ಭಾರತವನ್ನು ಬ್ರಿಟೀಷರ ಗುಲಾಮಗಿರಿಯಿಂದ ಬಿಡಿಸಿ ಸ್ವತಂತ್ರಗೊಳಿಸಲು ಗಾಂಧೀಜಿಯವರು ಕೈಕೊಂಡ ಅಹಿಂಸಾತ್ಮಕ ಹೋರಾಟದಲ್ಲಿ ಮಹತ್ವಪೂರ್ಣ ಪಾತ್ರವಹಿಸಿ ಅಪೂರ್ವ ತ್ಯಾಗಮಾಡಿ ಸಾರ್ಥಕತೆಯನ್ನು ಪಡೆದ ತಾಲೂಕು ಅಂಕೋಲೆ.

ಮಹಾತ್ಮಾಜಿಯವರು ಅಹಿಂಸಾತ್ಮಕ ಸಮರವನ್ನು ಸಾರಿದಾಗ ರವೀಂದ್ರನಾಥ ಠಾಗೋರರು ಗಾಂಧೀಜಿಯವರನ್ನು ಕುರಿತು “ಗಾಂಧೀಜಿ, ನೀವು ಹೇಳುತ್ತೀರಿ, ಈ ಹೋರಾಟದಲ್ಲಿ ಸಾಯಲು ಸಿದ್ಧರಿರಬೇಕು, ಆದರೆ ಕೊಲ್ಲ ಬಾರದು ಎಂದು, ಇಂಥ ಯುದ್ಧವು ವೀರರಿಂದ ಮಾತ್ರ ಸಾಧ್ಯವೇ ಹೊರತು ತಾತ್ಕಾಲಿಕವಾಗಿ ಭಾವಾವೇಶಕ್ಕೆ ಒಳಗಾಗುವ ಜನರಿಂದ ಸಾಧ್ಯವಿಲ್ಲ” ಎಂದಿದ್ದರು. ಠಾಗೋರರು ಹೇಳಿದಂತೆ ಅಂಕೋಲೆಯಲ್ಲಿ ನಡೆದ ಅಹಿಂಸಾತ್ಮಕ ಹೋರಾಟವು ವೀರರ ಹೋರಾಟವಾಗಿತ್ತು ಹಾಗೂ ಆ ಹೋರಾಟವು ಅವಿತರವಾಗಿ ನಡೆದಿತ್ತು.

ಆ ಕಾಲಕ್ಕೆ ದೇಶವ್ಯಾಪಿಯಾಗಿ ನಡೆದ ಒಂದೊಂದು ಸತ್ಯಾಗ್ರಹದಲ್ಲಿ ಒಂದೊಂದು ಪ್ರದೇಶವು ವಿಧೇಷ ಪ್ರಸಿದ್ಧಿ ಪಡೆದುದನ್ನು ಇತಿಹಾಸದಿಂದ ನಾವು ತಿಳಿಯಬಹುದಾಗಿದೆ. ಉದಾಹರಣೆಗೆ: ಅಸಹಕಾರ ಮತ್ತು ಸ್ವದೇಶಿ ಚಳುವಳಿಗಳಲ್ಲಿ ಬಂಗಾಲ ಮತ್ತು ಮಹಾರಾಷ್ಟ್ರ, ಉಪ್ಪಿನ ಸತ್ಯಾಗ್ರಹದಲ್ಲಿ ದಾಂಡಿ, ಧಾರಸಾನಾ, ವಡಾಲಾ ಮತ್ತು ಶೊರೋಡಾ, ಕರ ನಿರಾಕರಣೆ ಚಳುವಳಿಯಲ್ಲಿ ಬಾರ್ಡೋಲಿ, ‘ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ಸಾತಾರಾ, ಉತ್ತರ ಪ್ರದೇಶ, ಬಂಗಾಲ ಮತ್ತು ಬಿಹಾರ ಇವು ಹೆಚ್ಚಿನ ಪ್ರಸಿದ್ಧಿ ಪಡೆದವು. ಆದರೆ ಅಂಕೋಲಾ ತಾಲೂಕಿನ ಮಾತು ಹಾಗಲ್ಲ. ಗಾಂಧೀಜಿಯವರು ಕೈಕೊಂಡ ಎಲ್ಲಾ ಚಳುವಳಿಗಳಲ್ಲಿಯೂ ಅದು ಅಷ್ಟೇ ಪ್ರಸಿದ್ಧಿಯನ್ನು ಪಡೆದು ಕೀರ್ತಿಗಳಿಸಿದೆ.

ಅಂಕೋಲಾ ತಾಲೂಕು ಅಸಹಕಾರ ಮತ್ತು ಸ್ವದೇಶಿ ಚಳುವಳಿಗಳಲ್ಲಿ ಗಾಂಧೀ ತಾಲೂಕು ಎಂದು ಹೊಗಳಿಸಿಕೊಂಡಿತ್ತು. ಉಪ್ಪಿನ ಸತ್ಯಾಗ್ರಹದಲ್ಲಿ ‘ಕರ್ನಾಟಕದ’ ಸಮರ ಭೂಮಿಯಾಗಿ ಕೀರ್ತಿ ಪಡೆಯಿತು. ಕರನಿರಾಕರೆ ಚಳುವಳಿಯಲ್ಲಿ ‘ಕರ್ನಾಟಕದ ಬಾರ್ಡೋಲಿ’ ಎಂದು ಕೀರ್ತಿ ಪಡೆಯಿತು. ಭಾರತ ಬಿಟ್ಟು ತೊಲಗಿ ತಳುವಳಿಯಲ್ಲಿ ಸೋಲರಿಯದ ಸಾಹಸದಿಂದ ಹೋರಾಡಿ ಯಾವುದೇ ಬಗೆಯ ಹಿಂಸೆ ಘರ್ಷಣೆಗಳಿಗೆ ಎಡೆಕೊಡದೆ, ದೇಶಕ್ಕೆ ಆದರ್ಶವಾಗಿ ಯಾಸ್ಸು ಪಡೆಯಿತು. ಭಾರತ ಬಿಟ್ಟು ತೊಲಗಿ ಚಳುವಳಿಯ ಕಾಲಕ್ಕೆ ಈ ರೀತಿ ಸಂಯಮದಿಂದ ಅಹಿಂಸಾ ಪಾಲನೆ ಮಾಡಿದ ಉದಾಹರಣೆ ಉತ್ತರ ಕನ್ನಡ ಜಿಲ್ಲೆಯನ್ನು ಬಿಟ್ಟರೆ ದೇಶದ ಬೇರೆ ಯಾವ ಭಾಗದಲ್ಲಿಯೂ ಕಂಡು ಬರುವುದಿಲ್ಲ. ಈ ಮಾತು ಇಲ್ಲಿಯ ಅಹಿಂಸಾ ತತ್ವ ಪಾಲನೆಗೆ ನಿದರ್ಶನವಾಗಿದೆ.

