ಭಾಮಿನಿ

ಪರಿಕಿಸುತ ಪಲ್ಮೊರೆದು ಮಗಧನು |
ಕರದಿ ಚಾಪವ ಕೊಂಡುಗೋಪರ |
ತರಳ ಬಾರೆಂದೆನುತ ಮಾರ್ಮಲೆಯಲ್ಕೆ ಹಲಧರನು ||
ಶಿರವರಿವೆ ನಿಲ್ಲೆನುತ ಘರ್ಜಿಸಿ |
ಬರಲನಕ ಚೇತರಿಸಿ ಚೈದ್ಯನು |
ಭರದೊಳಾರ್ಭಟಿಸುತ್ತ ಬರೆ ಮಗಧೇಂದ್ರ ಸಂತಯಿಸಿ ||೯೦||

ಕಂದ

ಪರಿಕಿಸು ಗೋವಳನೀತನ |
ಧುರದೊಳಗಸುವಂ ತೀರ್ಚಿಪೆ ತಾಳೀಕ್ಷಣದೊಳ್ ||
ತರುಣಿಯರ ತಂದುರೆ ನಿನಗಂ |
ಪರಿಣಯಗೆಯ್ಸುವೆನೆನ್ನುತೆ ಹಲಧರಗೆಂದಂ ||೯೧||

ರಾಗ ಭೈರವಿ ಅಷ್ಟತಾಳ

ಎಲೆಲೆ ಚಾಣೂರನನ್ನು | ಕೊಂದಿಹ ಶೌರ್ಯ | ದೊಲವೆನ್ನೊಳ್ ತೋರಿಸಿನ್ನು ||
ಗಳವ ಖಂಡಿಪೆ ಚೈದ್ಯಗೊಲಿವ ಬಾಲೆಯನಿತ್ತು | ಘಳಿಲನೆ ಪೋಗೆಂದನು ||೯೨||

ಪರಿಕಿಸು ಮುಸಲವನ್ನು | ಮಾಗಧ ಕೇಳೀ | ದುರುಳನಿಗಾಗಿ ನೀನು ||
ಬರಿದೆ ಪ್ರಾಣವ ನೀಗುವಂಥಾ ಕಾಲವೆಯೆನ್ನ | ಧುರವು ಸಂಘಟಿಸಿತೀಗ ||೯೩||

ಹದಿನೇಳು ಬಾರಿಯೊಳು | ಗೋವಳಕೃಷ್ಣ | ನೊದಗಿ ಕಾಲ್ದೆಗೆದಾಗಳು ||
ಬೆದರಿವೋಡಿಹ ಭಂಡರುಭಯರ ಕ್ಷಣದೊಳು | ನಿಧನ ಮಾಳ್ಪೆನು ತಾಳೆಲ ||೯೪||

ಕಾಲಭೇದಗಳಿಹುದು | ಮಾಗಧ ಜಯ | ಕಾಲಕರ್ಮದಿ ಬಹುದು ||
ಕಾಲಯವನ ಕಂಸ ಮುಷ್ಟಿಕಾದ್ಯರ ವಿಧಿ | ಯೋಲೋಚಿಸೆಲೊ ಧೂರ್ತನೆ ||೯೫||

ರಾಗ ಭೈರವಿ ಏಕತಾಳ

ಕೆರಳುತ ಮಾಗಧನಾಗ | ಬಿರು | ಸರಳನೆ ಕೀಲಿಸಿ ಬೇಗ ||
ತರಳನೆ ತಾಳೆಂದೆನುತ | ಪಲ್ | ಮೊರೆಯುತ ಬಿಡೆ ಘರ್ಜಿಸುತ ||೯೬||

ಹರಿನಾದದಿ ಹಲಧರನು | ಬಹ | ಶರಗಳ ತರಿದೊಟ್ಟಿದನು ||
ಕರಲಾಘವ ತೋರೆನುತ | ಹೂಂ | ಕರಿಸುತಲಿರೆ ಕಾಣುತ್ತ ||೯೭||

ಕೊರೆಯುವೆ ಕಂಠವನೆನುತ | ಅಸಿ | ತಿರುಹುತ ಬರೆ ಗಜರುತ್ತ ||
ಮುರಿದಿಕ್ಕುತ ಹಲಧರನು | ನಿಂ | ದಿರುವನ ಕಾಣುತಲವನು ||೯೮||

ಭಾರಿಯ ಗದೆ ತೂಗುತ್ತ | ಖತಿ | ಯೇರಿಯೆ ಗುರಿನೋಡುತ್ತ ||
ಭೋರನೆ ಮಾಗಧ ಬಡಿದ | ಹೂಂ | ಕಾರದಿ ಬಲನದ ಮುರಿದ ||೯೯||

ಮುಷ್ಟಿಯೊಳೆರಗಲ್ಕಾಗ | ಜಗ | ಜಟ್ಟಿಯು ಹಲದೊಳು ಬೇಗ ||
ಕುಟ್ಟಲು ಶಿರಕಂಪಿಸುತ | ಧೃತಿ | ಗೆಟ್ಟುರೆ ಚೇತನಗೊಳುತ ||೧೦೦||

