮ ವಿಮರ್ಶೆಯ ಮೊದಲ ಸಂಪುಟದಲ್ಲಿ ಮಾಸ್ತಿಯವರು ಬರೆದ ಈ ಕೆಲವು ಮಾತುಗಳು ಹೊಸಗನ್ನಡ ವಿಮರ್ಶೆಯ ಇತಿಹಾಸದಲ್ಲಿ ತುಂಬ ಅರ್ಥಪೂರ್ಣವಾದ ನುಡಿಗಳಾಗಿವೆ. ಏಕೆಂದರೆ ಅಲ್ಲಿ ವಿಮರ್ಶೆಗೆ ಸಂಬಂಧಿಸಿದ ಕೆಲವು ಮುಖ್ಯ ಸಂಗತಿಗಳು ಸೂಚಿತವಾಗಿವೆ. ಮಾಸ್ತಿಯವರು ವಿಮರ್ಶೆಗೆ ಕೈಹಾಕಿದ ಅಂದಿನ ಕಾಲಕ್ಕೆ ಇಂಗ್ಲಿಷ್ ಸಾಹಿತ್ಯವನ್ನು ತಕ್ಕಮಟ್ಟಿಗೆ ಓದಿಕೊಂಡಿದ್ದ ಅವರಿಗೆ ಮತ್ತು ಅವರಂಥವರಿಗೆ, ಕನ್ನಡದಲ್ಲೂ ಆ ಮಟ್ಟದ ಕೃತಿಗಳು ಬರುವುದು ಯಾವಾಗ ಎಂಬ ಕಳಕಳಿ ಇದ್ದಂತೆ ಸೂಚಿತವಾಗಿದೆ. ಇಂಥ ಸ್ಥಿತಿಯಲ್ಲಿ ಅಂದು ಕನ್ನಡದಲ್ಲಿ ಬಂದ ಕೃತಿಗಳ ಬಗ್ಗೆ ಅಸಮಾಧಾನ ಉಂಟಾದದ್ದು ಸಹಜವಾಗಿದೆ. ಆದರೆ ನಿಜವಾದ ವಿಮರ್ಶೆಗೆ ಈ ಅಸಮಾಧಾನವಷ್ಟೆ, ಹಿನ್ನೆಲೆಯಾಗಬಾರದು. ಹೊಸದೊಂದು ಸಂಪ್ರದಾಯದಲ್ಲಿ ತಕ್ಕಷ್ಟು ಕೃತಿಗಳು ಬಂದು, ಅವುಗಳನ್ನು ಒಂದರ ಜತೆಗೊಂದು ಇರಿಸಿ ವಿಮರ್ಶೆ ಮಾಡುವಂತಹ ಅವಶ್ಯಕತೆ ಬರುವವರೆಗೂ ಕಾದು, ಸಾಹಿತ್ಯವನ್ನು ಮೊದಲು ಬೆಳೆಯಗೊಡಬೇಕು. ಎಂದರೆ ಸಾಹಿತ್ಯ ವಿಮರ್ಶೆ, ಎಂದರೆ ಸಾಕಷ್ಟು ಬೆಳೆದುನಿಂತ ಸಾಹಿತ್ಯ ಸಂಪ್ರದಾಯವೊಂದರಲ್ಲಿ, ಆ ಸಾಹಿತ್ಯವನ್ನು ಕೇರಿ ತೂರುವ ಕಾರ್ಯ. ಸಾಹಿತ್ಯ ನಿರ್ಮಿತಿ ಮೊದಲು; ಸಾಹಿತ್ಯ ವಿಮರ್ಶೆ ಆನಂತರ. ಆದುದರಿಂದ ಹೊಸತೊಂದು ಸಾಹಿತ್ಯ ಪರಂಪರೆ ನಿರ್ಮಿತಿಯಾಗುತ್ತಿರುವಾಗ, ವಿಮರ್ಶಕನಾದವನು ಅದು ಬೆಳೆದು ಒಂದು ಘಟಕ್ಕೆ ಬರುವವರೆಗೂ ಕಾಯುವ ಸಮಾಧಾನವನ್ನು ಗಳಿಸಿಕೊಳ್ಳಬೇಕು. ಅಲ್ಲದೆ ವಿಮರ್ಶಕನಾದವನು ತಾನೇ ಒಂದೆರಡು ಪುಸ್ತಕಗಳನ್ನು ಬರೆದಿದ್ದರೆ, ಬರಹಗಾರನ ಸಮಸ್ಯೆಗಳು ಸ್ವಲ್ಪಮಟ್ಟಿಗಾದರೂ ಅರ್ಥವಾಗುವ ಸಂಭವ ಉಂಟು. ಸ್ವತಃ ತಾನೇ ಏನನ್ನೂ ಬರೆಯದೆ ಇತರರ ಕೃತಿಗಳನ್ನು ವಿಮರ್ಶೆಮಾಡುವವನಿಗಿಂತ, ಸ್ವತಃ ಲೇಖಕನಾಗಿದ್ದುಕೊಂಡು ಬರವಣಿಗೆಯ ಸಮಸ್ಯೆಗಳನ್ನು ಬಲ್ಲವನು ಮಾಡುವ ವಿಮರ್ಶೆ ಹೆಚ್ಚು ಸಹಾನುಭೂತಿಯದೂ, ಸಮತೂಕದ್ದೂ ಆಗಬಹುದು. ಇದರ ಜತೆಗೆ ವಿಮರ್ಶಕನು ಒಮ್ಮೆ ಒಂದು ಕೃತಿಯ ಬಗ್ಗೆ ಹೇಳಿದ ಮಾತು ಆ ಕೃತಿಯ ಬಗ್ಗೆ ಕೊನೆಯ ಮಾತಾಗಿ ಉಳಿಯುತ್ತದೆ ಎಂದು ಭಾವಿಸದೆ, ಕಾಲಕ್ರಮದಲ್ಲಿ ತಾನು ಹೇಳಿದ ಮಾತು ಸರಿಯೇ ತಪ್ಪೇ ಎಂದು, ತನ್ನ ವಿಮರ್ಶೆಯನ್ನೂ ವಿಮರ್ಶಿಸಿಕೊಂಡು ನೋಡುವ ಸೌಜನ್ಯವೂ ಆತನಿಗೆ ಬೇಕು. ಮಾಸ್ತಿಯವರ ‘ವಿಮರ್ಶೆ-ಭಾಗ ೧’ರ ಮುನ್ನುಡಿಯ ಕೆಲವು ಮಾತುಗಳಲ್ಲಿ ಇವಿಷ್ಟು ಅಂಶಗಳೂ ಎದ್ದು ಕಾಣುತ್ತವೆ.

ಮಾಸ್ತಿಯವರು ಕನ್ನಡದಲ್ಲಿ ಒಂದೆರಡು ಪುಸ್ತಕಗಳನ್ನೂ ಬರೆದಿರದ ಕಾಲದಲ್ಲಿ ವಿಮರ್ಶೆಯನ್ನು ಬರೆದರೆಂಬುದು ಸ್ವಾರಸ್ಯವಾದ ಸಂಗತಿಯಾಗಿದೆ. ಎಂದರೆ  ಮಾಸ್ತಿಯವರ ಸಾಹಿತ್ಯ ಕೃಷಿಯ ಆರಂಭವೇ ವಿಮರ್ಶೆಯಿಂದ ಆರಂಭವಾಯಿತೆಂಬ ಅರ್ಥ ಇದರಿಂದ ಹೊರಡುತ್ತದೆ. ಅದೇನೇ ಇರಲಿ, ೧೯೨೬ ರಂದು ಪ್ರಕಟವಾದ ಅವರ ವಿಮರ್ಶೆಯ ಮೊದಲ ಸಂಪುಟದಲ್ಲಿ ‘ಸಾಹಿತ್ಯದಲ್ಲಿ ವಿಮರ್ಶೆಯ ಕಾರ್ಯ’ ಎಂಬ ಲೇಖನವೊಂದಿದೆ. ಬಹುಶಃ ವಿಮರ್ಶೆಯ ಮೂಲತತ್ವಗಳನ್ನು ಕುರಿತು ಕನ್ನಡದಲ್ಲಿ ಬಂದ ಲೇಖನಗಳಲ್ಲಿ ಇದೇ ಮೊದಲನೆಯದೆಂದು ತೋರುತ್ತದೆ. ವಿಮರ್ಶೆ ಎಂದರೇನು, ವಿಮರ್ಶೆಯ ಕಾರ್ಯ ಏನು ಎಂಬ ವಿಚಾರ ಇಪ್ಪತ್ತೈದು ಪುಟಗಳ ಈ ಲೇಖನದಲ್ಲಿ ನಿರೂಪಿತವಾಗಿದೆ. ಆದರೆ ಈ ಲೇಖನದಲ್ಲಿ ಪ್ರಸ್ತಾಪಿತವಾಗಿರುವ ಎಷ್ಟೋ ಸಂಗತಿಗಳು ಇಂದು ತೀರಾ ಪ್ರಾಥಮಿಕವೂ, ವಿಲಕ್ಷಣವೂ ಎಂಬಂತೆ ತೋರಬಹುದು.ಅದಕ್ಕೆ ಕಾರಣ ಇಂದು ವಿಮರ್ಶೆಯ ಸಿದ್ಧಾಂತ ಬಹುಮುಖವಾಗಿ ಬೆಳೆದಿರುವುದೇ ಆಗಿದೆ. ‘ಕಾವ್ಯದಿಂದ ಬರಬೇಕಾದ ಸಂಪೂರ್ಣ ಸಂಸ್ಕಾರ ಓದುಗನಿಗೆ ಬರುವಂತೆ ಮಾಡತಕ್ಕದ್ದು ವಿಮರ್ಶಕನ ಕಾರ್ಯದ ಮುಂಖ್ಯಾಂಶ’[1]….‘ಕಾವ್ಯದಲ್ಲಿ ಕವಿ ಗ್ರಹಿಸುವ ತೇಜಸ್ಸು ತಾನೇ ಪಡೆಯಲಾರದ ಜನರಿಗೆ ಸರಳವಾಗುವಂತೆ ಮಾಡತಕ್ಕದ್ದೆ’ ವಿಮರ್ಶೆಯ[2] ಕಾರ್ಯ ಎಂಬ ಹೇಳಿಕೆಗಳು ಮಾಸ್ತಿಯವರ ದೃಷ್ಟಿಯಲ್ಲಿ ವಿಮರ್ಶೆ ಎಂದರೇನೆಂಬುದನ್ನೂ ಮತ್ತು ಮಾಸ್ತಿಯವರ ವಿಮರ್ಶೆಯ ವಿಧಾನವನ್ನೂ ಪರಿಚಯ ಮಾಡಿಕೊಡುತ್ತವೆ.

