ರಾಗ ಸುರುಟಿ ಏಕತಾಳ

ಧುರದೊಳಗಿರ್ವರನು | ದರ್ಪವ | ಮುರಿದುರೆ ಬಾಲೆಯನು ||
ವರಿಸಲು ವಿಕ್ರಮವಹುದೆಲೊ ಕೃಷ್ಣನೆ | ಬರುತಿಹೆ ನಾನೆನುತೆದ್ದನು ಹಲಧರ ||೩೩೪||

ಪೊರಡುತ ವೇಗದಲಿ | ದ್ವಾರದೊ | ಳಿರುವರ ದೂರದಲಿ ||
ಪರಿಕಿಸಿ ಮುರಹರ ಶಂಖವ ಮೊಳಗಿಸೆ | ಎರಗುತ ಚಾರಕ ವಿಂದನೊಳೆಂದನು ||೩೩೫||

ಹರಿಯೊಡನುಸಿರೆದೆನು | ಧುರವನೆ | ವಿರಚಿಪೆನೆಂದವನು ||
ಬರುತಿಹನಿದ ನೀ ಪರಿಕಿಸಬೇಕೆನೆ | ಕೆರಳುತಲಾಗನುವಿಂದನು ಮಲೆಯುತ ||೩೩೬||

ರಾಗ ಮಾರವಿ ಏಕತಾಳ

ಬಂದಿರೆ ಗೋವಳಬಾಲರೆ ಕದನಕೆ | ಸುಂದರಿಯನು ಬಿಡದೆ ||
ಮುಂದ್ವರಿದಿಹ ಫಲ ಕಾಂಬಿರಿ ಕ್ಷಣದೊಳ | ಗೆಂದನು ರೋಷದಲಿ ||೩೩೭||

ಧುರವಿಕ್ರಮಿರಾವಹುದೆಲೊ ಮೂಢನೆ | ಹರಿತಂದಿಹೆವೀಗ ||
ಕರುಳುಗಿಯುವೆ ಬಾರೆನ್ನುತ ಹಲಧರ | ಹರಿನಾದವ ಗೆಯ್ದ ||೩೩೮||

ಶೂರನು ನಿಜ ಗೋಮಂತಕಗಿರಿಯೊಳು | ಹೋರಿದ ಮಗಧನೊಳು ||
ಬಾರದೆ ಜಯವಲ್ಲಡಗಿದೆ ಗುಹೆಯೊಳು | ಕಾರಣವೇನುಸಿರೊ ||೩೩೯||

ನಿರುಕಿಸಿ ಕಾಲವ ಮರ್ದಿಸ ಬೇಕೆಲೊ | ದುರುಳರನ್ಯುಕ್ತಿಯೊಳು ||
ಅರಿತದನಡಗಿದೆನೆನ್ನ ಕೈಚಳಕವ | ಪರಿಕಿಸು ನೀನೀಗ ||೩೪೦||

ಕುಲದೂಷಕ ನಿನ್ನಿರಿಸೆನು ಕಾಲವ | ನರಿತಯ್ತಂದಿಹೆವು ||
ಎಲೆ ಗೋವಳ ನೀನೆನ್ನೊಳು ಸಮರದಿ | ಬಲ ಪೌರುಷ ತೋರೊ ||೩೪೧||

ಪೇಳೆಲೊ ಕುಲದೂಷಣಗಳ ಕೃತ್ಯವ | ಖೂಳನೆ ನುಡಿಯದಿರೆ ||
ಸೀಳುವೆ ಜಿಹ್ವೆಯನೆನ್ನುತ ಕ್ರೋಧವ | ತಾಳೆ ಹಲಾಯುಧನು ||೩೪೨||

ರಾಗ ಕೇದಾರಗೌಳ ಝಂಪೆತಾಳ

ಹಿಂದೆ ರೈವತರಾಯನು | ಕೃತಯುಗದಿ | ನಂದನೆಯ ಪಡೆದಿರ್ಪನು ||
ತಂದಿತ್ತ ನಿನಗವಳನು | ವರಿಸಿರ್ಪು | ದಂದವೇ ಪಿರಿಯವಳನು ||೩೪೩||

ಸರಸಿಜಾಸನನಾಜ್ಞೆಯ | ನಿತ್ತ ತೆರ | ವರಿಸಿರ್ಪೆನಾ ಕನ್ನೆಯ ||
ದುರುಳ ನೀನದ ಬಲ್ಲೆಯ | ನಿಂದಿಸಲು | ಕರುಳುಗಿವೆ ನಾ ನಿಶ್ಚಯ ||೩೪೪||

ಹಲಧರನೆಯೆನ್ನಸ್ತ್ರದಿ | ಅಂತಕನ | ಪೊಳಲಿಗಯ್ದುವೆ ಶೀಘ್ರದಿ ||
ಘಳಿಲನೊಪ್ಪಿಸು ಎನ್ನಯ | ಭಗಿನಿಯನು | ಕಲಹ ಬೇಡವೊ ನಿಶ್ಚಯ ||೩೪೫||

ಗತಿಸಿಹರು ಪೌರುಷದಲಿ | ಪಿಂದೆದು | ರ್ಮತಿಗಳೆಮ್ಮಯ ಶರದಲಿ ||
ಸತಿಯ ಬಿಡುವವರಲ್ಲೆಲ | ಸಾರಿದೆನು | ಮತಿಗೇಡಿ ನೀ ಪೋಗೆಲ್ಲ ||೩೪೬||

