ದಿನಾಂಕ ೨೫ ರಂದು ಇಂಥ ದೊಡ್ಡ ಸಂತೆಯಲ್ಲಿ ಉಪ್ಪು ಮಾರಲು ಕುಳಿತಿದ್ದ ನಾಡವರ ಧುರೀಣರಾದ, ಹನಮ್ಮಣ್ಣಾ ಗೋವಿಂದ ನಾಯಕ, ವಂದಿಗೆ ಬೊಮ್ಮಯ್ಯ, ರಾಕು ಗಾಂವಕರ ಬಾಸಗೋಡ, ಬೀರಣ್ಣ ಬೊಮ್ಮಯ್ಯ ನಾಯಕ ಕಣಗಿಲ, ದೇವಣ್ಣಾ ಹೊನ್ನಪ್ಪ ನಾಯಕ ವಂದಿಗೆ, ಈ ನಾಲ್ವರನ್ನು ಸೆರೆ ಹಿರಿದರು. ಆದರೂ ನಾಡವರು ವಿಕಾರವಶರಾಗದೆ, ಶಾಂತ ರೀತಿಯಿಂದ ಉಪ್ಪು ಮಾರುವುದನ್ನು ಮುಗಿಸಿ, ತಾಲೂಕ ಕಚೇರಿಯ ಮುಂದಿನ ಬೈಲಿಗೆ ಬಂದು ಸಭೆ ಸೇರಿದರು.ಈ ಸಭೆಯಲ್ಲಿ ಶ್ರೀ ಜೋಗಿ ಬೀರಣ್ಣ ನಾಯಕ ಶೆಟಗೇರಿ ಇವರು ಭಾಷಣ ಮಾಡುತ್ತಿರುವಾಗಲೇ ಫೌಜದಾರರು ಅವರನ್ನು ಬಂಧಿಸಿದರು. ಆದರೂ ಸಭೆಯಲ್ಲಿ ಎಷ್ಟೂ ಗೊಂದಲವಾಗದೆ ಜಯಘೋಷದೊಂದಿಗೆ ಅವರನ್ನು ಬೀಳ್ಕೊಟ್ಟು ಸಭೆಯ ಮುಂದಿನ ಕೆಲಸವು ಸಾಗಿತು. ದಂಡ ತುಂಬದಿದ್ದರೆ ಮತ್ತೆ ೨ ತಿಂಗಳು ಸಶ್ರಮ ಶಿಕ್ಷೆ. ೧೦೦ ರೂ. ದಂಡ, ದಂಡ ತುಂಬದಿದ್ದರೆ ಮತ್ತೆ ೨ ತಿಂಗಳ ಶಿಕ್ಷೆ ಹಾಗೂ ಉಳಿದ ನಾಲ್ವರಿಗೆ ತಲಾ ೪ ತಿಂಗಳ ಶಿಕ್ಷೆ, ೫೦ ರೂ. ದಂಡ, ದಂಡ ಕೊಡದಿದ್ದರೆ ಮತ್ತೆ ೨ ತಿಂಗಳ ಶಿಕ್ಷೆ ವಿಧಿಸಿ, ಜೈಲಿಗೊಯ್ದರು.

ಮುಂದೆ ಇದೇ ರೀತಿಯಲ್ಲಿ ಉಪ್ಪಿನ ಸತ್ಯಾಗ್ರಹವು ಮಳೆಗಾಲದವರೆಗೂ ನಡೆಯಿತು. ಸಾಣಿಕಟ್ಟೆ ಉಪ್ಪಿನಾಗರದ ದಾಳಿಯೂ ನಡೆಯಿತು. ಸರ್ಕಾರದ ಬಂಧನ ಸತ್ರವೂ ಹೆಚ್ಚುತ್ತಾ ಹೋಯಿತು. ಪೊಲೀಸರ ಬಂಧನ ಸತ್ರವು ಹೆಚ್ಚಿದಷ್ಟು ಸತ್ಯಾಗ್ರಹಿಗಳು ಕಾಯ್ದೆ ಮುರಿಯಲು ಹೆಚ್ಚುತ್ತಲೇ ಹೋದರು. ಬಿಟ್ಟೂ ಬಿಡದೆ ನಡೆದ ಅಂಕೋಲೆಯ ಈ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕನ್ನಡ ನಾಡಿದ ಹಲವಾರು ಸತ್ಯಾಗ್ರಹಿಗಳು ಶಿಕ್ಷೆಹೊಂದಿ ಜೈಲು ಸೇರಿದ್ದಲ್ಲದೆ, ಅಂಕೋಲಾ ತಾಲೂಕಿನ ಅಸಂಖ್ಯ ಗಂಡಸರೂ, ಹೆಂಗಸರೂ ಸತ್ಯಾಗ್ರಹ ಮಾಡಿ, ಜೈಲು ಸೇರಿದರು. ಸತ್ಯಾಗ್ರಹಿಗಳನ್ನು ಕಾಯ್ದೆ ಭಂಗ ಮಾಡಿದವರನ್ನು ಬಂಧಿಸುವುದನ್ನೇ ಬಿಟ್ಟು ಬಿಟ್ಟಿತು. ಹೀಗಾಗಿ ಅಂಕೋಲೆಯಲ್ಲಿ ಉಪ್ಪಿನ ಕಾಯ್ದೆಯು ಇದ್ದೂ ಇಲ್ಲದಂತಾಯಿತು. ಮುಂದೆ ಗಾಂಧಿ-ಇರ್ವಿನ್ ಒಪ್ಪಂದದಲ್ಲಿ ಸಮುದ್ರ ಕರಾವಳಿಯ ಜನರು ಉಪ್ಪು ಮಾಡಿ, ತಮ್ಮ ತಮ್ಮ ಹಳ್ಳಿಗಳಲ್ಲಿ ಮಾರಬಹುದು ಎಂದು ತೀರ್ಮಾನವಾಯಿತು.

ದೀರ್ಘಕಾಲ ನಡೆದ ಅಂಕೋಲೆಯ ಉಪ್ಪಿನ ಸತ್ಯಾಗ್ರಹದ ಅವಧಿಯಲ್ಲಿ ನಾಡಿದ ನೂರಾರು ನಾಯಕರು ಅಂಕೋಲೆಗೆ ಬಂದು ರಣಕಹಳೆ ಊದಿದವರಾಗಿದ್ದರು. ನೂರಾರು ಜನರು ಸತ್ಯಾಗ್ರಹ ನಡೆಸಿ, ಜೈಲು ಶಿಕ್ಷೆ ಅನುಭವಿಸಿದವರಾಗಿದ್ದರು. ಇಡೀ ಕರ್ನಾಟಕದ ಆ ಎಲ್ಲರ ಸೇರ್ಪಡೆಯಿಂದಾಗಿ ಉಪ್ಪಿನ ಸತ್ಯಾಗ್ರಹದ ಕಾಲಕ್ಕೆ ಅಂಕೋಲೆಯು ಪುಟ್ಟ ಕರ್ನಾಟಕದಂತೆಯೇ ಕಾಣುತ್ತಿತ್ತು. ಅಂದಿನ ರಾಷ್ಟ್ರೈಕ್ಯತೆ, ಭಾವೈಕ್ಯತೆ, ದೇಶಪ್ರೇಮ, ರಾಷ್ಟ್ರಸೇವೆ, ತ್ಯಾಗಗಳಿಂದ ಅಂಕೋಲೆಯಲ್ಲಿ ರಾಷ್ಟ್ರಸೇವೆಯ ಹೊಸಲೋಕವೇ ನಿರ್ಮಾಣವಾಗಿತ್ತು. ಆ ಸನ್ನಿವೇಶವನ್ನು ಅಂದು ನೋಡಿದವರು ನೆನಪಿಸಿಕೊಂಡು ಮೈಮರೆಯಬಹುದೇ ಹೊರತು ಅದನ್ನು ವರ್ಣಿಸಲು ಶಬ್ದ ಸಾಲದು. ಈ ಮೇಲಿನ ಜನರ ಸಮಾವೇಶ ಮತ್ತು ಸಂಗತಿಗಳನ್ನು ತಿಳಿದುಕೊಂಡರೆ, ಅಂಕೋಲಾ ತಾಲೂಕಿನ ಉಪ್ಪಿನ ಸತ್ಯಾಗ್ರಹದ ಮಹತ್ವವು ತಿಳಿದು ಬರುವಂತಿದೆ.

ಅಂಕೋಲೆಯ ಉಪ್ಪಿನ ಸತ್ಯಾಗ್ರಹವು ಈ ಪ್ರಚಂಡ ಯಶಸ್ಸನ್ನು ಕಂಡು ಹಿಗ್ಗಿದ ಕವಿ ದಿನಕರ ದೇಸಾಯಿಯವರು ಇನ್ನೊಂದು ಹಾಡನ್ನು ಅಭಿಮಾನದಿಂದ ಹಾಡಿದರು. ಅದು ಹೀಗಿದೆ:-

“ಅಂಕೋಲೆಯವರು | ನಾವು | ಪರಮ ಧನ್ಯರು || ಪಲ್ಲ ||
ಪುಣ್ಯ ಭಾರತವನು ಸುಲಿದು | ಜನರ ಶಕ್ತಿಯನ್ನು ಸೆಳೆದು |
ಉಪ್ಪಿಗೆ ಕರ ಹಾಕಿದಂಥ | ವೈರಿಗಳು ಕಾದು ನಿಂಥ || ಅಂಕೋಲೆಯವರು ||

ಭರತಭೂಮಿ ಚರಣಕೆರಗಿ | ಪ್ರಾಣಭೀತಿಯನ್ನು ನೀಗಿ |
ಧೈರ್ಯದಿಂದ ಸೆರೆಗೆಹೋಗಿ | ರಾಷ್ಟ್ರಧ್ವಜವ ಎತ್ತಿಹಿಡಿದ || ಅಂಕೋಲೆಯವರು ||

ದೇಶಪಾಂಡೆ, ಹರಡೀಕರರು | ವೀರಕೌಜಲಗಿಯವರು |
ರಂಗನಾಥ ದಿವಾಕರರು | ಹಸ್ತದಿಂದ ಹರಸಿದಂಥ || ಅಂಕೋಲೆಯವರು ||

ಎಂದು ಧನ್ಯತೆಯ ಹಾಡನ್ನು ಹಾಡಿದ ದಿನಕರರು, ಅಂಕೋಲೆಯು ಗಳಿಸಿದ ಈ ವಿಜಯವು ಕನ್ನಡ ನಾಡಿಗೇ ದೊರೆತ ವಿಜಯವಾದ ಕಾರಣ ನಾಡಿದ ಅಭಿಮಾನದಿಂದ ಮತ್ತೆ ಹಾಡಿದರು.

“ನೋಡು ನೋಡು ನಮ್ಮ ನಾಡು| ಜಯವ ಹೊಂದಿತು |
ಕೊಡದೆ ಕಪ್ಪ | ಮಾಡಿ ಉಪ್ಪ | ಯಶವ ತಂದಿತು ||
ಗಾಂಧಿಯವರ ಮಾತ ಕೇಳಿ | ಹೃದಯದೊಳಗೆ ಧೈರ್ಯತಾಳಿ |
ದಾಸ್ಯ ಶೃಂಖಲೆಯನು ಸೀಳಿ | ಮುಂದೆ ಬಂದಿತು |
ಕಡಲ ತೀರ | ಧೀರ ವೀರ | ರಿಂದ ತುಂಬಿತು || ನೋಡು ನೋಡು ||

ಅಂಕೋಲೆಯ ಉಪ್ಪಿನ ಸತ್ಯಾಗ್ರಹದ ಯಶಸ್ಸಿಗೆ ಕವಿ ದಿನಕರರು ಬರೆದ ಈ ಮೇಲಿನ ಹಾಡುಗಳು ಸಾಕ್ಷಿಯಾಗಿ ಉಳಿದುಕೊಂಡಿವೆ.

