ರೈತರು ಜಾನುವರುಗಳಿಗಾಗಿ ಅಥವಾ ಹಸುರು ಗೊಬ್ಬರಕ್ಕಾಗಿ ಮರಗಳ ಸೊಪ್ಪನ್ನು ಸವರು (ಸಮರು)ತ್ತಾರೆ. ಬಿಸಿಲುಗಾಲದಲ್ಲಿ ಭೂಮಿಯ ಮೇಲೆ ಹಸುರು ಹುಲ್ಲಾಗಲೀ ಅಥವಾ ಜಾನುವಾರುಗಳು ಮೇಯುವ ಸಣ್ಣ ಸಸ್ಯಗಳಾಗಲೀ ಇರುವುದಿಲ್ಲ. ಆದ್ದರಿಂದ ಮೇವಿಗಾಗಿ ಬಿಸಿಲುಗಾಲದಲ್ಲಿ ಜಾನುವಾರುಗಳಿಗಾಗಿ ಮರಗಳ ಎಲೆಗಳನ್ನು ಸವರುತ್ತಾರೆ. ಆದರೆ ಸಾಧಾರಣವಾಗಿ ಹಸುರು ಗೊಬ್ಬರಕ್ಕಾಗಿ ಸವರುವುದು ಮಳೆಗಾಲಕ್ಕೆ ಸ್ವಲ್ಪ ಮೊದಲು. ಸುಮರು ೬೦ ವರ್ಷಗಳಿಗಿಂತ ಮುಂಚೆ ಮೈಸೂರು ರಾಜ್ಯದ ಮಲೆನಾಡಿನಲ್ಲಿ ‘ಸೊಪ್ಪಿನ ಬೆಟ್ಟಗಳು’ ಎಂಬ ಹೆಸರಿನಲ್ಲಿ ಈ ಎರಡು ಉಪಯೋಗಗಳಿಗಾಗಿ ಕಾಡಿನ ಕೆಲವು ಭಾಗಗಳನ್ನು ಮೀಸಲಾಗಿಡಲ್ಪಟ್ಟಿದ್ದವು. ಕೆಲವು ವರ್ಷಗಳಾದ ಮೇಲೆ ತಿಳುವಳಿಕೆ ಇಲ್ಲದ ಜನ ದಪ್ಪವಾದ ರೆಂಬೆಗಳನ್ನು ಕಡಿದಿದ್ದರಿಂದ ಮರಗಳು ಬಹಳ ಕುಂಠಿತವಾದವು. ಇದಾದ ಮೇಲೂ ‘ಸೊಪ್ಪಿನ ಬೆಟ್ಟಗಳು ಇದ್ದವು’. ಇನ್ನು ಕೆಲವು ವರ್ಷಗಳಾದ ಮೇಲೆ ಇದ್ದ ರೆಂಬೆಗಳನ್ನು ಕಡತಲೆ ಮಾಡಿದ್ದರಿಂದ, ಆ ಮರಗಳು ಒಣ ಮರಗಳಾಗಿ ನಿಂತಿದ್ದವು. ಕೆಲವು ದಿನಗಳಾದ ಮೇಲೆ ಈ ಒಣ ಗಿಡ ಮರಗಳನ್ನು ಸೌದೆಯಾಗಿ ಕತ್ತರಿಸಿ, ಆ ಜಾಗಗಳನ್ನು ಬರಿದು ಮಾಡಿದರು.

ಮೇಲಿನ ಉದಾಹರಣೆಯಿಂದ ತಿಳಿದು ಬರುವುದೇನೆಂದರೆ ಸೊಪ್ಪಿಗಾಗಿ ದಪ್ಪ ರೆಂಬೆಗಳನ್ನು  ಕಡಿಯಬಾರದು. ಸೊಪ್ಪಿನ ಬೆಟ್ಟಗಳಿಗೆ ಆದ ಗತಿ ಮುಂದೆ ಯಾವಾಗಲೂ ಆಗದಿರಬೇಕಾದರೆ ಕೆಳಗೆ ಕೊಟ್ಟಿರುವ ಕೆಲವು ಸಲಹೆಗಳನ್ನು ಅನುಸರಿಸಬೇಕು:

೧. ಮರಗಳನ್ನು ಸವರಬೇಕಾದರೆ ಹರಿತವಾದ ಕುಡುಗೋಲು, ಕತ್ತಿ, ಕೈರಂಪ ಮುಂಥಾದ ಸಲಕರಣೆಗಳನ್ನು ಉಪಯೋಗಿಸಬೇಕು. ಅವು ಮೊಂಡಾಗಿರಬಾರದು.

೨. ಎಲೆಗಳನ್ನು ಸವರುವಾಗ ಯಾವ ರೆಂಬೆಯೂ ಬುಡದಲ್ಲಿ ೩.೮ ಸೆಂ.ಮೀ.ಗಿಂತ ಹೆಚ್ಚು ವ್ಯಾಸವನ್ನು ಹೊಂದಿರಬಾರದು .

೩. ಒಂದು ಮರದಿಂದ ಎಲೆಗಳನ್ನು ಕಡಿದ ಮೇಲೆ ಎಷ್ಟು ಕಾಲ ಬಿಟ್ಟರೆ ಅದು ಚೇತರಿಸಿಕೊಂಡು, ಪುನಃ ಮೊದಲಿದ್ದ ಹಾಗೆ ಎಲೆಗಳನ್ನು ಹೊಂದುವುದು ಎನ್ನುವುದು ಮರದ ಪ್ರಭೇದ, ಮರದ ವಯಸ್ಸು, ಅದು ನಿಧಾನವಾಗಿ ಅಥವಾ ಬೇಗ ಬೆಳೆಯುವ ಮರವೇ, ಮರವಿರುವ ಸ್ಥಳದ ಮಣ್ಣು ಹಾಗೂ ಆ ಪ್ರದೇಶದ ಸರಾಸರಿ ವಾರ್ಷಿಕ ಮಳೆಯನ್ನವಲಂಬಿಸಿರುತ್ತದೆ.

ಎಲೆಗಳನ್ನು ಸವರುವಾಗ ಯಾವ ಮೊಂಡಾದ ಕಡಿಯುವ ಆಯುಧವನ್ನು ಉಪಯೋಗಿಸಬಾರದು. ಹಾಗೆ ಕಡಿದರೆ, ಕಡಿದ ಜಾಗದಲ್ಲಿ ಉಳಿದಿರುವ ರೆಂಬೆಯ ತುದಿಯಲ್ಲಿ ಸೀಳುಗಳಾಗುತ್ತವೆ. ರೆಂಬೆಯ ತುದಿ ಒಣಗಿದ್ದರೆ ಸೀಳುಗಳು ಹೆಚ್ಚಾಗುತ್ತವೆ, ಇಂಥ ಕೆಡುಕು ಆಗದಿರಲು ಯಾವಾಗಲೂ ಹರಿತವಾದ ಆಯುಧಗಳನ್ನು ಉಪಯೋಗಿಸಬೇಕು.