ರಾಗ ಶಂಕರಾಭರಣ ಮಟ್ಟೆತಾಳ

ಬರಿದೆ ಪ್ರಳಯರುದ್ರನೆಂಬೆ | ತೆರಳಿತೆಲ್ಲ ಪಂಚಶಿರವು |
ವರತ್ರಿಶೂಲವಿಲ್ಲ ಹಲವ | ಧರಿಸಿಕೊಂಡಿಹೆ ||೩೪೭||

ಪ್ರಳಯರುದ್ರತೇಜವೆನ್ನ | ಹಲದ ಮೊನೆಯೊಳಿಹುದು ನೋಡು |
ಖಳನೆ ಯಾತಕೆಲೊ ತ್ರಿಶೂಲ | ಕೊಲುವೆ ನಿಶ್ಚಯ ||೩೪೮||

ಪರಮ ಕ್ಷಾತ್ರಿಕುಲಜನೆನ್ನ | ಶರದ ಮೊನೆಯ ತೇಜವನ್ನು |
ಪರಿಕಿಸೆಲವೊ ಮೊದಲೆನ್ನುತ್ತ | ಗುರಿಯೊಳೆಚ್ಚನು ||೩೪೯||

ಖುಲ್ಲ ನಿನ್ನ ಶರವು ಭುವನ | ದಲ್ಲಿ ಚೂರ್ಣವಾಗಿ ತೇಜ |
ವೆಲ್ಲ ಪೋಪುದೆನುತ ಶೌರ್ಯ | ದಲ್ಲಿ ಮುರಿದನು ||೩೫೦||

ಬಿಡುವೆನೀ ಮಹಾಸ್ತ್ರವೀಗ | ಕಡಿಯೆ ಗೋಪಕುವರ ನೀನು |
ಕಡು ಬಲಾಢ್ಯನಹುದೆನುತ್ತ | ಪೊಡೆದನಾಕ್ಷಣ ||೩೫೧||

ಕೆರಳಿ ಕಾಮಪಾಲನದರ | ಮುರಿದು ಚಾಪ ಖಂಡಿಸಲ್ಕೆ |
ತಿರುಹಿ ಖಡ್ಗದಿಂದ ಪೊಯ್ದ | ತ್ವರಿತದಿಂದಲಿ ||೩೫೨||

ರಾಗ ಭೈರವಿ ಏಕತಾಳ

ಖಂಡಿಸಲಸಿಯನು ಬೇಗ | ಗದೆ | ಗೊಂಡತಿಕೆರಳುತಲಾಗ ||
ಚಂಡ ಪರಾಕ್ರಮದಿಂದ | ದೋ | ರ್ದಂಡನು ಬರಲನುವಿಂದ ||೩೫೩||

ಪ್ರತಿಗದೆ ಯೊಳಗದ ಬಡೆದು | ಬಲ | ಖತಿಯೊಳು ಭುವನಕೆ ಕೆಡೆದು ||
ಹತಿಸುವೆ ಕ್ಷಣದೊಳಗೀಗ | ಬಾ | ರತಿ ಛಲದೊಳು ನೀ ಬೇಗ ||೩೫೪||

ಪರಿಕಿಸು ಭುಜಬಲವೆನುತ | ನರ | ಹರಿಯಂದದಿ ಬೊಬ್ಬಿಡುತ ||
ಬರಲನುವಿಂದಕ ನಾಗ | ಶಿರ | ಕೆರಗಲು ಮೂರ್ಛಿಸೆ ಬೇಗ ||೩೫೫||

ಭಾಮಿನಿ

ಧರೆಯೊಳಾಕ್ಷಣ ಬಿದ್ದು ಚೇತನ |
ವೆರಸಿಯನುವಿಂದಕನು ಕ್ರೋಧದಿ |
ಶಿರವರಿವೆನೆಂದೆನುತ ಭೋರ್ಗುಡಿಸುತ್ತಲಯ್ತರಲು ||
ಭರದಿ ನಡೆತಂದಾಗ ವಿಂದನು |
ತೆರಳುವೆನು ನಾನೀಗ ಗೋವಳ |
ತರಳರಸು ತೊಲಗಿಪೆನು ನಿಲ್ಲೆಂದವನ ಸಂತಯಿಸಿ ||೩೫೬||

ವಾರ್ಧಕ

ಕರದ ಧನುಠಂಕಾರದಿಂದ ಹೂಂಕರಿಸುತ್ತ |
ಧುರಕೆ ಮುಂದೊತ್ತಿ ಬಹ ವಿಂದನಂ ಪರಿಕಿಸುತ |
ಸರಸಿಜಾಂಬಕನಾಗಲಗ್ರಜನ ಸಂತಯಿಸಿ ಬರಲಾಗ ಮಾರ್ಮಲೆಯುತ ||
ಕೆರಳಿ ವೀರಾವೇಶದಿಂದ ಕಿಡಿಸೂಸುತ್ತ |
ಲರರೆ ಗೋವಳರೆಮ್ಮ ಧುರದೊಳಂತಕನೆಡೆಗೆ |
ತೆರಳುವಿರಿ ಸಾರಿದೆನುಯೆನ್ನನುಜೆಯನ್ನಿತ್ತು ಶರಣುಪೊಂದಿರಿ ವೇಗದಿ ||೩೫೭||

