ಶ್ರೀಕೃಷ್ಣವಿವಾಹ

ಶಾರ್ದೂಲವಿಕ್ರೀಡಿತ

ಶ್ರೀಲಕ್ಷ್ಮೀಪ್ರಿಯವಲ್ಲಭಂ ಮುರರಿಪುಂ ಬಾಲಾರ್ಕಕೋಟಿಪ್ರಭಂ
ಲೀಲಾಮಾನುಷವಿಗ್ರಹಂ ಗುಣನಿಧಿಂ ಬ್ರಹ್ಮಾಂಡಭಾಂಡೋದರಮ್ |
ನೀಲೇಂದೀವರಭಾಸಸುಂದರವಪುಂ ಕ್ಷೀರಾಬ್ಧಿವಾಸಂ ಹರಿಂ
ಕಾಳೀಮರ್ದನಮಿಂದುಶೇಖರಪ್ರಿಯಂ ಶ್ರೀನಾರಸಿಂಹಂ ಭಜೇ ||೧||

ರಾಗ ನಾಟಿ ಝಂಪೆತಾಳ

ಕರಿವದನ ಗಣನಾಥ | ಪರಮೇಶಸುಪ್ರೀತ |
ಸುರನರೋರಗ ನಮಿತ | ಪೊರೆಯನ್ನ ಸತತ || ಜಯ ಜಯತು ಜಯತು ||೨||

ತರಣಿಕೋಟಿಪ್ರಕಾಶ | ದುರಿತಭವಭಯನಾಶ |
ಕರದೊಳಂಕುಶಪಾಶ | ಮೆರೆವ ವಿಘ್ನೇಶ || ಜಯ ಜಯತು ಜಯತು ||೩||

ಫಾಲಚಂದ್ರನೆಯೆನ್ನ | ಪಾಲಿಸನುದಿನ ನಿನ್ನ |
ನೋಲಯಿಸಿ ಭಜಿಸುವೆನು | ಲೀಲವಿಗ್ರಹನೆ || ಜಯ ಜಯತು ಜಯತು ||೪||‍

ಭಾಮಿನಿ

ಕಾಳಿ ಶ್ರೀಮತ್ತ್ರಿಪುರಸುಂದರಿ |
ಕಾಲಕಾಲಾಂತಕಿ ಕಪರ್ದಿನಿ |
ಶ್ರೀಲಲಿತೆ ರಾಜೇಶಿ ಭಗವತಿ ಚಂಡಿ ವಾರಾಹಿ ||
ಶೂಲಧಾರಿಣಿ ರಕ್ತದಂತಿಕೆ |
ಜ್ವಾಲಿನೀ ಹ್ರೀಂಕಾರಿ ಭ್ರಾಮರಿ |
ನೀಲಕುಂತಳೆ ಮಹಿಷಮರ್ದಿನಿ ಜಯತು ಕೌಮಾರಿ ||೫||

ದ್ವಿಪದಿ

ಹರಿ ಹರ ವಿರಿಂಚಿ ಸಿರ ಗಿರಿಜೆ ಶಾರದೆಗೆ |
ಚರಣಕಭಿನಮಿಸುವೆನು ಸದ್ಭಕ್ತಿಯೊಳಗೆ ||೬||

ಸುರಪ ಶಿಖಿ ಯಮ ನಿಋತಿ ವರುಣಮಾರುತರ |
ಸ್ಮರಿಸುವೆನು ಧನಧನೀಶಾನದಿಗಧಿಪರ ||೭||

ತರಣಿ ಶಶಿಕುಜ ಸೌಮ್ಯ ಗುರು ಕವಿಗೆ ನಮಿಸಿ |
ತರಣಿನಂದನ ರಾಹುಕೇತುಗಳ ಸ್ತುತಿಸಿ ||೮||

ವರಕಶ್ಯಪಾತ್ರಿಭರದ್ವಾಜಕೌಶಿಕರ |
ಸ್ಮರಿಪೆ ಜಮದಗ್ನಿವಸಿಷ್ಠಗೌತಮರ ||೯||

ಜನನಿ ಜನಕಾದಿಗಳಿಗೆರಗಿ ವೈಭವದಿ |
ನೆನೆದು ಗುರುಹಿರಿಯರನು ಕೃತಿಗೆಯ್ವೆ ಮುದದಿ ||೧೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹರುಷದೊಳು ಶುಕಮುನಿ ಪರೀಕ್ಷಿತ | ದೊರೆಗೆ ಭಾಗವತಾಖ್ಯಚರಿತೆಯ |
ನೊರೆವುತಿರೆ ಹರಿಗೆನಿತು ರಮಣಿಯ | ರರುಹಿರೆನಲು ||೧೧||

ಕೇಳು ಕೇಳೈ ನೃಪತಿ ನಗಧರ | ಕಾಲಯವನನನೊಯ್ದ ಭೂಮೀ |
ಪಾಲ ಮುಚುಕುಂದಾಖ್ಯನಕ್ಷಿಯ | ಜ್ವಾಲೆಯೊಳಗೆ ||೧೨||

