ಹಿಂದುಸ್ತಾನಿ ಸಂಗೀತ ಅಥವಾ ಉತ್ತರಾದಿ ಸಂಗೀತದಲ್ಲಿ ರಸಾಭಿವ್ಯಕ್ತಿ ಎಂಬ ಕ್ರಿಯೆಯಲ್ಲಿ ನಡೆಯುವ ಕ್ರಮಗಳನ್ನು ತಿಳಿಯುವ ವಿಚಾರಾಸ್ಪದ ವಿಷಯ ಇದಾಗಿದೆ. ಈ ಸಂಗೀತಕ್ಕೆ ಪ್ರಬುದ್ಧವಾದ ಶಾಸ್ತ್ರ ಇಲ್ಲ ಎಂಬ ಕೊರಗು ಇದ್ದರೂ ಜನಮನದಲ್ಲಿ ರಸಾಭಿವ್ಯಂಜಕತ್ವಕ್ಕೇನೂ ಕೊರತೆಯಿಲ್ಲ. ಇರುವ ಸಂಗೀತ ಶಾಸ್ತ್ರವನ್ನೇ ಈ ಸಂಗೀತಕ್ಕೂ ಹೇಗೆ ಅನ್ವಯಿಸಬೇಕೆಂದು ಪರಿಶ್ರಮ ಆಗಬೇಕಾಗಿದೆ. ಆ ದಿಶೆಯಲ್ಲಿ ಇಟ್ಟಿರುವ ಒಂದು ಪ್ರಮುಖ ಹೆಜ್ಜೆ ಇಲ್ಲಿದೆ.

ರಸಾಭಿವ್ಯಕ್ತಿಯು ಸಂಗೀತದ ಪರಮಧ್ಯೇಯ ತಾನೇ? ಹಾಗೆಂದ ಮಾತ್ರಕ್ಕೆ ಅದು ಶಾಸ್ತ್ರದಿಂದ ಸಂಪೂರ್ಣ ಬಾಹಿರವಾಗಿರಬಹುದು ಎಂದರ್ಥವಲ್ಲ. ರಸದ ಮಹತ್ವವು ಸಾಹಿತ್ಯ-ಸಂಗೀತಗಳಲ್ಲಿ ಸಮಾನವಾಗಿದೆ. ರಸಹೀನಗಾಯನವನ್ನು ನೀರಸ ಎಂದೂ ರಸಯುಕ್ತ ಗಾಯನವನ್ನು ಸರಸಗಾಯನ ಎಂದೂ ಕರೆಯುತ್ತಾರೆ.  ಸರಸ ಗಾಯನವು ಜನಮನೋರಂಜಕವಾಗಿ ಆತ್ಮವನ್ನು ಅನಂದಪುಲಕಿತವನ್ನಾಗಿ ಮಾಡುತ್ತದೆ. ಸಂಗೀತದಲ್ಲಿ ನೀರಸ ಗಾಯನವು ತ್ಯಾಜ್ಯವಾದರೆ ಸರಸಗಾಯನವು ಗ್ರಾಹ್ಯವಾಗಿದೆ. ನೀರಸವಾದ ಹಾಗೂ ತ್ಯಾಯವಾದ ಆ ಗಾಯನದ ಬಗೆಗೆ ವಿಮರ್ಶಿಸುವ ಅವಶ್ಯಕತೆ ಅಷ್ಟೊಂದಿಲ್ಲ.  ಸರಸಗಾಯನದ ಪ್ರಕ್ರಿಯೆಯನ್ನು ತಿಳಿಯುವ, ತಿಳಿಸುವ ಅನಿವಾರ್ಯತೆ ಪ್ರಮುಖವಾಗಿದೆ.

ಕಲಾಕರನು ಶಬ್ದ, ಸ್ವರ, ರಾಗಗಳೆಂಬ ಸಾಧನಗಳಿಂದ ಉತ್ತಮ ಪರಿಸ್ಥಿತಿಯನ್ನು  ಉತ್ಪನ್ನ ಮಾಡಿ ಸಹೃದಯ ಶ್ರೋತೃಗಳ ಹೃದಯದಲ್ಲಿ ಭಾವವನ್ನು ಜಾಗೃತ ಮಾಡುತ್ತಾನೆ. ಯಾವಾಗ ಭಾವವು ನಿರ್ವಿಕಾರವಾಗುತ್ತದೋ ಆದ ರಸ ಅಥವಾ ಆನಂದವು ನಿಷ್ಪತ್ತಿಯಾಗುತ್ತದೆ. ಭಾವದ ಸಂಬಂಧವು ಮನಸ್ಸಿಗಾದರೆ, ರಸದ ಸಂಬಂಧವು ಆತ್ಮನಿಗಾಗುತ್ತದೆ. ಯಾವ ಕಲಾಕಾರನ ಕಲೆಯು ಆತ್ಮನಿಗೆ ಸಂಬಂಧವಾಗುತ್ತದೋ ಅದು ಅಲೌಕಿಕ ಆನಂದವನ್ನು ಕೊಡುವಂಥದ್ದಾಗುತ್ತದೆ. ಯಾವ ಗಾಯನದ ಸಂಬಂಧವು ಎಷ್ಟು ಅಧಿಕ ಪ್ರಮಾಣದಲ್ಲಿ ಆತ್ಮನಿಷ್ಠವಾಗುತ್ತದೋ ಅಷ್ಟು ಪ್ರಭಾವಪೂರ್ಣವಾಗುತ್ತದೆ. ಆ ಗಾಯನ.

ಗಾಯಕನು ವಿನಯಸ್ವಭಾವ ಉಳ್ಳವನಾಗಬೇಕು. ಗಾಯನ ಮಾಡುವ ರೀತಿಯನ್ನು ಪ್ರತಿಬಿಂಬಿಸುವ ಸಂದರ್ಭ ಒಂದು ಅದ್ಭುತ ರಾಮಾಯಣದಲ್ಲಿರುವುದು ನೆನಪಿಗೆ ಬರುತ್ತದೆ. ತುಂಬುರುನೊಮ್ಮೆ ಉಲೂಕ ರಾಜನ ಸಭೆಯಲ್ಲಿ ನಿಗರ್ವಿಯಾಗಿ ರಾಗರಸೋಲ್ಲಾಸ ಶರಧಿಯಲ್ಲಿ ಮಿಂದು, ಭಾವನಿಮಗ್ನತೆಯಿಂದ, ನಿರ್ಮಮಕಾರದಿಂದ, ಭಕ್ತಿರಸಭಾವದಿಂದ, ನಿರ್ಮಲಮನೋಭಾವದಿಂದ ಮತ್ತು ತನ್ಮಯತೆಯಿಂದ ಗಾನ ಮಾಡುತ್ತಾನೆ. ಅದನ್ನು ಕೇಳಿದ ಗಾನ ದೇವತೆಗಳಾದಿಯಾಗಿ ಎಲ್ಲರೂ ಸಂತುಷ್ಟರಾಗುತ್ತಾರೆ.

ಇದರಿಂದ ಅಸೂಯೆಗೊಂಡ ನಾರದನು ತುಂಬುರನಿಗಿಂತ ಉತ್ತಮವಾಗಿ ಹಾಡಬೇಕೆಂದು ಅಹಂಭಾವದ ಅಮಲಿನಲ್ಲಿ ಭಾವವಿವರ್ಜಿತನಾಗಿ ಹಾಡುತ್ತಾನೆ. ಅದನ್ನು ಕೇಳಿದ ಗಾನದೇವತೆಗಳು ವಿಕಲಾಂಗರಾಗುತ್ತಾರೆ. ಗಾನದೇವತೆಗಳ ಪ್ರಾರ್ಥನೆಯಂತೆ ನಿರಹಂಕಾರನಾಗಿ ಅವನು ಪುನಃ ಹಾಡಿದಾಗ ದೇವತೆಗಳು ಸಂತೃಪ್ತರಾಗುತ್ತಾರೆ. ಹಾಗೇ, ಗಾಯಕರು ಹಾದುವಾಗ ವಿನೀತರಾಗಿ, ಪ್ರಸನ್ನ ಮುಖರಾಗಿ ಅಹಂಭಾವವನ್ನು ತೊರೆದು ಹಾಡಬೇಕು. ಅದರಿಂದ ಅವರ ಗಾಯನದಲ್ಲಿ ಸಾತ್ವಕಗುಣಗಳು ಮೈವೆತ್ತು, ರಸೋತ್ಪಾದನೆಗೆ ಪೂರಕಗಳಾಗುತ್ತವೆ ಎಂಬುದು ಗಮನಾರ್ಹ ಸಂಗತಿ.

ಬಟ್ಟಲನ್ನು ನೀರಿನಲ್ಲಿ ತೇಲಿಬಿಟ್ಟಾಗ ಅದು ಹಾಗೂಮ್ಮೆ ಹೀಗೊಮ್ಮೆ ಒಲೆದೂ ತೊನೆದೂ ಕ್ರಮೇಣ ಬಟ್ಟಲು ಯಾವ ರೀತಿಯಲ್ಲಿ ಮುಳುಗುತ್ತದೆಯೋ ಅದರಂತೆ ಗಾಯಕನು ಹಾಡುವಾಗ ರಸಸ್ಥಾನವನ್ನು ಮನಗಂಡು ರಸಸಮುದ್ರದಲ್ಲಿ ಮಗ್ನನಾಗಬೇಕು.

