ಸ್ವರಗಳ ಉಚ್ಛಾರಣೆಯಲ್ಲಿ ಉಂಟಾಗುವ ಧ್ವನಿ ಸಂಸ್ಕಾರ
ಹಾಗೂ ಹಾಡುವಾಗ ಬಳಸುವ ಶ್ವಾಸ (ವಾಯು) ಸಂಸ್ಕಾರಗಳ ರಹಸ್ಯ

ಅಕ್ಷರಗಳ ಉಚ್ಛಾರಣೆಯ ಸಂದರ್ಭದಲ್ಲಿ ಅಳವಡಿಸಬೇಕಾದ ನಿಯಮಗಳನ್ನು ಆಚಾರ್ಯ ಪಾಣನಿಯು ಹೇಳಿದ್ದಾನೆ

ಸ್ವಸ್ಥ ಕಲಾಕಾರನಾದ ಗಾಯಕನು ಸಂಗೀತ ಕಚೇರಿಯಲ್ಲಿ ಹಾಡಬೇಕಾದ ರಾಗದ ಗುಣಧರ್ಮವನ್ನು ಮೊದಲೇ ತಿಳಿದು ಹಾಡಲು ಆರಂಭಿಸುತ್ತಾನೆ. ಪ್ರತಿಕ್ಷಣದಲ್ಲೂ ಆ ರಾಗದ ನಿಯಮಗಳನ್ನು, ಸ್ವರಗಳ ಪರಸ್ಪರ ಸಂಬಂಧವನ್ನು ವಿಚಾರಿಸುತ್ತ, ಸ್ಪಷ್ಟ ಸಾಹಿತ್ಯವನ್ನು ಪಠಿಸುತ್ತ, ಹಾಡನ್ನು ಮುಂದುವರಿಸುತ್ತ, ನಿರ್ದಿಷ್ಟ ಸಮಯದಲ್ಲಿ ಸಮಾಪನಗೊಳಿಸುತ್ತಾನೆ. ಒಂದು ಗಂಟೆಯವರೆಗೆ ನಡೆಯುವ ಭೌತಿಕ ಹಾಗೂ ಮಾನಸಿಕ ಕ್ರಿಯಾಕಲಾಪವಾದ ಗಾಯನ ಕಾರ್ಯಕ್ರಮದಲ್ಲಿ ಅವನ ಅಂತರಂಗದಲ್ಲಿ ಘಟಿಸುವ ಸೂಕ್ಷ್ಮಾತಿಸೂಕ್ಷ್ಮ ಪ್ರಕ್ರಿಯೆಗಳನ್ನು ಪಾಣಿನಿ ಮತದಿಂದ ಸಮನ್ವಯಗೊಳಿಸುವ ಪ್ರಯತ್ನ ಇದಾಗಿದೆ.

ಆತ್ಮಾ ಬುದ್ಧ್ಯಾ ಸಮೇತ್ಯಾರ್ಥಾನ್, ಮನೋ ಯಂಕ್ತೇ ವಿವಕ್ಷಯಾ|
ಮನಃ ಕಾಯಾಗ್ನಿ ಮಾಹಂತಿ, ಪ್ರೇರಯತಿ ಮಾರುತಮ್|
ಮಾರುತಸ್ತೂರಸಿ ಚರನ್, ಮಂದ್ರಂ ಜನಯತಿ ಸರಮ್||

ಸಂಕ್ಷೀಪ್ತವಾದ ಈ ಮೂರು ಸಾಲುಗಳಲ್ಲಿ ಹೇಳಬೇಕಾದದ್ದನ್ನೆಲ್ಲಾ ಪಾಣಿನಿ ಹೇಳಿದ್ದಾನೆ. ಇದರ ವಿಶದೀಕರಣಕ್ಕಾಗಿ ಅನೇಕ ಪುಟಗಳೇ ಬೇಕಾದೀತು. ಉದಾ: ಒಂದು ಪುಸ್ತಕವನ್ನು ಚಕ್ಷುರಿಂದ್ರಿಯದಿಂದ ನೋಡಿ, ‘ಇದು ಪುಸ್ತಕ’ ಎಂದು ಅದೇ ಕ್ಷಣದಲ್ಲಿ ಬಾಲಕರಾದಿಯಾಗಿ ವೃದ್ಧರವರೆಗಿನ ಎಲ್ಲರೂ ಹೇಳುತ್ತಾರೆ. ಇಂದ್ರಿಯವು ಪದಾರ್ಥದೊಂದಿಗೆ, ಮನಸ್ಸು ಇಂದ್ರಿಯದೊಂದಿಗೆ ಹಾಗೂ ಆತ್ಮವು ಮನಸ್ಸಿನೊಡನೆ ಸಂಬಂಧವನ್ನು ಪಡೆದು ಇದು ಪುಸ್ತಕ ಎಂಬ ಜ್ಞಾನವಾಗುತ್ತದೆ.  ಎಂಬುದು ಜನಸಾಮಾನ್ಯರ ತಿಳುವಳಿಕೆ. ಆದರೆ ಶಾಸ್ತ್ರೀಯ ಪ್ರತ್ಯಕ್ಷ ಜ್ಞಾನ ಪ್ರಕ್ರಿಯೆ ಬೇರೆಯೇ ಇದೆ.

ಆತ್ಮಾ ಮನಸಾ ಸಂಜಯಜ್ಯತೇ, ಮನಃ ಇಂದ್ರಿಯೇಣ, ಇಂದ್ರಿಯಂ ಅರ್ಥೇನ, ತತಃಪ್ರತ್ಯಕ್ಷಮ್ ಎಂಬುದು ಮುಖ್ಯನಿಯಮ.