ಉರುಹಿದಾನಂತರದಿ ಕುಂಡಿನ | ಪುರದ ಭೀಷ್ಮಕಸುತೆಯನಿತರರಿ |
ಗರಿಯದೋಲಪಹರಿಸೆ ಪರಿಗಳ | ನರಿತು ಜವದಿ ||೧೩||

ಧುರಕೆ ಬಂದಿಹ ರುಕ್ಮಚೈದ್ಯರ | ತ್ವರಿತದೊಳು ಜಯಪೊಂದಿ ರುಕ್ಮಿಣಿ |
ವರಿಸಿ ಭಾಮಾದ್ಯಷ್ಟಸತಿಯರ | ವರಿಸಿಕೊಂಡು ||೧೪||

ನರಕ ದೈತ್ಯನ ತರಿದು ಸೆರೆಯೊಳ | ಗಿರುತಿರುವ ಪದಿನಾರುಸಾಸಿರ |
ತರುಣಿಯರ ಕೈವಿಡಿದು ದ್ವಾರಕೆ | ಯೊಳಗೆ ಮುದದಿ ||೧೫||

ಗಣನೆಯಲಿ ಪದಿನಾರು ಸಾಸಿರ | ವನಿತೆಯಷ್ಟಕವಾಗಿ ಶ್ರೀಹರಿ |
ಚಿನುಮಯಾತ್ಮಕನಿರ್ದ ಮೋದದೊ | ಳೆಂದ ಮುನಿಪ ||೧೬||

ಭಾಮಿನಿ

ಇನಿತು ಪೇಳಿದ ಮುನಿಯ ಚರಣಕೆ |
ಜನಪನಭಿವಂದಿಸುತ ಕೇಳ್ದನು |
ಘನವೆ ಕ್ಷಾತ್ರಿಯನಿಂಗೆ ಸತಿಯಪಹರಣ ಖಳರಂತೆ ||
ಚಿನುಮಯನು ರುಕ್ಮಿಣಿಯೆ ಮೊದಲಾ |
ದೊನಿತೆಯರ ಪಡೆದಂದವೆಲ್ಲವ |
ಮುನಿಪ ವಿಸ್ತರಿಸೆನಲು ಸಾಂಗದೊಳೆಂದ ನೃಪವರಗೆ ||೧೭||

ರಾಗ ಕೇದಾರಗೌಳ ಅಷ್ಟತಾಳ

ಧರೆಯೊಳು ವೈದರ್ಭದೇಶದಿ ಕುಂಡಿನ | ಪುರಪತಿ ಭೀಷ್ಮಕಗೆ ||
ತರಳರೈವರು ಸುತೆಯೊರ್ವಳು ಜನಿಸಿರೆ | ಪರಿತೋಷದಿಂದಿರ್ದನು ||೧೮||

ಧಾರಿಣಿ ಪಾಲಕ ಸಚಿವ ಸಾಮಂತರ | ಮೇಳಯ್ಸಿಯೋಲಗದಿ ||
ಭೂರಿ ವೈಭವದಿಂದಲಿರ್ದತರಂಗ ವಿ | ಚಾರವಮಾತ್ಯಗೆಂದ ||೧೯||

ಆದುದು ಷೋಡಶವರುಷ ರುಕ್ಮಿಣಿಗೀಗ | ಮೋದದಿ ಲಗ್ನಗೆಯ್ಯೆ ||
ಮೇದಿನಿಯೊಳಗಿವಳಿಂಗೆ ತಕ್ಕವ ಕೃಷ್ಣ | ನಾದಿಕೇಶವನೆಂಬೆನು ||೨೦||

ಸರಸಿಜನೇತ್ರೆಗೆ ಹರಿಯ ಬಿಟ್ಟನ್ಯರು | ಪುರುಷರು ಸಲ್ಲರೆಂದು ||
ಅರಿತಿಹೆ ನಿನ್ನಯ ಮನಗಳೇನೆನೆ ಮಂತ್ರಿ | ಕರಮುಗಿಯುತಲೆಂದನು ||೨೧||

ರಾಗ ಸಾಂಗತ್ಯ ರೂಪಕತಾಳ

ಧೊರೆರಾಯ ಕೇಳಯ್ಯ ನಿನ್ನಯ ಸುತ ರುಕ್ಮ | ನಿರುತಿರೆ ಪ್ರೌಢನಾಗೀಗ ||
ಅರಿತವನಂತರಂಗವ ನೀನು ಮುದದಿಂದ | ವಿರಚಿಸಲೊಳಿತು ಕಾರ್ಯಗಳ ||೨೨||

ಕರೆಸು ವೇಗದಿ ರುಕ್ಮ ಬಲ್ಲಿದನಹುದೆನೆ | ತ್ವರೆಯಿಂದ ಸಚಿವನಯ್ತಂದು ||
ಕರವ ಜೋಡಿಸಿ ಪಿತನಾಜ್ಞೆಯ ಬೆಸಸಲು | ಹರಿತಂದನಾಸ್ಥಾನದೆಡೆಗೆ ||೨೩||

ಅರುಹಬೇಹುದು ಎನ್ನ ಕರೆಸಿದಂದಗಳೇನು | ಕೊರತೆಗಳನು ತ್ವರ್ಯದಿಂದ ||
ಅರಿಗಳಾಗಮನವೊ ರಾಷ್ಟ್ರಾಧಿಪತ್ಯದೊ | ಳಿರುವ ಕುಂದಕವೇನೆಂದೆನಲು ||೨೪||

