ಹಿಂದಿನ ಅಧ್ಯಾಯಗಳಲ್ಲಿ ವಿವರಿಸಿದಂತೆ ಪ್ರತಿ ಮಣ್ಣಿಗೂ ತನ್ನದೇ ಆದ ಜಲಧಾರಣಾ ಶಕ್ತಿ ಇದೆ. ಮಣ್ಣಿನ ಜಲಧಾರಣಾ ಸಾಮರ್ಥ್ಯದ ಸಮಯದಲ್ಲಿ ಮಣ್ಣಿನಲ್ಲಿರುವ ಸೂಕ್ಷ್ಮ ರಂಧ್ರಗಳು ಮತ್ತು ಕೆಲವು ಮಧ್ಯಮಾಕಾರದ ರಂಧ್ರಗಳು ನೀರಿನಿಂದ ತುಂಬಿರುತ್ತವೆ. ಈ ಮಿತಿಯನ್ನು ಮೀರಿ, ಮಣ್ಣಿಗೆ ನೀರಿನ ಪೂರೈಕೆಯಾದರೆ, ಉಳಿದಿರುವ ಮಧ್ಯಮಾಕಾರದ ರಂಧ್ರಗಳಲ್ಲದೇ ಎಲ್ಲ ದೊಡ್ಡ ರಂಧ್ರಗಳೂ ನೀರಿನಿಂದ ತುಂಬಿ, ಮಣ್ಣಿನಲ್ಲಿರುವ ಎಲ್ಲ ಹವೆಯು ಹೊರಗೆ ಬರಬೇಕಾಗುತ್ತದೆ. ನೀರಿನ ಪೂರೈಕೆಯು ಇನ್ನೂ ಮುಂದುವರೆದರೆ, ಹೆಚ್ಚಿನ ನೀರು ಭೂಮಿಯ ಆಳಕ್ಕೆ ಬಸಿದು ಹೋಗಬಹುದು. ಇದು ಕಾರಣಾಂತರಗಳಿಂದ ಸಾಧ್ಯವಾಗದಿದ್ದರೆ ಮಣ್ಣಿನ ಮೇಲ್ಭಾಗದಲ್ಲಿ ನೀರು ಸಂಚಯವಾಗತೊಡಗುತ್ತದೆ ಮತ್ತು ಭೂಮಿಯು ಜೌಗಾಗುತ್ತದೆ. ಇಂಥ ಭೂಮಿಯಲ್ಲಿ ಬತ್ತದಂತಹ ಬೆಳೆಗಳನ್ನು ಮಾತ್ರ ಬೆಳೆಯಲು ಸಾಧ್ಯ. ಬೇರೆ ಬೆಳೆಗಳ ಬೇಸಾಯವನ್ನು ಇಲ್ಲಿ ಮಾಡಬೇಕೆಂದಿದ್ದರೆ, ಹೆಚ್ಚಾದ ನೀರನ್ನು ಭೂಮಿಯಿಂದ ಹೊರ ಹಾಕಿ, ಗಾಳಿಯ ಚಲನವಲನಕ್ಕೆ ಆಸ್ಪದವನ್ನುಂಟು ಮಾಡಿಕೊಡಬೇಕಾಗುತ್ತದೆಯಲ್ಲದೆ, ಹೆಚ್ಚಿನ ನೀರು ಪುನಃ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಈ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ವಿವರಗಳು ಕೆಳಗಿನಂತಿವೆ.

ಮಣ್ಣಿನಲ್ಲಿ ಹೆಚ್ಚು ನೀರು ಸಂಗ್ರಹಣೆಗೊಳ್ಳಲು ಕಾರಣಗಳು

ಮಣ್ಣಿನ ಜಲಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚು ನೀರು ಮಣ್ಣಿನಲ್ಲಿ ಸಂಗ್ರಹವಾಗಲು ಹಲವು ಕಾರಣಗಳಿರಬಹುದು. ಅವುಗಳನ್ನು ನೈಸರ್ಗಿಕ ಮತ್ತು ಮಾನವ ನಿರ್ಮಿತ ಕಾರಣಗಳೆಂದು ಎರಡು ಗುಂಪುಗಳಲ್ಲಿ ವಿಂಗಡಿಸಬಹುದು.

ನೈಸರ್ಗಿಕ ಕಾರಣಗಳು

i. ಭೂರಚನೆಯ ವೈಶಿಷ್ಟ್ಯದಿಂದ ಮಣ್ಣಿನಲ್ಲಿರುವ ನೀರು ಸಂಗ್ರಹವಾಗಬಹುದು. ಉದಾಹರಣೆಗೆ ಮಳೆಯ ನೀರು ಎತ್ತರ ಪ್ರದೇಶದಿಂದ ಕೆಳಗೆ ಹರಿದು ಬಂದು ಸಪಾಟಾದ ಪ್ರದೇಶವನ್ನು ತಲುಪಿ, ಮುಂದೆ ಸಾಗಲು ಆಸ್ಪದವಿಲ್ಲದೆ ಅಲ್ಲಿಯೇ ಸಂಗ್ರಹವಾಗುತ್ತದೆ. ಎಲ್ಲ ನೀರು ಬಸಿದು ಕೆಳಗೆ ಹೋಗಲು ಸಾಧ್ಯವಿಲ್ಲದಾಗ ಭೂಮಿಯು ಜೌಗಾಗುತ್ತದೆ.

ii. ಮಣ್ಣಿನ ಕೆಳ ಪದರಿನಲ್ಲಿ ನೀರನ್ನು ಬಸಿಯಲು ಬಿಡದ ಗಟ್ಟಿಯಾದ ಸ್ಥಳವಿರುವುದರಿಂದ ನೀರು ಸಂಗ್ರಹಗೊಳ್ಳುತ್ತದೆ.

iii. ಪ್ರದೇಶವೊಂದರಲ್ಲಿ ಮೇಲಿಂದ ಮೇಲೆ ಪ್ರವಾಹವು ಬಂದು, ಅತಿ ಜಿನಗು ಮಣ್ಣು ಸಂಗ್ರಹಗೊಂಡು, ಹೆಚ್ಚಾದ ನೀರು ಬಸಿದು ಹೋಗಲು ಅಡಚಣೆಗಳುಂಟಾಗಹುದು. ಆಗಲೂ, ಭೂಮಿಯು ಜೌಗಾಗುತ್ತದೆ.

ಮಾನವ ನಿರ್ಮಿತಿ ಕಾರಣಗಳು

ನೀರಿನ ಅಸಮರ್ಪಕ ಬಳಕೆಯಿಂದ ಮತ್ತು ಮಾನವನು ಕೈಗೆತ್ತಿಕೊಂಡ ಕೆಲವು ಚಟುವಟಿಕೆಗಳಿಂದ ಭೂಮಿಯಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಉದಾಹರಣೆಗೆ:

i. ಮಣ್ಣಿನ ಗುಣಧರ್ಮಗಳ ಬಗ್ಗೆ ಗಮನಕೊಡದೇ, ಬೆಳೆಯ ಅವಶ್ಯಕತೆಗಳನ್ನು ಪರಿಗಣಿಸದೆ, ಸೂಕ್ತ ಬಸಿಗಾಲುವೆಗಳ ವ್ಯವಸ್ಥೆ ಮಾಡಿಕೊಳ್ಳದೇ, ಸತತವಾಗಿ ಮತ್ತು ಮಿತಿಮೀರಿ ನೀರನ್ನು ಪೂರೈಸುವುದರಿಂದ ಭೂಮಿಯು ಜೌಗಾಗಬಹುದು.

ii. ನಾಲೆ, ಕಾಲುವೆಗಳು, ಕೆರೆಯ ದಂಡೆ ಮುಂತಾದವುಗಳಿಂದ ನೀರು ಬಸಿದು ಹೊರ ಬಂದು ಸುತ್ತಲಿನ ಪ್ರದೇಶವು ಜೌಗಾಗುತ್ತದೆ.

iii. ಎತ್ತರದಲ್ಲಿರುವ ಭೂಮಿಗೆ ಪೂರೈಕೆಯಾದ ನೀರು, ಮಣ್ಣಿನೊಳಗೆ ಸರಿಯುತ್ತ ಸಾಗಿ ಬಂದು ಕೆಳ ಭಾಗದಲ್ಲಿರುವ ಭೂಮಿಯಲ್ಲಿ ಸಂಗ್ರಹವಾಗಿ ಜೌಗಾಗುತ್ತದೆ.

iv. ಹೆಚ್ಚಾದ ನೀರನ್ನು ಬಸಿದು, ಹೊರ ಹಾಕುವ ನೈಸರ್ಗಿಕ ಬಸಿಗಾಲುವೆಗಳಾದ ಹಳ್ಳ ಮತ್ತು ಇತರೆ ಹರಿಗಳನ್ನು ಸುಸ್ಥಿತಿಯಲ್ಲಿಡದಿದ್ದರೆ ಅಥವಾ ಅರಿತೋ ಅರಿಯದೆಯೋ ಇಂತಹವುಗಳನ್ನು ಅಲಕ್ಷಿಸಿ ರಸ್ತೆಗಳನ್ನೋ, ರೈಲು ದಾರಿಗಳನ್ನೋ ನಿರ್ಮಿಸುವುದರಿಂದ, ಕೆರೆ, ಹಳ್ಳಗಳನ್ನು ಬೇಸಾಯದ ಭೂಮಿಯನ್ನಾಗಿ ಪರಿವರ್ತಿಸುವುದರಿಂದ, ಈ ನೈಸಗಿಕ ಬಸಿಗಾಲುವೆಗಳಲ್ಲಿ ಗಿಡ ಮರಗಳು ಬೆಳೆದು ಹರಿಯುವ ನೀರಿಗೆ ಉಂಟಾಗುವ ಆತಂಕವನ್ನು ದೂರ ಮಾಡದೇ ಇರುವುದರಿಂದ ಭೂಮಿಯು ಜೌಗಾಗಲು ಆಸ್ಪದವಾಗುತ್ತದೆ.

ಹೆಚ್ಚಾದ ನೀರಿನ ನಿವಾರಣೆಯಿಂದ ಆಗುವ ಪ್ರಯೋಜನಗಳು

ಮಣ್ಣಿನ ಜಲಧಾರಣಾ ಸಾಮರ್ಥ್ಯಕ್ಕಿಂತ ಅಧಿಕ ನೀರು ಮಣ್ಣಿನಲ್ಲಿ ಸಂಗ್ರಹಗೊಂಡರೆ, ಮಣ್ಣಿನ ಕಣಗಳ ರಚನೆಯು ನಷ್ಟಗೊಳ್ಳುತ್ತದೆಯಲ್ಲದೇ, ಸಸ್ಯಗಳ ಬೆಳವಣಿಗೆಯು ಕುಂಠಿತಗೊಳ್ಳಬಹುದು. ಇಲ್ಲವೇ ಸಸ್ಯಗಳ ಬೆಳವಣಿಗೆಯೇ ಅಸಾಧ್ಯವೆನಿಸಬಹುದು. ಹೆಚ್ಚಾದ ನೀರು ಬಸಿದು ಹೋಗುವಂತೆ ಮಾಡಿದರೆ ಹಲವು ರೀತಿಯಿಂದ ಅನುಕೂಲವುಂಟಾಗುತ್ತದೆ. ಕೆಲವು ಪ್ರಮುಖ ಸಂಗತಿಗಳು ಕೆಳಗಿನಂತಿವೆ.

i. ಅಧಿಕ ನೀರು ಮಣ್ಣಿನಲ್ಲಿರುವಾಗ, ಉಳುಮೆ ಮಾಡಲು ಮತ್ತು ಇತರ ಬೇಸಾಯ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ನೀರನ್ನು ಬಸಿದು ತೆಗೆಯುವುದರಿಂದ, ಮಣ್ಣು ಒಣಗಿ, ಸಮಯಕ್ಕೆ ಸರಿಯಾಗಿ ಬೇಸಾಯ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು.

ii. ಮಣ್ಣಿನಲ್ಲಿ ಅತಿಯಾದ ನೀರು ಸಂಗ್ರಹವಾಗಿರುವಲ್ಲಿ, ಆಮ್ಲಜನಕದ ಕೊರತೆಯುಂಟಾಗಿ, ಬೀಜಗಳು ಸರಿಯಾಗಿ ಮೊಳಕೆಯೊಡೆಯುವುದಿಲ್ಲ, ಬೇರುಗಳ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ಬೇರುಗಳು ಗಿಡ್ಡ ಮತ್ತು ದಪ್ಪವಾಗುತ್ತವಲ್ಲದೇ, ನೀರು ಮತ್ತು ಪೋಷಕಗಳನ್ನು ಹೀರಿಕೊಳ್ಳುವ ಸೂಕ್ಷ್ಮ ಬೇರುಗಳ ಸಂಖ್ಯೆಯೂ ಕಡಮೆಯಾಗುತ್ತದೆ.

ಹೆಚ್ಚಿನ ನೀರನ್ನು ಬಸಿದೊಡನೆ ಮಣ್ಣಿನಲ್ಲಿ ಆಮ್ಲಜನಕವು ಸಂಚರಿಸುತ್ತದೆ, ಬೇರುಗಳು ಎಲ್ಲೆಡೆ ಪಸರಿಸುತ್ತವೆ, ಸೂಕ್ಷ್ಮ ಬೇರುಗಳ ಸಂಖ್ಯೆಯೂ ಅಧಿಕಗೊಂಡು ನೀರು ಮತ್ತು ಪೋಷಕಗಳನ್ನು ಹೀರಿಕೊಳ್ಳಲು ಸಮರ್ಥವಾಗುತ್ತವೆ. ಈ ಬದಲಾವಣೆಯಿಂದ ಸಸ್ಯಗಳು ಸರಿಯಾಗಿ ಬೆಳೆದು ಅಧಿಕ ಇಳುವರಿಯು ದೊರೆಯುತ್ತದೆ.

iii. ಅವಶ್ಯಕತೆಗಿಂತ ಅಧಿಕ ನೀರು ಮಣ್ಣಿನಲ್ಲಿ ಸಂಗ್ರಹವಾಗದಂತೆ ನೋಡಿಕೊಂಡರೆ, ಆ ಪ್ರದೇಶವು ದೀರ್ಘ ಅವಧಿಯವರೆಗೆ ಬೇಸಾಯಕ್ಕೆ ಲಭ್ಯವಾಗುತ್ತದೆ.

iv. ಅಧಿಕ ಪ್ರಮಾಣದಲ್ಲಿ ನೀರು ನಿಂತಿರುವ ಮಣ್ಣಿನಲ್ಲಿ, ಆಮ್ಲಜನಕವಿಲ್ಲದೇ ಜೀವಿಸಬಲ್ಲ ಸೂಕ್ಷ್ಮ ಜೀವಿಗಳು ಮಾತ್ರ ತಮ್ಮ ಕಾರ್ಯವನ್ನು ನಿರ್ವಹಿಸಬಲ್ಲವು. ಇವುಗಳಲ್ಲಿ ಕೆಲವು ಜೀವಾಣುಗಳು ನೈಟ್ರೇಟ್ ರೂಪದ ಸಾರಜನಕವನ್ನು ವಾಯು ರೂಪಕ್ಕೆ ಪರಿವರ್ತಿಸುತ್ತವೆ. ಈ ರೀತಿ ಸಾರಜನಕವು ವಾಯು ಮಂಡಲವನ್ನು ಸೇರಿಕೊಳ್ಳುತ್ತದೆ. ಅದರಂತೆಯೇ, ಕಬ್ಬಿಣವು ಫೆರಸ್ ರೂಪಕ್ಕೂ, ಮೆಂಗನೀಸ್ ರೂಪಕ್ಕೂ, ಗಂಧಕವು ಸಲ್ಫ್ರೆಟ್ ಮತ್ತು ಸಲ್ಫ್ರೆಡ್ ರೂಪಕ್ಕೂ ಪರಿವರ್ತನೆಯನ್ನು ಹೊಂದಿ ಸಸ್ಯಗಳಿಗೆ ಅಪಾಯವುಂಟಾಗುತ್ತದೆ.

ಹೆಚ್ಚಾದ ನೀರು ಹೊರ ಹೋಗಿ, ಆಮ್ಲಜನಕವು ಮಣ್ಣನ್ನು ಪ್ರವೇಶಿಸುವುದರಿಂದ, ಹಲವು ಬಗೆಯ ಪ್ರಯೋಜನಕಾರಿ ಸೂಕ್ಷ್ಮ ಜೀವಿಗಳು ಭರದಿಂದ ಅಭಿವೃದ್ಧಿಗೊಳ್ಳುತ್ತವೆ. ಸಾವಯವ ವಸ್ತುಗಳು ಕುಳಿತು, ಸಾರಜನಕ ಮತ್ತು ಇತರ ಪೋಷಕಗಳು ಬೆಳೆಗೆ ಸಿಗುವಂತಾಗುತ್ತದೆ. ಅಲ್ಲದೆ ಕಬ್ಬಿಣ, ಮೆಂಗನೀಜ್ ಮತ್ತು ಗಂಧಕಗಳು ಅಪಾಯಕಾರಿ ಮಟ್ಟದಿಂದ ಕೆಳಕ್ಕೆ ಇಳಿಯುತ್ತವೆ.

v. ನೀರಿನ ವಿಶಿಷ್ಟ ಉಷ್ಣತೆಯು (Specific heat) ಇತರ ವಸ್ತುಗಳಿಗಿಂತ ಅಧಿಕವಾಗಿದೆ. ಮಣ್ಣಿನಲ್ಲಿ ನೀರಿನ ಪ್ರಮಾಣವು ಅಧಿಕವಾಗಿರುವಾಗ ಮಣ್ಣಿನ ಉಷ್ಣತೆಯು ಬೇಗನೆ ಏರುವುದಿಲ್ಲ.

ಹೆಚ್ಚಿನ ನೀರನ್ನು ಬಸಿದು ತೆಗೆದಾಗ, ಮಣ್ಣು ಬೇಗನೆ ಬಸಿಯಾಗುತ್ತದೆ. ಇದರಿಂದ ಸಸ್ಯದ ಬೆಳವಣಿಗೆಯು ಉತ್ತಮಗೊಳ್ಳುತ್ತದೆ. ಮತ್ತು ಪ್ರಯೋಜನಕಾರಿ ಸೂಕ್ಷ್ಮಾಣುಗಳಿಗೆ ತಮ್ಮ ಚಟುವಟಿಕೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ಸಾಧ್ಯವಾಗುತ್ತದೆ.

vi. ಜೌಗು ಭೂಮಿಯಲ್ಲಿ ಲವಣಗಳು ಮತ್ತು ಸೋಡಿಯಂ ಸಂಗ್ರಹವಾಗುವ ಸಾಧ್ಯತೆಯಿದೆ. ಸೂಕ್ತ ಬಸಿಗಾಲುವೆಗಳನ್ನು ನಿರ್ಮಿಸಿ, ಹೆಚ್ಚಿನ ನೀರನ್ನು ಹೊರ ಹಾಕಿದರೆ, ಲವಣಗಳನ್ನು ಮತ್ತು ಸೋಡಿಯಂನ್ನು ಮಣ್ಣಿನಿಂದ ಹೊರಹಾಕಲು ಸಾಧ್ಯವಾಗುತ್ತದೆ.

vii. ಮಣ್ಣಿನೊಳಗೆ ಪ್ರವೇಶಿಸುವ ನೀರಿನ ಪ್ರಮಾಣವು ಕಡಿಮೆಯಾಗಿ ನೀರು ಮಣ್ಣಿನ ಮೇಲ್ಭಾಗದಲ್ಲಿ ಸಂಗ್ರಹವಾಗತೊಡಗಿತೆಂದರೆ, ಭೂಸವಕಳಿಗೆ ಆಹ್ವಾನವನ್ನು ಕೊಟ್ಟಂತೆ. ಹೆಚ್ಚಿನ ನೀರನ್ನು ಬಸಿದು ತೆಗೆದರೆ ಸಂಭವನಿಯ ಭೂಸವಕಳಿಯನ್ನು ಕಡಮೆ ಮಾಡಬಹುದು.

viii. ಜೌಗು ಮಣ್ಣಿನಲ್ಲಿ, ಸಸ್ಯಗಳಿಗೆ ವಿವಿಧ ಬಗೆಯ ಕೊಳೆ ರೋಗವನ್ನುಂಟು ಮಾಡುವ ರೋಗಾಣುಗಳು ವಾಸಿಸುವ ಸಾಧ್ಯತೆ ಇದೆ. ಮನುಷ್ಯನಿಗೆ ಮತ್ತು ಸಾಕು ಪ್ರಾಣಿಗಳಿಗೆ ತೊಂದರೆಯನ್ನು ಕೊಡುವ ಸೊಳ್ಳೆಗಳು, ಪ್ರಾಣಿಗಳನ್ನು ಪೀಡಿಸುವ ಲಿವರ್ ಫ್ಲೂಕ್ ಇತ್ಯಾದಿ ಪೀಡೆಗಳು, ಜೌಗು ಮಣ್ಣಿನಲ್ಲಿ ಆಶ್ರಯವನ್ನು ಪಡೆಯುತ್ತವೆ.

ಹೆಚ್ಚಿನ ನೀರನ್ನು ಬಸಿದು ತೆಗೆದರೆ, ಇಂತಹ ಅನಾನುಕೂಲತೆಗಳನ್ನು ಪರಿಹರಿಸಿದಂತಾಗುವುದು.

ಬಸಿಗಾಲುವೆ ಯೋಜನೆ

ಮಣ್ಣಿನಲ್ಲಿರುವ ಹೆಚ್ಚಾಗಿರುವ ನೀರನ್ನು ಬಸಿದು ತೆಗೆದು, ಭೂಮಿಯನ್ನು ಶಾಶ್ವತವಾಗಿ ಸುಧಾರಿಸಬೇಕೆಂದರೆ, ಸುವ್ಯವಸ್ಥಿತವಾದ ಯೋಜನೆಯನ್ನು ಸಿದ್ಧಪಡಿಸಿ, ಅದನ್ನು ಉತ್ತಮ ರೀತಿಯಿಂದ ಕಾರ್ಯಗತ ಮಾಡಬೇಕು. ಯೋಜನೆಯನ್ನು ಸಿದ್ಧಪಡಿಸುವಾಗ ಮುಂದಿನ ಕೆಲವು ಸಂಗತಿಗಳನ್ನು ಪರಿಗಣಿಸಬೇಕು:

ಭೂಮಿಯ ಆಂತರಿಕ ಮತ್ತು ಬಾಹ್ಯರಚನೆ: ಮಣ್ಣಿನೊಳಗೆ ಇಳಿದು, ಕೆಳಗೆ ಬಸಿದು ಹೋಗುವ ನೀರನ್ನು ತಡೆಯುವ ಕಲ್ಲು ಬಂಡೆಗಳು, ಗಟ್ಟಿಯಾಗಿರುವ ಪ್ರದೇಶ ಮತ್ತು ಇತರ ರಚನೆಗಳು, ಎತ್ತರದ ಪ್ರದೇಶದಿಂದ ಬಸಿದು ಬರುವ ನೀರಿನ ಸಂಗ್ರಹ, ಜಲದ ಚಿಲುಮೆ ಮುಂತಾದ ಭೂ ರಚನೆಯ ಬಗ್ಗೆ ವಿವರಗಳನ್ನು ತಿಳಿದುಕೊಳ್ಳಬೇಕು. ಇದರಿಂದ ಸಂಬಂಧಿಸಿದ ಭೂಮಿಗೆ ಅನುಗುಣವಾಗಿ ಬಸಿಗಾಲುವೆಗಳನ್ನು ನಿರ್ಮಿಸಲು ನೆರವು ದೊರೆಯುತ್ತದೆ.

ಇದಲ್ಲದೆ, ಭೂಮಿಯ ಇಳಿಜಾರು, ತಗ್ಗು-ದಿನ್ನೆಗಳು ಮುಂತಾದ ಬಾಹ್ಯ ರಚನೆಗಳ ವಿವರಗಳೂ ಈ ಕಾರ್ಯದಲ್ಲಿ ಸಹಾಯಕವೆನಿಸುತ್ತವೆ.

ನೀರಿನ ಪಾತಳಿಯ ಆಳ ಮತ್ತು ಹರಿಯುವ ದಿಕ್ಕು: ಮಣ್ಣಿನಡಿಯಲ್ಲಿರುವ ಜಲಪಾತಳಿಯ ಆಳವನ್ನು ಮತ್ತು ನೀರು ಹರಿಯುವ ದಿಕ್ಕನ್ನು ತಿಳಿಯಲು ಪಿಝೋಮೀಟರ್ (Pizometer) ಎಂಬ ಸರಳವಾದ ಸಾಧನವನ್ನು ಬಳಸಬಹುದು. ಇದಕ್ಕಾಗಿ, ಸಣ್ಣ ವ್ಯಾಸದ ಕೊಳವೆಗಳನ್ನು ಉಪಯೋಗಿಸಹುದು. ಈ ಕೊಳವೆಗಳನ್ನು ಇಚ್ಛಿತ ಸ್ಥಳಗಳಲ್ಲಿ ನಿರ್ದಿಷ್ಟ ಆಳದವರೆಗೆ ಹೂಳಲಾಗುತ್ತದೆ. ಕೊಳವೆಯಲ್ಲಿರುವ ನೀರಿನ ಪಾತಳಿಯನ್ನು ಮೇಲಿಂದಲೇ ಅಳತೆ ಮಾಡುವ ವ್ಯವಸ್ಥೆಯಿರುತ್ತದೆ.

ನೀರಿನ ಪಾತಳಿಯ ಬಗ್ಗೆ ವಿವರಗಳನ್ನು ಸಂಗ್ರಹಿಸಬೇಕೆಂದಿರುವ ಪ್ರದೇಶದಲ್ಲಿ ಪಿಝೋಮೀಟರುಗಳನ್ನು ಅಲ್ಲಲ್ಲಿ ಸ್ಥಾಪಿಸಬೇಕು. ವರ್ಷದ ವಿವಿಧ ಹಂಗಾಮುಗಳಲ್ಲಿ ಮೇಲಿಂದ ಮೇಲೆ ನೀರಿನ ಆಳವನ್ನು ಅಳೆದು ನೋಡಿದರೆ, ಜಲಪಾತಳಿಯ ಏರಿಳಿತಗಳ ಬಗ್ಗೆ ಹಲವು ವಿವರಗಳನ್ನು ತಿಳಿದುಕೊಳ್ಳಬಹುದು.

ನೀರು ಹರಿಯುವ ದಿಕ್ಕನ್ನು ಮತ್ತು ವೇಗವನ್ನು ತಿಳಿದುಕೊಳ್ಳಲು ಲವಣಗಳು ಅಥವಾ ಬಣ್ಣವನ್ನು ಉಪಯೋಗಿಸಬಹುದು. ಪಿಝೋಮೀಟರುಗಳಲ್ಲಿರುವ ನೀರಿನ ಆಳದ ಅಂತರಗಳ ಮೇಲಿಂದಲೂ ಹರಿಯುವ ನೀರಿನ ದಿಕ್ಕನ್ನು ತಿಳಿಯಬಹುದು.

ಬಸಿದು ತೆಗೆಯಬೇಕಾದ ನೀರಿನ ಪ್ರಮಾಣ : ನಿರ್ದಿಷ್ಟ ಅವಧಿಯಲ್ಲಿ, ಬಸಿದು ತೆಗೆಯಬೇಕಾದ ಒಟ್ಟು ನೀರಿನ ಪ್ರಮಾಣವೆಷ್ಟೆಂಬುದನ್ನು ಅಂದಾಜು ಮಾಡಿದರೆ, ಬಸಿಗಾಲುವೆಯ ರೀತಿ ಮತ್ತು ಆಕಾರಗಳನ್ನು ನಿರ್ಧರಿಸಲು ಸಹಾಯವು ದೊರೆಯುತ್ತದೆ.

ಮೇಲೆ ಹೇಳಿದ ಮಾಹಿತಿಗಳನ್ನಲ್ಲದೆ, ಕೆಳಗೆ ಸೂಚಿಸಿದ ಸಂಗತಿಗಳ ಬಗ್ಗೆಯೂ ತಿಳಿದಿರುವುದು ಅವಶ್ಯ.

 • ಮಳೆಯ ಸರಾಸರಿ ಪ್ರಮಾಣ
 • ಮಳೆಯ ತೀವ್ರತೆಯ ವಿವರಗಳು
 • ನೀರಾವರಿಯ ಜಲದಲ್ಲಿಯ ಎಷ್ಟು ಭಾಗ ನೀರು ಬಸಿದು ಮಣ್ಣಿನೊಳಗೆ ಇಳಿಯುತ್ತದೆ ಎಂಬುದರ ಅಂದಾಜು

ಮಣ್ಣಿನ ಭೌತಿಕ ಗುಣಧರ್ಮಗಳು

ಮಣ್ಣಿನಲ್ಲಿ ನೀರು ಬಸಿದು ಹೋಗುವ ವೇಗ ಮತ್ತು ಪ್ರಮಾಣಗಳನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು. ಮಣ್ಣಿನ ಈ ಗುಣ ಧರ್ಮಗಳನ್ನು ಭೂ ಪ್ರದೇಶದಲ್ಲಿಯೇ ಅಳೆದು ತಿಳಿದುಕೊಳ್ಳಬಹುದು ಅಥವಾ ಮಣ್ಣಿನ ನಮೂನೆಯನ್ನು ತಂದು ಪ್ರಯೋಗಾಲಯದಲ್ಲಿ ಈ ಗುಣಧರ್ಮದ ಅಂದಾಜು ಮಾಡಬಹುದು.

ಮೇಲಿನ ವಿಧಾನಗಳ ಬದಲು ನೀರನ್ನು ಬಸಿಯಗೊಡುವ ಸಾಮರ್ಥ್ಯದ ಮೇಲೆ ಪ್ರಭಾವವನ್ನು ಬೀರುವ ಮಣ್ಣಿನ ಕೆಲವು ಗುಣಧರ್ಮಗಳನ್ನು ಅಳೆದು ನೋಡುವುದರಿಂದಲೂ ನೀರನ್ನು ಬಸಿಯಲು ಬಿಡುವ ಸಾಮರ್ಥ್ಯದ ಅಂದಾಜನ್ನು ಮಾಡಲು ಸಾಧ್ಯ. ಉದಾಹರಣೆಗೆ,

 • ಮಣ್ಣಿನ ಕಣಗಳ ಗಾತ್ರಕ್ಕೂ ನೀರನ್ನು ಬಸಿಯಲು ಬಿಡುವ ಗುಣಕ್ಕೂ ಸಂಬಂಧವಿದೆ. ಮರಳು ಮಣ್ಣಿನಲ್ಲಿ ಎರೆ ಮಣ್ಣಿಗಿಂತ ಸುಲಭವಾಗಿ ಬಸಿಯುತ್ತದೆ.
 • ಮೊಂಟ್ ಮೊರಿಲ್ಲೋನಾಯ್ಟ್ ಖನಿಜದ ಪ್ರಾಬಲ್ಯವಿರುವ ಮಣ್ಣಿಗಿಂತ ಕೆಓಲಿನೈಟ್ ಖನಿಜವೇ ಅಧಿಕವಾಗಿರುವ ಮಣ್ಣಿನಲ್ಲಿರುವ ನೀರು ಸುಲಭವಾಗಿ ಬಸಿಯುತ್ತದೆ.
 • ಉತ್ತಮ ಮತ್ತು ಸ್ಥಿರವಾದ ರಚನೆಯಿರುವ ಮಣ್ಣಿನಲ್ಲಿ ನೀರು ಸರಾಗವಾಗಿ ಬಸಿದು ಹೋಗುತ್ತದೆ.
 • ಒಣ ಮಣ್ಣಿಗೆ ನೀರನ್ನು ಸೇರಿಸಿದಾಗ ಹೊರಬರುವ ಉಷ್ಣತಾಮಾನವು (Heat of wetting) ಅಧಿಕವಾಗಿರುವ ಮಣ್ಣಿನಲ್ಲಿರುವ ನೀರನ್ನು ಬಸಿಯಲು ಬಿಡುವ ಸಾಮರ್ಥ್ಯವು ಕಡಮೆ.

ಮೇಲೆ ಹೇಳಿದ ಹಲವು ಭೌತಿಕ ಗುಣಧರ್ಮಗಳನ್ನು ಸರಿಯಾಗಿ ಪರಿಶೀಲಿಸಿ, ನೀರನ್ನು ಬಸಿಯಲು ಬಿಡುವ ಮಣ್ಣಿನ ಸಾಮರ್ಥ್ಯವನ್ನು ಅಂದಾಜು ಮಾಡಬಹುದು. ಸುಮಾರು, ೨.೫ ಮೀ. ಅಥವಾ ಅದಕ್ಕಿಂತ ಸ್ವಲ್ಪ ಆಳದವರೆಗೆ ಗುಂಡಿಯನ್ನು ತೆಗೆದು, ಗುಂಡಿಯ ಪಾರ್ಶ್ವದಲ್ಲಿರುವ ಮಣ್ಣನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು.

ರಾಸಾಯನಿಕ ಗುಣಧರ್ಮಗಳು: ಲವಣಗಳನ್ನು ಬಸಿದು ಹೊರ ಹಾಕಲು ಬೇಕಾಗುವ ಬಸಿಗಾಲುವೆಯ ವಿನ್ಯಾಸವನ್ನು ತಯಾರಿಸಲು ಮತ್ತು ಅವಶ್ಯವಿರುವ ನೀರಿನ ಪ್ರಮಾಣವನ್ನು ಲೆಕ್ಕ ಮಾಡಲು ಮೇಲಿನ ವಿವರದಿಂದ ಸಹಾಯವು ದೊರೆಯುತ್ತದೆ. ಇದರಂತೆಯೇ, ಮಣ್ಣಿನಲ್ಲಿರುವ ವಿನಿಮಯ ಸೋಡಿಯಂ ಪ್ರಮಾಣವನ್ನು ಕಂಡು ಹಿಡಿದು, ಇದನ್ನು ನಿವಾರಿಸಲು ಅನುಕೂಲವನ್ನೊದಗಿಸುವ ಜಿಪ್ಸಂ, ಕ್ಯಾಲ್ಸಿಯಂ ಕಾರ್ಬೊನೇಟ್ ಇತ್ಯಾದಿಗಳು ಮಣ್ಣಿನಲ್ಲಿವೆಯೇ ಎಂಬುದನ್ನು ಕಂಡುಕೊಳ್ಳಬೇಕು. ಇಂಥ ಮಾಹಿತಿಗಳು ಪ್ರಯೋಜನಕಾರಿ ಎನಿಸುತ್ತವೆ.

ಬಸಿಗಾಲುವೆ ವಿಧಾನಗಳು

ಹೆಚ್ಚಾದ ನೀರನ್ನು ಮಣ್ಣಿನಿಂದ ಹೊರಹಾಕಲು ಪ್ರಮುಖವಾಗಿ ೪ ವಿಧಾನಗಳನ್ನು ಅನುಸರಿಸಲಾಗುತ್ತದೆ. ಅವುಗಳ ಸಂಕ್ಷಿಪ್ತ ವರ್ಣನೆಯು ಕೆಳಗಿನಂತಿವೆ.

ತೆರೆದ ಬಸಿಗಾಲುವೆಗಳು (Open drains)

 • ಭೂಮಿಯಲ್ಲಿ ಸಂಗ್ರಹವಾದ ಹೆಚ್ಚಿನ ನೀರನ್ನು ಹೊರ ಹಾಕಲು, ಸಾಮಾನ್ಯವಾಗಿ ತೆರೆದ ಬಸಿಗಾಲುವೆಗಳನ್ನು ನಿರ್ಮಿಸಲಾಗುತ್ತದೆ. ಮಣ್ಣಿನ ಮೇಲ್ಭಾಗದ ಹರಿಯುವ ನೀರು ಒಳಗೆ ಪ್ರವೇಶಿಸುವ ಮೊದಲೇ ಬಸಿಗಾಲುವೆಗಳಿಗೆ ಬಂದು ಸೇರುತ್ತದೆ. ಈ ರೀತಿ ಸಂಗ್ರಹಗೊಂಡ ನೀರನ್ನು ಮುಖ್ಯ ಕಾಲುವೆಯು ಕೊಂಡೊಯ್ದು ಭೂಮಿಯ ಹೊರಗೆ ಹರಿಯುವಂತೆ ಮಾಡುತ್ತದೆ.
 • ಭೂಮಿಯ ಇಳಿಜಾರಿಗೆ ಅಡ್ಡಲಾಗಿ ಬಸಿಗಾಲುವೆಗಳನ್ನು ತೋಡಬೇಕು. ಹೀಗೆ ಮಾಡುವುದರಿಂದ ಇಳಿಜಾರಿನ ಮೂಲಕ ಹರಿದು ಬರುತ್ತಿರುವ ನೀರು ನೇರವಾಗಿ ಬಸಿಗಾಲುವೆಯನ್ನು ಪ್ರವೇಶಿಸಲು ಅನುಕೂಲವಾಗುತ್ತದೆ.
 • ಬಸಿಗಾಲುವೆಯು ಕಿರಿದಾಗಿದ್ದು, ಆಳವಾಗಿರಬಹುದು ಇಲ್ಲವೇ ಅಗಲವಾಗಿದ್ದು, ಕಡಮೆ ಆಳದ್ದಾಗಿರಬಹುದು. ಹೆಚ್ಚು ಆಳವಾಗಿರುವ ಕಾಲುವೆಗಳ ಪಾರ್ಶ್ವದ ಮಣ್ಣು ಜರಿದು (ಕುಸಿದು) ಬಿದ್ದು ಕಾಲುವೆಗಳು ನಿರುಪಯೋಗವಾಗುವ ಸಾಧ್ಯತೆ ಇದೆ. ಆದ್ದರಿಂದ ಕಡಮೆ ಆಳದ, ಅಗಲವಾಗಿರುವ ಕಾಲುವೆಗಳೇ ರೂಢಿಯಲ್ಲಿವೆ.
 • ಬಸಿಗಾಲುವೆಗಳ ಪಾರ್ಶ್ವಗಳು ಇಳಿಜಾರಾಗಿರಬೇಕು ಇಲ್ಲವಾದರೆ ಅವು ಕುಸಿಯುತ್ತವೆ. ಮಣ್ಣಿನ ಗುಣಧರ್ಮಗಳ ಮೇಲಿಂದ, ಪಾರ್ಶ್ವದ ಇಳಿಜಾರಿನ ಪ್ರಮಾಣವನ್ನು ನಿರ್ಧರಿಸಬೇಕು. ಕೆಳಗೆ ಹೇಳಿದ ಇಳಿಜಾರನ್ನು ಅನುಸರಿಸಬಹುದು.

ಮಣ್ಣು

ಬಸಿಗಾಲುವೆಯ

ಅಗಲ

ಆಳ

೧. ಗಟ್ಟಿಯಾದ ಗೋಡು ಮಣ್ಣು ೦.೫ :
೨. ಎರೆ ಮಣ್ಣು :
೩. ಮರಳು – ಗೋಡು ಮಣ್ಣು :
೪. ಮರಳು ಮಣ್ಣು :

ಗುಣಗಳು

i) ಜಲಪಾತಳಿಯು ಅತಿ ಎತ್ತರವಿದ್ದಾಗ ಮತ್ತು ಮಣ್ಣಿನ ಮೇಲ್ಮೈಯಲ್ಲಿ ನೀರು ನಿಂತಿರುವಾಗ, ಹೆಚ್ಚಾದ ನೀರನ್ನು ಬಸಿದು ತೆಗೆಯಲು ಇದು ಉತ್ತಮ ವಿಧಾನ

ii) ಸಂಗ್ರಹಗೊಂಡ ನೀರು ಹೆಚ್ಚಿನ ಪ್ರಮಾಣದಲ್ಲಿದ್ದಾಗ ಈ ಪದ್ಧತಿಯು ಪ್ರಶಸ್ತವೆನ್ನಬಹುದು.

iii) ಹೆಚ್ಚಿನ ನೀರನ್ನು ಕ್ಷಿಪ್ರ ಗತಿಯಿಂದ ಹೊರ ಹಾಕಬೇಕಾದ ಸಂದರ್ಭದಲ್ಲಿ ಈ ಪದ್ಧತಿಯು ಪರಿಣಾಮಕಾರಿ.

iv) ತುಲನಾತ್ಮಕವಾಗಿ ಇದು ಕಡಮೆ ಖರ್ಚಿನ ವಿಧಾನವೆನ್ನಬಹುದು.

v) ಭೂಮಿಯು ಸಪಾಟಾಗಿರುವಾಗ ಈ ಪದ್ಧತಿಯು ಅನುಕೂಲಕರ.

ಅವಗುಣಗಳು

i) ಬಸಿಗಾಲುವೆಗಳನ್ನು ನಿರ್ಮಿಸಲು ಬೇಸಾಯಕ್ಕೆ ಯೋಗ್ಯವೆನಿಸಿದ ಭೂಮಿಯನ್ನೇ ಉಪಯೋಗಿಸುವುದು ಅನಿವಾರ್ಯ. ಅಷ್ಟರಮಟ್ಟಿಗೆ ಉತ್ಪಾದನೆಯು ಕಡಮೆಯಾದಂತೆ.

ii) ಎತ್ತುಗಳಿಂದ ಇಲ್ಲವೇ ಯಂತ್ರದಿಂದ ಎಳೆಯುವ ಉಪಕರಣಗಳನ್ನು ಬೇಸಾಯಕ್ಕಾಗಿ ಬಳಸುವ ಕಾರ್ಯವು ಕಷ್ಟಕರವಾಗಬಹುದು ಇಲ್ಲವೇ ಅಸಾಧ್ಯವೆನಿಸಬಹುದು.

iii) ದನ-ಕರುಗಳು ಈ ಕಾಲುವೆಗಳಲ್ಲಿ ಸಿಕ್ಕಿ ಬಿದ್ದು ಅಪಾಯಕ್ಕೆ ಗುರಿಯಾಗಬಹುದು.

iv) ಕಾಲುವೆಗಳಲ್ಲಿ ರೇವೆಯು ಸಂಗ್ರಹವಾಗುವುದರಿಂದ ಮತ್ತು ಕಳೆಗಳು ಬೆಳೆಯುವುದರಿಂದ ಬಸಿಗಾಲುವೆಗಳ ಕಾರ್ಯ ಸಾಮರ್ಥ್ಯವು ಕಡಮೆಯಾಗುತ್ತದೆ. ಬಸಿಗಾಲುವೆಗಳನ್ನು ಸುಸ್ಥಿತಿಯಲ್ಲಿಡಲು ಹೆಚ್ಚು ಶ್ರಮ ಮತ್ತು ಹಣ ವ್ಯಯವಾಗುತ್ತವೆ.

ಭೂಮಿಯಾಳದಲ್ಲಿ ನಿರ್ಮಿಸಿದ (ಭೂಗತ) ಬಸಿಗಾಲುವೆಗಳು

ಭೂಮಿಯೊಳಗೆ, ಇಚ್ಛಿತ ಆಳದಲ್ಲಿ, ಬಸಿಗಾಲುವೆಗಳನ್ನು ನಿರ್ಮಿಸಬಹುದು. ಬಸಿಗಾಲುವೆಯ ಮೇಲ್ಭಾಗದಿಂದ ಮತ್ತು ಅದರ ಎರಡೂ ಪಾರ್ಶ್ವಗಳಲ್ಲಿರುವ ಭೂ ಪ್ರದೇಶದಿಂದ, ಹೆಚ್ಚಾದ ನೀರು ಹರಿದು ಬಂದು ಬಸಿಗಾಲುವೆಯನ್ನು ಪ್ರವೇಶಿಸುತ್ತದೆ. ಈ ನೀರು ಬಸಿಗಾಲುವೆಗಳ ಮೂಲಕ ಹೊರಗೆ ಹರಿದು ಹೋಗುತ್ತದೆ. ಭೂಗತ ಬಸಿಗಾಲುವೆಗಳನ್ನು ನಿರ್ಮಿಸುವ ಪ್ರಮುಖ ವಿಧಾನಗಳ ಸಂಕ್ಷಿಪ್ತ ವರ್ಣನೆಯು ಕೆಳಗಿನಂತಿದೆ:

) ಮೋಲ್ ಬಸಿಗಾಲುವೆಗಳು (Mole drains) : ಕಳೆದ ಶತಮಾನದ ಪೂರ್ವಾರ್ಧದಲ್ಲಿ, ಮೋಲ್ ಬಸಿಗಾಲುವೆಗಳು ಯುರೋಪ ಖಂಡದ ಹಲವು ದೇಶಗಳಲ್ಲಿ ಪ್ರಚಲಿತವಿದ್ದವು. ವಿಶೇಷ ರೀತಿಯಲ್ಲಿ ವಿನ್ಯಾಸವನ್ನು ಹೊಂದಿರುವ ಕಬ್ಬಿಣದ ನೇಗಿಲಿನ ಹಿಂದೆ, ಚೂಪಾಗಿರುವ ಗಟ್ಟಿಯಾದ ಒಂದು ಬಿರಡೆ (Pointed metal plug)ಯನ್ನು ಜೋಡಿಸಲಾಗಿರುತ್ತದೆ. ಇಚ್ಛಿತ ಸ್ಥಳದಲ್ಲಿ ನೇಗಿಲನ್ನು ಒಳಸೇರಿಸಿ, ಟ್ರ್ಯಾಕ್ಟರಿನ ಸಹಾಯದಿಂದ ಎಳೆಯುತ್ತ ಸಾಗಿದಂತೆ ನೇಗಿಲ ಹಿಂದೆ ಇರುವ ಬಿರಡೆಯಿಂದ ಕೊಳವೆಯಾಕಾರದ ಕಾಲುವೆಯು ನಿರ್ಮಾಣಗೊಳ್ಳುತ್ತದೆ. ಆ ಪ್ರದೇಶದ ವಿವಿಧ ಭಾಗಗಳಿಂದ ಬಸಿದು ಬಂದ ನೀರು ಈ ಕಾಲುವೆಯಲ್ಲಿ ಸಂಗ್ರಹಗೊಂಡು ಹೊರಗೆ ಹರಿಯುತ್ತದೆ.

ಮೋಲ್ ಬಸಿಗಾಲುವೆಯು ಎರೆಮಣ್ಣು ಅಥವಾ ಎರೆಮಿಶ್ರಿತ ಗೋಡು ಮಣ್ಣುಗಳಲ್ಲಿ ಮಾತ್ರ ಪ್ರಯೋಜನಕಾರಿ ಎನಿಸಿದೆ. ಮರಳಿನ ಪ್ರಾಬಲ್ಯವಿರುವ ಮಣ್ಣಿನಲ್ಲಿ ಇಂತಹ ಕಾಲುವೆಗಳನ್ನು ನಿರ್ಮಿಸಿದರೆ, ಅವು ಸ್ಥಿರವಾಗಿರದೆ ಬಹು ಬೇಗನೆ ಕುಸಿಯುತ್ತವೆ. ಆದ್ದರಿಂದ ಮರಳು ಮಣ್ಣಿನಲ್ಲಿ, ಮೋಲ್ ಬಸಿಗಾಲುವೆಗಳು ನಿಷ್ಪ್ರಯೋಜಕವೆನಿಸಿವೆ. ಅದರಂತೆಯೇ ಮೋಲ್ ಬಸಿಗಾಲುವೆಗಳನ್ನು ಸುಮಾರು ೯೦ ಸೆಂ.ಮೀ. ಆಳದವರೆಗೆ ಮಾತ್ರ ನಿರ್ಮಿಸಲು ಸಾಧ್ಯ. ಇದಕ್ಕೂ ಹೆಚ್ಚು ಆಳದಲ್ಲಿ ಈ ಬಸಿಗಾಲುವೆಗಳನ್ನು ನಿರ್ಮಾಣ ಮಾಡುವುದು ಕಷ್ಟಕರ.