ಈ ಹಿಂದೆ ಆತ್ಮವು ಒಂದು ವಸ್ತುವಿನ ಸರಿಯಾದ ಜ್ಞಾನ ಹೊಂದಿದ್ದರೆ ಮಾತ್ರ ಅವನು (ಆತ್ಮವಿಶಿಷ್ಠ ಮನುಷ್ಯನು) ಚಕ್ಷುರಿಂದ್ರಿಯದಿಂದ ನೋಡಿದ ಕೂಡಲೇ ‘ಅದು ವಸ್ತು’ ಎಂದು ನಿರ್ಣಯಿಸಿ ಹೇಳಲು ಶಕ್ತನಾಗುತ್ತಾನೆ. ಇಲ್ಲದಿದ್ದರೆ ‘ಇದು ಇದೇ’ ಎಂದು ಹೇಳಲಾಗದೇ ‘ಇದು ಏನೋ ಒಂದು’ ಎಂಬ ಜ್ಞಾನ ಮಾತ್ರ ಉದಯಿಸುತ್ತದೆ. ಆದ್ದರಿಂದ ಪುಸ್ತಕದ ಮಾಹಿತಿಯನ್ನು ಈ ಹಿಂದೆ ಪಡೆದಿದ್ದರಿಂದ ಕಣ್ಣಿನಿಂದ ಪುಸ್ತಕವನ್ನು ನೋಡಿದ ಕೂಡಲೇ (ಒಂದೇ ಕ್ಷಣದಲ್ಲಿ) ಆತ್ಮವು ಮನಸ್ಸಿನೊಡನೆ ಸಂಪರ್ಕವನ್ನು ಹೊಂದಿ, ಮನಸ್ಸು ಚಕ್ಷುರಿಂದ್ರಿಯದೊಡನೆ, ಚಕ್ಷುರಿಂದ್ರ್ಯವು ಪುಸ್ತಕದೊಂದಿಗೆ ಸಂಪರ್ಕವನ್ನು ಹೊಂದುತ್ತ, ‘ಇದು ಪುಸ್ತಕ’ ಎಂದು ಸಮಾನ ಸಮಯದಲ್ಲೇ ಪಠಿಸಲು ಅನುಕೂಲವಾಗುತ್ತದೆ. ಈ ಮನೋವ್ಯಾಪಾರವನ್ನು ಕುರಿತು ವಿಶೇಷ ವಿಚಾರ ಮಾಡದಿದ್ದರೆ ಅತಿ ಸೂಕ್ಷ್ಮ ಪ್ರಕ್ರಿಯೆಗಳನ್ನು ತಿಳಿಯಲು ಸಾಧ್ಯವಿಲ್ಲ ಅಥವಾ ವಿಪರೀತವಾಗಿ ಅರಿವಾಗಬಹುದು.

ಸಂಗೀತದಲ್ಲೂ ಈ ಸಂಗತಿಗಳನ್ನು ಹೀಗೆ ಅನ್ವಯಿಸಬಹುದು.

. ಆತ್ಮಾ ಬುದ್ಧ್ಯ ಸಮೇತ್ಯರ್ಥಾನ್: ಗಾಯಕನು ಹಾಡುವ ರಾಗದ, ಸ್ವರಗಳ, ತಾಳ-ಲಯಗಳ ಸ್ವರೂಪವನ್ನು ಬುದ್ಧಿಯಿಂದ ತಿಳಿಯುತ್ತಾನೆ.

. ಮನೋಯುಂಕ್ತೇ ವಿವಕ್ಷಯಾ : ಆತ್ಮನು (ಗಾಯಕನು) ಹಾಡಲು ಇಚ್ಛಿಸಿದ ವಿಚಾರವನ್ನು ತಿಳಿದು ಮನಸ್ಸು ಕಾರ್ಯಪ್ರವೃತ್ತವಾಗುತ್ತದೆ.

. ಮನಃ ಕಾಯಾಗ್ನಿ ಮಾಹಂತಿ : ಸಿದ್ಧವಾದ ಮನಸ್ಸು ಆ ರಾಗದ ಸ್ವರ-ಆಲಾಪ-ಸಾಹಿತ್ಯ ಮುಂತಾದ ಧ್ವನಿಗಳನ್ನು ಉತಪತ್ತಿಗೊಳಿಸಲು ಅನುಕೂಲವಾಗುವಂತೆ ಶರೀರದಲ್ಲಿ ಅಗ್ನಿಯನ್ನು (ಜಠರಾಗ್ನಿ) ಸೂಚಿಸುತ್ತದೆ.

. ಪ್ರೇರಯತಿ ಮಾರುತಮ್: ಆ ಜಠರಾಗ್ನಿಯು ಶ್ವಾಶೋಚ್ಚಾಸದಿಂದ ಶರೀರದ ಒಳಗೆ ಬಂದ ವಾಯುವನ್ನು ಪ್ರೇರೇಪಿಸುತ್ತದೆ.

. ಮಾರುತಸ್ತು ಉರಸಿ ಚರನ್: ಸಂಸ್ಕಾರಗೊಂಡ ಆ ವಾಯುವಾದರೋ ಹೃದಯಭಾಗದಲ್ಲಿ ಮೇಲೆ ಮೇಲೆ ಚಲಿಸುತ್ತ.

. ಮಂದ್ರಂ ಜನಯತಿ ಸರಮ್ : ಮಂದ್ರ ಸ್ವರವನ್ನು ಹುಟ್ಟಿಸುತ್ತ ಅನಂತರ ಬೇಕಾದ ವಿವಿಧ ಸ್ವರಗಳನ್ನು ಉತ್ಪಾದಿಸುತ್ತದೆ.

ಹೀಗೆ ಈ ಆರು ಕ್ರಿಯೆಗಳು ಏಕಕಾಲದಲ್ಲಿ ಮತ್ತು ನಿರಂತರವಾಗಿ ನಡೆಯುತ್ತಿರುತ್ತವೆ ಎಂದು ತಿಳಿದಾಗ ಕೆಲವರಿಗೆ ಆಶ್ಚರ್ಯವಾದಿತು, ಮನುಷ್ಯನ ಏಕಾಗ್ರತೆ ಮನಸ್ಸು ಇದಕ್ಕೆಲ್ಲ ಕಾರಣವೆಂದು ಹೇಳಬೇಕಾಗುತ್ತದೆ. ಮನಸ್ಸಿನ ಏಕಾಗ್ರತೆ ಇಲ್ಲದಿದ್ದಾಗ ಗಾಯನವು ಏರುಪೇರಾಗಬಹುದು ಮತ್ತು ಆರೋಗ್ಯ ಚೆನ್ನಾಗಿ ಇಲ್ಲದಿದ್ದಾಗ ಮನಸ್ಸು ಸುಸ್ಥಿತಿಯಲ್ಲಿದಿದ್ದರೂ ಕಷ್ಟವಾಗುತ್ತದೆ. ಇದೆಲ್ಲ ಧ್ವನಿ ಸಂಸ್ಕಾರದ ವಿಶೇಷತೆಗಳು. ಕಲಾಕಾರನು ಸರ್ವ ರೀತಿಯಲ್ಲೂ ಸರಿಯಾಗಿದ್ದರೆ ಮಾತ್ರ ಹಾಡಿ ತನ್ನನ್ನು ಹಾಗೂ ಶ್ರೋತ್ರಗಳನ್ನು ತೃಪ್ತಿ ಪಡಿಸಬಹುದು ಅನ್ಯಥಾ ವಿವಿಧ ರಸಾಭಾಸಗಳಿಗೆ ಕಾರಣನಾಗುತ್ತಾನೆ.

ಗಾಯಕನು ಅಂಗಾಂಗ ಮುಖ ವಿಕಾರಮಾಡದೆ ಹಾಡಬೇಕೆಂದು ಹೇಳುತ್ತ ಸಂಗೀತ ರತ್ನಾಕರ ಗ್ರಂಥದಲ್ಲಿ ಗಾಯಕನ ಗುಣ-ದೋಷಗಳಿಗೆ ಸಂಬಂಧಿಸಿದಂತೆ ಒಂದು ಅಧ್ಯಾಯವನ್ನೇ ಶಾಙ್ಗ೯ದೇವನು ಮೀಸಲಿಟ್ಟಿದ್ದಾನೆ. ಅದನ್ನೆಲ್ಲ ತಿಳಿದು ಸಂಗೀತ ಶಾಸ್ತ್ರಕ್ಕೆ ರಾಗ ನಿಯಮಕ್ಕೆ ಅಪಚಾರವಾಗದಂತೆ ವಿಹಿತಸ್ವರಗಳಲ್ಲಿ ರಂಜಕತೆಯನ್ನು ಮೂಡಿಸಬೇಕು. ಕೇವಲ ಜನ-ಮನೋರಂಜನೆಗಾಗಿ ಶಾಸ್ತ್ರೀಯ ಸಂಗೀತದ ರಾಗನಿಯಮವನ್ನು ಬಿಟ್ಟು ಹಾಡುವುದು ಸರಿಯಾದ ಪದ್ಧತಿಯಲ್ಲ. ಅನ್ಯಥಾ ಅದು ಶಾಸ್ತ್ರೀಯ ಸಂಗೀತವಾಗಲಾರದು.

ಸಂಗೀತ ಪರಿಭಾಷೆಯಲ್ಲಿ ಸಂಗೀತಕ್ಕೆ ಧಾತು ಎಂದೂ ಸಾಹಿತ್ಯಕ್ಕೆ ಮಾತು ಎಂದೂ ಹೇಳಿದ್ದಾರೆ. ಈ ಎರಡೂ ಸಾಮಗ್ರಿ ಸಂಪನ್ನನಾದವನಿಗೆ ವಾಗ್ಗೇಯಕಾರನೆಂದು ಹೆಸರಿದೆ.

ಕೆಲವರು ಹೇಳುವಂತೆ ಸಂಗೀತವು ಭಾವಭಾಷೆಯಾಗಿದೆ. ಹಾಗಾದರೆ ಸಾಹಿತ್ಯ ಅಪೇಕ್ಷೆ ಇಲ್ಲದಿದ್ದರೂ ಅದು ಭಾಷೆಯಾಗಬಲ್ಲದೇ? ಎಂಬ ಜಿಜ್ಞಾಸೆಗೆ ಡಾ.ರಾ. ಸತ್ಯನಾರಾಯಣ ಅವರು ಹೀಗೆ ಅಭಿಪ್ರಾಯ ಪಡುತ್ತಾರೆ.

ಸಂಗೀತವು ವಿಶ್ವಸಾಧಾರಣವಾದ ಭಾಷೆಎಂಬ ಹೆಳಿಕೆಯನ್ನು ವಿಶೇಷ ಜಾಗರೂಕತೆಯಿಂದ ಒಪ್ಪಿಕೊಳ್ಳಬೇಕಾಗುತ್ತದೆ. ಏಕೆಂದರೆ ಅದು ಭಾಷೆಯು ಅಲ್ಲ, ಸಾರ್ವತ್ರಿಕವೂ ಅಲ್ಲ. ಮೊದಲನೆಯದಾಗಿ ವಾಗರ್ಥ-ಗೇಯಾರ್ಥಗಳೆರಡೂ ಭಿನ್ನವಾದ ಸ್ವರೂಪ, ಪ್ರಕಾರ, ಪ್ರಯೋಜನಗಳನ್ನು ಪಡೆದಿದೆ. ಇವೆರಡನ್ನು ಒಟ್ಟು ಸೇರಿಸಿ ಪರಸ್ಪರ ಪೂರಕಗಾಗುವಂತೆ ಮಾಡಿ ಒಂದರಿಂದ ಇನ್ನೊಂದನ್ನು ಪುಷ್ಟಿಗೊಳಿಸಲು ಅಥವಾ ವಿಸ್ತಾರಗೊಳಿಸಲು ಸಾಧ್ಯವಿರುವುದೇನೋ ನಿಜ. ಹಾಡಾಗಲಿ, ಕಾವ್ಯಗಾಯನಗಳಾಗಲಿ ಮಾಡುವುದಾದರೂ ಇದನ್ನೇ. ಆದರೆ ಇವುಗಳಲ್ಲಿ ಮೂಲಭೂತವಾಗಿ ಅವಲಂಬನೆಯಾಗಲಿ, ಸಂಬಂಧವಾಗಲಿ ಅಂಶಿಕವಾಗಿಯೂ ಇಲ್ಲಾ. ಅರ್ಥವಾಹಕ ಎಂಬ ಸ್ಥೂಲಾರ್ಥದಲ್ಲಿ ವಾಗರ್ಥಕ್ಕೆ ಅದು ಸ್ವಾಭಾವಿಕವೂ ಆಕರ್ಷಕವೂ ಸರ್ಜನಾತ್ಮಕವೂ ಆಗಿರುವ ಮಾಧ್ಯಮವಾಗಬಲ್ಲದು ಎಂಬ ವಿಶೇಷ ಕಾರಣದಿಂದ ಸಂಗೀತವನ್ನು ಬಾಷೆಯೆಂದು ಉಪಚಾರಕ್ಕಾಗಿ ಕರೆದುಕೊಳ್ಳಬಹುದು. ಮಾನವನ ಮನೋಭೂಮಿಕೆಯಲ್ಲಿ ಮೂಲಭೂತವಾಗಿಯೂ ಸಹಜವಾಗಿಯೂ ಸ್ಫುರಿಸುವ ಬೇರೆ ಅರ್ಥ ಪ್ರಕಾರಗಳೂ ಉಂಟು. ಉದಾ: ಆಧ್ಯಾತ್ಮಿಕಾರ್ಥ, ದೈಹಿಕ ಸಂಜ್ಞಾರ್ಥ, ಅನುಭವಾರ್ಥ ಮತ್ತು ಸೌಂದರ್ಯಾರ್ಥಗಳು. ಇವು ಒಂದೇ ನೆಲದಲ್ಲಿ ಹುಟ್ಟಿ ಬೆಳೆಯುತ್ತವೆ ಎಂಬುದೇ ಇವುಗಳಲ್ಲಿರುವ ಸಾಧಾರಣಾಂಶ.

ಸಂಗೀತಕ್ಕೂ ಸಾಹಿತ್ಯಕ್ಕೂ ಇರುವ ಸಂಬಂಧವನ್ನು ಹೀಗೆ ಪರಿಶೀಲಿಸಬಹುದು. ಮಾನವನ ಜ್ಞಾನಕೋಶದಲ್ಲಿರುವುದು ಎರಡು ಬಗೆಯ ಅರ್ಥ. ೧. ಮಾತಿನಿಂದ ಹೇಳುವಂಥದ್ದು, ೨ ಮಾತಿನಿಂದ ಹೇಳಲಾಗದ್ದು ಭಾಷೆ, ಸಾಹಿತ್ಯ, ವಿಜ್ಞಾನ, ಗಣಿತ ಮುಂತಾದ ಶಾಸ್ತ್ರಗಳು ಮೊದಲನೇ ಭಾಗದಲ್ಲಿ ಪರಿಗಣಿಸಲ್ಪಟ್ಟರೆ, ಕಲೆ, ಧರ್ಮ, ಆಧ್ಯಾತ್ಮಾನುಭವ ಇತ್ಯಾದಿಗಳು ಎರಡನೇ ಭಾಗದಲ್ಲಿ ಸೇರುತ್ತವೆ.

ಸಂಗೀತವನ್ನು ಧರ್ಮಾರ್ಥ ಕಾಮಮೋಕ್ಷಾಣಾಂ ಇದಮೇವೃಕಸಾಧನಂ ಎಂದು ಹೇಳಿದ ನಮ್ಮ ಹಿರಿಯರು ಸರಸ್ವತಿಯ ಶಕ್ತಿಯನ್ನಾಗಿ ಆರಾಧಿಸುವುದು ಸಮುಚಿತವೇ ಆಗಿದೆ. ಮೇಲಿನ ಎರಡೂ ಅರ್ಥಗಳು ಮನುಕುಲದ ಪ್ರೇರಕಗಳು ಮತ್ತು ಪೂರಕಗಳು, ಸಂಗೀತದಲ್ಲಿ ವೀರಾದಿರಸಗಳಿವೆಯೆಂದು ಸಾಮಾನ್ಯ ಶ್ರೋತೃವೂ ಹೇಳುವಾಗ ಗಾನಭಾಗದಲ್ಲಿ ಅನ್ವಯಿಸಿ ಹೇಳುತ್ತಾನೆಂಬುದು ಅಲ್ಪಾಲೋಚನೆಯಿಂದಲೇ ಸಿದ್ಧವಾಗುತ್ತದೆ. ಸಾಹಿತ್ಯ ಭಾಗದಲ್ಲಿರುವ ಸ್ಥಾಯಿ ಭಾವಗಳನ್ನು ಕೆಲವು ವೇಳೆ ಸಂಗೀತವು ಪುಷ್ಟೀಕರಿಸಿ ಪ್ರಕಟಿಸಬಲ್ಲದೆಂಬುದನ್ನು ನೆನಪಿಡಬೇಕಾಗುತ್ತದೆ. ಆದರೆ ಇದನ್ನೇ ಸಂಗೀತದ ಪರಮಾರ್ಥ ಎಂದು ಭಾವಿಸಬಾರದು. ಏಕೆಂದರೆ ಹಾಡಿನ ಸಾಹಿತ್ಯ ಭಾಗದಲ್ಲಿ ಬರುವ ಅಸಂಖ್ಯಾತ ರಸ ಛಾಯೆಗಳನ್ನು ಸಂಗೀತವು ಅಭಿವ್ಯಕ್ತ ಪಡಿಸಲಾರದು. ಸಾಹಿತ್ಯವು ವಾಹಕವಾಗಿಯೂ ಪೋಷಕವಾಗಿಯೂ ಇರುವ ಹಾಡುಗಳಲ್ಲಿ ರಾಗಾಲಾಪ ಮುಂತಾದ ಸ್ವತಂತ್ರ ಮನೋಧರ್ಮ ಸೃಷ್ಟಿಗಳಲ್ಲಿ ಗೋಚರವಾಗುವುದೇ ಸಂಗೀತ ರಸ. ಆದ್ದರಿಂದ ಸಾಹಿತ್ಯಕ್ಕೂ ಸಂಗೀತಕ್ಕೂ ಒಂದು ಮಟ್ಟದ ವರೆಗೆ ಸಂಬಂಧವನ್ನು ಕಲ್ಪಿಸಬಹುದು. ಸಾಹಿತ್ಯ ನಿರಪೇಕ್ಷವಾದ ಸಂಗೀತದಲ್ಲಿರುವ ಅಥವಾ ಸಾಹಿತ್ಯ ಸಾಪೇಕ್ಷವಾದ ಸಂಗೀತದಲ್ಲಿರುವ ಏಕರೂಪ ರಸವು ಪರಬ್ರಹ್ಮ ವಸ್ತುವಿನಂತೆ ಅನಿರ್ವಚನೀಯವಾದದು. ಎಂದು ಮಾತ್ರ ಹೇಳಬಹುದು.

ರಸಪೋಷಕ ಕೆಲವು ಪದ್ಯಗಳು:

ಉಭಯ ಸಂಗೀತದಲ್ಲಿ ರಾಗಗಳ ಅನೇಕ ಶೈಲಿಗಳು ಹೇಳಲ್ಪಟ್ಟಿದ್ದರೂ ಸದ್ಯಃಕಾಲದಲ್ಲಿ ಎಲ್ಲ ಶೈಲಿಗಳೂ ಅಷ್ಟೊಂದು ಪ್ರಚಲಿತವಾಗಿಲ್ಲ. ಉದಾ: ಹಿಂದುಸ್ತಾನಿ ಸಂಗೀತದಲ್ಲಿ ದ್ರುಪದ ಪದ್ಧತಿಯು ೨೦೦ ವರ್ಷಗಳ ಹಿಂದೆ ವ್ಯಾಪಕವಾಗಿ ಪ್ರಸಿದ್ಧಿ ಪಡೆದಿತ್ತು. ಈಗ ಖ್ಯಾಲ ಪದ್ಧತಿಯು ಅಷ್ಟೇ ಪ್ರಸಿದ್ದಿ ವ್ಯಾಪಕವಾಗಿ ಪ್ರಸಿದ್ಧಿ ಪಡೆದಿದೆ. ಸಂಗೀತವು ಕೆಲವೊಮ್ಮೆ ಗಾಯಕರ ಸಾಮರ್ಥ್ಯದಿಂದ, ಸಾಹಿತ್ಯದ ಸಂಪತ್ತಿನಿಂದ ಸಮೃದ್ದವಾಗುತ್ತದೆ. ಆ ದೃಷ್ಟಿಯಲ್ಲಿ ಕರ್ನಾಟಕಿ ಸಂಗೀತದಲ್ಲಿ ಸಂಸ್ಕೃತ ಪದ್ಯಗಳು, ಹೆಚ್ಚು ಪ್ರಚಲಿತವಾಗಿವೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಕರ್ನಾಟಕದ ಅರ್ಧಭಾಗದಲ್ಲಿ ಕರ್ನಾಟಕಿ ಸಂಗೀತವು ವಿಶೇಷವಾಗಿ ಪ್ರಚಲಿತವಾಗಿದೆ.

ಹಾಗೆ ಹಿಂದುಸ್ತಾನಿ ಸಂಗೀತದಲ್ಲಿ ಬ್ರಜ ಹಾಗೂ ಹಿಂದಿ ಭಾಷೆಯ ಹೆಚ್ಚು ಪದ್ಯಗಳ ಸಾಹಿತ್ಯಗಳು ಪ್ರಸಿದ್ದವಾಗಿವೆ. ದ್ರುಪದ ಶೈಲಿಯಲ್ಲಿ ಸಂಸ್ಕೃತಭೂಯಿಷ್ಠ ಪದ್ಯಗಳಿವೆ. ಖ್ಯಾತಗಾಯಕಿಯ ಪದ್ಯಗಳಿಗೆ ಚೀಜ್ ಎಂದು ಕರೆಯಲಾಗಿದೆ. ಹಿಂದುಸ್ತಾನಿ ಸಂಗೀತದಲ್ಲಿ ಶಾಸ್ತ್ರೀಯ ಸಂಗೀತ ಎಂದು ಕರೆಯಿಸಿಕೊಳ್ಳುವ ಮುಖ್ಯಭಾಗವೆಂದರೆ ಖಯಾಲ ಪದ್ಧತಿಯಾಗಿದೆ. ನೂರಾರು ರಾಗಗಳಿಗೆ ವಿವಿಧ ತಾಲ-ಲಯಗಳಲ್ಲಿ ಸಹಸ್ರಾಧಿಕ ಚೀಜ್ ಗಳು ರಚಿಸಲ್ಪಟ್ಟಿವೆ. ಪದ್ಯ ರಚನಾ ಕ್ರಮವನ್ನು ಆಶ್ರಯಿಸಿ ಗಾನಶೈಲಿಯು ಭೇದವನ್ನು ಹೊಂದುತ್ತದೆ. ಪ್ರತಿಯೊಮ್ದು ಗಾಯಶೈಲಿಯ ಸಾಹಿತ್ಯ ರಚನೆಯು ವಿಭಿನ್ನವಾಗಿಯೇ ಇರುತ್ತದೆ. ಉದಾ: ಖ್ಯಾಲ ಶೈಲಿಗೆ ರಚಿತವಾದ ಠುಮರಿ ಅಥವಾ ದ್ರುಪದ ಶೈಲಿಗೆ ಅಳವಡಿಸುವುದು ಅಸಾಧ್ಯ, ಆಯೋಗ್ಯ ಮತ್ತು ಅನಿವಾರ್ಯವಲ್ಲ.

ಖ್ಯಾಲ ಶೈಲಿಯಲ್ಲಿ, ಅದರಲ್ಲೂ ವಿಲಂಬಿತಲಯದಲ್ಲಿ ಹಾಡುವ ಚೀಜ್ ಗಳ ರಚನಾ ವಿಧಾನಗಳು ಹಾಗೂ ದ್ರುತ್ ಲಯದಲ್ಲಿ ಹಾಡುವ ಚೀಜ್ ಗಳು ಬೇರೆಬೇರೆಯಾಗಿಯೇ ಇರುತ್ತವೆ. ಪಂ. ವಿಷ್ಣು ನಾರಾಯಣ ಭಾತಖಂಡೆಯವರು ತಮ್ಮ ಕ್ರಮಿಕ ಪುಸ್ತಕ ಮಾಲ ಗ್ರಂಥದಲ್ಲಿ ಒಂದೊಂದು ರಾಗಕ್ಕೂ ಬೇರೆ ಬೇರೆ ತಾಲಗಳಲ್ಲಿ ಅನೇಕ ಪದ್ಯಗಳನ್ನು ರಚಿಸಿ, ಸ್ವರ ಲಿಪಿಯೊಂದಿಗೆ ಮುದ್ರಿಸಿ, ಹಿಂದುಸ್ತಾನಿ ಸಂಗೀತದ ಸಿರಿಯನ್ನು ಹೆಚ್ಚಸಿದ್ದಾರೆ.

ಹೀಗೆ, ಅನೇಕ ಸಂಗೀತ ವಿದ್ವಾಂಸರು ಪದ್ಯಗಳನ್ನು ರಚಿಸಿದ್ದಾರೆ. ಒಂದು ರಾಗಕ್ಕಾಗಿ ರಚಿಸಿದ ಚೀಜ್ ಅಥವಾ ಬಂದಿಶ್‌ಗಳು ಇನ್ನೊಂದು ರಾಗದಲ್ಲಿ ಹಾಡುವ ಪದ್ಧತಿಯು ಶಾಸ್ತ್ರೀಯ ಸಂಗೀತದಲ್ಲಿ ಅಷ್ಟೊಂದು ಬಳಕೆಯಲ್ಲಿಲ್ಲ. ಅದಕ್ಕೆ ಕಾರಣ ರಸಪೋಷಕ ದೃಷ್ಠಿಯಾಗಿದೆ.

ಗುರುಪರಂಪರೆಯು ಉಭಯ ಸಂಗೀತದಲ್ಲಿ ವಿಶಿಷ್ಟವಾಗಿದೆ. ನಮ್ಮ ಹಿಂದಿನ ಸಂಗೀತ ಗುರುಗಳು ಪದ್ಯಗಳನ್ನು ಒಂದು ರಾಗದಲ್ಲಿ ಕಲಿಸುವಾಗ ನೂರಾರು ಸಲ ಹೇಳಿಸಿ, ಹಾಡಿಸಿ ಅದಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುತ್ತಿದ್ದರು. ಪದ್ಯವು ನೆನಪಾದರೆ ಆ ರಾಗವೂ ನೆನಪಾಗುವಷ್ಟು ಅದು ದೃಡಮೂಲವಾಗಿರುತ್ತಿತ್ತು. ಲಘು ಶಾಸ್ತ್ರೀಯ ಸಂಗೀತದ ಪದ್ಯಗಳನ್ನು ಯಾವುದೇ ರಾಗದಲ್ಲಿ ಹಾಡುವ ಸ್ವಾತಂತ್ರ್ಯ ಗಾಯಕನಿಗಿರುತ್ತದೆ. ಆದರೆ ಅಲ್ಲಿ ರಸಪೋಷಣೆಯ ಜವಾಬ್ದಾರಿಯು ಅವನದ್ದಾಗಿರುತ್ತದೆ.

ಕೇವಲ ಸಂಗೀತದಲ್ಲಿ ನವರಸಗಳು ತೋರದಿದ್ದರೂ ಸಾಹಿತ್ಯದ ಸಹಕಾರದಿಂದ ಅಥವಾ ಪ್ರಬುದ್ಧತೆಯಿಂದ ನವರಸಗಳನು ತೋರಿಸಬಹುದು. ಅದರಲ್ಲೂ ಕೆಲವು ರಸಗಳು ದೃಶ್ಯಪ್ರಧಾನ ನಾಟ್ಯಾದಿಗಳಲ್ಲೇ ಸ್ಪಷ್ಟತೆಯನ್ನು ಹೊಂದುತ್ತವೆ. ಕೇವಲ ಸಂಗೀತದಲ್ಲಿ ವಿಶೇಷವಾಗಿ ಅಭಿವ್ಯಕ್ತವಾಗುವ ರಸಗಳೆಂದರೆ ಶೃಂಗಾರ, ವೀರ ಕರುಣ, ರೌದ್ರ, ಶಾಂತ ಎಂಬ ಐದು ರಸಗಳು ಮಾತ್ರ.

ರಾಗಭಾಸರಸಾಭಾಸ ಪ್ರಸಂಗಗಳು:

ಸಂಗೀತದಲ್ಲಿ ವಿವಿಧ ಘರಾನೆಗಳು ಇದ್ದುದರಿಂದ ಶಿಷ್ಯರಿಗೆ ನಿರ್ಬಂಧ ಹಾಕಿ ಸಂಗೀತಸಂಗೀತ ಬೋಧನೆ ಮಾಡುವ ಗುರುಗಳು ಹಿಂದಿನ ಕಾಲದಲ್ಲಿದ್ದರು. ಇದರಿಂದ ಸಂಗೀತ ಕ್ಷೇತ್ರಕ್ಕೆ  ಅನುಕೂಲ ಮತ್ತು ಪ್ರತಿಕೂಲಗಳೆರಡೂ ಆಗಿವೆ ಎಂದರೆ ತಪ್ಪಾಗಲಾರದು. ಶಿಷ್ಯರು ಇನ್ನೊಂದು ಘರಾಣೆಯ ಸಂಗೀತವನ್ನು ಕೇಳಬಾರದು, ಹಾಡಬಾರದೆಂದು ನಿರ್ಬಂಧಿಸಿರುವುದರಿಂದ ಒಂದೇ ಘರಾಣೆಯನ್ನು ಜೀವನಪರ್ಯಂತ ಸಂಪೂರ್ಣವಾಗಿ ಅಂದರೆ ತಲಸ್ಪರ್ಶಿಯಾಗಿ ಅಭ್ಯಾಸ ಮಾಡಲಿ  ಎಂಬ ಕಳಕಳಿಯೂ ಇದಾಗಿದೆ ಎನ್ನಬಹುದು.

ಆದರೆ ವಿಶೇಷ ಅಭ್ಯಾಸ, ಲೋಕಾನುಭವ ಮತ್ತು ಶಾಸ್ತ್ರಾಭ್ಯಾಸದ ಕೊರತೆಯಿಂದ ಕಾಲಕ್ರಮೇಣ ಸಾಹಿತ್ಯದಲ್ಲಿ ಸ್ವಲ್ಪ ಅಪಭ್ರಂಶತೆ ಕಂಡುಬಂತು. ಗುರುಗಳು ಯಾವುದೋ ಕಾರಣದಿಂದ, ಯಾರೋ ರಚಿಸಿದ ಪದ್ಯವನ್ನು ಅನೇಕ ಶಿಷ್ಯರಿಗೆ ತಪ್ಪಾಗಿ ಪಾಠ ಮಾಡಿದಾಗ ಆ ಶಿಷ್ಯರು ತಮ್ಮ ಶಿಷ್ಯರಿಗೂ ಅದೇ ರೀತಿ ಸಂಗೀತವನ್ನು ಪರವಹಿಸಿದ್ದರಿಂದ ಸಾಹಿತ್ಯದಲ್ಲಿ ಕೆಲವು ಅಪಭ್ರಂಶ ಪರಂಪರೆ ಬೆಳೆಯಿತು. ರಾಗದ ರಸಕ್ಕೂ, ಪದ್ಯದ ಭಾವಕ್ಕೂ ವಿರುದ್ಧವಾದ ಸಂದರ್ಭಗಳು ಬೆಳಕಿಗೆ ಬಂದವು.

ಖ್ಯಾಲ ಗಾಯಕಿಯ ಆರಂಭದಲ್ಲಿ ಜನಮನೋರಂಜನೆಗಾಗಿ, ರಾಜ ರಂಜನೆಗಾಗಿ ಕೆಲವರು ಕೇವಲ ಶೃಂಗಾರರಸಪೂರಿತ ಚೀಜ್‌ಗಳನ್ನು ರಚಿಸಿದರು. ಆದರೆ ಆ ಪದ್ಯಗಳನ್ನೇ ಎಲ್ಲ ರಸಕ್ಕೂ ಅನ್ವಯಿಸಿ ಹಾಡಿದಾಗ ಅದು ರಾಗ-ರಸಭಾಸಕ್ಕೆ  ಕಾರಣವಾಯಿತು. ಒಂದೇ ರಾಗವನ್ನು ಎರಡು ಮೂರು ಗಂಟೆಗಳ ಕಾಲ ಹಾಡುವಾಗ, ಎಲ್ಲ ಲಯದಲ್ಲೂ ಹಾಡುವ ಪದ್ಯಗಳು ಪರಸ್ಪರ ರಸಸಾಮರಸ್ಯದಿಂದ ಅನ್ವಿತವಾಗಬೇಕು. ಆದರೆ ಬಡಖ್ಯಾಲ್ ಶೃಂಗಾರರಸವು ಚೋಟಾಖ್ಯಾಲ್ ನಲ್ಲಿ ಕರುಣರಸವು ಇರುವ ಚೀಜುಗಳನ್ನು ಕೆಲವರು ಈಗಲೂ ಹಾಡುತ್ತಾರೆ. ಅದು ಅಷ್ಟೊಂದು ಸರಿಯಾಗಿ ತೋರುವುದಿಲ್ಲ.