ಭಾಮಿನಿ

ಭರದಿ ಮಾಗಧನಾಗ ಚೈದ್ಯನ |
ಕರೆದು ಪೇಳಿದನಿಂದು ಸಮರದಿ |
ಧುರದಿ ಜಯಮಿಲ್ಲೆಮಗೆ ತರುಣಿಯೊಳಾಸೆ ಬೇಡೀಗ ||
ತೆರಳುವುದು ಪುರಿಗೆನುತ ಬೇಗನೆ |
ತಿರುಗೆ ಹಲಧರ ನಗುತ ಹೇಡಿಗ |
ಳರರೆ ನಡಿರೆಂದೆನಲು ರುಕ್ಮನು ತರುಬಿ ಶ್ರೀಹರಿಯ ||೧೦೧||

ರಾಗ ಶಂಕರಾಭರಣ ಮಟ್ಟೆತಾಳ

ಅರರೆ ಜಾರ ಚೋರ ಕೃಷ್ಣ | ಧುರದಿ ನಿನ್ನ ಕೊಲದೆ ಪುರಿಗೆ |
ತೆರಳುವಧಟನಲ್ಲ ಸತಿಯ | ಭರದೊಳೀಯೆಲಾ ||೧೦೨||

ಭಾವನೆನ್ನೊಳೇಕ ಮುನಿಸು | ಸಾವಧಾನದಿಂದ ಸತಿಯ |
ನೀವುದುಚಿತ ಕ್ರೋಧ ಧರಿಪು | ದಾವನೀತಿಯು ||೧೦೩||

ಅರಿವೆ ನಿನ್ನ ಜಿಹ್ವೆಯನ್ನು | ಕರೆವುದೇತಕಿನಿತು ಭಾವ |
ನಿರುವನೆಲ್ಲಿ ತೋರು ಸತಿಯ | ನಿತ್ತು ತೆರಳೆಲಾ ||೧೦೪||

ಬೇಡ ಸಾರಿಪೇಳ್ದೆ ರುಕ್ಮ | ಕೇಡ ಬಯಸಬೇಡ ತೆರಳು |
ಮೂಢ ನೀನು ಬರಿದೆ ಕಲಹ | ಮಾಡಿ ದಣಿವೆಯ ||೧೦೫||

ಬಲ್ಲೆ ನಿನ್ನ ಕಪಟಕೃತ್ಯ | ಬಿಲ್ಲಹಬ್ಬಕೆನುತ ಪೋಗಿ |
ಕಳ್ಳ ನೀನು ಕಂಸನೊಧಿಸಿ | ದೆಲ್ಲರರಿವರು ||೧೦೬||

ರಾಗ ಕೇದಾರಗೌಳ ಝಂಪೆತಾಳ

ಬಿಲ್ಲ ಹಬ್ಬದ ನೆವದಲಿ | ಕರೆತಂದು | ಕೊಲ್ಲಲೆತ್ನಿಸಿದವನಲಿ ||
ಸಲ್ಲಿಸಿಹೆ ತತ್ಫಲವನು | ಮೂರ್ಖತನ | ಸಲ್ಲದಾರಿಗು ಪೇಳ್ವೆನು ||೧೦೭||

ಮಾತೆಯಂದದಿ ಸ್ತನ್ಯವ | ಕೊಡೆಬಂದ | ಪೂತನಿಯ ನೀ ಕೊಂದವ ||
ರೀತಿ ಬಲ್ಲೆನು ಕೃಷ್ಣನೆ | ನಿನ್ನ ಕೊಲ | ದೀ ತತೂಕ್ಷಣ ಬಿಡುವೆನೆ ||೧೦೮||

ಖಳಕುಲಾಂತಕನಾನಹೆ | ಶ್ರೇಷ್ಠಯದು | ಕುಲದಿ ಪಾವನನಾಗಿಹೆ ||
ತಿಳಿದಿಹರು ಸಾತ್ತ್ವೀಕರು | ಎನ್ನ ಗುಣ | ದೊಲವರಿಯರೈ ಮೂರ್ಖರು ||೧೦೯||

ಕೇಳಿ ಬಲ್ಲೆ ಯಯಾತಿಯ | ಶಾಪಗಳ | ತಾಳಿ ಯದುವೀ ಧಾತ್ರಿಯ ||
ಪಾಲನೆಯ ಕಳಕೊಂಡನು | ತದ್ವಂಶ | ಬಾಲ ನೀನೆಷ್ಟರವನು ||೧೧೦||

ಅರಿಯೆ ನೀನೆಲೊ ರುಕ್ಮನೆ | ಬ್ರಹ್ಮಾಂಡ | ವಿರುವುದೆನ್ನೊಳು ಮೂಢನೆ ||
ಜರೆಯಬೇಡೆಲೊ ಭಗಿನಿಯ | ಇತ್ತೆನ್ನ | ಶರಣಪೊಂದಲು ಬಾಳ್ವೆಯ ||೧೧೧||

