ಕರನಿರಾಕರಣೆಯ ಘೋಷಣೆ: ೧೯೩೧ ಜನೆವರಿ ೨೬ನೇ ದಿನದಂದು ಕರನಿರಾಕರಣೆಯ ಪ್ರತಿಜ್ಞಾ ಪತ್ರಿಕೆಗಳಿಗೆ ಅಂಕಿತಹಾಕಿ, ಪ್ರತಿಜ್ಞೆ ಮಾಡಿ, ರಾಷ್ಟ್ರಧ್ವಜದಡಿಯಲ್ಲಿ ನಿಂತು ಸ್ವಾತಂತ್ರ್ಯ ದಿನಾಚರಣೆಯನ್ನು ಪಾಲಿಸಲು ಅಂಕೋಲೆ ತಾಲೂಕಿನ ಹಳ್ಳಿಗರು ನಿಶ್ಚಯಿಸಿದರು. ಅಂದು ಹಳ್ಳಿಗರು ಪ್ರಭಾತಫೇರಿ, ಧ್ವಜವಂದನೆಗಳಿಂದ ಸ್ವಾತಂತ್ರ್ಯದಿನವನ್ನು ಆಚರಿಸಿದ ನಂತರ, ಖಾತೆದಾರರು ಧ್ವಜದಡಿಯಲ್ಲಿ ನಿಂತು ರಾಜಕೀಯಕ್ಕಾಗಿ ಕರನಿರಾಕರಣೆಯ ಘೋಷಣೆ ಮಾಡಿದರು. ಅಂದಿನ ಆ ದೃಶ್ಯವು ರೋಮಾಂಚಕಾರಿಯಾಗಿತ್ತು. ಈ ಪ್ರತಿಜ್ಞಾ ಘೋಷಣೆಯಲ್ಲಿ ಅಂಕೋಲಾ ತಾಲೂಕಿನ ನಾಡವರ ಸಮಾಜದ ಬಹುತೇಕ ಎಲ್ಲಾ ಹಳ್ಳಿಗಳೂ, ಆ ಹಳ್ಳಿಗಳಿಗಳಿಗೆ ಹೊಂದಿದ್ದ ಉಳ್ಳವರೆ ಗ್ರಾಮದ ಹಾಲಕ್ಕಿ ಒಕ್ಕಲ ಸಮಾಜದ ರಾಮದಾಸ ಗೌಡರ ಕುಟುಂಬದ ಒಂಬತ್ತು ಖಾತೆದಾರರೂ ಪಾಲ್ಗೊಂಡಿದ್ದರು. ಅದೇ ಪ್ರಕಾರವಾಗಿ ಅಂಕೋಲಾ ಪಟ್ಟಣದ ನಾಡ್ಕರ್ಣಿ ಕುಟುಂಬದ ಸುಬ್ರಾವ ನಾಡ್ಕರ್ಣಿ, ತ್ರಿಯಂಬಕ ನಾಡ್ಕರ್ಣಿ-ರಾಧಾಬಾಯಿ ನಾಡ್ಕರ್ಣಿ ಇವರ ಕರಬಂದಿ ಮಾಡಿದ್ದರು. ಅದರಂತೆ ಶಹರದ ಇನ್ನಿತರ ಖಾತೆದಾರರು ಸಹ ಹಳ್ಳಿಗರಿಗೆ ಸಹಾನುಭೂತಿ ತೋರಿಸಲು ರೂಪಾಯಿಗೆ ಒಂದಾಣೆಯಂತೆ ಕರಬಂದಿ ಮಾಡಿದ್ದರು ಆದರೆ, ಅವರೆಲ್ಲರ ತೀರ್ವೆಯು ಅಕ್ಕಿಮೂಡೆ ಜಪ್ತಿಯಿಂದ ತುಂಬಲ್ಪಟ್ಟಿತು. ಪೊಲೀಸರೇ ಲಿಲಾವಿನಲ್ಲಿ ಅಕ್ಕಿ ಮೂಡೆ ಪಡೆದು ತೀರ್ವೆ ತುಂಬಿದರು.

ಅಂಕೋಲಾ ತಾಲೂಕಿನ ಈ ಚಳವಳಿಯ ಸಂಘಟನೆ ಹಾಗೂ ಸಂಚಾಲನೆಯ ಕಾರ್ಯದ ನಾಯಕತ್ವವನ್ನು ಕರಮರಕರ ಹಾಗೂ ಭಾಸಗೋಡ ರಾಮ ನಾಯಕರು ವಹಿಸಿದ್ದರು. ಹಳ್ಳಿಗರು ಕೈಕೊಂಡ ಈ ಚಳವಳಿಗೆ ಇಡೀ ತಾಲೂಕಿನ ಎಲ್ಲಾ ಸಮಾಜದ ಜನರ ಬೆಂಬಲವಿತ್ತು. ಆದ್ದರಿಂದ ರೈತರ ಈ ನಿರ್ಧಾರವನ್ನು ತಿಳಿದು ಸರ್ಕಾರವು ನಾನಾ ತರದ ಉಪದೇಶ ಮಾಡಲು ಆರಂಭಿಸಿತು. ಸರ್ಕಾರದ ಸಾಮ, ದಾನ, ಭೇದೋಪಾಯಗಳೆಲ್ಲವೂ ವ್ಯರ್ಥವಾದ ಮೇಲೆ ದಂಡೋಪಾಯವೆಂದು ಜಪ್ತಿ ಕ್ರಮವನ್ನು ಆರಂಭಿಸಿತು. ಆದರೆ ಇಡೀ ತಾಲೂಕಿನಲ್ಲಿ ಪಂಚನಾಮೆಗೂ ಜನರು ಸಿಗಲಿಲ್ಲ. ಜಪ್ತಕಾಲಕ್ಕೆ ಸರ್ಕಾರದ ಕೈಗೆ ಸಿಗಬಾರದೆಂದು ರೈತರು ಸಾಧ್ಯವಾದಷ್ಟೂ ತಮ್ಮ ಒಡವೆ-ವಸ್ತು, ದವಸಧಾನ್ಯಗಳನ್ನು ಒಯ್ದು ಊರಿನಲ್ಲಿರುವ ಖಾತೆದಾರರಲ್ಲದವರ ಮನೆಯಲ್ಲಿ ಒಯ್ದು ಇಟ್ಟಿದ್ದರು. ಆ ಕಾಲಕ್ಕೆ ಅಂಥ ಒಕ್ಕಟ್ಟು, ವಿಶ್ವಾಸ, ಪ್ರಾಮಾಣಿಕತೆ ಈ ಹಳ್ಳಿಗಳಲ್ಲಿ ಇತ್ತು. ಖಾತೆದಾರರು ದಿನಬಳಕೆಗೆಂದು ಇಟ್ಟುಕೊಂಡ ಪಾತ್ರೆ-ಪಗಡೆ ಹಾಗೂ ದನ-ಕರಗಳನ್ನು ಸರ್ಕಾರವು ಜಪ್ತ ಮಾಡಲು ಆರಂಭಿಸಿತು. ಆದರೆ, ಆ ವಸ್ತುಗಳನ್ನು ಕೊಳ್ಳಲು ಅಲ್ಲಿ ಯಾರೂ ಸಿಗಲಿಲ್ಲ. ಆಮೇಲೆ ಸರ್ಕಾರವು ಕಾರವಾರದಿಂದ ಸರ್ಕಾರದ ಬಾಲಬಡಕರನ್ನು ಕರೆತಂದು ಮನಸಿಗೆ ಬಂದಂತೆ ಪಂಚನಾಮೆ ಮಾಡಿ, ಲಿಲಾವು ಮಾಡಹತ್ತಿತು. ಕಾರವಾರದಿಂದ ಕರೆತಂದ, ತಿಮ್ಮ ಕೊಯರು ನಾಯಕ ಎಂಬ ಒಬ್ಬ ಕನ್ನಡ ಶಾಲೆಯ ಮಾಸ್ತರನಿಗೆ ೭ ಎಮ್ಮೆಗಳು, ೩ ಆಕಳು, ೨ ಎತ್ತುಗಳು, ೨ ಕೋಣಗಳು, ೧ ಗಾಡಿ ಈ ರೀತಿ ಒಟ್ಟು ೧೫ ಲಿಲಾವು ಮೊಟ್ಟ ಮೊದಲು ಬಾಸಗೋಡದಲ್ಲಿ ನಡೆದಿತ್ತು. ಈ ಲಿಲಾವಿನ ರೀತಿಯನ್ನು ತಿಳಿದುಕೊಂಡರೆ ಆ ಕಾಲಕ್ಕೆ ಸರ್ಕಾರವು ಹೇಗೆ ವರ್ತಿಸುತ್ತಿತ್ತು ಎಂಬುದು ಮನವರಿಕೆಯಾಗುವ ಹಾಗಿದೆ. ಇದೇ ರೀತಿಯ ಪಂಚನಾಮೆ ಹಾಗೂ ಲಿಲಾವುಗಳು ಕರಬಂದಿ ಮಾಡಿದ ಎಲ್ಲ ಹಳ್ಳಿಗಳಲ್ಲಿ ನಡೆದಿದ್ದವು. ಆದರೂ ಗಾಂಧೀತತ್ವದಂತೆ ಯಾವುದನ್ನೂ ವಿರೋಧಿಸುವಂತಿದ್ದಿಲ್ಲ. ಆ ರೈತರು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಯಿಂದ ಸಾಕಿಸಲಹಿದ ಎತ್ತು, ಎಮ್ಮೆ, ಆಕಳುಗಳನ್ನೂ ಬೆಲೆ ಬಾಳುವ ಪಾತ್ರೆ-ಪಗಡೆಗಳನ್ನೂ ತಮ್ಮ ಕಣ್ಮುಂದೇ ಪರರು ಒಯ್ಯುವುದನ್ನು ಕಂಡೂ ಸಹಿಸಬೇಕಾಗಿತ್ತು. ಇಂಥ ಹಲವಾರು ಪ್ರಕರಣಗಳು ತಾಲೂಕು ತುಂಬಾ ನಡೆದಿದ್ದರು. ಆದರೆ, ಈ ಮಧ್ಯೆ ಗಾಂಧಿ-ಈರ್ವೀನ್ ಸಂಧಾನದ ಮಾತು ಕೇಳಿ ಬಂದದ್ದರಿಂದ ಮುಂದೆ ಸರ್ಕಾರವು ಹೆಚ್ಚು ದಬ್ಬಾಳಿಕೆ ನಡೆಸಲಿಲ್ಲ. ಈ ರೀತಿ ಜಪ್ತಿ ಕ್ರಮ, ಲಿಲಾವು ತಾಲೂಕು ತುಂಬಾ ನಡೆಯುತ್ತಿರುತ್ತಿದ್ದಂತೆಯೇ ಮಾರ್ಚ್‌ ೫ನೇ ತಾರೀಖಿಗೆ ಗಾಂಧೀ-ಈರ್ವೀನ್ ಒಪ್ಪಂದವಾದ ಸುದ್ದಿಯು ದಿನಾಂಕ ೮ಕ್ಕೆ ಅಂಕೋಲೆಗೆ ಬಂದು ಮುಟ್ಟಿತು. ಈ ಒಪ್ಪಂದದನ್ವಯ ಕರನಿರಾಕರಣೆಯನ್ನು ನಿಲ್ಲಿಸಿ, ಎಲ್ಲರೂ ತೀರ್ವೆ ಕೊಡತಕ್ಕದ್ದೆಂದು ಕರಮರಕರರು ಆದೇಶ ಕೊಟ್ಟರು. ಅದರಂತೆ ಎಲ್ಲರೂ ನಡೆದುಕೊಂಡರು. ಆದರೆ, ಆ ವರೆಗೆ ಮಾರಾಟವಾಗಿ ಹೋದ ದನಕರಗಳಾಗಲಿ, ಪಾತ್ರೆ-ವಸ್ತುಗಳಾಗಲಿ ತಿರುಗಿ ಸಿಗಲಿಲ್ಲ.