ರಾಗ ಮಾರವಿ ಏಕತಾಳ

ದುರುಳನೆ ಕೇಳು ಚತುರ್ದಶಭುವನವೆ | ಶರಣೆನಗಾಗಿಹವು ||
ಅರಿಯದು ಮದಮುಖ ನಿನಗೆಂದಿಗು ನಾ | ಧುರದೊಳಗಂಜುವೆನೆ ||೩೫೮||

ಮದಮುಖ ನೀನೆಲೊ ಚೈದ್ಯನ ವರಿಸುವ | ಸುದತಿಯು ರುಕ್ಮಿಣಿಯ ||
ಒದಗ್ಯಪಹರಿಸಿಹುದೇತಕೊ ಪಾಮರ | ನೊದರದಿರೆನ್ನೊಡನೆ ||೩೫೯||

ಶರಣಾಗತಪರಿಪಾಲಕನೆಂಬುವ | ಬಿರುದನು ಪೊತ್ತಿರುವೆ ||
ತರುಣಿಯು ಎನ್ನನು ಸ್ತುತಿಸುತಲಿರೆ ನಾ | ಕರೆತಂದೊರಿಸಿಹೆನು ||೩೬೦||

ಜಾರಕುವರ ನೀನಷ್ಟಾ ವಕ್ರದ | ನಾರಿಯು ಕುಬ್ಜೆಯನು ||
ಭೋರನೆ ರಮಿಸಿದೆ ಹೇಸದೆ ಮನದೊಳು | ಯಾರಿದನೆಸಗುವರು ||೩೬೧||

ವರವನು ಕೊಟ್ಟಿಹೆ ಪಿಂದಿನ ಭವದೊಳು | ಕರುಣಿಸಿ ಯೌವನವ |
ಪರಮ ಸೌಂದರ್ಯವನಿತ್ತು ನಾ ಬೆರೆದಿಹೆ | ದುರುಳನೆ ಬಲ್ಲಿಹೆಯ ||೩೬೨||

ತರುಣಿಯರಾ ಜಲಕ್ರೀಡೆಯೊಳೊಂದೆಡೆ | ಇರಿಸಿರೆ ವಸನವನು ||
ಸ್ಮರಿಸಲು ಹೇಸಿಕೆ ಕೊಂಡೊಯ್ದುದ ನಾ | ನರಿತಿಹೆ ಕಾಮುಕನೆ ||೩೬೩||

ಪುರುಷನೊಳನುರಕ್ತತೆಯೊಳಗಿರುತಿಹ | ತರುಣಿಯರನುಸರಿಸಿ ||
ಸರಸವಿಲಾಸದೊಳಾಹ್ಲಾದಿಪುದದು | ಎರೆಯನ ಸದ್ಗುಣವು ||೩೬೪||

ರಾಗ ಭೈರವಿ ಅಷ್ಟತಾಳ

ವರಿಸಲಯ್ತಂದಿರುವ | ಪಾರ್ಥಿವರು ಗೋ | ಚರಿಸದೆ ಕೃತ್ರಿಮವ ||
ವಿರಚಿಸಿ ಭಗಿನಿಯಾಗಿಹ ಮಿತ್ರವಿಂದೆಯ | ತರಳ ನೀ ತಂದಿಹೆಯ ||೩೬೫||

ಎನ್ನೊಳು ಮನವಿರಿಸಿ | ಸಂಸ್ತುತಿಸುವ | ಕನ್ನೆಯ ಸ್ವೀಕರಿಸಿ ||
ನಿನ್ನೊಳು ಸಖ್ಯದೊಳಿಹೆನೆಂದೆ ಧಿಕ್ಕಾರ | ವನ್ನೇಕೆ ಗೆಯ್ದೆ ಮೂರ್ಖ ||೩೬೬||

ಕಾಲ ಯವನಗಂಜುತ್ತ | ನಪುಂಸಕ | ನೋಲು ಗಹ್ವರ ಸುತ್ತುತ್ತ ||
ಕೋಳು ಗೊಂಡೋಡಿದ ಲಂಡಿಗೆನ್ನನುಜೆಯ | ಪಾಲಿಪುದುಂಟೆ ಕೇಳ ||೩೬೭||

ದುರುಳ ಮರ್ದನಕೆ ನಾನು | ಉಪಾಯವ | ನರಿತು ಕಾಲ್ದೆಗೆದಿಹೆನು ||
ಉರುಹಿದೆ ಮುಚುಕುಂದನಕ್ಷಿಘಾತದಿ ಮೃತ್ಯು | ವಿರುವುದ ತಿಳಿದಿಹೆನು ||೩೬೮||

ಅರಿಗಳ ಸಮ್ಮುಖದಿ | ನಿಂದವರೋಡ | ದಿರುವರ್ ಕ್ಷಾತ್ರಿಯವರ್ಗದಿ ||
ಪರಿಕಿಸಬಹುದೆ ನಿನ್ನಾನನ ಗೋವಳ | ಗೊಳಿತಿಂಥಾ ಕೆಲಸಗಳು ||೩೬೯||

