ಗ್ರಾಮದೇವತೆಗಳ ಬಗೆಗೆ ನಂಬಿಕೆ ಸಂಪ್ರದಾಯಗಳು ಮಾನವ ಜೀವನದಲ್ಲಿ ಹಾಸು ಹೊಕ್ಕಾಗಿ ಬೆಳೆದು ಕೊಂಡು ಬಂದಿವೆ. ಮಾನವನು ಆರಂಭದಿಂದಲೂ ದೇವತೆಗಳ ಬಗೆಗೆ ಇರಿಸಿಕೊಂಡ ಭಕ್ತಿ ಅನನ್ಯವಾಗಿದೆ. ಮಾನವನ ಧಾರ್ಮಿಕ ಇತಿಹಾಸವನ್ನು  ಅವಲೋಕಿಸಿದಾಗ, ಅವನಲ್ಲಿ ನಂಬಿಕೆಯು ಪ್ರಾರಂಭದಿಂದಲೂ ಘನೀಭೂತವಾಗಿರುವುದು ಕಂಡುಬರುತ್ತದೆ. ಮಾನವ ತನ್ನ ರಕ್ಷಣೆಗಾಗಿ ನಿರ್ಮಿಸಿಕೊಂಡಂತಹ ದೇವತೆಗಳಲ್ಲಿ ಚೇತನಶಕ್ತಿ ಹುದುಗಿಕೊಂಡಿದೆಯೆಂದು ನಂಬಿದನು ಅಲ್ಲದೆ ಅದರಿಂದ ಪ್ರಯೋಜನ ಪಡೆದುಕೊಳ್ಳಲೂ ಯತ್ನಿಸಿದನು. ಹೀಗಾಗ ನಂಬಿಕೆಯ ಆಧಾರದ ಮೇಲೆ ದೇವತೆಗಳನ್ನು ಬೆಳೆಸಿಕೊಂಡು ಬದುಕಿದನು. ತಾನು ವಾಸಿಸುವ ಗ್ರಾಮದಲ್ಲಿ ಆ ದೇವತೆಗೆ ಸ್ಥಾನವನ್ನು ಕಲ್ಪಿಸಿಕೊಂಡು ಉಳಿಸಿದನು. ಆದರೆ ಕಾಲ ಬದಲಾದಂತೆ ಈ ರೀತಿಯ ನಂಬಿಕೆ ಹಾಗೂ ಸಂಪ್ರದಾಯಗಳು ಮೂಢನಂಬಿಕೆಯ ಹಾಗೂ ಮೂಢ ಸಂಪ್ರದಾಯಗಳೆಂದು ಕರೆಯಲ್ಪಟ್ಟರೂ ನಂಬಿಕೆಯ ಆಧಾರದ ಮೇಲೆ ಜೀವನ ಸಾಗಿಸುವ ಪ್ರಯತ್ನಗಳಾಗಿವೆ.

ಆದಿಕಾಲದಿಂದಲೂ ಮಾನವನು ಸಂಘಜೀವಿಯಾಗಿ ಬದುಕುತ್ತ, ಗೊತ್ತುಗುರಿಯಿಲ್ಲದೇ ಅಲೆಮಾರಿಯಾಗಿದ್ದ ಕಾಲವೊಂದಿತ್ತು. ಹೀಗೆ ಅಲೆಯುತ್ತಿದ್ದಾಗ ವನ್ಯಪ್ರಾಣಿಗಳಿಂದ, ನೈಸರ್ಗಿಕ ವಿಪತ್ತುಗಳಲಿಂದ, ಕುಲಬಾಂಧವರಿಂದ ಅನೇಕ ಬಾರಿ ಅಪಾಯಗಳು ಒದಗುತ್ತಿದ್ದವು. ಈ ವಿಪತ್ತು ಕೋಟಲೆಗಳನ್ನು ಎದುರಿಸಲಾಗದ ಸಂದರ್ಭದಲ್ಲಿ ಇವುಗಳ ನಿವಾರಣೆಗೋಸ್ಕರ ಅಗೋಚರ ಶಕ್ತಿಯನ್ನು ಆಶ್ರಯಿಸಿದ್ದು ಸಹಜವಿದೆ. ವಾಸ್ತವವಾಗಿ ಇಲ್ಲಿ ಕಂಡು ಬರುವ ಪ್ರಧಾನ ಅಂಶವೆಂದರೆ, ಮಾನವ ಅಂದು ಆ ಅಗೋಚರ ಶಕ್ತಿಗಳ ಮೇಲಿಟ್ಟ ಗಾಢವಾದ ನಂಬಿಕೆಗಳು ಬೆಳೆದು ಬಂದವು. ಬರಬರುತ್ತ ಮಾನವಿಕ ವಿಜ್ಞಾನದ ಹಲವು ವಿಷಯಗಳೊಂದಿಗೆ ನಿಕಟ ಸಂರ್ಪವನ್ನು ಹೊಂದಿತು.

ಬಹುಶಃ ಮಾನವನು ತನ್ನಬದುಕಿಗೆ ಒಂದು ಸ್ಥಿರವಾದ ಚೌಕಟ್ಟನ್ನು ನಿರ್ಮಿಸಿಕೊಳ್ಳುತ್ತಿದ್ದ ಹಂತದಲ್ಲೇ ಈ ನಂಬಿಕೆಗಳಿಗೆ ಬುನಾದಿ ಹಾಕಿದನೆಂದು ಹೇಳಬಹುದು. ಬಾಳಿನ ಅನುಭವ, ಈ ಅನುಭವದಿಂದುಂಟಾದ ಮಾನಸಿಕ ತಳಮಳ ಇವು ನಂಬಿಕೆಗಳ ಉಗಮಕ್ಕೆ ಪ್ರೇರಕಶಕ್ತಿಯಾಗಿರಬೇಕು. ವಿಧಿಯ ಕೈಗೊಂಬೆಯಾದ ಮಾನವ ಬದುಕಲಿಚ್ಛಿಸಿದಾಗ ಹಲವು ಶಕ್ತಿಗಳಿಗೆ ಮೊರೆ ಹೋಗಬೇಕಾಯಿತು. ನೈಸರ್ಗಿಕ ಕ್ರಿಯೆಗಳಾದ ಮಳೆ, ಗಾಳಿ, ನಿಸರ್ಗದಲ್ಲಿರುವ ಬೆಂಕಿ ನೀರು ಮುಂತಾದವುಗಳಲ್ಲಿ ದೈವತ್ವವನ್ನು ಕಾಣುವುದರಿಂದ ಸಿಕ್ಕ ಮಾನಸಿಕ ಸಮಾಧಾನ ಅವನಲ್ಲಿ ನಂಬಿಕೆಯನ್ನು ಬೆಳೆಸಿದವು. ಮಾನಸಿಕವಾಗಿ ಬೆಳೆದುಬಂದ ಈ ಪೂಜ್ಯ ಭಾವನೆ ಮುಂದೆ ಶಾಬ್ದಿಕವಾಗಿ ಎಡೆಮಾಡಿಕೊಟ್ಟಿತು.

೧ ಬನ್ನಿಗಿಡವು ದೇವರ ಸಮಾನ ಒದೆಯಬಾರದು.

೨ ಅರಳಿಮರದಲ್ಲಿ ಬ್ರಹ್ಮ ವಿಷ್ಣುಗಳಿರುತ್ತಾರೆ ಅದಕ್ಕೆ ಒದೆಯಬಾರದು.

೩ ಗಂಗೆಗೆ ಕಲ್ಲನ್ನು ಎಸೆಯಬಾರದು ಹಾಗೇ ಉಗಳಲೂಬಾರದು.

