ಪವಾಡಗಳೆಂದರೆ, ಜಗತ್ತಿನಲ್ಲಿ ಯಾರಿಗೂ ಸಾಧ್ಯವಾಗದಂತಹ ಆಶ್ಚರ್ಯಕರ ಘಟನೆಗಳನ್ನು ನಿರ್ಮಾಣ ಮಾಡುವುದು ಮತ್ತು ವಸ್ತುಗಳನ್ನು ಸೃಷ್ಟಿಸುವುದು. ಇಂತಹ ಘಟನೆ, ವಸ್ತುಗಳೇ ಕಾರಣಾಂತರಗಳಿಂದ ಪವಾಡಗಳಾಗಿ ಮಾರ್ಪಟ್ಟು ಪುಣ್ಯಪುರುಷರಿಗೆ ಪ್ರಚೋದಕವಾಗುತ್ತವೆ ಮತ್ತು ಪೂರಕವಾಗುತ್ತವೆ. ಹೀಗಾಗಿ ತನ್ನ ಸುತ್ತಮುತ್ತಲ ಜನಕ್ಕೆಲ್ಲ ಇವರು ಪೂಜ್ಯರಾಗುತ್ತಾರೆ, ಅವರಿಂದ ಪೂಜಿಸಲ್ಪಡುತ್ತಾರೆ.

ಪವಾಡ ಮತ್ತು ಮಹಿಮೆಗಳು ಅಮಾಯಕ ಮತ್ತು ಮುಗ್ಧ ಜನರ ಸೃಷ್ಟಿಗಳೇ ಆಗಿವೆ. ಆದ್ದರಿಂದ ಇಲ್ಲಿ ಬುದ್ಧಿಯ ಚಮತ್ಕಾರಕ್ಕಾಗಲಿ ಅಥವಾ ಗಣಿತದ ಲೆಕ್ಕಾಚಾರಕ್ಕಾಗಲಿ ಯಾವುದೇ ಆಸ್ಪದ ಇರಲಾರದು. ಈ ಪವಾಡಗಳಲ್ಲಿ ಕಲ್ಪನಾ ರಮ್ಯತೆ ಇರಬಹುದಾದರೂ ಅತೀ ಬುದ್ಧಿವಂತಿಕೆಯ ಕೈವಾಡವೇನೂ ಇರುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ದೊಡ್ಡವನು, ಪೂಜ್ಯನು ಎಂದು ಎನಿಸಿಕೊಳ್ಳಬೇಕಾದರೆ, ಅವನ ಸುತ್ತ ಹತ್ತಾರು ಪವಾಡಗಳನ್ನು ಜನಪದರು ಸೃಷ್ಟಿ ಮಾಡುವ ಕಾಲವೊಂದಿತ್ತು. ಕಲಾನಂತರ ಈ ಜನಪದರೆ ತಮ್ಮ ಧಾರ್ಮಿಕ ಶ್ರದ್ಧೆಯ ಮುದ್ರೆಯನ್ನು ಅದಕ್ಕೊತ್ತುತ್ತಾರೆ. ಹೀಗಾಗಿ ಪವಾಡ ಅಥವಾ ಮಹಿಮೆಗಳು ಅನಾದಿ ಕಾಲದಿಂದಲೂ ನಮ್ಮ ಧಾರ್ಮಿಕ ಪುಣ್ಯಪುರುಷರ ಜೀವನದಲ್ಲಿ ಹಾಸುಹೊಕ್ಕಾಗಿವೆ. ಮತ್ತು ಅವರ ಒಟ್ಟು ಜೀವನದ ಅವಿಭಾಜ್ಯ ಅಂಗವಾಗಿ ತಲೆಮಾರಿನಿಂದ ತಲೆಮಾರಿಗೆ ಹಾಗೆಯೇ ಸಾಗಿಬಂದಿದೆ. ಈ ಪವಾಡ ಅಥವಾ ಮಹಿಮೆಗಳ ಸೃಷ್ಟಿ ಯಾವುದೇ ಒಂದು ಧರ್ಮದ “ಪುಣ್ಯಪುರುಷನಿಗೆ” ಸೀಮಿತವಾಗಿಲ್ಲವೆಂದು ತೋರುತ್ತದೆ. ಕ್ರಿಶ್ಚಿಯನ್ ಧರ್ಮದ ಕ್ರೈಸ್ತನಿಗೂ ಈ ಪವಾಡದ ಸೋಂಕು ತಪ್ಪಿಲ್ಲ. ಹನ್ನೆರಡನೆಯ ಶತಮಾನದ “ಭಕ್ತಿ ಭಂಡಾರಿ” ಬಸವಣ್ಣನನ್ನೂ ಇದು ಬಿಟ್ಟಿಲ್ಲ. ಕ್ರೈಸ್ತನ ಸ್ಪರ್ಶದಿಂದ ತೊನ್ನು ಇತ್ಯಾದಿ ಚರ್ಮರೋಗಗಳು ಮಾಯವಾಗುವ ಪವಾಡವಾಗಲಿ, ಅಥವಾ ಗೋರಿಯಿಂದ ಮೂರನೆಯ ದಿವಸಕ್ಕೆ ಎದ್ದು ಬರುವ ಪವಾಡವಾಗಲಿ, ಹಾಗೆ ನೋಡಿದರೆ ಇವೆಲ್ಲ ಮುಗ್ಧ ಭಕ್ತಿವಂತರ ಸೃಷ್ಟಿಗಳೇ ಎಂದು ಮೇಲ್ನೋಟಕ್ಕೆ ಸಹಜವಾಗಿ ಕಾಣುವಂಥದ್ದು. ಕೇವಲ ಕ್ರೈಸ್ತನ ಮೇಲೆ ಹತ್ತಾರು ಪವಾಡಗಳು ಸೃಷ್ಟಿಗೊಂಡಿದ್ದರೆ ನಾವು ಆಶ್ಚರ್ಯಪಡಬೇಕಾಗಿರಲಿಲ್ಲ. “ಶರ್ಮನ ಆನ್ ದಿ ಮೌಂಟ್” ಪ್ರಸಂಗ ತುಂಬಾ ವಾಸ್ತವಿಕವಾಗಿದ್ದು, “ಕ್ರೈಸ್ತನ ವಾಣಿ” “ನಿಮ್ಮಲ್ಲಿ ಯಾರ್ಯಾರೂ ಪಾಪಿಗಳಲ್ಲವೋ, ಅವರೆಲ್ಲ ಈ ಮಹಿಳೆಗೆ ಕಲ್ಲು ಬೀಸಿ” ಎಂದು ಬೋಧಿಸಿದ ಕ್ರೈಸ್ತನ ಮಾತಿಗೆ, ಸುತ್ತೂ ನೆರೆದ ಜನ ಎಲ್ಲರೂ ತಮ್ಮ ಕೈಯಲ್ಲಿದ್ದ ಕಲ್ಲನ್ನು ಹಾಗೇ ಬಿಡುವುದು. ಇತ್ಯಾದಿ ಘಟನೆಗಳೂ ವಾಸ್ತವ ಜೀವನದ ಉದ್ಭೋದಕ ಮತ್ತು ರೋಚಕ ಪ್ರಸಂಗಗಳೇ. ಇಂಥ ಸತ್ವಪೂರ್ಣ ಆಚರಣೆಗಳು ಅಂಥ ಪುರುಷರಲ್ಲಿ ಇದ್ದುದರಿಂದಲೇ ಜನ ಅವರನ್ನು ಪೂಜಿಸುತ್ತಾರೆ. ಅವರನ್ನು ಹಾಡಿ ಹೊಗಳುತ್ತಾರೆ. ಅಷ್ಟು ದೂರ ಏಕೆ? ಕಲ್ಯಾಣದ ಬಸವಣ್ಣನ ಜೀವನದಲ್ಲಿ “ಬದನೆಕಾಯಿ ಲಿಂಗವಾದ” ಪವಾಡವನ್ನು ಜನ ನಂಬಿಕೊಂಡು ಬಂದ ಸಂಗತಿಯಲ್ಲವೇ?

