ಒಂದು ಜನಾಂಗವಾಗಲಿ ಬುಡಕಟ್ಟುಗಳಾಗಲಿ ಅಥವಾ ಜನಪದ ಗುಂಪುಗಳಾಗಲಿ ತಮ್ಮ ಮೂಲದ ಬಗ್ಗೆ ಹೇಳುವಾಗ ಶಿವ ವಿಷ್ಣು, ಬ್ರಹ್ಮ ಮತ್ತು ಶ್ರೇಷ್ಠ ಮಹಾಮುನಿಗಳಿಂದ ಅಥವಾ ಪ್ರಸಿದ್ಧ ರಾಜ-ಮಹಾರಾಜ ಮುಂತಾದ ಕುಲೋತ್ಪನ್ನರಿಂದ ಆಗಿದೆಯೆಂದು ಒಮ್ಮೆಲೆ ಬೆಟ್ಟದ ಸುರಳಿಯನ್ನೇ ಹತ್ತುತ್ತಾರೆ.

ಮಾನವಿಕ ಶಾಸ್ತ್ರಗಳ ಹಿನ್ನೆಲೆಯಲ್ಲಿ ಒಂದು ಗುಂಪಿನವರ ಮೂಲದ ಬಗ್ಗೆ ಅಧ್ಯಯನ ಮಾಡುವಾಗ ಅವರಲ್ಲಿ ಪ್ರಚಲಿತವಿರುವ ಪುರಾಣ, ಐತಿಹ್ಯಗಳಿಗೆ ಮೊರೆ ಹೋಗುವುದು ಅನಿವಾರ್ಯ. ಏಕೆಂದರೆ ಈ ಕೆಲವು ಆಧಾರಗಳಿಂದ ಅವರಲ್ಲಿ ಪ್ರಚಲಿತವಿರುವ ಮೂಲ ಚೂಲಗಳ ವಾಸ್ತವಿಕಾಂಶಗಳನ್ನು ಗುರುತಿಸಬಹುದಾಗಿದೆ.

ಕೈಲಾಸದಲ್ಲಿ ದೇವಾಧಿದೇವತೆಗಳೆಲ್ಲರೂ ಕೂಡಿಕೊಂಡು ಶಿ-ಪಾರ್ವತಿಯರ ಮದುವೆ ಮಾಡುವುದೆಂದು ನಿಶ್ಚಯಿಸಿ. ಬ್ರಹ್ಮನಿಗೆ ಮಂಗಲಸೂತ್ರ ಮತ್ತು ಕಾಲುಂಗರ ತರಲಿಕ್ಕೆ ಜಾಂಬಋಷಿಯ ಹತ್ತಿರ ಕಳುಹಿಸಿದರು. ಬ್ರಹ್ಮನು ಜಾಂಬಋಷಿಯ ಹತ್ತಿರ ಬಂದು ಶಿವಪಾರ್ವತಿಯರ ಮದುವೆಗೆ ಮಂಗಲಸೂತ್ರ ಮತ್ತು ಕಾಲುಂಗರ ತಯಾರಿಸಿಕೊಡಬೇಕೆಂದು ತಮ್ಮಲ್ಲಿಗೆ ಕಳುಹಿಸಿದ್ದಾರೆಂದನು. ಅದು ಜಾಂಬಋಷಿ ಶುಭಕಾರ್ಯಕ್ಕೆ ಅಡ್ಡಿ ಮಾಡಬಾರದೆಂದು ತನ್ನ ಏಳು ಮಕ್ಕಳಾದ ಹೆಪ್ಪಮುನಿ, ಬಿಗಮುನಿ, ನಿಲಮುನಿ, ನಿಚ್ಚಮುನಿ, ಪಾಲಮುನಿ, ಪಚ್ಚಮುನಿ ಮತ್ತು ರಗತಮುನಿ ಇವರಲ್ಲಿ ಮೊದಲು ನಿಮಗೆ ಯಾರು ಸಿಗುತ್ತಾರೋ ಅವರನ್ನು ಕರೆತರಬೇಕೆಂದನು. ಆಗ ಬ್ರಹ್ಮನು ಸುತ್ತೇಳು ಮಠ ತಿರುಗಿದಾಗ ಎದುರಿಗೆ ಪಚ್ಚಮುನಿ ಕಾಣಿಸಿಕೊಂಡನು. ಅವನನ್ನು ಕರೆತಂದು ಜಾಂಬಋಷಿಯ ಎದುರು ನಿಲ್ಲಿಸಿದನು.

ಜಾಂಬಋಷಿಯು ಪಚ್ಚಮುನಿಯನ್ನು ಕೆಡುವಿ ಶಿರ ಕಡಿದು ಚಂಡಕಿ ಮಾಡಿದ, ಕಿವಿ ತೆಗೆದು ತಪ್ಪಡ ಮಾಡಿದ, ಕಣ್ಣ ತೆಗೆದು ಸುರೋಜನ ಮಾಡಿದ. ಮೂಗ ಕತ್ತರಿಸಿ ಕೊಳವೆ ಮಾಡಿದ. ಹಲ್ಲ ತೆಗೆದು ಕರಗಸ ಮಾಡಿದ. ಎದೆ ತೆಗೆದು ಅಡಗಲ ಮಾಡಿದ. ಹೊಟ್ಯಾಗಿನ ಕರಸಲ ತೆಗೆದು ಇದ್ದಿಲು ಮಾಡಿದ. ಕರಳು ತೆಗೆದು ಜನಿವರ ಮಾಡಿದ, ಕಾಲು ತೆಗೆದು ಹತೋಟಿ ಮಾಡಿದ. ಮೆದುಳಿನಿಂದ ಅರಗ ಮಾಡಿದ, ತಲೆಬುರುಡೆ ತೆಗೆದು ಕಪ್ಪಲ ಮಾಡಿದ. ಕೊನೆಗೆ ‘ಡೊಕ್ಕಿ’ ಎಲುವು ಉಳಿಯಿತು. ಆಗ ಡೊಕ್ಕಿ ಎಲುವು ಯಾವ ಕೆಲಸಕ್ಕೂ ಬಾರದೆ ಇರುವಗ ಅದನ್ನು ಬೀಸಾಡಿದಾಗ ಅದು ತಿಪ್ಪೆಯಲ್ಲಿ ಹೋಗಿಬಿತ್ತು. ಇವೆಲ್ಲವುಗಳನ್ನು ಸರಿಯಾಗಿ ಜೋಡಿಸಿ ಮಂಗಲಸೂತ್ರ ಮತ್ತು ಕಾಳುಂಗರವನ್ನು ತಯಾರಿಸಿ ಬ್ರಹ್ಮನಿಗೆ ಕೊಟ್ಟನು. ಜಾಂಬಋಷಿ ಹಿಂತಿರುಗಿ ನೋಡಿದಾಗ ತಿಪ್ಪೆಯಲ್ಲಿಯ ‘ಡೊಕ್ಕಿ’ ಎಲುವು ಕಾಣಿಸಿತು. ಅದನ್ನು ಕಂಡು ಜಾಂಬಋಷಿ ಮರುಗಿದ.

