ರಾಗಿಯ ಕಲ್ಲಿಗೆ ರಾಜ್ಯವು ತಿರುಗ್ಯಾರೆ
ರಾಯ ಸಂಪನರ ಮಗಳಿಗೆ
ರಾಯ ಸಂಪನರ ಮಗಳು ನೀಲಮ್ಮsಗೆ
ರಾಜ್ಯ ತಿರುಗ್ಯಾರೆ ಬಸವಯ್ಯ

ಬೀಸೋ ಕಲ್ಲಿಗೆ ದೇಶವ ತಿರುಗ್ಯಾರೆ
ಸಕಲ ಸಂಪನರ ಮಗಳಿಗೆ
ಸಕಲ ಸಂಪನರ ಮಗಳು ನೀಲಮ್ಮsಗೆ
ದೇಶ ತಿರುಗ್ಯಾರೆ ಬಸವಯ್ಯ

ಬಿದಿರೆ ಬೆಟ್ಟದ ಮೇಲೆ ಚೆದುರ ರಾಗೀಕಲ್ಲು
ಮದನಾರಿನೆಂಬೊ ಹಿಡಿಗೂಟ
ಮದನಾರಿನೆಂಬೊ ಹಿಡಿಗೂಟನ್ಹಿಡಕೊಂಡು
ಶಿವನ ಪಾಡ್ಯಾಳೆ ಸಿರಿಗೌರಿ

ಮಾಳಿಗೆ ಮ್ಯಾಗಳ ಸಾಲಂಚಿನ ಗೆರಸಿಯ
ತಾಯವ್ತೆಗೆದಿಡೆ ನಡುಮನೆಗೆ
ತಾಯವ್ತೆಗೆದಿಡೆ ನಡುಮನೆಗ್ನಾವಿಬ್ಬರೂ
ಮುಕ್ಕಣ್ಣೇಶ್ವರನಾ ನೆನೆದೇವೆ