ಬುಡಕಟ್ಟು ಕಾವ್ಯಗಳು ಭಿನ್ನ ನೆಲೆಯ ಕೃತಿಗಳಾಗಿವೆ. ಯಾವುದೇ ಭಾಷೆಯ ಪರಂಪರೆಗೆ ಹೊಸತನ ಬೇಕಾದಾಗ, ಹೊಸತನ ಅಗತ್ಯವೆನಿಸಿದಾಗ, ಹೊಸ ಹೊಸ ವ್ಯಾಖ್ಯಾನಗಳನ್ನು ಜೋಡಿಸುತ್ತ ಬರುವುದೇ ಈ ಮಹಾಕಾವ್ಯಗಳ ಉದ್ದೇಶ. ಈ ಲಂಬಾಣಿಯಂಥ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಜೀವನಕ್ರಮವನ್ನು ಹೊಂದಿರುವುದರಿಂದ ಮತ್ತು ತನ್ನ ನಾಯಕನ ಕಥೆಯನ್ನು ಮೈತುಂಬಿ ಹೇಳುವುದರಿಂದ ತನ್ನ ನಾಯಕನ ಚರಿತ್ರೆ ಜಾಳಾಗಬಾರದು ಎನ್ನುವ ರೀತಿಯಲ್ಲಿ ತನಗೆ ತಿಳಿದಿದ್ದನ್ನು ಅದು ಹೆಚ್ಚಾಗಿ ಸ್ವಾರಸ್ಯವಾಗಿ, ಸಮೃದ್ಧವಾಗಿ ಕಟ್ಟಿಕೊಡುತ್ತದೆ. ಈ ಪರಂಪರೆಗೆ ಮಲೆಮಹಾದೇಶ್ವರ, ಮಂಟೇಸ್ವಾಮಿ, ಕುಮಾರರಾಮ, ಜುಂಜಪ್ಪ, ಎತ್ತಪ್ಪ, ಮಾಳಿಂಗರಾಯ, ಬೀರದೇವರು ಮುಂತಾದ ಜನಪದ ಸಾಂಸ್ಕೃತಿಕ ನಾಯಕರನ್ನು ಕುರಿತ ಎಲ್ಲ ಕಾವ್ಯಗಳು ಒಂದು ಹೊಸ ತಿರುವನ್ನು ಕೊಡುತ್ತವೆ. ಮತ್ತು ಹೊಸ ಸೃಷ್ಟಿಯನ್ನು ಮಾಡುತ್ತವೆ. ಈ ದೃಷ್ಟಿಯಿಂದ “ಸೇವಾಲಾಲರ ಕಾವ್ಯ” ಸಂಗ್ರಹಕಾರ್ಯ ಅಗತ್ಯವೆನಿಸುತ್ತದೆ.