ಒದರಬೇಡೆಲೊಗೊಲ್ಲನೆ | ನಿನ್ನ ನಾ | ವಧಿಸಿ ಸಹಜೆಯ ಬೇಗನೆ ||
ಮುದದಿ ಚೈದ್ಯನಿಗೀವೆನು | ಧುರಕೀಗ | ಲೊದಗಿ ಬಾ ಚೆಂಡರಿವೆನು ||೧೧೨||

ರಾಗ ಮಾರವಿ ಏಕತಾಳ

ತೋರೆಲೊ ನಿನ್ನಯ ವಿಕ್ರಮವೆನ್ನೊಳು | ಮಾರಾಂತೆಲೊ ರುಕ್ಮ ||
ನಾರಿಯ ಬಿಡೆ ನಿನ್ನಸುವನೆ ತೊಲಗಿಸಿ | ಭೋರನೆ ಕರೆದೊಯ್ವೆ ||೧೧೩||

ಕಿಡಿಕಿಡಿಯಾಗುತ ರುಕ್ಮನು ಶರಗಳ | ಬಿಡಲದ ಪರಿಕಿಸುತ ||
ಕಡಿದನು ಲೀಲಾಮಾತ್ರದಿ ನಗಧರ | ಘುಡುಘುಡಿಸುತಲಾಗ ||೧೧೪||

ಸ್ಮರಿಸುತ ಆಗ್ನೇಯಾಸ್ತ್ರವ ರುಕ್ಮನು | ಸಿರಿವರಗೆಸೆಯಲ್ಕೆ ||
ಮುರಿದನು ವಾರುಣದಿಂದದ ಕ್ಷಣದಲಿ | ಕೆರಳುತ ಕೇಶವನು ||೧೧೫||

ಬಿಡಲಂಜನಶರವಕ್ಷಯದಿಂದದ | ತಡಿಗಡೆಯಲ್ಕಾಗ ||
ಜಡಜಭವಾಸ್ತ್ರವ ಬಿಡೆ ವೈಷ್ಣವದೊಳು | ಜಡಜಾಂಬಕ ಮುರಿದ ||೧೧೬||

ತಿರುಹಿ ಬ್ರುಶುಂಡಿಯ ಬರಲಾ ರುಕ್ಮನು | ಭರದೊಳು ಕಸಿದವನ ||
ಕರಗಳ ಬಂಧಿಸಿ ಶ್ರೀಶನು ಖಡುಗವ | ಗುರಿಯೊಳು ಗಳಕಿಡಲು ||೧೧೭||

ರಾಗ ಮಾಧುಮಾಧವಿ ತ್ರಿವುಡೆತಾಳ

ದೇವ ರಕ್ಷಿಸೆನುತ್ತ ರುಕ್ಮಿಣಿ | ದೇವದೇವನ ಕರವ ಪಿಡಿಯುತ |
ಭಾವನನು ನೀ ಕೊಲುವೆಯೆಂತೈ | ಸಾವಧಾನದಿ ಯೋಚಿಸು ||೧೧೮||

ನಿನಗಿದಿರೆ ಹುಲುಮನುಜನೀತನು | ನೆನೆದಡಜಸುರರುದ್ರಕೋಟಿಗ |
ಳೆನಿತು ಜನಿಪವು ನಿನ್ನ ದೇಹದೊಳ್ | ವನಜನಾಭನೆ ರಕ್ಷಿಸು ||೧೧೯||

ಕೆಟ್ಟನೆಂದಳುತಿರುವ ಸುದತಿಗೆ | ಕೊಟ್ಟನಾ ಮಧುವೈರಿಯಭಯವ |
ದುಷ್ಟನಿವನಸುವಳಿಯೆನೆನುತಲಿ | ಜುಟ್ಟ ಖಂಡಿಸಲಾಕ್ಷಣ ||೧೨೦||

ಬಂದು ರಾಮನು ಪರಿಕಿಸುತ ಗೋ | ವಿಂದನೀಪರಿಗೆಯ್ದುದನುಚಿತ |
ಕೊಂದೆ ನೀನವಮಾನ ಗೆಯ್ದುದ | ರಿಂದ ಮರಣವೆ ಸೌಖ್ಯವು ||೧೨೧||

ಬಂಧಿಸಲು ಬೇಡೆನುತ ಹಲಧರ | ಸಂಧಿಸಿದ ಕರ ಬಿಡಿಸಿ ವ್ಯಥಿಸದಿ |
ರೆಂದು ರುಕ್ಮನ ಕಳುಹಿ ರುಕ್ಮಿಣಿ | ಗಂದು ಧೈರ್ಯವನರುಹಿದ ||೧೨೨||

ಭಾಮಿನಿ

ಪುಂಡರೀಕಾಂಬಕನ ಕೊಲ್ಲದೆ |
ಕೊಂಡುಬಾರದೆ ತಂಗಿಯನು ತಾ |
ಕುಂಡಿನವ ಪೊಗೆನೆಂದು ರುಕ್ಮನು ಭೋಜಕಟಕದಲಿ ||
ಮೊಂಡತನದೊಳಗಿರಲು ಯಾದವ |
ತಂಡದೊಳು ವೈದರ್ಭೆಯನು ಕರ |
ಕೊಂಡು ದ್ವಾರಾವತಿಯ ಪೊಕ್ಕರು ಹಲಧರಚ್ಯುತರು ||೧೨೩||

ರಾಗ ಕಾಂಭೋಜಿ ಝಂಪೆತಾಳ

ತಂದೆಯಡಿಗಭಿನಮಿಸಿ ಚಂದಿರಾನನೆಯಳನು | ತಂದಪರಿಗಳ ನರುಹೆ ಮಂದಹಾಸದಲಿ ||
ಚಂದವಾಯಿತು ಕೃಷ್ಣ ವರಿಸಿವಳ ವಿಧ್ಯುಕ್ತ | ದಿಂದ ಒಳಿತಹುದೆನುತ ಪರಸಿ ಬಿಗಿಯಪ್ಪೆ ||೧೨೪||

ಕರೆಸಿ ಸೃಂಜಯಕಾಶೀಶ್ವರರ ಭೀಷ್ಮಕಮುಖ್ಯ | ಪರಮ ಬಾಂಧವರನ್ನು ಮನ್ನಿಸುತ ಮುದದಿ ||
ಪುರಜನರ ಪರಿಜನರ ಭೂಸುರರ ಕರೆಸುತ್ತ | ವರಪುರೋಹಿತಗಾರ್ಗ್ಯರನುಮತದೊಳಾಗ ||೧೨೫||

ಹರುಷದಿಂ ಪರಿಣಯದ ವಿಧಿಯಿಂದ ರುಕ್ಮಿಣಿಯ | ನರಹರಿಯು ಪರಿಗ್ರಹಿಸಿ ಭೂರಿದಕ್ಷಿಣೆಯ ||
ಕರುಣಿಸುತ ವಿಬುಧರಿಗೆ ಮೃಷ್ಟಾನ್ನಭೋಜ್ಯದಿಂ | ಪರಿಪರಿಯ ಮನ್ನಿಸುತ ಕಳುಹಿ ಸಂತಸದಿ ||೧೩೬||

ಸರಸಸಲ್ಲಾಪದೊಳು ಸರಸಿಜಾಕ್ಷಿಯ ಕೂಡಿ | ಹರಿಯು ಸಂತೋಷದೊಳು ದ್ವಾರಕಾಪುರದಿ ||
ಇರುತಿರಲು ಭೀಷ್ಮಕನು ಸಂತಸದಿ ತನ್ನ ಪುರ | ವರಕೆ ತೆರಳಿದ ನೃಪರ ಬಳಸಿ ವೈಭವದಿ ||೧೨೭||

ಭಾಮಿನಿ

ಅರಸ ಕೇಳ್ ಬೃಂದಾವನಾಖ್ಯದೊ |
ಳಿರುವ ಸತ್ರಾಜಿತನು ವಿಭವದಿ
ತೆರಳಿ ಬಂದೋಲಗದಿ ಮಂಡಿಸಿರಲ್ಕೆ ಚಾರಕನು ||
ಭರದಿ ನಡೆತಂದೆರಗುತಾಕ್ಷಣ |
ಕರವ ಜೋಡಿಸುತಾಗ ದೈನ್ಯದೊ |
ಳಿರಲು ಕಂಡಾ ನೃಪತಿ ಬಂದಿಹ ಕಾರ್ಯವೇನೆನಲು ||೧೨೮||

ಲಾವಣಿ
ಚಿತ್ತಾವಧಾನ ಭೂಪಾಲ | ನಾ | ವಿಸ್ತರಿವೆನು ಕೇಳು ಸದ್ಗುಣಶೀಲ || ಚಿತ್ತಾವಧಾನ ಭೂಪಾಲ || ಪ ||

ಕರಡಿ ಕಾಡ್ಗೋಣ ಜಂಬುಕವು | ಮತ್ತೆ | ಶರಭ ಶಾರ್ದೂಲ ಕಾಡಾನೆ ಕಾಡ್ಗುರಿಯು ||
ವರಹ ಚಮರಿ ಖಡ್ಗಮೃಗವು | ಮರ | ಮರಕೆ ಪಾರುವ ಕಪಿಗಡಣದಬ್ಬರವು ||
ಚಿತ್ತಾವಧಾನ ||೧೨೯||

ಸುರಗಿ ತಮಾಲ ಮಾದಲವ | ಪಣ್ಣಾ | ಗಿರುತಿಹ ಪನಸಾಂಬ್ರ ಕದಳಿಯ ಫಲವ ||
ಭರದಿ ಮೆಲ್ಲುತ ಮದೋತ್ಕರವ | ತೋರು | ತ್ತಿರುವುವು ಪರಿಕಿಸಬೇಕುದ್ಯಾನವ ||
ಚಿತ್ತಾವಧಾನ ||೧೩೦||

ರಾಗ ಕೇದಾರಗೌಳ ಝಂಪೆತಾಳ

ಚರನ ನುಡಿಯಂ ಕೇಳುತ | ವನಕೀಗ | ತೆರಳಿ ಬೇಟೆಯನಾಡುತ ||
ದುರುಳ ಮೃಗಪಕ್ಷಿಗಳನು | ಸಂಹರಿಸಿ | ಹರುಷಪಡುತಿಹೆನೆಂದನು ||೧೩೧||

