ಮೂವರು ಕವಿಗಳು ಮಾಡಿರುವ ಸೂರ್ಯೋದಯ ವರ್ಣನೆಯ ಈ ಕೆಲವು ಪದ್ಯಭಾಗವನ್ನು ಗಮನಿಸಿ :

೧.     ಮೂಡಲ ಮನೆಯಾ ಮುತ್ತಿನ ನೀರಿನ
ಎರಕ
Sವ ಹೊಯ್ದಾ !
ನುಣ್ಣನೆರಕ
Sವ ಹೊಯ್ದಾ
ಬಾಗಿಲು ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾ ತೊಯ್ದಾ.

೨.      ಇಂದ್ರದಿಗಂತದಿ ದೂರಾದ್ದೂರಂ
ಪ್ರಾತಃಸ್ವರ್ಗದ ಸ್ವರ್ಣದ್ವಾರಂ
ನೋಡದೊ ತೆರೆಯುತಿದೆ.
ಲೋಕದ ನಯನಕ್ಕೋಕುಳಿಯೆರಚುತೆ
ಮೋಹಿಸಿ ಕರೆಯುತಿದೆ !

೩.      ದಾನವ ಹೃತ ಮೇದಿನಿಯಂ
ದಂಷ್ಟ್ರಾಗ್ರದೊಳಿರಿಸಿ
ಭೂದಾರಂ ಪಾತಾಳವ-
ನುಳಿದೆದ್ದನೊ ಎನಿಸಿ
ದೂರ ದಿಗಂತದೊಳೊಪ್ಪಿದೆ
ರವಿ ಮಂಡಿತ ಶೃಂಗಂ.

ಈ ಮೂರು ವರ್ಣನೆಗಳ ವಸ್ತು ‘ಸೂರ್ಯೋದಯ’. ಆದರೆ ಒಂದೇ ವಸ್ತುವನ್ನು ಕಂಡು ಅನುಭವಿಸಿರುವ ಕವಿ ಮನಸ್ಸಿನ ರೀತಿ ಬೇರೆ ಬೇರೆ. ಮೊದಲನೆಯದು ಬೇಂದ್ರೆಯವರದು : ಹೆಣ್ಣು ಮಗಳೊಬ್ಬಳು ಮುಂಜಾನೆ ಮನೆಯ ಬಾಗಿಲನ್ನು ತೆರೆದು ಅಂಗಳದ ತುಂಬ ಮುತ್ತಿನ ನೀರನ್ನು ಚುಮುಕಿಸುವ ಚಿತ್ರವಿದೆ. ಈ ಒಂದು ಚಿತ್ರ ಬಹು ಮಟ್ಟಿಗೆ ಎಲ್ಲರಿಗೂ ಪರಿಚಿತವಾದುದು, ಪ್ರಿಯವಾದುದು. ನೇರವಾಗಿ ದೈನಂದಿನ ದಿನಚರಿಯ ಒಂದು ಮುಗ್ಧ ಸುಂದರ ಪುಟ ಈ ವರ್ಣನೆಯಲ್ಲಿ ತೆರೆದಿದೆ. ಅದನ್ನು ಅಭಿವ್ಯಕ್ತಗೊಳಿಸಿರುವ ಭಾಷೆ-ರೀತಿ ಎಲ್ಲವೂ ಸರಳವಾಗಿದೆ. ಜಗವೆಲ್ಲಾ ತೊಯ್ದು ಹೋಯಿತೆನ್ನುವ ಉದ್ಗಾರದಲ್ಲಿ ಸಂಭ್ರಮವಿದೆ. ಒಂದು ಬೆಳಗು ತಂದ ಸೊಬಗು ಕವಿ ಬೇಂದ್ರೆಯವರಿಂದ ಹೊಮ್ಮಿದ ರೀತಿ ಇದು. ಎರಡನೆಯ ಪದ್ಯಭಾಗ ಕವಿ ಕುವೆಂಪು ಅವರದು. ಇಲ್ಲಿಯೂ ಬಾಗಿಲು ತೆರೆದದ್ದರ ಚಿತ್ರವಿದೆ : ಆದರೆ ತೆರೆದದ್ದು ‘ಪ್ರಾತಃ ಸ್ವರ್ಗದ ಸ್ವರ್ಣದ್ವಾರ,’ ಬಂಗಾರದ ಬಾಗಿಲು. ತಾವು ಕಂಡ ವೈಭವಯುಕ್ತವೂ, ವರ್ಣೋಜ್ವಲವೂ ಆದ ಉದಯದ ಅನುಭವವನ್ನು ಕವಿ ಪ್ರಾತಃ ಸ್ವರ್ಗದ ಸ್ವರ್ಣದ್ವಾರ ತೆರೆಯಿತು ಎಂಬ ಪ್ರತಿಮೆಯಲ್ಲಿ ವರ್ಣಿಸಿದ್ದಾರೆ. ಹಾಗೆಯೇ ಇಂದ್ರದಿಗಂತ ಎಂಬ ಮಾತನ್ನೂ ಗಮನಿಸಿ. ಪೂರ್ವ ದಿಕ್ಕಲ್ಲ, ಇಂದ್ರದಿಗಂತ. ಇಂದ್ರ ಎಂಬ ಮಾತು, ಸಮಸ್ತ ಭೋಗ, ವೈಭವ ಉಜ್ವಲತೆಗಳ ಒಂದು ಪರಂಪರೆಯನ್ನೇ ಸೂಚಿಸುತ್ತದೆ. ಬೆಳಗಿನ ಆ ಸೂರ್ಯೋದಯವನ್ನು ನೋಡಿ ಸೂರ‍್ಯೋದಯಕ್ಕೆ ಮುನ್ನ ಕಾಣಿಸಿಕೊಳ್ಳುವ  ವರ್ಣೋಜ್ವಲತೆಯನ್ನೂ ಅನಂತರ ಆ ಮೆರವಣಿಗೆಯ ಹಿಂದೆ ಮೈದೋರುವ ಸೂರ‍್ಯಮಂಡಲವನ್ನೂ ಕಂಡ ಕಣ್ಣಿಗೆ ಅದು ಪೂರ್ವದಿಕ್ಕು