ನಿರಂತರ ಕಾರ್ಯ ಕೆಲಸಗಳಲ್ಲಿ ನಂಬಿಕೆ ಇಟ್ಟುಕೊಂಡಿರುವ ಬಂಜಾರಾ ಸಂಸ್ಕೃತಿಯ ಪ್ರತೀಕವಾದ ಸೇವಾಲಾಲರ ಜೀವನದಲ್ಲಿಯೂ ಇಂಥ ಮಹಿಮೆಗಳು, ಘಟನೆಗಳು ನಡೆದಿದ್ದರೆ ನಾವು ಆಶ್ಚರ್ಯಪಡಬೇಕಾಗಿಲ್ಲ. ಯಾಕೆಂದರೆ “ತಾಂಡಾ ಸಂಸ್ಕೃತಿ” ಇರುವ ಯಾವುದೇ “ತಾಂಡಾ”ದಲ್ಲೂ ಹೋದರೂ ಸೇವಾಲಾಲರ ಬಗ್ಗೆ ಇಂದಿಗೂ ಅಪಾರ ಭಕ್ತಿ ಶ್ರದ್ಧೆ ಇದೆ. ಮತ್ತು ಸೇವಾಲಾಲರನ್ನು ಅಪಾರ ಗೌರವದಿಂದ ಇಡೀ ಬಂಜಾರ ಜನಾಂಗ ಪೂಜಿಸುತ್ತದೆ. ಆತನ ಮಹಿಮೆಗಳನ್ನು ಕುರಿತು ಅವರು ಹಾಡುತ್ತಾರೆ. ಇದು ದೇವಲ ಗೋವುಗಳ(ಗೋಪಾಲ) ರಕ್ಷಕನಾದ್ದರಿಂದ ಮಾತ್ರ ಅಲ್ಲ. ದುಡಿಮೆಯ ಮಹಿಮೆಯನ್ನು ಆತ ಸ್ವತಃ ಆಚರಿಸಿ ತೋರಿಸಿ ಇಡೀ ಬಂಜಾರಾ ಜನಾಂಗವನ್ನು ರಕ್ಷಿಸಿದ. ಆದ್ದರಿಂದಲೇ ಯಾವುದೇ ಭಾಗದಲ್ಲಿಯ “ತಾಂಡಾ” ಈ ಕಾರಣದಿಂದ ಅವರ ಜೀವನದ ಸುತ್ತೂ ಸೃಷ್ಟಿಯಾಗಿರಬಹುದಾದ ಸಾಂದರ್ಭಿಕ ಪವಾಡಗಳನ್ನು ನಂಬುತ್ತಾರೆ. ಪವಾಡ ಎನ್ನುವುದು ಒಂದು ದೃಷ್ಟಿಯಿಂದ ಅಗಾಧವಾದ ಶಕ್ತಿಯನ್ನು ಒಳಗೊಂಡಿದೆ. ಜನರ ಧಾರ್ಮಿಕ ಶ್ರದ್ಧೆಯ ಆಧಾರವಾಗಿರುತ್ತದೆ. ಮತ್ತು ಅವರ ಶ್ರದ್ಧೆ ಅವಿಭಾಜ್ಯ ಅಂಗವಾಗಿರುತ್ತದೆ. ಈ ಕಾರಣದಿಂದಾಗಿ ಪವಾಡಗಳು, ಮಹಿಮೆಗಳು ಪ್ರಶ್ನಾತೀತವಾಗಿರುತ್ತವೆ. ಇದೊಂದು ಧಾರ್ಮಿಕ ಶ್ರದ್ಧೆಯ ಮಾತು. ಸೇವಾಲಾಲರ ಜೀವನದಲ್ಲಿ ನಡೆದಿರಬಹುದಾದ ಅನೇಕ ಪವಾಡಗಳು ಮತ್ತು ಮಹಿಮೆಗಳಿಗೆ ಆ “ತಾಂಡಾ ಸಂಸ್ಕೃತಿಯ ಧಾರ್ಮಿಕ ಶ್ರದ್ಧೆಯ ವಜ್ರ ಕವಚ” ಇರುವುದರಿಂದ ಅದನ್ನು ಬಂಜಾರಾಗಳು ಯಾರೂ ಪ್ರಶ್ನೆ ಮಾಡಲಿಕ್ಕೆ ಹೋಗುವುದಿಲ್ಲ. ಹೀಗೆಂದೂ ನಾವು ಇದ್ದಕ್ಕಿದ್ದಂತೆ ಎಲ್ಲವನ್ನು ನಂಬಲೇಬೇಕು ಎನ್ನುವ ಕಟ್ಟುಪಾಡು ಇಲ್ಲ. ಈಗಲೂ ಸೇವಾಲಾಲರ ಸುತ್ತೂ ಇರುವ ಅನೇಕ ಪವಾಡಗಳನ್ನು ಪ್ರಶ್ನಿಸಬಹುದು. ಆದರೆ ನಮಗೆ ಅಲ್ಲಿ ದೊರಕುವುದು ಧಾರ್ಮಿಕ ಶ್ರದ್ಧೆಯೇ ಹೊರತು ಇನ್ನೇನೂ ಅಲ್ಲ ಎನ್ನುವ ನಂಬಿಕೆಯಿಂದ ಸೇವಾಲಾಲರ ಜೀವನವನ್ನು ಕುರಿತು ಜನಪದ ಕಾವ್ಯವನ್ನು ಸಂಗ್ರಹಿಸಲಾಗಿದೆ.

