ಮೈಸೂರು ಸಂಸ್ಥಾನದವರ ಸಹಾಯ: ಕೋಲೆಯ ರೈತರು ಈ ಹೋರಾಟದಿಂದ ಹಿಂಜರಿಯದೇ ಜರ್ಜರಿತವಾದುದನ್ನು ತಿಳಿದು ಮೈಸೂರು ಸಂಸ್ಥಾನದ ಅನೇಕ ಮಹನೀಯರು ಸಹಾಯ ಸಲ್ಲಿಸಿದ್ದುಂಟು. ಕರಬಂದಿ ಕೈಕೊಂಡ ಅನೇಕ ಕುಟುಂಬಗಳಬ ಗಂಡಸರೂ ಹೆಂಗಸರೂ ಜೈಲು ಸೇರಿ, ಕೆಲವು ಕುಟುಂಬಗಳಲ್ಲಿ ದುಡಿದು ಹಾಕುವವರೂ ಇಲ್ಲದೆ ಮಕ್ಕಳ ಪಾಲನೆ ಪೋಷಣೆಗೆ ಅವಕಾಶವಿಲ್ಲದಂಥ ಅನಾಥ ಮಕ್ಕಳ ಪಾಲನೆಗಾಗಿ ಶಿವಮೊಗ್ಗಾದಲ್ಲಿ ಶ್ರೀಮಂತ ದಾನಿಗಳಿಂದ ಸಹಾಯ ಪಡೆದು, ಬಾಲಾಶ್ರಮ ಸ್ಥಾಪಿಸಿ, ಅಂಕೋಲಾ ಮತ್ತು ಸಿದ್ಧಾಪುರದ ಅನಾಥ ಮಕ್ಕಳಿಗೆ ಸಹಾಯ ನೀಡಿದ್ದರು.

ಈ ರೀತಿ ಚಳವಳಿ ನಡೆಯುತ್ತಿರುವಾಗಲೇ ಮಹಾತ್ಮಾಜಿಯವರು ಇನ್ನು ಮುಂದೆ ಕಾಯದೆ ಭಂಗವು ನಿಲ್ಲಸಲ್ಪಡಬೇಕೆಂದು ಒಂದು ಪ್ರಕಣೆಯನ್ನು ತೆಗೆದರು. ಅದಕ್ಕನುಸರಿಸಿ ಪಾಟನಾದಲ್ಲಿ ೧೯೩೮ನೇ ಮೇ ತಿಂಗಳು ೧೮-೧೯ಕ್ಕೆ ಕೂಡಿದ ಅಖಿಲ ಭಾರತ ಕಾಂಗ್ರೆಸ್ ಕಮೀಟಿಯ ಸಭೆಯಲ್ಲಿ ಕಾಯದೆ ಭಂಗವು ನಿಲ್ಲಿಸಲ್ಪಟ್ಟು, ಕೌನ್ಸಿಲ್ ಪ್ರವೇಶಿಸಬೇಕೆಂಬ ಗೊತ್ತುವಳಿಯು ಸ್ವೀಕೃತವಾಯಿತು. ಗಾಂಧೀಜಿಯವರು ರಾಷ್ಟ್ರದ ಪುನರ್ಘಟನೆಗಾಗಿ ವಿಧಾಯಕ ಕಾರ್ಯಕ್ರಮಗಳನ್ನು ಕೈಕೊಂಡರು. ಕಾಂಗ್ರೆಸ್ಸು ಕೌನ್ಸಿಲ್ ಪ್ರವೇಶ ಮಾಡಿ ಮಂತ್ರಿಮಂಡಳಗಳು ರಚಿಸಲ್ಪಟ್ಟವು. ಕಾಂಗ್ರೆಸ್ ಕಮಿಟಿಯ ತೀರ್ಮಾನದಂತೆ ಅಂಕೋಲೆಯ ಕರಬಂದಿ ಚಳವಳಿಯೂ ನಿಲ್ಲಿಸಲ್ಪಟ್ಟಿತು. ಅಷ್ಟೇ ಅಲ್ಲ ಸತ್ಯಾಗ್ರಹಿಗಳು ತಲೆಮರೆಸಿಕೊಂಡು ಚಳವಳಿ ನಡೆಸುವುದು ಸತ್ಯಾಗ್ರಹ ತತ್ವಕ್ಕೆ ವಿರುದ್ಧವಾದುದೆಂದು ಮಹಾತ್ಮಾಜಿಯವರು ಸಾರಿದರು. ಅದರಿಂದಾಗಿ ಅಂಕೋಲಾ ತಾಲೂಕಿನ ಹಳ್ಳಿ-ಪಟ್ಟಣಗಳಲ್ಲಿ ವಾರಂಟಿದ್ದ ಸತ್ಯಾಗ್ರಹಿಗಳೆಲ್ಲರೂ ಪ್ರಕಟವಾಗಿ ಪೊಲೀಸರ ಮುಂದೆ ಹಾಜರಾಗಿ ಶಿಕ್ಷೆಹೊಂದಿ ಜೈಲುಸೇರಿದರು. ಇದು ಸಹ ಅಂಕೋಲಾ ತಾಲೂಕೀನ ತತ್ವನಿಷ್ಠೆಗೆ ಇನ್ನೊಂದು ಉದಾಹರಣೆಯಾಗಿರುತ್ತದೆ.

ಕರಬಂದೀ ಕುಟುಂಬಗಳ ಕರುಣಾಜನಕ ಪರಿಸ್ಥಿತಿ: ಅಂಕೋಲಾ ತಾಲೂಕಿನಲ್ಲಿ ಈ ಕರಬಂದೀ ಚಳವಳಿ ನಿಲ್ಲಿಸಲ್ಪಟ್ಟ ಸಂದರ್ಭದಲ್ಲಿ ಕರಬಂದೀ ಕೈಕೊಂಡ ರೈತರೆಲ್ಲರೂ ಅತ್ಯಂತ ಕಷ್ಟದ ಮಡುವಿನಲ್ಲಿ ಮುಳುಗಿದ್ದರು. ಬಾರ್ಡೋಲಿ ಮುಂತಾದ ಕಡೆಗಳಲ್ಲಿ ನಡೆದಂತೆ ಯಾವುದೇ ಸಂಧಾನದ ಮೂಲಕ ಚಳವಳಿ ನಿಲ್ಲಿಸಲ್ಪಡಲಿಲ್ಲವಾದ ಕಾರಣ ಅವರೆಲ್ಲರೂ ಸಹಿಸಲಾಗದ ಕಷ್ಟದಿಂದಲೇ ಭವಿಷ್ಯವನ್ನು ಸಾಗಿಸುವ ಪರಿಸ್ಥಿತಿ ಬಂದೊದಗಿತು.

ನೂರಾರು ಜನರು ತಮ್ಮ ಆಸ್ತಿ, ವಾಸದ ಮನೆ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗಿದ್ದರು. ಅನೇಕ ಕುಟುಂಬದ ಜನರು ಜೈಲು ಸೇರಿದ್ದರಿಂದಾಗಿ ಮಕ್ಕಳ ಪಾಲನೆ-ಪೋಷಣೆಗೂ ಆಧಾರವಿಲ್ಲದೆ ಹಲವು ಮಕ್ಕಳನ್ನು ಅನಾಥಾಶ್ರಮಕ್ಕೆ ಕಳುಹಿಸಬೇಕಾದ ಪರಿಸ್ಥಿತಿ ಬಂದೊದಗಿತು. ಎಷ್ಟೋ ಮಂದಿ ರೈತರಿಗೆ ವಾಸಕ್ಕೆ ಮನೆಯಿಲ್ಲ, ಉಣ್ಣಲು ಅನ್ನವಿಲ್ಲ, ಮುಂದೇನೆಂಬುದು ಗೊತ್ತಿಲ್ಲ ಎಂಬಂತಾಯಿತು.

ಕೆಲವೇ ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಅನುಕೂಲಸ್ಥರೆಂದು ಗಣಿಸಲ್ಪಟ್ಟು ಸ್ವತಂತ್ರ್ಯವಾಗಿ ಬಾಳಿ, ಬೆಚ್ಚಗಿನ ಮನೆಯಲ್ಲಿ ಹೊಟ್ಟೆ ತುಂಬಿ ತಿಂದುಂಡು, ಹಸಿದು ಬಂದವರಿಗೆ, ಅನ್ನನೀಡಿ, ಯಾಚಿಸಿದವರಿಗೆ ಸಹಾಯ ಮಾಡುವ ಸುಖದ ಸಂಸಾರಿಗಳಾಗಿದ್ದ ಆ ರೈತರು ಬಿದಿರು ತಟ್ಟಿಗಳ ಗುಡಿಸಲುಗಳಲ್ಲಿ ಮುಂದಿನ ಜೀವನಕ್ಕೆ ದಿಕ್ಕು ಹಾಣದೆ ಜೀವಿಸುವಂತಾಯಿತು. ಹಿಂದೆ ಅನ್ಯರನ್ನು ಆಳಾಗಿ ಇಟ್ಟು ದುಡಿಸಿಕೊಳ್ಳುತ್ತಿದ್ದ ಅವರು ಅನ್ಯರಲ್ಲಿ ಉದ್ಯೋಗವನ್ನು ಹುಡುಕಿಕೊಂಡುಹೋಗುವಂತಾಯಿತು. ಅನ್ಯರ ಆಳಾಗಿ ದುಡಿಯಲು ಮನಸೊಪ್ಪದ ಅನೇಕರು ರಾಟಿಯಿಂದ ನೂತು ಅರೆ ಹೊಟ್ಟೆ ಉಂಡು ಜೀವಿಸಿದರು. ಕೆಲವರು ಖಾದಿ ಬಟ್ಟಯನ್ನು ಹೊತ್ತು ಹಳ್ಳಿ-ಹಳ್ಳಿ ಸುತ್ತಿ ಮಾರಾಟ ಮಾಡಿ ಜೀವಿಸಹತ್ತಿದರು. ಅನೇಕರು ಕೈಮಗ್ಗಗಳಲ್ಲಿ ದುಡಿದು ಜೀವಿಸಿದರು. ಹಲವರು ಕಾಯಪಲ್ಲೆ-ಗಡ್ಡೆ-ಗೆಣಸು ಬೆಳೆದು ಪೇಟೆಗೊಯ್ದು ಮಾರಾಟಮಾಡಿ ಜೀವಿಸಿದರು.