ಬ್ರಹ್ಮ ಶಿವನ ಹತ್ತಿರ ಬಂದು ‘ಮಂಗಲಸೂತ್ರ’ ಮತ್ತು ಕಾಲುಂಗರವನ್ನು ಕೊಟ್ಟನು. ಜಾಂಬಋಷಿಯ ಭಕ್ತಿಗೆ ಮೆಚ್ಚಿದ ಶಿವನು ಜಾಂಬಋಷಿಯನ್ನು ಕರೆದು ಬೇಕಾದ ವರ ಕೇಳು ಕೊಡವೆನೆಂದನು. ಅದಕ್ಕೆ ಜಾಂಬಋಷಿ ಪಚ್ಚಮುನಿಗೆ ಜೀವಂತ ಮಾಡಿ ಕೊಡಬೇಕೆಂದು ಕೇಳಿಕೊಂಡನು. ಆಗ ಶಿವನು ತಿಪ್ಪೆಯಲ್ಲಿ ಬೀಸಾಡಿದ ‘ಡೊಕ್ಕಿ’ ಎಲುವನ್ನು ತರಲಿಕ್ಕೆ ಹೇಳಿದ. ಅದಕ್ಕೆ ಜಾಂಬಋಷಿ ಒಪ್ಪದೆ ಒಮ್ಮೆ ಬೀಸಾಡಿದ ಎಲುವನ್ನು ಮತ್ತೊಮ್ಮೆ ಮುಟ್ಟುವುದಿಲ್ಲ ಎಂದಾಗ ಶಿವನು ತನ್ನ ಮಂತ್ರ ಶಕ್ತಿಯಿಂದ (ಪಚ್ಚಮುನಿಯ)’ಡೊಕ್ಕಿ’ ಎಲುವಿಗೆ ಜೀವಕಳೆ ತುಂಬಿದಾಗ, ಪಚ್ಚಮುನಿ ಎಚ್ಚರವಾದನು. ನಿನ್ನ ಮಗನಿಗೆ ಕರೆದುಕೋ ಎಂದು ಜಾಂಬಋಷಿಗೆ ಹೇಳಿದ. ಅದಕ್ಕೆ ಜಾಂಬಋಷಿ ಒಪ್ಪಲಿಲ್ಲ. ಹಾಗಾದರೆ ಅವನಿಗೆ ಮನೆ ಕಟ್ಟಿಕೊಡಬೇಕೆಂದನು. ಮನೆ ಕಟ್ಟಿಕೊಟ್ಟರೆ ಆಸ್ತಿಯಲ್ಲಿ ಪಾಲುದಾರನಾಗುತ್ತಾನೆಂದನು. ಅದಕ್ಕೆ ಶಿವನು ಯಾವುದಾದರೊಂದು ಕಾಯಕ ಹಚ್ಚಿಕೊಡಬೇಕೆಂದು ಕೈ ಹಿಡಿದು ಹೊರಟನು. ಈ ಸಂಗತಿಯನ್ನರಿತ ಜಾಂಬಋಷಿ ನನ್ನ ಮಗನಿಗೆ ಬೇರೆಯವರ ಹತ್ತಿರ ಕಳುಹಿಸುವುದು ಬೇಡವೆಂದು ಆಗಲೂ ನನ್ನ ಮಗನೆ, ಈಗಲೂ ನನ್ನ ಮಗನೆ, ಯಾವಾಗ ‘ಡೊಕ್ಕಿ’ ಎಲುವಿನಿಂದ ಪುರ್ನಜನ್ಮ ಪಡೆದುಕೊಂಡಿದ್ದಾನೆ ಅಂದ ಮೇಲೆ ಇವನ ಹೆಸರು ‘ಡೊಕ್ಕಲಿ’ ಎಂದು ಕರೆದು ಅನ್ನ ನೀರು ಹಾಕಿ ಸಲಹುತ್ತೇನೆಂದು ಶಿವನ ಕೈಯಿಂದ ಬಿಡಿಸಿಕೊಂಡನು.

ಇಬ್ಬರ ತಿಕ್ಕಾಟದಲ್ಲಿ ಸಾಯುವುದು ಬೇಡವೆಂದು ಡಕ್ಕಲಿಗನು ಜಾಂಬಋಷಿಗೆ ಕೆಲವು ಕರಾರು ಹಾಕಿದನು. ಕುಳಿತಲ್ಲಿಯೇ ಅನ್ನ ನೀರು ಹಾಕಿ ಸಾಕುವುದು ನಿಮ್ಮಿಂದ ಆಗುತ್ತದೋ ಇಲ್ಲವೋ?

“ಒಂದು ಕೊಡ ನೀರ ತರಾಂವಲ್ಲ
ಹೊಳಿಬಿಟ್ಟ ಹೊಳಿನೀರ ಕುಡ್ಯಾಂವಲ್ಲ
ಕಲ್ಲುಹಿಡಿದ ಬೀಸಾಂವಲ್ಲ
ಒನಕಿ ಹಿಡದ ಕುಟ್ಟಾಂವಲ್ಲ
ನಿನ್ನ ಹತ್ರ ಕೈ ಒಡ್ಡಿದಾಂಗ
ಬೇರೆಯವ್ರ ಹತ್ರ ಕೈ ಒಡ್ಡಾಂವಲ್ಲ”

ಈ ಕೆಲವು ಕರಾರುಗಳಿಗೆ ಒಪ್ಪಿಕೊಂಡರೆ ಖಂಡಿತವಾಗಿಯೂ ನಿಮ್ಮ ಹತ್ತಿರ ಇರುವೆನು. ಇಲ್ಲವಾದರೆ ಈಗಲೇ ಶಿವನ ಜೊತೆಗೆ ಹೋಗಿ ಬಿಡುವೆನೆಂದನು. ಅದಕ್ಕೆ ಜಾಂಬಋಷಿ ಡಕ್ಕಲಿಗನಿಗೂ ಒಂದು ಕರಾರು ಹಾಕಿದನು.