ಕರ್ನಾಟಕದ ಬಾರ್ಡೋಲಿ: ಕರನಿರಾಕರಣೆ ಚಳುವಳಿಯಲ್ಲಿ ಅಂಕೋಲೆಯನ್ನು ಬಾರ್ಡೋಲಿಗೆ ಹೋಲಿಸಿದರು. ಈ ಹೋಲಿಕೆಯು ಭಾರತದಲ್ಲಿ ಮೊಟ್ಟ ಮೊದಲನೆಯದಾಗಿ ಕೈಕೊಂಡ ಬಾರ್ಡೋಲಿಯ ಜಗತ್ಪ್ರಸಿದ್ಧವಾದ ಕರನಿರಾಕರಣೆ ಚಳುವಳಿ ಹಾಗೂ ಅಂಕೋಲೆಯಲ್ಲಿ ನಡೆದ ಅಪೂರ್ವತ್ಯಾಗದ ಕರನಿರಾಕರಣೆ ಚಳುವಳಿ, ಇವುಗಳ ತೀವ್ರತೆಯನ್ನು ಗಮನಿಸಿ ಕೊಟ್ಟ ಹೋಲಿಕೆಯಾಗಿರುತ್ತದೆ. ಕಾರಣ ಆ ವಿಷಯದಲ್ಲಿ ಅಂಕೋಲೆಗೆ ಇದೊಂದು ಗೌರವರ ಪ್ರಶಸ್ತಿಯೇ ಆಗಿರುತ್ತದೆ. ಆದರೆ ಅಂಕೋಲಾ ತಾಲೂಕಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಅಂಕೋಲಾ ತಾಲೂಕಿನ ಸ್ಥಾನವು ಬಾರ್ಡೋಲಿಗಿಂತ ಮಿಗಿಲಾದದ್ದು ಎಂಬುದು ಮನವರಿಕೆಯಾಗುವಂತಿದೆ. ಕಾರಣ ಅಂಕೋಲಾ ತಾಲೂಕಿನಲ್ಲಿ ಸ್ವಾತಂತ್ರ್ಯ ಚಳವಳಿಯು ಹೇಗೆ ಆರಂಭವಾಯಿತು ಮತ್ತು ಯಾವ ರೀತಿಯಲ್ಲಿ ದಿನದಿಂದ ದಿನಕ್ಕೆ ಬೆಳೆದುಕೊಂಡು ಹೋಯಿತು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ಮಹಾತ್ಮಾಜಿಯವರು ಬ್ರಿಟೀಷರ ವಿರುದ್ಧ ಹೋರಾಟಕ್ಕಿಳಿಯಲು ಕಾರಣವಾದದ್ದು  : ೧೯೧೪ರ ಮೊದಲನೆಯ ಮಹಾಯುದ್ಧದಲ್ಲಿ ಬ್ರಿಟನ್ನಿಗೆ ಸೋಲಿನ ಮೇಲೆ ಸೋಲಾಗುತ್ತ ನಡೆಯಿತು. ಆ ಹೊತ್ತಿನಲ್ಲಿ ತಮಗೆ ಭಾರತದ ಸಹಾಯವು ಅಗತ್ಯವೆಂದು ಬ್ರಿಟೀಷರು ಮನಗಂಡರು. ಯುದ್ಧ ಮುಗಿದ ಬಳಿಕ ಭಾರತಕ್ಕೆ ಸಾಮ್ರಾಜ್ಯಾಂತರ್ಗತ ಸ್ವರಾಜ್ಯ ಕೊಡುವ ಭರವಸೆ ಕೊಟ್ಟು ಯುದ್ಧಕ್ಕೆ ಭಾರತದ ಸಹಾಯ ಯಾಚಿಸಿದರು. ಆ ಮಹಾಯುದ್ಧದಲ್ಲಿ ತುರ್ಕಿಯು ಜರ್ಮನಿಯ ಪರವಾಗಿ ಇದ್ದಿತು. ಆದ್ದರಿಂದ ಭಾರತದ ಮುಸಲ್ಮಾನರು ತಮ್ಮ ಧರ್ಮದ ವಿರುದ್ಧ ಇಂಗ್ಲೆಂಡಕ್ಕೆ ಸಹಾಯ ಮಾಡಲು ಹಿಂಜರಿದರು. ಆಗ ಇಂಗ್ಲೆಂಡದ ಮಂತ್ರಿಯು ತಮಗೆ ವಿಜಯವಾದರೆ ಇಸ್ಲಾಂ ಧರ್ಮದ ವಿರುದ್ಧವಾಗಿ ಯಾವುದೊಂದು ವ್ಯವಸ್ಥೆಯನ್ನೂ ಮಾಡುವುದಿಲ್ಲವಾಗಿಯೂ, ಮುಸಲ್ಮಾನ ಜನರನ್ನು ಎಂದು ಅಸಂತುಷ್ಟಗೊಳಿಸುವುದಿಲ್ಲವೆಂದೂ ಮಾತುಕೊಟ್ಟರು. ಆ ಮಾತಿಗೆ ಗಾಂಧೀಜಿಯವರು ಮತ್ತು ಮುಸಲ್ಮಾನರು ವಿಶ್ವಾಸವಿಟ್ಟು ಬ್ರಿಟನ್ನಿಗೆ ಯುದ್ಧದಲ್ಲಿ ಅಸಂಖ್ಯ ಭಾರತೀಯ ಯೋಧರನ್ನು ಸೇರಿಸಿದರು. ಕೋಟಿಗಟ್ಟಲೆ ಯುದ್ಧ ಫಂಡು ಕೊಡಿಸಿ ಕೊಟ್ಟರು. ಸ್ವತಃ ಗಾಂಧೀಜಿಯವರು ಗಾಯಾಳುಗಳ ಸೇವೆಗೆ ಪ್ರಥಮ ಚಿಕಿತ್ಸಾ ದಳವನ್ನು ರಚಿಸಿ ಹಗಲು ರಾತ್ರಿ ಸೇವೆಗೈದರು. ನೂರಾರು ಡಾಕ್ಟರುಗಳನ್ನು, ನರ್ಸ್‌ಗಳನ್ನು ಕಳುಹಿಸಿಕೊಟ್ಟರು. ಹಲವಾರು ಆಸ್ಪತ್ರೆಗಳನ್ನು ಸ್ಥಾಪಿಸಿದರು. ಈ ಎಲ್ಲಾ ಕಾರ್ಯದಲ್ಲಿ ಭಾರತೀಯ ಮುಸಲ್ಮಾನರೂ ಸಹ ಬ್ರಿಟೀಷರ ಮಾತು ನಂಬಿ ತುರ್ಕಿಯ ವಿರುದ್ಧವೂ ಸಹಾಯ ಮಾಡಿದರು.

ಯುದ್ಧ ಮುಗಿಯಿತು. ಮಿತ್ರ ರಾಷ್ಟ್ರಗಳು ಜಯ ಪಡೆದವು. ಬ್ರಿಟನ್ ಭಾರತಕ್ಕೆ ಕೊಟ್ಟ ಮಾತನ್ನು ಮರೆಯಿತು. ಮುಸಲ್ಮಾನರಿಗೆ ಕೊಟ್ಟ ಮಾತಿನ ವಿರುದ್ಧವಾಗಿ ತುರ್ಕಿಯ ಖಲೀಫರನ್ನು ಪದಚ್ಯುತಿಗೊಳಿಸಿ ತುರ್ಕಿಯನ್ನು ತುಂಡು-ತುಂಡು ಮಾಡಿ ಇಂಗ್ಲೆಂಡ್, ಫ್ರಾನ್ಸ್, ಇಟಲಿ ಮತ್ತು ಗ್ರೀಸ್‌ನವರು ಹಂಚಿಕೊಂಡರು. ಸ್ವತಃ ಖಲೀಫರ ಸಿಂಹಾಸನವು ಕಾನ್ಸಟಂಟಿನೋಪಲ್‌ದಿಂದ ಹೊರತಳ್ಳಲ್ಪಡಬೇಕೆಂದೂ, ಯುರೋಪದಲ್ಲಿ ತುರ್ಕಿಯ ಅಧಿಕಾರವು ಹೆಸರಿಗೆ ಮಾತ್ರ ಇರಬೇಕೆಂದೂ, ಮಿತ್ರ ರಾಷ್ಟ್ರ ಹಂಚಿಕೊಂಡ ಪ್ರದೇಶಗಳಲ್ಲಿರುವ ಮುಸಲ್ಮಾನರ ಪೂಜಾ ಸ್ಥಳಗಳೂ ಪುಣ್ಯ ಕ್ಷೇತ್ರಗಳೂ, “ಮಾಂಡೇಟರಿ ಪವರ್” ಎಂಬ ಅಧಿಕಾರದಿಂದ ಬ್ರಿಟೀಷರ ಅಧಿ ಪತ್ಯದಲ್ಲಿ ಇರಬೇಕೆಂದೂ ಗೊತ್ತಾಯಿತು. ಈ ನಿರ್ಣಯಗಳಿಂದ ಭಾರತೀಯ ಮುಸಲ್ಮಾನರಿಗೆ ದೊಡ್ಡ ನಿರಾಶೆಯಾಯಿತು. ಮೇಲಾಗಿ ಬ್ರಿಟೀಷರು ಭಾರತದ ಸ್ವಾತಂತ್ರ್ಯದ ಹುಟ್ಟನ್ನೇ ಅಡಗಿಸುವಂಥ ರೌ ಲೆಟ್ ಮಸೂದೆಯನ್ನು ೧೯೧೯ರ ಮಾರ್ಚ ೧೮ ರಂದು ಪಾಸು ಮಾಡಿ ಜಾರಿಯಲ್ಲಿ ತಂದರು. ಇದು ಮಹಾತ್ಮಾಜಿಯವರು ಬ್ರಿಟೀಷರ ವಿರುದ್ಧ ಹೋರಾಟಕ್ಕಿಳಿಯಲು ಕಾರಣವಾಯಿತು.

ಮಹಾತ್ಮಾಜೀಯವರು ದೇಶದ ತುಂಬ ಹರತಾಳಕ್ಕೆ ಕರೆ ಕೊಟ್ಟದ್ದು: ರೌಲೆಟ್ ಶಾಸನದಿಂದ ದೇಶದ ಪರಿಸ್ಥಿತಿಯೇ ಬದಲಾಯಿತು. ಮಹಾತ್ಮಾಜೀಯವರು ಈ ಕರಾಳ ಶಾಸನದ ವಿರುದ್ಧ ಇಡೀ ದೇಶದಲ್ಲಿ ೧೯೧೯ ನೇ ಏಪ್ರಿಲ್ ೬ನೇ ತಾರೀಖಿನಂದು ಹರತಾಳ ಆಚರಿಸಬೇಕೆಂದು ಕರೆಕೊಟ್ಟರು. ಗಾಂಧೀಜಿಯವರ ಆದೇಶದಂತೆ, ಇಡೀ ರಾಷ್ಟ್ರದ ಜನತೆ ಜಾತಿ ಭೇದ, ಪ್ರಂತಭೇದ, ಧರ್ಮಭೇದಗಳೆಲ್ಲವನ್ನೂ ಮರೆತು, ಇಡೀ ಭಾರತವು ಒಂದು ಶಕ್ತಿಯಾಗಿ, ಆಸೇತು ಹಿಮಾಚಲದವರೆಗೆ ಅಪೂರ್ವವಾದ ಹರತಾಳವನ್ನು ಆಚರಿಸುವ ಮೂಲಕ, ಮೊಟ್ಟ ಮೊದಲನೆಯದಾಗಿ, ಬ್ರಿಟೀಷ ಸಾಮ್ರಾಜ್ಯವನ್ನು ನಡುಗಿಸಿಬಿಟ್ಟಿತು. ಆ ಸಂದರ್ಭದಲ್ಲಿ ಬ್ರಿಟೀಷರು ಅಡ್ಡಿಯೊಡ್ಡಿದ ಕಾರಣದಿಂದಾಗಿ ಘರ್ಷಣೆ ನಡೆದು ಕೆಲವು ಕಡೆಯಲ್ಲಿ ಹಿಂಸಾ ಕೃತ್ಯಗಳೂ ನಡೆದವು.

ಜನತೆಯ ಈ ಪ್ರಚಂಡ ವಿರೋಧವನ್ನು ಕಂಡು ಸರ್ಕಾರವು ಹುಚ್ಚೆದ್ದು ಕುಣಿಯಿತು. ಬ್ರಿಟೀಷರಿಂದ ಪಂಜಾಬದಲ್ಲಿ ಹತ್ಯಾಕಾಂಡ ನಡೆಯಿತು. ಜಲಿಯನ್‌ವಾಲಾಬಾಗದಲ್ಲಿ ಜನರಲ್ ಡಾಯರನು ನಡೆಸಿದ ನರಮೇಧ ನಡೆಯಿತು. ಇಡೀ ಪಂಜಾಬದಲ್ಲಿ ದಂಡಿನ ಕಾನೂನು ಜಾರಿಮಾಡಲ್ಪಟ್ಟಿತು. ಸಾವಿರಾರು ನಿರಪರಾಧಿಗಳ ಮೇಲೆ, ಅಪರಾಧಗಳು ಹೊರಿಸಲ್ಪಟ್ಟವು. ಸಾವಿರಾರು ಜನರು ಬಂಧಿತರಾದರು. ನೂರಾರು ಜನರಿಗೆ ಮರಣದಂಡನೆ ವಿಧಿಸಲ್ಪಟ್ಟಿತು. ನೂರಾರು ಜನರು ಜನ್ಮಟಾಪು ಶಿಕ್ಷೆಗೆ ಗುರಿಯಾದರು. ಮಾನವತಿಯರ ಮೇಲೆ ವಿವಿಧ ತರಹದ ಹೇಸಿಕೆಯ ಅತ್ಯಾಚಾರಗಳು ನಡೆದವು. ವಿಮಾನಗಳ ಮೇಲಿಂದ ನಿರಪರಾಧಿ ಜನರ ಮೇಲೆ ಗುಂಡುಗಳ ಮಳೆ ಸುರಿಸಿದರು. ಜನರು ಸುಳ್ಳು ಸಾಕ್ಷಿಗಳನ್ನು ಕೊಡಬೇಕೆಂದು ಅವರಿಗೆ ಅಸಹ್ಯ ಶಾರೀರಿಕ ದಂಡನೆಯನ್ನೂ, ಕಷ್ಟಗಳನ್ನೂ ಕೊಟ್ಟರು. ಇದರಿಂದ ಬ್ರಿಟೀಷ ಅಧಿಕಾರಿಗಳ ಅಮಾನುಷ ಅತ್ಯಾಚಾರಗಳೂ, ಬ್ರಿಟೀಷ ಸೈನಿಕರ ಬರ್ಬರ ವರ್ತನವೂ ಜನರ ನಿದರ್ಶನಕ್ಕೆ ಬಂದವು. ಹಿಂದೀಯರ ಅಸಹಾಯಕತೆಯೂ, ಹೀನತೆಯೂ ಸ್ಪಷ್ಟವಾಯಿತು. ಹಿಂದೀಯರ ಅಸ್ತಿತ್ವವೂ, ಹಿಂದೀಯರು ಹುಟ್ಟುವುದು, ಬೆಳೆಯುವುದು, ಅಭ್ಯಸಿಸುವುದು, ಗೇಯುವುದು, ಸಾಯುವುದು, ಕೇವಲ ಬ್ರಿಟೀಷರ ಸುಖಜೀವನಕ್ಕಾಗಿಯೇ? ಎಂದು ಹಿಂದೀಯರು ಯೋಚಿಸಹತ್ತಿದರು. ಇಡೀ ಹಿಂದುಸ್ತಾನದಲ್ಲಿ ಅಸಂತೋಷದ ಜ್ವಾಲೆ ಹಬ್ಬಿತು. ಗಾಂಧೀಜಿ ಬ್ರಿಟಿಷ ಸರ್ಕಾರದ ವಿರುದ್ಧ ಬಂಡುಗಾರರಾದರು. ರೌ ಲೆಟ್ ಕಾಯಿದೆಯ ಪರಿಣಾಮವಾಗಿ ಲಾಲಾ ಲಜಪತರಾಯ, ಮಹಮ್ಮದ ಅಜಮಲಖಾನ, ಚಿತ್ತರಂಜನದಾಸ, ಅಬ್ದುಲಕಲಮ ಆಝಾದ, ಸರೋಜಿನಿ ನಾಯ್ಡು, ಮುಕ್ತಾರ ಅಹಮ್ಮದ ಅನ್ಸಾರಿ, ಶ್ರೀನಿವಾಸ ಅಯ್ಯಂಗಾರ, ಮೋತಿಲಾಲ ನೆಹರು, ಜವಾಹರಲಾಲ ನೆಹರು, ವಲ್ಲಭಬಾಯಿ ಪಟೇಲ, ರಣಛೋಡಲಾಲ ಅಮೃತಲಾಲ, ರಾಜೇಂದ್ರಪ್ರಸಾರ, ಸುಭಾಸಚಂದ್ರ ಬೋಸ, ರಾಜಗೋಪಾಲಚಾರಿ, ಮಹಮ್ಮದ ಅಲಿ, ಶೌಕತಅಲಿ, ವಿನೋಬಾ ಭಾವೆ ಮುಂತಾದ ನೂರಾರು ನಾಯಕರು ಚಳುವಳಿಗೆ ಧುಮುಕಿದರು.

ಅಸಹಕಾರ ಚಳವಳಿ : ಮಹಾತ್ಮಾಜೀಯವರು ಮೊಟ್ಟಮೊದಲನೆಯದಾಗಿ ೧೯೨೧ ರಲ್ಲಿ ದೇಶದ ತುಂಬಾ ಅಸಹಕಾರ ವಳುವಳಿಯನ್ನು ಸಾರಿದರು. ಅಸಹಕಾರ ಚಳುವಳಿಯ ಮುಖ್ಯ ಕಾರ್ಯಗಳು ಈ ಮುಂದೆ ಬರೆದಂತೆ ಗಾಂಧೀಜಿ ಹೇಳಿದ್ದರು.

೧. ಬ್ರಿಟೀಷ ಸರ್ಕಾರವು ನಡೆಸುತ್ತಿರುವ ಯಾವುದೇ ಕೆಲಸದಲ್ಲಿ ಸಹಕಾರ ಕೊಡತಕ್ಕದ್ದಲ್ಲ.

೨. ಪರದೇಶಿ ವಸ್ತುಗಳನ್ನು ಬಹಿಷ್ಕರಿಸಬೇಕು.

೩. ಸ್ವದೇಶಿ ವಸ್ತುಗಳ ಬಳಕೆ ಮಾಡಬೇಕು.

೪. ಚರಖಾ, ರಾಟಿ ಹಾಗೂ ಕೈಮಗ್ಗಗಳನ್ನು ಪುನರುಜ್ಜೀವನಗೊಳಿಸಬೇಕು.

೫. ಮುದುಕರಿಗೂ, ಅಬಲರಿಗೂ ಉದ್ಯೋಗಾವಕಾಶವಾಗಬೇಕು.

೬. ಗ್ರಾಮೋದ್ಯೋಗ ಗೃಹೋದ್ಯೋಗಗಳು ನಡೆಯುವಂತಾಗಬೇಕು.

೭. ಬಡವರ ಅವನತಿಗೆ ಕಾರಣವಾದ ಸೆರೆ, ಸಿಂದಿ, ಕುಡಿಯುವುದನ್ನು ಬಂದ್ ಮಾಡಬೇಕು.

೮. ಅಸ್ಪೃಶ್ಯತೆಯನ್ನು ತೊಡೆದು ಹಾಕಬೇಕು.

ಇವೇ ಮುಂತಾದವುಗಳು ಅಸಹಕಾರ ಚಳವಳಿಯ ಕಾರ್ಯಕ್ರಮಗಳಾಗಿದ್ದವು.

ಅಂಕೋಲಾ ತಾಲೂಕಿನಲ್ಲಿ ಅಸಹಕಾರ ಚಳವಳಿ: ಅಸಹಕಾರ ಚಳವಳಿಯ ಪ್ರಚಾರಕ್ಕಾಗಿ ಅಂಕೋಲಾ ತಾಲೂಕಿಗೆ ಕೀರ್ತನಕಾರರು ಬಂದು ಕೀರ್ತನ ಮಾಡಿದರು. ಲಾವಣಿಕಾರರು ಬಂದು ಲಾವಣಿ ಹಾಡಿದರು. ಭಾಷಣಕಾರರು ಬಂದು ಭಾಷಣ ಮಾಡಿದರು. ಪತ್ರಿಕೆಗಳು ಲೇಖನಗಳಿಂದ ಪ್ರಚಾರ ಮಾಡಿದವು. ರಾಷ್ಟ್ರಗೀತೆಗಳ ಮೂಲಕ ಪ್ರಚಾರ ನಡೆಯಿತು. ಆ ಎಲ್ಲ ಪ್ರಚಾರಗಳಲ್ಲಿಯೂ ಬ್ರಿಟೀಷರು ನಮ್ಮ ದೇಶಕ್ಕೆ ಬಂದು ನಮ್ಮ ಸಂಪತ್ತನ್ನು ಹೇಗೆ ಸೂರೆಮಾಡಿದರು? ನಮ್ಮ ಉದ್ಯೋಗ ದಂಧೆಗಳನ್ನು ಕೆಡಿಸಿ, ಹೇಗೆ ಮೂಲೆ ಗುಂಪು ಮಾಡಿದರು? ನಮ್ಮ ಅಸ್ತ್ರ-ಶಸ್ತ್ರಗಳನ್ನು ಕಸಿದುಕೊಂಡು ನಮ್ಮನ್ನು ಹೇಗೆ ನಿರ್ವೀರ್ಯರನ್ನಾಗಿ ಮಾಡಿದರು. ಯಾವ ರೀತಿ ನಮ್ಮ ಜೀವನವನ್ನು ಹುಳು-ಹುಪ್ಪಡಿಗಳಿಗಿಂತ ಕೀಳಾಗಿ ಕಂಡರು ಎಂಬುದನ್ನೆಲ್ಲಾ ಮನಮುಟ್ಟುವಂತೆ ವರ್ಣಿಸುತ್ತಿದ್ದರು. ಅಸಹಕಾರ ಚಳವಳಿಯ ಪ್ರಚಾರಕಾರ್ಯದಲ್ಲಿ ಪತ್ರಿಕೆಗಳೂ ಮಹತ್ವದ ಪಾತ್ರವಹಿಸಿದ್ದವು. ಎಲ್ಲಕ್ಕೂ ಹೆಚ್ಚಾಗಿ ಆ ಕಾಲದಲ್ಲಿ ಹಾಡಲ್ಪಡುತ್ತಿದ್ದ ರಾಷ್ಟ್ರಗೀತೆಗಳಿಂದ ಹಳ್ಳಿ-ಪಟ್ಟಣಗಳ ಯಾವತ್ತು ಗಂಡು, ಹೆಣ್ಣು, ಮಕ್ಕಳು, ಮುದುಕರ ಮನಸ್ಸಿನ ಮೇಲೆಲ್ಲಾ ಸ್ವದೇಶ ಪ್ರೇಮ, ಸ್ವದೇಶಾಭಿಮಾನ ಉಕ್ಕಿ ಹರಿಯುವಂತಾಗುತ್ತಿತ್ತಲ್ಲದೇ ಬ್ರಿಟೀಷರ ದುರಾಡಳಿತೆಯ ವಿರುದ್ಧ ತಿರಸ್ಕಾರ ಹುಟ್ಟಿಸುತ್ತಿತ್ತು. ನಮ್ಮ ದೇಶದ ಬಗ್ಗೆ ಸ್ವಾಭಿಮಾನ ಕೆರಳುತ್ತಿತ್ತು.

ಅಸಹಕಾರ ಚಳವಳಿಯ ಎಲ್ಲಾ ಕಾರ್ಯಕ್ರಮಗಳನ್ನು ಅಂಕೋಲಾ  ತಾಲೂಕಿನ ಪ್ರತಿಹಳ್ಳಿ, ಪಟ್ಟಣಗಳ, ಪ್ರತಿ ಸಮಾಜ, ಪ್ರತಿ ಮನೆಗಳೆಂಬಂತೆ ಆಚರಣೆಗೆ ತಂದರು, ಎಲ್ಲಿ ನೋಡಿದಲ್ಲಿ ತಕಲಿ, ರಾಟಿಗಳು ತಿರುಗಹತ್ತಿದವು. ಕೈಮಗ್ಗಗಳು ತಲೆ ಎತ್ತಿದವು. ಪರದೇಶಿ ವಸ್ತ್ರದ ಹೋಳಿಗಳು ಎಲ್ಲೆಡೆ ನಡೆಯಹತ್ತಿದವು. ಪರದೇಶಿ ವಸ್ತುಗಳ ಬಹಿಷ್ಕಾರ ಹಾಕಲ್ಪಟ್ಟಿತ್ತು. ಸ್ವದೇಶಿ ವಸ್ತುಗಳ ಪ್ರಚಾರ, ಉತ್ಪತ್ತಿ ಮಾರಾಟ ನಡೆಯಹತ್ತಿದವು. ಶಾಲೆಗಳಿಗೂ, ಕಚೇರಿ, ಕೋರ್ಟುಗಳಿಗೂ ಬಹಿಷ್ಕಾರ ಹಾಕಲ್ಪಟ್ಟಿತು. ರಾಷ್ಟ್ರೀಯ ಶಾಲೆಗಳು, ಗ್ರಾಮಪಂಚಾಯತಗಳು ಸ್ಥಾಪನೆಯಾದವು. ಹೆಂಡದಂಗಡಿಗಳು ಮುಚ್ಚಲ್ಪಟ್ಟವು. ಅಸ್ಪೃಶ್ಯತಾನಿವಾರಣೆ ಪ್ರಚಾರಕಾರ್ಯ ನಡೆಯಿತು. ರಾಷ್ಟ್ರಭಾಷೆಯಾದ ಹಿಂದಿ ಶಾಲೆಗಳೂ ಆರಂಭವಾದವು. ಮೂಢನಂಬಿಕೆಗಳ ನಿವಾರಣಾಕಾರ್ಯ ನಡೆಯಿತು. ಎಲ್ಲಿ ನೋಡಿದಲ್ಲಿ ಖಾದಿ ಟೊಪ್ಪಿಗೆಗಳೂ ಖಾದಿ ಬಟ್ಟೆಗಳೂ ಕಂಗೊಳಿಸಿದವು. ಇಡೀ ಅಂಕೋಲಾ ತಾಲೂಕು ಖಾದಿಮಯವಾಗಿ ಯೋಗಿತು. ಪಟ್ಟಣ, ಹಳ್ಳಿಗಳಲ್ಲಿ, ಓಣಿ-ಓಣಿಗಳಲ್ಲಿ ಪ್ರಭಾತಫೇರಿಗಳೂ, ಧ್ವಜವಂದನೆಗಳೂ ನಡೆಯಹತ್ತಿದವು. ಚರಖಾ ಹಾಡುಗಳೂ, ರಾಷ್ಟ್ರಗೀತೆಗಳೂ, ಜಯಘೋಷಗಳೂ ಎಲ್ಲೆಡೆಗೆ ಕೇಳಿಬಂದವು. ಅಂಕೋಲೆಯಲ್ಲಿ ಯಾರನ್ನು ಭೇಟ್ಟಿಯಾದರೂ, ಗಾಂಧೀಜಿಯದೇ ಮಾತು. ಸ್ವದೇಶಿ, ಸ್ವರಾಜ್ಯಗಳದೇ ಮಾತು. ಈ ರೀತಿ ವಾತಾವರಣ ಉಂಟಾಗಿ, ಅಂಕೋಲಾ ತಾಲೂಕು ಗಾಂಧೀಮಯವಾಗಿ ಹೋಯಿತು. ಅಂಕೋಲಾ ತಾಲೂಕು ಗಾಂಧೀ ತಾಲೂಕು ಎಂದೇ ಹೆಸರು ಪಡೆಯಿತು.

ಈ ರೀತಿ ಅಸಹಕಾರ ಚಳವಳಿಯ ಕಾರ್ಯಾಚರಣೆಯ ಪರಿಣಾಮವಾಗಿ ಅಂಕೋಲಾ ತಾಲೂಕಿನ ಪ್ರತಿ ವ್ಯಕ್ತಿಯಲ್ಲಿಯೂ, ದೇಶಾಭಿಮಾನದ ಜಾಗೃತಿಯಾಯಿತು. ಬ್ರಿಟೀಷರ ಬಗ್ಗೆ ಇದ್ದ ಭಯ-ಭಕ್ತಿಗಳು ಮಾಯವಾಗಿ, ಅವರ ವಿಷಯದಲ್ಲಿ ತಿರಸ್ಕಾರ ಭಾವನೆ ಉಂಟಾಯಿತು. ಬ್ರಿಟೀಷರ ವಿರುದ್ಧ ಎದ್ದು ನಿಲ್ಲಲು ಧೈರ್ಯ ಉಂಟಾಯಿತು.

ಭಾರತದಲ್ಲಿ ಗಾಂಧೀಜಿಯವರು ಮೊಟ್ಟ ಮೊದಲು ಕೈಕೊಂಡ ಕಾಯದೆ ಭಂಗ ಚಳವಳಿ ದಾಂಡೀಯಾತ್ರೆ : ೧೯೨೯ರ ಡಿಶಂಬರ ೩೧ ರಂದು ಲಾಹೋರದ ರಾವೀನದಿಯ ದಂಡೆಯ ಮೇಲೆ, ಭಾರತೀಯ ಕಾಂಗ್ರೇಸ್ಸು ಸೇರಿ, ಮಧ್ಯರಾತ್ರಿಯ ಸಮಯದಲ್ಲಿ “ಸಂಪೂರ್ಣ ಸ್ವರಾಜ್ಯವೇ ಭಾರತದ ಗುರಿ” ಎಂದು ಘೋಷಿಸಿ, ಠರಾವು ಪಾಸು ಮಾಡಿತು. ಅದಕ್ಕನುಸರಿಸಿ, ಜನವರಿ ೨೬ನೇ ತಾರೀಖು ಸ್ವಾತಂತ್ರ್ಯ ದಿನವೆಂದು ಘೋಷಿಸಿ, ಹಿಂದೂಸ್ಥಾನದಲ್ಲೆಲ್ಲಾ ಆಚರಿಸಲ್ಪಟ್ಟಿತು.

ಮುಂದೆ, ೧೬-೦೨-೧೯೩೦ ರಲ್ಲಿ ಕೂಡಿದ ಕಾಂಕ್ರೆಸ್ ಕಾರ್ಯಕಾರಿ ಕಮಿಟಿಯು ಗಾಂಧೀಜಿಯವರು ಸ್ವರಾಜ್ಯ ಸಂಪಾದನೆಗಾಗಿ, ತಮಗೆ ಇಷ್ಟ ಬಂದ ದಿನ ಕಾಯದೆ ಭಂಗ ಚಳವಳಿ ಹೂಡಬಹುದೆಂದು ಠರಾವು ಪಾಸು ಮಾಡಿತು.

ಆದರೆ, ಈ ಬಗ್ಗೆ ಗಾಂಧೀಜಿಯವರು ಯಾವ ರೀತಿಯಿಂದ ಮುಂದಡಿ ಇಡುವರೆಂಬುದು ಯಾರಿಗೂ ತಿಳಿದಿರಲಿಲ್ಲ. ಒಂದು ಕಡೆಯಲ್ಲಿ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವಾದ ಬ್ರಿಟೀಷ ಸಾಮ್ರಾಜ್ಯದ ಮಹಾಸೇನೆ, ಇನ್ನೊಂದು ಕಡೆಯಲ್ಲಿ ನಿರಾಯುಧರಾದ ಭಾರತದ ಜನತೆ, ಈ ವಿಚಿತ್ರವಾದ ಯುದ್ಧವನ್ನು ನಡೆಸಲು ಗಾಂಧೀಜಿಯವರು ಯಾವ ರೀತಿ ಹೆಜ್ಜೆ ಇಡುವರೆಂಬುದನ್ನು ತಿಳಿಯಲು ಪ್ರಪಂಚವೇ ಕಾತರದಿಂದ ನಿರೀಕ್ಷಿಸಹತ್ತಿತು. ಆ ಬಗ್ಗೆ ಕುತೂಹಲಭರಿತರಾದ ಪ್ರಪಂಚದ ಪತ್ರಿಕಾ ವರದಿಗಾರರು ಸಾಬರಮತಿ ದೃಷ್ಟಿಯೂ ಗಾಂಧೀಜಿಯ ಕಡೆಗೆ ಕೇಂದ್ರೀಕೃತವಾಗಿದ್ದಿತು. ಗಾಂಧೀಜಿಯವರಾದರೂ ಆ ಬಗ್ಗೆ ಆಲೋಚನಾ ಮಗ್ನರಾಗಿದ್ದರು. ಪೂರ್ಣ ಸ್ವರಾಜ್ಯವನ್ನು ಪಡೆಯುವ ಗುರಿ ಇಟ್ಟುಕೊಂಡು ಇಡೀ ರಾಷ್ಟ್ರವು ಎದ್ದು ನಿಲ್ಲುವಂಥ ಯಾವ ಹೆಜ್ಜೆ ಇಡಬಹುದೆಂದು ಆಲೋಚಿಸಹತ್ತಿದರು. ಕೊನೆಗೊಮ್ಮೆ ಬಡವ-ಬಲ್ಲಿದರೆಲ್ಲದ ದಿನಬಳಕೆಯ ವಸ್ತುವಾದ ಉಪ್ಪಿನ ಮೇಲೆ ಕರ ಹೇರಿದ ಉಪ್ಪಿನ ಕಾಯದೆ ಮುರಿಯುವದೆಂದು ನಿಶ್ಚಯ ಮಾಡಿದರು. ಹಾಗೂ ಈ ಕಾಯದೆಯನ್ನು ಮೊದಲು ತಾವು ಮುರಿಯತಕ್ಕದ್ದೆಂದೂ, ಆ ಮೇಲೆ ಇಡೀ ದೇಶವು ಈ ಕಾಯದೆ ಭಂಗ ಮಾಡತಕ್ಕದ್ದೆಂತಲೂ ನಿಶ್ಚಯಿಸಿ ಸಾರಿದರು. ಆ ನಿರ್ಣಯದಂತೆ ಗಾಂಧೀಜಿಯವರು ೧೯೩೦ ರ ಮಾರ್ಚ್ ೧೨ನೆಯ ತಾರೀಖಿನ ದಿನ ಅರುಣೋದಯಕ್ಕೆ ಸರಿಯಾಗಿ, ತಮ್ಮ ಸಾಬರಮತಿ ಆಶ್ರಮದಲ್ಲಿ ಪ್ರಾರ್ಥನೆ, ಭಜನೆ ನಡೆಸಿದರು. ನಂತರ ತಮ್ಮ ನಿಷ್ಠಾವಂತರಾದ ೭೮ ಜನ ಅನುಯಾಯಿಗಳನ್ನು ಕೂಡಿ (ಅವರಲ್ಲಿ ಕರ್ನಾಟಕದ ಮಹದೇವಪ್ಪ ಮೈಲಾರ ಅವರೂ ಒಬ್ಬರಾಗಿದ್ದರು) ಆಶ್ರಮವಾಸಿಗಳಾದ ಇತರರು ಹಾಗೂ ನೆರೆದ ಅಸಂಖ್ಯಾತ ಜನರ ಗುಂಪಿನೊಡಗೂಡಿ ಮಹಾತ್ಮರು ಬ್ರಿಟೀಷ್ ಕಾಯದೆ ಮುರಿಯಲು ಹೊರಟ ಪಾದಯಾತ್ರೆಗೆ ಮೊದಲ ಹೆಜ್ಜೆ ಇಟ್ಟರು. ಆಶ್ರಮದಿಂದ ೨೦೦ ಮೈಲು ದೂರದಲ್ಲಿದ್ದ ಸೂರತ ಜಿಲ್ಲೆಯ ಸಮುದ್ರ ತೀರದ ದಾಂಢೀ ಗ್ರಾಮಕ್ಕೆ ಕಾಲ್ನಡಿಗೆಯಿಂದಲೇ ಹೊರಟರು. ದಾರಿಯುದ್ದಕ್ಕೂ ಮಹಾತ್ಮಾಜಿಯವರ ದರ್ಶನ ಪಡೆಯಲು ಹಳ್ಳಿಗಳ ಜನರು ಗುಂಪು ಗುಂಪಾಗಿ ಬಂದು ಸೇರುತ್ತಿದ್ದರು. ಆ ಎಲ್ಲರಿಗೂ ಗಾಂಧೀಜಿಯವರು “ಸತ್ಯವನ್ನು ನುಡಿಯಿರಿ, ಖಾದಿ ಬಟ್ಟೆ ಧರಿಸಿರಿ, ಸೆರೆ ಸಿಂಧೀ ಕುಡಿಯಬೇಡಿರಿ, ಉಪ್ಪಿನ ಕಾಯ್ದೆ ಮುರಿಯಲು ಸಿದ್ಧರಾಗಿರಿ” ಎಂದು ಬೋಧೀಸುತ್ತಾ ಹೊರಡುತ್ತಿದ್ದರು. ಈ ರೀತಿಯಿಂದ ಹೊರಟ ಗಾಂಧೀಜಿಯವರು ಏಪ್ರಿಲ್ ೫ನೆಯ ತಾರೀಖಿನ ದಿನ ದಾಂಡೀ ಗ್ರಾಮ ತಲುಪಿದರು. ಅಂದಿನ ಇಡೀ ರಾತ್ರಿಯನ್ನು ಪ್ರಾರ್ಥನೆಯಲ್ಲಿಯೇ ಕಳೆದು ಬೆಳಗಾಗುತ್ತಲೇ ಸಮುದ್ರ ದಂಡೆಗೆ ಹೊರಟು, ಒಂದು ಬಟ್ಟಲು ಸಮುದ್ರದ ನೀರನ್ನೂ-ಕರಾವಳಿಯ ಮೇಲಿದ್ದ ಸ್ವಲ್ಪ ಉಪ್ಪನ್ನೂ ಸಂಗ್ರಹಿಸಿ, ಕಾನೂನು ಭಂಗ ಮಾಡಿ, ಮಹಾತ್ಮಾಜಿಯವರು ಬ್ರಿಟೀಷ್ ಚಕ್ರಾಧಿಪತ್ಯವನ್ನು ಪ್ರತಿಭಟಿಸಿದರು. ಈ ಸುದ್ಧಿ ದೇಶ ವಿದೇಶಗಳಲ್ಲೆಲ್ಲ ವ್ಯಾಪಿಸಿತು. ಜಗತ್ಪ್ರಸಿದ್ಧವಾಯಿತು. ಈ ರೀತಿ ಮಹಾತ್ಮಾಜಿಯವರು ಬ್ರಿಟೀಷ್ ಸಾಮ್ರಾಜ್ಯಯಂತ್ರದ ಮೊದಲ ಕೀಲನ್ನು ಕಳಚಿದರು.

ಇತಿಹಾಸ ಪ್ರಸಿದ್ಧವಾದ ಅಂಕೋಲೆಯ ಉಪ್ಪಿನ ಸತ್ಯಾಗ್ರಹ : ಮಹಾತ್ಮಾಜಿಯವರು ದಾಂಡೀಯಾತ್ರೆಯ ಸಿದ್ಧತೆ ನಡೆಸುತ್ತಿರುವಾಗಲೇ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ೨೦-೨-೧೯೩೦ ರಂದು ಬಳ್ಳಾರಿಯಲ್ಲಿ ಸಭೆ ಸೇರಿ, ಈ ಸವಿನಯ ಕಾಯದೆಭಂಗ ಚಳವಳಿಯಲ್ಲಿ ಕರ್ನಾಟಕವು ಭಾಗವಹಿಸುವುದು ಎಷ್ಟರಮಟ್ಟಿಗೆ ಸಾಧ್ಯ? ಎಂಬ ಬಗ್ಗೆ ಆಲೋಚಿಸಿತು. ಆಗ ಶ್ರೀ ರಂಗರಾವ ದಿವಾಕರರು ಪ್ರಾಂತಸದ ಅಧ್ಯಕ್ಷರಿದ್ದರು. ಕರ್ನಾಟಕದಲ್ಲಿ ಸವಿನಯ ಕಾಯದೆಭಂಗ ಆಂದೋಲನವನ್ನು ಸಂಘಟಿಸಲು ಅವಶ್ಯವಿದ್ದ ಕ್ರಮಗಳನ್ನು ಕೈಕೊಳ್ಳಲು ದಿವಾಕರ ರಂಗರಾಯರು ಕಾರ್ನಾಡ ಸದಾಶಿವರಾಯರು, ಡಾಕ್ಟರ ಹರ್ಡಿಕರರು ಇವರನ್ನೊಳಗೊಂಡ ಸತ್ಯಾಗ್ರಹ ಮಂಡಳವನ್ನು ರಚಿಸಲಾಯಿತು, ಇದಕ್ಕನುಸರಿಸಿ ಕರ್ನಟಕದ ಕರಾವಳಿಯಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಲು ಅನುಕೂಲವಾದ ಸ್ಥಳವನ್ನು ಗೊತ್ತು ಪಡಿಸುವುದಕ್ಕಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೌಜಲಗಿ ಹನಮಂತರಾಯರು, ಅಲ್ಲಿಯ ಪ್ರಮುಖ ಕಾರ್ಯಕರ್ತರಾದ ತಿಮ್ಮಪ್ಪ ನಾಯಕ ಮಾಸ್ತರ ಹಾಗೂ ಗುಲವಾಡಿ ಶಂಕರರಾವ ಮೊದಲಾದವರೊಡನೆ ಪ್ರವಾಸ ಕೈಕೊಂಡರು. ಸತ್ಯಾಗ್ರಹ ಮಂಡಳದ ಇನ್ನಿತರ ಸದಸ್ಯರು ಮಂಗಳೂರು, ವಿಜಾಪುರ ಮುಂತಾದ ಕಡೆಗಳಲ್ಲಿ ಸಂಚಾರ ಮುಗಿಸಿಕೊಂಡು ಧಾರವಾಡದಲ್ಲಿ ೧೬-೩-೧೯೩೦ ರಂದು ಸೇರಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕೌನ್ಸಿಲಿಗೆ ತಮ್ಮ ಅನುಭವಗಳನ್ನು ವರದಿಯ ರೂಪದಲ್ಲಿ ನಿವೇದಿಸಿದರು. ಆ ವರದಿಯಲ್ಲಿ ಈ ರೀತಿ ಹೇಳಿದೆ-

“ಸಾಮೂಹಿಕ ಸವಿನಯ ಕಾಯದೆ ಭಂಗವನ್ನು ಪ್ರಚಂಡ ಪ್ರಮಾಣದಲ್ಲಿ ಕೈಕೊಳ್ಳಲು ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯಷ್ಟು ಸರ್ವವಿಧದಿಂದಲೂ ಅನುಕೂಲವಾದ ಕ್ಷೇತ್ರ ಬೇರೊಂದಿಲ್ಲ. ಸಮುದ್ರದಡದಲ್ಲಿ ಉಪ್ಪಿನ ಕಾಯದೆ ಭಂಗ ಪ್ರಾರಂಭಿಸಲು ಬರುವಂತಿದೆ. ಅಲ್ಲಿಯ ಜನರು ಮೂಲತಃ ಶಾಂತಸ್ವಭಾವದವರು, ತಿಳಿಸಿದ್ದನ್ನು ಅಥವಾ ಕಂಡದ್ದನ್ನು ಕೂಡಲೇ ತಿಳಿದುಕೊಳ್ಳುವ ಒಳ್ಳೆ ಗ್ರಹಣಶಕ್ತಿಯುಳ್ಳವರು. ಮೇಲಾಗಿ ಮಹಾತ್ಮಾಗಾಂಧಿಯವರಲ್ಲಿ ಅಚಲವಾದ ಶ್ರದ್ಧಾಭಕ್ತಿಯನ್ನಿಟ್ಟುಕೊಂಡವರು. ಆದುದರಿಂದ ಉಪ್ಪಿನ ಸತ್ಯಾಗ್ರಹವನ್ನು ಅಲ್ಲಿಯೇ ಪ್ರಾರಂಭಿಸುವುದು ವಿಹಿತವಾದೀತು.”

ಸತ್ಯಾಗ್ರಹ ಮಂಡಳದ ಈ ಮೇಲಿನ ವರದಿಯನ್ನು ಲಕ್ಷಿಸಿ, ಉಪ್ಪಿನ ಕಾಯದೆ ಭಂಗವನ್ನು ಅಂಕೋಲೆಯಲ್ಲಿ ಪ್ರಾರಂಭಿಸುವುದು ಗೊತ್ತಾಯಿತು.

ಜಲಿಯನ್‌ ವಾಲಾಬಾಗದ ಹತ್ಯಾಕಾಂಡ ದಿನವಾದ ಏಪ್ರಿಲ ೧೩ನೆಯ ತಾರೀಕಿನಂದು ಅಂಕೋಲೆಯಲ್ಲಿ ಉಪ್ಪಿನ ಕಾಯ್ದೆ ಮುರಿಯುವದೆಂದು ಮೊದಲೇ ತೀರ್ಮಾನವಾಗಿತ್ತು. ಈ ಸತ್ಯಾಗ್ರಹವು ಇಡೀ ಕರ್ನಾಟಕದ ಪರವಾಗಿ ನಡೆಯುವ ಸತ್ಯಾಗ್ರಹವಾದುದರಿಂದ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಉಡುಪಿ, ದಾವಣಗೆರೆ ಮುಂತಾದ ಕರ್ನಾಟಕದ ಎಲ್ಲ ಭಾಗಗಳಿಂದ ಸ್ವಯಂ ಸೇವಕ ಪಥಕಗಳು, ನಾಯಕರು, ಸತ್ಯಾಗ್ರಹಿಗಳು ಪಾದಾಚಾರಿಗಳಾಗಿ ಜಯಘೋಷ ದೊಂದಿಗೆ ಏಪ್ತಿಲ್ ೧೩ನೆಯ ದಿನಾಂಕದಲ್ಲಿ ಅಂಕೋಲೆಗೆ ಮುಟ್ಟುವಂತೆ ಹೊರಡತಕ್ಕದ್ದೆಂದು ಜಾಹೀರುಪಡಿಸಲಾಗಿತ್ತು.

ಉಪ್ಪಿನ  ಕಾಯದೆ ಭಂಗಕ್ಕೆ ಸೇವಾದಳದ ಸಂಸ್ಥಾಪಕರಾದ ಡಾಕ್ಟರ ಎನ್.ಎಸ್. ಹರ್ಡೀಕರರ ನೇತೃತ್ವದಲ್ಲಿ ಮೆರವಣಿಗೆ ಹೊರಡತಕ್ಕದ್ದೆಂತಲೂ ೯ ಜನ ಸತ್ಯಾಗ್ರಹಿಗಳ ತಂಡವು ಕರಕೊಡದ ಉಪ್ಪು ತಂದು ಕಾಯದೆ ಮುರಿಯತಕ್ಕದ್ದೆಂದೂ, ಗೊತ್ತುಪಡಿಸಲಾಗಿತ್ತು. ಕರ್ನಾಟಕದಲ್ಲಿ ಮೊಟ್ಟ ಮೊದಲನೆಯದಾಗಿ ಬ್ರಿಟೀಷ್‌‌‌ ಚಕ್ರಾಧಿಪತ್ಯದ ಕಾಯದೆ ಮುರಿಯುವ ಈ ಅಪೂರ್ವ ಸತ್ಯಾಗ್ರಹಕ್ಕೆ ಕರ್ನಾಟಕದ ನಾನಾ ಭಾಗಗಳಿಂದ ನಾಯಕರೂ ಸತ್ಯಾಗ್ರಹಿಗಳೂ ಬಂದು ಸೇರಿದರು.

