ಶಿರಗುಳಿ (ಥೆಲಾಮಸ್):

ಗ್ರೀಕ್ ಭಾಷೆಯಲ್ಲಿ ಥೆಲಾಮಸ್ ಎಂದರೆ ಒಂದು ಒರಗು ಹಾಸಿಗೆ. (ಕೌಚ್) ಮಿದುಳಿನ ಎರಡು ಅರೆಗೋಳಗಳು ಥೆಲಾಮಸ್ (ಶಿರಗುಳಿ) ಮೇಲೆ ವಿರಮಿಸುವಂತೆ ಕಾಣುವುದರಿಂದ, ಈ ಭಾಗಕ್ಕೆ ಈ ಹೆಸರು ಬಂದಿತು. ಮಿದುಳಿನ ಮೂರನೇ ಕುಳಿಯ ಅಕ್ಕಪಕ್ಕದಲ್ಲಿರುವ ಥೆಲಾಮಸ್, ದೇಹದ ಎಲ್ಲಾ ಭಾಗಗಳಿಂದ ಬರುವ ಸ್ಪರ್ಶ, ನೋವು, ಒತ್ತಡ, ತಾಪದಂತಹ ಸಂವೇದನೆಗಳನ್ನು ಸ್ವೀಕರಿಸುವುದಲ್ಲದೆ, ಅದನ್ನು ಪ್ರಧಾನ ಮಸ್ತಿಷ್ಕದ ಅರೆಗೋಳಗಳಿಗೆ ರವಾನಿಸುವ ಪ್ರಸಾರ ಕೇಂದ್ರದಂತೆ ಕೆಲಸ ನಿರ್ವಹಿಸುತ್ತದೆ. ಇದು ವ್ಯಕ್ತಿಯ ಜಾಗರೂಕ ಸ್ಥಿತಿಯನ್ನು ನಿಯಂತ್ರಿಸುವುದಲ್ಲದೆ, ಸಂವೇದನೆಗಳನ್ನು ಭಾವನೆಗಳಾಗಿ ಮಾರ್ಪಡಿಸುವುದಕ್ಕೆ ನೆರವಾಗುತ್ತದೆ. ಉದಾಹರಣೆಗೆ ನೋವಿನ ಸಂವೇದನೆ ಉಂಟಾದಾಗ ದುಃಖವನ್ನು ಪ್ರಕಟಿಸುವಿಕೆ.

ಶಿರಗುಳಿಯಲ್ಲಿ ರಕ್ತಸ್ರಾವವಾದರೆ ಅಥವಾ ಮತ್ಯಾವುದೇ ರೀತಿಯ ಹಾನಿಗೀಡಾದರೆ, ಸ್ನಾಯುಗಳು ನಿಶ್ಯಕ್ತಗೊಂಡು ಜೋಲು ಬೀಳುತ್ತವೆ. ಅಸಮತೋಲನ ನಡಿಗೆ ಕಂಡು ಬರುತ್ತದೆ. ಸ್ಪರ್ಶ ಎಲ್ಲಿ ಆಗುತ್ತಿದೆ. ವಿವಿಧ ಸ್ಪರ್ಶಗಳಲ್ಲಿ ವ್ಯತ್ಯಾಸ, ಕೀಲುಗಳ ಲಘು ಚಲನೆಯ ವ್ಯತ್ಯಾಸ ವ್ಯಕ್ತಿಗೆ ಆಗುವುದಿಲ್ಲ.

ಕೆಳ ಶಿರಗುಳಿ:

