ವ್ಯವಸಾಯಕ್ಕೆ ಬೆನ್ನಲುಬಿನಂತಿರುವ ದನಗಳ ಪರಿಸ್ಥತಿಯು ನಮ್ಮಲ್ಲಿ ಇಂದು ಬಹಳ ಹೀನಾವಸ್ಥೆಯಲ್ಲಿದೆ. ಎಂದು ಹೇಳಲು ವಿಷಾದವೆನಿಸುತ್ತದೆ. ಒಂದಾನೊಂದು ಕಾಲಕ್ಕೆ ಯಾವ ಭಾರತದ ಹಳ್ಳಿಗಳ ಮನೆಯಲ್ಲಿ ಬಂಗಾರದ ಹೊಗೆ ಹಾಯುತ್ತಿತ್ತೋ ಇಂದು ಅಂಥ ಹಳ್ಳಿಯ ಮನೆಯಲ್ಲಿ ಜನರು ಪಶುಪಾಲನೆ, ಸಂವರ್ಧನೆಗಳ ಬಗ್ಗೆ ಹೆಚ್ಚು ಆಸಕ್ತಿ ಮತ್ತು ತಿಳಿವಳಿಕೆ ಹೊಂದಿಲ್ಲದಿರುವುದೂ ಸಹ ಒಂದು ಮುಖ್ಯ ಕಾರಣವೆಂದರೆ ಆಕಳುಗಳ ಸಂತಾನಾಭಿವೃದ್ಧಿಗೆ ಉಪಯೋಗಿಸುತ್ತಿರುವುದರ ದುಷ್ಫಲವೇ ಇಂದು ಎಲ್ಲ ಕಡೆಗಳಲ್ಲಿ ಕಾಣುತ್ತಿರುವ ನಿರ್ಬಲವಾದ, ಗಿಡ್ಡ ದನಗಳ ಹಿಂಡು. ಇಂಥ ಆಕಳುಗಳು ಒಂದು ಲೀಟರ್ ಹಾಲು ಕೊಡುವುದೂ ಸಹ ದುರ್ಲಭ. ನಮ್ಮ ಹಳ್ಳಿಳಲ್ಲಿ ದನಗಳ ಸಂಗೋಪನೆ ವಿವೇಚನೆ ಇಲ್ಲದ ನಡೆದಿರುತ್ತದೆ. ಯಾವುದೋ ಒಂದು ಗೊತ್ತು ಗುರಿಯಿಲ್ಲದ ಅನಾಮಧೇಯ ಹೋರಿಯ ಉಪಯೋಗದಿಂದ ಮುಂದಿನ ಸಂತಾನಾಭಿವೃದ್ಧಿಯು ದಿನ ದಿನಕ್ಕೆ ಕೆಡುತ್ತ ಬಂದಿದೆ. ಆದರೆ ನಾವು ಇದರ ಬಗ್ಗೆ ಏನೂ ವಿಚಾರ ಮಾಡದೆ ತಾತ್ಸಾರ ಮಾಡಿರುವುದೇ ದನಗಳ ಹೀನಾವಸ್ಥೆಗೆ ಕಾರಣವೆಂದು ಹೇಳಬಹುದು.

ದೇಶದಲ್ಲಿ ಆಗಾಗ ಆಹಾರ ಅಭಾವ ಮತ್ತು ಬರಗಾಲ ಬಂದಾಗ ದನಗಳ ಪೋಷಣೆ, ಪಾಲನೆ ಸರಿಯಾಗಿ ಆಗದೆ ಅವುಗಳ ಆರೋಗ್ಯ ಮತ್ತು ಸಂತಾನಾಭಿವೃದ್ಧಿಯ ಶಕ್ತಿ ಕುಂದುತ್ತದೆ. ಹೀಗಾಗಿ ಮುಂದಿನ ಪೀಳಿಗೆಯು ಉತ್ತಮ ಪಶು ಸಂಪತ್ತಾಗಲಾರದು.