ಗಾಂಧಿಈರ್ವೀನ್ ಒಪ್ಪಂದದ ನಂತರ: ಗಾಂಧಿ-ಈರ್ವೀನ್ ಒಪ್ಪಂದವಾದ ಮೇಲೆ ವೈಸರಾಯರಾದ ಲಾರ್ಡ್‌ವೆಲ್ಲಿಂಗ್ಡನ್ನರು, ಮಹಾತ್ಮಾಜಿಯವರನ್ನು ೨ನೇ ದುಂಡು ಮೇಜಿನ ಪರಿಷತ್ತಿಗೆ ಕರೆದರು. ಆ ಪರಿಷತ್ತಿನಲ್ಲಿ ಮಹಾತ್ಮಾಜಿಯವರ ಸ್ವರಾಜ್ಯ ಬೇಡಿಕೆಗೆ ಮನ್ನಣೆ ದೊರೆಯುವುದೆಂದು ಭಾರತೀಯರು ನಂಬಿದ್ದರು. ಆದರೆ ಅಲ್ಲಿ ಆದದ್ದೇ ಬೇರೆ. ದುಂಡು ಮೇಜಿನ ಪರಿಷತ್ತು ವಿಫಲವಾಯಿತು. ಹೀಗಾದೀತೆಂದು ಮೊದಲೇ ತಿಳಿದಿದ್ದ ಹಾಗೂ ಒಪ್ಪಂದಕ್ಕೆ ಮನಸ್ಸಿಲ್ಲದ ಇಲ್ಲಿಯ ಬ್ರಿಟೀಷ್ ಸರ್ಕಾರವು, ಒಪ್ಪಂದ ವಿಫಲವಾದರೆ ದೇಶದಲ್ಲಿ ವ್ಯಾಪಕವಾದ ಚಳವಳಿ ನಡೆಯುವುದೆಂಬುದನ್ನು ತಿಳಿದಿದ್ದಿತು. ಆದ್ದರಿಂದ ಗಾಂಧಿ-ಈರ್ವೀನ್ ಒಂಪದಕ್ಕೆ ಸಹಿ ಬಿದ್ದ ಕೆಲದಿನಗಳಲ್ಲಿಯೇ ಜಿಲ್ಲಾ ಮೆಜಿಸ್ಟ್ರೇಟರಿಗೂ, ಜಿಲ್ಲಾ ಪೊಲೀಸ ಸುಪರಿಂಟೆಂಡೆಂಟರಿಗೂ ಗುಪ್ತ ಆಜ್ಞೆಯನ್ನು ಹೊರಡಿಸಿ, ಈ ಕೆಳಗಿನ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಂಡಿತು. ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳು, ಅವರ ವಿಳಾಸ, ಕಾಂಗ್ರೆಸ್ ಕಚೇರಿಗಳು ಇರುವ ಸ್ಥಳ, ಈ ಹಿಂದೆ ಸತ್ಯಾಗ್ರಹಿಗಳಲ್ಲಿ ಭಾಗ ತೆಗೆದುಕೊಂಡವರ ಹೆಸರು, ವಿಳಾಸ ಹಿಂದೂಸ್ತಾನಿ ಸೇವಾದಳದ ಪದಾಧಿಕಾರಿಗಳು ಮತ್ತು ವಿಳಾಸ ಹಾಗೂ ಸೇವಾದಳದ ಮುಖ್ಯ ಕಚೇರಿಗಳು, ನಗರ ಮತ್ತು ಹಳ್ಳಿಗಳಲ್ಲಿ ಮುಖ್ಯ ಸಂಘಟಿಕರಾಗಿದ್ದವರ ಹೆಸರು, ವಿಳಾಸ-ಕಾಯ್ದೆ ಭಂಗ ಚಳವಳಿಯಲ್ಲಿ ಶಿಕ್ಷೆ ಹೊಂದಿದವರ ಹೆಸರು, ವಿಳಾಸ, ಚಳವಳಿಗೆ ಅನುಕೂಲವಿರುವ ಪತ್ರಿಕೆಗಳ ಹೆಸರು, ವಿಳಾಸ, ರಾಜನಿಷ್ಠವಾದ ವ್ಯಕ್ತಿಗಳು, ಪತ್ರಿಕೆಗಳು ಅವುಗಳ ವಿಳಾಸ ಈ ಎಲ್ಲಾ ಮಾಹಿತಿಯನ್ನು ತರಿಸಿ ಇಟ್ಟುಕೊಂಡಿತು. ಅದೇ ಪ್ರಕಾರ ಮತ್ತೆ ಚಳವಳಿ ನಡೆದರೆ ಅದನ್ನು ಒಮ್ಮೆಲೇ ಬಗ್ಗು ಬಡಿಯಲು ಅನುಕೂಲವಾಗುವಂತೆ ಅನೇಕ ಸುಗ್ರೀವಾಜ್ಞೆಗಳನ್ನು ಸಿದ್ಧಗೊಳಿಸಿ ಇಟ್ಟಿತು.

ಮಹಾತ್ಮಾ ಗಾಂಧೀಜಿಯವರು ದುಂಡುಮೇಜಿನ ಷರತ್ತಿನಿಂದ ನಿರಾಶರಾಗಿ ೧೯೩೧ ರ ಡಿಸೆಂಬರ್ ೨೮ ರಂದು ಮುಂಬಯಿಗೆ ಬಂದರು. ಮಹಾತ್ಮರ ಸ್ವಾಗತಕ್ಕಾಗಿಯೂ ಮುಂಬೈಯಲ್ಲಿ ಸೇರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗಾಗಿಯೂ ಹೊರಟಂಥ ಪಂಡಿತ ನೆಹರೂ ಹಾಗೂ ಬ್ಯಾರಿಸ್ಟರ ಶೇರವಾಣಿ ಅವರನ್ನು ಸರ್ಕಾರವು ಮಾರ್ಗ ಮಧ್ಯದಲ್ಲಿಯೇ ಬಂಧಿಸಿತು ಹಾಗೂ ಅದೇ ದಿನ ಗಡಿನಾಡ ಗಾಂಧಿ, ಅವರ ಸಹೋದರ ಮತ್ತು ಅವರ ಅಣ್ಣನ ಮಗ ಇವರೆಲ್ಲರನ್ನು ೧೮೧೮ನೆಯ ರೆಗ್ಯುಮೇಶನ್ನಿನನ್ವಯ ಬಂಧಿಸಲಾಯಿತು. ಮರುದಿನವೇ ಮಹಾತ್ಮಾಜಿಯವರು ವೈಸರಾಯರೊಡನೆ ತಂತಿ ಮೂಲಕ ನಡೆಸಿದ ಮಾತುಕತೆ ಫಲಪ್ರದವಾಗಲಿಲ್ಲ. ೧೯೩೨ರ ಜನವರಿ ೪ ರಂದು ಮತ್ತೆ ೪ ಸುಗ್ರೀವಾಜ್ಞೆಗಳು ಹೊರಬಿದ್ದವು. ಈ ಸುಗ್ರೀವಾಜ್ಞೆಯ ಬಲದಿಂದ ಸರ್ಕಾರವು ಜನವರಿ ೪ ರಂದು ಗಾಂಧೀಜಿಯವರನ್ನು ಬಂಧಿಸಿತು ಮತ್ತು ಅದೇ ದಿನ ದೇಶದ ಯಾವತ್ತೂ ಮುಖಂಡರನ್ನು ಹುಡುಕಿ ಹುಡುಕಿ ಬಂಧಿಸುವ ಸತ್ರ ನಡೆಯಿತು. ಈ ರೀತಿ ಕಾಂಗ್ರೆಸ್ ಮುಖಂಡರನ್ನೆಲ್ಲ ಆರಿಸಿ, ಆರಿಸಿ ಬಂಧಿಸಿ ಕಾಂಗ್ರೆಸ್ ಸಂಸ್ಥೆಗಳೂ ಸೇವಾದಳ ಸಂಸ್ಥೆಗಳೂ ಅಕ್ರಮವೆಂದು ಸಾರಿ, ಅವುಗಳನ್ನು ವಶಪಡಿಸಿಕೊಂಡು ಚಳವಳಿಯ ಬೇರನ್ನೇ ಕಿತ್ತು ತೆಗೆಯುವದು ಸರ್ಕಾರದ ಗುರಿಯಾಗಿದ್ದಿತು. ಈ ಸುಗ್ರೀವಾಜ್ಞೆಯಂತೆ ಜನವರಿ ೨೬ನೆಯ ತಾರೀಖಿನ ದಿನ ಅಂಕೋಲೆಯ ಮುಖಂಡರಾದ ಶಾಮರಾವ ಶೇಣ್ವಿ, ಬಾಸಗೋಡ ರಾಮನಾಯಕ, ಜಿ.ಎಮ್. ಕಾಮತ ಮುಂತಾದ ಅನೇಕ ಮುಖಂಡರು ಬಂಧಿಸಲ್ಪಟ್ಟತು.