ಧುರದೊಳೆನ್ನಯ ಶೌರ್ಯವ | ಹಂಸಾದ್ಯರ | ನರಿತು ಬಾರೆಲೊ ದೇಹವ ||
ಕೊರೆದು ಚೂರ್ಣಿಪೆ ಲಂಡಿ ಯಾರೆಂಬುದನು ಜಗ | ವರಿಯಲಿ ಕ್ಷಣದೊಳಗೆ ||೩೭೦||

ರಾಗ ಮಾರವಿ ಮಟ್ಟೆತಾಳ

ಮಾತಿದೇಕೆ ಕಳವಿನೊಳಗೆ | ತಂದ ಸತಿಯನು ||
ನೀತಿಯಿಂದಲೀವು ದುಚಿತ | ಸಾರಿ ಪೇಳ್ದೆನು ||೩೭೧||

ತಿಳಿದು ಮಿತ್ರವಿಂದೆಮನವ | ಘಳಿಲನುಸಿರೆಲಾ ||
ಖಳನೆ ನಾನಾಗಿ ಬಿಡೆನು | ಹಳಚು ನೀನೆಲ ||೩೭೨||

ಪತಿಯನೊರಿಸುವುದಕೆ ಸತಿ ಸ್ವ | ತಂತ್ರವಿಲ್ಲವೊ ||
ಪಿತನುಭ್ರಾತೃಮನಗಳಂತೆ | ಚರಿಪ ಧರ್ಮವೊ ||೩೭೩||

ಧುರಕೆ ನಿಂದ ಮೇಲೆ ನೀತಿ | ಯೊರೆವುದೇತಕೊ ||
ಶರವ ಬಿಡು ಬಿಡೀಗ ಶೌರ್ಯ | ದೊಲವ ನೋಡಿಕೊ ||೩೭೪||

ಪರಿಕಿಸೆನುತ ವಿಂದ ಕ್ರೂರ | ಶರವ ಪೂಡುತ ||
ಗುರಿಯೊಳೆಚ್ಚು ನಿಲಲು ಕಂಡು | ಖತಿಯ ತಾಳುತ ||೩೭೫||

ಬರುವ ಶರವ ತರಿದು ಕೃಷ್ಣ | ಚೂರ್ಣಗೆಯ್ಯುತ ||
ಧರೆಗೆ ಕೆಡೆದ ನಿಮಿಷಮಾತ್ರ | ದೊಳಗೆ ನಲಿಯುತ ||೩೭೬||

ರಾಗ ಶಂಕರಾಭರಣ ಮಟ್ಟೆತಾಳ

ಪ್ರಳಯಸಂವರ್ತಮೇಘ | ದೊಳು ಜಲಾರ್ಣವಾಗುವಂಥಾ |
ವಲವ ನೋಡೆನುತ್ತ ಸಲಿಲ | ಬಾಣವೆಸೆದನು ||೩೭೭||

ಎಲೆಲೆ ಕಲ್ಪಾಂತ್ಯದೊಳಗೆ | ಸುಳಿವ ಜಂಝಾವಾತದಂತೆ |
ಚಲಿಪ ಪವನಶರದೊಳಿದರ | ನಿಳೆಗೆ ಕೆಡಹಿದೆ ||೩೭೮||

ಅರರೆ ವಿಲಯದೊಳಗೆ ರುದ್ರ | ಮೆರೆದು ನರ್ತಿಸಲ್ಕೆ ಜಗದೊ |
ಳೆರಗುವಂಥ ನಿಸಿತಮಾಸ್ತ್ರ | ಪರಿಕಿಸೆಂದನು ||೩೭೯||

ವಿಲಯಕಲ್ಪಾವಸಾನ | ದೊಳಗೆ ದ್ವಾದಶಾರ್ಕರುದಿಸಿ |
ಜ್ವಲಿಪತೆರ ದಿವಾಕರಾಸ್ತ್ರ | ದೊಳಗೆ ಮುರಿದಿಹೆ ||೩೮೦||

ರಾಗ ಭೈರವಿ ಏಕತಾಳ

ಭಳಿಭಳಿರೆಲೊ ಗೋವಳನೆ | ಕೈ | ಚಳಕದಿ ಕಡುವಿಕ್ರಮನೆ ||
ಒಲಿದುದು ಎನ್ನಯ ಮನವು | ನೀ | ಕಲಿಯಹೆ ಸಾಹಸಿ ದಿಟವು ||೩೮೧||

ನೊರಜೆಯೆ ನೀ ಪೊಗಳಿದರೆ | ಫಲ | ವಿರುವುದೆ ಬಿಡು ಶರವರರೆ ||
ದುರುಳನೆ ಶಿರವರಿದೀಗ | ನಾ | ಮೆರೆವೆನು ಜಗದೊಳ್ ಬೇಗ ||೩೮೧||

ತಿರುಹಿ ಬುಶುಂಡಿಯ ಭರದಿ | ಸಿರಿ | ವರನಿಂಗೆಸೆಯಲ್ ರವದಿ ||
ಧರೆಯೊಳ್ ಕೆಡಹಲ್ಕದನು | ಭೋ | ರ್ಮರೆಯುತ ಕ್ರೋಧದೊಳವನು ||೩೮೨||