ಆದರೆ ಈಗ ಘರಾಣೆ ಪದ್ಧತಿ ಅಷ್ಟೊಂದು ಪ್ರಚಲಿತವಾಗಿಲ್ಲ. ಶಾಲೆ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಸಂಗೀತವನ್ನು ಪಠ್ಯಕ್ರಮದಲ್ಲಿ ಭೋದನೆ ಮಾದುವ ಸೌಲಭ್ಯವು ಒದಗಿಬಂದಿದೆ. ಅದರೊಟ್ಟಿಗೆ ಸಂಗೀತದಲ್ಲಿ ಗುರು-ಶಿಷ್ಯ ಪರಂಪರೆಯು ಇಷ್ಟವಾಗಿದ್ದರೂ ರಾಗ ರಸಕ್ಕೆ ಪ್ರತಿಕೂಲವಾದ ಕೆಲವು ಪದ್ಯಗಳು ಇಂದಿಗೂ ಅಪ್ರಿಯವೇ ಆಗಿವೆ.

ಬ್ರಜಭಾಷೆಯ ಪದ್ಯಗಳು ಈಗಿನ ಹಿಂದಿ ಭಾಷೆಯ ಗ್ರಾಮ್ಯದಂತಿದ್ದು, ಅದರ ತಿರಳು ಅರ್ಥವಾಗದೆ ಯೇನ ಕೇನ ಪ್ರಕಾರೇಣ ಹಾಡುವ ರೀತಿಯು ಬೆಳೆದುಬಂತು. ಕರ್ನಾಟಕದಲ್ಲಂತೂ ಹಿಂದುಸ್ತಾನಿ ಗಾಯಕರನೇಕರು ಗುರುಗಳು ಹೇಳಿಕೊಟ್ಟಿದ್ದಾರೆ. ಎಂಬ ಮಾತ್ರಕ್ಕೆ ಪದ್ಯದ ಅರ್ಥವನ್ನು ತಿಳಿಯದೆ ರಾಗ-ರಸ ಸಂಬಂಧವನ್ನು ಅರಿಯದೆ ಹಾಡುತ್ತಿರುವುದು ಸಂಗೀತ ಕ್ಷೇತ್ರಕ್ಕೆ ಕೊಂಚ ತೊಂದರೆಯೇ ಆಗಿದೆ. ಒಮ್ಮೊಮ್ಮೆ ಇಂತಹ ಸಂದರ್ಭವನ್ನು ಗಾಯಕರಲ್ಲಿ ಕೇಳಿದರೆ ಕೊಡುವ ಉತ್ತರ ನೀರಸವಾಗಿರುತ್ತದೆ. ನಮ್ಮ ಗುರುಗಳು ಹೀಗೆ ಹೇಳಿಕೊಟ್ಟಿದ್ದಾರೆ ಎಂಬ ಉತ್ತರ ಅವರ ನಾಲಿಗೆಯ ತುದಿಯಲ್ಲೇ ಇರುತ್ತದೆ.

ಪಂ. ಸಿ.ಆರ್.ವ್ಯಾಸರಂಥವರು ಇಂತಹ ಅಪ್ರಿಯ ಪದ್ಧತಿಯನ್ನು ನಿವಾರಿಸಲು ತಾವೇ ಹಿಂದೀ ಭಾಷೆಯಲ್ಲಿ ಅನೇಕ ಖ್ಯಾಲ್ ಪದ್ಯಗಳನ್ನು ರಚಿಸಿ ಹಾಡುತ್ತಿದ್ದರು. ಇಂದು ಖ್ಯಾಲ್ ಗಾಯಕಿಯೆಂದರೆ ಕೇವಲ ಸ್ವರ-ಲಯಗಳಲ್ಲಿ ಇರುವ ದೊಂಬರಾಟವೋ ಎಂಬಂತೆ ಸಾಹಿತ್ಯದ ಗೌಣತ್ವದಿಂದಾಗಿ ರಾಗ ಮಾತ್ರ ರಸವಾಗಿ ಪದವು ಕಸವಾಗಿದೆ.

ಪ್ರಕೃತ, ವಿಶ್ಲೇಷಣೆಯ ಪ್ರಯೋಜನವೆಂದರೆ ಇನ್ನು ಮುಂದಾದರೂ ಗಾಯಕರು ತಾವು ಹಾಡುವ ಪದ್ಯಗಳ ಸಬ್ದಾರ್ಥವನ್ನು ತಿಳಿಯಲು ಅಶಕ್ತರಾದರೂ ನ್ಯೂನಾತಿನ್ಯೂನ ಪದ್ಯದ ಭಾವರ್ಥವನ್ನಾದರೂ ತಿಳಿದು ರಾಗ-ರಸ-ಸಾಹಿತ್ಯಗಳ ಸಂಬಂಧವನ್ನು ಅರಿತು ಹಾಡಿದರೆ ಅದೇ ಸಂಗೀತ ಕ್ಷೇತ್ರದ ಉತ್ತಮ ಅಭಿವೃದ್ಧಿಗೆ ನೀಡುವ ಕೊಡುಗೆಯಾಗುತ್ತದೆ. ರಾಗ-ರಸ-ಸಾಹಿತ್ಯಗಳ ಸಂಬಂಧವಿಲ್ಲದೇ ಕೆಲವು ಪ್ರಸಿದ್ಧ ಪದ್ಯಗಳನ್ನು ಇಲ್ಲಿ ಕೊಡಲಾಗಿದೆ.

ರಾಗ: ಬಿಲಾಸಖಾನಿ ತೋಡಿ :

ಅತಿ ಕರುಣರಸ, ಹಾಡುವ ಸಮಯ: ಪ್ರಾತಃಕಾಲ ಪ್ರಕೃತ ಪದ್ಯದಲ್ಲಿರುವ ಸಾಹಿತ್ಯ ಸಂಪೂರ್ಣ ಶೃಂಗಾರ ರಸದಿಂದ ಕೂಡಿದೆ.