ಶಿರಗುಳಿ ಕೆಳಗಡೆ ಇರುವ ಬೂದು ವಸ್ತು ಉಳ್ಳ ನರಕೋಶಗಳು ಹರಡಿಕೊಂಡಿರುವ ಹಲವು ನರರಾಶಿಗಳ ಸಮೂಹವನ್ನು ಕೆಳ ಶಿರಗುಳಿ-ಹೈಪೋಥೆಲಾಮಸ್ ಎಂದು ಕರೆಯಲಾಗುತ್ತದೆ. ಶಸ್ತ್ರಕ್ರಿಯೆ ಮಾಡುತ್ತಿರುವಾಗ, ಶಸ್ತ್ರಚಿಕಿತ್ಸಕ ಹತ್ತಿಯಿಂದ ಆ ಭಾಗವನ್ನು ಲಘುವಾಗಿ ಸ್ಪರ್ಶಿಸುವ ಮಾತ್ರಕ್ಕೆ ರೋಗಿಯ ದೇಹದ ತಾಪಮಾನ ವಿಷದಂತೆ ಏರುತ್ತದೆ. ರೋಗಿ ತೀವ್ರ ಪ್ರಜ್ಞಾಹೀನ ಸ್ಥಿತಿಗೆ (ಕೋಮಾ) ಒಳಗಾಗಿ, ಅದರಿಂದ ಎಚ್ಚೆತ್ತುಕೊಳ್ಳಲು, ರೋಗಿಗೆ ಹಲವು ಗಂಟೆಗಳು ಅಥವಾ ದಿನಗಳೇ ಬೇಕಾದವು. ದೇಹದ ಎಲ್ಲ (ಹೃದಯ, ಶ್ವಾಸಕೋಶ, ಮೂತ್ರಜನಕಾಂಗ, ಜೀರ್ಣಾಂಗಗಳು ಇತ್ಯಾದಿ). ಒಳಾಂಗಗಳು, ಹಾರ್ಮೋನುಗಳನ್ನು ಉತ್ಪಾದಿಸುವ ನಿರ್ನಾಳ ಗ್ರಂಥಿಗಳು, ಸ್ವಾಯತ್ತ ನರಮಂಡಲ ಹೈಪೋಥೆಲಾಮಸ್‌ನ ಅಧೀನದಲ್ಲಿದೆ. ಆಹಾರ ಸೇವನೆ, ನೀರಡಿಕೆ, ಲೈಂಗಿಕ ಆಸೆ-ಕ್ರಿಯೆ, ಭಾವನಾತ್ಮಕ ನಡವಳಿಕೆಗಳಂತಹ ಪ್ರಮುಖ ಜೀವನಾಗತ್ಯ ಕ್ರಿಯೆಗಳನ್ನು ಈ ಪುಟ್ಟ ಭಾಗವು ನಿಯಂತ್ರಿಸುತ್ತದೆ ಎಂದರೆ, ಅದರ ಪ್ರಾಮುಖ್ಯತೆ ನಿಮಗೆ ಅರ್ಥವಾದೀತು.

ಪ್ರಯೋಗ ಶಾಲೆಯಲ್ಲಿ, ಬೆಕ್ಕಿನ ಕೆಳಶಿರಗುಳಿಯ ಒಂದು ಭಾಗವನ್ನು ಪ್ರಚೋದಿಸಿದರೆ, ಅದು ಕಾರಣವೇ ಇಲ್ಲದೆ ಕೆರಳಿ, ಬೆನ್ನು ಉಬ್ಬಿಸಿ ಉಗುರುಗಳನ್ನು ಹೊರಕ್ಕೆ ಹಾಕಿ, ಗುರುಗುಟ್ಟಿ ನಿಮ್ಮ ಮೇಲೆ ಆಕ್ರಮಣ ಮಾಡಲು ಸಜ್ಜಾಗುತ್ತದೆ ! ಮತ್ತೊಂದು ಭಾಗವನ್ನು ಪ್ರಚೋದಿಸಿದರೆ ಅದು ಸಣ್ಣಗೆ ಮಿಯಾಂ ಎಂದು ಲಲ್ಲೆಯಾಡುತ್ತಾ, ನಿಮ್ಮ ಕಾಲಿಗೆ ತನ್ನ ಮೈಯನ್ನು ಒತ್ತಿ, ನಿಮ್ಮ ಪಾದವನ್ನು ನೆಕ್ಕತೊಡಗುತ್ತದೆ!

