೧
ಕಲ್ಲನಕೇರಿ ಮಲ್ಲನಗೌಡಾ ಕೆರೆಯೊಂದ ಕಟ್ಟಿಸ್ಯಾನು*
ಕೆರೆಯೊಂದ ಕಟ್ಟಿಸ್ಯಾನು ಸೆರೆಮುಕ್ಕ ನೀರಿಲ್ಲ
ಸೆರೆಮುಕ್ಕ ನೀರಿಲ್ಲ ಹೊತ್ತಿಗಿ ತಗಸ್ಯಾರು
ಹೊತ್ತಿಗೆ ತಗಸ್ಯಾರು ಜೋಯಿಸ ಕೇಳ್ಯಾರು
“”ದೇವರಿಲ್ಲ ದಿಂಡ್ರಿಲ್ಲ ದೆವ್ವಲ್ಲ ಭೂತಲ್ಲ
ಹಿರಿಸೊಸೆ ಮಲ್ಲವನ ಹಾರವ ಕೊಡಬೇಕು
ಹಾವರ ಕೊಟ್ಟರೆ ನೀರು ಬೀಳೂವಂ” ದ್ರೂ
“”ಹಿರಿಸೊಸಿನ್ನ ಕೊಟ್ಟರೆ ಹಿರಿತನಕ ಯಾರಿಲ್ಲ
ಕಡೆ ಸೊಸಿ ಭಾಗೀರತಿನ್ನ ಹಾರವ ಕೊಡಬೇಕು”
ಹಾರ ಕೊಡಬೇಕೆಂತ ಮಾತಾತು ಮನೆಯಾಗ
ಸಣ್ಣ ಸೊಸಿ ಭಾಗೀರತಿ ತವರುಮನೆಗೆ ಹೊಂಟಾಳು
“”ಅತ್ತೆವ್ವಾ ನಮ್ಮ ತವರುಮನೆಗೆ ಹೋಗಲೇನು!”
“”ಸರ್ರನೆ ಹೋಗವ್ವಾ ಭರ್ರನೆ ಬಾರವ್ವಾ”
ಸಣ್ಣ ಸೊಸಿ ಭಾಗೀರತಿ ತವರುಮನೆಗೆ ಹೋದಾಳು
ಮನೆ ಮಂದ ಹೋಗುದಕ ಅವರಪ್ಪ ಬಂದಾನು
“”ಎಂದಿಲ್ಲದ ಭಾಗೀರತಿ ಇಂದ್ಯಾಕ ಬಂದೆವ್ವ ?
ಬಾಡಿದ ಮಾರ್ಯಾಕ ಕಣ್ಣಾಗ ನೀರ್ಯಾಕ ?”
“”ನಮ್ಮಾವ ನಮ್ಮತ್ತೆ ಬ್ಯಾರೆ ಇಡುತಾರಂತೆ”
“”ಇಟ್ಟರೆ ಇಡಲೇಳು ಹೊಲಮನಿ ಕೊಡತೇನು”
“”ಹೊಲಮನಿ ಒಯ್ದು ಹೊಳಿ ದಂಡ್ಯಾಗ್ಯಾಕಪ್ಪ”
ಅತತ್ತ ಹೋಗುತಲಿ ಅವರವ್ವ ಬಂದಾಳು
“”ಎಂದಿಲ್ಲದೆ ಭಾಗೀರತಿ ಇಂದ್ಯಾಕಳುತಾ ಬಂದೆ?”
“”ನಮ್ಮತ್ತೆ ನಮ್ಮಾವ ಬ್ಯಾರೆ ಇಡುತಾರಂತೆ”
“”ಇಟ್ಟರೆ ಇಡಲೇಳು ವಾಲಿಜೋಡು ಕೊಡುತೇನೆ”
“”ವಾಲಿಯ ಜೋಡುಯ್ದು ಒಲಿಯಾಗ ಹಾಕವ್ವ”
ಮುಂದಕತ್ತ ಹೋಗುತಲೆ ಅವರಕ್ಕ ಬಂದಳು
ಅವರಕ್ಕ ಬಂದಾಲು ಭಾಗೀರತಿನ್ನ ಕೇಳ್ಯಾಳು
“”ಎಂದಿಲ್ಲದ ಭಾಗೀರತಿ ಇಂದ್ಯಾಕ ಈ ದುಕ್ಕ ?”
“”ನಮ್ಮತ್ತೆ ನಮ್ಮಾವ ಬ್ಯಾರೆ ಇಡುತಾರಂತೆ”
“”ಇಟ್ಟರೆ ಇಡಲೇಳ ಮಕ್ಕಳ ಜೋಡಿಗೆ ಕಳವತೇನೆ”
“”ಮಕ್ಕಳಿಲ್ಲದ್ದರೇನಕ್ಕ ದುಕ್ಕ ಕಳದಾವೇನ?”
“”ಸಣ್ಣ ಸೊಸಿ ಭಾಗೀರತಿ ತವರುಮನೆಯ ಬಿಟ್ಟು
ತವರ ಮನೆಯ ಬಿಟ್ಟು ಗಣತಿ ಮನೆಗೆ ನಡೆದಳು
ತಲಬಾಗಿಲದಾಗ ಗೆಳತಿನ್ನ ಕಂಡಳು
“”ಎಂದಿಲ್ಲದ ಭಾಗೀರತಿ ಇಂದ್ಯಾಕ ಈ ಅಳುವು?”
ಅಂಜಿ “”ಹೇಳಲಿ ಗೆಳತಿ” ಅಳುಕಿ “”ಹೇಳಲಿ ಗೆಳತಿ?”
“”ಅಂಜಬ್ಯಾಡ ಗೆಳತಿ ಅಳುಕಬ್ಯಾಡ ಗೆಳತಿ”
“”ನಮ್ಮತ್ತೆ ನಮ್ಮಾವ ಕೆರೆಗ್ಹಾರ ಕೊಡತಾರಂತೆ”
“”ಕೊಟ್ಟರೆ ಕೊಡಲೇಳು ಇಟ್ಟಾಂಗ ಇರಬೇಕ!”
ಸರ್ರನೆ ಹೋದಳು ಭರ್ರನೆ ಬಂದಳು.
೨
ಬ್ಯಾಳೀಯ ಹಸ್ತಮಾಡ್ತ ಬಿಟ್ಯಳು ಕಣ್ಣೀರ
“”ಎಂದಿಲ್ಲದ ಭಾಗೀರತಿ ಇಂದ್ಯಾಕ ಕಣ್ಣೀರು ?”
“”ಬ್ಯಾಳಾಗಿನ ಹಳ್ಳು ಬಂದು ಕಣ್ಣಾಗೆರಚಿದವು ಮಾವಾ”
ಅಕ್ಕಿಯ ಹಸಮಾಡ್ತ ಉಕ್ಕಾವು ಕಣ್ಣೀರು
“”ಅಕ್ಕಾಗಿನ ಹಳ್ಳೊಂದ ಕಣ್ಣಾಗ ಬಿತ್ತತ್ತಿ”
ಉಕ್ಕುವ ನೀರಾಗ ಅಕ್ಕಿಯ ಸುರುವ್ಯಾರ
ಸಕ್ಕರಿ ಹಾಲಾಗ ಶ್ಯಾವಿಗಿ ಸುರಿವ್ಯಾರ
ಹತ್ತು ಕೊಪ್ಪರಿಗೆ ನೀರು ಉಕ್ಕಿ ಮಳ್ಳತಿತ್ತು
“”ನಿಂಗವ್ವ ಜಳಕ ಮಾಡ ನೀಲವ್ವ ಜಳಕ ಮಾಡ”
ನಿಂಗವ್ವ “”ನಾವೊಲ್ಲೆ” ನೀಲವ್ವ “”ನಾವೊಲ್ಲೆ”
“”ಸಣ್ಣ ಸೊಸಿ ಬಾಗವ್ವ ನೀನರೆ ಜಳಕೆ ಮಾಡ”
“”ಸಣ್ಣ ಸೊಸಿ ಭಾಗೀರತಿ ಜಳಕವ ಮಾಡ್ಯಾಳು