ತ್ಯಾಗದ ಪರಾಕಾಷ್ಠೆಯನ್ನು ಪ್ರದರ್ಶಿಸಿದ, ಅಂಕೋಲೆಯ ೧೯೩೨ನೆಯ ಕರಬಂದಿ ಚಳವಳಿ : ಈ ಸಾರೆ ಸರ್ಕಾರವು ತನ್ನ ಉಳಿವಿಗಾಗಿ ಎಂಥ ಕಠೋರಮಾರ್ಗವನ್ನಾದರೂ ಅನುಸರಿಸಲು ಸಿದ್ಧವಿತ್ತು. ಸರ್ಕಾರದ ಸಿದ್ಧತೆ ಆ ರೀತಿಯಾಗಿದ್ದರೆ, ಕಾಂಗ್ರೆಸ್ ಕಾರ್ಯ ಸಮಿತಿಯು, ಮಹಾತ್ಮಾಜಿಯವರ ಬಂದಕೂಡಲೇ ಅವರ ಸಲಹೆ ಪಡೆದು ಇಡೀ ರಾಷ್ಟ್ರಕ್ಕೆ ಕರನಿರಾಕರಣೆಯ ಹಾಗೂ ಎಲ್ಲ ಅನಿಷ್ಟ ಕಾಯ್ದೆಗಳ ಉಲ್ಲಂಘನೆ ಮಾಡತಕ್ಕದ್ದೆಂದು ಕರೆಕೊಟ್ಟಿತು. ಆದರೆ, ಸತ್ಯಾಗ್ರಹ ಮಾಡುವವರು ಈ ಕೆಳಗಿನ ಅಂಶಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕೆಂದು ತಿಳಿಸಿತು.

೧. ಜನರಿಗೆ ಅಹಿಂಸೆಯ ಸಂಪೂರ್ಣ ಅರ್ಥ ಮನದಟ್ಟಾಗುವವರೆಗೆ, ಯಾವುದೇ ಪ್ರಾಂತ, ಜಿಲ್ಲೆ ಅಥವಾ ಗ್ರಾಮವು, ಕಾಯ್ದೆ ಭಂಗವನ್ನು ಕೈಕೊಳ್ಳಕೂಡದು. ಜೀವದ ಪರಿವೆ ಹಿಡಿಯದೇ ಸ್ಥಿರ-ಚರ, ಸೊತ್ತಿನ ಆಸೆಬಿಟ್ಟು, ಜನರು ಹೋರಾಟದಲ್ಲಿ ಸೇರಲು ಸಿದ್ಧರಿರಬೇಕು.

೨. ಮನೋವಾಕ್ಕಾಯಗಳಿಂದ ಅಹಿಂಸೆಯ ಪಾಲನವಾಗಬೇಕು. ಲೋಕ ಕಂಟಕರಿಗೆ ಶಾಸನ ಮಾಡಬೇಕೆಂಬ ಭಾವನೆಗೆ, ಎಡೆಗೊಡೆ, ಅವರ ಹೃದಯ ಪರಿವರ್ತನಕ್ಕಾಗಿ, ತಮ್ಮ ಸತ್ಯಾಗ್ರಹದ ಪ್ರಯತ್ನಿವಿರುದೆಂಬುದನ್ನು ಜನರು ಚೆನ್ನಾಗಿ ಲಕ್ಷದಲ್ಲಿಡಬೇಕು.

೩. ಸರ್ಕಾರಿ ಅಧಿಕಾರಿಗಳ ಮೇಲೆಯೂ ಅವರಿಗೆ ಸಹಾಯ ಮಾಡುವವರ ಮೇಲೆಯೂ ಸಾಮಾಜಿಕ ಬಹಿಷ್ಕಾರ ಹಾಕಕೂಡದು.

೪. ವೇತನ ಕೊಟ್ಟು ಸ್ವಯಂ ಸೇವಕರನ್ನು ಸೇರಿಸಿಕೊಳ್ಳಕೂಡದು. ಆದರೆ ಸ್ವಯಂ ಸೇವಕರ ಉದರ ನಿರ್ವಾಹಕ್ಕೆ ತಕ್ಕಷ್ಟು ದ್ರವ್ಯದ ವ್ಯವಸ್ಥೆ ಮಾಡಬಹುದು. ಬಂಧಿತರ ಅಥವಾ ಮಡಿದವರ, ಹೆಂಡರು ಮಕ್ಕಳಿಗೆ ಶಕ್ಯವಿದ್ದರೆ ಧನಸಹಾಯ ನೀಡಬಹುದು.

೫. ಬ್ರಿಟೀಷ್-ಬ್ರಿಟೀಷೇತರ ಮತ್ತು ಎಲ್ಲ ವಿದೇಶಿ ಬಟ್ಟೆಗೆ ಬಹಿಷ್ಕಾರ ಹಾಕಬೇಕು.

೬. ಕಾಂಗ್ರೆಸ್ಸಿಗರೆಲ್ಲರೂ ಶುದ್ಧ ಖಾದಿಯನ್ನೇ ಉಪಯೋಗಿಸಬೇಕು. ದೇಶಿ ಗಿರಣಿಗಳ ಬಟ್ಟೆಗಳನ್ನು ಸಹ ಉಪಯೋಗಿಸಕೂಡದು.

೭. ಹೆಂಡದಂಗಡಿಗಳ ಹಾಗೂ ವಿದೇಶಿ ಜವಳಿ ಅಂಗಡಿಗಳ ಮುಂದೆ ಶಾಂತ ರೀತಿಯಿಂದ ಪಿಕೆಟಿಂಗ ನಡೆಸಬೇಕು. ಈ ಕಾರ್ಯವನ್ನು ಮುಖ್ಯವಾಗಿ ಸ್ತ್ರೀಯರು ಕೈಕೊಳ್ಳಬೇಕು.

೮. ಉಪ್ಪಿನ ಕಾಯ್ದೆ ಭಂಗವನ್ನು ಪುನಃ ಕೈಕೊಳ್ಳಬೇಕು.

೯. ದೊಣ್ಣೆ, ಗುಂಡುಗಳಿಗೆ ಹೆದರದೆ ನಿಂತಲ್ಲಿ ನಿಲ್ಲಲು ಧೈರ್ಯವಿದ್ದವರೇ ಮೆರವಣಿಗೆಯಲ್ಲಿ ಸೇರಬೇಕು.

೧೦. ಅಹಿಂಸಾಮಯ ಸಂಗ್ರಮದಲ್ಲಿ ಲೋಕ ಕಂಠಕರ ಸರಕುಗಳನ್ನು ಬಹಿಷ್ಕರಿಸುವುದು ನೀತಿಗೆ ಸಮ್ಮತವಿದೆ. ಆದುದರಿಂದ ಬ್ರಿಟೀಷ್ ಸಂಸ್ಥೆಗಳನ್ನು ಕಡುತರವಾಗಿ ಬಹಿಷ್ಕರಿಸಬೇಕು.

೧೧. ಲೋಕಹಿತ ಘಾತಕವಾದ, ಕಾಯ್ದೆಗಳನ್ನು ಶಕ್ಯವಿದ್ದಲ್ಲಿ ಶಾಂತತೆಯಿಂದ ಮುರಿಯಬೇಕು.

೧೨. ಸುಗ್ರೀವಾಜ್ಞೆಯನ್ವಯ ಹೊರಡಿಸಿದ ಅನ್ಯಾಯದ ಆಜ್ಞೆಗಳನ್ನು ಮುಡಿಯಬಹುದು.

ಸಂಪೂರ್ಣ ಅಹಿಂಸಾವ್ರತವನ್ನು ಸ್ವೀಕರಿಸಿ ಆ ಮೇಲಿನ ೧೨ ಅಂಶಗಳನ್ನೊಳಗೊಂಡ ಕಾಯ್ದೆ ಭಂಗವನ್ನು ಹೂಡಲು ಕಾಂಗ್ರೆಸ್ ಕಾರ್ಯ ಸಮಿತಿಯು ಜನತೆಗೆ ಆದೇಶವನ್ನಿತ್ತಿತು.