ತಾನು ಆನಂದ ಅನುಭವಿಸುವ ಗಾಯಕನೇ ಶ್ರೋತೃಗಳ ಮನಸ್ಸಿನ ಮೇಲೂ ಪ್ರಭಾವವನ್ನು ಸ್ಥಾಪಿಸುತ್ತಾನೆ. ಆದರೆ ಕೇವಲ ಜನಮನೋರಂಜನೆಗಾಗಿ ಹಾಡುವ ಗಾಯಕನನ್ನು, ವಾದಕನನ್ನು ಮರ್ಮಜ್ಞನಾದ ಶ್ರೋತೃವು ಅಷ್ಟೊಂದು ಆದರದಿಂದ ಕಾಣುವುದಿಲ್ಲ. ಯಾವ ಗಾಯಕನು ತನ್ನ ಸಾಧನೆಯ ಚರಮಸೀಮೆಯನ್ನು ಯಾವಾಗ ತಲುಪತ್ತಾನೋ, ಆಗ ಸಂಗೀತದ ಗುರಿಯನ್ನು (ಆನಂದವನ್ನು) ಅವನು ಹೊಂದುತ್ತಾನೆ.

ಸಾಧನೆಯೆಂದರೆ ಉತ್ತಮ ಸ್ವರಶ್ರೀ ಸಂಪಾದಿಸುವುದು ಎಂದರ್ಥ. ಸ್ವರಗಳು ತಮ್ಮ ಅಧೀನವಾಗಿ ಯಾವಾಗ ಯಾವ ಸ್ವರವು ಮನಸ್ಸಿನಿಂದ ಅಲೋಚಿಸಲ್ಪಡುತ್ತದೋ ಕೂಡಲೇ ಅದು ಕಂಠದಿಂದ ಹೊರಹೊಮ್ಮುವಂತಿರಬೇಕು. ಸಂಗೀತಗಾರನು ಮುಂಜಾನೆ ಎದ್ದು ಸ್ವರಗಳ (ಆಕಾರಾಧಿ) ಸಾಧನೆಯನ್ನು ಮಾಡಬೇಕು. ಅವನ ನಿರಂತರ ಪರಿಶ್ರಮದ ಆಲಾಪನೆಯ ಫಲವಾಗಿ ಕಂಠನಾದವು ಶುದ್ಧವಾಗಿ ಕಲ್ಮಶಗಳಿಂದ ದೂರವಾಗಿ ನಾದ ಮಾಧುರ್ಯದಿಂದ ಕೋಗಿಲೆಯ ಕೂಜನದಂತೆ ಜನ-ಮನವನ್ನು ಸೂರೆಗೊಳ್ಳುತ್ತದೆ.

ಸಂಗೀತದಲ್ಲಿ ಯೋಗ್ಯವಾದ ಸ್ವರ-ತಾಳ-ಲಯ ಮತ್ತು ಶಬ್ದಗಳ ಪರಸ್ಪರ ಸಂಬಂಧದಿಂದಲೇ ರಸ ಉತ್ಪನ್ನವಾಗುತ್ತದೆ. ಎಂದರೆ ಹಿಂದೆಂದೂ ಇಲ್ಲದ ಹೊಸದೊಂದು ಪದಾರ್ಥವು ಹುಟ್ಟುತ್ತದೆ. ಎಂದರ್ಥವಲ್ಲ. ನಮ್ಮಲ್ಲಿಯೇ ಸುಪ್ತವಾಗಿರುವ ಭಾವವನ್ನು ಹೊರಹೊಮ್ಮಿಸಿ ಅಭಿವ್ಯಕ್ತ ಮಾಡುತ್ತದೆ. ಎಂದರ್ಥ.

ಸ್ವರ, ತಾಳ, ಲಯ ಮತ್ತು ಶಬ್ದಗಳಲ್ಲಿ ಯಾವುದಾದರೊಂದರ ಗೌಣತೆ ಇದ್ದರೂ ರಸೋತ್ಪಾದನೆಯಲ್ಲಿ ನ್ಯೂನ್ಯತೆ ಕಂಡು ಬರಬಹುದು. ಇದಕ್ಕೂ ಅತಿರಿಕ್ತವಾಗಿ ಗಾಯನದಲ್ಲಿ ರಸೋತ್ಪತ್ತಿ ಆಗಬೇಕಾದರೆ ಅತಿಮುಖ್ಯವಾದ ವಸ್ತುವೊಂದಿದೆ. ಅದೇ ಗಾಯಕನ ಗಾನನಿಷ್ಠ ಧ್ವನಿ. ಅದನ್ನೇ ಅವಾಜ್ ಎಂದು ಕರೆಯಲಾಗಿದೆ. ಆವಾಜಿನಲ್ಲಿ ಮೂರು ಪ್ರಕಾರಗಳಿವೆ. ೧ ಸುರೇಲಿ, ೨. ರಸೀಲಿ, ೩ ಬೇಸೂರ್ ಎಂದು ಬೇಸೂರ ಸ್ವರವು ಗಾಯನದಲ್ಲಿ ವರ್ಜ್ಯವಾಗಿದ್ದು ಅದರ ಕುರಿತು ಚರ್ಚೆ ಇಲ್ಲಿ ಅಪ್ರಸ್ತುತ.

ರಸೀಲಿ ಸ್ವರವು ರಸೋತ್ಪಾದನೆಗೆ ಸಮರ್ಥವಾಗಿದೆ. ಯಾರ ಸ್ವರವು ರಸಜವಾಗಿರುತ್ತದೆಯೋ ಅದು ಸುರೇಲಿಯೂ ಆಗಿರುತ್ತದೆ. ಸುರೇಲಿ ಆವಾಜಿನಲ್ಲಿ ರಸೋತ್ಪಾದಕ ಶಕ್ತಿ ಇರುವುದಿಲ್ಲ. ವಾಸ್ತವ ರಸಾಭಿವ್ಯಕ್ತಿಗೆ ರಸೀಲಿ ಧ್ವನಿಯ ಅನಿವಾರ್ಯತೆ ಎದ್ದು ಕಾಣುತ್ತದೆ.

ಹಿಂದುಸ್ಥಾನಿ ಸಂಗೀತದಲ್ಲಿ ಖಯಾಲ್ ಗಾಯನಪದ್ಧತಿಯು ಅಧಿಕ ಪ್ರಚಾರದಲ್ಲಿದೆ. ಖಯಾಲ್ ಎಂದರೆ ವಿಸ್ತಾರ, ವಿಚಾರ ಎಂದರ್ಥ. ಇದರ ಬಗ್ಗೆ ಹೆಚ್ಚಿನ ವಿವರಣೆಯನ್ನು ಇಲ್ಲಿ ನೀಡಲಾಗಿದೆ. ಈ ಗಾನಶೈಲಿಯಲ್ಲಿ ಮುಖ್ಯವಾಗಿ ಮೂರು ಅಂಗಗಳು. ೧ ಅಲಾಪ, ೨ ಬೋಲತಾನ್ ೩. ತಾನ್. ರಸಾನಂದದ ಉತ್ಪತ್ತಿಗೆ ಆಲಾಪದ ಭಾಗ ಅತಿ ಮುಖ್ಯವಾಗಿದೆ. ಆದ್ದರಿಂದಲೇ ಹಿರಿಯ ಸಂಗೀತಜ್ಞರಿಂದ ಆಲಾಪಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಯದ್ಯಪಿ (ಆದಾಗ್ಯೂ). ನವರಸಾಭಿವ್ಯಕ್ತಿಗೆ ಉಳಿದ ಭಾಗಗಳಲ್ಲೂ ಸಾಮರ್ಥ್ಯ ಇದೆ. ತಥಾಪಿ ಆನಂದಕ್ಕೆ ಸಂಬಂಧಿಸಿದ ಭಾಗವು ಅಲಾಪದಿಂದಲೇ ಆರಂಭವಾಗುತ್ತದೆ. ಸುಘಟಿತ ಅಥವಾ ಜೈನದಾರಿಯ ಗಂಭೀರ ಆಲಾಪವು ಶ್ರೋತೃಗಳನ್ನು ಆಕರ್ಷಿಸುತ್ತದೆ. ಆಲಾಪದ ಸಮಯದಲ್ಲಿ ಗಾಯಕನು ಒಂದು ನಿರ್ದಿಷ್ಟ ಲಯಸಹಿತನಾಗಿ ಏಕಾಗ್ರತೆಯಿಂದ ಸ್ವರದಲ್ಲಿ ಕೇಂದ್ರಿತನಾಗುತ್ತಾನೆ. ಗಮಕ, ಮೀಂಡ್, ಖಟಕೆ, ಮುರ್ಕಿಗಳಿಂದ ಯೋಗ್ಯ ಪ್ರಯೋಗ ಮಾಡುತ್ತಾ ಆಲಾಪದಲ್ಲಿ ಸೌಂದರ್ಯವನ್ನು ನೀಡುತ್ತಾನೆ.