ನಾವು ಅಥವಾ ಯಾವುದೇ ಪ್ರಾಣಿ, ಅಪಾಯದ ಒತ್ತಡಕ್ಕೆ ಸಿಲುಕಿದಾಗ, ನಮ್ಮನ್ನು ಅಥವಾ ಪ್ರಾಣಿಯನ್ನು ಹೋರಾಟ ಅಥವಾ ಪಲಾಯನಕ್ಕೆ ಸಜ್ಜು ಮಾಡುವ ಹೈಪೋಥೆಲಾಸ್‌ನ ತೂಕ ಕೇವಲ ನಾಲ್ಕು ಗ್ರಾಂ. ಅಂದರೆ ಮಿದುಳಿನ ಮುನ್ನೂರನೇ ಒಂದು ಭಾಗ! ಈ ಅತಿ ಪುಟ್ಟ ಭಾಗದ ಸಾಮರ್ಥ್ಯ ಮೇರು ಪರ್ವತದಷ್ಟು ಕೇವಲ ಇಂಚುಪಟ್ಟಿ ಅಥವಾ ಕಂಪಾಸ್‌ನಂತಹ ಅಳತೆಯ ಸಾಧನಗಳಿಂದ, ಮಿದುಳಿನ ಕೆಲಸ ಸಾಮರ್ಥ್ಯಗಳನ್ನು ಅಳೆಯಲಾಗದು ಎಂದು ಸಾರಿ ಹೇಳುತ್ತಿದೆ ಈ ಹೈಪೋಥೆಲಾಮಸ್. ಇದರ ಕಾರ್ಯವ್ಯಾಪ್ತಿಯ ಹರವು ವಿಶಾಲವಾದದ್ದು.

. ದೇಹದ ತಾಪಮಾನದ ನಿಯಂತ್ರಣ: ಹೊರಗಿನ ತಾಮಪಾನ ಒಂದು ಡಿಗ್ರಿ ಸೆ. ಇರಲಿ, ೪೪ ಡಿಗ್ರಿ ಸೆ. ಇರಲಿ ನಮ್ಮ ದೇಹದ ತಾಮಪಾನ ೩೭ ಡಿಗ್ರಿ ಸೆ. ಇರುವಂತೆ ನೋಡಿಕೊಳ್ಳುತದೆ.

. ನೀರಿನ ಪ್ರಮಾಣ: ನಮ್ಮ ದೇಹದ ಶೇ. ೭೦ ಭಾಗ ನೀರು. ಪ್ರತಿ ಜೀವಕೋಶದಲ್ಲಿ ನೀರಿನಾಂಶವಿದೆ. ಜೀವಕೋಶಗಳ ಪ್ರತಿ ಚಟುವಟಿಕೆಗೆ ನೀರು ಬೇಕು. ಈ ನೀರಿನ ಪ್ರಮಾಣ ಕಡಿಮೆಯಾದರೂ ಅಪಾಯ, ಹೆಚ್ಚಾದರೂ ಅಪಾಯ. ದಿನಕ್ಕೆ ಕನಿಷ್ಟ ಎರಡು ಲೀಟರ್‌ಗಳಷ್ಟು ನೀರು, ಮೂತ್ರ, ಮಲ, ಬೆವರು ಮತ್ತು ಉಸಿರಾಟದ ಮೂಲಕ ಹೊರಹೋಗುತ್ತದೆ. ಅಷ್ಟು ನೀರು, ಆಹಾರ ಪಾನಿಯಗಳ ಮೂಲಕ ದೇಹದೊಳಕ್ಕೆ ಬರಬೇಕು. ಹಾಗೇ ಹವಾಮಾನ ವೈಪರೀತ್ಯಗಳಲ್ಲಿ ಹಾಗೂ ನೀರು ಅಲಭ್ಯವಾದಾಗ, ನೀರನ್ನು ರಕ್ಷಿಸುವ ಕೆಲಸವನ್ನು ಹೈಪೋಥೆಲಾಮಸ್ ಮಾಡುತ್ತದೆ. ಪಿಟ್ಯೂಟರಿ ಗ್ರಂಥಿ ಸ್ರವಿಸುವ ‘ವೇಸೋಪ್ರೆಸಿನ್‌’ ಹಾರ್ಮೋನನ್ನು ನಿಯಂತ್ರಿಸುವ ಕೆಲಸ ಹೈಪೋಥೆಲಾಮಸ್‌ದು.