ಭಾಮಿನಿ

ತರಳ ಕೇಳ್ ರುಕ್ಮಿಣಿಗೆ ಷೋಡಶ |
ವರುಷಮಾದುದು ಪರಿಣಯಕೆ ವರ |
ನಿರುವನೊರ್ವನೆ ಕೃಷ್ಣನೀಕೆಗೆ ಪೋಲ್ವನೆಂದೆನುತ ||
ಅರಿತಿಹೆನು ಮನ್ಮನದಿ ಹರಿಯನು |
ಕರೆಸಿ ಬಿಸಜಾಂಬಕಿಯ ವರಿಪರೆ |
ಹರುಷದಿಂ ಪ್ರಾರ್ಥಿಸಲು ನೀನೇನೆಂಬೆಯೆನೆ ಕೆರಳಿ ||೨೫||

ರಾಗ ಮಾರವಿ ಏಕತಾಳ

ಜನಕನೆ ಭಳಿಭಳಿರೇನೆಂಬೆನು ತವ | ಮನಕೀ ನೆಂಟತೆಯು ||
ಘನವಾದುದೆ ಕುಲ ಪರಿಕಿಸೆ ಗೋವಳ | ಮನುಜನು ಹೇಸಿಕೆಯು ||೩೬||

ನಡತೆಗಳಂತೈ ಸೋದರಮಾವನ | ಮಡುಹಿದ ಖಳರಂತೆ ||
ಕಡುಜಾರನು ಗೋಪಾಂಗನೆಯರ ಕ್ಷಣ | ಬಿಡನಿವ ಗೋಕುಲದಿ ||೨೭||

ಬೆಕ್ಕಿನ ತೆರದೊಳು ಪಾಲ್ಮೊಸರೆಲ್ಲವ | ನೆಕ್ಕುವ ಶೀಲಗಳು ||
ಪೊಕ್ಕತಿ ಲೂಟಿಯ ಗೆಯ್ಯುತ ಮನೆಮನೆ | ಸೊಕ್ಕಿಹ ಮದದಿಂದ ||೨೮||

ಧೀರಾಗ್ರೇಸರ ಚೈದ್ಯಧರಾಧಿಪ | ಶೂರನು ಶಿಶುಪಾಲ ||
ವೀರಕ್ಷಾತ್ರಿಯನವನಿಗೆ ನಿನ್ನ ಕು | ಮಾರಿಯ ಕೊಡು ಮುದದಿ ||೨೯||

ಮೆರೆಯದು ಗೊಲ್ಲರ ನೆಂಟತೆಯೆಂದಿಗು | ಅರಸಕುಮಾರರಿಗೆ ||
ಬರೆಸೀಕ್ಷಣ ಪತ್ರಿಕೆಯನು ಚೈದ್ಯಗೆ | ಪರಿಣಯಕೆಂದೆನುತ ||೩೦||

ರಾಗ ಕೇದಾರಗೌಳ ಝಂಪೆತಾಳ

ತರಳನೊಳಿನಿತಭಿಮತವನು | ಚೈದ್ಯನಿಗೆ | ಬರೆಸು ನೀ ಲೇಖನವನು ||
ಅರಿತರೀಪರಿ ಕೃಷ್ಣನು | ಕಾರ್ಯ ಮುಂ | ದರಿಸೆ ವಿಘ್ನವ ಗೆಯ್ವನು ||೩೧||

ಬಿಡು ಬಿಡೆನ್ನಯ ಜನಕನೆ | ಕೃಷ್ಣನೆ | ನ್ನೊಡನೆ ಕಪಟವ ತೋರ್ಪನೆ ||
ಒಡನೆ ಕರಬಿಗಿದಾತನ | ಸೆರೆಮನೆಯೊ | ಳಿಡುವೆ ಪಾಮರ ಗೋಪನ ||೩೨||

ಎನುತ ಪೌರುಷವಾಡುತ | ಚೈದ್ಯನಿಗೆ | ಘನದಿ ದಿಬ್ಬಣಗೂಡುತ ||
ಅನುವಿನಿಂ ಬಹುದೆನ್ನುತ | ಪತ್ರಿಕೆಯ | ಜನಪನಂದನ ಬರೆಸುತ ||೩೩||

ಚರರೊಡನೆ ಕಳುಹಿ ಬೇಗ | ತನ್ನ ಪುರ | ವರವಲಂಕರಿಸುತಾಗ ||
ಬರುವ ಸಪ್ತಮಿದಿನದೊಳು | ಪರಿಣಯವ | ವಿರಚಿಸುವೆನೆನುತಾಗಳು ||೩೪||

ಇರೆರುಕ್ಮನಿತ್ತ ಮುದದಿ | ದ್ವಾರಕೆಯೊಳ್ | ಹರಿಯು ಬಹಳಾನಂದದಿ ||
ವಿರಚಿಸಿರೆ ಓಲಗವನು | ದ್ವಿಜನೊರ್ವ | ಬರಲು ದೂರದಿ ಕಂಡನು ||೩೫||