ಮನೆಯ ಹೊಸ್ತಿಲನ್ನು ದಾಟದೆ, ಭಾಗ್ಯಲಕ್ಷ್ಮಿಯಾಗಿ ಬಾಗಿಲಲ್ಲಿ ಕೂತು ಗೌರವಾನ್ವಿತ ಜೀವನ ನಡೆಸಿದ ಆ ಮಹಿಳೆಯರು ಉದರ ನಿರ್ವಹಣೆಗಾಗಿ ಮತ್ತೊಬ್ಬರ ಮನೆಯ ಭತ್ತ ಕುಟ್ಟಿ ಕೂಲಿ ಅಕ್ಕಿ ತಂದು ಜೀವಿಸುವಂತಾಯಿತು. ಆ ಒಂದು ಅವಧಿಯ ಮಕ್ಕಳಿಗೆ ಶಿಕ್ಷಣ ಸೌಲಭ್ಯ ದೊರೆಯಲಿಲ್ಲ. ದೇಶಕ್ಕಾಗಿ ಎಲ್ಲವನ್ನೂ ಕಳಕೊಂಡ ಆ ಕುಟುಂಬಗಳ ಜನರು ಈ ರೀತಿ ಏಳು ವರ್ಷಗಳ ವರೆಗೂ ದಾರುಣ ಕಷ್ಟ ಜೀವನವನ್ನು ಬಾಳಿದರು.

ರೈತ ಕಷ್ಟ ಪರಿಹಾರಕ ಸಮಿತಿಯ ರಚನೆ: ಕರಬಂದೀ ರೈತರ ಈ ಕಷ್ಟಮಯ ಪರಿಸ್ಥಿತಿಯನ್ನು ಮನಗಂಡ ಕರ್ನಾಟಕ ಪ್ರಾಂತಿಕ ಕಾಂಗ್ರೆಸ್ ಕಮಿಟಿಯು, ಧಾರವಾಡದಲ್ಲಿ ೧೯೩೪ ಜೂನ್ ೨೪ ನೇ ತಾರೀಖಿನ  ದಿನ ಕೂಡಿ, ಕರನಿರಾಕರಣೆ ಆಂದೋಲನದಲ್ಲಿ ಭಾಗವಹಿಸಿದ ಮನೆ ಮಾರುಗಳನ್ನು ಕಳೆದುಕೊಂಡ ರೈತರ ಕಷ್ಟಗಳನ್ನು ಸೂಕ್ಷ್ಮವಾಗಿ ವಿಚಾರಿಸಿ, ಅವುಗಳ ಪರಿಹಾರ್ಥವಾಗಿ ಉಪಾಯಗಳನ್ನು ಯೋಚಿಸಲು ಒಂದು ಸಮಿತಿಯನ್ನು ನಿಯಮಿಸಿತು. ಆ ಸಮಿತಿಯಲ್ಲಿ ಈ ಕೆಳಗಿನಂತೆ ಸದಸ್ಯರಿದ್ದರು.

೧) ಗಂಗಾಧರರಾವ್ ದೇಶಪಾಂಡೆ, ಅಧ್ಯಕ್ಷರು, ೨)ಎಸ್.ಕೆ. ಹೊಸಮನಿ, ೩) ನಾರಾಯಣರಾವ್ ಜೋಶಿ, ೪) ಹಣಮಂತರಾವ್ ಕೌಜಲಗಿ, ೫) ದ.ಪ. ಕರಮರಕರ, ೬) ಹಣಮಂತರಾವ್ ಮೊಹರೆ, ಇವರುಗಳು ಸದಸ್ಯರು. ೭) ಸುಬ್ಬರಾವ್ ಹಳದಿಪುರಕರ ಮತ್ತು ರಾ.ಶ್ರೀ ಹುಕ್ಕೇರಿ ಇವರು ಕಾರ್ಯದರ್ಶಿಗಳು. ಈ ರೀತಿ ರಚಿತವಾದ ಕಮೀಟಿಯ ಸದಸ್ಯರಾದ ಕರಮರಕರ, ಹುಕ್ಕೇರಿ, ಕೌಜಲಗಿ, ಹೊಸಮನಿ, ಹಳದಿಪುರಕರ ಅವರು ಅಂಕೋಲೆಗೆ ಬಂದು ಕಷ್ಟಕ್ಕೀಡಾದ ಪ್ರದೇಶಗಳಲ್ಲಿ ೧೫ ದಿವಸಗಳವರೆಗೆ ಆಡ್ಡಾಡಿ, ಜಪ್ತಾದ ಭೂಮಿ ಹಾಗೂ ಜಂಗಮ ಆಸ್ತಿಗಳು, ಕಷ್ಟಕ್ಕೀಡಾದ ರೈತರ ಸ್ಥಿತಿ ಮುಂತಾದ ಅನೇಕ ಸಂಗತಿಗಳನ್ನು ತಿಳಿದುಕೊಂಡರು. ಹಾಳು ಬಿದ್ದ ಮನೆಗಳು, ಬೀಳುಬಿದ್ದ ಭೂಮಿಗಳನ್ನು ಪ್ರತ್ಯಕ್ಷ ನೋಡಿದರು. ಈ ಸದಸ್ಯರು ಬೆಳಗಾಂವಿಯಲ್ಲಿ ಆಗಷ್ಟ ೨ನೇ ತಾರೀಖಿನ ದಿನ ಕೂಡಿದ ರೈತರ ಕಷ್ಟ ಪರಿಹಾರ ಸಮಿತಿಯ ಸಭೆಯಲ್ಲಿ ತಮ್ಮ ವರದಿಯನ್ನು ಸಾದರ ಪಡಿಸಿದರು.

ಸುದೀರ್ಘವಾದ ಆ ವರದಿಯಲ್ಲಿಯ ಕೆಲವು ಮಾತುಗಳು ಹೀಗಿವೆ:-

“ಕಳೆದ ಮೂರು ವರ್ಷಗಳಲ್ಲಿ (೧೯೩೨-೩೩-೩೪ನೇ ಇಸವಿ) ಈ ರೈತರು ಮೆಲ್ಲಮೆಲ್ಲನೆ ದಾರಿದ್ರ್ಯದ ಪರಮಾವಧಿಗೆ ಇಳಿದರು. ಅವರಲ್ಲಿ ಸಂಗ್ರಹವೇನೂ ಇಲ್ಲದಿದ್ದರೂ ಉದ್ಯೋಗ, ಪರಿಶ್ರಮಗಳಿಂದ ತಮ್ಮ ಕೊರತೆಗಳನ್ನು ನೀಗಿಸಿಕೊಳ್ಳುತ್ತಿದ್ದರು. ಆದರೆ ಅವರ ಭೂಮಿಗಳು ೧೯೩೨ರ ಮಧ್ಯಕಾಲದಲ್ಲಿಸರ್ಕಾರಕ್ಕೆ ಜಮಾ ಮಾಡಲ್ಪಟ್ಟ ಬಳಿಕ ಅವುಗಳನ್ನು ಸಾಗು ಮಾಡಿಕೊಡಲಿಲ್ಲ. ಅವರಲ್ಲಿ ಕೆಲವರು ಇದ್ದ ಬಿದ್ದ ಒಡವೆಗಳನ್ನು ಒತ್ತೆಯಿಟ್ಟು ಕೆಲವರು ಮಾರಾಟ ಮಾಡಿ ಜೀವಿಸಿದರು. ಅದೆಷ್ಟು ದಿನ ಸಾಗೀತು? ೧೯೩೪ರಲ್ಲಿ ಈ ಹಾದಿಗಳೂ ಕಟ್ಟಾದವು. ಮುಂದೆ, ಅವರು ಬಾಳಿ ಬದುಕುವುದಕ್ಕೆ ಅಕ್ಕಿಯ ವಾತವನ್ನು (ಅಕ್ಕಿಯ ರೂಪದಲ್ಲೇ ಬಡ್ಡಿ) ಕೊಟ್ಟು ಅಕ್ಕಿ ತೆಗೆದುಕೊಳ್ಳಬೇಕಾಯಿತು. ಇವೆಲ್ಲ ಪ್ರಸಂಗಗಳಲ್ಲಿ ಅವರಿಗೆ ಒಂದಿಷ್ಟು ಸಹಾಯ ದೊರೆತರೂ ಅದು ತೃಪ್ತಿಯಾಗಲಿಲ್ಲ. “ಹೊಲ ಮನೆಗಳೆಲ್ಲವೂ ಸರ್ಕಾರಕ್ಕೆ ಜಮಾ ಆಗಿ, ಮಾರಲ್ಪಟ್ಟಿದ್ದ ರೈತರು ಈಗ ನಿರಾಶ್ರಿತರಾಗಿದ್ದಾರೆ. ‘ಧೋ ಧೋ’ ಎಂದು ಸುರಿಯುತ್ತಿರುವ ಮಳೆಯಲ್ಲಿ ತೆಂಗಿನ ಗರಿಗಳ ಹರಕು ಮುರುಕು ಗುಡಿಸಲುಗಳಲ್ಲಿ ಚಳಿಯನ್ನು ಅನುಭವಿಸುತ್ತ ಕಾಲ ಕಳೆಯಬೇಕಾಗಿದೆ. ಅಲ್ಲಿಯ ರೈತರು ಮುಂದೇನಾದೀತೆಂಬುದು ತಿಳಿಯದೆ ಅಸ್ಥಿರವಾದ ಆರ್ಥಿಕ ಪರಿಸ್ಥಿತಿಯ ಮೂಲಕ ಅಂಜಿಕೆಯಲ್ಲಿದ್ದಾರೆ.”

“ಅವರು ತಮಗೊದಗಿದ ಎಲ್ಲ ಸಂಕಟಗಳನ್ನು ಸಂತೋಷದಿಂದ ಸಹಿಸಿದರು. ಅವರಲ್ಲಿ ಕೆಲವರು ಬಟ್ಟೆಯ ಕೊರತೆಯಲ್ಲಿದ್ದಾರೆ, ಹೊಟ್ಟೆಗಂತೂ ಅಕ್ಟೋಬರ್ ಕೊನೆಯವರೆಗಾದರೂ ಎಲ್ಲರಿಗೂ ಕೊಡುವುದು ಅವಶ್ಯ. ಅಲ್ಲದೆ ಅರ್ಧಕ್ಕಿಂತ ಹೆಚ್ಚು ಜನರಿಗೆ, ಊಳಲು ದನಗಳಿಲ್ಲ. ಬಿತ್ತಲು ಬೀಜ ಇಲ್ಲ. ಇವರೆಲ್ಲರಿಗೂ ಒಕ್ಕಲುತನವು ಗೊತ್ತಿದೆ. ಈಗಲೂ ಸ್ವಂತ ಪರಿಶ್ರಮದಿಂದ ಒಕ್ಕಲುತನ ಮಾಡಲು ಸಿದ್ಧರಿದ್ದಾರೆ. ಈಗ ಅವರಿಗೆ ಬೇಕಾದ ಸಹಾಯವೆಂದರೆ, ಸುಲಭ ಕರಾರುಗಳಿಂದ ಬಿತ್ತಲೂ ಭೂಮಿ ಮತ್ತು ಒಕ್ಕಲುತನದ ಸಾಧನಗಳು. ಈ ಕಾರ್ಯದಲ್ಲಿ ಸಾರ್ವಜನಿಕರ ಸಹಾಯವು ಅವಶ್ಯವಾಗಿದೆ”.

“ಹಿಂದೊಮ್ಮೆ ಧನಿಕರೂ ಹೆಚ್ಚಳ ಪಡೆದವರೂ ಆದ, ಎಷ್ಟೋ ಜನರು ಇಂದು ಅಸ್ಥಿರವಾದ ಆರ್ಥಿಕ ಸ್ಥಿತಿಯೊಡನೆ ಹೊಟ್ಟೆಗಾಗಿ ಹೋರಾಟುವ ಹೊತ್ತು ಬಂದಿದೆ. ಹಿಂದೊಮ್ಮೆ ಸ್ವತಂತ್ರರೂ ಉದ್ಯೋಗಶೀಲರೂ ಆದ ಅನೇಕ ರೈತರು ಹೊಲಮನೆ ಕಳೆದುಕೊಂಡು ಒಲ್ಲದ ಆಲಸ್ಯದಲ್ಲಿ ಕಾಲ ಕಳೆಯಬೇಕಾಗಿದೆ. ತಂದೆ-ತಾಯಿಗಳಿಗೆ ತಮ್ಮ ಮಕ್ಕಳ ಕುಂದುಕೊರತೆಗಳನ್ನು ಹೋಗಲಾಡಿಸುವುದು ಆಗದಾಗಿದೆ.”

“ಈ ಜನರಲ್ಲಿ, ಹೊಸ ಭೂಮಿ ಗೇಣಿಗೆ ಹಿಡಿದು ಸಾಗು ಮಾಡುತ್ತಿದ್ದವರಿಗೆ ಹೊಸ ಬೆಳೆ ಬರುವವರೆಗೆ, ಅನ್ನ ವಸ್ತದ ಸಹಾಯ, ಕೆಲವರಿಗೆ ಯೋಗ್ಯವಾದ ಭೂಮಿಯನ್ನು ದೊರಕಿಸಿಕೊಡುವುದು, ಬೇರೆ ಕೆಲವರಿಗೆ ದನಗಳನ್ನೂ ಬೀಜಗಳನ್ನು ಪೂರೈಸುವುದು ಮತ್ತು ಸರ್ವಸ್ವಗಳನ್ನೂ ಕಳೆದುಕೊಂಡು ದುಡಿದು ಹಾಕುವವರೂ ಇಲ್ಲದೆ, ಬನ್ನ ಬಡುವವರಿಗೆ ಹೊಟ್ಟೆಗೆ ಹಾಕುವುದು ಅವಶ್ಯವಾಗಿದೆ. ಇಂಥ ಹೊತ್ತಿನಲ್ಲಿ ಮುಂದೆ ಬಂದು ಬಟ್ಟೆ ಇಲ್ಲದವರಿಗೆ ಬಟ್ಟೆಯನ್ನು, ನೆರಳಿಲ್ಲದವರಿಗೆ ನೆರಳನ್ನು, ಹಸಿದವರಿಗೆ ಊಟವನ್ನು, ಅಸಹಾಯಕರಿಗೆ ಸಹಾಯವನ್ನು ಒದಗಿಸುವುದು ಪ್ರತಿಯೊಬ್ಬ ಕರ್ನಾಟಕಸ್ಥನ ಪವಿತ್ರವಾದ ಕರ್ತವ್ಯವಾಗಿದೆ.”

ಕರಬಂದೀ ರೈತರ ಕಷ್ಟ ಪರಿಹಾರಕ ಕಮೀಟಿಯ ಈ ಮೇಲಿನ ಬಿನ್ನಹ ಪತ್ರವನ್ನು ಓದಿ ತಿಳಿದುಕೊಂಡೆರೆ, ಅಂಕೋಲಾ ತಾಲೂಕಿನಲ್ಲಿ ಕರನಿರಾಕರಣೆ ಚಳವಳಿ ಕೈಕೊಂಡ ರೈತರು ದೇಶಕ್ಕಾಗಿ, ದೇಶದ ಸ್ವತಂತ್ರ್ಯಕ್ಕಾಗಿ ಯಾವ ರೀತಿಯ ಕಷ್ಟವನ್ನು ಅನುಭವಿಸಿದ್ದರು ಎಂಬುದು ಮನವರಿಕೆಯಾಗುವ ಹಾಗಿದೆ.

೧೯೪೦ರ ವೈಯಕ್ತಿಕ ಸತ್ಯಾಗ್ರಹ: ಕಾಂಗ್ರೆಸ್‌ ಕೌನ್ಸಿಲ್‌ ಪ್ರವೇಶ ಮಾಡಿ ದೇಶದಲ್ಲಿ ಕಾಂಗ್ರೆಸ್ ಮಂತ್ರಿ ಮಂಡಲಗಳು ರಚಿಸಲ್ಪಟ್ಟು ಕಾರ್ಯ ನಿರ್ವಹಿಸುತ್ತಿದ್ದಂತೆಯೇ ಎರಡನೆಯ ಮಹಾ ಯುದ್ಧವು ಪ್ರಾರಂಭವಾಯಿತು. ಅಧಿಕಾರದಲ್ಲಿದ್ದ ಕಾಂಗ್ರೆಸ್‌ನ್ನು ವಿಚಾರಿಸದೆಯೇ ಭಾರತವು ಯುದ್ಧವನ್ನು ಸಾರಿದೆಯೆಂದು ವೈಸರಾಯ್‌ರು ಘೋಷಿಸಿದರು. ಭಾರತ ಸಂರಕ್ಷಕ ಕಾಯ್ದೆಗಳು ಒಂದರ ಹಿಂದೊಂದು ಹೊರಡಹತ್ತಿದವು. ಇದರಿಂದಾಗಿ ಕಾಂಗ್ರೆಸ್ ಮಂತ್ರಿಮಂಡಳಗಳು ರಾಜೀನಾಮೆ ಕೊಟ್ಟವು. ಮಹಾತ್ಮರು ಸತ್ಯಾಗ್ರಹವನ್ನು ಸಾರಿದರು. “ಯಾವುದೇ ಯುದ್ಧದಲ್ಲಿ ಜನ-ಧನ ಬಲಿಯಲ್ಲಿ ಕೊಡುವುದು ಘೋರ ಮಂತ್ರವನ್ನು ಉಚ್ಚರಿಸಿ, ಸತ್ಯಾಗ್ರಹ ಮಾಡಬೇಕೆಂದು ಸಾರಿ, ವಿನೋಬಾ ಭಾವೆಯವರನ್ನು ಮೊದಲನೆಯ ಸತ್ಯಾಗ್ರಹಿಯನ್ನಾಗಿ ಆರಿಸಿದರು.