ಮಾತ್ರವಾಗದೆ ‘ಇಂದ್ರದಿಗಂತ’ ಎನ್ನಿಸುವುದು ಸಾರ್ಥಕವಾಗುತ್ತದೆ. ಅಷ್ಟೇ ಅಲ್ಲ ಪೂರ್ವದಿಕ್ಕು, ಇಂದ್ರದಿಕ್ಕು ಎಂದೇ ನಮ್ಮ ಭಾರತೀಯರಿಂದ ಹೆಸರಿಸಲ್ಪಟ್ಟಿರುವುದರ ಸ್ವಾರಸ್ಯವೂ ಅರ್ಥವಾಗುತ್ತದೆ. ಬೇಂದ್ರೆಯವರಲ್ಲಿ ತೆರೆದದ್ದು ‘ಮೂಡಲ ಮನೆ’ಯ ಬಾಗಿಲಾದರೆ, ಕುವೆಂಪು ಅವರದು ಇಂದ್ರದಿಗಂತದ ಸುವರ್ಣದ್ವಾರ. ಬೇಂದ್ರೆಯವರ ಬೆಳಗು ನಮಗೆ ಚಿರಪರಿಚಿತವಾದ, ದೈನಂದಿನ ಸರಳ ಸಾಮಾನ್ಯವಾದ ಒಂದು ಚಿತ್ರವನ್ನು, ಸರಳವಾದ ಭಾಷೆಯಲ್ಲಿ ತೆರೆದರೆ, ಕುವೆಂಪು ಅವರ ಬೆಳಗು ಒಂದು ಶ್ರೀಮಂತವಾದ ಅನುಭವದ, ಆವರಣದ, ಚಿತ್ರವನ್ನು ಸಂಸ್ಕೃತಮಯವಾದ ಶೈಲಿಯಲ್ಲಿ ತೆರೆಯುತ್ತದೆ. ಮೂರನೆಯ ಪದ್ಯಭಾಗ ಪು. ತಿ. ನ. ಅವರದು. ಅವರ ಕಣ್ಣಿಗೆ ಸೂರ್ಯೋದಯ ಪುರಾಣ ಪ್ರಪಂಚದ ಪುಟವೊಂದನ್ನು ತೆರೆದಿದೆ : ರವಿ ಮಂಡಿತವಾದ ಬೆಟ್ಟದ ಕೋಡೊಂದು ಅವರ ಕಣ್ಣಿಗೆ ಹಿಂದೆ ಹಿರಣ್ಯಾಕ್ಷನಿಂದ ರಸಾತಳಕ್ಕೆ ಅದ್ದಿಹೋದ ಭೂಮಂಡಲವನ್ನು ಮಹಾ ವಿಷ್ಣುವು ವರಾಹಾವತಾರ ಮಾಡಿ ತನ್ನ ಕೋರೆ ದಾಡೆಯ ಮೇಲೆ ಎತ್ತಿ ನಿಲ್ಲಿಸಿಕೊಂಡಂತೆ ತೋರುತ್ತದೆ.

ಈ ಮೂರೂ ಪದ್ಯಗಳ ವಸ್ತು ಒಂದೇ : ಅದು ಸೂರ್ಯೋದಯವನ್ನು ಕುರಿತದ್ದು. ಇಲ್ಲಿ ಸೂರ್ಯೋದಯ ಎನ್ನುವ ‘ವಸ್ತು’ ಈ ಮೂರು ಕವಿಗಳಿಗೂ ಸಾಧಾರಣವಾದದ್ದು. ಮೂರು ಕವಿಗಳಿಗೆ ಏಕೆ, ನೂರು ಕವಿಗಳಿಗೆ ಕೂಡ ; ಕವಿಗಳಿಗೆ ಮಾತ್ರ ಏಕೆ ಈ ಒಂದು ದೃಶ್ಯವನ್ನು ಕಂಡ ಎಲ್ಲರಿಗೂ. ಏಕೆಂದರೆ ಸೂರ್ಯೋದಯ ಯಾರೊಬ್ಬರ ಸ್ವತ್ತೂ ಅಲ್ಲ ; ಅದು ದಿನದಿನವೂ ನಡೆಯುವಂಥ ಘಟನೆ. ಇದು ಎಲ್ಲರಿಗೂ ಸೇರಿದ್ದು. ಇದು ಎಲ್ಲರಿಗೂ ಸಮಾನವಾದ ಕಾರಣ, ಕಾವ್ಯವಿಮರ್ಶೆಯ ಪರಿಭಾಷೆಯಲ್ಲಿ ಇದನ್ನು ‘ಸಾಧಾರಣ’ (universal) ಎಂದು ಕರೆಯಬಹುದು. ಈ ‘ಸಾಧಾರಣ’ವಾದ ಸಂಗತಿ ಇಲ್ಲಿ ಮೂರು ಕವಿಗಳ ಕಾವ್ಯವಸ್ತುವಾಗಿದೆ ; ಕಾವ್ಯವಾಗಿದೆ. ಈ ಮೂರು ಕವಿಗಳಿಗೂ ಸಾಧಾರಣವಾದ, ಕಾವ್ಯ ವಿಷಯವಾದ ಈ ವಸ್ತು ಕಾವ್ಯವಾಗಿ ಮೂಡಿರುವಲ್ಲಿ ಮಾತ್ರ ಅದು ಆಯಾ ಕವಿಗಳ ದೃಷ್ಟಿಗೆ, ರೀತಿಗೆ ಅನುಸಾರವಾಗಿ ಬೇರೆ ಬೇರೆಯಾಗಿದೆ. ಕಾವ್ಯವಿಮರ್ಶೆಯ ಪರಿಭಾಷೆಯಲ್ಲಿ ಹೇಳುವುದಾದರೆ ‘ವಿಶಿಷ್ಟ’ವಾಗಿದೆ. ಆದ್ದರಿಂದಲೇ ಈ ಬೆಳಗಿನಲ್ಲಿ ಒಬ್ಬರಿಗೆ ಮೂಡಲ ಮನೆಯ ಬಾಗಿಲ ತೆರೆದು ಮುತ್ತಿನ ನೀರನ್ನು ಚುಮುಕಿಸುವ ಸಡಗರ ಕಂಡರೆ, ಇನ್ನೊಬ್ಬರಿಗೆ ಪ್ರಾತಃಸ್ಸುಂದರ ಸ್ವರ್ಣದ್ವಾರ ತೆರೆದು