ಈ ರೀತಿಯಾಗಿ ಹಲವು ಶಕ್ತಿಗಳನ್ನು ದೇವರೆಂದು ನಂಬಿ ಪೂಜಿಸುತ್ತಾ ಒಂದಲ್ಲಾ ಒಂದು ರೀತಿಯಲ್ಲಿ ಅವುಗಳನ್ನು ಒಲಿಸಿಕೊಳ್ಳಲು ಯತ್ನಿಸಿದನು. ಜೊತೆಗೆ ಅತಿಮಾನುಷ ಶಕ್ತಿಯಾದ ದೆವ್ವದ ಕಲ್ಪನೆಯೂ ಅವನಲ್ಲುಂಟಾಯಿತು. ಅಸ್ವಾತ್ವಿಕವಾದ ದೆವ್ವ-ಭೂತಗಳ ಕಲ್ಪನೆಯಿಂದಾಗಿ ಮಾನವನ ನಂಬಿಕೆಗಳು ಇನ್ನಷ್ಟು ಹುಟ್ಟಿಕೊಂಡವು. ತನ್ನ ಸುತ್ತಮುತ್ತಲ ನೈಸರ್ಗಿಕ ವಸ್ತುಗಳಲ್ಲಿ ದೆವ್ವ ಭೂತಗಳನ್ನು ಕಾಣತೊಡಗಿದನು.

೧ ಹುಣಸೆಮರದಲ್ಲಿ ಸಾಮಾನ್ಯವಾಗಿ ದೆವ್ವಗಳು ಹೆಚ್ಚಾಗಿ ವಾಸಿಸುತ್ತವೆ.

೨ ಮನೆಯ ಮುಂಬಾಗಿಲ ಮೇಲೆ ‘ನಾಳೆ ಬಾ’ ಎಂದು ಬರೆದರೆ ಒಳ್ಳೆಯದು.

೩ ಊರ ಮುಂದಿನ ಆಲದ ಮರದ ಬಳಿ ರಾತ್ರಿ ಹೊತ್ತು ಹೋಗಬಾರದು.

ಎಂಬ ನಂಬಿಕೆಯ ಉಕ್ತಿಗಳು ನಿರ್ಮಾಣವಾದವು. ಈ ದೆವ್ವಗಳು ರಾತ್ರಿ ಬಾಗಿಲಿಗೆ ಬಂದು ಮಾನವನನ್ನು ಕರೆಯುತ್ತವೆ. ಪ್ರತಿಕ್ರಿಯೆ ಬಂದಾಗ ಆಪತ್ತು ಖಂಡಿತ ಎಂಬ ನಂಬಿಕೆ.

ಈ ರೀತಿಯ ನಂಬಿಕೆಗಳು ಒಳ್ಳೆಯವಿರಲಿ ಕೆಟ್ಟವಿರಲಿ ಅವನ್ನು ನಂಬಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಮಾತ್ರ ಜನರಲ್ಲಿ ಬೇರೂರಿರುವುದು ಕಂಡು ಬರುತ್ತದೆ. ನಂಬಿಕೆಗಳು ಸಂಪ್ರದಾಯ ಮೂಲದಿಂದ ಬಂದು ಆಚರಣೆಯಲ್ಲಿ ಕೂಡಿಕೊಂಡಿರುತ್ತವೆ. ಆದ್ದರಿಂದ ನಂಬಿಕೆಗಳಿಗೂ, ಸಂಪ್ರದಾಯಗಳಿಗೂ ಪೂರಕ ಸಂಬಂಧ ಬೆಳೆದುಕೊಂಡು ಬಂದಿದೆ. ಇವು ಜನಾಂಗಗಳ ಸ್ಮೃತಿಯಲ್ಲಿ ಹುದುಗಿ ಜನರ ಜೀವನವನ್ನು ನಿರ್ದೇಶಿಸುವ ಶಕ್ತಿಯನ್ನು ಪಡೆದಿರುತ್ತವೆ. ಮೊದಲು ಮನುಷ್ಯನಿಗೆ ಬದುಕಲು ಬೇಕಾದದ್ದು ಮಾನಸಿಕ ಬಲ ಮತ್ತು ಒಪ್ಪಿಕೊಂಡು ಬಂದ ಪರಂಪರೆ ಇವು ನಂಬಿಕೆ ಮತ್ತು ಸಂಪ್ರದಾಯಗಳಿಂದ ಪ್ರೇರಣೇ ಪಡೆದಿರುತ್ತವೆ. ಸಂಪ್ರದಾಯ ಮಾನವ ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಹಬ್ಬಿಕೊಂಡಿರುವುದರಿಂದ ಅದಿಲ್ಲದೇ ಯಾವುದೇ ರೀತಿಯ ಮಾನವ ಆಲೋಚನೆ, ಕ್ರಿಯೆಗಳು ಇರುವುದಿಲ್ಲ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. “ಮನುಷ್ಯನ ವೈಯಕ್ತಿಕ ಕ್ರಿಯೆಗಳು ತಾನು ಬದುಕುತ್ತಿರುವ ಸಮುದಾಯದಲ್ಲಿ ಒಂದು ವೇಳೆ ಸ್ವೀಕೃತವಾದರೆ ಅವುಗಳೇ ವಾಡಿಕೆಗಳಾಗುತ್ತವೆ”. ಸಂಪ್ರದಾಯಗಳು ವಾಡಿಕೆಗಳ ಪ್ರಪಂಚದ ಒಂದು ಅಂಗ ಎಂದು ತಿಳಿಯಲಾಗುತ್ತದೆ.

“ಸಂಪ್ರದಾಯ ಪರಂಪರೆಯಿಂದ ಬಂದ ಒಂದು ಗುಂಪಿನ ಆಚರಣೆಗಳ ಮೊತ್ತವಾಗಿದೆ” ಹೀಗೆ ನಡೆದು ಬಂದ ಸಂಪ್ರದಾಯಗಳು ಸಮಾಜದ ಒಪ್ಪಿಗೆಯನ್ನು ಪಡೆದು ನಂತರ ಚಲಾವಣೆಗೆ ಬಂದಿರುತ್ತವೆ.

(೧) ಕನಸಿನಲ್ಲಿ ಮದುವೆಯಾಗಬಾರದು.

(೨) ಕನಸಿನಲ್ಲಿ ಫಲಗಳು ಕಂಡರೆ ಅಶುಭ.

(೩) ಕನಸಿನಲ್ಲಿ ಹಾವು ಕಚ್ಚಿದರೆ ಒಳ್ಳೆಯದು.

(೪) ಕನಸಿನಲ್ಲಿ ಕೆಟ್ಟದ್ದು ಕಂಡರೆಂದು ನಿಜವಾಗಿಯೂ ಒಳ್ಳೆಯದಾಗುತ್ತದೆ. ಇಂಥ ನಂಬಿಕೆಗಳು ಸಂಪ್ರದಾಯದ ಹಿನ್ನೆಲೆಯಲ್ಲಿ ಬೆಳೆದು ಕೊಂಡು ಬಂದಿರುತ್ತವೆ.