ಈ ವೈಯಕ್ತಿಕ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವವರು ತತ್ವನಿಷ್ಠರಿದ್ದು ಅಹಿಂಸಾ ತತ್ತ್ವವನ್ನು ತಪ್ಪದೇ ಪಾಲಿಸುವಂಥವರಿರಬೇಕಾಗಿದ್ದಿತು. ಆದ್ದರಿಂದಲೇ ಇಡೀ ದೇಶದಲ್ಲಿ ವಿನೋಬಾ ಭಾವೆ, ನೆಹರೂ, ಪಟೇಲ, ಆಝಾದ ಮೊದಲಾದ ೨೪೦೦ ಜನರು ಮಾತ್ರ ವೈಯಕ್ತಿಕ ಸತ್ಯಾಗ್ರಹಕ್ಕೆ ಆಯ್ಕೆಯಾಗಿದ್ದರು. ಆ ಇಡೀ ವರ್ಷದಲ್ಲಿ ೨೩೨೨೩ ಜನರು ಮಾತ್ರ ಜೈಲಿಗೆ ಹೋದ ಲೆಕ್ಕ ಸಿಕ್ಕಿದೆ. ಈ ರೀತಿ ಆಯ್ಕೆಯಾದ ತತ್ವನಿಷ್ಠ ಆದರ್ಶ ಸತ್ಯಾಗ್ರಹದಲ್ಲಿಯೂ. ಅಂಕೋಲಾ ತಾಲೂಕಿನಿಂದ ಶ್ರೀ ಸಾತು ಬೊಮ್ಮಯ್ಯ ನಾಯಕ ಕರನಮನೆ ಹಿಚ್ಕರ, ಬೀರಣ್ಣ ಯಾನೆ ರಾಮಕೃಷ್ಣ ಬೊಮ್ಮಯ್ಯ ನಾಯಕ ಹಿಷ್ಕಡ, ವೆಂಕಟರಮಣ ಬೀರಣ್ಣ ನಾಯಕ ದೊಡ್ಮನೆ ಮೊಗಟಾ, ವೆಂಕಟರಮಣ ನಾಯಕ ಬೊಮ್ಮನ್ ಹಿರೇಗುತ್ತಿ, ಜಿ.ಎಂ. ಕಾಮತ, ಅಂಕೋಲಾ, ಶಂಕರರಾವ್ ಗುಲವಾಡಿ,ಮುಂತಾದ ಅನೇಕರು ಆಯ್ಕೆಯಾಗಿ ಯುದ್ಧ ವಿರುದ್ಧ ಘೋಷಣೆ ಮಾಡಿ ಶಿಕ್ಷೆ ಅನುಭವಿಸಿರುವರು.

ಈ ರೀತಿ ವೈಯಕ್ತಿಕ ಸತ್ಯಾಗ್ರಹವು ನಡೆಯುತ್ತಿರುವಾಗಲೇ ಇಂಗ್ಲೆಂಡಕ್ಕೆ ವಿಶ್ವ ಸಮರದ ಜ್ವಾಲೆ ಪೂರ್ತಿ ಆವರಿಸಿದ್ದರಿಂದ ಬ್ರಿಟೀಷ್ ಸರ್ಕಾರವು ವೈಯಕ್ತಿಕ ಸತ್ಯಾಗ್ರಹಿಗಳನ್ನು ಬಿಡುಗಡೆ ಮಾಡಿ ಮತ್ತೆ ಭಾರತದೊಡನೆ ಸಂಧಾನದ ಮಾತೆತ್ತಿತು. ಈ ಮಾತುಕತೆಗಳ ಕಾಲಕ್ಕೆ ಕಾಂಗ್ರೆಸ್ ಯುದ್ಧ ಮುಗಿದ ನಂತರ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಡಲು ಸರ್ಕಾರವು ಒಪ್ಪಿದರೆ, ಕಾಂಗ್ರೆಸ್ ಯುದ್ಧದಲ್ಲಿ ಬ್ರಿಟೀಷ್‌ರಿಗೆ ಎಲ್ಲ ಬಗೆಯ ಸಹಾಯ ಮಾಡುತ್ತದೆ ಎಂದು ತಿಳಿಸಿತ್ತು. ಆದರೆ, ಬ್ರಿಟೀಷರು ಅದಕ್ಕೆ ಒಪ್ಪಲಿಲ್ಲ.

೧೯೪೨ರಭಾರತ ಬಿಟ್ಟು ತೊಲಗಿಚಳವಳಿ: ಯುದ್ಧವು ಭಾರತದ ಬಾಗಿಲಿಗೆ ಬಂದು ಮುಟ್ಟಿತು. ಬ್ರಹ್ಮದೇಶ, ಸಿಂಗಾಪೂರ ಮೊದಲಾದವುಗಳು ಕೈಬಿಟ್ಟವು. ರಾಷ್ಟ್ರದ ವಾತಾವರಣವೇ ಬದಲಾಯಿತು. ಆಗ ಕ್ರಿಪ್ಸರು ಯೋಜನೆಯೊಂದನ್ನು ತಂದು ಭಾರತದ ಕಾಂಗ್ರಸ್ಸಿನ ಮುಂದಿಟ್ಟರು. ಈ ಯೋಜನೆಯು ಭಾರತವನ್ನು ಅನೇಕ ಸ್ವತಂತ್ರ ಭಾಗಗಳನ್ನಾಗಿ ಮಾಡುವಂಥಾದ್ದೂ ಯುದ್ದ ನಡೆಸುವ ಪ್ರಯತ್ನದಲ್ಲಿ ಭಾರತೀಯರಿಗೆ ಸ್ಥಾನಮಾನವಿಲ್ಲದ್ದೂ ಇದ್ದಿತಲ್ಲದೆ, ಬ್ರಿಟೀಷ್ ಪ್ರಧಾನ ಮಂತ್ರಿಯಾದ ಚರ್ಚಿಲ್‌ರು ಕ್ರಿಪ್ಸರಿಗೆ ಈ ಸಂಧಾನಕ್ಕೆ ಯಾವುದೇ ಸ್ವಾತಂತ್ರ್ಯ ಕೊಟ್ಟಿದ್ದಿಲ್ಲ. ಆದ್ದರಿಂದ ಕ್ರಿಪ್ಸರ ಈ ಕೊಡುಗೆಯನ್ನು ಕಾಂಗ್ರೆಸ್ ಸಂಪೂರ್ಣವಾಗಿ ನಿರಾಕರಿಸಿತು. ಮಹಾತಮರು “ಕ್ರಿಪ್ಸರು ದಿವಾಳಿ ಬ್ಯಾಂಕಿನ ಚೆಕ್ ಕೊಡಲು ಬಂದಿದ್ದಾರೆ” ಎಂದು ಹೇಳಿಬಿಟ್ಟರು. ಈ ಸಾರೆ ಸತತವಾಗಿ ಮೂರು ವರ್ಷಕಾಲ ಬ್ರಿಟೀಷ್ ಸರ್ಕಾರದೊಡನೆ ಸಂಧಾನದ ಮಾತುಕತೆ ನಡೆದ ಮೇಲೂ ಭಾರತೀಯರಿಗೆ ನಿರಾಶಾದಾಯಕವಾದ ಕ್ರಿಪ್ಸ ಕೊಡುಗೆಯಲ್ಲಿ ಅದು ಪರ್ಯವಸಾನವಾದುದನ್ನು ಕಂಡು ಮಹಾತ್ಮಾಜಿಯವರು ಸಂಪೂರ್ಣ ನಿರಾಶರಾದರು. ಇಂತಹ ಸಂಕಟದ ಸಮಯದಲ್ಲಿಯೂ ಬ್ರಿಟೀಷ್‌ರು ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಸಿದ್ಧರಾಗದ್ದನ್ನು ಕಂಡು ಬ್ರಿಟೀಷ್‌ ಜನರ ಮೇಲಿನ ವಿಶ್ವಾಸವು ಹಾರಿಹೋಯಿತು. ದೀರ್ಘ ವಿಚಾರ ಮಾಡಹತ್ತಿದರು. ರಾಷ್ಟ್ರವು ಭಯಂಕರವಾದ ಸಂಕಟದಲ್ಲಿ ಇದ್ದಿತು. ಭಾರತದಲ್ಲಿ ಒಕ್ಕಟ್ಟು ಉಂಟಾಗಿ ಅದು ತನ್ನ ರಕ್ಷಣೆಯನ್ನು ತಾನು ಮಾಡಿಕೊಳ್ಳಬೇಕಾದರೆ, ಬ್ರಿಟೀಷ್‌ರು ಭಾರತವನ್ನು ಭಾರತೀಯರಿಗೆ ಬಿಟ್ಟುಕೊಟ್ಟು ಯಾವ ಕುಂಟು ನೆವವನ್ನೂ ಹೇಳದೆ ಭಾರತವನ್ನು ಬಿಟ್ಟು ಹೋಗಬೇಕೆಂದೂ ಅದರಲ್ಲಿಯೇ ಭಾರತದ ಹಾಗೂ ಇಂಗ್ಲೆಂಡ್ ಹಿತರವಿರುತ್ತದೆಂದೂ ಅವರಿಗೆ ಅನಿಸಹತ್ತಿತು.

ಆದುದರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೮೮೫ ನೇ ಇಸ್ವಿಯಲ್ಲಿ ಮೊಟ್ಟಮೊದಲು ಬಾರಿ ಮುಂಬಯಿಯ ಯಾವ ಗವಾಲಿಯಾ ಕೆರೆಯ ಪ್ರಾಂಗಣದಲ್ಲಿ ಸೇರಿತ್ತೋ ಅದೇ ಸ್ಥಳದಲ್ಲಿ ಮಹಾತ್ಮಾಗಾಂಧಿ ಹಾಗೂ ಜವಾಹರಲಾಲ ನೆಹರು, ಸರದಾರ ವಲ್ಲಭಬಾಯಿ ಪಟೇಲ, ಅಬ್ದುಲ್ ಕಲಮ್ ಆಝಾದ್ ಮೊದಲಾದ ನಾಯಕರು ಆಗಸ್ಟ್ ೭ ಮತ್ತು ೮ಕ್ಕೆ ಸಭೆ ಸೇರಿದರು. ಅದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಾಗಿತ್ತು. ಇಡೀ ದೇಶದ ಪ್ರಾಂತೀಯ ಮುಖಂಡರೆಲ್ಲರೂ ಅಲ್ಲಿ ಸೇರಿದ್ದರು. ಭಾರತದ ಬ್ರಿಟೀಷ್ ಶಾಸಕರಿಗೆ ಕೊನೆಯ ಎಚ್ಚರಿಕೆ ಕೊಟ್ಟದ್ದೂ ಮತ್ತು ಭಾರತದ ಯಾವತ್ತೂ ದೇಶಭಕ್ತರಿಗೆ ತಮ್ಮ ಭಾರತಮಾತೆಯನ್ನು ಸ್ವತಂತ್ರ್ಯಗೊಳಿಸಲು ಸರ್ವಸ್ವವನ್ನು ಹೋಮ ಮಾಡುವಂತೆ, ಆಹ್ವಾನಕೊಟ್ಟದ್ದೂ ಇದೇ ಸಭೆಯಲ್ಲಿ.

೧೯೪೨ರ ಮಧ್ಯರಾತ್ರಿಯಲ್ಲಿ ಸೇರಿದ ಆ ಸಭೆಯಲ್ಲಿ ಮಹಾತ್ಮರು ಬ್ರಿಟೀಷ್‌ರನ್ನು ಉದ್ದೇಶಿಸಿ “ಭಾರತವನ್ಮು ಬಿಟ್ಟು ಬಿಡಬೇಕು” ಸಿಂಹ ಗರ್ಜನೆ ಮಾಡಿದರು. ಅದೇ ಹೊತ್ತಿನ ಭಾರತವಾಸಿಗಳಿಗೆ “ಈ ಕ್ಷಣದಿಂದ ಭಾರತದ ಪ್ರತಿಯೊಬ್ಬ ಸ್ತ್ರೀ-ಪುರುಷನು, ತಾನು ಸ್ವತಂತ್ರ್ಯ ದೇಶದವನೆಂದು ಭಾವಿಸಿಕೊಂಡು ಅದರಂತೆ ನಡೆದುಕೊಳ್ಳಬೇಕೆಂದು ಸಾರಿ, ಒಂದು ಕ್ಷಣವೂ ದಾರಿನೋಡದೆ ದೇಶವನ್ನು ಸ್ವತಂತ್ರ್ಯಗೊಳಿಸಲು, “ಮಾಡು ಇಲ್ಲವೆ ಮಡಿ” ಎಂಬ ಸಂದೇಶವನ್ನು ಕೊಟ್ಟರು.

ಆಗಸ್ಟ್ ೮ರ ಈ ಠರಾವಿನ ವಿಷಯವನ್ನು ಮಹಾತ್ಮಾಜಿಯವರು ವೈಸರಾಯ್‌ರನ್ನು ಸಂದರ್ಶಿಸಿ ತಿಳಿಸುವವರಿದ್ದರು. ಆ ಮೇಲೂ ಅವರು ಸ್ವರಾಜ್ಯವನ್ನು ಕೊಡಲು ಒಪ್ಪದಿದ್ದರೆ ಚಳವಳಿಗೆ ಆದೇಶ ಕೊಟ್ಟು ಮಾರ್ಗದರ್ಶನ ನೀಡಬೇಕೆಂದು ಗಾಂಧೀಜಿ ಬಯಸಿದ್ದರು. ಆದರೆ, ಆಗಸ್ಟ್ ೯ ರ ಬೆಳಿಗ್ಗೆ ಭಾರತದ ಜನತೆ ನೋಡುತ್ತಾರೆ. ಅವರ ಯಾವತ್ತೂ ನಾಯಕರು ಮಾಯವಾಗಿ ಹೋಗಿದ್ದಾರೆ. ಸರ್ಕಾರವು ಅವರೆಲ್ಲರನ್ನು ಬೇರೆ ಬೇರೆ ಮಾಡಿ ಅಜ್ಞಾತ ಸ್ಥಳಕ್ಕೆ ಒಯ್ದು ಮುಟ್ಟಿಸಿತ್ತು. ಇದನ್ನು ತಿಳಿದು ದೇಶದ ನರ-ನಾರಿಯರ ಮತ್ತು ಯುವಕರ ಅಂತರಾತ್ಮವು ಮಿಂಚಿನ ವೇಗದಲ್ಲಿ ಜಾಗ್ರತವಾಯಿತು. ಇಡೀ ದೇಶವು ಬ್ರಿಟೀಷ್ ಸತ್ತೆಯನ್ನು ಎದುರಿಸಲು ಟೊಂಕ ಕಟ್ಟಿತು. ಗಾಂಧೀಜಿಯವರ “ಮಾಡು ಇಲ್ಲವೆ ಮಡಿ” ಆದೇಶದಿಂದಲೇ ಪ್ರೇರಿತರಾಗಿ ಬಾಬು ಸುಭಾಸಚಂದ್ರ ಭೋಸರು ಭಾರತದ ಹೊರಗೆ ಹೋಗಿ ಭಾರತೀಯ ಸೇನೆಯನ್ನು ಸಂಘಟಿಸಿ, ಪ್ರಾಣಭಯವನ್ನು ತೊರೆದು ಬ್ರಿಟೀಷರ ವಿರುದ್ಧ ಹೋರಾಟಕ್ಕೆ ಇಳಿದಳು. ಗಾಂಧೀಜಿಯ ಇದೇ ಮಂತ್ರವೇ ಹಜಾರೀಬಾಗ ಜೈಲಿನಲ್ಲಿ ಬಂದಿಯಾಗಿದ್ದ ಜಯಪ್ರಕಾಶ ನಾರಾಯಣರನ್ನು ಹುರಿದುಂಬಿಸಿ, ತಮ್ಮ ಪ್ರಾಣವನ್ನು ಗಂಡಾಂತರಕ್ಕೆ ಒಡ್ಡಿ ಹೊರಗೆ ನಡೆಯುತ್ತಿರುವ ಸಂಗ್ರಾಮದ ನಾಯಕತ್ವವನ್ನು ವಹಿಸುವದಕ್ಕಾಗಿ ಜೈಲು ಗೋಡೆಯನ್ನು ಹಾರಿಬರುವಂತೆ ಪ್ರೇರೇಪಿಸಿತು.

ಆದರೆ, ಗಾಂಧೀಜಿಯವರ ಆಕಸ್ಮಿಕ ಬಂಧನದಿಂದಾಗಿ, ಮುಂದಿನ ಕಾರ್ಯಕ್ರಮ ತಿಳಿಸಲು ಅವರಿಗೆ ಅವಕಾಶವೇ ದೊರೆಯಲಿಲ್ಲ. ಇದರಿಂದ ದೇಶಕ್ಕೆ ಅಪಾಯವಾಗುವ ಪರಿಸ್ಥಿತಿ ಬಂದಿತು. ಇಂಥ ಪರಿಸ್ಥಿತಿಯಲ್ಲಿ ತಲೆಮರೆಸಿಕೊಂಡು ಚಳವಳಿ ನಡೆಸಲು, ಕರ್ನಾಟಕದ ಅಂದಿನ ಮುಖಂಡರಾದ ರಂಗರಾವ ದಿವಾಕರರು ಅಂಕೋಲಾ ತಾಲೂಕಿನ ಪ್ರಮುಖ ಕಾರ್ಯಕರ್ತರಿಗೆಲ್ಲ ಗುಪ್ತ ಸುತ್ತೋಲೆಯನ್ನು ಪ್ರದೇಶ ಕಾಂಗ್ರೆಸ್ ಕಮೀಟಿಯ ಪರವಾಗಿ ಕಳಿಸಿದರು. ಆ ಸುತ್ತೋಲೆಯಲ್ಲಿ ಅಸಹಕಾರವೇ ಮೊದಲುಗೊಂಡು ಬ್ರಿಟೀಷ್ ರಾಜ್ಯಯಂತ್ರವು ಪೂರ್ಣವಾಗಿ ಕುಪ್ಪಳಿಸಿ ನೆಲಕ್ಕೆ ಬೀಳುವಂತೆ ಮಾಡುವ ಎಲ್ಲ ಉಪಾಯಗಳನ್ನು ಕೊಳ್ಳಬೇಕೆಂದು ತಿಳಿಸಲಾಗಿತ್ತು. ಆದರೆ, ಯಾವುದೇ ಬಗೆಯ ನೋವು ಇಲ್ಲವೆ, ಹಿಂಸೆ ಇವು ನಿಷಿದ್ಧವೆಂದು ಅದರಲ್ಲಿ ಹೇಳಲಾಗಿತ್ತು. ಹಾಗೂ ಈ ಕೆಳಗಿನ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಬೇಕೆಂದು ತಿಳಿಸಲಾಗಿತ್ತು.

೧) ಯಾವುದೇ ಅಧಿಕಾರಿಯ ಅಥವಾ ವ್ಯಕ್ತಿಯ ಆಸ್ತಿಗೆ ಹಾನಿ ತಟ್ಟದಂತೆ ಮತ್ತು ಹಿಂಸೆಯಾಗದಂತೆ ನೋಡಿಕೊಳ್ಳಬೇಕು.

೨) ಬ್ರಿಟೀಷ್ ಮಾಲೀಕತ್ವದ ವಸ್ತುಗಳ ಮತ್ತು ಕಂಪನಿಗಳ ಬಹಿಷ್ಕಾರ

೩) ಸರ್ಕಾರಿ ಕಾರ್ಖಾನೆಗಳಲ್ಲಿ ಸಂಪು ನಡೆಸುವುದು.

೪) ಯುದ್ಧ ಪ್ರಯತ್ನಕ್ಕೆ ತಡೆಯೊಡ್ಡುವುದು.

೫) ಸರ್ಕಾರಕ್ಕೆ ಸಹಾಯ ಮಾಡುವವರೊಡನೆ ಅಸಹಕಾರ

೬) ಜಾಹೀರ ಕಾಯ್ದೆ ಭಂಗ ಮತ್ತು ರಾಜ್ಯಯಂತ್ರಕ್ಕೆ ಜಾಹೀರ ರೀತಿಯಲ್ಲಿ ಅಡ್ಡಿ ಮಾಡುವುದು.

೭) ರಾಜ್ಯಯಂತ್ರದ ಸಾಧನ ಸಾಮಗ್ರಿಗಳ ನಾಶ ಅಥವಾ ಅವುಗಳ ಸಂದು ಕಳಚುವುದು.

೮) ಪ್ರತಿ ಸರ್ಕಾರದ ರಚನೆ.

ಈ ಮೇಲಿನ ಕಾರ್ಯಕ್ರಮಗಳು ಮುಖ್ಯವಾಗಿದ್ದವು. ಈ ಕ್ರಾಂತಿಯು ಸಂಪೂರ್ಣ ಸ್ವಾತಂತ್ರ್ಯ ಪ್ರಾಪ್ತಿಯಲ್ಲಿಯೇ ಮುಕ್ತಾಯವಾಗಬೇಕು ಎಂದಿದ್ದಿತು.

ಈ ಸುತ್ತೋಲೆಯ ವಿಷಯವನ್ನು ತಾಲೂಕಿನ ಕಾರ್ಯಕರ್ತರು ಹಳ್ಳಿ-ಹಳ್ಳಿಗಳಲ್ಲಿ ಗುಪ್ತ ಸಭೆ ಸೇರಿಸಿ ಪ್ರಚಾರ ಮಾಡಿದರು. ಮೆರವಣಿಗೆ ನಡೆಸಿ ಜಾಹೀರು ಸಭೆ ಸೇರಿಸಿ ಪ್ರಚಾರ ಮಾಡುವ ಕಾರ್ಯಕ್ರಮ ಹಾಕಿಕೊಂಡರು. ಇಡೀ ತಾಲೂಕಿಗೆ ನಾಲ್ವತ್ತು ಜನ ಸರ್ವಾಧಿಕಾರಿಗಳನ್ನು ಆಯ್ಕೆ ಮಾಡಿದರು. ಒಬ್ಬ ಸರ್ವಾಧಿಕಾರಿ ಬಂಧಿಸಲ್ಪಟ್ಟ ನಂತರ, ಮತ್ತೊಬ್ಬ ಸರ್ವಾಧಿಕಾರಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಲಾಯಿತು.

ಅದರಲ್ಲಿಯೂ ಕರನಿರಾಕರಣೆ ಚಳವಳಿಯಿಂದ ಜರ್ಜರಿತವಾಗಿ ಇನ್ನೂ ತಲೆಯೆತ್ತಿ ಚೇತರಿಸಿಕೊಳ್ಳದೆ ಇದ್ದ ನಾಡವರ ತರುಣರು ಸ್ವತಂತ್ರ್ಯಕ್ಕಾಗಿ ಹೋರಾಡುವುದಕ್ಕೇ ಹುಟ್ಟಿ ಬಂದವರೋ ಎಂಬಂತೆ, ಉತ್ಸಾಹಭರಿತರಾಗಿ ಈ ಚಳವಳಿಯಲ್ಲಿಯೂ ಸಾಮೂಹಿಕವಾಗಿಯೇ ಧುಮುಕಿದರು. ಇದು ಯುವ ಶಕ್ತಿಯ ಚಳವಳಿಯಾಗಿ ನಡೆದು ೧೯೪೨ರ ಈ ಚಳವಳಿಯಿಂದ ಬ್ರಿಟೀಷರು ಇನ್ನು ತಾವು ಭಾರತವನ್ನು ಆಳುವುದು ಸಾಧ್ಯವಿಲ್ಲವೆಂದು ಮನಗಂಡ ಈ ಚಳವಳಿಯಲ್ಲಿ ಉತ್ಸಾಹದಿಂದ ರಣರಂಗಕ್ಕಿಳಿದ ನಾಡವರ ತರುಣರು ಇಡೀ ಅಂಕೋಲಾ ತಾಲೂಕಿನ ಎಲ್ಲ ಸಮಾಜದ ತರುಣರಲ್ಲಿ ಉತ್ಸಾಹವನ್ನು ತುಂಬಿ ಕೈಕೊಂಡ ಸತ್ಯಾಗ್ರಹದಲ್ಲಿ ಸರ್ಕಾರದ ಸುದ್ಧಿ-ಸಂಪರ್ಕದ ಸಾಧನವಾದ ತಾರು ತಂತಿಗಳನ್ನು ಕತ್ತರಿಸಿ ಹಾಕಿದರು. ಬ್ರಿಟೀಷ್ ಅಧಿಕಾರಿಗಳು ಪೊಲೀಸರ ಸಂಚಾರಕ್ಕೆ ಅಡ್ಡಿಯುಂಟಾಗುವಂತೆ ಮಾಡಲು ಹಲವಾರು ಚಿಕ್ಕ ಪುಟ್ಟ ಹಳ್ಳ-ಹೊಳೆಗಳಿಗೆ ಕಟ್ಟಿದ ಸುಂಕಗಳನ್ನು ಕಿತ್ತು ಕೆಡವಿದರು. ಬ್ರಿಟೀಷ್ ಅಧಿಕಾರಿಗಳು ಬಂದು ಉಳಿಯುವ ಬಂಗ್ಲೆಗಳನ್ನು ಸುಟ್ಟು ಭಸ್ಮ ಮಾಡಿದರು. ಟಪಾಲು ಚೀಲಗಳನ್ನು ಕಿತ್ತುಕೊಂಡರು. ಅದರಲ್ಲಿ ದೊರೆತ ಹಣವನ್ನು ಬಂಗಾಲ ಬರಗಾಲ ಪರಿಹಾರ ನಿಧಿಗೆ ಕಳುಹುತ್ತಿದ್ದರು. ಪ್ರತಿವರ್ಷ ಸರ್ಕಾರಕ್ಕೆ ಕೋಟಿಗಟ್ಟಲೆ ರೂಪಾಯಿ ಆದಾಯ ಬರುವ ಕಟ್ಟಿಗೆ ಡಿಪೋಗಳಿಗೆ ಬೆಂಕಿ ಇಟ್ಟು ಅಗ್ನಿಗಾಹುತಿ ಮಾಡಿದರು. ಶಾನುಭೋಗರ ದಫ್ತರುಗಳನ್ನು ಕಸಿದುಕೊಂಡು ಬೆಂಕಿಗಾಹುತಿ ಮಾಡಿದರು.

ಎಲ್ಲಕ್ಕೂ ಹೆಚ್ಚಿನ ಸಾಹಸದ ಕೆಲಸವೆಂದರೆ ಕುಮಟಾ ಮತ್ತು ಅಂಕೋಲಾ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಯನ್ನು ದಾಟಲು ಉಳವರೆ ಗ್ರಾಮದಲ್ಲಿ ಜಂಗಲ್ (ಕಾರು, ಲಾರಿ, ಚಕ್ಕಡಿ ಮುಂತಾದವುಗಳನ್ನು ದಾಟಿಸಲು ಇಟ್ಟ ಜೋಡು ಡೋಣಿಯ ವಾಹನ) ಸುಡುವ ಕಾರ್ಯಕ್ರಮವಾಗಿತ್ತು. ಅಲ್ಲಿ ಸಶಸ್ತ್ರ ಪೊಲೀಸರ ಕಾವಲಿತ್ತು. ಆ ಜಂಗಲ್ ಅಧಿಕಾರಿಗಳೂ, ಪೊಲೀಸರೂ, ಮಿಲಿಟರಿಯವರೂ ಓಡಾಡುವ ಮುಖ್ಯ ಸಾಧನವಾಗಿತ್ತು.ಅದನ್ನು ನಾಶಮಾಡುವುದಕ್ಕಾಗಿ ನೂರಾರು ಸತ್ಯಾಗ್ರಹಿಗಳು ಸತತವಾಗಿ ಮೂರು ರಾತ್ರಿ ಜಪ್ಪಿಸಿಕೂತು ಪೊಲೀಸರ ಅಜಾಗ್ರತೆಯ ಸಮಯವನ್ನು ಸಾಧಿಸಿ, ಮಿಂಚಿನ ವೇಗದಿಂದ ಅವರ ಮೇಲೆ ಎರಗಿ ಅವರ ಬಂದೂಕಿಗೆ ಆಹುತಿಯಾಗುವುದನ್ನು ಸ್ವಲ್ಪದರಿಂದ ತಪ್ಪಿ ಅವರನ್ನು ಬಂಧಿಸಿ ಅವರ ಬಂದೂಕುಗಳನ್ನು ವಶಪಡಿಸಿಕೊಂಡು ನದಿಯಲ್ಲಿದ್ದ ಎರಡೂ ಜಂಗಲ್‌ಗಳನ್ನು ಸುಟ್ಟು ಭಸ್ಮ ಮಾಡಿಬಿಟ್ಟರು. ಗಡಗಡ ನಡುಗುತ್ತಿದ್ದ ಪೊಲೀಸರಿಗೆ ಏನೂ ಅಪಾಯ ಮಾಡದೇ ದೇಶಸೇವೆ ಮಾಡಿಕೊಂಡು ಬದುಕಿ ಉಳಿಯಿರಿ ಎಂದು ಉಪದೇಶ ಮಾಡಿ ಬಂದರು. ಈ ಘಟನೆಯು ಉಳವರೆಯ ಜಂಗಲ್ ಸತ್ಯಾಗ್ರಹವೆಂದೇ ಪ್ರಸಿದ್ಧಿಯಾಗಿದೆ. ಈ ಯಾವತ್ತೂ ಕಾರ್ಯಗಳನ್ನು ಮಾಡುವಾಗ ಸರ್ಕಾರವು ಅವರನ್ನು ಗುಂಡಿಕ್ಕಿ ಕೊಲ್ಲಬಹುದಿತ್ತು. ತಾವೇ ಗಂಡಾಂತರಕ್ಕೆ  ಒಳಗಾಗಬಹುದಿತ್ತು ಅಲ್ಲಿಯೇ ರಾತ್ರಿಯೆಲ್ಲವೂ ಅಡವಿ ತಿರುಗಾಟವಾದ ಕಾರಣ ಹುಲಿ, ಕರಡಿ, ಹಾವು, ಹಂದಿಗಳಿಂದ ಅಪಾಯ ಒದಗಬಹುದಾಗಿದ್ದಿತು. ಈ ರೀತಿ ತಲೆಮರೆಸಿಕೊಂಡು ಮನೆ-ಸಂಸಾರದ ಪರಿವೆ ಬಿಟ್ಟು, ಜೀವದ ಹಂಗು ತೊರೆದು ಗುಪ್ತವಾಗಿ ಕಾರ್ಯನಡೆಸುವವರ ಪಂಗಡಗಳು ಹಲವು ಇದ್ದರೆ ಜಾಹೀರ ರೀತಿಯಿಂದ ಸಭೆ, ಮೆರವಣಿಗೆ, ಪ್ರಭಾತಫೇರಿ ಭಾಷಣಗಳನ್ನು ಮಾಡಿ ಜೈಲು ಸೇರುವವರು ಹಲವರಿದ್ದರು.

ಇದೆಲ್ಲವನ್ನೂ ಕಂಡು ಬ್ರಿಟೀಷ್ ಅಧಿಕಾರಿಗಳು, ಪೊಲೀಸರು ಹುಚ್ಚೆದ್ದು ಕುಣಿದರು. ಸರ್ಕಾರವು ಸೊಲ್ಲಾಪುರ ಕಡೆಯಿಂದ ಪೊಲೀಸ ಪಾರ್ಟಿಯನ್ನು ತರಿಸಿತ್ತು. ಗೂರ್ಖಾ ಮಿಲಿಟರಿಯವರನ್ನು ತರಿಸಿತ್ತು. ಅಂಕೋಲಾ ತಾಲೂಕಿನ ಜನರು ಅಹಿಂಸಾಪಾಲಕರೆಂಬುದು ಅವರಿಗೆಲ್ಲರಿಗೂ ತಿಳಿದ ಮಾತಾಗಿತ್ತು. ಇಡೀ ತಾಲೂಕು ಒಂದಾಗಿ ನಡೆಸಿದ ಈ ವ್ಯಾಪಕ ಕಾರ್ಯಾಚರಣೆಯನ್ನು ಕಂಡ ಪೊಲೀಸರು ತಮ್ಮ ಅಪಯಶಸ್ಸಿನ ಸೇಡು ತೀರಿಸಿಕೊಳ್ಳುವ ರೋಷದಿಂದ ಹಳ್ಳಿಗಳಲ್ಲಿ ಕೈಗೆ ಸಿಕ್ಕವರನ್ನೆಲ್ಲ ಎಳೆದು ತಂದು ಲಾಕಪ್ಪಿನಲ್ಲಿ ತುಂಬಿ ಮೂರ್ಛೆ ಹೋಗುವಂತೆ ಥಳಿಸಿದ್ದಾರೆ. ಉಪವಾಸ ಹಾಕಿದ್ದಾರೆ ಗುಪ್ತಾಂಗಗಳಿಗೆ ನೋವುಂಟು ಮಾಡಿದ್ದಾರೆ. ಇಡೀ ತಾಲೂಕು ವಾರಂಟಿದ್ದವರಿಗೂ, ಗುಪ್ತ ಕಾರ್ಯಕರ್ತರಿಗೂ ಆಶ್ಯವನ್ನೂ, ಬೆಂಬಲವನ್ನೂ ಕೊಡುತ್ತಿದೆ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಆದ್ದರಿಂದ ವಾರಂಟಿದ್ದವರನ್ನು ತೋರಿಕೊಡಿ, ಗುಪ್ತ ಶಿಬಿರದ ಪತ್ತೆ ಕೊಡಿ, ಗುಪ್ತ ಕಾರ್ಯಕ್ರಮದ ಆರೋಪಿಗಳ ಹೆಸರು ಕೊಡಿ ಅವರನ್ನು ತಂದು ಕೊಡಿ ಎಂದು ಗದರಿಸಿ ಸಿಕ್ಕ ಸಿಕ್ಕವರನ್ನು ಎಳೆದು ತಂದು ಚಿತ್ರ ಹಿಂಸೆ ಕೊಟ್ಟಿದ್ದಾರೆ.

ರೈತರನ್ನು ಬಿತ್ತಿಗೆ ಕೆಲಸಕ್ಕೆ  ಸರಿಯಾಗಿ ಬಿಟ್ಟಿಲ್ಲ. ಯಾವ ಉದ್ಯೋಗಕ್ಕೂ ಅವಕಾಶ ಕೊಟ್ಟಿಲ್ಲ. ರೋಗಿಗಳಿಗೆ ಔಷಧ ತರಲು ಹೋದವರೆಂದೂ ನೋಡುತ್ತಿರಲಿಲ್ಲ. ಕಂಡ ಕಂಡವರನ್ನು ಹಿಡಿದೆಳೆದೊಯ್ದು ಪರಿಪರಿಯ ಪೀಡೆ ಕೊಡುತ್ತಿದ್ದರು. ವಾರಂಟಿದ್ದವರನ್ನು ಹಿಡಿದು ಕೊಟ್ಟವರಿಗೆ ಹಾಗೂ ಪತ್ತೆ ಕೊಟ್ಟವರಿಗೆ ಸಾವಿರ, ಸಾವಿರ ರೂಪಾಯಿ ಬಹುಮಾನ ಸಾರುತ್ತಿದ್ದರು. ರಾತ್ರಿ ಹಗಲೆನ್ನದೇ ಚಳವಳಿಗಾರರ ಮನೆ ಹೊಕ್ಕು ಅವರ ಮುದಿ ತಂದೆ-ತಾಯಿಗಳನ್ನೂ, ಹೆಂಡತಿ ಮಕ್ಕಳನ್ನೂ ಹಿಂಸಿಸುತ್ತಿದ್ದರು. ಇವರು ಗೌರವಸ್ಥರು ಇವರು ಕುಲೀನರು, ಇವರು ಸಾಧ್ವಿಯರು ಎಂಬ ಯಾವ ಮಾತೂ ಆ ಕೀಳುದರ್ಜೆಯ ಪೊಲೀಸರಿಗೆ ಗೊತ್ತಿದ್ದಿಲ್ಲ. ಅವರು ಆಡಬಾರದ ಹೇಯವಾದ ಮಾತುಗಳನ್ನು ಆಡುತ್ತಿದ್ದರು. ಕೊಡಬಾರದ ಹಿಂಸೆ ಕೊಡುತ್ತಿದ್ದರು. ಹಳ್ಳಿಗಳಿಗೆಲ್ಲಾ ಪುಂಡುಗಂದಾಯ, ಪುಲಿಟಿವ್ಹ ಟ್ಯಾಕ್ಸ್ ಹೇರಿ ಆ ಹಣವನ್ನು ದರೋಡೆ ಸ್ವರೂಪದಲ್ಲಿ ವಸೂಲ ಮಾಡುತ್ತಿದ್ದರು. ಅಷ್ಟಾದರೂ ಅಂಕೋಲೆಯ ವೀರ ಸತ್ಯಾಗ್ರಹಿಗಳು ಎಂತೆಂತಹ ಚಿತ್ರಹಿಂಸೆಗಳನ್ನಾದರೂ ತಾವೇ ಅನುಭವಿಸಿದರೇ ಹೊತರು ಯಾವ ಸಂದರ್ಭದಲ್ಲಿಯೂ ತಾವು ಎಂಥ ಬಲವನ್ನೇ ಹಂದಿ ಇದ್ದ ಸಂದರ್ಭದಲ್ಲಿಯೂ ಎಂದೂ ಪ್ರತಿ ಹಿಂಸೆಗೆ ಇಳಿಯಲಿಲ್ಲ. ದೀರ್ಘಕಾಲದವರೆಗೆ ನಡೆದ ಚಳವಳಿಯ ಯಾವ ಸಂದರ್ಭದಲ್ಲಿಯೂ ಒಮ್ಮೆಯೂ ಲೂಟಿ, ದಂಗೆ, ಯಾರದೇ ಸ್ವತ್ತಿನ ಅಪಹಾರ, ಮುಂತಾದ ಅಹಿತಕ ಘಟನೆಯಾಗಲಿ, ಹಿಂಸೆಯಾಗಲೀ ನಡೆದ ಒಂದೇ ಒಂದು ಉದಾಹರಣೆಯೂ ಇಡೀ ತಾಲೂಕಿನಲ್ಲಿ ಇರುವುದಿಲ್ಲ. ಗಾಂಧೀಜಿಯವರ ಸತ್ಯಾಗ್ರಹದಲ್ಲಿ ಹಿಂಸೆಗೆ ಆಸ್ಪದವೇ ಇದ್ದಿಲ್ಲ. ಎದುರಾಳಿಯನ್ನು ಹೆದರಿಸುವ ಬೆದರಿಸುವ ಯಾವ ಮಾತೂ ಸತ್ಯಾಗ್ರಹ ತತ್ವದಲ್ಲಿ ಇಲ್ಲ. ಎದುರಾಳಿಯು ಎಷ್ಟು ರೋಷವಂತನಾಗುತ್ತಾನೋ ಅಷ್ಟು ನಾವು ಗುಣವಂತರಾಗಬೇಕೆಂದು ಗಾಂಧೀಜಿ ಹೇಳುತ್ತಿದ್ದರು. ನಾವೇ ಕಷ್ಟವನ್ನು ಅನುಭವಿಸಿ ಅನ್ಯಾಯದ ಕಾಯ್ದೆಯನ್ನು ಮುರಿಯಬೇಕೆಂದು ಗಾಂಧೀಜಿ ಹೇಳುತ್ತಿದ್ದರು. ಅಂಕೋಲೆಯ ಜನರು ಅಂತಹ ಸತ್ಯಾಗ್ರಹವನ್ನು ನಡೆಸಿದ್ದರು. ಟಾಗೋರರು ಹೇಳಿದಂತೆ ವೀರರ ಸತ್ಯಾಗ್ರಹವನ್ನು ನಡೆಸಿದ್ದರು. ಇದು ಗಮನಿಸಬೇಕಾದ ಮಾತಾಗಿರುತ್ತದೆ.

ಅಂಕೋಲಾ ತಾಲೂಕಿನಲ್ಲಿ ನಡೆದ ಈ ಚಳವಳಿಯ ಮುಂದಾಳುತನವನ್ನು ಮುಂದೆ ವಹಿಸಿದ ಹಾಗೂ ಆ ಜನರ ಉತ್ಸಾಹದ ಸೆಳೆತಕ್ಕೆ ಸಿಕ್ಕಿ ತಾವೂ ಆ ಹೋರಾಟಕ್ಕೆ ಧುಮುಕಿದ ಆಗರ್ಭ ಶ್ರೀಮಂತ ಮನೆತನದ ವಿದ್ಯಾವಂತ ತರುಣರಾಗಿದ್ದ ಹಾಗೂ ಮುಂದೆ ಮುಂಬೈ ಪ್ರಾಂತದ ಎಂ.ಎಲ್.ಎ. ಗಳಾಗಿದ್ದ ಶ್ರೀ ದಯಾನಂದ ಪ್ರಭು ಅವರು ಅಂಕೋಲಾ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಮಾಡಿದ ತಮ್ಮ ಭಾಷಣ ಪ್ರಬಂಧದಲ್ಲಿ ಬರೆದ ಮಾತನ್ನು ಅವರ ಮಾತಿನಿಂದಲೇ ತಿಳಿದುಕೊಳ್ಳಬಹುದು.

ಶ್ರೀ ದಯಾನಂದ ಪ್ರಭುಗಳು ಹೇಳಿದ್ದು-

“ಯುದ್ಧೋತ್ಸಾಹವು ನಾಡವರ ಎದ್ದು ಕಾಣುವ ಗುಣ. ಪ್ರಾಚೀನ ಕಾಲದ ಸ್ತ್ರೀಯರಂತೆ ಅವರ ಸ್ತ್ರೀಯರೂ, ಮಕ್ಕಳೂ ಸಹ ಜನ್ಮ ಜಾತವೆನಿಸುವಂಥ ದೇಶ ಭಕ್ತಿಯ ಭಾವವನ್ನು ಪ್ರದರ್ಶಿಸಿದರು. ಪೊಲೀಸರ ಭಾರೀ ದಬ್ಬಾಳಿಕೆ ನಡೆದು ಚಳವಳಿ ಮುಖಂಡತ್ವ ವಹಿಸಿದ ನಾವೆಲ್ಲಾ ತತ್ತರಿಸುವ ಪ್ರಸಂಗ ಬಂದಾಗ ನಮ್ಮನ್ನೆಲ್ಲ ಭದ್ರತೆಯ ನೆಲೆಗೆ ಸಾಗಿಸುವಷ್ಟು ಧೀರತನವನ್ನೂ ದೇಶ ಭಕ್ತಿಯನ್ನೂ ತೋರಿದ್ದಾಎ. ನಾಡವರದೇ ಪ್ರಧಾನ ವಸತಿಯುಳ್ಳ ಹಿಚಕಡ ಗ್ರಾಮವು ರಾಜಕೀಯ ಸಂಘರ್ಷ ಹಾಗೂ ಭೂಗತ ಚಟವಟಿಕೆಗಳ ಕೇಂದ್ರವಾಗಿತ್ತು. ಈ ಚಳವಳಿಯ ಆರಂಭದಲ್ಲಿ ಅಲ್ಲಿ ಎತ್ತರದ ದೃಢಕಾಯದ ನಾಡವರ ತರುಣರ ರ್ಯಾಲಿ ನಡೆದಾಗ ನಾನು ನೋಡಿ ಸ್ತಂಭೀಭೂತನಾದೆ ಹಾಗೂ ಆ ಸಂದರ್ಭವೇ ನನಗೆ ಚಳವಳಿಯನ್ನು ರೂಪಿಸಲು ಸ್ಫೂರ್ತಿ ನೀಡಿತು. ಹಿಚಕಡ ಗ್ರಾಮವು ಈ ಚಳವಳಿಯ ಕಾಲಕ್ಕೆ ಕನಿಷ್ಠ ನಾಲ್ಕುನೂರು ಸಲವಾದರೂ ಪೊಲೀಸರ ದಾಳಿಗೆ ತುತ್ತಾಗಿರಬೇಕು. ಆದರೂ ಸ್ವಲ್ಪವೂ ಜಗ್ಗದ ಈ ಕೆಚ್ಚೆದೆಯ ಬಂಟರ ಯೋಧಗುಣ ನನ್ನಲ್ಲಿಲ್ಲದಿದ್ದರೂ ನಾನು ಹೊರಗಿನವನಾದರೂ ಅವರೊಂದಿಗೆ ಭಾವನಾತ್ಮಕವಾಗಿ ನಾಡವರವನೇ ಆದೆ”

ಶ್ರೀ ದಯಾನಂದ ಪ್ರಭು ಅವರ ಈ ಮೇಲಿನ ಮಾತುಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಡವರ ತರುಣರು ಎಷ್ಟೊಂದು ಸಾಹಸ ಮತ್ತು ತ್ಯಾಗ ಭಾವನೆಯಿಂದ ಹೋರಾಡಿದ್ದರು ಎಂಬುದನ್ನು ತೋರಿಸುತ್ತವೆ.

ಈ ರೀತಿಯಾಗಿ ಭಾರತ ಸ್ವಾತಂತ್ರ್ಯ ಚಳವಳಿಯ ಉದ್ದಕ್ಕೂ ಅಂಕೋಲಾ ತಾಲೂಕು ಮಹಾತ್ಮಾ ಗಾಂಧೀಜಿಯವರು ಮೊಟ್ಟ ಮೊದಲನೆಯದಾಗಿ ಆರಂಭಿಸಿದ ಅಸಹಕಾರ ಚಳವಳಿಯಿಂದ ಆರಂಭಿಸಿ ಕೊನೆಯ ಹೋರಾಟವಾದ “ಭಾರತ ಬಿಟ್ಟು ತೊಗಲಿ” ಚಳವಳಿಯವರೆಗೆ ಅವಿರತವಾಗಿ ನಡೆಸಿದ ರೋಮಾಂಚಕ ಹೋರಾಟದ ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡವರು ಅಂಕೋಲಾ ತಾಲೂಕು ಸ್ವಾತಂತ್ರ್ಯ ಚಳವಳಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿತ್ತು ಎಂಬುದನ್ನು ಅಲ್ಲಗಳೆಯಲಾರರು. ಅಂಕೋಲೆಯಲ್ಲಿ ನಡೆದ ಆ ಎಲ್ಲ ಹೋರಾಟಗಳಲ್ಲಿ ಭಾಗವಹಿಸಲು ಇಡೀ ಕರ್ನಾಟಕದ ಎಲ್ಲ ಭಾಗಗಳಿಂದ ಸತ್ಯಾಗ್ರಹಿಗಳ ತಂಡಗಳು ಬಂದು ಹೋರಾಟ ನಡೆಸಿದ್ದನ್ನು ಗಮನಿಸಿದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಂಕೋಲೆಯನ್ನು ಮಹಾಭಾರತ ಯುದ್ಧದ ಕುರುಕ್ಷೇತ್ರಕ್ಕೆ ಹೋಲಿಸಬಹುದಾಗಿದೆ. ಈ ರೀತಿಯಾಗಿ ಹೋರಾಡಿದ ಅಂಕೋಲೆಗೆ “ಕರ್ನಾಟಕದ ಬಾರ್ಡೋಲಿ” ಎಂಬ ಹೆಸರು ಕರಬಂದೀ ಪ್ರಸಿದ್ಧಿಯ ದೃಷ್ಟಿಯಿಂದ ಸಾರ್ಥಕ ಹೆಸರಾಗಿರುತ್ತದೆ ಮಾತ್ರವಲ್ಲ ಗಾಂಧೀಜಿಯವರು ನಡೆಸಿದ ಸ್ವಾತಂತ್ರ್ಯ ಹೋರಾಟದ ಸಮಗ್ರ ಚಳವಳಿಯಲ್ಲಿ ಅಂಕೋಲಾ ತಾಲೂಕು ಬಾರ್ಡೋಲಿಗೂ ಮೀರಿದ ಕೀರ್ತಿಗೆ ಪಾತ್ರವಾದುದಾಗಿದೆ.

ಜೈ ಭಾರತ ಮಾತೆ !
ಜೈ ಕರ್ನಾಟಕ ಮಾತೆ! 

ಆಧಾರ ಗ್ರಂಥಗಳು

೧. ‘ರಾಷ್ಟ್ರ ಸಭೆಯ ಇತಿಹಾಸ’, ಲೇಖಕರು: ದತ್ತಾತ್ರೇಯ ಭಾರದ್ವಾಜ

೨. ‘ಹರ್ಡೇಕರ ಮಂಜಪ್ಪನವರು’ (ರಾಜಕೀಯ ವಿಭಾಗ ) ಲೇಖಕರು: ಪ್ರೊ. ಹಾಲಪ್ಪನವರು

೩. ‘ಐಸ್ಸೆಂಟಷನ್’ ಅವರು ಬರೆದ ‘ಗಾಂಧಿ’, ಅನುವಾದಕರು: ಗಾಂಧೀಭಾಯಿ ಶಹಾ

೪. ‘ರಾಷ್ಟ್ರ ಪುರುಷರು’, ಲೇಖಕರು: ಸ್ವಾತಂತ್ರ್ಯಪ್ರಿಯ

೫. ‘ಕರ ನಿರಾಕರಣೆಯ ವೀರಕಥೆ’, ಲೇಖಕರು: ರಂಗರಾವ್ ದಿವಾಕರ

೬. ಸ್ವಂತ ಅನುಭವದ ಸ್ಮರಣೆ

* * *