ರಾಗ ಶಂಕರಾಭರಣ ತ್ರಿವುಡೆತಾಳ

ಪರಮತೇಜೋರಾಶಿ ಭೂಸುರ | ವರರೆ ಬನ್ನಿರಿ ಮೋದದಿ ||
ದರುಶನವೆಯಪರೂಪವಾಸನ | ವಿರಿಸಿಹೆನು ಕುಳಿರೆನ್ನುತ ||೩೬||

ಕುಶಲವೇ ತವ ಸತಿಸುತಾದ್ಯರು | ಪಶುನಿಕರ ಬಾಂಧವ್ಯಕೆ ||
ಬೆಸಸಿರಾಗಮನಂಗಳೇನಿದು | ಪೊಸತು ದರ್ಶನವೆಂದನು ||೩೭||

ಹರಿಯೆ ಕೇಳು ವಿದರ್ಭನಗರದೊ | ಳರಸ ಭೀಷ್ಮಕರಾಯನ ||
ತರಳೆ ರುಕ್ಮಿಣಿಯಿತ್ತ ಪತ್ರವ | ಹರುಷದಿಂಕೊಳ್ಳೆನುತಲಿ ||೩೮||

ಕೊಡಲು ಮಧುಸೂದನನು ಮೋದದಿ | ಬಿಡಿಸಿಯೊಕ್ಕಣಿ ವಿವರವ ||
ಒಡನೆ ಪರಿಕಿಪೆನೆನುತಲಾಕ್ಷಣ | ಸಡಗರದಿ ವಾಚಿಸಿದನು ||೩೯||

ರಾಗ ಕೇದಾರಗೌಳ ಅಷ್ಟತಾಳ

ಸ್ವಸ್ತಿ ಶ್ರೀ ಬ್ರಹ್ಮಾಂಡಗರ್ಭ ಚರಾಚರ | ವಸ್ತು ಸಮ್ಮೇಳನಾಂಗ ||
ಚಿತ್ತಜಾರಿಯ ಸಖ ಕೇಶವ ಶ್ರೀಪುರು | ಷೋತ್ತಮ ನರಹರಿಗೆ ||೪೦||

ಚರಣಕಿಂಕರಿ ಕುಂಡಿನಾಪುರ ಭೀಷ್ಮಕ | ತರಳೆ ರುಕ್ಮಿಣಿ ಬಿನ್ನಹ ||
ನಿರತಸೌಖ್ಯವು ತಮ್ಮ ಕುಶಲವ ದಯೆಯಿಂದ | ಬರೆಸಬೇಹುದು ಸಾಂಪ್ರತ ||೪೧||

ದುರುಳ ಚೈದ್ಯನಿಗೆನ್ನ ಪರಿಣಯಗೆಯ್ವರೆ | ಬರುವ ಸಪ್ತಮಿದಿನದಿ ||
ಬರೆಸಿಹ ಪತ್ರವನೆನ್ನಗ್ರಭವ ರುಕ್ಮ | ನಿರದೆನ್ನ ಮನಸಿನೊಳು ||೪೨||

ಬರುವೆನಾದಿನ ಸಂಧ್ಯಾಕಾಲದೊಳೆಮ್ಮಯ | ಪುರದುಪವನದುರ್ಗೆಯ ||
ಪರಿಪೂಜಿಸಲು ಬರೆ ದಯದಿಂದಲಯ್ತಂದು | ಕರೆದೊಯ್ದು ವೇಗದೊಳು ||೪೩||

ವರಿಸಿಕೊಂಬುದು ಎನ್ನ ತೊರೆದರೆ ಜೀವದೊ | ಳಿರೆನು ನಿಶ್ಚಯಗಳಿದು ||
ತರುಣಿ ಹತ್ಯಾದೋಷ ಬಹುದು ನಂಬಿಹೆ ಸ್ವಾಮಿ | ಚರಣಕ್ಕೆ ಬಿನ್ನಹವು ||೪೪||

ರಾಗ ಸುರುಟಿ ಏಕತಾಳ

ಬರೆದಿಹ ಪತ್ರವನು | ಓದುತ | ಹರಿ ಮುದತಾಳಿದನು ||
ಬರುವೆನು ಖಂಡಿತವಾದಿನವೆನ್ನುತೆ | ಬರೆದುತ್ತರವನು ಭೂಸುರಗೀಯುತ ||೪೫||

ಚಿತಯಿಸುವುದೆನುತ | ಉಡುಗೊರೆ | ಯಿತ್ತತಿ ಮನ್ನಿಸುತ ||
ಪೃಥ್ವಿಸುರನ ಕಳುಹುತ್ತಲೆ ನರಹರಿ | ಚಿತ್ತದಿ ತೋಷವ ತಳೆದಿರಲತ್ತಲು ||೪೬||

ಹರುಷದೊಳೋಲಗದಿ | ಚೈದ್ಯನು | ಇರೆ ಸಿಂಹಾಸನದಿ ||
ಎರಗುತ ಕುಂಡಿನಿ ನಗರದ ಚಾರನು | ಭರದೊಳು ಪತ್ರವ ಕೊಡಲದನೋದಿದ ||೪೭||

ರಾಗ ಕಾಂಭೋಜಿ ಝಂಪೆತಾಳ

ಸ್ವಸ್ತಿ ಶ್ರೀಚೇದಿನೃಪ ವೈರಿಗಜಪಂಚಾಸ್ಯ |
ನುತ್ತಮೋತ್ತಮ ಕೀರ್ತಿವಂತ ಗುಣಸಾಂದ್ರ ||
ಮಿತ್ರಶಿಶುಪಾಲಾಖ್ಯನಿಂಗೆ ವೈದರ್ಭನೃಪ |
ಪುತ್ರ ರುಕ್ಮನು ಬರೆದ ಬಿನ್ನಹದ ಲಿಖಿತ ||೪೮||

ಅನುಜೆ ರುಕ್ಮಿಣಿಯನ್ನು ಚಿನುಮಯನಿಗೀಯುವರೆ |
ಜನಕನೆಣ್ಣಿರಲಿದಕೆ ಮನವ ಕೊಡದಾನು ||
ನಿನಗೆ ಪರಿಣಯದಿಂದ ಬರುವ ಸಪ್ತಮಿದಿನದಿ |
ವನಜಾಕ್ಷಿಯಳನೀವೆನೆನುತ ನಿಶ್ಚಯಿಸಿ ||೪೯||

ಹವಣಿಸಿಹೆನದಕಾಗಿ ಬಂಧುಬಾಂಧವರೊಡನೆ |
ತವಕದಿಂ ದಿಬ್ಬಣವ ನೆರಹಿ ದಯೆಯಿಂದ ||
ಜವದಿಂದಲಯ್ತಂದು ವೈವಾಹವಿಧಿಯಿಂದ |
ಯುವತಿಯನು ಪರಿಗ್ರಹಿಸಬೇಕು ಬಿನ್ನಹವು ||೫೦||

ರಾಗ ಮಾರವಿ ಏಕತಾಳ

ಭಳಿರೆನ್ನಯ ಸಖ ರುಕ್ಮನ ಪೋಲುವ | ರಿಳೆಯೊಳಗಾರಿಹರು ||
ಒಲಿಪರೆಯೆನ್ನನು ರುಕ್ಮಿಣಿ ಸುಕೃತವ | ಘಳಿಸಿದಲೈ ದಿಟವು ||೫೧||

ತುರುಗಳ ಕಾವನಿಗನುಜೆಯನಿತ್ತರೆ | ಧರೆಯೊಳಗಪಹಾಸ್ಯ ||
ಸರಿಯಲ್ಲೆನುತಲೆ ಎನ್ನಯ ಕೀರ್ತಿಯ | ನರಿತಿವ ಬರೆದಿಹನು ||೫೨||

ಪರಮ ಕ್ಷತ್ರಿಯಕುಲದೊಳು ಜನಿಸಿಹೆ | ಸರಿಯಹರಾರೆನಗೆ ||
ಪರಿಪಾಲಿಪೆ ಧರೆ ಭುಜಬಲದರ್ಪದೊಳ್ | ಸುರರಾಜನ ತೆರದಿ ||೫೩||

ತೆರಳೆಲೊ ಚಾರಕನೀಕ್ಷಣ ಮಗಧನ | ಬರಹೇಳೆಂದೆನುತ ||
ಪೊರಡಿಸಿ ದಿಬ್ಬಣನೆರಹುತ ವಿಭವದೊ | ಳಿರುತಿರೆ ಶಿಶಪಾಲ ||
ರಾಗ ಮಧುಮಾಧವಿ ತ್ರಿವುಡೆತಾಳ

ಅರಸ ಕೇಳೈ ರುಕ್ಮನಿತ್ತಲು | ಕರೆಸಿ ವಿಬುಧರ ವರ ಸುನರ್ತಕ |
ತರುಣಿಯರ ಗಾಯಕರ ವಿಭವದಿ | ಪರಿಣಯೋತ್ಸವಕೆನ್ನುತ ||೫೪||

ಹೊಳೆವ ಕನ್ನಡಿ ಕಲಶದೀಪಾ | ವಳಿ ಹರಿದ್ರಾಕ್ಷತೆ ಸುಗಂಧವ |
ಫಲಕುಸುಮ ವಿಡಿದನುಜೆಯನು ಮಂ | ಗಲದಿ ಕರೆತಹುದೆನ್ನುತ ||೫೫||

ತರುಣಿಯರ ಕಳುಹಿಸಲು ಬಂದವ | ರೆರಗಿ ರುಕ್ಮಿಣಿಗರುಹೆ ಕೇಳುತ |
ತೆರಳಿಬರಲಿಲ್ಲೇಕೆ ಭೂಸುರ | ಹರಿಯ ಕಂಡನೊ ಕಾಣನೊ ||೫೬||

ಬಾರನಾನತಬಂಧುಕೃಷ್ಣನು | ದಾರಗುಣನಿಧಿಯೇಕೆ ಎನಗಿ |
ನ್ನಾರು ಹಿತಕಾರಿಗಳು ಚೈದ್ಯನ | ಮೋರೆ ನಾನೆಂತೀಕ್ಷಿಪೆ ||೫೭||

