ತೀ. ನಂ. ಶ್ರೀಕಂಠಯ್ಯನವರ ‘ಭಾರತೀಯ ಕಾವ್ಯಮೀಮಾಂಸೆ’, ಅದರ ಮುನ್ನುಡಿಯಲ್ಲಿ ಶ್ರೀ ಕುವೆಂಪು ಅವರು ಕರೆದಿರುವಂತೆ ಒಂದು ‘ಆಚಾರ್ಯಕೃತಿ’. ಭಾರತೀಯ ಕಾವ್ಯಮೀಮಾಂಸೆಯ ವಿಚಾರವನ್ನು  ಕುರಿತು ಕನ್ನಡದಲ್ಲಿ ಇಷ್ಟು ಸಂಗ್ರಾಹಕವೂ, ಸರಳವೂ, ಪ್ರಮಾಣಭೂತವೂ ಆದ ಕೃತಿ ಇದುವರೆಗೂ ಬಂದಿಲ್ಲ ಎನ್ನುವುದಷ್ಟೆ ಅಲ್ಲ, ಕಾವ್ಯಮೀಮಾಂಸೆಯ ಕ್ಷೇತ್ರದಲ್ಲಿ ಇನ್ನು ಮುಂದೆ ನಡೆಯಬೇಕಾದ ಕಾರ್ಯದ ಹರಹು ಎಷ್ಟೆಂಬುದರ ಕಡೆಗೆ ಮಾರ್ಗದರ್ಶಕವೂ ಆದ ಕೃತಿ ಎಂಬ ಅರ್ಥದಲ್ಲಿ ಇದು ಇಂದಿಗೂ ‘ಆಚಾರ್ಯ ಕೃತಿ’ಯಾಗಿಯೇ ನಿಂತಿದೆ. ಈ ಕೃತಿ ರಚಿತವಾದದ್ದು ೧೯೪೨ರಲ್ಲಿ; ಪ್ರಕಟವಾದದ್ದು ೧೯೫೩ರಲ್ಲಿ. ಈ ಕೃತಿ ರಚಿತವಾಗಿ ಆಗಲೇ ಹಲವು ದಶಕಗಳಾಗುತ್ತ ಬಂದ ಈ ಅವಧಿಯಲ್ಲಿ, ಕಾವ್ಯಮೀಮಾಂಸೆಯನ್ನು ಕುರಿತು ಕನ್ನಡದಲ್ಲಿ ತಕ್ಕಷ್ಟು ಕೆಲಸ ನಡೆದಿದೆಯಾದರೂ, ಈ ಕೃತಿಯನ್ನು ಮೀರಿಸುವ ಅಥವಾ ಇದಕ್ಕೆ ಪೂರಕವಾಗಬಹುದಾದ ಕೃತಿ ಇನ್ನೂ ಬರಬೇಕಾಗಿದೆ ಎಂಬುದನ್ನು ನೆನೆದರೆ, ಈ ಕೃತಿಯ ಮಹತ್ವ ಎಷ್ಟೆಂಬುದು ಮನದಟ್ಟಾಗುತ್ತದೆ. ಕನ್ನಡದ ಮಾತಿರಲಿ, ನಮಗೆ ತೋರುವ ಮಟ್ಟಿಗೆ ಇಷ್ಟು ಸಮಗ್ರವಾಗಿ ಭಾರತೀಯ ಕಾವ್ಯಮೀಮಾಂಸೆಯನ್ನು ಹೃದ್ಯವಾಗಿ ಪರಿಚಯ ಮಾಡಿಕೊಡುವ ಗ್ರಂಥ, ಬಹುಶಃ ಇತರ ಯಾವ ಭಾರತೀಯ ಭಾಷೆಗಳಲ್ಲಿಯೂ ಬಂದಿರಲಾರದು; ಇಂಗ್ಲಿಷಿನಲ್ಲಂತೂ ಬಂದಿಲ್ಲವೆಂದರೆ ತಪ್ಪಾಗಲಾರದು.

ಭಾರತೀಯ ಕಾವ್ಯಮೀಮಾಂಸೆಯನ್ನು ಬರೆದ ತೀ.ನಂ. ಶ್ರೀಕಂಠಯ್ಯನವರ ಆಸಕ್ತಿ-ಅಭಿರುಚಿಗಳು ಅನೇಕ. ಕನ್ನಡ, ಸಂಸ್ಕೃತ, ಮತ್ತು ಇಂಗ್ಲಿಷ್ ಭಾಷೆ-ಸಾಹಿತ್ಯಗಳಲ್ಲಿ ಅವರು ಪರಿಣತರು; ಹೊಸದೃಷ್ಟಿಯ ಸಂಸೋಧಕರು; ಭಾಷಾ ಶಾಸ್ತ್ರಜ್ಞರು; ಉತ್ತಮ ವಿಮರ್ಶಕರು; ಇದಕ್ಕೂ ಮಿಗಿಲಾಗಿ ಕವಿ ಹೃದಯವಿದ್ದವರಷ್ಟೇ ಅಲ್ಲ, ಸ್ವತಃ ಕವಿಗಳು. ಈ ಎಲ್ಲ ಮೂಲ ದ್ರವ್ಯಗಳಿಂದ ಸಮನ್ವಿತವಾದ ಒಂದು ವಿದ್ವತ್ತಿನಿಂದ ರಚಿತವಾಗಿದೆ ಈ ಭಾರತೀಯ ಕಾವ್ಯಮೀಮಾಂಸೆ.

ಈ ಕೃತಿ, ಒಂದೂವರೆಸಾವಿರ ವರ್ಷಕ್ಕೂ ಮೀರಿದ ಇತಿಹಾಸವನ್ನುಳ್ಳ ಕಾವ್ಯಮೀಮಾಂಸೆಯನ್ನು ಕನ್ನಡದಲ್ಲಿ ಅಡಕವಾಗಿ, ಪರಿಚಯ ಮಾಡಿಕೊಡುವ ಸಾಹಸದ ಪರಿಣಾಮವಾಗಿದೆ. ಕಾಲದಿಂದ ಕಾಲಕ್ಕೆ ಈ ಶಾಸ್ತ್ರದ ಚರಿತ್ರೆಯಲ್ಲಿ ಮುಖ್ಯವಾದ ಬೆಳವಣಿಗೆಯ ಘಟ್ಟಗಳು, ಈ ಬೆಳವಣಿಗೆಗೆ ಕಾರಣವಾದ ಅಲಂಕಾರಿಕರು ಮತ್ತು ಅಲಂಕಾರ ಗ್ರಂಥಗಳು, ಇವುಗಳಲ್ಲಿ ನಡೆದ ಚರ್ಚೆ-ಪ್ರತಿಚರ್ಚೆ, ಸಿದ್ಧಾಂತಗಳು, ವ್ಯಕ್ತಿ ವಿಶಿಷ್ಟವಾದ ಕೊಡುಗೆಗಳು-ಇವೆಲ್ಲವನ್ನೂ ಹದವರಿತು ಪರಿಚಯ ಮಾಡಿಕೊಡುವುದರ ಜತೆಗೆ, ಭಾರತೀಯ ಕಾವ್ಯಮೀಮಾಂಸೆಯ ನಿಜವಾದ ಸಾರವನ್ನು ತೌಲನಿಕ ದೃಷ್ಟಿಯಿಂದಲೂ ವಿವೇಚನೆ ಮಾಡಿರುವ ಪ್ರಯತ್ನ ವಿಶೇಷ ರೀತಿಯದು. ಒಂದೆಡೆ (ಪು. ೫೫) ತೀ.ನಂ. ಶ್ರೀ.ಯವರು ‘ರಸ-ಧ್ವನಿ-ಔಚಿತ್ಯ: ಇದೇ ಕಾವ್ಯ ಗಾಯತ್ರಿ’- ಎನ್ನುತ್ತಾರೆ.[1] ಈ ಗಾಯತ್ರಿಗೆ ತೀ.ನಂ.ಶ್ರೀ.ಯವರು ಬರೆದ ಭಾಷ್ಯವೇ ಅವರ ‘ಭಾರತೀಯ ಕಾವ್ಯಮೀಮಾಂಸೆ’.

ಈ ಕೃತಿ ಸಂಸ್ಕೃತದಲ್ಲಿರುವ ಕಾವ್ಯಲಕ್ಷಣ ಗ್ರಂಥಗಳನ್ನೆ ಪ್ರಧಾನವಾಗಿ ಅವಲಂಬಿಸಿ ರಚಿತವಾಗಿದೆ. ಕನ್ನಡದಲ್ಲಿ ರಚಿತವಾದ ಲಕ್ಷಣಗ್ರಂಥಗಳನ್ನು ಕುರಿತು ಪರಿಶಿಷ್ಟದಲ್ಲಿ ಒಂದು ಅಧ್ಯಾಯವನ್ನು ಕೊಡಲಾಗಿದೆ. ಈ ಗ್ರಂಥ ಮೂರು ಭಾಗಗಳಲ್ಲಿ ವಿಸ್ತೃತವಾಗಿದೆ. ಮೊದಲ ಭಾಗದಲ್ಲಿ ಅಲಂಕಾರ ಶಾಸ್ತ್ರದ ಬೆಳವಣಿಗೆ, ಎರಡನೆಯದರಲ್ಲಿ ಕವಿಕಾವ್ಯ ಸಹೃದಯ ವಿಚಾರ, ಮೂರನೆಯದರಲ್ಲಿ ರಸ, ಧ್ವನಿ, ಔಚಿತ್ಯ ಇವುಗಳ ವಿಚಾರ ನಿರೂಪಿತವಾಗಿದೆ. ಅಲಂಕಾರವನ್ನು ಕುರಿತು, ರೀತಿಯನ್ನು ಕುರಿತು, ಪ್ರತ್ಯೇಕವಾದ ಅಧ್ಯಾಯಗಳು ಇದ್ದಿದ್ದರೆ, ಈ ‘ಆಚಾರ್ಯಕೃತಿ’ ಇನ್ನಷ್ಟು ಸಮಗ್ರವಾಗಬಹುದಾಗಿತ್ತು; ಆದರೂ ಈ ಎರಡು ಮುಖ್ಯ ವಿಷಯಗಳನ್ನು ಕುರಿತು ಪ್ರಾಸಂಗಿಕವಾಗಿ ಲೇಖಕರು ಪ್ರಸ್ತಾಪಿಸಿದ್ದಾರೆ ಎಂದು ಸಮಾಧಾನಪಟ್ಟುಕೊಳ್ಳಬಹುದು.