. ಆಹಾರ ಸೇವನೆ: ಜಠರ ಖಾಲಿಯಾದಾಕ್ಷಣ ನಮಗೆ ಹಸಿವಾಗುತ್ತದೆ ಎಂದು ನಾವು ತಿಳಿಯುತ್ತೇವೆ. ಆದರೆ ಆಗ ‘ಹಸಿವು’ (ಆಹಾರ ಸೇವನೆ ಮಾಡಬೇಕೆಂಬ ಸೂಚನೆ) ಆಗಬೇಕೆಂದೇನೂ ಇಲ್ಲ! ಜಠರ ತುಂಬಿದೆ ಎಂದು ನಾವು ಆಹಾರ ಸೇವನೆಯನ್ನು ನಿಲ್ಲಿಸುವುದೂ ಇಲ್ಲ. ನಾವು ಎಷ್ಟು ಸಲ, ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಬೇಕೆಂಬುದನ್ನು ನಿರ್ಧರಿಸುವ ಹಸಿವು ಮತ್ತು ತೃಪ್ತಿ ಕೇಂದ್ರ ಕೆಳಶಿರಗುಳಿಯಲ್ಲಿವೆ. ಈ ಕೇಂದ್ರಗಳು ಸರಿಯಾಗಿ ಕೆಲಸ ಮಾಡದಿದ್ದರೆ, ವ್ಯಕ್ತಿ ಏನೂ ತಿನ್ನದೆ ಉಪವಾಸವಿರಲು ಸಿದ್ಧನಾಗುತ್ತಾನೆ. ಕಣ್ಣೆದುರು ಬಗೆ ಬಗೆಯ ಭಕ್ಷ್ಯ ಭೋಜ್ಯಗಳನ್ನಿಟ್ಟರೂ ಮುಖವನ್ನು ವಿರುದ್ಧ ದಿಕ್ಕಿಗೆ ತಿರುಗಿಸುತ್ತಾನೆ! ಇಲ್ಲವೇ ಬಕಾಸುರನಂತೆ ಎಲ್ಲವನ್ನೂ ಬಾಚಿ ತಿನ್ನುತ್ತಾ ಬೊಜ್ಜು ಬೆಳೆಸುತ್ತಾನೆ.

. ಭಾವೋದ್ರೇಕಗಳ ಪ್ರಕಟಣೆ: ಕೋಪ, ಬೇಜಾರು, ದುಃಖ, ಭಯ, ಆತಂಕಗಳ ಪ್ರಕಟಣೆಗೆ ಸ್ವಾಯತ್ತ ನರಮಂಡಲವನ್ನು ಹೈಪೋಥೆಲಾಮಸ್ ಪ್ರೇರೇಪಿಸುತ್ತದೆ. ಉದಾಹರಣೆಗೆ ಕೋಪ ಬಂದಾಗ ಕಣ್ಣು ಕೆಂಪಾಗಿ, ಹಲ್ಲು ಕಚ್ಚಿ ತಾರಕ ಸ್ವರದಲ್ಲಿ ಮಾತಾಡುವುದು, ಬೈಯುವುದು, ದುಃಖವಾದಾಗ ಕಣ್ಣೀರು ಸುರಿಸಿ, ಧ್ವನಿ ನಡುಗಿ ಬಿಕ್ಕಳಿಸಿ ನಿಷ್ಕ್ರಿಯವಾಗಿ ಕೂರುವುದು ಇತ್ಯಾದಿ.

. ನಿದ್ರೆ: ನಮ್ಮ ನಿದ್ರಾ ಚಟುವಟಿಕೆಯನ್ನು ಮತ್ತು ಎಷ್ಟು ಕಾಲ ನಿದ್ರೆ ಮಾಡಬೇಕೆನ್ನುವುದನ್ನು ಮಿದುಳಿನ ಇತರ ಭಾಗಗಳು ನಿಯಂತ್ರಿಸಿದರೂ ನಿದ್ರೆ ಬರಿಸುವ ಜವಾಬ್ದಾರಿ ಕೆಳಶಿರಗುಳಿಯದು ಎಂದು ನಂಬಲಾಗಿದೆ.

