ಯಾವುದೇ ಖಚಿತ ನೀರಾವರಿ ಸೌಲಭ್ಯವಿಲ್ಲದಿರುವ ಹಾಗೂ ಉಷ್ಣಾಂಶ ಮತ್ತು ಮಳೆಪ್ರಮಾಣಗಳು ನಿರಂತರವಾಗಿ ಬದಲಾಗುತ್ತಿರುವ ಮಳೆಯಾಶ್ರಿತ ಪ್ರದೇಶಗಳಲ್ಲಿ ಮಳೆ ನೀರು ನಿರ್ವಹಣಾ ತಂತ್ರಜ್ಞಾನಗಳು ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಕಡಿಮೆಯಿಂದ ಮಧ್ಯಮಮಟ್ಟದ ಮಳೆ ಬೀಳುವ ಪ್ರದೇಶಗಳಲ್ಲಿ ರೈತರೇ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುವಂತೆ ವಿಶೇಷವಾಗಿ ಗಮನ ಕೇಂದ್ರೀಕರಿಸುವ ನವೀಕೃತ ಅಂಶಗಳೊಂದಿಗೆ ಇದ್ದ ಜಾಗದಲ್ಲಿಯೇ (in-situ) ಪ್ರೋತ್ಸಾಹಕಾರಿ ಕ್ರಮ ತೆಗೆದುಕೊಳ್ಳುವಂತಾಗಬೇಕು.  ಮಳೆಯಾಶ್ರಿತ ಪ್ರದೇಶಗಳಲ್ಲಿ ಹವಾಮಾನದ ಪರಿಣಾಮಗಳನ್ನು  ಎದುರಿಸಲು ಇರುವ ಪ್ರಮುಖ ಅಡಚಣೆಗಳು ಕೆಳಗಿನಂತಿವೆ,

 • ಮಣ್ಣು ಮತ್ತು ನೀರಿನ ಸಂರಕ್ಷಣೆ ಪದ್ಧತಿಗಳು
 • ಕೃಷಿ ಹವಾಮಾನ ಪ್ರತಿಬಂಧಕಗಳು
 • ಪೋಷಕಾಂಶ ನಿರ್ವಹಣಾ ಪದ್ಧತಿಗಳು
 • ಜಾನುವಾರು ಆಧಾರಿತ ಪ್ರತಿಬಂಧಕಗಳು
 • ಪರ್ಯಾಯ ಭೂ ಬಳಕೆ ಯೋಜನೆಗಳ ಅಭಿವೃದ್ಧಿ

ಈ ಅಡಚಣೆಗಳು ಎಲ್ಲ ಬಗೆಯ ಕೃಷಿ ಪರಿಸರದಲ್ಲಿಯೂ ಕಂಡುಬರುತ್ತವಾದರೂ ಅವುಗಳ ಪ್ರಾಮುಖ್ಯತೆಯ ಕ್ರಮಗಳು ಬದಲಾಗಬಹುದು. ಒಟ್ಟಿನಲ್ಲಿ ಇವು ಮಳೆ ಪ್ರಮಾಣ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು , ನೀರು ಇತ್ಯಾದಿಗಳನ್ನು ಅವಲಂಬಿಸಿರುತ್ತವೆ.  ಬೆಳೆ ಆಧಾರಿತ ಅಡಚಣೆಗಳನ್ನು ಕುರಿತಂತೆ ಮಳೆ ವಿತರಣೆ ಮತ್ತು ಪ್ರಮಾಣ, ಜಲಸಂಪನ್ಮೂಲ ಲಭ್ಯತೆ ಮತ್ತು ಅದನ್ನು ಅಭಿವರ್ಧಿಸುವಿಕೆಗಳೊಂದಿಗೆ ಜಲಾನಯನ ಕಾರ್ಯಕ್ರಮ ಇವುಗಳನ್ನು ಅವಲಂಬಿಸಿ ಯೋಜನೆಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಸಂಪನ್ಮೂಲ ಲಭ್ಯತೆಯನ್ನು ಆಧರಿಸಿದ ಜಲಾನಯನ ಕಾರ್ಯಕ್ರಮದ ಸ್ಥೂಲ ಮಾರ್ಗದರ್ಶಿಗಳನ್ನು ಕೆಳಗೆ ವಿವರಿಸಲಾಗಿದೆ.

ಮಳೆ ಪ್ರಮಾಣ ೫೦೦ ಮಿ.ಮೀ. ಗಿಂತ ಕಡಿಮೆ ಇರುವ ಪ್ರದೇಶಗಳು: ಕುಡಿಯುವ ನೀರಿಗೆ ಆದ್ಯತೆ ಕೊಟ್ಟಿರುವುದು ಅದರಲ್ಲೂ ಮಳೆ ಇಲ್ಲದ ಹಂಗಾಮಿನಲ್ಲಿಯೂ ಕೂಡ ಖಚಿತವಾಗಿರಬೇಕು. ನೀರು ಇದ್ದ ಪ್ರದೇಶದಲ್ಲೇ (in-situ) ಸಂರಕ್ಷಣೆ ಮಾಡುವುದರ ಜೊತೆಗೆ ಫಾರ್ಮ್/ಹೊಲದ ಅಂಚುಗಳ ಒಳಗೇ ಸಂರಕ್ಷಣೆ ಮಾಡುವುದಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಬೇಸಾಯಕ್ಕೆ ಆಳ ಮಣ್ಣುಗಳಿಗೆ ಮಾತ್ರವೇ ಪ್ರೋತ್ಸಾಹ ನೀಡಬೇಕು. ಜಾನುವಾರು ಆಧಾರಿತ ಬೇಸಾಯ ಪದ್ಧತಿಗೆ ಪ್ರೋತ್ಸಾಹ ನೀಡಬೇಕು. ಕಡಿಮೆಯಿಂದ ಮಧ್ಯಮ ಆಳದ ಮಣ್ಣುಗಳಲ್ಲಿ ಹುಲ್ಲುಗಳನ್ನು ಬೆಳೆದು ಮೇವಿನ ಅಗತ್ಯಗಳನ್ನು ಪೂರೈಸಬೇಕು. ಕೊಚ್ಚಿಹೋಗುವ ಮಳೆ ನೀರನ್ನು ಸಂಗ್ರಹಿಸಲು ಜಲಾನಯನಕ್ಕೆ ಮೇಲು ಹರಿವಿನ ಪ್ರದೇಶಗಳಿಂದ ನೀರು ಹರಿದು ಬಂದರೆ ಮಾತ್ರ ಸಾಧ್ಯವಾಗುತ್ತದೆ.

೫೦೦೭೦೦ ಮಿ.ಮೀ ಮಳೆ ಪ್ರಮಾಣದ ಪ್ರದೇಶಗಳು: ಹೆಚ್ಚಿನ ನೀರು ಲಭ್ಯವಿದ್ದಾಗ ಮಧ್ಯಮದಿಂದ ಆಳ ಮಣ್ಣುಗಳಿರುವ ಪ್ರದೇಶಗಳಲ್ಲಿ ಬೆಳೆಗಳನ್ನು ಬೆಳೆಯಬಹುದಾಗಿದೆ. ಕೊಚ್ಚಿ ಹೋಗುವ ನೀರಿನ ಸಂಗ್ರಹಣೆಯು ಕೆಲವು ವಿಷಯ/ಪೂರಕ ನೀರಾವರಿ ಪ್ರದೇಶಗಳಿಗೆ ಮಾತ್ರ ಮಾಡಲು ಸಾಧ್ಯವಾಗುತ್ತದೆ. ತೋಟಗಾರಿಕೆಯನ್ನು ಬೃಹತ್‌ಪ್ರಮಾಣದಲ್ಲಿ ಚೇತನಗೊಳಿಸಬಹುದಾಗಿದೆ. ಪರ್ಯಾಯ ಭೂಬಳಕೆಗೆ ಹೆಚ್ಚಿನ ಒತ್ತು ನೀಡಿ ಭೂಸಾಮರ್ಥ್ಯವನ್ನು ಆಧರಿಸಿದ ಭೂಬಳಕೆ ಯೋಜನೆಯನ್ನು ಚೇತನಗೊಳಸಿಬಹುದಾಗಿದೆ.

