ಉತ್ತರಕನ್ನಡದಲ್ಲಿ ಪ್ರಸಿದ್ಧಿಪಡೆದು ಧಾರ್ಮಿಕ ಕ್ಷೇತ್ರಗಳು ಕೆಲವಿದ್ದು ಅವು ನೈಸರ್ಗಿಕ, ಪೌರಾಣಿಕ, ಧಾರ್ಮಿಕ, ಸಾಂಸ್ಕೃತಿಕ ಕಲಾ ದೃಷ್ಟಿಯಿಂದ ತುಂಬಾ ಹಿರಿಮೆಯುಳ್ಳವಾಗಿದೆ.

ಗೋಕರ್ಣ : ಭಾರತದ ತುಂಬೆಲ್ಲ ಪುಣ್ಯಕ್ಷೇತ್ರವೆಂದು ಪ್ರಸಿದ್ಧಿಪಡೆದಿರುವ ಗೋಕರ್ಣಕ್ಕೆ ಇಂದು ದಿನಂಪ್ರತಿ ಸಾವಿರ ಸಾವಿರ ಸಂಖ್ಯೆಯಲ್ಲಿ ಯಾತ್ರಿಕರು ಬಂದು ಹೋಗುತ್ತಿದ್ದಾರೆ. ಗಂಗಾವಳಿ ಮತ್ತು ಅಘನಾಶಿನಿ ನದಿಮುಖಗಳ ನಡುವಿನ ಗೋಕರ್ಣ-ಮಂಡಲ ಪ್ರಕೃತಿರಮ್ಯ ನೆಲೆಯಾಗಿದೆ. ಇಲ್ಲಿಯ ಸಮುದ್ರದಂಡೆ, ಸನಿಹದಲ್ಲಿರುವ ಶತಶೃಂಗ ಪರ್ವತದ ಸಾಲುಗಳು ಊರಿನ ಸೌಂದರ್ಯವನ್ನು ಹೆಚ್ಚಿಸಿವೆ. ರಾವಣೇಶ್ವರನಿಂದ ಸ್ಥಾಪಿಸಲ್ಪಟ್ಟಿದೆಯೆಂಬ ಐತಿಹ್ಯವುಳ್ಳ ಮಹಾಬಲೇಶ್ವರ ಲಿಂಗವು ಶಿವನ ಆತ್ಮಲಿಂಗವೆಂದು ಖ್ಯಾತಿ ಪಡೆದಿದೆ. ಇಲ್ಲಿ ಗುಡಿಗಳು ತೀರ್ಥಗಳು ನೂರಾರು. ಇಲ್ಲಿಯ ಶಿಲೆಯಲ್ಲ ಲಿಂಗ, ಜಲವೆಲ್ಲ ತೀರ್ಥ. ಸಾಲಿಗ್ರಾಮ ಪೀಠದ ಮಧ್ಯದಲ್ಲಿರುವ ಕೇವಲ ಅಂಗುಷ್ಟಗಾತ್ರದ ಆತ್ಮಲಿಂಗದ ದರ್ಶನ ಆ ಸ್ಪರ್ಶನದಿಂದ ಭಕ್ತಜನಕೋಟಿ ಪುನೀತವಾಗುವದು, ಗಣಪತಿ, ವೆಂಕಟರಮಣ, ತಾಮ್ರಗೌರಿ, ಭದ್ರಕಾಳಿ, ಆದಿಗೋಕರ್ಣ, ಬಟ್ಟೆ ವಿನಾಯಕ, ಕೇತಕಿ ವಿನಾಯಕ, ಸುಂದರ ಗಣಪತಿ, ಪರಶುರಾಮ ಗೋಪಾಲಕೃಷ್ಣ, ಕಲಕಲೇಶ್ವರ, ಸುಬ್ರಹ್ಮಣ್ಯ ಗುಡಿಗಳು ಹಾಗು ಪರ್ತಗಾಳಿಮಠ, ಬಂಡೀಕೇರಿಮಠ, ಕೈವಲ್ಯಮಠ, ದಾಸಮಠ ಕಾಮೇಶ್ವರಮಠ, ವೀರಶೈವ ಮಠಗಳು ವಿಶಾಲವಾಗಿದ್ದು ನೋಡತಕ್ಕವುಗಳಾಗಿವೆ. ಊರ ಮಧ್ಯದಲ್ಲಿ ಕೋಟಿತೀರ್ಥವೆಂಬ ಸುಂದರವಾದ ವಿಸ್ತೀರ್ಣವಾದ ಪುಷ್ಕರಣಿಯಿದ್ದು ಊರ ಸುತ್ತಲೆಲ್ಲ ರಾಮತೀರ್ಥ, ಜಟಾಯುತೀರ್ಥ, ಅಗಸ್ತ್ಯ, ಮಾಲಿನಿ, ಸುಮಾಲಿನಿ, ಸೂರ್ಯ ಚಂದ್ರಾದಿ ಮೊದಲ್ಗೊಂಡು ಅನೇಕ ತೀರ್ಥಗಳು ಗೋಗರ್ಭ, ಉಮಾಮಹೇಶ್ವರ, ಅಕ್ಕತಂಗಿಯರ ಕರೆ, ಅಶೋಕೆ ಮೊದಲಾದ ನೆಲೆಗಳು ಪ್ರೇಕ್ಷಣೀಯವಾಗಿವೆ. ಗೋಕರ್ಣವನ್ನು ಕಂಡು ನಲಿಯಬೇಕಾದರೆ ಕಡಲತೀರದಲ್ಲಿ ಶತಶೃಂಗ ಪರ್ವತದ ಅಕ್ಕ ಪಕ್ಕದಲ್ಲಿರುವ ಪ್ರದೇಶಗಳಿಗೆ ಹೋಗಿ ನೋಡಿಬರಬೇಕು. ಇಲ್ಲಿಯ ಕಡಲದಂಡೆ ಆಕರ್ಷಕ. ಕುಡ್ಲೆ ಬೀಚ ಹಾಗು ಓಂ ಬೀಚ ತುಂಬಾ ಸೊಗಸಾಗಿದ್ದು ಸಾವಿರಾರು ವಿದೇಶಿಯರು ಸದಾ ಇಲ್ಲಿ ಬಂದು ನೆಲೆಸಿರುತ್ತಾರೆ.

ಗೋಕರ್ಣದ ಬಳಿಯಿರುವ ತದಡಿ ಮತ್ಸ್ಯಬಂದರ, ಸಾಣಿಕಟ್ಟೆಯ ಉಪ್ಪಿನ ಆಗರಗಳು ನೋಡತಕ್ಕಂಥವುಗಳಾಗಿವೆ. ಗೋಕರ್ಣವನ್ನು ಪ್ರವೇಶಿಸುವಾಗ ಸಿಗುವ ಹಳ್ಳಿ ತೊರ್ಕೆಯು ಪೂರ್ವಕಾಲದಲ್ಲಿ ತಗರಪುರವೆಂದು ಪ್ರಸಿದ್ಧಿ ಪಡೆದಿದ್ದು ಶ್ರೀ ಹರ್ಷನು ಬರೆದ “ನಾಗಾನಂದ” ನಾಟಕದ ಕತೆಯು ನಡೆದ ಜೀಮೂತವಾಹನನ ನಾಡಾಗಿದೆ. ಇಲ್ಲಿಯ ಪ್ರಮುಖ ದೇವರಾದ ಶ್ರೀ ಕೆಂಗಳಾಪರಮೇಶ್ವರಿ ದೇವಾಲಯವು ತುಂಬಾ ಪ್ರಶಾಂತವೂ ಸುಂದರವೂ ಆಗಿರುವದಲ್ಲದೆ ಕಾವಿಕಲೆಯ ಶ್ರೇಷ್ಠ ಚಿತ್ರಣ ವಿನ್ಯಾಸಗಳನ್ನು ದೇವಾಲಯದ ಗೋಡೆಯ ಮೇಲೆ ಕಾಣಬಹುದು.

ಗೋಕರ್ಣದ ಕುರಿತು ಸ್ಕಂದಪುರಾಣ, ರಾಮಾಯಣ ಮಹಾಭಾರತಾದಿ ಗ್ರಂಥಗಳಲ್ಲಿ ಕಾಳಿದಾಸ ಪಂಪಾದಿಗಳ ಕಾವ್ಯಗಳಲ್ಲಿ ಉಲ್ಲೇಖವಿದ್ದು ಬಹು ಪ್ರಸಿದ್ಧ ಕ್ಷೇತ್ರವಾಗಿದೆ. ಮಹಾಶಿವರಾತ್ರಿ ಜಾತ್ರೆಯು ನಡೆದಾಗ ಎಳೆಯಲ್ಪಡುವ ರಥವು ದೊಡ್ಡದಾಗಿದ್ದು ಕಲಾತ್ಮಕ ಚಿತ್ರಗಳಿಂದಲಂಕೃತವಾಗಿದೆ.