ಈ ಉಪ್ಪಿನ ಸತ್ಯಾಗ್ರಹದಿಂದ ಅಂಕೋಲಾ ತಾಲೂಕಿನ ಜನತೆಯಲ್ಲಿ ರಾಷ್ಟ್ರಪ್ರೇಮವು ಹೆಚ್ಚಿತು. ಬ್ರಿಟೀಷ ಸರ್ಕಾರದ ಭಯವು ಇಲ್ಲದಂತಾಯಿತು. ಜೈಲಿನ ಹೆದರಿಕೆಯು ಇಲ್ಲದಾಯಿತು. ಶಿಸ್ತು-ಸಂಯಮಗಳ ರೂಢಿಯಾಯಿತು. ಅಹಿಂಸಾಪಾಲನೆಯು ರೂಢೀಗತವಾಯಿತು. ಈ ಹಿಂದೆ ನಡೆದ ಅಸಹಕಾರ ಚಳವಳಿಯಿಂದ ಅಂಕೋಲಾ ತಾಲೂಕು ‘ಗಾಂಧೀ ತಾಲೂಕು’ ಎಂದು ಹೆಸರು ಗಳಿಸಿದ್ದರೆ, ಉಪ್ಪಿನ ಸತ್ಯಾಗ್ರಹದಲ್ಲಿ ‘ಕರ್ನಾಟಕದ ರಣಕ್ಷೇತ್ರ’ವಾಗಿ ಯಶಸ್ಸು ಪಡೆಯಿತು. ಅಸಹಕಾರ ಚಳವಳಿಯ ಕಾಲದಲ್ಲಿಯಂತೆ, ಉಪ್ಪಿನ ಸತ್ಯಾಗ್ರಹದಲ್ಲಿಯೂ ಅಂಕೋಲಾ ತಾಲೂಕಿನ ಯಾವತ್ತೂ ಹಳ್ಳಿ ಹಾಗೂ ಪಟ್ಟಣದ ಗಂಡಸರು, ಹೆಂಗದಸರು, ಶಿಕ್ಷಕರು, ವಿದ್ಯಾರ್ಥಿಗಳು ಆದಿಯಾಗಿ ಸಮಸ್ತಜನರೂ ಸಂಪೂರ್ಣವಾಗಿ ಪಾಲ್ಗೊಂಡಿದ್ದರು. ಅದರಲ್ಲಿಯೂ ಅಂದಿನ ಎಡ್ವರ್ಡ ಹೈಸ್ಕೂಲು ಇಂದಿನ (ಜೈಹಿಂದ ಹೈಸ್ಕೂಲು) ಸಂಪೂರ್ಣವಾಗಿ ಭಾಗ ತೆಗೆದುಕೊಂಡಿತ್ತು.

೧೯೩೦ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹವು ಗುಜರಾಥದ ಧಾರಸಾನಾ, ಮತ್ತು ಮುಂಬಯಿಯ ವಢಾಲಾ, ಹಾಗೂ ಮಹಾರಾಷ್ಟ್ರದ ಶಿರೋಡಾ, ಈ ಸ್ಥಳಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ನಡೆದು  ಪ್ರಸಿದ್ಧಿಯಾಗಿದೆ. ಆದರೆ, ಧಾರಾಸಾನಾ ಉಪ್ಪಿನ ಆಗರದ ದಾಳಿಯಲ್ಲಿ ಘರ್ಷಣೆ ಉಂಟಾಗಿ ನೂರಾರು ಜನರು ಲಾಠಿ ಪೆಟ್ಟಿನಿಂದ ಗಾಯಗೊಂಡು, ಇಬ್ಬರು ಸ್ಥಳದಲ್ಲೇ ಸತ್ತರು. ಅದೇ ಪ್ರಕಾರ ವಢಾಲಾ ಉಪ್ಪಿನಾಗರಕ್ಕೆ ದಾಳಿ ಇಟ್ಟಾಗಲೂ ೧೫೦ ಜನರು ಲಾಠಿ ಪೆಟ್ಟಿನಿಂದ ಗಾಯಗೊಂಡರು. ಶಿರೋಡಾದಲ್ಲಿಯೂ, ಲಾಠೀಚಾರ್ಜ್‌ ಮಾಡಿದ್ದರು. ಆದರೆ, ಅಂಕೋಲಾ ತಾಲೂಕಿನಲ್ಲಿ ಅಷ್ಟೊಂದು ದೀರ್ಘ ಕಾಲದ ಉಪ್ಪಿನ ಕಾಯದೆ ಭಂಗ ನಡೆದು ಸಾಣಿಕಟ್ಟೆ ಉಪ್ಪಿನಾಗರದ ದಾಳಿಯಂಥ ಬೃಹತ್ಪ್ರಮಾಣದ ದಾಳಿ ನಡೆದಾಗಲೂ ಸಹ ಯಾವದೇ ಉದ್ರೇಕ ಕಾರಕವಾದ ವಾತಾವರಣಕ್ಕೆ ಎಡೆ ಕೊಡದೆ, ಶಾಂತ ರೀತಿಯಿಂದ, ಅಹಿಂಸಾತ್ಮಕವಾಗಿ ಕಾಯ್ದೆ ಭಂಗ ಚಳವಳಿ ನಡೆದದ್ದು ಅಂಕೋಲೆಯ ಸತ್ಯಾಗ್ರಹದ ವೈಶಿಷ್ಟ್ರವಾಗಿರುತ್ತದೆ.

ಉಪ್ಪಿನ ಸತ್ಯಾಗ್ರಹದ ನಂತರ: ಅಂಕೋಲಾ ತಾಲೂಕಿನಲ್ಲಿ ಅಸಹಕಾರ ಚಳವಳಿಯಿಂದ ಆರಂಭಗೊಂಡು ಒಂದಲ್ಲ ಒಂದು ರಾಷ್ಟ್ರೀಯ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ಉಪ್ಪಿನ ಸತ್ಯಾಗ್ರಹವು ಯಶಸ್ವಿಯಾದ ನಂತರ ಮಳೆಗಾಲದಲ್ಲಿ ಜಂಗಲ್ ಸತ್ಯಾಗ್ರಹ, ಹುಲ್ಲುಬನ್ನಿ ಸತ್ಯಾಗ್ರಹ, ಸೆರೆ-ಸಿಂದೀ ಅಂಗಡಿಗಳ ಮುಂದೆ ಪಿಕೇಟಿಂಗು, ನೂಲುವುದು, ನೇಯುವುದು, ಸ್ವದೇಶಿ ವಸ್ತುಗಳ ಮಾರಾಟ, ಗಾಂವಠೀ ಶಾಲೆಗಳ ಸ್ಥಾಪನೆ ಮುಂತಾದ ಕಾರ್ಯಕ್ರಮಗಳು ತಾಲೂಕು ತುಂಬಾ ನಡೆದಿದ್ದವು.

೧೯೩೧ ರಲ್ಲಿ ಡಾಕ್ಟರ ಹರ್ಡೀಕರರ ಸೇವಾದಳ ಶಿಕ್ಷಣ ಶಿಬಿರವು ಬಾಸಗೋಡದಲ್ಲಿ ಸ್ಥಾಪನೆಯಾಯಿತು. ಹಳ್ಳಿಗಳ ನೂರಾರು ತರುಣರು ಅದರಲ್ಲಿ ತರಬೇತಿ ಪಡೆದರು. ಈ ರೀತಿಯಾಗಿ ಅಂಕೋಲಾ ತಾಲೂಕು ಸತ್ಯಾಗ್ರಹ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಅವಿರತವಾಗಿ ನಡೆಸಿಕೊಂಡು ಬಂದಿತ್ತು.

ಸ್ವಾತಂತ್ರ್ಯ ಚಳವಳಿಯಲ್ಲಿ ಬ್ರಹ್ಮಾಸ್ತ್ರವಾದ ಕರನಿರಾಕರಣೆ ಚಳವಳಿ: ಮಹಾತ್ಮಾ ಗಾಂಧೀಜಿಯವರು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಬ್ರಿಟೀಷರ ಸರ್ಕಾರದ ವಿರುದ್ಧ ಕೈಕೊಂಡ ಸತ್ಯಾಗ್ರಹಗಳಲ್ಲಿ ಕರನಿರಾಕರಣೆ ಚಳುವಳಿಯು ಅತ್ಯಂತ ಕಠಿಣತರವಾದ ಚಳವಳಿಯಾಗಿತ್ತು. ಅದು ಚಳವಳಿಯ ಬ್ರಹ್ಮಾಸ್ತ್ರವೆಂದು ಪರಿಗಣಿಸಲಾಗಿತ್ತು. ಸರ್ಕಾರವನ್ನು ನಡೆಸಲು ಅಗತ್ಯವಾದ ಉತ್ಪನ್ನದ ಮೂಲವಾದ ಕರವನ್ನೇ ನಿಲ್ಲಿಸಿಬಿಡುವ ಈ ಚಳವಳಿಯ ವಿರುದ್ಧ ಸರ್ಕಾರವು ತನ್ನ ಉಳಿವಿಗಾಗಿ ಯಾವ ಯಾವ ಬಗೆಯ ಕಠೋರ ದಬ್ಬಾಳಿಕೆಗೆ ಇಳಿಯಬಹುದೆಂಬುದನ್ನು ಊಹಿಸಿದರೆ ಈ ಚಳವಳಿಯ ಮಹತ್ವ ತಿಳಿಯುವ ಹಾಗಿದೆ. ಈ ಕರಬಂಧೀ ವಳವಳಿ ಕೈಕೊಳ್ಳುವವರು ಇತರ ವಳವಳಿಗಳಲ್ಲಿಯಂತೆ ಕೇವಲ ವೈಯಕ್ತಿಕ ಶಿಕ್ಷೆ ಲಾಠೀ ಪೆಟ್ಟು ಇತ್ಯಾದಿ ಕಷ್ಟಕ್ಕೆ ಸಿದ್ಧರಿದ್ದರೆ ನಡೆಯುತ್ತಿದ್ದಿಲ್ಲ. ಕರಬಂಧೀ ಕೈಕೊಳ್ಳುವ ಕುಟುಂಬಗಳು ತಮ್ಮ ಕುಟುಂಬದ ಜೀವನಾಧಾರವಾದ ಹೊಲ-ಮನೆ, ಪಾತ್ರೆ-ಪಗಡೆ, ದನ-ಕರ, ಆದಿಯಾಗಿ ತ್ಯಾಗಮಾಡಲೂ ಸಿದ್ಧರಾಗಿ ಕುಟುಂಬದ ಎಲ್ಲಾ ಜನರೂ ಸರ್ವತ್ಯಾಗಕ್ಕೆ ಸಿದ್ಧರಾಗಿರಬೇಕಾಗಿದ್ದಿತು. ಆದ್ದರಿಂದಲೇ ಇತರ ಚಳವಳಿಗಳಂತೆ ಕರನಿರಾಕರಣೆ ಚಳವಳಿಯು ಆಯ್ದ ಕೆಲವೇ ಪ್ರದೇಶಗಳಲ್ಲಿ ಮಾತ್ರ ನಡೆದಿತ್ತು. ಆದರೂ ಕೂಡಾ ಅಲ್ಪ ಅವಧಿಯಲ್ಲಿ ತೀರ್ಮಾನವಾಗ ಬಹುದಾದಂಥ ಬೇರೆ ಬೇರೆ ಕಾರಣಗಳ ಮೂಲಕವಾಗಿ ನಡೆದಿತ್ತು. ಆದ್ದರಿಂದ ಅಂಕೋಲಾ ತಾಲೂಕು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಎಷ್ಟೊಂದು ಮಹತ್ತರವಾದ ಪಾತ್ರವಹಿಸಿತ್ತು ಎಂಬುದು ಮನವರಿಕೆಯಾಗಬೇಕಾದರೆ ಆ ಕಾಲಕ್ಕೆ ದೇಶದ ಇತರ ಭಾಗಗಳಲ್ಲಿ ನಡೆದ ಕರನಿರಾಕರಣೆ ಚಳವಳಿಯ ಸ್ವರೂಪವನ್ನು ಸಂಕ್ಷಿಪ್ತವಾಗಿಯಾದರೂ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಮಹಾತ್ಮಾಗಾಂಧೀಜಿಯವರು ಭಾರತದಲ್ಲಿ ಮೊಟ್ಟ ಮೊದಲನೆಯದಾಗಿ ೧೯೧೭-೧೮ ರಲ್ಲಿ ಖೇಡಾಜಿಲ್ಲೆಯಲ್ಲಿ ಅಲ್ಲಿಯ ರೈತರಿಂದ ಕರನಿರಾಕರಣೆ ಚಳವಳಿ ನಡೆಸಿದ್ದರು. ಆ ವರ್ಷ ಅಲ್ಲಿ ಬರಗಾಲ ಬಂದ ಕಾರಣ ತೀವ್ರ ಸೂಟ ಬಿಡಬೇಕೆಂಬುದನ್ನು ಅದಕ್ಕೆ ಕಾರಣವಾಗಿತ್ತು. ಆ ಚಳವಳಿಯಿಂದಾಗಿ ಸರ್ಕಾರವು ತೀವ್ರೇ ಕೊಡಲಾರದ ಪರಿಸ್ಥಿತಿಯವರ ತೀವ್ರೆ ಸೂಟ ಬಿಡಲು ಒಪ್ಪಿಕೊಂಡಿತು. ಆದರೂ ಆ ಚಳವಳಿ ಯಶಸ್ವಿಯಾಯಿತು ಎಂಬ ಸಮಾಧಾನ ತನಗೆ ಆಗಿಲ್ಲ ಎಂದು ಸ್ವತಃ ಗಾಂಧೀಜಿಯವರು ಹೇಳಿದ್ದಾರೆ.