೭೦೦೧೧೦೦ ಮಿ.ಮೀ. ಮಳೆ ಪ್ರಮಾಣದ ಪ್ರದೇಶಗಳು: ಇದರಲ್ಲಿ ಕೃಷಿ ಫಾರ್ಮಿಂಗ್‌ಪದ್ಧತಿಗಳನ್ನು ಚೇತನಗೊಳಿಸಬಹುದಾಗಿದೆ. ಮಧ್ಯಮದಿಂದ ಹೆಚ್ಚು ನೀರನಾಂಶ ಲಭ್ಯವಿರುವ ಹಾಗೂ ಮಧ್ಯಮದಿಂದ ಹೆಚ್ಚು ಆಳ ಮಣ್ಣುಗಳನ್ನು ಬೇಸಾಯಕ್ಕಾಗಿ ಚೇತನಗೊಳಿಸಬಹುದಾಗಿದೆ. ಬೆಳೆ ಬೆಳೆಯುವಿಕೆ ಮತ್ತು ಜಾನುವಾರು ಸಾಕಣೆ ಮೂಲದ ಪದ್ಧತಿಗಳನ್ನು ಸಹ ಚೇತನಗೊಳಿಸಬಹುದಾಗಿದೆ. ಚಿಕ್ಕ ಫಾರ್ಮ್‌ಗಳಲ್ಲಿಯೂ ಸಹ ಕೊಚ್ಚಿ ಹೋಗುವ ನೀರನ್ನು ಸಂಗ್ರಹಿಸುವುದು ಸಾಧ್ಯವಿರುತ್ತದೆ. ಪೂರಕ ನೀರಾವರಿಗಾಗಿ ಇದ್ದ ಸ್ಥಳದಲ್ಲಿಯೇ (in-situ) ನೀರಿನ ಸಂರಕ್ಷಣೆಯೊಂದಿಗೆ ನೀರಿನ ಸಂಗ್ರಹಣೆಯನ್ನೂ ಸಹ ಜಲಾನಯನದೊಳಗೆ ಯೋಜಿಸಬಹುದಾಗಿದೆ. ಕೆಲವು ಸಂದರ್ಭಗಳಲ್ಲಿ ಹಿಂಗಾರಿನ ಬೆಳೆಗಾಗಿ ಹೊಲದಲ್ಲಿ ತೇವಾಂಶ ಉಳಿಕೆ ಇರುವುದು ಅಥವಾ ಬಿತ್ತನೆ ಪೂರ್ವ ನೀರಾವರಿ ಮಾಡುವುದೂ ಕೂಡ ಸಾಧ್ಯವಿದೆ. ಹಾಗೆಯೇ ನೈರುತ್ಯ ಮುಂಗಾರಿನಿಂದ ೧೦೦೦-೧೧೦೦ ಮಿ.ಮೀ. ಮಳೆ ಬೀಳುವ ಪ್ರದೇಶಗಳಲ್ಲಿ ಸ್ಥಳ ನಿರ್ದಿಷ್ಟತೆ ಆಧರಿಸಿದ ಸಾಧ್ಯಾಸಾಧ್ಯತೆಗಳನ್ನು ಕುರಿತು ಶೋಧನೆ ನಡೆಸುವುದು ಕೂಡ ಅಗತ್ಯವಾಗಿರುತ್ತದೆ. ಮಧ್ಯಮದಿಂದ ಆಳ ಮಣ್ಣಿನ ಭೂಮಿಯಲ್ಲಿ ಮಳೆಯಾಶ್ರಿತ ಬತ್ತದೊಂದಿಗೆ ಜಲಸಾಕಣೆ ಮೂಲದ ಮೀನುಗಾರಿಕೆಯ ಮಿಶ್ರಬೇಸಾಯವನ್ನೂ ಸಹ ಪ್ರೋತ್ಸಾಹಿಸಬಹುದಾಗಿದೆ.

.೧ ಮಳೆಯಾಶ್ರಿತ ಪ್ರದೇಶಗಳಲ್ಲಿ ಮಳೆ ನೀರಿನ ನಿರ್ವಹಣೆ

ಮಳೆಯಾಶ್ರಿತ ಕೃಷಿಗೆ ಪಾಲಿಸಬೇಕಾದ ಸಮಂಜಸವಾದ ಹಲವು ಬಗೆಯ ಮಣ್ಣು ಮತ್ತು ನೀರು ಸಂರಕ್ಷಣೆಯ ಕ್ರಮಗಳು (ಚಿತ್ರ ೧೮) ಕೆಳಗಿನಂತಿವೆ:

 • ಮಳೆ ಪ್ರದೇಶಗಳಲ್ಲಿ ಮಳೆ ನೀರು ಬೀಳುವ ಸ್ಥಳದಲ್ಲಿಯೇ (in-situ) ನಿರ್ವಹಣಾ ಕ್ರಮಗಳು
 • ಮಳೆಗಾಲವಿದ್ದಾಗ ಭೂ ಉಪಚರಣೆ
 • ಸಂರಕ್ಷಣಾ ಕಾಲುವೆಗಳ ನಿರ್ಮಾಣ
 • ಹತ್ತಿಬೆಳೆಗೆ ಬದುಗಳು ಮತ್ತು ಕಾಲುವೆಗಳ ಪದ್ಧತಿ
 • ಹೊದಿಕೆ ಬೆಳೆ ಬೆಳೆಯುವಿಕೆ
 • ಮರಗಳಿರುವೆಡೆಯಲ್ಲಿ ಕಿರುಜಲಾಶಯ ಪದ್ಧತಿಗಳು

ಮಳೆಯಾಶ್ರಿತ ಪ್ರದೇಶಗಳಲ್ಲಿ ನೀರುನಿರ್ವಹಣೆಗಾಗಿ ಮಧ್ಯಮಾವಧಿ ಕ್ರಮಗಳು ಕೆಳಗಿನಂತಿವೆ:

 • ಮಣ್ಣು ಮತ್ತು  ನೀರು ಸಂರಕ್ಷಣೆಗೆ ಕಲ್ಲಿನ ಮತ್ತು ಸಸ್ಯ ಬದುಗಳು
 • ದರ್ಜೆವಾರು ಬದುಗಳನ್ನು ಹಾಕುವುದರಿಂದ ಸಮರ್ಥವಾದ ನೀರು ಬಸಿಯುವಿಕೆಗೆ ನೆರವಾಗುತ್ತದೆ.
 • ಮಣ್ಣು ಮತ್ತು ನೀರು ಸಂರಕ್ಷಣೆಗೆ ಕಂದಕಯುಕ್ತ ಬದುನಿರ್ಮಾಣ.ಮಳೆಯಾಶ್ರಿತ ಪ್ರದೇಶಗಳಲ್ಲಿ ನೀರು ನಿರ್ವಹಣೆಗಾಗಿ ದೀರ್ಘಾವಧಿ ಕ್ರಮಗಳು ಕೆಳಗಿನಂತಿವೆ.
 • ನೀರಿನ ಸಂಗ್ರಹಣೆ
 • ಕೊಚ್ಚಣೆ ನೀರಿನ ಸಂಗ್ರಹಣೆಗಾಗಿ ಸಮಪಾತಳಿ ಕಂದಕ ನಿರ್ಮಿಸುವಿಕೆ
 • ಬತ್ತಿದ ಬಾವಿಗಳನ್ನು ಪುನರ್ ಚೇತನಗೊಳಿಸುವಿಕೆ

ಈ ಮೇಲಿನ ನೀರು ನಿರ್ವಹಣಾ ತಂತ್ರಗಳು ೭೦೦ ಮಿ.ಮೀ.ಗಿಂತ ಹೆಚ್ಚಿನ ಮಳೆ ಬೀಳುವ ಪ್ರದೇಶಗಳಲ್ಲಿ ಅನುಸರಣೆಗೆ ಹೆಚ್ಚು ಉಪಯುಕ್ತಕರವಾಗಿವೆ.

ಮಳೆ ಬೀಳುವ ಪ್ರಮಾಣವನ್ನು ಆಧರಿಸಿ, ಮೇಲಿನ ಕ್ರಮಗಳಲ್ಲಿನ ಆದ್ಯತೆಯನ್ನು ನಿರ್ಣಯ ಮಾಡಿಕೊಳ್ಳಬಹುದು. ದೀರ್ಘಾವಧಿ ಕ್ರಮಗಳನ್ನು ಯೋಜಿಸುವುದಕ್ಕೆ ಮೊದಲು, ಕೊಚ್ಚಿಹೋಗುವ ನೀರಿನ ಲಭ್ಯತೆಯನ್ನು ತಿಳಿದುಕೊಳ್ಳುವುದರಿಂದ ಉಚಿತವಾದ ರೀತಿಯಲ್ಲಿ ಮುಂದಿನ ಕ್ರಮಗಳಿಗೆ ಹೂಡಿಕೆ ಮಾಡುವುದು ಸೂಕ್ತವಾಗಿರುತ್ತದೆ.

.೨ ಭಾರತದಲ್ಲಿ ಹವಾಮಾನ ವೈಪರೀತ್ಯದ ಅನುಸರಣೆ ಮತ್ತು ಶಮನಗೊಳಿಸುವಿಕೆ ಅನುಸರಣೆ ತಂತ್ರಗಳು.

ಕೃಷಿ ಉತ್ಪಾದಕತೆಯು ಎರಡು ಬಗೆಯ ಹವಾಮಾನ ಪ್ರಚೋದಿತ ಪರಿಣಾಮಗಳಿಗೆ ಪ್ರತಿಕ್ರಿಯಾತ್ಮಕವಾಗಿರುತ್ತದೆ: (೧) ತಾಪಮಾನ, ಮಳೆ ಬೀಳುವಿಕೆ ಅಥವಾ ಇಂಗಾಲದ ಡೈಆಕ್ಸೈಡ್‌ನ ಸಾಂದ್ರೀಕರಣಗಳಲ್ಲಿನ ವ್ಯತ್ಯಾಸಗಳ ನೇರ ಪರಿಣಾಮಗಳು ಮತ್ತು (೨) ಮಣ್ಣಿನ ತೇವಾಂಶದಲ್ಲಿನ ಬದಲಾವಣೆಗಳು ಮತ್ತು ಪೀಡೆಗಳು ಹಾಗೂ ರೋಗಗಳು ಬೀಳುವ ಪುನರಾವರ್ತನ ಮತ್ತು ಪ್ರಸರಣೆಗಳಿಂದ ಉಂಟಾಗುವ ಪರೋಕ್ಷ ಪರಿಣಾಮಗಳು. ಹವಾಮಾನದ ಬದಲಾವಣೆಗಳಿಂದ ಭತ್ತ ಮತ್ತು ಗೋಧಿ ಬೆಳೆಗಳ ಇಳುವರಿಯಲ್ಲಿ ಗಣನೀಯ ಇಳಿತಾಯವಾಗುತ್ತದೆ (IPCC 1966; 2001) ಕರ್ನಾಟಕದಲ್ಲಿ ಕೃಷಿಯು ತೀವ್ರ ವಿರುದ್ಧ ಪರಿಣಾಮಗಳಿಗೆ ಗುರಿಯಾಗುತ್ತದೆ. ಪ್ರಮುಖ ಆಹಾರ ಧಾನ್ಯ ಬೆಳೆ ಪ್ರದೇಶಗಳಲ್ಲಿ ಕೆಲಮಟ್ಟಿನ ನಷ್ಟಗಳೂ ಉಂಟಾಗುತ್ತವೆ. ಯೋಜನಾ ಆಯೋಗವು ನಿರೂಪಿಸಿರುವ ಆದ್ಯತೆಯ ಕ್ರಮದ ಅನುಸರಣೆ ಮತ್ತು ಶಮನ ಗೋಳಿಸುವ ತಂತ್ರಗಳನ್ನು ಕೆಳಗೆ ಕೊಡಲಾಗಿದೆ.

