ರಾಗ ಕೇದಾರಗೌಳ ಅಷ್ಟತಾಳ

ಬಲ್ಲೆನೈ ಮುನಿಪತಿ ಸತಿಯರ ತಂದಿಹು | ದೆಲ್ಲವು ವಿಹಿತವೆಂದೆ ||
ಖುಲ್ಲರೊಡನೆ ಕಲಹವ ಗೆಯ್ಯೆ ನಿಷ್ಠುರ | ವಲ್ಲವೆಂದನು ರಾಮನು ||೧೭೧||

ಹಲಧರ ಲಾಲಿಸು ನಿನ್ನನುಜನ ಗುಣ | ತಿಳಿಯದು ನನಗೀಗಳು ||
ಇಳೆಯೆಲ್ಲ ತುಂಬಿಹುದೊಂದಪವಾದವ | ಗಳಿಸಿದ ಶ್ರೀಕೃಷ್ಣನು ||೧೭೨||

ಉರುತರ ತಪವನಾಚರಿಸಿ ಸತ್ರಾರ್ಜಿತ | ತರಣಿಯೊಳ್ ಪಡೆದಿರುವ ||
ವರಸ್ಯಮಂತಕ ತನಗೀಯೆನೆ ಲೋಭದಿ | ಕರುಣಿಸದಿರಲವನು ||೧೭೩||

ಧರಿಸಿ ಕಂಠದೊಳವನನುಜ ಪ್ರಸೇನನು | ತೆರಳಿರೆ ಮೃಗಬೇಟೆಗೆ ||
ತಿರುಗಿ ಬಾರದೆ ಪೋದ ಮರುಗಿ ಸತ್ರಾಜಿತ | ನರಿತು ತನ್ನಯ ಮನದಿ ||೧೭೪||

ಪುಂಡರೀಕಾಕ್ಷನು ಮೂರ್ಖತೆಯೊಳಗೀಗ | ಚೆಂಡರಿದನುಜಾತನ ||
ಕೊಂಡಿಹ ರತ್ನವನೆನುತ ಪೇಳುವನಯ್ಯ | ಖಂಡಿತದಪವಾದವ ||೧೭೫||

ರಾಗ ಕೇದಾರಗೌಳ ಝಂಪೆತಾಳ

ಬಂಧುಜನರೊಳು ಕೃಷ್ಣನು | ನಿಷ್ಠುರವ | ತಂದುಕೊಂಬುದೆ ಪ್ರಾಜ್ಞನು ||
ಚಂದದೊಳು ಬೆಸಸೆನ್ನುತ | ಮುನಿ ನಡೆಯ | ಲಂದು ಬಲಖತಿತಾಳುತ ||೧೭೬||

ಇರಲನಕ ಗೋವಿಂದನು | ಸಂತಸದಿ | ಬರೆ ಕಂಡು ಬಲರಾಮನು ||
ಪರಿಕಿಸದೆ ಕಿಡಿಸೂಸುತ | ಕುಳ್ಳಿರಲು | ಸರಸಿಜಾಂಬಕ ನಮಿಸುತ ||೧೭೭||

ಅರುಹಬೇಹುದು ದಯೆಯಲಿ | ಖತಿಯ ತಳೆ | ದಿರುವ ಕಾರಣ ತ್ವರೆಯಲಿ ||
ಚರಣಸೇವಕನೆನ್ನುತ | ಕೈಮುಗಿಯ | ತಿರುವ ಶ್ರೀಶನ ಕಾಣುತ ||೧೭೮||

ರಾಗ ಮಾರವಿ ಏಕತಾಳ

ಬರದಿರು ಎನ್ನಿದಿರೆಲೆಲೇ ಕೃಷ್ಣನೆ | ಪರಿಕಿಸೆ ಮೋರೆಯನು ||
ದುರುಳತ್ವವ ಕೈಗೊಂಡೆಲೊ ಮಾನವ | ತೊರೆದೆಯೊ ನಿಶ್ಚಯವು ||೧೭೯||

ಪುಟ್ಟಿದೆಯೇಕೆಮ್ಮನ್ವಯದೊಳು ಕಡು | ದುಷ್ಟನು ನಂಟರಲಿ ||
ಕಟ್ಟಿದೆ ದ್ವೇಷವ ಅಪಹಾಸ್ಯವು ಮಹ | ನಿಷ್ಠುರವಾಯಿತೆಲಾ ||೧೮೦||

ತೋರುವುದೆಂತೈ ಬಾಂಧವಜನರೊಳು | ಮೋರೆಯ ನಾನೀಗ ||
ಜಾರಚೋರತ್ವಗಳಲ್ಲದೆ ದುರಹಂ | ಕಾರವ ನೀ ತಳೆದೆ ||೧೮೧||

ಬಲನನುಜನ ದೆಸೆಯಿಂದಲಿ ತಮ್ಮಯ | ಕುಲವಳಿದುದುಯೆನುತ ||
ಹಲವರು ನಿಂದೆಸೆ ಬಾಳುವೆನೆಂತೈ | ಗಳಿಸಿದೆ ಕೀರ್ತಿಯನು ||೧೮೨||