ಮಾಸ್ತಿಯವರು ಅನೇಕ ಕನ್ನಡ ಪುಸ್ತಕಗಳಿಗೆ ಆಗಾಗ ಬರೆದ ಮುನ್ನುಡಿಗಳನ್ನೆಲ್ಲಾ ಸಂಗ್ರಹಿಸಿ ‘ಪೂಜನ’ ಎಂಬ ಹೆಸರಿನಿಂದ ಪ್ರಕಟಿಸಿದ್ದಾರೆ. ಈ ಮುನ್ನುಡಿಗಳಲ್ಲಿ ಕೆಲವೆಡೆ ನಿಜವಾದ ವಿಮರ್ಶೆಯ ಹೊಳಹು ಇದ್ದರೂ, ನಮ್ಮ ಈ ಲೇಖನದ ಮಟ್ಟಿಗೆ ಅದನ್ನು ಕೈಬಿಟ್ಟು, ಅವರು ವಿಮರ್ಶೆ ಎಂಬ ಹೆಸರಿನಲ್ಲಿ ಪ್ರಕಟಿಸಿರುವ ನಾಲ್ಕು ಸಂಪುಟಗಳನ್ನೂ, ಜೊತೆಗೆ ಅವರ ‘ಆದಿಕವಿ ವಾಲ್ಮೀಕಿ’ ಮತ್ತು ‘ಭಾರತ ತೀರ್ಥ’ವನ್ನೂ ಇಲ್ಲಿ ಅವರ ವಿಮರ್ಶಾ ಸಾಹಿತ್ಯವೆಂದು ಪರಿಗಣಿಸಲಾಗಿದೆ.

ಮಾಸ್ತಿಯವರ ವಿಮರ್ಶೆಯ ಬರಹಗಳನ್ನು ಮೂರು ವಿಭಾಗವನ್ನಾಗಿಸಿ ನೋಡಬಹುದು. ಒಂದು ಕನ್ನಡ ಮತ್ತು ಕನ್ನಡಕ್ಕೆ ಹತ್ತಿರದ ಸೋದರ ಭಾಷೆಗೆ ಸಂಬಂಧಿಸಿದ ಸಾಹಿತ್ಯ ಕೃತಿಗಳ ವಿಮರ್ಶೆ; ಎರಡು, ಭಾರತೀಯ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳ ವಿಮರ್ಶೆ, ಮೂರು, ಅನ್ಯದೇಶೀಯವಾದ ಸಾಹಿತ್ಯ ಕೃತಿಗಳ ವಿಮರ್ಶೆ.

ವೈಷ್ಣವದಾಸರ ಕೀರ್ತನೆಗಳು; ಕನ್ನಡ ನಾಡಿನ ಲಾವಣಿ ಸಾಂಗತ್ಯಗಳು; ಲಕ್ಷ್ಮೀಶನ ಕಾವ್ಯ; ಮುದ್ದಣ ಕವಿಯ ಶ್ರೀ ರಾಮಾಶ್ವಮೇಧ ಮತ್ತು ಹಿತೈಷಿಣೀ ಗ್ರಂಥ ಮಾಲೆ-ಈ ಐದು ನೇರವಾಗಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು. ತಮಿಳು ವೈಷ್ಣವ ಪ್ರಬಂಧಗಳು-ಕನ್ನಡದ ಸೋದರ ಭಾಷೆಯಾದ ತಮಿಳು ಸಾಹಿತ್ಯ ಕೃತಿಗೆ ಸಂಬಂಧಿಸಿದ್ದು, ಭಾರತೀಯ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಠಾಕೂರ ಕವಿವರರ ಗೀತಾಂಜಲಿ; ಕಾಳಿದಾಸನ ಮೇಘಸಂದೇಶ ಎಂಬ ಲೇಖನಗಳು, ಮತ್ತು ಆದಿಕವಿ ವಾಲ್ಮೀಕಿ, ಭಾರತತೀರ್ಥ-ಎಂಬೆರಡು ಪುಸ್ತಕಗಳು. ಇನ್ನು ಗಯಟೆ ಕವಿಯ ಕಾವ್ಯಮೀಮಾಂಸೆ ಮತ್ತು ನಾಟಕಗಳನ್ನು ಕುರಿತ ಎರಡು ಲೇಖನ; ಆಗಸ್ಟೀನ್, ಅರೀಲಿಯಸ್, ಡೇವಿಡ್, ಎಪಿಕ್ಟಿಟಸ್ ಮತ್ತು ಹಾಫೀಸ್‌ನನ್ನು ಕುರಿತ ಐದು ಲೇಖನಗಳು. ಇದು ಮಾಸ್ತಿಯವರ ವಿಮರ್ಶೆಯ ವಿಷಯ ವೈವಿಧ್ಯದ ಹರಹು.

ಈ ಎಲ್ಲ ಲೇಖನಗಳನ್ನು ನೋಡಿದರೆ ಕನ್ನಡ ವಿಮರ್ಶೆಯ ಆರಂಭ ಕಾಲದಲ್ಲಿ ಮಾಸ್ತಿಯವರ ಉದ್ದೇಶ, ಎಷ್ಟು ಘನವಾದದ್ದು ಎಂಬುದು ಕಾಣುತ್ತದೆ. ಇಲ್ಲಿ ಕಾಣುವುದು ಕನ್ನಡ ವಿಮರ್ಶೆಯ ಮೊದಲ ದಿನಗಳಲ್ಲಿ ಒಳ್ಳೆಯ ಸಂಪ್ರದಾಯದ ಸಸಿಗಳನ್ನು ನೆಡುವ ಪ್ರಯತ್ನಗಳನ್ನು. ಕನ್ನಡಿಗರ ಅರಿವು, ಪೂರ್ವ-ಪಶ್ಚಿಮವೆಂಬ ಭೇದವಿಲ್ಲದೆ ಎಷ್ಟು ದಿಕ್ಕಿನಿಂದ ಪುಷ್ಟವಾಗಿ ಬೆಳೆಯಬೇಕು ಎನ್ನುವುದರ ಸೂಚನೆ ಈ ಲೇಖನಗಳಲ್ಲಿವೆ. ನಿಜವಾದ ಕನ್ನಡಿಗ ತನ್ನ ಕನ್ನಡತನದ ಅರಿವನ್ನು ನಡುವೆ ಇರಿಸಿಕೊಂಡು, ಕನ್ನಡೇತರವಾದ ಭಾರತೀಯ ಸಾಹಿತ್ಯದ, ಮತ್ತು ಭಾರತೀಯ ಪರಂಪರೆಯ ಪರಿಚಯ ಮಾಡಿಕೊಂಡು, ಇಡೀ ಜಗತ್ತಿನ ಸಾಹಿತ್ಯದಿಂದ ಪುಷ್ಟಿ ಪಡೆಯಬೇಕಾಗಿದೆ ಎಂಬುದನ್ನು ಈ ಲೇಖನಗಳ ಮೊತ್ತ ಸೂಚಿಸುತ್ತದೆ. ಆದುದರಿಂದಲೆ ಕನ್ನಡ ವಿಮರ್ಶೆಯ ಆರಂಭದ ದಿನಗಳಲ್ಲಿ ಈ ಬಗೆಯ ದೃಷ್ಟಿ ವೈಶಾಲ್ಯದ, ವ್ಯಕ್ತಿತ್ವ ಪುಷ್ಟಿಯ ಅಗತ್ಯವನ್ನು ಮಾಸ್ತಿಯವರು ತಮ್ಮ ವಿಮರ್ಶಾ ಲೇಖನಗಳ ಮೂಲಕ ತೋರಿಸಿಕೊಟ್ಟಿದ್ದಾರೆ.

ವಾಲ್ಮೀಕಿ ಮತ್ತು ವ್ಯಾಸರ ಮಹಾಕೃತಿಗಳನ್ನು ಕುರಿತು ‘ಆದಿಕವಿ ವಾಲ್ಮೀಕಿ’ ಮತ್ತು ‘ಭಾರತ ತೀರ್ಥ’ ಎಂಬ-ಎರಡು ಕೃತಿಗಳನ್ನು ಮೀರಿಸುವ ವಿಮರ್ಶಾತ್ಮಕ ಕೃತಿಗಳು, ಈ ವಿಷಯದ ಮೇಲೆ ಕನ್ನಡದಲ್ಲಿ ಇನ್ನೂ ಬಂದಿಲ್ಲ. ಅದರಲ್ಲೂ ೧೯೩೩ರಷ್ಟು ಹಿಂದೆಯೆ ಬಂದ ‘ಆದಿಕವಿ ವಾಲ್ಮೀಕಿ’, ‘ಭಾರತ ತೀರ್ಥ’ಕ್ಕಿಂತ ಹೆಚ್ಚು ಸಮರ್ಪಕವಾದ ಕೃತಿ ಎನ್ನಿಸುತ್ತದೆ. ರಾಮಾಯಣವನ್ನು ಕುರಿತು ಇಷ್ಟು ಸಮಗ್ರವಾದ ವಿಮರ್ಶೆ ಕನ್ನಡದಲ್ಲಿ ಇಲ್ಲ. ಈ ಎರಡು ಕೃತಿಗಳಲ್ಲಿಯೂ ಮಾಸ್ತಿಯವರ ವಿಸ್ತಾರವಾದ ಅಧ್ಯಯನ, ಅವರ ರಸಜ್ಞತೆ ಎದ್ದು ಕಾಣುತ್ತದೆ. ಭಾರತದ ಯಾವ ಒಬ್ಬ ಸಾಹಿತಿಗಾಗಲಿ, ವಿಮರ್ಶಕನಿಗಾಗಲಿ, ಇಡೀ ಭಾರತೀಯ ಸಂಸ್ಕೃತಿಯ ಸಾರದಂತಿರುವ ಈ ಎರಡು ಮಹಾ ಕೃತಿಗಳ ಅಧ್ಯಯನ ಎಷ್ಟು ಅಗತ್ಯ ಎಂಬುದನ್ನು ಬೇರೆಯಾಗಿ ಹೇಳಬೇಕಾಗಿಲ್ಲ.

ಮಾಸ್ತಿಯವರ ವಿಮರ್ಶೆಯ ಪ್ರಧಾನ ಗುಣ ಅದು ವರ್ಣನಾತ್ಮಕವಾದದ್ದು; ಕವಿಗಳ ಹಾಗೂ ಕೃತಿಗಳ ವಿಚಾರದಲ್ಲಿ ರುಚಿಯನ್ನು ಹುಟ್ಟಿಸುವಂಥಾದ್ದು; ರುಚಿಯನ್ನು ಹುಟ್ಟಿಸುವುದರ ಜೊತೆಗೆ ಓದುಗರ ರುಚಿಯನ್ನು ತಿದ್ದುವ ಉದ್ದೇಶ ಉಳ್ಳದ್ದು. ಅವಗುಣಗಳ ಕಡೆಗೆ ಅಷ್ಟಾಗಿ ಕಣ್ಣು ಹೊರಳಿಸದೆ ಗುಣವನ್ನು ಪ್ರಶಂಸೆ ಮಾಡುವ ನಿದರ್ಶನಗಳೇ ವಿಶೇಷವಾಗಿವೆ ಇವರ ಬರಹಗಳಲ್ಲಿ. ಅವರು ವಿಮರ್ಶೆಗೆ ಆರಿಸಿಕೊಂಡ ವಿಷಯಗಳಲ್ಲಿಯೇ ನಿರ್ದುಷ್ಟತೆ ಇದೆ ಎಂದು ಇದರರ್ಥವಲ್ಲ; ಆದರೆ ಅವರು ಆರಿಸಿಕೊಂಡ ವಿಷಯಗಳಲ್ಲಿ ಒಳಿತೇನಿದೆ, ಸೊಗಸೇನಿದೆ ಅವರ ಕಡೆಗೆ ಅವರಿಗೆ  ವಿಶೇಷ ಗಮನ. ಕನ್ನಡವಲ್ಲದ ಬೇರೆ ಭಾಷೆಯ ಸಾಹಿತ್ಯ ವಿಷಯಗಳನ್ನು ಅತ್ತ ಸರಿಸಿ, ಕನ್ನಡ ಕವಿಕೃತಿಗಳ ಬಗೆಗೆ ಅವರು ಬರೆದ ಲೇಖನಗಳನ್ನು ನೋಡಿದರೂ- ಸಮಕಾಲೀನವಾದ, ಸತಿ ಹಿತೈಷಿಣೀ ಗ್ರಂಥ ಮಾಲೆಯನ್ನು ಕುರಿತ ಅದರ ಮೊದಲ ವಿಮರ್ಶಾ ಲೇಖನವನ್ನು ಬಿಟ್ಟು-ಉಳಿದ ಹಳೆಯ ಸಾಹಿತ್ಯದ ಬಗೆಗಂತೂ ಏನೂ ದೋಷವೇ ಇಲ್ಲವೆಂಬಂತಹ ಉದಾರತೆ ಅವರಲ್ಲಿದೆ. ನಿದರ್ಶನಕ್ಕೆ ಮುದ್ದಣ ಕವಿಯನ್ನು ಕುರಿತು ಅತಿ ಪ್ರಶಂಸೆಯ ಅವರ ಲೇಖನನವನ್ನು ನೋಡಬಹುದು; ಲಕ್ಷ್ಮೀಶನ ಜೈಮಿನಿಭಾರತದ ಸೊಗಸನ್ನು  ಪರಿಚಯ ಮಾಡಿಕೊಡುವ ಲೇಖನವನ್ನಾಗಲಿ, ಕನ್ನಡದ ವೈಷ್ಣವ ದಾಸರನ್ನು ಕುರಿತ ಲೇಖವನ್ನಾಗಲಿ ನೋಡಬಹುದು. ಮುದ್ದಣನ ಬಗ್ಗೆ ಸಮರ್ಥವಾದ ಲೇಖನವನ್ನು ಬರೆದ, ಶ್ರೀ ಎಸ್. ವಿ.ರಂಗಣ್ಣನವರು, ಮಾಸ್ತಿಯವರ ಲೇಖನವನ್ನೂ ಉಜ್ಜಿ ನೋಡಿರುವ ಪ್ರಸಂಗವನ್ನು ಕನ್ನಡದ ಓದುಗರೆಲ್ಲ ಬಲ್ಲರು. ಲಕ್ಷ್ಮೀಶನ ಹಾಗೂ ವೈಷ್ಣವ ದಾಸರ ಕೀರ್ತನೆಗಳ ಬಗೆಗೂ ಮಾಸ್ತಿಯವರು ಉತ್ಸಾಹದ, ಪ್ರಶಂಸೆಯ ವರ್ಣನಾತ್ಮಕ ವಿಮರ್ಶೆಯನ್ನು ಮಾಡಿದ್ದಾರೆಯೆ ಹೊರತು, ಅಲ್ಲಿ ಮೌಲ್ಯಮಾಪನದ ಪ್ರಯತ್ನ ಕಾಣದು ಎಂದು ಹೇಳಬೇಕಾಗಿದೆ. ಇದಕ್ಕೆ ಕಾರಣ ಮಾಸ್ತಿಯವರು ಈ ಬಗೆಯ ಮೌಲ್ಯಮಾಪನ ವಿಮರ್ಶೆಯನ್ನು ಮಾಡಲಾರರು ಎಂಬುದಲ್ಲ; ಹಳೆಯ ಕವಿ ಕೃತಿಗಳು ತಕ್ಕ ಮಟ್ಟಿಗೆ ಉತ್ತಮ ಕೃತಿಗಳೇ ಆಗಿದ್ದವು ಎಂಬ ಅವರ ನಂಬಿಕೆಯೆ ಕಾರಣ. ‘ಸಾಹಿತ್ಯದಲ್ಲಿ ವಿಮರ್ಶೆಯ ಕಾರ್ಯ’ ಎಂಬ ಲೇಖನದಲ್ಲಿ ಅವರು ತಮ್ಮ ನಂಬಿಕೆಯನ್ನು ಪ್ರಕಟಪಡಿಸಿದ್ದಾರೆ. ನಮ್ಮಲ್ಲಿ ಹಿಂದೆ ವಿಮರ್ಶೆ ಬೆಳೆಯದಿರಲು ಕಾರಣವೇನೆಂಬುದನ್ನು ಚರ್ಚಿಸುತ್ತಾ “ನಮ್ಮಲ್ಲಿ ಹಿಂದೆ ದುಷ್ಟ ಗ್ರಂಥಗಳು ಪ್ರಚಾರವಾಗುವುದಕ್ಕೆ ಅವಕಾಶವಿರಲಿಲ್ಲ. ಕವಿಯಾಗಬೇಕೆಂದವನು ತನ್ನ ಶಕ್ತಿಯನ್ನು ಸಭೆಗಳ ಮುಂದೆ ಸ್ಥಾಪಿಸಿಬೇಕಾಗಿತ್ತು. ತಿಳಿದವರ ಸಭೆಗಳು, ಅದರಲ್ಲೂ ಇತರ ಕವಿಗಳು ಇರುತ್ತಿದ್ದಂಥವು;  ಇಂಥ ಸಭೆಗಳ ಮುಂದೆ ಬಹಳ ಒಳ್ಳೆಯ ಕಾವ್ಯವಲ್ಲದೆ ಯಾವುದೂ ಉಳಿಯುತ್ತಿರಲಿಲ್ಲ. ಇದಾದಮೇಲೆ ಇದು ಒಳ್ಳೆಯ ಗ್ರಂಥ, ಇದು ಅಲ್ಲ ಎಂದು ಹೇಳಬೇಕಾಗಿರಲಿಲ್ಲ…. ಒಳ್ಳೆಯದುದಲ್ಲದ ಗ್ರಂಥಕ್ಕೆ ಉಳಿವೇ ಇಲ್ಲ…. ಹೀಗೆ ಸಭೆಗಳ ನಿರ್ದಾಕ್ಷಿಣ್ಯವಾದ ತಿರಸ್ಕಾರದಿಂದಲೂ, ಪ್ರತಿಗಳನ್ನು ಮಾಡುವುದರಲ್ಲಿ ಇದ್ದ ಕಷ್ಟಗಳಿಂದಲೂ, ಒಳ್ಳೆಯ ಗ್ರಂಥಗಳು ಮಾತ್ರ ಪ್ರಾಚುರ್ಯಕ್ಕೆ ಬಂದು,ಜನರಲ್ಲಿ ಒಳ್ಳೆಯ ಗ್ರಂಥಗಳ ಸ್ವಾರಸ್ಯವನ್ನು ತಿಳಿಯುವ ಶಕ್ತಿ ಹಬ್ಬಿದ್ದರಿಂದ ಅಸಾಧು ಪ್ರವೃತ್ತಿಗಳನ್ನು ತಿದ್ದುವುದಕ್ಕಾಗಿ ವಿಮರ್ಶೆ ಬೇಕಾಗಿರಲಿಲ್ಲ”[3]-ಎನ್ನುತ್ತಾರೆ. ಪಂಡಿತರ ಸಭೆಗಳ ಮುಂದೆ ಬಂದು ಅಂಗೀಕೃತವಾಗಬೇಕಾಗಿದ್ದ ಕಾರಣದಿಂದ, ಹಿಂದಿನ ಕೃತಿಗಳೆಲ್ಲಾ ಉತ್ತಮ ಕೃತಿಗಳೇ ಆಗಿದ್ದವು ಎನ್ನುವುದು, ಒಳ್ಳೆಯದಲ್ಲದ ಕಾವ್ಯ ಯಾವುದೂ ಉಳಿಯುತ್ತಿರಲಿಲ್ಲವಾದ ಕಾರಣ ಜನಕ್ಕೆ ವಿಮರ್ಶೆಯ ಅಗತ್ಯವಿರಲಿಲ್ಲ ಎನ್ನುವುದೂ ತೀರ ವಿಲಕ್ಷಣವಾದ ತರ್ಕವಾಗಿದೆ. ಕನ್ನಡ ಸಾಹಿತ್ಯವನ್ನು ಸಮಗ್ರವಾಗಿ ಬಲ್ಲ ಯಾರೂ ಈ ತರ್ಕವನ್ನು ಒಪ್ಪಲಾರರು. ಆದ ಕಾರಣ, ಹಿಂದಿನ ಸಾಹಿತ್ಯದಲ್ಲಿ ಒಳ್ಳೆಯದಲ್ಲದ ಕಾವ್ಯವೇ ಇಲ್ಲ ಎಂಬ ಮೂಲಭೂತವಾದ ‘ನಂಬಿಕೆ’ಯಿಂದ ಹೊರಟ ಮಾಸ್ತಿಯವರ ವಿಮರ್ಶೆ ಬಹುಮಟ್ಟಿಗೆ ವರ್ಣನಾತ್ಮಕ ಮಾತ್ರವಾಗಿರುವುದು ಸಹಜವಾಗಿದೆ. ಆದರೆ ಒಳ್ಳೆಯ ಅಂಶಗಳನ್ನು ತೋರಿಸುವಲ್ಲಿ ವ್ಯಾಖ್ಯಾನಿಸುವಲ್ಲಿ ಮಾಸ್ತಿಯವರು ಪಡುವ ಸುಖವನ್ನು ಮತ್ತು ಅವರ ರಸಜ್ಞತೆಯನ್ನು ಶಂಕಿಸುವ ಹಾಗಿಲ್ಲ.

ಮಾಸ್ತಿಯವರ ವಿಮರ್ಶೆ ಪ್ರಧಾನವಾಗಿ ವರ್ಣನಾತ್ಮಕವಾದುದಾದರೂ, ಕನ್ನಡ ವಿಮರ್ಶೆಯ ಆರಂಭದ ದಿನಗಳಲ್ಲಿ ಬಂದ ಅವರ ವಿಮರ್ಶಾ ಲೇಖನಗಳಲ್ಲಿ ತೌಲನಿಕ ವಿಮರ್ಶೆ, ವ್ಯಾಖ್ಯಾನ ವಿಮರ್ಶೆ, ಸಂಶೋಧನ ವಿಮರ್ಶೆ ಮತ್ತು ಪ್ರಾಯೋಗಿಕ ವಿಮರ್ಶೆಯ ಪ್ರಯತ್ನಗಳೂ ಕ್ವಚಿತ್ತಾಗಿ ಕಾಣಿಸಿಕೊಂಡಿವೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಒಂದು ಕೃತಿಯ ಬಗೆಗೆ ರುಚಿ ಹುಟ್ಟಿಸಬೇಕಾದರೆ, ವಿಮರ್ಶಕನಾದವನು ತನ್ನ ರುಚಿ ಸಾಮರ್ಥ್ಯದ ಬಗ್ಗೆ ನಂಬಿಕೆ ಹುಟ್ಟಿಸಬೇಕು. ಮಾಸ್ತಿಯವರ ರುಚಿ ಸಾಮರ್ಥ್ಯದ ಬಗ್ಗೆ ಈ ಎಲ್ಲ ಲೇಖನಗಳೂ ವ್ಯಾಖ್ಯಾನದಂತಿವೆ. ಇದಕ್ಕೆ ನಿದರ್ಶನವಾಗಿ ಕಾಳಿದಾಸನ ಮೇಘದೂತವನ್ನು ಕುರಿತು, ಲಕ್ಷ್ಮೀಶನ ಜೈಮಿನಿ ಭಾರತವನ್ನು ಕುರಿತು ಅವರು ಬರೆದ ಲೇಖನವನ್ನು ನೋಡಿದರೆ ಸಾಕು. ಕವಿ ಕೃತಿಯನ್ನು ಶ್ರದ್ಧೆಯಿಂದ, ತೆರೆದ ಮನಸ್ಸಿನಿಂದ ಓದಿ, ಅದರ ಸೊಗಸನ್ನು ತಾವು ಸವಿದು ಅದನ್ನು ಇತರರಿಗೆ ಪರಿಚಯ ಮಾಡಿಕೊಡುವ, ಪ್ರಿಯವಾದ, ನಯವಾದ ವಿಧಾನ ತುಂಬ ಸೊಗಸಾಗಿದೆ. ಮೇಘದೂತವನ್ನು  ಪರಿಚಯ ಮಾಡಿಕೊಡುವಲ್ಲಿ ಅವರು ನಿದರ್ಶನಕ್ಕೆಂದು ಮಾಡಿರುವ ಮೇಘದೂತ ಕಾವ್ಯದ ಪದ್ಯಾನುವಾದಗಳು, ತಮಿಳು ವೈಷ್ಣವ ಪ್ರಬಂಧಗಳನ್ನು ಕುರಿತ ಲೇಖನದಲ್ಲಿ ಆಳ್ವಾರುಗಳ ಗೀತೆಗಳ ಪದ್ಯಾನುವಾದದಲ್ಲಿ ಕಂಡುಬರುವ ವಿವಿಧ ಪ್ರಯೋಗಗಳು ತುಂಬ ಹೃದ್ಯವಾಗಿವೆ. ವಿಮರ್ಶೆಯ ನೆಪದಲ್ಲಿ ನಡೆದ ಈ ಪದ್ಯಾನುವಾದಗಳು ಅನುವಾದಕರಿಗೆ ಮಾರ್ಗದರ್ಶಕವಾಗಿರುವುದು ಮಾತ್ರವಲ್ಲದೆ, ಹೊಸ ಕಾವ್ಯಪ್ರಯೋಗದ ಅಂದಿನ ದಿನಗಳಲ್ಲಿ ಕನ್ನಡ ಕಾವ್ಯಕ್ಕೆ ಒಂದು ಕೊಡುಗೆ ಕೂಡಾ ಆಗಿವೆ ಎಂದು ನಮ್ಮ ಭಾವನೆ. ಹಾಗೆಯೆ ಗೀತಾಂಜಲಿಯ ಪರಿಚಯದಲ್ಲಿ ಮಾಡಿದ ಟ್ಯಾಗೂರರ ಕವಿತೆಯ ಗದ್ಯಾನುವಾದಗಳು, ಡೇವಿಡ್, ಅಗಸ್ಟೀನ್, ಅರಿಲೀಯಸ್, ಹಾಫಿಸ್-ಇತ್ಯಾದಿಯವರ ಕೃತಿಯಿಂದ ಮಾಡಿಕೊಂಡಿರುವ ಅನುವಾದ ಭಾಗಗಳು. ಆಯಾ ಕವಿಗಳ ಕೃತಿಪರಿಚಯಕ್ಕೆ ತುಂಬ ಉಚಿತವಾದವುಗಳಾಗಿವೆ. ಕೃತಿ ಪರಿಚಯದ ವರ್ಣನಾತ್ಮಕ ವಿಧಾನದಲ್ಲಿ, ಮಾಸ್ತಿಯವರು ಮೂಲಲೇಖಕರನ್ನು ಎಷ್ಟು ಸಹೃದಯತೆಯಿಂದ, ಶ್ರದ್ಧೆಯಿಂದ ಅಭ್ಯಸಿಸಿದ್ದಾರೆ, ಆಯಾ ಕವಿ ಕೃತಿಗಳ ಅಂತರಂಗವನ್ನು ಮುಟ್ಟಿ ಮಿಡಿಯಬಲ್ಲವರಾಗಿದ್ದಾರೆ ಎಂಬುದು ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಮಾಸ್ತಿಯವರ ಅನುವಾದಗಳ ಮೂಲಕ ಪರಿಚಯವಾಗುವ ಅನ್ಯದೇಶದ ಸಾಹಿತ್ಯ ಭಾಗಗಳನ್ನು ಓದಿದ ನಮಗೆ, ಮೂಲದಲ್ಲಿ ಆ ಕೃತಿಗಳು ಇನ್ನೆಷ್ಟು ಸೊಗಸಾಗಿರಬಹುದು ಎಂಬ ಕುತೂಹಲ ಹಾಗೂ ಆಸಕ್ತಿ ಹುಟ್ಟುತ್ತದೆ. ಹೀಗೆ ನಮ್ಮ ಸಾಹಿತ್ಯದ ಬಗ್ಗೆ ಮತ್ತು ವಿದೇಶೀಯವಾದ ಸಾಹಿತ್ಯದ ಬಗ್ಗೆ ರುಚಿ ಹುಟ್ಟಿಸುವ ಕಾರ‍್ಯವನ್ನು ಮಾಸ್ತಿಯವರ ವಿಮರ್ಶೆ ಯಶಸ್ವಿಯಾಗಿ ಮಾಡುತ್ತದೆ.