ಬದಲಾವಣೆ ಮಾಡಿದ ಬೇಸಾಯ ಪದ್ಧತಿಗಳು: ಬಿತ್ತನೆ ದಿನಾಂಕ, ಅಂತರ ಕೊಡುವಿಕೆ ಮತ್ತು ಪರಿಕರ ನಿರ್ವಹಣೆಗಳನ್ನು ಬದಲಾವಣೆ ಮಾಡುವುದರಿಂದ ಹವಾಮಾನದ ಅಲ್ಪ ಬದಲಾವಣೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬಹುದಾಗಿದೆ. ಬದಲಾವಣೆಯಾದ ಪರಿಸರಕ್ಕೆ ಹೊಂದುವ ಪರ್ಯಾಯ ಬೆಳೆಗಳು ಅಥವಾ ಸಾಗುವಳಿ ಬಗೆಗಳನ್ನು ಬಳಸುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ. ಸಂಪನ್ಮೂಲ ಸಂರಕ್ಷಣಾ ತಂತ್ರಜ್ಞಾನಗಳ ಅಭಿವೃದ್ಧಿ; ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಶೀಘ್ರ ಬಿತ್ತನೆಗೆ ನೆರವಾಗುತ್ತದೆ ಮತ್ತು ಇದರಿಂದ ಹೆಚ್ಚಿನ ಇಳುವರಿ ದೊರಕುತ್ತದೆ. ಕಳೆ ಬೆಳೆಯುವುದು ಕಡಿಮೆಯಾಗುತ್ತದೆ; ಟ್ಯ್ರಾಕ್ಟರ್ ಬಳಕೆಗೆ ಬೇಕಾಗುವ ನೈಸರ್ಗಿಕ ಸಂಪನ್ಮೂಲಗಳಾದ ಇಂಧನ ಮತ್ತು ಉಕ್ಕಿನ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ನೀರು ಹಾಗೂ ರಸಗೊಬ್ಬರಗಳ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ಕೃಷಿ ಉದ್ಯಮಗಳಿಂದ ವರಮಾನ ಹೆಚ್ಚಿಸುವಿಕೆ: ಉತ್ಪಾದನಾ ವೆಚ್ಚದ ಹೆಚ್ಚಳ ಹಾಗೂ ಇಳುವರಿ ಮಟ್ಟದ ಸ್ಥಗಿತತೆಗಳು ರೈತರ ವರಮಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಜಾಗತಿಕ ಪರಿಸರದ ಬದಲಾವಣೆಗಳು ಹಾಗೂ ಹವಾಮಾನ ವೈಪರೀತ್ಯಗಳು ಉಂಟುಮಾಡುತ್ತಿರುವ ಮಣ್ಣಿನ ಪೋಷಕಾಂಶಗಳ ನಷ್ಟ, ನೀರಿನ ಆವೀಕರಣ ಮತ್ತು ಬೆಳೆ-ಕಳೆಗಳ ಪರಸ್ಪರ ಕ್ರಿಯೆಗಳಿಂದಾಗಿ ಉತ್ಪಾದನಾ ವೆಚ್ಚದಲ್ಲಿ ಮತ್ತಷ್ಟು ಹೆಚ್ಚಳ ಉಂಟಾಗುವ ಸಾಧ್ಯತೆ ಕಂಡುಬರುತ್ತದೆ. ಸ್ಥಳ ನಿರ್ದಿಷ್ಟ ರಸಗೊಬ್ಬರ ಪದ್ಧತಿಗಳನ್ನು ಶೀಘ್ರವಾಗಿ ನಿರೂಪಿಸುವಿಕೆ, ವಿಸ್ತರಣಾ ಸೇವೆಯನ್ನು ಸುಧಾರಣೆಗೊಳಿಸುವಿಕೆ, ರಸಗೊಬ್ಬರ ಪೂರೈಕೆ ಮತ್ತು ವಿತರಣೆ ಹಾಗೂ ಭೌತಿಕ ಮತ್ತು ಸಾಂಸ್ಥಿಕ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮುಂತಾದ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಸಗೊಬ್ಬರ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ.

ಸುಧಾರಿತ ಭೂಬಳಕೆ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾರ್ಯನೀತಿಗಳು ಮತ್ತು ಸಂಸ್ಥೆಗಳು: ಪರಿಸರ ಬದಲಾವಣೆಗಳಿಗೆ ಹೊಂದಿಕೊಳ್ಳುವಿಕೆಗಳಲ್ಲಿ ಸಾಮಾಜಿಕ ಕ್ರಮಗಳಾದ ಬೆಳೆ ವಿಮೆ, ಸಹಾಯಧನಗಳು ಮತ್ತು ನೀರು ಹಾಗೂ ಇಂಧನಗಳಿಗೆ ಸಂಬಂಧಪಟ್ಟ ಬೆಲೆ ನಿರ್ಣಯ ಕಾರ್ಯ ನೀತಿಗಳೂ ಸೇರುತ್ತವೆ. ಈ ಮೇಲಿನ ಅಂಶಗಳನ್ನು ಒಳಗೊಂಡಂತೆ,  ಪರಿಸರದ ಬದಲಾವಣೆಗಳಿಗೆ ಹೊಂದಿಕೊಳ್ಳುವಿಕೆ ಮತ್ತು ಸಂಪನ್ಮೂಲ ಬಳಕೆಗೆ ತಕ್ಕಂತೆ ಉತ್ಪಾದಕತೆ ಸುಧಾರಣೆ ಈ ಎರಡೂ ಉದ್ದೇಶಗಳನ್ನು ಸಾಧಿಸುವ ಅಭಿವೃದ್ಧಿ ಯೋಜನೆಗಳಲ್ಲಿ ಸೂಕ್ತ ಅವಕಾಶಗಳನ್ನು ಒದಗಿಸಬೇಕು. ರೈತರನ್ನು ಪ್ರೋತ್ಸಾಹಿಸಲು,  ಮಣ್ಣಿನಲ್ಲಿನ ಸಾವಯವ ಅಂಶವನ್ನು ಹೆಚ್ಚಿಸಿ ಮಣ್ಣಿನ ಆರೋಗ್ಯವನ್ನು ಸುಧಾರಿಸುವಂತೆ ಹಸುರುಗೊಬ್ಬರ ಬಳಸಲು ಅವರಿಗೆ ಪರಿಹಾರ ಧನ/ಪ್ರೋತ್ಸಾಹಧನ ನೀಡುವಂತಹ ಕಾರ್ಯನೀತಿಗಳನ್ನು ನಿರೂಪಿಸಬೇಕು.

ಶೀಘ್ರ ಎಚ್ಚರಿಕೆ ನೀಡುವ ವ್ಯವಸ್ಥೆ ಮತ್ತು ಬೆಳೆ ವಿಮೆಗಳ ಮೂಲಕ ಸುಧಾರಿತ ಆಘಾತ ನಿರ್ವಹಣೆ: ನೆರೆ ಮತ್ತು ಬರಗಾಲಗಳ ಹೆಚ್ಚಿನ ಸಂಭವನೀಯತೆಗಳು ಹಾಗೂ ಹವಾಗುಣದಲ್ಲಿನ ಇತರ ಅನಿರ್ದಿಷ್ಟತೆಗಳು ಪೂರ್ವಭಾರತದ ಮತ್ತು ಸಂಪನ್ಮೂಲ ಕೊರತೆಯ ರೈತರು ಹವಾಮಾನ ವೈಪರೀತ್ಯತೆಗಳಿಗೆ ತುತ್ತಾಗುವಿಕೆಯನ್ನು ತೀವ್ರವಾಗಿ ಹೆಚ್ಚಿಸುವ ಸಂಭವವಿರುತ್ತದೆ. ಈ ಹವಾಮಾನ ವೈಪರೀತ್ಯಗಳು ಹಾಗೂ ಭವಿಷ್ಯದ ಕೃಷಿ ತಂತ್ರಜ್ಞಾನಗಳು ಮತ್ತು ವಾಣಿಜ್ಯ ಸ್ಥಿತಿಗಳ ಅನಿರ್ದಿಷ್ಟತೆಗಳ ದೃಷ್ಟಿಯಿಂದ ನೋಡಿದಾಗ ಹವಾಮಾನದ ವೈಪರೀತ್ಯಗಳು ಮತ್ತು ಅವುಗಳಿಂದ ಭೂಮಿಯ ಮೇಲಿನ ವಾತಾವರಣ ಮತ್ತು ಉಷ್ಣಾಂಶಗಳಲ್ಲಾಗುವ ಬದಲಾವಣೆಗಳ ಪ್ರಮಾಣಗಳ ಬಗ್ಗೆ ಶೀಘ್ರ ಎಚ್ಚರಿಕೆ ನೀ:ಡುವ ವ್ಯವಸ್ಥೆಯನ್ನು ಹೊಂದಿರುವುದು ಹೆಚ್ಚು ಉಪಯುಕ್ತವಾಗಿರುತ್ತದೆ. ಇಂತಹ ಒಂದು ವ್ಯವಸ್ಥೆಯಿಂದ ಆಹಾರ ಸುರಕ್ಷತೆಯಲ್ಲಿ ಆಘಾತಕ್ಕೊಳಗಾಗಬಹುದಾದ ಪ್ರದೇಶಗಳು ಮತ್ತು ಸಮುದಾಯಗಳು ಯಾವುವೆಂದು ತಿಳಿಯಲು ಹಾಗೂ ಯಾವ ಬಗೆಯ ಆಘಾತಗಳುಂಟಾಗಬಹುದೆಂದು ತಿಳಿಯಲು ಸಾಧ್ಯವಾಗುತ್ತದೆ. ಆಧುನಿಕ ಮಾಹಿತಿ ತಂತ್ರಜ್ಞಾನಗಳ ಸಾಧನಗಳು ಈ ಉದ್ದೇಶಕ್ಕೆ ಹೆಚ್ಚು ನೆರವಾಗಬಲ್ಲವು.

ಹಸಿರುಮನೆ ಅನಿಲ ಬಿಡುಗಡೆಗಳಲ್ಲಿ ೧೯೯೪ರಲ್ಲಿ ಭಾರತದ ಕೃಷಿ ಕ್ಷೇತ್ರದ ಭಾಗ ಶೇ. ೨೯ರಷ್ಟು ಇದ್ದಿತು. ಈ ಅನಿಲ ಬಿಡುಗಡೆಗಳಿಗೆ ಮುಖ್ಯ ಕಾರಣ ಬತ್ತದ ಗದ್ದೆಗಳಿಂದ, ಹೊಲದಲ್ಲಿನ ಪ್ರಾಣಿಗಳ ವಿಸರ್ಜನೆಗಳ ಕೊಳೆಯುವಿಕೆಗಳಿಂದ ಮೀಥೇನ್‌ಬಿಡುಗಡೆ ಹಾಗೂ ಮಣ್ಣಿಗೆ ಹಸಿರು ಗೊಬ್ಬರ ಮತ್ತು ರಸಗೊಬ್ಬರ ಹಾಕುವುದರಿಂದ ನೈಟ್ರಸ್‌ಆಕ್ಸೈಡ್‌ಗಳ ಬಿಡುಗಡೆ. ಈ ಅನಿಲ ಬಿಡುಗಡೆಗಳನ್ನು ಕಡಿಮೆ ಮಾಡುವುದಕ್ಕಾಗಿ ಸೂಕ್ತವಾದ ನವೀನ ತಾಂತ್ರಿಕತೆಗಳನ್ನು ರೈತರಿಗೆ ತಿಳಿಸಿಕೊಡುವುದರಿಂದ ನೀರಿನ ಬಳಕೆಯನ್ನು ಕಡಿಮೆ ಮಾಡುವುದಲ್ಲದೆ ಬತ್ತದ ಸಾಗುವಳಿಯಲ್ಲಿ ನೀರಿನ ಬಳಕೆ ದಕ್ಷತೆಯನ್ನು (WUE) ಹೆಚ್ಚಿಸಿ, ಮೀಥೇನ್‌ಬಿಡುಗಡೆಯನ್ನು ವಿಶಿಷ್ಟವಾಗಿ ಕಡಿಮೆಮಾಡುತ್ತದೆ.

.೩ ಹವಾಗುಣದ ಸಂಕಷ್ಟದ ಪರಿಹಾರ ಹೇಗೆ?

ಪ್ರಶ್ನೆ ಸರಳವಾಗಿದೆ, ಆದರೆ ಉತ್ತರ ಸರಳವಲ್ಲ, ಏಕೆಂದರೆ, ಬಹುಬಗೆಯ ಸಂಭವನೀಯ ಪ್ರತಿಕ್ರಿಯೆಗಳಿವೆ. ಆದರೆ ಅವು ಒಂದಕ್ಕೊಂದು ಪರಸ್ಪರ ಅನುಗುಣವಾಗಿರುವುದಿಲ್ಲ. ಇವುಗಳನ್ನು ಸ್ಥೂಲವಾಗಿ ಮೂರು ಗುಂಪುಗಳಾಗಿ ನೋಡಬಹುದು: ತಡೆಗಟ್ಟುವಿಕೆ (ಜಾಗತಿಕ ತಾಪಮಾನದ ಆಘಾತಗಳನ್ನು ಅಥವಾ ಅವುಗಳ ಪರಿಣಾಮಗಳನ್ನು ಕಡಿಮೆಮಾಡುವ ಕ್ರಮಗಳು); ಶಮನಗೊಳಿಸುವಿಕೆ (ಜಾಗತಿಕ ತಾಪಮಾನದ ಅಪಾಯವನ್ನು ಹಾಗೂ ಅದು ಉಂಟಾಗುವ ಮೂಲ ಕಾರಣವನ್ನು ಕಡಿಮೆ ಮಾಡುವಂತಹ ಕ್ರಮಗಳು); ಮತ್ತು ಪರಿಹರಿಸುವಿಕೆ (ಜಾಗತಿಕ ತಾಪಮಾನ ಮತ್ತು ಅದರ ಪರಿಣಾಮಗಳನ್ನು ವಿರುದ್ಧಾತ್ಮಕಗೊಳಿಸುವಿಕೆ). ಈ ಪ್ರತಿಯೊಂದು ಕ್ರಮಕ್ಕೂ ಕೂಡ ರಾಜಕೀಯ, ಆರ್ಥಿಕ ಮತ್ತು ವಾತಾವರಣದ ತೊಂದರೆಗಳು ಇರುತ್ತವೆ.

ತಡೆಗಟ್ಟುವಿಕೆ

ತಡೆಗಟ್ಟುವಿಕೆ ವಾದದಲ್ಲಿ ಎರಡು ಪ್ರಮುಖ ಬಗೆಗಳು ಕಂಡುಬರುತ್ತವೆ. ಒಂದು, ಯಾವುದೇ ಒಂದು ಪರಿಹಾರವು ಜಾಗತಿಕ ತಾಪಮಾನದ ಸಂಕಷ್ಟಗಳ ಎಲ್ಲ ಅಂಶಗಳಿಗೆ ಪರಿಹಾರವಾಗುವುದಿಲ್ಲ. ಭಾಗಶಃ ಪರಿಹಾರ ನೀಡಬಲ್ಲಂತಹ ಹಲವು ಪರಿಹಾರಗಳು ನಮ್ಮ ಗಮನದಲ್ಲಿದ್ದು ಅವುಗಳೆಲ್ಲವನ್ನೂ ಒಂದುಗೂಡಿಸಿ ಪ್ರಯೋಗಿಸುವುದರಿಂದ ಹವಾಮಾನ ವೈಪರೀತ್ಯದ ತೀವ್ರ ಪರಿಣಾಮಗಳನ್ನು ಕೆಲಮಟ್ಟಿಗೆ ಹಾಗೂ ಕಡಿಮೆ ಸಮಯದಲ್ಲಿ ತಪ್ಪಿಸುವಂತೆ ಹಸಿರುಮನೆ ಅನಿಲಗಳ ಬಿಡುಗಡೆಯನ್ನು ಕಡಿಮೆಮಾಡಿ ಅದನ್ನು ತಡೆಗಟ್ಟಬಹುದಾಗಿದೆ. ತಡೆಗಟ್ಟುವಿಕೆ ತಂತ್ರದ ಸೂಚನೆಗಳು ಬಹುಬಗೆಯ  ಸಮಸ್ಯೆಗಳನ್ನು ಎದುರಿಸುವಲ್ಲಿ ಉಪಯುಕ್ತವಾಗಿವೆ. ಸಾರ್ವಜನಿಕರು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಸ್ವಯಂಚಾಲಿತ ವಾಹನಗಳ ಎಲ್ಲ ಬಗೆಯ ಪ್ರದೂಷಣೆಯನ್ನು ತಡೆಗಟ್ಟಿ ತೈಲ ಸಂಕಷ್ಟವನ್ನು ಕೂಡ ಕಡಿಮೆಮಾಡಬಹುದಾಗಿದೆ; ಬೈಸಿಕಲ್‌ಬಳಕೆ ಹಾಗೂ ಮಾಂಸದ ಸೇವನೆ ಕಡಿಮೆ ಮಾಡುವುದು ಮನುಷ್ಯನ ಆರೋಗ್ಯಕ್ಕೆ ಸಹಕಾರಿಯಾಗಿದೆ; ಸ್ಥಳೀಯ ಆಹಾರಕ್ರಮಗಳ ಬಳಕೆ ಮತ್ತು ಪುನರ್ ಚಕ್ರಗೊಳಿಸುವ ಉತ್ಪನ್ನಗಳಿಂದಾಗಿ ಪ್ರಾದೇಶಿಕ ಆರ್ಥಿಕತೆಯನ್ನು ಸಂವರ್ಧಿಸಬಹುದಾಗಿದೆ. ಈ ರೀತಿಯ ಬದುಕಿನ ವರ್ತನೆಗಳ ಬದಲಾವಣೆಗಳಿಗೆ ಕೆಲವು ಪ್ರತಿರೋಧಗಳಿವೆ ಬಹುಮಟ್ಟಿಗೆ ಉತ್ಪಾದನಾವೆಚ್ಚ, ಸುಲಭ ಸೌಲಭ್ಯಗಳಿಗೆ ಸಿಲುಕಿರುವಿಕೆ, ಪರಂಪರಾಗತ ಪದ್ಧತಿ ಅಥವಾ ರಾಜಕೀಯ ಕಾರಣಗಳಿಂದಾಗಿ ಹಸಿರುಮನೆ ಅನಿಲ ಬಿಡುಗಡೆಗಳನ್ನು ಕಡಿಮೆಮಾಡಲು ಅಗತ್ಯವಾದ ಸಾಮಾಜಿಕ ಮತ್ತು ಆರ್ಥಿಋಕ ಬದಲಾವಣೆಗಳನ್ನು ತರುವಲ್ಲಿ ತೀವ್ರ ಪ್ರತಿರೋಧ ಉಂಟುಮಾಡಬಲ್ಲವು. ಇವುಗಳನ್ನು ಗೆಲ್ಲುವುದಕ್ಕೆ ಸ್ವಲ್ಪ ಸಮಯಾವಕಾಶ ಮತ್ತು ತೀವ್ರ ಪ್ರಯತ್ನ ಬೇಕಾಗುತ್ತದೆ. ಅದೃಷ್ಟವಶಾತ್‌, ತಂತ್ರಜ್ಞಾನಗಳ ಬದಲಾವಣೆಗಳು ನೆರವಾಗುವುದೆಂದು ನಿರೀಕ್ಷಿಸಲಾಗಿದೆ. ಬದುಕಿ ಉಳಿಯಲು ಸಂಕಷ್ಟ ಒದಗಿರುವ ಈ ಅವಧಿಯಲ್ಲಿ ನಮಗೆ ಉಳಿದಿರುವ ಅತ್ಯುತ್ತಮವಾದ ವಿಕಾಸಪರವಾದ ತಂತ್ರವೆಂದರೆ ಶಮನಗೊಳಿಸುವಿಕೆ ಮತ್ತು ಪ್ರಯೋಗಾತ್ಮಕತೆ.