. ಲೈಂಗಿಕ ಆಸೆ, ಕ್ರಿಯೆಯ ನಿಯಂತ್ರಣ: ಪುರುಷನಿಗೆ ಲೈಂಗಿಕ ಆಸೆಯಾದಾಗ ಜನನಾಂಗ ಉದ್ರೇಕಗೊಳ್ಳುವುದು, ಮೈ ಬಿಸಿಯಾಗುವುದು, ಸಂಭೋಗ ಚಟುವಟಿಕೆ, ವೀರ್ಯಸ್ಖಲನ ಹಾಗೆ ಸ್ತ್ರೀಯ ಸ್ತನಗಳು ಉಬ್ಬುವುದು, ಯೋನಿ ಒದ್ದೆಯಾಗುವುದು-ಹಿಗ್ಗುವುದು ನಂತರ ಸಂಕುಚನಗೊಳ್ಳುವುದು ಇವೆಲ್ಲವನ್ನು ಕೆಳ ಶಿರಗುಳಿ ನಿಯಂತ್ರಿಸುತ್ತದೆ.

. ಹಾರ್ಮೋನುಗಳ ಉತ್ಪತ್ತಿ: ದೇಹ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ಮಟ್ಟದಲ್ಲಿ, ಕ್ರಮವಾಗಿ ನಡೆಸಿಕೊಂಡು ಹೋಗುವ ಅದ್ಭುತ ವಸ್ತುಗಳಾದ ಥೈರಾಕ್ಸಿನ್, ಇನ್ಸುಲಿನ್, ಪ್ಯಾರಾಥೈರಾಯಿಡ್ ಹಾರ್ಮೋನು, ಅಡ್ರೆನಲಿನ್, ವೇಸೋಪ್ರೆಸಿನ್, ಸ್ಟೀರಾಯಿಡ್‌ಗಳು, ಲೈಂಗಿಕ ಹಾರ್ಮೋನುಗಳನ್ನು ಉತ್ಪಾದಿಸುವ ವಿವಿಧ ನಿರ್ನಾಳ ಗ್ರಂಥಿಗಳು ‘ಹೈಪೋಥೆಲಾಮಸ್’ ಹೇಳಿದಂತೆ ಕೇಳುವ ಕರ್ಮಚಾರಿಗಳು. ರಾಜಗ್ರಂಥಿ ಪಿಟ್ಯೂಟರಿಯ ಮುಖಾಂತರ ಕೆಳ ಶಿರಗುಳಿ ತನ್ನ ಅಧಿಕಾರವನ್ನು ಚಲಾಯಿಸುತ್ತದೆ.

ಕೆಳ ಶಿರಗುಳಿ ರೋಗಗ್ರಸ್ತವಾದರೆ, ದೇಹದಲ್ಲಿ ಆಹಾರ-ನೀರಿನ ಪ್ರಮಾಣ ಏರುಪೇರಾಗುತ್ತದೆ. ಸದಾ ಜೂಗಡಿಕೆ, ಅತಿ ನಿದ್ರೆ ಅಥವಾ ನಿದ್ರೆಯೇ ಬರುವುದಿಲ್ಲ ಅಥವಾ ಹಗಲು ನಿದ್ರೆ ಮಾಡಿ, ವ್ಯಕ್ತಿ ರಾತ್ರಿ ಇಡೀ ಜಾಗೃತನಾಗಿರಬಹುದು. ವ್ಯಕ್ತಿಯ ಲೈಂಗಿಕ ಕ್ರಿಯೆ ಏರುಪೇರಾಗುತ್ತದೆ. (ಷಂಡತನ ಅಥವಾ ಅತಿ ಕಾಮುಕತನ) ಮತ್ತು ಭಾವನೆಗಳ ಪ್ರಕಟಣೆ ಅಸ್ತವ್ಯಸ್ತಗೊಳ್ಳುತ್ತದೆ.

ಮಿದುಳ ಕಾಂಡ

ಮಿದುಳಿನ ಬಾಲದಂತಿರುವ ಮಿದುಳಕಾಂಡ (Brain Stem) ಅತ್ಯಂತ ಸೂಕ್ಷ್ಮವಾದ ಭಾಗ. ಇದಕ್ಕೆ ಅತ್ಯಲ್ಪ ಹಾನಿಯಾದರೂ ವ್ಯಕ್ತಿಗೆ ಪ್ರಜ್ಞೆ ತಪ್ಪುತ್ತದೆ. ಹೆಚ್ಚು ಹಾನಿಯುಂಟಾದರೆ ಕ್ಷಣ ಮಾತ್ರದಲ್ಲಿ ಸಾವು ನಿಶ್ಚಿತ.

ಮಿದುಳಿನ ಕೆಳಗಿನ ಭಾಗವೇ ‘ಮೆಡುಲ್ಲಾ’. ನುಂಗುವುದು, ವಾಂತಿ, ಉಸಿರಾಟ ರಕ್ತದೊತ್ತಡವನ್ನು ನಿರ್ದಿಷ್ಟ ಮಟ್ಟದಲ್ಲಿಡುವುದು. ಹೃದಯ ಬಡಿತದ ನಿಯಂತ್ರಣ ಇವೆಲ್ಲವನ್ನು ಮೆಡುಲ್ಲಾ ಮಾಡುತ್ತದೆ. ಮೆಡುಲ್ಲಾದ ಕೆಳಗೆ, ಮಿದುಳ ಬಳ್ಳಿಯನ್ನು ಕತ್ತರಿಸಿದರೆ, ರಕ್ತದೊತ್ತಡ ಶೂನ್ಯಕ್ಕೆ ಇಳಿಯುತ್ತದೆ.ಉಸಿರಾಟ ನಿಲ್ಲುತ್ತದೆ. ವ್ಯಕ್ತಿ ಸಾಯುತ್ತಾನೆ.

ಅಪಘಾತದಿಂದಲೋ, ಮೇಲಿಂದ ಬಿದ್ದೋ ತಲೆಗೆ ಪೆಟ್ಟು ಬಿದ್ದಾಗ, ಪೆಟ್ಟಿನ ರಭಸಕ್ಕೆ ನೇರವಾಗಿ ಮಿದುಳ ಕಾಂಡದ ಈ ಭಾಗ (ಮೆಡುಲ್ಲಾ) ಕ್ಕೆ ಹಾನಿಯಾಗಿ ಗಾಯಾಳು ಸಾಯಬಹುದು. ಇದನ್ನು ಫ್ರೈಮರಿ ಬ್ರೇನ್-ಸ್ಟೆಮ್ ಇಂಜುರಿ ಎನ್ನುತ್ತಾರೆ ಅಥವಾ ಮಿದುಳಿನ ಯಾವುದೇ ಭಾಗಕ್ಕೆ ಪೆಟ್ಟಾಗಿ ರಕ್ತಸ್ರಾವವಾಗಿ, ಮಿದುಳಿನ ದ್ರವ ಪ್ರಮಾಣ ಹೆಚ್ಚಿ (ಎಡೀಮಾ) ತಲೆಯ ಬುರುಡೆಯೊಳಗೆ ಒತ್ತಡ ಹೆಚ್ಚುತ್ತದೆ. ಈ ಒತ್ತಡದಿಂದ, ಪ್ರಧಾನ ಮಸ್ತಿಷ್ಕ ಮತ್ತಿತರ ಭಾಗಗಳು ಕುಸಿಯತೊಡಗುತ್ತವೆ. ಆಗ ಮೆಡುಲ್ಲಾ ತಲೆಬುರುಡೆಯ ರಂಧ್ರದಲ್ಲಿ (ಫೋರಾಮೆನ್ ಮ್ಯಾಗ್ನಂ) ಸಿಕ್ಕಿಹಾಕಿಕೊಂಡು, ನೇಣು ಹಾಕಿದಂತಾಗಿ ಹಾನಿಗೀಡಾಗುತ್ತದೆ. ಸಾವನ್ನುಂಟು ಮಾಡುತ್ತದೆ. ಇದನ್ನು ‘ಸೆಕೆಂಡರಿ ಬ್ರೇನ್ ಸ್ಟೆಮ್ ಇಂಜುರಿ’ ಎನ್ನುತ್ತಾರೆ. ಇದು ತಲೆಗೆ ಪೆಟ್ಟು ಬಿದ್ದ ಸ್ವಲ್ಪ ಕಾಲಾನಂತರ ಆಗುತ್ತದೆ. ಪೆಟ್ಟು ಬಿದ್ದು, ಪ್ರಜ್ಞೆ ಚೆನ್ನಾಗಿದ್ದ ಗಾಯಾಳುವಿಗೆ, ಪ್ರಜ್ಞೆ ತಪ್ಪತೊಡಗಿದರೆ, ನಾಡಿ ಬಡಿತ, ಉಸಿರಾಟ ಏರುಪೇರಾಗತೊಡಗಿದರೆ, ಬ್ರೇನ್ ಸ್ಟೆಮ್- ಮಿದುಳ ಕಾಂಡದ ಹಾನಿಯಾಗುತ್ತಿದೆಯೇ ಎಂದು ಸಂದೇಹಿಸಿ ತತ್‌ಕ್ಷಣದ ವೈದ್ಯಕೀಯ ನೆರವನ್ನು ಪಡೆಯಬೇಕು. ಮಿದುಳಿನ ಊತವನ್ನು ಕಡಿಮೆ ಮಾಡುವ (ಮ್ಯಾನಿಟಲ್ ದ್ರವವನ್ನು ರಕ್ತನಾಳಕ್ಕೆ ಕೊಡುವುದು, ಸ್ಟೀರಾಯಿಡ್ ಔಷಧವನ್ನು ಕೊಡುವುದು) ಚಿಕಿತ್ಸೆಯನ್ನು ವೈದ್ಯರು ಪ್ರಾರಂಭಿಸಿ, ಜೀವ ಉಳಿಸಬಲ್ಲರು. ರಕ್ತ ಹೆಪ್ಪಿದ್ದರೆ, ಶಸ್ತ್ರ ಚಿಕಿತ್ಸೆ ನಡೆಸುವುದು ಅತ್ಯಗತ್ಯವಾಗಬಹುದು.

