ರಾಗ ಸುರುಟಿ ಏಕತಾಳ

ಶರಣನೆಯವಧರಿಸು | ಪಿಂದಕೆ | ಒರೆದಿಹೆನದ ಸ್ಮರಿಸು ||
ದರುಶನವೀಯುವೆ ಮುಂದಿನ ಯುಗದೊಳ | ಗಿರು ನೀನಾವರೆಗೆಂಬುದ ಮರೆತಿಹೆ ||೨೫೧||

ವರವಿತ್ತಿಹ ತೆರದಿ | ಬಂದಿಹೆ | ಶರಣನೆ ನೀ ಮುದದಿ ||
ಸ್ಮರಿಸುತಲನುದಿನ ಕಲ್ಪಾಂತ್ಯದವರೆ | ಗಿರಲಾನಂತರ ಮೋಕ್ಷವನೀವೆನು ||೨೫೨||

ಕರುಣಿಸು ರತ್ನವನು | ಪೊಂದಿಹೆ | ಬರಿದಪಕೀರ್ತಿಯನು ||
ತೆರಳುವೆ ನಾನನಲಾಕ್ಷಣ ಜಾಂಬವ | ಹರಿಪದಕಭಿನಮಿಸುತಲಿಂತೆಂದನು ||೨೫೩||

ವಾರ್ಧಕ

ಆದಿದೇವರ ದೇವ ನಿನ್ನೊಡನೆ ಮುಳಿದು ನಾ |
ಕಾದಿದಪರಾಧಪರಿಹಾರಕೆನ್ನಯ ಸುತೆಯ |
ಮೋದದಿಂದೀಯುವೆನು ಜಾಂಬವತಿಯೆಂಬಿವಳ ಸಾದರದಿ ಸ್ವೀಕರಿಪುದು ||
ಪಾದದರ್ಶನದಿಂದ ಧನ್ಯ ತಾನೆಂದೆನುತ |
ಶ್ರೀಧವಂಗಾತ್ಮಜೆಯ ಮಣಿಸಹಿತಲರ್ಪಿಸಲ್ |
ಖೇದವಡದಿರು ಸುಖದಿ ಬಾಳೆನುತ ಶ್ರೀಹರಿಯು ಪೊರಟು ಗುಹೆಯಂ ವೇಗದಿ ||೨೫೪||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಪರಿಕಿಸಲು ದ್ವಾರದಲಿ ನಿಂದಿಹ | ರಿರದಿರಲು ಕೃತವರ್ಮಮುಖ್ಯರು |
ತೆರಳಿದರು ಪುರಕೆನುತ ಶ್ರೀಹರಿ | ಯರಿತು ಮನದಿ ||೨೫೫||

ಪೊರಟು ವೇಗದೊಳಾಗ ನಗರಿಗೆ | ತರುಣಿಸಹಿತಯ್ತಂದು ಹಲಧರ |
ಗೆರಗಿ ಪೇಳ್ದ ಪ್ರಸೇನನಳಿದಿಹ | ಹರಿಯ ಕೆಣಕಿ ||೨೫೬|

ಕೊಂದು ಹರ್ಯಕ್ಷನನು ಜಾಂಬವ | ತಂದ ಮಣಿಯನು ಬಿಲದೊಳಿರಿಸಿರೆ |
ಸಂಧಿಸಿತು ಧುರ ಗೆಲಿದು ರತ್ನವ | ತಂದೆನೀಗ ||೨೫೭||

ತರಳೆಯನ್ನೊಲಿದಿತ್ತನಾತನು | ಪರಮ ಭಾಗವತಾಖ್ಯನೆನ್ನಲು |
ಹರುಷದೊಳು ಹಲಧರನು ಪೇಳ್ದನು | ಹರಿಯೊಳಾಗ ||೨೫೮||

ಬಿಲವ ಪೊಕ್ಕಿಹ ಕೃಷ್ಣನೆತ್ತಲು | ಚಲಿಸಿದನೊ ನಾವರಿಯೆವೆನ್ನುತ |
ಕಳಕಳಿಸಿ ಕೃತವರ್ಮ ಪೇಳ್ದುದ | ಕಳಲುತಿರ್ದೆ ||೨೫೯||

ಭಾಮಿನಿ

ತೆರಳಿಬಂದೆಯ ಕ್ಷೇಮದಲಿ ಬಹು |
ಹರುಷವೆಂದಾಕ್ಷಣದಿ ಚಾರರ |
ತೆರಳಿಸುತ ಸತ್ರಾಜಿತಾಖ್ಯನ ಕರೆಸಿ ಹಲಧರನು ||
ಭರದೊಳಾತನಿಗಾ ಸ್ಯಮಂತಕ |
ವರಮಹಾರತ್ನವನು ಕರುಣಿಸಿ |
ಯೊರೆದನಾತನನುಜನಳಿದಿಹ ಚರಿತೆ ಸಾಂಗದಲಿ ||೨೬೦||