ನಿರತ ನಾ ನಿರ್ಭಾಗ್ಯೆಯಲ್ಲದ | ಡಿರದು ತನ್ನೊಡಹುಟ್ಟಿದಣ್ಣನೆ |
ಕೊರಳ ಕೊಯ್ವನೆಯೆನುತ ಮರುಗು | ತ್ತಿರಲು ನಡೆತಂದ್ವಿಬುಧನು ||೫೮||

ಭಾಮಿನಿ

ಮಾನಿನೀಮಣಿ ಕೇಳು ಭಾಗ್ಯಮ |
ಹಾನಿಧಿಯು ನೀನಹುದು ಕೃಷ್ಣನು |
ದೀನರಕ್ಷಕ ಬಹನು ದುರ್ಗಾದೇವಿಯಾಲಯಕೆ ||
ಮಾನಸಿಕ ಚಿಂತೆಗಳ ನೀನನು |
ಮಾನಿಸದೆ ಬಿಡುಯೆನುತ ಭೂಸುರ |
ತಾ ನಡೆಯೆ ರುಕ್ಮಿಣಿಯು ಸಂತಸದಿಂದಲಾಕ್ಷಣದಿ ||೫೯||

ವಾರ್ಧಕ

ತರುಣಿಯರ ಜತೆಯೊಳಯ್ತಂದು ಮಂಗಲಸ್ನಾನ |
ವಿರಚಿಸುತ ಸಿಂಗರದಿ ಸಾರೆ ಮಂಟಪದೆಡೆಗೆ |
ಪರಮವಿಪ್ರೋತ್ತಮರು ಗ್ರಹಶಾಂತಿ ಕರ್ಮಗಳನೆಸಗುತಿರಲಾನಂದದಿ ||
ಅರಸ ಕೇಳತ್ತಲಾ ಮಗಧ ಪೌಂಡ್ರಕ ನೃಪರು |
ಬರಲಿದಿರ್ಗೊಂಡು ಶಿಶುಪಾಲನೊಸಗೆಯನರುಹಿ |
ಹರುಷದೊಳ್ ದಿಬ್ಬಣವ ಕೂಡಿ ಕುಂಡಿನಪುರಿಗೆ ಬರಲು ಬಾಂಧವನಿಕರದಿ ||೬೦||

ರಾಗ ಜಂಜೂಟಿ ಅಷ್ಟತಾಳ

ತವಕದಿ ರುಕ್ಮನಾಕ್ಷಣದಿ | ಬಾಂ | ಧವರೊಡಗೂಡಿ ಸಂಭ್ರಮದಿ ||
ಯುವತಿಯರ್ ಕಳಸಗನ್ನಡಿ ಲಾಜಾಕ್ಷತೆ ವಾದ್ಯ |
ರವದೊಳಯ್ತಂದಿದಿರುಗೊಳ್ಳುತ | ಭುವನಪತಿ ಶಿಶುಪಾಲರಾಯನ ||೬೨||

ಬಂದಿರೆ ಕುಶಲಿಗಳೆನುತ | ಮುದ | ದಿಂದಾತನುಪಚರಿಸುತ್ತ |
ಚಂದದಿ ಕರೆತಂದು ಬಿಡದಿಯೊಳಿಳುಹುತ್ತ |
ಚಂದಿರಾನನೆ ಭಾಗ್ಯದೊಳು ಗುಣ | ಸಿಂಧು ವರ ನೀನಾದೆಯೆನ್ನುತ ||೬೩||

ಪರಿಪರಿ ಮನ್ನಿಸುತಾಗ | ನೃಪ | ತರಳನು ಸತಿಯರೊಳ್ ಬೇಗ ||
ಗಿರಿಜೆಯಾಲಯಕೆ ರುಕ್ಮಿಣಿಯನ್ನು ಕರೆದೊಯ್ದು |
ವಿರಚಿಪುದು ಪೂಜೆಗಳನೆನ್ನುತ | ಭರದಿ ಕಳುಹಿಸೆ ನಡೆದರಾಕ್ಷಣ ||೬೪||

ಪರಮ ಸದ್ಭಕ್ತಿಭಾವದೊಳು | ನೃಪ | ತರಳೆ ರುಕ್ಮಿಣಿ ಸಂಪ್ರೀತಿಯೊಳು ||
ಗಿರಿಜೆ ಕಾತ್ಯಾಯಿನಿ ಚಂಡಿ ಶಾಂಭವಿಯೆನ್ನ |
ಹರಿಯೆ ಕೈವಿಡಿವಂತೆ ಪೊರೆಯೆಂ | ದೆರಗಿ ಸ್ತುತಿಸುತಲಿರ್ದಳಾಗಲು ||೬೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಕೇಳ್ ದ್ವಾರಕೆಯೊಳೊಂದಿನ | ಹರುಷದೊಳಗೋಲಗದಿ ಹಲಧರ |
ನಿರಲು ಶ್ರೀಹರಿ ಬಂದು ನಮಿಸಲು | ತ್ವರಿತದಿಂದ ||೬೬||

ಕುಳಿತುಕೊಳ್ಳೈ ಕೃಷ್ಣ ತವ ಮನ | ದೊಳಗೆ ಹರುಷಗಳೇನು ಪೇಳೆನೆ |
ಸುಲಲಿತಾಂಗಿಯು ಬರೆದ ಲಿಖಿತವ | ತಿಳುಹಲಾಗ ||೬೭||

ಪೊರಡು ತಡವೇಕಿಂದು ಸಪ್ತಮಿ | ಪರಿಣಯೋತ್ಸವಕಯ್ದಿ ಚೈದ್ಯನ |
ಧುರದಿ ದರ್ಪವ ಮುರಿದು ಸುದತಿಯ | ತರಲುಬೇಕೈ ||೬೮||

ಏಳೆನುತ ಹಲಧರನು ಪೊರಮಡೆ | ವ್ಯಾಳಶಯನನು ಸಕಲ ಯಾದವ |
ಜಾಲದೊಳು ರಥವೇರಲತಿ ಮುದ | ತಾಳುತಾಗ ||೬೯||

ರಾಗ ಕೇದಾರಗೌಳ ಝಂಪೆತಾಳ

ಬರಲು ಕುಂಡಿನನಗರಿಗೆ | ಕೃಷ್ಣ ಹಲ | ಧರರು ಸಂತೋಷದೊಳಗೆ ||
ಪರಿಕಿಸುತ ಧರಣೀಶನು | ಬಂದೆರಗಿ | ಪರಿಪರಿಯ ಮನ್ನಿಸಿದನು ||೭೦||

ಆಸನವನಿತ್ತು ಮುದದಿ | ಬಂದುದತಿ | ತೋಷವೆನ್ನುತ್ತ ಭರದಿ |
ಶೇಷಶಯನನ ಸ್ತುತಿಸುತ | ಭೀಷ್ಮಕ ವಿ | ಲಾಸದಿಂದುಪಚರಿಸುತ ||೭೧||

ಕರೆಸು ಸುತೆಯನು ವೇಗದಿ | ಧಾರಿಣಿಪ | ವರಮೂಹೂರ್ತವು ಕ್ಷಿಪ್ರದಿ ||
ತೆರಳುತಿದೆ ಎಂದ್ವಿಬುಧರು | ಪೇಳುತಿರ | ಲರಿತು ಕರೆತರೆ ಸತಿಯರು ||೭೨||

ಗಿರಿಜೆಯಾಲಯಕಯ್ದಲು | ಶಿಶುಪಾಲ | ಹರುಷಗೊಳ್ಳುತ ಮನದೊಳು ||
ತೆರಳಿ ಮಂಟಪಮಧ್ಯದಿ | ಕುಳ್ಳಿರ್ದ | ನರಿತು ಶ್ರೀಹರಿ ವೇಗದಿ ||೭೩||

ಭಾಮಿನಿ

ಭರದಿ ಸ್ಯಂದನವಡರಿ ಕೃಷ್ಣನು |
ತೆರಳಿ ಗಿರಿಜಾಲಯನ ಪೊರಡುವ |
ಧರಣಿಪಾತ್ಮಜೆಯಾದ ರುಕ್ಮಿಣಿಗಿತ್ತು ದರ್ಶನವ ||
ಸರಸಿಜಾಕ್ಷಿಯನೆತ್ತಿಕೊಂಡ |
ಬ್ಬರಣೆ ಮಸಗಲು ತನ್ನರಥದೊಳ |
ಗಿರಿಸಿದನು ಸಂಸಾರಪತಿತರನೆತ್ತು ವಂದದಲಿ ||೭೪||

ವಾರ್ಧಕ

ಕರೆತರಲು ಪೋಗಿರ್ದ ಸತಿಯರೊಳಗೋರುವಳು |
ಭರದೊಳಯ್ತಂದಾಗ ರುಕ್ಮನೊಡನುಸಿರಿದಳ್ |
ಹರಿಣಾಕ್ಷಿರುಕ್ಮಿಣಿಯ ವಂಚಿಸುತ ಕರವಿಡಿದು ಎಳೆದು ಸ್ಯಂದನವಡರಸಿ ||
ಹರಿಯು ತನ್ನಯ ಪುರಿಗೆ ಗಮಿಸುತಿಹನೀ ಕ್ಷಣವೆ |
ತೆರಳು ನೀನೆಂದೆನಲ್ ಕಿಡಿಗೆದರಿ ಶರಚಾಪ |
ಧರಿಸಿಯಾರ್ಭಟಿಸುತ್ತ ಪೊರಮಟ್ಟು ವೇಗದಿಂದರಿವೆ ಕಂಠವನೆನ್ನುತ ||೭೫||

ರಾಗ ಘಂಟಾರವ ಅಷ್ಟತಾಳ

ಅರರೆ ಗೋವಳಬಾಲನೆನ್ನುತ ರುಕ್ಮ |
ಬರಲಿ ಸೇನೆಗಳೆಲ್ಲ ಸಚಿವನೆ | ತ್ವರಿತವೆನ್ನುತ ಖತಿಯಲಿ ||೭೬||

ಏನಿದೀಪರಿ ಕೃಷ್ಣ ಚೋರತ್ವದಿ |
ಮಾನಿನೀಮಣಿಯಳನು ರಥದೊಳ | ಗೇನುಕಾರಣ ನೆಗಹಿದ ||೭೭||

ಬಾರೆಲೋ ಚೈದ್ಯನೇಕೆ ಮಂಟಪದೊಳು |
ಸೇರಿಕೊಂಡಿಹೆ ನಾರಿಮಣಿಯಳ | ಪೋರನೊಯ್ವನು ಪರಿಕಿಸು ||೭೮||

ಎಲೆಲೆ ಮಾಗಧಮುಖ್ಯನೃಪಾಲರು |
ನೆಲನ ನೋಡುವುದೇಕೆ ಬನ್ನಿರಿ | ಗಳವ ಖಂಡಿಸಿ ಕೃಷ್ಣನ ||೭೯||

ಭಾಮಿನಿ

ಎಂದು ವೀರಾವೇಶದೊಳು ನೃಪ |
ನಂದನನು ಧನುಶರವ ಪಿಡಿಯುತ |
ಮುಂದುವರಿಯಲು ಕೆರಳಿ ಚೈದ್ಯನು ತರುಬಿ ಮಾರ್ಮಲೆಯೆ ||
ಅಂಧಕಾರಿಯ ತೆರದಿ ಹಲಧರ |
ಬಂದು ಎನ್ನನು ಗೆಲಿದು ಕೃಷ್ಣನ |
ಮುಂದೆ ಸಾರೆನುತಾಗ ಮುಸಲವ ತಿರುಹಿ ತಡೆಗಡಿದ ||೮೦||

ರಾಗ ಭೈರವಿ ಝಂಪೆತಾಳ

ಫಡ ಫಡೆಲೊ ಗೋವಳರ ಹುಡುಗತನಗಳ ಶೂರ | ರೊಡನೆ ತೋರುವಿರೈಸೆ ಭಳಿರೆ ||
ಕಡುದುರುಳರಂತೆನ್ನ ವಂಚಿಸುತ ಕಳವಿನೊಳು | ಮಡದಿಯನ್ನಪಹರಿಸೆ ಬಿಡೆನು ||೮೧||

ದೊರಕಲಾಪುದೆ ಸುರಭಿ ತಿರುಕನಿಂಗೆಲೆ ಮರುಳೆ | ಹರಿಗೆ ಸಲುತಿಹಳಾದಿಲಕ್ಷ್ಮಿ ||
ವರಿಸಲಾಪೆಯೊ ಮೂಢ ಸಭೆಗೆ ಮುಖ ತೋರದಿರು | ಪರಿಣಯೋತ್ಸವವಾಯ್ತು ನಿನಗೆ ||೮೨||

ಶಿರವರಿದು ನಿಮ್ಮುಭಯರನ್ನು ಹರಿಣಾಕ್ಷಿಯಳ | ವರಿಸಿ ಮಂಗಲಕರದಿ ಪುರಕೆ ||
ತೆರಳುತಿಹ ಶಿಶುಪಾಲನನ್ನು ನಿರ್ಜರರೆಲ್ಲ | ಸರಿಯೆಂದು ನಭದಿ ಕೀರ್ತಿಪರು ||೮೩||

ತರಣಿಜಾತನ ಪುರಿಯೊಳಿರುವ ಮೃತಕನ್ನಿಕೆಯ | ವರಿಸುತಿಹೆ ನೀನು ಸಂತಸದಿ ||
ಪರಮೇಷ್ಠಿ ಬರೆದಿಹನು ತಪ್ಪಲಾರದು ಎನ್ನ | ಧುರಕೆ ನೀ ಮಾರ್ಮಲೆಯಬಹುದೈ ||೮೪||

ರಾಗ ಶಂಕರಾಭರಣ ಮಟ್ಟೆತಾಳ

ತೋರು ನಿನ್ನ ಸಹಸವರರೆ | ಜಾರ ಗೋಪನೆನುತ ಚೈದ್ಯ |
ಕ್ರೂರಶರಗಳೆಚ್ಚು ಹೂಂ | ಕಾರಗೆಯ್ದನು ||೮೫||

ಪುಡಿಯಗೆಯ್ದು ಕಾಮಪಾಲ | ಕಿಡಿಯ ಸೂಸಿ ಮುಸಲದಿಂದ |
ಬಡಿಯಲುರಕೆ ಬೇಗ ಕಂ | ಗೆಡುತ ಚೈದ್ಯನು ||೮೬||

ಕೆರಳಿ ವೀರವೇಷದಿಂದ | ಸ್ಮರಿಸಿಯಾದಿಶೇಷನನ್ನು |
ಗರಳಕಾರುತಿರ್ಪ ಸರ್ಪ | ಬಾಣವೆಸೆದನು ||೮೭||

ಪರಮಶೇಷಾಂಶಭೂತ | ಗರುಡಶರಗಳನ್ನು ಪೋಲ್ವ |
ಭರಿತಶ್ವಾಸದಿಂದಲುರಗ | ಶರವ ದಹಿಸಿದ ||೮೮||

ಭರದೊಳದ್ರಿಶರವ ಬಿಡಲು | ಕೆರಳಿ ಕುಲಿಶದಿಂದ ತರಿದು |
ಶಿರಕೆ ಮುಸಲದಿಂದಲೆರಗೆ | ಮೂರ್ಛೆ ತಳೆದನು ||೮೯||