ಎಲ್ಲ ರಾಗಗಳ ಆಲಾಪಗಳನ್ನು ಮಾಡುವಾಗ ಒಂದೇ ರೀತಿಯ ಗಮಕ ಮೀಂಡಗಳ ಪ್ರಯೋಗ ಬರುವುದಿಲ್ಲ ಎನ್ನುವುದು ಗಮನಿಸಬೇಕಾದ ವಿಷಯವಾಗಿದೆ. ಏಕೆಂದರೆ ಪ್ರತಿ ರಾಗದ ಪ್ರಕೃತಿಯು ವಿಭಿನ್ನವಾಗಿರುತ್ತದೆ. ಕೆಲವು ರಾಗಗಳಲ್ಲಿ ಮೀಂಡ್ ಆಧಿಕ್ಯವಿದ್ದರೆ ಮತ್ತೆ ಕೇಲವು ರಾಗಳಲ್ಲಿ ಮುರ್ಕಿಯ ಆಧಿಕ್ಯವಿರುತ್ತದೆ. ಆದ್ದರಿಂದ ಯಾವ ರಾಗದಲ್ಲಿ ಯಾವುದರ ಪರಿಮಾಣ ಶಾಸ್ತ್ರ ಬದ್ಧವಾಗಿ ಎಷ್ಟಿರುತ್ತದೋ ಅಷ್ಟೇ ಪ್ರಯೋಗವನ್ನು ಮಾಡಬೇಕಾಗುತ್ತದೆ. ಉದಾ: ದರ್ಬಾರಿ ಕಾನಡಾ ರಾಗವು ಗಂಭೀರ ಪ್ರಕೃತಿಯ ರಾಗವಾಗಿದ್ದು ಇದರಲ್ಲಿ ಮೀಂಡ್‌ನ ಪ್ರಯೋಗವು ಅಧಿಕ ಹಿತಕರವಾಗುತ್ತದೆ. ಏಕೆಂದರೆ ಮೀಂಡ್ ಪ್ರಯೋಗದಿಂದ ಒಂದು ಸ್ವರದಿಂದ ಮತ್ತೊಂದು ಸ್ವರದ ಸಂಬಂಧವು ಅವಿಕೃತವಾಗಿ ತೋರಿ ಸಂಗೀತ ವಾತಾವರಣವು ಶಾಂತವಾಗುತ್ತದೆ. ಸ್ವರದಲ್ಲಿ ಸ್ನಿಗ್ಧತೆಯೂ ಹೆಚ್ಚುತ್ತದೆ. ಇದರಲ್ಲಿ ಚೈನದಾರಿ ಪ್ರಯೋಗದ ಅನಿವಾರ್ಯತೆ ಇದೆ. ಗಮಕದ ಪ್ರಯೋಗವು ಈ ರಾಗದಲ್ಲಿದೆ; ಚಪಲ (ಚಂಚಲ) ಆಲಾಪಗಳ ಪ್ರಯೋಗವು ಈ ರಾಗದಲ್ಲಿ ವರ್ಜ್ಯವಾಗಿದೆ. ಆದ್ದರಿಂದ ಇದು ಅತಿಪ್ರಚಲಿತವಾಗಿದ್ದರೂ ಸರಿಯಾದ ಮರ್ಮಜ್ಞಗಾಯಕನೇ ನಿಯಮಾನುಸಾರ ಹಾಡಬಲ್ಲನು.

ಭೈರವರಾಗವು ಗಂಭೀರ ಪ್ರಕೃತಿಕ ರಾಗವಾದರೂ ದರ್ಬಾರಿಗಿಂತ ಕಡಿಮೆ ಮೀಂಡ್ ಮತ್ತು ಅಧಿಕ ಗಮಕ ಪ್ರಯೋಗದಿಂದ ಕೂಡಿದೆ. ಅದಕ್ಕೆ ಕಾರಣ ಅದು ವೀರ-ರೌದ್ರ ರಸೋತ್ಪಾದಕ ರಾಗವಾಗಿದೆ. ಹೀಗೆ ಆಯಾ ರಾಗದಲ್ಲಿ ವಿಶಿಷ್ಟ ಪ್ರಯೋಗಕ್ಕಾಗಿ ಮತ್ತು ಶಾಸ್ತ್ರಬದ್ಧ ಗಾನಕ್ಕಾಗಿ ಸರಿಯಾದ ಗುರುಗಳ ಮಾರ್ಗದರ್ಶನ ಬೇಕಾಗುತ್ತದೆ. ಅದಿಲ್ಲದಿದ್ದರೆ ಅವನು ತನ್ನ ಗಾಯನದಲ್ಲಿ ಆಲಾಪದ ಕ್ಷಮತೆಯನ್ನು ಹೊಂದರೆ ರಸಾಭಿವ್ಯಕ್ತಿಗೊಳಿಸಲು ನಿಷ್ಪಲನಾಗುತ್ತಾನೆ ಅಥವಾ ವಿಮುಖನಾಗುತ್ತಾನೆ.

ಖಯಾಲ್ ಗಾಯನದ ಎರಡನೆ ಭಾಗವೇ ಬೋಲತಾನ್. ಇದರಲ್ಲಿ ಗೀತದ (ಚೀಜ್ ನ) ಶಬ್ದಗಳನ್ನು ಅನೇಕ ಪ್ರಕಾರಗಳಲ್ಲಿ ಸ್ವರೋಚ್ಚಾರನೆ ಸಹಿತವಾಗಿ ಹಾಡಲಾಗುತ್ತದೆ. ಇಲ್ಲಿ ತಾನಗಳ ಸ್ವಲ್ಪ ಪ್ರಯೋಗವಿರುತ್ತದೆ. ಬೋಲತಾನ್ ವಿಸ್ತಾರ ಮಾಡುವಾಗ ಕೆಲವು ಗಾಯಕರು ತಮ್ಮ ಅಭ್ಯಾಸದ ನ್ಯೂನತೆಯಿಂದ ನೀರಸವನ್ನು ಪ್ರದರ್ಶಿಸುತ್ತ ಆಲಾಪದಿಂದ ಉಂಟಾದ ಎಲ್ಲ ಆನಂದವನ್ನು ಹಾಳುಮಾಡುತ್ತಾರೆ.

ಗಾಯಕನು ಬೋಲತಾನ್ ಮಾಡುವಾಗ ನೆನಪಿಡಬೇಕಾದ ವಿಷಯವೆಂದರೆ ಲಯಕಾರಿ ಪ್ರಯೋಗ. ಲಯಕಾರಿ ಎಂದರೆ ಸ್ವರ-ಲಯಗಳ ಪೈಪೋಟಿ ಎಂದು ತಿಳಿದಿದ್ದೇ ಆದರೆ ಅದು ತಪ್ಪೆಂದು ಹೇಳಬೇಕಾಗುತ್ತದೆ. ಸ್ವರ-ಲಯಗಳ ಸಂತುಲನ ಮಾತ್ರ ಎಂದರ್ಥ. ಗಣಿತದಂಥ ನೀರಸ ವಿಷಯವನ್ನು ಪಳಗಿದ ಅಧ್ಯಾಪಕನೊಬ್ಬನು ಸರಸ-ಸರಳ ಮಾಡುವಂತೆ ಗಾಯಕನು ತನ್ನ ಸಂಗೀತ ಕಛೇರಿಯಲ್ಲಿ ಬೋಲತಾನ್ ಮಾಡುತ್ತ ರಸಾಭಿವ್ಯಕ್ತಿಯನ್ನು ಉಂಟು ಮಾಡುತ್ತಾನೆ. ಬೋಲತಾನ್ ಗಾಯಕರ ಪರೀಕ್ಷಾ ಸ್ಥಾನವಾಗಿದೆ.

ಆಲಾಪದಲ್ಲಿ ಗೀತದ ಎಲ್ಲ ಶಬ್ದಗಳ ಸರಿಯಾದ ಜ್ಞಾನ ಆಗದಿದ್ದರೆ ಬೋಲತಾನ್ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ ಶಬ್ದ ಜ್ಞಾನವು ಅಷ್ಟೇ ಪ್ರಧಾನವಾಗಿದೆ. ಬೋಲತಾನ್ ದಲ್ಲಿ ಆಲಾಪ ಮತ್ತು ತಾನಗಳ ಮಿಶ್ರಣ ಸ್ವಲ್ಪ ಪ್ರಮಾಣದಲ್ಲಿರುತ್ತದೆ. ಯೋಗ್ಯ ಬೋಲತಾನ್ ಪ್ರಯೋಗದಿಂದ ಗಾಯನದಲ್ಲಿ ಆಕರ್ಷಣೆ ಹೆಚ್ಚುತ್ತದೆ. ಆಲಾಪದಿಂದ ಶ್ರೋತೃವು ರಸಾನಂದತುಂದಿಲನಾದರೆ ಬೋಲ್ ತಾನದಿಂದ ಭಾವಮಗ್ನನಾಗುತ್ತಾನೆ.

ಗಾಯಕನು ಸ್ವಭಾವತಃ ನೀರಸ ಪ್ರಕೃತಿಯವನಾದರೆ ಅವನು ಹಾಡುವ ಗಾನದಲ್ಲೂ ನೀರಸತೆಯು ತೋರುತ್ತದೆ. ಆಲಾಪವು ವಿಲಂಬಿತ ಲಯದಲ್ಲಿ ಹಾಗೂ ತಾನ್ ದ್ರುತ್ ಲಯದಲ್ಲಿ ಇರುವುದರಿಂದ ಇವೆರಡರ ಮಧ್ಯದಲ್ಲಿ ಬೋಲತಾನ್ ಭಾಗವು ಮಧ್ಯಲಯದಲ್ಲಿ ಹಾಡಲ್ಪಡುತ್ತದೆ. ಆದಕಾರಣ ಇದು ಗಾಯನ ಎಂಬ ಮಾಲೆಗೆ ಮಧ್ಯಲಯದಲ್ಲಿ ಹಾಡಲ್ಪಡುತ್ತದೆ. ಆದಕಾರಣ ಇದು ಗಾಯನ ಎಂಬ ಮಾಲೆಗೆ ಮಧ್ಯಮಣಿಯಂತೆ ಪರಿಶೋಭೆಯನ್ನು ತರುವ ಕೇಂದ್ರ ಬಿಂದುವಾಗಿದೆ.