ಹರಿವಾಹಿನಿ ಮೇಲಾಯ್ದು | ಅಸಿ | ತಿರುಹುತ ತುಂಡರಿದರಿದು ||
ತಿರುಗಿದ ಚಕ್ರದ ತೆರದಿ | ಹರಿ | ಪರಿಕಿಸಿ ಬೆರಸುತ ಭರದಿ ||೩೮೩||

ಖಡುಗವನುರೆ ಖಂಡಿಸುತ | ಬಾ | ಧಡಿಗನೆ ಧುರಕೆನ್ನುತ್ತ ||
ಕಿಡಿಸೂಸುತ ನಗಧರನು | ಸೆರೆ | ವಿಡಿಯುತ ಕೊಳೆ ಚಕ್ರವನು ||೩೮೪||

ಭಾಮಿನಿ

ಮರುಗಿ ಹಮ್ಮಯ್ಸುತ್ತಲಾಕ್ಷಣ |
ಹರಿಗೆ ನಮಿಸುತ ಮಿತ್ರವಿಂದೆಯು |
ಸರಸಿಜಾಕ್ಷನೆಯೆನ್ನ ಮೇಲಣ ಮಮತೆಯಿಂದೀಗ ||
ಹರಿಸದಿರು ಮದ್ಭ್ರಾತೃ ಜೀವವ |
ಕರುಣಿ ರಕ್ಷಿಸು ದೇಹಿಯೆಂದಡಿ |
ಗೆರಗೆ ವಿಂದನ ತೆರಳು ಜೀವಿಸೆನುತ್ತ ನೂಕಿದನು ||೩೮೫||

ರಾಗ ಮಧುಮಾಧವಿ ತ್ರಿವುಡೆತಾಳ

ಭರದಿ ಬಂದಗ್ರಜನಿಗೆರಗುತ | ಕರವ ಜೋಡಿಸಿ ಮಿತ್ರವಿಂದೆಯು |
ಧುರವಿದೇತಕೆಯೆನ್ನ ಪರಿಣಯ | ವಿರಚಿಪುದು ಶ್ರೀಕೃಷ್ಣಗೆ ||೩೮೬||

ರಾಗ ಮಾರವಿ ಏಕತಾಳ

ತೋರದಿರೆಲೆ ನಿನ್ನಾನನ ಧೂರ್ತಳೆ | ಚೋರನನನುಸರಿಸಿ ||
ಸಾರೀಕ್ಷಣದೊಳು ಮಾತುಗಳೇತಕೆ | ಮಾರಿಯೆ ದಿಟ ನೀನು ||೩೮೭||

ರಾಗ ಮಧುಮಾಧವಿ ತ್ರಿವುಡೆತಾಳ

ತೆರೆದು ವದನವ ಬರುವ ಮಾರಿಯ | ತಿರುಗಿಸಿಹೆ ಪತಿಗೊರೆದು ಸಹ ಜನೆ |
ಬರಿದೆ ನಿಂದಿಪೆಯೇಕೆ ಪ್ರಿಯನೊಳು ಪರಮಸಖ್ಯವ ಗೆಯ್ದುಕೊ ||೩೮೮||

ರಾಗ ಮಾರವಿ ಏಕತಾಳ

ವಿಧವತ್ವವು ನಿನಗೊದಗುವುದೆನ್ನುತ | ಕದನದಿ ಕೈತಡೆದೆ ||
ಅದ ನಿನ್ನಯ ಮನದೊಳಗರಿಯದೆ ನೀ | ವಿಧದೊಳು ನಿಂದಿಪೆಯ ||೩೮೯||

ರಾಗ ಮಧುಮಾಧವಿ ತ್ರಿವುಡೆತಾಳ

ವಾರಿಜಾಕ್ಷನ ಕದನದಲಿ ಪಿಂ | ದಾರು ಜೀವಿಸಲಿಲ್ಲವರಿತಿಹೆ |
ಶೂರ ನೀನುಳಿದುದಕೆ ಧನ್ಯನು | ಭೋರನೆನ್ನಿವಗೀಯೆಲೊ ||೩೯೦||

ರಾಗ ಮಾರವಿ ಏಕತಾಳ

ಕೊಡುತಿಹುದೇತಕೆ ಪರಿಣಯಗೆಯ್ದುಕೊ | ನಡೆವೆನು ಪುರಕೀಗ ||
ಬಿಡೆ ಬಿಡೆನೀತನ ಹತಿಸುವೆ ಸೇನೆಗ | ಳೊಡನಯ್ತಹೆ ಮತ್ತೆ ||೩೯೧||

ಭಾಮಿನಿ

ಗಹಗಹಿಸಿ ನಗಧರನು ಪೇಳ್ದನು |
ಬಹುದು ವಾಹಿನಿಯೊಡನೆ ದುರುಳನೆ |
ಸಹಸಿಗನು ಪೋಗೆನುತಲುಸಿರಲು ವಿಂದನಾಕ್ಷಣದಿ ||
ಸಹಜನೊಡಗೂಡುತ್ತ ಕೃಷ್ಣನೊ |
ಳಹಿತಗೊಂಡಯ್ದಿದನು ನಗರಿಗೆ |
ಮಹಿಳೆಯಗ್ರಜರೊಡನೆ ತೆರಳಿದ ಹರಿಯು ನಿಜಗೃಹಕೆ ||೩೯೨||