ಈ ಗ್ರಂಥದ ಉದ್ದಕ್ಕೂ ‘ಒಂದೂವರೆಸಾವಿರ ವರ್ಷಗಳಿಗಿಂತ ಉದ್ದವಾದ ಕಾಲ ಪಥದಲ್ಲಿ, ಅಲ್ಲಿ ಕೃಶವಾಗಿ, ಇಲ್ಲಿ ತುಂಬು ಹೊಳೆಯಾಗಿ, ಅಲ್ಲಿ ಕವಲೊಡೆದು, ಮತ್ತೆ ಕೂಡಿಕೊಂಡು, ನಡುವೆ ಎಲ್ಲಿಯೂ ಇಂಗಿಹೋಗದೆ, ಎಷ್ಟೋ ಕಡೆಗಳಲ್ಲಿ ಅಸಮಾನ ವೈಭವದಿಂದ ಹರಿದು’ (ಪು. ೧೨೦) ಬರುವ ಕಾವ್ಯಮೀಮಾಂಸೆಯ ವಾಹಿನಿಯಲ್ಲಿ, ಲೇಖಕರು ಓದುಗರನ್ನು ತೆಪ್ಪದ ಮೇಲೆ ತೇಲಿಸಿಕೊಂಡು ಹೋಗುವ ಅನುಭವವಾಗುತ್ತದೆ. ಈ ಪಯಣದ ಹಾದಿಯಲ್ಲಿ, ಈ ಇತಿಹಾಸದ ಪರಿಚಯ ಮಾತ್ರ ಆಗುವುದಿಲ್ಲ. ಈ ಇತಿಹಾಸವನ್ನು ರೂಪಿಸಿದ ವಿವಿಧ ಲಾಕ್ಷಣಿಕರ ಸಾಧನೆ-ಸಿದ್ಧಿಗಳ ಹಾಗೂ ಇತಿ-ಮಿತಿಗಳ ಸಂಗತಿಯೂ ಗೊತ್ತಾಗುತ್ತದೆ. ಅಲಂಕಾರ ಶಾಸ್ತ್ರದ ಬೆಳವಣಿಗೆಯಲ್ಲಿನ ಕೆಲವು ‘ಮೊದಲ ಪ್ರಯತ್ನ’ಗಳು ಯಾವುವು, ಮೊದಲು ಕಾಣಿಸಿಕೊಳ್ಳುವ ವಿಷಯಗಳು ಯಾವುವು ಎಂಬುದರ ಕಡೆಗೆ ಅಲ್ಲಲ್ಲಿ ಗಮನ ಸೆಳೆಯಲಾಗಿದೆ: “ಈಗ ನಮಗೆ ತಿಳಿದಿರುವ ಮಟ್ಟಿಗೆ ಗುಣ,ದೋಷ,ಅಲಂಕಾರ ಈ ಮೂರರ ಹೆಸರೂ ಮೊದಲು ಕಾಣಿಸಿಕೊಳ್ಳುವುದು ‘ಭಾರತೀಯ ನಾಟ್ಯ ಶಾಸ್ತ್ರ’ದಲ್ಲಿ (ಪು. ೧೯); “ನಾಟ್ಯ ಲಕ್ಷಣ ಗ್ರಂಥಗಳ ರಾಶಿಯಲ್ಲೆಲ್ಲಾ ಶಾಂತ ರಸದ ಹೆಸರು ಮೊದಲು ಬಂದಿರುವುದು ಆಗ ತಿಳಿದಿರುವ ಮಟ್ಟಿಗೆ ಉದ್ಭಟನ ‘ಕಾವ್ಯಾಲಂಕಾರ ಸಾರ ಸಂಗ್ರಹ’ದಲ್ಲಿಯೇ”(ಪು. ೩೨); “ವಾಮನನಿಗಿಂತ ಹಿಂದಿನ ಯಾವ ಆಲಂಕಾರಿಕನೂ ಹೀಗೆ ಕಾವ್ಯದ ‘ಆತ್ಮ’ವನ್ನು ವಿಚಾರ ಮಾಡಲು ಹೊರಟಿರಲಿಲ್ಲ”’ (ಪು. ೩೩); ಕವಿಸಮಯದ ವಿಷಯದಲ್ಲಂತೂ ಅವನೇ (ರಾಜಶೇಖರನೆ) ಪ್ರಥಮಾಚಾರ್ಯ” (ಪು. ೩೮); “ಶುಷ್ಕರೆಂಬ ಅಪಯಶಸ್ಸಿಗೆ ಒಳಗಾಗಿರುವ ವೈಯಾಕರಣರ ‘ಸ್ಫೋಟವಾದ’ವು ಈ ಮಹಾಕಾವ್ಯತತ್ವಕ್ಕೆ ಸ್ಫೂರ್ತಿಯನ್ನೊದಗಿಸಿತೆಂದರೆ ಆಶ್ಚರ್ಯವಾಗಬಹುದು….ಮೊದಲಿಗೆ ‘ಧ್ವನಿ’ ಎಂಬ ಶಬ್ದವೇ ಇಲ್ಲಿಂದ ಬಂದದ್ದು”(ಪು. ೫೫, ೫೬, ೫೮); “ ‘ರೀತಿ’ವಾದವನ್ನೂ ವೈದರ್ಭೀ ಗೌಡೀ ಪಾಂಚಾಲೀ ಎಂಬ ಮೂರು ರೀತಿಗಳನ್ನೂ ನಮಗೆ ತಿಳಿದ ಮಟ್ಟಿಗೆ ಮೊದಲು  ಪ್ರತಿಪಾದಿಸಿದವನು ವಾಮನ” (ಪು. ೬೩); “ಕಾವ್ಯ ನಾಟಕಗಳೆರಡರ ಲಕ್ಷಣವನ್ನು ಒಂದೇ ಗ್ರಂಥವು (ಸರಸ್ವತೀ ಕಂಠಾಭರಣ) ಒಳಕೊಂಡು ಹುಟ್ಟುವುದಕ್ಕೆ ಈ ಶಾಸ್ತ್ರದ ಚರಿತ್ರೆಯಲ್ಲಿ ಇದೇ ಮೊದಲು” (ಪು. ೯೫)-ಈ ಕೆಲವು ಹೇಳಿಕೆಗಳನ್ನು ಗಮನಿಸಿದರೆ, ಸಾವಿರ ವರ್ಷದ ಶಾಸ್ತ್ರ ವಿಷಯಗಳನ್ನು ಕೇರಿ, ತೂರಿ ಅದರಲ್ಲಿನ ಮೊದಲ ಪ್ರಯತ್ನಗಳನ್ನು ಗುರುತಿಸುವ ಸಂಶೋಧಕ ಪ್ರಜ್ಞೆಯ ಪರಿಚಯವಾಗುತ್ತದೆ. ಹಾಗೆಯೇ ‘ಈಗ ನಮಗೆ ತಿಳಿದಿರುವ ಮಟ್ಟಿಗೆ’ ‘ಈಗ ತಿಳಿದ ಮಟ್ಟಿಗೆ’-ಎನ್ನುವ ವಿಶೇಷಣಗಳಿಂದ ವ್ಯಕ್ತವಾಗುವ ಎಚ್ಚರವೂ ಸಂಶೋಧಕರಿಗಿರಬೇಕಾದ ವೈಯಕ್ತಿಕ ಮಿತಿಗಳ ಪರಿಜ್ಞಾನವೂ-ಇಂಥ ಮಹತ್ವದ ಸಂಗತಿಗಳನ್ನು ಗುರುತಿಸಿದ ವಿದ್ವಾಂಸರ ವಿನಯವೂ ಪ್ರಕಟವಾಗುತ್ತದೆ. ‘ಭಾರತೀಯ ಕಾವ್ಯಮೀಮಾಂಸೆ’ಯಲ್ಲಿ ಅಮೂಲ್ಯವಾದ ಸಂಗತಿಗಳ ಕಡೆಗೆ ಓದುಗರ ಗಮನವನ್ನು ಸೆಳೆಯುವುದರ ಜತೆಗೆ, ಮುಖ್ಯವಾದ ಆಲಂಕಾರಿಕರ ಸಂಕ್ಷಿಪ್ತವಾದ ಪರಿಚಯವನ್ನೂ ಮತ್ತು ಅಲಂಕಾರ ಗ್ರಂಥಗಳ ಮುಖ್ಯಲಕ್ಷಣಗಳನ್ನೂ, ಈ ಆಲಂಕಾರಿಕರಿಗೆ ಇದ್ದ ತಾತ್ವಿಕ ಹಿನ್ನೆಲೆಯನ್ನೂ, ಶ್ರೀಕಂಠಯ್ಯನವರು ಕೊಡುವ ರೀತಿ ಆಶ್ಚರ್ಯಕರವಾಗಿದೆ. ‘ಭಾರತೀಯ ಕಾವ್ಯಮೀಮಾಂಸೆ’ಯ ಮೊದಲ ಭಾಗದಲ್ಲಿ, ಆಸಕ್ತಿಯಿದ್ದವರು ಈ ಮಾತಿನ ನಿದರ್ಶನಗಳನ್ನು ಹೆಜ್ಜೆ ಹೆಜ್ಜೆಗೂ ಗುರುತಿಸಬಹುದು. ಹೇಳಬೇಕಾದ ವಿಷಯವನ್ನು, ಅಂಕಿ-ಅಂಶಗಳ ಸಮೇತ, ಯಾವುದನ್ನೂ ಬಿಡದೆ, ಆದರೆ ಅತ್ಯಂತ ಸಾರವತ್ತಾಗಿ ಲೇಖಕರು ಹೇಳುತ್ತಾರೆ. ಇದರ ಜತೆಗೆ ಈ ಆಲಂಕಾರಿಕ ಅಥವಾ ಪ್ರಸ್ಥಾನಗಳ ಸೋಲು ಗೆಲುವುಗಳನ್ನು, ಶ್ರೀಕಂಠಯ್ಯನವರು ಗುರುತಿಸಿ ತೀರ್ಪುಕೊಡುತ್ತಾರೆ. ಕ್ಷೇಮೇಂದ್ರನ “ಔಚಿತ್ಯ ವಿಚಾರ ವಿಮರ್ಶೆ ಓದಲು ರಮ್ಯವಾಗಿದೆ; ಆದರೆ ಕಾವ್ಯತತ್ವವನ್ನು ಕುರಿತು ‘ಧ್ವನ್ಯಾಲೋಕ’ಕ್ಕಿಂತ ಇದು ಮುಂದುವರಿದಿಲ್ಲ” (ಪು. ೭೬); “ಕುತಂಕನ ವಕ್ರೋಕ್ತಿ ವಾದವು ಧ್ವನಿತತ್ವದ ಕಡೆಗೆ ಸಾಗಿ ಅರೆದಾರಿಯಲ್ಲಿಯೇ ನಿಂತುಬಿಟ್ಟಿದೆಯೆನ್ನಬೇಕು” (ಪು. ೮೮) “ಕಾವ್ಯ ಸಾಮ್ರಾಜ್ಯದ ಅನಾಯಕತ್ವವನ್ನು ಕೊನೆಗಾಣಿಸಿದ ಕೀರ್ತಿ ಧ್ವನಿ ಪ್ರಸ್ಥಾನದವರಿಗೆ ಸಲ್ಲುತ್ತದೆ” (ಪು. ೫೫); “ಅಲಂಕಾರ ಪ್ರಸ್ಥಾನದವರು…ಕಾವ್ಯಸಾಗರದ ತಡಿಯಲ್ಲಿ ಚಿಪ್ಪುಗಳನ್ನು ಆಯ್ದಂತಾಯಿತೇ ಹೊರತು, ಅದರ ತಳವನ್ನು ಶೋಧಿಸಿದಂತಾಗಲಿಲ್ಲ” (ಪು. ೪೩); “ಈ ಬರವಣಿಗೆ ಸ್ವಾರಸ್ಯವಾಗಿದೆ; ಆಕರ್ಷಕವಾಗಿದೆ. ಆದರೆ ಇದುವರೆಗೆ ನಾವು ಮಾಡಿರುವ ವಿಚಾರವನ್ನು ನೆನಪಿಗೆ ತಂದುಕೊಂಡರೆ ಇದು ಸಿದ್ಧಾಂತವಾಗಿ ನಿಲ್ಲಲಾರದೆಂಬುದು ಸ್ಪಷ್ಟವಾಗುತ್ತದೆ” (ಪು. ೩೯೨)-ಇಂಥ ಮಾತುಗಳಲ್ಲಿ ಭಾರತೀಯ ಕಾವ್ಯಮೀಮಾಂಸೆಯ ಕೃತಿಗಳನ್ನು, ಸಿದ್ಧಾಂತಗಳನ್ನು, ಪ್ರಸ್ಥಾನಗಳನ್ನು ತೀ.ನಂ.ಶ್ರೀ. ಯವರು ತೂಗಿನೋಡಿರುವ ರೀತಿಯನ್ನು ಕಾಣಬಹುದು ಈ ಕೃತಿ ಬಹುಮಟ್ಟಿಗೆ ಪ್ರಾಚೀನ ಲಾಕ್ಷಣಿಕರ ಮತವನ್ನು ಸಂಗ್ರಹಿಸಿ ನಿರೂಪಿಸುವುದಷ್ಟೇ ಅಲ್ಲ, ಭಾರತೀಯ ಕಾವ್ಯಮೀಮಾಂಸೆಯನ್ನು ಕುರಿತ ವಿಮರ್ಶೆಯೂ ಆಗಿದೆ.

ಭಾರತೀಯ ಕಾವ್ಯಮೀಮಾಂಸೆಯ ಬರವಣಿಗೆ ತುಂಬ ಪ್ರಸನ್ನವಾದ, ಆದರೆ ಅಷ್ಟೇ ಬಿಗಿಯಾದ ಬರವಣಿಗೆ. ನಮ್ಮ ಆಲಂಕಾರಿಕರಿಗೆ ಹೇಳುವುದನ್ನು ಸಾಧ್ಯವಾದಷ್ಟು ಸೂತ್ರ ರೂಪದಲ್ಲಿ ಹೇಳಲೇಕೆಂಬುದು ಇಷ್ಟ. ಇಂಥ ಅಲಂಕಾರ ಶಾಸ್ತ್ರಜ್ಞರ ಅಭಿಪ್ರಾಯಗಳನ್ನು ಪುನರನುಭವಿಸಿ ತಮ್ಮದನ್ನಾಗಿ ಮಾಡಿಕೊಂಡು ಹೇಳುವಲ್ಲಿ ಶ್ರೀಕಂಠಯ್ಯನವರೂ ಎಷ್ಟೋ ವೇಳೆ ಸೂತ್ರಶೈಲಿಯಲ್ಲಿ ಮಾತನಾಡುತ್ತಾರೆ. ದಂಡಿಯು ‘ಮಾರ್ಗ’ ಎಂದದ್ದನ್ನು, ವಾಮನನು ‘ರೀತಿ’ ಎಂಬ ಬೇರೆಯ ಪದದಿಂದ ಕರೆದನೆಂಬುದನ್ನು ಹೇಳುತ್ತಾ “ಪದವೊಂದೇ ಅಲ್ಲ; ಅದರ ಪದವಿಯೂ ಹೊಸದು” (ಪು. ೩೩) ಎನ್ನುತ್ತಾರೆ; ಇನ್ನು ಕೆಲವು ಮಾತುಗಳನ್ನು ಗಮನಿಸಬಹುದು:

‘ಅನುಕ್ತವಾದರೂ ಅರಿವಿಗೆ ವಿಷಯವಾಗುವ ವ್ಯಂಗ್ಯಾರ್ಥವೇ ಕಾವ್ಯದ ಸಾರ’ (ಪು. ೫೧)
‘ಕಾವ್ಯದಲ್ಲಿ ಪರಮವೂ ಪ್ರಧಾನವೂ ಆಗಿ ನಿಲ್ಲುವ ವ್ಯಂಗ್ಯಾರ್ಥಕ್ಕೆ ಧ್ವನಿ ಎಂದು ಹೆಸರು’ (ಪು.೫೨)

‘ಕಾವ್ಯದ ಆತ್ಮರಸ; ಅದನ್ನು ಕಾವ್ಯ ಶರೀರವು ಅಭಿವ್ಯಕ್ತಪಡಿಸುವ ಮಾರ್ಗ ಧ್ವನಿ, ಆತ್ಮ ಶರೀರಗಳ ಹೊಂದಿಕೆಯೇ ಔಚಿತ್ಯ, ರಸ-ಧ್ವನಿ-ಔಚಿತ್ಯ: ಇದೇ ಕಾವ್ಯಗಾಯತ್ರಿ’ (ಪು.೫೫)

‘ಕಾವ್ಯದ ಶರೀರ ಮಾತು; ಆದರೆ ಮಾತೆಲ್ಲವೂ ಕಾವ್ಯವಲ್ಲ’  (ಪು. ೧೩೬)

‘ಪ್ರತಿಭಾವ್ಯಾಪಾರ ದೃಷ್ಟಿಯೂ ಹೌದು; ಸೃಷ್ಟಿಯೂ ಹೌದು’ (ಪು. ೧೬೬)

‘ಅಮೂರ್ತವಾದ ಅರ್ಥಕ್ಕೆ ಮಾತಿನಲ್ಲಿ ಮೂರ್ತ ಶರೀರವನ್ನು ಒದಗಿಸುವುದೇ ಕವಿಯ ಕಾರ್ಯ’ (ಪು. ೧೭೧)

‘ನಿರೂಪಣೆಯ ಕಾಲದಲ್ಲೇ ಕವಿ ಕಲ್ಪನೆ ಪರಿಸ್ಫುಟವಾಗತಕ್ಕದ್ದು’ (ಪು. ೧೭೩)

ಈ ಕೆಲವು ಉಕ್ತಿಗಳನ್ನು ನೋಡಬೇಕು.ಇವುಗಳೊಂದೊಂದೂ ಹರಳುಗೊಳಿಸಿದ ಚಿಂತನೆಗಳಾಗಿವೆ. ಕಿರಿದರಲ್ಲಿ ಹಿರಿಯ ಅರ್ಥವನ್ನು ಅಡಕುವ ಕುಶಲತೆಗೆ ಸಾಕ್ಷಿಯಾಗಿವೆ. ಈ ಅಡಕು, ಅಚ್ಚುಕಟ್ಟು ಇಡೀ ಕೃತಿಯ ಭಾಷೆಯ ಒಂದು ಲಕ್ಷಣವೂ ಆಗಿದೆ.

ಭಾರತೀಯ ಕಾವ್ಯಮೀಮಾಂಸೆ ಒಂದು ಶಾಸ್ತ್ರಗ್ರಂಥ. ಹಾಗೆಂದ ಮಾತ್ರಕ್ಕೆ ಇದರ ನಿರೂಪಣೆ ನಿರಲಂಕೃತವೂ, ಹುಬ್ಬುಗಂಟಿನದೂ ಆಗದೆ, ಉಪಮೆ ರೂಪಕಗಳ ಮಾರ್ಗವನ್ನು ಉಚಿತವರಿತು ತಾಳುತ್ತಾ ಹೃದ್ಯವಾಗಿದೆ; ಮತ್ತು ವಿಷಯದೊಂದಿಗೆ ಆತ್ಮೀಯತೆಯನ್ನು ಹುಟ್ಟಿಸುತ್ತದೆ. ಶಾಸ್ತ್ರಗ್ರಂಥಗಳಲ್ಲಿ ಆಲಂಕೃತಶೈಲಿ ಅತಿಯಾದರೆ ಕೃತಕವೂ, ಮತ್ತು ಹೇಳುವ ವಿಷಯವನ್ನು ಮರೆಮಾಡಿ ತಾನೇ ಮೆರೆಯುತ್ತಾ ಅನುಚಿತವೂ ಆಗುತ್ತದೆ ಎಂಬುದು ನಿಜ. ಆದರೆ ಯಾವುದೇ ಅಲಂಕಾರಶಾಸ್ತ್ರ ವಿಷಯವನ್ನು ಹೆಚ್ಚು ಸ್ಫುಟಗೊಳಿಸುವ ಮತ್ತು ಹಾಗೆ ಸ್ಫುಟಗೊಳಿಸಿ ತಾನು ಹಿಂದೆ ನಿಲ್ಲುವ ರೀತಿಯಲ್ಲಿದ್ದರೆ ಅದು ಗ್ರಾಹ್ಯವೇ, ತೀ.ನಂ.ಶ್ರೀ. ಯವರು ಕೊಡುವ ಹೋಲಿಕೆಗಳು ಈ ರೀತಿಯವು. “ಕಾವ್ಯ ಸಾಗರವನ್ನು ಆಲೋಡನೆ ಮಾಡಿ ನಮ್ಮ ಶಾಸ್ತ್ರಕಾರರು ಸಾಧಿಸಿರುವ ಅಮೃತವೇ ರಸ” (ಪು. ೧೬) ಎಂದು ಹೇಳಿದಾಗ, ಆಲಂಕಾರ ಶಾಸ್ತ್ರಜ್ಞರ ಸಾಹಸವನ್ನೂ, ಹಾಗೂ ಸಿದ್ಧಿಯನ್ನೂ ಈ ಹೋಲಿಕೆ ಸ್ಪಷ್ಟಪಡಿಸುತ್ತದೆ. ಆಲಂಕಾರ ಪ್ರಸ್ಥಾನಕ್ಕೆ ಸೇರಿದ ಅಲಂಕಾರಿಕರು ಕಾವ್ಯದ ಒಳ ತಿರುಳನ್ನು ಅರಿಯದೆ, ಕಾವ್ಯದ ಸರ‍್ವಸ್ವವೂ ಅಲಂಕಾರವೇ ಎಂದು ಭಾವಿಸಿದರು. ಅವರು ಕಾವ್ಯ ಶರೀರದಲ್ಲಿ ಕಂಡ ಒಂದೊಂದು ವೈಚಿತ್ರ್ಯವನ್ನೂ ಗುರುತಿಸಿ, ಪಟ್ಟಿ ಹಾಕಿ, ತೃಪ್ತಿಪಟ್ಟುಕೊಂಡರು. ಇವರನ್ನು ಕುರಿತು, ಶ್ರೀಕಂಠಯ್ಯನವರು “ಅವರು ಕಾವ್ಯ ಸಾಗರದ ತಡಿಯಲ್ಲಿ ಚಿಪ್ಪುಗಳನ್ನು ಆಯ್ದಂತಾಯಿತೇ ಹೊರತು ಅದರ ಆಳವನ್ನು ಶೋಧಿಸಿದಂತಾಗಲಿಲ್ಲ” (ಪು. ೪೩) ಎನ್ನುತ್ತಾರೆ. ಇಲ್ಲೂ ಹಿಂದಿನ ಆಲಂಕಾರಿಕರ ಸಾಧನೆಯನ್ನು ಹೇಳಿದರೆ, ಎರಡನೆಯದು ‘ಅಲಂಕಾರ ಪ್ರಸ್ಥಾನ’ದವರ ಸೋಲನ್ನು ಅತ್ಯಂತ ಸಚಿತ್ರವಾಗಿ ಹೇಳುತ್ತದೆ. ಇನೊಂದೆಡೆ ಅಲಂಕಾರ ಶಾಸ್ತ್ರದ ಇತಿಹಾಸವನ್ನು ದೊಡ್ಡ ನದಿಗೆ ಹೋಲಿಸುತ್ತಾರೆ. “ಈ ಗ್ರಂಥ ವಾಹಿನಿ, ಒಂದೂವರೆ ಸಾವಿರ ವರ್ಷಗಳಿಗಿಂತ ಉದ್ದವಾದ ಕಾಲದಲ್ಲಿ, ಅಲ್ಲಿ ಕೃಶವಾಗಿ, ಇಲ್ಲಿ ತುಂಬು ಹೊಳೆಯಾಗಿ, ಅಲ್ಲಿ ಕವಲೊಡೆದು, ಇಲ್ಲಿ ಮತ್ತೆ ಕೂಡಿಕೊಂಡು, ನಡುವೆ ಎಲ್ಲಿಯೂ ಇಂಗಿಹೋಗದೆ, ಎಷ್ಟೋ ಕಡೆಗಳಲ್ಲಿ ಅಸಮಾನವೈಭವದಿಂದ ಹರಿದು ಬಂದಿತು” (ಪು. ೧೨೦). ಈ ಇತಿಹಾಸದಲ್ಲಿ ಪ್ರತಿಭಾಯುಗ ಮುಗಿದು ಪರಿಷ್ಕಾರಯುಗ ಪ್ರಾರಂಭವಾದ ಕಾಲವನ್ನು ಕುರಿತು “ಶಾಸ್ತ್ರ ನಿರ್ಮಾಪಕರ ಪ್ರತಿಭೆಯಲ್ಲಿ ಬೆಳಗುತ್ತಿದ್ದ ಕೆಂಡವು ಉರಿದು ಹೋಗಿ ಇನ್ನು ಮುಂದೆ ಬೂದಿಯಾಗುತ್ತದೆ” (ಪು. ೧೨೧) ಎನ್ನುತ್ತಾರೆ. ಕಾವ್ಯದಲ್ಲೂ ಮಾತುಗಳಿವೆ, ಶಾಸ್ತ್ರದಲ್ಲೂ ಮಾತುಗಳಿವೆ. ಇವೆರಡಕ್ಕೂ ವ್ಯತ್ಯಾಸವಿದೆ. ಶಾಸ್ತ್ರದಲ್ಲಿನ ಶಬ್ದ ನಿಗದಿತವಾದಷ್ಟೆ ಅರ್ಥವನ್ನು ಕೊಟ್ಟು ವಿರಮಿಸಿದರೆ, ಕಾವ್ಯದೊಳಗಿನ ಶಬ್ದ ಅನೇಕಾರ್ಥಗಳನ್ನು ಅನುರಣಿಸುತ್ತದೆ.ಇಲ್ಲಿ ಶಾಸ್ತ್ರದೊಳಗಿನ ಶಬ್ದದ ಕಾರ‍್ಯವನ್ನು ಕುರಿತು “ಶಾಸ್ತ್ರಗ್ರಂಥಗಳಲ್ಲಿ ಶಬ್ದವು ಕೊಟ್ಟ ಕೆಲಸವನ್ನು ಮಾಡಿ ಸುಮ್ಮನಾಗುವ ಕೂಲಿಯಾಳಿನಂತೆ” (ಪು. ೪೯) ಎನ್ನುವ ಹೋಲಿಕೆ ಎಷ್ಟು ಅರ್ಥವತ್ತಾಗಿದೆಯೆಂಬುದನ್ನು ಪರಿಭಾವಿಸಬಹುದು. ಕವಿತೆಯ ಪರಿಕರಗಳನ್ನು ಹೇಳುವಾಗ ರಾಜಶೇಖರನೆಂಬ ಆಲಂಕಾರಿಕ ಎಂಟು ಪರಿಕರಗಳನ್ನು ಹೇಳಿ ಇವು ಎಂಟೂ ಕವಿತ್ವಕ್ಕೆ ತಾಯಿಯರು ಎನ್ನುತ್ತಾನೆ. ಶ್ರೀಕಂಠಯ್ಯನವರು, ಈ ಹೋಲಿಕೆಯನ್ನು ಪರಿಷ್ಕರಿಸುತ್ತಾ “ಆ ಮಾತೃಗುಣದಲ್ಲಿ ಕವಿತೆಗೆ ಹೆತ್ತ ತಾಯಿ ಪ್ರತಿಭೆಯೊಂದೇ. ಮಿಕ್ಕವುಗಳಲ್ಲಿ ಕೆಲವು ಸಾಕು ತಾಯಿಯರಂತೆ, ಕೆಲವು ಸೂಲಗಿತ್ತಿಯರಂತೆ. ಕಾವ್ಯ ನಿರ್ಮಾಣದಲ್ಲಿ ಇವುಗಳಿಂದ ಆಗುವುದೆಲ್ಲಾ ಪರೋಕ್ಷವಾದ ಉಪಕಾರ; ಒಮ್ಮೊಮ್ಮೆ ಈ ಸುತ್ತಮುತ್ತಿನವುಗಳ ಉಪಚಾರ ಹೆಚ್ಚಾಗಿ ಕೂಸು ಬಡವಾಗುವುದೂ ಉಂಟು” (ಪು. ೧೮೩) ಎನ್ನುತ್ತಾರೆ. ಈ ಹೋಲಿಕೆಯ ತುದಿಗೆ ಬರುವ ಹೊಸ ತಿರುವಿನಿಂದ ಎಂಥ ವಿನೋದ ಉಕ್ಕುತ್ತದೆ ಎಂಬುದನ್ನು ನೋಡಬಹುದು. ಕವಿಯ ಪ್ರತಿಭೆಯನ್ನು ಕುರಿತು ಅವರು ಕೊಡುವ ಜೇಡರ ಹುಳುವಿನ ಹೋಲಿಕೆಯನ್ನು ಗಮನಿಸಬೇಕು: “ಕವಿಯ ಪ್ರತಿಭೆ ಜೇಡರ ಹುಳುವಿನಂತೆ, ತನ್ನ ಉದರದಿಂದಲೇ ಎಳೆಗಳನ್ನು ತೆಗೆದು ಮನೋಹರವಾದ ಆಕೃತಿಗಳನ್ನು ನಿರ್ಮಿಸಿದರೂ ಆ ಎಳೆಗಳ ಸಾಮಗ್ರಿ ಲೋಕದಿಂದಲೇ ಅದಕ್ಕೆ ಒದಗಿ ಬರಬೇಕು” (ಪು. ೧೬೭). ಕವಿ, ಕವಿಗೊದಗುವ ಅನುಭವ, ಕವಿನಿರ್ಮಿತಿಗಳನ್ನು ಇದಕ್ಕಿಂತ ಸೊಗಸಾಗಿ ಹೇಳುವುದು ಸಾಧ್ಯವೇ? ಪ್ರತಿಭೆ ಮತ್ತು ರಸಾವೇಶಗಳಿಗೆ ಇರುವ ಸಂಬಂಧವನ್ನು ಸ್ಪಷ್ಟಪಡಿಸಲು, ಲೇಖಕರು ಕುದುರೆ ಮತ್ತು ಸಾರಥಿಯ ಚಿತ್ರವನ್ನು ಕೊಡುತ್ತಾರೆ. “ಪ್ರತಿಭೆ ಚುರುಕಾಗಿ ಓಡುವ ಕುದುರೆಯಂತೆ; ಆದರೆ ಕಡಿವಾಣವನ್ನೂ ಚಾಟಿಯನ್ನೂ ಕೈಯಲ್ಲಿ ಹಿಡಿದು, ಎಲ್ಲಿ ಎತ್ತ ಓಡಿಸಬೇಕೋ ಓಡಿಸಿ, ತಿರುಗಿಸಬೇಕೋ ತಿರುಗಿಸಿ, ಹಿಂದಕ್ಕೆ ಜಗ್ಗಬೇಕೋ ಜಗ್ಗಿ, ಸರಿಯಾದ ದಾರಿಯಲ್ಲಿ ನಡೆಸುವ ಸಾರಥಿ ರಸಾವೇಶ” (ಪು. ೧೭೬). ಧ್ವನಿಸಿದ್ಧಾಂತವನ್ನು ಪ್ರಸ್ತಾಪಿಸುವಲ್ಲಿ ‘ಗುಣೀಭೂತವ್ಯಂಗ್ಯ’ ಎಂಬ ವಿಷಯವೊಂದಿದೆ. ಎಂದರೆ ಎಲ್ಲಿ ವ್ಯಂಗ್ಯಾರ್ಥವೇ ಪ್ರಧಾನವಾಗುತ್ತದೋ ಅದು ಧ್ವನಿ; ಎಲ್ಲಿ ವ್ಯಂಗ್ಯಾರ್ಥವು ಕಾಣಿಸಿಕೊಂಡರೂ, ಅದು ಪ್ರಧಾನವಾಗದೆ, ವಾಚ್ಯಾರ್ಥವನ್ನೇ ಪುಷ್ಟಿಗೊಳಿಸುತ್ತದೆಯೋ ಅಂತಹ ಅಭಿವ್ಯಕ್ತಿಗೆ ಗುಣೀಭೂತವ್ಯಂಗ್ಯವೆಂದು ಹೆಸರು. ಇದನ್ನು ಲೇಖಕರು ಒಂದು ಉಪಮಾನದ ಮೂಲಕ ಸ್ಪಷ್ಟಪಡಿಸುತ್ತಾರೆ: “ತನ್ನ ಸೇವಕನ ಮದುವೆಗೆ ಬಂದ ಪ್ರಭು ಮೆರವಣಿಗೆಯಲ್ಲಿ ಸೇವಕನಿಗೆ ತಾನು ಸಂಗಡಿಗನಾಗಿ ಹೋಗಿ ಉತ್ಸವದ ವೈಭವವನ್ನು ಹೆಚ್ಚಿಸುವಂತೆ ಇಲ್ಲಿ ವ್ಯಂಗ್ಯವು ವಾಚ್ಯಕ್ಕೆ ಉಪಸ್ಕಾರವಾಗಿ ನಿಲ್ಲುತ್ತದೆ” (ಪು. ೩೧೨). ಇದು ವಾಸ್ತವವಾಗಿ ಆನಂದವರ್ಧನ ಧ್ವನ್ಯಾಲೋಕದಲ್ಲಿ ಹೇಳಿದ್ದು ಎಂದು ಲೇಖಕರು ಸೂಚಿಸಿದರೂ, ಈ ಹೋಲಿಕೆಯ ರಮ್ಯತೆಗೆ ಮನಸೋತು, ಅದನ್ನು ತಮ್ಮ ಮಾತಿನಲ್ಲಿ ಅಳವಡಿಸಿಕೊಂಡಿದ್ದಾರೆ. ಚಲನಚಿತ್ರ ಜಗತ್ತಿನಿಂದ ಶ್ರೀಕಂಠಯ್ಯನವರು ಎರಡು ಹೋಲಿಕೆಗಳನ್ನು ಕೊಡುವುದು ಸ್ವಾರಸ್ಯವಾಗಿದೆ. ಶಾಂತ ರಸವನ್ನು ಕುರಿತು ಹೇಳುತ್ತಾ. ಶಾಂತ ರಸದ ಸ್ಥಾಯಿ ‘ಶಮ’ ಎಂಬ ಮಾತು ಬರುತ್ತದೆ. ‘ಶಮ’ ಎಂದರೆ ಏನು? ಅದು ಒಂದು ಆತ್ಮದ ನಿರಂಜನವಾದ ಸ್ಥಿತಿ; ಇದರ ಮೇಲೆ ಹಲವು ಭಾವಗಳು ಹಾದು ಹೋದರೂ ಅದು ಯಥಾಸ್ಥಿತಿ ಇರುತ್ತದೆ. ಈ ಸ್ಥಿತಿಯನ್ನು ‘ಸಿನಿಮಾ ಮಂದಿರದ ರಜತಪಟ’ (ಪು. ೪೩೭)ಕ್ಕೆ ಹೋಲಿಸುತ್ತಾರೆ. ಹಾಗೆಯೇ ಒಂದು ವಾಕ್ಯದ, ಒಂದು ಪದ್ಯದ ಪೂಣಾರ್ಥವನ್ನು ನಾವು ಗ್ರಹಿಸುವ ಕ್ರಮ ಯಾವುದು ಎನ್ನುವದನ್ನು ವಿವರಿಸಲು, ಆಧುನಿಕ ಯುಗದ ಒಂದು ಸಾಮ್ಯವನ್ನು ಕೊಡುತ್ತಾರೆ. “ವೇಗವಾಗಿ ಓಡುವ ಕುದುರೆಯನ್ನು ನೋಡಿದಾಗ, ಅದು ನಾಲ್ಕು ಕಾಲುಗಳನ್ನೂ ಒಟ್ಟಿಗೇ ಎತ್ತಿ ನೆಲ ಮುಟ್ಟದೆಯೇ ಧೀಂಕಿಡುವಂತೆ ತೋರುತ್ತದೆ. ಆದರೆ ಸಿನಿಮಾ ಮಂದಿರದಲ್ಲಿ ಇದೇ ತೀವ್ರ ಚಲನೆಯನ್ನು ‘ಮಂದಗತಿ’ ಚಿತ್ರದಲ್ಲಿ (Slow motion picture) ನೋಡಿದಾಗ, ರೆಕ್ಕೆ ಮೂಡಿದಂತೆ ಹಾರುವ ಕುದುರೆ ಕೂಡ ತನ್ನ ಕಾಲುಗಳನ್ನು ಒಂದಾದ ಮೇಲೆ ಒಂದರಂತೆ ಎತ್ತಿ ಇಳಿಸುವುದು ಸ್ಪಷ್ಟವಾಗುತ್ತದೆ. ಶಬ್ದವ್ಯಾಪಾರಗಳೂ ಹೀಗೆಯೇ” (ಪು. ೩೩೯). ಇದೇ ಶಬ್ದ ವ್ಯಾಪಾರವನ್ನು ಕುರಿತು, ಅವರು ಕೊಡುವ ಇನ್ನೊಂದು ಹೋಲಿಕೆ ತೀರಾ ವಿಶಿಷ್ಟವಾದದ್ದು “ನೇರವಾಗಿ ನೋಡಿದಾಗ ದೀಪದ ಬುರುಡೆ (ವಿದ್ಯುಚ್ಛಕ್ತಿ ದೀಪ)ಯಲ್ಲಿ ಅಖಂಡವಾಗಿ ಉರಿಯುವ ಎಳೆಗಳು ಕಾಣಿಸುತ್ತದೆ. ಆದರೆ ಸ್ವಲ್ಪ ಓರೆಗಣ್ಣಿನಿಂದ ಗಮನಿಸಿದಾಗ, ತಂತಿಯಲ್ಲಿ ವಿದ್ಯುತ್ತು ಆವಿಚ್ಛಿನ್ನವಾಗಿ ಹರಿಯದೆ, ಹಿಡಿದು ಬಿಟ್ಟು, ಹಿಡಿದು ಬಿಟ್ಟು ಬರುವಂತೆ ಗೊತ್ತಾಗುತ್ತದೆ. ಶಬ್ದವ್ಯಾಪಾರವೂ ಹೀಗೆಯೇ” (ಪು. ೩೩೯)-ಈ ಕೆಲವು ಹೋಲಿಕೆಗಳನ್ನು ಗಮನಿಸಿದರೆ ಈ ಬರವಣಿಗೆಯ ಸ್ವಾರಸ್ಯವೇನು ಎಂಬುದು ತಿಳಿಯುತ್ತದೆ. ಈ ಹೋಲಿಕೆಗಳು, ತಮ್ಮ ಸೊಗಸನ್ನು ಉಳಿಸಿಕೊಂಡೂ, ಅಲ್ಲಲ್ಲಿ ವಿಷಯವನ್ನು ಸ್ಪಷ್ಟಗೊಳಿಸುವ, ಪುಷ್ಟಿಗೊಳಿಸುವ ಕೈಂಕರ್ಯದಲ್ಲಿ ಉಚಿತವರಿತು ದುಡಿದಿವೆ. ಈ  ಬಡಿ ಬಿಡಿ ಹೋಲಿಕೆಗಳ ವಿಷಯ ಹಾಗಿರಲಿ, ಇಡೀ ಕಾವ್ಯಮೀಮಾಂಸೆಯ ಇತಿಹಾಸದ ಬೆಳವಣಿಗೆಯನ್ನು, ಅಲ್ಲಿ ರಸಸಿದ್ಧಾಂತಕ್ಕೆ ಕ್ರಮಕ್ರಮೇಣವಾಗಿ ದೊರೆತ ಪ್ರಾಶಸ್ತ್ಯವನ್ನು ಸಚಿತ್ರವಾಗಿ ತಿಳಿಸುವ, ದೇವಸ್ಥಾನದ ದೀರ್ಘೋಪಮೆಯ ಚಿತ್ರವೊಂದು ವಿಶೇಷರೀತಿಯದಾಗಿದೆ:

“ಕಾವ್ಯವನ್ನು ಒಂದು ಗುಡಿಗೆ ಹೋಲಿಸಿದರೆ, ಆಲಂಕಾರ ಪ್ರಸ್ಥಾನದವರು ಅದರ ಹೊರಗೋಡೆಯನ್ನು ಸುತ್ತುವುದರಲ್ಲೇ ಕಾಲ ಕಳೆದರು; ರಸವನ್ನು ಕೂಡ ಆ ಹೊರಗೋಡೆಯ ಮೇಲೆ ಕೆತ್ತಿರುವ ಅನೇಕ ವಿಗ್ರಹಗಳಲ್ಲಿ ಒಂದಾಗಿ ಅವರು ಭಾವಿಸಿದ್ದರು. ಈ ಒಂದು ವಿಗ್ರಹವು ಮುಕ್ಕಾದರೂ ಮುರಿದು ಬಿದ್ದರೂ ಗುಡಿಗೆ ಯಾವ ಭಂಗವೂ ತಟ್ಟುವಂತೆ ಅವರಿಗೆ ತೋರಲಿಲ್ಲ. ರೀತಿಪ್ರಸ್ಥಾನದಲ್ಲಿ ರಸವು ಗುಡಿಯೊಳಕ್ಕೆ ಬಂದಿತು; ಕಾವ್ಯಕ್ಕೆ ನಿಯತವಾದ ಅಂಗವಾಯಿತು; ಆದರೆ ಪ್ರಾಮುಖ್ಯವನ್ನು ಇನ್ನೂ. ಪಡೆಯಲಿಲ್ಲ. ಅದನ್ನು ಇಲ್ಲಿ ಗರ್ಭಗುಡಿಯ ದ್ವಾರಪಾಲಕನಿಗೆ ಹೋಲಿಸಬಹುದೋ ಏನೊ. ಧ್ವನಿಕಾರನು ಬಂದು ರಸದ ಮಹತ್ವವನ್ನರಿತು ಒಳಪೀಠದ ಮೇಲೆ ನಿಲ್ಲಿಸಿದಾಗ ಇದೇ ಕಾವ್ಯಮಂದಿರದ ಆಧಿದೈವವೆಂದು ಗೊತ್ತಾಯಿತು. ಆದರೂ ಈ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿದವನು ಅಭಿನವಗುಪ್ತನೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಭಟ್ಟನಾಯಕ, ಮಹಿಮಭಟ್ಟ ಇವರೆಲ್ಲರೂ ಈ ದೈವದ ಆರಾಧಕರೇ ಸರಿ; ಇವರಿಗೂ ಧ್ವನಿಪ್ರಸ್ಥಾನದವರಿಗೂ ಆರಾಧನೆಯ ವಿಧಾನಗಳಲ್ಲಿ ಮಾತ್ರ ಭೇದ. ಇನ್ನು ಕಾವ್ಯಲಕ್ಷಣದಲ್ಲೇ ರಸದ ಹೆಸರನ್ನು ಸೇರಿಸಿ ಉದ್ಘೋಷಿಸುವ ಕಾರ್ಯ ವಿಶ್ವನಾಥನಿಗೆ ಉಳಿಯಿತು.” (ಪು. ೧೨೬)

ಕಾವ್ಯಮೀಮಾಂಸೆಯ ವಿವಿಧ ಪ್ರಸ್ಥಾನಗಳು, ಆಯಾ ಪ್ರಸ್ಥಾನಗಳವರು ರಸವನ್ನು ಕುರಿತು ತಾಳಿದ ನಿಲುವು, ಕಡೆಗೆ ರಸಕ್ಕೆ ದೊರೆತ ಸ್ಥಾನ ಇವುಗಳನ್ನು ಕುರಿತು ಇದಕ್ಕಿಂತ ಸೊಗಸಾಗಿ ಮತ್ತು ಸಚಿತ್ರವಾಗಿ ಹೇಳಿದ್ದು ಎಲ್ಲೂ ಕಾಣಬರುವುದಿಲ್ಲ.

ಈ ಕೃತಿಯಲ್ಲಿ ಶ್ರೀಕಂಠಯ್ಯನವರ ಗಮನ ‘ಕಾವ್ಯಗಾಯತ್ರಿ’ ಎಂದು ಅವರೇ ಕರೆಯುವ ರಸ, ಧ್ವನಿ, ಔಚಿತ್ಯಗಳನ್ನು ಕುರಿತ ಕಡೆಗೆ. ರಸ ಮತ್ತು ಧ್ವನಿ ಈ ವಿಷಯಗಳನ್ನು ಕುರಿತು ಇಷ್ಟು ಸಮಗ್ರವಾಗಿ ಮತ್ತು ತಿಳಿಯಾಗಿ ಕನ್ನಡದಲ್ಲಿ ಬೇರೆಯ ಬರವಣಿಗೆಯೇ ಇಲ್ಲ; ಅಷ್ಟೇ ಅಲ್ಲ ಮತ್ತೆ ಯಾರೂ ಆ ಎರಡು ವಿಷಯಗಳನ್ನು ಕುರಿತು ಬರೆಯುವ ಆಗತ್ಯವೂ ಇಲ್ಲ. ಈ ಎರಡು ವಿಷಯಗಳಲ್ಲದೆ, ಅಲಂಕಾರದ ವಿಷಯ, ರೀತಿಯ ವಿಷಯ, ವಕ್ರೋಕ್ತಿ ವಿಷಯ ಹಿನ್ನೆಲೆಯಾಗಿ ಬಂದಿವೆ. ಇದರ ಜತೆಗೆ ‘ಹರಣ-ಸ್ವೀಕರಣ’ ವಿಚಾರವೂ, ‘ಅಶ್ಲೀಲತೆ’ಯನ್ನು ಕುರಿತ ವಿಚಾರವೂ ಪ್ರಾಸಂಗಿಕವಾಗಿ ಚರ್ಚಿತವಾಗಿರುವುದು ಉಚಿತವಾಗಿದೆ. ಇಡೀ ಕೃತಿ ಭಾರತೀಯ ಲಾಕ್ಷಣಿಕರ ಮತವನ್ನು ಸ್ಫುಟವಾಗಿ ಸಂಗ್ರಹಿಸಿ ಕೊಡುವುದಷ್ಟೇ ಅಲ್ಲ, ಒಂದು ರೀತಿಯಲ್ಲಿ ಅದನ್ನು ಕುರಿತ ವ್ಯಾಖ್ಯಾನ ಮತ್ತು ವಿಮರ್ಶೆಯೂ ಆಗಿದೆ. ಅಲ್ಲದೆ, ಈ ಬರವಣಿಗೆಯ ಉದ್ದಕ್ಕೂ ಶ್ರೀಕಂಠಯ್ಯನವರ ತೌಲನಿಕ ಅಧ್ಯಯನವೂ  ಪರೋಕ್ಷವಾಗಿ ಕಾಣಿಸಿಕೊಂಡಿರುವುದು ವಿಶೇಷದ ಸಂಗತಿಯಾಗಿದೆ. ಭಾರತೀಯ ಕಾವ್ಯಮೀಮಾಂಸೆಯ ಒಳಗೇ ಒಂದು ಮತಕ್ಕೂ, ಮತ್ತೊಂದು ಮತಕ್ಕೂ ಒಬ್ಬ ಆಲಂಕಾರಿಕನ ಸಾಧನೆಗೂ ಮತ್ತೊಬ್ಬನದಕ್ಕೂ ಇರುವ ಸಾಮ್ಯ-ವೈಷಮ್ಯಗಳನ್ನು ಕುರಿತ ಸೂಚನೆಗಳ ಜತೆಗೆ, ಅಲ್ಲಲ್ಲಿ ಭಾರತೀಯ ಹಾಗೂ ಪಾಶ್ಚಿಮಾತ್ಯ ಕಾವ್ಯಮಾಮಾಂಸೆಗಳ ತೌಲನಿಕ ವಿವೇಚನೆಯೂ ನಡೆದಿದೆ. “ದಂಡಿ ‘ಮಾರ್ಗ’ವೆನ್ನುವುದನ್ನು ವಾಮನನು ‘ರೀತಿ’ ಎಂಬ ಹೊಸ ಪದದಿಂದ ಕರೆದಿರುವುದನ್ನೂ ಇಲ್ಲಿ ಗಮನಿಸಬೇಕು” (ಪು. ೩೩). “ಕುಂತಕನಿಗೆ ಕಾವ್ಯವು ಪ್ರತಿಭಾ ವ್ಯಾಪಾರವಾದರೆ ಇವನಿಗೆ (ಭಟ್ಟನಾಯಕನಿಗೆ) ಅದು ಸಹೃದಯನ ರಸಾನುಭವ ವ್ಯಾಪಾರ” (ಪು. ೧೨೪). ಈ ತುಲನೆಯನ್ನು ನೋಡಬಹುದು. ಶಾಂತ ರಸವನ್ನು ಕುರಿತು ವಿಚಾರ ಮಾಡುವಾಗ, ಪ್ರಾಕೃತದ ‘ಅನುಯೋಗ ದ್ವಾರಸೂತ್ರ’ದಲ್ಲಿ ಉಕ್ತವಾದ ‘ಪ್ರಶಾಂತ’ ರಸದ ನೆನಕೆಯೂ. (ಪು. ೩೨. ಅಡಿಟಿಪ್ಪಣಿ), ಕಾವ್ಯಾವಲೋಕನದ ಪದ್ಯವೊಂದನ್ನು ಉದಾಹರಿಸಿದಾಗ, ಅದನ್ನು ಹೋಲುವ ಕಾಳಿದಾಸ, ರವೀಂದ್ರನಾಥ ಟ್ಯಾಗೂರ್ ಇವರ ಕವಿತೆಯ ಕಡೆಗೆ ಓದುಗರ ಗಮನವನ್ನು ಸೆಳೆದು ಸಾದೃಶ್ಯವನ್ನು ತೋರಿಸುವುದೂ (ಪು. ೧೬೯) ಈ ತೌಲನಿಕ ದೃಷ್ಟಿಯ ಪರಿಣಾಮಗಳು. ಅಷ್ಟೇ ಅಲ್ಲ, ಭಾರತೀಯ ಆಲಂಕಾರಿಕ ಮತಗಳು ಪಾಶ್ಚಾತ್ಯ ಕಾವ್ಯಮೀಮಾಂಸೆಯ ಮತಗಳೊಂದಿಗೆ ಎಲ್ಲೆಲ್ಲಿ ಸಂವಾದಿಯಾಗಬಲ್ಲವೆಂಬ ಕಡೆಗೆ ಲೇಖಕರು ಗಮನ ಸೆಳೆಯುತ್ತಾರೆ. “ಪಾತ್ರಸ್ವಭಾವ ಕವಿಸ್ವಭಾವಗಳಿಗೂ, ಪ್ರತಿಭಾ ವ್ಯಾಪಾರಕ್ಕೂ ಇವನು (ಕುಂತಕ) ಕೊಟ್ಟಿರುವ ಪ್ರಾಮುಖ್ಯವು ಪಾಶ್ಚಾತ್ಯ ಕಾವ್ಯವಿಮರ್ಶಕರ ನೆನಪನ್ನು ತರುತ್ತದೆ” (ಪು. ೮೭). ಪಾಶ್ಚಾತ್ಯರಲ್ಲಿ ಅಲಂಕಾರ ಶಾಸ್ತ್ರ (Rhetoric) ಕಾವ್ಯಮೀಮಾಂಸೆ (Poetics) ಮತ್ತು ಸೌಂದರ್ಯಮೀಮಾಂಸೆ (Aesthetics) ಇವುಗಳು ಬಲುಮಟ್ಟಿಗೆ ಪ್ರತ್ಯೇಕವಾಗಿ ಬೆಳೆದರೆ, ನಮ್ಮಲ್ಲಿ “ಅಲಂಕಾರ ವಿಭಜನೆ, ಕಾವ್ಯಮೀಮಾಂಸೆ, ಸೌಂದರ್ಯದರ್ಶನ- ಈ ಮೂರನ್ನೂ ಬೇರೆ ಬೇರೆ ಶಾಸ್ತ್ರಗಳೆಂದು ಭಾವಿಸಿ ವಿಂಗಡವಾಗಿ ನಿರೂಪಿಸುವ ಪದ್ಧತಿ ಬರಲಿಲ್ಲ” (ಪು. ೭-೮) ಪಾಶ್ಚಾತ್ಯ ಕಾವ್ಯಮಾಮಾಂಸೆಯಲ್ಲಿ-ಕಾವ್ಯವು ಅನುಕರಣವೇ ನಿರ್ಮಾಣವೇ, ಅದು ವಾಸ್ತವವಾಗಿರಬೇಕೇ, ಲೋಕೋತ್ತರ ವಾಗಿರಬೇಕೇ ಎಂಬ ಚರ್ಚೆ ಹಿಂದಿನಿಂದ ನಡೆದಿದೆ…. ಭರತಖಂಡದಲ್ಲೂ ಈ ಚರ್ಚೆ ಕೆಲವು ಮಟ್ಟಿಗೆ ನಡೆಯಿತೆಂಬುದಕ್ಕೆ ಸ್ವಭಾವೋಕ್ತಿಯನ್ನು ಕುರಿತು ಪ್ರಾಚೀನಾಲಂಕಾರಿಕರಿಗಿದ್ದ ಭಿನ್ನಾಭಿಪ್ರಾಯವೇ ಸಾಕ್ಷಿ (ಪು. ೨೦೭) “ಪಾಶ್ಚಾತ್ಯಸೌಂದರ್ಯಮೀಮಾಂಸೆಯಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿರುವ     psychical distance ಎಂಬ ತತ್ವ ನಮ್ಮವರ ‘ಸಾಧಾರಣೀಕರಣ’ ತತ್ವವನ್ನು ಆಶ್ಚರ್ಯಕರವಾದ ರೀತಿಯಲ್ಲಿ ಹೋಲುತ್ತದೆ” (ಪು. ೩೮೩. ಅಡಿಟಿಪ್ಪಣಿ ೧೬)-ಈ ಕೆಲವು ವಿಷಯಗಳು, ತೀ.ನಂ.ಶ್ರೀ.ಯವರಿಗೆ ಇದ್ದ ಪಾಶ್ಚಾತ್ಯ ಕಾವ್ಯಮೀಮಾಂಸೆಯ ಹಾಗೂ ಸಾಹಿತ್ಯ ವಿಮರ್ಶೆಯ ಗಾಢವಾದ ಪರಿಚಯವನ್ನೂ ಭಾರತೀಯ ಕಾವ್ಯಮೀಮಾಂಸೆಯ ತತ್ವಗಳೊಂದಿಗೆ ಅವುಗಳಲ್ಲಿ ಕೆಲವು ಹೇಗೆ ಸಂವಾದಿಯಾಗಬಲ್ಲವೆಂಬುದನ್ನು ತೋರಿಸುವ ಸಾಮರ್ಥ್ಯವನ್ನೂ ಸೂಚಿಸುತ್ತವೆ. ಈ ಹೋಲಿಕೆಗಳು ಭಾರತೀಯ ಹಾಗೂ ಪಾಶ್ಚಾತ್ಯ ಕಾವ್ಯಮೀಮಾಂಸೆಯನ್ನು ತೌಲನಿಕ ಅಧ್ಯಯನ ಮಾಡತಕ್ಕವರಿಗೆ ಸುಸಮರ್ಥವಾದ ಮಾರ್ಗದರ್ಶನವನ್ನು ಒದಗಿಸಬಲ್ಲವು. ಈ ದಿನ ಕಾವ್ಯಮೀಮಾಂಸೆಯಲ್ಲಾಗಲಿ, ಸಾಹಿತ್ಯವಿಮರ್ಶೆಯಲ್ಲಾಗಲಿ ನಾವು ಬಳಸುವ ಪದಗಳಿಗೆ ಖಚಿತವಾದ ಅರ್ಥವಿರುವುದು ಅವಶ್ಯಕ. ಇಲ್ಲದಿದ್ದರೆ ಅನಗತ್ಯವಾದ ಗೊಂದಲವಾಗುತ್ತದೆ. ನಿದರ್ಶನಕ್ಕೆ ಪ್ರತಿಭೆ ಎಂಬ ಪದವನ್ನೆ ನೋಡೋಣ. ಅನೇಕರು ಪ್ರತಿಭೆ, ಕಲ್ಪನೆ ಈ ಎರಡನ್ನೂ ಸಂವಾದಿ ಪದಗಳೆಂದು ಭಾವಿಸಿ ಬಳಸುತ್ತಾರೆ. ಇಂಗ್ಲಿಷಿನಲ್ಲೂ Imagination ಮತ್ತು  Fancy ಎಂಬ ಪದಗಳು ಸಮಾನಾರ್ಥಕಗಳೆಂದೇ ಭಾವಿಸಿದ್ದರು. ಇಂಗ್ಲಿಷಿನಲ್ಲಿ     Genius, Imagination, Intuition, Fancy ಇತ್ಯಾದಿ ಪದಗಳಿವೆ; ಕವಿಯ ಕಾವ್ಯ-ಕಲಾನಿರ್ಮಾಣ ಸಾಮರ್ಥ್ಯವನ್ನು ಸೂಚಿಸುವುದಕ್ಕೆ ಭಾರತೀಯ ಕಾವ್ಯಮೀಮಾಂಸೆಯಲ್ಲೂ ಪ್ರತಿಭೆ, ಶಕ್ತಿ,ಪ್ರತಿಭಾನ, ಮತ್ತು ಆಧುನಿಕ ವಿಮರ್ಶೆಯಲ್ಲಿ ಬಳಸುವ ಕಲ್ಪನೆ, ಭಾವನೆ, ಊಹೆ ಇತ್ಯಾದಿ ಪದಗಳಿವೆ. ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ಪರಿಚಯವಿರುವ ಕನ್ನಡ ಲೇಖಕರಿಗೆ ಇಂಗ್ಲಿಷಿನ ಯಾವ ಪದಕ್ಕೆ ಸಂವಾದಿಯಾಗಿ ಭಾರತೀಯ ಯಾವ ಪದವನ್ನು ಬಳಸಬೇಕು ಎನ್ನುವ ಬಗ್ಗೆ ಖಚಿತವಾದ ತಿಳುವಳಿಕೆ ಇರುವುದು ಅಗತ್ಯ. ಶ್ರೀಕಂಠಯ್ಯನವರು ಈ ದಿಕ್ಕಿನಲ್ಲಿ ಕೊಡುವ ಸೂಚನೆ ಅತ್ಯಂತ ಗಮನಾರ್ಹವಾದದ್ದು. ಭಾರತೀಯ ಆಲಂಕಾರಿಕರು ಬಳಸುವ ಪ್ರತಿಭೆ “ಇಂಗ್ಲಿಷಿನ ‘genius’, ‘imagination’ ಎರಡು ಎರಡು ಅರ್ಥಗಳನ್ನೂ ಕೊಡಬಲ್ಲದು. ನಮ್ಮ ಕಾವ್ಯ ಚರ್ಚೆಯಲ್ಲಿ ‘ಶಕ್ತಿ’ ಎಂಬುದನ್ನು ವಿಶಾಲತರವಾದ ‘genius’ ಎಂಬ ಅರ್ಥದಲ್ಲಿಯೂ, ‘ಪ್ರತಿಭೆ’ ಎಂಬುದನ್ನು ವಿಶಿಷ್ಟವಾದ ‘imagination’ ಎಂಬ ಅರ್ಥದಲ್ಲಿಯೂ ನಿಯತವಾಗಿ ಉಪಯೋಗಿಸುವುದು ಉತ್ತಮ. ‘ಪ್ರತಿಭಾನ’ ಎಂಬ ಇನ್ನೊಂದು ಸಮಾನ ಪದವುಂಟು. ಅದಕ್ಕೆ ‘intuition’ ಎಂಬ ಅರ್ಥವನ್ನು ಕೊಡಬಹುದು. ಕನ್ನಡದಲ್ಲಿ ಬರೆಯುವಾಗ ಕೆಲವರು ‘imagination’ ಎಂಬುದಕ್ಕೆ ‘ಭಾವನೆ’ ‘ಕಲ್ಪನೆ’ ಎಂಬ ಪ್ರತಿಶಬ್ದಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ‘ಭಾವನೆ’ ಎಂದರೆ ‘    contemplation, meditation’ ಎಂದು ಅರ್ಥ (ರಸಗಂಗಾಧರಕಾರನ ಪ್ರಯೋಗವನ್ನು ಗಮನಿಸಿ); ‘ಕಲ್ಪನೆ’ ಎಂಬುದನ್ನು ‘fancy, canception’ ಎಂಬವಕ್ಕೆ ಸಮಾನವಾಗಿ ಅಂಗೀಕರಿಸೋಣ” (ಪು. ೧೬೨. ಅಡಿಟಿಪ್ಪಣಿ). ಹೊಸಗನ್ನಡ ವಿಮರ್ಶೆ ರೂಪುಗೊಳ್ಳುತ್ತಿದ್ದ ಕಾಲದಲ್ಲಿ ಶ್ರೀಕಂಠಯ್ಯನವರು ಕೊಟ್ಟ ಈ ಸೂಚನೆ ವಿಮರ್ಶೆಯ ಭಾಷೆಯನ್ನು ವ್ಯವಸ್ಥೆಗೊಳಿಸುವ, ಪದಗಳ ಅರ್ಥವನ್ನು ಖಚಿತಗೊಳಿಸುವ ಮಹತ್ವದ ನಿರ್ದೇಶನಗಳೆಂಬುದನ್ನು ಇನ್ನೂ ನಾವು ತಿಳಿಯಬೇಕಾಗಿದೆ. ಶ್ರೀಕಂಠಯ್ಯನವರು ಪ್ರಾಸಂಗಿಕವಾಗಿ ಮಾಡುವ ಈ ತೌಲನಿಕ ಪ್ರಯತ್ನಗಳನ್ನು ನೋಡಿದಾಗ, ಇಷ್ಟು ಸುಸಮರ್ಥರಾದ ವಿದ್ವಾಂಸರು ತೌಲನಿಕ ಕಾವ್ಯಮೀಮಾಂಸೆಯ ಕಡೆಗೆ ಇನ್ನಷ್ಟು ಗಮನಕೊಡಬಹುದಾಗಿತ್ತು ಎಂದು ಯಾರಿಗಾದರೂ ಅನ್ನಿಸಬಹುದು. ಆದರೆ ‘ಭಾರತೀಯ ಕಾವ್ಯಮೀಮಾಂಸೆ’ಯೇ ಶ್ರೀಕಂಠಯ್ಯನವರ ಮುಖ್ಯ ಉದ್ದೇಶವಾಗಿತ್ತು ಮತ್ತು ಆ ಉದ್ದೇಶದಿಂದ ಅತ್ತಿತ್ತ ಹೋಗದೆ, ಉಚಿತವರಿತು ತಮ್ಮ ತೌಲನಿಕ ದೃಷ್ಟಿಯ ಪರಿಚಯವನ್ನು, ತನ್ಮೂಲಕ ಮುಂದೆ ಕೆಲಸಮಾಡುವವರಿಗೆ ಸಾಕಷ್ಟು ಸೂಚನೆಗಳನ್ನು ಕೊಟ್ಟಿದ್ದಾರೆ. ಅಲ್ಲದೆ ಆಧುನಿಕ ಮನಶ್ಯಾಸ್ತ್ರದ ಸಹಾಯದಿಂದ ಭಾರತೀಯ ಕಾವ್ಯಮೀಮಾಂಸೆಯನ್ನು ಅಧ್ಯಯನ ಮಾಡುವ ಅಗತ್ಯ ಎಷ್ಟಿದೆ ಎಂಬುದರ ಕಡೆಗೆ ವಿದ್ವಾಂಸರ ಗಮನವನ್ನು ಸೆಳೆದಿದ್ದಾರೆ. ಕಲೆಯ ಜಗತ್ತನ್ನು ಕೆಲವರು ಕನಸಿನೊಂದಿಗೆ ಹೋಲಿಸುವುದುಂಟು. ಆ ಸಂಗತಿಯನ್ನು ಕುರಿತು ಶ್ರೀಕಂಠಯ್ಯನವರು ವಿವೇಚಿಸುತ್ತಾರೆ (ಪು. ೩೭೨-೩೭೩). “ರಸಗಳು ಎಷ್ಟು, ಯಾವುವು…ಮಾನವನ ಚಿತ್ತದಲ್ಲಿ ಮೊದಲಿನಿಂದಲೂ ಸ್ಥಾಯಿಯಾಗಿರತಕ್ಕ ವಾಸನೆಗಳು ಯಾವುವು? ಈ ಭಾವಗಳಲ್ಲಿ ತಾರತಮ್ಯಗಳು ಎಷ್ಟರಮಟ್ಟಿಗೆ ಉಂಟು? ‘ಮಿಳಿತಭಾವ’ಗಳ (blended emotions) ವಿಷಯವೇನು? ಈ ಭಾವಸಮುದಾಯದಲ್ಲಿ ಯಾವುವು ನಾಗರಿಕ ಜೀವನದಲ್ಲಿ ಪ್ರಧಾನವಾಗತಕ್ಕವು, ಮುಖ್ಯಪುರುಷಾರ್ಥಗಳಿಗೆ ಸಂಬಂಧಪಡತಕ್ಕವು? ಯಾವುವನ್ನು ಕವಿಗಳೂ, ನಾಟಕಾರರೂ ಪ್ರಧಾನವಾಗಿ ಪ್ರತಿಪಾದನೆ ಮಾಡಿದ್ದಾರೆ’-ಈ ಮೊದಲಾದ ಪ್ರಶ್ನೆಗಳನ್ನೆಲ್ಲಾ ಆಧುನಿಕ ಮನಶ್ಯಾಸ್ತ್ರದ ದೃಷ್ಟಿಯಿಂದ ಪರಿಶೀಲಿಸಿ, ಭರತನ ಸ್ಥಾಯಿಭಾವ ಸಂಚಾರೀಭಾವ ರಸಗಳ ಪಟ್ಟಿಗಳನ್ನು ಪರಿಷ್ಕರಿಸಿದ ಹೊರತು ಈ ವಿಷಯದಲ್ಲಿ ಶಾಸ್ತ್ರೀಯವಾದ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ. ಇದರ ಜತೆಗೆ, ರಸಾನುಭವದ ಮೇಲೂ ಆಧುನಿಕ ವಿಜ್ಞಾನವು ಹೊಸಬೆಳಕನ್ನು ಬೀರಬಹುದು; ಅಲ್ಲಿಂದ ಉಪಯುಕ್ತವಾದ ಅನೇಕ ಸೂಕ್ಷ್ಮಾಂಶಗಳನ್ನು ತಾನೂ ಸಂಗ್ರಹಿಸಲೂಬಹುದು. ಇದೆಲ್ಲದರ ಪರಿಶೋಧನೆಯನ್ನು ಕೈಕೊಳ್ಳತಕ್ಕವರಿಗೆ ಪರಿಪಕ್ವವಾದ ಅಭಿರುಚಿಯೂ ಕಲಾನುಭವವೂ ಸಂಸ್ಕೃತ ಲಕ್ಷಣಗ್ರಂಥಗಳ ಗಾಢವಾದ ಪರಿಚಯವೂ ಮನಶ್ಯಾಸ್ತ್ರದ ಜ್ಞಾನದ ಜೊತೆಗೆ ಅಗತ್ಯವಾಗಿ ಇರಬೇಕು. ಇಂಥ ಸಂಶೋಧಕನಿಗಾಗಿ ಆ ಕಾರ್ಯ ಇನ್ನೂ ಕಾದಿದೆ” (ಪು. ೪೨೧-೪೨೨). ಈ ಹೇಳಿಕೆ ಇದುವರೆಗು ನಡೆದ, ಅಥವಾ ಶ್ರೀಕಂಠಯ್ಯನವರು ನಡೆಯಿಸಿದ ಕೆಲಸದ ಹಿನ್ನೆಲೆಯಲ್ಲಿ, ಮುಂದೆ ನಡೆಯಬೇಕಾದ ಕಾರ್ಯದ ಮಹತ್ತನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ, ಅಂಥ ಕಾರ್ಯವನ್ನು ಕೈಕೊಳ್ಳಬೇಕಾದ ನಾಳಿನ ಸಂಶೋಧಕನಿಗೆ ಇರಬೇಕಾದ  ಪೂರ್ವಸಿದ್ಧತೆ, ಹಾಗೂ ಶಕ್ತಿ ಸಾಮರ್ಥ್ಯಗಳ ಬಗೆಗೂ ಎಚ್ಚರಿಕೆ ಕೊಡುತ್ತದೆ. ಅದುದರಿಂದಲೆ, ಕುವೆಂಪು ಅವರು ‘ಭಾರತೀಯ ಕಾವ್ಯಮೀಮಾಂಸೆ’ಗೆ ಮುನ್ನುಡಿ ಬರೆಯುತ್ತಾ “ಮುಂಬರಲಿರುವ ಕನ್ನಡ ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಯ ಸಾಹಸಕ್ಕೆ ಶ್ರೀಮಾನ್ ಶ್ರೀಕಂಠಯ್ಯನವರು ಸುಸಮರ್ಥವೂ, ಮಾರ್ಗದರ್ಶಕವೂ ಆಗಿರುವ ಒಂದು ಆಚಾರ‍್ಯ ಕೃತಿಯನ್ನು ಒದಗಿಸಿದ್ದಾರೆ” (ಮುನ್ನುಡಿ. ಪು. ix) ಎಂದು ಹೇಳಿರುವುದು.

ಆನಂದವರ್ಧನ ಕವಿಯೂ ಹೌದು, ಲಾಕ್ಷಣಿಕನೂ ಹೌದು. ಅವನ ಕೃತಿಯನ್ನು ಕುರಿತು “ಧ್ವನ್ಯಾಲೋಕವನ್ನು ಮೊದಲ ಸಲ ಓದಿದಾಗ ಹೊಸದೊಂದು ಲೋಕವನ್ನೆ ಪ್ರವೇಶಿಸಿದ ಅನುಭಾವವುಂಟಾಗುತ್ತದೆ. ಕಾರಿಕೆಗಳ ಬಿಗಿ, ವೃತ್ತಿಭಾಗದ ಖಚಿತವೂ ತಲಸ್ಪರ್ಶಿಯೂ ಆದ ನಿರೂಪಣೆ ‘ರಾಮಾಯಣ ಮಹಾಭಾರತ’ಗಳಿಂದ ಹಿಡಿದು ಪ್ರಾಕೃತಗಾಥೆಗಳವರೆಗೆ ಎಲ್ಲೆಲ್ಲೂ ಬಲೆಬೀಸಿ ಉದಾಹರಣೆಗಳನ್ನು ಆರಿಸಿಕೊಂಡು ಪ್ರಕಾಶಪಡಿಸಿರುವ ರಸಜ್ಞತೆ” (ಪು. ೬೫) ಇವೆಲ್ಲವೂ ಇದೆ ಎನ್ನುತ್ತಾರೆ ಶ್ರೀಕಂಠಯ್ಯನವರು. ಇದೇ ಹೇಳಿಕೆಯನ್ನು ಒಂದೆರಡು ಪದಗಳನ್ನು ಮಾತ್ರ ಬದಲಾಯಿಸಿ, ತೀ.ನಂ.ಶ್ರೀಕಂಠಯ್ಯನವರ ‘ಭಾರತೀಯ ಕಾವ್ಯಮೀಮಾಂಸೆ’ಗೂ ಅನ್ವಯಿಸಬಹುದು. ಈ ಕೃತಿಯನ್ನು ಓದಿದಾಗ ‘ಹೊಸದೊಂದು ಲೋಕವನ್ನೆ ಪ್ರವೇಶಿಸಿದ ಅನುಭವ’ವಾಗುತ್ತದೆ. ಮಾತಿನ ಬಿಗಿ, ‘ಖಚಿತವೂ ತಲಸ್ಪರ್ಶಿಯೂ ಆದ ನಿರೂಪಣೆ’, ‘ರಾಮಾಯಣ ಮಹಾಭಾರತಗಳಿಂದ ಹಿಡಿದು ಆಧುನಿಕ ಕಾವ್ಯಗಳವರೆಗೆ ಎಲ್ಲೆಲ್ಲೂ ಬಲೆಬೀಸಿ ಉದಾಹರಣೆಗಳನ್ನು ಆರಿಸಿಕೊಂಡು ಪ್ರಕಾಶಪಡಿಸಿರುವ ರಸಜ್ಞತೆ’ಯನ್ನು ಇಲ್ಲಿ ಗುರುತಿಸಬಹುದು. ಇಲ್ಲಿ ನಮಗೆ ಪ್ರಕೃತವಾದದ್ದು ಭಾರತೀಯ ಕಾವ್ಯಮೀಮಾಂಸೆಯಲ್ಲಿ ಶ್ರೀಕಂಠಯ್ಯನವರು ನಿದರ್ಶನಕ್ಕಾಗಿ ಹತ್ತೂಕಡೆಗೆ ಬಲೆ ಬೀಸಿ ತಂದಿರುವ ಪದ್ಯಗಳು. ಅವರು ದೃಷ್ಟಾಂತಕ್ಕಾಗಿ ಎತ್ತಿಕೊಳ್ಳುವ ಕಾವ್ಯಭಾಗಗಳ ಆಯ್ಕೆಯಲ್ಲಿ ಕಂಡು ಬರುವ ರಸಿಕತೆ, ಸಂಸ್ಕೃತ ಕವಿಗಳಿಂದ ಹಾಗೂ ಪ್ರಾಕೃತ ಕವಿಗಳಿಂದ ಅನುವಾದ ಮಾಡಿ ಉಚಿತವರಿತು ಅಳವಡಿಸಿಕೊಂಡಿರುವ ಜಾಣ್ಮೆ ವಿಶೇಷರೀತಿಯದು. ಭಾರತೀಯ ಕಾವ್ಯಮೀಮಾಂಸೆಯ ಉದ್ದಕ್ಕೂ ಅವರೇ ಅನುವಾದ ಮಾಡಿರುವ ಪದ್ಯಗಳನ್ನೆಲ್ಲ ಪ್ರತ್ಯೇಕಿಸಿ ಪ್ರಕಟಿಸಿದರೆ ಒಂದು ಸೊಗಸಾದ ಕವನ ಸಂಗ್ರಹವೇ ಆಗುತ್ತದೆ-ಅಷ್ಟೊಂದಿವೆ ಅವುಗಳ ಸಂಖ್ಯೆ.ಅವುಗಳಲ್ಲಿ ಕೆಲವನ್ನು ಮಾತ್ರ ಪರಿಶೀಲಿಸಬಹುದು: ಕಾಳಿದಾಸನಿಂದ ಒಂದು ಉದಾಹರಣೆ, ಪ್ರತಿಭೆಯನ್ನು ಕುರಿತು ಚರ್ಚಿಸುವಲ್ಲಿ. “ಅಕಾರಣ ಪರಿತ್ಯಾಗದಿಂದ ನೊಂದು ಬೆಂದು ಶಕುಂತಲೆ ಕಶ್ಯಪರ ಆಶ್ರಮದಲ್ಲಿ ತಪಸ್ವಿನಿಯಾಗಿರುತ್ತಾಳಷ್ಟೆ: ಪಶ್ಚಾತ್ತಾಪದಗ್ಧನಾದ ದುಷ್ಯಂತನು ಅವಳನ್ನು ಕೊನೆಯ ಅಂಕದಲ್ಲಿ ಸಂಧಿಸಿ, ಅವಳ ಕಂಬನಿಯನ್ನು ಒರಸುತ್ತಿರುವಾಗ ಅವನ ಬೆರಳಿನಲ್ಲಿದ್ದ ಉಂಗುರ ಶಕುಂತಲೆಯ ಕಣ್ಣಿಗೆ ಸಹಜವಾಗಿ ಗೋಚರಿಸುತ್ತದೆ. ಆ ಸಮಯದ ಮಾತುಕತೆಗಳನ್ನು ಹೀಗೆ ಬೆಳೆಸುತ್ತಾನೆ: “

ಶಕುಂತಲೆ-(ನಾಮಾಂಕಿತವಾದ ಉಂಗುರವನ್ನು ಕಂಡು) ಆರ‍್ಯಪುತ್ರ, ಇದೇ ಆ ಉಂಗುರ! ರಾಜ-ಈ ಉಂಗುರ ದೊರೆತ ಬಳಿಕವೇ ನನಗೆ ನೆನಪು ಮರಳಿದ್ದು.

ಶಕುಂತಲೆ-ಆರ‍್ಯಪುತ್ರನಿಗೆ ನಂಬಿಕೆಯನ್ನುಂಟುಮಾಡಬೇಕಾಗಿದ್ದ ಸಮಯದಲ್ಲಿ ಇದು ದೊರೆಯದೆ ನನಗೆ ಕೆಡಕು ಮಾಡಿತು.

ರಾಜ-ಹಾಗಾದರೆ, ವಸಂತಸಮಾಗಮಕ್ಕೆ ಗುರುತಾಗಿ ಬಳ್ಳಿ ಹೂವನ್ನು ಮತ್ತೆ ತಳೆಯಲಿ.

ಶಕುಂತಲೆ-ಇದರಲ್ಲಿ ನನಗೆ ನೆಚ್ಚಿಕೆಯಿಲ್ಲ. ಆರ‍್ಯಪುತ್ರನೇ ಇದನ್ನು ಧರಿಸಬೇಕು.

ಇಲ್ಲಿ ಶಕುಂತಲೆಯ ಕೊನೆಯ ಮಾತು ಮುಖ್ಯವಾಗಿ ಲಕ್ಷಿಸತಕ್ಕದ್ದಾಗಿದೆ. ಸಾಧಾರಣ ಕವಿ ಈ ಸಂದರ್ಭದಲ್ಲಿ ಅವಳು ಉಂಗುರವನ್ನು ಮತ್ತೆ ಸ್ವೀಕರಿಸಿ ಬೆರಳಿಗೆ ತೊಡಿಸಿಕೊಂಡಂತೆ ನಿರೂಪಿಸುತ್ತಿದ್ದನು. ಆದರೆ ಕಾಳಿದಾಸನ ಪ್ರತಿಭೆ ಇಲ್ಲಿ ಶಕುಂತಲೆಯ ಹೃದಯವ್ಯಾಪಾರವನ್ನು ತಾದಾತ್ಮ್ಯದಿಂದ ಒಳಹೊಕ್ಕು ನೋಡಿ ಅದನ್ನು ಯಥಾವತ್ತಾಗಿ ಅತಿಮನೋಹರವಾಗಿ ಆಕೆಯ ಮಾತಿನಲ್ಲಿ ಹಿಡಿದು ತೋರಿಸಿದೆ. ಎಲ್ಲಿಯೋ ಬಿದ್ದು ಹೋಗಿ, ನಂಬಿದ ವೇಳೆಗೆ ಸರಿಯಾಗಿ ತಲೆಮರಸಿಕೊಂಡ ಈ ಉಂಗುರವನ್ನು-ಈ ಅಪಕಾರಿಯನ್ನು-ಶಕುಂತಲೆ ಮತ್ತೆ ಹೇಗೆ ನೆಚ್ಚಿಯಾಳು! ಅದನ್ನು ಧರಿಸಿದರೆ  ದುರದೃಷ್ಟ ಮತ್ತೆ ಒದಗೀತೆಂದು ಕೂಡ ಶಂಕಿಸಿದಳೋ ಏನೋ! ಇದು ಎಷ್ಟು ಸಹಜವಾದ ಮನೋವೃತ್ತಿ! ಆದರೆ ಇದರ ಅರಿವನ್ನು ನಮಗೆ ತಂದುಕೊಡಲು ಕವಿಯ ಪ್ರತಿಭೆಯೇ ಕೆಲಸ ಮಾಡಬೇಕು.” (ಪು. ೧೬೩-೧೬೪). ಕವಿಪ್ರತಿಭೆಯ ಮಹತ್ತನ್ನು, ಪ್ರತಿಭೆಯ ಕಾರ‍್ಯವನ್ನು ವಿವರಿಸಲು, ಶ್ರೀಕಂಠಯ್ಯನವರು ಕಾಳಿದಾಸನಿಂದ ಆರಿಸಿದ ಈ ಭಾಗವೂ, ಮತ್ತು ಅದನ್ನು ಕುರಿತು ಅವರು ಮಾಡಿದ ವ್ಯಾಖ್ಯಾನವೂ, ಅವರ ರಸಜ್ಞತೆಯನ್ನೂ, ವಿಮರ್ಶನ ಸಾಮರ್ಥ್ಯವನ್ನೂ ಒಟ್ಟಿಗೆ ಪ್ರಕಟಿಸುತ್ತದೆ.

ಸಂಸ್ಕೃತ ಹಾಗೂ ಪ್ರಾಕೃತ ಕವಿಗಳಿಂದ ಎಷ್ಟೋ ಪದ್ಯಗಳನ್ನು ಬಲೆಬೀಸಿ ತಂದು, ಅವುಗಳನ್ನು ವಿಷಯಸಮರ್ಥನೆಗೆ ಸೊಗಸಾದ ದೃಷ್ಟಾಂತಗಳನ್ನಾಗಿ ಮಾಡಿಕೊಳ್ಳುವುದಿರಲಿ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಕಾವ್ಯಗಳಿಂದಲೂ ಪದ್ಯಗಳನ್ನು ನಿದರ್ಶನಕ್ಕಾಗಿ ಬಳಸಿ, ಅವುಗಳನ್ನು ಶ್ರೀಕಂಠಯ್ಯನವರು ವಿಮರ್ಶಿಸಿರುವ ರೀತಿ ಹೊಚ್ಚ ಹೊಸತಾಗಿದೆ. ವಿಸ್ತಾರಭಯದಿಂದ ಅವುಗಳನ್ನು ಇಲ್ಲಿ ಕೊಡದೆ ಒಂದೆರಡನ್ನು ಮಾತ್ರ  ಪ್ರಸ್ತಾಪಿಸಬಹುದು. ಪಂಪಭಾರತದ ಒಂದು ಸನ್ನಿವೇಶ. ಕರ್ಣನು, ತನಗೆ ಮೊದಲು ಪಟ್ಟವನ್ನು ಕಟ್ಟದೆ ಮುಪ್ಪಿನ ಮುದುಕರಾದ ಭೀಷ್ಮರಿಗೆ ಕೌರವನು ಪಟ್ಟವನ್ನು ಕಟ್ಟಿದಾಗ, ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿ, ವಿನಯವನ್ನು ಮರೆತು ಭೀಷ್ಮರನ್ನು ಮೂದಲಿಸುತ್ತಾನೆ. ಆಗ ಭೀಷ್ಮರು ಒಂದಿಷ್ಟೂ ವಿಚಲಿತರಾಗದೆ, ಕರ್ಣನ ಯೌವನ, ಸ್ವಾಮಿಭಕ್ತಿಗಳನ್ನು ಪ್ರಶಂಸಿಸಿ ಒಂದು ಮಾತನ್ನು ಹೇಳುತ್ತಾರೆ: ‘ಸೂೞ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್’ (೧೦-೨೩) ಎಂದು. ಈ ಮಾತನ್ನು ಕುರಿತು “ಸೂೞ್ ಎಂದರೆ ಸರದಿ ಎಂದು ಅರ್ಥ. ‘ಈ ಮಹಾಯುದ್ಧದಲ್ಲಿ ನಿನಗೂ ಸರದಿ ದೊರೆಯುವುದು ಕಾಣಯ್ಯ-ಎಂದು ಭರವಸೆ ಹೇಳಿದಷ್ಟಕ್ಕೆ ಇಲ್ಲಿಯ ವಾಚ್ಯಾರ್ಥ ಮುಗಿಯಿತು. ಆದರೆ ಭೀಷ್ಮನ ಮನಸ್ಸಿನಲ್ಲಿದ್ದ ಎಲ್ಲ ಅರ್ಥವೂ ಮುಗಿಯಲಿಲ್ಲ. ಇಲ್ಲಿ ಸೂೞ್ ಎಂಬ ಪದಪ್ರಯೋಗದಿಂದ ಹೊರಡುವ ಅರ್ಥಸ್ವಾರಸ್ಯವನ್ನೆಲ್ಲಾ ಗಮನಿಸಿ. ಈ ಸಮಯದಲ್ಲಿ ಅರ್ಜುನನು ಎದುರಿಸಿ ನಿಲ್ಲುವ ಕೌರವ ಪಕ್ಷದ ವೀರರಿಗೆಲ್ಲ ದೊರೆಯುವುದು ಪಟ್ಟಕಟ್ಟಿಸಿಕೊಳ್ಳುವ ಸರದಿಯೇ ಹೊರತು ವಿಜಯವೆಂದಿಗೂ ಅಲ್ಲ. ಭೀಷ್ಮನ ಸರದಿ ಮೊದಲು ಬಂದಿತು. ಅವನು ಬಿದ್ದಮೇಲೆ ಮತ್ತೊಬ್ಬನದು, ಬಳಿಕ ಕರ್ಣನ ಸರದಿ. ಆದರೆ ಕರ್ಣನಿಗೂ ಸರದಿ ಮಾತ್ರವೇ. ಯುದ್ಧ ಅಲ್ಲಿಗೂ ನಿಲ್ಲದೆ ಕರ್ಣನ ಆನಂತರವೂ ಮುಂದೆ ಸಾಗುತ್ತದೆ….! ಇಲ್ಲಿ ಸನ್ನಿವೇಶ ವಶದಿಂದ ಸೂೞ್ ಎಂಬ ಪದವು ವ್ಯಂಜನಾವೃತ್ತಿಯ ಮೂಲಕ ಎಷ್ಟೊಂದು ಅರ್ಥವನ್ನು ನಮಗೆ ಅರಿವು ಮಾಡಿ ಕೊಡಬಲ್ಲದು!” (ಪು. ೫೦). ಪಂಪಭಾರತದ ಸೂೞ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್’ ಎಂಬ ಮಾತನ್ನು ಕುರಿತು ಈ ಬಗೆಯ ವ್ಯಾಖ್ಯಾನ ವಿಮರ್ಶೆ ಮೊಟ್ಟ ಮೊದಲು ಕಾಣಿಸಿಕೊಂಡದ್ದು, ತೀ.ನಂ. ಶ್ರೀಕಂಠಯ್ಯನವರ ಭಾರತೀಯ ಕಾವ್ಯಮೀಮಾಂಸೆಯಲ್ಲಿಯೇ. ‘ಶಬ್ದ ಶಕ್ತಿ ಮೂಲಧ್ವನಿ’ಯನ್ನು ಕುರಿತು ಬೇಂದ್ರೆಯವರ ಪದ್ಯವೊಂದರ ನಿದರ್ಶನವನ್ನು ಲೇಖಕರು ಕೊಟ್ಟಿದ್ದಾರೆ, -“ಭರತಮಾತೆ ಕೆಲಸಕ್ಕೆ ಬಾರದ ಕೋಟ್ಯಂತರ ಮಕ್ಕಳನ್ನು ಹಡೆದ ತನ್ನ ದುಃಖವನ್ನು ತೋಡಿಕೊಳ್ಳುತ್ತಾ, ಹೀಗೆ ಹೇಳುತ್ತಾಳೆ:

ಮೂವತ್ತು ಮೂರುಕೋಟೀ ಮೂವತ್ತು ಮೂರುಕೋಟೀ!
ಬಯಕೆಗಳು ಬಸಿರುಗಳು ಹಡೆದದ್ದು ಹಿಂಗಿದ್ದು
ಮೂವತ್ತು ಮೂರುಕೋಟೀ!
ಸೂಲಗಳು
ಮೂವತ್ತು ಮೂರು ಕೋಟೀ!
(ಗರಿ, ಪು. ೫೧)

ಇಲ್ಲಿ ‘ಸೂಲಗಳು’ ಎಂಬ ಶಬ್ದವನ್ನು ಗಮನಿಸಿ.ಇದು ಹೆತ್ತತಾಯಿಯ ಮಾತಾಗಿರುವುದರಿಂದಲೂ ಬಯಕೆ, ಬಸಿರು ಮೊದಲಾವುಗಳ ಸಾಹಚರ್ಯವಿರುವುದರಿಂದಲೂ “ಸೂಲಗಳು” ಎಂಬುದಕ್ಕೆ ‘ಹೆರಿಗೆಗಳು’ ಎಂದು ಥಟ್ಟನೆ ಅರ್ಥವಾಗುತ್ತದೆ. ಮೂವತ್ತುಮೂರು ಕೋಟಿ ಮಕ್ಕಳನ್ನು ನಾನು ಹೆತ್ತೆನು ಎಂಬುದೇ ಇಲ್ಲಿಯ ವಾಚ್ಯಾರ್ಥ. ಹೀಗೆ ಪ್ರಕರಣ ಬಲದಿಂದ ಶಬ್ದದ ವಾಚ್ಯಾರ್ಥವು ನಿಯಂತ್ರಿತವಾದ ಬಳಿಕ, ಸೂಲಗಳು ಎಂಬ ಶಬ್ದಕ್ಕಿರುವ ಇನ್ನೊಂದು ಅರ್ಥ-‘ಶೂಲಗಳು’ ಎಂಬ ಅರ್ಥ-ಸ್ಫುರಿಸುತ್ತದೆ;  ಆದರೆ ಅಲ್ಲಿಗೇ ನಿಂತಿದ್ದರೆ ಸಂದರ್ಭಕ್ಕೆ ಅಸಂಬದ್ಧವಾಗುತ್ತಿತ್ತು. ಇದನ್ನು ತಪ್ಪಿಸಲು “ಹೆರಿಗೆಗಳು” ಎಂಬ ವಾಚ್ಯಾರ್ಥಕ್ಕೂ ‘ಶೂಲಗಳು’ ಎಂಬುದಕ್ಕೂ ಇಲ್ಲಿ ಸಾದೃಶ್ಯ ಸಂಬಂಧವು ಏರ್ಪಟ್ಟು, ಈ ಮೂವತ್ತು ಮೂರು ಕೋಟೀ ಹೆರಿಗೆಗಳೂ ಹೆತ್ತ ತಾಯಿಯನ್ನು ಇರಿಯುವ ಪ್ರತೀತವಾಗುತ್ತದೆ.” (ಪು. ೨೮೨-೨೮೩)- ‘ಶಬ್ದಶಕ್ತಿ ಮೂಲಧ್ವನಿ’ಗೆ ನಿದರ್ಶನವಾಗಿ ಎತ್ತಿಕೊಂಡ ಬೇಂದ್ರೆಯವರ ಈ ಪದ್ಯಭಾಗವನ್ನು ಕುರಿತು ಶ್ರೀಕಂಠಯ್ಯನವರು ಮಾಡಿದ ಈ ವಿಮರ್ಶೆಯಿಂದ ತೆರೆಯುವ ಹೊಸ ಅರ್ಥವಂತಿಕೆ ಓದುಗರನ್ನು ಬೆರಗುಗೊಳಿಸುತ್ತದೆ. ಶಿಷ್ಟಸಾಹಿತ್ಯದಿಂದ ಮಾತ್ರ ಅಲ್ಲ, ಜನಪದ ಸಾಹಿತ್ಯದಿಂದಲೂ ಶ್ರೀಕಂಠಯ್ಯನವರು ಕೆಲವು ನಿದರ್ಶನಗಳನ್ನು ಆಯ್ದು ಕೊಡುವುದರ ಜತೆಗೆ ಅದನ್ನು ಕುರಿತು ವಿಮರ್ಶೆಯನ್ನೂ ಮಾಡುತ್ತಾರೆ. ‘ಕೆರೆಗೆಹಾರ’ ಎಂಬುದು ತುಂಬ ಸುಪ್ರಸಿದ್ಧವಾದ ಒಂದು ಕೋಲಾಟದ ಪದ. ಕಲ್ಲನಕೇರಿ ಮಲ್ಲನಗೌಡ ಕೆರೆಯೊಂದನ್ನು ಕಟ್ಟಿಸುತ್ತಾನೆ. ಏನಾದರೂ ಅದರಲ್ಲಿ ನೀರೇ ಬರುವುದಿಲ್ಲ. ಕಡೆಗೆ ಜೋಯಿಸರ ಮಾತಿನಂತೆ ಗೌಡರ ಸಣ್ಣಸೊಸಿ ಭಾಗೀರಥಿಯನ್ನು ಕೆರೆಗೆ ಹಾರ (ಆಹಾರ, ಬಲಿ) ಕೊಡಲು ನಿಶ್ಚಯಿಸುತ್ತಾನೆ. ಹಾಗೆ ಅವಳನ್ನು ‘ಹಾರ’ ಕೊಡುತ್ತಾನೆ. ಆಗ ದಂಡಿನಲ್ಲಿದ್ದ ಅವಳ ಗಂಡ ಮಹಾದೇವರಾಯನಿಗೆ ಏನಾಯಿತು ಎಂಬುದು ಇಲ್ಲಿ ಉದಾಹೃತವಾಗಿರುವ ಭಾಗ.

ಗಂಡ ಮಾದೇವರಾಯ ದಂಡಿನಾಗೈದಾನು
ದಂಡಿನಾಗೈದಾನು ಕಂಡನು ಕೆಟ್ಟ ಕನಸ

ಸೆಲ್ಯ ಸುಟ್ಟಾಂಗಾತು ಕೋಲು ಮುರಿದ್ಹಾಂಗಾತು

ಕಟ್ಟಿಸಿದ ಮಾಲೆಲ್ಲ ತಟ್ಟನೆ ಬಿದ್ಹಾಂಗಾತು
ಗಂಡ ಮಾದೇವರಾಯ ಹತ್ತಿದ ಬತ್ತಲೆಗುದರಿ
ಹತ್ತಿದ ಬತ್ತಲೆಗುದರಿ ಒತ್ತರ ಬಂದಾನ ಮನಿಗೆ.

ಈ ಪದ್ಯಭಾಗವನ್ನು ಕುರಿತು ಶ್ರೀಕಂಠಯ್ಯನವರ ವಿಮರ್ಶೆಯನ್ನು ಗಮನಿಸಿ: “ಇವನಿಗೆ ಕನಸು ಬೀಳುವ  ಬಗೆಯನ್ನು ನೋಡಿ: ಕಟ್ಟಿಸಿದ ಮಹಲೇ ಥಟ್ಟನೆ ಬಿದ್ದಂತಾಯಿತು! ದಾಂಪತ್ಯ ಜೀವನ ಮುರಿದು ಬಿತ್ತೆಂಬುದನ್ನು ಪರ‍್ಯಾಯವಾಗಿ ಇನ್ನು ಹೇಗೆ ಇಷ್ಟು ಚೆನ್ನಾಗಿ ಹೇಳಬಹುದು! ” ಒಟ್ಟು ಹಾಡನ್ನೇ ಧ್ವನಿತತ್ವದ ಎಲ್ಲ ಅಂಶಗಳಿಗೂ ನಿದರ್ಶನವಾಗಿ ಇಟ್ಟುಕೊಂಡು ಕಾವ್ಯದ ಸ್ವಾರಸ್ಯವನ್ನು ತತ್ತ್ವದ ಸ್ವಾರಸ್ಯವನ್ನು ಜೊತೆಗೂಡಿಯೇ ಮನಗಾಣಿಸುವುದು ಸಾಧ್ಯ. ಆದರೆ ಅದು ನಮ್ಮ ಪ್ರಕೃತೋದ್ದೇಶಕ್ಕೆ ಮೀರಿದ ವಿಷಯ. ಇಲ್ಲಿ ‘ಬತ್ತಲೆಗುದರಿ’ ಎಂಬ ಶಬ್ದವನ್ನು ಲಕ್ಷಿಸಿ. ಈ ಕೆಟ್ಟಕನಸನ್ನು ಕಂಡ ಕೂಡಲೆ ಎದೆ ಅಳುಕಿ ಏನೊಂದನ್ನೂ ಗಮನಿಸದೆ, ಕಡೆಗೆ ಕುದುರೆಗೆ ತಂಗು ತಡಿಗಳನ್ನೂ ಹಾಕದೆ, ಇದ್ದದ್ದು ಇದ್ದ ಹಾಗೆಯೇ ದೌಡಾಯಿಸಿಕೊಂಡು ಬಂದವನ ಕಳವಳವನ್ನೂ ತ್ವರೆಯನ್ನೂ ಈ ಶಬ್ದ ವ್ಯಕ್ತಪಡಿಸುತ್ತದೆ. ಇಂಥ ಒಂದು ಮಾತನ್ನು ಉಪಯೋಗಿಸಿದರೆ ಸಾಕು. ಮಾರುಮಾರುದ್ದದ ವರ್ಣನೆಗಳನ್ನು ಕವಿ ಏಕೆ ಹೊಸೆಯಬೇಕು!” (ಪು. ೨೯೭-೨೯೮), ಈ ಉದಾಹರಣೆಗಳು ಶಬ್ದದ ಅರ್ಥವನ್ನು ಹಿಡಿದು ಮಾಡಿದ ವಿಮರ್ಶೆಗಳಾದರೆ, ಛಂದಸ್ಸಿನ ವಿಶೇಷತೆಯಿಂದ ಕಾವ್ಯಕ್ಕೆ ಬರುವ ಸೊಗಸನ್ನು ಕುರಿತು ಶ್ರೀಕಂಠಯ್ಯನವರು ಕೊಡುವ ನಿದರ್ಶನವೊಂದು ಗಮನಾರ್ಹವಾಗಿದೆ. “ಆದಿಯಲ್ಲಿ ಒಂದು ಲಘುವಿದ್ದು ಅದರ ಮುಂದೆ ಗುರು ಬರುವಂಥ ಮಾತ್ರಾಗಣ ಪ್ರಯೋಗವು (u-, u-u, u-uu, u–) ಕನ್ನಡ ಛಂದಸ್ಸಿನಲ್ಲಿ ಅಪ್ರಚುರ; ಇದನ್ನು ತಂದರೆ ಯತಿ ಸಾಮಾನ್ಯವಾಗಿ ಕೆಡುತ್ತದೆ. ಆದರೆ ‘ತೆಂಕಣಗಾಳಿಯಾಟ’ವನ್ನು ವರ್ಣಿಸುವ ಈ ಪದ್ಯವನ್ನು ನೋಡಿ:”

ಬೊಬ್ಬೆಯ ಹಬ್ಬಿಸಿ, ಒಂದೇ ಬಾರಿಗೆ
ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ,
ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ
ಅಬ್ಬರದಲಿ ಭೋರ್ ಭೋರೆನೆ ಗುಮ್ಮಿಸಿ
ಬರುತದೆ! ಮೈತೋರದೆ ಬರುತದೆ ! ಅದೆ.

(ಪಂಜೆ ಮಂಗೇಶರಾಯರು)

ಇಲ್ಲಿ ‘ದಡಕ್ಕೆ’ ಎಂಬುದು ವಿಷಮಗಣ. ಆದರೆ ಅದರ ಪ್ರಯೋಗದಿಂದ ಗಾಳಿ ತೆರೆಗಳನ್ನು ಅಟ್ಟಿಕೊಂಡು ಬಂದು ಸಮುದ್ರದ ಕರೆಗೆ ಅಪ್ಪಳಿಸುವ ರಭಸ ಚೆನ್ನಾಗಿ ವ್ಯಕ್ತವಾಗುವುದಲ್ಲವೆ!” (ಪು. ೨೯೦-೨೯೧).

ಕೃತಿಯಲ್ಲಿ ಇಂಥ ನಿದರ್ಶನಗಳು ನೂರಾರಿವೆ. ಸಂಸ್ಕೃತದಿಂದ, ಪ್ರಾಕೃತದಿಂದ, ಹಳಗನ್ನಡದಿಂದ ಹೊಸಗನ್ನಡದಿಂದ ಶ್ರೀಕಂಠಯ್ಯನವರು ಆರಿಸಿಕೊಟ್ಟಿರುವ ಈ ನಿದರ್ಶನಗಳು ಅವರ ರಸಜ್ಞತೆಗೂ ನಿದರ್ಶನಗಳಾಗಿವೆ. ಈ ನಿದರ್ಶನಗಳಿಂದ ಮತ್ತು ಅವುಗಳನ್ನು ಕುರಿತು ಶ್ರೀಕಂಠಯ್ಯನವರು ಮಾಡುವ ವಿಮರ್ಶೆ, ವ್ಯಾಖ್ಯಾನ, ವಿವರಣೆಗಳಿಂದ ಎರಡು ಮಹತ್ವದ ಸಂಗತಿಗಳು ನಿಷ್ಪನ್ನವಾಗುತ್ತವೆ. ಒಂದು, ಈ ನಿದರ್ಶನಗಳೆಲ್ಲ ಭಾರತೀಯ ಕಾವ್ಯಮೀಮಾಂಸೆಯ ಸಿದ್ಧಾಂತಗಳನ್ನು ಸಮರ್ಥಿಸಲು, ಕೊಟ್ಟವುಗಳು; ಈ ಸಿದ್ಧಾಂತಗಳು ಯಾವುದೋ ಕಾಲದ, ಯಾವುದೋ ಕೃತಿಗಳಿಗೆ ಮಾತ್ರ ಅನ್ವಯವಾಗತಕ್ಕವಲ್ಲ, ಇವುಗಳನ್ನು ಎಲ್ಲ ಕಾಲದ ಎಲ್ಲ ಕಾವ್ಯಗಳಿಗೂ ಅನ್ವಯಿಸಿ ನೋಡಲು ಸಾಧ್ಯ ಎನ್ನುವುದು ತೀರಾ ಮಹತ್ವದ ಸಂಗತಿ. ಎರಡನೆಯದು ಈ ಸಿದ್ಧಾಂತಗಳಿಗೆ ಕೊಟ್ಟ ನಿದರ್ಶನಗಳನ್ನು ಕುರಿತು ಶ್ರೀಕಂಠಯ್ಯನವರು ಮಾಡುವ ವಿವರಣೆ, ವ್ಯಾಖ್ಯಾನ ಮತ್ತು ವಿಮರ್ಶೆಗಳು, ಹೊಸಗನ್ನಡ ವಿಮರ್ಶೆಯ ಆರಂಭದ ಕಾಲದ ಮಾದರಿಗಳೂ ಆಗಿವೆ ಎನ್ನುವುದು ಇನ್ನೊಂದು ಮಹತ್ವದ ಸಂಗತಿ. ‘ವ್ಯಂಜಕಸಾಮಗ್ರಿ’ ಎನ್ನುವ ಇಡೀ ಅಧ್ಯಾಯದ ತುಂಬ ಶ್ರೀಕಂಠಯ್ಯನವರು ಕೊಡುವ ಉದಾಹರಣೆಗಳೂ ಅವುಗಳನ್ನು ಕುರಿತು ಅವರು ಮಾಡುವ ವಿಮರ್ಶೆ, ಈ ದಿನ ನಾವು ಯಾವುದನ್ನು ‘ಪ್ರಾಯೋಗಿಕ ವಿಮರ್ಶೆ’ (Practical criticism) ಎನ್ನುತ್ತೇವೆಯೋ ಅದನ್ನು ನೆನಪಿಗೆ ತರುತ್ತದೆ. ಹಳಗನ್ನಡ ಹಾಗೂ ಹೊಸಗನ್ನಡ ಸಾಹಿತ್ಯದ ನಿದರ್ಶನಗಳನ್ನು ಕುರಿತು ಅವರು ಕಾವ್ಯಮೀಮಾಂಸೆಯ ಚೌಕಟ್ಟಿನಲ್ಲಿ ಮಾಡಿದ ವಿಮರ್ಶೆಗಳು, ಅವರ ಅಂತರ್‌ದೃಷ್ಟಿ (Insight)ಯನ್ನೂ, ವಿಮರ್ಶನ ಸಾಮರ್ಥ್ಯವನ್ನೂ ಪ್ರಕಟಿಸುವುದಲ್ಲದೆ, ಕನ್ನಡ ವಿಮರ್ಶಕರ ಮೇಲೆ ವಿಶೇಷವಾದ ಪ್ರಭಾವವನ್ನೂ ಬೀರಿವೆ. ಆದರೆ, ಭಾರತೀಯ ಕಾವ್ಯಮೀಮಾಂಸೆಯ ತತ್ವಗಳನ್ನೆ ಅನ್ವಯಿಸಿ, ಕೃತಿ ವಿಮರ್ಶೆ ಮಾಡುವ ಸಾಧ್ಯತೆಗಳನ್ನು ಈ ಕೃತಿಯ ಮೂಲಕ ತೀ.ನಂ.ಶ್ರೀ ಅವರು ತೋರಿಸಿಕೊಟ್ಟರೂ, ಮುಂದಿನ ವಿಮರ್ಶಕರು ಅದನ್ನೊಂದು ಪರಂಪರೆಯಾಗಿ ಬೆಳೆಯಿಸದೆಹೋದದ್ದು ನಮ್ಮ ವಿಮರ್ಶೆಯ ಆಶ್ಚರ್ಯಗಳಲ್ಲಿ ಒಂದು ಎಂದು ಹೇಳಬಹುದು. ಯಾಕೆಂದರೆ ಈ ಕೃತಿಯ ನಂತರದ ಕಾಲದಿಂದ ಈ ಹೊತ್ತಿನವರೆಗೆ ಕನ್ನಡ ವಿಮರ್ಶೆ ಬಹುಮಟ್ಟಿಗೆ ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ದಟ್ಟವಾದ ಪ್ರಭಾವಕ್ಕೆ ಒಳಗಾಯಿತು. ಹಾಗಾದದ್ದರಿಂದ ಹೊಸಗನ್ನಡ ವಿಮರ್ಶೆಗೆ ಹೊಸ ಆಯಾಮಗಳು ಪ್ರಾಪ್ತವಾದುವೆಂಬುದನ್ನು ಮರೆಯುವಂತಿಲ್ಲವಾದರೂ, ತೀ.ನಂ.ಶ್ರೀ. ಅವರ ಭಾರತೀಯ ಕಾವ್ಯಮೀಮಾಂಸೆ, ‘ಭಾರತೀಯ ವಿಮರ್ಶಾಕ್ರಮ’ವೊಂದರ ಸಾಧ್ಯತೆಯನ್ನು ತೋರಿಸಿದರೂ, ಸಮಕಾಲೀನ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಸಮಾನಾಂತರವಾದ ನಮ್ಮದೇ ಆದ ವಿಮರ್ಶಾ ಪದ್ಧತಿಯೊಂದನ್ನು ನಾವು ಬೆಳಸಲಾರದೆ ಹೋದೆವು ಎಂಬುದನ್ನು ಒಪ್ಪಿಕೊಳ್ಳಲೇ- ಬೇಕಾಗುತ್ತದೆ.

ಶ್ರೀಕಂಠಯ್ಯನವರ ‘ಭಾರತೀಯ ಕಾವ್ಯಮೀಮಾಂಸೆ’ಯನ್ನು ಓದಿ ಮುಗಿಸಿದಾಗ, ಇದ್ನೊಂದು ಅಪೂರ್ವ ವಿದ್ವತ್ ಸಾಹಸ ಎಂದು ಯಾರಿಗಾದರೂ ಅನ್ನಿಸುತ್ತದೆ. ‘ಭಾರತೀಯ ಕಾವ್ಯಮೀಮಾಂಸೆ’ಯ ಬಗೆಗೆ ಅದನ್ನು ಸಾವಿರ ವರ್ಷಗಳ ಕಾಲ ಬೆಳೆಯಿಸಿದ ಮೇಧಾವಿಗಳ ಸಾಧನೆಯ ಬಗೆಗೆ ಗೌರವ ಹುಟ್ಟುವುದಲ್ಲದೆ, ಇಂಥ ಹಿನ್ನೆಲೆಯ ಅರಿವಿಲ್ಲದೆ ಹೋದರೆ ಆಧುನಿಕ ಸಾಹಿತ್ಯ ವಿಮರ್ಶಕರಿಗೆ ಆಗುವ ನಷ್ಟ ಎಷ್ಟೆಂಬುದನ್ನೂ ಪರೋಕ್ಷವಾಗಿ ಸೂಚಿಸುತ್ತದೆ. ಶ್ರೀಕಂಠಯ್ಯನವರ ಆಗಾಧವಾದ ವಿದ್ವತ್ತು, ಸಂಶೋಧನ ದೃಷ್ಟಿ, ವಿಮರ್ಶನ ಶಕ್ತಿ, ‘ಪಾಂಡಿತ್ಯಕ್ಕೆ ಪರಿಮಳವನ್ನು ಕಟ್ಟುವ ರಸಿಕತೆ’, ಅಕೃತಕವಾದ, ನಿಷ್ಕೃಷ್ಟವಾದ ನಿರೂಪಣೆ, ಇವೆಲ್ಲ ಗುಣಗಳಿಂದ ‘ಭಾರತೀಯ ಕಾವ್ಯಮೀಮಾಂಸೆ’ ಖಂಡಿತವಾಗಿಯೂ ಒಂದು ‘ಆಚಾರ್ಯ ಕೃತಿ’ (Masterpiece) ಎಂಬ ಪ್ರಶಂಸೆಗೆ ಅರ್ಹವಾಗಿದೆ.

-೧೯೭೬


[1] ಈ ಲೇಖನದಲ್ಲಿ ಉದ್ದಕ್ಕೂ ಉದಾಹರಿಸಿರುವ ವಾಕ್ಯಗಳು, ‘ಭಾರತೀಯ ಕಾವ್ಯಮೀಮಾಂಸೆ’ಯ ತಿದ್ದಿದ ಎರಡನೆಯ ಮುದ್ರಣ (೧೯೬೧)ದಿಂದ.