ಕರೆಯೊ ಶಬರರ ವೇಗದಿ | ನಾಯ್ಗಳನು | ತರುಬುತೀಕ್ಷಣ ಗಮಕದಿ ||
ಬರುವುದೆನೆವೊಳಿತೆನ್ನುತ | ಚಾರ ಕರೆ | ತರಲು ಬಂದವರೆರಗುತ ||೧೩೨||

ರಾಗ ಮಾರವಿ ಏಕತಾಳ

ಚರಣಕೆ ಬಿನ್ನಹ ಸ್ವಾಮಿಯೆಯೆಮ್ಮನು | ಕರೆಸಿದ ಕಾರಣವ ||
ಅರುಹಲುಬೇಕೆನೆ ಪೊರಡಿರಿ ಬೇಟೆಗೆ | ತ್ವರಿತದೊಳೀಗೆನಲು ||೧೩೩||

ದಿಂಡೆ ಶಿಪಾಯ್ ಬಲ ಬಂದಿದೆ ಮೃಗಗಳ | ತಂಡವ ವಿಪಿನದೊಳು ||
ಖಂಡಿಸಿ ಕೆಡಹುವೆವೀಕ್ಷಣ ಪರಿಕಿಸು | ಚಂಡಪರಾಕ್ರಮವ ||೧೩೪||

ಬಿಲ್ಲುಬ್ರುಶುಂಡಿಯು ತೋಮರ ಖಡುಗವು | ಸಳ್ಳು ಕಠಾರಿಯನು ||
ಕೊಳ್ಳುತ ಹರುಷದಿ ಬಂದೆವು ನಾಯ್ಗಳ | ನೆಲ್ಲವ ತರುಬುತಲಿ ||೧೩೫||

ಭಾಮಿನಿ

ಹರುಷದೊಳು ಸತ್ರಾರ್ಜಿತಾಖ್ಯನು |
ಕರುಣಿಸುತ ವೀಳೆಯವ ಬೇಟೆಗೆ |
ಭರದಿ ಪೊರಮಡಲನುಜನಾದ ಪ್ರಸೇನ ಬಂದೆರಗಿ ||
ತೆರಳುವೆನು ತಾನೆನುತ ಕಂಠದಿ |
ದರಿಸುತಾಗ ಸ್ಯಮಂತಕವ ಪಡೆ |
ವೆರಸಿ ವಿಪಿನವ ಪೊಕ್ಕು ಶರವಿಡುತಲ್ಲಿ ದಿಗ್ದೆಸೆಗೆ ||೧೩೬||

ರಾಗ ಸೌರಾಷ್ಟ್ರ ಮಟ್ಟೆತಾಳ

ಹರುಷದಿಂದ ಬೇಟೆಯಾಡುತ | ನಡೆದನಾ ಪ್ರಸೇನರಾಯ | ಹರುಷದಿಂದ ಬೇಟೆಯಾಡುತ ||ಪ||

ಹರಿಣ ಶಶಕ ಖಡ್ಗಿಚಮರಿಯ | ಕಂಠವರಿದು | ವರಹಶಾರ್ದೂಲವಿತತಿಯ ||
ಕರಡಿ ಕಾಡ್ಗೋಣಗಳನು | ಉರವ ಬಗಿದು ರೋಷದಿಂದ |
ಕರಿಯ ತಂಡಗಳನೆ ಕೆಡಹಿ | ಶಬರಸಾಲ್ವನಿಕರ ಸವರುತ |
ಬಲೆಗಳೊಳಗೆ | ತರುಬಿ ಸದೆದು ತೋಷ ತಾಳುತ ||೧೩೭||

ತೊರೆದು ಸೇನೆಗಳನು ವೇಗದಿ | ಭೂಪ ಮುಂದೆ | ತೆರಳಲಾಗ ಘೋರ ವಿಪಿನದಿ ||
ಪೊರಟು ಗುಹೆಯನೊಂದು ಸಿಂಹ | ವುರಿಯ ಸೂಸಿ ಘರ್ಜಿಸುತ್ತ |
ಅರರೆ ದುರುಳನೇತಕೆನ್ನ | ಸರಿಸಕಯ್ತಂದೆ ನೀನೆಲ |
ತಿಂಬೆನೀಗ | ಕೊರೆದು ಕಂಠ ಮೆರೆವೆ ನೋಡೆಲ ||೧೩೮||

ರಾಗ ಘಂಟಾರವ ಅಷ್ಟತಾಳ

ಕೆಟ್ಟ ಕಾನನಮೃಗವೆ ಜೀವದೊಳಾಶಾ |
ಬಿಟ್ಟು ಮುಂದಕೆ ಬಾರೆನುತ್ತಲಿ | ಬಿಟ್ಟನಾಕ್ಷಣ ಶರಗಳ ||೧೩೯||

ಎರಡು ಕೈಯೊಳು ತಿಕ್ಕಿ ಚೂರ್ಣವ ಗೆಯ್ದು |
ಶರವ ಖಂಡಿಸುತಾಗ | ಕೇಸರಿ | ದುರುಳ ತೋರೆಲೊ ಶೌರ್ಯವ ||೧೪೦||