ಯಾಣ : ಪ್ರಪಂಚದ ಅದ್ಭುತ ತಾಣ ಯಾಣವೆಂದರೆ ಅತಿಶಯೋಕ್ತಿಯೇನಲ್ಲ. “ಹಣವಿದ್ದರೆ ಗೋಕರ್ಣ, ತ್ರಾಣವಿದ್ದರೆ ಯಾಣ ಇಲ್ಲವೇ ರೊಕ್ಕಿದ್ದರೇ ಗೋಕರ್ಣ ಸೊಕ್ಕಿದ್ದರೆ ಯಾಣ” ಎಂಬ ಮಾತು ಜಿಲ್ಲೆಯಲ್ಲಿ ರೂಢಿಯಲ್ಲಿದೆ. ಏಕೆಂದರೆ ಯಾಣಕ್ಕೆ ಯಾತ್ರೆ ಕೈಕೊಳ್ಳುವದು ಹಿಂದೆ ಅಷ್ಟೊಂದು ಸಾಹಸದ ಮಾತೇ ಆಗಿತ್ತು. ಇಂದು ಯಾಣದ ಹತ್ತಿರದವರೆಗೂ ಬಸ್ಸಿನ ರಸ್ತೆಯಾಗಿದೆ. ಕೇವಲ ಒಂದು ಕಿಲೋಮೀಟರ ದೂರವನ್ನಷ್ಟೇ ನಡೆಯಬೇಕಾಗುವದು. ಕುಮಟೆಯಿಂದ ಹರಿಟೆಯ ಬಳಿಯ ಮಾರ್ಗದಿಂದ ಅಂಕೋಲೆಯ ಬದಿಯಿಂದ ಅಚವೆ ಮಾರ್ಗವಾಗಿ ಶಿರಸಿಯಿಂದ ಹೆಗಡೆಕಟ್ಟೆ ಮಾರ್ಗವಾಗಿ ಕಾಡಿನಲ್ಲಿ ಹಾದು ಯಾಣವನ್ನು ತಲುಪಬೇಕು. ವಡ್ಡಿ, ಮತ್ತಿ, ದೇವಿಮನೆ ಘಟ್ಟಗಳು ಸುತ್ತುವರಿಯಲ್ಪಟ್ಟದ್ದರಿಂದ ಯಾವ ದಾರಿಯಲ್ಲಿ ಬಂದರೂ ದುರ್ಗಮ ಬೆಟ್ಟದ ದಾರಿ ತಪ್ಪಿದ್ದಲ್ಲ. ಪ್ರವಾಸದ ಕಾಲದಲ್ಲಿ ಎತ್ತರ ಗಿಡಗಳ ದಟ್ಟ ವಿಸ್ತಾರ ಕಾಡು ತನುಮನದ ಆಯಾಸವನ್ನೆಲ್ಲ ಮರೆಸುತ್ತದೆ.

ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦ ಮೀಟರ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕರೆ ಪರದೆಯಂತೆ ಬೃಹದಾಕಾರದ ಭಯಂಕರವಾದ ಶಿಲಾ ರೂಪವಾಗಿದೆ. ಇದನ್ನು ಮೊದಲೊಮ್ಮೆ ಕಂಡಾಗ ಎಂಥವನಾದರು ನಿಬ್ಬೆರಗಾಗಿ ಪ್ರಕೃತಿ ಮಹಾಕೃತಿಗೆ ತಲೆ ಮಣಿಯಲೇ ಬೇಕು. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ! ಈ ಭೀಮ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ ಎತ್ತರವಾಗಿದ್ದು ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ! ಸ್ಕಂದಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ. ಭಸ್ಮಾಸುರನು ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನ್ನೇ ಸುಡುವದಾಗಿ ಅಟ್ಟಿಸಿಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ. ಸುತ್ತಲಿನ ಅರಣ್ಯ ಪ್ರದೇಶವೆಲ್ಲ ಕಪ್ಪಾದ ಭಸ್ಮಮಯ ಮಣ್ಣಿನಿಂದ ತುಂಬಿರುವದರಿಂದ ಈ ಹೇಳಿಕೆಗೊಂದು ಪುಷ್ಠಿಯೊದಗಿದೆ. ಯಾಣದ ಬಂಡೆಯ ಮೇಲೆಲ್ಲ ಸಾವಿರಾರು ಹಿರಿಜೇನು ಹುಟ್ಟುಗಳು ಕಂಗೊಳಿಸುತ್ತವೆ. ಈ ಹೆಬ್ಬಂಡೆಯಿಂದ ಇಳಿದು ಬಂದ ಪ್ರವಾಹವೆ ಮುಂದೆ ಚಂಡಿಕಾ ನದಿಯಾಗಿ ಅಘನಾಶಿನಿ ನದಿಯನ್ನು ಸೇರುತ್ತದೆ. ಈ ಬಂಡೆಯಿದ್ದ ಬೆಟ್ಟದ ಕೆಳಗಡೆ ನದಿಯಲ್ಲಿ ಸ್ನಾನಮಾಡಿ ಮೇಲೇರಿ ಹೋಗುವಾಗ ಇನ್ನೊಂದು ಕಿರಿಗಾತ್ರದ “ಹೊಲತಿ ಶಿಖರ” (ಮೋಹಿನಿ ಶಿಖರ) ಕಂಗೊಳಿಸುತ್ತದೆ. ಇಂಥ ಹಲವಾರು ಮಹಾಮಹಾ ಬಂಡೆಗಳು ಯಾಣದ ಪರಿಸರದಲ್ಲಿವೆ. ಪ್ರಕೃತಿಯ ಭವ್ಯತೆಯ ದಿವ್ಯದರ್ಶನದಿಂದ ಪುನೀತನಾದ ಪ್ರವಾಸಿಗೆ ಪ್ರವಾಸದ ಪ್ರಯಾಸದ ಅರಿವಾಗುವದಿಲ್ಲ. ಪೂರ್ವಕಾಲದಲ್ಲಿ ಯಾಣದ ಪ್ರದೇಶ ಸಮೃದ್ಧ ಪ್ರದೇಶವಾಗಿದ್ದು “ಯಾಣದ ಎಪ್ಪತ್ತು ಹಳ್ಳಿ” ತುಂಬಾ ಪ್ರಖ್ಯಾತವಾಗಿತ್ತು. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಮಹಾಪುಣ್ಯವಂತೆ. ಕೌಶಿಕ ರಾಮಾಯಣ ಬರೆದ ಬತ್ತಲೇಶ್ವರ ಕವಿ ಇಲ್ಲಿ ವಾಸಿಸಿದ್ದನಂತೆ. ಕುಮಟೆಯಿಂದ ಯಾಣಕ್ಕೆ ಬಸ್ಸಿನ ಸೌಕರ್ಯವಿದೆ.

ಕರಿಕಾನಮ್ಮ : ಹೊನ್ನಾವರ-ಕುಮಟೆಯ ನಡುವೆ ಅರೆಅಂಗಡಿ ಬಳಿ ಅತಿ ಎತ್ತರ ಗುಡ್ಡದ ಮೇಲೆ ಕರಿಕಾನಮ್ಮ ದೇವಾಲಯವನ್ನು ನಿರ್ಮಿಸಿದ್ದಾರೆ. ಕರಿಕಾನಮ್ಮನಗುಡ್ಡ ಎಂಬ ಹೆಸರಿನಿಂದ ಕರಿಯಲ್ಪಡುವ ಈ ನೆಲೆಯಲ್ಲಿ ನಿಂತು ದೂರ ಮತ್ತು ಕೆಳಗೆ ದೃಷ್ಟಿ ಹರಿಸಿದರೆ ಕಾಣುವ ನೋಟವನ್ನು ರಸಿಕರು ಎಂದೆಂದಿಗೂ ಮರೆಯಲಾರರು. ದೂರದಲ್ಲಿ ಸಂಜೆಯ ಸೂರ್ಯ ಸಮುದ್ರದಲ್ಲಿ ಮುಳುಗುವ ನೋಟ ನಯನ ಮನೋಹರ. ಸುತ್ತಲಿನ ದೃಶ್ಯ ಬಣ್ಣನೆಗೆ ನಿಲುಕದು. ದೇವತಾ ವಿಗ್ರಹವೆಂದು ಪೂಜಿಸಲ್ಪಡುವ ನೈಸರ್ಗಿಕ ಶಿಲಾಮೂರ್ತಿ ಬೃಹದಾಕಾರವಾಗಿದೆ. ಇಲ್ಲಿಂದ ಸ್ವಲ್ಪ ಮೇಲೆ ಅಡಿಕೆಯಷ್ಟೇ ಗಾತ್ರದ ನಿರಾವರಣ ಲಿಂಗದಮೇಲೆ ಸದಾಕಾಲ ನೀರು ಬೀಳುತ್ತಿರುತ್ತದೆ. ಇದಕ್ಕೆ ಒಂದಡಿಕೆ ಶಿವಲಿಂಗ ದೇವರೆಂದು ಕರೆಯುತ್ತಾರೆ.

ಇಡುಗುಂಜಿ : ಶರಾವತಿ ನದಿಯ ದಕ್ಷಿಣ ದಂಡೆಯಲ್ಲಿ ಹೊನ್ನಾವರದಿಂದ ೧೦ ಕಿ.ಮೀ. ದೂರದಲ್ಲಿ ಹವ್ಯಕರ ಆರಾಧ್ಯದೇವನಾದ ಗಣಪತಿಯ ವಿಗ್ರಹ ಅತ್ಯಂತ ಭವ್ಯವಾಗಿದ್ದು ಭಾವುಕರಲ್ಲಿ ಭಕ್ತಿಯ ಸೆಲೆಯನ್ನು ಚಿಮ್ಮಿಸುತ್ತದೆ. ಒಂದು ಕೈಯಲ್ಲಿ ಗಂಟೆ ಇನ್ನೊಂದು ಕೈಯಲ್ಲಿ ಮೋದಕವಿರುವ ವಿಗ್ರಹವು ೮೦ ಸೆಂಟಿಮೀಟರ ಎತ್ತರವಿದ್ದು ೩೫ ಸೆಂಟಿಮೀಟರ ಪೀಠದಲ್ಲಿ ನೆಲೆಸಿದೆ. ಸ್ಕಂದಪುರಾಣದಂತೆ ನಾರದನಿಂದ ಪ್ರತಿಸ್ಥಾಪಿಸಲ್ಪಟ್ಟ ಈ ಮಹಾಗಣಪತಿಯ ಪದತಳದಲ್ಲಿ ನವಿಲುಗರಿಯ ಕುಂಚಿಯನ್ನು ಇಟ್ಟು ಪೂಜಿಸಿದ್ದರಿಂದ ‘ಇಟ್ಟಕುಂಜಿ’ ಇಟಗುಂಜಿಯಾಯಿತೆಂದು ಹೇಳಿಕೆಯಿದೆ. ಇತ್ತೀಚೆಗೆ ಗುಡಿಯ ಜೀರ್ಣೋದ್ದಾರ ನಡೆದಿದೆ. ಇಡಗುಂಜಿಯ ಸುತ್ತಲಿನ ಪ್ರದೇಶ ಪ್ರಕೃತಿ ರಮ್ಯತೆಯಿಂದೊಡಗೂಡಿದೆ.

ಮುರ್ಡೇಶ್ವರ : ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದಲೆ ಇನ್ನು ನಾಲ್ಕು ಲಿಂಗಗಳು ಈ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟವು ಎಂಬುದು ಪುರಾಣದ ಕತೆ. ಇನ್ನಿತರ ನಾಲ್ಕು ಕ್ಷೇತ್ರಗಳೆಂದರೆ ಮುರುಡೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಸಜ್ಜೇಶ್ವರ. ಮುರ್ಡೇಶ್ವರವು ಭಟಕಳದಿಂದ ೧೬ ಕಿ.ಮಿ. ದೂರದಲ್ಲಿ ಕಡಲದಂಡೆಯಲ್ಲಿದ್ದು ಪ್ರಾಚೀನಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕತೆಗಳ ಪ್ರಸಿದ್ಧ ತಾಣವಾಗಿತ್ತು. ಅಂತೆಯೆ ಇಂದಿಗೂ ಅಲ್ಲ ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ಹಲವು ದೇವಾಲಯಗಳು, ಕೆರೆ, ವೀರರಮನೆ, ವೀರಗಲ್ಲುಗಳು, ಮರದಿಂದ ತಯಾರಿಸಿದ ೧೬ ಮಾಸತಿಯರ ಕುರುಹುಗಳು ಇವೆಲ್ಲಕ್ಕೂ ಕಿರೀಟವಿಟ್ಟಂತೆ ಸುಂದರ ನೆಲೆಯಲ್ಲಿ ಶೋಭಿಸುತ್ತಿರುವ ಮುರುಡೇಶ್ವರ ದೇವಾಲಯ ಹಾಗೂ ಹಳೆಯ ದೇವಾಲಯಗಳ ಅವಶೇಷಗಳನ್ನೆಲ್ಲ ಕಾಣಬಹುದು. ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ಬಳಿಸಾರಿದಂತೆ ಎರಡು ಆನೆಗಳು ಪ್ರವಾಸಿಕರನ್ನು ಸ್ವಾಗತಿಸುವವು. ಸಮುದ್ರದಲ್ಲಿ ಒಳಸೇರಿದ ಕಂದುಗಿರಿ ಎಂಬ ಗುಡ್ಡದ ಮೇಲೆ ಮುರುಡೇಶ್ವರನ ದೇವಾಲಯವನ್ನು ಹೊಸದಾಗಿ ದಾಕ್ಷಿಣಾತ್ಯ ಶಿಲ್ಪದಲ್ಲಿ ನಿರ್ಮಿಸಲಾಗಿದೆ. ಸುತ್ತಲೂ ವಿಸ್ತಾರವಾದ ಚಂದ್ರಶಾಲೆಯಿದ್ದು ಗಣಪತಿ, ಸುಬ್ರಹ್ಮಣ್ಯ, ಹನುಮಂತ, ಪಾರ್ವತಿಯರ ಪೀಠಗಳಿವೆ. ಮುರ್ಡೇಶ್ವರ ದೇವಾಲಯದ ಗೋಪುರ ಹಾಗು ಸುತ್ತಲಿನ ಕಟ್ಟಡಗಳ ಶಿಲ್ಪಗಳು ಉತ್ತಮ ಮಟ್ಟದ್ದಾಗಿದ್ದು ಆಕರ್ಷಕವಾಗಿದೆ. ಸುತ್ತಲಿನ ಸಮುದ್ರ ನಾಡಿನ ಪ್ರವಾಸಿಗಳನ್ನು ತನ್ನಡೆಗೆ ಸೆಳೆಯುತ್ತದೆ. ನೇತ್ರಾಣಿ ದ್ವೀಪ ಹತ್ತಿರವೆ ಇದೆ. ಇಲ್ಲಿಯ ಕಡಲ ಸಂಜೆಯ ಸೊಗಸನ್ನು ಅನುಭವಿಸಿಯೇ ತಿಳಿಯಬೇಕು. ಪ್ರವಾಸಿಗಳಿಗಾಗಿ ಸಮುದ್ರಮಧ್ಯದಲ್ಲಿ ಕಟ್ಟಲಾದ ನವೀನ ಉಪಹಾರ ಗೃಹ, ಗುಡ್ಡದ ಮೇಲಿರುವ ವಸತಿಗೃಹಗಳು, ರಮ್ಯವಾಗಿದೆ. ಪ್ರತಿನಿತ್ಯ ಉಚಿತ ಅನ್ನದಾನಸೇವೆ ದೇವಾಲಯ ನಡೆಸುತ್ತಿದೆ. ತಿರುಪತಿಯನ್ನು ಬಿಟ್ಟರೆ ಇನ್ನೆಲ್ಲೂ ಈ ವರೆಗೆ ಇಲ್ಲದ ೩೫ ಅಡಿ ಎತ್ತರದ ಚಿನ್ನದ ವರ್ಣದ ಭವ್ಯ ಧ್ವಜಸ್ಥಂಬ ಈ ಮಾದರಿಯದ್ದು ಕರ್ನಾಟಕದಲ್ಲಿಯೆ ಅತಿ ಎತ್ತರವಾಗಿದ್ದು ಮನಸೆಳೆಯುತ್ತದೆ. ಇಂದು ರಾಷ್ಟ್ರಖ್ಯಾತಿಯ ಸ್ಥಳವಾಗಿ ಪರಿಗಣಿಸಲ್ಪಟ್ಟ ಮುರ್ಡೇಶ್ವರದ ನಿಸರ್ಗದ ಹಾಗು ಕಲೆಯ ವೈಭವವನ್ನು ಕಂಡೇ ಆನಂದಿಸಬೇಕು.

ಗುಣವಂತೆ : ಹೊನ್ನಾವರದಿಂದ ೧೦ ಕಿ.ಮಿ. ದೂರದಲ್ಲಿ ಗುಣವಂತೇಶ್ವರ ಶಂಭಲಿಂಗೇಶ್ವರ ದೇವಾಲಯವು ಪ್ರಾಚೀನವಾಗಿದ್ದು, ವಿಶಾಲವೂ ಸುಂದರವೂ ಆಗಿದೆ. ಬೃಹದಾಕಾರದ ಲಿಂಗ ಭವ್ಯವಾಗಿದೆ. ದೇವಾಲಯದ ಚಂದ್ರಶಾಖೆಯಲ್ಲಿ ಹಲವು ಶಾಸನಗಳು ದೇವಸ್ಥಾನಕ್ಕೆ ದತ್ತಿಯಿತ್ತ ವಿವರಗಳನ್ನು ಹಾಗು ಇಲ್ಲಿ ಆಳಿದ ಒಡೆಯರ ಹೆಸರುಗಳನ್ನು ಹೇಳುತ್ತವೆ. ಅಮ್ಮನವರ (ನೆಲವಂಕಿ) ನರಸಿಂಹ, ಮುಗುಳು ಗಣಪತಿ ಪೀಠಗಳಿವೆ. ಗುಡಿಯ ಗೋಡೆಯಲ್ಲಿ ಕಾವಿಕಲೆಯ ಭೂಮಿತಿ ಆಕಾರದ ಹಾಗು ಪೌರಾಣಿಕ ಸನ್ನಿವೇಶಗಳ ಸುಂದರ ಚಿತ್ರಗಳನ್ನು ಕಾಣಬಹುದು. ಗುಡಿಯ ಎದುರಿಗೆ ಸ್ವಚ್ಛ ನೀರಿನ ಅಚ್ಚುಕಟ್ಟಾದ ಕೆರೆಯಿದೆ.

ಧಾರೇಶ್ವರ : ಕುಮಟೆಯಿಂದ ೫ ಕಿ.ಮಿ. ಧಾರೇಶ್ವರಲಿಂಗ ಚಾಲುಕ್ಯ ಶೈಲಿಯ ಪ್ರಾಚೀನ ದೇವಾಲಯದಲ್ಲಿದೆ. ಪ್ರಧಾನದ್ವಾರದ ಬಲಪಕ್ಕದಲ್ಲಿ ದುರ್ಗೆ ಗಣಪತಿಯರ ವಿಗ್ರಹಗಳು ಎಡಗಡೆಗೆ ಸುಂದರ ಗೋಪಾಲಕೃಷ್ಣ ಮೂರ್ತಿಯು ಶೋಭಿಸಿವೆ. ವಿಶಾಲವಾದ ಧಾರೇಶ್ವರದ ಸಮುದ್ರ ಬೇಲೆ ಶುದ್ಧವು ಮನೋಹರವೂ ಆಗಿದೆ.

ಸಜ್ಜೇಶ್ವರ : ಕಾರವಾರದಿಂದ ೧೦ ಕಿ.ಮೀ. ದೂರದಲ್ಲಿ ಶೇಜವಾಡ ಎಂಬಲ್ಲಿ ಸಜ್ಜೇಶ್ವರ ಲಿಂಗವು ರಾವಣನು ಆತ್ಮಲಿಂಗದ ಮೇಲಿನ ಸಂಪುಟವನ್ನು ತೆಗೆದು ಬೀಸಾಡಿದಾಗ ಇಲ್ಲಿ ಬಿದ್ದು ಲಿಂಗ ಸ್ಥಾಪನೆಯಾಯಿತಂತೆ. ಅದರಿಂದ ಈ ಲಿಂಗವನ್ನು ಸಂಪುಟೇಶ್ವರ ಲಿಂಗವೆಂದೂ ಕರೆಯುತ್ತಾರೆ.

ಉಳವಿ : ಜೋಯಿಡಾದಿಂದ ೩೬ ಕಿ.ಮೀ. ಮತ್ತು ಕಾರವಾರದಿಂದ ೯೦ ಕಿ.ಮೀ. ದೂರದಲ್ಲಿ ರಾಕ್ಷಸ ಘಟ್ಟದ ತುದಿಯಲ್ಲಿ ದಟ್ಟ ಅರಣ್ಯಾವೃತದ ನೆಲೆಯಲ್ಲಿರುವದು. ಲಿಂಗಾಯತರಿಗೆ ಅತಿ ಪವಿತ್ರವೆನಿಸಿದ ಐತಿಹಾಸಿಕ ಮಹತ್ವವುಳ್ಳ ಉಳವಿ ಕ್ಷೇತ್ರ. ಲಿಂಗಾಯತ ಧರ್ಮಸಂಸ್ಥಾಪಕ ಬಸವೇಶ್ವರರ ಸೋದರಳಿಯನಾದ ಚೆನ್ನಬಸವೇಶ್ವರನು ಬಿಜ್ಜಳನ ಮರಣದನಂತರ ಆದ ಕ್ರಾಂತಿಯಲ್ಲಿ ಅನೇಕ ಶರಣರೊಂದಿಗೆ ತಲೆಮರಿಸಿಕೊಂಡು ಯಲ್ಲಾಪುರ ಗಣೇಶಗುಡಿ ಮಾರ್ಗವಾಗಿ ಈ ಸ್ಥಳಕ್ಕೆ ಬಂದು ಬದುಕಿಕೊಂಡರಂತೆ. ಸೈನ್ಯದವರ ಕಣ್ಣಿಗೆ ಬೀಳದೆ “ಉಳಿದ್ವಿ” ಎಂದು ಉದ್ಗಾರವನ್ನು ಚೆನ್ನಬಸವಣ್ಣ ತೆಗೆದನಂತೆ. ಅಂತೆಯೇ ಈ ಊರಿಗೆ ಉಳಿವಿ ಎಂದು ಹೆಸರಾಯಿತಂತೆ.

ಉಳವಿಯ ದೇವಾಲಯವು ಚೆನ್ನಬಸವಣ್ಣನ ಗದ್ದುಗೆಯನ್ನು ಹೊಂದಿದ್ದು ಗರ್ಭಗೃಹದಲ್ಲಿ ಲಿಂಗದ ಎದುರಿಗೆ ನಂದಿ ಸ್ಥಾಪಿಸಲ್ಪಟ್ಟಿವೆ. ದೇವಾಲಯದ ಶಿಖರವು ಪ್ರಮುಖ ಶಿವಶರಣರ ಪ್ರತಿಮೆಗಳಿಂದ ಅಲಂಕೃತವಾಗಿದೆ. ಉಳವಿ ಬಾವಿ, ವೀರಭದ್ರಕೆರೆ, ಶಿವತೀರ್ಥ, ಬಸವೇಶ್ವರಮಂದಿರ, ರುದ್ರಮಂಟಪ, ಬಾಬುರಾಯನ ಕೋಟೆ, ವಿಭೂತಿ ಕಣಜ, ಮಾಮನಿ ಗವಿ, ಬುಡ್-ಬುಡ್ ಕೆರೆ, ಕೂ-ಬಸಪ್ಪ, ಹರಳಯ್ಯನ ಚಿಲುಮೆ, ಅಕ್ಕನಾಗಮ್ಮನ ಗವಿ, ರುದ್ರಾಕ್ಷಿ ಮಂಟಪ ಗವಿ, ಮಲಗಿದ ಸ್ತ್ರೀಯನ್ನು ಹೋಲುವ ಸಹಜ ನಿಸರ್ಗ ಬಂಡೆ, ಹೊಲೆಯ ರಾಜನ ಮನೆಯ ಅವಶೇಷ, ಸುತ್ತಲಿನ ನಿಸರ್ಗದಲ್ಲಿ ಹಲವು ಬೆಡಗುಗಳು ಉಳವಿಯ ಯಾತ್ರೆಯಲ್ಲಿ ಕಾಣಸಿಕ್ಕು ಮರೆಯಲಾಗದ ಕ್ಷೇತ್ರ ಉಳವಿಯಾಗಿದೆ. ಉಳವಿಯ ಚೆನ್ನ ಬಸವೇಶ್ವರ ಜಾತ್ರೆಯು ಮಾಘಪೂರ್ಣಿಮೆಯ ಸಮಯ ಎಂಟುದಿನ ನಡೆಯುವದು. ಭಕ್ತರು ಉಳವಿ-ಜಾತ್ರೆ ಮುಗಿಸಿ ಗೋಕರ್ಣಕ್ಕೆ ಶಿವರಾತ್ರಿಗೆ ಬಂದು ಹೋದರೆ ಮಹಾಪುಣ್ಯವೆಂದು ನಂಬಿರುವರು.

ಬನವಾಸಿ : ವೈಜಯಂತಿ, ಜಯಂತಿಪುರವೆಂದು ಕದಂಬರು ಕನಕಾವತಿ ಎಂದು ವಿಜಯನಗರದವರು ಹೆಸರಿಸಿದ ಬನವಾಸಿಯನ್ನು ಪಂಪ ಮಹಾಕವಿ ಅಜರಾಮರವಾಗಿ ಬಣ್ಣಿಸಿದ್ದಾನೆ. ಬನವಾಸಿ ನಾಡು ಸಂಸಾರ ಸಾರ ಸರ್ವಸ್ವದ ಫಲವಂತೆ! ಸ್ವರ್ಗದ ಬೀಡಂತೆ! ವಿಷ್ಣುವು ಮಧು-ಕೈಟಭರೆಂಬ ರಕ್ಕಸರನ್ನು ಕೊಂದು ಮಧುಸೂದನನಾಗಿ ಇಲ್ಲಿ ಶಿವನನ್ನು ಲಿಂಗದಲ್ಲಿ ಆಹ್ವಾನಿಸಿದ್ದರಿಂದ ಇಲ್ಲಿಯ ಪ್ರಮುಖ ದೇವರು ಮಧುಕೇಶ್ವರನಾಗಿರುವನೆಂದು ಬನವಾಸಿ ಮಹಾತ್ಮೆಯಲ್ಲಿ ಬಣ್ಣಿಸಲ್ಪಟ್ಟಿದೆ. ಕದಂಬ ಕುಲದ ಕೀರ್ತಿ ಕಳಸವಾದ ಮಧುಕೇಶ್ವರ ದೇವಾಲಯ ವಿಶಾಲವಾಗಿದ್ದು ಶಿಲ್ಪಕಲೆಯ ಆಗರವಾಗಿದೆ. ಗರ್ಭಮಂಟಪ, ಅಂತರಾಳ ಮಂಟಪ, ಘಂಟಾಮಂಟಪ, ಸಭಾಮಂಟಪ, ನೃತ್ಯ ಮಂಟಪ ಎಂಬ ಆರು ಮಂಟಪಗಳು ಗುಡಿಯಲ್ಲಿದ್ದು ಒಳಗಿನ ಕಂಬಗಳು ಗೋಡೆಗಳು ಸುತ್ತಲೂ ಇದ್ದ ವಿವಿಧ ಪೀಠಗಳ ಕೆತ್ತನೆಗಳು ಕಲಾತ್ಮಕವಾಗಿವೆ. ಮಧುಕೇಶ್ವರನ ಎಡಗಡೆಗೆ ಇದ್ದ ಪಾರ್ವತಿ ಗುಡಿ ಸುಂದರ ಕಲ್ಲಿನಕಂಬಗಳಿಂದ ಶೋಭಿಸಿದೆ. ಎದುರಿಗಿದ್ದ ನಂದಿ ವಿಗ್ರಹ ದೊಡ್ಡದಿದ್ದು ಅತಿ ರಮಣೀಯವಾಗಿದೆ. ಮಧುಕೇಶ್ವರ ಲಿಂಗವು ಮಧುವಿನ (ಜೇನು ತುಪ್ಪದ) ಬಣ್ಣ ಹೊಂದಿದ್ದು ಕತ್ತಲೆಯಲ್ಲಯೂ ಹೊಳೆಯುತ್ತದೆ. ಇಲ್ಲಿನ ಏಕ ಶಿಲಾ ಕಲ್ಲಿನ ಮಂಚವು ಉತ್ಕೃಷ್ಟ ಕೃತಿಯೆಂದು ಕರ್ನಾಟಕದ ಆರ್ಕಿಯೊಲೊಜಿಕಲ್ ವರದಿಯಲ್ಲಿ ಬಣ್ಣಿಸಲಾಗಿದೆ. ಸ್ವಾದಿಯ ಅರಸನಾದ ರಘುನಾಥ ನಾಯಕನು ಕ್ರಿ.ಶ. ೧೬೨೮ ರಲ್ಲಿ ದೇವರ ವಸಂತೋತ್ಸವಕ್ಕಾಗಿ ಇದನ್ನು ಅರ್ಪಿಸಿದನೆಂದು ಶಾಸನದಲ್ಲಿ ಹೇಳಲಾಗಿದೆ. ಈ ಮಂಚದಲ್ಲಿ ಸ್ವರ್ಗ- ಭೂ- ಪಾತಾಳಗಳನ್ನು ರಚಿಸಲಾಗಿದೆ. ರೇಖೆ-ವಿನ್ಯಾಸ-ಸೂಕ್ಷ್ಮತೆ, ಭವ್ಯತೆಯಲ್ಲಿ ಈ ಮಂಚ ಅಮೋಘವಾಗಿದೆ. ಬನವಾಸಿಯ ಧ್ವಜ ಸ್ತಂಭ, ರಥ, ದೇವಾಲಯದ ಆವರಣದಲ್ಲಿದ್ದ ವಿವಿಧ ದೇವತೆಗಳ ಶಿಲ್ಪ, ಬಸವಣ್ಣನವರ ಕಾಲದ ಶಿವಶರಣರ ಪ್ರತಿಮೆಗಳು, ಗಣಪತಿ- ಸರಸ್ವತಿ ಮೊದಲಾದ ಮೂರ್ತಿಗಳು ಶಿಲ್ಪಕಲಾ ಪ್ರತಿಭೆಯ ಪ್ರತೀಕವಾಗಿವೆ. ವರದಾನದಿಯ ದಂಡೆಯಲ್ಲಿಯ ಬನವಾಸಿಯಲ್ಲಿ ತಿರುಮಲ, ಶಿವ, ಮಾರಿ, ಪ್ರಭುದೇವ, ಅಲ್ಲಮಪ್ರಭು, ಬಸವೇಶ್ವರ, ಜೈನ, ಬಯಲಬಸವ, ವೆಂಕಟರಮಣ, ಕದಂಬೇಶ್ವರ, ನೀಲಕಂಠ, ರಾಮೇಶ್ವರ ಆದಿ ಮಧುಕೇಶ್ವರ, ದುರ್ಗಾ, ಶಿತಿ ಕಾಂತೇಶ್ವರ ಮುಂತಾದ ದೇವಾಲಯಗಳಿದ್ದು ಕೋಟೆಯ ಅವಶೇಷ, ಶಿಲಾಶಾಸನಗಳು ಅಲ್ಲಲ್ಲಿ ಬಿದ್ದುಕೊಂಡಿವೆ. ಶಿರಸಿ ಬನವಾಸಿ ರಸ್ತೆಯಲ್ಲಿ ಗುಡ್ನಾಪುರ ಕೆರೆ ಐತಿಹಾಸಿಕವಾಗಿ ಪ್ರಸಿದ್ಧವಿದ್ದು ಕೆರೆಯ ಪಕ್ಕದಲ್ಲಿ ಕರಿಯಮ್ಮ, ಮರಿಯಮ್ಮ, ಬಂಗಾರೇಶ್ವರ ಮೊದಲಾದ ಗುಡಿಗಳನ್ನು ಹೊಂದಿದೆ. ಒಟ್ಟಿನಲ್ಲಿ ಬನವಾಸಿ ಪ್ರದೇಶವನ್ನು ಒಮ್ಮೆ ನೋಡಿದರೆ “ಆರಂಕುಶವಿಟ್ಟರೂ” ನೆನೆಯುತ್ತಲೆ ಇರುವಂಥ ನೆಲೆ ಎಂದು ನಿಶ್ಚಿತವಾಗಿ ಹೇಳಬಹುದು.

ಮಂಜುಗುಣಿ : ಶಿರಸಿಯಿಂದ ೨೬ ಕಿ.ಮೀ. ದೂರದಲ್ಲಿದ್ದ ಪೂರ್ವದಲ್ಲಿ ಅತಿ ಪ್ರಸಿದ್ಧ ಕ್ಷೇತ್ರ. ವಾದಿರಾಜಸ್ವಾಮಿಯವರ ಪ್ರಕಾರ ತಿರುಪತಿಯ ವೆಂಕಟರಮಣದೇವರು ಬೇಟೆಗೆಂದು ಮಂಜಗುಣಿಗೆ ಬಂದಿದ್ದನಂತೆ. ಇಲ್ಲಿಯ ದೇವರು ಬೇಟೆ ವೆಂಕಟರಮಣನಾಗಿದ್ದು ಎರಡು ಕೈಗಳಲ್ಲಿ ಬಿಲ್ಲುಬಾಣಗಳಿದ್ದು, ಇನ್ನೆರಡು ಕೈಗಳಲ್ಲಿ ಶಂಖಚಕ್ರಗಳಿದ್ದು, ಕಪ್ಪು ಶಿಲೆಯ ಸುಂದರ ರೂಪದವನಾಗಿದ್ದಾನೆ. ಘಟ್ಟದ ಮೇಲಿದ್ದ ಈ ಊರು ಚಳಿಗಾಲದಲ್ಲಿ ದಟ್ಟವಾದ ಮಂಜಿನಿಂದ ಮುಸುಕಿರುವ ಗುಣಿಪ್ರದೇಶದಲ್ಲಿರುವದರಿಂದ ಈ ಹೆಸರು ಬಂದಿದೆ. ಮಂಜಗುಣಿಯ ರಥದಷ್ಟು ಕಲಾತ್ಮಕ ಹಾಗು ದೊಡ್ಡದಾದ ರಥ ಇನ್ನೊಂದಿಲ್ಲ. ದೊಡ್ಡದಾದ ಕೆರೆ ಹಾಗು ಹಲವು ದೇವಾಲಯಗಳು ಇಲ್ಲಿವೆ. ಚೈತ್ರಮಾಸದಲ್ಲಿ ಇಲ್ಲಿ ಜಾತ್ರೆ ನಡೆಯುವದು.

ಸ್ವಾದಿ : ಸೋಂದೆ, ಸೊಂದನಗರ, ಸೊವದೆ, ಸುಧಾಪುರ ಮೊದಲಾದ ಹೆಸರಿನಿಂದ ಐತಿಹಾಸಿಕ ಧಾರ್ಮಿಕ ಸ್ಥಳವು ಶಿರಸಿಯಿಂದ ೧೯ ಕಿ.ಮೀ. ದೂರದಲ್ಲಿದ್ದು ಹಿಂದೆ ಹತ್ತರ ಕನ್ನಡ ಜಿಲ್ಲೆಯ ಬಹುಭಾಗವನ್ನು ಆಳಿದ ಸ್ವಾದಿರಾಜರ ರಾಜಧಾನಿಯಾಗಿದ್ದು ಇಲ್ಲಿ ಸ್ಮಾರ್ತ, ವೈಷ್ಣವ ಮತ್ತು ಜೈನ ಮಠಗಳು ಸ್ಥಾಪಿಸಲ್ಪಟ್ಟವು. ಕಾಶಿಯಿಂದ ತ್ರಿವಿಕ್ರಮ ಮೂರ್ತಿಯನ್ನು- ತಂದು – ತ್ರಿವಿಕ್ರಮದೇವಾಲಯವನ್ನು ರಚಿಸಲಾಗಿದ್ದು ಈ ದೇವಾಲಯಕ್ಕೆ ಸಾಕಷ್ಟು ದತ್ತಿ ನೀಡಿದ ಬಗ್ಗೆ ಶಾಸನವಿದೆ. ಅಕಳಂಕಮಠ, ವಾದಿರಾಜಮಠಗಳಿವೆ. ವಾದಿರಾಜಮಠದಲ್ಲಿ ವಾದಿರಾಜರ ಬೃಂದಾವನವಿದ್ದು ಮಠದ ಹಿಂದ ದವಲಗಂಗಾ ಎಂಬ ಕಲ್ಯಾಣಿಯಿದೆ. ಬೃಂದಾವನದ ಸುತ್ತಲು ಗೋಪಾಲಕೃಷ್ಣ ರುದ್ರ, ಮಾರುತಿಯರ ಸುಂದರ ಶಿಲ್ಪಕಲಾಕೃತಿಗಳಿವೆ. ಸೋಂದೆ ಪರಿಸರದಲ್ಲಿ ಶಂಕರನಾರಾಯಣ ದೇವಾಲಯ, ಗದ್ದಿಗೆಮಠ, ಹುಣಸೆಹೊಂಡದ ವೆಂಕಟರಮಣದೇವಾಲಯ ಮತ್ತು ಎತ್ತರದ ಧ್ವಜಸ್ಥಂಬ, ಜೀರ್ಣದೇವಾಲಯಗಳು, ಶಿಲ್ಪಕಲಾಕೃತಿಯ ಮರಡಿಗಳು ಕಾಡಿನಲ್ಲಿ ಕಂಗೊಳಿಸುತ್ತದೆ.

ಸ್ವರ್ಣವಳ್ಳಿ : ಹೊನ್ನಹಳ್ಳಿ ಎಂಬ ಕನ್ನಡ ಹೆಸರಿನ ಸಂಸ್ಕೃತೀಕರಣವಾಗಿದೆ. ಆದಿಶಂಕರರ ಇಚ್ಛೆಯಂತೆ ಶೃಂಗೇರಿಮಠದ ಶಾಖೆಯಾಗಿ ಇಲ್ಲಿ ಸ್ವರ್ಣವಳ್ಳಿ ಮಠವು ಭಾಸ್ಕರೇಂದ್ರ ಸರಸ್ವತಿಯವರಿಂದ ಸ್ಥಾಪಿಸಲ್ಪಟ್ಟಿದೆ. ಹಿಂದೆ ಇಲ್ಲಿಗೆ ಭೆಟ್ಟಿಯಿತ್ತ ಪ್ರವಾಸಿ ಬುಕಾನೆನ್‌ನು ಈ ಸ್ಥಳವನ್ನು “ಹೈಗಸ್ವಾಮಿಯ ಹೊನಾವಳ್ಳಿಮಠ್” ಎಂದು ಗುರುತಿಸಿದ್ದಾನೆ. ಮೊದಲು ಈ ಮಠವು ಗೋಕರ್ಣದಲ್ಲಿದ್ದು ಈ ಪೀಠದ ೨೯ನೇ ಸ್ವಾಮಿಯವರ ಕಾಲದಲ್ಲಿ ಸೋಂದೆ ಅರಸರ ಇಚ್ಛೆಯಂತೆ ಸಹಸ್ರಹಳ್ಳಿಗೆ ವರ್ಗಾಯಿಸಲ್ಪಟ್ಟು ಅಲ್ಲಿಂದ ಮತ್ತೆ ಸ್ವರ್ಣವಳ್ಳಿಗೆ ಸ್ಥಳಾಂತರಪಟ್ಟಿತು. ಮಠದಲ್ಲಿ ಚಂದ್ರಮೌಳೀಶ್ವರ, ರಾಜರಾಜೇಶ್ವರ ಮತ್ತು ಲಕ್ಷ್ಮೀನಾರಾಯಣರ ಪೀಠಗಳಿದ್ದು ವಿಜಯನಗರ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿವೆ. ಸ್ವರ್ಣವಳ್ಳಿಮಠ ಇಂದು ಸುವ್ಯವಸ್ಥಿತ ರೀತಿಯಿಂದ ನಡೆಸಲ್ಪಟ್ಟು ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಗಳ ಕೇಂದ್ರವಾಗಿದೆ.

ಸಹಸ್ರಲಿಂಗ : ಮೊದಲು ಸಹಸ್ರಹಳ್ಳಿ ಎಂದು ಕರೆಸಿಕೊಳ್ಳುತ್ತಿತ್ತು. ಶಾಲ್ಮಲಾನದಿಯಲ್ಲಿ ಅನೇಕ ಲಿಂಗಗಳನ್ನು ಕೊರೆಯಲಾಗಿದೆ. ಈ ಲಿಂಗಗಳು ನದಿಯ ನಡುವೆಯಿದ್ದ ಕಲ್ಲುಗಳಲ್ಲಿ ಕೆತ್ತಲ್ಪಟ್ಟಿದ್ದು ಬಹಳ ವರುಷಗಳಲ್ಲಿ ಭಕ್ತರಿಂದ ರಚಿಸಲ್ಪಟ್ಟವೆಂದು ಭಾಸವಾಗುತ್ತದೆ. ಲಿಂಗದ ಎದುರಿಗೆ ಕೆಲವು ಬಸವಗಳು ಹಾಗು ಕೆಲವು ಶಿಲಾಶಾಸನಗಳು ಇವೆ. ದೊಡ್ಡಲಿಂಗವಿದ್ದಲ್ಲಿ ಸುತ್ತ ಚಿಕ್ಕ ಲಿಂಗಗಳನ್ನು ಕೊರೆದಿದ್ದಾರೆ. ಈ ಸ್ಥಳದಲ್ಲೀಗ ಜನವಸತಿಯಿಲ್ಲ. ಶಿವರಾತ್ರಿಸಮಯ ಜಾತ್ರೆ ನೆರೆದಂತೆ ಜನಸೇರುತ್ತಾರೆ.

ಶಿರಾಲಿ : ಭಟಕಳದಿಂದ ೬ ಕಿ.ಮೀ. ದೂರ ವೆಂಕಟಾಪುರ ನದಿಯ ಉತ್ತರಕ್ಕೆ ಪ್ರಾಚೀನ ಹಿನ್ನೆಲೆಯುಳ್ಳ ಶಿರಾಲಿ ಮಠಗಳಿಂದ ದೇವಸ್ಥಾನಗಳಿಂದ ಪ್ರಸಿದ್ಧಿಪಡೆದಿದೆ. ಶಿಲಾಶಾಸನಗಳಲ್ಲಿ ಶ್ರೀಲಿ, ಶಿರಿಯಾಳಿ ಎಂದು ವರ್ಣಿತವಾಗಿದೆ. ಆದಿಶಂಕರರು ಇಲ್ಲಿಗೆ ಬಂದಿದ್ದು ಕಡುವಿನಕಟ್ಟೆ ಎಂಬಲ್ಲಿ ದುರ್ಗಾ ಪರಮೇಶ್ವರಿ ಮೂರ್ತಿಯನ್ನು ಸ್ಥಾಪಿಸಿದರೆಂದು ಮತ್ತು ಇಲ್ಲಿಯ ಪಂಚವಟಿ ಎಂಬ ಬೆಟ್ಟದಲ್ಲಿದ್ದ ಶಂಭುಲಿಂಗ ಪೀಠವನ್ನು ಸಂದರ್ಶಿಸಿದ್ದರೆಂದು ಹೇಳುತ್ತಾರೆ.

ಶಿರಾಲಿಯಲ್ಲಿ ಚಿತ್ರಾಪುರ ಸಾರಸ್ವತರ ಮುಖ್ಯ ಮಠವಿದ್ದು ಮಠದಲ್ಲಿ ಹಿಂದಿನ ಆರು ಗುರುಗಳ ಸಮಾಧಿಗಳಿವೆ. ಪರಿಜ್ಞಾನಾಶ್ರಮ ಸ್ವಾಮಿಯವರು ಇಲ್ಲಿ ಒಂದು ಅತ್ಯುತ್ತಮ ವಸ್ತುಸಂಗ್ರಹಾಲಯವನ್ನು ಸಂಯೋಜಿಸಿದ್ದು ಪ್ರಾಚ್ಯಮೂರ್ತಿಗಳು, ಅವಶೇಷಗಳು, ತಾಮ್ರಪಟ, ಶಾಸನ, ನಾಣ್ಯ ಹಾಗು ಮತ್ತಿತರ ಕೌತುಕಮಯ ವಸ್ತುಗಳನ್ನು ಇಡಲಾಗಿದ್ದು ಜ್ಞಾನ ಪ್ರಚೋದಕವಾಗಿವೆ. ಮಠದ ಸುತ್ತಲು ಗೋಪಾಲಕೃಷ್ಣ, ದತ್ತಾತ್ರೇಯ, ಶಾಂತಾದುರ್ಗಾ, ಕೇಶವನಾರಾಯಣ ದೇವಾಲಯಗಳಿವೆ. ಯಾತ್ರಿಕರಿಗೆ ಉಳಿದುಕೊಳ್ಳಲು ಸೌಕರ್ಯವನ್ನು ಕಲ್ಪಿಸಲಾಗಿದೆ. ಚೈತ್ರ ಹುಣ್ಣಿಮೆಗೆ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

ಶಿರಾಲಿಯಲ್ಲಿ ಅನೇಕ ಗೌಡಸಾರಸ್ವತ ಕುಟುಂಬಗಳಿಗೆ ಕುಲದೇವರಾದ ಮಹಾಗಣಪತಿ ಮಹಾಮಾಯಾ ದೇವಾಲಯವು ೪೦೦ ವರ್ಷ ಪೂರ್ವದ್ದಿದ್ದು ೧೯೦೪ ರಲ್ಲಿ ನವೀಕರಿಸಲಾಗಿದೆ. ವಿಶಾಲವಾದ ಈ ದೇವಾಲಯದ ಗೋಡೆಯಮೇಲೆ ದಶಾವತಾರದ ವಸ್ತುವುಳ್ಳ ಅನೇಕ ಕಾವಿ ಚಿತ್ರಗಳು ಕಾಣಸಿಗುತ್ತವೆ. ಮಾರುತಿ ದೇವಾಲಯವೂ ಚೆನ್ನಾಗಿದ್ದು ಅನೇಕ ಪಳೆಯುಳಿಕೆಗಳನ್ನು ಒಂದು ಶಾಸನವನ್ನು ಹೊಂದಿದೆ. ವೆಂಕಟಾಪುರ ನದಿ ದಂಡೆಯಲ್ಲಿ ಮಹಾಸತಿ, ಕಡ್ಲೆ ಎಂಬಲ್ಲಿ ಶಿವಲಿಂಗೇಶ್ವರ, ಬೆಂಗ್ರೆಯಲ್ಲಿ ಹನುಮಂತದೇವಾಲಯಗಳಿವೆ.

ಗುಂಡಬಾಳೆ : ಹೊನ್ನಾವರದ ಪೂರ್ವಕ್ಕೆ ೧೩ ಕಿ.ಮೀ. ದೂರ ಗುಂಡಬಾಳೆ ಇಂದು ಇಲ್ಲಿಯ ಹನುಮಂತದೇವರಿಂದ ಬಹುಪ್ರಖ್ಯಾತವಾಗಿದೆ. ಹಿಂದೆ ಜೈನ ಅರಸರ ಕಾಲಕ್ಕೆ ಪ್ರಸಿದ್ಧ ವ್ಯಾಪಾರಿ ಕೇಂದ್ರ, ಸಾಂಸ್ಕೃತಿಕ ಕೇಂದ್ರ ಇದಾಗಿದ್ದು ಗುಂಡಿಬೈಲು, ಗುಂಡಬಳಿ ಎಂಬ ಹೆಸರು ಈ ಊರಿಗೆ ಇತ್ತು. ಇಲ್ಲಿ ಜೈನ ಬಸ್ತಿಗಳು, ದೇವಾಲಯಗಳು, ಮೆಣಸಿನಕಾಳಿನ ಬಾವಿಗಳು ಇದ್ದು ಗತವೈಭವವನ್ನು ಸಾರಿ ಹೇಳುತ್ತವೆ. ಈ ಊರಿನ ಮುಖ್ಯಪ್ರಾಣದೇವರಿಗೆ (ಹನುಮಂತಗೆ) ಯಕ್ಷಗಾನ ಆಟವೆಂದರೆ ಪಂಚಪ್ರಾಣ. ಆದ್ದರಿಂದ ಭಕ್ತರು ಯಕ್ಷಗಾನ ಆಟ ಆಡಿಸುವದಾಗಿ ಹರಕೆ ಹೊರುತ್ತಾರೆ. ವರ್ಷದಲ್ಲಿ ಏಳು ತಿಂಗಳಕಾಲ ದಿನ ನಿತ್ಯ ಬೆಳಗಿನ ತನಕ ಆಟ ನಡೆಯುತ್ತಲೇ ಇರುತ್ತದೆ. ಆದ್ದರಿಂದ ಈ ದೇವರನ್ನು ಆಟದ ದೇವರು ಎಂದೂ ಕರೆಯುತ್ತಾರೆ. ಎಂಟು ಹತ್ತು ವರುಷಗಳ ಪೂರ್ವದಲ್ಲಿಯೇ ಆಟದ ಹರಕೆ ಹೊರುವವರು ತಮ್ಮ ಹರಕೆಯ ದಿನವನ್ನು ಗೊತ್ತು ಪಡಿಸಿಕೊಳ್ಳಬೇಕಾಗುತ್ತದೆ. ಯಕ್ಷಗಾನ ಮೇಳವೊಂದು ಇಲ್ಲಿ ಸ್ಥಿರವಾಗಿ ನೆಲೆಗೊಂಡಿರುವದರಿಂದ ಇಲ್ಲೊಂದು ಯಕ್ಷಗಾನ ಶಿಕ್ಷಣದ ಕಾಲೇಜನ್ನು ನಡೆಸಬಹುದು. ಪ್ರಪಂಚದಲ್ಲಿ ನಿತ್ಯ ಬೆಳತನಕ ಯಕ್ಷಗಾನ ಆಟ ನಡೆವ ಸ್ಥಳ ಇನ್ನೊಂದಿಲ್ಲ.

ಅವರ್ಸೆ : ಅಂಕೋಲೆಯ ಉತ್ತರಕ್ಕೆ ೧೦ ಕಿ.ಮೀ. ಅಂತರದಲ್ಲಿ ಧಾರ್ಮಿಕ ಮಹತ್ವ ಪಡೆದ ಚಿಕ್ಕ ಊರಿನಲ್ಲಿ ಕಾತ್ಯಾಯಿನಿ ದೇವಿಯ ದೊಡ್ಡ ಮಂದಿರವು ಸುವ್ಯವಸ್ಥಿತವಾಗಿದೆ. ಈ ದೇವಾಲಯದ ಚಾವಣಿಯನ್ನು ದೋಣಿಯ ಆಕಾರದಲ್ಲಿ ನಿರ್ಮಿಸಿದ್ದಾರೆ. ಈ ದೇವಿಯ ಮೂರ್ತಿಯು ಸಮುದ್ರದಲ್ಲಿ ಮೀನುಗಾರರ ಬಲೆಗೆ ಸಿಕ್ಕಿತಂತೆ. ಮೊದಲು ಬೆಲೆಕೇರಿಯಲ್ಲಿ ಸ್ಥಾಪಿಸಲ್ಪಟ್ಟು ನಂತರ ಅವರ್ಸೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿತು. ಸಮುದ್ರದಲ್ಲಿ ಯಾನ ಮಾಡುವ ಮೀನುಗಾರರಿಗೆ ಸಣ್ಣ ದೊಡ್ಡ ಮಚವೆ ಹಡಗುಗಳ ವ್ಯಾಪಾರಿಗಳಿಗೆ ಕಾತ್ಯಾಯಿನಿದೇವಿ ರಕ್ಷಿಸುವ ದೇವತೆಯಾಗಿದ್ದಾಳೆ. ಬಾಳೆಹಣ್ಣಿನ ಹೂವಿನ ಬಟ್ಟಲನ್ನು ದೇವಿಗೆ ಅರ್ಪಿಸುವದು ಇಲ್ಲಿಯ ರೂಢಿ. ರಾಣಿಬಾಗ ಎಂಬ ಸ್ಥಳವಿದ್ದರಿಂದ ಪೂರ್ವದಲ್ಲಿ ಇದು ರಾಜರಾಳಿದ ಸ್ಥಳವಿರಬೇಕು. ಸಮೀಪದಲ್ಲಿ ‘ಕೆಳಗಿನ ಬೇಣ’ ಮತ್ತು ‘ಮೇಲಿನ ಬೇಣ’ ಎಂಬ ಪರ್ವತ ನೆಲೆಗಳಿದ್ದು ಉತ್ತಮ ಗಿರಿಧಾಮವಾಗಲು ಸೂಕ್ತ ಸ್ಥಳಗಳಾಗಿವೆ.

ಹಿರೇಗುತ್ತಿ : ಕುಮಟೆಯಿಂದ ೨೫ ಕಿ.ಮೀ. ದೂರದಲ್ಲಿ ಹಿರೇಗುತ್ತಿ ಜೈನ ಅವಶೇಷಗಳ ದೇವಾಲಯಗಳ ಬೀಡಾಗಿದೆ. ನಾಡವರು ಎಂದು ಕರೆಸಿಕೊಳ್ಳುವ ಜನಾಂಗ ಉತ್ತರಕನ್ನಡದಲ್ಲಿ ಬಂದು ಮೊದಲು ಹಿರೇಗುತ್ತಿಯಲ್ಲಿ ನೆಲೆಸಿ ಆಮೇಲೆ ಸುತ್ತಲಿನ ಹಳ್ಳಿಗಳಿಗೆ ಪಸರಿಸಿದರು. ಆಸ್ತಿಗಳಾದಿಯಿದ್ದ ಸುತ್ತಲಿನ ಭೂಭಾಗಕ್ಕೆ ‘ಗುತ್ತು’ ಎನ್ನುತ್ತಾರೆ. ಹಿರೇಗುತ್ತಿಯಲ್ಲಿ ಅನೇಕ ಗುಡಿಗುಂಡಾರಗಳು, ಶಾಸನ, ವೀರಗಲ್ಲುಗಳಿವೆ. ಇದಕ್ಕೆ ಹೊಂದಿಯೇ ಕಿರೆಗುತ್ತಿ ಎಂಬಲ್ಲಿ ಜೈನನ ಗದ್ದೆ ಎಂಬ ಸ್ಥಳವಿದ್ದು ಜೈನ ಅವಶೇಷಗಳಿವೆ. ಹಿಂದೆ ಕಲ್ಲಿನ ತೀರ್ಥಂಕರರ ಪ್ರತಿಮೆಗಳಿದ್ದವು. ಪ್ರಾಚೀನ ಮಹಾಲಿಂಗೇಶ್ವರ, ಲಕ್ಷ್ಮೀನಾರಾಯಣ, ಬೊಮ್ಮಯ್ಯ (ಬ್ರಹ್ಮ) ಈ ತ್ರಿಮೂರ್ತಿ ದೇವಾಲಯಗಳ ಜೊತೆಗೆ ಇನ್ನೂ ಅನೇಕ ಪೀಠಗಳಿದ್ದು ಹೊಸದಾಗಿ ನಿರ್ಮಿತವಾದ ಮಹಾಲಕ್ಷ್ಮಿದೇವಕಿ ಕೃಷ್ಣ ರವಳನಾಥ ದೇವಾಲಯ ಬ್ರಹ್ಮಜಟಗಳ ಗುಡಿಗಳು ಬಸ್ಸಿನ ದಾರಿಯಿಂದಲೇ ಕಾಣಸಿಗುವವು.

ಇಡಗುಂದಿ : ಸೃಂದಪುರಾಣದಲ್ಲಿ ಇಡಗುಂದಿ, ಕವಡೆಕೆರೆ ಮತ್ತು ಅನಲಗಾರ ಸೇರಿ ಶ್ರೀ ಕ್ಷೇತ್ರಗಳೆಂದು ಪರಿಗಣಿಸಲ್ಪಡುತ್ತದೆ. ಶ್ರೀ ರಾಮನು ಲಕ್ಷಣ ಸೀತಾರೊಡನೆ ಇಲ್ಲಿಗೆ ಬಂದಿದ್ದನೆಂದೂ ರಾಮಲಿಂಗವನ್ನು ಪ್ರತಿಷ್ಠಾಪಿಸಿದನೆಂದು ಹೇಳಿಕೆಯಿದೆ. ಹತ್ತಿರವಿದ್ದ ದೊಡ್ಡ ಕೆರೆಯಲ್ಲಿ ಚಿನ್ನದ ರಥವಿದೆ ಎಂದು ನಂಬಲಾಗಿದೆ. ಕೋಟೆ ಹಾಗು ಇತರ ಅವಶೇಷಗಳಿವೆ. ಗುಂಡಿಯ (ಕಂದಕದ) ಈಡಿನ ಮೇಲೆ ಇರುವ ಸ್ಥಳವಾದ್ದರಿಂದ ಇಡಗುಂದಿಯೆಂಬ ಹೆಸರು ಬಂದಿದೆ. ಯಲ್ಲಾಪುರದ ಕಾರವಾರ ರಸ್ತೆಯಲ್ಲಿ ಯಲ್ಲಾಪುರದಿಂದ ೧೦ ಕಿ.ಮೀ. ದೂರದಲ್ಲಿದೆ.