ಏಕೆ ಸತ್ರಾಜಿತನನುಜನ ಮಡುಹಿದೆ | ಯೇಕೆ ಸ್ಯಮಂತಕವು ||
ಏಕೆಲೊ ಪಾತಕಗೆಯ್ದಿಹೆ ಖಳರಂ | ತೀ ಕೆಲಸವು ನಿನಗೆ ||೧೮೩||

ನಡೆವೆನು ಭೂಸಂಚರಣೆಗೆ ನಾ ನಿ | ನ್ನೊಡನಿರೆನೀಕ್ಷಣದಿ ||
ಪಡೆದೆನು ದುಷ್ಕೀರ್ತಿಗಳುರೆ ಲೋಕದಿ | ಒಡನುದ್ಭವಿಸಿದಕೆ ||೧೮೪||

ರಾಗ ಜಂಜೂಟಿ ಅಷ್ಟತಾಳ

ಅರಿಯೆ ಪ್ರಸೇನ ಪೋದುದನು | ಅಪ | ಹರಿಸಲಿಲ್ಲವನ ರತ್ನವನು ||
ಬರಿದೇತಕಪವಾದಪೇಳ್ವೆಯೆನ್ನೊಳು ದೋಷ |
ವಿರದು ಕೋಪವಿದೇತಕಗ್ರಜ | ಸರಿಯೆ ನೀನೀಪರಿಯ ಗೆಯ್ವುದು ||೧೮೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮಣಿಯ ಸತ್ರಾರ್ಜಿತನೊಳೇತಕೆ | ತನಗೆ ಕೊಡಬೇಕೆನುತ ಕೇಳ್ದೆಯ |
ಹನನಗೆಯ್ದೆ ಪ್ರಸೇನನನು ದಿಟ | ವೆನುವೆನೀಗ ||೧೮೬||

ರಾಗ ಜಂಜೂಟಿ ಅಷ್ಟತಾಳ

ಪರಮಪಾವನರತ್ನವಿದನು | ಯದು | ವರನುಗ್ರಸೇನಾಖ್ಯಗಾನು ||
ಹರುಷದೊಳೀವರೆ ಕೇಳ್ದೆ ಲೋಭದೊಳಾತ |
ಕರುಣಿಸದೆ ತಾನಿರಿಸಿ ಕೊಂಡಿಹ | ನರಿಯೆ ಮುಂದಣ ಸ್ಥಿತಿಯನಗ್ರಜ ||೧೮೭||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಜಾರ ಚೋರತ್ವಗಳು ನಿನ್ನೊಳು | ಮಾರಿಹುದು ಕಪಟಂಗಳರಿವೆನು |
ಯಾರೊಳೀಪರಿ ನುಡಿವೆ ಮಣಿಯಪ | ಹಾರಗೆಯ್ದೆ ||೧೮೮||

ರಾಗ ಜಂಜೂಟಿ ಅಷ್ಟತಾಳ
ಜನನಿ ಜನಕರಾಣೆ ಕೇಳು | ಆ | ಮಣಿಯು ಪ್ರಸೇನನ್ವಾರ್ತೆಗಳು ||
ಎನಗೆ ಗೋಚರವಿಲ್ಲ ದುರುಳ ಕೃತ್ಯಂಗಳಿಗೆ |
ಮನವ ಗೊಡೆ ನಾನೆಂದಿಗಾದರು ಎಣಿಸಬೇಡನುಮಾನವಗ್ರಜ ||೧೮೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇರದಿರಲು ವಂಚನೆಯು ನಿನ್ನೊಳು | ತೆರಳಿ ಬೇಗ ಪ್ರಸೇನನಿರವನು |
ಅರಿತು ಬಾ ಸತ್ರಾಜಿತಾಖ್ಯನ | ಹರುಷಗೊಳಿಸೈ ||೧೯೦||

ಭಾಮಿನಿ

ಪ್ರೀತಿಯೊಳು ಬಲಭದ್ರಗೊಂದಿಸಿ |
ಮಾತುಳಾಂತಕನೆಂದನಗ್ರಜ |
ಭೂತಳದೊಳೆಲ್ಲಿರಲಿ ಸತ್ರಾಜಿತನ ಸಹಭವನ ||
ಈತತೂಕ್ಷಣವಯ್ದಿ ಜೀವದೊ |
ಳಾತನಿರೆ ಕರೆತಹೆನು ಅಳಿದಿರೆ |
ರೀತಿಯರಿದಯ್ತಂದು ಬಿನ್ನಹ ಮಾಳ್ಪೆನೆಂದೆನುತ ||೧೯೧||

ವಾರ್ಧಕ

ಹರುಷದೊಳಗಪ್ಪಣೆಯ ಪಡೆದು ಪೊರಮಟ್ಟಾಗ |
ಹರಿಯು ತಾನೇಕಾಂಗಿಯಾಗಿಯರಸಲು ಪೋಗೆ |
ತೊರೆದಿರಲ್ಕಸುವ ಸತ್ರಾಜಿತನ ಸಹಭವಂ ಮಣಿಯ ನೆವದೊಳು ಕೃಷ್ಣನು ||
ಶಿರವರಿದನೆಂದಪಖ್ಯಾತಿ ತಪ್ಪದೆನುತ್ತ |
ಕರೆದು ಕೃತವರ್ಮಸುಜ್ಯೋತಿಸಾತ್ಯಕಿಯರಂ |
ಭರದಿ ಜತೆಗೊಂಡಾಗ ವಿಂಧ್ಯಾದ್ರಿಯುಪವನದಿ ಚರಿಸುತಲ್ಲಲ್ಲರಸುತ ||೧೯೨||

ರಾಗ ಕಾಂಭೋಜಿ ಝಂಪೆತಾಳ

ತುರಗಪಾದದ ಚಿಹ್ನೆಯರಸುತಯ್ದಿದನೊಂದು |
ಸರಸಿಯಡೆಯೊಳು ರಕ್ತ ಸುರಿದಿಹುದ ಕಂಡು ||
ಧುರಗೆಯ್ದು ಕೇಸರಿಯ ನಖದಿ ಕರುಳುಗಿದಸುವ |
ತೊರೆದು ಬಿದ್ದ ಪ್ರಸೇನನಿರವ ಕಂಡಾಗ ||೧೯೩||

ನೋಡಿದಿರೆ ಯಾದವರು ಕೇಸರಿಯ ದೆಸೆಯಿಂದ |
ರೂಢಿಯೊಳು ಬಿದ್ದಿಹನು ಮಣಿಯನುರೆ ಕೊಂಡು ||
ಓಡಿಹುದು ಸಿಂಹನಿದನರಸಿ ಮರ್ದಿಪೆನೆನುತ |
ಗಾಢದಿಂದಲೆ ಮುಂದಕಯ್ದೆ ನರಹರಿಯು ||೧೯೪||

ಭರಿತವಾಗಿಹ ತರುಲತೆಯ ಮಧ್ಯದೊಳಗರುಣ |
ಕಿರಣದಂದದಿ ರಂಗಭೂಮಿ ಭೀಕರದಿ ||
ಪರಿಶೋಭಿಸುತ್ತಿರುವ ಬಳಿಗಾಗಿ ಶ್ರೀಹರಿಯು |
ತೆರಳಿ ಧುರಗೆಯ್ದರಾರಿಲ್ಲೆನುತಲಾಗ ||೧೯೫||

ಕರುಳುಗಿದ ಕೇಸರಿಯ ಡಿಂಬ ಭಾಸುರಮಾಗಿ |
ಸುರಿವ ಶೋಣಿತದಿಂದಲೊರಗಿರುವ ಸ್ಥಳದಿ ||
ಪರಿಶೋಭಿಸುತ್ತಿರುವ ಭಲ್ಲೂಕ ಪದಚಿಹ್ನೆ |
ಧರೆಯೊಳಿರೆ ಕೃತವರ್ಮಮುಖ್ಯರಿಗೆ ತೋರ್ದ ||೧೯೬||

ಭಾಮಿನಿ

ನೋಡಿದಿರೆ ಭಲ್ಲೂಕವೀಯೆಡೆ |
ಮಾಡಿಹುದು ಹರ್ಯಕ್ಷನೊಳು ಧುರ |
ರೂಢಿಜರ್ಝರಮಾಗಿ ಧೂಸರವೆದ್ದು ಶೋಣಿತದಿ ||
ಕೂಡಿ ಕೆಸರಾಗಿಹುದು ಹನನವ |
ಮಾಡಿ ಸಿಂಹನ ಮಣಿಯನುರೆ ಕೊಂ |
ಡೋಡಿಹುದು ಪಥವಿಡಿದು ಕರಡಿಯನರಸಬೇಕೆನುತ ||೧೯೭||

ರಾಗ ಕೇದಾರಗೌಳ ಝಂಪೆತಾಳ

ಭಲ್ಲುಕನ ಪದಚಿಹ್ನೆಯ | ಪಿಡಿದು ಯದು | ವಲ್ಲಭನು ವನವೀಥಿಯ ||
ಮೆಲ್ಲನರಸುತ ಪೋಗಲು | ಮುಂದೆ ಮುಂ | ದಲ್ಲಿ ಗುಹೆಯೊಂದೆಸೆಯಲು ||೧೯೮||

ಕಂಡಿರೇ ಋಕ್ಷಗುಹೆಯ | ಮಣಿಯ ಸೆಳೆ | ಕೊಂಡಿದರೊಳಿರ್ಪ ಬಗೆಯ ||
ಕಂಡು ನಾನೀ ಕ್ಷಣದಲಿ | ಮೃಗನಸುವ | ಪಿಂಡಿ ಬಹೆನತಿ ತ್ವರೆಯಲಿ ||೧೯೯||

ಬರುವನಕವೀ ದ್ವಾರದಿ | ಕುಳ್ಳಿರೆಂ | ದರುಹಿ ನಗಧರ ವೇಗದಿ ||
ತೆರಳಿ ಗುಹೆಯೊಳಗಾಗಲು | ಅರ್ಕಶತ | ಕಿರಣ ಮುಂದೆಸೆ ಪೊಳೆಯಲು ||೨೦೦||

ವರಸ್ಯಮಂತಕರತ್ನವು | ಖಂಡಿತದೊ | ಳಿರುತಿರ್ಪುದಾ ತೇಜವು ||
ಮಿರುಗುತಿದೆಯೆಂದರಿಯುತ | ಹರಿ ಮುಂದೆ | ತೆರಳೆ ತನ್ನೊಳು ನಲಿಯುತ ||೨೦೧||

ವಾರ್ಧಕ

ಶರದಋತು ಪೂರ್ಣಿಮೆಯೊಳುದಯಚಂದಿರಕಾಂತಿ |
ಸುರುಚಿರಾನನದಿಂದ ಶೋಭಿಸುತ ವಿಭವದಿಂ |
ತರುಣಿಯೊರ್ವಳೆ ಕುಳಿತು ಬಾಲಕನ ತೊಟ್ಟಿಲಂ ಹರುಷದಿಂದಲೆ ತೂಗುತ ||
ಗಿರಿಜೆರಮೆವಾಣಿಯರ ಚೆಲ್ವಿಕೆಗೆ ಮಿಗಿಲೆನಿಸಿ |
ಸರಸಿಜಾಂಬಕಿ ಮೆರೆವ ಸೌಂದರ್ಯವಿಭ್ರಮಕೆ |
ಬೆರಗಾಗಿ ಹರಿಯೊಂದು ಶಿಲೆಯ ಮರೆಯಾಗಿರಲ್ ಪಾಡಿ ತೂಗುತಲಾಗಳು ||೨೦೨||

ಜೋಗುಳ ಪದ

ಜೋ ಜೋ ಜೋ ಜೋ ಜೋ ಸುಕುಮಾರ |
ಜೋ ಜೋ ಸದ್ಗುಣಧೀರ ಶೃಂಗಾರ ||
ಜೋ ಜೋ ಜಾಂಬವ ತರಳ ಪ್ರವೀರ |
ಜೋ ಜೋ ಭಲ್ಲೂಕರಾಜಾಧಿರಾಜ | ಜೋ ಜೋ    || ಪಲ್ಲ ||

ತಂದೆಯಾಗಿಹ ಜಾಂಬವಂತ ಕೇಸರಿಯ |
ಕೊಂದು ತಂದಿಹ ಸ್ಯಮಂತಕಮಣಿಯ ||
ಚಂದದೊಳದ ನಿನ್ನ ತೊಟ್ಟಿಲ ಬಳಿಯ |
ಬಂಧಿಸಿಹನು ನೋಡು ಭಾಗ್ಯಾಂಭೋನಿಧಿಯ | ಜೋ ಜೋ ||೨೦೩||

ಇಷ್ಟಾರ್ಥಗಳನೆಲ್ಲ ಕೊಡುವುದು ನೋಡು |
ಹೃಷ್ಟಮಾನಸನಾಗಿ ಪಿಡಿದು ನೀನಾಡು ||
ಸೃಷ್ಟಿಯೊಳಿದಕೆ ಸಮಾನತೆ ಜೋಡು |
ಇಷ್ಟಾದರಿಲ್ಲ ನೀ ಪಿಡಿದು ಮುದ್ದಾಡು | ಜೋ ಜೋ ||೨೦೪||

ಭಾಮಿನಿ

ಪರಮಸಂತೋಷದಲಿ ಪಾಡುತ |
ತರಳನನು ತೂಗುತ್ತಲಿರಲದ |
ನರಿತು ಶ್ರೀಹರಿ ಪಾಂಚಜನ್ಯವನಾಗ ಮೊಳಗಿಸಲು ||
ಅರರೆ ಪಿತ ನಾ ಕೆಟ್ಟೆ ಬಾ ಬಾ |
ಪರಮಭೀಕರಮೇನಿದೆನ್ನಲು |
ಕೆರಳಿಯಾರ್ಭಟಿಸುತ್ತ ಜಾಂಬವ ಬಂದು ಪರಿಕಿಸುತ ||೨೦೫||

ರಾಗ ಘಂಟಾರವ ಅಷ್ಟತಾಳ

ಆರೋ ಎನ್ನಯ ಗುಹೆಯ ಸ್ವತಂತ್ರಿಸಿ |
ಸೇರಿದೆಯ ಪೆಸರೇನು ಬಂದಿಹ | ಕಾರಣಂಗಳಿದೇನಿದು ||೨೦೬||

ರಾಗ ಕೇದಾರಗೌಳ ಝಂಪೆತಾಳ

ವಸುದೇವನಾತ್ಮಭವನು | ದ್ವಾರಕೆಯೊಳ್ | ವಸತಿಯಂ ಗೆಯ್ದಿರ್ಪೆನು ||
ಪೆಸರು ಕೇಳೆನ್ನ ಜಗದಿ | ಕೃಷ್ಣನೆಂ | ದುಸಿರುವರು ಪ್ರಖ್ಯಾತದಿ ||೨೦೭||

ರಾಗ ಘಂಟಾರವ ಅಷ್ಟತಾಳ
ಅರರೆ ಬಾಲೆಯ ಬೆದರಿಸಿದಂದಗ |
ಳರುಹದಿರೆ ಶಿರವರಿದು ಶ್ರೋಣಿತ | ಧರೆಗೆ ಚೆಲ್ಲುವೆ ನೋಡೆಲಾ ||೨೦೮||

ರಾಗ ಕೇದಾರಗೌಳ ಝಂಪೆತಾಳ

ವರ ಸ್ಯಮಂತಕಮಣಿಯನು | ಎನ್ನ ಸಖ | ಧರಿಸಿ ಬಂದಿರಲದರನು ||
ಬರಸೆಳೆದು ನೀನೀಗಳು | ತಂದುದ | ನ್ನರಿತು ಬಂದಿಹೆನೊಯ್ಯಲು ||೨೦೯||

ರಾಗ ಘಂಟಾರವ ಅಷ್ಟತಾಳ

ಎನ್ನ ಬಾಹುವಿಕ್ರಮದೊಳು ಹರ್ಯಕ್ಷ |
ನನ್ನು ಮಡುಹಿ ಸ್ಯಮಂತಕದ ಮಣಿ | ಯನ್ನು ನಾ ತಂದಿರ್ಪೆನು ||೨೧೦||

ರಾಗ ಕೇದಾರಗೌಳ ಝಂಪೆತಾಳ

ವಿಹಿತದಿಂದಲೆ ಮಣಿಯನು | ಕೊಡುಯೆನ್ನೊ | ಳಹಿತಬೇಡೈ ಛಲವನು ||
ಕುಹಕಿಯಂದದಿ ಗೆಯ್ಯಲು | ಪೋಪೆ ನೀ | ಮಿಹಿರಸುತನೆಡೆಗೀಗಳು ||೨೧೧||

ರಾಗ ಘಂಟಾರವ ಅಷ್ಟತಾಳ

ಅಲ್ಲ ನಾ ಬಡಮೃಗವು ತ್ರೇತಾಯುಗ |
ದಲ್ಲಿ ಪುಟ್ಟಿಹ ದ್ವಾಪರೋದ್ಭವ | ಜಳ್ಳುಮಾನವ ನಿನಗೆಲಾ ||೨೧೨||

ರಾಗ ಮಾರವಿ ಏಕತಾಳ

ಒದರುವುದೇತಕರಣ್ಯದಿ ಜನಿಸಿದ | ಮದಗಜ ಮಾನವಗೆ ||
ವಿಧಿಯೊಳು ವಶವಹುದೆಲೆ ಭಲ್ಲೂಕನೆ | ನಿಧನವ ಗೆಯ್ಯುವೆನು ||೨೧೩||

ಖುಲ್ಲನೆ ತಿರ್ಯಕ್ ಪ್ರಾಣಿಯೊಳ್ ಜನಿಸಿಹ | ಭಲ್ಲುಕನೆಂದರಿತೆ ||
ಅಲ್ಲೆಲೊ ನಾ ಪರಮೇಷ್ಠಿ ಯಾಕಳಿಕೆಯೊ | ಳಲ್ಲುದಿಸಿಹೆ ಕೇಳು ||೨೧೪||

ಸೃಷ್ಟಿಯೊಳಿಹ ಭೂತಾತ್ಮಗಳಾ ಪರ | ಮೇಷ್ಠಿಯೊಳೊಗೆದಿಹುದು ||
ತಟ್ಟನೆ ಪೇಳಹಂಕರಿಸದೆ ನೀ ಗೆ | ಯ್ದಿಷ್ಟಾರ್ಥಗಳೇನು ||೨೧೫||

ವಾರಿಜಸಖನೊಳು ಶಪಥವ ಗೆಯ್ಯುತ | ಮೇರು ಮಹೀಧರವ ||
ಸಾರುತಲೊಂದಿನವೇಕೋವಿಂಶತಿ | ವಾರದಿ ಸುತ್ತಿಹೆನು ||೨೧೬||

ಅಳೆದಿಹೆನೊಂದೇ ಪದದೊಳಗೆಲೆ ಮೃಗ | ನಿಳೆಯೆಲ್ಲವ ನಾನು ||
ಬಲಪೌರುಷವಿನ್ನೇನೆಸಗಿಹೆ ನೀ | ತಿಳುಹೆನಗೀಕ್ಷಣದಿ ||೨೧೭||

ತ್ರೇತಾಯುಗದಿ ದಶ್ಯಾಸ್ಯನ ಸೇನಾ | ವ್ರಾತದ ದರ್ಪದಲಿ ||
ಘಾತಿಸಿದೆನು ತೃಣದಂದದಿ ಮನುಜನೆ | ಖ್ಯಾತಿಯ ನೀನರಿಯೆ ||೨೧೮||

ತೋರೆಲೊ ವಿಕ್ರಮ ಮುದಿ ಭಲ್ಲೂಕನೆ | ಮಾರಾಂತೆನ್ನೊಡನೆ ||
ಯಾರೊಳು ಪೌರುಷ ನುಡಿವೆಯಯಮಪುರ | ದಾರಿಯ ಪಿಡಿಸುವೆನು ||೨೧೯||

ರಾಗ ಶಂಕರಾಭರಣ ಮಟ್ಟೆತಾಳ

ಅರರೆ ಪೋರನೆನ್ನ ಕೆಣಕಿ | ಬರಿದೆ ಪ್ರಾಣ ನೀಗಿಕೊಂಬೆ |
ಪರಿಯ ನೋಡೆನುತ್ತ ತರುವ | ಮುರಿದು ಬಡಿದನು ||೨೨೦||

ಭರಕೆ ತಪ್ಪುತಾಗ ಶ್ರೀಶ | ನೊರೆದನೆಲವೊ ಮಣಿಯ ಕೊಡಲು |
ಪೊರೆವೆ ನಿನ್ನ ಸಾರಿ ಪೇಳ್ದೆ | ಕಲಹ ಬೇಡವೊ ||೨೨೧||

ಕ್ರೂರಕೋಪದಿಂದಲಾಗ | ಭಾರಿಗಿರಿಯ ಕಿತ್ತು ವೇಗ |
ಪೋರ ತಾಳೆನುತ್ತ ಜಾಂಬ | ವಂತನೆಸೆದನು ||೨೨೨||

ತಿರುಹೆ ಗದೆಯ ಸರಸಿಜಾಕ್ಷ | ಗಿರಿಯ ಚೂರ್ಣಗೆಯ್ಯಲಾಗ |
ಕೆರಳಿ ಜಾಂಬವಂತ ಸಿಂಹ | ನಾದ ಗೆಯ್ಯುತ ||೨೨೩||

ಪೊಡೆದ ಸಾಮಾನ್ಯ ಗಿರಿಯ | ನೊಡೆದೆಯೆಲವೊ ಮೇರುಶೈಲ |
ಪಿಡಿದು ನೆಗಹಿಬಿಡುವೆ ನೋಡೆ | ನುತ್ತ ಗಜರಿದ ||೨೨೪||

ರಾಗ ಭೈರವಿ ಅಷ್ಟತಾಳ

ಕಿರಿಬೆಟ್ಟನೊಳಗೆ ನಾನು | ಗೋವರ್ಧನ | ಗಿರಿಯನ್ನು ನೆಗಹಿರ್ಪೆನು ||
ವರಮಹಮೇರುಪರ್ವತಕಂಜೆ ನಿನಗಂಥ | ಗಿರಿಯ ಕೀಳಲು ಸಾಧ್ಯವೆ ||೨೨೫||

ಶರಧಿಗೆ ಸೇತುವನ್ನು | ಬಂಧನಗೆಯ್ಯು | ತ್ತಿರೆ ರಜತಾದ್ರಿಯನ್ನು ||
ಧರೆಯಿಂದ ನೆಗಹೆ ಭರ್ಗನು ಬಂದು ಎನ್ನೊಳು | ಪರಮ ಸಖ್ಯವ ಗೆಯ್ದನು ||೨೩೬||

ದುರುಳ ಹಿರಣ್ಯಾಕ್ಷನು | ಪಾತಾಳಕ್ಕೆ | ಧರೆಯನ್ನು ಒಯ್ದಿರ್ಪನು ||
ತೆರಳಿ ನಾನಾತನ ವಧಿಸಿ ತಂದಿಹೆ ವಸುಂ | ಧರೆಯ ನೀನದ ಬಲ್ಲೆಯ ||೨೨೭||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಲ್ಲಿ ವರಹನು ನಿನಗು ತತ್ಸಂ | ಬಂಧವೆಲ್ಲಿಹುದಲ್ಪ ಮಾನವ |
ಬಲ್ಲಿದರ ಪೆಸರಿಡಿದು ಜೀವಿಪೆ | ಯಲ್ಲ ಮರುಳೆ ||೨೨೮||

ಮರೆಯೆ ಪಿಂದಿನ ಭವದ ಜ್ಞಾನಗ | ಳಿರುವರೆಲೆ ತಿರ್ಯಕ್ಕು ಜೀವನ |
ಧರಿಸಿರುವ ಮೃಗ ನಿನಗೆ ಪೂರ್ವ | ಸ್ಮರಣೆಯಿಹುದೆ ||೨೨೯||

ಇರುತಿಹರು ವಂಚಕರು ಮಿಥ್ಯವ | ನರುಹಿ ಜೀವಿಪರೈಸೆ ಭುವನದೊಳ್ |
ಮೆರೆವನೊರ್ವೆನು ದಾಶರಥಿ ಮಹ | ಧುರಸಮರ್ಥ ||೨೩೦||

ಜ್ಞಾನಹೀನಗೆ ಕನಕಪರ್ವತ | ಮೇಣು ಮೃಣ್ಮಯ ಮಾಗಿ ತೋರ್ಪುದು |
ನೀನು ಮೃಗನದರಿಂದ ಶೂನ್ಯ | ಜ್ಞಾನಿ ದಿಟವು ||೨೩೧||

ನರನ ನೀ ಷಡ್ವೈರಿಬಾಧೆಯೊ | ಳಿರುವೆ ಜ್ಞಾನವಿಹೀನನಾಗಿಹೆ |
ಕರಿಯು ತಿರ್ಯಗ್ಜಂತು ಮೋಕ್ಷಕೆ | ತೆರಳಿತೆಂತು ||೨೩೨||

ರಾಗ ಭೈರವಿ ಏಕತಾಳ

ಹಿಂದಿನ ಭವಸುಕೃತಗಳು | ಒಲ | ವಿಂದಲೆ ಸುಜ್ಞಾನಗಳು ||
ಬಂದಾತ್ಮಗೆ ಪರಗತಿಯ | ತಾ | ಹೊಂದಿಪುದರಿತುಕೊ ಸ್ಥಿತಿಯ ||೨೩೩||

ಚರಿಸಿದ ಪುಣ್ಯದ ಫಲದಿ | ನಾ | ಧರಣಿಜೆಯರಸನ ಮುದದಿ ||
ಸ್ಮರಿಸುವ ಕಿಂಕರನಹೆನು | ಗೆಲ | ಲರಿಯದು ತೆರಳೈ ನೀನು ||೨೩೪||

ಒದರಿದಿರೆಲೊ ಪೌರುಷವ | ಎಲೆ | ಮುದಿಮೃಗ ಬಲಸಾಹಸವ ||
ಕದನದಿ ತೋರಿಸು ಬೇಗ | ನಿನ | ಗೊದಗಿತು ಮೃತಿ ನೋಡೀಗ ||೨೩೫||

ಘಳಿಲನೆ ಕಿಡಿ ಸೂಸುತ್ತ | ಮಹ | ಶಿಲೆಯನು ಮೇಲ್ನೆಗಹುತ್ತ ||
ಜಲಜಾಕ್ಷನಿಗಿಡಲಾಗ | ಪದ | ಚಲಿಸುತ ತಪ್ಪಿದ ಬೇಗ ||೨೩೬||

ರಾಗ ಶಂಕರಾಭರಣ ಮಟ್ಟೆತಾಳ

ಮುಷ್ಟಿಯನ್ನು ಬಲಿದು ಕ್ರೋಧಾ | ವಿಷ್ಟನಾಗಿ ಜಾಂಬವಂತ |
ತಟ್ಟನೆರಗೆ ಕೃಷ್ಣ ಕಂ | ಗೆಟ್ಟು ಛಲದಲಿ ||೨೩೭||

ಅರರೆ ಭಲ್ಲೂಕ ನಿನ್ನ | ಶಿರವ ಚೂರ್ಣಗೆಯ್ವೆನೆನುತ |
ಭರದಿ ಮುಷ್ಟಿಯಿಂದಲೆರಗೆ | ಕೆರಳಿ ಜಾಂಬವ ||೨೩೮||

ಕಡು ಬಲಾಢ್ಯನೆನುತಲರಿತು | ಝಡಿದು ಭುಜದಿ ಭುಜವ ತಿವಿಯೆ |
ಜಡಜನಾಭ ಮತ್ತೆ ಮುಷ್ಟಿ | ಯಿಂದಲೆರಗಿದ ||೨೩೯||

ಅರರೆ ಎನ್ನೊಳಿಷ್ಟು ಛಲದಿ | ಧುರವಗೆಯ್ದರಿಲ್ಲ ವಿಶ್ವಂ |
ಬರೆಯ ಸೃಜಿಸಿದಂಥ ಮಹಾ | ಪುರುಷ ನೀನೆಲಾ ||೨೪೦||

ಆರು ನಾನಾದರೇನು | ತೋರು ನಿನ್ನ ಸಹಸವೆನುತ |
ವಾರಿಜಾಕ್ಷನಾಗ ಕ್ರೋಧ | ವೇರಿ ನಿಂದಿರೆ ||೨೪೧||

ಸ್ಥಿರಚರಾದಿ ಸಕಲಭೂತ | ಭರಿತಬ್ರಹ್ಮಾಂಡ ನಿನ್ನೊ |
ಳಿರುವುದೆಂದೆ ತಿಳಿದೆ ನಿಜವ | ನರುಹಬೇಹುದಾ ||೨೪೨||

ಭಾಮಿನಿ

ಶರಣನಿಂತೆನಲಾಗ ಶ್ರೀಹರಿ |
ಕರುಣದೊಳು ಕ್ಷಮೆಯಾಂತು ವೇಗದಿ |
ಧರಿಸಿದನು ಶ್ರೀರಾಮರೂಪವನತಿ ವಿಲಾಸದಲಿ ||
ಪರಿಕಿಸುತ ಜಾಂಬವನು ನೇತ್ರದಿ |
ಸುರಿಸುತಾನಂದಾಶ್ರುವನು ಥರ |
ಥರಿಸಿ ಬಂದಡಿಗೆರಗಿ ಕರಗಳ ಮುಗಿದು ದೈನ್ಯದಲಿ ||೨೪೩||

ರಾಗ ಮೋಹನ ಆದಿತಾಳ

ರಾಮ ರಾಘವ ದಶರಥಬಾಲ | ಜಯ | ಸೀತಾಲೋಲ  || ಪಲ್ಲ ||

ರಾಮ ದಶಾಸ್ಯವಿಮರ್ದನ ಜಯ ಜಯ |
ರಾಮ ರಾಮ ಮಾಂ ಪಾಹಿ ಗುಣಾಕರ   || ಅ.ಪ ||

ಹರನಾ ಚಾಪವ ನೆಗಹಿದ ಧೀರ | ಧರಣಿಜೆಪತಿ ಶೂರ |
ವರಜಾಮದಗ್ನಿಮದಹರ | ದುರುಳರ ಸಂಹಾರ || ವರಪಿತನಾಜ್ಞಾನುಸಾರ |
ತೆರಳಿ ವಿಪಿನದೊಳು ದುರುಳ ವಿರಾಧನ |
ತರಿದು ಮುನೀಶರ ಪೊರೆದಿಹ ಮಹಿಮನೆ || ರಾಮ ||೨೪೪||

ಧೀರ ವಾಲಿಯ ಮಡುಹಿದ ಲೋಲ | ಸೂರ್ಯಜಪರಿಪಾಲ |
ಸೇರಿಸಿ ಕರಡಿಕಪಿಜಾಲ | ವಾರಿಧಿವಿಶಾಲ | ಮೀರೀಯುಬ್ಬುವ ಕಲ್ಲೋಲ ||
ಭಾರಿಯ ಗಿರಿಸಮ್ಮೇಳನಸೇತುವ |
ನೀರಜಾಕ್ಷ ನೀ ಗೆಯ್ದಿಹೆ ಸುಲಭದಿ || ರಾಮ ||೨೪೫||

ದುರುಳ ರಾವಣನ ನೀ ಸಂಹರಿಸಿ | ಶರಣನ ಪತಿಕರಿಸಿ |
ಧರಣಿಜೆಯ ಭರದಿಕರೆಸಿ | ಉರಿಯೊಳು ನೀ ಪೊಗಿಸಿ || ಪರಮಪಾವನೆಯವಳೆಂದೆನಿಸಿ | ಹರುಷದಿ ಸತಿಯೊಡಗೂಡುತಯೋಧ್ಯಾ |
ಪುರಕಯ್ದುತ ಸಿಂಹಾಸನವೇರಿಹ || ರಾಮ ||೨೪೬||

ಕಂದ

ಚರಣಕೆ ವಂದಿಸಿ ನುತಿಸುವ |
ಶರಣನ ಕಾಣುತ ಶ್ರೀಹರಿಯೆನ್ನೀತೆರದೊಳ್ ||
ಪರಿಪರಿ ನುತಿಸುವುದೇತಕೆ |
ಕೊರತೆಗಳೇನಿದೆ ಮನದೊಳಗರುಹೆನಲಾಗಳ್ ||೨೪೭||

ರಾಗ ಮೋಹನ ಅಷ್ಟತಾಳ

ದುಷ್ಟಮರ್ದನ ರಕ್ಷಿಸೊ | ನಿನ್ನೊಳು ಧುರ | ಗೊಟ್ಟಿಹೆನದ ಕ್ಷಮಿಸೊ || ಪ ||

ಕೆಟ್ಟಹಂಕಾರಪಥಕೆ ಎನ್ನಯ ಮನ | ಗೊಟ್ಟೆನು ದಯವಿರಿಸೊ | ಹೇ ದೇವ  || ಅ ಪ ||

ಸತಿಸುತರಾಸೆಯೊಳು | ಸಂಸಾರದ | ವ್ಯಥೆಯಾದ ನರಕದೊಳು ||
ಹಿತವೆಂದು ಪೊರಳುವ ಜನ್ಮ ನಿನ್ನಯ ನಾಮ | ಸ್ತುತಿಸದು ಅವಧರಿಸು | ಶ್ರೀರಾಮ ||೨೪೮||

ಏತಕಜ್ಞಾನವನ್ನು | ಕೊಟ್ಟಿಹೆಯೆನ | ಗೇತಕೀ ಜನ್ಮವನ್ನು ||
ಸೀತಾವಲ್ಲಭ ತವ ಮಾಯೆಯೊಳೆನ್ನನು | ನೀ ತಳುಕಿಕ್ಕಿಹೆಯ | ಶ್ರೀದೇವ ||೨೪೯||

ಭಾಮಿನಿ

ಅರಿಯೆ ನೀನಖಿಳಾತ್ಮನೆಂಬುದ |
ಧುರಕೆ ನಿಂದಿಹೆ ಸ್ವಾಮಿ ಮನದೊಳ |
ಗಿರಿಸದೌದಾಸಿನವ ಸಲಹೆಂದೆರಗಲಾಕ್ಷಣದಿ ||
ಶರಣ ಬಾ ಬಾರೆನುತ ಶ್ರೀಹರಿ |
ಭರದೊಳಾಲಿಂಗಿಸುತ ಮೋದದಿ |
ಜರಡುಮೃಗ ನೀನಲ್ಲವಿಂಗಿತವರಿತು ಬಂದಿಹೆನು ||೨೫೦||