ವಾರ್ಧಕ
ಮುನಿಪ ಕೇಳೈ ಮುಂದೆ ರಾಮಲಕ್ಷ್ಮಣರುಗಳು
ಘನ ಪಂಚವಟಿಯೊಳಂದೇನ ಮಾಡಿದರು ಶೂ
ರ್ಪಣಖೆ ಮತ್ತೇನಾದಳೆಂಬ ವಿವರವ ನಮ್ಮ ಮನ ತಿಳಿಯಲರುಹೆನ್ನುತ |
ತನಯರಿರ್ವರು ಕರವ ಮುಗಿದು ಬೆಸಗೊಳಲು ಮುನಿ
ವಿನಯದಿಂ ಬಾಲಕರ ತೆಗೆದಪ್ಪಿ ಮನ್ನಿಸುತ
ಗುಣದಿಂದ ಪೇಳಿದಂ ಮುಂದಣ ಪ್ರಸಂಗವಂ ವನಜನಾಭನ ಚರಿತವ || ||೧||
ರಾಗ ನಾದನಾಮಕ್ರಿಯೆ ಅಷ್ಟತಾಳ
ತನಯರು ಕೇಳಿ ದೃಢದೊಳಿಂದು | ಶೂ |
ರ್ಪಣಖೆ ತನ್ನಂತರಂಗದಿ ನೊಂದು ||
ಇನಿತಾದ ವೃತ್ತಾಂತಗಳನಂದು | ರಾ |
ವಣಗೆ ತಾ ಪೋಗಿ ಪೇಳುವೆನೆಂದು || ||೨||
ಮಂಡೆ ಮಂಡೆಯ ಹೊಡಕೊಳ್ಳುತ್ತ | ನಡೆ |
ಗೊಂಡು ಕಣ್ಣಲಿ ನೀರ ಸುರಿಸುತ್ತ ||
ಕೆಂಡದಂದದಿ ರೌದ್ರ ತಾಳುತ್ತ | ಕಂಡ |
ಕಂಡಸುರರಿಗಿದ ಹೇಳುತ್ತ || ||೩||
ರಾಘವ ಮಾಡಿದ ಮಾಟಕ್ಕೆ | ತಮ್ಮ |
ಲಕ್ಷ್ಮಣ ನೋಡಿದ ನೋಟಕ್ಕೆ ||
ಮೂಗು ಮೊಲೆಯ ಕೊಯ್ದ ಕೋಪಕ್ಕೆ | ತಾನು |
ಬೇಗ ಸಾಗುವೆ ಲಂಕಾ ದ್ವೀಪಕ್ಕೆ || ||೪||
ಹೀಗೆಂದು ತನಗೆ ತಾನೆಂದಳೊ | ತೆಂಕ |
ಸಾಗರ ತಟದಲ್ಲಿ ನಿಂದಳೊ ||
ಹೇಗೆ ದಾಟುತ ಪಾಪಿ ಬಂದಳೊ | ತಾ |
ನಾಗಿ ಲಂಕೆಗೆ ಕೇಡ ತಂದಳೋ || ||೫||
ಭಾಮಿನಿ
ಲವನೆ ಕೇಳ್ ಸುರನರಭುಜಂಗಮ
ಭುವನದಲ್ಲಣ ದಶವದನನು
ತ್ಸವದೊಳೊಡ್ಡೋಲಗದೊಳಿದ್ದನು ಬಹಳ ವಿಭವದಲಿ |
ಪವನ ಶಿಖಿ ಯಮ ನಿಋತಿ ಹರಿ ವೈ
ಶ್ರವಣ ವರುಣಾದಿಗಳು ಬೆಸಸೇ
ನೆವಗೆ ತವಗೆನುತಿದ್ದರಿದ್ದೆಸೆಯಲಿ ದಶಾನನ || ||೬||
ಅಣುಗಕೇಳಾ ಸಮಯದಲಿ ನೆರೆ
ಹಣಿದ ಮೂಗಿನ ಹರಿದ ತುಟಿಗಳ
ಜುಣುಗುಕಿವಿಗಳ ಜರಿದಹುಣ್ಣಿನ ಕೊರೆದಕದವುಗಳ |
ವ್ರಣದ ದುರ್ಗಂಧದ ಮಹಾಭೀ
ಷಣದ ರಕ್ಕಸಿ ಬಂದಳಾ ರಾ
ವಣನ ರಚಿತ ಸಭಾಂತರಾಳಕೆ ಮೃತ್ಯುರೂಪಿನಲಿ || ||೭||
ರಾಗ ನಾದನಾಮಕ್ರಿಯೆ ಅಷ್ಟತಾಳ
ದಶಕಂಠನನುಜೆಯ ಕಂಡನು | ಕಾಣು |
ತಸುರ ಚಿತ್ತದಿ ಭ್ರಮೆಗೊಂಡನು ||
ಎಸೆವ ಓಲಗವ ಬೀಳ್ಕೊಂಡನು | ಅತಿ |
ಕುಶಲದಿಂದೊಳಗೆದ್ದು ಬಂದನು || ||೮||
ತಂಗಿಯ ಕರೆದು ಮಾತಾಡಿದ | ಮಾನ |
ಭಂಗದ ಪರಿಯೆಲ್ಲ ಕೇಳಿದ ||
ಹಿಂಗದೆ ರೌದ್ರವ ತಾಳಿದ | ಅಂತ |
ರಂಗವದೇನೆಂದು ಕೇಳಿದ || ||೯||
ದ್ವಿಪದಿ
ಏನು ಹೊಡೆಯಿತು ಮಾರಿ ತಂಗಿ ನಿನಗೆನುತ
ದಾನವರ ಅರಸ ಬೆಸಗೊಂಡ ನಸುನಗುತ || ||೧೦||
ಊನವನು ತಂದೆ ಖಳವಂಶಕ್ಕೆ ನೀನು
ಮಾನಭಂಗವನೆಸಗಿದವನ ಪೆಸರೇನು || ||೧೧||
ರಾಗ ಕಾಂಭೋಜಿ ಝಂಪೆತಾಳ
ಕೇಳಣ್ಣ ನಿನ್ನೊಳೀ ಮಾನಭಂಗದ ಪರಿಯ |
ಪೇಳಲೇನಿನ್ನು ಧರೆಯೊಳಗೆ ||
ಬಾಳಿರುವೆನೆಂತಕಟ ಸಂಭವಿಸಿದಪಹಾಸ್ಯ |
ದೂಳಿಗವನೊರೆವೆ ವಿಸ್ತರದಿ ||೧೨||
ದಶರಥನ ಸುತರಾದ ರಾಮಲಕ್ಷ್ಮಣರೆಂಬ |
ಪೆಸರುಳ್ಳ ವೀರರಿಬ್ಬರಿಗೆ ||
ವಸುಧೆಯೊಳಗಿದಿರಿಲ್ಲ ನೋಡಿದರೆ ಬಾಲಕರು |
ಅಸಮ ಸಾಹಸರು ಕೇಳಣ್ಣ || ||೧೩||
ರಾಮನೆಂಬಾತನಿಗೆ ರಾಜಿಸುವಳೊರ್ವ ಸತಿ |
ಕಾಮನರಗಿಣಿಯಂತೆ ತರುಣಿ ||
ಕಾಮಿನಿಯ ಕಂಡು ಮರುಳಾಗದವರಾರುಂಟು |
ಭೂಮಿಯೊಳು ಜೋಡಿಲ್ಲವಳಿಗೆ || ||೧೪||
ನಾಗವೇಣಿಯ ಕಂಡು ಸೈರಿಸದೆ ಮನಸು ನಿನ |
ಗಾಗಿ ಕೈಯಿಕ್ಕಿದೆನು ಸತಿಗೆ ||
ಆಗ ಲಕ್ಷ್ಮಣನೆಂಬ ಹುಡುಗನೆನ್ನೆರಡು ಮೊಲೆ |
ಮೂಗು ಸಹ ಕೊಯ್ದ ಕಡುಧೀರ || ||೧೫||
ತರಿದ ಗಾಯವದುರಿಯ ತಾಳಲಾರದೆ ನಮ್ಮ |
ಖರದೂಷಣರ ಸ್ಥಾನಕಯ್ದಿ ||
ಇರದೆ ಸಂಗತಿಯರುಹೆ ಗಜರಥಾದಿಗಳಿಂದ |
ಭರದಿ ಮುತ್ತಿದರೆ ರಾಘವನ || ||೧೬||
ಖರದೂಷಣಾದಿಗಳ ಸಂಹರಿಸಿ ಪಂಚವಟಿ |
ವರದಂಡಕಾರಣ್ಯದೆಡೆಯ ||
ಸ್ಥಿರವಾಗಿ ನೆಲಸಿರ್ದ ನಮ್ಮವರನೆಲ್ಲ ಯಮ |
ಪುರಕೆ ಕಳುಹಿಸಿದನಾ ರಾಮ || ||೧೭||
ದಾನವರ ಸಂಹರಿಸಿ ನಮ್ಮವರ ಹೊಳಲೆಲ್ಲ |
ದಾನಗಳ ಕೊಟ್ಟ ಋಷಿಗಳಿಗೆ ||
ಏನು ಹೋದರೂ ಹೋಗಲೆಂತಾದಡಾಗಲಾ |
ಮಾನಿನಿಯ ತರಬೇಕು ಸಿದ್ಧ || ||೧೮||
ರಾಗ ಸಾರಂಗ ಅಷ್ಟತಾಳ
ಅಂಥಾ ಚೆಲುವೆಯೇನೆ | ಜಾನಕಿ ದೇವಿ |
ಅಂಥಾ ಚೆಲುವೆಯೇನೆ || ಪಲ್ಲವಿ ||
ಅಂಥ ಚೆಲುವೆಯೇನೆ ಕಾಂತೆ ಜಾನಕೀದೇವಿ |
ಕಾಂತೆಯರೊಳು ಮಂಡೋದರಿಗಿಂತ ಸೊಬಗೇನೆ || ||೧೯||
ಕಣ್ಣುಗಳೆಂತಿಹವು | ಅವಳಮೆಯ್ಯ |
ಬಣ್ಣವದೆಂತಿಹುದು ||
ರನ್ನ ಕೆತ್ತಿದನಡು ಸಣ್ಣವಾಗಿಹುದೇನೆ |
ಮನ್ಮಥನರಗಿಣಿಯಂತೆ ತೋರುವಳೇನೆ || ||೨೦||
ರಾಗ ಬೇಗಡೆ ತ್ರಿವುಡೆತಾಳ
ತರಬೇಕು ತರುಣಿಯಳ | ಕಾಮನ ಮುಂಗ |
ಯ್ಯರಗಿಣಿಯಂತಿಹಳ ||
ಸ್ಮರನ ಸಿಂಗಾಡಿ ಪುರ್ಬಿನ ನೀರೆ ಮಲ್ಲಿಗೆ |
ಪರಿಮಳಿಸುವ ಮೆಯ್ಯ ವರಕರಿಗಮನೆಯ || ||೨೧||
ಪನ್ನಗನಿಭವೇಣಿಯ | ಪಂಕಜದೆಸ |
ಳ್ಗಣ್ಣ ಕನ್ನಡ ಜಾಣೆಯ ||
ಹೊನ್ನ ಪುತ್ಥಳಿ ಬೊಂಬೆಯಂಥ ರಾಮನ ಕಯ್ಯ |
ಕನ್ನಡಿ ಕದಪಿನ ಕಡುಸುಪ್ರವೀಣೆಯ || ತರಬೇಕು || ||೨೨||
ಕಿರುನಗೆ ಮೊಗದೋಜೆಯ | ಲಾ |
ವಣ್ಯಭಾಸ್ಕರಕೋಟಿ ನಿಭತೇಜೆಯ ||
ವರಕುಂಭಕುಚೆಯ ಸರೋಜಗಂಧಿನಿಯ ಕೇ |
ಸರಿಮಧ್ಯೆ ಮರಿಶುಕವಚನೆ ಶುಭಾಂಗಿಯ || ತರಬೇಕು || ||೨೩||
ಕಂದ
ತಂಗಿಯ ಸವಿನುಡಿಯಂ ಕೇ
ಳ್ದಂಗಜಶರತಾಗಿ ರಾವಣಂ ಭ್ರಮೆಗೊಂಡಂ |
ಅಂಗನೆ ಮಂಡೋದರಿಗೀ
ಸಂಗತಿಯರುಹಲ್ಕೆ ಪೋಗಿ ತಾ ಕರೆದೆಂದಂ || ||೨೪||
ರಾಗ ಘಂಟಾರವ ಝಂಪೆತಾಳ
ಬಾರೆ ಮೋಹನಾಕಾರೆ | ನಾರೀಶಿರೋರನ್ನೆ |
ನೀರೆ ಮಂಡೋದರಿಯೆ | ಕೇಳೊಂದು ನುಡಿಯ || ||೨೫||
ಜನಕನಂದನೆಯಂತೆ | ಸೀತೆಯೆಂಬವಳಂತೆ |
ಘನಸೊಬಗಿನವಳಂತೆ | ರಾಘವನ ಕಾಂತೆ || ||೨೬||
ತರಲು ಪೋಪೆನು ನಾನು | ತಂದರಾಕೆಯು ನೀನು |
ಎರಕವಾಗಿರುವ ಬಗೆ | ಪೇಳಬೇಕೆನಗೆ || ||೨೭||
ಎನಲಾಗ ಕೇಳಿ ಕಾಂ | ತನನು ಬಿಗಿಯಪ್ಪಿ ಮಯ |
ತನುಜೆ ನುಡಿದಳು ಬೇಗ | ದನುಜಪತಿಯೊಡನೆ || ||೨೮||
ರಾಗ ಆಹೇರಿ ಅಷ್ಟತಾಳ
ತರವಲ್ಲ | ಕಾಂತ | ತರವಲ್ಲ || ಪಲ್ಲವಿ ||
ತರವಲ್ಲವಿದು ಲೋಕ | ಮಾತೆ ಜಾನಕಿಯ |
ತರುವೆನೆಂದೆನುತ ಪೋ | ಗುವುದು ಆ ಸತಿಯ || ಅನುಪಲ್ಲವಿ ||
ನಾರಾಯಣಸ್ವಾಮಿ | ಆ ರಾಮಚಂದ್ರ |
ಚಾರುಲಕ್ಷ್ಮಣನೆಂಬಾ | ತನೆ ಉರಗೇಂದ್ರ |
ನಾರೀ ಜಾನಕಿಯೆಂಬ | ಳಾಕೆ ಲಕ್ಷ್ಮೀದೇವಿ |
ಧಾರಿಣಿಯೊಳಗವ | ತರಿಸಿದರೀ ಸಾರಿ || ತರವಲ್ಲ || ||೨೯||
ಕುಲವೆ ಸಂಹಾರವಾ | ಗುವ ಕಾಲ ಬಂತು |
ಇಳೆಯೊಳ್ ಬಾಳಿರುವಂಥ | ಋಣವೆಲ್ಲ ಸಂತು |
ಇಳೆಯ ನಂದನೆ ಸಿಕ್ಕ | ಳೇತಕೀ ಭ್ರಾಂತು |
ಉಳಿಯದು ಪ್ರಾಣ ನಾ | ಸಾರಿದೆನಿಂತು || ತರವಲ್ಲ || ||೩೦||
ಖರದೂಷಣಾದ್ಯರು | ಬಡವರೆ ನೋಡು |
ನೆರೆ ಮುಂದೆ ಬಾಳುವ | ದರಿತು ಮಾತಾಡು |
ಕರವ ಮುಗಿದು ಬೇ | ಡುವೆ ದಯೆ ಮಾಡು |
ತರುಣಿಯ ತಳ್ಳಿಗ್ಹೋ | ದರೆ ಬಂತು ಕೇಡು || ತರವಲ್ಲ || ||೩೧||
ರಾಗ ಶಂಕರಾಭರಣ ಏಕತಾಳ
ವಲ್ಲಭೆ ನೀನಿಂಥ ಮಾತ | ನೆನ್ನೊಳು ಪೇಳುವರೇನೆ |
ಹುಲ್ಲೆ ಘೋರ ಸಿಂಹವನ್ನು | ಕೊಲ್ಲುವದುಂಟೆ || ||೩೨||
ಎಳ್ಳಿನಷ್ಟು ಕಿಚ್ಚು ಮನೆಗ | ಳೆಲ್ಲ ಸುಡದೆ ಬಿಡುವುದುಂಟೆ |
ಒಳ್ಳಿತಲ್ಲ ಬುದ್ಧಿ ಬರಿದೆ | ಕೆಡಬೇಡ ಕಾಂತ || ||೩೩||
ಮಾನಿನಿ ಕೇಳಿಲಿಗಳು ಮ | ದ್ದಾನೆಯ ಸಂಹರಿಸಲುಂಟೆ |
ದಾನವರಿಗೂ ಮಾನವರಿಗೂ | ಸಮವೇನೆ ಕಾಂತೆ || ||೩೪||
ಕಾಣದೆ ಕುಣಿಯೊಳು ಬಿದ್ದ | ಡಾನೆಯಾದರೇನು ಕಡೆಗೆ |
ಶ್ವಾನಗಿಂತ ಕಡೆಯಲ್ಲವೆ | ನೀ ನೋಡು ಕಾಂತ || ||೩೫||
ಕಿಚ್ಚಿಗಿರುವೆ ಮುತ್ತಲುಂಟೆ | ಬಚ್ಚಲೂ ಮಾಳಿಗೆಯೂ ಸರಿಯೆ |
ಹೆಚ್ಚುಕಡಿಮೆಯಿಲ್ಲವೇನೆ | ಅಮೃತ ಗರಳವೇ || ||೩೬||
ಮೆಚ್ಚಿ ಪರರ ಪೆಣ್ಗೆಮನಸು | ಹುಚ್ಚಾದಾತಗಮೃತ ವಿಷವು |
ಕಿಚ್ಚು ನೀರೊಳುರಿವುದುಂಟೆ | ಹೆಚ್ಚೇನು ಕಾಂತ || ||೩೭||
ಈರೇಳು ಲೋಕದೊಳಗುಳ್ಳ | ಪಾರುಪತ್ಯವೆನಗಿದ್ದಂತೆ |
ನಾರಿ ಹುಲುಮನುಜರ್ಗೆಲ್ಲ | ನಾನಂಜುವೆನೇನೇ || ||೩೮||
ಬೇರು ಕಡಿದ ಮೇಲೆ ವೃಕ್ಷ | ಜಾರದೆ ನಿಲ್ಲುವದುಂಟೆ |
ಮಾರಿಬಡಿವ ವೇಳ್ಯಕ್ಕಾರೂ | ಬಾರರು ಕಾಂತ || ||೩೯||
ಬಂದದ್ದೆಲ್ಲಾ ಬರಲದರಿಂದ | ಮಂದಗಮನೆ ಸೀತೆಯನ್ನು |
ತಂದಲ್ಲದೆ ಬಿಡೆನು ಕಾಣೆ | ಚಂದಿರವದನೆ || ||೪೦||
ತಂದೆತಾಯ್ಗಳಾಣೆ ನಿಮಗೆ | ತಂದರೆ ಜಾನಕಿಯ ಮನೆಗೆ |
ಕುಂದುವದೈಶ್ವರ್ಯವೆಲ್ಲ | ಮುಂದೆನ್ನ ರಮಣ || ||೪೧||
ಕಂದ
ಕೋವಿದ ನೀತಿಯ ಮಾತಂ
ಭಾವಕಿ ತಾ ತಿಳಿಯಪೇಳ್ದೊಡಂಬಡಿಸಿದೊಡಂ |
ರಾವಣ ಕೇಳದೆ ತನ್ನಯ
ಮಾವಂ ಮಾರೀಚನಿದ್ದ ವನಕೈತಂದಂ || ||೪೨||
ರಾಗ ಕೇದಾರಗೌಳ ಆದಿತಾಳ
ಮಾರೀಚನಿಶಾಚರ ಸಂತತ |
ವೀರಮನೋಹರ ವಿಕ್ರಮಶೌರ್ಯ ||
ಮಾರಾಂಗಶರೀರಮನೋಹರ |
ಕಾರುಣ್ಯ ಸಮುದ್ರಗಂಭೀರ || ||೪೩||
ದಶರಥನ ಸುತರಿಬ್ಬರು ಹುಡುಗರು |
ವಸುಧೆಯೊಳತಿ ಶೋಭಿಪರಂತೆ ||
ಕುಶಲದಿ ಖರ ದೂಷಣ ತ್ರಿಶಿರರ |
ಪೆಸರಡಗಿಸಿ ಮೆರೆದಿಹರಂತೆ || ||೪೪||
ರಾಘವನೆಂಬಾತನಿಗೊರ್ವಳು ಸತಿ |
ನಾಗಕನ್ನಿಕೆಯ ಪೋಲುವಳಂತೆ ||
ಪೋಗುವೆ ನಾ ತರುವುದಕೇ ಪೊಂಮೃಗ |
ವಾಗಿಯೆ ನೀ ನಲಿದಾಡಬೇಕಲ್ಲಿ || ||೪೫||
ರಾಗ ಮಧ್ಯಮಾವತಿ ಏಕತಾಳ
ರಾವಣ ನೀ ಬಲು ಸಾಹಸಿಯಯ್ಯ |
ದೇವರ್ಕಳ ದೇವನು ಶ್ರೀರಾಮ ||
ಕೇವಲ ನರಜನ್ಮದಿ ಜನಿಸೀಪರಿ |
ಭೂವಲಯದಿ ತಿರುಗಾಡುವನವನು || ||೪೬||
ತತ್ಕಾಂತೆಯ ತಂದರೆ ವಂಶಕ್ಕೆ ಮ |
ಹತ್ಕಂಟಕವಲ್ಲದೆ ಸುಖವೆ ||
ತತ್ಸಂಗತಿ ಬೇಡಾ ನಿದಾನಿಸು |
ಮತ್ಕಿಂಚಿತ ಮಾತನು ನೀ ಕೇಳು || ||೪೭||
ರಾಗ ಮಾರವಿ ಏಕತಾಳ
ಸಾಕೆಲವೊ ಬಲ್ಲೆನು ನಾನು |
ಏಕವರನು ಕೊಂಡಾಡುವೆಯಾ |
ನಾ ಕೊಲ್ಲುವೆ ನೀ ಪೋಗದಿರೆ | ಎನೆ |
ತಾ ಕೈಮುಗಿದೈದುವೆನೆಂದ || ||೪೮||
ರಾಗ ಪಂತುವರಾಳಿ ಅಷ್ಟತಾಳ
ಪೋಗುವೆ | ದಮ್ಮಯ್ಯ | ಪೋಗುವೆ || ಪಲ್ಲವಿ ||
ನಿನ್ನ ಕೈಯಪೆಟ್ಟ ತಿಂದು ಸಾವುದರಿಂದ |
ನರಕವೇ ಸಾಧ್ಯವಹುದು ತನಗಿಂದು ||
ರಾಮನ ಬಾಣದೊಳಸುವ ನೀಗಿದರೆ ನಾ |
ನೀರೇಳು ಲೋಕದ ಮೋಕ್ಷವ ಪಡೆವೆ || ಪೋಗುವೆ || ||೪೯||
ಭಾಮಿನಿ
ಆದಡೆಲವೋ ಕೇಳು ತೋರ್ಪೀ
ರಯ್ದು ತಲೆಗಳ ಬೈತಿಡುತ ಬಲು
ಕಯ್ದುಗಳ ಬಿಸುಟಡಗಿಸೀ ರಾಕ್ಷಸ ಕಳೇಬರವ |
ಐದೆ ತಾಪಸ ವೇಷವನು ಬಳಿ
ಕಯ್ದು ಪರವನಿತಾ ವ್ಯಸನಿಗಳಿ
ಗಾದ ಪರಿಯನು ಹೊರುವ ಪಾಪಕೆ ಹೊರಗು ತಾನೆಂದ || ||೫೦||
ರಾಗ ಪುನ್ನಾಗ ಅಷ್ಟತಾಳ
ಅಡವಿಯೊಳಗೆ ರಾಮ | ನಿರುವ ಸುದ್ದಿಯ ಕೇಳಿ |
ಕಡುಚೆಲುವಿನ ಮೃಗ ಬಂತೋ ||
ತಂದಾನ ತಾನೆ ತಂದನಾನಾ || ||೫೧||
ನೋಡಿ ಜಾನಕಿ ಭ್ರಮೆ | ಗೂಡಿ ತನ್ನರಸನ |
ಬೇಡಿ ಕಾಡಲು ಮೃಗ | ಬಂತೋ ಓ ಓ ||
ತಂದಾನ ತಾನೇ ತಂದನಾನಾ || ||೫೨||
ಶಾರ್ದೂಲವಿಕ್ರೀಡಿತ
ಮಾರೀಚಂ ಮೃಗವಾಗಿ ಪಂಚವಟಿಗಂ ಬಂದಾಗಲೋಲಾಡಲುಂ
ಸೌರಮ್ಯಾತಿಶಯಪ್ರಧಾನಕರಮಂ ಕಂಡಾಗಳಾ ಜಾನಕೀ |
ಚೋರತ್ವಂಗಳ ಮಾಯದಾಕೃತಿಯಿದೆಂದಾಕಾಂತೆ ತಾ ಕಾಣದೆ
ಭೂರೀ ವಿಸ್ಮಿತೆಯಾಗಿ ಕಾಂತನೊಡನಂ ತಾ ದೈನ್ಯದಿಂತೆಂದಳು || ||೫೩||
ರಾಗ ಪುನ್ನಾಗವರಾಳಿ ಏಕತಾಳ
ನೋಡಿದೆಯಾ | ರಾಮ | ನೋಡಿದೆಯಾ || ಪಲ್ಲವಿ ||
ದೊಡ್ಡ | ಕಾಡಿನಿಂದಲೋಡಿಬಂದು | ಆಡುವಂಥ ಪೊಂಮಿಗವ || ಅನುಪಲ್ಲವಿ ||
ಚಿನ್ನದ ಹಾಗಿರುವ ಮೆಯ್ಯ | ಬಣ್ಣದ ಸುತ್ತಲೂ ಪಂಚ |
ವರ್ಣದ ರೇಖೆಗಳು ಬಂದ | ಚೆಂದವ ನೋಡು ||
ಸಣ್ಣ ಸಣ್ಣ ಕಾಲಬೆರಳು | ಸಾಲಿನುಗುರು ಭಾವಂಗಳ |
ತನ್ನಂಗ ದಿನ್ನಂಗ ಧಿಕ್ಕಿಟ | ತೋಯೆಂದು ಕುಣಿವ ಮೃಗವ || ||೫೪||
ಜಗದೇಕವೀರನೆ ಕಯ್ಯ | ಮುಗಿದು ಬೇಡುವೆ ದಮ್ಮಯ್ಯ |
ಹಗಲೂ ಯಿರುಳೂ ಕುಣಿಸಿಕೊಂಡು | ಸೊಗದಿಂದಿರ್ಪೆನು ||
ಸುಗುಣ ನಿನಗೆ ನಾ ಬೇಕೆಂಬ | ಬಗೆಯೊಳು ಸ್ನೇಹವಿದ್ದ |
ರಗಲಿ ಓಡಿಹೋಗುವ ಮುನ್ನ | ಮೃಗವ ಹಿಡಿದು ತಾ ಮೋಹನ್ನ || ||೫೫||
ರಾಗ ಕೇದಾರಗೌಳ ಅಷ್ಟತಾಳ
ಅರಸಿ ನೀ ಸುಮ್ಮನೆ ಭ್ರಮೆಗೊಳ್ಳಬೇಡವೆ |
ಸರಸದ ಮೃಗವಲ್ಲವೆ ||
ಸರಸಿಜಾಂಬಕಿ ನಿನ್ನ ಮರುಳು ಮಾಡಲು ಬಂದ |
ದುರುಳರ ಕಪಟ ಕಾಣೆ || ||೫೬||
ಕಪಟದಾಕೃತಿಯೆಂದು ಕಾಂತ ನೀ ಯೆನ್ನ ಚಾ |
ಳಿಪುದೆಲ್ಲ ಬಲ್ಲೆ ನಾನು ||
ಅಪರೂಪವಿದೆ ಕಂಡು ಬಯಸಿದರೆನಗೊಂದು |
ಉಪಕಾರ ಮಾಡೊ ನೀನು || ||೫೭||
ನಾಡಮಾತಲ್ಲ ರಾಕ್ಷಸರು ಮಾಯಕದಿ ಬಂ |
ದಾಡುವ ನಾಟ್ಯ ಕಾಣೆ ||
ಬೇಡ ಸುಮ್ಮನೆ ಕಡ್ಡಿ ಮುರಿದು ಸಾರಿದೆನತ್ತ |
ನೋಡಬೇಡವೆ ಯೆನ್ನಾಣೆ || ||೫೮||
ಕಾಡಿನ ಮೃಗದಿಂದ ಕೇಡು ಬಂತಾದರೆ |
ನೋಡಿಕೊಂಬೆನು ಬಂದುದ ||
ನೋಡದಿದ್ದರೆ ಒಂದು ಕ್ಷಣ ಜೀವ ನಿಲ್ಲದು |
ಬೇಡಿಕೊಂಬೆನು ನಿನ್ನನು || ||೫೯||
ಕೆಟ್ಟ ಮೇಲೇ ಬುದ್ಧಿ ಬರುವುದು ನೀ ಗಂಟ |
ಕಟ್ಟಿಕೊ ಸೆರಗಿನಲಿ ||
ದಿಟ್ಟೆ ಹೆಂಗುಸು ಇವಳಾಡುವ ಮಾತಿಗೆ |
ಲಕ್ಷ್ಮಣ ಸಾಕ್ಷಿ ನೀನು || ||೬೦||
ಎಷ್ಟು ಚಾಳಿಸಿದರು ನಾನೀ ಮಾತನು ಕೇಳಿ |
ಬಿಟ್ಟವಳಲ್ಲ ನಿನ್ನ ||
ಸಿಟ್ಟು ಬಂದರು ಬರಲಿದ ತಾರದಿದ್ದರೆ |
ಬಿಟ್ಟಪೆ ಪ್ರಾಣವನ್ನು || ||೬೧||
ಭಾಮಿನಿ
ಚಂಚಲಾಕ್ಷಿಯೆ ಕೇಳರಣ್ಯದಿ
ಸಂಚರಿಪ ಮೃಗಕಂಬನೆಸೆದರೆ
ಪಂಚತುವವಯ್ದಿದರೆ ಮಾಡುವುದೇನು ನೀನದನು |
ಪಂಚಬಾಣನ ಪಿತನೆ ಕೇಳಸು
ವಂಚಿಸುತ ಮಿಗ ಮಡಿದುದಾದರೆ
ಕಂಚುಕವ ರಚಿಸುವೆನು ಚರ್ಮವ ತೆಗೆದು ಪ್ರೀತಿಯಲಿ || ||೬೨||
ರಾಗ ನೀಲಾಂಬರಿ ಝಂಪೆತಾಳ
ಅನುಜ ಲಕ್ಷ್ಮಣ | ಜನಕನಂದನೆ |
ಮೃಗಮನೋಚಿತೆ | ಯಾದಳಲ್ಲಯ್ಯ || ||೬೩||
ತರಲು ಪೋಪೆನಾ | ಬರುವ ತನಕನೀ |
ಧರಣಿಜಾತೆಯ | ಕಾಯ್ದುಕೊಳ್ಳಯ್ಯ || ||೬೪||
ಅಗ್ರಜಾ ವೀರ | ಈ | ಸ್ವಲ್ಪ ಕೆಲಸಕೆ |
ವ್ಯಗ್ರದಿಂದ ನೀ | ತೆರಳಲೇತಕೆ || ||೬೫||
ಶೀಘ್ರದಿಂದೆನ್ನ | ಕಳುಹಬಾರದೆ | ಅ |
ಭ್ಯಗ್ರದಿಂದ ನಾ | ಕೊಂಡು ಬರುವೆನು || ||೬೬||
ಆಗದಾಗದು | ನಿನ್ನ ಕೈಯಲ್ಲಿ |
ಸಾಗದಾ ಮೃಗ | ಕಪಟವಿದ್ಯೆಯು || ||೬೭||
ಎಷ್ಟು ದಿವಸಕೆ | ಬರುವೆ ರಾಘವ |
ಸೃಷ್ಟಿಜಾತೆಯು | ನಾನು ಒಬ್ಬನೆ || ||೬೮||
ನಿಮಿಷಮಾತ್ರಕೆ | ಬರುವೆ ಲಕ್ಷ್ಮಣ |
ಅನಕ ಸೀತೆಯ | ನೀ | ಕಾಯ್ದುಕೊಳ್ಳಯ್ಯ || ||೬೯||
ವಾರ್ಧಕ
ಎನುತ ತಮ್ಮಗೆ ಬುದ್ಧಿಯಂಪೇಳಿಯಾ ಕ್ಷಣವೆ
ಕನಕ ಮೃಗಮಂ ರಾಮ ಬೆಂಬತ್ತೆ ವೇಗದೊಳು
ಘನತರದ ಘೋರಡವಿಗಯ್ದಿತಾ ದನುಜಮೃಗ ರಾಘವಂ ಕೋಪದಿಂದ |
ದಣಿದು ಶರವಂ ಬಿಡಲು ಹಾ ಲಕ್ಷ್ಮಣಾಯೆಂದು
ದನಿಗೆಯ್ದು ಮಾರೀಚ ಪ್ರಾಣವಂ ಬಿಡಲಾಗಿ
ವನಿತೆ ಜಾನಕಿ ಕೇಳ್ದು ರಾಮನೇ ನಿಜವೆಂದು ಮೈದುನನೊಳಿಂತೆಂದಳು || ||೭೦||
ರಾಗ ತೋಡಿ ಏಕತಾಳ
ಮುಗುದ ಕೇಳಿದೆನಯ್ಯ ಮೃಗವಲ್ಲ ರಾಕ್ಷಸರು |
ರಘುವೀರನನು ಹೋ ಹೋ ಕೊಲ್ಲುವರೇನೈ ||
ಜಗದೇಕವೀರ ಕೂಗುವ ಧ್ವನಿ ಕೇಳಿತು |
ಮಿಗುವರಿಯಿತು ಕಾರ್ಯ ಸಹಜ ಸೌಮಿತ್ರಿ ||
ನೋಡಿ ಬಾರಯ್ಯ ಪೋಗಿ | ಏನಾಯಿತೆಂದು || ||೭೧||
ರಾಮನ ಧ್ವನಿಯಲ್ಲ ಜಾನಕಿ ನೀ ಕೇಳು |
ಯಾಮಿನೀಚರರವಸಾನಕಾಲದಲಿ |
ತಾಮಸದಿಂದತ್ತುದಲ್ಲದೆ ಸಂಗ್ರಾಮ |
ಭೀಮನ ದನುಜರು ಕೊಲ್ಲುವುದುಂಟೆ ||
ಬರಿದೆ ಚಿಂತಿಸಬೇಡವೆ | ಜಾನಕೀದೇವಿ || ||೭೨||
ಎಷ್ಟು ಪೇಳಿದರು ನೀ ಯೆನ್ನರಸನ ಧ್ವನಿ |
ಯಷ್ಟಕ್ಕೂ ನಾನದನರಿಯದಳೇನೋ ||
ಸೃಷ್ಟಿಪಾಲನ ಪ್ರಾಣದಟ್ಟುಳಿಗೊದಗದೆ
ಬಿಟ್ಟು ಸುಮ್ಮನೆ ಹಾಳು ನೆವನವಿದೇಕಯ್ಯ ||
ನೋಡಿ ಬಾರಯ್ಯ ಪೋಗಿ | ಏನಾಯಿತೆಂದು || ||೭೩||
ರಾಗ ಸೌರಾಷ್ಟ್ರ ರೂಪಕತಾಳ
ದೇವಿ ಕೇಳ್ ದೃಢ | ರಾಮಚಂದ್ರನು |
ದೇವತಾಂಶಸಂ | ಭೂತನಲ್ಲವೆ ||
ಆ ವಿಭು ಮಹಾ ಸ್ವ | ತಂತ್ರಮೂರ್ತಿಯ |
ಆವನಾದರೂ | ಕೊಲ್ಲಲಾಪನೆ || ||೭೪||
ಏನು ಲಕ್ಷ್ಮಣ | ಮನದ ಸಂಶಯ |
ಆ ನರೇಂದ್ರಗೆ | ಪ್ರಾಣಸಂಕಟ ||
ನೀನು ಸುಮ್ಮನೆ | ತಡವ ಮಾಡದೆ |
ಪ್ರಾಣನಾಥನ | ನೋಡಿಬಾರಯ್ಯ || ||೭೫||
ತಾಯೆ ಕೇಳವ್ವ | ರಾಕ್ಷಸರ್ಕಳ |
ಮಾಯವಲ್ಲದೆ | ರಾಮನೇನಲ್ಲ ||
ಈಯರಣ್ಯದಿ | ನಿನ್ನ | ಬಿಟ್ಟು ಹೋದರೆ |
ಕಾಯಜೋಪಮ | ಕೋಪಿಸುವ ನಿಜ || ||೭೬||
ಬಾಲಕ ನಿನ್ನ | ಭಾವವೇನಯ್ಯ |
ಶ್ರೀಲಲಾಮ ತಾ | ನಳಿದ ಮೇಲೆನ್ನ ||
ಆಳುವೆನೆಂಬ | ಆಸೆಯಿಂದಲಿ |
ಆಲಸ್ಯದಿಂದ | ನೀ | ಕುಳಿತೆ ನಿಶ್ಚಯ || ||೭೭||
Leave A Comment