ದನಗಳ ಪೋಷಣೆ ಮತ್ತು ಬೆಳವಣಿಗೆಗೆ ಸಾಕಷ್ಟು ಉತ್ತಮ ಪೌಷ್ಟಿಕ ಆಹಾರ ಅವಶ್ಯಕ. ಆದರೆ ರೈತನ ಬಳಿಯಲ್ಲಿರುವ ಮೇವಿನ ಬಹುಭಾಗವನ್ನು ಅವನಲ್ಲಿರುವ ದುರ್ಬಲವಾದ ಕೀಳು ದರ್ಜೆಯ ದನಗಳು ತಿಂದುಬಿಡುವುದರಿಂದ ಒಳ್ಳೆಯ ತಳಿಯ ದನಗಳಿಗೆ ಮೇವಿನ ಅಭಾವ ಉಂಟಾಗಿ ಅವುಗಳ ಏಳಿಗೆಗೆ ಧಕ್ಕೆಯುಂಟಾಗಿದೆ. ಮೇವು ಹೆಚ್ಚು ಸಿಗುವ ಕಾಲದಲ್ಲಿ ಅದನ್ನು ಸರಿಯಾಗಿ ಉಪಯೋಗಿಸದೆ ಮತ್ತು ಕೂಡಿಡದೆ. ಹಾಳು ಮಾಡುವುದರಿಂದ ಮೇವಿನ ಅಭಾವ ಕಾಲದಲ್ಲಿ (ಬೇಸಿಗೆಯಲ್ಲಿ) ದನಗಳು ಅರೆಹೊಟ್ಟೆಯಿಂದ ಬಳಲಬೇಕಾಗುತ್ತದೆ. ಇದ್ದಾಗ ಮಿತವ್ಯಯ ಮಾಡದೆ ಇಲ್ಲದಾಗ ಉಪವಾಸ ಹಾಕುವ ಪದ್ಧತಿಯು ದನಗಳ ಬೆಳವಣಿಗೆಗೆ ಹಾನಿಕಾರಕವಾಗಿದೆ.

ಜಮೀನು, ಬೆಳೆ ಮತ್ತು ದನಗಳಿಗೆ ನಿಕಟಸಂಬಂಧವುಂಟು. ಇವು ಒಂದನ್ನೊಂದು ಬಿಟ್ಟು ಬಾಳಲಾರವು. ಒಂದರ ಅಭಿವೃದ್ಧಿ ಇನ್ನೊಂದರ ಪ್ರಗತಿಗೆ ಸಾಧನ, ಮತ್ತೊಂದರ ಅಧೋಗತಿ ಎಲ್ಲದರ ಅಧೋಗತಿಗೆ ಮೂಲ. ಈ ಮೂರು ಒಂದೇ ತಾಯಿಯ ಮಕ್ಕಳಂತೆ. ಇವುಗಳಲ್ಲಿ ಒಂದರ ಬಗ್ಗೆ ಹೆಚ್ಚು ಆಸಕ್ತಿ, ವಾತ್ಸಲ್ಯ ಮತ್ತೋಂದರ ಬಗ್ಗೆ ದಾಯಾದಿ ಮತ್ಸರ ತೋರಿಸಿದಲ್ಲಿ ಯಾವುದರ ಏಳಿಗೆಯೂ ಆಗದೆ ರಾಷ್ಟ್ರದ ಏಳಿಗೆಗೆ ಕುಂದುಂಟಾಗುತ್ತದೆ. ಈ ಮೂರರಲ್ಲಿಯೂ ಕ್ರಮತಪ್ಪಿ ಒಂದನ್ನು ಅಲಕ್ಷಿಸಿ, ಇನ್ನೋಂದಕ್ಕೆ ಹೆಚ್ಚು ಮಹತ್ವ ಕೊಟ್ಟಲ್ಲಿ ನಮ್ಮ ವ್ಯವಸಾಯ ನಶಿಸುವುದರಲ್ಲಿ ಸಂದೇಹವಿಲ್ಲ.

ಪರಿಣತ ಪಶುವೈದ್ಯರಿಂದ ಸಕಾಲಕ್ಕೆ ಚಿಕಿತ್ಸೆ ಹೊಂದದೆ. ಸಾಂಕ್ರಾಮಿಕ ರೋಗಗಳು ಹಬ್ಬಿದಾಗ ಮುಂಜಾಗ್ರತೆ ವಹಿಸದ ಕಾರಣ ದನಗಳು ಅಕಾಲಮೃತ್ಯುವಿಗೆ ತುತ್ತಾಗುತ್ತವೆ. ಇನ್ನೂ ಹಳೆ ಪದ್ಧತಿಯ ಮೂಢ ನಂಬಿಕೆಗಳಲ್ಲಿ ವಿಶ್ವಾಸವಿಟ್ಟು ಗಿಡಮೂಲಿಕೆ, ಮಂತ್ರ ತಂತ್ರಗಳನ್ನು ನಂಬಿರುವುದರಿಂದ ದನಗಳು ರೋಗಾದಿ ಉಪದ್ರವಗಳಿಗೆ ಗುರಿಯಾಗಿ ಅಪಾರ ಹಾನಿಯಾಗುತ್ತದೆ.

