ಬ್ರಿಟೀಶರು ಮೋಸ ಮಾಡಿ ಯುದ್ಧದಲ್ಲಿ ಜಯಶಾಲಿಗಳೆಂದು ಎಲ್ಲ ಕಡೆಗೆ ಹೇಳಿಕೊಳ್ಳುವ ಗೋಜಿಗೆ ಹೋಗಲಿಲ್ಲ. ತಮ್ಮ ಸೈನ್ಯ ಹಾಳಾದುದು ಥ್ಯಾಕರೆನಂತಹವರು ಮಡಿದು ಮಣ್ಣು ಸೇರಿದ್ದು ಅವಮಾನಕರವಾಗಿತ್ತು.

ಕಿತ್ತೂರಿನ ವೀರರು ಅರಮನೆಯ ಸಂಪತ್ತು ಆನೆ-ಕುದುರೆ-ಎತ್ತು-ಕತ್ತೆಗಳ ಮೇಲೆ ಹೇರಿ ಹೋದುದನ್ನು ಕಣ್ಣಾರೆ ಕಾಣಹತ್ತಿದರು. ಬ್ರಿಟೀಶ ಕುಹಕಿಗಳ ಬಾಲಬಡಕರಿಂದ ಅರಮನೆಯ ಸಂಪತ್ತು ವಿಪರೀತವಾಗಿ ಹೊರಹೊರಟಿತು.

ಈಗ ರಾಯಣ್ಣ ಕ್ರಾಂತಿಕಾರಿಯಾಗಿ ಪರಣಮನಿಸಲೇಬೇಕಾಯಿತು. ಹಲವು ಹನ್ನೆರಡು ಯೋಜನೆಗಳನ್ನು ಮಾಡತೊಡಗಿದನು.

ಬ್ರಿಟೀಶ ವಿರೋಧವನ್ನು ಮಾಡಲು ಹಲವಾರು ಪ್ರಸಂಗಗಳಲ್ಲಿ ಜನರಿಗೆ ತಿಳಿಸಿ ಹೇಳುತ್ತಿದ್ದನು.

ಬೈಲಹೊಂಗಲದಲ್ಲಿ ರಾಣಿ ಚನ್ನಮ್ಮನನ್ನು ಸರೆಯಲ್ಲಿಟ್ಟಿದ್ದರು. ಚೆನ್ನಮ್ಮ ಶಿವಪೂಜೆಯನ್ನು ಮಾಡಿಕೊಳ್ಳದೇ ಜಂಗಮ ಸೇವೆ ಮಾಡದೇ ಯಾವುದೇ ಆಹಾರದ ಅಗುಳನ್ನು ಬಾಯಲ್ಲಿ ಹಾಕುತ್ತಿದ್ದಿಲ್ಲ. ಜಂಗಮರಿಂದ ಸಂಗೊಳ್ಳಿ ರಾಯಣ್ಣನಿಗೆ ಆಗಾಗ ಚೆನ್ನಮ್ಮಾಜಿಯ ಸಮಾಚಾರ ತಿಳಿಯುತ್ತಿತ್ತು. ಚಿಂತೆಯಲ್ಲಿ ಚೆನ್ನಮ್ಮಾಜಿ ಮುಳಗಿ ಹೋಗಿದ್ದಾಳೆಂದು ತಿಳಿದು, ರಾಯಣ್ಣ ಹೇಗೆ ಮಾಡಿ ಭೆಟ್ಟಿಯಾಗಿ ಬರುವ ಹಂಚಿಕೆ ಹಾಕತೊಡಗಿದನು. ಬೇರೆ ಕಡೆಗೆ ಸೆರೆವಾಸದಲ್ಲಿಟ್ಟಿದ್ದ ಆಕೆಯ ಸೊಸೆಯರಾದ ವೀರವ್ವ ಮತ್ತು ಜಾನಕಿಬಾಯಿ ಅವರನ್ನು ಅದೇ ಸೆರೆಮನೆಯಲ್ಲಿ ಬೇರೆ ಬೇರೆ ಕೊಠಡಿಯೊಳಗೆ ಇರಿಸಿದ್ದರು.

ರಾಯಣ್ಣ ತಾನು ಜಂಗಮವೇಷ ಧರಿಸಿ, ತನ್ನ ಹಾಗೂ ಸಂಗಡಿಗರ ವಿಷಯವನ್ನು ತಿಳಿಸಿ ಬರಬೇಕೆಂದು ಹಾಕಿದ ಹೊಂಚು ಸಮೀಪಿಸಿತು. ರಾಯಣ್ಣ ಒಂದು ದಿನ ಬೆಳಗಿನ ಜಾವ ಜಂಗಮ ವೇಷ ಧರಿಸಿ, ಹಣೆಗೆ ವಿಭೂತಿ, ಕಾವಿಯ ನಿಲುವಂಗಿ ತೊಟ್ಟು, ತನ್ನ ಉದ್ದಕೂದಲುಗಳನ್ನು ಜಂಗಮರಂತೆ ಮುಡಿಕಟ್ಟಿಕೊಂಡು, ಕಾಲಲ್ಲಿ ಕೊಡ್ಡದ ಆವಿಗೆಗಳನ್ನು ಮೆಟ್ಟಿ, ಬಗಲಲ್ಲಿ ಕಾವಿಯ ಚೀಲವನ್ನು ಹಾಕಿಕೊಂಡು, ಯಾರಿಗೂ ತಿಳಿಯದಂತೆ ಸೆರೆಮನೆಯ ಒಳಹೊಕ್ಕನು. ತನಗೆ ಭೆಟ್ಟಿಗಾಗಿ ಜಂಗಮರು ಬಂದರೆಂದು ಚೆನ್ನಮ್ಮಾಜಿಯು ನಮಸ್ಕಾರ ಮಾಡಲು ಬಾಗುತ್ತಿರುವ ವೇಳೆಗೆ, ರಾಯಣ್ಣನು ತಾನಾಗಿಯೇ ಆಕೆಗೆ ಶಿರಸಾಷ್ಟಾಂಗ ನಮಸ್ಕಾರಗಳನ್ನು ಹಾಕಿದನು.

ಚೆನ್ನಮ್ಮಾಜಿಗೆ ಆಶ್ಚರ್ಯವಾಗದೇ ಇರಲಿಲ್ಲ! ‘ನಾನು ಜಂಗಮನದಲ್ಲವ್ವ ನಿಮ್ಮ ಪ್ರೀತಿಯ ಮಗ, ಬಂಟನಾದ ರಾಯಣ್ಣ ಬಂದಿದ್ದೇನೆ’ ಎಂದಾಗ ಸಂತೋಷದ ಕಣ್ಣೀರು ಹರಿಯದೇ ಇರಲಿಲ್ಲ! ರಾಜ್ಯದ ಸ್ಥಿತಿಗತಿ ಕಂಡು ಮನ ಮರುಗಿತು. ನಮ್ಮವರು ಮಾಡಿದ ಮೋಸ ರಾಯಣ್ಣ ನೀವೆಲ್ಲರೂ ಗೆಲ್ಲುತ್ತಿದ್ದಿರಿ. ದೇಶ ದ್ರೋಹಿಗಳು ನಮಗೆ ಮೋಸ ಮಾಡಿದರು.

ಕೊನೆಗೆ ರಾಯಣ್ಣ ವೀರರು ಮಾಡುವ ಪ್ರತಿಜ್ಞೆಯನ್ನು ಮುಷ್ಟಿ ಮಾಡಿ ಕೈ ಮೇಲಕ್ಕೆ ಎತ್ತಿ ಹೇಳಿದನು. ಹಲವು ತಂತ್ರಗಳನ್ನು ಮಾಡಿ, ಗೆದೆಯುವೆನು.

ಅಕ್ಕ ನಿಮ್ಮಪ್ಪು ಈ ರಾಯ
ಗೆದ್ದ ಕಿತ್ತೂರು ತಂದು ಉದ್ದ ಬೀಳುವೆ ತಾಯಿ
ಕದ್ದ ಮಾತಲ್ಲ ನಿಮ್ಮಣೆ ! ಇಲದಿರಕ
ಬಿದ್ದು ಹೋಗುಗೆ ರಣದಾಗೆ ||

ಚೆನ್ನಮ್ಮಾಜಿಗೆ ಸಮಾಧಾನವಾಯಿತು. ರಾಯಣ್ಣನು ಮಾಡುವ ಕ್ರಾಂತಿಯ ಖರ್ಚಿಗಳಿಗಾಗಿ ತನ್ನ ಬಳಿಯಲ್ಲಿರುವ ಆಭರಣಗಳನ್ನು (ಬಂಗಾರ + ವಜ್ರ) ಕೊಟ್ಟು ಕಳುಹಿದಳು. ಮತ್ತು ರಹಸ್ಯವಾಗಿ ಇಟ್ಟಿರುವ ಸಂಪತ್ತನ್ನು ತೆಗೆದುಕೊಳ್ಳಪ್ಪ ಎಂಬ ವಿವರಗಳನ್ನಿತ್ತಳು. ರಾಯಣ್ಣ ಮತ್ತೆ ನಮಸ್ಕರಿಸಿ ಆ ವೇಷದಿಂದಲೇ ಹೊರಬಂದನು. ಬಹುದೂರ ನಡೆದನು. ಇವನೊಬ್ಬ ಜಂಗಮನೆಂದೇ ಜನ ಗುರುತಿಸಿದರು.

ರಾಯಣ್ಣ ಸಂಗೊಳ್ಳಿಗೆ ಬಂದನು. ತನ್ನ ಮನೆಯ ವ್ಯವಸ್ಥೆ ನೋಡಲು ಸಿದ್ಧಣ್ಣನಿಗೆ ತಿಳಿಸಿದನು. ತಾಯಿ ಕೆಂಚವ್ವ ಚಿಂತಾಕ್ರಾಂತಳಾಗಿದ್ದಳು. ತನ್ನ ತಂದೆ ಭರಮಣ್ಣನ ನೆನಪಾಯಿತು. ಅದದೆಲ್ಲವನ್ನು ಮುಂದಿನವರು ನೆನಸತಾರ ಅವ್ವಾ. ಯುದ್ಧದಲ್ಲಿ ಇದೊಂದು ಸಲ ಗೆಲ್ಲಬೇಕಾಗಿತ್ತು. ನಮ್ಮವರ ಮೋಸತನದಿಂದ ಹೀಗಾಯಿತು. ನಾಡಿನಲ್ಲಿ ಮತ್ತೆ ಕೂಡತಾರ, ಎಲ್ಲರೂ ಕೂಡಿ ಕಿತ್ತೂರ ಸ್ವತಂತ್ರಗೊಳಿಸಿ, ಇಂಗ್ರೇಜರನ್ನು ದೂರಹಾಕಿ ಎಂದು ಹೇಳುತ್ತಿರುವಾಗ ಕೆಂಚಮ್ಮ ತಡೆದಳು.

ದೂರ ಹಾಕತೀರಿ ಅಂದ್ರ ಎಲ್ಲಿಗೆ ಹ್ಯಾಂಗಪಾ?
ನಿನಗೇನೇನ ಬಲಾ ಐತಿ? ಎದು ಕೆಂಚಮ್ಮ ಕೇಳಿದಳು.

‘ಅವ್ವಾ ನಿನ್ನ ಬಲಾ ಐತಿ, ತಾಯಿ ಚೆನ್ನಮ್ಮನ ಬಲಾ ಐತಿ, ಈನಾಡಿನ ಭೂಮಿತಾಯಿ ಬಲಾ ನೀಡತಾಳ ಇನ್ನ ಯುದಧ ಮಾಡಿ, ಚೆನ್ನಮ್ಮಾಜಿಯನ್ನು ಹೊರತಂದು, ನಿನ್ನನ್ನು ಆಕಯ ಹತ್ತರ ಕರೆಯಿಸಿ ಗೌರವ ಮಾಡತೇವಿ. ಯವ್ವಾ ನಿನ್ನ ದಯಾ ಇರಲಿ’ ಎಂದು ಹೇಳಿ ಹೊರಟೇಬಿಟ್ಟ ರಾಯಣ್ಣ.

ಮೊಗಲಾಯಿ ಸೀಮೆಗೆ ಹೋಗಿ ಸುರಪುರದ ಅರಸರಿಂದ ಸೈನ್ಯ ತೆಗೆದುಕೊಳ್ಳುವ ವಿಚಾರ ಮಾಡಿದನು. ಅದು ಬಹುದೂರ ಇರುವುದರಿಂದ ಕುದುರೆಯ ಮೇಲೆ ಸವಾರಿ ಮಾಡಬೇಕೆಂಬ ವಿಚಾರವನ್ನು ಬಿಚ್ಚಗತ್ತಿ ಚನಬಸಪ್ಪ ತಿಳಿಹೇಳಿದನು.

ರಾಯಣ್ಣನಿಗೆ ಅರಮನೆಯಲ್ಲಿ ಸಾರಗುದುರೆ ಒಂದು ಗೊತ್ತಾಗಿತ್ತು. ಈಗ ಅದು ಹೇಗೆ ದೊರಕುವುದು?

ಇದಕ್ಕೆ ಚನಬಸಣ್ಣ ಅದನ್ನು ಹತ್ತಿ ರಾಯಣ್ಣನಿಗೆ ಕೊಡುವುದಾಗಿ ತಿಳಿಸಿದನು.

ಮಾರನೆಯ ದಿನ ಕುದುರೆಯನ್ನು ತಂದು ಚನ್ನಬಸಪ್ಪ ರಾಯಣ್ಣನಿಗೆ ಕೊಟ್ಟನು. ತಮ್ಮ ಮೊದಲಿನ ವೀರರು ಬಾಳಗುಂದಿ ಅಥವಾ ಹಂಡಿಬಡಗನಾಥ ದೇವಸ್ಥಾನದಲ್ಲಿ ಇರಲು ತಿಳಿಸಿದನು. ತಾನು ತಡವಾಗಿಯಾದರೂ ಬಂದೇ ಬರುತ್ತೇನೆಂದು ಸೈನಿಕರಿಗೆ ಊಟದ ವೆಚ್ಚ ನಿಭಾಯಿಸುವುದನ್ನು ತಿಳಿಸಿದನು ರಾಯಣ್ಣ.

ಸರಾಗವಾಗಿ ಸಾರಕುದುರೆಯನ್ನು ಹತ್ತಿ, ಹಗಲು ರಾತ್ರಿ ಎನ್ನದೆ ಸುರಪುರ ಸೇರಿದನು. ಸುರಪುರದ ಅರಸನಿಗೆ ರಾಯಣ್ಣನು ನಮಸ್ಕರಿಸಿ, ತನ್ನ ಪರಿಚಯವನ್ನು ತಿಳಿಸಿದನು.

ಧೀರ ಹೌದೋ ರಾಯನಾಯಕ
ಹಾರಿ ಹನ್ನೆರಡಕ್ಕಡಿ ಜಿಗದಾ
ಅರಸ ನೋಡಿದವನ ಕಣ್ಣಾರಾ
ಅರಸ ಮೆಚ್ಚಿ ಹರುಷವಾಗಿ
ಸರ್ಜಾ ನಿನಗೆ ಸರಿ ಇಲ್ಲೆಂದಾ
ಏನ ಬೇಡತಿ ಬೇಡ ಎಂದ ರಣ ಸೂರಾ

(ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ, ಪುಟ-೨, ನಿಂಗಣ್ಣ ಸಣ್ಣಕ್ಕಿ) ರಾಯಣ್ಣನ ಈ ವೀರತನವನ್ನು ಕಂಡು ಅವನಿಗೆ ಸೈನ್ಯ ಕೊಡಲು ಸಜ್ಜಾದನು. ಬ್ರಿಟೀಶರನ್ನು ಹೊರ ಹಾಕುವ ಹಂಚಿಕೆಯನ್ನು ಅರಸರೆದುರು ವಿವರಿಸಿದನು. ಹಾಗೇ ಶಿವನಗುತ್ತಿಯ ಅರಸನಲ್ಲಿ ಸಹಾಯ ಕೇಳಿದಾಗ, ಅವನಿಗೊಬ್ಬ ವಿರೋಧಿ ಗಂಟು ಬಿದ್ದಿದ್ದನು. ಅರಸನ ವಿರೋಧದ ಈ ರಾಕ್ಷಸನು ಸಂಹಾರವಾಗಬೇಕಿತ್ತು. (ಈ ಶತಮಾನದಲ್ಲಿ ವೀರಪ್ಪನ್‌ಎಂಬವನು ಕರ್ನಾಟಕ ಸರಕಾರಕ್ಕೂ ತಮಿಳುನಾಡಿಗೂ ವಿರೋಧಿಯಾಗಿರುವ ನರಹಂತಕ ಗಾಡುಗಳ್ಳ ವೀರಪ್ಪನ್‌ತರಹ) ಹೊಂಕಳಗಂಟಿ ಭರಮ ಎಂಬುವನು ಗುಡ್ಡದಲ್ಲಿ ವಾಸಾಗಿದ್ದನು. ಅವನ ಹೊಟ್ಟಿ ನೋಡಿ ಎಷ್ಟೋ ಜನ ಅಂಜುತ್ತಿದ್ದರು. ಹೊಟ್ಟೆಯ ಮೇಲೊಂದು ದೊಡ್ಡ ಗಂಟಿ ಕಟ್ಟಿಕೊಂಡಿದ್ದನು. ಹಿಂಬಾಲು ಮೂರುನೂರು ಜನರನ್ನು ಸಾಕಿದ್ದನು. ಈ ಭರಮನನ್ನು ಸಂಹರಿಸಿದರೆ ಬೇಡಿದ್ದನ್ನು ನೀಡಲು ಸಜ್ಜಾದ ಅರಸನು ರಾಯಣ್ಣನಿಗೆ ಸ್ಥಳವಿವರಗಳನ್ನು ತಿಳಿಸಿದನು. ಈ ವಿಷಯ ಕುರಿತು ರಾಯಣ್ಣನ ವೀರವೃತ್ತಿಯನ್ನು ಗೀ ಗೀ ಹಾಡಿನಿಂದ ತಿಳಿಯೋಣ.

ಚಾಲ:

ಗುಡ್ಡದಾಗ ವಾಸ ಮಾಡಿದ್ದ ಭರಮಣ್ಣ
ವಿನಯದಿಂದ ನಮಸ್ಕಾರ ಮಾಡಿದ ರಾಯಣ್ಣ ||ಗೀ
ಪ್ರಜೆಗಳೆಲ್ಲ ಒಂದೇ ಆಗೋಣ
ಬ್ರಿಟೀಶರನ್ನ ದೇಶ ಬಿಟ್ಟ ಓಡಿಸೋಣ ||ಗೀ s
ಇದಕ ಒಪ್ಪಲಿಲ್ಲ ಭರಮಣ್ಣ
ಕೋಪತಾಳಿ ಬಿಟ್ಟಾನಾಗ ರಾಯಣ್ಣ ||ಗೀ s

ಕೂಡಪಲ್ಲ

ಎದುರು ಬದರು ನಿಂತ ಹಂತೇಲಿ ಹೊಡಿಯಾಂವ
ಕರಾರ ಇಟ್ಟಾರ ಮೂರ ಬಾರಾ |
ಹುಟ್ಟಿ ರಾಯಣ್ಣ ಬಂಟ ಬಹಾದ್ದೂರಾ
ಮಾರುತಿ ಅವತಾರಾ ||

೩ ನೇ ನುಡಿ,

ಮೂದಲಿಗೆ ನಾನೇ ಹೊಡಿಯಾಂವನೆಂದಾನ
ಶಿವನಗುತ್ತಿಯ ಶೂರಾ |
ಬಲಭಾಗಕ್ಕೆ ನಿಂತ ಕತ್ತಿಯ ನೆವರ್ಯಾನ
ಜಿಗದ ನಿಂತ ದೂರಾ |
ಎಡಗಡೆಯ ನಿಂತ ಮತ್ತೊಮ್ಮೆ ಹೊಡೆದಾನ
ಅದು ತಪ್ಪಿತ ಪೂರಾ |
ಹೊಟ್ಟಿಗೆ ಹೊಡೆಯಬೇಕಂತ ಎದುರಿಗೆ ನವರ್ಯಾಣ
ಜಿಗದಾನ ಅಂತರಾಗಿ ರಾಯಣ್ಣ ||
ಶಿವನಗುತ್ತಿ ಪುಂಡನ ಪಾಳೆಯು ಮುಗಿಯಿತು
ಕರಾರ ಪ್ರಕಾರ ಮೂರಾ
ರಾಯಣ್ಣ ಕಾಯಾಗ ಕತ್ತಿ ಹಿಡಿದ
ಬಲಭೀಮನ ಅವತಾರಾಗಿ ||
ಒಂದೇ ಏಟಿಗೆ ಹೊಂಕಳಗಟ್ಟಿ
ಭರಮನ ರುಂಡ ಕೈಯಾಗ ಪೂರಾ
ಭರಮನ ದಂಡೆಲ್ಲ ಕೂಡಿಹಾಕ್ಯಾರ
ರಾಯಣ್ಣನ ಜಯಕಾರಾs |

ನಿಮ್ಮ ಸಂಗಡ ನಾವು ಬರತೇವಂತ
ಜಯಕಾರ ಹೇಳುತ ಹಿಂದಿಂದ ಹೊಂಟಾರಾ.
ಸುರಪುರದ ಪಾಲಿಗೆ ರಾಯಣ್ಣ
ಆಗ್ಯಾನ ಸಾಕ್ಷಾತ ದೇವರಾ ||

ಬಂಡಿತುಂಬ ಆಗೇತಿ ಭರಮನಾ ಹೆಣಾ
ನೋಡಾಕಾ ಕೂಡೇತಿ ಸುರಪುರದ ಜನಾ
ಜನರಿಗಾಗ್ಯಾನ ರಾಯಣ್ಣ ಸಾಕ್ಷಾತ
ಪಾಂಡವರೊಳಗಿನ ಶೂರ ಭೀಮಾ ||
ಹರುಷವಾಗಿ ಅರಸರಾಯಣ್ಣಗ
ದಂಡ ಕೊಟ್ಟಾನ ಐನೂರಾ ಮತ್ತ ಬಂಗಾರಾ.

[1]

ದಂಡ ಪಡೆದುಕೊಂಡು, ಸಂಗೊಳ್ಳಿ ರಾಯಣ್ಣ, ದಂಡಿಯೊಡನೆ ನೇರವಾಗಿ ಕಿತ್ತೂರ ನಾಡಿಗೆ ಬರುತ್ತಾನೆ. ಅಲ್ಲಿ ಗಜವೀರ ರಾಯಣ್ಣನ ದಂಡು ಬರುವುದನ್ನು ದೂರದ ಸಪ್ಪಳದಿಂದಲೇ ತಿಳಿಸುತ್ತಾನೆ.

ಬಾಳೆಗುಂದದ ಹಳ್ಳಕ ದಂಡು ಕೂಡೇತಿ
ದಂಡದಲಬಾರಾ ಪೂರಾ ||

ಇವರನ್ನು ಹುಡುಕುತ್ತ ಇಂಗ್ರೇಜಿಯವರ ದಂಡು ಬಂದುದು ಇವರಿಗೆ ತಿಳಿಯಿತು.

ಇದನ್ನು ಕೇಳಿ ಗಜವೀಋ ಹೇಳತಾನ
ಮಾಡ ಹತಾರ-ಬಂದೂಕ ತೈಯಾರ ||
ಮುತ್ತಿಗಿ ಹಾಕಿ ಇಂಗ್ರೇಜರ ದಂಡೆಲ್ಲ
ಹಿಂದ ಮುಂದ ಮಾಡ್ಯಾರ ಸಂವಾರ ||
ಸಿಂದಿ-ಸರಾಯಿ ಕುಡಿಯೂತ ಚೆನ್ನಮ್ಮಗ
ಜಯಕಾರ ಹೇಳೂತ ಹೊಂಟಾರಾ ||
[2]

ಕ್ರಿ.ಶ. ೧೮೨೯ ರಲ್ಲಿ ಬ್ರಿಟೀಶರ ವಿರುದ್ಧ ಹೋರಾಡಲು ಸಜ್ಜಾದ ಸಂಗೊಳ್ಳಿ ರಾಯಣ್ಣನಿಗೆ ಸುರಪುರದ ರಾಜಾ ಕೃಷ್ಣಪ್ಪ ನಾಯಕನು ೩೦೦ ಜನ ಬೇಡ ಪಡೆಯನ್ನು ಬೆಂಬಲಿಸಲು ಕಳುಹಿಸಿ ಕೊಟ್ಟ ಎಂಬುದಾಗಿ ಸುರಪುರ ಕಾಗದ ಪತ್ರಗಳು ಸಾಕ್ಷಿ ನುಡಿಯುತ್ತಿರುವುದಾಗಿ ಸುರಪುರ ಬಂಡಾಯವನ್ನು ವರದಿ ಮಾಡಿರುವ ವಾಲ್ಮೀಕಿ ಬಂಧು ಪತ್ರಿಕೆ ಸಂಪುಟ ೧, ಸಂಚಿಕೆ ೧, ಪು. ಕ್ರಿ.ಶ. ೧೯೯೬ ರಲ್ಲಿ ಸಾಕ್ಷಿ ಹೇಳಿದಂತಿದೆ.

ಸಂಗೊಳ್ಳಿ ರಾಯಣ್ಣನು ಬ್ರಿಟೀಶರ ಜೊತೆ ಯುದ್ಧ ಮಾಡುವ ತಂತ್ರ ಅತ್ಯಂತ ಕುತೂಹಲಕಾರಿಯಾಗಿರುತ್ತಿತ್ತು. ಅವನು ವೈರಿಗಳ ಮೇಲೆ ಆಕ್ರಮಣ ಮಾಡುವ ರೀತಿ ಅವನಿಗೊಬ್ಬನಿಗೆ ಮತ್ತು ತನ್ನ ಆತ್ಮೀಯನೊಬ್ಬನಿಗೆ ಮಾತ್ರ ತಿಳಿದಿರುತ್ತಿತ್ತು. ದಂಡಿನವರಿಗೆ ಆಜ್ಞಾಪಾಲನೆ ಮಾತ್ರ ಗೊತ್ತಿರುತ್ತಿತ್ತು. ರಾಯಣ್ಣನು ತಾನು ಒಂದೆಡೆ ಇದ್ದು ಮತ್ತೊಂದು ಇರುವಂತೆ ತೋರಿಸುತ್ತಿದ್ದನು. ರಾಯಣ್ಣನು ಯುದ್ಧ ತಂತ್ರಗಾರನೂ ಯುದ್ಧ ನಿಪೂಣನೂ ಆಗಿದ್ದನೆಂದು ಒಂದು ಪ್ರಸಂಗವನ್ನು ಶಾಹೀರ ಶ್ಯಾಮರಾವ ವರ್ಣಿಸಿರುವನು.

ಬಹಾದ್ದೂರ ಇಂಗ್ರೇಜಿಯವರ ದಂಡ ಬಂದಿತೊ ಲಗುಬಗಿ
ಕೇಪ ಬಾಳಿಗುಂದಿ ಗುಡ್ಡಕ ಹಾಕ್ಯಾರೋ ರಾಯಣ್ಣಗ ಹೋಗಿ
ಅವನ ಕಲ್ಪನಾ ತಿಳಿಯಲಾರಕ ಇಲ್ರಿ ಯಾರ್ಯಾರಿಗೂ
ಗುಡ್ಡದೊಳಗೆ ಇರುವಂತಹ ಗಿಡಗಂಟಿಗಳನ್ನೆಲ್ಲ
ಮಂಡಮಾಡಿ ಅರಿವಿಸುತ್ತಿ ಹಚ್ಯಾರೋ ಬ್ಯಾಗಿ

ರಾಯಣ್ಣನ ದಂಡ ಇಲ್ಲೆ ಐತಿ, ಮಾಡತೈತಿ ಅನ್ನ ಅಡುಗಿ
ಉರಿಯ ನೋಡಿ ಭ್ರಮಾ ಆಗಿ. ಇಂಗ್ರೇಜರ ಬಿಗಲ ಮಾಡಿ
ಬಂದಾರೋ ಲಗುಬಗಿ, ಗುರಿ ಹೂಡಿಹೊಡದಾರೋ
ಕತ್ತಲ ಕವದೀತ ಆಗಿ ತುಂಬಿ ಹೂಗಿ ||
ಕೂಗ ಹೊಡೆದೋ ರಾಯಣ್ಣ
, ಅವನ ದಂಡು ಬಂತೊ ವಾರ್ಯಾಗಿ
ಎಳದ ಎಳದ ಕೊಂದ್ರೊ ಇಂಗ್ರೇಜಿಯವರನ್ನಾ
ತುಳ ತುಳದ ಒಬ್ಬಕನ್ನಾ ಹೊರಹೊರಳಿಸಿ ತರದಾರೊ
ನಿತ್ತ ಚಿತ್ತ ಬಲ್ಲಾಂಗ ಕತ್ತಿಲಿ ರಾಯಣ್ಣ ಕಡದಾನೊ
ಸುತ್ತ ಬಿದ್ದಾವ ಹೆಣ ರಕ್ತ ಮಾಂಸ ತಿನ್ನಾಕ
ಸುತ್ತು ತಡೆ ಮುತ್ತಿದಾವ ಹದ್ದುಕಾಗಿ. [3]

ಸಂಗೊಳ್ಳಿ ರಾಯಣ್ಣನು ಯುದ್ಧ ನಿಪುಣನೆನ್ನಲಿಕ್ಕೆ ಲಾವಣಿಕಾರ, ಅವನ ತಂತ್ರವನ್ನು ವಿವರಿಸಿದ್ದಾನೆ. ಗಿಡ-ಗಂಟಿಗಳ ನೆತ್ತಿ ಕಡಿದು, ರುಂಬಾಲು ಧರಿಸಿದಂತೆ ಗಡಿಗಿಗಳನ್ನು ಡಬ್ಬುಹಾಕಿ, ಅವುಗಳಿಗೆ ಸುಣ್ಣ ಬಡಿದು, ರಾತ್ರಿ ವೇಳೆಯಲ್ಲಿ ಅಲ್ಲಲ್ಲಿ ಅಗ್ನಿಪುಟಿ ಮಾಡಿದ ನಂತರ, ಇವರು ಸೈನಿಕರು ಎಂದು ಭ್ರಮಿಸಿ ಆಂಗ್ಲರ ಸೈನ್ಯ ಗುರಿ ಇಡುತ್ತಿರುವಾಗಲೇ ಹಿಂದಿನಿಂದ ಬಂದು ರಾಯಣ್ಣನ ಸೈನಿಕರು ಆಂಗ್ಲರ ಚೆಂಡು ತೆಗೆದಿಡುವ ದೃಶ್ಯ ಬಹು ಮಾರ್ಮಿಕವಾದುದು.

ಇದೇ ರೀತಿಯಲ್ಲಿ ಸಂಗೊಳ್ಳಿ ರಾಯಣ್ಣನು ಬ್ರಿಟೀಶ ಸೈನಿಕರು ಇರುವ ಸ್ಥಳಗಳನ್ನು ಗೊತ್ತು ಮಾಡಿದನು. ಸುತಗಟ್ಟಿಯಲ್ಲಿ ಒಂದಿನ ರಾಯಣ್ಣ ಅಡಗಿದ್ದಾನೆಂದು ಸುದ್ದಿ ಹಬ್ಬಿ, ಗುಡ್ಡಕ್ಕೆ ಮುತ್ತಿಗೆ ಹಾಕಿದಾಗಲೂ ದೇಶನೂರ ಗುಡ್ಡದಲ್ಲಿ ರಾಯಣ್ಣನ ಸೈನ್ಯ ಇದೆ ಎಂದು ಕೇಳಿ ಮಾಡಿದ ದಾಳಿಯಲ್ಲೂ ಬ್ರಿಟೀಶ ಸೈನಿಕರು ಹತ್ಯೆಗೊಳಗಾದರು. ರಾಯಣ್ಣನೊಬ್ಬ ಮಹಾಧೀರ-ರಣಗಂಭೀರನಾಗಿ ಬ್ರಿಟೀಶರಿಗೆ ತೋರಿದನು.

ಒಂದು ಕಡೆಗೆ ಸುರಪುರದ ದಂಡು ಭಯಂಕರವಾಗಿ ಬಂದಿದೆ ಎಂಬ ವದಂತಿ ಹಬ್ಬಿತು.

ಸಂಗೊಳ್ಳಿ ರಾಯಣ್ಣ ಸಾವಿರಾಳಿನ ಭಂಟ
ಸಾಗರಗುದರಿಯ ಏರ್ಯಾನೋ| ರಾಯಣ್ಣ
ಸುರಪುರದ ದಂಡ ತಂದಾನೋs ||

ಮತ್ತೊಂದು ಕಡೆಗೆ ಚೆನ್ನಮ್ಮ ರಾಣಿಯು ರಾಯಣ್ಣನಿಗೆ ಹೇಳಿ ಕಳುಹಿ, ಬ್ರಿಟೀಶರನ್ನೆಲ್ಲ ಹೊಡೆ ಎಂದಿರುವಳು ಎಂಬ ಸುದ್ದಿ ಹಬ್ಬಿತು. ಇದರಿಂದ ಜನರು ಹುರುಪುಗೊಂಡರು. ಆಂಗ್ಲರು ಮಾತ್ರ ಅಂಜಿಕೆಯಿಂದಾಗಿ ಓಡಾಟಮಾಡುತ್ತಿದ್ದರು.

ಹತ್ತ ಲಡಾಯಿ ಮಾಡಿ ಮತ್ತ ತಯಾರಾಗಿ
ಕತ್ತು ಹಿಚಿಕ್ಯಾರೋ ಪಿರಂಗ್ಯಾರ ನೋ | ಚೆನ್ನಮ್ಮ
ಮತ್ತ ರಾಯಣ್ಣನ ಕರೆ ಕಳುವಿದಳೋs ||

ಸಂಪಗಾವಿಯ ಆಕ್ರಮಣ, ದೇಶನೂರ ಗುಡ್ಡದ ಆಸರೆ, ಹಂಡಿಬಡಗನಾಥನ ಅಡವಿ, ಕೆಕ್ಕೇರಿಯಲ್ಲಿಲ ದೊರಕುವ ಬ್ರಿಟೀಶ ಸುದ್ದಿಗಳು ರಾಯಣ್ಣನಿಗೆ ಮತ್ತು ಅವರ ದಂಡಿನವರಿಗೆ ಮಹತ್ವದ ಸಂಗತಿಗಳಾದವು. ಈ ಪ್ರದೇಶವು ದಟ್ಟ ಅರಣ್ಯದಿಂದ ಕೂಡಿದ್ದು ಇದ್ದು, ಕಿತ್ತೂರಿನ ಬಂಟರು ಈ ಪ್ರದೇಶದ ಲಾಭ ಪಡೆಯುತ್ತಿದ್ದರು.

ಗೆರಿಲ್ಲಾ ಮಾದರಿಯ ಯುದ್ಧ ರಾಯಣ್ಣನ ದಂಡಿನವರಿಗೆ ಸಾಧಿಸುತ್ತಲೇ ಇತ್ತು. ಬ್ರಿಟೀಶರಿಗೆ ರಾಯಣ್ಣನ ಇರುವಿಕೆಯ ಸ್ಥಾನವನ್ನು ಗುರುತಿಸುವುದೇ ಕಷ್ಟವಾಯಿತು. ಈ ಪ್ರದೇಶವು ಸಾಮಾನ್ಯ ಜನರಿಗಾಗಲೀ ಅಥವಾ ಬ್ರಿಟೀಶರಿಗಾಗಲೀ ತಿಳಿಯುತ್ತಿರಲಿಲ್ಲ. ಹಂಡಿಬಡಗನಾಥನ ಎತ್ತರ ಪ್ರದೇಶದಿಂದ ಬ್ರಿಟೀಶ ಸೈನಿಕರ ಸುಳಿವು ಗೊತ್ತಾದಾಗ ಒಮ್ಮೆಲೇ ದಾಳಿ ಮಾಡಿ ಮತ್ತೆ ಆ ನಿಟ್ಟಿಗೆ ಸೇರುತ್ತಿದ್ದರು.
[1] ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ, ಡಾ. ನಿಂಗಣ್ಣ ಸಣ್ಣಕ್ಕಿ ತೃತೀಯ ಮುದ್ರಣ ವಿದ್ಯಾನಿಧಿ ಪ್ರಕಾಶನ, ಗದಗ. ಪು. (೮೪-೮೫)

[2]                               ”

[3]    ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ, ಸಂ.ಡಾ. ನಿಂಗಣ್ಣ ಸಣ್ಣಕ್ಕಿ (ಪುಟ ೨೧ ಮತ್ತು ೨೨