“ನನಗೆ ಸಲಾಮ್‌ ಹಾಕುವುದು ಬಿಟ್ಟು
ಬೇರೆಯವರಿಗೆ ಸಲಾಮ್‌ ಹಾಕಿದ್ರ
ಎರಡು ಕೈ ಕತ್ತರಿಸಿ ಬಿಡತಿನಿ
ನನ್ನ ಮನಿ ಬಿಟ್ಟು ಬೇರೆಯವರ
ಮನಿಗಿ ಭಿಕ್ಷಕ್ಕ ಹೋದ್ರ
ಎರಡು ಕಣ್ಣ ತಗದ ಬಿಡತಿನಿ”

ಈ ಮೇಲಿನ ಕರಾರುಗಳಿಗೆ ಒಪ್ಪಿಕೊಂಡ ಡಕ್ಕಲಿಗನು ಜಾಂಬ ಋಷಿಯ ಹತ್ತಿರವೇ ಉಳಿದನು.

ಡಕ್ಕಲಿಗನು ಶಿವನನ್ನು ಕುರಿತು ಕೆಲವು ಮಾತುಗಳನ್ನು ನಡೆಸಿ ಕೊಡಬೇಕೆಂದು ಕೇಳಿಕೊಂಡೆನು.

“ಕುಳಿತು ಕೊಳ್ಳಲಿಕ್ಕ ಕುದ್ರಿ ಕೊಡಬೇಕು
ನಿಂತ್ರ ಒಂಟಿ ಕೊಡಬೇಕು
ನಾನ್‌ ಸತ್ರ ಐಗೋಳ ಹುಗಿಬೇಕು
ನನ್ನ ಕುದ್ರಿ ಸತ್ರ ಅಗಸ ಹುಗಿಬೇಕು
ನನ್ನ ನಾಯಿ ಸತ್ರ ನಾವದಿಗ ಹುಗಿಬೇಕು”

ಡಕ್ಕಲಿಗನ ಕೆಲವು ಕರಾರುಗಳಿಗೆ ಒಪ್ಪಿಕೊಂಡ ಶಿವನು ತಥಾಸ್ತು ಎಂದು ಹೇಳಿ ಡಕ್ಕಲಿಗನ ಆಗು ಹೋಗುಗಳಿಗೆ ಜಾಂಬಋಷಿಯೇ ಜವಾಬ್ದಾರನೆಂದು ಅವನನ್ನು ಜಾಂಬಋಷಿಗೆ ಒಪ್ಪಿಸಿ ಹೊರಟನು.

ಅಂದಿನಿಂದ ಜಾಂಬಋಷಿ ಅನುಯಾಯಿಗಳೇ ಮಾದಿಗರಾದರು. ಹೀಗೆ ಶಿವನ ಮಂತ್ರಶಕ್ತಿಯಿಂದ ಮರುಜೀವ ಪಡೆದುದರಿಂದ ಶಿವನ ಅನುಯಾಯಿಗಳೇ ಡಕ್ಕಲಿಗರಾದರೆಂದು ಪ್ರತೀತಿ.

ಈ ಮೇಲಿನ ಕಥೆ ಮೇಲುನೋಟಕ್ಕೆ ಜನಪದ ಕಥೆಗಳ ಅನೇಕ ಆಶಯಗಳನ್ನು ಒಳಗೊಂಡಿರುವುದು ಕಂಡು ಬಂದರೂ ಒಂದು ದೃಷ್ಟಿಯಿಂದ ಇದರಲ್ಲಿ ಐತಿಹ್ಯ, ದಂತಕಥೆ ಮತ್ತು ಪೌರಾಣಿಕ ಅಂಶ ಅಡಗಿ ಕೊಂಡಿರುವುದನ್ನು ಕಾಣಬಹುದು.