ಗಾಯನದ ಮೂರನೇ ಭಾಗವು ತಾನ್ ಆಗಿದೆ ಇದು ಬುದ್ಧಿಪ್ರಧಾನವಾದ ಅಂಗ. ವಿವಿಧ ಪ್ರಕಾರದ ತಾನಗಳನ್ನು ಮಾದುತ್ತ ದ್ರುತ್ ಲಯದಲ್ಲಿ ಗಾಯನವು ವಿಕಸಿತ ಬುದ್ಧಿಯ ಪರಿಚಯವನ್ನು ಮಾಡಿಕೊಡುತ್ತದೆ. ಗಮಕದ ತಾನ್ ನಿಂದ ರೌದ್ರ ಮತ್ತು ಭಯಾನಕರಸಗಳೂ ಮಧುರಸ್ವರ ತಾನಗಳಿಂದ ಶೃಂಗಾರ ಕರುಣರಸಗಳೂ ಹಾಗೂ ಸಾಧಾರಣ ತಾನ್ ಶಾಂತರಸಗಳು ಉತ್ಪತ್ತಿಯಾಗುತ್ತವೆ. ಎಲ್ಲ ರಾಗಗಳಲ್ಲಿಯೂ ತಾನ್‌ಗಳ ಪ್ರಯೋಗವು ಸರಿಸಮಾನವಾಗಿರುವುದಿಲ್ಲ. ತೋಡಿ, ಯಮನ್ ಮತ್ತು ಮಾಲಕಂಸ ರಾಗಗಳಲ್ಲಿ ತಾನ್ ಮತ್ತು ಆಲಾಪಗಳ ಭಾಗವು ಸಮಾನವಾಗಿರುತ್ತದೆ. ದರ್ಬಾರಿ ರಾಗದಲ್ಲಿ ತಾನ್‌ಗಿಂತ ಆಲಾಪ ಹೆಚ್ಚಿರುತ್ತದೆ. ವಿವಿಧ ಭಂಗಿಗಳ ತಾನ್‌ಗಳು ಶ್ರೋತೃಗಳಿಗೆ ಆನಂದದೊಂದಿಗೆ ಆಶ್ಚರ್ಯ ಮತ್ತು ಚಮತ್ಕಾರಗಳನ್ನು ನೀಡುತ್ತವೆ.

ರಸೋತ್ಪಾದನೆಯಲ್ಲಿ ಗಮಕತಾನಗಳ ಮಹತ್ವ

ಹಾಡುಗಾರಿಕೆಯೆಂದರೆ ಕೇವಲ ರಾಗವಲ್ಲ, ಸ್ವರಸ್ಥಾಪನೆ, ಅಲಾಪ, ಬಡಾಖ್ಯಾಲ್, ಛೋಟಾಖ್ಯಾಲ್, ಗಮಕತಾನಗಳಿಂದ ಕೂಡಿದ ರಾಗವೊಂದನ್ನು ಉತ್ತಮ ಸಾಹಿತ್ಯದೊಂದಿಗೆ ಪ್ರಸ್ತುತಪಡಿಸಿ, ಆನಂದವನ್ನು ಅನುಭವಿಸುವುದು ಎಂದರ್ಥ. ರಾಗ-ಮೂರ್ತಿಯೆಂಬ ಆಕೃತಿಗೆ ತಾನ್ ಮತ್ತು ಗಮಕಗಳೇ ಅಲಂಕಾರಗಳು.

ವೈವಿಧ್ಯದಲ್ಲೂ ಐಕ್ಯವನ್ನು ಕಾಣುವ ಭಾರತೀಯ ಸಂಗೀತದ ಮಜಲುಗಳನ್ನು ಪರಿಚಯಿಸುವಾಗ ವಿಶೇಷವಾಗಿ ಹಿಂದುಸ್ಥಾನಿ ಸಂಗೀತವೆಂದೇ ಪ್ರಸಿದ್ಧವಾದ ಉತ್ತರಾದಿ ಸಂಗೀತವು ಇತ್ತೀಚಿನ ದಿನಗಳಲ್ಲಿ ಉತ್ತರತ್ವ ವಿಶೇಷಣವನ್ನು ಕಳಚಿಕೊಂಡು ಭಾವಪ್ರಧಾನ ಸಂಗೀತವೆನಿಸಿಕೊಂಡು ವಿಶ್ವವನ್ನೇ ವ್ಯಾಪಿಸುತ್ತಿರುವುದು ಕಂಡುಬರುತ್ತಿದೆ. ವಿವಿಧ ಗಾನ ಶೈಲಿಗಳು, ಘರಾಣೆಗಳು ಇದರ ಗರ್ಭವನ್ನು ವ್ಯಾಪಿಸಿವೆ. ಪ್ರದೇಶಭೇದದಿಂದ ಮತ್ತು ಗುರು-ವ್ಯಕ್ತಿಭೇದದಿಂದ ಅಲ್ಪಸ್ವಲ್ಪ, ಬದಲಾವಣೆಗಳಾದರೂ ರಸಸ್ವಾದನೆಯ ದೃಷ್ಟಿಯಿಂದ ಪರಿಪೂರ್ಣವೇ ಆಗಿದೆ.

‘ರಸಾಸ್ವಾದ’ ಗಾಯಕ-ವಾದಕರ ಪರಿಶ್ರಮ, ಅದರಲ್ಲೂ ಶಾಸ್ತ್ರ ಬದ್ಧ ಜ್ಞಾನ ಹಾಗೂ ಶ್ರೋತೃಗಳ ಅರ್ಹತೆಯನ್ನವಲಂಬಿಸಿ ರಸದ ಎಂದರೆ ಆನಂದದ ಅನುಭೂತಿಯಾಗುತ್ತದೆ. ಇದನ್ನೇ ರಸಾಭಿವ್ಯಕ್ತಿ ಎಂದು ಕರೆಯುತ್ತಾರೆ.

ಆಧುನಿಕ ಕಾಲದಲಿ ಹಿಂದುಸ್ತಾನಿ ಸಂಗೀತದ ಅತಿ ಮುಖ್ಯ ಅಂಗವಾದ ಖ್ಯಾಲ ಗಾಯನ ಪದ್ಧತಿಯು ನಿರೀಕ್ಷೆಯನ್ನು ಮೀರಿ ಬೆಳೆಯುತ್ತಿದೆ. ಇದನ್ನೇ ಶಾಸ್ತ್ರೀಯ ಸಂಗೀತವೆಂದು ಪರಿಗಣಿಸಲಾಗಿದೆ. ಕಿರಾಣಾ, ಜಯಪುರ, ಗ್ವಾಲಿಯರ್ ಘರಾಣಾ ಎಂಬ ಪ್ರಬೇಧಗಳಲ್ಲೂ ಖ್ಯಾಲ ಗಾಯಕಿಯ ವ್ಯಾಪ್ತಿ ಹೆಚ್ಚುತ್ತಿದೆ. ಕಲಿಯುವವರ ಸಂಖ್ಯೆಯೂ ಬೆಳೆಯುತ್ತಿದೆ.

ಅದನ್ನು ವಿಲಂಬಿತ, ಮಧ್ಯಲಯ, ದ್ರುತ ಲಯಗಳಲ್ಲಿ ಹಾಗೂ ಏಕತಾಲ, ತೀನತಾಲ, ಝಮರಾ, ಝಪತಾಳ ಮುಂತಾದ ತಾಲಗಳಲ್ಲಿ ಹಾಡುವ ರೂಢಿ ಇದೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ರಸಗ್ರಹಣ ಪ್ರಕ್ರಿಯೆಗಳು ನಾನಾ ರೀತಿಯಲ್ಲಿ ಮುಂದುವರಿಯುತ್ತವೆ. ಆರಂಭದ ಸ್ವರಸ್ಥಾಪನೆ, ರಾಗದ ಆಲಾಪ, ಸಾಹಿತ್ಯ ಸ್ಪಷ್ಟತೆ, ಗಮಕ ಮತ್ತು ತಾನಗಳು, ಲಯಕಾರಿ ಹೀಗೆ ಒಂದಕ್ಕೊಂದು ಮೇಳೈಸಿ ಒಟ್ಟಾರೆ ರಸಾನುಭವವಾಗುತ್ತದೆ. ಇದಕ್ಕೆಲ್ಲ ತಬಲಾವಾದಕರ, ಹಾರ್ಮೋನಿಯಂ ವಾದಕರ ಸಹಕಾರವೂ ಮುಖ್ಯವಾಗಿದೆ.

ಗಮಕಗಳು:

ಗಮಯತಿ ರಾಗಸೌಂದರ್ಯಂ ಎಂಬ ವ್ಯುತ್ಪತ್ತಿಯಿಂದ ಗಮಕ ಶಬ್ದವು ಹುಟ್ಟಿದೆ. ವಿಶೇಷ ಸ್ವರ ಸಮೂಹವನ್ನು ಕ್ರಮಬದ್ಧವಾಗಿ ವೇಗವಾಗಿ ಹಾಡುವುದು ಎಂದರ್ಥ. ತ್ರಿಕಾಂಡ ಅಮರಕೋಶದಲ್ಲಿ ಹೇಳಿದಂತೆ ಗಮಕವೆಂದರೆ ವೇಗ ಅಥವಾ ಶೀಘ್ರತೆ ಎಂಬ ಅರ್ಥವೂ ಇದೆ. ಈ ಗಮಕದಿಂದಲೇ ತಾನಗಳು ಹುಟ್ಟುತ್ತವೆ. ಕೆಲವರ ಅಭಿಪ್ರಾಯದಂತೆ ಗಮಕಕ್ಕೂ ತಾನಗಳಿಗೂ ವಿಶೇಷ ವ್ಯತ್ಯಾಸವಿಲ್ಲ. ಆದರೆ ಆಯಾ ರಾಗದ ನಾದ ದಂಡ ಅಲ್ಲಿ ಅಭಿವ್ಯಕ್ತವಾಗಬೇಕು. ಕೆಲವರು ಗಮಕ ತಾನಗಳನ್ನು ಹೇಳಿ ತಾನಗಳ ಪ್ರಕಾರವೆಂದು ಅಭಿಪ್ರಾಯ ಪಡುತ್ತಾರೆ.

ಗಮಕವೆಂದರೆ ‘ಕಾವ್ಯವಾಚನ’ ಎಂಬ ಕಲಾಪ್ರಕಾರವೂ ಇವೆ. ಇದನ್ನೇ ಗಮಕವಾಚನ ಎಂದೂ ಕರೆಯುವುದುಂಟು. ಕುಮಾರವ್ಯಾಸಭಾರತ ಮುಂತಾದ ಹಳೆಗನ್ನಡ ಕಾವ್ಯ ಇದರ ವಿಷಯವಾಗಿದೆ.

ಪ್ರಕೃತ, ಗಮಕ ಶಬ್ದವು ಸ್ವರಸಮೂಹವನ್ನು ಕಂಠನಿಷ್ಠವಾಗಿ ಹಾಡುವುದಾಗಿದೆ. ತಾಲ-ಲಯಗಳಿಗನುಗುಣವಾಗಿ ಕೆಲವೊಮ್ಮೆ ಸಾಹಿತ್ಯ ನಿರಪೇಕ್ಷವಾಗಿಯೂ ಹಾಡುವ ಸಂದರ್ಭವಿದೆ.

ತಾನಗಳು:

ಗಾಯಕನು ತನ್ನ ಕಂಠ ಸಾಮರ್ಥ್ಯದಿಂದ ರಾಗವನ್ನು ವಿಸ್ತಾರಗೊಳಿಸುವ ಸ್ವರಪುಂಜಗಳೇ ತಾನಗಳಾಗುತ್ತವೆ. ‘ತನು ವಿಸ್ತಾರೇ’ ಎಂಬ ಧಾತುವಿನಿಂದ ಹುಟ್ಟಿದ್ದೇ ತಾನ ಶಬ್ದ. ವಿವಿಧ ರಾಗಗಳಲ್ಲಿ ಬಳಸುವ ಸ್ವರಗಳ ಗಣಿತ ಸಂಖ್ಯೆಗಳಿಗನುಗುವಾಗಿ ೫೦೪೦ ತಾನಗಳಾಗುತ್ತವೆ. ಇದನ್ನೇ ‘ಸಂಗೀತದಾಮೋದರ’ ಗ್ರಂಥದಲ್ಲಿ ಹೀಗೆ ಹೇಳಲಾಗಿದೆ.

ಗಾತಾ ಯಂ ಯಂ ಸ್ವರಂ ಗಚ್ಛೇತ್ ತಂ ವಂಶೇನ ವಿತಾನಯೇತ್|
ವಿಸ್ತೀರ್ಯಂತೇ ಪ್ರಯೋಗಾ ಯೇ ಮೂರ್ಛನಾ ಶೇಷಸಂಶ್ರಿತಾಃ||
ತೇಭ್ಯ ಏವ ಭವಂತ್ಯನ್ಯೇ ಕೂಟತಾನಾಃ ಪೃಥಕ್|
ತೇ ಸ್ಯುಃ ಪಂಚಸಹಪ್ರಾಣಿ ತ್ರಯಸ್ತ್ರಿಂಶತ್ ಶತಾನಿ ||

ವಿಲಂಬಿತ ಲಯದಲ್ಲಿ ಹಾಡುವಾಗಲೂ ಅಥವಾ ರಾಗದ ಛಾಯೆಯನ್ನು ಸ್ಥಾಪಿಸವಾಗಲೂ ಸಣ್ಣ ಸಣ್ಣ ತಾನಗಳನ್ನು ಬಳಸುವ ರೀತಿಗೆ ಛೋಟೇತಾನ ಎಂದು ಹೇಳುತ್ತಾರೆ.

ತಾನಗಳ ಪ್ರಭೇದ:

ತಾನಗಳಲ್ಲಿ ಮುಖ್ಯವಾಗಿ ಶುದ್ಧತಾನ ಹಾಗೂ ಕೂಟತಾನಗಳೆಂಬ ಭೇದಗಳಿವೆ. ಶುದ್ಧತಾನವನ್ನು ಸಪಾಟತಾನ, ಸರಳತಾನಗಳೆಂದೂ ಹೇಳುವುದಿದೆ.  ಇದು ಸ್ವರಗಳ ಅರೋಹಣ-ಅವರೋಹಣ ಕ್ರಮದಲ್ಲಿ ಬದ್ಧವಾಗಿರುತ್ತದೆ. ಉದಾ: ಭೂಪರಾಗದಲ್ಲಿ ಸರೆಗ, ರೆಗಪ, ಗಪಧ, ಇತ್ಯಾದಿ.

ಕೂಟತಾನಗಳು ಮಿಶ್ರತಾನಗಳಾಗುವುದು. ಅನಿಯಮಿತ ಸಂಖ್ಯೆಯಲ್ಲಿದ್ದರೂ ಲಯಬದ್ಧವಾಗಿರುತ್ತವೆ. ಗಣಿತದ ವಿಶೇಷ ಪರಿಚಯ ಇರುವವರು ಎಲ್ಲ ತಾನಗಳನ್ನು ಪ್ರಭಾವಯುತವಾಗಿ ಹಾಡಬಲ್ಲರು.

ಬೋಲತಾನ್ :

ಇದು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಮಧ್ಯಸ್ಥಿತಿ. ಇಲ್ಲಿ ಮಧ್ಯ ಮಣಿನ್ಯಾಯದಂತೆ ಅತಿ ಕುತೂಹಲಕಾರಿಯಾದ ಲಯಕಾರಿಗಳಿರುತ್ತವೆ. ಮಧ್ಯಲಯದಲ್ಲಿ ಹಾಡುವ ಈ ಸಂದರ್ಭದಲ್ಲಿ ಗಾಯಕನು ವಿಲಂಬಿತ ಚೀಜನ್ನೇ ತೆಗೆದುಕೊಂಡು ರಾಗ ವಿಸ್ತರಿಸುತ್ತಾನೆ. ಇದನ್ನೇ ಬೋಲತಾನ್ ಎಂದು ಕರೆಯುತ್ತಾರೆ.

ತಾನಗಳನ್ನು ಮಾಡುವಾಗ ಅದರ ಚಲನೆಯಂತೆ ಸ್ವರಗಳನ್ನು ಹಾಡಿ ಅನಂತರ ತಾನ್ ಗಳನ್ನು ಹಾಡಲಾಗುತ್ತದೆ. ಅಭ್ಯಾಸದ ಹಂತದಲ್ಲಿ ಇದನ್ನೇ ಮಾಡಿಸಲಾಗುತ್ತದೆ.

ವಿಭಿನ್ನ ತಾಲಗಳಲ್ಲಿ ಇದರ ಗತಿಯು ವಿವಿಧವಾಗುತ್ತದೆ. ತಾಲಗಳ ಮಾತ್ರೆ, ವೇಗವನ್ನು ಪ್ರತಿಕ್ಷಣದಲ್ಲೂ ಗಮಣದಲ್ಲಿಟ್ಟುಕೊಂಡು ತಾನ ಮಾದುವ ಗಾಯಕನೇ ಪ್ರತಿಭಾ ಸಂಪನ್ನನಾಗುತ್ತಾನೆ ಹಾಗೂ ಶ್ರೋತೃಗಳಗೂ ಬಹುವಾಗಿ ಆನಂದವನ್ನು ನೀಡುತ್ತಾನೆ. ದ್ರುತ್ ಲಯದಲ್ಲಿ ಕೆಲವು ಚೀಜ್ ಗಳು ಹೀಗಿವೆ.

 • ತಾನಗಳನ್ನು ಮಾಡುವಾಗ ಕೆಲವೊಮ್ಮೆ ಆ ರಾಗದ ಮುಖ್ಯಸ್ಥರಗಳಾದ ವಾದಿ-ಸಂವಾದಿಗಳ ಮೇಲೆ ನ್ಯಾಸ ಮಾಡಿ (ನಿಂತು) ಮುಂದುವರಿಸುವ ಪದ್ಧತಿ ಇದೆ.
 • ತಾನಗಳನ್ನು ಮಾಡುವಾಗ ಗಾಯಕನು ಆ ಪದ್ಯದ ಸಾಹಿತ್ಯವನ್ನು ಜಾಗರೂಕತೆಯಿಂದ ಸ್ಥಾಪಿಸಬೇಕು. ಕೆಲವೊಮ್ಮೆ ಶಬ್ದವನ್ನು ಮಧ್ಯದಲ್ಲೇ ಒಡೆದು ತಾನ ಆರಂಭಿಸುತ್ತಾರೆ. ಅದು ಉತ್ತಮ ಬೆಳವಣಿಗೆಯಲ್ಲ.

ಉದಾ: ರಾಗ ಜೀವನಪುರ- ಪಾಯಲಕೀ ಝನಕಾರ ಬೈರನಿಯಾ
ಪಯಲಕೀ ಝನ……….ತಾನ……. ಇದು ಸರಿಯಲ್ಲ.
ಪಾಯಲಕೀ………..ತಾನ್ ಇದು ಸರಿ.

 • ಅತೀ ಮುಖ್ಯವಾದ ಅಂಶವೆಂದರೆ ಗಾತಕನು ತಾನ ಮಾದುವಾಗ ಮುಖ ವಿಕಾರ ಮಾಡಬಾರದು. ಕೆಲವರು ಹಾಡಿನ ಆರಂಭದಿಂದಲೇ ಮುಖ ವಿಕಾರ ಮಾಡುತ್ತಾರೆ. ಎಲ್ಲವನ್ನು ಶಾಙ್ಗ೯ದೇವನು ಸಂಗೀತ ರತ್ನಾಕರ ಗ್ರಂಥದಲ್ಲಿ ಗಾಯಕನ ಗುಣ-ದೋಷಾದ್ಯಾಯದಲ್ಲಿ ಸ್ಪಷ್ಟಪಡಿಸಿದ್ದಾನೆ. ತಾನ ಮಾಡುವಾಗ ಕೆಲವು ಗಾಯಕರು ಅತಿ ಅಸಹ್ಯವಾಗಿ ಮುಖ ವಿಕಾರ ಮಾಡುತ್ತಾರೆ.
 • ತಾನಗಳ ಗತಿಯು ವಿವಿಧ ಲಯಗಳಲ್ಲಿ, ವಿವಿಧ ತಾಲಗಳಲ್ಲಿ ಬೇರೆ ಆಗುವುದರಿಂದ ಅದನ್ನು ಪ್ರಾಣಿಗಳ ಹೆಸರಿನಲ್ಲಿ ಹೇಳಿದ್ದೂ ಇದೆ. ಗಜತಾನ (ಗಜವು ಮಂದವಾಗಿ ಚಲಿಸುವುದು), ಮರ್ಕಟತಾನ, ಮಯೂರತಾನ, ಕುಕ್ಕುಟತಾನ, ಅಶ್ವತಾನ ಮುಂತಾಗಿ.
 • ಟಪ್ಪಾ ಗಾನ ಶೈಲಿಯೂ ಕುದರೆಯ ಓಟಕ್ಕೆ ಸದೃಶವಾಗಿರುವುದರಿಂದ ಆ ಹೆಸರು ಬಂದಿದೆ. ಭಾವಗೀತೆ, ಭಕ್ತಿಗೀತೆ, ಜಾನಪದಗಳ ತಾನ ಮಾಡುವುದು ನಾವಿಂದು ಕೇಳುತ್ತೇವೆ. ಹಾಗೇ ಕರ್ನಾಟಕಿ ಅಥವಾ ದಕ್ಷಿಣಾದಿ ಸಂಗೀತದಲ್ಲೂ ತಾನ್ (ತಿನ್ನಾ) ಗಳನ್ನು ವಿಶೇಷವಾಗಿ ಹಾಡುತ್ತಾರೆ.
 • ಕೆಲವರು ತಾನಗಳನ್ನು ಕೇವಲ ಅನುನಾಸಿಕದಿಂದಲೇ ಪ್ರಸ್ತುತಪಡಿಸುತ್ತಾರೆ. ಇದನ್ನು ಮೂಕತಾನ ಎಂದು ಕರೆಯುತ್ತಾರೆ. ಪಂ. ಮಲ್ಲಿಕಾರ್ಜುನ ಮನ್ಸೂರ ಅವರು ಇದನ್ನು ವಿಶೇಷವಾಗಿ ಮಾಡುತ್ತಿದ್ದರು. ಒಂದೆರಡು ಆವೃತ್ತಿಗಳಲ್ಲಿ ಇದನ್ನೇ ಮುಂದುವರಿಸುತ್ತಿದ್ದರು.
 • ತಾನ್ ಶಬ್ದದಲ್ಲಿ  ತ-ಆ-ನ ಅಕ್ಷರಗಳನ್ನು ಹೇಳಿ ಬ್ರಹ್ಮ-ವಿಷ್ಣು-ಮಹೇಶ್ವರರಿಗೆ ಹೋಲಿಸಿ ಅದಕ್ಕೂ ದೇವತಾತ್ವವನ್ನು ನಮ್ಮ ಪ್ರಾಚೀನರು ಹೇಳಿದ್ದಾರೆ.
 • ಹೊಸದಾಗಿ ಸಂಗೀತವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಬೆಳಗಿನ ಸಮಯದಲ್ಲಿ ತಾನ್ ಅಭ್ಯಾಸ ಮಾಡಬೇಕು. ಪ್ರಾತಃಕಾಲದಲ್ಲಿ ಗಂಟಲು ಬಿಗಿ ಇರುವುದರಿಂದ ಆ ಸಮಯದಲ್ಲಿ ಸಂಗೀತ ಮತ್ತು ತಾನ್ ಅಭ್ಯಾಸ ಮಾಡುವುದರಿಂದ ಉಳಿದ ಎಲ್ಲ ಸಮಯದಲ್ಲಿ ಅನುಕೂಲವಾಗುತ್ತದೆ. ಯಾವುದಾದರೊಂದು ರಾಗದಲ್ಲಿ ತಾನ್ ಅಭ್ಯಾಸ ಮಾಡಿ ಕಂಠಗತ ಆಗಿದ್ದೇ ಆದರೆ ಉಳಿದ ರಾಗಗಳಲ್ಲಿ ಅದು ತಾನೇ ಸುಲಲಿತವಾಗುತ್ತದೆ.
 • ತಾನ್ ಮಾಡುವ ಗಾಯಕನು ಮಾನಸಿಕವಾಗಿ ಅತಿ ಸೂಕ್ಷ್ಮವಾಗಿ ವಿಚಾರ ಮಾಡಬೇಕಾಗುತ್ತದೆ. ತಾನು  ಯಾವ ರಾಗ-ತಾಲ-ಲಯಗಳಲ್ಲಿ ಹಾಡುತ್ತಿದ್ದೇನೆಂದು ಪ್ರತಿಹಂತದಲ್ಲಿ ವಿಚಾರ ಮಾಡಿ ಮಾನಸಿಕ ಸಿದ್ಧತೆಯನ್ನು ಮಾಡುತ್ತ ಮಾಡಬೇಕಾಗುತ್ತದೆ. ಅನ್ಯಥಾ ರಾಗಾಭಾಸವಾಗುತ್ತದೆ.
 • ಔಡವ, ಷಾಡವ ಮತ್ತು ಸಂಪೂರ್ಣ ಎಂಬ ಮೂರು ಜಾತಿಯ ರಾಗಗಳಲ್ಲಿ ಸಂಪೂರ್ಣ ರಾಗಗಳ ತಾನಗಳನ್ನು ಮಾಡುವುದು ಸುಲಭಸಾಧ್ಯವಾಗಿದೆ. ಷಾಡವ ಜಾತಿಯ ಎಂದರೆ ಆರು ಸ್ವರಗಳ ರಾಗದಲ್ಲಿ ಅದು ಕಷ್ಟಸಾಧ್ಯ. ಐದು ಸ್ವರಗಳ ಔಡವ ಜಾತಿ ಹಾಗೂ ಮಿಶ್ರಜಾತಿಯ ರಾಗಗಳಲ್ಲಿ ತಾನಗಳು, ಮಾಡುವುದು ಅತಿಕಷ್ಟಸಾಧ್ಯ. ರಾಗಭ್ಯಾಸ ಮಾಡುವಾಗ ಜಾಗರೂಕತೆಯಿಂದ ತಾನಗಳನ್ನು ಮಾಡಬೇಕಾಗುತ್ತದೆ.
 • ವಿಶೇಷವಾಗಿ ತಾನ್ ಮಾಡುವವನ ಕಂಠದ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಪ್ರಾಣಾಯಾಮದಂತೆ ಶ್ವಾಸವನ್ನು-ವಾಯುವನ್ನು ಹೆಚ್ಚು ಕಡಿಮೆ ಮಾಡುವ ಸಾಮರ್ಥ್ಯವನ್ನು ಗಾಯಕನು ಹೊಂದುತ್ತಾನೆ. ತಾನ್ ಗಳನ್ನು ವಿಶೇಷವಾಗಿ ಮಾದಿದ್ದರಿಂದಲೇ ತಾನಸೇನನಿಗೆ ಆ ಹೆಸರು ಬಂದಿದೆ ಎಂದು ಗ್ರಂಥವೊಂದರಿಂದ ತಿಳಿದಿದೆ.
 • ಕೆಲವು ಗಾಯಕರು ತಮ್ಮ ಗಾಯನವನ್ನು ವಿಲಂಬಿತ ಲಯದಲ್ಲೇ ಹಾಡಿ ಸಮಾಪನಗೊಳಿಸುತ್ತಾರೆ. ಶ್ರೋತೃಗಳು/ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆಯಲ್ಲಿ ಇರುವಾಗಲೇ ಅವರು ತಮ್ಮ ಸಂಗೀತ ಕಛೇರಿಯನ್ನು ಮುಗಿಸುವುದಿದೆ. ಆಕಾಶವಾಣಿಯಲ್ಲಿ ಇದನ್ನು ಆಗಾಗ ಕೇಳುತ್ತೇವೆ. ಆದರೆ ದ್ರುತ್ ಲಯದಲ್ಲಿ ಹಾಡಿದಾಗ ಪಾಮರರು ಅಂದರೆ ಸಂಗೀತವನ್ನು ಏನೂ ತಿಳಿಯದ ಮುಗ್ಧರು ಆನಂದ ಅನುಭವಿಸುತ್ತಾರೆ. ಉತ್ತಮ ತಾನ ಮಾಡಿದಾಗ ಅವರೂ ಅದಕ್ಕೆ ಸ್ಪಂದಿಸುತ್ತಾರೆ.
 • ಮೂರು ಸಪ್ತಕಗಳಲ್ಲಿ ಹಾಡುವ ಕಲಾಕಾರರು ತಾನ್ ಗಳನ್ನು ಮಾಡುವಾಗ ಎಲ್ಲ ಸಪ್ತಕಗಳನ್ನು ಬಳಸುತ್ತಾರೆ. ಇಂಥವರ ಸಂಗೀತ ಕಛೇರಿಯಲ್ಲಿ ರಸಸ್ವಾದನೆಯ ಅಂಶಗಳು ಹೆಚ್ಚಿರುತ್ತವೆ.

ಒಟ್ಟಾರೆ ತಾನ್ ಮತ್ತು ಗಮಕ ಎನ್ನುವುದು ಸಂಗೀತ ಕಲೆಯ ಸೌಂದರ್ಯ ರಾಗ ಸೌಂದರ್ಯ ಮತ್ತು ಗಾಯಕನ ವ್ಯಕ್ತಿತ್ವವನ್ನು ಹೆಚ್ಚಿಸುವ ವಿಷಯವಾಗಿದೆ.

ನಮೋ ಗಮಕಾಯ| ನಮಸ್ತಾ ನಾಯ| ನಮೋ ನಾದಸರಸ್ವತ್ಯೈ||

ಪ್ರಕೃತ; ಭರತನು ಹೇಳಿದ ರಸಸೂತ್ರದಂತೆ ಈ ಅಂಗಗಳಿಗೆ ರಸೋತ್ಪತ್ತಿಯ ಕಾರಣಗಳನ್ನು ಕಲ್ಪಿಸಬಹುದಾಗಿದೆ. ವಿಭಾವ-ಅನುಭಾವ-ಸಂಚಾರಿಭಾವ ಸಂಯೋಗದಿಂದ ರಸನಿಷ್ಪತ್ತಿ ಎಂಬ ಸೂತ್ರವನ್ನು ಹೀಗೆ ಸಮನ್ವಯಗೊಳಿಸಬಹುದು. ವಿಭಾವಗಳೆಂದರೆ ಉಳಿದ ತಾನಗಳು. ಈ ಎಲ್ಲ ಭಾವಗಳ ಸಂಯೋಗದಿಂದ ರತ್ಯಾದಿ ಸ್ಥಾಯಿ ಭಾವಗಳಲ್ಲಿ ಶೃಂಗಾರಾಧಿ ರಸಗಳು ಅಭಿವ್ಯಕ್ತವಾಗಿ, ಕೊನೆಯಲ್ಲಿ ಒಂದೇ ಆನಂದಾನುಭವವಾಗುತ್ತದೆ. ಇದನ್ನು ಸಾಹಿತ್ಯದಿಂದ ಕೂಡಿದ ಕಂಠಸಂಗೀತಕ್ಕೂ ಸಾಹಿತ್ಯ ರಹಿತವಾದ ಸಿತಾರ ಮುಂತಾದ ವಾದ್ಯಸಂಗೀತಕ್ಕೂ ಅನ್ವಯಿಸಬಹುದು. ಈ ಕುರಿತು ಇದಕ್ಕಿಂತ ಹೆಚ್ಚಿನ ವಿಮರ್ಶೆಯ, ಚರ್ಚೆಯ ಅವಶ್ಯಕತೆ ಇದೆ ಮತ್ತು ಸಮಾನ ಅಭಿಪ್ರಾಯವಾಗಬೇಕಾಗಿದೆ.

ಅಂತೂ ಸಂಗೀತದಲ್ಲಿ, ಅದರಲ್ಲೂ ಹಿಂದುಸ್ತಾನಿ ಸಂಗೀತದಲ್ಲಿ ರಸಾಭಿವ್ಯಕ್ತಿ ಕೆಲವು ಸೂಕ್ಷ್ಮ ಸ್ಥಾನಗಳನ್ನು ಮರ್ಮಗಳನ್ನು ತಿಳಿಸಿ ಈ ವಿಷಯದಲ್ಲಿ ಸಂಗೀತಷ್ಟೇ ಸಾಹಿತ್ಯದ ಪಾತ್ರವೂ ಮಹತ್ವದ್ದಾಗಿದೆ.

ಸಂಗೀತ ಸಾಹಿತ್ಯಗಳ ಸಂಬಂಧ:

ರಸೋತ್ಪಾದನೆಯ ವಿಷಯದಲ್ಲಿ ಸಂಗೀತಕ್ಕೆ ಸಾಹಿತ್ಯದ ಸಂಬಂಧ ಎಂತಹದ್ದು? ಎಂಬುದು ಅತಿಗಹನ ವಿಷಯವಾಗಿದೆ. ಹಿಂದುಸ್ತಾನಿ ಸಂಗೀತದಲ್ಲಿ ಕೆಲವರು ಹೇಳುವಂತೆ ರಾಗ-ರಸ, ಪದ ಕಸ ಎಂಬುದು ಸರಿಯೇ? ಈಗ ಯಾವ ರೀತಿಯ ಸಾಹಿತ್ಯವು ಬಳಸಲ್ಪಡುತ್ತಿದೆ? ಹಿಂದೆ ಎಂತಹ ಸಾಹಿತ್ಯ ಇತ್ತು? ಎಂಬುದು ವಿಚಾರಣೀಯ ವಿಷಯ. ಇದನ್ನೆಲ್ಲ ನಿಷ್ಪಕ್ಷಪಾತವಾಗಿ ಹೇಳಿದರೆ ಕೆಲವು ಸಂಗೀತ ಕಲಾವಿದರಿಗೆ ಬೇಸರವಾಗಬಹುದು. ಆದರೂ ಸಂಗೀತಭೂಮಿಯ ಅಭಿವೃದ್ಧಿಗೋಸ್ಕರ ಮತ್ತು ಮುಂದಿನ ಸಂಗೀತ ಪೀಳಿಗೆಗಾಗಿ ಕೆಲವು ವಿಷಯಗಳನ್ನು ಹೇಳಲೇಬೇಕಾಗುತ್ತದೆ ಮತ್ತು ಚರ್ಚಿಸಬೇಕಾಗುತ್ತದೆ.

ಸಂಗೀತಸಾಹಿತ್ಯಗಳು ಸರಸ್ವತಿಯ ಎರಡು ನೇತ್ರಗಳು ಎಂದೆಲ್ಲ ಉಪೋದ್ಘಾತದಲ್ಲಿ ಹೇಳಿದೆ. ಈ ಉಭಯ ಪದಾರ್ಥಗಳು ಪರಸ್ಪರ ಆಶ್ರಯಗಳು. ಅವಿನಾಭಾವ, ಅನ್ಯೋನ್ಯಾಶ್ರಯ ಸಂಬಂಧಗಳು ಇವೆರಡಕ್ಕೂ ಇದೆ. ಒಂದು ನಾಣ್ಯದ ಎರಡು ಮುಖಗಳು. ಸಾಹಿತ್ಯ-ಸಂಗೀತ-ವೆಂಬುದು ಹಾಲು ಸಕ್ಕರೆ ಬೆರೆತಂತೆ ಅಭೇದ ವಿಷಯಗಳು.

ಹಿಂದುಸ್ತಾನಿ ಸಂಗೀತದಲ್ಲಿ ರಾಗಗಳನ್ನು ರಸಾನುಗುಣವಾಗಿ ವರ್ಗೀಕರಿಸಲಾಗಿದೆ. ಇಂತಹ ರಾಗಕ್ಕೆ ಇಂತಹ ರಸ, ಇಂತಹ ಸಮಯ ಎಂದು ತಿಳಿಸಲಾಗಿದೆ.

ಇಲ್ಲಿ ಸ್ಮರಣೆಯಲ್ಲಿಡಬೇಕಾದ ಒಂದು ವಿಷಯವೇನೆಂದರೆ ಸಾಹಿತ್ಯಕ್ಕಿಂತ ಸ್ವರಗಳಿಗೆ, ತಾನಗಳಿಗೆ, ಅಲಾಪಗಳಿಗೆ ಹೆಚ್ಚು ಒತ್ತು ಕೊಡಬೇಕೆಂಬುದು ಕೆಲವರ ವಾದವಿದೆ. ಆದರೆ ಸಾಹಿತ್ಯ ಇಲ್ಲದಿದ್ದರೆ ಗಾಯನ-ವಾದನಗಳಲ್ಲಿ ವ್ಯತ್ಯಾಸ ತೋರದಿರಬಹುದು. ವೀಣೆ-ಸಿತಾರ-ಸಾರಂಗಿ ಮುಂತಾದ ತಂತಿ ವಾದ್ಯಗಳನ್ನು ನುಡಿಸುವಾಗ ಅಲ್ಲಿ ಸಾಹಿತ್ಯದ ಸ್ಪಷ್ಟತೆ ಇರುವುದಿಲ್ಲ. ಒಮ್ಮೊಮ್ಮೆ ಗಾಯನದಲ್ಲಿ ಅದು ಸ್ಪಷ್ಟವಾಗಿಲ್ಲದಿದ್ದರೆ ಗಾಯನಕ್ಕೂ ವಾದನಕ್ಕೂ ಭಿನ್ನತೆ ವ್ಯಕ್ತವಾಗದಿರಬಹುದು. ಹಾಗೂ ಸಾಹಿತ್ಯ ಇಲ್ಲದಿದ್ದರೆ ಕೆಲವು ರಸಗಳ ಅಭಿವ್ಯಕ್ತಿ ಕಷ್ಟಸಾಧ್ಯವಾದೀತು.

ಈ ಎಲ್ಲ ಅನರ್ಥಗಳನ್ನು ಪರಿಹರಿಸದೇ ನಮ್ಮ ಪೂರ್ವಜರು ಸಂಗೀತ ಸಾಹಿತ್ಯಕ್ಕೆ ಸಮಾನ ಸ್ಥಾನಗಳನ್ನು ನೀಡಿದ್ದಾರೆ.

ಸಾಹಿತ್ಯದ ಭೂಯಿಷ್ಠತೆಯಿಂದ ಕೆಲವು ರಾಗಗಳ ರಸಗಳು ಸ್ವಲ್ಪ ಭಿನ್ನತೆಯನ್ನು ಪಡೆಯಬಹುದು. ರಾಗಗಳು ರಸಾನುಕೂಲವಾಗಿ, ಗೀತಗಳು ಶಬ್ದಾನುಕೂಲವಾಗಿ ಇರಬೇಕಾಗುತ್ತದೆ. ಶೃಂಗಾರರಸದ ಕವಿತೆಯೇ ಇರಬೇಕಾದದ್ದು ನ್ಯಾಯವಾಗಿದೆ. ಅದರಿಂದ ವಾಸ್ತವಿಕ ರಸೋತ್ಪತ್ತಿಯಾಗುತ್ತದೆ.

ಕರ್ನಾಟಕಿ ಸಂಗೀತದಲ್ಲಿ ಸಾಹಿತ್ಯದ ಸಂಪತ್ತು ಹಿಂದುಸ್ತಾನಿ ಸಂಗೀತಕ್ಕಿಂತಲೂ ಸಮೃದ್ಧವಾಗಿದೆ ಅಂದ ಮಾತ್ರಕ್ಕೆ ಎಲ್ಲ ಕಡೆ ಸಾಹಿತ್ಯ ಪರಿಪೂರ್ಣತೆ ಇದೆ ಎಂದು ತಿಳಿಯಬಾರದು. ಕೆಲವೊಮ್ಮೆ ಗಾಯಕನ ಅಪ್ರಬುದ್ಧತೆಯಿಂದಲೂ ಸಾಹಿತ್ಯದ ಸ್ಪಷ್ಟತೆ ಆಗದಿರಬಹುದು. ಎಷ್ಟೋ ಸಲ ಸಂಸ್ಕೃತ – ಕನ್ನಡ ಪದ್ಯಗಳ ಅರ್ಥ ತಿಳಿಯದೆ ಅಥವಾ ಲಕ್ಷ್ಯ ಕೊಡದೆ ಹಾಡುವುದನ್ನು ನೋಡುತ್ತೇವೆ, ಕೇಳುತ್ತೇವೆ. ಉದಾ: ವಾತಾಪಿ ಗಣಪತಿಂ ಭಜೇ ಎಂದು ಹೇಳಿ ಕೊನೆಯಲ್ಲಿ ಹಂ ಎಂದು ಮಾತ್ರ ಒತ್ತುಕೊಟ್ಟು ಹೇಳುವುದುಂಟು. ಅಹಂ (ನಾನು) ಎನ್ನುವುದು ಅಲ್ಲಿರುವ ಸರಿಯಾದ ಶಬ್ದ. ಹಾಗೆ ವೈಕುಂಠಪತಿ ಎಂದು ಹೇಳುವ ಬದಲು ಕುಂಠಪತಿ ಎಂದು ಅನಿಷ್ಠ ವಿಗ್ರಹ ಮಾಡಿ ಹೇಳುವಾಗ ಶ್ರೋತ್ರಗಳ ಮನಸ್ಸಿನಲ್ಲಿ ಎಷ್ಟು ವೇದನೆಯಾಗಬಹುದು? ಇದೇ ರೀತಿ ಮಹಾ ಮಹಾ ಗಾಯಕರೂ ಸಾಹಿತ್ಯವನ್ನು ಅಪಭ್ರಂಶವಾಗಿ ಉಚ್ಚರಿಸಿ ಹಾಡಿದ ನೂರಾರು ಉದಾಹರಣೆಗಳು ಇಂದಿಗೂ ಕೇಳಸಿಗುತ್ತವೆ.

ಡಾ. ದ.ರಾ.ಬೇಂದ್ರೆಯವರು ಹೇಳುವಂತೆ ಗಾನದಲ್ಲಿ ಸಾಹಿತ್ಯವು ಮುಳುಗಬಾರದು. ತೇಲಬೇಕು. ಇಂಪಾಗಿ, ಮಧುರವಾಗಿ, ತಾಲ-ಲಯ-ಶ್ರುತಿಗಳಿಗೆ ಬದ್ಧವಾಗಿ ಕೇಳುಗರಿಗೆ ಪದ್ಯವು ಅರ್ಥವಾಗುವಂತೆ ಹಾಡಬೇಕು.

ಗಾಯಕನ ಅಥವಾ ಪಾಠಕನ ಸಾಹಿತ್ಯ ಉಚ್ಛಾರಣೆಯು ಹೀಗಿರಬೇಕೆಂದು ಪಾಣನಿಯು ತನ್ನ ಶಿಕ್ಷಾಗ್ರಂಥದಲ್ಲಿ ಹೀಗೆ ಹೇಳಿರುತ್ತಾನೆ.

ಮಾಧುರ್ಯಂ ಅಕ್ಷರವ್ಯಕ್ತಿಃ ಪದಚ್ಚೇದಸ್ತು ಸುಸ್ವರಃ!
ಧೈರ್ಯಂ ಲಯಸಮರ್ಥಂ ಷಡತೇ ಪಾಠಕಾ ಗುಣಾಃ||

ಕೇಳಲು ಇಂಪಾಗಿರುವುದು, ಸ್ಪಷ್ಟವಾದ ಅಕ್ಷರೋಚ್ಚಾರಣೆ, ಅರ್ಥವಾಗುವಂತೆ ಪದಗಳನ್ನು ವಿಂಗಡಿಸುವುದು. ಸದಸ್ಯರಿಗೆ ಕೇಳುವಷ್ಟು ಗಟ್ಟಿಯಾದ ಧ್ವನಿ, ಸಭಾಕಂಪ ಇಲ್ಲದೆ ಧೈರ್ಯವಾಗಿ ಹಾಗೂ ಲಯಬದ್ಧವಾಗಿ ಉಚ್ಚರಿಸಬೇಕು. ಇದು ವೇದಾಧ್ಯಯನಕ್ಕೂ ಭಾಷಣಕಾರರಿಗೂ ಕಾವ್ಯ ವಾಚನ ಮಾಡುವವರಿಗೂ ಮತ್ತು ಸಂಗೀತಗಾರರಿಗೂ ಸಮಾನವಾಗಿ ಅನ್ವಯಿಸುತ್ತದೆ.

ಗಾಯಕರು ಸಾಹಿತ್ಯದಲ್ಲಿರುವ ಅಲ್ಪಪ್ರಾಣ, ಮಹಾಪ್ರಾಣ ಅಕ್ಷರಗಳನ್ನು ಸರಿಯಾಗಿ ಉಚ್ಚರಿಸಬೇಕು. ಕೆಲವರು ಪದ್ಯದ ಚರಣಗಳ ಕೊನೆಯಲ್ಲಿ ಬರುವ ಹ್ರಸ್ವಗಳನ್ನು ತಾಲಕ್ಕೆ ಕೂಡಿಸಬೇಕೆಂಬ ಹಂಬಲದಿಂದ ದೀರ್ಘವಾಗಿ ಉಚ್ಚರಿಸುತ್ತಾರೆ. ಅಲ್ಪ ಪ್ರಾಣ ಮಹಾಪ್ರಾಣಗಳ ಉಚ್ಚಾರಣೆಯ ಬಗೆಗೆ ಪಾಣಿನಿ ಆಚಾರ್ಯನು ಅದೇ ಶಿಕ್ಷಾಗ್ರಂಥದಲ್ಲಿ ಹೀಗೆ ನಿರ್ದೇಶಿದ್ದಾನೆ:

ವ್ಯಾಘ್ರೀ ಯಥಾ ಹರೇತ್ ಪುತ್ರಾನ್ ದಂಷ್ಟ್ರಾಭ್ಯಾಂ ಪೀಡಯೇತ್|
ಭೀತಾ ಪತನಭೇದಾಭ್ಯಾಂ ತದ್ವದ್ ವರ್ಣಾನ್ ಪ್ರಯೋಜಯೇತ್||

ಅರ್ಥ: ಹೆಣ್ಣು ಹುಲಿ ತನ್ನ ಮರಿಗಳನ್ನು ಹಲ್ಲುಗಳಿಂದ ಕಚ್ಚಿ ಹಿಡಿದು ಸಂಚರಿಸುತ್ತದೆ. ಮೆಲ್ಲಗೆ ಕಚ್ಚಿದರೆ ಮರಿಗಳು ಕೆಳಗೆ ಬಿದ್ದು ಹೋಗಬಹುದೆಂಬ ಅಂಜಿಕೆ. ಗಟ್ಟಿಯಾಗಿ ಹಲ್ಲುಗಳನ್ನು ಹಿಡಿದರೆ ಮರಿಗಳಿಗೆ ಗಾಯವಾಗಬಹುದೆಂಬ ಭಯ. ಆದ್ದರಿಂದ ಒಂದು ಮಧ್ಯಸ್ಥವಾದ ರೀತಿಯಲ್ಲಿ ತನ್ನ ಮರಿಗಳನ್ನು ಬಾಯಲ್ಲಿ ಹಿಡಿದು ಸ್ಥಾನಾಂತರಗೊಳಿಸುತ್ತದೆ. ಹಾಗೆ ಗಾಯಕನು, ಪಾಠಕನು ಅಕ್ಷರಗಳನ್ನು ತೇಲಿಸಲೂಬಾರದು. ಕರ್ಕಶವಾಗಿ ಒತ್ತಿ ಹೇಳಲೂಬಾರದು. ಹಿತಕರವಾದ ರೀತಿಯಲ್ಲಿ ಅಕ್ಷರಗಳನ್ನು ಉಚ್ಚರಿಸಿ ಹಾಡಬೇಕು.