ಈ ಎಲ್ಲ ಕಾರಣಗಳಿಂದ ನಮ್ಮಲ್ಲಿಯ ಪಶುಪಾಲನೆ ಮತ್ತು ಸಂಗೋಪನೆ ಬಹಳ ಮಂದಗತಿಯಿಂದ ಸಾಗಿದೆ. ನಮ್ಮ ದೇಶದಲ್ಲಿರುವಷ್ಟು ದನಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಹೀಗಿದ್ದಾಗ್ಯೂ ನಾವು ಬೇರೆ ದೇಶದವರಿಗಿಂತ ಬಡತನದಲ್ಲಿ ನರಳುತ್ತಿರುವುದಕ್ಕೆ ನಮ್ಮಲ್ಲಿಯ ಪಶುಪಾಲನೆ, ಸಂಗೋಪನೆ, ಪೋಷಣೆ ಮತ್ತು ಸಂವರ್ಧನೆ ಆಧುನಿಕ ವೈಜ್ಞಾನಿಕ ರೀತಿಯಲ್ಲಿ ಸಾಗದೆ ಇರುವುದೇ ಮುಖ್ಯ ಕಾರಣ.

ದನಗಳಿಂದ ವ್ಯವಸಾಯದ ಅಭಿವೃದ್ಧಿಗೆ ಮತ್ತೋಂದು ಮಹತ್ತರವಾದ ಸಹಾಯವೆಂದರೆ ಅವುಗಳ ಸಗಣಿಗೊಬ್ಬರ. ಜಮೀನುಗಳಲ್ಲಿ ರೈತರು ವರ್ಷ ವರ್ಷವೂ ಬೆಳೆಯನ್ನು ಬೆಳೆಯುವುದರಿಂದ ಭೂಮಿಯ ಸಾರವು ಕಡಿಮೆಯಾಗುತ್ತ ಹೋಗುವುದು. ಸಸ್ಯಗಳಿಗೆ ಗೊಬ್ಬರ ಅವಶ್ಯಕ. ಸಸ್ಯಗಳ ಬೆಳವಣಿಗೆಗೆ ಬೇಕಾದ ಸಗಣಿಗೊಬ್ಬರವನ್ನು ಗೊಬ್ಬರದ ಸಲುವಾಗಿ ಉಪಯೋಗಿಸದೆ ಉರುವಲಿಗಾಗಿ ಅಪವ್ಯಯ ಮಾಡುವುದು. ದೊಡ್ಡ ತಪ್ಪು ಗೊಬ್ಬರವಿಲ್ಲದ ಭೂಮಿಯಲ್ಲಿ ಬೆಳೆ ಕೃಶವಾಗಿ, ಉತ್ಪಾದನೆ ಕಡಿಮೆಯಾಗಿ ರಾಷ್ಟ್ರಕ್ಕೆ ಹಾನಿಯಾಗುವುದು.

ಇತ್ತೀಚೆಗೆ ಕೃತಕ ಗೊಬ್ಬರವು ಬಳಕೆಯಲ್ಲಿ ಬಂದಿದೆ, ಇದು ದನಗಳ ಸಗಣಿ ಗೊಬ್ಬರದಷ್ಟು ಫಲಕಾರಿಯಾಗಲಾರದು. ಇದರ ಖರ್ಚು ಸಗಣಿ ಗೊಬ್ಬರಕ್ಕಿಂತ ಹೆಚ್ಚು ದನಗಳ ಸಗಣಿ ಕಳಿತು “ಹ್ಯೂಮಸ್” ಎಂಬ ಪದಾರ್ಥ ಉಂಟಾಗುತ್ತದೆ. ಇದು ಸಸ್ಯಗಳ ಬೆಳವಣಿಗೆಗೆ ಅತಿ ಅವಶ್ಯಕವಾದದ್ದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇದೂ ಅಲ್ಲದೆ ಹಸುವಿನ ಸಗಣಿಯಲ್ಲಿ “ಫೇಜಿಸ್” ಎಂಬ ಜಂತುಗಳಿವೆ. ಇವು ಸಸ್ಯ ರೋಗಗಳನ್ನು ಪ್ರತಿರೋಧಿಸುವ ಶಕ್ತಿಯುಳ್ಳದ್ದಾಗಿದೆ.