ಶಮನಗೊಳಿಸುವಿಕೆ

ಎರಡನೇ ಪ್ರತಿಕ್ರಿಯಾಶೀಲ ರೀತಿಯ ವಾದವೆಂದರೆ ಶಮನಗೊಳಿಸುವಿಕೆ ಈ ವಾದದಲ್ಲಿ ಮುಖ್ಯವಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ತಂತ್ರಜ್ಞಾನ ಬದಲಾವಣೆಗಳಿಂದಾಗಿ ಹಸಿರುಮನೆ ಅನಿಲ ಬಿಡುಗಡೆಗಳನ್ನು ತಡೆಗಟ್ಟಿ ಮನುಕುಲದ ಉಳಿವಿಗೆ ಬೆಂಬಲವಾಗಿ ನಿಲ್ಲಬಲ್ಲಂತೆ ಸದ್ಯ ಉಂಟಾಗಬಹುದಾದ ಹವಾಮಾನ ವೈಪರೀತ್ಯಗಳನ್ನು ಉಚಿತ ರೀತಿಯಲ್ಲಿ ನಿರ್ವಹಣೆ ಮಾಡುವಂತಾಗಬೇಕಾಗಿದೆ. ಇದರಲ್ಲಿನ ಕೇಂದ್ರ ಗಮನ ವಿವಿಧ ಅಂಶಗಳಲ್ಲಿ ವಿವಿಧ ಬಗೆಯಾಗಿರುವುದರಿಂದ ಈ ಬದಲಾವಣೆ ಬರುವುದು ನಿಧಾನಗತಿಯಾಗಬಹುದಾದರೂ ಹವಾಮಾನ ವೈಪರೀತ್ಯ ಪರಿಣಾಮಗಳನ್ನು ಶಮನಗೊಳಿಸುವುದು ಖಚಿತವೆನಿಸುತ್ತದೆ. ಇದರಲ್ಲಿ ಪರಿಸರೀಯ ನಿರಾಶ್ರಿತರು, ವೈಪರೀತ್ಯ ಹವಾಮಾನದಿಂದ ಬದಲಾದ ಫಾರ್ಮಿಂಗ್‌ಪದ್ಧತಿಗಳನ್ನು ಕೈಗೊಳ್ಳುವಿಕೆ ವಿಧಾನಗಳು ಹಾಗೂ ನಗರಗಳಲ್ಲಿ ತೀವ್ರ ರೀತಿಯಲ್ಲಿ ಹಸಿರು ಕೃಷಿ ವಿನಾಶವಾಗುತ್ತಿರುವ ಅಂಶಗಳನ್ನು ನಿರ್ವಹಿಸುವ ಬಗ್ಗೆ ಮಾನಕಗಳನ್ನು (Standards) ಅಭಿವೃದ್ಧಿಪಡಿಸುವಿಕೆಯೂ ಸಹ ಇದರಲ್ಲಿ ಸೇರುತ್ತದೆ. ಪರಿಸರದಲ್ಲಿ ವಿಶಿಷ್ಟವಾದ ರೀತಿಯಲ್ಲಿ ಮಾನವನ ಕೈಚಳಕ ತೋರಿಸಲು ಈ ಶಮನಗೊಳಿಸುವಿಕೆ ವಿಧಾನ ಒಂದು ಮಾರ್ಗವಾಗಿದೆ ಎಂದು ಹೇಳಬಹುದು. ಶಮನಗೊಳಿಸುವಿಕೆಯು ಒಂದು ಹೆಚ್ಚು ಅಪೇಕ್ಷಣೀಯ ವಿಧಾನವಾಗಿದ್ದು ಇದು ವಿಳಂಬಗೊಳಿಸುವ ವಿಧಾನದ ಮೂಲಕ ತೀವ್ರತೆರನಾದ ರೀತಿಯಲ್ಲಿ ಕಾರ್ಯಾತ್ಮಕವಾಗಿದೆದ ಎಂದು ಭಾವಿಸಲಾಗಿದೆ.

ಪರಿಹರಿಸುವಿಕೆ

ಎಲ್ಲ ವಾದಗಳಿಗಿಂತ ಈ ಪರಿಹರಿಸುವಿಕೆ ವಾದ ಹೆಚ್ಚು ಅಪಾಯಕಾರಿ ಎನಿಸುವಂತಿದೆ. ಮೇಲು ನೋಟಕ್ಕೆ ತಾಂತ್ರಿಕರೂಪದ ತಡೆಗಟ್ಟುವಿಕೆ ಮತ್ತು ಶಮನಗೊಳಿಸುವಿಕೆ ತಂತ್ರಗಳ ಒಂದು ಮಿಶ್ರಣದಂತೆ ಕಾಣುವ ಈ ಪರಿಹರಿಸುವಿಕೆ ವಾದವು ಹಸಿರುಮನೆ ಅನಿಲಗಳ ಬಿಡುಗಡೆಯನ್ನು ಬದಲಿಸುವ ಅಥವಾ ಆ ಪರಿಣಾಮಗಳೊಂದಿಗೆ ನೇರವಾಗಿ ವ್ಯವಹರಿಸುವ ವಿಧಾನವಾಗಿರದೆ ಇದು ಜಾಗತಿಕ ತಾಪಮಾನಕ್ಕೆ ಸಂಬಂಧಿಸಿದ ಭೂಭೌತಿಕ ಪ್ರಕ್ರಿಯೆಗಳ ಕೇಂದ್ರ ಭಾಗವನ್ನು ಬದಲಾವಣೆಗೊಳಿಸುವಂತಹ ಪೂರ್ಣವಾಗಿ ಬೇರೆಯೇ ಆದ ವಾದವಾಗಿದೆ. ಈ ಪರಿಹರಿಸುವಿಕೆ ಕ್ರಮಗಳಲ್ಲಿ ಎರಡು ವಿಶಿಷ್ಟ ಸಮಸ್ಯಾತ್ಮಕ ಅಂಶಗಳಿವೆ. ಮೊದಲನೆಯ ಅತಿ ದೊಡ್ಡೆ ಸಮಸ್ಯೆ ಈ ವಾದದ ಯಶಸ್ಸು ಅನಿರೀಕ್ಷಿತವಾದ ಸಂಕೀರ್ಣ ಪರಸ್ಪರ ಅಂತರ್ ಕ್ರಿಯೆಯನ್ನು ತಡೆಗಟ್ಟುವುದರ ಮೇಲೆ ಅವಲಂಬಿತವಾಗಿಲ್ಲದೆ ಇರುವುದು ಭೂ ಭೌತಿಕ ಪ್ರಕ್ರಿಯೆಗಳನ್ನು ಹೆಚ್ಚು ಅರ್ಥ ಮಾಡಿಕೊಂಡಂತೆಲ್ಲಾ ಇರುವುದು ಭೂ ಭೌತಿಕ ಪ್ರಕ್ರಿಯೆಗಳನ್ನು ಹೆಚ್ಚು ಅರ್ಥ ಮಾಡಿಕೊಂಡಂತೆಲ್ಲಾ ನಮಗೆ ತಿಳಿದು ಬರುವುದೇನೆಂದರೆ ಅವು ಹೆಚ್ಚು ಸಂಕೀರ್ಣ ಪ್ರಕ್ರಿಯೆಗಳಾಗಿದ್ದು ಇದರಲ್ಲಿ ಸಣ್ಣ ಬದಲಾವಣೆಗಳೂ ಕೂಡ ಬೃಹತ್ತಾದ ಫಲಿತಾಂಶಗಳನ್ನು ಉಂಟುಮಾಡಬಹುದಾಗಿದೆ. ಇದರ ಸಾರಾಂಶ ಇಂದು ನಾವು ಅಪಾಯಗಳ ತುತ್ತತುದಿಯಲ್ಲಿ ಅವುಗಳೊಂದಿಗೆ ವ್ಯವಹರಿಸುತ್ತಿದ್ದೇವೆ. ಪರಿಹರಿಸುವಿಕೆ ಕ್ರಮದ ಎರಡನೆಯ ಸಮಸ್ಯಾತ್ಮಕ ಅಂಶ ಈ ಪರಿಹಾರ ಕ್ರಮಗಳಲ್ಲಿ ಅತಿ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ ಮತ್ತು ಇದು ಹೆಚ್ಚಿನ ಅಪಾಯಗಳನ್ನು ಒಳಗೊಂಡಿರುತ್ತದಾದರೂ ಅವು ತಾತ್ಕಾಲಿಕವಾಗಿರುತ್ತವೆ.

ಏನು ಮಾಡಬಹುದು?

ಸರಕಾರಗಳು ಪ್ರಸ್ತುತ ಇರುವ ಇಂಧನ ಮಾದರಿಯನ್ನು ಮತ್ತು ಕೈಗಾರಿಕಾ ಕೃಷಿಯ ಮುಖ್ಯ ಅಂಶವಾದ ರಾಸಾಯನಿಕ ತೀವ್ರ ಬೇಸಾಯವನ್ನು ತಿರಸ್ಕರಿಸಬೇಕು. ಹಾಗೂ ನಿಸರ್ಗದೊಂದಿಗೆ ಮತ್ತು ಸ್ಥಳೀಯ ಜನಸಮುದಾಯಗಳ ಅವಶ್ಯಕತೆಗಳಿಗೆ ಸೂಕ್ತವಾಗುವಂತಹ ಫಾರ್ಮಿಂಗ್‌ಪದ್ಧತಿಯನ್ನು ಬದಲಿಯಾಗಿ ಆಯ್ಕೆಮಾಡಿಕೊಳ್ಳಬೇಕಲು. ರಸಗೊಬ್ಬರಗಳ ಬಳಕೆಯನ್ನು ಕಡಿಮೆಮಾಡುವಿಕೆ, ಮಣ್ಣು ಮತ್ತು ಜೀವಿ ವಯವಿಧ್ಯತೆಯನ್ನು ಸಂರಕ್ಷಿಸುವಿಕೆ, ಬತ್ತದ ಉತ್ಪಾದನೆಯಲ್ಲಿ ಸುಧಾರಣೆ ಮಾಡುವಿಕೆ ಹಾಗೂ ಮಾಂಸಾಹಾರಕ್ಕೆ ಬೇಡಿಕೆ ಕಡಿಮೆಮಾಡುವುದರಿಂದ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೃಷಿ ಪ್ರದೇಶಗಳ ವಿನಾಶಗಳು ಹವಾಮಾನದ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ವಿರುದ್ಧ ದಿಕ್ಕಿಗೆ ತಿರುಗಿಸಬಹುದಾಗಿದೆ. ಹೊಲಗಳಲ್ಲಿ ಬೆಳೆ ಬೆಳೆಯದೆ ಇದ್ದಾಗ ಹೊದಿಕೆ ಬೆಳೆ ಬೆಳೆದು ಮಣ್ಣಿನಲ್ಲಿನ ಪೋಷಕಾಂಶಗಳು ಹರಿದುಹೋಗದಂತೆ ತಡೆಹಿಡಿಯುವಂತಹ ಮಣ್ಣನ್ನು  ಸಮೃದ್ಧಗೊಳಿಸುವ ಕ್ರಮಗಳನ್ನು ಅನುಸರಿಸಬೇಕು. ಬತ್ತದ ಬೆಳೆಯಲ್ಲಿ ಬಿಡುಗಡೆಯಾಗುವ ಮೀಥೇನ್‌ಅನಿಲ ಬಲವಾಗಿದ್ದು ಅದನ್ನು ಕಡಿಮೆಮಾಡಬೇಕಾಗಿದೆ. ಕಡಿಮೆ ನೀರು ಮತ್ತು ರಸಗೊಬ್ಬರ ಬಳಸಿ, ಇಳುವರಿ ಕಡಿಮೆಯಾಗದಂತೆ ಈ ಅನಿಲವನ್ನು ಕಡಿಮೆ ಮಾಡಬಹುದಾಗಿದೆ.

.೪ ಜಾಗತಿಕ ತಾಪಮಾನದ ವಿರುದ್ಧ ಹೋರಾಡಲು ಹತ್ತು ಹೆಜ್ಜೆಗಳು

ಮನೆಯಲ್ಲಿ ಮತ್ತು ಕೆಲಸದ ವೇಳೆಯಲ್ಲಿ ಇಂಗಾಲದ ಬಿಡುಗಡೆಗಳನ್ನು ಕಡಿಮೆ ಮಾಡಲು ಸರಳವಾದ ಹತ್ತು ಹೆಜ್ಜೆಗಳನ್ನು ಕೆಳಗೆ ಕೊಡಲಾಗಿದೆ.

೧. ವಿದ್ಯುತ್‌ದೀಪಗಳನ್ನು ಬದಲಾಯಿಸಿ, ಕಡಿಮೆ ವಿದ್ಯುಚ್ಛಕ್ತಿ ಬಳಸುವ ಸಿಎಫ್‌ಸಿ ಬಲ್ಬ್ ಗಳನ್ನು ಹಾಕಿ ಶೆ. ೬೦-೮೦ರಷ್ಟು ವಿದ್ಯುಚ್ಛಕ್ತಿ ಉಳಿತಾಯ ಮಾಡಿ, ಇದೊಂದು ಸಣ್ಣ ಬದಲಾವಣೆಯಿಂದ ಪ್ರತಿವರ್ಷಕ್ಕೆ ೬೮ ಕಿ.ಗ್ರಾಂ ಇಂಗಾಲದ ಡೈಆಕ್ಸೈಡ್‌(CO2) ಉಳಿತಾಯಮಾಡಬಹುದು.

೨. ನಿಮ್ಮ ಕಂಪ್ಯೂಟರ್ ಗಳನ್ನು ರಾತ್ರಿ ಹೊತ್ತು ಆರಿಸಿಡಿ. ಟಿವಿ, ಡಿವಿಡಿ ಮತ್ತು ಇತರ ಉಚ್ಚಸಂಸ್ಕೃತಿಯ ಉಪಕರಣಗಳನ್ನು ಬಳಸದೆ ಇರುವ ಸಮಯಗಳಲ್ಲಿ ಆರಿಸದೆ ಹಾಗೇ ಆನ್‌ಮಾಡಿ ಇಡುವುದರಿಂದ ಬ್ರಿಟನ್‌ದೇಶ ಒಂದರಲ್ಲೇ ಪ್ರತಿವರ್ಷಕ್ಕೆ ಹಸಿರುಮನೆ ಅನಿಲದ ಕೊಡುಗೆ ಒಂದು ಮಿಲಿಯನ್‌ಟನ್‌ಗಳಷ್ಟಾಗುತ್ತದೆ.

೩. ನಿಮ್ಮಿಂದ ಆಗುತ್ತಿರಬಹುದಾದ ಇಂಗಾಳದ ಬಿಡುಗಡೆಗಳನ್ನು ಲೆಕ್ಕಮಾಡಿ. ಮುಂದಿನ ಸಾರಿ ನಿಮ್ಮ ಕಂಪ್ಯೂಟರ್ ಮುಂದೆ ಕುಳಿತಾಗ ೧೦ ನಿಮಿಷ ಕಾಲಾವಕಾಶಮಾಡಿಕೊಂಡು ಗೂಗಲ್‌ಆನ್‌ಲೈನ್‌ನಲ್ಲಿ, ಇಂಗಾಲದ ಗಣಕಕ್ಕೆ ಹೋಗಿ ನಿಮ್ಮ ಇಂಗಾಲದ ಲೆಕ್ಕಮಾಡಿರಿ. ಈ ಒಟ್ಟು ಲೆಕ್ಕ ಮಾಡುವುದರಿಂದ – ಮನೆಯಲ್ಲಿ, ಬಿಸಿಮಡುವ ಉಪಕರಣಗಳಲ್ಲಿ ಅಥವಾ ರಜೆ ಅವಧಿಯಲ್ಲಿ ಎಲ್ಲಿ ಈ ಇಂಗಾಲವನ್ನು ಕಡಿಮೆಮಾಡಬಹುದು ಎಂಬ ಕಲ್ಪನೆ ನಿಮಗೆ ಬರುತ್ತದೆ.

೪. ಸ್ಥಳೀಯವಾದ ಆಹಾರಗಳನ್ನೇ ಬಳಸಿ. ವಿಶ್ವದ ಹಸಿರುಮನೆ ಅನಿಲಗಳ ಬಿಡುಗಡೆಯಲ್ಲಿ ಸುಮಾರು ೧/೫ ಭಾಗಕ್ಕೆ ಕೃಷಿಯೇ ಜವಾಬ್ದಾರಿಯಾಗಿದೆ ಸ್ಥಳೀಯ ಹಾಗೂ ಆಯಾ ಹಂಗಾಮಿನ ಆಹಾರದ ಬೆಳೆಗಳನ್ನೇ ಬಳಸುವುದರಿಂದ ಆಹಾರದ ಬೆಳೆಗಳನ್ನು ದೂರದೂರದ ಸ್ಥಳಗಳಿಗೆ ಸಾಗಣೆ ಮಾಡುವಾಗ ಬಿಡುಗಡೆಯಾಗುವ ಇಂಗಾಲವನ್ನು ತಡೆಗಟ್ಟಿದಂತಾಗುತ್ತದೆ.

೫. ಮಾಂಸಾಹಾರದ ಬಳಕೆಯನ್ನು ಕಡಿಮೆಮಾಡಬೇಕು. ಒಂದು ಕಿ.ಗ್ರಾಂ ದನದ ಮಾಂಸದ ಉತ್ಪಾದನೆಗೆ ೩೬.೪ ಕಿ.ಗ್ರಾಂ ಇಂಗಾಲಕ್ಕೆ ಸಮನಾದ ಹಸಿರುಮನೆ ಅನಿಲದ ಬಿಡುಗಡೆಯಾಗಿರುತ್ತದೆಂದು ಅಧ್ಯಯನದ ಮೂಲಕ ತಿಳಿದುಬಂದಿದೆ. ಇದಕ್ಕಿಂತ ಹೊಟ್ಟೆ ಉಬ್ಬರಿಸುವ ದನಕರುಗಳು ಉತ್ತಮವೆಂದು ಕಂಡುಬಂದಿದೆ.

೬. ಅಡಿಗೆ ಮಾಡುವ ಉಪಕರಣಗಳನ್ನು ಆರಿಸಿಡಿ. ಮನೆಗಳಲ್ಲಿ ಉಪಯೋಗ ಮಾಡುವ ಇಂಧನಗಳಲ್ಲಿ ಅರ್ಧದಷ್ಟು ಬಿಸಿಮಾಡುವುದಕ್ಕೆ ಮತ್ತು ತಣ್ಣಗೆ ಮಾಡುವುದಕ್ಕೆ ವೆಚ್ಚವಾಗುತ್ತಿದೆ. ಈ ಅಡಿಗೆ ಉಪಕರಣಗಳನ್ನು ಕೇವಲ ೨ ಡಿಗ್ರಿಯಷ್ಟು ಮಾತ್ರ ಕಡಿಮೆ ಮಾಡುವುದರಿಂದ ಪ್ರತಿ ವರ್ಷಕ್ಕೆ ೮೦೦ ಕಿ. ಗ್ರಾಂ CO2 ಬಿಡುಗಡೆಯನ್ನು ತಪ್ಪಿಸಬಹುದಾಗಿದೆ.

೭. ಹವಾನಿಯಂತ್ರಕಗಳನ್ನು ಸ್ವಚ್ಛವಾಗಿಡಿ. ೨ ಡಿಗ್ರಿಯಷ್ಟು ಮಾತ್ರ ಕಡಿಮೆಮಾಡಿಕೊಳೆಯಾದ ಶೋಧಕ (ಫಿಲ್ಟರ್) ಗಳನ್ನು ಸ್ವಚ್ಛಮಾಡಿ ಅಥವಾ ಶಿಫಾರಸಿನ ಮೇರೆಗೆ ಬದಲಾಯಿಸಿ. ಶೋಧಕಗಳನ್ನು ಸ್ವಚ್ಛಮಾಡುವುದರಿಂದ ನಿಮ್ಮ ಹಣದ ಉಳಿತಾಯವೂ ಆಗುತ್ತದೆ ಹಾಗೂ ವರ್ಷಕ್ಕೆ  ೧೬೦ ಕಿ.ಗ್ರಾಂ ಇಂಗಾಲದ ಬಿಡುಗಡೆಯೂ ತಪ್ಪುತ್ತದೆ.

೮. ವಾಹನಗಳ ಚಾಲನೆ, ವಿಮಾನ ಹಾರಾಟಗಳನ್ನು ಕಡಿಮೆಮಾಡಿ, ಪ್ರತಿ ಒಂದು ಮೈಲಿ ವಾಹನಚಾಲನೆಯಿಂದ ೪೫೦ ಗ್ರಾಂ CO2 ಬಿಡುಗಡೆಯಾಗುತ್ತದೆ. ವಿಮಾನಗಳಿಂದಾಗುತ್ತಿರುವ ಅನಿಲ ಬಿಡುಗಡೆಗಳು ಈಗಾಗಲೇ ಮಿತಿಮೀರಿವೆ ಹಾಗೂ ೨೦೫೦ರ ಹೊತ್ತಿಗೆ ಇದು ವಿಶ್ವದ ಅನಿಲ ಬಿಡುಗಡೆಗಳಲ್ಲಿ ಶೇ. ೫ ರಷ್ಟಾಗುವುದೆಂದು ಅಂದಾಜು ಮಾಡಲಾಗಿದೆ. ಸಾಧ್ಯವಾದಷ್ಟು ನಮ್ಮ ಬಹುಮಟ್ಟಿನ ಸಂಚಾರಕ್ಕೆ ಬಸ್ಸುಗಳಲ್ಲಿ ಸಂಚರಿಸುವುದು ಹೆಚ್ಚು ಸೂಕ್ತವಾಗಿದೆ.

೯. ಒಂದು ಮರ ಬೆಳೆಸಿ. ಒಂದು ಬೆಳೆದ ಮರ ವರ್ಷಕ್ಕೆ ನೂರಾರು ಕಿ.ಗ್ರಾಂ CO2ವನ್ನು ಹೀರಿಕೊಳ್ಳುತ್ತದೆ ಹಾಗೂ ಹೀರಿಕೊಂಡಿದ್ದನ್ನು ತನ್ನ ದಾರುವಿನಲ್ಲಿ ಹಲವು ವರ್ಷಗಳವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ನಾಟಿ ತಳಿಗಳನ್ನು ಬೆಳೆಯುವುದರಿಂದ ಜೀವವೈವಿಧ್ಯತೆಯನ್ನು ಚೇತನಗೊಳಿಸಲು ನೆರವಾಗುತ್ತದೆ.

೧೦. ಬಳಕೆ ಕಡಿಮೆಮಾಡಿ, ಪುನರ್ಬಳಕೆ ಮಾಡಿ, ಪುನರ್ ಚಕ್ರಮಾಡಿ. ಗಾಜಿನ ಶೀಷೆಗಳನ್ನು ಅಥವಾ ಅಲ್ಯೂಮಿನಿಯಂ ಡಬ್ಬಿಗಳನ್ನು ಪುನರ್ ಚಕ್ರಗೊಳಿಸಿದ ವಸ್ತುಗಳಿಂದ ತಯಾರಿಸುವುದಕ್ಕೆ ಕಡಿಮೆ ಇಂಧನ ವೆಚ್ಚವಾಗುತ್ತದೆ ಹಾಗೂ ಪ್ರತಿ ಬಾರಿ ಅವುಗಳನ್ನು ಹೊಸದಾಗಿ ಮಾಡುವುದಕ್ಕಿಂತ ಪ್ರದೂಷಣೆ ಕಡಿಮೆಯಾಗುತ್ತದೆ.