ಈ ರೀತಿಯಾಗಿ ಬ್ರಿಟೀಷ್‌‌‌ ಸರ್ಕಾರದ ಕಾಯ್ದೆ ಮುರಿಯಲು ಅಹಿಂಸೆಯೇ ಸಾಧನವಾಗಿ, ಆತ್ಮಬಲವೇ ಬಲವಾಗಿ ಉಳ್ಳ, ಗಾಂಧೀ ಸೈನಿಕರು ಸಿದ್ಧರಾದುದನ್ನು ತಿಳಿದ ಬ್ರಿಟೀಷ್‌‌‌ ಸರ್ಕಾರದ ಕಂದಾಯ ಹಾಗೂ ಪೊಲೀಸು ಮತ್ತು ಕಷ್ಟಮ್ ಇಲಾಖೆಗಳ ಹಿರಿಯ ಅಧಿಕಾರಿಗಳು ಕಾಯ್ದೆಭಂಗವನ್ನು ವಿಫಲಗೊಳಿಸಲು ತಮ್ಮ ಅಸಂಖ್ಯಾತ ಶಸ್ತ್ರದಳಗಳನ್ನು ಕೂಡಿಕೊಂಡು ಆ ಮೊದಲೇ ಅಂಕೋಲೆಗೆ ಬಂದು ತಂಬು ಹಾಕಿ, ತಳವೂರಿ ಸಜ್ಜಾಗಿ ಉಳಿದಿದ್ದರು. ಕಾಯದೆಭಂಗ ದಿನವಾದ ಏಪ್ರಿಲ್ ೧೩ನೆಯ ತಾರೀಖಿನಂದು ಸೂರ್ಯೋದಯಕ್ಕೆ ಮೊದಲೇ ಅಂಕೋಲಾ ತಾಲೂಕಿನ ಹಳ್ಳಿ-ಪಟ್ಟಣಗಳಿಂದ ಗಂಡಸರು, ಹೆಂಗಸರು, ಮುದುಕರು, ಮಕ್ಕಳಾದಿಯಾಗಿ ಬಂದು ಸೇರಿದರು. ಎಲ್ಲ ದಿಕ್ಕುಗಳಿಂದಲೂ ಪ್ರಭಾತಫೇರಿ ಹೊರಟಿತು, ಜಯಘೋಷಗಳೂ ಬ್ಯಿಗುಲ್‌ ಕಹಳೆಗಳೂ ಹುರುಪು ಹೆಚ್ಚಿಸಿದವು, ರಾಷ್ಟ್ರಗೀತೆಗಳು ಹಾಡಲ್ಪಟ್ಟವು. ಈ ರಾಷ್ಟ್ರಗೀತೆಗಳು ರಾಷ್ಟ್ರೀಯ ಭಾವನೆಯನ್ನು ಕೆರಳಿಸುವಂಥವುಗಳಾಗಿದ್ದವು, ಹುರುಪು ಹುಟ್ಟಿಸುವಂಥವುಗಳಾಗಿದ್ದವು. ದಿಕ್ಕುದಿಕ್ಕುಗಳಿಂದ ಕೇಳಿ ಬರುವ ಇಂಥ ಹಾಡುಗಳೂ, ಜಯಘೋಷಗಳೂ, ಬ್ಯಿಗುಲ್‌ವಂದನೆಗಳೂ, ರಾಷ್ಟ್ರಧ್ವಜಗಳ ಹಾರಾಟಗಳೂ ಸೇರಿ ಹೊರಟ ಆ ಜನಸ್ತೋಮದ ಉತ್ಸಾಹಮಯ ವಾತಾವರಣದಲ್ಲಿ ಸತ್ಯಾಗ್ರಹದ ನಾಯಕತ್ವವನ್ನು ವಹಿಸಲು ಗೊತ್ತು ಮಾಡಲ್ಪಟ್ಟಿದ್ದ ಡಾಕ್ಟರ ಹರ್ಡೀಕರರು ಸಮಯಕ್ಕೆ ಬಂದು ತಲುಪಲು ಮಾರ್ಗ ಮಧ್ಯದಲ್ಲಿ ಅಡ್ಡಿಯುಂಟಾದ ಸುದ್ದಿ ತಿಳಿದು ಹೊನ್ನಾವರದ ಎಂ.ಪಿ. ನಾಡಕರ್ಣಿ ಅವರ ನಾಯಕತ್ವದಲ್ಲಿ ಮೆರವಣಿಗೆ ಹೊರಡತಕ್ಕದ್ದೆಂದು ತೀರ್ಮಾನವಾಯಿತು.

ಸೇವಾದಳದ ಶಿಸ್ತಿನ ವ್ಯವಸ್ಥೆಯಲ್ಲಿ ಅಂಕೋಲೆಯ ಕಾಂಗ್ರೆಸ್ ಶಿಬಿರವಾದ ಶ್ರೀಮತಿ ದತ್ತು ನಾರ್ವೇಕರ ಅವರ ಮನೆಯ ಮುಂದೆ ಸೇರಿದ ಬ್ಯಿಗುಲ್‌ವಾದನ ಹಾಗೂ ಜಯಘೋಷದೊಂದಿಗೆ ಸಜ್ಜಾಗಿ, ಧ್ವಜವಂದನೆ ಮಾಡಿ ರಾಷ್ಟ್ರಧ್ವಜಗಳನ್ನು ಹಿಡಿದು, ವೀರಗೀತೆಗಳನ್ನು ಹಾಡುತ್ತ ಮೊದಲ ಹೆಜ್ಜೆ ಇಟ್ಟು ಹೊರಡುತ್ತಿದ್ದಂತೆಯೇ, ಅಲ್ಲಿ ಬಂದು ಸೇರಿದ ಸುಮಾರು ಎರಡು ಮೈಲುದ್ದದ ಬೃಹದಾಕಾರದ ಮೆರವಣಿಗೆಯು ಸಮುದ್ರಾಭಿಮುಖವಾಗಿ ಹೊರಟಿತು.

ಆ ಮಹಾ ಮೆರವಣಿಗೆಯು ಜಯಘೋಷ ಮಾಡುತ್ತಾ ಅಮಿತೋತ್ಸಾಹದಿಂದ ಮುಂದುವರಿಯುತ್ತಿದ್ದಂತೆಯೇ ಕಷ್ಟಮ್ ಹಾಗೂ ಕಂದಾಯ ಮತ್ತು ಪೊಲೀಸು ಇಲಾಖೆಗಳ ಉನ್ನತಾಧಿಕಾರಿಗಳು ಲಾಠಿ ಧಾರಿಗಳಾದ ತಮ್ಮ ಅಸಂಖ್ಯದಳಗಳನ್ನು ಮೆರವಣಿಗೆಯ ಇಕ್ಕೆಲೆಗಳಲ್ಲಿಯೂ ಜಾಗೃತರಾಗಿ ಸಾಗುವಂತೆ ಆಜ್ಞಾಪಿಸುತ್ತಿದ್ದರು. ಯಾವ ಘಳಿಕೆಯಲ್ಲಿ ಏನು ಸಂಭವಿಸಬಹುದೋ ಎಂದು ಜನರು ಕುತೂಹಲದಿಂದ ಸಾಗುತ್ತಿದ್ದಂತೆಯೇ, ಪೊಲೀಸು ದಳದವರು ಮೈಯೆಲ್ಲ ಕಣ್ಣು-ಕಿವಿಯಾಗಿ ಮೇಲಾಧಿಕಾರಿಗಳ ಸಂದೇಶದಂತೆಯೇ, ಮುಂದೆ ಸಾಗುತ್ತಿದ್ದರು. ಮೆರವಣಿಗೆಯು ಮುಂದೆ ಮುಂದೆ ಸಾಗುತ್ತಿದ್ದಂತೆ ಎಲ್ಲಕಡೆಯಿಂದ ನುಗ್ಗಿ ಬರುತ್ತಿದ್ದ ಮೆರವಣಿಗೆಕಾರರನ್ನು ಪೊಲೀಸರು ಅಲ್ಲಲ್ಲಿ ತಡೆದು ಅಡ್ಡಿ ಪಡಿಸುತ್ತಿದ್ದರು. ಕೆಲವರನ್ನು ಬಂಧಿಸಿ ಕಚೇರಿಗೆ ಒಯ್ಯುತ್ತಿದ್ದರು. ಎಷ್ಟಾದರೂ ಜನರು ತಾಳ್ಮೆಗೆಡದಂತೆ ಸೇವಾದಳದ ಸೈನಿಕರೂ, ನಾಯಕರೂ, ಮೆರವಣಿಗೆಕಾರರನ್ನು ಉದ್ದೇಶಿಸಿ “ಶಾಂತಿ ! ಶಾಂತಿ !” ಎಂದು ಎಚ್ಚರಿಸುತ್ತಾ ಶಿಸ್ತಿನಿಂದ ಮಂದೆ ಸಾಗುತ್ತಿದ್ದರು. ಅಷ್ಟೊತ್ತಿಗೆ ಡಾಕ್ಟರ ಹರ್ಡಿಕರರೂ ತಮ್ಮ ಸ್ವಯಂ ಸೇವಕ ಪಡೆಯೊಂದಿಗೆ ಬಂದು ಮೆರವಣಿಗೆಯಲ್ಲಿ ಸೇರಿಕೊಂಡರು.

ಆ ಮಹಾ ಮೆರವಣಿಗೆಯ ಮುಂಚೂಣಿಯಲ್ಲಿ ಅಂಕೋಲಾ ತಾಲೂಕಿನ ಹಳ್ಳಿಗಳ ಮುಖಂಡರಾದ ಬಾಸಗೋಡ ರಾಮ ನಾಯಕರ ನೇತೃತ್ವದಲ್ಲಿ ನಾಡವರ ಸಮಾಜದ ವೀರ ಸತ್ಯಾಗ್ರಹಿಗಳು ಎದೆಯುಬ್ಬಿಸಿ, ತೋಳೆತ್ತಿ-

“ಯಾರು ಒಲಿದರೇನು | ನಮಗಿನ್ನಾರು ಮುನಿದರೇನು |
ಭಾರತಮಾತೆಯ | ಚರಣ ಕಮಲದಲಿ |
ಪ್ರಾಣವೀವ ಸ | ತ್ಯಾಗ್ರಹಿಗಳಿಗೆ || ಯಾರು ಒಲಿದರೇನು ||”
“ಹೋಶಿಯಾರ್ | ಹೋಶಿಯಾರ್ |
ನೌಜವಾನೋ | ಹೋಶಿಯಾರ್ ||
ಇಂಕಿಲಾಬಿ ನಾರೇಮಾರ್ |
ಜಯಜಯ ಕರನಾ ಹೋಶಿಯಾರ್ |
ಸತ್ಯಾಗ್ರಹಕಿ ಜಯಜಯ ಕರನಾ |
ಸೇವಾದಳಕಿ ಜಯಜಯ ಕರನಾ |
ಗಾಂಧೀಜೀಕಿ ಜಯಜಯ ಕರನಾ |”

ಮುಂತಾದ ವೀರಗೀತೆಗಳನ್ನು ಹಾಡುತ್ತಾ ಜಯಘೋಷಗಳನ್ನು ಮಾಡುತ್ತಾ ಮುನ್ನುಗ್ಗಿ ನಡೆದಿದ್ದರು. ಆ ಸನ್ನಿವೇಶವನ್ನು ನಿಂತು ನೋಡಿದ ನಮ್ಮೂರ ಕವಿ, ದಿನಕರ ದೇಸಾಯಿ ಅವರ ವೀರಹೃದಯದಿಂದ ಹಾಡೊಂದು ಹೊರಬಂತು- ಅದು ಹೀಗಿದೆ:

“ನಾಡವರೇ ನಿಜ | ನಾಡಿಗರು |
ನೋಡು ಕಾಳಗವ ಹೂಡಿಹರು |
ಸ್ವಾತಂತ್ರ್ಯದ ಸವಿ | ಯೂಟವನುಂಡು |
ವಿಜಯನಗರದಲಿ | ಕಾದಿದ ದಂಡು |
ನಾಡವರಿಂದಿನ | ದಾಸ್ಯವಕಂಡು |
ಉಪ್ಪುಮಾಡುವರು | ಮುಂದಕೆ ಬಂದು || ||ನಾಡವರೇ ಜಿನ ನಾಡಿಗರು || ೧ ||

ಅಂದಿನ ಹುರುಪೇ | ಇಂದಿಗೆ ಕೂಡಿ |
ನಾಡವರೆಲ್ಲರೂ | ಒಂದೆಡೆ ಸೇರಿ |
ಗಾಂಧೀಮಹಾತ್ಮನ | ಕೊಂಬನು ಕೇಳಿ |
ನೆಗೆದು ಕಾದುವರು | ಧೈರ್ಯವತಾಳಿ ನಾಡವರೇ ನಿಜ ನಾಡಿಗರು || ೨ ||

ಕಲ್ಲಿನ ದೇಹವು | ಆರಡಿ ಉದ್ದ |
ಸೋಲದು ಇವರಿದ್ದರೆ ಈ ಯುದ್ಧ |
ಕನ್ನಡ ನಾಡಿನ | ಶೂರರು ಇವರು |
ದೇಶಕ್ಕೋಸಂಗ | ಕಾದುತಲಿಹರು || ||ನಾಡವರೇ ಜಿನ ನಾಡಿಗರು || ೩ ||

ಎಂದು ಹಾಡಿ, ನಾಡವರ ಶೂರತನ ಹಾಗೂ ದೇಶಪ್ರೇಮಗಳನ್ನು ಹೊಗಳಿದರು. ಆ ರೀತಿ ಅಮಿತೋತ್ಸಾಹದಿಂದ ಸಮುದ್ರಾಭಿಮುಖವಾಗಿ ಶಿಸ್ತಿನಿಂದ ಸಾಗಿದ ಮೆರವಣಿಗೆಯನ್ನು ಬ್ರಿಟೀಷ್‌‌‌ ಅಧಿಕಾರಿಗಳು ಮೂಕಪ್ರೇಕ್ಷಕರಾಗಿ, ಅಚ್ಚರಿಯಿಂದ ನೋಡುತ್ತ, ತಮ್ಮ ದಳವನ್ನು ಜಾಗ್ರತಗೊಳಿಸುತ್ತ ಸಾಗುತ್ತಿದ್ದರು. ಮೆರವಣಿಗೆಕಾರರು ಅರಬ್ಬೀ ಸಮುದ್ರಕ್ಕೆ ಹೊಂದಿ ಇದ್ದ ಬೆಳಂಬಾರ ಗ್ರಾಮದ ಹತ್ತರ ಇರುವ ಉಪ್ಪುನೀರಿನ ಪೂಜಗೇರಿ ಹಳ್ಳದ ಉಪ್ಪುನೀರನ್ನೂ ದಡದಬೈಲಲ್ಲಿದ್ದ ಒಂದಿಷ್ಟು ಉಪ್ಪಿನ ಮಣ್ಣನ್ನೂ ಗಡಿಗೆಗಳಲ್ಲಿ ತುಂಬಿತಂದು, ಅಂಕೋಲಾ ತಾಲೂಕು ಕಚೇರಿಯ ಮುಂದೆ ಒಲೆ ಹೂಡಿ ಬೆಂಕಿ ಮಾಡಿ, ಉಪ್ಪು ತಯಾರಿಸಿ, ಕರಕೊಡದ ಆ ಉಪ್ಪನ್ನು ಲಿಲಾವು ಮಾಡಿ ಬ್ರಿಟೀಷ್‌‌‌ ಸರ್ಕಾರದ ಕಾಯದೆಯನ್ನು ಮುರಿದರು. ಆ ಕಾಲಕ್ಕೆ ಬ್ರಿಟೀಷ್ ಅಧಿಕಾರಿಗಳೂ ಪೊಲೀಸರೂ ಸಂಯಮ ಹಾಗೂ ಶಿಸ್ತಿನಿಂದಲೇ ವರ್ತಿಸಿದರು.

ಈ ರೀತಿ ಲಿಲಾವಿನ ಕಾರ್ಯ ಮುಗಿದ ನಂತರ ಗಾಂಧೀ ಮೈದಾನದಲ್ಲಿ ಸಭೆ ಸೇರಿತು. ಆ ಸಭೆಯಲ್ಲಿ ಸ್ವಾಮಿ ವಿದ್ಯಾನಂದರು ಅತ್ಯಂತ ಸ್ಫೂರ್ತಿಪ್ರದ ಭಾಷಣ ಮಾಡಿ, “ದೈವೀಶಕ್ತಿಯ ಬಲದಿಂದ ಹಿಂದೂಸ್ಥಾನದ ಕಾಲಚಕ್ರವು ತಿರುಗಿದೆ, ಅದರಂತೆ ಸರ್ಕಾರದ ಹಣೆಬರೆಹವೂ ತಿರುಗಿದೆ. ಸರ್ಕಾರವು ನಮ್ಮ ಮೇಲೆ ಹೇರಿದ ಅನ್ಯಾದಯ ಕಾಯದೆಗಳನ್ನು ಒಂದರಹಿಂದೊಂದು ಹೀಗೆ ಮುರಿಯುತ್ತ ನಾವು ಸ್ವಾತಂತ್ರ್ಯ ಪಡೆಯುವುದು ಖಂಡಿತ” ಎಂದು ಹೇಳಿದರು.

ಅಂದಿನ ಜನಸ್ತೋಮವನ್ನೂ, ಜನರ ಸ್ಫೂರ್ತಿಯನ್ನೂ ಕಂಡು ಬೆರಗಾದ ಆಂಗ್ಲ ಡಿ.ಎಸ್.ಪಿ.ಯು ತನ್ನ ಬಳಿಯಲ್ಲಿ ನಿಂತಿದ್ದ ಕಸ್ಟಂ ಇಲಾಖೆಯ ಅಸಿ. ಕಲೆಕ್ಟರರನ್ನು ಉದ್ದೇಶಿಸಿ, “ಈ ಹಳ್ಳಿಗರ ಉತ್ಸಾಹಪೂರಿತ ಶಕ್ತಿಯನ್ನು ಹತ್ತಿಕ್ಕುವುದು ಜಗತ್ತಿನ ಯಾವ ಶಕ್ತಿಗೆ ತಾನೇ ಸಾಧ್ಯ!” ಎಂದು ಉದ್ಗಾರ ತೆಗೆದನಂತೆ, ಈ ರೀತಿ ಅಂದಿನ ಸತ್ಯಾಗ್ರಹವು ಶಾಂತ ರೀತಿಯಿಂದಲೇ ನಡೆಯಿತು.

ಮರುದಿನ ಮುಂಜಾನೆಯೇ ದಳಪತಿ ಎಂ.ಪಿ. ನಾಡಕರ್ಣಿಯವರನ್ನೂ ಸ್ವಾಮಿ ವಿದ್ಯಾನಂದರನ್ನೂ ಪೊಲೀಸರು ಬಂಧಿಸಿ, ಬೇಲೇಕೇರಿ ಬಂಗ್ಲೆಯಲ್ಲಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟರ ಮುಂದೆ ಹಾಜರಪಡಿಸಿದರು. ಮ್ಯಾಜಿಸ್ಟ್ರೇಟರು ಸ್ವಾಮಿ ವಿದ್ಯಾನಂದರಿಗೆ ಒಂದು ಷರ್ವ. ನಾಡಕರ್ಣಿಯವರಿಗೆ ಆರು ತಿಂಗಳು ಶಿಕ್ಷೆ ವಿಧಿಸಿ, ಕಾರವಾರ ಜೈಲಿಗೆ ಸಾಗಿಸಿದರು. ಅದೇ ರೀತಿ ಶಾಮರಾವ ಶೇಣ್ವಿ, ಹನಮಂತರಾವ ಕೌಜನಗಿ, ಟಿ.ಎಸ್. ನಾಯಕ, ಸರದಾರ ವೆಂಕಟರಾಮಯ್ಯ, ಬಿಂದುಮಾಧವ ಬುರ್ಲಿ, ಪಾಥನಾರಾಯಣ ಪಂಡಿತ, ಮುಂತಾದ ಮುಖಂಡರನ್ನೆಲ್ಲಾ ಸರ್ಕಾರವು ಬಂಧಿಸಿ ಜೈಲಿನಲ್ಲಿಟ್ಟಿತು. ಆದರೂ ಉಪ್ಪಿನ ಕಾಯ್ದೆ ಭಂಗವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ವಂದಿಗೆ, ಶೆಟಗೇರಿ, ಹೊಸಕೇರಿ, ಸೂರ್ವೆ, ಬಾಸಗೋಡ, ಭಾವಿಕೇರಿ, ಬೇಲೇಕೇರಿ, ಹಿಚ್ಕಡ, ಕಣಗಿಲ, ಬೋಳೆ, ಆದಿಯಾಗಿ ಹಳ್ಳಿಗಳಿಂದ ನೂರಾರು ಸ್ತ್ರೀ ಪುರುಷರು, ಉಪ್ಪು ತಯಾರಿಸಿ ಮಾರಹತ್ತಿದರು.