ರಾಗ ಸಾಂಗತ್ಯ ರೂಪಕತಾಳ

ಮರುಗಿ ಹಮ್ಮಯ್ಸುತ್ತಲಾಗ ಸತ್ರಾಜಿತ | ಹರಿಯೆ ನಿನ್ನೊಳು ದ್ರೋಹವೆಣಿಸಿ ||
ಬರಿಯಪವಾದವ ಪೇಳ್ದುದ ಕ್ಷಮಿಸೆಂದು | ಎರಗಿದನಶ್ರುಪೂರಿತದಿ ||೨೬೧||

ಕರೆಸಿ ತನ್ನಯ ಸುತೆ ಸತ್ಯಭಾಮೆಯನಾಗ | ಬರಿಯಪವಾದ ಪೇಳ್ದುದಕೆ ||
ಹರಿಯೆ ನೀನೀಕೆಯ ವರಿಸೆಂದು ಪ್ರೇಮದಿ | ಕರುಣಿಸಿದನು ಮಣಿಸಹಿತ ||೨೬೨||

ಹರುಷದಿ ಅಘಹರನೆಂದು ನಿನ್ನೊಳು ಮಣಿ | ಯಿರಿಸಿ ಕೊಂಡಿಹುದು ಸೌಖ್ಯದಲಿ ||
ವರಿಸುವೆ ಸತ್ಯಭಾಮೆಯನೆಂದು ರತ್ನವ | ತಿರುಗಿ ಸತ್ರಾಜಿತಂಗಿತ್ತ ||೨೬೩||

ಪರಿಣಯಕಾಲಕ್ಕೆ ಬಹುದು ನೀನೆನ್ನುತ್ತ | ಪರಿ ಪರಿ ಮನ್ನಿಸಿ ಕಳುಹಿ ||
ಪರಮಾತ್ಮನಿರೆ ಸೌಖ್ಯದೊಳು ದೇವದೂತನು | ಭರದಿ ಬಂದೆರಗುತ್ತಲೆಂದ ||೨೬೪||

ರಾಗ ಮುಖಾರಿ ಏಕತಾಳ

ಶರಣರಕ್ಷಕ ದೇವರ ದೇವ | ಲಾಲಿಸು ಜೀಯ | ಶರಣರಕ್ಷಕ ದೇವರ ದೇವ  || ಪ ||

ನರಕನೆಂಬುವನೋರ್ವ ಖಳನು | ಸೇನಾಧಿಪಾಲ | ಮುರನೆಂಬ ದನುಜಸಹಿತಲವನು ||
ವರತುಹಿನಾಚಲದೊಳು ಪ್ರಾಗ್ಜ್ಯೋತಿಷ | ಪುರದೊಳು ವಾಸಿಪ ರಾತ್ರಿಂಚರರೊಳು |
ತೆರಳಿಬಂದೊಂದಿನ ಸುರಪನುಚ್ಛೈಶ್ರವ | ವರಕಲ್ಪದ್ರುಮಧೇನುನೊಯ್ದನು ||೨೬೫||

ಸುರನಾರಿಯರನು ಪಿಡಿದು ಖಳನು | ಎಳೆದೊಯ್ದು ತನ್ನ | ತರುಣಿಯರ್ಸೇವೆಗೆಯ್ಸುತಿಹನು |
ಬರಸೆಳದದಿತಿಯ ಕುಂಡಲದ್ವಯವನು | ತೆರಳಿಹನಿದ ಬಿನ್ನಯಿಸಲು ಸುರಪತಿ |
ಹರಿ ನಿನ್ನೆಡೆಗೀಗೆನ್ನನು ಕಳುಹಿದ | ತರಿದವನನು ಸುಖವೀವುದು ದಯೆಯಲಿ ||೨೬೬||

ರಾಗ ಕೇದಾರಗೌಳ ಝಂಪೆತಾಳ

ದೇವದೂತನ ನುಡಿಯನು | ಕೇಳಿ ವಸು | ದೇವಜಾತನು ನಿಮ್ಮನು ||
ಕಾವುದಕೆ ಜನಿಸಿರ್ಪೆನು | ಖಳಕುಲವ | ನಾವುದುಳಿಸದೆ ಕೊಲುವೆನು ||೨೬೭||

ಸುರಪನಿಂಗರುಹು ನೀನು | ಪೋಗಿ ನಾ | ಮುರನರಕರಸುವಳಿವೆನು ||
ತೆರಳೆಂದು ಕಳುಹುತಾಗ | ನೆನೆಯೆ ಬಂ | ದೆರಗಿದನು ಗರುಡ ಬೇಗ ||೨೬೮||

ವರರತ್ನಮಯ ಮುಕುಟವ | ನರಹರಿಯು | ಧರಿಸಿ ಕಸ್ತುರಿತಿಲಕವ ||
ಕೊರಳ ಕೌಸ್ತುಭಹಾರದಿ | ದೇದೀಪ್ಯ | ಕರದಿ ಪೊರಡುತ ಶೀಘ್ರದಿ ||೨೬೯||

ವಿಹಗರಾಜನ ಪೆಗಲೊಳು | ಮಂಡಿಸುತ | ಮಹಿಳೆ ಭಾಮೆಯ ಜೊತೆಯೊಳು ||
ತುಹಿನಶೈಲವನಡರುತ | ಸುರರಾಜ | ನಹಿತನಗರವ ಕಾಣುತ ||೨೭೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಒಂದುಸುತ್ತಿನ ಕೋಟೆ ಜಲದೊಳ | ಗೊಂದು ಪಾವಕಮಯದ ಭಿತ್ತಿಗ |
ಲೊಂದು ಪ್ರಾಕಾರದೊಳು ಶಸ್ತ್ರವ | ಸಂಧಿಸಿಹುದ ||೨೭೧||

ಪರಿಕಿಸುತ ದುರ್ಘಟದ ದುರ್ಗದಿ | ಪುರವ ಗೆಯ್ದಿಹನರರೆ ದಾನವ |
ನುರು ಪರಾಕ್ರಮಿಯೆನುತ ಶ್ರೀಹರಿ | ಯರಿತು ಮನದಿ ||೨೭೨||

ಚಕ್ರದಲಿ ಭೇದಿಸುತ ಜಲತರಿ | ದಿಕ್ಕಿ ವಾರುಣದಿಂದಲಗ್ನಿಯ |
ಕುಕ್ಕಿ ಶಸ್ತ್ರಾವಳಿಯ ಗದೆಯೊಳು | ಪೊಕ್ಕು ಪುರವ ||೨೭೩||

ಸಿಡಿಲಿನಬ್ಬರಣೆಯೊಳು ಖಳರೆದೆ | ಯೊಡೆಯುವಂದದಿ ಪಾಂಚಜನ್ಯವ |
ಕಡುಭಯಂಕರಮಾಗಿ ನಾದಿಸೆ | ಜಡಜನೇತ್ರ ||೨೭೪||

ಭಾಮಿನಿ

ಏನಿದೇನುತ್ಪಾತ ಪುರದೊಳ |
ಗೇನು ಭೀಕರವೆನುತ ನರಕನ |
ಸೇನೆಯಧಿಪತಿಯಾದ ಮುರನೆಂಬವನು ಭೋರ್ಗುಡಿಸಿ ||
ಭಾನುಕೋಟಿವಿರಾಜಮಾನದಿ |
ವೈನತೇಯನ ಭುಜದಿ ಸುಂದರ |
ಮಾನಿನಿಯ ಸಹಿತಾಗಿ ಕುಳಿತಯ್ತಹನ ಕಾಣುತ್ತ ||೨೭೫||

ರಾಗ ಮಾರವಿ ಏಕತಾಳ

ಆರೆಲೊ ದುರ್ಗವ ಭೇದಿಸಿ ಪುರದೊಳ | ಸಾರಿ ಬಂದಿಹೆ ಭಳಿರೆ ||
ಕಾರಣವೇನೆಲೊ ನಿನ್ನಸು ತೊಲಗಿಸಿ | ಹೀರುವೆ ರುಧಿರವನು ||೨೭೬||

ಧುರದೊಳು ಕಂಸನ ತರಿದಿಹ ಕೃಷ್ಣನ | ನರಿಯೆಯ ವಾರ್ತೆಯನು ||
ನರಕ ಮುರಾಸುರರೊಧಿಸಲು ಬಂದಿಹೆ | ನರುಹು ನೀನಾರೆಲವೊ ||೨೭೭||

ಖಳಕುಲದ್ರೋಹಿ ನಿನ್ನುಳಿಸೆನು ಜೀವದಿ | ಹಳಚಿನ್ನೊಡನೀಗ ||
ಬಲವಿಕ್ರಮಿ ಮುರನೆಂಬನೆ ನಾನೆಲ | ಗಳವನು ಖಂಡಿಸುವೆ ||೨೭೮||

ಹರನಂದದಿ ಶಿರವಯ್ದಿದೆ ನಿನಗೆಲೊ | ಧುರಮಲ್ಲನುಯೆನುತ ||
ಅರಿತಯ್ತಂದಿಹೆ ನಿನ್ನಸುವಳಿದರೆ | ಧರಿಪೆನು ಕೀರ್ತಿಯನು ||೨೭೯||

ರಾಗ ಭೈರವಿ ಏಕತಾಳ

ನರ ನೀ ವ್ಯರ್ಥದಿ ಬಂದು | ಈ | ಧುರಕನುವಾಗುವ ನಿಂದು ||
ತೊರೆದಪೆಯಸುವೆಂದೆನುತ | ಮು | ದ್ಗರದೊಳು ಬಡೆದ ಘರ್ಜಿಸುತ ||೨೮೦||

ತ್ವರಿತದಿ ಹರಿ ಮುದ್ಗರವ | ತುಂ | ಡರಿಯುತ ನಿಂದಿರಲೊಲವ ||
ನರಿತಾ ಖಳ ಶೂಲವನು | ಬಿಡೆ | ಗುರಿಯೊಳು ಖಂಡಿಸಲದನು ||೨೮೧||

ಭೋರಿಡುತಾಕ್ಷಣ ಖಳನು | ಎಲೆ | ಪೋರನೆ ಸಹಸಿಯೈ ನೀನು ||
ತೋರುಪರಾಕ್ರಮವೆನುತ | ಶರ | ವಾರವ ಬಿಡೆ ಗುರಿಯಿಡುತ ||೨೮೨||

ತುಂಡಿಸಿ ಬಹ ಶರಗಳನು | ಧನು | ಖಂಡಿಸಿ ನಿಲೆ ಮಾಧವನು ||
ಚೆಂಡರಿವೆನು ಶಿರವೆನುತ | ದೋ | ರ್ದಂಡನು ಬರೆ ಗಜರುತ್ತ ||೨೮೩||

ಭಾಮಿನಿ

ಎರಡು ಕೈಗಳೊಳಾಗ ಶ್ರೀಶನ |
ಭರದಿ ಬಿಗಿಹಿಡಿಯಲ್ಕೆ ಚಕ್ರವ |
ತಿರುಹಿ ಬಿಡೆ ಶಿರವಯ್ದು ಖಂಡಿಸಿ ಬೀಳೆ ಧಾರಿಣಿಗೆ ||
ಸುರರು ತೋಷದಿ ಸುರಗಿಸಂಪಗೆ |
ಯರಳುಗಳನರ್ಪಿಸಲು ದುಂದುಭಿ |
ಮೊರೆಯೆ ಚರರಯ್ತಂದು ನರಕಾಸುರನ ಪದಕೆರಗಿ ||೨೮೪||

ರಾಗ ಸಾರಂಗ ಅಷ್ಟತಾಳ

ಕೇಳು ಕೇಳಯ್ಯ ಜೀಯ | ದೈತ್ಯೇಂದ್ರ ನಾ | ಪೇಳುವ ನಿಜ ವಾರ್ತೆಯ ||
ಬಾಲನೊರ್ವನು ಪಕ್ಷಿಮೇಲೇರಿ ದುರ್ಗವ | ಸಾಲುಸಾಲಿನೊಳ್ ಮುರಿದು |
ಮೇಲ್ವಾಯ್ದು ||೨೮೫||

ಭೂರಿವಿಕ್ರಮದಿಂದಲಿ | ನಮ್ಮಯ ಸೇನಾ | ಜಾಲವ ಕದನದಲಿ ||
ಗಾರುಗೆಡಿಸಿ ಮುರದೈತ್ಯನ ಶಿರವನ್ನು | ಧಾರಿಣಿಗಿಳುಹಿದನು | ನಿಂದಿರ್ಪನು ||೨೮೬||

ಅಸಮವಿಕ್ರಮಿಯವನು | ಮಾನವರೊಳು | ವಸುಧೆಯೊಳೆಣೆಗಾಣೆನು ||
ಪೆಸರಿನೊಳ್ ಕೃಷ್ಣನು ಕಂಸಾದಿಮಹಶೂರ | ರಸುರ ಸಂಹಾರನಂತೆ | ಕೇಳಿಂತೆ ||೨೮೭||

ರಾಗ ಕೇದಾರಗೌಳ ಝಂಪೆತಾಳ

ಚರನ ನುಡಿಯಂ ಕೇಳುತ | ಭೋರ್ಗುಡಿಸಿ | ನರಕದೈತ್ಯನು ಗಜರುತ ||
ಅರರೆ ಪೋರನ ವಾರ್ತೆಯ | ಪಿಂದೆ ನಾ | ನರಿತಿರ್ಪೆ ಕುಟಿಲೋಕ್ತಿಯ ||೨೮೮||

ಬಂದನೇಯೆಮ್ಮ ಪುರಿಗೆ | ಸಖ ಮುರನ | ಕೊಂದನೇ ಕದನದೊಳಗೆ ||
ಇಂದೆನ್ನ ಭುಜಬಲದಲಿ | ಆಯುಷ್ಯ | ಸಂದಿತವನಿಗೆ ತ್ವರೆಯಲಿ ||೨೮೯||

ಕರಿರೆಮ್ಮ ತಾಮ್ರಾಕ್ಷನ | ಸಚಿವನಾ | ಗಿರುತಿರ್ಪ ಕ್ಷುರದಂಷ್ಟನ ||
ಬರಲಿ ಮದಗಜವೀಕ್ಷಣ | ಏರಿ ನಾ | ತೆರಳಿ ನೋಳ್ಪೆನು ಬಾಲನ ||೨೯೦||

ಎಂದು ಮಹಪೌರುಷದಲಿ | ಸೇನೆಗಳ | ಸಂದಣಿಯ ಕೂಡುತ್ತಲಿ ||
ಬಂದುಗಜವನ್ನಡರುತ | ನರಕ ರಣ | ಕೆಂದು ಧನುಶರ ಪಿಡಿಯುತ ||೨೯೧||

ಕರದಿ ಚಕ್ರಾಬ್ಜಗದೆಯ | ಶಂಖವನು | ಧರಿಸಿರುವ ವನಮಾಲೆಯ ||
ಮೆರೆವ ಕಸ್ತುರಿತಿಲಕದಿ | ಕೃಷ್ಣ ನಲಿ | ದಿರೆ ವಿಹಂಗಮಭುಜದಲಿ ||೨೯೨||

ನರಕ ಕಿಡಿಕಿಡಿಸೂಸುತ | ಕೋಟೆಗಳ | ಮುರಿದೆಮ್ಮ ಪುರಿಸಾರುತ ||
ಮುರನಕೊಂದ ಮದಾಂಧನೆ | ಎನ್ನ ಗೆಲ | ಲರಿದು ಸಾರೆಲೊ ಪೋರನೆ ||೨೯೩||

ರಾಗ ಮಾರವಿ ಏಕತಾಳ

ಬಂದುದಾಶ್ಚರ್ಯವೆ ನಿನ್ನಯ ನಗರಿಗೆ | ಕೊಂದಿಹೆ ಮರೆತವನ ||
ಪಿಂದಕೆ ನಿನ್ನಿಂದಧಿಕರ ನಾಮವ | ನಂದಿಸಿ ಮೆರೆದಿಹೆನು ||೨೯೪||

ಏನು ವಿರೋಧಗಳೆಮ್ಮೊಳು ಕದನಗ | ಳೇನು ನಿಮಿತ್ತಗಳು ||
ದಾನವರಧಿಪತಿ ಭೂಸುತನರಕನ | ನೀನರಿಯೆಯ ಧುರದಿ ||೨೯೫||

ಸುರಪತಿಯುಚ್ಛೈಶ್ರವ ಚಿಂತಾಮಣಿ | ಕರಿತರು ಮೊದಲಾಗಿ ||
ಸುರಮಾತೆಯ ಕುಂಡಲಗಳ ಕೊಡದಿರೆ | ಕೊರಳರಿವೆನು ದಿಟವು ||೨೯೬||

ಕೊಡೆನೆಂದಿಗು ನಾ ತಂದಿಹ ವಸ್ತುವ | ಹುಡುಗನೆ ಗೆಲಿದೆನ್ನ ||
ಒಡವೆಯ ಸುರಪತಿಗೀವೆಯ ವ್ಯರ್ಥದ | ನುಡಿಗಳ ನಾಡದಿರು ||೨೯೭||

ಖಳರೊಳು ಧುರವೆಂದೆನುತಲೆ ಮಲೆತಿಹ | ಕಲಿಗಂಜದ ಕೃಷ್ಣ ||
ಗೆಲದಪಜಯಮಂ ಪೊಂದಿಹುದಿಲ್ಲವೊ | ಛಲವೇತಕೊ ದುರುಳ ||೨೯೮||

ರಾಗ ಶಂಕರಾಭರಣ ಮಟ್ಟೆತಾಳ

ಭಳಿರೆ ಭಳಿರೆ ಬಾಲನೆನ್ನೊಳ್ | ಮಲೆತು ನಿಂದೆಯಹುದೊ ಮಝರೆ |
ಕೊಲುವೆನೆನುತ ಖಡ್ಗವನ್ನು | ಸೆಳೆದು ಪೊಯ್ದನು ||೨೯೯||

ದಿವಿಜವೈರಿ ನೋಡು ದಿವ್ಯ | ಪವಿಸಹಸ್ರಾರಚಕ್ರ |
ಭುವಿಯೊಳಸಿಯ ಚೂರ್ಣಗೆಯ್ದು | ಕವಲುಗೊಳಿಸಿತು ||೩೦೦||

ಪೋರ ಭಾಪು ಕಡಿದೆ ಖಡ್ಗ | ಘೋರಶಕ್ತಿ ತಾಳೆನುತ್ತ |
ಕ್ರೂರ ಕೋಪದಿಂದಲೆಸೆದ | ವಾರಿಜಾಕ್ಷಗೆ ||೩೦೧||

ನರಕದೈತ್ಯ ನೋಡು ನಿನ್ನ | ಪರಮಶಕ್ತಿ ಧರೆಯೊಳೇತ |
ಕುರುಳುತಿಹುದೆನುತ್ತ ಕೃಷ್ಣ | ಕೊರೆದು ಕೆಡಹಿದ ||೩೦೨||

ರಾಗ ಭೈರವಿ ಅಷ್ಟತಾಳ

ಮೂರುಲೋಕದೊಳೆನ್ನನು | ಗೆಲ್ಲುವ ಶೂರ | ರಾರನ್ನು ಕಾಣೆನಾನು ||
ಜಾರ ಗೋವಳನೆ ಸಾಮಾನ್ಯ ಶಸ್ತ್ರವ ಬಿಡೆ | ಭೋರನೆ ತರಿದಿಹೆಯ ||೩೦೩||

ಪೊಗಳಿಕೊಂಬುವುದೇತಕೊ | ಮಹಾಸ್ತ್ರವ | ನೆಗಳೀಗ ಬೆದರೆ ಸಾಕೊ ||
ಮಘವನ ವಸ್ತುವಾಹನವಿತ್ತು ಮರೆಯನ್ನು | ಪೊಗಲೀಗ ರಕ್ಷಿಸುವೆ ||೩೦೪||

ಪರಿಕಿಸು ಮುದ್ಗರವ | ನಿನ್ನಂಗ ಜ | ಜ್ಝರಿಸುವ ಶಸ್ತ್ರಾರವ ||
ಶರಣುಪೊಂದಿಸಿಕೊಂಬೆನೆನುತ ಕೃಷ್ಣನಿಗೆಚ್ಚು | ನರಕ ಬೊಬ್ಬಿರಿದು ನಿಂದ ||೩೦೫||

ಕೆರಳಿ ಶ್ರೀಕೃಷ್ಣನಾಗ | ಖಂಡಿಸುತಾ ಮು | ದ್ಗರವನ್ನು ಕೆಡಹಿಬೇಗ ||
ಗುರಿಯೊಳು ಚಕ್ರವ ಬಿಡಲು ದೈತ್ಯನ ಶಿರ | ಧರೆಯೊಳಗುರುಳಿಸಿತು ||೩೦೬||

ಭಾಮಿನಿ

ಸುರಿಸಿ ಸುಮಮಳೆಗಳನು ನಿರ್ಜರ |
ತರುಣಿಯರು ನರ್ತಿಸುತಲಿರೆ ಹರಿ |
ಹರುಷದಿಂದಿರುತಿರಲು ಧಾರಿಣಿದೇವಿಯಯ್ತಂದು ||
ಸುರಿವ ನೇತ್ರೋದಕದಿ ನರಕನ |
ತರಳ ಭಗದತ್ತನನು ಶ್ರೀಶನ |
ಚರಣದೊಳು ತಂದಿಕ್ಕಿ ಕರಮುಗಿಯುತ್ತ ಪೇಳಿದಳು ||೩೦೭||

ರಾಗ ಅಹೇರಿ ಆದಿತಾಳ

ದೇವದೇವನೆ ಜಯತು | ಪದ್ಮಾಕ್ಷ ವಾಸು | ದೇವ ಶ್ರೀಹರೆ ಜಯತು || ಪ ||
ಪಾವನಾತ್ಮಕ ವಿಶ್ವವಂದ್ಯ | ವಿಶ್ವಾತ್ಮಕ | ರಾವಣಾರಿಯೆ ರಾ | ಜೀವನಾಭನೆ ಜಯ || ಅ.ಪ ||
ಧರೆಜಲತೇಜಂಗಳು | ವಾಯ್ವಾಕಾಶ | ಸುರನರರುರಗಂಗಳು ||
ಸ್ಥಿರಚರಮನಸ್ಸಹಂಕಾರತತ್ತ್ವಂಗಳು | ಹರಿ ನಿನ್ನೊಳೈಕ್ಯ ಬೇರಿರುವುದೇನಿದೆ ಸ್ವಾಮಿ ||೩೦೮||

ತರಳನೆನ್ನಯ ಮೊಮ್ಮನು | ಭಗದತ್ತನೀತ | ನರಕನ ಸುಕುಮಾರನು ||
ಭರಿತ ಭಯದೊಳ್ ನಿನ್ನ | ಚರಣದಿ ಮಣಿ ನಿಕರ ||
ತಂದಿಹೆನಿದಕೊ | ನರಕನೆನ್ನಯ ಕುವರ ||
ಬರಸೆಳೆದಿಹ ದೇವಮಾತೆಕುಂಡಲವಿದು |
ಚರಣದೊಳಿರಿಸಿಹೆ ಪರಿಗ್ರಹಿಪುದು ದೇವ ||೩೦೯||

ವಾರ್ಧಕ

ಹರಿಯು ಸಂತೋಷದಿಂ ಧರಣಿಯಂ ಸಂತಯಿಸಿ |
ನರಕ ಸುತಗಭಯ ಮನ್ನಿತ್ತು ಪ್ರಾಗ್ಜ್ಯೋತಿಷದ |
ಪುರಕೆ ಪಟ್ಟವ ಕಟ್ಟಿ ಖಳನ ಕಾರಾಗೃಹದಿ ಸೆರೆಯಸಿಕ್ಕಿಹ ಸತಿಯರ ||
ಪೊರಡಿಸುತ ಷೋಡಶಸಹಸ್ರಸಂಖ್ಯಾಕರಂ |
ತೆರಳಿ ನಿಮ್ಮಯ ನಗರಕೆನಲಾಗ ಕೈಮುಗಿದು |
ಸರಸಿಜಾಕ್ಷನೆಯೆಮ್ಮ ವರಿಸು ನೀನೆಂದೆನುತಲೆರಗಿ ಸನ್ನುತಿಗೆಯ್ಯಲು ||೩೧೦||

ಭಾಮಿನಿ

ನಿಂದಿರುವ ಕಮಲಾಕ್ಷಿಯರ ಮನ |
ದಂದವರಿದಸ್ತೆನುತ ಜತೆಯೊಳ |
ಗಂದಣಗಳೇರಿಸುತ ನಿಜಪುರಕಯ್ದಿ ಶ್ರೀಹರಿಯು ||
ಸುಂದರಾಂಗಿಯರೆಲ್ಲರನು ತಾ |
ನೊಂದೆಕಾಲದೊಳೊರಿಪೆನೆನ್ನುತ |
ಚಂದದೊಳಗರಮನೆಯೊಳವರೊಡನಿರ್ದನಖಿಳೇಶ ||೩೧೧||

ರಾಗ ಕೇದಾರಗೌಳ ಅಷ್ಟತಾಳ

ಅತ್ತಲವಂತಿಯ ನಗರದೊಳೊಂದಿನ | ಪೃಥ್ವಿಪ ಶೃತದೇವನ ||
ಪುತ್ರರುವಿಂದಾನುವಿಂದರೋಲಗದೊಳ | ಗರ್ತಿಯೊಳ್ ಮಂಡಿಸುತ ||೩೧೨||

ಘನವೇಗ ಸಭೆಯನೀಕ್ಷಿಸುತ ವಿಂದನು ತ | ನ್ನನುಜಾತನೊಡನೆಂದನು ||
ಜನಪರನೆರಹೆಮ್ಮ ಭಗಿನಿಸ್ವಯಂವರ | ವನು ನೆಗಳಿರಲಾಗಳು ||೩೧೩||

ದೃಷ್ಟಿಗೋಚರಿಸದೆ ಮಿತ್ರವಿಂದೆಯನಾರು | ದುಷ್ಟರು ಸೆಳೆದೊಯ್ಯಲು ||
ತಟ್ಟನೆ ಕುರುಹ ನೀವರಿತು ಬನ್ನಿರಿಯೆನ್ನು | ತಟ್ಟಿಹೆ ಚಾರರನ್ನು ||೩೧೪||

ಎತ್ತ ಪೋದರೊ ಕಾಣೆಯನುಜೆಯೆಲ್ಲಿರ್ಪಳೊ | ಗೊತ್ತ ಕಂಡರುಹದಿರೆ ||
ಧೂರ್ತರಿವರ ಜೀವವಿರಿಸೆ ತಾನೆನುತಿರ | ಳರ್ತಿಯೊಳೊರ್ವ ಬಂದು ||೩೧೫||

ಚರಣಕೆ ಪೊಡಮಟ್ಟು ಕೈಗಳ ಮುಗಿಯುತ್ತ | ಲುರುತರ ಭೀತಿಯಿಂದ ||
ದೊರೆಯೆ ತಮ್ಮಯ ಬೇಹಿನನುಚರ ತಾನೆನ | ಲರುಹು ವಾರ್ತೆಗಳೆಂದನು ||೩೧೬||

ಲಾವಣಿ

ದೊರೆರಾಯ ಚಿತ್ತಾವಧಾನ | ಪದ | ಕೆರಗುವೆ ರಿಪುಗಜಸಿಂಹ ಸಮಾನ  || ಪ ||

ತಿರುಗಿದೆ ದೇಶದೇಶವನು | ಅ | ಲ್ಲಿರುವರಸರ ಮನೆ ಮನೆಗಳೆಲ್ಲವನು ||
ಕುರುಹ ಮರೆಸಿ ಪುಡುಕಿದೆನು | ಆ | ಸರಸಿಜಾನನೆ ಮಿತ್ರವಿಂದೆಯೆಂಬಳನು ||೩೧೭||

ತೆರಳಿ ನಾ ದ್ವಾರಕಾಪುರದಿ | ಕೃಷ್ಣ | ನರಮನೆ ಸಜ್ಜೆಯನೆಲ್ಲ ನಾ ಮುದದಿ ||
ಪರಿಕಿಸಿ ನೋಡಲು ಭರದಿ | ಅ | ಲ್ಲಿರುವಳು ನಿನ್ನಯ ಭಗಿನಿ ಸಂತಸದಿ ||೩೧೮||

ಜಾರಚೋರನು ಕೃಷ್ಣನವನು | ಮಹ | ಶೂರನುದಾರಸಾಹಸಿಕನಾಗಿಹನು ||
ನಾರಿಯನೊಯ್ದಿರ್ಪನವನು | ಧುರ | ಧೀರನ ತರಿದು ತಾರೀಗ ತಂಗಿಯನು ||೩೧೯||

ರಾಗ ಮಾರವಿ ಏಕತಾಳ

ಚರನಿಂತೆನೆ ಭೋರ್ಗುಡಿಸುತ ವಿಂದನು | ಕರೆದನುಜಾತನನು ||
ಅರಿತೆಯ ಗೋವಳನೆಸಗಿದ ತಂತ್ರವ | ಶಿರವರಿಯುವೆ ನಾನು ||೩೨೦||

ನೆರೆದಿಹ ನೃಪರ ಸಮೂಹದ ಮಧ್ಯದೊ | ಳಿರುತಿಹ ಸುದತಿಯನು ||
ತರಳನು ತಂತ್ರದೊಳೊಯ್ದನೆ ಸಕಲರು | ಕುರುಡರೆ ಕುಳಿತವರು ||೩೨೧||

ಕೊಡು ಕೊಡು ಸತಿಯನು ಸೋದರಿಕೆಯ ನಾ | ಬಿಡೆನೆನ್ನುತ ಪಿಂದೆ ||
ಕಡುಜಾರನು ಎನ್ನೊಡನವ ಕೇಳ್ದರೆ | ಕೊಡೆನೆಂದರುಹಿದೆನು ||೩೨೨||

ಚೋರತ್ವದಿ ಸೆಳೆದೊಯ್ದನೆ ಭಾಪುರೆ | ಭೋರನೆ ಶಿರವರಿದು ||
ನಾರಿಯ ತಹೆ ಪುನರಪಿ ಭೂಪಾಲರ | ಸೇರಿಪೆ ಪರಿಣಯಕೆ ||೩೨೩||

ಕರಿತುರಗವ ರಥಪತ್ತಿಯ ನೆರೆಹುತ | ಪೊರಡನುವಿಂದಕನೆ ||
ತೆರಳಲಿ ಮಾರ್ಬಲ ಧುರದೊಳು ಕೃಷ್ಣನ | ಶಿರ ಚೆಂಡಾಡುವೆನು ||೩೨೪||

ಭಾಮಿನಿ

ಭೋರಿಸುವ ಕಹಳಾದಿ ರವದೊಳು |
ಧಾರಿಣಿಯ ಬಿರಿವಂತೆ ಸೇನಾ |
ವಾರಿಧಿಯನೊಡಗೂಡಿ ದ್ವಾರಾವತಿಗೆ ವೇಗದಲಿ ||
ಸಾರಿ ತನ್ನಯ ಚರನೊಳ್ ವಿಂದನು |
ಚೋರಕೃಷ್ಣನಿಗುಸಿರು ಸುದತಿಯ |
ಭೋರನೊಪ್ಪಿಸದಿರಲು ಧುರಗೊಡಲೆನುತ ಕಳುಹಿದನು ||೩೨೫||

ಕಂದ

ಚರನಾಕ್ಷಣದೊಳ್ ಗಮಿಸುತ |
ತರುಣೀಗಣಪರಿವೇಷ್ಟಿತನಾಗುತೆ ಕುಳಿತಿಹ ||
ಹರಿಯಂ ಕಾಣುತಲಾಗಳ್ |
ಕರಮಂ ಜೋಡಿಸಿ ವಿನಯದಿ ಮಗುಳಿಂತೆಂದಂ ||೩೩೬||

ವಾರ್ಧಕ

ಅರುಹುವೆನು ಕೇಳ್ ಕೃಷ್ಣ ನೀನವಂತಿಪುರೇಶ |
ತರಳೆಯಾಗಿಹ ಮಿತ್ರವಿಂದೆಯನ್ನಪಹರಿಸಿ |
ಪುರಿಗೆ ಕರೆತಂದಿರ್ಪೆಯವಳಗ್ರಭವರೀರ್ವರರಿತು ಮಾರ್ಬಲಸಹಿತಲಿ ||
ತೆರಳಿಬಂದೀನಗರದುಪವನದಿ ನೆಲಸಿಹರು |
ತ್ವರಿತದಿಂದವಳ ತಂದೊಪ್ಪಿಸದಿರಲ್ಕೀಗ |
ಧುರಕೆ ಬಹುದೆಂದೆನಲ್ ನಸುನಗುತ ಮುರಹರಂ ಚರನ ಮನ್ನಿಸುತೆಂದನು ||೩೨೭||

ರಾಗ ಕೇದಾರಗೌಳ ಝಂಪೆತಾಳ

ಅತ್ತೆ ರಾಜಾದೇವಿಯು | ಎನಗಾಗಿ | ಪೆತ್ತಿರ್ಪ ಸುಕುಮಾರಿಯು ||
ಮಿತ್ರವಿಂದೆಯುಯೆನ್ನನು | ಬಿಡದೆ ನೆನೆ | ಯುತ್ತಿರಲು ತಂದಿರ್ಪೆನು ||೩೨೮||

ಧುರಕೆ ಬಹೆನೀಕ್ಷಣದಲಿ | ಬಾಲಿಕೆಯ | ತೊರೆಯೆ ನಾ ಸಾಮಗಳಲಿ ||
ಪರಿಕಿಸಲಿ ಕರಲಾಘವ | ಭಾವಂದಿ | ರರಿತು ತೆರಳಲಿ ಸತ್ತ್ವವ ||೩೨೯||

ಪೇಳು ಪೋಗೆಂದೆನುತಲಿ | ಚಾರಕನ | ಬೀಳುಗೊಂಡುರೆ ಮುದದಲಿ ||
ವ್ಯಾಳಶಯನನು ವೇಗದಿ | ಧುರಕೆನುತ | ಪಾಳೆಯವ ಕೂಡಿ ಮುದದಿ ||೩೩೦||

ಬಂದು ಹಲಧರಗೊಂದಿಸಿ | ವಿಂದಾನು | ವಿಂದರಾನೀಕವೆರಸಿ ||
ನಿಂದಿಹರು ಹೊರದ್ವಾರದಿ | ದೂತಮುಖ | ದಿಂದಲರಿತಿಹೆ ವೇಗದಿ ||೩೩೧||

ಮಿತ್ರವಿಂದೆಯನೊಪ್ಪಿಸಿ | ತಮ್ಮೊಡನೆ | ಮಿತ್ರತ್ವವನುವರ್ತಿಸಿ ||
ಸ್ವಸ್ಥದಿಂದಿಹುದೆನ್ನುತ | ಬೆಸಸೆನುತ | ಭೃತ್ಯನಟ್ಟಿರ್ಪನಾತ ||೩೩೨||

ತರುಣಿಯಂ ಬಿಡೆಸಾಮದಿ | ಸಂಗರವೆ | ಸರಿಯೆಂದು ನಾ ಕ್ಷಿಪ್ರದಿ ||
ಒರೆದು ಕಳುಹಿದೆ ಚರನನು | ಮುಂದಾವ | ಪರಿಯೆಂದನಾ ಕೃಷ್ಣನು ||೩೩೩||