ಜಳಕವ ಮಾಡ್ಯಾಳು ಬಂಗಾರಬುಟ್ಟಿ ತುಂಬ್ಯಾಳು
ಬಂಗಾರಬುಟ್ಟಿ ತುಂಬ್ಯಾಳು ಸಿಂಗಾರಸಿಂಬಿ ಮಾಡ್ಯಾಳು
ಸಿಂಗಾರಸಿಂಬಿ ಮಾಡ್ಯಾಳು ಮುಂದಮುಂದ ಹೊಂಟಾಳು
ಮುಂದಮುಂದ ಭಾಗೀರತಿ ಹಿಂದಿಂದ ಎಲ್ಲಾರೂ
ಗಂಗಿಪೂಜೆ ಮಾಡ್ಯಾರ ಬೆಲಪತ್ರಿ ಏರಿಸ್ಯಾರ
ಬೆಲಪತ್ತಿ ಏರಿಸ್ಯಾರ ಈಬತ್ತಿ ಧರಿಸ್ಯಾರ
ಸೀರಿಕುಬಸಾ ಏರಿಸ್ಯಾರ ಹೂವಿನ ದಂಡಿ ಮುಡಿಸ್ಯಾರ
ಹೂವಿನ ದಂಡಿ ಮುಡಿಸ್ಯಾರ ನೇವದಿ ಮಾಡ್ಯಾರ
ನೇವದಿ ಮಾಡ್ಯಾರು ಎಲ್ಲರು ಉಂಡಾರು
ಎಲ್ಲರು ಉಂಡಾರು ಉಳಿದದ್ದು ತುಂಬ್ಯಾರು
ಉಳಿದದ್ದು ತುಂಬ್ಯಾರು ಬಂಗಾರಬುಟ್ಟಿ ಹೊತ್ತಾರು
ಬುಟ್ಟಿಹೊತ್ತು ನಡೆದಾರು ಬಂಗಾರ ಬಟ್ಲ ಮರತರು
“”ಗಂಗವ್ವ ನೀ ಹೋಗ ! ಗವರವ್ವ ನೀ ಹೋಗ !”
ಗಂಗವ್ವ “”ನಾವೊಲ್ಲೆ” ಗವರವ್ವ “”ನಾವೊಲ್ಲೆ”
“”ನಿಂಗವ್ವ ನೀ ಹೋಗ” ನೀಲವ್ವ ನೀ ಹೋಗ”
ನಿಂಗವ್ವ “”ನಾವೊಲ್ಲೆ” ನೀಲವ್ವ “”ನಾವೊಲ್ಲೆ”
“”ಸಣ್ಣ ಸೊಸಿ ಭಾಗೀರಥಿ ಬಿರಿಬಿರಿ ನಡೆದಾಳು
ಬಿರಿಬಿರಿ ಹೋದಳು ಬಂಗಾರ ಬಟ್ಲ ತೊಗೊಂಡಳು
ಒಂದು ಮೆಟ್ಲೇರುದಕ ಪಾದಕ ಬಂದಳು ಗಂಗಿ
ಎರಡು ಮಟ್ಲೇರುದಕ ಪಾದ ಮಣಿಗಿಸ್ಯಾಳು ಗಂಗಿ
ಮೂರು ಮೆಟ್ಲೇರುದಕ ಮೊಣಕಾಲಿಗೆ ಬಂದಳು ಗಂಗಿ
ನಾಕು ಮೆಟ್ಲೇರುದಕ ನಡುಮಟ ಬಂದಳು ಗಂಗಿ
ಐದು ಮೆಟ್ಲೇರುದಕ ತುಂಬಿ ಹರಿದಾಳು ಗಂಗಿ
ಸಣ್ಣ ಸೊಸಿ ಭಾಗೀರತಿ ಕೆರೆಗ್ಹಾರವಾದಳು.
೩
ಗಂಡ ಮಾದೇವರಾಯ ದಂಡಿನಾಗೈದಾನು
ದಂಡಿನಾಗೈದಾನು ಕಂಡನು ಕೆಟ್ಟ ಕನಸ
ಸೆಲ್ಯೆ ಸುಟ್ಟಂಗಾತು ಕೋಲು ಮುರಿದ್ಹಾಂಗಾತು
ಕಟ್ಟಿಸಿದ ಮಾಲೆಲ್ಲ ತಟ್ಟನೆ ಬಿದ್ದಂಗಾತು
ಗಂಡು ಮಾದೇವರಾಯ ಹತ್ತಿದ ಬತ್ತಲಿಗುದುರಿ
ಹತ್ತಿದ ಬತ್ತಲಿಗುದರಿ ಒತ್ತಾರ ಬಂದಾನ ಮನೆಗೆ
ಬಂದ ಬತ್ತಲಿಗುದರಿ ಒತ್ತಾರ ಬಂದಾನ ಮನೆಗೆ
ಬಂದ ಮಾದೇವನ ತಂದೆ ತಾಯಿ ನೋಡಿದರು
“ಗಂಗವ್ವ ನೀರ ಕೊಡ ಗವರವ್ವ ನೀರ ಕೊಡ”
“ಗಂಗವ್ವ ನೀರ ಕೊಡುದ್ಯಾಕ ಗವರವ್ವ ನೀರ ಕೊಡುದ್ಯಾಕ?
ನನ ಮಡದಿ ಭಾಗೀರತಿ ಎಲ್ಲಿಗ್ಹೋಗ್ಯಾಳವ್ವ ?”
“ನಿನ ಮಡದಿ ಭಾಗೀರತಿ ತವರಿಗೆ ಹೋಗ್ಯಾಳಪ್ಪ”
೪
ಗಂಡ ಮಾದೇವರಾಯ ಹತ್ತಿದ ಬತ್ತಲೆಗುದುರಿ
ಹತ್ತಿದ ಬತ್ತಲೆಗುದುರಿ ಹೊಂಟಾನತ್ತೆಯ ಮನೆಗೆ
ಬಂದಿರು ಅಳಿಯನ ನೋಡಿ ಅಂದಳ ಅತ್ತೆವ್ವಾ
“ನಿಂಬೆವ್ವ ನೀರ್ ಕೊಡ ನೀಲವ್ವ ನೀರ್ ಕೊಡ”
“ನಿಂಬೆವ್ವ ನೀರ್ ಕೊಡುದ್ಯಾಕ ನೀಲವ್ವ ನೀರ್ ಕೊಡುದ್ಯಾಕ ?
ನನ ಮಡದಿ ಭಾಗೀರತಿ ಎಲ್ಲಿಗೋಗ್ಯಾಳತ್ತಿ ?”
“ನಿನ ಮಡದಿ ಭಾಗೀರಥಿ ಗೆಣತಿ ಮನೆಗೆ ಹೋಗ್ಯಾಳಪ್ಪ !”
ಗಂಡ ಮಾದೇವರಾಯ ಹತ್ತಿದ ಬತ್ತಲೆಗುದರಿ
ಹತ್ತಿದ ಬತ್ತಲೆಗುದರಿ ಗೆಣತಿ ಮನೆಗೆ ಸ್ವಾರಿ
ಬಂದಿರು ಮಾದೇವನ ಕಂಡಾಳು ಗೆಳೆತವ್ವಾ
“ಬಾಳವ್ವ ನೀರ್ ಕೂಡ ಬಸವ್ವ ನೀರ್ ಕೊಡ”
“ಬಾಳೆವ್ವ ನೀರ್ ಕೊಡುದ್ಯಾಕ ಬಸವ್ವ ನೀರು ಕೊಡುದ್ಯಾಕ ?”
ನನ ಮಡದಿ ಭಾಗೀರಥಿ ಎಲ್ಲಿಗೋಗ್ಯಾಳಕ್ಕ ?”
“ನಿನ್ನ ಮಡದಿ ಭಾಗೀರತಿದು ಏನು ಹೇಳಲಿ ಸೂರಿ
ನಿಮ್ಮಪ್ಪ ನಿಮ್ಮವ್ವ ಕೆರೆಗಾರ ಕೊಟ್ಟರಂತ”
ಗಂಡ ಮಾದೇವರಾಯ ಹತ್ತಿದ ಬತ್ತಲೆಗುದರಿ
ಹತ್ತಿದ ಬತ್ತಲೆಗುದರಿ ಹೊಂಟಾನು ಹೌಹಾರಿ :
ಕೆರೆಯ ಕಡೆಗೆ ಬಂದು ಕಣ್ಣೀರು ಇಟ್ಟಾನು
ಕಣ್ಣೀರು ಇಟ್ಟಾನು ನಿಟ್ಟುಸಿರು ಬಿಟ್ಟಾನು
“ಸಾವಿರ ವರಹ ಕೊಟ್ಟರು ಸಿಗಲಾರದ ಸತಿ ನೀನು
ಸಿಗಲಾರದ ಸತಿ ನೀನು ನನ ಬಿಟ್ಟು ಎಲ್ಲಿ ಹೋದೆ ?
ಮುನ್ನೂರ ವರಹ ಕೊಟ್ಟು ಮುತ್ತಿನೋಲೆ ಮಾಡಿಸಿದ್ದೆ
ಮುತ್ತಿನೋಲೆ ಇಟ್ಟುಗೊಳ್ಳೊಮುತ್ತೈದೆ ಎಲ್ಲಿಗೋದೆ ?
ಇಷ್ಟು ಮಾತಾಡಿ ಮಾದೇ ಬಿಟ್ಟಾನು ಕಣ್ಣೀರು
ಬಿಟ್ಟಾನು ಕಣ್ಣೀರು ಹಾರೀದ ಕೆರೆ ನೀರಾಗ.
* ಪ್ರತಿಪಾದದ ಕೊನೆಗೂ “ಕೋಲೆನ್ನ ಕೋಲ’ ಎನ್ನಬೇಕು
ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು
೧) ವಡ್ಡರಬೋಯಿ; ಕ.ರಾ.ಕೃ. ಜಾನಪದ ಕಥನ ಗೀತೆಗಳು, ಜನಪದ ಸಾಹಿತ್ಯ ಅಕಾಡೆಮಿ ಮೈಸೂರು ೧೯೫೯ ಪು.ಸಂ. ೧೬೦-೧೭೨.
೨) ಹುಳಿಯಾರು ಕೆಂಚಮ್ಮ; ಪರಮಶಿವಯ್ಯ, ಜೀ.ಶಂ. ಜಾನಪದ ಖಂಡ ಕಾವ್ಯಗಳು; ಶಾರದಾ ಮಂದಿರ ಮೈಸೂರು, ೧೯೬೮, ಪು.ಸಂ. ೩೫-೪೬.
೩) ಹೊನ್ನಮ್ಮ; ಪರಮಶಿವಯ್ಯ ಜೀ.ಶಂ. ಜಾನಪದ ಖಂಡಕಾವ್ಯಗಳು, ಶಾರದಾ ಮಂದಿರ ಮೈಸೂರು ೧೯೬೮ ಪು.ಸಂ. ೪೭-೫೮.
೪) ಬಾವಿ ನೀರಿಗಾಗಿ ಸೊಸೆಯ ಬಲಿ; ಹೆಗಡೆ, ಎಲ್.ಆರ್. ತಿಮ್ಮಕ್ಕನ ಪದಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೬೯ ಪು.ಸಂ. ೧೧೪-೧೨೩.
೫) ಮದಗದ ಹೊನ್ನಮ್ಮ; ಕಂಬಾಳು ಸಿದ್ಧಗಂಗಯ್ಯ ಬಿ. ಮಾತಾಡು ಮಲ್ಲಿಗೆ ೧೯೭೩ ಪು.ಸಂ. ೭೬-೭೯.
೬) ಕೆರೆ ಹೊನ್ನಮ್ಮ; ರಾಜಪ್ಪ ಟಿ.ಎಸ್. ಕೆರೆ ಹೊನ್ನಮ್ಮ ಮತ್ತು ಇತರ ಲಾವಣಿಗಳು ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೪ ಪು.ಸಂ. ೩-೧೧.
೭) ಕೆರೆ ಪೂಜೆ; ಹಿರಿಯಣ್ಣ ಅಂಬಳಿಕೆ, ತೀರ್ಥಹಳ್ಳಿ ಸುತ್ತಿನ ಲಾವಣಿಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೬.
೮) ಹೊನ್ನಿ ಹಾಡು; ಹಿರಿಯಣ್ಣ ಅಂಬಳಿಕೆ, ತೀರ್ಥಹಳ್ಳಿ ಸುತ್ತಿನ ಲಾವಣಿಗಳು, ಮೈಸೂರು ವಿಶ್ವವಿದ್ಯಾಲಯ ಮೈಸೂರು, ೧೯೭೬ ಪು.ಸಂ. ೯೪-೯೮.
೯) ಹೊನ್ನಮ್ಮ-ಹೊಳಲವ್ವ; ರಾಮಸ್ವಾಮಿ ಎಸ್. ಮತ್ತು ನಟರಾಜ್ ಎಂ.ಬಿ. ಹಾಡಾಕೆ ಬೈಗುಂಟೆ. ಬೆಳಗುಂಟೆ, ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯ ಮೈಸೂರು, ೧೯೭೭ ಪು.ಸಂ. ೭೪-೭೭.
೧೦) ಪತಿವರತಿ; ರಾಮಸ್ವಾಮಿ ಎಸ್. ಮತ್ತು ನಟರಾಜ್ ಎಂ.ಬಿ. ಹಾಡಾಕೆ ಬೈಗುಂಟೆ ಬೆಳಗುಂಟೆ, ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೭, ಪು.ಸಂ. ೧೩-೧೫.
೧೧) ಮದಗದ ಕೆಂಚವ್ವ; ರಾಮಸ್ವಾಮಿ ಎಸ್. ಮತ್ತು ನಟರಾಜ್ ಎಂ.ಬಿ. ಹಾಡಾಕೆ ಬೈಗುಂಟೆ ಬೆಳಗುಂಟೆ, ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೭ ಪು.ಸಂ. ೬೩-೬೮.
೧೨) ಏನ್ನಲಾದೇವಿ; ಕಂಬಾರ ಚಂದ್ರಶೇಖರ ಮತ್ತು ಬರಗೂರು ಜಯಪ್ರಕಾಶ್, ಮುತ್ತು ಮುತ್ತಿನ ಸ್ವಾತಿ, ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು, ೧೯೮೧. ಪು.ಸಂ. ೯೭-೧೦೫.
೧೩) ಮಡಗದ ಕೆಂಚವ್ವ; ಹನೂರು ಕೃಷ್ಣಮೂರ್ತಿ ಕತ್ತಾಲ ದಾರಿ ದೂರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೩, ಪು.ಸಂ. ೧೦೭-೧೫೮.
೧೪) ಹೊಸಕೆರೆ; ನಳಿನಿ ಎಂ.ಬಿ. ಕಾಡುಮಲ್ಲಿಗೆ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೮೨, ಪು.ಸಂ. ೫೯-೬೦.
೧೫) ಹೊನ್ನಮ್ಮನ ಕಥೆ; ಪಾಂಡುರಂಗ. ಡಿ.ಆರ್. ದಕ್ಷಿಣ ಕನ್ನಡ ಜಿಲ್ಲೆಯ ಭೈರರು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೮೪, ಪು.ಸಂ. ೧೮೮-೧೯೪.
೧೬) ಮದಗದ ಕೆಂಚಮ್ಮ ಬಳ್ಳೆಕೆರೆ ಹನುಮಂತಪ್ಪ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೪.
೧೭) ಕೆಂಚಮ್ಮ; ಜಯಲಕ್ಷ್ಮಿ ಸೀತಾಪೂರ, ನಮ್ಮ ಸುತ್ತಿನ ಜನಪದ ಕಥನಗೀತೆಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೪, ಪು.ಸಂ. ೧೮-೩೮.
೧೮) ನೀಲಮ್ಮ; ಜಯಲಕ್ಷ್ಮಿ ಸೀತಾಪೂರ, ನಮ್ಮ ಸುತ್ತಿನ ಜನಪದ ಕಥನ ಗೀತೆಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೪, ಪು.ಸಂ. ೬೨-೬೮.
೧೯) ಕೆರೆಗೆ ಹಾರ; ನಾಗೇಗೌಡ ಎಚ್.ಎಲ್. ದುಂಡಮಲ್ಲಿಗಿ ಹೂವು ಬುಟ್ಟಿಲಿ ಬಂದಾವ, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ೧೯೯೫, ಪು.ಸಂ. ೧೩೭-೧೪೧.
೨೦) ಭಾಗೀರಥಿ; ನಾಯಕ ಎಸ್.ಆರ್. ಪಾಠಾಂತರ ಕಥನ ಕವನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೭, ಪು.ಸಂ. ೧೩೩-೧೪೧.
೨೧) ಹೊನ್ನಮ್ಮ ಹರುದೇವಿ; ನಾಯಕ ಎನ್.ಆರ್. ಪಾಠಾಂತರ ಕಥನ ಕವನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೭ ಪು.ಸಂ. ೧೪೨-೧೫೪.
೨೨) ನಾಮಧಾರ ಹೊನ್ನಮ್ಮ; ನಾಯಕ ಎನ್.ಆರ್. ಪಾಠಾಂತರ ಕಥನ ಕವನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು, ೧೯೭೭ ಪು.ಸಂ. ೧೨೪-೧೩೨.
೨೩) ವಿಷ್ಟಮ್ಮ; ಭಾನುಮತಿ ವೈ.ಸಿ. ಪುಟ್ಟಮಲ್ಲಿಗೆ ಹಿಡಿತುಂಬ, ತಾರಾ ಪ್ರಿಂಟಿಂಗ್ ಪ್ರೆಸ್, ಮೈಸೂರು, ೨೦೦೧, ಪು.ಸಂ. ೧೦೨-೧೩೭.
೨೪) ದ.ಕ.ಜಿ. ರತನೀ ದೊನ್ನಮ್ಮ; ಹೆಗಡೆ, ಎಲ್.ಆರ್. ಮಾಚಿಯ ಕಥನಗೀತೆಗಳು. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೨೦೦೨ ಪು.ಸಂ. ೫೪-೬೧.
೨೫) ಅಣಜಿ ಹೊನ್ನಮ್ಮ; ಕ.ರಾ.ಕೃ. ಜನಪದ ಸಾಹಿತ್ಯ ಅಕಾಡೆಮಿ, ಮೈಸೂರು ೧೯೬೪.
೨೬) ಕೆರೆ ಹೊನ್ನಮ್ಮ ಕಾವ್ಯ; ಸಿ.ಟಿ. ಗುರುಪ್ರಸಾದ ಬ್ಯಾಲದಕೆರೆ ಪ್ರಕಾಶನ, ಬ್ಯಾಲದಕೆರೆ ೨೦೦೩.
* ಕೆರೆಗೆ ಹಾರ, ಖಂಡೋಬಾ ಪಿ.ಕೆ. ಜನಪದ ಕಥನ ಗೀತೆಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು – ೧೯೭೯ ಪು.ಸಂ. ೬-೧೦
Leave A Comment