ಸಗಣಿಯಿಂದ ಶಕ್ತಿಯ ಉತ್ಪಾದನೆ: ವೈಜ್ಞಾನಿಕ ಪ್ರಗತಿ ಅದ್ಭುತವಾಗಿ ಸಾಗುತ್ತಿದೆ. ವಿಜ್ಞಾನಿಗಳು ಪ್ರಕೃತಿಯ ರಹಸ್ಯವನ್ನು ಕಂಡು ಹಿಡಿದು ಅದನ್ನು ಜನತೆಯ ಅನುಕೂಲಕ್ಕೆ ತಕ್ಕಂತೆ ಮತ್ತು ಜೀವನ ಹೆಚ್ಚು ಸುಖಕರವಾಗುವಂತೆ ಮಾರ್ಪಡಿಸಲು ಶ್ರಮಪಡುತ್ತಿದ್ದಾರೆ. ಸಗಣಿಯಲ್ಲಿನ ಸತ್ವವು ಹಾಳಾಗದಂತೆ ಅದನ್ನು ಮೊದಲು ಉರುವಲಾಗಿ ಉಪಯೋಗಿಸಿಕೊಂಡು ನಂತರ ಗೊಬ್ಬರವಾಗಿ ಉಪಯೋಗಿಸಿಕೊಳ್ಳುವ ವಿಧಾನವನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಸಗಣಿಯನ್ನು ಕೊಳೆ ಹಾಕಿದಲ್ಲಿ ಅದರಿಂದ ಅನಿಲಗಳು ಉತ್ಪನ್ನವಾಗುತ್ತವೆ. ಈ ಅನಿಲಗಳು ಉರಿಯುವಂತಹವುಗಳಾದುದರಿಂದ ಹಳ್ಳಿಗಳಲ್ಲಿ ಇದರಿಂದ ಮನೆಯ ಉಪಯೋಗಕ್ಕೆ ಅಗತ್ಯವುಳ್ಳ ಬೆಂಕಿ ಹಾಗೂ ಪ್ರಕಾಶಮಾನವಾದ ಬೆಳಕು ಪಡೆಯುವುದಲ್ಲದೆ ಸಾಕಷ್ಟು ಸಗಣಿ ಪೂರೈಕೆ ಇದ್ದಲ್ಲಿ ಯಂತ್ರ ಚಾಲನೆಗಾಗಿಯೂ ಶಕ್ತಿಯನ್ನು ಪಡೆಯಬಹುದು. ಇದರಿಂದ ಸಗಣಿಯಲ್ಲಿರುವ ಗೊಬ್ಬರದ ಸತ್ವ ನಾಶವಾಗುವುದಿಲ್ಲ. ಸಗಣಿಯಿಂದ ಇಂಥ ಶಕ್ತಿಯ ಉತ್ಪಾದನೆ ಗ್ರಾಮೀಣ ಜನತೆಗೆ ಒಂದು ಮಹತ್ವದ ವೈಜ್ಞಾನಿಕ ಕೊಡುಗೆಯಾಗಿದೆ.

ಒಂದಾನೊಂದು ಕಾಲಕ್ಕೆ ಭಾರತ, ಪ್ರಪಂಚದ ನಾನಾ ಭಾ‌ಗಗಳಿಗೆ ದನಗಳನ್ನು ಪೂರೈಸುವ ಕೇಂದ್ರಗಳಲ್ಲಿ ಒಂದಾಗಿತ್ತು. ನಮ್ಮಲ್ಲಿಯ ದನಗಳು ಅಮೆರಿಕ, ಬರ್ಮ, ಆಸ್ಟ್ರೇಲಿಯಾ, ಕಾಂಬೋಡಿಯಾ, ಕೀನ್ಯಾ, ಥೈಲೆಂಡ್ ದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸಿದ್ದವು ನಮ್ಮಲ್ಲಿಯ ಒಂಗೋಲ್ ಜಾತಿಯ ದನಗಳು ದೂರ ಪ್ರಾಚ್ಯ ದೇಶಗಳಾದ ಬ್ರೆಜಿಲ್ ಮತ್ತು ಫಿಲಿಫೈನ್ ದ್ವೀಪಗಳಿಗೆ ಕಳುಹಿಸಲ್ಪಡುತ್ತಿದ್ದವು. ಹೀಗೆ ಭಾರತವು ಪರದೇಶಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ದನಗಳ ವ್ಯಾಪಾರದಿಂದ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿದ್ದ ಕಾಲವೂ ಒಂದಿತ್ತು. ಈಗ ಇದು ನಿಂತುಹೋಗಿದೆ. ನಾವು ಪಶುಪಾಲನೆ, ಸಂಗೊಪನೆ, ಪೋಷಣೆ, ಸಂವರ್ಧನೆಗಳಲ್ಲಿ ಪಶುವೈಧ್ಯ ತಜ್ಞರ ಸಲಹೆ ಪಡೆದು ನಮ್ಮಲ್ಲಿಯ ದನಗಳ ತಳಿ ಅಭಿವೃದ್ಧಿಗೊಳಿಸಿ, ಪುನರುಜ್ಜೀವನಗೊಳಿಸಲು ಸಾಧ್ಯವಿದೆ. ಈ ದಿಶೆಯಲ್ಲಿ ಈಗಾಗಲೇ ನಮ್ಮ ದೇಶದಲ್ಲಿ ತಳಿ ಅಭಿವೃದ್ದಿಯ ಕಾರ್ಯಗಳು ಮತ್ತು ಯೋಜನೆಗಳು ದೇಶಾದ್ಯಂತ ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ ಕಾರ್ಯಗತವಾಗಿದೆ. ನಾವು ಇಂದು ಈ ಸುಧಾರಣೆಯ ಮಾರ್ಗದಲ್ಲಿ ನಮ್ಮ ಹಿಂದಿನ ಮೂರು ಪಂಚವಾರ್ಷಿಕ ಯೋಜನೆಗಳಿಂದ ಮುಂದೆ ಸಾಗಿದ್ದೇವೆ. ಈ ಸುಧಾರಣೆಯ ಕಾರ್ಯಗಳು ಪ್ರಗತಿಪರವಾಗಿ ಸಾಗಿರುವುದರಿಂದ ಪ್ರಗತಿಯ ಹೊಂಬೆಳಕಿನ ಆಶಾಕಿರಣಗಳನ್ನು ನಾವು ಕಾಣುತ್ತಿದ್ದೇವೆ.

ನಮ್ಮಲ್ಲಿ ಜಾನುವಾರುಗಳ ಸಾಕಣೆಯು ಬಹಳ ಹಿಂದಿನಿಂದ ಸಾಗಿಬಂದಿರುವುದರಿಂದ ಇದಕ್ಕೆ ಹೆಚ್ಚಿನ ತರಬೇತಿ ಅಥವಾ ತಾಂತ್ರಿಕ ಜ್ಞಾನದ ಅವಶ್ಯಕತೆ ಬೇಕಾಗಿಲ್ಲ. ಈ ಉದ್ಯೋಗಗಳ ಬೆಳವಣಿಗೆಗಳಿಗೆ ಬೇಕಾದ ಸಾಮಾಗ್ರಿಗಳು ಹಳ್ಳಿಗಳಲ್ಲಿಯೇ ಸಿಗುವುದರಿಂದ ಹಳ್ಳಿಗಳಲ್ಲಿನ ಗಂಸರು, ಮುದಕರು, ಹುಡುಗರಾದಿಯಾಗಿ ಎಲ್ಲರೂ ಸ್ವಾವಂಲಂಬಿಗಳಾಗಿ ಈ ಉದ್ಯೋಗಗಳಲ್ಲಿ ದುಡಿಯಲು ಸಾಧ್ಯ. ಹಾಲು, ಬೆಣ್ಣೆ, ತುಪ್ಪ, ಮೊಸರು ಇವು ದೈನಂದಿನ ಉಪಯೋಗದ ವಸ್ತುಗಳು. ಇವುಗಳಿಗೆ ಗಿರಾಕಿಗಳು ಸದಾ ಇದ್ದೇ ಇರುತ್ತಾರೆ. ಇವುಗಳ ಮಾರಾಟಕ್ಕೆ ಯಾವ ದಳ್ಳಾಳಿಯ ಅಗತ್ಯವೂ ಇಲ್ಲ. ಹೀಗೆ ಎಲ್ಲ ದೃಷ್ಟಿಯಿಂದ ನಮ್ಮ ಹಳ್ಳಿಗಳ ಆರ್ಥಿಕ ಪ್ರಗತಿಯ ರಚನೆಯಲ್ಲಿ ಪಶುಗಳ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ.