ದೈವಗಳಲ್ಲಿರುವ ಸಂಬಂಧಗಳ ಮೂಲಕ ಕೆಲವು ವಿಶಿಷ್ಟ ಲಕ್ಷಣಗಳನ್ನು ಗುರುತಿಸ ಬಹುದಾಗಿದೆ.  ಜನಪದ ದೈವಗಳಿಗೆ ಗಂಡ ಇಲ್ಲದೇ ಇರಬಹುದು. ಆದರೆ ಸೋದರನಿಲ್ಲದ ಜನಪದ ದೈವಗಳಿಲ್ಲವೆನ್ನಬಹುದು. ಮಾತೃಪ್ರಧಾನ ಸಂಸ್ಕೃತಿಯಲ್ಲಿ ಸೋದರ ಸಂಬಂಧಗಳು ಹೆಚ್ಚಿದ್ದರೆ, ಪಿತೃಪ್ರಧಾನ ಸಂಸ್ಕೃತಿಯಲ್ಲಿ ಪತಿ ಸಂಬಂಧವೇ ಪ್ರಮುಖವಾಗಿ ಕಾಣುತ್ತದೆ. ಮಾತೃಪ್ರಧಾನ ಸಂಸ್ಕೃತಿಯನ್ನು ಬಿಂಬಿಸುವ ಜನಪದ ದೈವಗಳಲ್ಲಿ ಸೋದರ ಸಂಬಂಧಗಳು ಮುಖ್ಯವಾಗುತ್ತವೆ. ಹೀಗೆಂದಾಕ್ಷಣ ಜನಪದ ದೈವಗಳಲ್ಲಿ ದೈಹಿಕ ಸಂಬಂಧಗಳು ಇಲ್ಲವೆಂತಲ್ಲ. ಅಂತಹ ಕೆಲಸಂಬಂಧಗಳೂ ಕೂಡ ವಿಶಿಷ್ಟ ರೀತಿಯ ಗಮನ ಸೆಳೆಯುತ್ತವೆ.

ಪ್ರಸಿದ್ಧ ದೈವಗಳಾದ ಎಲ್ಲಮ್ಮ ಮತ್ತು ಮೈಲಾರಲಿಂಗ ಸೋದರ ಸಂಬಂಧಕ್ಕೆ ಹೆಸರಾಗಿವೆ. ಎಲ್ಲಮ್ಮ ಮೈಲಾರಲಿಂಗನ ತಂಗಿಯೆಂಬುದು ಪ್ರಚಲಿತವಾಗಿದೆ. ಗೊಂದಲಿಗರ ಅನೇಕ ಹಾಡುಗಳಲ್ಲಿ ಮೈಲಾರಲಿಂಗ ಸೋದರನಾಗಿ ಕಾಣಿಸಿಕೊಳ್ಳುತ್ತಾನೆ. ಇವೆರಡೂ ಸಂಪ್ರದಾಯದ ಆಚರಣೆಗಳಲ್ಲಿ ಸಾಮ್ಯತೆಯಿದೆ.

ಗೊಡಚಿ ಈರಣ್ಣ ಮತ್ತು ಎಲ್ಲಮ್ಮ ಇವರೂ ಕೂಡ ಅಣ್ಣ – ತಂಗಿಯರೇ ಎಂಬುದು ಎರಡೂ ಸಂಪ್ರದಾಯಗಳ ಆಚರಣೆಯಿಂದ ತಿಳಿದು ಬರುತ್ತದೆ. ಬನದ ಹುಣ್ಣಿಮೆಗೆ ಸವದತ್ತಿಯ ಎಲ್ಲಮ್ಮನ ಜಾತ್ರೆ ಪ್ರಾರಂಭವಾಗುತ್ತದೆ. ಗೊಡಚಿ ಈರಣ್ಣನ ಪಾಲಿಕೆ ಬರಲಾರದೆ ಎಲ್ಲಮ್ಮನ ತೇರು ಸಾಗುವಂತಿಲ್ಲ. ಗೊಡಚಿ ಈರಣ್ಣ, ಎಲ್ಲಮ್ಮನ ಅಣ್ಣ ನೆಂಬುದರ ಕುರಿತು ಅನೇಕ ಜನಪದ ಹಾಡುಗಳಲ್ಲಿ ಪ್ರಸ್ತಾಪವಿದೆ.

ಈರಭದ್ರ ಮತ್ತು ಜೌಡಮ್ಮ ಇವರದೂ ಕೂಡ ಅಣ್ಣ-ತಂಗಿಯ ಸಂಬಂಧವೇ ಆಗಿದೆ. ಈರಭದ್ರನು ದಕ್ಷಬ್ರಹ್ಮನ ಸಂಹಾರ ಮಾಡುವ ಸಂದರ್ಭದಲ್ಲಿ ಅನೇಕ ವೈರಿಗಳನ್ನು ಸಂಹರಿಸುತ್ತಾ ನಡೆದ. ಆ ವೈರಿಗಳ ರಕ್ತಭೂಮಿಗೆ ಬಿದ್ದಾಗ ಅವರು ಒಂದೊಂದು ಹನಿ ರಕ್ತಕ್ಕೆ ಒಬ್ಬೊಬ್ಬ ವೀರರು ಹುಟ್ಟುತ್ತಿದ್ದರಂತೆ. ಹೀಗೆ ವೈರಿಗಳು ಹುಟ್ಟಿ ರಕ್ತ ಬೀಜಾಸುರರಾಗಿ ಬೆಳೆಯಲು ಅವಕಾಶ ಕೊಡದೆ ಚೌಡಮ್ಮ ಈರಭದ್ರನ ತಂಗಿಯಾಗಿ ಬಂದು ನಾಲಿಗೆ ಚಾಚಿ ಅವರ ರಕ್ತ ಕುಡಿದು ಭೂಮಿಗೆ ರಕ್ತ ಬೀಳದಂತೆ ಮಾಡುತ್ತಿದ್ದಳಂತೆ. ಜನಪದ ಹಾಡು-ಆಚರಣೆಗಳಲ್ಲಿ ಈ ಪ್ರಸಂಗವು ಉಲ್ಲೇಖಿತವಾಗಿದೆ.

ಮೈಲಾರಲಿಂಗನ ದಾಂಪತ್ಯದ ಸಂಬಂಧಗಳು ವರ್ಣರಂಜಿತವಾಗಿವೆ. ಗಂಗಿಮಾಳವ್ವ ಮತ್ತು ಕುರುಬತ್ತೆವ್ವ ಇಬ್ಬರು ಪತ್ನಿಯರನ್ನು ಹೊಂದಿದ್ದ ಈ ದೈವದ ಕಥೆ ಅನೇಕ ಸಾಂಸ್ಕೃತಿಕ ಸಂಗತಿಗಳನ್ನು ತನ್ನೊಡಲಳಗಿಟ್ಟುಕೊಂಡಿದೆ.

ನಂಜನಗೂಡಿನ ನಂಜುಂಡನಿಗೂ ಮತ್ತು ಮೈಸೂರಿನ ಚಾಮುಂಡಿಗೂ ಸಂಬಂಧವಿದ್ದ ಬಗೆಗೆ ಜನಪದ ತ್ರಿಪದಿಗಳಲ್ಲಿ ಉಲ್ಲೇಖವಿದೆ. ನಂಜುಂಡ ಮತ್ತು ಚಾಮುಂಡಿ ಗಂಡ-ಹೆಂಡತಿಯರುಯೆಂಬ ಅಂಶ ಹಾಡುಗಳಿಂದ ತಿಳಿದುಬರುತ್ತದೆ.

“ಚಾಮುಂಡಿ ಮನೆಗೆ ಹೋಗ್ಯಾನ ನಂಜಯ್ಯ
ಹೋಳಡಕೆ ಬಿಳಿ ಎಲೆ ಕೈಯಲ್ಲಿ | ಹಿಡಕಂಡು
ಚಾಮುಂಡಿ ಬಾಗಿಲು ತೆಗೆಯೆಂದ”

“ಕದವ ತೆಗೆದಾಳೋ ಕೈಯ ಮುಗಿದಾಳೋ
ದೇವಾಂಗದ ಸೆರಗ ಹಿಡಿದಾಳೋ ನಂಜಪ್ಪ
ಸೆರಗಬಿಡು ಸೇವಂತಿಗೆ ಕೊಟ್ಟೇನು ” ||

ಈ ತ್ರಿಪದಿಗಳಲ್ಲಿ ನಂಜುಂಡ ಮತ್ತು ಚಾಮುಂಡಿಯರ ಪ್ರಣಯದ ಪ್ರಾರಂಭದ ಹಂತವನ್ನು ಕಾಣಬಹುದಾಗಿದೆ. “ಚಾಮುಂಡಿಯ ಬಟ್ಟಮೊಲೆಯನ್ನು ಬಿಡಲೊಲ್ಲ” ಎಂಬ ತ್ರಿಪದಿಯಂತೂ ನಂಜುಂಡನ  ರಸಿಕತೆಗೆ ಸಾಕ್ಷಿಯಂತಿದೆ.

ಓಬುಳರಾಯನ ರಸಿಕತೆ ವರ್ಣರಂಜಿತವಾದುದು. ಲಕ್ಷ್ಮಮ್ಮ ಮತ್ತು ಕೆಂಚಮ್ಮ ಎಂಬಿಬ್ಬರು ದೈವಗಳನ್ನು ಮದುವೆಯಾಗಿದ್ದ ಓಬುಳರಾಯ ಮೂರನೆಯವಳ ಕಡೆ ಕಣ್ಣು ಹಾಯಿಸುತ್ತಾನೆ.

“ಬಲಚರಿ ಲಕ್ಷ್ಮಮ್ಮ ಎಡಚರಿ ತೊಳಸಮ್ಮ
ಅವರಿಬ್ಬರ ನಡುವೆ ಓಬುಳರಾಯ | ಕೂತ್ಕೊಂಡು
ಒಬ್ಬೊಬ್ಬರಿಗೊಂದು ರೀತಿ ಒಲಿದಾನು”

“ಅಳಬೇಡ ಅಳಬೇಡ ಮಲೆಯ ಸೋಲಗರ ಮಗಳೆ
ಅವರಿಬ್ಬರು ನನಗೆ ಕಡೆಗಣ್ಣು  | ಕಂಡರೆ
ನಿನ ಮೇಲೆ ಮಾತ್ರ ನಿಜಗಣ್ಣು” ||

ಇಂತಹ ಅನೇಕ ತ್ರಿಪದಿಗಳಲ್ಲಿ ಓಬುಳರಾಯನ ಹೆಂಡತಿಯರನ್ನು ವರ್ಣಿಸಲಾಗಿದೆ. ಬೆಟ್ಟದ ಮಲ್ಲನು ಗಿರಿಜೆಯನ್ನು ಕಂಡು ಜಪವನ್ನೇ ಮರೆತು ಕೂಡುತ್ತಾನೆ.

“ಕಾಡುಗಣ್ಣೋಳೆ ಕೂಡೀದ್ಹುಬ್ಬಿನೋಳೆ
ಕೋಡೀಲಿ ನೀರಾ ಮೊಗಿಯೋಳೆ | ಗಿರಿಜೆ ಕಂಡು
ಮಲ್ಲಯ್ಯ ಜಪವ ಮರೆತಾನೊ”

ಈ ಶಕ್ತಿದೈವಗಳ ಸೌಂದರ್ಯಕ್ಕೆ ಮಾರುಹೋದ ಕೆಲವು ಗಂಡುದೈವಗಳು ಹೀಗೆ ಜಪ-ತಪಮರೆತು ತಿರುಗಿದ್ದನ್ನು ಜನಪದ ಕಾವ್ಯ ಮರೆಯದಂತೆ ಹಿಡಿದಿಟ್ಟಿದೆ. ಭೈರವನು ಮಾಳವ್ವನಿಗೆ ಮನಸೋತ ಪ್ರಸಂಗವನ್ನು ಒಂದು ತ್ರಿಪದಿಯಲ್ಲಿ ಹೀಗೆ ಹೇಳಲಾಗಿದೆ.

“ತುಪ್ಪದ್ಹರವಿಗೆ ಸೋತ ತೆಕ್ಕೆ ತುರುಬಿಗೆ ಸೋತ
ತುಪ್ಪ ಮಾರುವ ಕುರುಬತಿ | ಕೊರಳಲ್ಲಿ
ಮುತ್ತು ಕಂಡು ಭೈರವ ಮನಸೋತ”

ಇಲ್ಲಿ ಬರುವ ತುಪ್ಪದ್ಹರವಿ, ತೆಕ್ಕೆ ತುರುಬು ಗಮನಿಸುವಂತಿವೆ. ನಮ್ಮ ದೇವತೆಗಳು ತುಂಬಾ ರಸಿಕತೆಯಿಂದ ಕೂಡಿದ್ದವೆನ್ನುವುದಕ್ಕೆ ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ಜೋಕುಮಾರನ ವಿಷಯವನ್ನಂತೂ ವರ್ಣಿಸುವುದೇ ಬೇಕಾಗಿಲ್ಲ. ಆತ ಫಲದೇವತೆಯೆಂದೇ ಜನಪ್ರಿಯನಾಗಿದ್ದಾನೆ. ಜೋಕುಮಾರ ರಂಭೆಯರ ಮನೆಗೆ ಹೋಗುವ ಸನ್ನಿವೇಶವನ್ನು ಒಂದು ತ್ರಿಪದಿ ಹೀಗೆ ಬಿಚ್ಚಿಡುತ್ತದೆ.

“ನಿಂಬೆಯ ಹಣ್ಣನ್ನ ಅಂಬರಕೆ ತೂರುತ
ತುಂಬಿದ ತೋಳ ತಿರುಗುತ | ಜೋಕುಮಾರ
ರಂಭೆಯರ ಮನೆಗೆ ನಡೆತಂದ”

ಇಷ್ಟೊಂದು ಕಾವ್ಯಾತ್ಮಕವಾಗಿ ಈ ದೇವತೆಗಳ ಪ್ರಣಯ ಪ್ರಸಂಗಗಳನ್ನು ಜನಪದರು ತಮ್ಮ ಕಾವ್ಯದಲ್ಲಿ – ಆಚರಣೆಗಳಲ್ಲಿ ದಾಖಲಿಸಿಟ್ಟಿದ್ದಾರೆ. ಇಲ್ಲಿಯ ವೈಶಿಷ್ಟ್ಯವೆಂದರೆ ಅನೇಕ ಹೆಣ್ಣುದೈವಗಳೇ ಗಂಡು ದೈವಗಳನ್ನು ಕರೆಕಳಿಸಿ ಪ್ರೀತಿಸಿವೆ. ಪ್ರೀತಿಯ ವಿವಿಧ ಮುಖಗಳು ಬಿಚ್ಚಿಕೊಂಡಿರುವುದನ್ನಿಲ್ಲಿ ಕಾಣಬಹುದಾಗಿದೆ.