ಲೋಕದ ನಯನಕ್ಕೆ ಓಕುಳಿಯೆರಚಿ ಮೋಹಿಸಿ ಕರೆಯುವಂತೆ ತೋರುತ್ತದೆ ; ಮತ್ತೊಬ್ಬರಿಗೆ ಪಾತಾಳದಿಂದ ಭೂಮಂಡಲವನ್ನೆತ್ತಿ ಮೇಲೆ ಬಂದ ವರಾಹಾವತಾರದ ಚಿತ್ರ ಗೋಚರಿಸುತ್ತದೆ. ಹೀಗೆ ‘ಸಾಧಾರಣ’ವಾದ ಸಂಗತಿಯನ್ನು ಕಂಡು ಕಣ್ಣು, ಅದನ್ನು ನೋಡಿ ಪರಿಭಾವಿಸಿದ ಮನಃಸ್ಥಿತಿಯ ಹಿನ್ನೆಲೆ. ಆ ಅನುಭವಕ್ಕೆ ಅವರವರು ಬಳಸಿರುವ ಭಾಷೆ, ಪ್ರತಿಮೆ ಇದೆಲ್ಲವೂ ಬೇರೆ ಬೇರೆ. ಹೀಗಾಗಿ ಈ ಕವಿಗಳಿಗೆ ‘ಸಾಧಾರಣ’ವಾದದ್ದು ಕೇವಲ ಲೋಕ ವಿಷಯ ಮಾತ್ರವಲ್ಲ, ಭಾಷೆಯೂ ಕೂಡ.  ಕವಿ ತನ್ನ ಅನುಭವವನ್ನು ಕಟ್ಟಿ ತೋರಿಸಲು ಬಳಸುವ ಭಾಷೆಯೂ ಲೋಕ ವಿಷಯದಂತೆಯೇ ಅವನ ಸ್ವಂತದ್ದೇನಲ್ಲ ; ಅವನ ಹೊರಗಿನದು. ಅವನು ಬಳಸಿರುವ ಅಕ್ಷರಗಳು, ಪದಗಳು, ನುಡಿಗಟ್ಟುಗಳು ಎಲ್ಲವೂ ದೈನಂದಿನ ವ್ಯವಹಾರದ ಜನಬಳಕೆಯ ಸಾಮಗ್ರಿಗಳು. ಇದರಿಂದಾಗಿ ಕವಿಗೆ ‘ಸಾಧಾರಣ’ವಾದದು ಲೋಕವಿಷಯ ಮಾತ್ರವಲ್ಲ, ಭಾಷೆಯೂ ಕೂಡ. ಎಲ್ಲರಿಗೂ ‘ಸಾಧಾರಣ’ವಾದ ವಿಷಯವನ್ನು ಹಾಗೂ ಭಾಷೆಯನ್ನು ಎತ್ತಿಕೊಂಡು, ‘ಸಾಧಾರಣತೆ’ಯಿಂದ ಬೇರೆಯಾದ ಅನುಭವ ಮತ್ತು ಭಾಷೆಯನ್ನು ತನ್ನ ಕೃತಿಯಲ್ಲಿ ನಿರ್ಮಿಸಿ ತೋರಿಸುವ ರೀತಿ ವಿನೂತನವಾಗಿದೆ. ಎಂದರೆ ‘ಸಾಧಾರಣ’ದ ಸಾಮಗ್ರಿಯಿಂದಲೆ ಕವಿಗಳು ಬೇರೊಂದು ಅ-ಸಾಧಾರಣವಾದ, ಅ-ಪೂರ್ವವಾದ ಸೃಷ್ಟಿಯನ್ನು ತೆರೆದಿದ್ದಾರೆ. ಈ ಒಂದು ವಿಷಯವನ್ನು ಪರಿಶೀಲಿಸಿದರೆ ಎರಡು ಅಂಶಗಳು ಸ್ಪಷ್ಟವಾಗುತ್ತವೆ : ಒಂದು ಬಹಿರಂಗ, ಮತ್ತೊಂದು ಅಂತರಂಗ. ಬಹಿರಂಗ ಎಂದರೆ ಲೋಕ ಮತ್ತು ಲೋಕವ್ಯಾಪಾರಗಳು. ಇದೇ ಕಾವ್ಯದ ಸಾಮಗ್ರಿ. ಅಂತರಂಗ ಎಂದರೆ ಕವಿಯ ಮನೋಧರ್ಮ, ಲೋಕವ್ಯಾಪಾರಗಳ ಅಂತರಾಳವನ್ನು ವಿವರಗಳನ್ನು ಗ್ರಹಿಸುವ, ಆಸ್ವಾದಿಸುವ, ಪರಿಭಾವಿಸುವ ಮತ್ತು ತನ್ನ ಪರಿಭಾವನೆಗೊಂದು ರೂಪು ಕೊಡುವ ಪ್ರತಿಭಾವಿಶೇಷ. ಕವಿಯ ಅಂತರಂಗದ ಸೃಷ್ಟಿಶೀಲವಾದ ಶಕ್ತಿ, ಬಹಿರಂಗದ ಈ ಲೋಕವ್ಯಾಪಾರದಲ್ಲಿ ತನಗೆ ರುಚಿಸಿದ್ದನ್ನು ಎತ್ತಿಕೊಂಡು, ತನ್ನ ಅನುಭವದ ಸಾಕ್ಷಾತ್ಕಾರದಲ್ಲಿ ಅದ್ದಿ, ತನಗೆ ಬಹಿರಂಗದ ಪರಿಸರದಿಂದ ಪ್ರಾಪ್ತವಾದ ಭಾಷಾಸಾಮಗ್ರಿಯಲ್ಲಿ ರೂಪಿಸಿ ಕೃತಿರೂಪದಲ್ಲಿ ನೀಡುತ್ತದೆ. ಈ ಒಂದು ಕ್ರಿಯೆಯಲ್ಲಿ ಎಲ್ಲರಿಗೂ ‘ಸಾಧಾರಣ’ವಾದ ಲೋಕಾನುಭವ, ‘ಅಸಾಧಾರಣ’ವಾಗವುದರ ಜೊತೆಗೆ ಅದೇ ‘ಸಾಧಾರಣ’ದಿಂದ ಎತ್ತಿಕೊಂಡ ಅಭಿವ್ಯಕ್ತಿಯ ಸಾಮಗ್ರಿಯಾದ ಭಾಷೆಯೂ ‘ಅಸಾಧಾರಣ’ವಾಗುತ್ತದೆ. ಕವಿಯ ‘ಅಂತರಂಗ’ ಎನ್ನುವುದು ‘ಬಹಿರಂಗ’ದ ಕಚ್ಚಾ ಪದಾರ್ಥಗಳನ್ನು ಯಥಾವತ್ತಾಗಿ ಆಮದು ಮಾಡಿಕೊಂಡು ಸಹೃದಯ ಸಮೂಹಕ್ಕೆ ರಫ್ತುಮಾಡುವ ವ್ಯಾಪಾರ ಸಂಸ್ಥೆಯಲ್ಲ ; ಬಹಿರಂಗದ ಈ ಸಾಮಗ್ರಿಗಳನ್ನು ಅಂತರಂಗದ ಸಾಮರ್ಥ್ಯದಿಂದ ಬೇರೊಂದೆಂಬಂತೆ ಪರಿರ್ವತಿಸಿ ನೀಡುವ ಜೀವಸಂಸ್ಥೆ- ಎನ್ನಬಹುದು. ಈ ಅಭಿವ್ಯಕ್ತಿಯ ಮೂಲಸಾಮಗ್ರಿಯಾದ ಭಾಷೆ ಕೇವಲ ಒಂದು ಮಾಧ್ಯಮವಲ್ಲ ; ಭಾಷೆ ತನ್ನ ವ್ಯಾವಹಾರಿಕವಾದ ನಿಯತತೆಯನ್ನು ಕಳೆದುಕೊಂಡು, ಭಾವಾಭಿವ್ಯಕ್ತಿಗೆ  ತನ್ನನ್ನು ಒಪ್ಪಿಕೊಂಡು, ತಾನೊಂದು ಪಾರದರ್ಶಕ ಮಾಧ್ಯಮವಾಗಿ ನಿಲ್ಲುತ್ತದೆ. ಎಂದರೆ ಕವಿ ಎಲ್ಲರಿಗೂ “ಸಾಧಾರಣ’ವಾದ ಭಾಷೆಯನ್ನು ಬಳಸಿಕೊಂಡರೂ, ಆತ ಅದನ್ನು ಬಳಸಿದಮೇಲೆ ಅದು ‘ಆತನ’ ಭಾಷೆಯೇ ಆಗುತ್ತದೆ. ಈ ದೃಷ್ಟಿಯಿಂದ ನೋಡಿದರೆ ಕವಿ ಬಳಸುವ ಭಾಷೆ ಜನಭಾಷೆಯಾದರೂ, ಅದು ಕವಿಭಾಷೆಯಾಗಿ ರೂಪಾಂತರವಾಗುತ್ತದೆ. ಕವಿಭಾಷೆ, ಕಾವ್ಯದ ಭಾಷೆ ; ಅವನ ಅನುಭವಕ್ಕೆ ಅನಿವಾರ್ಯವಾದ, ಉಚಿತವಾದ ಭಾಷೆ. ಹೀಗಾಗಿ ಎಲ್ಲರಿಗೂ ‘ಸಾಧಾರಣ’ವಾದ ವಿಷಯ ಹಾಗೂ ಭಾಷೆ, ಕವಿಯ ಅನುಭವದಲ್ಲಿ ‘ಆತನದೇ’ ಆಗಿ, ಪ್ರತ್ಯೇಕತೆಯನ್ನು ಪಡೆದು ಮೂಡುವ ಈ ರೀತಿಯನ್ನು ನಾವು ‘ವಿಶಿಷ್ಟ’ ಎಂದು ಕರೆಯುತ್ತೇವೆ. ಒಂದು ಮಾತಿನಲ್ಲಿ ಹೇಳುವುದಾದರೆ ‘ಸಾಧಾರಣ’ವನ್ನು ‘ವಿಶಿಷ್ಟ’ಗೊಳಿಸುವುದೇ ಕವಿಕರ್ಮದ ಪ್ರಧಾನ ಲಕ್ಷಣ ಎನ್ನಬಹುದು.

ಈ ವಿಷಯ ಲೋಕವ್ಯವಹಾರದಲ್ಲಿಯೂ ಒಂದು ಮಟ್ಟದಲ್ಲಿ ಸತ್ಯ. ಸೃಷ್ಟಿಯ ಸಮಸ್ತವ್ಯಾಪಾರವೂ ‘ಸಾಧಾರಣ’ ‘ವಿಶಿಷ್ಟ’ ಗಳ ಒಂದು ಪ್ರಯೋಗಶಾಲೆ. ಮನುಷ್ಯರಾಗಿ ನಾವೆಲ್ಲಾ ‘ಸಾಧಾರಣ’ ; ಪ್ರತ್ಯೇಕವಾದ ವ್ಯಕ್ತಿ ವೈಲಕ್ಷಣ್ಯಗಳಿಂದ ನಾವು ಒಬ್ಬೊಬ್ಬರೂ ವಿಶಿಷ್ಟ. ‘ಸಾಧಾರಣ’ ಎಂಬುದು ಬದುಕಿನ ಬೇರಿಗೆ ತಾಯ್ನೆಲವಾದರೆ, ಒಂದೊಂದು ವ್ಯಕ್ತಿ ವೃಕ್ಷವೂ ತನ್ನ ಬೀಜದ ಸ್ವಭಾವಾನುಸಾರಿಯಾಗಿ ಬೆಳೆಯುವ ರೀತಿಯೆ ವಿಶಿಷ್ಟ. ಒಬ್ಬನಿದ್ದಂತೆ ಮತ್ತೊಬ್ಬನಿಲ್ಲದಿರಲು ಇದೇ ಕಾರಣ. ಈ ಸೃಷ್ಟಿಯ ಕಾವ್ಯದಲ್ಲಿ ಪುನರುಕ್ತಿ ಎಂಬುದೇ ಇಲ್ಲ! ಅದು ಅಷ್ಟೊಂದು ವೈವಿಧ್ಯಮಯ ; ಅಷ್ಟೊಂದು ವಿಶಿಷ್ಟ ವ್ಯಕ್ತಿ ನಿರ್ಮಾಣ ಸಾಮರ್ಥ್ಯ. ಬದುಕಿನಲ್ಲಿ ವಿಶಿಷ್ಟತೆ ಎಂಬುದು ಒಂದು ಅನಿವಾರ‍್ಯವಾದ ಅಂಶವಾಗಿ ಎಲ್ಲರಲ್ಲಿಯೂ ಇದ್ದರೂ, ಎಲ್ಲರನ್ನೂ ನಿಜವಾದ ಅರ್ಥದಲ್ಲಿ ವಿಶಿಷ್ಟ ವ್ಯಕ್ತಿಗಳೆಂದೇನೂ ನಾವು ಕರೆಯುವುದಿಲ್ಲ ; ವಿಶಿಷ್ಟ ವ್ಯಕ್ತಿತ್ವ ನಿರ್ಮಾಣ ಸಾಮರ್ಥ್ಯದ ಸಿದ್ಧಿ ಕೆಲವರಿಗೆ ಮಾತ್ರ ಲಭ್ಯವಾದುದು. ಆದುದರಿಂದ ಅನಿವಾರ‍್ಯವಾದ ಹಾಗೂ ಸಹಜವಾದ ವೈವಿಧ್ಯತೆ ಮಾತ್ರದಿಂದಲೇ ವಿಶಿಷ್ಟತೆ ಪ್ರಾಪ್ತವಾಗುವುದಿಲ್ಲ ; ವ್ಯಕ್ತಿಯ ಅಂತಃಸ್ಸತ್ವದಿಂದ, ಅದರ ವಿಕಾಸ-ಪ್ರಕಾಶಗಳಿಂದ ವಿಶಿಷ್ಟತೆ ಸಾಧ್ಯವಾಗುತ್ತದೆ. ಕಾವ್ಯ ಪ್ರಪಂಚದಲ್ಲಿಯೂ ಹಾಗೆಯೇ. ಪದ್ಯ ಬರೆಯುವ ಎಲ್ಲ ಕವಿಗಳೂ, ಕವಿ ಎನ್ನಿಸಿಕೊಂಡರೂ, ಅವರು ಎಷ್ಟರಮಟ್ಟಿಗೆ ವಿಶಿಷ್ಟ ವ್ಯಕ್ತಿಗಳು ಎನ್ನುವ ಪ್ರಶ್ನೆಗೆ ಉತ್ತರ ಬೇರೆಯಾಗಿಯೆ ನಿಲ್ಲತ್ತದೆ.

ಕವಿಯ ವಿಶಿಷ್ಟತೆ ತಟಕ್ಕನೆ ಮೊದಲು ಗೋಚರಿಸುವುದು ಅವನು ತನ್ನ ಅನುಭವದ ಅಭಿವ್ಯಕ್ತಿಗೆ ಬಳಸಿರುವ ಭಾಷೆಯ ವಿಶಿಷ್ಟತೆಯಿಂದಲೇ. ಕವಿಗೆ ಅನುಭವದ ತುಯ್ತ ಮೊದಲು, ಭಾಷೆಯಲ್ಲಿ ಶರೀರೀಕರಣ ನಂತರ ಎಂದುಕೊಂಡರೂ, ನಮಗೆ ಭಾಷಾರೂಪದಲ್ಲಿ ದೃಗ್ಗೋಚರವಾಗುವ ಕೃತಿ ಮೊದಲು, ಶಬ್ದಾರ್ಥರೂಪದಿಂದ ಮನಸ್ಸಿನಲ್ಲಿ ತೆರೆಯುವ ಅನುಭವ ಅನಂತರದ್ದು. ಆದಕಾರಣ ಕೃತಿ ಎಂದ ಕೂಡಲೇ ಶಬ್ದಾರ್ಥಸಹಿತವಾದ ಅಭಿವ್ಯಕ್ತಿ ಎಂದೇ ಅರ್ಥ. ಹೀಗಾಗಿ ಕವಿಯ ಪದರಚನೆಯ ವಿಶಿಷ್ಟತೆಯೇ ಕವಿಯ ವಿಶಿಷ್ಟತೆಗೆ ಮೊದಲ ಸಾಕ್ಷಿ. ಪ್ರಾಚೀನ ಆಲಂಕಾರಿಕನಾದ ವಾಮನ ಎನ್ನುವವನು ಕವಿಯ ಅಭಿವ್ಯಕ್ತಿಯ ರೀತಿಯನ್ನು ಕುರಿತು  ‘ವಿಶಿಷ್ಟ  ಪದ ರಚನಾ ರೀತಿಃ’ ಎಂದು ಹೇಳಿದ. ವಿಶಿಷ್ಟ ಪದ ರಚನೆ ಎಂದರೆ ಕೆಲವು ಗುಣ ವಿಶಿಷ್ಟವಾದ ಪದ ರಚನೆ ಮಾತ್ರ ಅರ್ಥ, ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ವಿದ್ವಾಂಸರು ವ್ಯಾಖ್ಯಾನಿಸುತ್ತಾರೆ.  ಅಂದರೆ ಇಂದು ಬೇರೊಂದು ನಿಲುವಿನಿಂದ ನೋಡುವುದಾದರೆ ‘ವಿಶಿಷ್ಟ ಪದರಚನಾ ರೀತಿಃ’ ಎಂಬ ಆ ಸೂತ್ರ ಒಂದು ಮಂತ್ರದಂತೆ ತೋರುತ್ತದೆ. ಕವಿಯ ಅನುಭವವನ್ನು ನಾವು ಪ್ರವೇಶಿಸುವುದು ಆತನ ಪದರಚನಾರೂಪವಾದ ವಿಶಿಷ್ಟ ಅಭಿವ್ಯಕ್ತಿಯ ಮೂಲಕವೇ. ಹಿಂದೆ ಉದಾಹರಿಸಿರುವ ಸೂರ‍್ಯೋದಯವನ್ನು ಕುರಿತ ಮೂರು ಪದ್ಯಗಳನ್ನೋದುತ್ತಲೆ, ಆ ಪದ್ಯದ ಪದ ರಚನೆ ಕಿವಿಗೆ ಬೀಳುತ್ತಲೇ, ಆಯಾ ಕವಿಗಳ ಕವಿತೆಯನ್ನೋದಿ ನುರಿತ ಕಿವಿ ತಟಕ್ಕನೆ ಇದು ಇಂಥವರ ಕವಿತೆ ಎಂಬುದನ್ನು ಗುರುತಿಸಬಲ್ಲದು. ಏಕೆಂದರೆ ಆಯಾ ಪದರಚನೆ ಆಯಾ ಕವಿಗಳಿಗೆ ವಿಶಿಷ್ಟವಾದುದು. ಹೀಗೆ ವಿಶಿಷ್ಟ ಪದರಚನೆಯಿಂದಲೆ ಮೊಟ್ಟಮೊದಲು ಕವಿ ತನ್ನ ಕಡೆಗೆ ನಮ್ಮ ಗಮನವನ್ನು ಸೆಳೆದು ತನ್ನ ವಿಶಿಷ್ಟಾನುಭವದ ಪರಿಚಯವನ್ನು ನಮಗೆ ಮಾಡಿಕೊಡುತ್ತಾನೆ. ‘ಸಾಧಾರಣ’ದ ವಿಶಿಷ್ಟಾನುಭವವನ್ನು ವಿಶಿಷ್ಟ ಪದರಚನೆಯ ಮೂಲಕವೆ ಪ್ರಕಟಿಸುತ್ತಾನೆ. ಆದರೆ ಇದು ಕವಿಗೆ ಸುಲಭವಾಗಿ ಪ್ರಾಪ್ತವಾಗುವಂಥದಲ್ಲ; ಅದಕ್ಕಾಗಿ ಆತ ತನ್ನ ‘ಭೂತ’ದೊಂದಿಗೆ ‘ವರ್ತಮಾನ’ದೊಂದಿಗೆ ದೊಡ್ಡ ಹೋರಾಟವನ್ನು ಹೂಡಬೇಕಾಗುತ್ತದೆ. ಅನ್ಯ ಕವಿಗಳ ಅಭಿವ್ಯಕ್ತಿಯ ನೆರಳಿನ ಬಲೆಯಿಂದ ಪಾರಾಗಿ, ತನ್ನ ಸ್ವಯಂಪ್ರಕಾಶದಲ್ಲಿ ನಿಲ್ಲುವುದನ್ನು ಕಲಿಯುವ ತನಕ ಅವನ ಹೋರಾಟಕ್ಕೆ ಬಿಡುವಿಲ್ಲ. ‘ಅನ್ಯರೊರೆದುದನೆ ಬರೆಬರೆದು ಬಿನ್ನಗಾಗಿದೆ ಮನವು’-ಎಂಬ ಕೊರಗಿನಿಂದ ಹೊರಟ ಅಡಿಗರ ಕಾವ್ಯಮಾರ್ಗವೆಲ್ಲವೂ, ತನ್ನ ವಿಶಿಷ್ಟಾಭಿವ್ಯಕ್ತಿಗಾಗಿ ನಡೆಸಿದ ಹೋರಾಟದ ಕಥೆಯೇ ಆಗಿರುವುದನ್ನು ಯಾರೂ ಗಮನಿಸಬಹುದು. ಪ್ರತಿಯೊಬ್ಬ ನಿಜವಾದ ಕವಿಗೂ ಹೀಗೆ ಅನುಭವದೊಂದಿಗೆ ಭಾಷೆಯೊಂದಿಗೆ ಹೋರಾಡಿ ವಿಶಿಷ್ಟ ಪದರಚನೆಯೊಂದನ್ನು ರೂಪಿಸಿಕೊಳ್ಳುವ ತನಕ ತನ್ನ ವಿಶಿಷ್ಟತೆಯನ್ನು ಸಾಧಿಸುವುದು ಸಾಧ್ಯವಿಲ್ಲ. ವಿಶಿಷ್ಟತೆಯನ್ನು ಸಾಧಿಸಿಕೊಂಡ ಕವಿ, ತನ್ನ ಆನುಭವ ಹಾಗೂ ಅಭಿವ್ಯಕ್ತಿ, ಇನ್ನೊಬ್ಬ ಕವಿಯ ಅನುಭವ ಹಾಗೂ ಅಭಿವ್ಯಕ್ತಿಯಿಂದ ಎಷ್ಟರಮಟ್ಟಿಗೆ ಬೇರೆ ಎಂಬುದನ್ನು ತೋರಿಸಿಕೊಡುತ್ತಾನೆ. ಈ ದೃಷ್ಟಿಯಿಂದ ಬೇಂದ್ರೆ ಬೇಂದ್ರೆಯೇ, ಕುವೆಂಪು ಅಲ್ಲ ; ಕುವೆಂಪು ಕುವೆಂಪುವೇ, ಪು. ತಿ. ನ. ಅಲ್ಲ. ಪಂಪ, ರನ್ನ, ನಾರಣಪ್ಪ ಇಂಥ ದೊಡ್ಡ ಕವಿಗಳೂ ತಮಗೆ ವಿಶಿಷ್ಟರಾದವರು. ಈ ಒಂದು ವಿಶಿಷ್ಟತೆಯ ಬಗ್ಗೆ ನಮ್ಮ ಕವಿಗಳಿಗೆ ಹೆಮ್ಮೆಯುಂಟು. ತಮ್ಮ ಕಾವ್ಯದ ಅಗ್ಗಳಿಕೆಯನ್ನು ಉದ್‌ಘೋಷಿಸುವ ಪೀಠಿಕಾ ಪ್ರಕರಣಗಳ ತುಂಬ ಇದೇ ಮಾತು. ಕೆಲವರು ಧೀರವಾಗಿ ಹೇಳಿಕೊಂಡವರಿದ್ದಾರೆ ; ಅಹಂಕಾರದಿಂದ ಹೇಳಿಕೊಂಡರಿದ್ದಾರೆ; ನಮ್ರವಾಗಿ ಹೇಳಿಕೊಂಡವರಿದ್ದಾರೆ. ಇಲ್ಲದ ವಿಶಿಷ್ಟತೆಯನ್ನು ಉಂಟೆಂದು ಭ್ರಾಂತಿಯಿಂದ ತಮ್ಮನ್ನು ತಾವು ಹೊಗಳಿಕೊಂಡು ಅನಂತರ ವಿಮರ್ಶೆಯ ತಕ್ಕಡಿಯಲ್ಲಿ ಕೆಳಗಿಳಿದವರೂ ಉಂಟು. ಆದರೆ ಯಾವ ಕವಿ ರನ್ನನ ಹಾಗೆ, ನಾರಣಪ್ಪನ ಹಾಗೆ ತಮ್ಮ ಸಹಜವಾದ ವಿಶಿಷ್ಟತೆಯನ್ನು ಜೋರಾಗಿಯೇ ಹೇಳಿಕೊಂಡರೆ ತಪ್ಪೇನಲ್ಲ. ಶ್ರೀ ಕುವೆಂಪು ಅವರು- “ನನ್ನ ಕವಿತೆಯು ‘ನನ್ನ ಕವಿತೆ’, ನನ್ನವಳೆ ಎಂದೆಂದಿಗೂ…. ಪಂಪ ರನ್ನರು ಕಾಣಲಿಲ್ಲ. ನನ್ನ ಕವಿತೆಯ ಕಣ್ಣನು”-ಎಂದದ್ದೂ ಇದೇ ಅರ್ಥದಲ್ಲಿಯೇ.

ಈ ಒಂದು ವಿಶಿಷ್ಟತೆ ಕವಿಯಲ್ಲಿ ಸಿದ್ಧವಾಗುವುದು ಅವನವನ ಅನುಭವದ ಗ್ರಹಿಕೆ ಹಾಗೂ ರುಚಿಭೇದಗಳ ತೀವ್ರತೆಯಿಂದ. ಈ ಕಾರಣದಿಂದಲೆ ಒಬ್ಬೊಬ್ಬ ನಿಜವಾದ ಕವಿಯದೂ ಒಂದೊಂದು ವಿಶಿಷ್ಟ ವ್ಯಕ್ತಿತ್ವ. ಪ್ರತಿಯೊಬ್ಬ ಕವಿಯಲ್ಲೂ ನಾವು ಅವನು ಆರಿಸಿಕೊಳ್ಳುವ ವಸ್ತು, ನೋಡುವ ದೃಷ್ಟಿ, ಅದನ್ನು ನಿರ್ವಹಿಸಿರುವ ರೀತಿ-ಇದರಿಂದ ಅವನ ವಿಶಿಷ್ಟತೆಯೇನೆಂಬುದನ್ನು ಗುರುತಿಸಲು ಸಾಧ್ಯ. ಹೀಗೆ ಆಯಾ ಕವಿಯ ವ್ಯಕ್ತಿತ್ವ ಬೇರೂರಿದ ನೆಲೆಯಲ್ಲಿಯೇ ಅವನವನ ವಿಶಿಷ್ಟತೆಯನ್ನು ಗುರುತಿಸುವ, ಮಾನ್ಯ ಮಾಡುವ ಯಾವ ವಿಮರ್ಶಕನೂ, ಆ ಒಬ್ಬ ಕವಿಯಂತೆ, ಈ ಒಬ್ಬ ಕವಿ ಬರೆಯುತ್ತಿಲ್ಲವೆಂದು ಆಕ್ಷೇಪಿಸುವ, ಸಾಹಿತ್ಯರಂಗದಲ್ಲಿ ಎರಡು ಬಣಗಳನ್ನೇರ್ಪಡಿಸುವ, ಸ್ಪರ್ಧೆ ವಿವಾದಗಳನ್ನೆಬ್ಬಿಸುವ ಕೆಲಸಕ್ಕೆ ಕೈಹಾಕುವುದಿಲ್ಲ.

ಕಾವ್ಯ ಮೂಲತಃ ವಿಶಿಷ್ಟಾನುಭವ ; ಅದು ಅವನದೆ ಹೊರತು ಬೇರೆಯವರದಲ್ಲ ಎನ್ನುವಷ್ಟರ ಮಟ್ಟಿಗೆ ವ್ಯಕ್ತಿವೈಲಕ್ಷಣ್ಯದಿಂದ ಕೂಡಿರುತ್ತದೆ. ವಿಶಿಷ್ಟವಾಗುವುದು ಎಂದರೆ ಅವನೊಬ್ಬನ ಹೊರತು ಬೇರೆ ಯಾರ ಅನುಭವಕ್ಕೂ ಅದು ಬರತಕ್ಕದ್ದಲ್ಲ ಎಂದು ಅರ್ಥವಲ್ಲ. ಏಕೆಂದರೆ ಕವಿಯಲ್ಲಿ ‘ಸಾಧಾರಣ’ವು ‘ವಿಶಿಷ್ಟಾನುಭವ’ವಾಗಿ, ಮತ್ತೆ ಓದುಗರ ಅನುಭವದಲ್ಲಿ ‘ಸಾಧಾರಣ’ವಾದಾಗಲೇ ಅದು ಸಾರ್ಥಕವಾದ ಹಾಗಾಯಿತು. ವಿಶಿಷ್ಟತೆಗೆ ಮುನ್ನಿನ ‘ಸಾಧಾರಣ’ ವಾದಾಗ, ಕಲಾ ಅನುಭವದ ಮಟ್ಟದಲ್ಲಿ ವ್ಯಾಪಕವಾಗುತ್ತದೆ. ಈ ಒಂದು ವ್ಯತ್ಯಾಸ, ಲೋಕವಿಷಯ ಹಾಗೂ ಲೋಕಭಾಷೆ, ಕಾವ್ಯವಸ್ತು ಮತ್ತು ಕಾವ್ಯಭಾಷೆಯಾಗಿ ರೂಪಾಂತರಗೊಳ್ಳುವ ಕ್ರಿಯೆಯಲ್ಲಿ ಗೋಚರಿಸುತ್ತದೆ. ಹೀಗಾಗಬೇಕಾದರೆ ಕವಿ ಮೊದಲು ಈ ‘ಸಾಧಾರಣ’ ದ ಪ್ರಜ್ಞೆಯುಳ್ಳವನಾಗಿರಬೇಕು, ಅದರ ಪ್ರಾಣಸ್ಪಂದನದಲ್ಲಿ ಬೇರೂರಿದವನಾಗಿರಬೇಕು. ಈ ಒಂದು ಸಾಧಾರಣತೆಯ ಸರಿಯಾದ ಪರಿಜ್ಞಾನವಿಲ್ಲದೆ ಹೋದಪಕ್ಷದಲ್ಲಿ, ಅಂಥವನ ಕವಿತೆ ಕೇವಲ ವ್ಯೆಯಕ್ತಿಕ ಮಿತಿಯಲ್ಲೇ ನಿಂತು, ಕೇವಲ ವಿಶಿಷ್ಟವಾಗಿ, ‘ಸಾಧಾರಣಕ್ಕೆ’ ಇಳಿಯದೆ, ವ್ಯಾಪಕವಾಗದೆ ಹೋಗುವ ಸಂಭವ ಉಂಟು. ಈ ಒಂದು ಅಪಾಯ ವೈಯಕ್ತಿಕ ಸಂಕೇತಗಳ (Private symbols) ನಿರ್ಮಾಣದಲ್ಲಿ ಮತ್ತು ತನ್ನ ದೇಶ ಕಾಲ ಪರಿಸರದಲ್ಲಿ ಇಲ್ಲದ, ಅನ್ಯ ದೇಶ ಕಾಲ ಪರಿಸರಕ್ಕೆ ಮಾತ್ರ ಸೀಮಿತವಾದ ಕಾವ್ಯಪಂಥಗಳ ಅನುಕರಣೆ ಅನುಸರಣೆಗಳಲ್ಲಿ ಕಂಡುಬರುತ್ತದೆ. ತನ್ನ ‘ಸಾಧಾರಣ’ದಿಂದ ಭಿನ್ನವಾದ, ಬೇರೊಂದು ಪಂಥ ಪರಂಪರೆಯ ಪರಿಣಾಮದಿಂದ ‘ವಿಶಿಷ್ಟ’ಗೊಳಿಸಿದ ಕೃತಿ, ನಿಜವಾಗಿಯೂ ವಿಶಿಷ್ಟವೆಂದು ತೋರಿದರೂ, ಅದು ತನ್ನ ‘ಸಾಧಾರಣ’ದಲ್ಲಿ ಇಲ್ಲದ ಪರಿಸ್ಥಿತಿಯನ್ನು ಪ್ರತಿಮಿಸುವ  ಮೂಲಕ ಕೇವಲ ವಿಶಿಷ್ಟ ಮಾತ್ರವೆ ಆಗಬಹುದು. ಆದರೆ ಎಂಥ ಪ್ರಭಾವವನ್ನೂ ಅರಗಿಸಿಕೊಂಡು ತನ್ನದನ್ನಾಗಿ ಮಾಡಿಕೊಂಡು ತನ್ನ ‘ಸಾಧಾರಣ’ತೆಯಲ್ಲೂ ಅದನ್ನು ವ್ಯಾಪಕವನ್ನಾಗಿ ಮಾಡುವ ಸಾಮರ್ಥ್ಯ ಕವಿಯ ಪ್ರತಿಭೆಯನ್ನು ಅವಲಂಬಿಸಿದೆ. ಹಾಗಾಗಬೇಕಾದರೆ ಕವಿ ತಾನು ಹುಟ್ಟಿ ಬೆಳೆದ ಬದುಕಿನ ‘ಸಾಧಾರಣ’ತೆಯನ್ನು ಚೆನ್ನಾಗಿ ಜೀರ್ಣಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಪ್ರತಿಯೊಂದು ದೇಶಕ್ಕೂ ತನ್ನದೇ ಆದೊಂದು ವಿಶಿಷ್ಟವಾದ ‘ಸಾಧಾರಣ’  ಅಥವಾ ಸಮಷ್ಟಿ ವ್ಯಕ್ತಿತ್ವ ಉಂಟು. ಒಂದು ದೇಶದ ಕವಿಗೆ ಹಿನ್ನೆಲೆಯಾದ ‘ಸಾಧಾರಣ’ ಎನ್ನುವುದು ಆ ದೇಶದ  ಜನಜೀವನ, ಅದರ ನಂಬಿಕೆಗಳು, ಅದರ ಜೀವನದೃಷ್ಟಿ, ಅದರದೇ ಆದ  ಭಾಷಾ ವೈಲಕ್ಷಣ್ಯಗಳು ಈ ಎಲ್ಲವನ್ನೂ ಒಳಗೊಂಡಿರುತ್ತದೆ. ಆದ್ದರಿಂದ ಮೊದಲು ಈ ‘ಸಾಧಾರಣ’ದ ಪ್ರಜ್ಞೆಯನ್ನು ಸಮರ್ಪಕವಾಗಿ ಸಿದ್ಧಿಸಿಕೊಳ್ಳಲಾಗದ ಕವಿ ವಿಶಿಷ್ಟನಾಗಲು ಸಾಧ್ಯವಾಗುವುದಿಲ್ಲ. ಕನ್ನಡದಲ್ಲಿ ಬರೆಯುವ ಕವಿ ಮೊದಲು ತಾನು ಕನ್ನಡಿಗ, ತಾನು ಬದುಕಿರುವುದು ಕನ್ನಡನಾಡಿನಲ್ಲಿ, ತಾನು ಬರೆಯುತ್ತಿರುವುದು  ಕನ್ನಡ ಜನಕ್ಕೆ, ಒಟ್ಟಿನಲ್ಲಿ ತಾನು ಭಾರತೀಯ ಎನ್ನುವ ವಿಷಯವನ್ನು ಗಮನದಲ್ಲಿರಿಸಿಕೊಂಡರೆ ತನ್ನ ‘ಸಮಷ್ಟಿ’ಯ ಅಥವಾ ‘ಸಾಧಾರಣ’ದ ಅರಿವು ಅವನಿಗಾದೀತು. ಆದಕಾರಣ, ತಾನು ಬರೆಯುವ ಕೃತಿ ಮೊದಲು ತನ್ನ ನಾಡಿನ, ತನ್ನ ಪರಿಸರದ ಸಾಧಾರಣತೆಯನ್ನು ಹೀರಿಕೊಂಡು, ತನ್ನಲ್ಲಿ ‘ವಿಶಿಷ್ಟ’ವಾಗಿ ಅನುಭವಕ್ಕೆ ಬಂದದ್ದು ಎನ್ನುವ ಭಾವನೆ ಬೆಳೆದರೆ, ಅದರಿಂದ ಮೊದಲು ತನ್ನ ಜನಕ್ಕೆ ಉಪಯುಕ್ತವಾಗುವುದು ಮಾತ್ರವಲ್ಲ, ಅದರಲ್ಲಿ ಸತ್ವವಿದ್ದರೆ ಬೇರೆಯ ಭಾಷೆಗಳವರು, ದೇಶದವರು ಭಾಷಾಂತರಿಸಿ ಅದರ ಸೊಗಸನ್ನು ಆಸ್ವಾದಿಸಬಹುದು.

ಗತಿಬಿಂಬ-೧೯೬೯