ಸಂಸ ವೈಯಕ್ತಿಕವಾಗಿಯೂ ಒಂಟಿ, ಸಾಹಿತ್ಯ ಪರಂಪರೆಯಲ್ಲಿಯೂ ಒಂಟಿ. ಅನೇಕರನ್ನು ಅನೇಕ ರೀತಿ ಕಾಡಿರುವ, ಇನ್ನೂ ಕಾಡುತ್ತಿರುವ ವ್ಯಕ್ತಿ. ಅವರ ಜೀವನವನ್ನಾಧರಿಸಿ, ಕೃತಿಯನ್ನಾಧರಿಸಿ, ಕನ್ನಡದಲ್ಲಿ ಕೆಲವು ಕೃತಿಗಳು ಹುಟ್ಟಿಕೊಂಡಿವೆ. ಕಿ. ರಂ. ನಾಗರಾಜರ ‘ನೀಗಿಕೊಂಡ ಸಂಸ’, ಪಿ. ಲಂಕೇಶರ ‘ಪೋಲೀಸರಿದ್ದಾರೆ ಎಚ್ಚರಿಕೆ’ ಮುಂತಾದವನ್ನು ಇಲ್ಲಿ ಹೆಸರಿಸಬಹುದು. ‘ವಿಗಡವಿಕ್ರಮರಾಯ’ ನಾಟಕದ ಸ್ಫೂರ್ತಿಯಿಂದ ಕೆ.ವಿ. ನಾರಾಯಣರು  ‘ಹುತ್ತವಬಡಿದರೆ’ ಎಂಬ ನಾಟಕವನ್ನು ರಚಿಸಿದ್ದಾರೆ. ಹೀಗೆ ಸಂಸ, ತಮ್ಮ ಜೀವನ ಹಾಗೂ ಸಾಹಿತ್ಯಗಳ ಮೂಲಕ ಕುತೂಹಲವನ್ನು ಇಂದಿಗೂ ಹುಟ್ಟಿಸುತ್ತಲೇ ಇರುವ ನಾಟಕಕಾರರಾಗಿದ್ದಾರೆ.