ಕಡಿವೆ ಕಂಠವೆನುತ್ತ ಪ್ರಸೇನನು |
ಖಡುಗವನು ತೂಗುತ್ತ ಬರೆ ಬಂ | ದೊಡನೆ ಕೇಸರಿ ಘರ್ಜಿಸಿ ||೧೪೧||

ಕೆರಳಿಯಾರ್ಭಟಿಸುತ್ತ ಖಡ್ಗವನಾಗ |
ಕರಕರನೆ ದಂತದಲಿ ಚೂರ್ಣಿಸಿ | ಧರಣಿಗಿಕ್ಕಲು ಕಾಣುತ ||೧೪೨||

ಭರದಿ ಶೂಲವ ತಿರುಹಿ ಮುಂದರಿಯಲು |
ಹರಿಯು ಪುಟನೆಗೆದಾಗ ಭೂಪನ | ಶಿರವ ಚೂರ್ಣಿಸಿ ರವದಲಿ ||೧೪೩||

ಭಾಮಿನಿ

ಭರಿತ ರೋಷಾವೇಷದಿಂದಲಿ |
ನರಪತಿಯ ಶೋಣಿತವ ಪಾನಿಸಿ |
ಕೊರಳೊಳಗೆ ರಂಜಿಸುವ ಮಣಿಯನು ಕೊಂಡು ವೇಗದಲಿ ||
ತೆರಳುತಿರೆ ಬಿಲಕೆನುತ ಮಾರ್ಗದಿ |
ತರುವ ತೂಗುತ ಜಾಂಬವಂತನು |
ಭರದಿ ಬಂದಡಗಟ್ಟಿ ಮಣಿಯೆನಗಿತ್ತು ತೆರಳೆಂದ ||೧೪೪||

ರಾಗ ಮಾರವಿ ಏಕತಾಳ

ಅರರೆ ಧೂರ್ತನೆ ಶಿರ ಖಂಡಿಸುವೆನು | ತೆರಳೆನುತಾಕ್ಷಣದಿ ||
ಉರಿಸೂಸುತ ಪಂಚಾಸ್ಯನು ಜಾಂಬವ | ಗೆರಗಿದ ಮುಷ್ಟಿಯಲಿ ||೧೪೫||

ಹರಿಹರರನು ನಾ ಲೆಕ್ಕಿಸೆ ಧುರದಲಿ | ಚರಣಕೆ ವಂದಿಸುತ ||
ಭರದೊಳು ಮಣಿಯರ್ಪಿಸದಿರೆ ಜೀವದೊ | ಳಿರಿಸೆನು ನೋಡೆಂದ ||೧೪೬||

ನೋಡೆಲೊ ಎನ್ನಯ ದಂಷ್ಟ್ರವನಿದರೊಳು | ಗಾಢದಿ ಶಿರವರಿದು ||
ಖೋಡಿಯೆ ಕೇಳ್ ನಾ ಸಾರುವೆ ಮಣಿಯಂ | ನೀಡೆನು ಭಲ್ಲುಕನೆ ||೧೪೭||

ಕೆರಳುತ ಜಾಂಬವ ಮುಷ್ಟಿಯ ಬಲಿಯುತ | ಶಿರಕೆರಗಲು ಭರದಿ ||
ತೊರೆದಸುವನು ಪಂಚಾಸ್ಯನು ಧರೆಯೊಳ | ಗುರುಳಲು ಪಲ್ಕಿರಿದು ||೧೪೮||

ಭಾಮಿನಿ

ಪರಮಶೋಭೆಗಳಿಂದ ಜ್ವಲಿಸುವ |
ವರಸ್ಯಮಂತಕಮಣಿಯ ಜಾಂಬವ |
ಹರುಷದಿಂ ಕೊಂಡೊಯ್ದು ಗುಹೆಯನು ಪೊಕ್ಕು ವೇಗದಲಿ ||
ತರಳನಾಡುವುದಕ್ಕೆ ತೊಟ್ಟಿಲ |
ಹುರಿಗೆ ಬಂಧಿಸಿ ಸುಖದೊಳಿರುತಿರೆ |
ಚರಿಸಿ ಸೇನೆಗಳಾ ಪ್ರಸೇನನ ಕಾಣದಡವಿಯೊಳು ||೧೪೯||

ರಾಗ ನೀಲಾಂಬರಿ ರೂಪಕತಾಳ

ಹುಡುಕುತ ಗಿರಿಗುಹೆ ಪೊದರೊಳು | ಗಿಡತರುಗುಲ್ಮಗಳೆಡೆಯೊಳು ||
ಒಡೆಯನ ಕುರುಪನ್ನರಿಯದೆ | ನಡುಗುತ ಭೀತಿಯೊಳು ||೧೫೦||

ಘೋರಾರ್ಭಟೆಯೊಳು ಚರಿಸುವ | ಕ್ರೂರಮೃಗಂಗಳು ತಿಂದವೊ ||
ಬಾರನೆ ಜೀವದೊಳಿರ್ದಡೆ | ತೋರದೆಯಡಗುವನೆ ||೧೫೧||

ಕಾನನಕಯ್ದನುಜಾತನು | ಏನಾಗಿಹನೆನುತೆಮ್ಮೊಳು ||
ಕ್ಷೋಣಿಪ ಸತ್ರಾಜಿತ ಬೆಸಗೊಳ | ಲೇನೆಂಬೆವು ಶಿವನೆ ||೧೫೨||

ಮರುಗುತಲನುಚರರೀಪರಿ | ಪುರಕಯ್ತರೆ ಸತ್ರಾಜಿತ ||
ನಿರುತಿರಲೊಡ್ಡೋಲಗದೊಳು | ಎರಗುತ ಪೇಳಿದರು ||೧೫೩||

ರಾಗ ಪುನ್ನಾಗ ಅಷ್ಟತಾಳ

ಕೇಳು ಸತ್ರಾಜಿತರಾಯ | ನಾನು | ಪೇಳುವ ನುಡಿಗಳ ಜೀಯ ||
ಪಾಳಯ ಕೂಡಿ ನಿನ್ನನುಜ ಪ್ರಸೇನನು | ಲೀಲೆಯಿಂದಲಿ ಬೇಟೆಗೆನುತ ಪೋದನು ನಿನ್ನೆ ||೧೫೪||

ಧರಿಸಿ ಸ್ಯಮಂತಕಮಣಿಯ | ದಿವಾ | ಕರನಂತೆ ದೇದೀಪ್ಯತೆಯ ||
ಕಿರಣದಿ ಪೊಳೆಯುತ್ತ ಚರಿಸಿ ಕಾಂತಾರದಿ | ತೆರಳಿದ ತಾನೊರ್ವನಗಲಿ ಸೇನೆಗಳನ್ನು ||೧೫೫||

ಅರಸಲು ವಿಪಿನವೆಲ್ಲವನು | ನೃಪ | ನಿರವ ಕಾಣೆವು ಪೇಳ್ವುದೇನು ||
ದುರುಳ ಮೃಗಂಗಳಿಂದಳಿದನಲ್ಲದೆ ಜೀವ | ವಿರಲು ಗೋಚರಿಸನೆ ಒರೆಯಲರಿಯೆ
ಜೀಯ ||೧೫೬||

ಕಂದ

ಮರುಗುತ ಚಾರಕನೀ ಪರಿ |
ಯರುಹಲ್ ತನ್ನನುಜಾತನ ಗುಣಮಂ ನೆನೆಯುತೆ ||
ಧರೆಯೊಳಗುರುಳುತ ಜನಪಂ |
ಶಿರಮಂ ನೆಗಹುತ ಮೋಹದಿ ಶೋಕಿಸುತಾಗಳ್ ||೧೫೭||

ರಾಗ ನೀಲಾಂಬರಿ ರೂಪಕತಾಳ

ತೆರಳಿದೆ ಯಾವೆಡೆ ಸಹಜನೆ | ದುರುಳ ಮೃಗಂಗಳು ತಿಂದವೊ |
ಭರದೊಳು ಪೋದೆಯೊ ಬೇಟೆಗೆ | ತೊರೆದೆಯೊ ಜೀವವನು ||೧೫೮||

ವಿರಚಿಸಿ ತಪವನು ಪೂರ್ವದಿ | ತರಣಿಯ ಎನಗೊಲಿದಿತ್ತಿಹ |
ಪರಮ ಸ್ಯಮಂತಕ ಮಣಿಯನು | ಧರಿಸಿದೆ ನೀನೇಕೆ ||೧೫೯||

ತನಗಿದು ಕೊಡಬೇಕೆನ್ನುತ | ಮಣಿಯನು ನಗಧರನೆನ್ನೊಳು |
ದಿನದಿನ ಕೇಳುತಲಿರ್ದನು | ಘನತರದಾಸೆಯೊಳು ||೧೬೦||

ವನದೊಳು ಗುಪಿತದಿ ಕೃಷ್ಣನೆ | ಮಣಿಯನು ತಾನಪಹರಿಸಲು |
ಹನನವ ಗೆಯ್ದುದೆ ನಿಶ್ಚಯ | ವೆನುತಲೆ ಶೋಕಿಸಿದ ||೧೬೧||

ವಾರ್ಧಕ

ಅನಿತರೊಳಗಂಬರದ ಪಥದಿಂದ ನಾರದಂ |
ಚಿನುಮಯನ ನೆನೆವುತ್ತ ಬರಲಾಗ ಸತ್ಕರಿಸಿ |
ಘನತರದ ಪೀಠದೊಳು ಕುಳ್ಳಿರಿಸುತಭಿನಮಿಸೆ ಶೋಕವೇನೆನಲೆಂದನು ||
ತನುವ ಬಳಲಿಸಿ ತಪವ ಗೆಯ್ದುದಕೆ ಭಾಸ್ಕರಂ |
ಮಣಿಯನಿತ್ತಿಹನದರ ಧರಿಸಿಯೆನ್ನನುಜಾತ |
ವನಕೆ ಪೋಗಿರೆ ಕೃಷ್ಣನಪಹರಣಕೋಸುಗಂ ಹನನಗೆಯ್ದ ಪ್ರಸೇನನ ||೧೬೨||

ಭಾಮಿನಿ

ನಿರತ ಬಾಂಧವರಾಗಿ ಬಳಸಿನೊ |
ಳಿರುವ ಕಾರಣ ದ್ರೋಹಗೆಯ್ದನು |
ಪರಮಸತ್ಕುಲಜಾತರಿನಿತೆಸಗಲ್ಕೆ ನಾನಿವರ ||
ನೆರೆಯೊಳಿಹುದನುಚಿತಗಳೆನ್ನಲು |
ವರಮುನೀಂದ್ರನು ಪೇಳ್ದ ನಿಜಗಳ |
ನರಿತು ಬಹೆ ತಾಳನಕವೆನ್ನುತ ಗಮಿಸೆ ವೇಗದೊಳು ||೧೬೩||

ರಾಗ ಸಾಂಗತ್ಯ ರೂಪಕತಾಳ

ಅನುಜನ ನೆನೆದು ಶೋಕಿಸುತ ಸತ್ರಾಜಿತ | ಜನಪನಿರಲು ಬೃಂದಾವನದಿ ||
ಮುನಿಪ ನಾರದ ವೇಗದಿಂದ ವೀಣೆಯ ಪೊತ್ತು | ವನಜಾಕ್ಷ ನಾಮಕೀರ್ತನದಿ ||೧೬೪||

ತ್ವರಿತದಿ ದ್ವಾರಕಾಪುರಕೆ ಚಿತ್ತಯಿಸಲು | ಹರುಷದಿ ಹಲಧರನಂದು ||
ವರರತ್ನಪೀಠದೊಳೊಪ್ಪಿರ ತೇಜ ವಿ | ಸ್ಫುರಿಸೆ ನೇತ್ರಾನಂದಮಾಗಿ ||೧೬೫||

ದೂರದೊಳಯ್ತಹ ವ್ರತಿಯ ಕಾಣುತ ರಾಮ | ಸಾರಿಬಂದಡಿಗಭಿನಮಿಸಿ ||
ಭೂರಿ ತೋಷದಿ ಪೀಠವಿತ್ತು ಪೂಜಿಸುತಾಗ | ಸ್ವಾರಿಯಾಗಮನವೇನೆಂದ ||೧೬೬||

ರಾಗ ಬೇಗಡೆ ಅಷ್ಟತಾಳ

ಕೇಳು ಹಲಧರ ಪೇಳ್ವೆನರಿತುದನು | ಶ್ರೀಕೃಷ್ಣನೀ ಜಗ |
ಪಾಲನೆಗೆಯವತಾರ ಗೆಯ್ದಿಹನು ||
ಪೇಳಲಾರೆನು ಸರ್ವಜನರೊಳು | ತಾಳಿ ದ್ವೇಷವ ಬರಿದೆ ನಿಷ್ಠುರ |
ವ್ಯಾಳಶಯನಗೆಯೋವೇ ನೀ | ಪೇಳು ಬುದ್ಧಿಗಳನ್ನು ದಯೆಯಲಿ ||೧೬೭||

ಅತ್ತೆಯಹ ರಾಜಾಧಿದೇವಿಯೊಳು | ಪುಟ್ಟಿರ್ದ ಕನ್ನೆಯ |
ಮಿತ್ರವಿಂದೆಯ ಮೊನ್ನೆ ಕಲಹದೊಳು |
ಎತ್ತಿತಂದಿಹನಗ್ರಭವರು | ನ್ಮತ್ತರಹ ವಿಂದಾನುವಿಂದನು |
ಧೂರ್ತರಾಗಿಹರೇಕೆ ನಿಷ್ಠುರ | ವ್ಯರ್ಥ ಕೈಕೊಂಡಿರ್ಪನೀತನು ||೧೬೮||

ಕೋಸಲೇಶ್ವರ ನಗ್ನಜಿತುಸುತೆಯ | ವೃಷಭಂಗಳೇಳನು |
ಕೇಶವನು ಬಂಧಿಸುತ ಬಾಲಿಕೆಯ ||
ತೋಷದೊಳು ಲೀಲೆಯನು ತಂದಿಹ | ನೈಸೆ ಮಧುಸೂದನನು ಮಾದ್ರಾ |
ಧೀಶಸುತೆ ಲಕ್ಷಣೆಯ ಪಡೆದಿಹ | ಘಾಸಿಮಾಡುತ ನೃಪರ ಬಲವನು ||೧೬೯||

ತೆರಳಿ ಕೇಕಯ ನೃಪನ ಬಾಲಿಕೆಯ | ತಂದಿರ್ಪ ಭದ್ರೆಯ |
ಧರಣಿಪಾಲರ ಗೆಲಿದು ಮಾನಿನಿಯ ||
ತರಣಿಸುತೆ ಕಾಳಿಂದಿಯೊಲಿಸಿಹ | ಸರಸಿಜಾಂಬಕಗೇತಕೀಪರಿ |
ತರುಣಿಯರು ತಮ್ಮೊಳಗೆ ದಿನ ದಿನ | ಬರಿದೆ ಕಲಹವ ತಂದುಕೊಂಬರು ||೧೭೦||