ಕಂದ

ಹಲಧರನೆಣಿಸುತ ಮನದೊಳ್ |
ಲಲನೆಯರೆಲ್ಲರ ತಂದಿಹನೀತಗೆ ವಿಭವದಿ |
ಪರಿಣಯಗೆಯ್ಸುವೆನೆನ್ನುತ |
ಕರೆಸುತಲಾಕ್ಷಣ ದಾರುಕನೊಡ ನಿಂತೆಂದಂ ||೩೯೩||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕರೆಸು ವೇಗದೊಳ್ ವಿಶ್ವಕರ್ಮನ | ಪುರವಲಂಕೃತವಾಗಲೀಕ್ಷಣ |
ವರರತುನಮಯ ತೋರಣಂಗಳು | ಕುರುಜುಗಳಲಿ ||೩೯೪||

ಅರಗಜವು ಕಸ್ತೂರಿ ಕೇಸರಿ | ಪರಿಮಳಿಪ ಪನ್ನೀರ ಚಳೆಯೊಳು |
ಪುರದ ವೀಥಿಗಳೆಲ್ಲ ಲೇಪನ | ವೆರಸು ಬೇಗ ||೩೯೫||

ಕುಲಪುರೋಹಿತ ಗರ್ಗರನು ನೀ | ನೊಲವಿನೊಳು ಕರೆತಹುದು ಕ್ಷಿಪ್ರದಿ |
ಪೊಳೆವ ನವರತ್ನದೊಳೆ ಮಂಟಪ | ಗೊಲಿಸಬೇಕೈ ||೩೯೬||

ಕರೆಸು ಸಕಲ ಋಷೀಶವರ್ಗವ | ನರಹರಿಗೆ ಪತ್ರಿಕೆಯ ಕಳುಹಿಸು |
ಸುರಸತಿಯರಯ್ತರಲಿ ನೃತ್ಯಕೆ | ಹರುಷದಿಂದ ||೩೯೭||

ತ್ವರಿತದೊಳು ಬರಲೀಗ ಗಾಯಕ | ಪರಮಸಂಗೀತಕರು ವಾದ್ಯಗ |
ಳುರುತರದ ಕಹಳಾದಿ ವೈತಾ | ಳಿಕರ ಕರೆಸೈ ||೩೯೮||

ಭಾಮಿನಿ

ಒರೆದ ನೇಮಗಳಂತೆ ದಾರುಕ |
ಕರೆಸಲಯ್ತಂದ್ವಿಶ್ವಕರ್ಮನು |
ಪುರವಲಂಕರಿಸಲ್ಕೆ ವೈಕುಂಠಕ್ಕೆ ಮಿಗಿಲೆನಿಸಿ ||
ತ್ವರಿತದೊಳು ಜನಪಾಲ ವರ್ಗವ |
ಕರೆಸಿ ಗರ್ಗಾಚಾರ್ಯರನು ಹಲ |
ಧರನ ಬಳಿಗಯ್ದಿಸಲು ಲಗ್ನವ ಗುಣಿಸಿ ಪೇಳೆಂದ ||೩೯೯||

ರಾಗ ಸುರುಟಿ ಏಕತಾಳ

ಭೋರನೆ ಲಗ್ನವನು | ಗರ್ಗಾ | ಚಾರ್ಯನು ಪುಡುಕಿದನು ||
ನಾರಿಯರಿಗ್ಹದಿನಾರು ಸಾಸಿರಗಳು | ತೋರದು ತಾರಾಬಲವೆಂತುಸಿರಲಿ ||೪೦೦||

ಪರಿಕಿಸಲೇಕಿದನು | ದಿವನಿಶಿ | ವರ ನಕ್ಷತ್ರವನು ||
ವರುಷವಯನ ತಿಥಿವಾಸರವಲ್ಲವು | ಪರಮಾತ್ಮನೊಳೈಕ್ಯಂಗಳೆ ಜಗದೊಳು ||೪೦೧||

ವರಿಸುವ ಲಗ್ನಗಳು | ಮಂಗಲ | ಕರವತಿಶ್ರೇಷ್ಠಗಳು ||
ತರುಣಿಯರೀಪರಿಯೊಂದೇಕಾಲದೊ | ಳೊರಿಪರೆ ಧಾರೆಯ | ನೆರೆಯುವರಾರೈ ||೪೦೨||

ಅರಿಯದುಯೆನಗಿನ್ನು | ಕೃಷ್ಣನ | ಪರಿಣಯವಿಧವನ್ನು ||
ಸ್ಮರಿಸಲು ಶ್ರುತಿಗನುಸರಿಸುವುದೆಂತೈ | ಮರುಳಾಗಿಹೆ ನಾನೆಂದನು ಗರ್ಗನು ||೪೦೩||

ಗುರುವಿಗೆ ಗುರುವಿವನು | ನಾನೀ | ಪರಿಣಯಗೆಯ್ಸುವೆನು ||
ಪರಮಾತ್ಮಗೆ ಸಂಪ್ರೀತಿಗಳಾಗಲಿ | ಕರೆತಹುದೀಕ್ಷಣ ಮಂಟಪಕೆಂದನು ||೪೦೪||

ರಾಗ ಕಾಂಭೋಜಿ ಝಂಪೆತಾಳ

ಹರುಷದೊಳು ಹಲಧರನು ಕರೆಸಿ ಸತ್ರಾಜಿತನ |
ತರಳೆ ಭಾಮೆಯ ಧಾರೆಯೆರೆಯಬೇಕೆಂದ ||
ಭರದಿ ಮಂಗಲಸ್ನಾನಗೆಯ್ಸಿ ಭಾವಕಿಯರನು |
ಕರಸಿ ಗೃಹಶಾಂತಿ ಸತ್ಕರ್ಮಗಳ ರಚಿಸಿ ||೪೦೫||

ಕೊರಳ ಕೌಸ್ತುಭಹಾರ ನೂಪುರೊಡ್ಯಾಣದೊಳು |
ವರರತುನಮಯಕುಂಡಲಂಗಳಲಿ ನಲಿವ ||
ವರಚತುರ್ಭುಜ ಶಂಖಚಕ್ರಾಬ್ಜಗದೆವಿಡಿದ |
ಸರಸಿಚಾಂಬಕನ ಕರೆತಂದು ಹಲಧರನು ||೪೦೬||

ಕಳಸಗನ್ನಡಿವಿಡಿದ ಜಲಜನೇತ್ರೆಯರೊಡನೆ |
ಹಲಧರನು ಮಂಟಪಕೆ ಪೊಗಿಸಿ ಶ್ರೀಹರಿಯ ||
ಒಲವಿನಿಂದಲೆ ಗರ್ಗನಾಜ್ಞೆಯೊಳು ಮಾಲಿಕೆಯ |
ಲಲನೆಯರು ಹರಿಗಿಕ್ಕಿ ನಮಿಸೆ ಭಕ್ತಿಯೊಳು ||೪೦೭||

ಭಾಮಿನಿ

ಮಾರಮಣಗೀಪರಿಯ ಲಗ್ನವ |
ಭೂರಿಹರುಷದಿ ಗೆಯ್ಸಲಾಕ್ಷಣ |
ಭೇರಿಕಹಳಾರವವು ಭೋರ್ಘರೆದಿರಲು ನಭದೊಳಗೆ ||
ವಾರಿಜೋದ್ಭವ ಮುಖ್ಯ ಸುಮನಸ |
ವಾರ ಸುಮವೃಷ್ಟಿಗಳ ಸುರಿಸಲು |
ನೀರಜಾಕ್ಷಿಯರಾಗಲಾರತಿಯೆತ್ತಿ ಬೆಳಗಿದರು ||೪೦೮||

ರಾಗ ಕಾಂಭೋಜಿ ತ್ರಿವುಡೆತಾಳ

ಮಂಗಲಾರತಿಯೆತ್ತಿರೆ | ಶ್ರೀಕೃಷ್ಣಗೆ | ಮಂಗಲಾರತಿಯೆತ್ತಿರೆ || ಪ ||

ಮಂಗಲಾಂಗ ಸುರೇಶಸೇವ್ಯೋ | ತ್ತುಂಗ ಖಳರಸುಭಂಗ ಹರಿ ಶ್ರೀ |
ರಂಗನಾಥ ಮುರಾರಿ ಗರುಡತು | ರಂಗ ಸಚ್ಚಿದನಂದಮೂರ್ತಿಗೆ || ಅ ||
ವರ ಮತ್ಸ್ಯ ಕಮಠನಿಗೆ | ಸೂಕರ ನರ | ಹರಿಗೆ ವಾಮನಮೂರ್ತಿಗೆ ||
ಉರಗ ವೇಣಿವಿದರ್ಭೆ ಜಾಂಬವ | ತರಳ ಸತ್ರಾಜಿತನ ತನುಭವೆ |
ತರಣಿಸುತೆ ಕಾಳಿಂದಿ ಲಕ್ಷಣೆ | ಭದ್ರೆ ಲೀಲಾ ಮಿತ್ರವಿಂದೆಗೆ ||೪೦೯||

ಧೀರಪರಶುರಾಮಗೆ | ಕೌಸಲ್ಯಾಕು | ಮಾರಗೆ ಕೃಷ್ಣನಿಗೆ ||
ನಾರಿಯರು ಪದಿನಾರು ಸಾಸಿರ | ಧಾರಿಣಿಪಸುಕುಮಾರಿವರ್ಗಕೆ |
ಸಾರಸಾಂಬಕ ದೇವದೇವ ಮು | ರಾರಿ ನರಕಾಂತಕಗೆ ಜಯ ಜಯ ||
ಮಂಗಳಾರತಿಯೆತ್ತಿರೆ ||೪೧೦||

ವಾರ್ಧಿಕ

ಪರಿಪರಿಯ ಸಂಸ್ತುತಿಸಿ ಕರ್ಪುರದ ವೀಳೆಯವ |
ಹರುಷದೊಳಗರ್ಪಿಸುತಲಿರೆ ಹಲಾಯುಧನಾಗ |
ಪರಿಜನರ ಮನ್ನಿಸುತ ವಿಭುಧರಿಗೆ ದಕ್ಷಿಣೆಯ ಕರುಣಿಸುತಲಾನಂದದಿ ||
ಪರಮಷಡ್ರಸಭೋಜ್ಯದಿಂದಲುಪಚರಿಸುತ್ತ |
ಲರಸರಿಂಗುಡುಗೊರೆಯಸಿತ್ತು ಕಳುಹಿಸಲಾಗ |
ಹರಿಯು ಸಂತೋಷದಿಂ ಸರಸಿಜಾಕ್ಷಿಯರೊಡನೆ ಸುಖಿಸುತಿರ್ದ ವಿಲಾಸದಿ ||೪೧೧||

ರಾಗ ಕೇದಾರಗೌಳ ಅಷ್ಟತಾಳ

ಹರಿಯ ವೈವಾಹದ ಚರಿತೆ ಪರೀಕ್ಷಿತ | ಗೊರೆದನು ಶುಕಮುನಿಯು ||
ವಿರಚಿಸಿದೆನು ಯಕ್ಷಗಾನದೊಳಿದ ಕೇಳ್ದ | ನರರಿಂಗೆ ಮಂಗಲವು ||೪೧೨||

ಸರಸಿಜಾಕ್ಷನ ದಯದಿಂದಲಾಪುದು ದಿಟ | ವರಿತವರಿದನು ತಿದ್ದಿ ||
ಮೆರೆಸಲಿಯನುದಿನ ಶ್ರೀಶನ ಚರಣದೊ | ಳುರತರ ಭಕ್ತಿಯಿಂದ ||೪೧೩||

ವರುಷವಾನಂದ ಶ್ರಾವಣ ಕೃಷ್ಣ ನವಮಿಯು | ಸ್ಥಿರವಾರದೊಳಗಿದನು ||
ಪರಿಸಮಾಪ್ತಿಯ ಸನ್ಮಂಗಲಗೆಯ್ದಿಹೆ | ನರಹರಿಕರುಣದಿಂದ ||೪೧೪||

ಪನಸಾಖ್ಯ ಪುರದುರಗೇಂದ್ರಶಾಸ್ತ್ರಿಯ ಸುತ | ಮನುಜಕೇಸರಿಯೆನ್ನನು ||
ಚಿನುಮಯಾತ್ಮಕ ನಿತ್ಯಾನಂದನುದ್ಧರಿಸಲಿ | ಯನುದಿನ ಕಾರುಣ್ಯದಿ ||೪೧೫||

ರಾಗ ಢವಳಾರ

ಮಂಗಲಾರತಿಯನೆತ್ತಿರೆ ಪದ್ಮನಾಭಗೆ | ಜಯ | ಮಂಗಲಾರತಿಯನೆತ್ತಿರೆ ಪದ್ಮನಾಭಗೆ || ಪ ||

ಮಂಗಲಾರತಿಯನೆತ್ತಿ | ರಂಗನಾಥ ದುರಿತಹರ ವಿ |
ಹಂಗವಹನ ಯದುಕುಲೇಂದ್ರ | ಪುಂಗವಾದಿಕೇಶವಂಗೆ || ಮಂಗಲಾರತಿಯನೆತ್ತಿರೆ || ಅ ||

ಮುತ್ತು ಮಾಣಿಕ್ಯವಜ್ರ | ಕೆತ್ತಿ ಝಗಝಗಿಸುತಿರ್ಪ |
ರತ್ನದಾರತಿಯನೀಗ | ನಿತ್ಯಮಂಗಲರೂಪನಿಂಗೆ || ಮಂಗಲಾರತಿಯ ||೪೧೬||

ಕೊರಳ ವೈಜಯಂತಿಮಾಲಾ | ಶರಧಿಶಯನ ಗೋಪಾಲ |
ಕರದಿ ಶಂಖ ಚಕ್ರವಿಡಿದ | ಸರಸಿಜಾಕ್ಷದೇವ ಹರಿಗೆ || ಮಂಗಲಾರತಿಯನೆತ್ತಿರೆ ||೪೧೭||

ಪರಮಮತ್ಸ್ಯ ಕಮಠ ವರಹ | ನರಹರಿಗೆ ವಾಮನಂಗೆ |
ಪರಶುಧರಗೆ ರಾಮಕೃಷ್ಣ | ಬೌದ್ಧಕಲ್ಕ್ಯಮೂರುತಿಗೆ || ಮಂಗಲಾರತಿಯನೆತ್ತಿರೆ ||೪೧೮||

ಧರೆಯೊಳಘಹರಾಖ್ಯಪುರದಿ | ಹರುಷದಿಂದ ನೆಲಸಿ ಜಗವ |
ಪೊರೆವ ಗೋಪಾಲ ಕೃಷ್ಣ | ನರಕಕಂಸಹಂಸಹರಗೆ || ಮಂಗಲಾರತಿಯನೆತ್ತಿರೆ ||೪೧೯||

ತರಳ ಪ್ರಹ್ಲಾದಗೊಲಿದು | ಪೊರಟು ಸ್ತಂಭದಿಂದ ನಲಿದು |
ಶರಣಪಾಲನೆಂಬ ಬಿರುದ | ಧರಿಸಿ ಖಳನ ತರಿದ ಹರಿಗೆ || ಮಂಗಲಾರತಿಯನೆತ್ತಿರೆ ||೪೨೦||

ಯಕ್ಷಗಾನ ಶ್ರೀಕೃಷ್ಣ ವಿವಾಹ ಸಂಪೂರ್ಣ