.೫ ಮುಕ್ತಾಯ

ಪ್ರಸ್ತುತ ಜಾಗತಿಕ ತಾಪಮಾನದ ಪ್ರವೃತ್ತಿಗಳು ಮಿತಿಮೀರಿದ ಪ್ರಮಾಣದಲ್ಲಿ ಮುಂದುವರಿಯುತ್ತಿರುವುದು ಸ್ಪಷ್ಟವಾಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಮಾನವ ಚಟುವಟಿಕೆಗಳಿಂದಾಗಿ ಬಿಡುಗಡೆಯಾಗುವ ಹಸಿರುಮನೆ ಅನಿಲಗಳು ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾಗಿವೆ. ೨೧ನೇ ಶತಮಾನಕ್ಕೆ ಮತ್ತು ಮುಂದೆಯೂ ಕೂಡ ತಾಪಮಾನ ಮತ್ತಷ್ಟು ಹೆಚ್ಚಾಗುವುದು ಖಂಡಿತವಾಗಿದೆ. ವಾತಾವರಣದಲ್ಲಿ ಸಸ್ಯಗಳು ಬೆಳೆಯುವುದಕ್ಕೆ ಬೇಕಾದ ಅವಧಿ ಇನ್ನೂ ಹೆಚ್ಚಾಗಿರುವಾಗಲೇ ಹಾಗೂ ಇಳುವರಿ ಹೆಚ್ಚಾಗಿ ದೊರೆಯುವಂತಿರುವಾಗಲೂ ಕೂಡ ವಿಶ್ವದಾದ್ಯಂತ ಕೃಷಿಯಿಂದ ದೊರೆಯುವ ಆದಾಯದಲ್ಲಿ ಶೇ. ೧೬ರಷ್ಟು ಕಡಿಮೆಯಾಗುವುದರಲ್ಲಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ರೈತರು ಹೆಚ್ಚಿನ ಆದಾಯದ ಆಸೆ ತೋರುವ ತಯಾರಿಕಾ ಕಂಪೆನಿಗಳು ಮತ್ತು ಸೇವಾಕ್ಷೇತ್ರಗಳಿಗೆ ಸೇರಲಿದ್ದಾರೆ. ಹವಾಮಾನ ವೈಪರೀತ್ಯವು ಈಗಾಗಲೇ ಹಲವು ನೈಸಗಿಕ ಮತ್ತು ಮಾನವ ಪದ್ಧತಿಗಳ ಮೇಲೆ ಗಣನೀಯ ಪರಿಣಾಮ ಬೀರಿದೆ. ಭವಿಷ್ಯದಲ್ಲಿ ಈ ಪರಿಣಾಮಗಳು ಇನ್ನಷ್ಟು ಹೆಚ್ಚಾಗಿ. ಉಷ್ಣಾಂಶ ಹೆಚ್ಚಳದ ತೀವ್ರತೆಗೆ ಅನುಗುಣವಾಗಿ ತೀವ್ರ ಸ್ವರೂಪ ತಾಳಲಿವೆ. ಇದಕ್ಕೆ ಹೊಂದಾಣಿಕೆಯಾಗಬೇಕಾಗಿರುವ ಕ್ರಮಗಳನ್ನು ಈಗಾಗಲೇ ಕಾರ್ಯರೂಪಕ್ಕೆ ತರಲಾಗಿದೆ. ಈ ಹೊಂದಾಣಿಕೆಗಳು ಮುಂದಿನ ಪರಿಣಾಮಗಳನ್ನು ಎದುರಿಸಲು ಅವಶ್ಯವಾಗಿವೆ. ಆದರೆ ಈ ಅನುಸರಣೆಗೂ ಒಂದು ಮಿತಿ ಇರುತ್ತದೆ; ಈ ಪರಿಣಾಮಗಳ ತೀವ್ರತೆಯನ್ನು ಕಡಿಮೆಮಾಡಲು ಶಮನಗೊಳಿಸುವಿಕೆ ಕ್ರಮಗಳೂ ಕೂಡ ಅಗತ್ಯವಾಗಿರುತ್ತವೆ. ಹವಾಮಾನ ವೈಪರೀತ್ಯವು ಬೆಳೆ ಉತ್ಪಾದನೆಯಲ್ಲಿ ನಷ್ಟ ಉಂಟುಮಾಡುವುದಷ್ಟೇ ಅಲ್ಲ ಅಪೌಷ್ಟಿಕ ಜನರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಬಡತನದ ವಿರುದ್ಧದ ಹೋರಾಟಕ್ಕೆ ವಿರುದ್ಧ ಪರಿಣಾಮವಾಗುವುದರೊಂದಿಗೆ ಆಹಾರ ಸುರಕ್ಷತೆಗೆ ಧಕ್ಕೆ ಉಂಟಾಗಲಿದೆ. ಅತ್ಯಂತ ತೀವ್ರ ಪರಿಣಾಮವು ಆಫ್ರಿಕಾದ ಉಪಸಹಾರಾ ದೇಶಗಳಲ್ಲಿ ಹೆಚ್ಚಾಗಿ ಕಂಡ ಬರಲಿದೆ. ಈ ದೇಶಗಳು ಹವಾಮಾನ ವೈಪರೀತ್ಯಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಅಥವಾಠ ಅದಕ್ಕೆ ಸರಿದೂಗಿಸುವಂತೆ ಆಹಾರ ಆಮದುಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲು ಅತ್ಯಂತ ಕಡಿಮೆ ಸಾಮರ್ಥ್ಯ ಹೊಂದಿರುವಂತಹವು. ಅಳವಡಿಕೆ ಮಾದರಿಗಳು ಸೂಚಿಸುವ ಪ್ರಕಾರ, ಜಾಗತಿಕ ತಾಪಮಾನ ಹೆಚ್ಚಳದಿಂದ ಉತ್ತರ ಭಾರತದಲ್ಲಿ ಬತ್ತ ಮತ್ತು ಗೋಧಿ ಉತ್ಪಾದನೆಗಳಲು ಕಡಿಮೆಯಾಗಲಿವೆಯೆಂದು ಕಂಡುಬಂದಿದೆ.

ಹಸಿರುಮನೆ ಅನಿಲ ಬಿಡುಗಡೆಗಳನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿರುವ ಶಮನಗೊಳಿಸುವಿಕೆ ಕ್ರಮಗಳು ಹವಾಜಮಾನ ವೈಪರೀತ್ಯ ಪರಿಣಾಮಗಳನ್ನು ಕಡಿಮೆ ಮಾಡಲು ಅಥವಾ ವಿಳಂಬಗೊಳಿಸಲು ನೆರವಾಗುತ್ತವೆ. ಕೆಲವು ಕಾರ್ಯನೀತಿಗಳ ಮೂಲಕ ಉತ್ಪಾದಕರು ಮತ್ತು ಗ್ರಾಹಕರಿಗೆ ಪ್ರೋತ್ಸಾಹ ಧನಸಹಾಯಗಳನ್ನು ನೀಡಿ ಕಡಿಮೆ ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುವಂತಹ ಉತ್ಪನ್ನಗಳು, ತಂತ್ರಜ್ಞಾನಗಳ ಪ್ರಕ್ರಿಯೆಗಳ ಮೇಲೆ ವಿಶಿಷ್ಟ ಬಗೆಯ ಹೂಡಿಕೆಗಳನ್ನು ಹೂಡುವಂತೆ ಮಾಡಬಹು ದಾಗಿದೆ. ಶಮನಗೊಳಿಸುವ ಹೊಸ ಕಾರ್ಯನೀತಿಗಳನ್ನು ನಿರೂಪಿಸಿದ ಹೊರತು ಜಾಗತಿಕ ವಾತಾವರಣದಲ್ಲಿ ಹಸಿರುಮನೆ ಅನಿಲಗಳು ಮುಂಬರುವ ದಶಕಗಳಲ್ಲಿ ಹಾಗೂ ಮುಂದೆಯೂ ಕೂಡ ಹೆಚ್ಚುವುದು ಮುಂದುವರಿಯಲಿದೆ. ಹೆಚ್ಚಿನ ಸಂಶೋಧನೆಗಳನ್ನು ಮುಂದುವರಿಸಿ, ಬಿಟ್ಟುಹೋಗಿರುವ ವಿಷಯಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳುವುದರಿಂದ ಮುಂದಿನ ಅನಿರ್ದಿಷ್ಟತೆಗಳನ್ನು ಕಡಿಮೆಮಾಡಿ ಹವಾಮಾನ ವೈಪರೀತ್ಯಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಹೆಚ್ಚು ಉತ್ತಮ ರೀತಿಯಲ್ಲಿ ಕೈಗೊಳ್ಳಬಹುದಾಗಿದೆ.

ಎಲ್ಲ ಸರ್ಕಾರಗಳು ಮತ್ತು ಪೌರ ಸಮಾಜ ಪರಸ್ಪರ ಅವಲಂಬಿತವಾಗಿರುವ ನಮ್ಮ ವಿಶ್ವದಲ್ಲಿ, ಈಗಾಗಲೇ ನಡೆಯುತ್ತಿರುವ ಸುಸ್ಥಿರ ಅಭಿವೃದ್ಧಿಯಲ್ಲಿ ಒಂದು ಮೌಲ್ಯಯುಕ್ತವಾದ, ನೀತಿಯುಕ್ತವಾದ ತಳಹದಿಯನ್ನು  ಪೋಷಿಸಿ ಮಾನಕೋಟಿಯ ಕಲ್ಯಾಣಕ್ಕೆ ನೆರವಾಗಬೇಕಾಗಿದೆ. ಎಲ್ಲಾ ವಿದ್ಯಾಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳು ವಿಶೇಷವಾಗಿ ಯುವಜನತೆಗೆ ಹವಾಮಾನ ವೈಪರೀತ್ಯಗಳ ಬಗ್ಗೆ ಹೆಚ್ಚು ಪರಿಣಾಮಕಾರಿಯಾಗಿ ಶಿಕ್ಷಣ ನೀಡಬೇಕಕು. ಹವಾಮಾನ ವೈಪರೀತ್ಯ ಸುಧಾರಣೆಗಳಿಗೆ ಧನಸಹಾಯ ಒದಗಿಸುವಂತೆಯೇ ಅತಿಬಳಕೆ ಮತ್ತು ಪ್ರದೂಷಣೆ ಮಾಡುವವರಿಗೆ ಸರ್ಕಾರವು ದಂಡ ವಿಧಿಸಿ ಹಣ ಸಂಗ್ರಹಿಸುವುದೇ ಅಲ್ಲದೆ, ಹವಾಮಾನ-ಸ್ನೇಹಿ ತಂತ್ರಜ್ಞಾನಗಳನ್ನು ಪೋಷಿಸುವವರಿಗೆ ಪ್ರೋತ್ಸಾಹಧನ ನೀಡುವುದರಿಂದ ಪಳೆಯುಳಿಕೆ ಇಂಧನ ಮತ್ತು ಅಣುಶಕ್ತಿ ಆಧಾರಿತ ತಂತ್ರಜ್ಞಾನಗಳ ಬಳಕೆ ಬಗ್ಗೆ ನಿರ್ಣಯ ಕೈಗೊಳ್ಳಬಹುದಾಗಿದೆ. ಅಗತ್ಯವಾದ ಬದಲಾವಣೆಗಳನ್ನು ತರುವಂತೆ ಸಂಬಂಧಪಟ್ಟ ನಿಗಮಗಳಲ್ಲಿ ಕಾನೂನು ಮತ್ತು ತೆರಿಗೆಗಳನ್ನು ಜಾರಿಗೆ ತರಲು ರಾಜಕೀಯ ಕ್ರಮಗಳನ್ನು  ತೆಗೆದುಕೊಳ್ಳುವಂತೆ ರಾಜಕೀ ಯ ವ್ಯವಸ್ಥೆಯಲ್ಲಿ ಒತ್ತಾಯಗಳನ್ನು ಉಂಟುಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿಗತ ಹೊಣೆಗಾರಿಕೆಯಾಗಿದೆ.