ಆಮೇಲೆ ಗಾಂಧೀಜಿಯವರು ೧೯೨೨ ರಲ್ಲಿ ಬಾರ್ಡೋಲಿಯಲ್ಲಿ ಪ್ರಯೋಗಕ್ಕಾಗಿ ಕರನಿರಾಕರಣೆ ಕೈಕೊಳ್ಳುವ ವಿಚಾರಮಾಡಿ, ಸ್ವತಃ ಬಾರ್ಡೋಲಿಗೆ ಹೋಗಿ ತಳವೂರಿದರು. ಅಲ್ಲಿಯ ರೈತರಿಗೆ ಸತ್ಯಾಗ್ರಹದ ತತ್ವವನ್ನು ವಿವರಿಸಿ ತಿಳಿಸಿದರು. ಹಳ್ಳಿ-ಹಳ್ಳಿಗಳಿಗೆ ಹೋಗಿ ಸತ್ಯಾಗ್ರಹಕ್ಕೆ ರೈತರನ್ನು ಸಿದ್ಧಗೊಳಿಸಿದರು. ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ ಮೇಲೆ ಸರ್ಕಾರಕ್ಕೆ ತಿಳಿಸಿ ಕರಬಂಧೀ ಘೋಷಣೆ ಮಾಡುವದರಲ್ಲಿದ್ದರು. ಆದರೆ ಅದೇ ಹೊತ್ತಿಗೆ ಗೋರಖಪುರ ಜಿಲ್ಲೆಯ ಚೌರಿಚೌರಾದಿಂದ ಭೀಕರ ಹಿಂಸಾಚಾರದ ಸುದ್ಧಿಯೊಂದು ಗಾಂಧೀಜಿಯ ಕಿವಿಗೆ ಬಿತ್ತು. ಆ ಹಿಂಸಾಚಾರ ನಡೆದದ್ದು ಹೀಗೆ-

ರೌಲೆಟ್ ಶಾಸನದಿಂದ ಮತ್ತು ಸರ್ಕಾರದ ದಬ್ಬಾಳಿಕೆಯಿಂದ ಜನರು ಬೇಸತ್ತು ಬ್ರಿಟೀಷರ ವಿರುದ್ಧ ಅಸಹಕಾರ-ಅಸಂತೋಷ ನಡೆಯುತ್ತಿರುವಾಗಲೇ ಲಾರ್ಡ ರೀಡಿಂಗಸಾಹೇಬರು ಬ್ರಿಟೀಷ ಯುವರಾಜನಾದ ಪ್ರಿನ್ಸ-ಆಫ್ ವೇಲ್ಸ ಅವರನ್ನು ಭಾರತಕ್ಕೆ ತಂದು ಮೆರೆಯಿಸುವ ವಿಚಾರಮಾಡಿ ಕರೆ ತಂದರು. ಜನರು ಎಲ್ಲೆಲ್ಲೂ ಅವರಿಗೆ ಬಹಿಷ್ಕಾರ ಹಾಕಿದರು. ಅದರಲ್ಲಿಯೂ ಕಲಕತ್ತೆಯ ಹರತಾಳವು ಅಪೂರ್ವವಾಗಿತ್ತು. ಅದನ್ನು ಕಂಡು ಬಂಗಾಲ ಸರ್ಕಾರದವರು ತಾ. ೧೯-೧೧-೧೯೨೧ ರಲ್ಲಿ ಕ್ರಿಮಿನಲ್ ಲಾ ಎಮೆಂಡ್‌ಮೆಂಟ್ ಕಾಯದೆ ಅನುಸಾರವಾಗಿ ಖಿಲಾಫತ್ ಮತ್ತು ಕಾಂಗ್ರೆಸ್ ಸ್ವಯಂ ಸೇವಕ ಸಂಘಗಳು, ಇತರ ಕೆಲವು ಸಮಿತಿಗಳು ಬೇಕಾಯದೇಶೀರ ಮಾಡಲ್ಪಟ್ಟಿವೆ ಎಂದು ಜಾಹೀರ ಮಾಡಿದರು. ಅನೇಕರು ಕರಾಳ ಕಾಯದೆಯನ್ನು ಮುರಿದು ಜೈಲು ಸೇರಿದರು. ಅದೇ ಹೊತ್ತಿಗೆ ಚೌರಿಚೌರಾದಲ್ಲಿ ಶಾಂತರೀತಿಯಿಂದ ಭಾರೀ ಮೆರವಣಿಗೆಯೊಂದು ಹೊರಟು ಮುಗಿದಿತ್ತು. ಆದರೆ ಮೆರವಣಿಗೆ ಮುಕ್ತಾಯವಾಗುತ್ತಿದ್ದಂತೆಯೇ, ಹಿಂದುಳಿದಿದ್ದ ಕೆಲವು ಮೆರವಣಿಗೆಕಾರರನ್ನು ಪೊಲೀಸರು ಹಿಡಿದು ಥಳಿಸ, ಘಾಸಿಗೊಳಿಸಿದರು. ಹಿಂಸೆಗೊಳಗಾದ ಆ ಜನರು ಸಹಾಯಕ್ಕಾಗಿ ಕೂಗಿಕೊಂಡರು. ಮೆರವಣಿಗೆಯಗುಂಪು ಹಿಂದಿರುಗಿ ಬಂದಿತು. ಪೊಲೀಸರು ಅವರ ಮೇಲೆ ಗುಂಡು ಹಾರಿಸಿದರು. ಪೊಲೀಸರಲ್ಲಿದ್ದ ತೋಟಾಗಳು ತೀರಿ ಹೋದ ಮೇಲೆ ಅವರು ತಮ್ಮ ಆತ್ಮರಕ್ಷಣೆಗಾಗಿ ಪೊಲೀಸ ಠಾಣೆಗೆ ಹಿಂತಿರುಗಿದರು. ಮೆರವಣಿಗೆಕಾರರ ಗುಂಪು ಠಾಣೆಗೆ ಬೆಂಕಿ ಇಟ್ಟಿತು. ಠಾಣೆಯಲ್ಲಿ ಸಿಕ್ಕಿಬಿದ್ದಿದ್ದ ೨೨ ಪೊಲೀಸರು ಜೀವ ಉಳಿಸಿಕೊಳ್ಳಲು ಹೊರಗೆ ಓಡಿ ಬಂದರು. ಅವರು ಹೊರಗೆ ಬೀಳುತ್ತಲೇ, ಮೆರವಣಿಗೆಕಾರರು ಅವರನ್ನು ಹಿಡಿದು ತುಂಡು ತುಂಡಾಗಿ ಕತ್ತರಿಸಿ, ಆ ತುಂಡುಗಳನ್ನು ಧಗಧಗಿಸುತ್ತಿದ್ದ ಬೆಂಕಿಗೆ ಆಹುತಿ ಮಾಡಿದರು. ಆ ಸುದ್ದಿ ಕೇಳಿ ಮಹಾತ್ಮಾಜೀಯವರಿಗೆ ಆಘಾತವಾಯಿತು. ಅವರು ಐದು ದಿವಸ ಉಪವಾಸ ಮಾಡಿದರಲ್ಲದೆ, ಜನರು ಅಹಿಂಸಾತತ್ವದಂತೆ ನಡೆಯಲು ಸಿದ್ಧರಾಗಿಲ್ಲವೆಂದು ತಿಳಿದು ಇಡೀ ದೇಶದಲ್ಲಿ ಚಳವಳಿಯನ್ನು ನಿಲ್ಲಿಸಿಬಿಟ್ಟರು. ಆದ್ದರಿಂದ ಈ ಸಾರೆ ಬಾರ್ಡೋಲಿಯಲ್ಲಿ ನಡೆಯಬೇಕಾಗಿದ್ದ ಕರನಿರಾಕರಣೆ ಚಳವಳಿ ನಡೆಯಲಿಲ್ಲ.

ಬಾರ್ಡೋಲಿಯಲ್ಲಿ ನಡೆದ ಜಗತ್ಪತ್ರಸಿದ್ಧವಾದ ಕರನಿರಾಕರಣೆ ಚಳವಳಿ: ೧೯೨೭ ರಲ್ಲಿ ಮುಂಬೈ ಸರ್ಕಾರವು ಬಾರ್ಡೋಲಿ ತಾಲೂಕಿನಲ್ಲಿ ರೈತರ ಕೂಗನ್ನು ಲೆಕ್ಕಿಸದೆ, ಕಾಯದೆ ಮಂಡಳದ ಗೊತ್ತುವಳಿಗಳಿಗೂ ವಿರುದ್ಧವಾಗಿ ಬಾರ್ಡೋಲಿ ತಾಲೂಕಿನ ಹಫ್ತೆಯನ್ನು ೧೦೦ ಕ್ಕೆ ೨೨ ರಷ್ಟು ಏರಿಸಿತು. ಈ ರೀತಿ ತೀರ್ವೆಯನ್ನು ಏರಿಸಿದ ತೀರ್ಮಾನವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಬಾರ್ಡೋಲಿಯ ರೈತರೂ ಸರ್ಕಾರವನ್ನು ಪರಿಪರಿಯಿಂದ ಕೇಳಿಕೊಂಡರು. ಆದರೂ ಸರ್ಕಾರವು ಅವರ ಕೇಳಿಕೆಗೆ ಕಿವಿಗೊಡದೇ ಹೋಯಿತು. ಆದ್ದರಿಂದ ಬಾರ್ಡೋಲಿಯ ರೈತರು ಮಹಾತ್ಮಾಜಿಯವರ ಮಾರ್ಗದರ್ಶನ ಪಡೆದು ವಲ್ಲಭಭಾಯಿಯವರ ನಾಯಕತ್ವದಲ್ಲಿ ಕರನಿರಾಕರಣೆ ಸತ್ಯಾಗ್ರಹ ಕೈಕೊಳ್ಳುವುದನ್ನು ನಿಶ್ಚಯಮಾಡಿದರು. ೧೯೨೮ನೇ ಫೆಬ್ರುವರಿ ೧೨ನೇ ತಾರೀಖಿನ ದಿವಸ ಸತ್ಯಾಗ್ರಹವು ಸಾರಲ್ಪಟ್ಟಿತು.

ಆ ಮಹಾನಾಯಕರ ನೇತೃತ್ವದಲ್ಲಿ ಬ್ರಿಟೀಷ ಸರ್ಕಾರದ ವಿರುದ್ಧ ದೇಶವೇ ಸಿದ್ಧವಾದ ಈ ಸಂದರ್ಭದಲ್ಲಿ ನಡೆದ ಈ ಚಳವಳಿಯ ಸುದ್ಧಿಯನ್ನು ಪ್ರಪಂಚದ ಬಾತ್ಮದಾರರೆಲ್ಲರೂ ಬಂದು ಪ್ರಸಾರಮಾಡಿದರು. ಬ್ರಿಟೀಷ್ ಪಾರ್ಲಿಮೆಂಟಿನಲ್ಲಿ ಸಹ ಬಾರ್ಡೋಲಿಯ ಈ ಸತ್ಯಾಗ್ರಹದ ಕುರಿತು ಚರ್ಚೆ ನಡೆದಿತ್ತು. ಅಷ್ಟೊಂದು ಪ್ರಚಾರ, ಪ್ರಸಿದ್ಧಿ ಬಾರ್ಡೋಲಿಯ ಚಳವಳಿಗೆ ಸಿಕ್ಕಿತ್ತು. ಬಾರ್ಡೋಲಿಯ ರೈತರಿಗೆ ಆರ್ಥಿಕ ತೊಂದರೆ ಆಗಬಾರದೆಂದು ಭಾರತದ ಎಲ್ಲ ಭಾಗಗಳಿಂದಲೂ, ಹಣದ ಸಹಾಯವು ಒದಗಿತ್ತು. ಅಷ್ಟೇ ಅಲ್ಲ ಪರರಾಷ್ಟ್ರಗಳಲ್ಲಿ ವಾಸಿಸುತ್ತಿದ್ದ ಶ್ರೀಮಂತ ಭಾರತೀಯರಿಂದಲೂ, ಲಕ್ಷಾಂತರ ರೂಪಾಯಿ ಹಣದ ಸಹಾಯವು ಒದಗಿತ್ತು. ಬಾರ್ಡೋಲಿಯ ರೈತರಿಗೆ ಸಹಾನುಭೂತಿ ತೋರಿಸುವುದಕ್ಕಾಗಿ ಜೂನ ೧೨ನೇ ತಾರೀಖಿನಂದು ಅಖಿಲ ಭಾರತದಲ್ಲಿ ಹರತಾಳ ನಡೆಸುವ ಬಗ್ಗೆ ಗಾಂಧೀಜಿಯವರು ಕರೆಕೊಟ್ಟಿದ್ದರು. ಆ ದಿನ ಇಡೀ ದೇಶದ ವ್ಯಾಪಾರ ವಹಿವಾಟು ಸ್ಥಗಿತವಾಗಿದ್ದವು.

ಆ ರೀತಿ ಪ್ರಚಾರ, ಅಷ್ಟೊಂದು ಜನರ ಸಹಾನುಭೂತಿ, ಆ ಪ್ರಕಾರದ ಹಣದ ಸಹಾಯ, ಅಷ್ಟೊಂದು ಹಿರಿಯ ನಾಯಕತ್ವ ಇವುಗಳಿಂದ ಬಾರ್ಡೋಲಿಯ ಕರನಿರಾಕರಣೆ ಚಳವಳಿ ನಡೆಯಹತ್ತಿತು.

ಇತ್ತ ಸರ್ಕಾರವು ಸಹ ಅಷ್ಟೇ ಬಿರುಸಿನ ದಬ್ಬಾಳಿಕೆಯ ಕ್ರಮವನ್ನು ಅನುಸರಿಸಿತು. ರೈತರನ್ನು ಬೆದರಿಸಿತು, ಲಾಠಿ ಪೆಟ್ಟುಗಳನ್ನು ಕೊಟ್ಟಿತು. ದನಕರುಗಳನ್ನೂ, ಕಾಳುಕಡಿಗಳನ್ನೂ ಜಪ್ತಿಮಾಡಿಸಿತು. ಜನರನ್ನು ಹಿಡಿದು ಸೆರೆಮನೆಗಟ್ಟಿತು. ದುರಾಚಾರಿಗಳಾಗಿದ್ದ ಪಠಾಣರನ್ನು ನಿಯಮಿಸಿತು. ಅವರು ಕಳುವು ಮಾಡಹತ್ತಿದರು. ಸ್ತ್ರೀಯರನ್ನು ಅವಮಾನಗೊಳಿಸಿದರು, ಜಗಳ ಹೈಡಿದರು, ತಲೆ ಬಡಿದರು, ರೈತರ ಹೊಲಗಳು ಜಪ್ತಾದವು, ಮನೆಗಳಿಗೆ ಬೀಗಮುದ್ರೆ ಹಾಕಿ, ಜನರನ್ನು ಹೊರಗೆ ಹಾಕಲಾಯಿತು. ಆದರೆ, ಜಪ್ತಾದ ಹೊಲಗಳನ್ನು ಇಡೀ ಗುಜರಾಥದಲ್ಲಿ ಕೊಳ್ಳುವವರಿದ್ದಿಲ್ಲ. ಇಷ್ಟಾದರೂ ಎಲ್ಲಿಯೂ ಶಾಂತಿ ಕದಡಲಿಲ್ಲ. ಸಂಘಟನೆ ಸಡಿಲಾಗಲಿಲ್ಲ. ಸರ್ಕಾರಿ ಅಧಿಕಾರಿಗಳಿಗೆ ಕುಡಿಯಲು ನೀರೂ ಸಿಗಲಿಲ್ಲ. ಹಸಿವೆಯಿಂದ ಬಳಲಿದ ಅಧಿಕಾರಿಗಳು ಊಟಕ್ಕಾಗಿ ಸ್ವಯಂ ಸೇವಕರ ಮೊರೆಹೋಗಬೇಕಾಗಹತ್ತಿತು. ಸರ್ಕಾರವು ಅಷ್ಟು ಕ್ರೂರತನದ ಕ್ರಮವನ್ನು ಅನುಸರಿಸಿದರೂ ಬಾರ್ಡೋಲಿಯ ರೈತರು ಧೃತಿಗೆಡದೆ ಹೋರಾಡಿದರು. ಬಂದ ಕಷ್ಟಗಳನ್ನೆಲ್ಲ ಎದುರಿಸಿದರು. ಅಹಿಂಸೆಯನ್ನು ಕಾದುಕೊಂಡು ನಿರ್ಧಾರದಿಂದ ಚಳವಳಿಯನ್ನು ಮುಂದುವರೆಸಿದರು. ಕಡೆಗೆ ಸರ್ಕಾರವೇ ಮಣಿಯಿತು. ಏರಿಸಿದ ಕರದ ಬಗ್ಗೆ ತಿರುಗಿ ವಿಚಾರ ಮಾಡಲು ಆಗಸ್ಟ್ ೬ನೇ ತಾರೀಖಿನ ದಿನ ಒಪ್ಪಿಕೊಂಡಿತು. ಕೌನ್ಸಿಲ್ಲಿನ ಸಭಾಸದರನ್ನು ಮುಂದಿಟ್ಟುಕೊಂಡು ನಡೆಸಿದ ಈ ಒಪ್ಪಂದದನ್ವಯ, ಸರ್ಕಾರವು ಜಪ್ತ ಮಾಡಿದ ಪಾತ್ರೆ, ಪಗಡೆ, ದನ-ಕರ, ಹೊಲ, ಮನೆಗಳಲ್ಲೆಲ್ಲ ತಿರುಗಿ ಹೊಟ್ಟಿತು. ಸೆರೆಯಲ್ಲಿದ್ದ ಎಲ್ಲರನ್ನು ಬಿಡುಗಡೆಮಾಡಿತು. ಆಗಸ್ಟ್ ೧೧ನೆಯ ತಾರೀಖಿಗೆ ಇಡೀ ತಾಲೂಕಿನಲ್ಲಿ ವಿಜಯೋತ್ಸವವು ಜರುಗಿತು.

ಈ ವಿಜಯದಿಂದ ವಲ್ಲಭಬಾಯಿ ಪಟೇಲ ಅವರಿಗೆ ‘ಸರದಾರ’ ಎಂಬ ಬಿರುದು ಬಂದಿತು. ಗುಜರಾಥ ಪ್ರಾಂತದ ವಲ್ಲಭಬಾಯಿ ಅವರು ಭಾರತದ ‘ಸರದಾರ’ ರಾದರು. ಬಾರ್ಡೋಲಿಯ ಹೆಸರು ಜಗತ್ಪ್ರಸಿದ್ಧವಾಯಿತು. ಆದರೆ ಬಾರ್ಡೋಲಿಯ ಈ ಇತಿಹಾಸ ಪ್ರಸಿದ್ಧ ಕರನಿರಾಕರಣೆ ಚಳವಳಿ ನಡೆದದ್ದು ೬ ತಿಂಗಳು ಮಾತ್ರ ಎಂಬ ಮಾತನ್ನು ಮರೆಯತಕ್ಕದ್ದಲ್ಲ-೧೯೩೧ ರಲ್ಲಿಯೂ ಬಾರ್ಡೋಲಿಯಲ್ಲಿ ಕರಬಂದಿ ಚಳವಳಿ ನಡೆಸಿದ್ದರೂ ಅದು ಅಷ್ಟು ಪ್ರಸಿದ್ಧ ಪಡೆಯಲಿಲ್ಲ.

ಬಾರ್ಡೋಲಿ ಕರಬಂದಿ ಚಳವಳಿಯ ನಂತರ: ಬಾರ್ಡೋಲಿಯಲ್ಲಿ ಕರಬಂದಿ ಚಳವಳಿ ನಡೆದ ನಂತರ ೧೯೨೯ರ್ಲಿ ಬಂಗಾಲದ ಮೈಮನಸಿಂಗ ಜಿಲ್ಲೆಯ ‘ಜೆಸೋರಿಯಾ’ ಮತ್ತು ‘ವಂಡವಿಲ್ಲಾ’ ಗಳಲ್ಲಿ ಕರನಿರಾಕರಣೆ ಚಳವಳಿ ನಡೆದಿತ್ತು. ಈ ಚಳವಳಿಗೆ ಸುಭಾಸಚಂದ್ರಬೋಸರು ಬೆಂಬಲ ನೀಡಿದ್ದರು. ಆಮೇಲೆ ಗುಜರಾಥದ ‘ಬೋರಸದ’ ಮತ್ತು ‘ರಾಸ’ ಎಂಬಲ್ಲಿಯೂ ಕರನಿರಾಕರಣೆ ಚಳವಳಿ ನಡೆದಿತ್ತು. ‘ರಾಸ’ ಚಳವಳಿಯ ಕಾಲಕ್ಕೆ ಪ್ರಚಾರ ಮಾಡುವಾಗ ವಲ್ಲಭಬಾಯಿಯವರು ಬಂಧಿಸಲ್ಪಟ್ಟರು ೩ ತಿಂಗಳು ಶಿಕ್ಷೆ ಹಾಗೂ ೫೦೦ ರೂ. ದಂಡ ವಿಧಿಸಲ್ಪಟ್ಟು ಜೈಲು ಸೇರಿದರು. ಸರದಾರರಿಗೆ ಇದೇ ಮೊದಲ ಜೈಲು.

ಈ ಮೇಲೆ ಬರೆದ ಚಳವಳಿಗಳೆಲ್ಲವೂ ರೈತರ ಆರ್ಥಿಕ ಕಾರಣಕ್ಕಾಗಿ ಕೈಕೊಂಡ ಚಳವಳಿಗಳಾಗಿದ್ದವು. ಅದೇ ಪ್ರಕಾರ ಆ ಕಾಲಕ್ಕೆ ಸಂಯುಕ್ತ ಪ್ರಾಂತ ಕರನಿರಾಕರಣೆ ನಡೆದಿತ್ತು. ಆ ಚಳವಳಿಗೆ ಕಾರಣವೇನೆಂದರೆ ಅಲ್ಲಿಯ ರೈತರ ಕಷ್ಟ ನಿವಾರಣೆಯ ಬಗ್ಗೆ ಸರ್ಕಾರದೊಡನೆ ಶಿಷ್ಟಾಯಿ ನಡೆಯುತ್ತಿದ್ದಾಗ ತೀರ್ವೆವಸೂಲಿ ಹಂಗಾಮು ಬಂತು. ಶಿಷ್ಟಾಯಿ ಮುಗಿವವರೆಗೆ ವಸೂಲಿಯನ್ನು ನಿಲ್ಲಿಸಬೇಕೆಂದು ಕಾಂಗ್ರೆಸ್ಸು ಸರ್ಕಾರವನನು ಕೇಳಿಕೊಂಡಿತು. ಸರ್ಕಾರವು ಅದನ್ನು ಮನ್ನಿಸಲಿಲ್ಲ. ಆದ್ದರಿಂದ ಪಂಡಿತ ಜವಾಹರಲಾಲ ಅವರ ನಾಯಕತ್ವದಲ್ಲಿ ಕರನಿರಾಕರಣೆ ವಳವಳಿ ನಡೆದಿತ್ತು. ಆ ಚಳವಳಿಯಲ್ಲಿ ಜವಾಹರಲಾಲ ನೆಹರು ಅವರು ಶಿಕ್ಷೆ ಹೊಂದಿದ್ದರು.

ಅದೇ ಪ್ರಕಾರ ೧೯೩೧ ರಲ್ಲಿ ಆರ್ಥಿಕ ಕಾರಣಕ್ಕಾಗಿಯೇ ಧಾರವಾಡ ಜಿಲ್ಲೆಯ ಹಿರೇಕೆರೂರ ತಾಲೂಕ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರ್ಸಿ, ಸಿದ್ಧಾಪುರ ತಾಲೂಕುಗಳಲ್ಲಿಯೂ ಕರನಿರಾಕರಣೆ ಚಳವಳಿ ನಡೆದಿತ್ತು. ಈ ಚಳವಳಿಗಳು ಗಾಂಧಿ-ಈರ್ವಿನ್ ಒಪ್ಪಂದದ ನಂತರವೂ ಒಂದೆರಡು ತಿಂಗಳು ನಡೆದು ರೈತರ ಬೇಡಿಕೆ ಪೂರೈಸಲು ಸರ್ಕಾರವು ಒಪ್ಪದೇ ಇದ್ದ ಕಾರಣ ಆ ಸಮಸ್ಯೆಯನ್ನು ರಂಗರಾವ ದಿವಾಕರರು, ಮಹಾತ್ಮಾಗಾಂಧಿ ವಲ್ಲಭಬಾಯಿ ಪಟೇಲ, ಜವಾಹರಲಾಲ ನೆಹರು, ಅವರುಗಳವರೆಗೂ ಒಯ್ದು ಆ ಎಲ್ಲರ ಪ್ರಯತ್ನದಿಂದಾಗಿ ಕೊನೆಗೆ ದಿವಾಕರ ಮತ್ತು ಕವೀಶನರ ಇವರ ನಡುವೆ ಸಂಧಾನ ನಡೆದು ಚಳವಳಿ ನಿಂತಿತು. ಈ ಒಪ್ಪಂದವು ೧೯೩೧ನೆಯ ಏಪ್ರಿಲ್‌ ಕ್ಕೆ ನಡೆಯಿತು. ಆಗ ದಕ್ಷಿಣಾ ಭಾಗದ ಕಮೀಶನರರು ಡಬ್ಲ್ಯು. ಡಬ್ಲ್ಯು. ಸ್ಮಾರ್ಟ್ ಅಂತ ಇದ್ದರು. ಈ ಒಪ್ಪಂದವು ‘ಸ್ಮಾರ್ಟ್‌-ದಿವಾಕರ’ ಒಪ್ಪಂದವೆಂದೇ ಪ್ರಸಿದ್ಧವಾಗಿದೆ.

ಇಲ್ಲಿಯವರೆಗೆ, ಭಾರತ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆದ ಕರನಿರಾಕರಣೆ ಚಳವಳಿಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದ್ದಾಯಿತು. ಇನ್ನು ಮೇಲೆ ಈ ಚಳವಳಿಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಅಂಕೋಲಾ ತಾಲೂಕಿನಲ್ಲಿ ನಡೆದ ಕರನಿರಾಕರಣೆ ಚಳವಳಿಯ ಬಗ್ಗೆ ತಿಳಿದುಕೊಳ್ಳೋಣ.

ಇಡೀ ಭಾರತ ದೇಶದಲ್ಲಿಯೇ ಮೊಟ್ಟ ಮೊದಲನೆಯದಾಗಿ, ರಾಜಕೀಯಕಾರಣ ಘೋಷಿಸಿ ಕೈಕೊಂಡ,

ಅಂಕೋಲೆಯ ಕರನಿರಾಕರಣೆ ಚಳವಳಿ: ಕರ್ನಾಟಕ ಸತ್ಯಾಗ್ರಹ ಮಂಡಳವು ಇಡೀ ಕರ್ನಾಟಕದ ಪರವಾಗಿ, ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲಾ ತಾಲೂಕನ್ನೇ ಆಯ್ಕೆ ಮಾಡಿದಂತೆ, ರಾಜಕೀಲ ಕರನಿರಾಕರಣೆ ಕೈಕೊಳ್ಳುವುದಕ್ಕೂ ಅಂಕೋಲಾ ತಾಲೂಕನ್ನೇ ಆಯ್ಕೆ ಮಾಡಿತು. ಈ ಆಯ್ಕೆಗೆ ಕಾರಣವೇನು? ಮತ್ತು ಯಾವ ರೀತಿಯಿಂದ ಆರಂಭವಾಯಿತು? ಎಂಬುದರ ವಾಸ್ತ ಸಂಗತಿಯನ್ನು ಓದುಗರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ಆ ಚಳವಳಿಯ ಮೂಲ ಸಂಘಟಕರಾದ, ಮಾನ್ಯ ರಂಗರಾವ ದಿವಾಕರ ಅವರೇ ಸ್ವತಃ ಬರೆದ “ಕರನಿರಾಕರಣೆಯ ವೀರಕಥೆ” ಪುಸ್ತಕದೊಳಗಿನ ಈ ವಿಷಯದ ಕೆಲವು ಮುಖ್ಯ ಮಾತುಗಳನ್ನು ಎತ್ತಿಕೊಂಡು ಇಲ್ಲಿ ಬರೆಯಲಾಗಿದೆ. ಅದು ಹೀಗಿದೆ-

ಜವಾಹರಲಾಲ ನೆಹರು ಅವರ ಸಂದೇಶದ ಕೆಲ ಅಂಶಗಳು: “ಬಾಂಧವರೇ, ಸರ್ಕಾರದ ಬಲಾತ್ಕಾರದಿಂದ ಆರು ತಿಂಗಳು ನಾನು ತಮ್ಮಿಂದ ದೂರಾಗಿದ್ದೆನು. ಈಗ ಪುನಃ ತಮ್ಮೊಳಗೆ ಬಂದುರ ಆಷ್ಟ್ರೀಯ ಸ್ವಾತಂತ್ರ್ಯ ಸಮರದಲ್ಲಿ ಅನೇಕ ಕಷ್ಟ-ನಷ್ಟಗಳನ್ನು  ಸಹಿಸಿದ ತಮ್ಮೆಲ್ಲರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತೇನೆ.”

“ನಮ್ಮ ಧ್ಯೇಯವು ಸಮೀಪಿಸಿದಂತೆ, ಇಚ್ಛಿತಗುರಿಯು ಕೈಗೂಡಿ ಬರುವಂತೆ ಹೋರಾಟವು ಹೆಚ್ಚು ಉಗ್ರವಾಗುವುದು. ನಾವು ಅನುಭವಿಸಬೇಕಾದ ಕಷ್ಟಗಳು ಹೆಚ್ಚು ತೀವ್ರವಾಗುವವು. ಸರ್ಕಾರಕ್ಕೆ ಅಪಜಯವು ಗೋಚರಿಸ ಹತ್ತಿದಂತೆ ಅದರ ಆಡಳಿತ ಯಂತ್ರವು ಕುಸಿದು ಬೀಳತೊಡಗಿದಂತೆ ಅದು ಹೆಚ್ಚು ಕ್ರೂರವಾದ ದಬ್ಬಾಳಿಕೆ ನಡೆಸುವುದು ಸ್ವಾಭಾವಿಕ. ನಾವು ಸರ್ಕಾರದ ವಿರುದ್ಧ ಸತ್ಯಾಗ್ರಹದ ಇನ್ನೊಂದು ಪ್ರಯೋಗ ಮಾಡಬೇಕಾದದು ಅಗತ್ಯ ಎಂಬ ದೃಷ್ಟಿಯಿಂದ, ಕೆಳಗಿನ ಸೂಚನೆಗಳನ್ನು ಮಾಡುತ್ತೇನೆ”.

ಈ ಸೂಚನೆಗಳ ೭ನೆಯ ಕಲಮಿನಲ್ಲಿ ಹೀಗೆ ಹೇಳಿದೆ:-

“ಗುಜರಾಥವು ಅದ್ವಿತೀಯ ಧೈರ್ಯದಿಂದ ಕರನಿರಾಕರಣೆಯ ಆಂದೋಲನ ಹೂಡಿ, ಹೋರಾಡುತ್ತಿರುವುದು, ನಮ್ಮ ಸಂಗ್ರಾಮವು ಇಷ್ಟೊಂದು ನಿಕರಕ್ಕೆ ಬಂದು ಮುಟ್ಟಿರುವಾಗ, ಪ್ರತಿಯೊಂದು ಪ್ರಾಂತರವರು ಕೂಡ ತಮ್ಮ ಸಿದ್ಧತೆಯನ್ನು ನೋಡಿಕೊಂಡು ಕರನಿರಾಕರಣೆಯಂಥ ಉಗ್ರವಾದ ಅಸ್ತ್ರವನ್ನು ಪ್ರಯೋಗಿಸಲೇಬೇಕು, ಯೋಗ್ಯ ಕಂಡಲ್ಲಿ ಯಾವುದೊಂದು ತೆರಿಗೆ ನಿರಾಕರಣೆಯ ಆಂದೋಲನ ಹೂಡಲು ಕಾಂಗ್ರೆಸ್ ಸಮಿತಿಗಳಿಗೆ ಕಾಂಗ್ರೆಸ್ ಅಧ್ಯಕ್ಷನ ಸ್ಥಾನ ಬಲದಿಂದ ನಾನು ಅಧಿಕಾರ ಕೊಡುತ್ತೇನೆ”.