ಇಂಥ ಗಂಭೀರ ಪರಿಸ್ಥಿತಿಯಲ್ಲಿ ದ.ಪ. ಕರಮರಕರರು ಕಾಂಗ್ರೆಸ್ ಕಾರ್ಯ ಸಮಿತಿಯ ಆದೇಶದಂತೆ ಅಂಕೋಲೆಯಲ್ಲಿ ಮತ್ತೆ ಕರನಿರಾಕರಣೆ ಕೈಕೊಳ್ಳುವ ಬಗ್ಗೆ ಚರ್ಚಿಸಲು ಪೊಲೀಸರ ಕಣ್ಣು ತಪ್ಪಿಸಿಕೊಂಡು ಹೊರಟು ಮಧ್ಯದಲ್ಲಿ ಇಳಿದು ಈ ಹಿಂದೆ ಅವರಿಗೆ ಪರಿಚಿತವಾಗಿದ್ದ ಹಳ್ಳಿಯನ್ನು ಸೇರಿ ಅಲ್ಲಿಂಡ ಅಡವಿದಾರಿ ಹಿಡಿದು ಬಂದು ನಾಡವರ ಹಳ್ಳಿಗಳ ಮುಖ್ಯ ಕೇಂದ್ರವನ್ನು ಸೇರಿಕೊಂಡರು. ಆ ಮೇಲೆ ನಾಡವರ ಮುಖಂಡರು ಹಾಗೂ ಕಾರ್ಯಕರ್ತರ ಗುಪ್ತ ಸಭೆ ಸೇರಿಸಿ ಕಾಂಗ್ರೆಸ್ ಸಮಿತಿಯ ಆದೇಶ ಹಾಗೂ ಸರ್ಕಾರದ ಚಳವಳಿಯನ್ನು ಬಗ್ಗು ಬಡಿಯಲು ಕೈಕೊಂಡ ಸಿದ್ಧತೆ ಇವುಗಳನ್ನು ತಿಳಿಸಿ, ಕರನಿರಾಕರಣೆಯನ್ನು ಕೈಕೊಳ್ಳುವ ಬಗ್ಗೆ ಹಾಗೂ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು. ಆದರೆ ಈ ಸಾರೆ ನಾಡವರ ಸಭೆಯು ಗಂಭೀರವಾಗಿ ವಿಚಾರ ಮಾಡುವಂಥ ಸಂದರ್ಭ ಇದ್ದಿತು. ಯಾಕೆಂದರೆ, ಈ ಹಿಂದೆ ಕರನಿರಾಕರಣೆ ಕೈಕೊಂಡ ಕಾಲದ ಪರಿಸ್ಥಿತಿ ಈಗ ಇದ್ದಿಲ್ಲ. ಇದು ನಿರ್ಣಾಯಕ ಯುದ್ಧವಾಗಿತ್ತು. ತ್ಯಾಗ ಬಲಿದಾನಗಳ ಸತ್ವ ಪರೀಕ್ಷೆಯ ಯುದ್ಧವಾಗಿತ್ತು. ಗೆಲ್ಲಬೇಕು ಇಲ್ಲವೆ ಸಾಯಬೇಕು ಈ ಪರಿಸ್ಥಿತಿ ಈಗ ಇತ್ತು. ಇಷ್ಟೊತ್ತಿಗಾಗಲೇ ಬಲಾಢ್ಯ ಬ್ರಿಟೀಷ್ ಸರ್ಕಾರ ಭಯಾನಕ ಸುಗ್ರೀವಾಜ್ಞೆಗಳು ಒಂದರ ಹಿಂದೊಂದು ಹೊರಬಿದ್ದು ದೇಶದ ಬಹುತೇಕ ಮುಖಂಡರನ್ನೆಲ್ಲ ಬಂಧಿಸಿ ಸರ್ಕಾರವು ಸೆರೆಮನೆಯಲ್ಲಿ ತುಂಬಿತ್ತು. ತಪ್ಪಿ ಉಳಿದವರ ಶೋಧದಲ್ಲಿ ತೊಡಗಿತ್ತು. ಈ ಸಾರೆ ಸರ್ಕಾರವು ತನ್ನ ಉಳಿವಿಗಾಗಿ ತನ್ನ ಎಲ್ಲ ಶಕ್ತಿಯನ್ನೂ ಉಪಯೋಗಿಸಿ, ಚಳವಳಿಯನ್ನು ನಿರ್ನಾಮಗೊಳಿಸುವ ನಿರ್ಧಾರ ಮಾಡಿದ ಸಂಗತಿ ಈ ಜನರಿಗೆ ತಿಳಿದಿತ್ತು. ಈ ಚಳವಳಿಗೆ ನಾಯಕರಾಗಿ ನಿಲ್ಲಲು ಬಂದ ಕರಮರಕರರು ವಾರಂಟ್ ಹೊತ್ತುಕೊಂಡೇ ಬಂದವರಾಗಿದ್ದರು. ಯಾವ ಘಳಿಗೆಯಲ್ಲೂ ಅವರು ಬಂಧಿಸಲ್ಪಡುವ ಸಂ<ಭವ ಇತ್ತು. ಹಳ್ಳಿಗಳ ಮುಖಂಡರಾದ ಬಾಸಗೋಡ ರಾಮ ನಾಯಕ ಹಾಗೂ ಪಟ್ಟಣದ ಮುಖಂಡರಾದ ಶಾಮರಾವ್ ಶೇಣ್ವಿ ಮುಂತಾದವರೂ ಮೊದಲೇ ಬಂಧಿಸಲ್ಪಟ್ಟು ಜೈಲು ಸೇರಿದ್ದರು. ಈ ಸಾರೆ ಶಹರದ ಜಮೀನ್ದಾರರು ಇಂಥ ಗಂಭೀರ ಪರಿಸ್ಥಿತಿಯಲ್ಲಿ ಕರನಿರಾಕರಣೆಯಂಥ ಉಗ್ರ ಹೋರಾಟಕ್ಕೆ ಅನುಕೂಲ ಅಭ್ರಿಪ್ರಾಯ ಉಳ್ಳವರಿದ್ದಿಲ್ಲ. ಈ ಕಾರ್ಯಕ್ಕೆ ಹಣದ ಸಹಾಯ ಇದ್ದಿಲ್ಲ. ಸರ್ಕಾರವು ಪತ್ರಿಕೆಗಳ ಬಾಯಿ ಮುಚ್ಚಿಸುವ ಸುಗ್ರೀವಾಜ್ಞೆ ಹೊರ ತಂದಿತ್ತು. ಹೀಗಾಗಿ ಈ ಹೋರಾಟ ನಡೆಸಿ ಜಯ ಗಳಿಸೇವೆಂಬ ಭರವಸೆ ಇದ್ದಿಲ್ಲ. ಈ ಹೋರಾಟದಲ್ಲಿ ತಾವು ಬದುಕಿ ಸ್ವರಾಜ್ಯ ಕಂಡೇವೆಂಬ ಮಾತಂತೂ ದೂರವೇ ಉಳಿಯಿತು. ಇಂಥ ಗಂಭೀರ ವಾತಾವರಣದಲ್ಲಿ ಕರನಿರಾಕರಣೆಯಂಥ ಉಗ್ರ ಹೋರಾಟಕ್ಕೆ ಸಿದ್ಧವಾಗುವುದೆಂದರೆ, ದೇಶಕ್ಕಾಗಿ ತ್ಯಾಗ ಮಾಡಲು ಧಗಧಗಿಸುವ ಯಜ್ಞೇಶ್ವರನಲ್ಲಿ ಕಣ್ಣು ಮುಚ್ಚಿ ಹಾರಿಕೊಂಡಂತೆಯೇ ಇತ್ತು. ಇದನ್ನೆಲ್ಲ ಗಮನಿಸಿಯೂ, ಅಂಕೋಲೆಯ ಆ ಧೀರ ರೈತರು ದೇಶಕ್ಕಾಗಿ ಮಹಾತ್ಮಾಹಿಯವರನ್ನು ಸ್ವರಿಸಿ, ನಿರ್ಭೀತರಾಗಿ ನಿಂತು ಕರನಿರಾಕರಣೆ ಕೈಕೊಳ್ಳುವ ಧೀರ ನಿರ್ಣಯ ಮಾಡಿ ಕಣಕ್ಕಿಳಿದರು.

ಈ ಪ್ರಕಾರವಾಗಿ, ಅಂಕೋಲೆಯ ರೈತರು ಹಪ್ತೆ ಬಂದ ಮಾಡುವ ನಿರ್ಧಾರ ಮಾಡಿದ್ದನ್ನು ತಿಳಿದ ಸರ್ಕಾರವು ಫೆಬ್ರುವರಿ ತಿಂಗಳ ೫ನೇ ತಾರೀಖಿಗೆ ಮೊದಲನೇ ಹಪ್ತೆಯ ವಸೂಲಿಗೆ ಹಳ್ಳಿಗಳಿಗೆ ಬರಹತ್ತಿತ್ತು. ಹಳ್ಳಿಗರು ವಸೂಲಿಗೆ ಬಂದ ಮಾಮಲೇದಾರ, ಶಿರಸ್ತೇದಾರ, ಶಾನುಭೋಗ ಮೊದಲಾದವರಿಗೆ ಸರ್ಕಾರದ ತೀರ್ವೆ ಕೊಡುವದಿಲ್ಲೆಂಬ ತಮ್ಮ ನಿರ್ಧಾರವನ್ನು ತಿಳಿಸಿದರು. ಆಮೇಲೆ ಸರ್ಕಾರದ ಪರವಾಗಿ ಸಾಮ, ದಾನ, ಭೇದ, ದಂಡೋಪಾಯಗಳು ಅತಿ ತೀವ್ರ ಗತಿಯಿಂದ ನಡೆದವು. ಸರ್ಕಾರವು ಹೊರಗಿನಿಂದ ಅನೇಕರನ್ನು ತಂದು ಉಪದೇಶ ಮಾಡಿಸಿತು. ಧಾರವಾಡದವರು ತಾವು ತೀರ್ವೆ ಕೊಟ್ಟು ನಿಮ್ಮನ್ನು ಕಷ್ಟಕ್ಕೆ ನೂಕಲು ಬಂದಿದ್ದಾರೆಂದು ಉಪದೇಶ ಮಾಡಲಾಯಿತು. ಎಷ್ಟು ಮಾಡಿದರೂ ಅಂಕೋಲೆಯ ರೈತರು ಒಕ್ಕಟ್ಟು ಸಡಿಲಾಗದ್ದನ್ನು ಕಂಡು ಸರ್ಕಾರವು ತನ್ನ ದಂಡನಾಕ್ರಮವನ್ನು ಆರಂಭಿಸಿತು. ಚಳವಳಿಗಾರರಿಗೆಲ್ಲ ವಾರಂಟ್ ಹೊರಡಿಸಿತು. ಅವರ ಶೋಧಕ್ಕಾಗಿ ಪೊಲೀಸರು ಹಳ್ಳಿ-ಹಳ್ಳಿ ಮುತ್ತಿದರು. ರಾತ್ರಿ ಹೊತ್ತಿನಲ್ಲಿ ಊರೂರು ಸುತ್ತುವರಿದು ನಿಂತು ಬೆಳಗಾದ ಮೇಲೆ ಒಳಹೊಕ್ಕು ಶೋಧ ನಡೆಸಿ ಸಿಕ್ಕಿಬಿದ್ದವರನ್ನು ಜೈಲಿಗಟ್ಟಿದರು.

ಸರ್ಕಾರದ ಈ ಕ್ರಮದಿಂದ ಕಾರ್ಯಕರ್ತರು ಊರುಬಿಟ್ಟು ಅಡವಿ ಸೇರಿ ಗುಪ್ತ ಶಿಬಿರಗಳನ್ನು ಸ್ಥಾಪಿಸಿ ಅಲ್ಲಿಂದಲೇ ಕಾರ್ಯನಿರ್ವಹಿಸಬೇಕಾಯಿತು. ಪೊಲೀಸರು ಶಿಬಿರದ ಸಂಪರ್ಕ ಹೊಂದಿದವರ ಚಲನವಲನಗಳನ್ನು ತಿಳಿದುಕೊಳ್ಳಲು ಅಡವಿಗೆ ಕಟ್ಟಿಗೆ ತರಲು ಹೋಗುವವರನ್ನು ಬಿಡಲಿಲ್ಲ. ಗೊಬ್ಬರಕ್ಕೆ ಸೊಪ್ಪು ತರಲು ಹೋಗುವವರನ್ನು ಬಿಡಲಿಲ್ಲ. ಕಂಡ ಕಂಡವರನ್ನು ಹಿಡಿದು ಬಡಿದು ಶಿಬಿರಗಳನ್ನು ತೋರಿಸುವಂತೆ ಹಿಂಸಿಸಹತ್ತಿದರು. ಮುಂದೆ ಅಡವಿ ದಾರಿಗಳಲ್ಲಿ ಪೊಲೀಸರು ಕಾವಲು ನಿಂತು ಶಿಬಿರದಲ್ಲಿದ್ದವರಿಗೆ ಅನ್ನ ನೀರು ಸಹ ಸಿಗದಂತೆ ತೊಂದರೆಯನ್ನೊಡ್ಡಿದರು. ಇಂಥ ಪರಿಸ್ಥಿತಿಯಲ್ಲಿ ಶಿಬಿರದಲ್ಲಿದ್ದವು ಅನ್ನ, ನೀರಿಲ್ಲದೇ ಕಷ್ಟ ಪಟ್ಟಿದ್ದಾರೆ. ಮೇಲಿಂದ ಮೇಲೆ ಶಿಬಿರಗಳನ್ನು ಬದಲಿಸಬೇಕಾದಾಗ ಅಡವಿಯಲ್ಲಿ ದಾರಿ ತಪ್ಪಿ ಕಷ್ಟ ಪಟ್ಟಿದ್ದಾರೆ. ಎಷ್ಟು ಕಷ್ಟ ಪಟ್ಟರೂ ಶಿಬಿರದ ಹಾಗೂ ವಾರಂಟಿದ್ದವರ ಪತ್ತೆ ಹತ್ತದಿದ್ದಾಗ ಕಷ್ಟ ರೋಷಗೊಂಡ ಪೊಲೀಸರು, ಮನೆಯಲ್ಲಿದ್ದ ಹೆಂಗಸರನ್ನೂ, ಮಕ್ಕಳು ಮುದುಕರನ್ನೂ ಪರಿಪರಿಯಾಗಿ ಹಿಂಸಿಸಿ, ಕೆಲಸಗಾರರ ಹಾಗೂ ವಾರಂಟಿದ್ದವರ ಪತ್ತೆ ಹೇಳಲು ಬಲವಂತ ಮಾಡುತ್ತಿದ್ದರು. ಅದೇ ಕಾಲಕ್ಕೆ ಸರ್ಕಾರವು ಜಪ್ತಿಯ ಕ್ರಮವನ್ನು ಆರಂಭಿಸಿತು. ಈ ಜಪ್ತಿಯಲ್ಲಿ ಒಂದು ಕ್ರಮ ಅಂತ ಇದ್ದಿಲ್ಲ, ಅದೊಂದು ದರೋಡೆ ರೂಪದಲ್ಲಿ ನಡೆದಿತ್ತು. ಊರಲ್ಲಿ ಪಂಚನಾಮೆಗೂ, ಲಿಲಾವಿನ ಸಮಾನು ಕೊಳ್ಳಲಿಕ್ಕೂ ಯಾರೂ ಸಿಗದ್ದರಿಂದ ಪಂಚರೂ ಸರ್ಕಾರದವರು ಕರೆದುತಂದವರೇ ಲಿಲಾವಿನಲ್ಲಿ ಕೊಳ್ಳುವವರೂ ಅವರೇ, ನೂರಾರು ರೂಪಾಯಿಗಳ ಸಾಮಾನು ಐದು, ಹತ್ತು ರೂಪಾಯಿಗಳಿಗೆ ಹರಾಜಾಗುತ್ತಿತ್ತು. ಮಾವನ ಮನೆಯ ತೀರ್ವೆಗೆ ಅಳಿಯನ ಮನೆ ಮಾಲು ಜಪ್ತಿ. ಖಾತೆದಾರ ಒಡೆಯನ ತೀರ್ವೆಗೆ ರೈತನ ಮನೆಯ ದವಸ-ಧಾನ್ಯ, ಪಾತ್ರೆಗಳ ಜಪ್ತಿ. ಯಾರದೋ ತೀರ್ವೆಗೆ ಯಾರದೋ ಸಾಮಾನು ಜಪ್ತಿ. ಆ ಸಾಮಾನುಗಳು ಖಾತೆದಾರರೇ ತಂದು ಇಟ್ಟವುಗಳೆಂಬ ವಾದ. ಈ ರೀತಿ ಅನೇಕರ ಮೊದಲ ಹಪ್ತೆಯ ತೀರ್ವೆ ತುಂಬಿ ಹೋಯಿತು. ಸರ್ಕಾರದ ಈ ಕ್ರಮದಿಂದ ಜಾಗ್ರತಗೊಂಡ ರೈತರು ಎರಡನೆಯ ಹಪ್ತೆ ಬಂದು ಮಾಡುವ ನಿರ್ಧಾರ ಮಾಡಿ ಜಪ್ತಿಯಲ್ಲಿ ಯಾವುದೇ ಬೆಲೆಯುಳ್ಳ ಸಾಮಾನು ಕೈಗೆ ಸಿಗದಂತೆ ಸರ್ಕಾರಕ್ಕೆ ಪತ್ತೆ ಹತ್ತದಂತೆ ಯಾವ ಯಾವದೋ ಸಮಾಜದ ಯಾರ ಯಾರದೋ ಮನೆಯಲ್ಲಿ ಬಚ್ಚಿಟ್ಟರು. ಇದರಿಂದ ಸಿಟ್ಟಿಗೆದ್ದ ಸರ್ಕಾರವು ಮನೆ ಜಪ್ತಿ ಕ್ರಮ ಕೈಕೊಂಡು ಮನೆಯಲ್ಲಿ ಒಂದೆರಡು ದಿನಗಳಿಗೆ ಸಾಲುವಷ್ಟು ಅನ್ನದ ತಪ್ಪಲಿಗಳನ್ನು ದೊಚ್ಚಿನಿಂದ ಒಲೆಯಿಂದ ತೆಗೆದು ಅನ್ನ ಚೆಲ್ಲಿ ಪಾತ್ರೆಗಳನ್ನು ಒಯ್ದರು. ಇಂಥ ಕ್ರಮಗಳಿಂದ ತೀರ್ವೆ ವಸೂಲು ಆಗದಿದ್ದಾಗ ಸರ್ಕಾರವು ಜಮೀನು ಫೋರ್‌ಪೀಟ್ ಮಾಡಿ, ಲಿಲಾವು ಮಾಡಹತ್ತಿತು ಮತ್ತು ರೈತರ ಮನೆಗಳನ್ನು ಮುಟ್ಟುಗೋಲು ಹಾಕಿ ಪೊಲೀಸರು ಮನೆಯಲ್ಲಿದ್ದ ಜನರನ್ನು ಬಲವಂತವಾಗಿ ಹೊರ ಹಾಕಿದರು.

ಈ ರೀತಿ ಹೊರಹಾಕುವಾಗ ಮುದುಕ-ಮುದುಕಿಯರೆಂದು ನೋಡಲಿಲ್ಲ, ಗರ್ಭಿಣಿ-ಬಾಣಂತಿಯರೆಂದು ಬಿಡಲಿಲ್ಲ. ರೋಗಿಗಳೆಂದು ನೋಡಲಿಲ್ಲ, ತೊಟ್ಟಿಲು ಕೂಸುಗಳ ಬಗ್ಗೆಯೂ ಕನಿಕರ ಪಡಲಿಲ್ಲ. ತೊಟ್ಟಿಲಲ್ಲಿ ಮಲಗಿದ ಕೂಸುಗಳ ಸಹಿತ ತೊಟ್ಟಿಲನ್ನು ಬಿಚ್ಚಿ ಹೊರಗೆ ಹಾಕಿದರು. ಆ ಮನೆಗಳಿಗೆ ಬೀಗಮುದ್ರೆ ಹಾಕಿದರು. ಪ್ರತಿ ಹಳ್ಳಿಗಳ ಕೆಲ ಕೆಲವು ಮನೆಗಳಲ್ಲಿ ಪೊಲೀಸರು ತಾವೇ ಉಳಿದುಕೊಂಡರು.

ಆಮೇಲೆ ಕೇಳುವುದೇನು? ಆ ಮನೆಯಲ್ಲಿದ್ದ ಸಾಮಾನು ಅವರದು, ಹಿತ್ತಲಲ್ಲಿ ಬೆಳೆದ ಹಲಸಿನ ಹಣ್ಣು, ಮಾವಿನ ಹಣ್ಣುಗಳು ಅವರವು, ಅಡಿಕೆ, ತೆಂಗು ಅವರವು. ಬಾಳೆ-ಬಸಳೆ ಪೊಲೀಸರವು ಹೀಗೇಕೆ? ಎಂದು ಕೇಳುವಂತಿಲ್ಲ. ಅವರ ಮೇಲೆ ಏರಿ ಹೋಗುವಂತಿಲ್ಲ. ಅಹಿಂಸಾಪಾಲನೆ ಆಗಲೇಬೇಕು. ಹೀಗಾಗಿ ಎಲ್ಲವನ್ನೂ ನೋಡುತ್ತ ನೋಡುತ್ತಾ ಸಹಿಸುವ ಹೊತ್ತು ಬಂತು. ಮನೆಯಿಂದ ಹೊರಹಾಕಲ್ಪಟ್ಟ ಜನರು ಮತ್ತೊಂದು ಆಶ್ರಯ ಕಲ್ಪಿಸಿಕೊಳ್ಳುವವರೆಗೆ ಮರದ ನೆರಳಲ್ಲಿ ಉಳಿಯಬೇಕಾಯಿತು. ಬಯಲಲ್ಲಿ ತೆಂಗಿನ ಗರಿಗಳ ನೆರಳು ಮಾಡಿ ಬಾಳಬೇಕಾಯಿತು. ಹೆತ್ತ ಬಾಣಂತಿಯರೂ ಈ ಕಷ್ಟ ಅನುಭವಿಸಬೇಕಾಯಿತು.

ಅಂಕೋಲಾ ತಾಲೂಕಿನ ಗಂಡಸರಂತೆ ಹೆಂಗಸರೂ ಸಹ ದೇಶಕ್ಕಾಗಿ ಸಹಿಸಲು ಅಸಾಧ್ಯವಾದ ಕಷ್ಟ ಪಟ್ಟಿರುವರು. ಸರ್ಕಾರವು ಮುದ್ರೆ ಹಾಕಿದ ಮನೆಗಳ ಮುದ್ರೆ ಒಡೆದು ಒಳ ಪ್ರವೇಶ ಮಾಡುವುದು, ಮುಟ್ಟುಗೋಲು ಹಾಕಿದ ಭೂಮಿಯನ್ನು ಲಿಲಾವಿನಲ್ಲಿ ಪಡೆಯದಂತೆ ಸತ್ಯಾಗ್ರಹ ಮಾಡುವುದು, ಲಿಲಾವಿನಲ್ಲಿ ಕೊಂಡ ಭೂಮಿಯಲ್ಲಿ ಸಾಗುವಳಿ ಮಾಡದಂತೆ ಅಡ್ಡಿ ಪಡಿಸಿ ಸತ್ಯಾಗ್ರಹ ಮಾಡುವುದು, ರಾಜೀನಾಮೆ ಕೊಟ್ಟು ತೆರವಾದ ಪಟೇಲಕಿ ಮಾಡಲು ಮುಂದೆ ಬಂದವರ ಮನೆಯ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದು, ಜಪ್ತ ಮಾಡಿದ ಭತ್ತ, ಅಕ್ಕಿ ಲಿಲಾವಿನಲ್ಲಿ ಪಡೆಯದಂತೆ ಸತ್ಯಾಗ್ರಹ ನಡೆಸುವುದು ಇಂಥ ಹಲವಾರು ಕಾರ್ಯಗಳನ್ನು ಮಹಿಳೆಯರು ಮಾಡುತ್ತಿದ್ದರು. ಇಂಥ ಮಹಿಳೆಯರನ್ನು ಪೊಲೀಸರು ನಿರ್ಧಯರಾಗಿ ಎಳೆದು ಹಾಕುತ್ತಿದ್ದರು. ಅವಾಚ್ಯ ಶಬ್ಧಗಳಿಂದ ಬಯ್ಯುತ್ತಿದ್ದರು. ಬೂಟುಗಾಲಿನಿಂದ ಒದೆಯುತ್ತಿದ್ದರು. ಆದರೂ ಆ ವೀರ ಮಹಿಳೆಯರು ಎಲ್ಲವನ್ನೂ ಸಹಿಸಿಯೂ ಸತ್ಯಾಗ್ರಹವನ್ನು ಮುಂದುವರೆಸುತ್ತಿದ್ದರು. ಅದರಂತೆ ಅಪ್ರಾಯಸ್ಥರ ಬಾಲಸೇನೆಯ ಮಕ್ಕಳೂ ಪೊಲೀಸರ ಸುಳಿವು ತಿಳಿಸುವ ಹಾಗೂ ಅಧಿಕಾರಿಗಳು ಬಂದಾಗ ಡಬ್ಬಿ ಬಾರಿಸಿ ಅಸಹಕಾರ ತೋರಿಸುವ ಕೆಲಸ ಮಾಡಿ ಪೊಲೀಸರಿಂದ ಪೆಟ್ಟು ತಿನ್ನುತ್ತಿದ್ದರು. ಇಷ್ಟೆಲ್ಲ ನಡೆಯುತ್ತಿರುವಾಗ. ಸಾಮಾನ್ಯವಾಗಿ ಗಂಡಸು ಖಾತೆದಾರರು ಜೈಲು ಸೇರಿದರು. ಆಮೇಲೆ ಅವರ ಹೆಂಗಸರೇ ಹೊಣೆಗಾರರಾಗಿ ಹಪ್ತೆ ಕೊಡದೆ ತಾವು ಸತ್ಯಾಗ್ರಹ ಮಾಡಿ ಜೈಲು ಸೇರಿದರು. ಅನೇಕ ಖಾತೆದಾರರೂ ವಾರಂಟಿದ್ದ ಕಾರ್ಯಕರ್ತರೂ ಇನ್ನೂ ಪೊಲೀಸರಿಗೆ ಸಿಕ್ಕಿದ್ದಿಲ್ಲ. ಅದರಿಂದ ಕುಪಿತಗೊಂಡ ಪೊಲೀಸರು ರಾತ್ರಿ ಕಾಲದಲ್ಲಿ ಮನೆಮನೆ ಹೊಕ್ಕು ಮಲಗಿದ ಹೆಂಗಸರನ್ನು ಎಬ್ಬಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕೆಲವೊಮ್ಮೆ ಕೋಪದಿಂದ, ಮೊಲೆ ಕೂಸುಗಳನ್ನು ಎಳೆದುಕೊಂಡು ನಿಮ್ಮ ಗಂಡಂದಿರನ್ನು ತಂದು ತೋರಿಸದಿದ್ದಲ್ಲಿ ಈ ಕೂಸುಗಳು ನಿಮಗೆ ಸಿಗಲಾರವು ಎಂದು ಬೆದರಿಕೆ ಹಾಕುತ್ತಿದ್ದರು. ಆದರೂ ಆ ಮಹಿಳೆಯರು ಜೈ ಗಾಂಧೀ, ಜೈ ಭಾರತ ಮಾತೇ, ಎದೆಲ್ಲದಕ್ಕೂ ನೀನೇ ಸಾಕ್ಷಿಯಾಗಿರು ಎಂದು ಎಲ್ಲವನ್ನು ಸಹಿಸಿಕೊಂಡರೇ ಹೊರತು ಚಳವಳಿಯಿಂದ ಹಿಂದೆ ಸರಿಯಲಿಲ್ಲ. ತಮ್ಮ ಗಂಡಸರು ಹಿಂದೆ ಸರಿಯುವಂತೆ ಮಾಡಲಿಲ್ಲ.

ಪ್ರತ್ಯಕ್ಷದರ್ಶಿಗಳ ಅಭಿಪ್ರಾಯಗಳು: ಅಂಕೋಲಾ ತಾಲೂಕಿನಲ್ಲಿ ನಡೆದ ಕರನಿರಾಕರಣೆ ಚಳವಳಿಯ ಕುರಿತು ಪ್ರತ್ಯಕ್ಷ ಪರಿಶೀಲನೆ ಮಾಡಿದ ಅಂದಿನ ಹಿರಿಯರು ಅಂಕೋಲಾ ತಾಲೂಕಿನಲ್ಲಿ ನಡೆದ ಈ ಚಳವಳಿಯ ತೀವ್ರತೆಯನ್ನು ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಾಂಘಿಕವಾಗಿಯೂ ವೈಯಕ್ತಿಕವಾಗಿಯೂ ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯಗಳು ಅಂಕೋಲೆಯ ಕರಬಂದಿ ಚಳವಳಿಯ ಮಹತ್ವವನ್ನು ತಿಳಿಸುವ ಸಾಕ್ಷಿಗಳಾಗಿ ಉಳಿದಿವೆ. ಅವು ಹೀಗಿವೆ-

ಅಂಕೋಲಾ ತಾಲೂಕಿನ ಅಂದಿನ ಕಾಂಗ್ರೆಸ್ ಕಮಿಟಿಯ ೧೯೩೨ರ ಜನವರಿಯಿಂದ ಸೆಪ್ಟೆಂಬರ್ ವರೆಗಿನ ಆರಂಭದ ಒಂಬತ್ತು ತಿಂಗಳು ಅಂಕೋಲಾ ತಾಲೂಕಿನಲ್ಲಿ ನಡೆದ ಕರನಿರಾಕರಣೆ ಚಳವಳಿಯ ವರದಿಯನ್ನು ತಯಾರಿಸಲಾಗಿತ್ತು. ಆ ವರದಿಯಲ್ಲಿ ಕೆಲವು ಮುಖ್ಯ ಮಾತುಗಳು ಈ ಮುಂದಿನಂತೆ ಇರುತ್ತವೆ-

೧೯೩೦ರ ಚಳವಳಿ”: “೧೯೩೦ ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಅಂಕೋಲೆಗೆ, ಇಡೀ ಕರ್ನಾಟಕದ ಮುಖ್ಯ ರಣಕ್ಷೇತ್ರವಾಗಿ ಆರಿಸಲ್ಟಡುವ ಸನ್ಮಾನವು ದೊರೆಯಿತು. ಆಗ್ಗೆ ಶ್ರೀ ಹನುಮಂತರಾವ ಕೌಜಲಗಿ, ಡಾ. ಹರ್ಡೀಕರ, ಕಾಕಾ ಕಾರಖಾನೀಸ್ ಮುಂತಾ ಅಖಿಲ ಕರ್ನಾಟಕದ ಮುಂದಾಳುಗಳ ನೇತೃತ್ವದಲ್ಲಿ ನಡೆದ ಸಾಮುದಾಯಿಕ ಉಪ್ಪಿನ ಕಾಯ್ದೆ ಭಂಗದಲ್ಲಿ ಅಂಕೋಲೆಯ ವೀರರು ಪ್ರಖ್ಯಾತಿಯನ್ನು ಪಡೆದರು. ಮೊದಲನೇ ಸತ್ಯಾಗ್ರಹವು ದೇ.ಭ.ಎಂ.ಪಿ. ನಾಡಕರ್ಣಿ ಇವರ ನೇತೃತ್ವದಲ್ಲಿ ನಡೆಯಿತು”.

ಮುಂದೆ ಜಂಗಲ್ ಸತ್ಯಾಗ್ರಹ, ಶೇಂದೀ ಬಹಿಷ್ಕಾರ, ಕೊನೆ ಸತ್ಯಾಗ್ರಹ ಮುಂತಾದ ಎಲ್ಲ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ನಡೆಯಿಸಿ ಕಡೆಗೆ ಸವಿನಯ ಕಾಯ್ದೆ ಭಂಗದ ಬ್ರಹ್ಮಾಸ್ತ್ರವಾದ ರಾಜಕೀಯ ಕರನಿರಾಕರಣೆಯನ್ನು ಅಂಕೋಲೆಯ ವೀರರು ಕೈಕೊಂಡರು.

೧೯೩೨ರ ಚಳವಳಿ: “ಬ್ರಿಟೀಷ್ ಸರ್ಕಾರವು ಮಹಾತ್ಮಾ ಗಾಂಧೀಯವರ ಶಾಂತಿ ಪ್ರಯತ್ನವನ್ನು ಮುರಿತು ಕಾಂಗ್ರೆಸ್‌ಕ್ಕೆ ಅಪಮಾನ ಮಾಡಿದ ಕೂಡಲೇ ಅಂಕೋಲೆಯ ವೀರರು ಮತ್ತೆ ಕರನಿರಾಕರಣೆಯ ಬ್ರಹ್ಮಾಸ್ತ್ರವನ್ನು ಕೈಕೊಂಡು ಯುದ್ಧ ಸನ್ನದ್ದರಾದರು. ಶೂರ ನಾಡಿಗರಾದ ಅಂಕೋಲೆಯ ನಾಡವರು ಹೂಂಕರಿಸಿ, ಮುಂದುವರಿದರು. ಯುದ್ಧಾರಂಭವಾಗಿ ಈಗ ೯ ತಿಂಗಳಾದವು ಆದರೂ ವೀರನಾಡವರು ಹಿಂದೆ ಸರಿಯಲಿಲ್ಲ. ಗಾಂಧೀ ಮಹಾತ್ಮರ ಆಜ್ಞೆಯಾಗುವವರೆಗೂ ಯುದ್ಧ ಮಾಡಲು ಸಿದ್ಧರಾಗಿ ಮುಂದುವರಿದಿದ್ದಾರೆ. ಶ್ರೀ ದತ್ತಾತ್ರೇಯ ಪರಶುರಾಮ ಕರಮರಕರ ಧಾರವಾಡ ಇವರು ಅಂಕೋಲೆಯಲ್ಲಿ ಎರಡು ತಿಂಗಳುಗಳ ಕಾಲ ಉಳಿದು ವೀರ ನಾಡವರಿಗೆ ದಾರಿ ತೋರಿಸಿದರು. ಶ್ರೀ ಬಾಸಗೋಡ ರಾಮ ನಾಯ್ಕರ ನೇತೃತ್ವದಲ್ಲಿ ಯುದ್ಧವು ಮುಂದುವರೆದಿದೆ”.

ಕಾಂಗ್ರೆಸ್ಸ್ ಬಲಿ: “ಇತರ ಕರನಿರಾಕರಣೆ ತಾಲೂಕುಗಳಂತಿಲ್ಲದೆ, ಅಂಕೋಲೆಯಲ್ಲಿ ಶಹರಿನವರೂ, ಹಳ್ಳಿಯವರೂ, ಸಾಹಸ, ತ್ಯಾಗಗಳನ್ನು ಮಾಡಿರುತ್ತಾರೆ. ಶಹರಿನಲ್ಲಿ ಶ್ರೀ ಶಾಮರಾವ್ ಶೇಣ್ವಿ, ಶ್ರೀ ಶಿವರಾವ ತೇಲಂಗ, ಶ್ರೀ ಸುಬ್ಬರಾವ್ ನಾಡಕರ್ಣಿ ಮುಂತಾದ ದೇಶಭಕ್ತರು ದೇಶ ಸೇವೆ ಮಾಡಿ ತುರಂಗವಾಸದಲ್ಲಿರುತ್ತಾರೆ. ಈ ತಾಲೂಕಿನಲ್ಲಿ ಈ ಸಾರೆ ಅಜಮಾಸು ೩೦೦ ಮಂದಿ ಖಾತೆದಾರರು ಕರನಿರಾಕರಣೆ ಮಾಡಿರುತ್ತಾರೆ. ಅಜಮಾಸು ೩೦೦ ಮಂದಿ ಜೈಲಿಗೆ ಹೋಗಿರುತ್ತಾರೆ. ಈ ತಾಲೂಕಿನಲ್ಲಿ ಸಾಮುದಾಯಿಕ ಕಾಯ್ದೆಭಂಗ ಕಾರ್ಯಕ್ರಮಗಳು ಬಹಳ ಉತ್ತಮ ರೀತಿಯಿಂದ ನಡೆಯುತ್ತವೆ. ಬಹಳ ಜನರು ಸೇರುತ್ತಾರೆ. ತಾಲೂಕೆಲ್ಲವೂ ಯುದ್ಧ ವಾತಾವರಣದಿಂದ ತುಂಬಿ ತುಳುಕುತ್ತದೆ. ಪಾರ್ಲಿಮೆಂಟ್ ಮೆಂಬರ್ ಮಿ|| ಮ್ಯಾಟರ್ಸ್‌ರವರು ಕಾನಡಾ ಜಿಲ್ಲೆಗೆ ತಮ್ಮ ಭೇಟಿ ಕೊಟ್ಟಾಗ ಅವರಿಗೆ ಅಂಕೋಲೆಯ ಮಾಮಲೇದಾರರು ೨೫,೦೦೦ ಜನ ಕಾಂಗ್ರೆಸ್ಸ್‌ ಪಕ್ಷದವರೆಂದೂ ೨೩,೦೦೦ ಜನರು ಕಾಂಗ್ರೆಸ್ಸಿಗೆ ಸಹಾನುಭೂತಿಯುಳ್ಳವರೆಂದೂ ಹೇಳಿದರು. ೩೮,೦೦೦ ಪ್ರಜಾ ಸಂಖ್ಯೆಯುಳ್ಳ ಅಂಕೋಲೆ ತಾಲೂಕಿನಲ್ಲಿ ಸರ್ಕಾರಿ ಪ್ರತಿಷ್ಠಿತ ಅಧಿಕಾರಿಗಳು, ೧೫,೦೦೦ ಜನರು ಕಾಂಗ್ರೆಸ್ ಪಕ್ಷದವರೆಂದೂ, ೨೩,೦೦೦ ಜನರು ಸಹಾನುಭೂತಿಯುಳ್ಳವರೆಂದೂ ಹೇಳಿದ ಮೇಲೆ ಈ ತಾಲೂಕಿನಲ್ಲಿಯ ಕಾಂಗ್ರೆಸ್ ಬಲವನ್ನು ಬೇರೆ ವರ್ಣಿಸಬೇಕಾಗಿಲ್ಲ.”

೧. ಸಾಣೀಕಟ್ಟಿ ಉಪ್ಪಿನ ಅಗರ ಮತ್ತು ಕೋಠಿಯ ಮೇಲೆ ೩,೦೦೦ ಜನರು ಗುಂಪು ಸೇರಿ ಹಲ್ಲಾ ಮಾಡಿ, ಅಜಮಾಸು ೬,೦೦೦ ಮಣ ಉಪ್ಪನ್ನು ಒಯ್ದು ಪೇಟೆ ಸ್ಥಳದಲ್ಲಿ ಮಾರಾಟ ಮಾಡಿದರು.

೨. ಸಾವಿರಾರು ಜನರು ಮೆರವಣಿಗೆ ಮಾಡಿಕೊಂಡು ಹೋಗಿ, ತೆಂಗಿನ ಮರದ ಕೊನೆ ಕೊಯ್ದು, ಶೇಂದಿ ಬರದಂತೆ ಮಾಡಿದರು. ಈ ಕಾರ್ಯಕ್ರಮವು ಉಜ್ವಲವಾದುದನ್ನು ನೋಡಿ ಇದರ ವಿರುದ್ಧ ಪ್ರಚಾರ ಮಾಡಲು ಹೊರಡಿಸಿದ ದುಃಖದ ಒಂದು ಹಸ್ತ ಪತ್ರಿಕೆಯಲ್ಲಿ ಸರ್ಕಾರವು ಈ ರೀತಿ ಉದ್ಗಾರವನ್ನು ತೆಗೆಯಿತು.

“ದುಷ್ಟ ಕಾಂಗ್ರೆಸ್‌ದ ದುರ್ಬೋಧನೆಗೊಳಗಾಗಿ, ಅಜ್ಞ ಜನರು ನಮಗೆ ಪರಮಪೂಜ್ಯವಾದ ಕಲ್ಪವೃಕ್ಷದ ಶಿಖಿಚಾಟನೆಯನ್ನು ಮಾಡಿದರು”

೩. ಒಟ್ಟು ತಾಲೂಕಿನಲ್ಲಿರುವ ೩೬ ಶೇಂದಿ ಅಂಗಡಿಗಳ ಪೈಕಿ ೩ ಮಾತ್ರ ಹರಾಜಾದವು. ಸಾಗವಾನಿ ಮರದ ಲಿಲಾವು-ಪಿಕೆಟಿಂಗ್ ಮಾಡಿ ಯಾರೂ ಕೊಳ್ಳುವರೇ ಮುಂದೆ ಬರದಿದ್ದುದರಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿಗಳ ಲುಕ್ಸಾನವಾಯಿತು.

೪. ನೂರಾರು ಜನರು ಗುಂಪು ಕೂಡಿ ಹೋಗಿ ಪಡ ಇಟ್ಟ ಭೂಮಿಯಲ್ಲಿ ಸಸಿ ಬಿತ್ತಿದರು.

೫. ನೂರಾರು ಜನರು ಕೂಡಿ, ಸರ್ಕಾರದವರು ಬೀಗ ಹಾಕಿದ ಮನೆಗಳ ಬೀಗವನ್ನು ಮುರಿದು ಹಲ್ಲಾಮಾಡಿ, ವಶಪಡಿಸಿಕೊಂಡರು.

ಸ್ತ್ರೀಯರು: “ಅಂಕೋಲಾ ತಾಲೂಕಿನಲ್ಲಿ ಬಹಳ ಸ್ತ್ರೀಯರು ಎಲ್ಲ ಕಾರ್ಯಕ್ರಮಗಳಲ್ಲೂ ಭಾಗ ತಕ್ಕೊಳ್ಳುವರು, ಬಹಳ ದಿನಗಳ ವರೆಗೆ ಸ್ತ್ರೀಯರನ್ನು ಸರ್ಕಾರವು ಕೈದುಮಾಡಲೇ ಇಲ್ಲ. ಏಪ್ರಿಲ್ ೧೯೩೨ ರ ನಂತರ ಸ್ತ್ರೀಯರು ಕೈದಾಗಲಿಕ್ಕೆ ಶುರುವಾಯಿತು. ಶಹರಿನಿಂದಲೂ, ಹಳ್ಳಿಗಳಿಂದಲೂ ಅನೇಕ ಸ್ತ್ರೀಯರು ತುರಂಗಕ್ಕೆ ಹೋಗಿದ್ದಾರೆ. ಅವಿದ್ಯಾವಂತರೂ, ತಿಳುವಳಿಕೆ ಇಲ್ಲದವರೂ ಆದ ಹಳ್ಳಿಯ ನಾಡವ ಸ್ತ್ರೀಯರು ೯೩೦ರ ಉಪ್ಪಿನ ಸತ್ಯಾಗ್ರಹದ ಸಮಯದಿಂದಲೂ ಸತ್ಯಾಗ್ರಹ ಸಂಗ್ರಾಮದಲ್ಲಿ ವಿಶೇಷ ಭಾಗ ತೆಗೆದುಕೊಳ್ಳುತ್ತಿರುವರು. ಅವರು ತುರಂಗಕ್ಕೆ ಸಹಾ ಅಂಜದೆ ದೇಶಭಕ್ತಿಯಿಂದ ಪ್ರೇರಿತರಾಗಿ ಮುಂದುವರಿದು ಹೋರಾಡುತ್ತಿರುವುದನ್ನು ಆನಂದದ ಸಂಗತಿ. ಸರ್ಕಾರದವರು ಶೀಲು ಮಾಡಿದ ಮನೆಯ ಬೀಗ ಮುರಿಯುವ ಕಾರ್ಯಕ್ರಮದಲ್ಲಿ ಶ್ರೀಮತಿ ಮಾಣೂದೇವಿಯು ತೋರಿಸಿದ ಸಾಹಸವು ಅಸಾಮಾನ್ಯವಾದದ್ದು. ಪೊಲೀಸರು ಆಕೆಗೆ ಮೂರ್ಛೆ ಹೋಗುವವರೆಗೆ ಹೊಡೆದು ಒದ್ದು ಹಿಂಸಿಸಿದರೂ ಆಕೆ ತನ್ನ ಕರ್ತವ್ಯವನ್ನು ಬಿಡಲಿಲ್ಲ”.

ಮಿ|| ಮ್ಯಾಟರ್ಸ್‌ರವರೊಡನೆ ಸರ್ಕಾರಿ ಅಧಿಕಾರಿಗಳು “ಈ ತಾಲೂಕಿನಲ್ಲಿಕಾಂಗ್ರೆಸ್ ಚಳವಳಿಯನ್ನು ನಿಲ್ಲಿಸುವುದು ಶಕ್ಯವಿಲ್ಲ” ಎಂದು ಒಪ್ಪಿದರು. ಕಡೆಯವರೆಗೂ ಅಂಕೋಲೆಯ ವೀರರು ಈ ಮಾತು ಸತ್ಯವೆಂಬುದನ್ನು ಖಾತ್ರಿ ಮಾಡಿಕೊಡುವರೆಂಬುದರಲ್ಲಿ ಸಂಶಯವಿಲ್ಲ. ಅಂಕೋಲಾ ತಾಲೂಕಿನ ಅಂದಿನ ಕಾಂಗ್ರೆಸ್ ಕಮಿಟಿಯು ತನ್ನ ವರದಿಯಲ್ಲಿ ಈ ಮೇಲಿನಂತೆ ಹೇಳಿದೆ.

ಉಕ್ಕಿನ ಮನುಷ್ಯ ಸರದಾರ ವಲ್ಲಭಬಾಯಿ ಪಟೇಲ ಅವರು ಹೇಳಿದ್ದು ಅಂಕೋಲಾ ತಾಲೂಕಿನಲ್ಲಿ ನಡೆದ ಕರಬಂದೀ ಚಳವಳಿಯ ಬಗ್ಗೆ ಖುದ್ದಾಗಿ ಕೇಳಿ ತಿಳಿದುಕೊಂಡ ಸರದಾರ ವಲ್ಲಭಬಾಯಿ ಪಟೇಲರು ಅಂಕೋಲೆಯ ರೈತರು ನಡೆಸಿದ ಹೋರಾಟದ ಅನುಭವಗಳನ್ನು ಬಾರ್ಡೋಲಿ ರೈತರನ್ನು ಉದ್ದೇಶಿಸಿ ಈ ರೀತಿ ಹೇಳಿರುವರು-

“ಕರ್ನಾಟಕದ ರೈತರು ತಮ್ಮ ಸತ್ಯಾಗ್ರಹದ ಚಳವಳಿಯಿಂದ ತಮ್ಮ ಭೂಮಿ ಸೊತ್ತುಗಳನ್ನು ಕಳಕೊಳ್ಳುವುದರಿಂದ, ಬ್ರಿಟೀಷ್ ದಬ್ಬಾಳಿಕೆಯನ್ನು ಕೆಚ್ಚಿನಿಂದ ಎದುರಿಸುವುದರಿಂದ ಅವರು ನಿಮ್ಮ ಸರಿಸಮಾನತು ಮಾತ್ರವಲ್ಲ ಕೆಲವೊಂದು ಪ್ರಸಂಗಗಳಲ್ಲಿ ನಿಮಗಿಂತಲೂ ಮಿಗಿಲಾದ ತ್ಯಾಗಿಗಳೆಂಬುದನ್ನು ತೋರಿಸಿದ್ದಾರೆ. ಭೂಮಿಗೆ ಸರ್ಕಾರವು ಮುಟ್ಟುಗೋಲು ಹಾಕಿತು. ದಂಡ ವಿಧಿಸಿತು. ಜೈಲಿಗೆ ಅಟ್ಟಿತು. ಇವೆಲ್ಲವನ್ನೂ ಅವರು ಧೈರ್ಯದಿಂದ ಎದುರು ಹಾಕಿಕೊಂಡರು. ಗಂಡಸರು ಮಾತ್ರವಲ್ಲ ಹೆಂಗಸರೂ ದಬ್ಬಾಳಿಕೆಗೆ ಮಣಿಯಲಿಲ್ಲ. ನೀವೆಷ್ಟು ಕಷ್ಟಗಳನ್ನು ಉಂಡಿರುವಿರೋ ಅಷ್ಟೇ ಕಷ್ಟ-ಕಾರ್ಪಣ್ಯಗಳ್ನನು ಎದುರಿಸುತ್ತಾ ನಿಮ್ಮಂತೆ ಅವರೂ ತಮ್ಮ ಮನೆಮಾರು ಕಳಕೊಂಡರು. ಅವರು ಗೈದ ತ್ಯಾಗದ ಕಥೆಗಳನ್ನು ಕೇಳುತ್ತಿದ್ದ ನಾನು ಅವರ ಅಚಲ ವಿಶ್ವಾಸಕ್ಕೆ ಬೆರಗಾದೆ ! ಅಭಿಮಾನ ಉಕ್ಕಿ, ಭಾವತುಂದಿಲನಾದೆ ! ಅವರು ಎಂತೆಂಥ ಕಷ್ಟ-ಕಟೋಲೆಗಳನ್ನು ಎದುರಿಸುತ್ತಿದ್ದಾರೆಂಬುದನ್ನು ಕೇಳುತ್ತಿರುವಾಗ ಕೆಲವೊಮ್ಮೆ ದುಃಖದಿಂದ ನಾನು ಮೈಮರೆಯುವಂಥವನಾಗಿದ್ದೇನೆ”.

ಸರದಾರ ಪಟೇಲರು, ಅಂಕೋಲೆಯ ಕರಬಂದೀ ರೈತರು ತೋರಿದ ನಿಷ್ಠೆ, ಧೈರ್ಯ, ಸಹಾಯ, ಮಾಡಿದ ತ್ಯಾಗ ಹಾಗೂ ಸಹಿಸಿದ ಕಷ್ಟಗಳನ್ನು ಕುರಿತು ಹೇಳಿದ ಈ ಮೇಲಿನ ಮಾತುಗಳು ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿ ಉಳಿದಿವೆ.

ಅದೇ ಪ್ರಕಾರವಾಗಿ, ಅಂಕೋಲೆಯ ಕರಬಂದೀ ಚಳವಳಿಯ ಸೂತ್ರಧಾರರಲ್ಲಿ ಒಬ್ಬರಾಗಿ ಅಂಕೋಲೆಯ ಅಡವಿ ಶಿಬಿರದಲ್ಲಿ ಕೂತು ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ವಿ.ಸ್. ನಾರಾಯಣರಾವ್, ಬೆಂಗಳೂರು ಅವರು ಅಂಕೋಲೆಯಲ್ಲಿ ೧೯೩೩ ರಲ್ಲಿ ನಡೆದ- “ಉಪ್ಪಿನ ಸತ್ಯಾಗ್ರಹ ಮತ್ತು ಕರ ನಿರಾಕರಣೆ ಚಳವಳಿ”ಯ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆಯಲ್ಲಿ ಬರೆದ ಲೇಖನದಲ್ಲಿ ಈ ಮುಂದಿನಂತೆ ಬರೆದಿರುವರು.

“ಭಾರತದಲ್ಲಿ ಮೊಟ್ಟ ಮೊದಲು ಕರನಿರಾಕರಣೆ ನಡೆಸಿದ ಕೀರ್ತಿ ಬಾರ್ಡೋಲಿಗಳಿಸಿದೆ. ಲೋಕ ಪ್ರಸಿದ್ಧವಾಗಿದೆ. ಆದರೆ ಅಂಕೋಲಾ ಮತ್ತು ಸಿದ್ದಾಪುರಗಳು ನಡೆಸಿದ ಕರನಿರಾಕರಣೆ ಚಳವಳಿಯ ಕುಟುಂಬಗಳು ಬಾರ್ಡೋಲಿ ರೈತರಿಗಿಂತ ಹೆಚ್ಚು ಕಷ್ಟಕ್ಕೊಳಗಾಗಿದ್ದಾರೆ, ಆದರೂ ಹೆಚ್ಚು ಪ್ರಾಮುಖ್ಯತೆ ದೊರಕದಿರುವುದು ಕನ್ನಡಿಗರ ದೌರ್ಭಾಗ್ಯ.”

ಶ್ರೀ ನಾರಾಯಣರಾಯರ ಅಭಿಪ್ರಾಯವು ಆ ರೀತಿಯಾಗಿದ್ದರೆ, ಡಾ|| ಗೋರೂರು ರಾಮಸ್ವಾಮಿ ಅಯ್ಯಂಗಾರ ಅವರು ದಿನಾಂಕ: ೦೧-೧೧-೧೯೮೨ರ “ಕನ್ನಡ ಪ್ರಭ”ದಲ್ಲಿ ಈ ರೀತಿ ಬರೆದಿದ್ದಾರೆ-

“ಅಂಕೋಲೆಯ ಕರಬಂದೀ ಚಳವಳಿಯ ಸತ್ಯಾಗ್ರಹವು ಇತಿಹಾಸದಲ್ಲಿಯೇ ಒಂದು ಅಪೂರ್ವವೂ, ಇಷ್ಟವೂ ಆದ ಘಟನೆ, ಪ್ರಪಂಚದಲ್ಲಿಯೇ ಬಾರ್ಡೋಲಿಯನ್ನು ಬಿಟ್ಟರೆ ಇಂಥ ಚಳವಳಿ ನಡೆದುದಿಲ್ಲ.”

ಈ ಮೇಲಿನವರ ಅಭಿಪ್ರಾಯಗಳು ಅಂಕೋಲೆಯಲ್ಲಿ ನಡೆದ ಕರಬಂದೀ ಚಳವಳಿಯ ಮೇಲೆ ಸಾಕಷ್ಟು ಬೆಳಕು ಚೆಲ್ಲುತ್ತವೆ.

ಈ ರೀತಿಯಾಗಿ ನಾಡಿನ ಎಲ್ಲಾ ಭಾಗದ ಯೋಧರನ್ನು ಆಕರ್ಷಿಸಿ ಎಳೆದು ತಂದು ನಡೆಸಿದ ಕರಬಂದೀ ಹೋರಾಟವನ್ನು ದೇಶದ ಇನ್ಯಾವ ಪ್ರದೇಶದ ಹೋರಾಟಕ್ಕೆ ಹೋಲಿಸಬಹುದು ಎಂಬುದನ್ನು ವಾಚಕರೇ ತೀರ್ಮಾನಿಸಬೇಕು.