ಬಡಾಖ್ಯಾಲ-ವಿಲಂಬಿತ ಏಕತಾಲ

ಸ್ಥಾಯಿ: ನೀ ಕೇ ಘೋಂಗರಿಯಾ ಠುಮಕತ ಚಾಲ ಚಲತ ಹೈ ತು ಮತವಾರಿ |

ಅಂತರಾ : ಸುನತ ಸಾಥ ಜಿಯಾ ಬೇಕಲ ಹೋತ ಸದಾರಂಗ ಲೇ ಹೋ ಬಲಯ್ಯ |

ಛೋಟಾ ಖ್ಯಾಲ-ದ್ರುತ ತೀನ್ತಾಲ

ಸ್ಥಾಯಿ
ಬಲಮ ಮೋರೇ ಛೋಡೋ (ವೋ) ಕಲಯ್ಯಾ
ಢಾಕನ ಲಾಗೀ ತಾನ ಮೋರೇ ಛುಡಿಯಾ||

ಅಂತರಾ
ಮೋಹೇ ಪಿಯಾ ಬಿನ ಬೇಕಲ ಹೈ
ಜಾವೋ ಸೌತನಿಯಾ ಅಕೇಲೇ ರಹ ಬಲಯ್ಯಾ ||

ಈ ಎರಡೂ ಪದ್ಯಗಳ ಅರ್ಥವು ಪ್ರಿಯತಮೆಯ ಹತ್ತಿರ ಬರುವ ಪ್ರಿಯತಮನನ್ನು ಸಂಬೋಧಿಸಿ ಏಳುವ ಸಂದರ್ಭವಾಗಿದೆ. ನಾನು ವ್ಯಾಕುಲಳಾಗಿದ್ದೇನೆ. ನೀನು ಎಲ್ಲಿಯಾದರು ಹೋಗು ಎಂದು ಶೃಂಗಾರ ರಸವನ್ನು ಎತ್ತಿ ಹಿಡಿಯುವ ಪದ್ಯ ಇದಾಗಿದೆ. ಆದ್ದರಿಂದ ಈ ರಾಗದ ರಸಕ್ಕೂ ಮತ್ತು ಸಾಹಿತ್ಯಕ್ಕೂ ಪರಸ್ಪರ ವಿರೋಧ ಕಂಡುಬರುವುದರಿಂದ ಮತ್ತು ಇನ್ನೂ ಅನೇಕ ಪದ್ಯಗಳು ರಸಾನುಕೂಲಕ್ಕೆ ತಕ್ಕಂತೆ ಸಿಗುವುದರಿಂದ ಈ ಮೇಲೆ ಹೇಳಿದಂಥ ಪದ್ಯಗಳನ್ನು ಗಾಯಕರು ಹಾಡದಿದ್ದರೆ ಅದೇ ಸಂಗೀತ ಕ್ಷೇತ್ರಕ್ಕೆ ಅವರು ನೀಡುವ ಹಿರಿಯ ಗೌರವವಾಗಿದೆ.

ಇದೇ ರೀತಿ ಪೂರಿಯಾ ಧನಾಶ್ರೀ ರಾಗದಲ್ಲಿ ಶ್ರಂಗಾರ ರಸಪ್ರಧಾನ ಪದ್ಯವನ್ನು ಕರುಣರಸಪ್ರಧಾನ ರಾಗದಲ್ಲಿ ಹಾಡುವ ಪದ್ಧತಿಯು ಕಾಣಸಿಗುತ್ತದೆ.

ಸ್ಥಾಯೀ :
ಅಬ ತೋ ಋತಮನೇ ಬೋಲೂಂಗೀ ತುಮ ಸಂಗ ಪ್ಯಾರೀ

ಅಂತರಾ :
ರೈನ ಜಗಾಯೇ, ಪ್ರೇಮ ಪಗಾಯೇ ತುಮ ವಹೀ ಜಾವೋ ಜಿನಕಿ ಮನ ಭಾಯೇ

ಅರ್ಥ:
ಯುವತಿಯೊಬ್ಬಳು ತನ್ನ ಪ್ರೇಮಿಗೆ ಹೇಳುವ ಪದ್ಯವಿದು.

(ಸ್ಥಾಯಿ) ಪ್ರಿಯನೇ, ಈಗ ನನಗೆ ಋತುಕಾಲವಿದೆ (ಋತುಮತಿಯಾಗಿದ್ದೇನೆ) ಎಂದು ಹೇಳುತ್ತಿದ್ದೇನೆ. (ಅಂತರಾ) ರಾತ್ರಿ ಬೆಳಗಲಿ. ಪ್ರೇಮವು ಪರಿಪಕ್ವವಾಗಲಿ, ನಿನ್ನ ಮನಸ್ಸು ಎಲ್ಲಿ ಹೋಗಬೇಕೆನಿಸುತ್ತದೋ ಅಲ್ಲಯವರೆಗೆ ಹೋಗು.

ಈ ಪದ್ಯವನ್ನು ಇಂದು ದೊಡ್ಡ ದೊಡ್ಡ ಸಂಗೀತ ಕಚೇರಿಗಳಲ್ಲಿ ಹುಡಗಿಯರೂ ಹಾಡುತ್ತಾರೆ. ಪ್ರಾಯಃ ಹಾಡುವ ಯುವತಿಯರಿಗೆ ಈ ಪದ್ಯದ ಅರ್ಥ ಗೊತ್ತಾದರೆ ಅವರು ಹಾಡುತಾರೆಯೇ? ಖಂಡಿತ ಇಲ್ಲ.

ಇದರ ಅರ್ಥ ಶ್ರೋತೃಗಳಿಗೂ ಗೊತ್ತಾಗಿರುವುದಿಲ್ಲ ಎಂಬ ಧೈರ್ಯದಿಂದ ಈ ಪದ್ಯವನ್ನು ಹಾಡುತ್ತಾರೆ ಎಂದು ಹೇಳಬಹುದೇ? ಅಥವಾ ಈ ಪದ್ಯದ ಅರ್ಥ ಗೊತ್ತಿರುವ ಶ್ರೋತೃಗಳು ಗಾಯಕರಿಗೆ ಇದನ್ನು ಸೂಚಿಸಬಹುದೇ? ಎಂಬೆಲ್ಲ ವಿಕಲ್ಪಗಳು ಸಂಗೀತ ವಿಮರ್ಶಕರಿಗೆ ಬರುತ್ತವೆ.

ಪುರುಷರಿಗಂತೂ ಈ ಪದ್ಯದ ಭಾವವು ಸ್ವಲ್ಪವೂ ಸಂಬಂಧಿಸದೆ ಇರುವುದರಿಂದ ಅವರು ಹಾಡುವ ಸಂದರ್ಭವೇ ಬರುವುದಿಲ್ಲ. ಈ ರಾಗವನ್ನು ಹಾಡಲು ಇನ್ನೂ ಅನೇಕ ಉತ್ತಮ ಪದ್ಯಗಳು ಇದ್ದರೂ ಗುರುಗಳು ಹೇಳಿದ್ದಾರೆಂಬ ಮಾತ್ರಕ್ಕೆ ಈಗಿನ ಬಹುಮಾಧ್ಯದಲ್ಲಿ ಇಂತಹ ಅನಿಷ್ಟ ಪರಂಪರೆಯನ್ನು ಬಿಡುವುದೇ ಒಳಿತಾಗುತ್ತದೆ.