ಜನರ ನಿತ್ಯಬದುಕಿಗೂ ಮತ್ತು ದೇವತೆಗಳನ್ನು ಕುರಿತು ಇರುವ ನಂಬಿಕೆಗಳಿಗೂ ಅನ್ಯೋನ್ಯ ಸಂಬಂಧವಿರುವುದು ಕಂಡು ಬರುತ್ತದೆ. ಜನರ ಆಂತರಿಕ ಭಾವನೆ ಮತ್ತು ಮೂಲ ಸಂಸ್ಕೃತಿ ಸಂಪ್ರದಾಯಗಳನ್ನು ತೋರುಸುವಂಥ ನಂಬಿಕೆಗಳು ಮುಖ್ಯವಾಗಿರುವುದರಿಂದ ಅವುಗಳನ್ನು ಕಡೆಗಣಿಸುವಂತಿಲ್ಲ. ಇದಕ್ಕೆ ಜಾನಪದ ಸಾಹಿತ್ಯವೇ ಸಾಕ್ಷಿ. ಜನರು ಇಂದು ಎಲ್ಲವನ್ನೂ ನಂಬುತ್ತಿಲ್ಲವಾದರೂ ಪದೇ ಪದೇ ಅವುಗಳನ್ನು ಹೇಳುವುದರ ಮೂಲಕ ಅಥವಾ ಹಾಡುವುದರ ಮೂಲಕ ಸಂತೋಷ ಪಡುತ್ತಿದ್ದಾರೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಅಕ್ಷರಸ್ಥರು ಕೂಡಾ ಒಂದಲ್ಲಾ ಒಂದು ರೀತಿಯಲ್ಲಿ ಇವುಗಳ ಬಂಧನದಿಂದ ಕಳಚಿಕೊಳ್ಳಲು ಸಾಧ್ಯವಾಗಿಲ್ಲ.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ ದೇವರು ಮತ್ತು ದೇವತೆ ಎಂಬ ವಸ್ತು ನಂಬಿಕೆಯ ತಳಹದಿಯ ಮೇಲೆ ಮೊದಲಿನಿಂದಲೂ ಸ್ಥಿರವಾಗಿ ನಿಂತಿದೆ. ಆದರೆ ವೃತ್ತ, ಕಾಲ, ದೇಶಕ್ಕೆನುಗುಣವಾಗಿ ಅವು ಬೆಳೆಯುತ್ತವೆ, ಬದಲಾವಣೆ ಹೊಂದುತ್ತವೆ. ಆದರೂ ಜಾನಪದ ಮೂಲ ಅಂಶಗಳು ಅವುಗಳಲ್ಲಿ ಉಳಿದಿರುತ್ತವೆ. ಗುಣದ ದೃಷ್ಟಿಯಿಂದ ಭಾರತೀಯರಿಗೆ ನರಿ ವಂಚಕ ಪ್ರಾಣಿಯಾದರೆ. ನೈಜೀರಿಯನ್ನರಿಗೆ ಆಮೆ ವಂಚಕ ಪ್ರಾಣಿಯಾಗಿರುತ್ತದೆ. ಇವೆರಡರ ನಡುವಿನ ದೇಶ ವಿಭಿನ್ನವಾದರೂ ಬಳಿಸುವ ಉಪಮೆ ಬೇರೆಯಾದರೂ ಆಶಯ ಮಾತ್ರ ಒಂದೇ ಆಗಿದೆ.

ವಿಜ್ಞಾನ ಹಾಗೂ ತಂತ್ರಜ್ಞಾನಗಳು ಬೆಳೆಯುತ್ತಾ ಜೀವನದ ದೃಷ್ಟಿಧೋರಣೆಗಳು ಹೊಸ ದಿಕ್ಕನ್ನು ಪಡೆಯುತ್ತಿರುವ ಇಂದು ವೈಜ್ಞಾನಿಕ ದೃಷ್ಟಿ ನಂಬಿಕೆ ಹಾಗೂ ಸಂಪ್ರದಾಯಗಳ ಮೇಲೆ ಪ್ರಭಾವ ಬೀರುತ್ತವೆ. ಹೀಗೆ ಕಾರ್ಯ ವಿಜ್ಞಾನದ ಸಾಧನೆಗಳಿಂದಾಗಿ ವೃತ್ತಿ ಸಂಬಂಧವಾದ ಕ್ರಾಂತಿ ಅನ್ಯಾದೃಶ ಸಂಗತಿಗಳು ಜರುಗುತ್ತವೆ. ಇವುಗಳ ಹಿನ್ನೆಲೆಯಲ್ಲಿ ಹೊಸ ನಂಬಿಕೆಗಳು ಹುಟ್ಟಿಕೊಳ್ಳುವಲ್ಲಿ ಯಾವ ಸಂಶಯವೂ ಇಲ್ಲ.

ಇಂಥ ಜಾನಪದೀಯ ನಂಬಿಕೆಗಳಿಗೂ ವಿಜ್ಞಾನಕ್ಕೂ ಘರ್ಷಣೆ ಅನಿವಾರ್ಯ. ಕೆಲವು ನಂಬಿಕೆಗಳು ಅವೈಜ್ಞಾನಕವಾದರೂ ಹಲವು ನಂಬಿಕೆಗಳು ವಿಜ್ಞಾನಿಯನ್ನೂ ಸಮ್ಮೋಹಗೊಳಿಸಿ ಜಗತ್ತಿರುವತನಕವೂ ವಿಜೃಂಭಿಸುತ್ತವೆ. ಅವುಗಳಿಗೆ ಗೋರಿ ಕಟ್ಟುವ ವ್ಯಕ್ತಿ ಹುಟ್ಟಿಲ್ಲ. ಮುಂದೆಯೂ ಹುಟ್ಟಲಾರ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ.

ಇಂದಿನ ಈ ವೈಜ್ಞಾನಿಕ ಯುಗದಲ್ಲೂ ದೇವರ ಶಕ್ತಿಯನ್ನು ಕಂಡುಹಿಡಿಯುವ ಅಥವಾ ಹೊಸ ದೇವತೆಯನ್ನು ಸೃಷ್ಟಿಸುವ ಕಾರ್ಯ ನಡೆದಿಲ್ಲವಾದ್ದರಿಂದ ಹಳೆಯ ತಲೆ ಮಾರುಗಳಿಂದ ನಂಬಿಕೊಂಡು ಬಂದ ದೇವತೆಗಳ ಪ್ರಭಾವ ಇಂದಿನ ದಿನಮಾನದಲ್ಲೂ ಪ್ರಚಲಿತವಾಗಿರುತ್ತದೆ. ಶಿಷ್ಟ ಜನರು ದೇವತ್ವದ ಹೆಚ್ಚಳಿಕೆ ಹಾಗೂ ದೇವರ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ. ಅದೇ ದೇವರಲ್ಲಿ ನಂಬಿಕೆಯಿರುವ ಸುಶಿಕ್ಷಿತ ತಮ್ಮ ದೇವತೆಗಳಲ್ಲಿ ಹೆಚ್ಚಳಿಕೆ ಕಂಡು ಉಳಿದವುಗಳನ್ನು ಅಲಕ್ಷಿಸುವ ತ್ವೇಷಮಯ ವಾತಾವರಣ ಕಂಡು ಬರುತ್ತದೆ. ಆದರೆ ಜನಪದರಲ್ಲಿ ಒಂದು ಕೋಮಿನ ಜನಾಂಗ ಇನ್ನೊಂದು ಕೋಮಿನ ದೇವರನ್ನು ಆರಾಧಿಸುವದು ಕಂಡು ಬರುತ್ತದೆ.

ಮಾನವನು ನೆಮ್ಮದಿಗಾಗಿ ದೇವರು ದೇವತೆಗಳನ್ನು ಸೃಷ್ಟಿಸಿ ಆರಾಧಿಸುತ್ತಿದ್ದ ಇಂದಿನ ವೈಜ್ಞಾನಿಕ ವೈಚಾರಿಕ ಪ್ರಜ್ಞೆಗಳು ಆಕರ್ಷಿಸಿದರೂ ಸಾಂಸ್ಕೃತಿಕವಾಗಿ. ಅವನು ಬಾಳುತ್ತಿರುವ ಸಮುದಾಯದ ಹಲವು ಸಂಗತಿಗಳು ಅವನಲ್ಲಿ ಘನೀಭೂತವಾಗಿರುವುದು ಕಂಡು ಬರುತ್ತದೆ. “ತನಗೊದಗಿದ ಅಪಾಯ ಪರಂಪರೆಗಳು, ತನ್ನ ಭವಿಷ್ಯ ಇವುಗಳ ಬಗೆಗಿನ ಮಾನವನ ಭೀತಿಯೇ ದೇವರು ಹಾಗೂ ಮತಗಳ ಕಲ್ಪನೆಗೆ ಕಾರಣವಾಯಿತೆಂದು ಮಾನವ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ.” ಮಾನವನ ಬುದ್ಧಿ ಬೆಳೆದುಕೊಂಡು ಬಂದಂತೆ ದೇವರು ದೇವತೆಗಳಿಗೂ ಸಹ ತನ್ನಂತೆಯೇ ಮನುಷ್ಯನ ಸ್ವರೂಪ ಕೊಟ್ಟು ಭಕ್ತಿಯಿಂದ ನಡೆದುಕೊಳ್ಳಲಾರಂಬಿಸಿದನು. ಇದು ಬೇರೆ ಬೇರೆ ಬುಡಕಟ್ಟುಗಳ ಸಂಪ್ರದಾಯ, ಆರಾಧನೆ. ಪಿತೃಪೂಜಾ ಪದ್ಧತಿಗಳು, ದೇವತೋಪಾಸನೆ ಮೊದಲಾದವುಗಳಿಗೆ ಅಡಿಗಲ್ಲಾದವು. ಇಂದೂ ಇವು ಮುಂದುವರಿದು ಬಂದು ಆದಿಮಾನವನ ಮೂಲಗುಣಗಳಾದ ನಂಬಿಕೆಗಳು ಸಂಪ್ರದಾಯಗಳ ಪಳಿಯುಳಿಕೆಗಳು ನಶಿಸಿಹೋಗದೇ ಆಧುನಿಕ ಮಾನವನ ಬಾಳಿನ ಪ್ರಜ್ಞೆಯಲ್ಲಿ ಸುಭದ್ರವಾಗಿ ನಲೆಗೊಂಡಿವೆ ಎಂಬುದು ಸ್ಪಷ್ಟವಾಗುತ್ತದೆ.

ಮಾನವನು ದೇವರು-ದೇವತೆ ಕಲ್ಪನೆಯಲ್ಲಿ ಧರ್ಮ, ತತ್ವ, ಆಧ್ಯಾತ್ಮ ಸರ್ವಸ್ವವನ್ನೂ ಕಾಣುತ್ತಾನೆ. ಈ ನಂಬಿಕೆ ಶ್ರದ್ಧೆಗಳು ಬಾಳಿಗೆ ಅನುಕೂಲವಾಗುತ್ತವೆ. ಮುಂದೆ ದೇವರ ಪ್ರತಿಷ್ಠಾಪನೆ ದೇವಸ್ಥಾನದ ಸ್ಥಾಪನೆಯಿಂದಾಗಿ ಅವು ಭಕ್ತಿ, ವಿಚಾರಗಳ ಭಂಡಾರವಾಗಿ, ಸಾಮಾಜಿಕ ನೀತಿ ನಡಾವಳಿಯನ್ನು ಸಾಧಿಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸತೊಡಗಿ ಪುರುಷಾರ್ಥಗಳ ಸಾಧನಾರಂಗವಾಗಿ ಪರಿಣಮಿಸಿದವು.

ದೇವಾಲಯಗಳಲ್ಲಿ ಭಕ್ತನು ದೈವೀಶಕ್ತಿಯನ್ನು ಕಾಣುವ ಮೂಲಕ ಅನುಭವಿಸುವ ಮೂಲಕ. ಮಾನಸಿಕ, ದೈಹಿಕ ತೊಂದರೆಗಳಿಂದ ಮುಕ್ತನಾಗುತ್ತಾನೆ. ಅಲ್ಲಿಯ ಪ್ರಶಾಂತವಾದ ಭಕ್ತಿಯ ಗಂಭೀರ ವಾತಾವರಣ ಆತನ ಮೇಲೆ ಪ್ರಭಾವ ಬೀರುವ ಮೂಲಕ ವಿಶ್ರಾಂತಿಯನ್ನು ಪಡೆಯುತ್ತಾನೆ. ಭಕ್ತನು ಪ್ರತಿ ದಿನ ದೇವಾಲಯಕ್ಕೆ ಹೋಗುವುದರ ಮೂಲಕ ಅವನಲ್ಲಿ ಒಂದು ಮಾರ್ಗದರ್ಶಕ ಶಕ್ತಿಯು ಹುಟ್ಟಿಕೊಳ್ಳುತ್ತದೆ, ಇದರಿಂದಾಗಿ ಭಯ, ವಿವಂಚನೆಗಳು ಮಾಯವಾಗಿ ಅವನು ಜೀವನವನ್ನು ಭಕ್ತಿಮಾರ್ಗದಲ್ಲಿ ಮುನ್ನಡೆಸುತ್ತಾನೆ.

“ವೇದೋಕ್ತ ಪೌರಾಣಿಕ ಮತ್ತು ಜಾನಪದ ಪರಿವೀಕ್ಷಣೆಯ ಬೆಳಕಿನಲ್ಲಿ ದೇವಾಲಯದ ಜಾಗೃತ ಶಕ್ತಿಯನ್ನು ವೈಜ್ಞಾನಕ ಸಂಶೋಧನೆಯ ಬಲೆಗೆ ಹಚ್ಚಿದ್ದಾರೆ. ದೃಷ್ಟಾರರ ಮಂತ್ರಗಳಿರಲಿ , ತಾಂತ್ರಿಕ ಆರಾಧನೆಯ ಉಪಾಸನೆಗಳಿರಲಿ. ಅದಕ್ಕೆ ಒಂದು ಸ್ಪಷ್ಟ ಉದ್ದೇಶವಿತ್ತು. ಈಗ ಅದು ಮರೆಯಾಗಿದೆ. ತಿರುಳನ್ನು ಬಿಟ್ಟು ಮೇಲಿನ ಚರಟವನ್ನು ಅಗಿಯುವಂತೆ. ನಾವು ಬಹಳಷ್ಟು ಅದನ್ನು ಮೂಢನಂಬಿಕೆಯೆಂದು ಮೂಗು ಮುರಿಯುತ್ತಿದ್ದೇವೆ.”

ಮಾನವನ ಜೀವನದಲ್ಲಿ ವಿಜ್ಞಾನವು ಪ್ರವೇಶ ಮಾಡಿರುವುದರಿಂದ ಹಳೆ ಮತ್ತು ಹೊಸ ತಲೆಮಾರುಗಳಲ್ಲಿ ಅನೇಕ ಭಿನ್ನಾಭಿಪ್ರಾಯಗಳನ್ನು ದೇವತೆಗಳ ಹಿನ್ನೆಲೆಯಲ್ಲಿ ಕಾಣುವದು ಸಹಜವಿದೆ. ಆದ್ದರಿಂದ ಒಂದು ಕಡೆ ದೇವರಲ್ಲಿ ನಂಬಿಕೆ, ಇನ್ನೊಂದು ಕಡೆ ವಿಜ್ಞಾನದ ವಿಚಾರಧಾರೆಗಳ ಆಕ್ರಮಣದ ಇಕ್ಕುಳದಲ್ಲಿ ಸಿಕ್ಕ ಇಂದಿನ ಮಾನವ ಒದ್ದಾಡುತ್ತಿದ್ದಾನೆ. ಬರಬರುತ್ತ ವಿಜ್ಞಾನದ ಅಂಶಗಳು ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿ ಬೆಳೆದು ಕೊಳ್ಳಲಾರಂಭಿಸಿವೆ. ಆದರೂ ದೇವತೆಗಳ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ ಎಂಬುದು ಗಮನಾರ್ಹ.

ಎಡ್ವರ್ಡ ಜನ್ನರ್ ಸಿಡುಬು ರೋಗಕ್ಕೆ ಔಷಧವನ್ನು ಕಂಡುಹಿಡಿದದ್ದು, ಆಲ್‌ಫ್ರೇಡ್‌ ರಸೆಲ್‌ ವ್ಯಾಲೇಸ್‌ ವಶೀಕರಣ ವಿದ್ಯೆಯನ್ನು ಕುರಿತು ಗ್ರಂಥವನ್ನು ರಚಿಸಿರುವದು. ಇವುಗಳಿಂದ ಆಧುನಿಕ ವಿಜ್ಞಾನಿಗಳೇ ಹಳೆಯ ತಲೆಮಾರಿನ ನಂಬಿಕೆ ಸಂಪ್ರದಾಯಗಳಲ್ಲಿ ಆಸಕ್ತಿ ಇರಿಸಿಕೊಂಡಿರುವದು ಕಂಡು ಬರುತ್ತದೆ. ವಿಜ್ಞಾನವು ಮುಂದುವರಿದಂತೆ ಮಾನವನಲ್ಲಿ ಹೊಸ ಹೊಸ ವಿಚಾರಗಳು ಮೂಡಿಬರುತ್ತವೆ. ಈ ವಿಚಾರಗಳನ್ನು ಜೀವನದಲ್ಲಿ ಅಳವಡಿಸಲು ಪ್ರಯತ್ನಿಸುತ್ತಾನೆ. ಇದರಿಂದ ಅವನ ಮೇಲೆ ವಿಜ್ಞಾನವು ಹೇರುವ ಒತ್ತಡ, ಪುರಾತನವಾದ ಸಾಂಪ್ರದಾಯಿಕ ಸತ್ಯ ಸಂಗತಿಗಳು ಇವೆರಡರ ನಡುವ ಸ್ವೀಕಾರದ ಸಂದಿಗ್ಧ ವಾತಾವರಣ ಏರ್ಪಡುತ್ತದೆ. ಮನುಷ್ಯನು ಮಾನಸಿಕವಾಗಿ ಸೀಮಿತವಾಗಿದ್ದಾನೆ. ಅದನ್ನು ಮೀರಿ ದಾಟುವದು ಕಷ್ಟಸಾಧ್ಯವಾಗುತ್ತದೆ. ಖ್ಯಾತ ಮನೋವಿಜ್ಞಾನಿ ಕಾರ್ಲಝಂಗ್‌ನು ಈ ಉಭಯ ಸಂಕಟವನ್ನು ಕುರಿತು” ವಿಜ್ಞಾನಿಯು ಕೂಡಾ ಮನುಷ್ಯನೆ ಸ್ವಾಭಾವಿಕವಾಗಿಯೇ ತನಗೆ ತಿಳಿಸಿ ಹೇಳಲು ಸಾಧ್ಯವಿಲ್ಲದ ವಿಷಯಗಳನ್ನು ಅವನು ದ್ವೇಷಿಸುತ್ತಾನೆ. ಇಂದು ನಾವು ತಿಳಿದುಕೊಂಡಿರುವದಷ್ಟೇ ಪರಿಪೂರ್ಣವಾದ ಜ್ಞಾನವೆಂದು ನಂಬುವದು ಎಲ್ಲರಿಗೂ ಇರುವ ಭ್ರಮೆ.” ಎಂದು ಎತ್ತಿ ಹೇಳಿದ್ದಾನೆ. ಇದರಿಂದಾಗಿ ನಂಬಿಕೆ ಹಾಗೂ ಸಂಪ್ರದಾಯಗಳು ಶಾಶ್ವತವಾದವೆಂದು ಗೊತ್ತಾಗುತ್ತದೆ.

ಇಂದು ಬೆಳವಣಿಗೆ ಹೊಂದಿರುವ ಹೊಸ ವಿಜ್ಞಾನದ ಶಕ್ತಿಯ ಮೂಲಕ ಮಾನವ ತನ್ನ ಪ್ರಜ್ಞಾಶಕ್ತಿಯನ್ನು ಹೆಚ್ಚಿಸಿ ಕೊಂಡಿರುವುದು ನಿಜ, ಆದರೆ ಹಿಂದಿನ ಕಾಲದಲ್ಲಿದ್ದ ಋಷಿಗಳ ಹಾಗೂ ಸಾಧನೆಗೈದ ಮಾನವರ ಮನಸ್ಸು ಇಂದಿನ ವೈಜ್ಞಾನಿಕ ಶಕ್ತಿಗಳಿಗಿಂತಲೂ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದವು. ಈ ಸಂಗತಿಗಳು ದೇವತೋಪಾಸನೆಯ ಮಹತ್ವವನ್ನು ಖಚಿತಪಡಿಸುತ್ತವೆ. ಈ ಎಲ್ಲಾ ಶಿಷ್ಟ ಸಂಪ್ರದಾಯ ಮತ್ತು ಆಚರಣೆಗಳ ಮೂಲವನ್ನು ಗ್ರಾಮದೇವತೆಗಳ ದೈವೀಶಕ್ತಿಯಲ್ಲಿ ಕಾಣಬಹುದು. ಇದರ ಶಕ್ತಿ ಮಾನವನ ಮೇಲೆ, ಅವನ ವಿಕಾಸಶೀಲ ಪ್ರಗತಿಯಲ್ಲಿ, ಆತನ ದೇಹಗಳ ಮೇಲೆ ಮತ್ತು ಮನಸ್ಸುಗಳ ಮೇಲೆ ಪ್ರಭಾವ ಬೀರುತ್ತದೆ.” ದೇವಾಲಯಗಳು ಆಧ್ಯಾತ್ಮ ಶಕ್ತಿಯ ಕ್ರಿಯಾತ್ಮಕ ಪ್ರಸರಣದ ಜೀವಂತ ಕೇಂದ್ರಗಳಾಗಿವೆ” ಎಂಬ ಈ ಹೇಳಿಕೆಯು ಅತ್ಯಂತ ಉಚಿತವಾಗಿದೆ.

ಸರ್ವವ್ಯಾಪಿಯಾದ ಅಗೋಚರ ಶಕ್ತಿಯ ಮೇಲಿನ ನಂಬಿಕೆಯೂ ಮೂರು ತೆರನಾಗಿದೆ.

(೧) ಮಾತೃದೇವತೆಯಲ್ಲಿ ವಿಶೇಷವಾದ ನಂಬಿಕೆ.

(೨) ಗ್ರಾಮದೇವತೆಯಲ್ಲಿ ವಿಶೇಷ ನಂಬಿಕೆ.

(೩) ಪರ ಊರಿನ ಶಕ್ತಿ ದೇವತೆಗಳಲ್ಲಿ ವಿಶಿಷ್ಟವಾದ ನಂಬಿಕೆ.

ಹೀಗೆ ನಂಬಿಕೆಯು ಮೂರು ರೀತಿಯಲ್ಲಿ ಪ್ರಬಲವಾಗಿದೆ. ಜೀವನದಲ್ಲಿ ಕಷ್ಟಗಳು ಒದಗಿ ಬಂದಾಗ ಮೊದಲು ತಾಯಿಯಲ್ಲಿ ಪರಿಹಾರ ಮತ್ತು ಸಾಂತ್ವನ ಕಾಣಲು ಇಚ್ಛಿಸುವನು. ಅದು ತಾಯಿಯಲ್ಲಿ ಪರಿಹಾರವಾಗದಿದ್ದಾಗ ಗ್ರಾಮದೇವತೆಗೆ ಮೊರೆಹೋಗುವನು. ಆ ಗ್ರಾಮದೇವತೆಯಿಂದಲೂ ಫಲ ದೊರೆಯದಿದ್ದಾಗ, ಹೆಚ್ಚಿನ ಶಕ್ತಿಯನ್ನು ಪಡೆದಂತಹ ಪರ ಊರಿನ ಶಕ್ತಿ ದೇವತೆಗೆ ಮೊರೆಹೋಗುವನು. ಈ ಮೂರು ಹಂತಗಳಲ್ಲಿ ಕೊನೆಗೆ ತಾನು ಆರಾಧಿಸಿದ ಶಕ್ತಿ ದೇವತೆಯಿಂದ ನೆಮ್ಮದಿಯನ್ನು ಪಡೆದುಕೊಂಡೆ ಎಂಬ ಭಾವನೆ ಕಾಣುತ್ತದೆ. ಇಲ್ಲಿಯೂ ಕೂಡ ಅವನ ಮನಸ್ಸಿನ ಇಚ್ಛೆ ಇಡೇರಿತೋ ಅಥವಾ ಇಲ್ಲವೊ ಅನ್ನುವುದು ಸ್ಪಷ್ಟವಾಗುವುದಿಲ್ಲ. ಕೊನೆಗೆ ತಾನು ಆರಾಧಿಸಿದ ದೇವತೆಯಿಂದ ನೆಮ್ಮದಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾತ್ರ ನಡೆದಿರುತ್ತದೆ. ಆದರೆ ಹಲವರು ಇದನ್ನೇ ಮೂಢನಂಬಿಕೆ ಎಂದು ಭಾವಿಸುವುದೂ ಉಂಟು. ಕಲ್ಲುದೇವತೆ ಏನಾದರೂ ವರಕೊಡಬಹುದೆ? ಇದಕ್ಕೆ ದೇವತ್ವ ಸ್ಥಾನವನ್ನು ಕಲ್ಪಿಸಿದವರು ನಾವೇ ಎನ್ನುವ ಹೇಳಿಕೆಗಳ ನಡುವೆಯೂ ಇದರಿಂದ ಪ್ರಭಾವಿತರಾಗಿ ದೇವತೆಗಳ ಬಗ್ಗೆ ತಾತ್ಸಾರವನ್ನು ಮಾಡದೆ ದೇವತೆಗಳಲ್ಲಿ ಇರಿಸಿದ ಶ್ರದ್ಧೆ ನಂಬಿಕೆ ಅಪಾರವಾಗಿದೆ ಎಂಬುದು ಎದ್ದುಕಾಣುತ್ತದೆ.

ನಾಗರಿಕತೆಗಳು ಬದಲಾದಂತೆ ಸಂಸ್ಕೃತಿಗಳು ಬದಲಾಗುತ್ತವೆ. ಸಂಸ್ಕೃತಿಗಳು ಬದಲಾದಂತೆ ಜನರಲ್ಲಿ ನಂಬಿಕೆ ಸಂಪ್ರದಾಯಗಳು ಬದಲಾಗುವುದು ಸೃಷ್ಟಿಯ ಸಹಜಗುಣ. ಆದರೂ ಮೂಲಭೂತವಾಗಿ ಜೀವನದಲ್ಲಿ ಅಳವಡಿಸಿಕೊಂಡಿರುವಂಥ ಅಂಶಗಳು ಮಾತ್ರ ತೊಲುಗುವುದಿಲ್ಲ. ಇಂಥವುಗಳಿಗೆ ಮೂಢನಂಬಿಕೆಗಳೆಂದು ಹೆಸರಿಸಲಿಕ್ಕೆ ಆಗುವುದಿಲ್ಲ, ನಂಬಿಕೆಗಳಿಂದ ಫಲವನ್ನು ಪಡೆದುಕೊಂಡಂತಹ ಅನೇಕ ಪೌರಾಣಿಕ ಸಂಗತಿಗಳು ನಮ್ಮ ಸಾಹಿತ್ಯದಲ್ಲಿ ಇಂದಿನವರೆಗೆ ಕಣ್ಮುಂದೆ ನಿಂತುಕೊಂಡಿವೆ.

೧. ಕೋಳೂರು ಕೊಡಗೂಸಿನ ಮುಗ್ಧಭಕ್ತಿಗೆ ಶಿವ ಮೆಚ್ಚಿ ಹಾಲು ಕುಡಿದದ್ದು.

೨. ಕಣ್ಣಪ್ಪನ ಭಕ್ತಿಗೆ ಶಿವ ಒಲಿದದ್ದು.

ಹೀಗೆ ಅನೇಕ ನಾನಾತರಹದ ದೃಷ್ಟಾಂತಗಳು ಕಂಡುಬರುತ್ತವೆ. ಇವೆಲ್ಲವುಗಳನ್ನು ಭೌತ ವೈಜ್ಞಾನಕ್ಕಿಂತ ಮನೋವೈಜ್ಞಾನಿಕ ದೃಷ್ಟಿಯಿಂದ ನೋಡಬೇಕಾದದ್ದು ಮತ್ತು ಸಾಂಕೇತಿಕವಾಗಿ ಗ್ರಹಿಸುವದು ಬಹುಮುಖ್ಯವಾಗುತ್ತದೆ. ಆದರೂ ಎಲ್ಲ ಘಟನೆಗಳೂ ನಂಬಿಕೆಯ ತಳಹದಿಯ ಮೇಲೆ ನಿಂತಿರುವುದಂತೂ ಸತ್ಯ.

ಇಂದು ಇಪ್ಪತ್ತನೆಯ ಶತಮಾನಾಂತ್ಯದಲ್ಲಿ ಮಾನವ ಜೀವನದ ಮೇಲೆ ಹೊಸ ನಾಗರಿಕತೆಯ ಪ್ರಭಾವವು ದಟ್ಟವಾಗಿದೆ. ಅನೇಕ ವೈಜ್ಞಾನಿಕ ಸಲಕರಣೆಗಳು ನಿತ್ಯ ಜೀವನದಲ್ಲಿ ಉಪಯೋಗವಾಗುತ್ತಲಿವೆ. ಆದರೂ ಹಳೆಯ ತಲೆಮಾರಿನ ಸಂಪ್ರದಾಯ, ನಂಬಿಕೆಯಲ್ಲಿಯೇ ತಮ್ಮ ಬಾಳಿನ ನೆಮ್ಮದಿಯನ್ನು ಜನರು ಕಾಣುತ್ತಿರುವುದು ಸಹಜವಾಗಿ ಕಂಡುಬರುತ್ತದೆ. ಪ್ರತಿದಿನ ಪೂಜೆ, ನೇಮ, ವಿಧಿ-ವಿಧಾನಗಳು ಈ ಸಂಸ್ಕಾರಗಳು ನಾಗರಿಕರ ಆಚರಣೆಯಲ್ಲಿ ಕಂಡುಬರುವವು. ಇವುಗಳಿಂದ ಅವರು ಬಾಳಿನಲ್ಲಿ ನೆಮ್ಮದಿ ಕಾಣುವರು.

ಹಳ್ಳಿಗಳಲ್ಲಿ ವಾಸಿಸುವ ಮುಗ್ಧ ಜನರು ಅತಿ ಭಕ್ತಿಯಿಂದ ದೇವ ದೇವತೆಗಳನ್ನು ಆರಾಧಿಸುವುದು ಕಂಡು ಬರುತ್ತದೆ. ಅಲ್ಲದೆ ಗ್ರಾಮದೇವತೆಗಳಿಗೆ ಹೆಚ್ಚಿನ ಪ್ರಾಶಸ್ತ್ಯಕೊಟ್ಟಿರುವುದನ್ನು ಕಾಣುತ್ತೇವೆ. ಮಂಗಳವಾರ, ಶುಕ್ರವಾರ ದೇವಿಯ ವಾರಗಳೆಂದು ವಿಶೇಷ ಪೂಜೆಗಳನ್ನು ಜರುಗಿಸುವರು. ಭೂಮಿಗೆ ಬೀಜವನ್ನು ಹಾಕುವ ಪೂರ್ವದಲ್ಲಿ ದೇವಿಯ ಉಡಿಯನ್ನು ತುಂಬುವದು, ಈ ಅಂಶಗಳು ಇಂದಿನ ಕಾಲದಲ್ಲಿ ನಾಗರಿಕರು ಮತ್ತು ಹಳ್ಳಿಯ ಜನರಲ್ಲಿ ದೈವೀಶಕ್ತಿಯ ದಟ್ಟವಾದ ಪ್ರಭಾವವನ್ನು ಎತ್ತಿತೋರಿಸುತ್ತವೆ.

ಮಾನವ ಜೀವನಕ್ಕೆ ಶಾಂತಿ, ಸಮಾಧಾನ ಕೊಡತಕ್ಕ ಅಂಶಗಳೆಂದರೆ ಪ್ರೀತಿ, ಪ್ರೇಮ, ಸಲುಗೆ, ಧಾರ್ಮಿಕ ನಂಬುಗೆ ಇವುಗಳಿಂದ ವ್ಯಕ್ತಿ ನೆಮ್ಮದಿಯನ್ನು ಕಾಣುವನು. ಆದರೆ ಇವೆಲ್ಲವುಗಳಿಂದ ಅವನು ವಂಚಿತನಾದರೆ, ಬಾಳುವದು ಕಷ್ಟ, ಆಧುನಿಕ ಯುಗದಲ್ಲಿ ಅನೇಕ ಸೌಕರ್ಯಗಳಿದ್ದರೂ  ಅವು ಕೃತಕವಾಗಿ ಪರಿಣಮಿಸಿವೆ ಹಾಗೂ ಅವುಗಳ ಉಪಯೋಗ ಕ್ಷಣಿಕವಾಗಿರುತ್ತದೆ. ಸಂಶೋಧನೆಯ ಮೂಲಕ ಕೃತಕ ಮಳೆ, ಬೆಳೆಗಳು, ಗಾಳಿ ಇವೆಲ್ಲವುಗಳನ್ನು ಪಡೆಯಬಹುದು. ಆದರೆ ಈ ಎಲ್ಲ ಸೌಕರ್ಯಗಳು ಕ್ಷಣಿಕವಾಗಿ ತೋರುತ್ತವೆ. ಸುಖವಾಬಹುದು, ಆದರೆ ಶಾಶ್ವತವಲ್ಲ. ದೇವರು ದಯಪಾಲಿಸಿದ ಮಳೆ ಗಾಳಿ, ಬೆಳೆಗಳಲ್ಲಿ ಸಮೃದ್ಧತೆಯನ್ನು ಕಾಣುತ್ತೇವೆ. ಇವುಗಳಿಂದ ಶಾಶ್ವತವಾಗಿ ಸುಖ ಶಾಂತಿಗಳು ಲಭ್ಯ. ನೈಜತೆಯಲ್ಲಿರುವ ಸಂತೋಷ ಕೃತಕತೆಯಲ್ಲಿ ಹೇಗಿರಬೇಕು?

ಸೃಷ್ಟಿಯು ದೇವ ನಿರ್ಮಿತವಾದುದು ಅದನ್ನು ಬದಲಿಸುವದು ಅಸಾಧ್ಯ. ಆದ್ದರಿಂದ ಮನುಷ್ಯನ ಯೋಗ ಕ್ಷೇಮಗಳು ಆಗಬೇಕಾದರೆ ದೇವರಿಂದ ಮಾತ್ರ ಸಾಧ್ಯ ಎಂದು ಹೇಳಬಹುದು. ಮಳೆ, ಬೆಳಕು , ಗಾಳಿ, ಎಲ್ಲವೂ ದೇವರ ಕೈಯಲ್ಲಿವೆ. ಮಾನವ ಸೂತ್ರದ ಗೊಂಬೆಯಂತೆ ಆತ ಆಡಿಸಿದಂತೆ ಆಡಬೇಕು. ಈ ನಂಬಿಕೆಯೇ ಅವನ ಭಕ್ತಿ ದೇವತೆಗಳಲ್ಲಿ ಅಚಲವಾಗಲು ಕಾರಣವಾಗಿದೆ.

ಈ ವೈಜ್ಞಾನಿಕಯುಗದಲ್ಲಿಯೂ ಗ್ರಾಮದೇವತೆಗಳ ಬಗೆಗೆ ನಂಬಿಕೆ, ಸಂಪ್ರದಾಯಗಳು ಜನರ ಮನಸ್ಸಿನ ಮೇಲೆ ಅಚ್ಚಳಿಯದೆ ಉಳಿದುಕೊಂಡು ಬಂದಿವೆ. ಪುರಾತನ ಗುಡಿ ಗುಂಡಾರಗಳು ಕಾಲಕ್ರಮದಲ್ಲಿ ಆರಾಧನೆಯನ್ನು ಕಳೆದುಕೊಳ್ಳಬಹುದು. ದೇವತೆಗಳ ಸ್ಥಾನ ಮಾನ ಕುಗ್ಗಬಹುದು, ಆರಾದಿಸುವವರಿಲ್ಲದೇ ಹಾಳು ಬೀಳಬಹುದು. ಇವಕ್ಕೆ ಕಾರಣಗಳು ಏನೇ ಇದ್ದರೂ ಗ್ರಾಮನಗರೀಕರಣ, ಸಂಪ್ರದಾಯವಾದಿಗಳು, ವಲಸೆ ಹೋಗುವದು, ಪರಕೀಯರ ದಾಳಿ ಅಥವಾ ಇನ್ನಾವುದೇ ಕಾರಣದಿಂದ ಯಾವದೇ ದೇವತೆಯ ಆರಾಧನೆ ನಿಲ್ಲಬಹುದು. ಆದರೂ ಜನರು ಮಾನಸಿಕವಾಗಿ ದೇವರ ಕಲ್ಪನೆಯನ್ನು ಕಳೆದುಕೊಳ್ಳಲಾರರು. ಹಾಳು ಬಿದ್ದ ಗುಡಿಗಳ ಬಗೆಗೆ ತಮಗಿಂತ ಕೆಳವರ್ಗದ ದೇವರನ್ನು ಕುರಿತಂತೆ ತೆಗಳಿಕೆಯ ಮಾತುಗಳು ಕೇಳಿಬಂದರೂ ಕಾಲಕ್ರಮದಲ್ಲಿ ಹಾಳುಬಿದ್ದ ಗುಡಿಯ ಪಕ್ಕದಲ್ಲೇ ಹೊಸ ಗುಡಿ ಹುಟ್ಟಿಕೊಳ್ಳುವುದು ಕಂಡುಬರುತ್ತದೆ.  ಗ್ರಾಮದೇವತೆಯ ಪ್ರಭಾವದ ಆಕರ್ಷಣೆಗೆ ಶಹರದ ಜನರೂ ಆಪತ್ತಿನಲ್ಲಿ ಮೊರೆ ಹೋಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವರು. ನೈಸರ್ಗಿಕ ವಿಕೋಪಗಳಿಂದ ಭೀತಿಗೊಳಗಾಗಿ ಜನಸಮುದಾಯವಷ್ಟೇ ಅಲ್ಲ ಸರಕಾರವೂ ವಿವಿಧ ಆಚರಣೆಗಳಲ್ಲಿ ತೊಡಗುತ್ತಾರೆ. ಜನರು ಗ್ರಾಮದೇವತೆ ಮುನಿಸಿಕೊಂಡಿದ್ದಾಳೆಂದು ಗುಡಿಯನ್ನು ಜೀರ್ಣೋದ್ಧಾರ ಮಾಡಿಸಿ, ದೇವಿಗೆ ಉಡಿ ತುಂಬುತ್ತಾರೆ. ಏನೇ ಇದ್ದರೂ ದೇವತೆಗಳ ಆರಾಧನೆ ಮಾನಸಿಕ ಸಮಾಧಾನ ಹಾಗೂ ಲೌಕಿಕ ಲಾಭವನ್ನು ಅಪೇಕ್ಷಿಸುತ್ತದೆ.

ವಿಜ್ಞಾನ ಮತ್ತು ತಂತ್ರಜ್ಞಾನಗಳು ಹಳ್ಳಿಗಳಲ್ಲಿಯೂ ಬೆಳೆದುಕೊಂಡು ಬಂದಿವೆ. ಹಳ್ಳಿಗಳು ನಿಧಾನವಾಗಿ ನಗರೀಕರಣ ಹೊಂದಿವೆ. ಕಾಯಿಲೆಗಳಿಗೆ ಉತ್ತಮ ಉಪಚಾರ ಲಭ್ಯವಿದೆ. ಇಂತಹ ಕಾಲದಲ್ಲಿ ದೇವತೆಗೆ ಯಾಕೆ ಮೊರೆ ಹೋಗಬೇಕು? ಎಂಬ ವಿಚಾರವೂ ಕಂಡುಬರುತ್ತದೆ. ಈ ವಿಜ್ಞಾನಯುಗದಲ್ಲೂ ಪ್ರಕೃತಿಯ ರಹಸ್ಯಗಳನ್ನು ಮನುಷ್ಯನು ಪೂರ್ಣವಾಗಿ ತಿಳಿದುಕೊಳ್ಳಲು ಇನ್ನೂ ಅಸಮರ್ಥನಾಗಿದ್ದಾನೆ. ‘ಪ್ರಕೃತಿ ರಹಸ್ಯಗಳನ್ನು ತಿಳಿದು ಕೊಳ್ಳುವತನಕ ದೇವತೆಗಳಿಗೆ ಮೊರೆ ಹೋಗುವದು ಏನೂ ಆಶ್ಚರ್ಯವಲ್ಲ. ಇನ್ನು ಎಷ್ಟೋ ಶತಮಾನಗಳವರೆಗೂ ಇದು ಕನಸಿನ ಮಾತಾದ್ದರಿಂದ, ಅಲ್ಲಿಯವರೆಗೆ ತರ್ಕಕ್ಕೆ ಮೀರಿದ ವಿಷಯಗಳಿಗೆ ಸಂಬಂಧಿಸಿದಂತೆ ಶಿಷ್ಟ ಹಾಗೂ ಗ್ರಾಮದೇವತೆಗಳಿಗೆ ಮೊರೆ ಹೋಗಬೇಕಾಗುತ್ತದೆ.

ಈಗಿನ ವೈಜ್ಞಾನಿಕ ಆವಿಷ್ಕಾರಗಳಿಂದಾಗಿ ರೋಗ ರುಜಿನಗಳಿಗೆ ಸಂಪೂರ್ಣ ಪರಿಹಾರ ಸಾಧ್ಯ ಎಂಬ ಮಾತು ಗ್ರಾಮಾಂತರಗಳಲ್ಲಿನ್ನೂ ಸತ್ಯವಾಗಿಲ್ಲ. ಅವರು ಆಸ್ಪತ್ರೆ ಹಾಗೂ ವೈದ್ಯರನ್ನು ಕಾಣುವ ಮೊದಲೇ ತಮ್ಮ ಗ್ರಾಮದೇವತೆಗಳಿಗೆ ಮೊರೆ ಹೋಗಿರುತ್ತಾರೆ.

ಗ್ರಾಮದೇವತೆಗಳ ಪ್ರಮುಖ ನೆಲೆ ಎಂದರೆ ಗ್ರಾಮ ಎಂದು ಹೇಳಬಹುದು. ಈ ಗ್ರಾಮಗಳು ಗ್ರಾಮ ಸಂಸ್ಕೃತಿ ಸಂಪೂರ್ಣವಾಗಿ ನಶಿಸಿ ಹೋಗುವವರೆಗೆ ಗ್ರಾಮದೇವತೆಗಳು ಅಲ್ಲಿ ನೆಲೆಸಿರುವರು. ಎಷ್ಟೋ ನಗರಗಳಲ್ಲಿ ಕೂಡಾ ಜಾತ್ರೆ, ಹಬ್ಬ ಮುಂತಾದ ಆಚರಣೆಗಳ ನೆಪಮಾಡಿಕೊಂಡು ಗ್ರಾಮದ ಸಂಕೇತಗಳನ್ನು ಪುನಶ್ಚೇತನಗೊಳಿಸುವುದನ್ನು ಇಂದಿಗೂ ಕಾಣುತ್ತೇವೆ.

ಗ್ರಾಮದೇವತೆಗಳು ವೈಯಕ್ತಿಕವಾದ ಮಾನಸಿಕ ನೆಮ್ಮದಿಯನ್ನು ನೀಡುವುದರ ಜೊತೆಗೆ ಸಮುದಾಯದ ಸಂಘಟನಾಕಾರ್ಯವನ್ನು ಸಹನಿರ್ವಹಿಸುತ್ತಾರೆ. ಗ್ರಾಮದೇವತೆಗೆ ಬೇಕಾದಂತಹ ಅಥವಾ ಸೃಷ್ಟಿಗೆ ಬೇಕಾದಂತಹ ಸಾಮೂಹಿಕ ಕಾರ್ಯವನ್ನು ಸಂಘಟಿಸುವರು. ಆಕಾರ್ಯವನ್ನು ಗ್ರಾಮದೇವತೆಯ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಲು ಪ್ರಯತ್ನಿಸುವರು. ದೇವತೆಯ ಮುಂದೆ ಪರಿಹರಿಸಿಕೊಂಡ ಸಂಗತಿಗಳಿಗೆ ಎಲ್ಲರೂ ಒಪ್ಪಿಗೆ ನೀಡುವರು. ಈ ಎಲ್ಲ ಅಂಶಗಳನ್ನು ಅವಲೋಕಿಸುವುದರಿಂದ ಗ್ರಾಮದೇವತೆ ನಮ್ಮ ತಾಯಿಯಾಗಿದ್ದಾಳೆ. ನಾವು ಈಗಾಗಲೇ ಹೇಳಿರುವಂತೆ ಮಾತೃತ್ವದ ಅವಶ್ಯಕತೆ ಮನುಷ್ಯನಿಗೆ ಒಂದು ಮೂಲಭೂತ ಅಂಶವಿದ್ದ ಹಾಗೇ ಕಾಣುತ್ತದೆ. ಈ ಕಾರಣದಿಂದ ಕೂಡಾ ಗ್ರಾಮದೇವತೆ ಬಹುದೀರ್ಘಕಾಲದವರೆಗೆ ನಮ್ಮ ಹೃದಯದಲ್ಲಿ ನೆಲೆಯೂರಬಹುದಾಗಿದೆ. ಅಲ್ಲದೆ ಗ್ರಾಮದೇವತೆಗಳು ಇಲ್ಲದಂತಹ ಪ್ರದೇಶಗಳಿಲ್ಲ. ಗ್ರಾಮದ ವೈಭವೀಕರಣಕ್ಕೆ ಮತ್ತು ಗ್ರಾಮದ ಸಾಂಕೇತೀಕರಣಕ್ಕೆ ಮಾನವನನ್ನು ಕೂಡಾ ಗ್ರಾಮದೇವತೆಯ ಘಟ್ಟಕ್ಕೆ ಏರಿಸಿ ಅವರನ್ನು ಪೂಜಿಸುವದನ್ನು ನೋಡಿದರೆ ಜನರ ಮನಸ್ಸಿನಿಂದ ಗ್ರಾಮದೇವತೆಯ ಬಗೆಗೆ ನಂಬಿಕೆ ಸಂಪ್ರದಾಯಗಳು ಇನ್ನೂ ನಿರ್ಗಮಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು.