ಸುತ್ತಮುತ್ತ ಏಳುಕೊಳ್ಳ ಮಾದೇವಿ
ಅದರ ನಟ್ಟನಡುವೆ ಗಚ್ಚಿನ ಗುಡಿಯು ಮಾದೇವಿ       ಪಲ್ಲ

ನಟ್ಟನಡುವೆ ಗಚ್ಚಿನ ಗುಡಿಯ ಮಾದೇವಿ
ನಿನ್ನ ಗುಡಿಯ ಮ್ಯಾಲ ಬಂಗಾರ ಕಳಸ ಮಾದೇವಿ     ೧

ಗುಡಿಯ ಮ್ಯಾಲ ಬಂಗಾರ ಕಳಸ ಮಾದೇವಿ
ನಿನ್ನ ಗುಡಿಯ ಒಳಗ ಚಿತ್ರದ ಕಂಬ ಮಾದೇವಿ         ೨

ಗುಡಿಯ ಒಳಗ ಚಿತ್ರದ ಕಂಬ ಮಾದೇವಿ
ನಿನ್ನ ಎಡಕ ಬಲಕ ಚಂದರಜ್ಯೋತಿ ಮಾದೇವಿ         ೩

ಎಡಕ ಬಲಕ ಚಂದರಜ್ಯೋತಿ ಮಾದೇವಿ
ನಿನ್ನ ತಲಿಯ ಮ್ಯಾಲ ಮುತ್ತಿನ ದಂಡಿ ಮಾದೇವಿ       ೪

ತೆಲಿಯ ಮ್ಯಾಲ ಮುತ್ತಿನ ದಂಡಿ ಮಾದೇವಿ
ನಿನ್ನ ಮೂಗಿನಲ್ಲಿ ರತ್ನದ ನತ್ತ ಮಾದೇವಿ       ೫

ಮೂಗಿನಲ್ಲಿ ರತ್ನದ ನತ್ತ ಮಾದೇವಿ
ನಿನ್ನ ಕೊರಳಿನಲ್ಲಿ ಚಂದ್ರಹಾರ ಮಾದೇವಿ     ೬

ಕೊರಳಿನಲ್ಲಿ ಚಂದ್ರಹಾರ ಮಾದೇವಿ
ನಿನ್ನ ಹಣಿಯ ಮ್ಯಾಲ ಗೀರಗಂಧ ಮಾದೇವಿ  ೭

ಹಣಿಯ ಮ್ಯಾಲ ಗೀರಗಂಥ ಮಾದೇವಿ
ನಿನ್ನ ಹಣಿಯ ಮ್ಯಾಲ ಕುಂಕುಮರೇಖೆ ಮಾದೇವಿ      ೮

ಹಣಿಯ ಮ್ಯಾಲ ಕುಂಕುಮರೇಖೆ ಮಾದೇವಿ
ನಿನ್ನ ನಡುವಿನಲ್ಲಿ ವಜ್ರದ ಡಾಬು ಮಾದೇವಿ   ೯

ನಡುವಿನಲ್ಲಿ ವಜ್ರದ ಡಾಬು ಮಾದೇವಿ
ನಿನ್ನ ತೊಡಿಯ ಮ್ಯಾಲ ಬಾಲರಾಮ ಮಾದೇವಿ        ೧೦

ತೊಡಿಯ ಮ್ಯಾಲ ಬಲರಾಮ ಮಾದೇವಿ
ನಿನ್ನ ಗದ್ದಿಗಿ ಮ್ಯಾಲ ಪಾದರಕ್ಷೆ ಮಾದೇವಿ     ೧೧

ಗದ್ದಿಗಿ ಮ್ಯಾಲ ಪಾದರಕ್ಷೆ ಮಾದೇವಿ
ನಿನ್ನ ಪೌಳಿವೊಳಗ ಜೋಗ್ಯಾರಾಟ ಮಾದೇವಿ          ೧೨

ಪೌಳಿವೊಳಗ ಜೋಗ್ಯಾರಾಟ ಮಾದೇವಿ
ನಿನ್ನ ಗುಡಿಯ ಮುಂದ ಕಪ್ಪರದೀಪ ಮಾದೇವಿ         ೧೩

ಗುಡಿಯ ಮುಂದ ಕಪ್ಪರದೀಪ ಮಾದೇವಿ
ನಿನ್ನ ಪೌಳಿತುಂಬ ಭಂಡರಾಟ ಮಾದೇವಿ     ೧೪