ಪೋಲೊಯೋ ರೋಗಾಣುಗಳಿಗೂ ‘ಮೆಡುಲ್ಲಾ’ ಎಂದರೆ ಇಷ್ಟವೆಂದು ತೋರುತ್ತದೆ. ಈ ರೋಗಾಣುಗಳು ಧಾಳಿ ಮಾಡಿ, ಮೆಡುಲ್ಲಾದ ಮೂಲಕ ಕೆಳಗೆ ಇಳಿಯುವ ಚಲನ- ನರತಂತುಗಳನ್ನು ಹಾನಿಗೀಡು ಮಾಡುತ್ತವೆ. ಇದರಿಂದ ರೋಗಿ- ಮಗುವಿನ ಕೈಯೋ, ಕಾಲೋ ಬಿದ್ದು ಹೋಗುತ್ತದೆ.

ಮೆಡುಲ್ಲಾದ ಮೇಲಿರುವ ಭಾಗವನ್ನು ನರಸೇತು (ಪಾನ್ಸ್) ಎಂದು ಕರೆಯುತ್ತಾರೆ. ಪ್ರಧಾನ ಮಸ್ತಿಷ್ಕಕ್ಕೂ ಮತ್ತು  ಉಪಮಸ್ತಿಷ್ಕನ್ನೂ ಇದು ಸಂಪರ್ಕ ಸೇತುವೆಯಂತೆ ಕೆಲಸ ಮಾಡುವುದರಿಂದ, ಈ ಭಾಗಕ್ಕೆ ಪಾನ್ಸ್ ಎಂಬ ಹೆಸರು.

ಪಾನ್ಸ್‌ನ ಮೇಲ್ಗಡೆ ಇರುವ ಒಂದು ಸಣ್ಣ ಭಾಗವನ್ನು ಮಧ್ಯ ಮಿದುಳು (ಮಿಡ್ ಬ್ರೇನ್) ಎಂದು ಕರೆಯಲಾಗುತ್ತದೆ. ಅರೆ ಬರೆ ವಿಕಾಸಗೊಂಡ, ಈ ಭಾಗದ ಮೂಲಕ ನಾವು ಅಸ್ಪಷ್ಟವಾಗಿ ಕೇಳಬಹುದು ಮತ್ತು ನೋಡಲೂ ಬಹುದು (ಶ್ರವಣ ಮತ್ತು ದೃಶ್ಯ ಸಂವೇದನೆ).