ಮಾಸ್ತಿಯವರು ಕನ್ನಡದ, ಭರತಖಂಡದ ಮತ್ತು ಪಾಶ್ಚಾತ್ಯ ಕಾವ್ಯ ಸಮುದಾಯವನ್ನು ತಕ್ಕ ಮಟ್ಟಿಗೆ ಪರಿಚಯ ಮಾಡಿಕೊಂಡ ಕಾರಣದಿಂದ, ಅವರ ಕಣ್ಣಿಗೆ ಈ ಹಲವು ಸಾಹಿತ್ಯಕೃತಿಗಳು ಕೆಲವಂಶಗಳಲ್ಲಿ ಮನೋಧರ್ಮದ ಹಾಗೂ ಅಭಿವ್ಯಕ್ತಿಯ ಸಾಮ್ಯ ಕಂಡು ಬಂದಿದೆ. ಈ ಸಾಮ್ಯವನ್ನು ಗುರುತಿಸುವ ಪ್ರಯತ್ನದ ತೌಲನಿಕ ವಿಮರ್ಶೆಯ ಅಂಶಗಳು ಅವರ ವಿಮರ್ಶೆಯ ಲೇಖನದಲ್ಲಿ ಕಾಣಿಸಿಕೊಂಡಿವೆ. ಟ್ಯಾಗೂರರ “ಗೀತಾಂಜಲಿ ಕಾವ್ಯವು ವೈಷ್ಣವ ಸಂಪ್ರದಾಯದಲ್ಲಿ ಹಿಂದಣದಾಸರು ಬರೆದ ಗೀತೆಗಳ ಮಾರ್ಗದಲ್ಲಿ ಒಂದು ಹೊಸ ರೂಪ”[4] ಎಂದು ಸಾಮ್ಯವನ್ನು ಗುರುತಿಸಿದ ಇವರು ಯಹೋದ್ಯರ ಡೇವಿಡ್ ಮಹಾರಾಜನ ಕೀರ್ತನೆಗಳನ್ನು ಕರ್ನಾಟಕದ ವೈಷ್ಣವ ಗೀತೆಗಳೊಂದಿಗೆ ಹೋಲಿಸಿ “ಕರ್ನಾಟಕದ ವೈಷ್ಣವ ಗೀತೆಗಳಲ್ಲಿ ಉತ್ತಮವಾದವುಗಳಲ್ಲಿ ಕಾಣುವಂತೆ ಇಲ್ಲಿಯೂ ಕಾವ್ಯ ಸೌಂದರ‍್ಯ ಕಾಣುತ್ತದೆ. ನಮ್ಮ ವೈಷ್ಣವ ಗೀತೆಗಳು ಮಾನವನ ಇತಿಹಾಸದಲ್ಲಿ ಈ ಗೀತೆಗಳಾದ ಹಲವು ಶತಮಾನಗಳ ಮೇಲೆ ಬಂದವು. ಅಲ್ಲದೆ ಜನತೆಯೂ ಬೇರೆ. ಈ ಕಾರಣದಿಂದ ಈ ಗೀತೆಗಳು ವೈಷ್ಣವ ಗೀತೆಗಳಿಂದ ಬೇರೆಯ ರೀತಿಯ ಒಂದು ಶಕ್ತಿ ಇದೆ. ಇಲ್ಲಿಯ ದೇವರು ನಿಷ್ಠುರ ದೈವ. ಇಲ್ಲಿಯ ಭಾವನೆ ಕಠಿನವಾದದ್ದು. ಹಗೆಯನ್ನು ಬಯಸುವವನಿಗೆ ಕೇಡನ್ನು ಬಯಸತಕ್ಕದ್ದು. ಆದರೂ ಇದು ಉತ್ತಮವಾದ ಗೀತವೇ”[5] ಎನ್ನುತ್ತಾರೆ. ಪಾಶ್ಚಾತ್ಯ ಹಾಗೂ ಪೌರಾತ್ಯ ಸಂಪ್ರದಾಯದ ಅನುಭಾವ ಸಾಹಿತ್ಯದಲ್ಲಿ ಭಕ್ತಿಮಾರ್ಗದಲ್ಲಿ ಒಂದು ಬಗೆಯ ಸಾಮ್ಯವನ್ನು ಕಾಣುವುದು ಅಷ್ಟೇನೂ ಅಶ್ಚರ್ಯದ  ಸಂಗತಿಯಲ್ಲ. ಆದರೆ ಹಾಗೆ ಸಾಮ್ಯವನ್ನು ಗುರುತಿಸುವುದರ ಜೊತೆಗೆ ಸತ್ವದೊಳಗಣ ಭೇದಗಳನ್ನು ವಿಚಾರ ಮಾಡುವುದು ವಿಶೇಷ ರೀತಿಯದು. ಈ ವಿಶೇಷತೆಯನ್ನು ತೌಲನಿಕ ವಿಧಾನದ ಈ ವಿಮರ್ಶೆಯಲ್ಲಿ ಮಾಸ್ತಿಯವರು ಮಾಡಿ ತೋರಿಸಿದ್ದಾರೆ, ವಾಲ್ಮೀಕಿ ರಾಮಾಯಣವನ್ನು ಕುರಿತು ೧೯೩೮ರಷ್ಟು ಹಿಂದೆಯೆ ಪ್ರಕಟಿಸಿದ ‘ಆದಿಕವಿ ವಾಲ್ಮೀಕಿ’ಯಲ್ಲಿ ರಾವಣನ ಪಾತ್ರವನ್ನು ಪಾಶ್ಚಾತ್ಯ ದುರಂತ ನಾಯಕ ತತ್ವದ ಹಿನ್ನೆಲೆಯಲ್ಲಿ ವಿವೇಚಿಸಿದ್ದಾರೆ. ಹಾಗೆಯೆ ಷೇಕ್ಸ್‌ಪಿಯರ್, ಮಿಲ್ಟನ್, ಹೋಮರ್ ಮೊದಲಾದ ಮಹಾಕವಿಗಳು ಚಿತ್ರಿಸಿರುವ ‘ಪ್ರತಿ ನಾಯಕ’ ಪಾತ್ರದೊಂದಿಗೆ, ವಾಲ್ಮೀಕಿಯ ‘ಪ್ರತಿನಾಯಕ’ನನ್ನು ತುಲನೆಗೆ ಇರಿಸಿ ಚರ್ಚಿಸಿರುವುದು ವಿಶೇಷದ ಸಂಗತಿಯಾಗಿದೆ. ನಮ್ಮ ದೇಶದ ಮಹಾಕೃತಿಯೊಂದನ್ನು, ಅನ್ಯದೇಶದ ಮಹಾಕವಿ ಕೃತಿಗಳೊಡನೆ ಹೋಲಿಸಿ ನೋಡಬೇಕಾದದ್ದರ ಔಚಿತ್ಯವನ್ನೂ, ಅವಶ್ಯಕತೆಯನ್ನೂ, ಮಾಸ್ತಿಯವರ ಈ ಪ್ರಯತ್ನ ಸೂಚಿಸುವುದಲ್ಲದೆ, ಅವರ ವಿಸ್ತಾರವಾದ ಹಾಗೂ ಅಭಿರುಚಿಗೆ ಈ ಬಗೆಯ ವಿಮರ್ಶೆ ಸಾಕ್ಷಿಯಾಗಿದೆ.

ಮಾಸ್ತಿಯವರ ವರ್ಣನಾತ್ಮಕ ವಿಮರ್ಶೆ ವ್ಯಾಖ್ಯಾನ ವಿಮರ್ಶೆಯಾದಾಗ ಅದು ತೆರೆಯುವ ರಮ್ಯತೆಯೇ ಬೇರೆ. ಒಂದು ಪದದ ಔಚಿತ್ಯ, ಒಂದು ವಾಕ್ಯದಲ್ಲಿನ ಶಬ್ದ ಸಮುದಾಯದ ಸೊಗಸು, ಒಂದು ಪ್ರಸಂಗದ ಸೊಗಸು-ಇಂಥವುಗಳನ್ನು ಎತ್ತಿಕೊಂಡು ವಿವರಿಸುವ ರೀತಿ ವಿಶೇಷವಾದದ್ದು. ಅದಕ್ಕೆ ನಿದರ್ಶನಗಳನ್ನು ಅವರ ಲೇಖನದಲ್ಲಿ ಹುಡುಕಬೇಕಾಗಿಲ್ಲ; ಕಣ್ಣಿಟ್ಟೆಡೆ ಅವು ಕಾಣುತ್ತವೆ. ಅವೆಲ್ಲವನ್ನೂ ಹೇಳಿ ವಿಲಂಬಿಸುವ ಅಗತ್ಯ ಇಲ್ಲಿ ಸಲ್ಲದು. ಆದರೂ ಒಂದೆರಡನ್ನು ಬೆರಳಿಟ್ಟು ತೋರಿಸುವುದು ಅಗತ್ಯ. ಜೈಮಿನಿ ಭಾರತವನ್ನು ಕುರಿತು ಬರೆಯುವಲ್ಲಿ ಒಂದೆಡೆ ಒಂದು ಪದವನ್ನು ಕುರಿತು ವಿವರಣೆ ಹೀಗಿದೆ; “ಧರ್ಮರಾಜನು ತನ್ನ ಕುಲದ ನೃಪರ ಸಾಧು ಚಾರಿತ್ರ ತನ್ನಿಂದ ಸೊಗಡಾಗದೆ ಇರಲೆಂದು ಹೇಳುತ್ತಾನೆ. ಅಲ್ಲಿ ಸೊಗಡು ಎನ್ನುವ ಮಾತಿನಿಂದ ಬರುವ ಅರ್ಥ ಇನ್ನು ಯಾವ ಮಾತಿನಿಂದಲೂ ಬರಲಾರದು. ಜಿಡ್ಡಾಗಬಾರದು, ವಾಸನೆ ಬರಬಾರದು ಎಂಬ ಎರಡು ಭಾವ ಬರುವಂತೆ ಕವಿಯು ಈ ಮಾತನ್ನು ಉಪಯೋಗಿಸಿದ್ದಾನೆ”[6] ಮಾತಿನ ಸೊಗಸು ಅಥವಾ ಶೈಲಿಯನ್ನು ಕುರಿತು “ಆತಸೀ ಕುಸುಮ ಗಾತ್ರನಂ ಕಮಲ ನೇತ್ರನಂ ಎಂಬಲ್ಲಿ ಮಾತು ಮೃದುವಾಗಿರುವುದಲ್ಲದೆ ಗಾತ್ರನಂ ನೇತ್ರನಂ ಎಂಬ ಪ್ರಾಸದಿಂದ ಕಿವಿಗೆ ಸುಖಕೊಡುವುದರಲ್ಲಿ ಕವಿಯ ನಾನೇ ಎಂಬ ಬೇರೆ ಬೇರೆಯ ಸ್ವರಗಳನ್ನು ತಂದಿರುವುದೂ, ವದನ ರದನ ಎಂದು ಬೇರೆ ಬೇರೆ ಅಕ್ಷರಗಳಿಂದ ಆರಂಭಿಸಿದ ಪದಗಳನ್ನು ಹಾಕಿರುವುದೂ ಆತನ ಸ್ವಂತ ಸೌಂದರ‍್ಯ ಜ್ಞಾನವನ್ನು ತೋರಿಸುತ್ತದೆ.”[7] ಎಂದು ವಿವರಿಸುವ ಪ್ರಯತ್ನ ಗಮನಿಸಬೇಕಾದದ್ದು. ಸೀತೆಯ ಅಗ್ನಿ ಪ್ರವೇಶದ ಸಂದರ್ಭವನ್ನು ಕುರಿತು ವಿಚಾರ ಮಾಡುವಲ್ಲಿ, ‘ಆದಿಕವಿ ವಾಲ್ಮೀಕಿ’ ಎಂಬ ಕೃತಿಯಲ್ಲಿ, ಮಾಸ್ತಿಯವರ ವ್ಯಾಖ್ಯಾನ ಅನನ್ಯವಾದದ್ದು. ಸೀತೆಯ ಅಗ್ನಿ ಪ್ರವೇಶದ ಸಂದರ್ಭ, ರಾಮಾಯಣದ ಕತೆಯಲ್ಲಿ ತುಂಬಾ ಚರ್ಚಾಸ್ಪದವಾದ ಸಂಗತಿಯಾಗಿದೆ ರಾಮನ ನಡವಳಿಕೆಯ ದೃಷ್ಟಿಯಿಂದ. ‘ಸೀತೆಯು ಅಗ್ನಿಯನ್ನು ಪ್ರವೇಶ ಮಾಡಿದ್ದು ಅಗ್ನಿ ತನ್ನನ್ನು ಸುಡಲಿ ಎಂದಲ್ಲ; ಅಗ್ನಿ ತನ್ನನ್ನು ರಕ್ಷಿಸಲಿ ಎಂದು, ಅಗ್ನಿಯನ್ನು  ಹೊಕ್ಕಳು ಎಂಬ ಮಾತನ್ನು ಹೇಳಿ, ಮಾಸ್ತಿಯವರು “ಅಗ್ನಿಯನ್ನು’ ಹೊಕ್ಕದ್ದು ಸೀತೆ ಮಾತ್ರವಲ್ಲ. ಅವಳ ಜೊತೆಯಲ್ಲಿ ರಾಮನೂ ಒಂದು ಅಗ್ನಿಯನ್ನು ಹೊಕ್ಕನು. ಅವಳು ಬದುಕಿಕೊಂಡಾಗ ಅವನೂ ಬದುಕಿಕೊಂಡನು”[8]-ಎನ್ನುತ್ತಾರೆ. ಈ ಸಂದರ್ಭವನ್ನು ಕುರಿತ ಈ ವ್ಯಾಖ್ಯಾನ ಅಪೂರ್ವವೂ, ಅತ್ಯಂತ ಧ್ವನಿ ಪೂರ್ಣವೂ ಅದುದೆಂದು ನಮ್ಮ ಭಾವನೆ. ಒಂದು ಜೀವ ಎರಡು ದೇಹಗಳೆಂಬಂತೆ ಬದುಕಿದ ರಾಮ-ಸೀತೆಯರ ದಾಂಪತ್ಯದಲ್ಲಿ, ಆ ಬದುಕಿನ ಒಂದು ಭಾಗ ಅಗ್ನಿ ಪ್ರವೇಶದಂಥ ನಿಷ್ಠುರ ಪರೀಕ್ಷೆಗೆ ಒಳಗಾಗಬೇಕಾದಾಗ, ಅದೇ ವ್ಯಕ್ತಿತ್ವದ ಮತ್ತೊಂದು ಭಾಗವಾದ ರಾಮನ ಜೀವ, ಆ ಸಂದರ್ಭದಲ್ಲಿ ನಿರ್ಭಾವವಾಗಿ ತಣ್ಣಗಿರುವುದು ಸಾಧ್ಯವೇ ಇಲ್ಲ ಎಂಬುದನ್ನು ಗ್ರಹಿಸುವ ಪ್ರತಿಭಾಶಾಲಿಯಾದ ಸಹೃದಯನಿಗೆ ಈ ವ್ಯಾಖ್ಯಾನ ಅತ್ಯಂತ ಅರ್ಥ ಪೂರ್ಣವಾದುದೆಂದು ತಿಳಿಯುತ್ತದೆ. ಶ್ರೀ ಕುವೆಂಪು ಅವರ ‘ರಾಮಾಯಣ ದರ್ಶನಂ’ದಲ್ಲಿ ಇದೇ ಅಗ್ನಿ ಪ್ರವೇಶದ ಸಂದರ್ಭ, ಸೀತೆ ಅಗ್ನಿಯನ್ನು ಹೊಕ್ಕ ನಂತರ   ಹಿಂದೆಯೇ ರಾಮನೂ ಅದೇ ಅಗ್ನಿಯನ್ನು ಹೊಕ್ಕು ಆಕೆಯನ್ನು  ಕೈಹಿಡಿದು ಹೊರಕ್ಕೆ ಕರೆದುಕೊಂಡು ಬಂದನೆಂಬಂತೆ ಚಿತ್ರಿತವಾಗಿದೆ. ಹೆಣ್ಣಾದ ಸೀತೆಯ ಶೀಲವನ್ನು ತಾನು ಶಂಕಿಸಿದಂತೆ, ಗಂಡಾದ ತನ್ನ ಶೀಲವನ್ನು ಇತರರು ಶಂಕಿಸಬಹುದೆನ್ನುವ, ಆ ಕಾರಣ ತಾನೂ ಅದೇ ಪರೀಕ್ಷೆಗೆ ಒಳಗಾದನೆನ್ನುವ ಸೂಚನೆ ಕುವೆಂಪು ಅವರಲ್ಲಿ ಕಾಣುತ್ತದೆ. ಮಾಸ್ತಿಯವರು ಈ ಸಂದರ್ಭದಲ್ಲಿ ಕುರಿತು ‘ಆದಿಕವಿ ವಾಲ್ಮೀಕಿ’ಯಲ್ಲಿ ಮಾಡಿದ ವ್ಯಾಖ್ಯಾನದ ಕಾವ್ಯ ರೂಪದಂತೆ ‘ರಾಮಾಯಣ ದರ್ಶನ’ದಲ್ಲಿರುವ ಈ ಬದಲಾವಣೆಗೆ, ಮಾಸ್ತಿಯವರಿಂದೇನಾದರೂ ಪ್ರೇರಣೆ ದೊರೆಯಿತೋ ಹೇಗೆ ಎಂಬ ಸಂಶಯ ಓದುಗರಲ್ಲಿ ಬರುವ ಸಂಭವ ಉಂಟು.

ಮಾಸ್ತಿಯವರ ವಿಮರ್ಶೆಯ ಭಾಷೆ ಮೂಲತಃ ಕಥನಾತ್ಮಕವಾಗಿದೆ. ತುಂಬ ಪರಿಣತರಾದ ಹಿರಿಯರೊಬ್ಬರು, ಕಿರಿಯರಿಗೆ ಹೇಳುವ ಕಿವಿ ಮಾತಿನಂತಿದೆ ಇವರ ಬರವಣಿಗೆಯ ಧಾಟಿ. ಮಾರ್ಗದರ್ಶಿಯಾದವನು ಪ್ರವಾಸಿಗಳಿಗೆ ಒಂದು ಸ್ಥಳದ ಅಥವಾ ಶಿಲ್ಪದ ಪರಿಚಯ ಮಾಡಿಕೊಡುವಲ್ಲಿ ತಳೆಯುವ ಧೋರಣೆ ಇವರ ವಿಮರ್ಶೆಯ ಬರೆಹದಲ್ಲಿದೆ. ಅವ್ಯಗ್ರವಾಗಿ, ಸಾವಧಾನವಾಗಿ ಒಂದೊಂದರ ಸೊಗಸನ್ನು ಬಿಡಿಸಿ ಬಿಡಿಸಿ, ತಾವು ಸವಿಯುತ್ತ, ಬೇರೆಯವರಿಗೂ ಸವಿ ಹುಟ್ಟಿಸುವ ಉದ್ದೇಶದಿಂದ ಪ್ರೇರಿತವಾಗಿದೆ ಈ ಬರವಣಿಗೆ. ಈ ಸಂದರ್ಭದ ಸೊಗಸನ್ನು ನೋಡಿ; ಈ ಮಾತಿನ ಹದವನ್ನು ನೋಡಿ; ಈ ವರ್ಣನೆಯ ಔಚಿತ್ಯವನ್ನು ಗಮನಿಸಿ-ಎಂಬುದು ಈ ಶೈಲಿಯ ಲಕ್ಷಣ. ಇದಕ್ಕಿಂತ ಮಿಗಿಲಾಗಿ ಇವರು ಸಾಹಿತ್ಯವನ್ನು ಸಮೀಕ್ಷಿಸುವಾಗ ಅದನ್ನು ಕೇವಲ ಸಾಹಿತ್ಯವೆಂದಷ್ಟೆ ನೋಡುವುದಿಲ್ಲ; ಅದು ಒಂದು ಜನಜೀವನದ, ನಾಡಿನ ಸಂಸ್ಕೃತಿಯ ಒಂದು ಅನಿವಾರ್ಯವಾದ ಭಾಗವೆಂಬಂತೆ ನೋಡುತ್ತಾರೆ. ಸಾಹಿತ್ಯ ಎಂಬುದು ಒಂದು ಜನತೆಯ ಬದುಕಿನ ಸಾಂಸ್ಕೃತಿಕ ಸಂದರ್ಭದಲ್ಲಿ ಹೇಗೆ ಮಹತ್ವದ್ದಾಗಿದೆ ಎಂಬುದನ್ನು ತಿಳಿಯಪಡಿಸುವುದರ ಕಡೆಗೆ ಇವರ ಲಕ್ಷ್ಯ ವಿಶೇಷವಾದದ್ದು. ಕನ್ನಡ ನಾಡಿನ ವೈಷ್ಣವ ದಾಸರ ಕೀರ್ತನೆಗಳನ್ನು, ದಾಸರು ಮನೆ ಮನೆಯ ಬಾಗಿಲಲ್ಲಿ ಹಾಡಿ ಭಿಕ್ಷೆಬೇಡುವ ಸಂಪ್ರದಾಯವನ್ನು ಕುರಿತು “ಪೂರ್ವದಲ್ಲಿ ಹೀಗೆ ಭಿಕ್ಷೆಗೆ ಹೋಗುವುದರ ಉದ್ದೇಶ ಹೊಟ್ಟೆಯಪಾಡನ್ನು ನೋಡುವುದಾಗಿರಲಿಲ್ಲ, ಜನರಿಗೆ ಮನೋರಂಜನೆಯನ್ನುಂಟುಮಾಡುವುದೂ ಜೀವನದ ಮುಖ್ಯ ತತ್ವಗಳನ್ನು ತಿಳಿಸಿ ಒಳ್ಳೆಯದು ಕೆಟ್ಟದ್ದು ಎಂಬುದನ್ನು ತೋರಿಸಿಕೊಟ್ಟು ಸರಿಯಾದ ಮಾರ್ಗದಲ್ಲಿ ನಡೆಯುವುದನ್ನು ಹೇಳಿಕೊಡುವುದೂ ಈ ಏರ್ಪಾಡಿನ ಉದ್ದೇಶವಾಗಿತ್ತೆಂಬುದು ಸ್ವಲ್ಪ ಯೋಚನೆಯಿಂದ ತಿಳಿಯುವುದು”[9]-ಎಂದು ಈ ಸಂಪ್ರದಾಯದ ಸಾಂಸ್ಕೃತಿಕ ಮಹತ್ವವನ್ನು ವ್ಯಾಖ್ಯಾನಿಸಿದ್ದಾರೆ. ರಾಮಾಯಣ ಮತ್ತು ಮಹಾಭಾರತವನ್ನು ಕುರಿತು ಅವರು ಬರೆದ ಎರಡು ಕೃತಿಗಳಲ್ಲಿ, ರಾಮಾಯಣ, ಮಹಾಭಾರತಗಳು ಹೇಗೆ ಭಾರತೀಯ ಸಂಸ್ಕೃತಿಯ ಪ್ರತಿನಿಧಿಗಳಾಗಿವೆ ಎಂಬುದನ್ನು ಸೊಗಸಾಗಿ ಪ್ರತಿಪಾದಿಸಿದ್ದಾರೆ. ರಾಮಾಯಣ ಮಹಾಭಾರತದಲ್ಲಿ ಎಲ್ಲ ಕಾಲಕ್ಕೂ ಎತ್ತಿಕೊಂಡು ಚರ್ಚಿಸಿದ ಧರ್ಮಸೂಕ್ಷ್ಮಗಳು ಯಾವುವು; ವಿವಾದಕ್ಕೆ ಒಳಗಾಗಿರುವ ಸಂದರ್ಭಗಳು ಮತ್ತು ಸಮಸ್ಯೆಗಳು ಯಾವುವು; ಜನಾಂಗದ ಚರಿತ್ರೆಯ ದೃಷ್ಟಿಯಿಂದ ಧಾರ್ಮಿಕ ದೃಷ್ಟಿಯಿಂದ ಅವುಗಳ ಅಭ್ಯಾಸ ಇದುವರೆಗೂ ಯಾವ ರೀತಿ ನಡೆದಿದೆ ಮತ್ತು ಯಾವ ರೀತಿಯಲ್ಲಿ ನಡೆಯಬೇಕು ಎಂಬುದನ್ನು ‘ಆದಿಕವಿ ವಾಲ್ಮೀಕಿ’ ಮತ್ತು ‘ಭಾರತತೀರ್ಥ’ಗಳಲ್ಲಿ ವಿಸ್ತೃತವಾಗಿ ಚರ್ಚಿಸಿ, ಸೂಚಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಮಾಸ್ತಿಯವರ ವಿಮರ್ಶೆಯ ಪ್ರಧಾನ ಗುರಿ, ಜನಕ್ಕೆ ಸಾಹಿತ್ಯದ ಬಗ್ಗೆ ರುಚಿಯನ್ನು ಹುಟ್ಟಿಸುವುದು ಮತ್ತು ಅವರ ರುಚಿಯನ್ನು ತಿದ್ದುವುದರ ಮೂಲಕ ಬದುಕನ್ನು ಹಸನುಗೊಳಿಸುವುದು.

ಮಾಸ್ತಿಯವರ ವಿಮರ್ಶೆಯಲ್ಲಿ ಸಾಹಿತ್ಯವನ್ನು ‘ವಿಮರ್ಶಿ’ಸುವುದರೊಂದಿಗೆ, ನಮ್ಮ ಇಂದಿನ ಬದುಕಿನ ವಿಮರ್ಶೆ ಕೂಡಾ ಬೆರೆತುಕೊಂಡಿದೆ. ರವೀಂದ್ರರ ಗೀತಾಂಜಲಿಯ ಬಗ್ಗೆ ಬರೆಯುವಾಗ “ಠಾಕೂರರು ಹತ್ತು ವರ್ಷದ ಹಿಂದೆ ಗೀತಾಂಜಲಿಯನ್ನು ಇಂಗ್ಲಿಷಿನಲ್ಲಿ ಅಚ್ಚು ಹಾಕಿಸಿ ಈಚೆಗೆ ಆ ಭಾಷೆಯಲ್ಲಿ ಹತ್ತಾರು ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಇಂಗ್ಲಿಷನ್ನು ಬಲ್ಲ ಪಾಶ್ಚಾತ್ಯ ಪ್ರಪಂಚ ಈ ಗ್ರಂಥಗಳನ್ನು ಓದಿ ಸಂತೋಷಪಟ್ಟಿದೆ. ನಾವಾದರೊ ಗೌಳಿಗನ ಮನೆಯ ಮಕ್ಕಳು ಹಾಲಿನ ರುಚಿಯನ್ನು ಕಾಣದಂತೆ ಠಾಕೂರರ ಈ ಗ್ರಂಥಗಳ ರುಚಿಯನ್ನು ಅರಿಯಲಾರದೆ ಇದ್ದೇವೆ”[10] ಎಂದು ನಮ್ಮ ಜನದ ಸ್ವಭಾವವನ್ನು ಟೀಕಿಸಿದ್ದಾರೆ. ಇನ್ನೊಂದೆಡೆ “ಈ ಕಾವ್ಯ ಪೂರ್ವದೇಶದ್ದು, ಈ ಕಾವ್ಯ ಪಶ್ಚಿಮ ದೇಶದ್ದು ಎನ್ನಬೇಡಿ. ಇಲ್ಲದ ಭೇದವನ್ನು ಊಹಿಸಬೇಡಿ. ಪ್ರಪಂಚದ ಕಾವ್ಯವೆಲ್ಲ ಒಂದೇ.”[11] ಎಂದು ಬುದ್ಧಿ ಹೇಳುತ್ತಾರೆ. ಮತ್ತೊಂದೆಡೆ ಜನಪದಕಾವ್ಯ ಸಂಗ್ರಹ-ಪ್ರಕಟಣೆಗಳ ಅಗತ್ಯವನ್ನು ಹೇಳುತ್ತ “ಈಗ ನಮ್ಮ ಕಾವ್ಯಪ್ರಪಂಚದಲ್ಲಿ ಹೊಸ ಮಾರ್ಗಗಳನ್ನು ಕಂಡು ಮುಂದುವರಿಯುವ ಅಪೇಕ್ಷೆಯೂ ಶಕ್ತಿಯೂ ಜನರಲ್ಲಿ ಉಂಟಾಗುವಂತೆ ಮಾಡುವುದು ಅವಶ್ಯಕವಾಗಿದೆ. ಹೀಗೆ ಮಾಡುವುದರಲ್ಲಿ ನಮ್ಮ ದೇಶದಲ್ಲಿ ವಾಡಿಕೆಯಾಗಿರುವ ಸಾಂಗತ್ಯ, ಲಾವಣಿ ಮುಂತಾದುವನ್ನು ಸೇರಿಸಿ ಪ್ರಕಟಮಾಡುವುದು ಅತಿ ಮುಖ್ಯವಾದ ಕೆಲಸ”[12]-ಎಂದು ಸೂಚಿಸುತ್ತಾರೆ. ಬೇರೊಂದೆಡೆ “ಭರತ ವರ್ಷದ ಸಂಸ್ಕೃತಿ ಪ್ರಪಂಚದ ಚರಿತ್ರೆಯಲ್ಲಿ ತನ್ನ ಪಾಲಿಗೆ ಬಂದಿರುವ ಕೆಲಸವನ್ನು ಮಾಡಿ ಕೃತಾರ್ಥವಾಗಬೇಕಾದರೆ ನಮ್ಮ ದೇಶದ ಎಲ್ಲ ನಾಡುಗಳ ಮಹನೀಯ ಜೀವಗಳ ತಪಸ್ಸಿದ್ಧಿ ಒಟ್ಟುಗೂಡುವುದು ಅವಶ್ಯಕ. ಒಂದೊಂದು ನಾಡ ಜನವೂ ಉಳಿದೆಲ್ಲ ನಾಡುಗಳ ಹಿರಿಯರ ವಾಣಿಯ ಪರಿಚಯವನ್ನು ಮಾಡಿಕೊಳ್ಳಬೇಕು”[13] ಎಂದು ಹಾರೈಸುತ್ತಾರೆ. ವಿಮರ್ಶೆಯ ಹೆಸರಿನ ಈ ಕೆಲವು ಉಪದೇಶ, ಹಾರೈಕೆಗಳು ಕಾವ್ಯ ವಿಮರ್ಶೆಗೆ ಹೇಗೆ ಸಂಬಂಧಿಸುತ್ತವೆ ಎಂಬ ಸಂದೇಹ ಬರಬಹುದು; ಮಾಸ್ತಿಯವರು ವಿಮರ್ಶೆಯ ಈ ಲೇಖನಗಳನ್ನು ಉಪನ್ಯಾಸಗಳೆಂದು ಕರೆದಿರುವುದು ಸರಿ ಎಂದು ಅನ್ನಿಸಬಹುದು. ಆದರೆ ಸಾಹಿತ್ಯ ಎನ್ನುವುದು ಒಂದು ಜನತೆಯ ಬದುಕಿನ ಅಭಿವ್ಯಕ್ತಿ; ಈ ಬದುಕು ಎನ್ನುವುದು ಅವರ ದೈನಂದಿನ ನಡವಳಿಕೆಯ, ನಂಬಿಕೆಗಳ, ಭಾವನೆಗಳ, ಬೆಲೆಗಳ ಒಂದು ಮೊತ್ತ. ಒಂದು ಕಾಲಕ್ಕೆ ಈ ಜನದ ಬದುಕು ಹೇಗಿತ್ತು, ಅದರ ಅಭಿವ್ಯಕ್ತಿಯಾದ ಸಾಹಿತ್ಯ ಹೇಗಿತ್ತು  ಎಂಬುದರ ಪರಿಚಯ ನಾಳಿನ ಬದುಕು ಹೇಗೆ ಹಸನಾಗಬೇಕು ಎನ್ನುವ ಸಾಂಸ್ಕೃತಿಕ ಕಳಕಳಿ ಮಾಸ್ತಿಯವರ ವಿಮರ್ಶೆಯ ಲೇಖನಗಳಲ್ಲಿ ಸ್ಪಷ್ಟವಾಗಿದೆ. ಕಾವ್ಯದ ಬಗ್ಗೆ ರುಚಿ ಹುಟ್ಟಿಸುವ, ಕನ್ನಡ ನಾಡಿನ ಜನ ಹೇಗೆ ಸಮಗ್ರವಾದ ವ್ಯಕ್ತಿತ್ವವನ್ನು ಬೆಳಯಿಸಿಕೊಳ್ಳಬೇಕೆಂಬ  ನಿರ್ದೇಶನ ನೀಡುವ ಮಾಸ್ತಿಯವರ ವಿಮರ್ಶೆ ತುಂಬ ಅರ್ಥವತ್ತಾದುದಾಗಿದೆ.

ನವೋದಯ-೧೯೭೬


[1] ವಿಮರ್ಶೆ: ಭಾಗ ೧, ಪು. ೮

[2] ವಿಮರ್ಶೆ: ಭಾಗ ೨, ಪು. ೧೭

[3] ವಿಮರ್ಶೆ: ಭಾಗ ೧, ಪು. ೨; ೩

[4] ವಿಮರ್ಶೆ: ಭಾಗ ೨, ಪು. ೮೦

[5] ವಿಮರ್ಶೆ: ಭಾಗ ೩, ಪು. ೧೯

[6] ವಿಮರ್ಶೆ: ಭಾಗ ೪, ಪು. ೨೦

[7] ಅಲ್ಲೇ, ಪುಟ ೨೦

[8] ಆದಿಕವಿ ವಾಲ್ಮೀಕಿ, ಪುಟ. ೧೩೧-೧೩೨

[9] ವಿಮರ್ಶೆ: ಭಾಗ ೧, -ಪು. ೨೭

[10] ವಿಮರ್ಶೆ: ಭಾಗ ೨, -ಪು. ೪೧

[11] ವಿಮರ್ಶೆ: ಭಾಗ ೪, -ಪು.೪೭

[12] ವಿಮರ್ಶೆ: ಭಾಗ ೧, -ಪು.೯೯

[13] ವಿಮರ್ಶೆ: ಭಾಗ ೪, -ಪು. ೧೧೦