ಸೇವಾಲಾಲಾರ ಜೀವನದಲ್ಲಿಯೂ ಕೆಲವು ಪವಾಡಗಳು ನಡೆದಿವೆ. ಯಾಕೆಂದರೆ ಪವಾಡಗಳು ಇಲ್ಲದೆ ಪುಣ್ಯಪುರುಷರಾಗುವುದು ಕಷ್ಟ ಎಂಬ ನಂಬಿಕೆ ಇದ್ದ ಕಾಲ ಅದು. ಮತ್ತು ಈ ನಂಬಿಕೆ ಜನಾಂಗದ ಜೀವನದಲ್ಲಿ ಅನೂಚನವಾಗಿ ಸಾಗಿಬಂದಿದೆ. ಆದ್ದರಿಂದ ಕೆಲವು ಪವಾಡಗಳನ್ನು ಕೈಗೆತ್ತಿಕೊಂಡು ವಿವೇಚಿಸಬಹುದು. ಮೊದಲನೆಯ ಬಹಳ ಮಹತ್ವದ ಪವಾಡವೆಂದರೆ “ಚಿಂಗರ‍್ಯಾ ಯುವಕ”ನಿಗೆ ನಾರಿ ಸ್ವರೂಪ ಪ್ರದಾನ ಮಾಡಿದ್ದು. ಇಲ್ಲಿ ಜನಪದ ಕಥೆಗಳ ರೂಪಾಂತರ ಆಶಯದ ಜುಳಕು ಇದೆ. ಈ ರೂಪಾಂತರ ಆಶಯವನ್ನು ಪ್ರತ್ಯೇಕಿಸುವುದು ತುಂಬಾ ಅಗತ್ಯವೆಂದು ಕಾಣುತ್ತದೆ. ಆದ್ದರಿಂದ ಇದನ್ನು “ಸ್ವರೂಪಾಂತರ ಆಶಯ” ವೆಂದು ಕರೆಯಬಹುದು. ಎರಡನೆಯ ಮಹತ್ವದ ಪವಾಡವೆಂದರೆ ಸೇವಾಲಾಲರು ತಮ್ಮ ಜೀವನದಲ್ಲಿ ಮದುವೆ ಇದೆಯೋ ಇಲ್ಲವೋ ಎನ್ನುವುದರ ಪರೀಕ್ಷೆಗಾಗಿ, ಮರಿಯಮ್ಮ (ಶಿರಶಿ ಮಾರಿಕಾಂಬಾ)ಳ ಜೊತೆಗೆ ಸ್ವರ್ಗಕ್ಕೆ ಹೋಗುವುದು, ಹಾಂಪಾ, ಬದ್ದು ಸಹೋದರರನ್ನು ಕರೆದು, ತಾನು ಸ್ವರ್ಗದಿಂದ ಬರುವವರೆಗೆ ತಮ್ಮ ತಾಯಿಗೆ ಈ ವಿಷಯ ಗೊತ್ತಾಗಬಾರದು ಮತ್ತು ದೀಪ ಉರಿಯುತ್ತಿರಬೇಕು ಎಂದು ಆಜ್ಞಾಪಿಸಿ ಮರಿಯಮ್ಮಳ ಜೊತೆಗೂಡಿ ತಾನೂ ಸ್ವರ್ಗಕ್ಕೆ ಹೋದದ್ದು, ಸ್ವರ್ಗದಲ್ಲಿ ರಾಮ-ಬ್ರಹ್ಮರನ್ನು ಭೆಟ್ಟಿಯಾಗಿ ಸೇವಾಲಾಲರಿಗೆ ಜೀವನದಲ್ಲಿ ಮದುವೆಯೇ ಇಲ್ಲವೆಂದು ಅವರಿಂದ ತಿಳಿದಾಗ, ಮರಿಯಮ್ಮ ಗಾಬರಿಯಾಗಿ ನನ್ನ ಸಹೋದರಿಯರು ಇಲ್ಲಿಯೇ ಇದ್ದಾರೆ, ನಾನು ಭೆಟ್ಟಿಯಾಗಿ ಬರುತ್ತೇನೆ, ನಾನು ಬರುವವರೆಗೆ ನೀನು ಇಲ್ಲಿಯೇ ಕುಳಿತಿರಬೇಕೆಂದು ಕಟ್ಟಪ್ಪಣೆ ಮಾಡಿ ಹೋಗುವಳು. ಅಲ್ಲಿಂದ ಮರಿಯಮ್ಮ ನೇರವಾಗಿ ಭೂಲೋಕಕ್ಕೆ ಬಂದು ಸೇವಾಲಾಲನ ತಾಯಿ ಧರ್ಮಣಿಯ ಹತ್ತಿರ ಹೋಗಿ, ನಿಮ್ಮ ಮಗ ಸೇವಾಲಾಲ ಸತ್ತು ಇಂದಿಗೆ ಮೂರು ದಿನಗಳಾದವು. ಈ ವಿಷಯ ನಿಮಗೆ ತಿಳಿಯದಿರುವುದು ಆಶ್ಚರ್ಯ ಎನ್ನುತ್ತಾಳೆ. ಆಗ ಧರ್ಮಣಿ, ಸೇವಾಲಾಲ ಮಲಗಿರುವ ಬೇವಿನ ಸೊಪ್ಪಿನ ಹಾಸಿಗೆಯ ಕಡೆಗೆ ಓಡಿ ಬರುತ್ತಾಳೆ. ರೋಧಿಸುತ್ತ ಬಂದು ಸೇವಾಲಾಲರ ಶರೀರದ ಮೇಲೆ ಬೀಳುತ್ತಾಳೆ. ಆಗ ಹಂಪಾ, ಬದ್ದು ತಾಯಿಯನ್ನು ಸಂತೈಸಿ ಬೇವಿನ ಹಾಸಿಗೆಯ ಮೇಲೆ ಬೀಳದಂತೆ ತಡೆಯುತ್ತಾರೆ. ಮರಿಯಮ್ಮ ಚಿಟ್ಟಿಯ ರೂಪತಾಳಿ ದೇವಸ್ಥಾನದಲ್ಲಿ ಉರಿಯುತ್ತಿರುವ ದೀಪವನ್ನು ಆರಿಸುತ್ತಾಳೆ. ಆಗ ಹಾಂಪಾ, ಬದ್ದು ತಾಯಿಯನ್ನು ಬಿಟ್ಟು ದೀಪ ಹಚ್ಚಲು ಮುಂದಾಗುತ್ತಾರೆ. ಇತ್ತ ಸೇವಾಲಾಲರ ತಾಯಿ ಧರ್ಮಣಿ, ಸೇವಾಲಾಲರ ಶರೀರದ ಮೇಲೆ ಬಿದ್ದು ರೋಧಿಸುತ್ತಾಳೆ. ಆಗ ಶರೀರ ಮೂರು ಸಲ ನೆಗೆದು ಸೇವಾಲಾಲರ ಪ್ರಾಣಪಕ್ಷಿ ಹಾರಿಹೋಗುತ್ತದೆ. ಅಲ್ಲಿಗೆ ಸೇವಾಲಾಲರ ಭೌತಿಕ ಜೀವನ ಕೊನೆಗೊಳ್ಳುತ್ತದೆ.

ಈ ಪವಾಡದಲ್ಲಿ ಗಮನಿಸಬೇಕಾದ ಮೊದಲನೆಯ ಅಂಶವೆಂದರೆ ಸ್ವರ್ಗಕ್ಕೆ ಹೋಗುವಾಗ ಮನುಷ್ಯನ ಹುಟ್ಟುಡುಗೆಯಲ್ಲಿಯೇ ಹೋಗಬೇಕು ಎನ್ನುವ ತತ್ವ ಅಡಕವಾಗಿದೆ ಎಂದು ತೋರುತ್ತದೆ. ಎರಡನೆಯದು “ಪ್ರಾಣಜ್ಯೋತಿ”ಯನ್ನು ಆರಿಸುವ ಪ್ರಯತ್ನ ಮಾಡುತ್ತಾಳೆ. ಮತ್ತು ಜ್ಯೋತಿಷ್ಯ ಕೇಳುವುದು ಇತ್ಯಾದಿ ಅಂದಿನ ಸಮಾಜಿಕ ಬದುಕಿನ ರೂಢಿಯಾಗಿತ್ತೆಂದು ತಿಳಿದುಬರುತ್ತದೆ. ಮೂರನೆಯದು, ಲೌಕಿಕವಾದ ಧರ್ಮಣಿ ತನ್ನ ಮಗ ಇನ್ನಿಲ್ಲ ಎಂದು ನಂಬುವಷ್ಟೇ ಕಷ್ಟವಾಗಿ ಅಪಾರವಾಗಿ ರೋಧಿಸುವಳು. ಈ ಮೂರು ಘಟನೆಗಳು ಅಪ್ಪಟ ಜಾನಪದೀಯವಾಗಿದೆ. ಒಂದು “ಸತ್ತು ಸ್ವರ್ಗ ಸೇರು” ಎನ್ನುವ ಮಾತು. ಎರಡು ತಾಯಿಯ ಕರುಳು ಮಗನ ಅಗಲುವಿಕೆಯ ದುಃಖದಿಂದ ರೋಧಿಸುವುದು. ಮೂರು ಅವನು ಬಂಧು-ಬಾಂಧವರು ಮತ್ತು ಬಳಗ ರೋಧಿಸುವುದು. ಈ ಮೂರು ಅಂಶಗಳು ಸಹಜವಾಗಿವೆ. ಆದರೆ ನಾಲ್ಕನೆಯ ಅಂಶ ಒಂದು ನಿಗೂಢವಾಗಿದೆ. ಅದೆಂದರೆ, ಸೇವಾಲಾಲರು ಸ್ವರ್ಗಕ್ಕೆ ಹೋಗುವ ಮೊದಲು ತಮ್ಮ ಸಹೋದರರಾದ ಹಂಪಾ, ಬದ್ದುಗೆ ತಾನು ಮಲಗಿರುವ ಬೇವಿನ ಸೊಪ್ಪಿನ ಹಾಸಿಗೆ ಮತ್ತು ಶರೀರವನ್ನು ಯಾರೂ ಮುಟ್ಟಕೂಡದು, ಮತ್ತು ದೀಪವನ್ನು ಆರಿಸಕೂಡದು ಎಂದು ಹೇಳುವಲ್ಲಿ ಎರಡು ಅಂಶಗಳು ಸ್ಪಷ್ಟವಾಗಿವೆ. ಒಂದು ಸ್ವರ್ಗಕ್ಕೆ ಹೋಗುವಾಗ ತಾನು ಮೈಲಿಗೆ ಆಗಿರಕೂಡದು ಎನ್ನುವ ಭಾವನೆ. ಎರಡು, ತನ್ನ ಪ್ರಾಣಜ್ಯೋತಿ ನಿರಂತರವಾಗಿ ಉರಿಯುತ್ತಿರಬೇಕು ಮತ್ತು ಕುಲಬಾಂಧವರಿಗೆ “ಸತ್‌ಪ್ರೇರಣೆ”ಯನ್ನು ಕೊಡುತ್ತಿರಬೇಕು.

ಕಾರಣ ಈ ಮೇಲಿನ ಮಾತುಗಳನ್ನು ಗಮನಿಸಿದಾಗ ಸೇವಾಲಾಲರ ಜೀವನದಲ್ಲಿ ನಡೆದಿರಬಹುದಾದ ಪವಾಡಗಳನ್ನು ನೋಡಿದರೆ ಇವು ಆಯಾ ಕೆಲಸಕ್ಕೆ ಸಾರ್ವತ್ರಿಕ ನಂಬಿಕೆಗಳಿಗೆ ಅನುಗುಣವಾಗಿಯೇ ಇದ್ದು, ಮೂಲ ಮಾನವನ ಆಲೋಚನೆಗಳಿಗೆ ಸ್ಪಂದಿಸುವ ಅಂಶಗಳಾಗಿವೆ. ಈ ದೃಷ್ಟಿಯಿಂದ ಸ್ವರ್ಗ ಮೇಲೆ ಇದೆ ಎನ್ನುವ ಕಲ್ಪನೆಯನ್ನು ಹುಟ್ಟುಹಾಕಿದವರು ಜನಪದರೇ ಮತ್ತು “ಮರ್ತ್ಯದ ಮೇಲೆ ಸ್ವರ್ಗ” ಇದೆ ಎಂದು ಹೇಳಿದವರೂ ಅವರೇ. ಅದನ್ನು ಈ ರೀತಿ ಅಲ್ಲಗಳೆದವರೂ ಅವರೇ. ಎರಡನೆಯದು, ದೀಪ ಸದಾ ಉರಿಯುವಂತೆ ಇರಬೇಕಾದುದು, ಆ ಕಾಲದಲ್ಲಿ ಸ್ವರ್ಗ ಮೇಲೆ ಮತ್ತು ಕೆಳಗೆ ಎನ್ನುವ ಕಲ್ಪನೆ ಇರಲಿಲ್ಲ. ಹೀಗಾಗಿ ಸ್ವರ್ಗದ ವಿಷಯ ಬಂದಾಗ ಮೇಲೆ ಹೋಗುವ ಅಥವಾ ಆಕಾಶದ ಕಡೆ ಕೈ ತೋರಿಸುವುದು ಇದು ಅಂಥ ಸಹಜವೇನಲ್ಲ. ಮತ್ತು ಅಂದಿನ ಕಾಲದ ನಂಬಿಕೆಗೆ ಅನುಗುಣವಾಗಿಯೇ ಇದೆ.

ಮೂರನೆಯ ಪವಾಡವೆಂದರೆ ಸೇವಾಲಾಲ ತನ್ನ ೩,೭೫೫ ಗೋವುಗಳನ್ನು ಮತ್ತು ಗುಂಪಿನ ಜನರೊಂದಿಗೆ ಮಹಾರಾಷ್ಟ್ರದ ಪೇನಗಂಗಾ ನದಿ ದಾಟುವ ಸಂದರ್ಭದಲ್ಲಿ ಭಿಲ್ ಆದಿವಾಸಿಗಳು ಇವರನ್ನೂ ಲೂಟಿ ಮಾಡಲು ಅಟ್ಟಿಸಿಕೊಂಡು ಬರುತ್ತಾರೆ. ಆಗ ಸೇವಾಲಾಲ ತುಂಬಿ ಹರಿಯುತ್ತಿದ್ದ ನದಿಯಲ್ಲಿ ಏಳು ಹರಳುಗಳನ್ನು ಮಂತ್ರಿಸಿ ಒಗೆದಾಗ ಹರಿಯುವ ನೀರು ನಿಂತು ದಾರಿ ಮಾಡಿಕೊಟ್ಟಿತು. ಆಗ ಗೋವು ಸಹಿತ ಎಲ್ಲರೂ ದಡ ಮುಟ್ಟುತ್ತಾರೆ.

ವಾಸ್ತವವಾಗಿ ಈ ಪವಾಡದಲ್ಲಿ ಜನಪದ ಕಥೆಗಳ ವಸ್ತುರೂಪದ ಆಶಯಗಳು ಇಣುಕಿವೆ. ಪೇನಗಂಗಾ ನದಿಯನ್ನು ದಾಟುವ ಪವಾಡದಲ್ಲಿ ವಾಸ್ತವತೆ ಇರಬಹುದಾದರೂ ಈ ಬಂಜಾರಾ ಜನಾಂಗದ ಅದ್ವಿತೀಯ ಸಾಮರ್ಥ್ಯವನ್ನು ಅದು ಎತ್ತಿ ತೋರಿಸುತ್ತದೆ. ಏಕೆಂದರೆ ಅದು ವಾಸ್ತವವಾಗಿ ನದಿಯನ್ನು ಅವರು ಈಜಿ ದಾಟಿದರೇ ಹೊರತು ಇನ್ನಾವುದೇ ಮಹಿಮೆಯಿಂದ ಅಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಏಕೆಂದರೆ ಬೈಬಲ್‌ನಲ್ಲಿ ಸಮುದ್ರವೇ ಹಾದಿಯನ್ನು ಬಿಡುವ ಪವಾಡವಿದೆ. ಇಂಥದರಲ್ಲಿ ನದಿ ಯಾವ ಲೆಕ್ಕ. ಆದ್ದರಿಂದ ಇಲ್ಲಿ ಇವರ ಸಾಮರ್ಥ್ಯ ಬಹಳ ಮಹತ್ವದ್ದಾಗುತ್ತದೆ. ಪವಾಡ ಮಹಿಮೆಗಳ ಮಾತು ಇಲ್ಲಿ ಬರಬಾರದು. ಈ ಜನಾಂಗದ ಸಾಮರ್ಥ್ಯಕ್ಕೆ ಇದೊಂದು ಘಟನೆ ಪ್ರತೀಕವಾಗಿದೆ. ಕಾರಣ ಹೀಗೆ ಅನೇಕ ಪವಾಡಗಳು ಸೇವಾಲಾಲರ ಜೀವನದಲ್ಲಿ ನಡೆದು ಹೋಗಿರಬಹುದು. ಪವಾಡವೆಂದರೆ “ಅಘಟಿತ ಘಟನಾ ಸಾಮರ್ಥ್ಯವುಳ್ಳ ಸಂಗತಿ”. ಕಾರಣ ಈ ಬಂಜಾರಾ ಜನಾಂಗಕ್ಕೆ ಇಂಥ ಸಾಮರ್ಥ್ಯವೇ ಮುಖ್ಯವಾಗುತ್ತದೆ. ಸೇವಾಲಾಲರಿಗೆ ತನ್ನ ದನಕರುಗಳನ್ನು ಮತ್ತು ತಮ್ಮ ಜನರನ್ನು ರಕ್ಷಿಸುವ ಅದ್ವಿತೀಯ ಸಂಘಟನೆಯ ಸಂಕೇತವಾಗುತ್ತದೆಯೇ ಹೊರತು ಬೇರಾವುದೂ ಅಲ್ಲ ಎನ್ನುವುದು ಸ್ಪಷ್ಟ.

ಇದರಂತೆ “ಕರಿಮಣ್ಣಿನಿಂದ ಶಿರಾ ತಯಾರಿಸುವುದು”. ಬಾಲಗೋಪಾಲಕರಿಗೆ ಊಟಕ್ಕೆ ಹಾಕುವುದು. ಸೂರಗೊಂಡನಕೊಪ್ಪದ ಅಡವಿಯಲ್ಲಿ ದನಕರುಗಳನ್ನು ಮೇಯಿಸುತ್ತಿರುವಾಗ, ಭಜನೆ ಸಂದರ್ಭದಲ್ಲಿ ವಾದ್ಯಗಳನ್ನು ಸೃಷ್ಟಿಸಿ ಅವುಗಳನ್ನೇ ತಮ್ಮ ಹಿನ್ನೆಲೆಯ ಸಂಗೀತಕ್ಕೆ ಬಳಸುವುದಾಗಲಿ, ಭಿಲ್ ಆದಿವಾಸಿಗಳ ಜೊತೆಗೆ ಇವರು ಹೋರಾಟ ಮಾಡುವುದಾಗಲಿ ಅಥವಾ ನಿಶ್ಚಿತ ಸಂಖ್ಯೆಯ ಹರಳುಗಳನ್ನು ಒಂದೊಂದಾಗಿ ಒಗೆಯುತ್ತ ದಾರಿ ಬಿಡಿಸಿ ನದಿ ದಾಟುವುದಾಗಲಿ, ಇವೆಲ್ಲ ಸೇವಾಲಾಲರ ಮಹಿಮೆಗಳೆಂದೇ ಬಂಜಾರಾ ಜಾನಪದ ಗೀತೆಗಳಲ್ಲಿ ದಾಖಲಾಗಿವೆ. ಮತ್ತು ಇದನ್ನು ಈ ಬಂಜಾರಾ ಜನಾಂಗ ನಂಬುತ್ತ ಬಂದಿದೆ. ಕಾರಣ ಯಾವುದೇ ಪ್ರದೇಶದ “ತಾಂಡಾ ಸಂಸ್ಕೃತಿ” ಇರಲಿ, ಅಲ್ಲೆಲ್ಲ ಸೇವಾಲಾಲರನ್ನು ಪರಮ ಭಕ್ತಿಯಿಂದ ಪೂಜಿಸುತ್ತಾರೆ. ಇದಕ್ಕೆ ಕಾರಣವೆಂದರೆ “ಶ್ರದ್ಧೆಯೇ ಜನಾಂಗದ ಸಂಸ್ಕೃತಿಯ ಜೀವಾಳ” ಆದ್ದರಿಂದ ತಲೆಮಾರಿನಿಂದ ತಲೆಮಾರಿಗೆ ಈ ನಂಬಿಕೆ ಹರಿಗಡೆಯದೆ ಅನುಚಾರವಾಗಿ ಹೀಗೆ ಸಾಗಿ ಬಂದಿದೆ. ಕಾರಣ ಈ ಎಲ್ಲ ಘಟನೆಗಳನ್ನ ಬಹಳ ಲಘುವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಇವು ಜನಾಂಗದ ನಂಬಿಕೆಯ ಅವಿಭಾಜ್ಯ ಅಂಗವಾಗಿದೆ. ಸೇವಾಲಾಲರ ಜೀವನದಲ್ಲಿ ಬರುವ ಅನೇಕ ಪವಾಡಗಳಿದ್ದರೂ ಅವೆಲ್ಲ ಕೇವಲ ವರ್ಣನಾತ್ಮಕವಾಗಿದ್ದು, ಬಂಜಾರಾ ಗುಂಪಿಗೆ ಸೇವಾಲಾಲರ ಭಕ್ತಿ, ಗೌರವ ಉಂಟುಮಾಡಿ, ಮುಂದೆ ಕೆಲಸ ಕಾರ್ಯ ಮಾಡಲು ಪ್ರೇರಣೆ ಕೊಡುವಂಥದ್ದು.

ಸೇವಾಲಾಲರ ಕಾವ್ಯ ಕಥಾನಕ ವಿಷಯ ಮೌಖಿಕ ಪರಂಪರೆಯಲ್ಲಿಯೇ ಬಂದಿದ್ದರಿಂದ ಈ ಕಾವ್ಯ ಆಯಾ ಪ್ರದೇಶದ ಭಾಷೆಗಳನ್ನು ಒಡಲಲ್ಲಿ ಇಟ್ಟುಕೊಂಡು, ಜೀರ್ಣಿಸಿಕೊಂಡು ರಚಿತವಾಗಿದೆ. ಇಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳು ಸಮಾವೇಶಗೊಳ್ಳುವುದನ್ನು ಕಾಣಬಹುದು.”

[1] ಕಾರಣ, ಹತ್ತಾರು ಪ್ರದೇಶದಲ್ಲಿ ಹರಿದು ಹಂಚಿರುವ ಈ ಬಂಜಾರಾ ಗುಂಪು ಆಯಾ ಪ್ರದೇಶದ ಭಾಷೆ ಸಂಸ್ಕೃತಿಗಳನ್ನು ಅರಗಿಸಿಕೊಂಡು ತಮ್ಮದೇ ಆದ “ತಾಂಡಾ ಸಂಸ್ಕೃತಿ”ಯನ್ನು ನಿರ್ಮಿಸಿದ್ದು, ತಮ್ಮದನ್ನು ಎಂದೂ ಬಿಟ್ಟುಕೊಟ್ಟವರಲ್ಲ. ಇದಕ್ಕೆ ಇಂದಿಗೂ ತಾಜಾ ಉದಾಹರಣೆ ಎಂದರೆ ಬಂಜಾರಾ ಮಹಿಳೆಯರ ವೇಷಭೂಷಣ. ಎಂಥ ಕೂಲಿ-ನಾಲಿ ಮಾಡುವವರೇ ಇರಲಿ ಅವರಿಗೆ ಪೇಟಿಯಾ (ಲಂಗ), ಕಾಂಚಳಿ(ಚೋಲಿ), ಛಾಂಟಿಯಾ(ಮೇಲ್ಮುಸುಕು), ಚೂಡಿ(ದಂತಬಳೆ) ಇತ್ಯಾದಿ ಆಭರಣಗಳು ಬೇಕೇ ಬೇಕು. ಆದ್ದರಿಂದ ಸೇವಾಲಾಲರ ಪರಮಭಕ್ತರಾದ ಇವರು ತಿಜ(ಗೋದಿಹಬ್ಬ), ದಸರಾ, ದೀಪಾವಳಿ, ಹೋಳಿ, ಯುಗಾದಿ ಮುಂತಾದ ಹಬ್ಬಗಳನ್ನು ಆಚರಿಸುವಾಗ, ಸೇವಾಲಾಲರ ಮತ್ತು ಹೂನಾಸತಿಯ ಹಾಡುಗಳನ್ನು ಹಾಡಿ ಸ್ತುತಿಸುವುದು ಅಗತ್ಯವಾಗಿದೆ.

ಸೇವಾಲಾಲರ ವಿಷಯಕ್ಕೆ ಸಂಬಂಧಪಟ್ಟಂತೆ ಅನೇಕ ಸಂಗತಿಗಳು ಈ ಜನಪದ ಕಾವ್ಯದಲ್ಲಿ ಹುದುಗಿರುವುದರಿಂದ, ಮತ್ತು ಇದುವರೆಗೂ ದಾಖಲೆಯಾಗದೆ ಉಳಿದ ಮೌಖಿಕ ಪರಂಪರೆಯಲ್ಲಿ ಮಾತ್ರ ಉಳಿದಿರುವುದರಿಂದ ಲಿಖಿತ ಪರಂಪರೆಗೆ ಇದು ದಾಖಲೆ ಆಗುವುದು ಅಗತ್ಯ. ಕಾರಣ ಎಲ್ಲೆಲ್ಲಿ “ತಾಂಡಾ ಸಂಸ್ಕೃತಿ” ಇದೆಯೋ ಅಲ್ಲೆಲ್ಲ ಒಂದು ಬೃಹತ್ ಪ್ರಮಾಣದ ಕ್ಷೇತ್ರಕಾರ್ಯ ಕೈಗೊಂಡು, ವಿವಿಧ ಪ್ರದೇಶದಲ್ಲಿ ರೂಢಿಯಲ್ಲಿರುವ ಸೇವಾಲಾಲರ ಜೀವನದ ಅನೇಕ ಘಟನೆಗಳನ್ನು ಸಂಗ್ರಹಿಸುವುದು ಅಗತ್ಯ.

* * *


*     ಬುಡಕಟ್ಟು ಅಧ್ಯಯನ : ಸಂ.-೨, ಸಂಚಿಕೆ-೨, ಸಂಪಾದಕರು : ಡಾ. ಹಿ.ಚಿ. ಬೋರಲಿಂಗಯ್ಯ, ಎ.ಎಸ್. ಪ್ರಭಾಕರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೨೦೦೪, ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನ.

[1]     ಹಿಂದಿ, ರಾಜಸ್ಥಾನಿ, ಪಂಜಾಬಿ, ಮರಾಠಿ, ಗುಜರಾತಿ, ಸಿಂಧಿ ಮುಂತಾದ ಭಾಷೆಯ ಶಬ್ದಗಳು ಈ ಕಾವ್ಯದಲ್ಲಿ ಮಿಶ್ರವಾಗಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಮುಂದೆ ಪ್ರಸಂಗ ಬಂದಾಗ ಈ ವಿಷಯ ಕುರಿತು ಬೇರೆ ಬೇರೆ ಭಾಷಾ ವಿದ್ವಾಂಸರು ಕೂಡಿ ಅಧಿಕ ಸಂಶೋಧನೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ.