ವಾರ್ಧಕ
ಕಾಮಿನಿಯ ಕಠಿಣತರ ವಾಕ್ಯಮಂ ಕೇಳ್ದು ಶ್ರೀ
ರಾಮ ರಾಮಾಯೆಂದು ಕರ್ಣವೆರಡಂ ಮುಚ್ಚಿ
ಭೂಮಿಯೊಳಗೇಳಾಜ್ಞೆಯಂ ಬರೆದಿದಂ ಮಿರಿ ಮುಂದಡಿಯನಿಡದಿರೆಂದು ||
ಸೋಮಾರ್ಕಭೂಮಿದೇವಿಯ ಸಾಕ್ಷಿಯಾಗಿಟ್ಟು
ತಾ ಮನದಿ ನೊಂದುಕೊಂಡಾಕ್ಷಣದೊಳಯ್ದಿದಂ
ರಾಮಚಂದ್ರನ ಪಾದದೆಡೆಗಿತ್ತಲಾದ ವೃತ್ತಾಂತಂಗಳಂ ಲಾಲಿಸಿ || ||೭೮||
ರಾಗ ಸೌರಾಷ್ಟ್ರ ತ್ರಿವುಡೆತಾಳ
ದೇವ ಲಕ್ಷ್ಮಣನಿಂತು ಮಣಿದಾ |
ದೇವಿಯಳ ಬಳಿಯಿಂದ ಪೊರಡಲು |
ದೇವತೆಗಳಿಗೆ ಸೆರೆಯ ಬಿಡುವಾ | ಕಾಲಬಂತು || ||೭೯||
ಕಾವಿ ವಸನದ ಕೈಯ ಜಪಸರ |
ಕೋವಿ ದಂಡ ಕಮಂಡಲುಗಳಿಂ |
ರಾವಣನು ಸನ್ಯಾಸಿವೇಷವ | ತಾಳಿ ಬಂದ || ||೮೦||
ರಾಗ ಪಂತುವರಾಳಿ ಅಷ್ಟತಾಳ
ಭಿಕ್ಷೆಯ ನೀಡೇ ದೇವಿ | ಸನ್ಯಾಸಿಗೆ |
ಭಿಕ್ಷೆಯ ನೀಡೇ ದೇವಿ || ಪಲ್ಲವಿ ||
ಕುಕ್ಷಿಗಾಧಾರವಿಲ್ಲದೆ ದೇಶ ದೇಶ ಪ್ರ |
ದಕ್ಷಿಣೆ ಗೆಯ್ದಿಲ್ಲಿ ಬಂದೆ ಕಾಣಮ್ಮ || ||೮೧||
ಆವ ದೇಶವು ನಿಮಗಾವ ರಾಜ್ಯವು ಅಮ್ಮ |
ಈ ವಿಪಿನದೊಳೊಬ್ಬಳಿರುವೆ ಯೇಕಮ್ಮ || ||೮೨||
ಸುರರೊ ಕಿನ್ನರರೊ ಭೂಸುರರೊ ದಾನವರೊ ಯೆಂ |
ದರಿಯದೆ ನಾ ಕೇಳ್ವ ಪರಿಯು ಕಾಣಮ್ಮ || ||೮೩||
ಚರಿತೆ (ಸಾಂಗತ್ಯ) ರಾಗ ಪಂತುವರಾಳಿ ಅಷ್ಟತಾಳ
ಲೇಸಾಯಿತಯ್ಯ ಸನ್ಯಾಸಿ ತವ ಚರಣಕ್ಕೆ |
ಸಾಸಿರ ಶರಣೆಂಬೆ ನಾನು ||
ಬೇಸರಟ್ಟಿತು ನಿಮ್ಮ ಪಾದದರ್ಶನದಿ ಸಂ |
ತೋಷವಾಯಿತು ಎನ್ನ ಮನಕೆ || ||೮೪||
ದೇಶಾಯೋಧ್ಯಾಪುರ ವಾಸಿಗಳೈ ನಾವು |
ಆ ಸೂರ್ಯವಂಶದರಸರು ||
ವಾಸಿಪಂಥದ ಮೇಲೆ ಅನುಜನ ಸಹಿತಿಲ್ಲಿ |
ವಾಸವಾಗಿಹನೆನ್ನ ರಮಣ || ||೮೫||
ಕಂಡೊಂದು ಮೃಗವನಾ ಬಯಸಿದಡದನಿನ್ನು |
ಕೊಂಡುಬರಲು ರಾಮ ಪೋದ ||
ಪುಂಡರೀಕಾಕ್ಷ ಬಾರದೆ ಹೊತ್ತಾದುದರಿಂದ |
ಅಂಡಲೆಯುತ ತಮ್ಮ ನಡೆದ || ||೮೬||
ಅಡುಗೆ ಊಟಗಳೆಂಬ ಗೊಡವೆಯು ನಮಗಿಲ್ಲ |
ಅಡವಿಯ ಫಲಾಹಾರದೊಳಗೆ ||
ಕೊಡುವೆನೆಂದರೆ ತಮ್ಮನಾಜ್ಞೆ ಯ ಮೀರಿ ಮುಂ |
ದಡಿಯಿಡ ಬೇಡವೆಂದಿಹನು || ||೮೭||
ರಾಗ ಸಾವೇರಿ ಅಷ್ಟತಾಳ
ಅದನಾದರು ಕೊಡಬಾರದೆ | ಬಲು |
ಹಸಿತೃಷೆಯಿಂದ ದಣಿದು ಬಂದಂತ ಸನ್ಯಾಸಿಗೆ || ಪಲ್ಲವಿ ||
ನೆವನ ಹೇಳುವುದೇತಕೆ | ನಾ ದೇಹಿಯೆಂ |
ದರೆ ನಾಸ್ತಿಯೆನಬಹುದೆ ||
ಶಿವನಾಣೆ ಮೂರು ದಿನದೊಳೇನೊಂದಾಹಾ |
ರವಗೊಳ್ಳದಿಲ್ಲಿಗಿಂದೇ | ಹಸಿದು ಬಂದೆ || ||೮೮||
ಧರ್ಮವುಳ್ಳವರು ನೀವು | ದಾಕ್ಷಿಣ್ಯ ಸ |
ದ್ಧರ್ಮದಿ ನಡೆವವರು ||
ಮರ್ಮವಿಡಿದು ನಾವು ಶಪಿಸಿ ಪೋದರೆ ವಂಶ |
ನಿರ್ಮೂಲವಹುದು ಕಾಣೆ | ಈಶ್ವರನಾಣೆ || ||೮೯||
ದನುಜರಟ್ಟುಳಿ ಬಾಧೆಗೆ | ಅಂಬಿನ ತುದಿ |
ಮೊನೆಯಲ್ಲಿ ಬರೆದ ಹೀಗೆ ||
ಎನಿತು ಬಂದವರಿಗೆ ಭಿಕ್ಷವ ಕೊಡಬೇಡೆಂ |
ದೆನುತ ಪೇಳಿದ ಮಾತುಂಟೇ | ರಾಮನಕಾಂತೆ || ||೯೦||
ವಾರ್ಧಕ
ನಾನಾ ಪ್ರಕಾರದಲಿ ಖಳ ಕಪಟವಂ ನುಡಿದು
ಮಾನಿನಿಯ ಮನದ ಸಂಶಯ ನಿವೃತ್ತಿಯ ಮಾಡೆ
ಏನು ಬಂದರು ಬರಲಿಯೆಂದಾಜ್ಞೆಯಂದಾಂಟುತವನಿಸುತೆ ನಡೆತಂದಳು ||
ದಾನವನು ತನಗೆ ಸಿಕ್ಕಿದಳೆಂದು ನೆನೆಸುತ್ತ
ಲಾನಿತಂಬೆಯ ರಥದಿ ಕುಳ್ಳಿರಿಸುತೈದಿದಂ
ಭಾನುಮಾರ್ಗದಿ ಪೋಪ ವೇಳೆಯೊಳು ಮೊರೆಯಿಟ್ಟಳಾ ಸೀತೆ ನೆಲನದುರಲು || ||೯೧||
ರಾಗ ಬಿಲಹರಿ ಅಷ್ಟತಾಳ
ವಿಪಿನದೊಳಿರಲು ನಾನಿಂದು | ಒಬ್ಬ |
ಕಪಟದ ಯತಿ ನಡೆತಂದು |
ಗುಪಿತದೊಳೊಯ್ವ ಹಾಯೆಂದು | ವರ |
ಚಪಲಾಕ್ಷಿ ಕೂಗಿದಳಂದು || ||೯೨||
ಧರಣೀದೇವತೆಗಳಿರ | ಹೇ |
ತರಣಿನಭಶಶಿಗಳಿರ |
ಹರ ಸರಸಿಜಭವಗಳಿರಾ | ಹೇ |
ಸುರಮುನಿಗಂಧರ್ವರಿರ || ||೯೩||
ದಶರಥಭೂಪನ ಸೊಸೆಯ | ವರ |
ಬಿಸಜಾಕ್ಷ ರಾಮನರಸಿಯ |
ಅಸುರ ಕದ್ದೊಯ್ವ ಜಾನಕಿಯ | ವಂ |
ದಿಸುವೆ ಬಿಡಿಸಿರೀ ಸತಿಯ || ||೯೪||
ರಾಗ ಸೌರಾಷ್ಟ್ರ ಅಷ್ಟತಾಳ
ಹೆಣ್ಣು ಜನ್ಮವೆ ಸಾಕು ಎನ ಕಂಡು ಮರೆಯಿರೊ | ರಾಮ ರಾಮ |
ಬಂದು | ಕಣ್ಣಾರೆ ಕಾಣಬಾರದೆ ಯೆನ್ನ ವಿಧಿಯ ಶ್ರೀ | ರಾಮ ರಾಮ || ||೯೫||
ಜನಕರಾಯಗೆ ಮಗಳಾಗಿ ನಾ ಜನಿಸಿದೆ | ರಾಮ ರಾಮ |
ವರ | ವನಜಾಕ್ಷಿ ಭೂಮಿದೇವಿಗೆ ಮಗಳಾಗಿಹೆ | ರಾಮ ರಾಮ || ||೯೬||
ಪೊಡವಿಯಾಳುವೆನೆಂದು ದೃಢವಾಗಿ ನಂಬಿದೆ | ರಾಮ ರಾಮ |
ಕಾ | ರಡವಿಯೆ ಗತಿಯೆಂದು ಬರೆದನಂಬುಜಭವ | ರಾಮ ರಾಮ || ||೯೭||
ನಡೆದು ಬಂತೈ ಕೇಡು ಕಪಟದ ಮೃಗವಾಗಿ | ರಾಮ ರಾಮ |
ಈ | ಕೆಡುವ ಕಾಲಕ್ಕದ ನಾಕಂಡು ಬಯಸಿದೆ | ರಾಮ ರಾಮ || ||೯೮||
ತರಲು ಮುಂದರಿವಾಗ ದಂಡಕ ವನದಲ್ಲಿ | ರಾಮ ರಾಮ |
ತಾ | ಬರೆದ ಮಯ್ದುನನೇಳು ಗೆರೆಗಳ ದಾಂಟಿದೆ | ರಾಮ ರಾಮ || ||೯೯||
ವಾರ್ಧಕ
ಪರಿಪರಿಯ ದುಃಖದಲಿ ಮರುಗಿ ಬಾಯ್ಬಿಡುತ ಕೇ
ಸರಿಯ ವಶವಾದ ಮೃಗದಂತೆ ಮಿಡುಕುತ್ತಲಾ
ಧರಣಿನಂದನೆ ಕಠಿಣಮಾಗಿ ಕನಿಕರ ದೀರ್ಘಸ್ವರದಿಂದ ಕೂಗುತಿರಲು |
ಶರಣರೊಳು ಶ್ರೇಷ್ಠ ಸಾಧುಗಳರಸ ಬಲುಧೀರ
ವರ ಪಕ್ಷಿರಾಜ ಸನ್ಮಾರ್ಗಸಂಚರಣ ಸ
ತ್ಪರಮ ಕರುಣಾಶರಧಿಯಹ ಜಟಾಯುವು ಬಂದು ದನುಜನಂ ತಡೆದೆಂದನು || ||೧೦೦||
ರಾಗ ನಾದನಾಮಕ್ರಿಯೆ ಅಷ್ಟತಾಳ
ಎಲ್ಲಿಗೆ ಒಯ್ವೆಯೊ ಸೀತೆಯ | ಬಿಡು |
ಕಳ್ಳ ರಕ್ಕಸ ಜಗನ್ಮಾತೆಯ ||
ಒಳ್ಳಿತೆ ನಿನಗೀ ರೀತಿಯ | ಕಂಡೆ |
ನೆಲ್ಲ ನಾ ನಿನ್ನ ವಿಘಾತಿಯ || ||೧೦೧||
ದಾರಿಯ ಬಿಟ್ಟತ್ತ ಕಡೆಸಾರು | ಇಂಥ |
ಪಾರುಪತ್ಯಗಳ ಕೊಟ್ಟವರಾರು ||
ಗಾರುಗೆಡುತ ಪೆಟ್ಟ ತಿನಬೇಡ | ಕೈ |
ಮೀರಿತು ಎನ್ನದೆಂದೆನಬೇಡ || ||೧೦೨||
ಕಳ್ಳರು ಕದ್ದುಕೊಂಡೊಯ್ವಾಗ | ಕೇಳ್ವು |
ದುಳ್ಳ ವಿಚಾರವಿಂದೆನಗೀಗ ||
ಒಳ್ಳೆ ಮಾತಿನ ಮೇಲೆ ಬಿಡು ನೀನು | ಬಿಟ್ಟು |
ಕಳ್ಳ ರಕ್ಕಸ ಅತ್ತ ನಡೆ ನೀನು || ||೧೦೩||
ಸತ್ತ ಪ್ರಾಣಿಗಳ ತಿಂಬಾತಗೆ | ಇಂಥ |
ಧೂರ್ತದುರ್ವಚನಗಳೇತಕೆ ||
ಮತ್ತೆ ದಾರಿಯ ಬಿಟ್ಟು ಸುಮ್ಮನೆ | ಹೋ |
ಗತ್ತತ್ತ ನಡೆ ನಡೆ ಗಮ್ಮನೆ || ||೧೦೪||
ಭಕ್ಷಿಸದನಕ ಹೋಗೆನು ನಿನ್ನ | ಯೆಂದು |
ಪಕ್ಷೀಂದ್ರ ಹೊಡೆದ ಪೆಟ್ಟಿಗೆ ಮುನ್ನ ||
ರಾಕ್ಷಸನದ ಕಂಡು ಬೆದರಿದ | ಇಪ್ಪ |
ತ್ತಕ್ಷಿಗಳೊಳು ಕಿಡಿಗೆದರಿದ || ||೧೦೫||
ಬಾಣವ ಖಗಪತಿಗೆಸೆದನು | ಪಕ್ಷಿ |
ತ್ರಾಣದಿಂದದನು ಖಂಡಿಸಿದನು |
ಕಾಣುತ್ತ ಗದೆಯ ಬಿಸಾಡಿದ | ಹಕ್ಕಿ |
ಕೇಣದಿಂದಲೆ ತುಂಡು ಮಾಡಿದ || ||೧೦೬||
ಅಬ್ಬರಿಸುತ ಎನ್ನ ತಿರಿಹಿದ | ರಕ್ತ |
ಕೊಬ್ಬಿ ಕೈಮುಷ್ಟಿಯೊಳೆರಗಿದ ||
ಇಬ್ಬರು ಸರಿ ನಾವು ಶಕ್ತಿಗೆ | ಕಾದ |
ಲೊಬ್ಬರು ಬೇರೊಂದು ಯುಕ್ತಿಗೆ || ||೧೦೭||
ಮರ್ಮವ ತಿಳಿದು ಕಾದುವ ನಾವು | ಸತ್ಯ |
ಧರ್ಮ ಮಾರ್ಗದಲಿ ಬಾರದು ನೋವು ||
ಶರ್ಮವಿಡಿದು ಕಾದಿದೆವಲ್ಲ | ನಮ |
ಗೊಮ್ಮೆ ಸೋಲ್ ಗೆಲವು ಕಾಣಿಸಲಿಲ್ಲ || ||೧೦೮||
ಎನ್ನಸು ಉಂಗುಷ್ಠದೆಡೆಯಲ್ಲಿ | ಹಕ್ಕಿ |
ನಿನ್ನ ಪ್ರಾಣವದಾವ ಕಡೆಯಲ್ಲಿ ||
ಮುನ್ನ ತಾ ಕಪಟವೆಂದರಿಯದೆ | ಪಕ್ಷಿ |
ತನ್ನದೆಂದನು ಸತ್ಯ ಮರೆಯದೆ || ||೧೦೯||
ಹಕ್ಕಿಪಕ್ಕಿಯ ಪಕ್ಷಿ ಜಾತಿಗೆ | ಪ್ರಾಣ |
ರೆಕ್ಕೆಯೊಳಿಹುದೆಂದನಾತಗೆ ||
ರಕ್ಕಸನದ ಕೇಳಿ ಗ್ರಹಿಸಿದ | ಪಕ್ಷಿ |
ಸಿಕ್ಕಿದನೆಂದ್ಹರುಷತಾಳಿದ || ||೧೧೦||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಮಾಯಕದ ನುಡಿಯೆಂದು ತಿಳಿಯದೆ |
ಕಾಯಮರ್ಮವನುಸುರೆ ರಾಕ್ಷಸ |
ರಾಯ ಬಡಿಯಲುಬಿದ್ದನಾಗ ಜ | ಟಾಯು ಶರಣ || ||೧೧೧||
ಆಹ ಕೆಟ್ಟೆನು ಕೆಟ್ಟಿನಕಟೀ |
ಕಾಯದುಷ್ಕೃತ ಫಲವೊ ನಾನೀ |
ರಾವಣನ ಕರಹತಿಯೊಳಳಿವರೆ | ಹಾ ವಿಧಾತ || ||೧೧೨||
ಎಂದು ಮರುಗುತ ನಯನವಾರಿಯೊ |
ಳಂದು ಮಿಡಿದಂಘ್ರಿಯಲಿ ಹೊರಳಲು |
ಮಂದಗಮನೆಯು ನುಡಿದಳಾ ವಿಹ | ಗೇಂದ್ರಗಂದು || ||೧೧೩||
ವರವ ಕೊಟ್ಟಳು ಸೀತೆ ರಾಮನ |
ಚರಣವನು ಕಂಡರುಹುವನಕವು |
ಮರಣವಿಲ್ಲೆನೆ ದುರುಳ ಕೊಂಡಂ | ಬರದಿ ನಡೆದ || ||೧೧೪||
ಕಂದ
ದುರುಳಂ ಮಾಯದಿ ಸೀತಾ
ತರುಣಿಯನಪಹರಿಸುತೊಡನೆ ಗಗನಾಂತರದೊಳ್ |
ಶರಧಿಯ ದಾಂಟುತ ಲಂಕಾ
ಪುರಕಯ್ದಲು ಲಕ್ಷ್ಮಣ ಬಂದಗ್ರಜಗೆಂದಂ || ||೧೧೫||
ರಾಗ ಘಂಟಾರವ ಝಂಪೆತಾಳ
ರಾಘವ ಸಾಕೇತಪತೆ | ಕೇಳ್ಕಮಲನೇತ್ರ || ಪಲ್ಲವಿ ||
ನೀ ಮಿಗವ ಬೆಂಬತ್ತಿ | ಪೋದಮೇಲೆನ್ನೊಡನೆ |
ಆ ಮಹಾ ಜನಕಸುತೆ | ಅಸುರನುಲಿ ಕೇಳ್ದು || ||೧೧೬||
ಕಠಿಣತರ ಮಾತುಗಳ | ಕಾಂತೆ ಪೇಳ್ದುದರಿಂದ |
ಅಟವಿಗೆಯ್ತಂದೆನೈ | ನಿನ್ನರಸಿ ಕೊಳುತ || ||೧೧೭||
ಅಂಜುವಳು ಜನಕಸುತೆ | ಯೊಬ್ಬಳೇ ವನದೊಳಗೆ |
ಕಂಜಸಖ ಕುಲಜಾತ | ಕೀರ್ತಿವಿಖ್ಯಾತ || ||೧೧೮||
ಎನುತ ಪೇಳ್ದುದ ಕೇಳಿ | ಘನಮಹಿಮನಿಂತೆಂದ |
ಅನುಜ ಲಕ್ಷ್ಮಣ ವೀರ | ಪೋಗಬೇಕಯ್ಯ || ||೧೧೯||
ವಾರ್ಧಕ
ಮೃಗವ ಕೊಂದಾ ದಶರಥಾತ್ಮಜರು ಬದಲೊಂದು
ಮೃಗವ ನಿರ್ಮಿಸಿಕೊಂಡು ಜಾನಕಿಗೆ ಕೊಡಲೆಂದು
ಮಿಗೆ ವಹಿಲದಿಂ ಬಂದು ಪರ್ಣಶಾಲೆಯಲಿ ನೋಡಿದರೆ ಸತಿಯಿಲ್ಲದಿರಲು |
ಹಗಲು ಕತ್ತಲೆಯಾಯ್ತು ಸಿಡಿಲೆರಗಿದಂತೆ ನಾ
ಲಗೆ ಸೆಳೆದುದೆದೆಯಾರಿ ಲಕ್ಷ್ಮಣಂ ನಡುಗಿ ಕೈ
ಮುಗಿದು ನಿಂದಿರೆ ಸೀತೆಯೇನಾದಳೆಂದು ಚಿಂತಿಸುತನುಜನೊಡನೆಂದನು || ||೧೨೦||
ರಾಗ ಸೌರಾಷ್ಟ್ರ ಮಟ್ಟೆತಾಳ
ಸಹಜ ಲಕ್ಷ್ಮಣ | ಸರಸಿಜೇಕ್ಷಣ |
ಮಹಿತಳಾಸುತೆ | ಮಂಜುಳಾಕಾರೆ |
ವಿಹಿತಭಾಷಿಣಿ | ಹಿಮಕರಾನನೆ |
ಗಹನದಿ ಬಿಟ್ಟು | ಮೋಸವಾಯಿತು || ||೧೨೧||
ಎತ್ತಹೋದಳೊ | ಏನನಾದಳೊ |
ಮತ್ತಕಾಶಿನಿ | ಮಂದಗಾಮಿನಿ |
ಪೃಥ್ವಿಜಾತೆಯ | ಕಾಣದೆನ್ನಯ |
ಚಿತ್ತಚಂತಲ | ವಾಯಿತಲ್ಲಯ್ಯ || ||೧೨೨||
ರಾಗ ಕಾಂಭೋಜಿ ಝಂಪೆತಾಳ
ಅಡವಿ ಗಿಡ ಮರ ಕಲ್ಲುಗಳು ನೋಡಲರಸಿನದ |
ಪುಡಿಯಂತೆ ತೋರುತಿದೆ ತಮ್ಮ ||
ಒಡಲೊಳುರಿ ತಾಪ ಬೇರ್ವಿಡಿದು ಜಠರಾಗ್ನಿಯಲಿ |
ನಡುಗುತಿದೆ ಕೈಕಾಲು ತಮ್ಮ || ||೧೨೩||
ನುಡಿವೆನೆಂದರೆ ಗಂಟಲೆಡೆಗೆ ಕರವೆರಡೊತ್ತಿ |
ಪಿಡಿದಂತೆ ನೋಯುತಿದೆ ತಮ್ಮ ||
ಮಡದಿ ಜಾನಕಿಯೆಂಬ ರತುನವನು ಕಾಣದಡಿ |
ಯಿಡಲಾರೆನಯ್ಯಯ್ಯೊ ತಮ್ಮ || ||೧೨೪||
ತಂದೆತಾಯ್ಗಳ ಬಂಧು ಬಳಗವೆಲ್ಲವ ಬಿಟ್ಟು |
ಒಂದೇ ಮನಸ್ಸಿನಲಿ ತಮ್ಮ ||
ಎಂದಿಗಾದರು ಎನ್ನ ಪಾದವೇ ಗತಿಯೆಂದು |
ಹೊಂದಿಕೊಂಡಿರ್ದಳೈ ತಮ್ಮ || ||೧೨೫||
ಮುಂದುವರಿಯಿತು ಕಾರ್ಯ ಕಪಟಮೃಗ ವ್ಯಸನದಲಿ |
ಬಂದು ಕೇಡಾಯ್ತಲ್ಲ ತಮ್ಮ ||
ಇಂದು ನೀ ಏನ ಪೇಳಿದರು ರಾಕ್ಷಸರ ನಿ |
ರ್ಬಂಧಕ್ಕೆ ಸಿಕ್ಕಿದಳು ತಮ್ಮ || ||೧೨೬||
ಹಾಳುಬದುಕಿಗೆ ಹೋಗುವಾಗಲೇ ನಿನ್ನೊಡನೆ |
ಹೇಳಲಿಲ್ಲವೆ ಮೊದಲೆ ತಮ್ಮ ||
ಕೀಳು ಮೇಲರಿಯದೆನ್ನಯ ಸತಿಯ ಬಿರುನುಡಿಯ |
ಕೇಳಿ ನೀ ಬರಬಹುದೆ ತಮ್ಮ || ||೧೨೭||
ಏಳು ಜನ್ಮಾಂತರದಿ ತಪವ ಗೈದರು ಇಂಥ |
ಬಾಲೆ ಕೈಸೇರುವಳೆ ತಮ್ಮ ||
ಖೂಳ ರಕ್ಕಸರ ನಿರ್ಬಂಧ ದುಃಖವನೆಂತು |
ತಾಳುವಳು ದಿನದಿನದಿ ತಮ್ಮ || ||೧೨೮||
ರಾಗ ಕೇದಾರಗೌಳ ಮಟ್ಟೆತಾಳ
ಅಗ್ರಜಾ ಮಹಾಪರಾಕ್ರಮ | ಧೀರ ವೀರ || ಪಲ್ಲವಿ ||
ಪುಂಡರೀಕವದನ ಸುಪ್ರ | ಚಂಡಸಾಹಸಾಗ್ರಗಣ್ಯ |
ಕುಂಡಲೀಂದ್ರಶಯನ ಭೂ | ಮಂಡಲಾಧಿನಾಯಕ ವರ |
ಖಂಡಪರಶುಮಿತ್ರರಾಜಿತ | ಸಕಲ ಬ್ರ |
ಹ್ಮಾಂಡ ಸರ್ವಲೋಕಪೂಜಿತ | ನಿರುತ ಮಾ |
ರ್ತಂಡಕೋಟಿತೇಜಭ್ರಾಜಿತ | ಧೀರ ವೀರ || ||೧೨೯||
ಲೋಕಮಾತೆ ಸೀತೆ ಸಪ್ತ | ಲೋಕ ಮಧ್ಯಲೋಕ ಶಿವನ |
ಲೋಕ ಬ್ರಹ್ಮಲೋಕ ವಿಷ್ಣು | ಲೋಕದಲ್ಲಿದ್ದರೆಯೂ |
ನಾ ಕರೆದುಕೊಂಡು ಬರುವೆನು | ನಿನ್ನ ಪಾದ |
ದಾಕಮಲದೆಡೆಗೆ ತೋರ್ವೆನು | ಇದಕೆ ಚಿಂತೆ |
ಏಕೆ ಧೈರ್ಯವಾಗಿರೈ ನೀನು | ಧೀರ ವೀರ || ||೧೩೦||
ಎಂದು ಲಕ್ಷ್ಮಣಾಂಕ ಕೋಪ | ದಿಂದ ಧನುಶರಗಳ ಪಿಡಿದು |
ವಂದಿಸುತ್ತಲಣ್ಣನಡಿಗೆ | ಮುಂದೆ ಪರ್ಣಶಾಲೆಯಿಂದ |
ಬಂದು ಪೊರಡಲಾಗ ಕಾಣುತ | ರಾಮಭದ್ರ |
ನಂದು ವತ್ಸ ನಿಲು ನಿಲೆನ್ನುತ | ಸಂತೈಸಿ ನಡೆದ |
ರೊಂದೆ ಮನದಿ | ಸತಿಯನರಸುತ || ||೧೩೧||
ರಾಗ ಕೇದಾರಗೌಳ ಝಂಪೆತಾಳ
[ಇದು ಸಮಯವಲ್ಲ ತಮ್ಮಾ | ನೀ ಪೋಪ |
ಹದನವೇನಯ್ಯ ಧರ್ಮ |
ಮೊದಲೆ ಜಾನಕಿಯನಗಲಿ | ಮನದೊಳಗೆ |
ಕುದಿಯುತಿದೆ | ವಿರಹದಲ್ಲಿ || ||೧೩೨||
ಈ ಸಮಯದೊಳಗೆನ್ನನು | ನೀ ಬಿಟ್ಟು |
ಬೇಸರದೆ ಪೋಪುದೇನು |
ಆಸೆ ಇನ್ನೇನು ತನಗೆ | ಎಲೊ ತಮ್ಮ |
ರೋಷ ಬೇಡಿನಿತು ನಿನಗೆ || ||೧೩೩||
ದ್ವಿಪದಿ
ರಾಮಲಕ್ಷ್ಮಣರುಗಳು ಘನಪರಾಕ್ರಮರು
ಆ ಮಹಾಪಂಚವಟಿಯಿಂದ ತೆರಳಿದರು || ||೧೩೪||
ಕಾನನಾಂತರದಿ ತಪಸಿರುವ ಋಷಿಗಳನು
ಜ್ಞಾನಶರಧಿಗಳೆನಿಪ ಋಷಿಪತ್ನಿಯರನು || ||೧೩೫||
ಕಾಣುತಲೆ ಬೆಸಗೊಳುತ ಕಂಡ ಖಗಮೃಗವ
ಮಾನಿನಿಯ ಕೇಳಿದರು ಮತ್ತೆ ಕೌತುಕವ || ||೧೩೬||
ಹುಲಿ ಕರಡಿ ಸಿಂಹ ಶಾರ್ದೂಲಗಳ ನೋಡಿ
ಕಳವಳಿಸದತಿಧೈರ್ಯದಿಂದ ಮಾತಾಡಿ || ||೧೩೭||
ಅರಸಂಚೆ ನವಿಲು ಕೋಗಿಲೆ ಚಕೋರಗಳ
ಹರಿಯುತಿಹ ನದಿಗಳನು ದಾಟಿದರು ಬಹಳ || ||೧೩೮||
ನಾನಾ ಪ್ರಕಾರದಲಿ ಅರಸಿ ನಡೆತಂದು
ಆ ನರೇಶ್ವರರು ಘೋರಡವಿಯಲಿ ಸಂದು || ||೧೩೯||
ದೂರ ಪಥದಲಿ ನಡೆದು ದಣಿದುದತಿ ಕಾಯ
ದಾರಿಯಲಿ ಕಂಡರಾ ಮಲಗಿದ ಜಟಾಯ || ||೧೪೦||
ಈತ ನಮ್ಮಯ್ಯನಿಗೆ ಸಖನರುಣತನುಜ
ಮಾತನಾಡಿಸು ತಮ್ಮ ಸಂಪಾತಿಗನುಜ || ||೧೪೧||
ಆರಿಂದ ಬಂತು ನಿನಗೀ ಮರಣದೊಸೆಗೆ
ಕಾರಣವ ನಮಗೆ ತಿಳುಹೆಂದು ದಯವೆಸಗೆ || ||೧೪೨||
ಕಾರಣಿಕರಿಂತು ಕೇಳಿದರು ಸವಿಮಾತ
ಶ್ರೀರಾಮನೇ ಎಂದು ನೆರೆ ತಿಳಿದನಾತ || ||೧೪೩||
ರಾಗ ತೋಡಿ ಅಷ್ಟತಾಳ
ಪಾಲಯ ರಘುವೀರ | ಪರಮಪವಿತ್ರ |
ಮೂಲೋಕದೊಡೆಯನೆ | ಕೇಳು ಬಿನ್ನಪವ || ಪಲ್ಲವಿ ||
ಖೂಳ ರಾವಣ ಕದ್ದು | ಕೊಂಡು ಜಾನಕಿಯನ್ನು |
ಮೇಲುಮಾರ್ಗದಿ ಪೋಪ | ವೇಳ್ಯದಿ ನಾನು |
ಬಾಲೆ ಕೂಗುವ ಧ್ವನಿ | ಕೇಳಿ ರಾವಣನೊಳು |
ಕಾಳಗಕಿದಿರಾಗಿ | ಕಾದಿದೆ ಪೋಗಿ || ||೧೪೪||
ಮುಂಚೆ ಸಂಗರದಲಿ | ಗೆದ್ದೆ ನಾನಾಮೇಲೆ |
ವಂಚನೆಯಿಂದೆನ್ನ | ಕೊಂದ ರಾಜೇಂದ್ರ ||
ಪಂಚಪ್ರಾಣಗಳಡ | ಗುವ ತೆರನಾಗೆ ಅರ |
ಸಂಚೆಗಮನೆ ಇದ | ನೆಲ್ಲವನೋಡಿ || ||೧೪೫||
ತರುಣಿ ಜಾನಕಿ ನಿಮ | ಗರುಹಬೇಕೆನಲು ನಾ |
ನರಳುತ್ತಲಿಹೆನಿಷ್ಟು | ದಿನ ಪರಿಯಂತ |
ಕರುಣವಿದ್ದಿರಲೆಂದು | ಚರಣದೆಡೆಗೆ ಬಿದ್ದು |
ಮರಣವಿಟ್ಟ ಜಟಾಯು | ಶರಣರ ಶ್ರೇಷ್ಠ || ||೧೪೬||
ಕಂದ
ಸುರಪುರಕಯ್ದಿದ ಖಗಪತಿ
ವರಪಿತಗೆ ಸಮಾನನೆಂದು ತಿಳಿದು ಸಂಸ್ಕಾರವನುಂ |
ವಿರಚಿಸಿ ಮತ್ತಾ ಸೀತೆಯು
ದುರುಳನ ವಶವಾದಳೆಂಬ ಭ್ರಮೆಯೊಳಗೆಂದಂ || ||೧೪೭||
ರಾಗ ರೇಗುಪ್ತಿ ಏಕತಾಳ
ಸ್ಮರನರಗಿಣಿ ಸತಿಯರ ಶಿರೋಮಣಿ ದಶ |
ಶಿರನ ವಶವಾದಳೈ ತಮ್ಮ ||
ದುರುಳ ಬಾಧಿಸುವ ನಿರ್ಬಂಧಕ್ಕೆ ತಾ ಮೆಯ್ಯ |
ಗುರಿಯಾಗಿಸುವಳಲ್ಲೊ ತಮ್ಮ || ||೧೪೮||
ಹರಿಣದ ನೆವದಿಂದಲೆನ್ನ ಕಳುಹಿ ನಿನ್ನ |
ಭರದಿಂದಟ್ಟಿದಳಲ್ಲೊತಮ್ಮ ||
ತರುಣಿಯರಂತರಂಗದ ನಿಜವಾರಿಗೂ |
ಅರಿವಡಸಾಧ್ಯವೈ ತಮ್ಮ || ||೧೪೯||
ತಾನೇ ಬಯಸಿ ಪೋದಳೋ ಬಲಾತ್ಕಾರದಿಂ |
ದಾನವನೊಯ್ದನೊ ತಮ್ಮ ||
ಏನೆಂದು ತಿಳಿಯಲಾರದು ಅಂತರಂಗಕೆ |
ಮಾನಿನಿಯ ಮನಸ್ಸು ತಮ್ಮ || ||೧೫೦||
ಮೂಢ ರಕ್ಕಸ ತನ್ನ ಭ್ರಮೆಯಿಂದಲಾಕೆಗೆ |
ಮಾಡದಿರ್ಪನೆ ಹಾನಿ ತಮ್ಮ ||
ಕಾಡಿನೊಳಗೆ ತಿಳಿಗೇಡಿಂದ ಸತಿಯ ಹೋ |
ಗಾಡಿಕೊಂಡಂತಾಯ್ತು ತಮ್ಮ || ||೧೫೧||
ರಾವಣನೆಂಬ ನಿಶಾಚರನಿರುವಂಥ |
ಠಾವನರಿಯೆವಲ್ಲೊ ತಮ್ಮ ||
ಈ ವಿಪಿನದಿ ಸುತ್ತಿ ದಣಿದೆವಲ್ಲದೆ ಮುಂದೆ |
ಜೀವವುಳಿಯದಲ್ಲೊ ತಮ್ಮ || ||೧೫೨||
ವಾರ್ಧಕ
ರಘುವೀರ ಕೇಳಂಬುನಿಧಿ ಮೇರೆದಪ್ಪಿದರು
ಹಗಲರಸನಿರುಳುದಿಸಿ ಬೆಳಗಿದರು ಜನಕಜೆಯ
ಉಗುರೆಡೆಗೆ ಕಲ್ಮಷಂ ಸೋಂಕುವುದೆ ಕಪಟಲಂಡಿಗಳ ದುರ್ನುಡಿಯೇತಕೆ |
ಹಗರಣವ ಬಿಡು ಮುಂದೆ ನಡೆಯೆಂಬ ತನ್ನ ತ
ಮ್ಮಗೆ ಮೆಚ್ಚಿ ನಡೆತಪ್ಪ ವೇಳೆಯೊಳ್ ಮಾರ್ಗದಲಿ
ಪಗೆತನದಿ ಬಾಯ್ಬಿಡುತಲೊದರುತ್ತ ಶೂರ್ಪಣಖೆಮಗಳಯೋಮುಖಿ ಕಂಡಳು || ||೧೫೩||
ರಾಗ ದೇಶಿ ಅಷ್ಟತಾಳ
ತಿನಿಸು ಸಿಕ್ಕಿತುಯೆನಗೊಂದು | ಔ |
ತಣವ ಮಾಡುವೆ ಬಂಧು ಬಳಗಕ್ಕೆ ಇಂದು || ಪಲ್ಲವಿ ||
ಮನುಜರ ಮಾಂಸವ ಮೆಲದೆ | ಬಹು |
ದಿನ ವಾಯಿತದರಿಂದ ತೊಡುವೆದ್ದು ನವೆದೆ ||
ಮನೆಗೊಯ್ವೆನಿವರನ್ನು ಕೊಲದೆ | ಭೂತ |
ಗಣಗಳಿಗುಣಬಡಿಸುವೆ ರಕ್ತ ಕೊಳದೆ || ||೧೫೪||
ಎದೆಯ ಗುಂಡಿಗೆಯನ್ನ ಮುರಿದು | ತು |
ಪ್ಪದಲಿ ಜಾಳಿಸುತ ಯೆಣ್ಣೆಯಲಿಕ್ಕಿ ಹುರಿದು ||
ಬದಿಯೆಲುಬುಗಳ ಗುದ್ದ್ಯರೆದು | ಎನ್ನ |
ಮದುವೆಯಾದವನ ಸಂಗಡ ತಿಂಬೆ ನೆರೆದು || ||೧೫೫||
ಗಂಟಲ ಮುರಿದಿವರುಗಳ | ಮಾಂಸ |
ದೆಂಟು ಬಗೆಯಲೆಸಗುವೆನು ಶಾಕಗಳ ||
ಪಂಟಿಗೆ ಸೊಗಸು ಚರ್ಮಗಳ | ಎನ್ನ |
ನೆಂಟರಿಷ್ಟರಿಗಿಕ್ಕುವೆನು ಶಾಕಾದಿಗಳ || ||೧೫೬||
ತಿಂಬೆನೆನುತ ಬಾಯಕಳೆದು | ಬಂದ |
ಳೆಂಬುದ ಲಕ್ಷ್ಮಣ ಮನದಲ್ಲಿ ತಿಳಿದು ||
ಅಂಬ ಬಿಲ್ಲಿನೊಳಿಟ್ಟು ಸೆಳೆದು | ಕೊಲ್ವೆ |
ನೆಂಬಷ್ಟರೊಳು ರಾಮ ನಿಲಿಸಿದನೊಲಿದು || ||೧೫೭||
ಕೊಲಬಾರದಯ್ಯ ಈ ಹೆಣ್ಣ | ಕೊಂದು |
ಫಲವೇನು ಸ್ತ್ರೀಹತ್ಯೆಯೊಳಗಿಲ್ಲ ಬಣ್ಣ ||
ಕಳವು ತಪ್ಪಿದರೆ ಸಾಕಣ್ಣ | ಹೀಗೆಂ |
ದೊಳಗನುಜಂಗೆ ಸೂಚನೆಗೆಯ್ದ ಕಣ್ಣ || ||೧೫೮||
ತಾಟಕಿಯನು ಹೀಗೆ ಹಿಂದೆ | ನೀಮ |
ಹಾಟೋಪದೊಳಗೇಕೆ ಸಮರದಿ ಕೊಂದೆ ||
ಸೂಟಿಯಿಂ ಬಪ್ಪಳು ಮುಂದೆ | ಇಂಥ |
ನಾಟಕತನದ ಮಾತೆನ್ನೊಳೇಕೆಂದೆ || ||೧೫೯||
ಗಾಧಿಸುತನ ಮಾತಿನಿಂದ | ನಾ |
ನಾದುರಾತ್ಮೆಯ ಭೇದಿಸಿದೆನೆಲೆ ಕಂದ ||
ಈ ದುಷ್ಟೆಯಳನದರಿಂದ | ಮಾನ |
ಭೇದಿಸಿ ಜತನದಿಂ ನೀ ಕಳುಹೆಂದ || ||೧೬೦||
ವಾರ್ಧಕ
ಅಣ್ಣನಂತರ್ಭಾವವರಿತು ಲಕ್ಷ್ಮಣನವಳ
ಉನ್ನತದ ಕುಚವೆರಡ ತರಿದು ನಾಸಿಕವ ಚೈ
ತನ್ಯದಿಂ ಕತ್ತರಿಸಲಾಗಧೋಮುಖಿದನುಜೆ ತನ್ನ ತಾಯಂ ಪೋಲ್ದಳು |
ಬನ್ನ ಬಡುತವಳು ಸಾಗಿದಳು ಮೊರೆಯಿಡುತಲಿವ
ರನ್ನು ಬಯ್ಯುತ್ತ ಸಲೆ ರಾಮಲಕ್ಷ್ಮಣರುಗಳು
ಇನ್ನು ಮುಂದೊತ್ತಿಬರೆ ಖಳಕಬಂಧನ ಕರಗಳನ್ನು ಕತ್ತರಿಸಲಾಗಿ || ೧೬೧ ||
ರಾಗ ಶಂಕರಾಭರಣ ಏಕತಾಳ
ಜಯ ಜಯ ಶ್ರೀ ರಾಮಚಂದ್ರ | ಜಾನಕೀಶ ಸುಗುಣಸಾಂದ್ರ |
ಮಾಯಾಮೋಹ ರಹಿತ ಶುಭ | ಕಾಯ ಪಾಹಿ ಮಾಂ || ಪಲ್ಲವಿ ||
ಹಿಂದಕೆ ದನುವೆಂಬ ಪೆಸರ | ಗಂಧರ್ವೇಶನಯ್ಯ ನಾನು |
ಅಂದಿಗಾ ದೂರ್ವಾಸಮುನಿಯು | ತಂದ ಶಾಪದಿ || ||೧೬೨||
ಬಂದೆನೀ ರಾಕ್ಷಸರ ಜನ್ಮ | ಕಿಂದ್ರ ವಜ್ರದಿಂದ ಶಿರವ |
ನಂದು ತರಿದ ಮೇಲೆ ಕ | ಬಂಧನಾದೆನು || ||೧೬೩||
ಇಂದು ಶಾಪಮುಕ್ತವಾಯ್ತು | ಬಂದುದಕೆ ನಿಮಗೆ ನಮೋಸ್ತು |
ಮುಂದೆ ಶಬರಿ ಪೇಳ್ವಳ್ ಪೋಗಿ | ರೆಂದ ಗಂಧರ್ವ || ||೧೬೪||
ಕಂದ
ಕರುಣಿಸಿ ಮುಂದೆಯ್ತರಲಾ
ವರಶಬರಿಯು ಭಕ್ತಿಯಿಂದಲಾ ರಘುಪತಿಯಾ |
ಚರಣಕೆ ನಮಿಸುತಲಂದಾ
ಗುರುಭಾವದೊಳಂಬುಜಾಕ್ಷಿ ಬಲು ನುತಿಸಿದಳು || ||೧೬೫||
ರಾಗ ರೇಗುಪ್ತಿ ಏಕತಾಳ
ಪಾಲಯ ಮಾಂ ಪಾಹಿ ರಾಮ | ಸಮರನಿಸ್ಸೀಮ || ಪಲ್ಲವಿ ||
ಕಾಲಭಯನಾಶ ಶ್ರೀ | ಲೋಲ ವೈಕುಂಠಾಧೀಶ || ಅನುಪಲ್ಲವಿ ||
ದುರ್ಜನರ ವಿಘಾತ | ಸಜ್ಜನರ ಸಂಪ್ರೀತ |
ನಿರ್ಜರಗಣವಂದಿತ | ಗರ್ಜನ ಸಿಂಧುಸಮೇತ || ||೧೬೬||
ಅಂಗಜಕೋಟಿಲಾವಣ್ಯ | ಆಶ್ರಿತಜನವರೇಣ್ಯ |
ತುಂಗವಿಕ್ರಮಕಾರುಣ್ಯ | ಸಂಗೀತಲೋಲಾಗ್ರಗಣ್ಯ || ||೧೬೭||
ಮುಂದೆ ಪಂಪೆಯೊಳ್ಮರುತ | ನಂದನನಿಂ ಭಾನುಜಾತ |
ನಿಂದ ರಾವಣನ್ನ ಕೊಲಿಸಿ | ಬಂದಪಳೈ ನಿನ್ನರಸಿ || ||೧೬೮||
ರಾಗ ನವರೋಜು ಆದಿತಾಳ
ಮಧುರತರಾಂಬುಜವದನೇ | ಮದಗಜಸನ್ನಿಭಗಮನೇ |
ಪದುಮದಳಾಯತನಯನೇ | ಪರಮಪತಿವ್ರತೆ ಶಬರೀ || ||೧೬೯||
ಪಂಚವಟೀ ವನದೊಳಗೆ | ಮಮ ರಮಣೀ ಜನಕಸುತೆ |
ವಂಚನೆಯಿಂ ಕದ್ದವಳ | ನೊಯ್ದಿಹ ರಾವಣ ಖೂಳ || ||೧೭೦||
ಸೀತೆಯ ಕಾಣದರಿಂದ | ಅರಸುತ ಬಂದೆ ಕಬಂಧ |
ರೀತಿಯ ಪೇಳಲು ನಮಗೆ | ಬಂದೆವು ನಾವ್ ನಿನ್ನೆಡೆಗೆ || ||೧೭೧||
ದಾರಿಯದಾವುದು ತರುಣಿ | ತೋರಿಕೊಡೆ ನಾರೀಮಣಿ |
ಚಾರು ಸರೋವರದೆಡೆಗೆ | ಪೋಗಲುಬೇಕೀಗೆಮಗೆ || ||೧೭೨||
ರಾಘವಕೇಳೀ ಪಥದಿ | ಸಾಗಿದರಾ ಸುರವನದಿ |
ಮೇಗೆ ಸರೋವರವಿಹುದು | ತೋರುವುದೇ ಪಂಪೆಯದು || ||೧೭೩||
ವಾರ್ಧಕ
ಕರವ ಮುಗಿದಿಂತೆಂದ ಶಬರಿಗೊಲಿದಾರಾಮ
ಕರುಣಿಸುವ ಸದ್ಗತಿಯ ಮುಂಚೆ ಪಂಪಾಸರೋ
ವರದೆಡೆಗೆ ಬಂದು ಮಜ್ಜನವೆಸಗಿ ಕಮಲವನು ತರುಣಿಯೆಂದೇ ಭ್ರಮಿಸುತ ||
ಸ್ಮರನ ಬಾಣದ ವೇಧೆಯಿಂದ ಸಂತಪಿಸುತ್ತ
ಮರೆದು ನಿಜದೇಹವಂ ಬಳಿಯೊಳಿಹ ನಿಜಸಹೋ
ದರನೊಳುರೆ ಚಿತ್ತಚಾಂಚಲ್ಯದಿಂದುಸುರಿದಂ ಮನಬಂದ ತೆರದಿಂದಲಿ || ||೧೭೪||
ರಾಗ ನವರೋಜು ಆದಿತಾಳ
ಜಲಜದಳಾಯತನಯನೇ | ಜಲಜಮುಖಿ ಮಹೀತನುಜೆ |
ಜಲದೊಳಗೇತಕೆ ಬಂದು | ನೆಲಸಿಹಳೈ ಸತಿಯಿಂದು || ||೧೭೫||
ಜನಕಸುತೆ ಜನರಹಿತೆ | ಮನಸಿಜಮೋಹನರುಚಿರೆ |
ಕನಕಮಯಾ ತನುಪುಳಕೆ | ಮುನಿನಮಿತೇ ಮಮವನಿತೆ || ||೧೭೬||
ನಾರಿಯ ಕೈಗಳ ನೋಡು | ತೋರುತಿದೆ ಕುಚವೆರಡು |
ನೀರೊಳಗೇತಕೆ ಬಂದು | ಸೇರಿಹಳೈ ಸತಿಯಿಂದು || ||೧೭೭||
ಮಾನಿನಿಯಂಜುವಳೆಂದು | ಮಾನದಿ ಕಾದಿರುಯೆಂದು ||
ನಾನಿನಗಾಡಿದ ನುಡಿಯ | ಆನದೆ ಬಂದೆನ್ನೆಡೆಯ || ||೧೭೮||
ಕಡುಕಮಲ ಸಖಕಿರಣ | ಸುಡುತಿದೆ ಮೈಯಾವರಣ ||
ಗಿಡಮರನ ತಂಪಿನೊಳೊ | ಯ್ದಿಡು ಯೆನ್ನ ಮಮ ಸಹಜ || ||೧೭೯||
ರಾಗ ಮೋಹನ ತ್ರಿವುಡೆತಾಳ
ರಘುವೀರಾಂಬುಜವದನ | ಈ ಮರಳು ಮಾ |
ತಿಗೆ ಯೇನಂಬೆನು ಸುಜಾಣ || ಪಲ್ಲವಿ ||
ಇರುಳು ಮೂಡುವನೆ ಸೂರ್ಯ | ನೋಡಲು ಚಂದ್ರ |
ಕಿರಣವಲ್ಲವೆ ಅಣ್ಣಯ್ಯ ||
ಸರಸಿಜದರಳಲ್ಲವೇ | ನೀರೊಳು ಸೀತೆ |
ಇರುವುದುಂಟೇ ರಾಘವ || ||೧೮೦||
|| ಸೀತಾಪಹಾರ ಪ್ರಸಂಗ ಮುಗಿದುದು ||
Leave A Comment