“ಶ್ರೀ ಜವಾಹರಲಾಲರು ಈ ಸಂದೇಶದಲ್ಲಿ ಹೇಳಿದ ಕಾರ್ಯಕ್ರಮದ ಕಾರ್ಯಾಚರಣೆಗೆ ಅವರ ಮಾರ್ಗದರ್ಶನ ದೊರೆಯಬಾರದೆಂದು ಸರ್ಕಾರವು, ಕೂಡಲೇ ಅವರನ್ನು ಬಂಧಿಸಿ, ಎರಡು ವರ್ಷ ಸೆರೆಮನೆಗಟ್ಟಿತು. ಆದರೆ ಆ ಸಂದೇಶದಂತೆ ತಪ್ಪದೆ ನಡೆದುಕೊಳ್ಳುವುದು ತಮ್ಮ ಪವಿತ್ರಕರ್ತವ್ಯವೆಂದು ಕಾರ್ಯಕರ್ತರು ಭಾವಿಸಿ ಅದರಂತೆ ಕಾರ್ಯಪ್ರವೃತ್ತರಾದರು. ಅಷ್ಟರಲ್ಲಿ ಕರ್ನಾಟಕದ ಪ್ರಾಂತಾಧ್ಯಕ್ಷರಾದ ದಿವಾಕರರು ಉಪ್ಪಿನ ಸತ್ಯಾಗ್ರಹಕ್ಕಾಗಿ, ಆರು ತಿಂಗಳ ಶಿಕ್ಷೆ ಭೋಗಿಸಿ, ನವ್ಹೆಂಬರ್ ಮೊದಲವಾದ ಹೊರಗೆ ಬಂದತು. ಕೂಡಲೇ ಅವರು ಜವಾಹರಲಾಲರ ಕರೆಗೆ ಕರ್ನಾಟಕವು ಓಗೊಟ್ಟೇ ತೀರಬೇಕೆಂಬ ವಿಚಾರದಲ್ಲಿ ತೊಡಗಿ, ಕರನಿರಾಕರಣೆಯ ಶಕ್ಯಾವಶಕ್ಯತೆಯನ್ನು ಪರೀಕ್ಷಿಸಲನುವಾದರು.”

“ಉಪ್ಪಿನ ಸತ್ಯಾಗ್ರಹದಲ್ಲಿ ಅಸಾಧಾರಣ ಯಶಸ್ಸು ಪಡೆದ ಅಂಕೋಲೆ ತಾಲೂಕಿನಲ್ಲಿ ಆದ ಜನಜಾಗೃತಿ, ಅಲ್ಲಿಯ ಶೂರ ನಾಡವರ ಒಕ್ಕಟ್ಟು ಇವುಗಳಿಂದ ಕರನಿರಾಕರಣೆಯ ಸತ್ಯಾಗ್ರಹ ಕೈಕೊಳ್ಳು, ಅಂಕೋಲೆಯ ಜನರೇ ಸಮರ್ಥರೆಂಬ ಸಾಮಾನ್ಯಭಾವನೆ, ಕರ್ನಾಟಕ ಸತ್ಯಾಗ್ರಹ ಮಂಡಳದ ಸದಸ್ಯರಲ್ಲಿ ಹುಟ್ಟಿತು.”

“ಸತ್ಯಾಗ್ರಹ ಮಂಡಳವು ಈ ಕರನಿರಾಕರಣೆಯ ಸಂಘಟನೆಯ ಹೊಣೆಯನ್ನು ದಿವಾಕರರಿಗೆ ಒಪ್ಪಿಸಿತು. ಅವರು ಶ್ರೀ ಕರಮರಕರ ಮತ್ತು ಶ್ರೀಮತಿ ಕೃಷ್ಣಾಬಾಯಿ ಪಂಜೀಕರ ಇವರ ಜೊತೆಯಲ್ಲಿ ಅಂಕೋಲೆ ತಾಲೂಕಿನಲ್ಲಿ ಸಂಚರಿಸಿದರು. ಸೂರ್ವೆಯ ಕಲಶ ದೇವಸ್ಥಾನದಲ್ಲಿ ಅಂಕೋಲೆ ತಾಲೂಕಿನ ರೈತರಲ್ಲಿ ಪ್ರಭಾವಿ ಜನರಾದ ನಾಡವರ ಮುಖಂಡರೊಡನೆ ಕರನಿರಾಕರಣೆ ಪ್ರಾರಂಭಿಸುವ ಕುರಿತು ಸಾಧಕ-ಬಾಧಕ ಪ್ರಶ್ನೆಗಳನ್ನು ಬಿಚ್ಚು ಮನಸ್ಸಿನಿಂದ ಚರ್ಚಿಸಿದರು.

“ನಾಡವರ ಹಳ್ಳಿಗಳಿಂದ ಬಾಸಗೋಡ ರಾಮ ನಾಯಕ, ವಂದಿಗೆ ಹಮ್ಮಣ್ಣ ನಾಯಕ, ಭಾವೀಕೇರಿ ರಾಮ ನಾಯಕ, ಬೋಳೆ ಬೊಮ್ಮಯ್ಯ ನಾಯಕ ಹಾಗೂ ದೇವಣ್ಣ ನಾಯಕ, ಕಣಗಿಲ ಹಮ್ಮಣ್ಣಾ ತಿಮ್ಮಣ್ಣ ನಾಯಕ, ಶೆಟಗೇರಿಯ ಜೋಗಿ ನಾಯಕ, ಬಾಸಗೋಡ ಮೋನಪ್ಪ ಮಾಣಿ ನಾಯಕ, ಮೊದಲಾದ ನಾಡವರ ಮುಖಂಡರು ಭಾಗವಹಿಸಿದ್ದರು.”

“ಕರನಿರಾಕರಣೆ ಮಾಡುವುದು ಅಂಕೋಲೆ ತಾಲೂಕಿನಲ್ಲಿ ಮಾತ್ರ ಸಾಧ್ಯವೆಂದು ಕರ್ನಾಟಕ ಸತ್ಯಾಗ್ರಹ ಮಂಡಳವು ಅಭಿಪ್ರಾಯ ಪಟ್ಟಿರುವುದನ್ನು ತಿಳಿಸಿ ಅಂಕೋಲೆ ತಾಲೂಕು ಉಪ್ಪಿನ ಸತ್ಯಾಗ್ರಹ, ಜಂಗಲ್ ಸತ್ಯಾಗ್ರಹ, ವಿದೇಶಿ ವಸ್ತುಗಳ ಬಹಿಷ್ಕಾರ, ಪಾನ ಪ್ರತಿಬಂಧ, ಗ್ರಾಮ ಪಂಚಾಯಿತಿಗಳ ಸ್ಥಾಪನೆ, ಇವುಗಳಲ್ಲಿ ವಿಶೇಷ ಹೆಸರುಗಳಿಸಿದೆ. ಕರನಿರಾಕರಣೆಯಂಥ, ಅಗ್ನಿ ಪರೀಕ್ಷೆಗೆ ಜನರು ಸಿದ್ಧರಿದ್ದರೆ, ಇಲ್ಲಿ ಆಂದೋಲನವನ್ನು ಪ್ರಾರಂಭಿಸಬಹುದು” ಎಂಬ ದಿವಾಕರರು ಏಳಿದರು.

“ಕರನಿರಾಕರಣೆಯು ಕಾಯದೇ ಭಂಗದ ಕೊನೆಯ ಮೆಟ್ಟಿಲು. ಸತ್ಯಾಗ್ರಹಿಯ ಸತ್ವಪರೀಕ್ಷೆಯು ಇದರಲ್ಲಿ ಆಗುವುದು. ಬಹಳಾದರೆ, ಲಾಠಿ ಏಟನ್ನು ಸಹಿಸಬಹುದು. ಇಷ್ಟೇ ಕಷ್ಟಗಳನ್ನು ಅನುಭವಿಸಬೇಕಾಗುವುದು. ಆದರೆ ಕರನಿರಾಕರಣೆ ಮಾಡುವವರು ಖಾತೆದಾರರಿರಬೇಕು. ಅವರಿಂದ ಸಲ್ಲಬೇಕಾದ ತೀರ್ವೆಯನ್ನು ಸರ್ಕಾರಕ್ಕೆ ಕೊಡುವದಿಲ್ಲವಾಗಿ, ಪ್ರತಿಜ್ಞೆ ಮಾಡಬೇಕು. ಈ ಪ್ರತಿಜ್ಞೆಯ ಪಾಲನೆಗಾಗಿ, ಹೊಲ-ಮನೆಗಳನ್ನು ಕಳೆದು ಕೊಳ್ಳಲಿಕ್ಕೂ, ಹೆಂಡರು ಮಕ್ಕಳನ್ನು ಉಪವಾಸ, ವನವಾಸಾದಿ ಕಷ್ಟಕ್ಕೆ ಈಡುಮಾಡುವುದಕ್ಕೂ, ಅವರು ಪಡುವ ಕಷ್ಟಗಳನ್ನು ನೋಡಿ ಸಹಿಸಿಕೊಳ್ಳಲಿಕ್ಕೂ, ಸರ್ಕಾರವು ಕೊಡುವ ಅನೇಕ ಚಿತ್ರಹಿಂಸೆಗಳನ್ನು ಶಾಂತವೃತ್ತಿಯಿಂದ ತಾಳಿಕೊಳ್ಳಲಿಕ್ಕೂ ಸಿದ್ಧರಿರಬೇಕು. ತ್ಯಾಗವೃತ್ತಿಯನ್ನು ಪರಾಕಾಷ್ಠೆಯ ಮಟ್ಟದಲ್ಲಿ ವ್ಯಕ್ತಪಡಿಸಲು ಸಮರ್ಥರಾದ ಜನರೇ, ಈ ಅಸ್ತ್ರವನ್ನು ಎತ್ತಬಲ್ಲರು. ಆದ್ದರಿಂದ ಮಾನಸಿಕ ಸಿದ್ಧತೆ ಹಾಗೂ ಸಾಮೂಹಿಕ ಸಂಘಟನೆ ಇವು ಅಗತ್ಯ. ಪರಿಸ್ಥಿತಿ ಎಷ್ಟೇ ಉದ್ವೇಗಕಾರಕವಾದರೂ, ಅಹಿಂಸಾ ವ್ರತವನ್ನು ಮನೋವಾಕ್ಕಾಯಗಳಿಂದ ಪಾಲಿಸುವ ನಿರ್ಧಾರ- ಇವು ಅಗತ್ಯ. ಈ ಸಿದ್ಧತೆ ನಿಮ್ಮಲ್ಲಿದ್ದರೆ, ಕರನಿರಾಕರಣೆಯ ಆಂದೋಲನವನ್ನು ಅಂಕೋಲೆ ತಾಲೂಕಿನಲ್ಲಿ ಪ್ರಾರಂಭಿಸಬಹುದು. ಈ ಬಗ್ಗೆ ಬಿಚ್ಚು ಮನಸ್ಸಿನಿಂದ ಚರ್ಚಿಸಿ, ಯೋಗ್ಯ ನಿರ್ಣಯಕ್ಕೆ ಬರಲು ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು” ಎಂದು ದಿವಾಕರರು ಹೇಳಿದರು. ಆಗ ಬಾಸಗೋಡ ರಾಮ ನಾಯಕರು “ಅಳಿವುದು ಕಾಯ ಉಳಿವುದು ಕೀರ್ತಿ” ಎಂದು ಆವೇಶದಿಂದ ಭಾಷಣ ಮಾಡಿ, “ಕರನಿರಾಕರಣೆಯ ನಿರ್ಣಯ ಸ್ವೀಕರಿಸುವುದು ನಮ್ಮ ಧರ್ಮ” ಎಂದು ಹೇಳಿದರು.

ಭಾವಿಕೇರಿ ರಾಮ ನಾಯಕರೂ, ಬೋಳೆ ಬೊಮ್ಮಯ್ಯ ನಾಯಕರೂ ಇನ್ನೂ ಕೆಲ ಹಿರಿಯರು “ಕರನಿರಾಕರಣೆಯಿಂದ ಆಗಬಹುದಾದ ಕಷ್ಟ ನಷ್ಟಗಳನ್ನು ಎದುರಿಸುವಷ್ಟು ಶಕ್ತಿ ಜನರಲ್ಲಿರುವುದೇ, ಸರ್ಕಾರವು ದಬ್ಬಾಳಿಕೆ ಪ್ರಾರಂಭಿಸಿದಾಗ ಅಹಿಂಸಾ ವ್ರತವನ್ನು ಪಾಲಿಸುವಷ್ಟು ತಾಳ್ಮೆ ನಾಡವರಲ್ಲಿ ಉಳಿಯಬಹುದೇ?” ಎಂದು ತುಂತಾಗಿ ತಮ್ಮ ಪ್ರಾಮಾಣಿಕ ಸಂಶಯಗಳನ್ನು ಮುಂದಿಟ್ಟರು. ಕರನಿರಾಕರಣೆ ಮಾಡಬೇಕೆಂಬ ಉತ್ಸಾಹದ ವಾತಾವರಣ ಸಭೆಯಲ್ಲಿ ತುಂಬಿತ್ತು. ಕರನಿರಾಕರಣೆಯ ನಿರ್ಧಾತರದಲ್ಲಿ ಜನರು ಬಂದ ಕಷ್ಟಗಳನ್ನು ಅಹಿಂಸಾ ವೃತ್ತಿಯಿಂದ ಕೊನೆಯವರೆಗೂ ತಾಳ್ಮೆಯಿಂದ ಸಹಿಸಿ ಕೊಳ್ಳುವ ಶಕ್ಯಾಶಕ್ಯತೆಯ ಬಗ್ಗೆ ಹಿರಿಯರು ಎತ್ತಿದ ಸಂಶಯ ತರುಣರಿಗೆ ರುಚಿಸಲಿಲ್ಲ. ಉಪ್ಪಿನ ಸತ್ಯಾಗ್ರಹದಲ್ಲಿ ಆದ ಎಂಟು ತಿಂಗಳ ಶಿಕ್ಷೆ ಅನುಭವಿಸಿ ಅಂದೇ ಬಿಡುಗಡೆಯಾಗಿ ಬಂದಿದ್ದ ಶೆಟಗೇರಿ ಜೋಗಿ ನಾಯಕರು ಆವೇಶದಿಂದ ಮಾತನಾಡುತ್ತ “ಕೆಲಸ ಮಾಡುತ್ತ ಹೋದಂತೆ, ಕಾರ್ಯತತ್ಪರತೆ ಹೆಚ್ಚುವುದು- ಅಹಿಂಸಾತತ್ವವು ಜನರಲ್ಲಿ ಬಲಗೊಳ್ಳುವುದು. ಈ ಧರ್ಮಯುದ್ಧದಲ್ಲಿ ಹೋರಾಡುವುದು ನಮ್ಮ ಧರ್ಮ, ನಾಡವರ ಕ್ಷಾತ್ರವೃತ್ತಿಗೆ ಭೂಷಣ, ಇದುನಮ್ಮ ಕರ್ತವ್ಯ” ಎಂದು ಭಾಷಣ ಮಾಡಿ, ಜೈಲಿನಿಂದ ಹೊರಗೆ ಬರುವಾಗ ಡಾ. ಕಬ್ಬೂರ ಅವರು ಜೈಲಿನಲ್ಲಿ ಬರೆದುಕೊಟ್ಟ ಸ್ಫೂರ್ತಿಪ್ರದ ಸಂದೇಶವನ್ನು ಸಭೆಯಲ್ಲಿ ಓದಿ ಹೇಳಿದರು.

“ದಿವಾಕರರು ಸಭೆಯಲ್ಲಿದ್ದವರಿಗೆ ವೈಯಕ್ತಿಕ ಅಭಿಪ್ರಾಯ ತಿಳಿಸಲು ಭಿನ್ನವಿಸಿಕೊಂಡರು. ಆಗ ಸೂರ್ವೆ ಬೊಮ್ಮಯ್ಯ ಪೊಕ್ಕ ನಾಯಕರು ಎದ್ದು ನಿಂತು “ಯಾರು ಮಾಡಲಿ ಬಿಡಲಿ, ನಾನು ಮಾತ್ರ ಆ ಮಹಾತ್ಮರನ್ನು ಸ್ಮರಿಸಿ, ಕರನಿರಾಕರಣೆ ಮಾಡಿಯೇ ತೀರುವೆನು” ಎಂದು ಮಹಾತ್ಮರ ಬಗ್ಗೆ ಉಕ್ಕಿ ಬರುವ ಭಕ್ತಿಯಿಂದ ಗದ್ಗದಿತ ಕಂಠರಾಗಿ ದೊಡ್ಡ ಧ್ವನಿ ತೆಗೆದು ಸಾರಿದರು. ಅವರ ಪಕ್ಕದಲ್ಲಿಯೇ ಕುಳಿತ ಬೋಳೆಯ ದೇವಣ್ಣ ನಾಯಕರು ತಟ್ಟನೆದ್ದು, “ಭೂಮಿ ಹೋದರೆ ಹೋಗಲಿ, ಬೇಕಾದ ಆಪತ್ತು ಬರಲಿ ನಮ್ಮ ಊರಲ್ಲಿ ನಾನೊಬ್ಬನಂತೂ ಕರನಿರಾಕರಣೆ ಮಾಡಲು ಸಿದ್ಧನಿದ್ದೇನೆ” ಎಂದು ಸಭೆಗೆ ಕೈಮುಗಿದು ಕುಳಿತರು.

ಐವತ್ತು ಅರವತ್ತು ವಯಸ್ಸಿನ ಈ ಹಿರಿಯರು ಆಡಿದ ಮಾತಿನಿಂದ ಕರನಿರಾಕರಣೆಯ ಬಗ್ಗೆ ಜನರಲ್ಲಿ ಸ್ಫೂರ್ತಿ ಇಮ್ಮಡಿಸಿತು. “ಕರನಿರಾಕರಣೆ ಮಾಡಿವೆ” ಎಂದು ಒಬ್ಬೊಬ್ಬರೇ ಎದ್ದು ಸಭೆಗೆ ತಿಳಿಸಿದವರ ಸಂಖ್ಯೆ ಬೆಳೆಯಿತು. ಕರನಿರಾಕರಣೆ ಮಾಡುವುದಿಲ್ಲ ಅದು ಅಸಾಧ್ಯ ಎಂದು ಯಾರೂ ಹೇಳಲಿಲ್ಲ.” ಈ ಸಭೆಯು ಕರ್ಣಾಟಕದಲ್ಲಿಯ ಕರನಿರಾಕರಣೆಯ ಇತಿಹಾಸದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಹಾಗೂ ಸ್ಮರಣೀಯವೂ- ಇದೇ ಆಂದೋಲನದ ಅಡಿಗಲ್ಲು. ಅಂಕೋಲೆಯ ರೈತರು ಆ ದಿನ ತೋರಿದ ಶ್ರದ್ಧೆ, ನಡೆಸಿದ ವಾಸ್ತವ ಚರ್ಚೆ, ಮುಂದಾಗುವ ಭಯಾನಕ ದಬ್ಬಾಳಿಕೆಯ ಪೂರ್ಣ ಚಿತ್ರವನ್ನು ಕಣ್ಣೆದುರಿಗಿಟ್ಟುಕೊಂಡು ಮಾಡಿದ ನಿರ್ಧಾರ, ಇವು ಸುಶಿಕ್ಷಿತರೆನ್ನುವವರ ಸಭೆ-ಸಮ್ಮೇಳನಗಳನ್ನು ನಾಚಿಸುವಂತಿದ್ದವು.

ಸೂರ್ವೆಯಲ್ಲಿ ನಡೆದ ಸಭೆಯಲ್ಲಿ ಕರನಿರಾಕರಣೆಯ ಆಂದೋಲನದ ಬೀಜಾರೋಪಣವಾಯಿತು. ಮುಂದೆ ಹಿಚಕಡ, ಕಣಗಿಲ, ವಾಸ್ರೆ, ಹೊಸಕೇರಿ, ಶೆಟಗೇರಿ, ಬೋಳೆ, ವಂದಿಗೆ, ಬಾಸಗೋಡ ಮುಂತಾದ ಬೇರೆ ಬೇರೆ ಸ್ಥಳಗಳಲ್ಲಿ ಸಭೆ ಕರೆದು ದಿವಾಕರರು ವಿಚಾರವಿನಿಮಯ ಮಾಡಿದಾಗ ಅದು ಮೊಳಕೆಯೊಡೆದು ಬೆಳೆದದ್ದು ಅವರ ಅನುಭವಕ್ಕೆ ಬಂತು. ದಿವಾಕರರು ಈಸಂಚಾರದಲ್ಲಿ ಅಂಕೋಲೆಯ ನಾಡವರ ಸೇನೆಗೆ ಕರಮರಕರರು ಸೇನಾಪತಿಗಳೆಂದು ಅಲ್ಲಿಯ ಜನತೆಗೆ ತಿಳಿಸಿದರು. ಕರನಿರಾಕರಣೆಯ ಆಂದೋಲನದ ಸಂಘಟನೆಯ ಕಾರ್ಯವನ್ನು ಕೂಡಲೇ ಪ್ರಾರಂಭಿಸುವ ಕುರಿತು ಸ್ಥೂಲವಾದ ಸೂಚನೆಗಳನ್ನು ಮಾಡಿದರು. ಕರಮರಕರರ ಮಾರ್ಗದರ್ಶನದಲ್ಲಿ ಎಲ್ಲ ಕಾರ್ಯವನ್ನು ಸಾಗಿಸಬೇಕು ಎಂದು ಸೂಚನೆ ಮಾಡಿ, ದಿವಾಕರರು ಧಾರವಾಡಕ್ಕೆ ಹೊರಟರು. ಆದರೆ, ಈ ಮೂವರೂ ಧುರೀಣರು ಅಂಕೋಲೆಯನ್ನು ಬಿಟ್ಟು ಹೋಗಬೇಕೆಂಬ ಸರ್ಕಾರದ ನೋಟೀಸು ಇಷ್ಟರಲ್ಲಿಯೇ ಹೊರಟಿತ್ತು. ಅದು ಬರುವಷ್ಟರಲ್ಲಿ ಕರನಿರಾಕರಣ ಆಂದೋಲನದ ಸಂಘಟನೆಯ ಏರ್ಪಾಡು ಮಾಡಲಾಗಿತ್ತು!

ಕರನಿರಾಕರಣೆಯ ಸಂಘಟನೆಗಾಗಿ ಬಾಸಗೋಡ ರಾಮನಾಯ್ಕ, ಶೆಟಗೇರಿ ಜೋಗಿ ನಾಯ್ಕ, ವಂದಿಗೆ ಹಮ್ಮಣ್ಣ ನಾಯ್ಕ, ಭಾವೀಕೇರಿ ರಾಮ ನಾಯ್ಕ, ವಾಸ್ರೆ, ಸುಬ್ರಾಯ ನಾಯ್ಕ, ಹಿಚ್ಕಡ ಬೀರಣ್ಣ ನಾಯ್ಕ, ರಾಮಚಂದ್ರ ನಾಯ್ಕ ಮುಂತಾದವರು ಕೂಡಲೇ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರಕಾರ್ಯ ಪ್ರಾರಂಭಿಸಿದರು. ನಾಡವರ ಮುಖಂಡರು ‘ಹಳ್ಳಿಯ ಕೂಟ’ ಸೀಮೆಯ ಸಭೆಗಳನ್ನು ಸೇರಿಸಿ, ಅದರಲ್ಲಿ ಕರನಿರಾಕರಣೆ ಮಾಡಬೇಕೆಂಬ ನಿರ್ಣಯ ಸ್ವೀಕರಿಸಿದರು.

ಕರನಿರಾಕರಣೆಯ ಪೂರ್ವಸಿದ್ಧತೆಯಾಗಿ ಸತ್ಯಾಗ್ರಹ ಶಿಬಿರಗಳ ಸ್ಥಾಪನೆ ಮಾಡಿದ್ದಾಯಿತು. ಆಂದೋಲನವನ್ನು ಯಶಸ್ವಿಯಾಗಿ ಸಾಗಿಸಲು ಅಂಕೋಲೆ ತಾಲೂಕಿನಲ್ಲಿ ೧.ಬಾಸಗೋಡ, ೨.ಸೂರ್ವೆ, ೩.ಶೆಟಗೇರಿ, ೪.ಬೋಳೆ, ೫.ವಂದಿಗೆ, ೬.ಹೊಸಗದ್ದೆ, ೭.ಕಣಗಿಲ, ೮.ಹಿಚಕಡ, ೯.ಸಗಡಗೇರಿ, ೧೦.ಜೂಗ, ೧೧.ಅಡಿಗೋಣ, ೧೨.ಅಗ್ಗರಗೋಣ, ೧೩.ಮೊಗಟ, ೧೪.ವಾಸ್ರೆ, ೧೫.ಕುದ್ರಿಗೆ, ೧೬.ಶಿರಗುಂಜಿ, ೧೭.ಗುಂಡಬಾಳೆ, ೧೮.ಹಿಲ್ಲೂರು, ೧೯.ಅಗಸೂರ, ೨೦.ಅಡ್ಲೂರು, ೨೧.ಬೇಲೇರೇರಿ, ೨೨.ಭಾವೀಕೇರಿ, ೨೩.ಉಳವರೆ, ೨೪.ಅವರ್ಸೆ ಹೀಗೆ ೨೪ ಕೇಂದ್ರಗಳನ್ನು ಮಾಡಿ, ಆಯಾ ಕೇಂದ್ರಗಳಲ್ಲಿ ನುರಿತ ಸ್ಥಳೀಯ ಕೆಲಸಗಾರರು ಕಾರ್ಯ ಪ್ರವೃತ್ತರಾಗುವಂತೆ ಏರ್ಪಾಡು ಮಾಡಿದ್ದಾಯಿತು.

ನಾಡವರ ಹಳ್ಳಿಗಳಲ್ಲಿ ಸಂಘಟನೆಯು ಮಿಂಚಿನ ವೇಗದಿಂದ ನಡೆಯಿತು. ಹಾಲಕ್ಕಿ ಒಕ್ಕಲಗೌಡರಲ್ಲಿ ಸ್ವಂತದ ಭೂಮಿ ಇದ್ದವರ ಸಂಖ್ಯೆ ಕಡಿಮೆ, ಆದರೆ ಉಳವರೆ ರಾಮದಾಸ, ಹೊನ್ನದಾಸ ಮೊದಲಾದ ಒಂಬತ್ತು ಕುಟುಂಬದ ಜನರು ಸ್ವಂತ ಜಮೀನು ಇದ್ದವರು ಎಂಥ ಕಷ್ಟ-ನಷ್ಟಗಳು ಬಂದರೂ ಚ್ಯುತಿ ಹೊಂದದರೆ, ಕರನಿರಾಕರಣೆಯ ಆಂದೋಲನದಲ್ಲಿ ನಾಡವರಿಗೆ ದೊರೆತ ಕೀರ್ತಿಯಲ್ಲಿ ಒಕ್ಕಲಗೌಡರೂ ಪಾಲುದಾದದೆಂಬುದನ್ನು ಸಿದ್ಧಮಾಡಿ ಕೊಟ್ಟರು.

“ಕರನಿರಾಕರಣೆಯ ಸಂಘಟನೆಯಲ್ಲಿ ಪಟೇಲರ ರಾಜೀನಾಮೆಯು ಮೊದಲನೆಯ ಕ್ರಮವಾಗಬೇಕೆಂದು ದಿವಾಕರರು ಸೂಚಿಸಿದ್ದರು. ಸುಬ್ರಾಯ ನಾಯಕರು ವಾಸ್ರೆಯ ಪಟೇಲರಿದ್ದು ಅವರು ರಾಜೀನಾಮೆ ಪತ್ರ ಬರೆದು ಕೊಟ್ಟವರಲ್ಲಿ ಮೊದಲಿಗರು. ಉಳಿದ ಪಟೇಲರ ರಾಜೀನಾಮೆಗಳನ್ನು ಪಡೆಯುವ ಹೊಣೆಯನ್ನು ವಾಸ್ರೆ ಸುಬ್ರಾಯ ನಾಯಕರೂ, ಆವಿಕೇರಿ ರಾಮನಾಯಕರೂ ಒಪ್ಪಿಸಿಕೊಂಡು ಹಳ್ಳಿಹಳ್ಳಿಗಳಲ್ಲಿ ಈ ಬಗ್ಗೆ ಪ್ರಚಾರ ಮಾಡುತ್ತಿದ್ದರು. ಕರನಿರಾಕರಣ ಪ್ರತಿಜ್ಞಾ ಪತ್ರಿಕೆಗಳಿಗೆ ಅಂಕಿತ ತಕ್ಕೊಳ್ಳುವ ಕೆಲಸವನ್ನು ಬಾಸಗೋಡ ರಾಮ ನಾಯಕ, ಶೆಟಗೇರಿ ಜೋಗಿ ನಾಯಕ, ವಂದಿಗೆ ಹಮ್ಮಣ್ಣಾ ನಾಯಕ, ಬೋಳೆ ಬೊಮ್ಮಯ್ಯ ನಾಯಕ, ಹಿಚ್ಕಡ ಬೀರಣ್ಣ ನಾಯಕ, ರಾಮಚಂದ್ರ ನಾಯಕ ಮೊದಲಾದವರು ಒಪ್ಪಿಸಿಕೊಂಡರು”. (ಅದರಂತೆ ವಾಸ್ರೆ ಸಾತ ನಾಯಕ, ಬೀರಣ್ಣ ನಾಯಕ, ಸೂರ್ವೆ. ಹಮ್ಮಣ್ಣಾ ರಾಕು ನಾಯಕ, ನಾರಾಯಣ ವೆಂಕಟೇಶ ನಾಯಕ, ಕಣಗಿಲ, ಹಮ್ಮಣ್ಣಾ ತಿಮ್ಮಣ್ಣ ನಾಯಕ, ಬೊಮ್ಮಯ್ಯಾ ತಿಮ್ಮಣ್ಣ ನಾಯಕ, ನಾರಾಯಣ ರಾಮ ನಾಯಕ, ಬಾಸಗೋಡ ಮೋನಪ್ಪಾ ಬೀರಣ್ಣ ನಾಯಕ, ಮೋನಪ್ಪಾ ಮಾಣಿ ನಾಯಕ, ರಾಮಕೃಷ್ಣ ಪುರ್ಸು ನಾಯಕ, ಸಗಡಗೇರಿ ಗೋವಿಂದರಾಯ ನಾಯಕ, ವೆಂಕಟರಮಣ ಬೀರಣ್ಣ ನಾಯಕ, ಅಗ್ಗರಗೋಣ ವಿಠೋಬ ನಾಯಕ, ಮಾಣಿ ಮಾಬು ನಾಯಕ ಮುಂತಾದ ಅನೇಕ ಕಾರ್ಯಕರ್ತರು ಪ್ರಚಾರ ಕಾರ್ಯ ಕೈಕೊಂಡಿದ್ದರು. (ಲೇಖಕ)

“ಕರನಿರಾಕರಣೆಯ ಬಗ್ಗೆ ಪ್ರತಿ ಹಳ್ಳಿಯನ್ನು ಅಭೇದ್ಯವಾದ ಕೋಟೆಯಂತೆ ಸಂಘಟಿಸಲು ಕ್ರಮ ಕೈಕೊಂಡ ನಂತರ, ಕರನಿರಾಕರಣೆ ಆಂದೋಲನ ಹೂಡಿದ್ದನ್ನು ಸಾರಲು ಕರ್ನಾಟಕ ಸತ್ಯಾಗ್ರಹ ಮಂಡಳದ ಆದೇಶ ಪಡೆಯಲು ಶ್ರೀ ಕರಮರಕರರು, ದಿವಾಕರರನ್ನು ಕಾರಣ, ಅಡವಿದಾರಿ ಹಿಡಿದು ದೂರ ಹೋಗಿ, ಮೋಟಾರು ಹತ್ತಿ, ಧಾರವಾಡಕ್ಕೆ ಹೋದರು. ಕರನಿರಾಕರಣೆಯ ಆಂದೋಲನ ಹೂಡಲು ಅವಶ್ಯವಿದ್ದ ಒಪ್ಪಿಗೆ ಪಡೆದು ಅವರು ೧೯೩೧ ನೆಯ ಜನವರಿ ೧೭ನೆಯ ದಿನಾಂಕ, ಬೇವೂರ ಭೀಮರಾಯರು ಹಾಗೂ ಕೃಷ್ಣಾಬಾಯಿ ಪಂಜೀಕರರ ಸಮೇತ ಪುನಃ ಅಂಕೋಲೆಯ ರಣಕ್ಷೇತ್ರಕ್ಕೆ ಗುಪ್ತಮಾರ್ಗದಿಂದ ಬಂದು ಕಾರ್ಯಕರ್ತರನ್ನು ಕೂಡಿಕೊಂಡರು. ಧಾರವಾಡ, ಬೆಂಗಳೂರು, ಮೈಸೂರ, ಕಡೆಗಳಿಂದ ಅನೇಕ ಕಾರ್ಯಕರ್ತರೂ ಸ್ವಯಂ-ಸೇವಕರೂ ಬೇರೆ ಬೇರೆ ದಾರಿಗಳಿಂದ ವೇಷಾಂತರಿಸಿ ಬಂದು, ಶಿಬಿರಗಳನ್ನು ಸೇರಿದರು”.

ಹಿರಿಯರಾದ ದಿವಾಕರರು ಬರೆದ ಈ ಮೇಲಿನ ಮಾತುಗಳನ್ನು ತಿಳಿದುಕೊಂಡರೆ, ಕರ್ನಾಟಕದ ಸತ್ಯಾಗ್ರಹ ಮಂಡಳವು ಕಳೆದ ವರ್ಷ, ಉಪ್ಪಿನ ಸತ್ಯಾಗ್ರಹವನ್ನು ಗಾಂಧೀತತ್ವದಂತೆ ಯಶಸ್ವಿಯಾಗಿ ನಡೆದಲು ಅಂಕೋಲೆಯನ್ನೇ ಆಯ್ಕೆ ಮಾಡಿದಂತೆ, ಅತ್ಯಂತ ತ್ಯಾಗದ ಹಾಗೂ ಕಷ್ಟದ್ದಾದ ಕರನಿರಾಕರಣೆ ಚಳವಳಿಯನ್ನು ಕರ್ನಾಟಕದಲ್ಲಿ ಮೊಟ್ಟ ಮೊದಲನೆಯದಾಗಿ ಆರಂಭಿಸಲು ಅಂಕೋಲೆಯ ಜನರೇ ಸಮರ್ಥರು ಎಂದು ತೀರ್ಮಾನಿಸಿದ ತೀರ್ಮಾನವೇ ಅಂಕೋಲೆಯ ಯಶಸ್ಸನ್ನು ಸಾರಿ ಹೇಳುವಂತಿದೆ.