ಕನ್ನಡ ಭಾಷಾ ಸಾಹಿತ್ಯದ ಸಂದರ್ಭದಲ್ಲಿ ಬರೆಯುತ್ತ, ಭಾರತೀಯ ಸಾಹಿತ್ಯದ ಆಯಾಮಗಳನ್ನು ವಿಸ್ತರಿಸಿದ ಶಿವರಾಮ ಕಾರಂತರನ್ನು, ಶ್ರೇಷ್ಠ ಸಂಶೋಧಕರಾದ ಶಂಬಾ ಜೋಷಿಯವರು, ‘ಕಾರಂತರು ಈ ಶತಮಾನದ ಆಶ್ಚರ್ಯ’-ಎಂದು ಕರೆದಿದ್ದಾರೆ. ಈ ಅಚ್ಚರಿಯ ಪ್ರತಿಭಾ ವಿಶೇಷವಾದ ಕಾರಂತರು ಹುಟ್ಟಿದ್ದು, ಬೆಳೆದದ್ದು ದಕ್ಷಿಣ ಜಿಲ್ಲೆಯಲ್ಲಿ, ಮತ್ತು ತಮ್ಮ ಸಾಹಿತ್ಯದ ಮೂಲಕ ಚಿತ್ರಿಸಿದ್ದು ಈ ಪರಿಸರದ ಬದುಕನ್ನು. ಒಂದೆಡೆ ಶ್ರೇಣಿ ಶ್ರೇಣಿಗಳಾಗಿ ನಿಂತ ಪರ್ವತ ಪಂಕ್ತಿಗಳು; ಮತ್ತೊಂದೆಡೆ ಅಪಾರವಾದ ಭೋರ್ಗರೆಯುವ ಕಡಲು. ಈ ಬೆಟ್ಟ-ಕಡಲುಗಳ ನಡುವೆ ಬದುಕಿದ ಕಾರಂತರ ವ್ಯಕ್ತಿತ್ವದಲ್ಲಿ ಬೆಟ್ಟಗಳ ದಿಟ್ಟತನವೂ, ಕಡಲಿನ ನಿರಂತರ ಕ್ರಿಯಾಶೀಲತೆಯೂ ಮೇಳವಿಸಿಕೊಂಡಿವೆ.

ಇಂಥ ವ್ಯಕ್ತಿತ್ವ ತನ್ನ ಬದುಕು ಹಾಗೂ ಬರಹಗಳ ಮೂಲಕ ಅನಾವರಣಗೊಳಿಸಿದ ಅನುಭವ ಪ್ರಪಂಚಗಳ ವಿಸ್ತಾರ ವೈವಿಧ್ಯಗಳು ಬೆರಗುಗೊಳಿಸುವಂತಿವೆ. ಮೂಲತಃ ಕಾದಂಬರಿ ಎನ್ನುವ ಪ್ರಕಾರ ಅವರ ಪ್ರಧಾನ ಮಾಧ್ಯಮವಾದರೂ, ಅದರ ಜತೆಗೆ ಅವರು ಪ್ರವೇಶಿಸಿದ ಮತ್ತು ಪ್ರಯೋಗದಲ್ಲಿ ತೊಡಗಿಸಿಕೊಂಡ ಇನ್ನಿತರ ಅನುಭವ ಪ್ರಪಂಚಗಳೂ ಇವೆ. ಪತ್ರಿಕೋದ್ಯಮ, ಚಿತ್ರಕಲೆ, ವಿಜ್ಞಾನ, ಪ್ರವಾಸ ಕಥನ, ವಿಚಾರ ಸಾಹಿತ್ಯ, ಯಕ್ಷಗಾನ, ಚಲನಚಿತ್ರ, ಪರಿಸರ ಚಳುವಳಿ, ಕೊನೆಗೆ ರಾಜಕೀಯ-ಹೀಗೆ ಅವರ ಆಸಕ್ತಿಗಳು ಬಹುಮುಖಿಯಾದವುಗಳು. ಈ ಬಹುಮುಖೀ ಆಸಕ್ತಿಗಳೇ ಕಾರಂತರನ್ನು ತಮ್ಮ ಸಮಕಾಲೀನರಾದ ಇತರ ಲೇಖಕರಿಂದ ಅವರನ್ನು ಬೇರ್ಪಡಿಸಿ ತೋರಿಸುವ ಲಕ್ಷಣಗಳಾಗಿವೆ.

ಕಳೆದ  ಶತಮಾನದ ಎರಡನೆಯ ದಶಕದಲ್ಲಿ ಅವರು ‘ವಸಂತ’ ಎಂಬ ಹೆಸರಿನ ಮಾಸ ಪತ್ರಿಕೆಯನ್ನು ಕೆಲವು ವರ್ಷಗಳ ಕಾಲ ನಡೆಸಿದರು. ‘ವಿಚಾರವಾಣಿ’ ಎಂಬ ಇನ್ನೂ ಒಂದು ಮಾಸಪತ್ರಿಕೆಯನ್ನು ಒಂದೆರಡು ವರ್ಷ ನಡೆಸಿದರು. ಕುವೆಂಪು, ಗೋವಿಂದ ಪೈ, ಆನಂದಕಂದ ಇಂಥವರ ಕವಿತೆಗಳು ಕಾರಂತರ ‘ವಸಂತ’ದಲ್ಲಿ ಪ್ರಕಟವಾದವೆನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಪುತ್ತೂರಿನಲ್ಲಿ ಮಕ್ಕಳಿಗಾಗಿಯೆ ‘ಬಾಲವನ’ವನ್ನು ನಿರ್ಮಿಸಿದರು. ಮೈಗೆ ಬಣ್ಣ ಬಳಿದುಕೊಂಡು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿದರು. ಪಾರಂಪರಿಕವಾದ ಯಕ್ಷಗಾನ ಕಲೆಗೆ, ಹೊಸರೂಪವನ್ನು ಕೊಟ್ಟು ಅದು ದೇಶವಿದೇಶಗಳಲ್ಲಿ ಸಲ್ಲುವಂತೆ ಮಾಡಿದರು. ಜೀವಮಾನದ ಉದ್ದಕ್ಕೂ ಸುಂಟರಗಾಳಿಯಂತೆ ಈ ದೇಶದ ಒಳಗೂ ಹೊರಗೂ ಸುತ್ತಾಡಿದರು. ಎಲ್ಲಕ್ಕಿಂತ ಮಿಗಿಲಾಗಿ ಕನ್ನಡದಲ್ಲಿ ವಿಜ್ಞಾನದ ಬರಹಗಳೇ ಇಲ್ಲದ ಕಾಲದಲ್ಲಿ ಮೊಟ್ಟ ಮೊದಲಬಾರಿಗೆ, ಕಿರಿಯರಿಗೆ ಈ ಜಗತ್ತಿನ ವಾಸ್ತವ ಹಾಗೂ ವಿಸ್ಮಯಗಳನ್ನು ಪರಿಚಯ ಮಾಡಿಕೊಡುವ ‘ಬಾಲಪ್ರಪಂಚ’ ‘ವಿಜ್ಞಾನ ಪ್ರಪಂಚ’ದಂಥ ವಿಶ್ವಕೋಶ ಮಾದರಿಯ ಸಂಪುಟಗಳನ್ನು ಬರೆದು ಪ್ರಕಟಿಸುವ ಏಕಾಂಗ ಸಾಹಸದಲ್ಲಿ ಯಶಸ್ವಿಯಾದರು. ವಿಶ್ವವಿದ್ಯಾಲಯದ ಮೆಟ್ಟಿಲನ್ನೆ ತುಳಿಯದ ಕಾರಂತರು ವಿಶ್ವವಿದ್ಯಾಲಯಗಳೂ ಮಾಡಲಾರದಂಥ ಕೆಲಸವನ್ನು ಮಾಡಿ ಸಾರಸ್ವತ ಜಗತ್ತನ್ನು ಚಕಿತಗೊಳಿಸಿದರು.

ನನಗೂ ಕಾರಂತರ ಬಾಲಪ್ರಪಂಚಕ್ಕೂ ಇರುವ ಸಂಬಂಧವನ್ನು ನಾನಿಲ್ಲಿ ಪ್ರಸ್ತಾಪಿಸಬೇಕು. ನಾನಾಗ ಎಂಟು ಅಥವಾ ಒಂಬತ್ತು ವರ್ಷದ ಹುಡುಗ, ನಾನು ರಾಮಗಿರಿಯ ಮಿಡಲ್ ಸ್ಕೂಲ್ ವಿದ್ಯಾರ್ಥಿ. ‘ಆಗ ನಮ್ಮ ಸ್ಕೂಲಿನ ಗ್ರಂಥಾಲಯಕ್ಕೆ ಶಿವರಾಮ ಕಾರಂತರ ‘ಬಾಲ ಪ್ರಪಂಚ’ದ ಸಂಚಿಕೆಗಳು ಬಿಡಿ ಬಿಡಿಯಾಗಿ ಬರುತ್ತಿದ್ದವು (ಅವೆಲ್ಲವೂ ಒಟ್ಟುಗೂಡಿ ಬೃಹತ್ ಸಂಪುಟಗಳಾಗಿ ಪ್ರಕಟವಾದದ್ದು ಅನಂತರ). ಆಗ ನನಗೆ ದೊರೆತ ಆ ಸಂಚಿಕೆಗಳು, ಅವುಗಳ ವಸ್ತುವೈವಿಧ್ಯ ಹಾಗೂ ಚಿತ್ರವೈವಿಧ್ಯಗಳಿಂದ, ಮತ್ತು ಎಳೆಯ ವಯಸ್ಸಿನ ಮಕ್ಕಳಿಗೆ ಜಗತ್ತನ್ನು ಸ್ವಾರಸ್ಯವಾಗಿ ಪರಿಚಯ ಮಾಡಿಕೊಡುವ ಸುಲಭ ಶೈಲಿಯಿಂದ ನನ್ನ ಮನಸ್ಸನ್ನು ಗಾಢವಾಗಿ ಸೆರೆಹಿಡಿದು, ನಾವು ಬದುಕುತ್ತಿರುವ ಈ ಜಗತ್ತು ಇಷ್ಟೊಂದು ವಿಶಾಲವಾಗಿದೆಯೇ, ವೈವಿಧ್ಯಮಯವಾಗಿದೆಯೇ, ವಿಸ್ಮಯಕರವಾಗಿದೆಯೇ- ಎನ್ನಿಸುವ ವಾಸ್ತವ ಪ್ರಜ್ಞೆಯನ್ನು ನನ್ನಲ್ಲಿ ಹುಟ್ಟಿಸಿದ್ದರ ಜತೆಗೆ, ಸಾಹಿತ್ಯದ ಬಗ್ಗೆ ಮೊಟ್ಟ ಮೊದಲಬಾರಿಗೆ ಹೊಸತೊಂದು ಹಸಿವನ್ನೂ, ರುಚಿಯನ್ನೂ ಉದ್ಫಾಟಿಸಿದವು. ಈ ಹೊತ್ತಿಗೂ ಕಾರಂತರ ‘ಬಾಲಪ್ರಪಂಚ’ದ ಸೆಳೆತ ನನ್ನಲ್ಲಿ ಕಡಿಮೆಯಾಗಿಲ್ಲ.

ಬಾಲಪ್ರಪಂಚಾದಿಗಳು ತೆರೆಯುವುದು ವಾಸ್ತವ ಜಗತ್ತನ್ನು. ಅವರ ಕಾದಂಬರಿಗಳ ಜಗತ್ತೂ ವಾಸ್ತವ ಪ್ರಪಂಚದ್ದೇ. ಅವರನ್ನು ಕನ್ನಡ ಸಾಹಿತ್ಯ ವಿಮರ್ಶೆ ಗುರುತಿಸಿರುವುದು ಮುಖ್ಯವಾಗಿ ವಾಸ್ತವವಾದಿ ಕಾದಂಬರಿಕಾರರು ಎಂದೇ. ಕಾರಂತರು ಬರವಣಿಗೆಗೆ ತೊಡಗಿದ ಕಾಲದಲ್ಲಿ, ಅವರ ಹಿಂದೆ ಇದ್ದದ್ದು ಎಂ.ಎಸ್. ಪುಟ್ಟಣನವರ ಸಾಂಪ್ರದಾಯಿಕ ಕಥನ ಪರಂಪರೆಯ ಕಾದಂಬರಿಗಳು, ಗಳಗನಾಥರ ಚಾರಿತ್ರಿಕ ಕಾದಂಬರಿಗಳು ಮತ್ತು ಬಿ.ವೆಂಕಟಾಚಾರ್ಯರು ಕನ್ನಡಕ್ಕೆ ತಂದ ಬಂಕಿಂಚಂದ್ರರ ಬಂಗಾಳಿ ಕಾದಂಬರಿಗಳು. ಹೀಗೆ ಕನ್ನಡದಲ್ಲಿ ವಾಸ್ತವವಾದಿ ಪರಂಪರೆಯೊಂದು ಇನ್ನೂ ರೂಪುಗೊಳ್ಳದಿದ್ದ ಸಂದರ್ಭದಲ್ಲಿ, ಮೊದಲ ಬಾರಿಗೆ ಕಾರಂತರು ತಾವು ಕಂಡ ಸಾಮಾಜಿಕ ವಾಸ್ತವಗಳನ್ನು ತಮ್ಮ ಬರಹಗಳಲ್ಲಿ ಹಿಡಿದಿರಿಸಿ ವಾಸ್ತವ ಮಾರ್ಗದ ಪ್ರವರ್ತಕರಾದರು. ದಕ್ಷಿಣ ಕನ್ನಡ ಜಿಲ್ಲೆಯ ಬದುಕನ್ನು ಅದರ ಸಾಂಸ್ಕೃತಿಕ ಚಹರೆಗಳ ಸಮೇತ ಅನನ್ಯವಾಗಿ ಚಿತ್ರಿಸಿದರು. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ಬದುಕನ್ನು ಕುರಿತು ಬರೆಯುತ್ತಲೆ ಕಾರಂತರು ಸಮಕಾಲೀನ ಭಾರತದ ಸಾಮಾಜಿಕ-ರಾಜಕೀಯ-ಸಾಸ್ಕೃತಿಕ ಪಲ್ಲಟಗಳನ್ನೂ, ತಲ್ಲಣಗಳನ್ನೂ ಮತ್ತು ಬದುಕಿನ ಮೂಲಭೂತ ಸಮಸ್ಯೆಗಳನ್ನೂ-ತಮ್ಮ ಕಾದಂಬರಿಗಳಲ್ಲಿ ಗ್ರಹಿಸಿ ನಿರೂಪಿಸಿದ್ದಾರೆ. ನಿದರ್ಶನಕ್ಕೆ ೧೯೩೩ರಲ್ಲಿ ಪ್ರಕಟವಾದ ‘ಚೋಮನದುಡಿ’ಯನ್ನು, ೧೯೪೨ರಲ್ಲಿ ಪ್ರಕಟವಾದ ‘ಮರಳಿ ಮಣ್ಣಿಗೆ’ಯನ್ನು ಒಟ್ಟಿಗೇ ಇರಿಸಿ ನೋಡಬಹುದು. ‘ಚೋಮನ ದುಡಿ’ಯಲ್ಲಿ ನೆಲದ ಒಡೆತನಕ್ಕೆ ಹಂಬಲಿಸಿ ಹತಾಶನಾಗುವ ಅಸ್ಪೃಶ್ಯನೊಬ್ಬನ ಬದುಕಿನ ದುರಂತದ ಕತೆಯನ್ನು ಹೇಳುತ್ತಲೇ, ಭಾರತೀಯ ಸಮಾಜದ ಕೆಳವರ್ಗದವರ ಚರಿತ್ರೆಯನ್ನು ಕಾರಂತರು ಕಟ್ಟಿಕೊಡುತ್ತಾರೆ. ಕಾರಂತರ ಸಮಕಾಲೀನತೆಯಲ್ಲಿ ವಸಾಹತುಶಾಹಿಯ ಒಂದು ಅಂಗವಾದ ಜಮೀನ್ದಾರೀ ಪದ್ಧತಿಯ ಶೋಷಣೆಗೆ ಒಳಗಾದ ಕೆಳವರ್ಗದ ರೈತರ ಬವಣೆಯನ್ನು ಚಿತ್ರಿಸುವ ಈ ದೇಶದ ಕೆಲವು ಕಾದಂಬರಿಗಳೊಂದಿಗೆ, ‘ಚೋಮನದುಡಿ’ಯನ್ನು ಹೋಲಿಸಿ ನೋಡಿದರೆ ಕಾರಂತರ ‘ಚೋಮನದುಡಿ’ಯ ವಿಶೇಷವೇನೆಂಬುದು ಸ್ಪಷ್ಟವಾಗುತ್ತದೆ. ೧೯೦೨ರಲ್ಲಿ ಪ್ರಕಟವಾದ ಒರಿಯಾ ಭಾಷೆಯ ಫಕೀರಮೋಹನ ಸೇನಾಪತಿಯವರ ‘ಚಾಮಾನ ಆಟಗುಂಥಾ (ಆರು ಮತ್ತು ಅರ್ಧ ಎಕರೆ), ನೇಕಾರ ಕುಟುಂಬದ ಗಂಡ-ಹೆಂಡಿರ ಆರೂವರೆ ಎಕರೆ ಭೂಮಿಯನ್ನು ಜಮೀನ್ದಾರನೊಬ್ಬ ಕಿತ್ತುಕೊಂಡು ಅವರನ್ನು ನಿರ್ಗತಿಕರನ್ನಾಗಿಸಿದ ಕಥೆ. ೧೯೩೬ರಲ್ಲಿ ಉರ್ದು ಭಾಷೆಯಲ್ಲಿ ಪ್ರೇಮಚಂದ್ರರು ಬರೆದು ಪ್ರಕಟಿಸಿದ ‘ಗೋದಾನ’, ಪೂರ್ವಜರಿಂದ ತನಗೆ ಬಂದ ಜಮೀನನ್ನು, ಜಮಿನ್ದಾರನ ದಬ್ಬಾಳಿಕೆಯ ನಡುವೆ ಉಳಿಸಿಕೊಳ್ಳಲು ಹೋರಾಡಿದ ಬಡರೈತನ ಕಥೆ. ಆದರೆ ಇವು ಕೆಳವರ್ಗದ ರೈತರ ಕಥೆಗಳೇ ವಿನಾ ಅಸ್ಪೃಶ್ಯನ ನೋವುಗಳನ್ನು ಕುರಿತವುಗಳಲ್ಲ. ನಮ್ಮ ಗಮನಕ್ಕೆ ಬಂದಂತೆ ಅಸ್ಪೃಶ್ಯ ಜೀತಗಾರನನ್ನು ಕುರಿತ ಮೊದಲ ಕಾದಂಬರಿ, ೧೯೨೧ರಲ್ಲಿ ಪ್ರಕಟವಾದ ತೆಲುಗಿನ ಉನ್ನವ ಲಕ್ಷ್ಮೀ ನಾರಾಯಣ ಅವರ ‘ಮೂಲಪಲ್ಲಿ’ (ಹರಿಜನ ಕೇರಿ) ಎಂಬ ಕೃತಿ. ಇದರ ನಾಯಕ ‘ರಾಮದಾಸು’, ಹುಟ್ಟಿನಲ್ಲಿ ಅಸ್ಪೃಶ್ಯ. ಮೇಲ್‌ವರ್ಗದ ಜಮೀನ್ದಾರನೊಬ್ಬನ ಜೀತಗಾರ. ಏನೋ ಕಾರಣದಿಂದ, ತಮ್ಮ ಭೂಮಿಯಲ್ಲಿ ಜೀತಗಾರನಾಗಿ ದುಡಿಯುವ ಹಕ್ಕನ್ನು ಕಿತ್ತುಕೊಂಡು ಜಮೀನ್ದಾರ ‘ರಾಮದಾಸು’ವನ್ನು ಹೊರಕ್ಕೆ ಹಾಕುತ್ತಾನೆ. ಅಸ್ಪೃಶ್ಯ ಜೀತಗಾರನ ಬವಣೆಯನ್ನು ಕುರಿತ ಕಾದಂಬರಿ ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ಬಹುಶಃ ಇದೇ ಮೊದಲನೆಯದೆಂದು ತೋರುತ್ತದೆ. ಎರಡನೆಯದು ೧೯೩೩ರಲ್ಲಿ ಪ್ರಕಟವಾದ ಕಾರಂತರ ‘ಚೋಮನದುಡಿ’ ತನ್ನದೇ ಆದ ಆಸ್ತಿಯ ಒಡೆತನಕ್ಕೆ ಅನರ್ಹನಾಗಿ, ಕೇವಲ ಮೇಲುವರ್ಗದವರ ಸೇವೆಯನ್ನು ಮಾಡಿಕೊಂಡೇ ಬದುಕುವುದು ಅಸ್ಪೃಶ್ಯನಾದವನ ಹಣೆಯ ಬರಹ ಎಂಬ -ಹಿಂದೂ ಧರ್ಮ ಶಾಸ್ತ್ರಗಳ-ನಿರ್ಬಂಧದ ಹಿನ್ನಲೆಯಲ್ಲಿ, ಚೋಮನಂಥ ಅಸ್ಪೃಶ್ಯನ ಮನಸ್ಸಿನಾಳದಲ್ಲಿ ತಾನೂ, ಒಂದಿಷ್ಟು ಸ್ವಂತ ನೆಲಕ್ಕೆ ಒಡೆಯನಾಗಿ ಬೇಸಾಯಗಾರನಾಗಬೇಕೆಂಬ ಬಯಕೆಯೊಂದು ಹುಟ್ಟಿಕೊಂಡಿತೆಂಬ ಚಾರಿತ್ರಿಕ ಸತ್ಯದ ಹಿನ್ನೆಲೆಯಲ್ಲಿ, ಆತನ ಬದುಕಿನ ತಳಮಳಗಳನ್ನು, ದುರಂತವನ್ನು ಯಾವುದೇ ಭಾವಾತಿರೇಕಗಳಿಗೆ ಒಳಗಾಗದಂತೆ ಕಾರಂತರು ಚಿತ್ರಿಸಿರುವ ಕ್ರಮ ಅನನ್ಯವಾದದ್ದು. ೧೯೪೦ರ ಅನಂತರ ಬಂದ ಮುಲ್ಕರಾಜ್ ಆನಂದ್ ಅವರ ‘ದಿ ಅನ್‌ಟಚಬಲ್’, ೧೯೪೮ರಲ್ಲಿ ಪ್ರಕಟವಾದ ಗೋಪಿನಾಥ ಮೊಹಂತಿಯವರ  ಒರಿಯಾ ಭಾಷೆಯ ‘ಹರಿಜನ’ ಮತ್ತು ಮಲಯಾಳಂ ಭಾಷೆಯಲ್ಲಿ ಬಂದ ತಕಳಿ ಶಿವಶಂಕರ ಪಿಳ್ಳೆಯವರ ‘ತೋಟಿಯುಡೆ ಮಗನ್’ (ಜಾಡಮಾಲಿ ಮಗ)- ಈ ಕೆಲವು ಇದೇ ವಸ್ತುಗಳನ್ನು ಕುರಿತ ಕಾದಂಬರಿಗಳು. ಈ ಎಲ್ಲ ಕೃತಿಗಳ ನಡುವೆ ಕಾರಂತರ ‘ಚೋಮನದುಡಿ’ (ದಲಿತರೇ ಬರೆದ ಕೃತಿಗಳ ಹಿನ್ನೆಲೆಯಲ್ಲಿಯೂ) ಭಾರತೀಯ ಸಮಾಜದ ಕೆಳವರ್ಗದ ಚರಿತ್ರೆಯ ತಲ್ಲಣಗಳನ್ನು ತುಂಬ ಸಮರ್ಥವಾಗಿ ಚಿತ್ರಿಸುವ ಕೃತಿಯಾಗಿದೆ. ಇದೇ ಸಾಲಿನಲ್ಲಿ ಪರಿಗಣಿಸಬೇಕಾದ ಕೃತಿ ಎಂದರೆ ‘ಕುಡಿಯರ ಕೂಸು’. ಪಶ್ಚಿಮ ಘಟ್ಟದ ಸೆರಗಿನಲ್ಲಿ ಮನೆ ಮಾಡಿಕೊಂಡ ಕುಡಿಯರೆಂಬ ಬುಡಕಟ್ಟು ಸಂಸ್ಕೃತಿಯೊಂದು, ವಸಾಹತುಶಾಹಿಯ ಫಲವಾದ ಜಮೀನುದಾರೀ ಒಡೆತನಕ್ಕೆ ಒಳಗಾಗಿ ತನ್ನ ಚಹರೆಯನ್ನು ಕಳೆದುಕೊಂಡ ಸ್ಥಿತಿಯನ್ನು ಚಿತ್ರಿಸುವ ಅಪರೂಪದ ಕಾದಂಬರಿಯಾಗಿದೆ. ಅವರ ಮಹತ್ವದ ಕಾದಂಬರಿ ‘ಮರಳಿ ಮಣ್ಣಿಗೆ’, ಮೂರು ತಲೆಮಾರುಗಳ ಕಥೆ ಹೇಳುತ್ತಲೇ ಮನುಷ್ಯ ಮತ್ತು ನಿಸರ್ಗಕ್ಕೂ ಏರ್ಪಡುವ ಸಂಬಂಧ, ಸಂಘರ್ಷ ಮತ್ತು ವಿಚ್ಫಿತ್ತಿಗಳನ್ನೂ, ವಸಾಹತುಶಾಹಿ ಸಂದರ್ಭದ ಕಾರಣದಿಂದ ಅಥವಾ ತತ್ಪರಿಣಾಮವಾದ ಇಂಗ್ಲಿಷ್ ಶಿಕ್ಷಣ ಮತ್ತು ನಗರೀಕರಣಗಳ ಕಾರಣದಿಂದ ಸಾಂಪ್ರದಾಯಿಕ ಜೀವನ ಕ್ರಮವು ಎದುರಿಸಬೇಕಾಗಿ ಬಂದ ಬಿಕ್ಕಟ್ಟುಗಳನ್ನೂ, ಸವಾಲುಗಳನ್ನೂ, ಅತ್ಯಂತ ಸಾಮಾಜಿಕ ವಾಸ್ತವದ ನಿಲುವಿನಿಂದ-ಗ್ರಹಿಸಿ ನಿರೂಪಿಸುತ್ತದೆ. ಅವರ ‘ಮೈಮನಗಳ ಸುಳಿಯಲ್ಲಿ’ ವೇಶ್ಯೆಯೊಬ್ಬಳ ಬದುಕಿನ ಮೂಲಮಾನದಲ್ಲಿ ಗಂಡು-ಹೆಣ್ಣುಗಳ ಪ್ರೇಮ-ಕಾಮಗಳ ಸಂಬಂಧವನ್ನು ಒರೆಗೆ ಹಚ್ಚಿ ನೋಡುವ ಪ್ರಯತ್ನವಾಗಿದೆ. ಅವರ ಕಾದಂಬರಿಗಳ ವಸ್ತು ವೈವಿಧ್ಯವನ್ನು ಒಂದರಂತೆ ಮತ್ತೊಂದು ಇಲ್ಲ ಎನ್ನಿಸುವ ಅವುಗಳ ಲಕ್ಷಣಗಳನ್ನು ಸೂಚಿಸಲು ಪ್ರಾಸಂಗಿಕವಾಗಿ ಪ್ರಸ್ತಾಪಿಸಲಾದ ಈ ಕಾದಂಬರಿಗಳಲ್ಲದೆ. ‘ಬೆಟ್ಟದ ಜೀವ’, ‘ಅಳಿದ ಮೇಲೆ’, ‘ನಂಬಿದವರ ನಾಕ ನರಕ’, ‘ಮೂಕಜ್ಜಿಯ ಕನಸುಗಳು’- ಇಂಥ ಇನ್ನೂ ಹಲವು ಕಾದಂಬರಿಗಳು ಎಲ್ಲ ಕಾಲದ ಓದುಗರ ಕೃತಿಗಳಾಗಿವೆ. ಇಂಥ ಅನೇಕ ಕಾದಂಬರಿಗಳ ಮೂಲಕ ಕಾರಂತರು ಆಧುನಿಕ ಭಾರತದ ಸಾಮಾಜಿಕ-ಸಾಂಸ್ಕೃತಿಕ-ವೈಚಾರಿಕ ಬದುಕನ್ನು ಅದರ ಚಲನಶೀಲತೆಯೊಂದಿಗೆ ಹಿಡಿದಿರಿಸಿದ್ದಾರೆ.

ಈ ಸಂದರ್ಭದಲ್ಲಿ ಕುತೂಹಲಕ್ಕಾಗಿ ಎತ್ತಬಹುದಾದ ಪ್ರಶ್ನೆ ಎಂದರೆ ಕಡಲತೀರದಲ್ಲೇ ಬದುಕಿದ ಕಾರಂತರು, ಚೋಮನಂಥ ಅಸ್ಪೃಶ್ಯನ ತಲ್ಲಣಗಳನ್ನು, ಪಶ್ಚಿಮಘಟ್ಟದ ಮಲೆಕುಡಿಯರ ಬದುಕನ್ನೂ ಚಿತ್ರಿಸಿದ ಕಾರಂತರು, ಯಾಕೆ ಸಮುದ್ರೋಪಜೀವಿಗಳಾದ ಮೊಗೇರರ ಬದುಕನ್ನು ತಮ್ಮ ಕಾದಂಬರಿಯ ವಸ್ತುವನ್ನಾಗಿ ಮಾಡಿಕೊಳ್ಳಲಿಲ್ಲ? ಅದರ ಬದಲು ದಕ್ಷಿಣ ಕನ್ನಡ ಜಿಲ್ಲೆಯ-ಬಹುಮಟ್ಟಿಗೆ ಒಂದೇ ವರ್ಗದ ಬದುಕು ಯಾಕೆ ಅವರ ಕಾದಂಬರಿಗಳ ಉದ್ದಕ್ಕೂ ಕಾಣುತ್ತದೆ? ಯಾವುದೇ ಬರಹಗಾರನ ಬಗ್ಗೆ ಈ ಬಗೆಯ ಪ್ರಶ್ನೆಗಳನ್ನು ಎತ್ತುವುದೇ ಸರಿಯಲ್ಲವೇನೋ. ಕೇರಳದ ತಕಳಿ ಶಿವಶಂಕರ ಪಿಳ್ಳೆಯವರ ಚೆಮ್ಮೀನ್‌ದಂಥ ಕಾದಂಬರಿ ಕಡಲತೀರದ ಕೆಳವರ್ಗದ ಜನರ ಬದುಕನ್ನು ಅದ್ಭುತವಾಗಿ ಚಿತ್ರಿಸುತ್ತ, ಕಡಲನ್ನು-ಅದರ ವೈವಿಧ್ಯಗಳಲ್ಲಿ ಸೆರೆಗೈಯುತ್ತ, ಅದನ್ನೊಂದು ರೂಪಕವನ್ನಾಗಿ ಪರಿವರ್ತಿಸುತ್ತದೆ. ಅಷ್ಟರಮಟ್ಟಿಗೆ ಕಡಲು ಅವರ ಪ್ರಜ್ಞೆಯನ್ನು ಪ್ರವೇಶಿಸಿದೆ. ಹಾಗೆ ನೋಡಿದರೆ ಕಡಲು ಇಷ್ಟರಮಟ್ಟಿಗೆ ಕಾರಂತರನ್ನು ಕಾಡಿದಂತೆ ಕಾಣುವುದಿಲ್ಲ. ಕನ್ನಡದಲ್ಲಿ ಕುವೆಂಪು ಅವರನ್ನು ಕಾಡಿನ ಕವಿ ಎಂದೂ ಕಾರಂತರನ್ನು ಕಡಲತೀರದ ಭಾರ್ಗವ ಎಂದೂ ಕರೆಯಲಾಗಿದೆ. ಆದರೆ ಕಡಲ ತೀರದ ಈ ಭಾರ್ಗವರಿಗೆ ಕಡಲು ಯಾಕೆ ಬಹುದೊಡ್ಡ ಆಕರ್ಷಣೆಯಾಗಿ ತೋರಲಿಲ್ಲ? ಕುವೆಂಪು ಅವರಿಗೆ ಸಹ್ಯಾದ್ರಿಯ ಅರಣ್ಯ ಪರಿಸರ ಹೇಗೋ, ಕಾರಂತರಿಗೆ ಕಡಲು ಹಾಗೆ- ಎಂದು ಭಾವಿಸಲು ಸಾಧ್ಯವಾಗದಿರುವುದು ಈ ಕಾರಣದಿಂದಲೇ. ಬಹುಶಃ ಕವಿಯಾದ ಕುವೆಂಪು ಅವರು ನಿಸರ್ಗವನ್ನು ನೋಡುವ ದೃಷ್ಟಿಕೋನಕ್ಕೂ, ಕಾರಂತರು ನಿಸರ್ಗವನ್ನು ನೋಡುವ ದೃಷ್ಟಿಕೋನಕ್ಕೂ ಇರುವ ವ್ಯತ್ಯಾಸವೆ ಇದಕ್ಕೆ ಕಾರಣವಿರಬಹುದು. ಕುವೆಂಪು ಅವರಿಗೆ, ನಿಸರ್ಗ ಅವರ ತಲ್ಲೀನತೆಯ, ರಸಾನುಭೂತಿಯ, ಸೌಂದರ್ಯದ ಹಾಗೂ ಅಧ್ಯಾತ್ಮಿಕಾನುಭವಗಳ ವಸ್ತುವಾದರೆ, ಕಾರಂತರಿಗೆ ನಿಸರ್ಗ ಒಂದು ಸವಾಲಿನ, ಮನುಷ್ಯ ಅದರೊಂದಿಗೆ ಹೋರಾಡಬೇಕಾದ ಒಂದು ವಾಸ್ತವದಂತೆ ತೋರುತ್ತದೆ.

ಕಾರಂತರ ಸಾಹಿತ್ಯ ನಿರ್ಮಿತಿಯ ಹಿಂದೆ ಇರುವುದು. ಇದೇ ನಿಚ್ಚಳವಾದ ವಾಸ್ತವ ನಿಷ್ಠೆ ಮತ್ತು ಹರಿತವಾದ ವೈಚಾರಿಕತೆ. ವೈಚಾರಿಕತೆಯ ದೃಷ್ಟಿಯಿಂದ ಇವರ ಜತೆ ನಿಲ್ಲಬಲ್ಲವರು ಬಹುಶಃ ಕುವೆಂಪು ಒಬ್ಬರೇ. ಯಾಕೆಂದರೆ ಈ ದೇಶದ ಚರಿತ್ರೆಯನ್ನು, ಪರಂಪರೆಯನ್ನು, ಸಂಸ್ಕೃತಿಯನ್ನು ಆರೋಗ್ಯ ಪೂರ್ಣವಾದ ಚರ್ಚೆಗೆ ಮತ್ತು ಚಿಕಿತ್ಸೆಗೆ ಗುರಿಪಡಿಸಿದವರು ಕನ್ನಡದಲ್ಲಿ ಕುವೆಂಪು ಮತ್ತು ಕಾರಂತರು, ಇವರಿಬ್ಬರೇ. ಆದರೆ ಒಂದು ವ್ಯತ್ಯಾಸ: ಕುವೆಂಪು ಪರಮ ಆಸ್ತಿಕರು, ಅಧ್ಯಾತ್ಮದಲ್ಲಿ ನಂಬಿಕೆ ಇಟ್ಟುಕೊಂಡವರು, ಅತೀತವಾದಿಗಳು. ಆದರೆ ಕಾರಂತರು, ದೈವದ ಹಂಗಿಲ್ಲದೆ ಬದುಕಿದವರು, ಅಧ್ಯಾತ್ಮ-ಅನುಭಾವಗಳ ಬಗ್ಗೆ ತಟಸ್ಥರಾದವರು; ಇರುವ ಬದುಕನ್ನು ಅದು ಇದ್ದಂತೆಯೇ ಒಪ್ಪಿಕೊಂಡು, ಅದನ್ನು ಉತ್ಕಟವಾಗಿ ಪ್ರೀತಿಸುವುದೇ ಜೀವನದ ಉದ್ದೇಶ ಎಂದು ತಿಳಿದವರು. ‘ಬಾಳ್ವೆಯೆ ಬೆಳಕು’-ಎಂಬ ಅವರ ಕೃತಿಯ ಈ ಶೀರ್ಷಿಕೆಯೆ ಅವರ ಬದುಕಿನ ಸೂತ್ರ. ಇದು ಅವರ ಕಾದಂಬರಿಗಳ ಹಿಂದಿರುವ ವೈಚಾರಿಕ ಭಿತ್ತಿ. ಅವರ ಕಾದಂಬರಿಯ ಎಲ್ಲ ಪಾತ್ರಗಳೂ ಬದುಕನ್ನು ಒಂದು ಅನಿವಾರ್ಯವೆಂಬಂತೆ, ಸವಾಲೆಂಬಂತೆ ಒಪ್ಪಿಕೊಂಡವರೇ. ಮನುಷ್ಯ ಮಾತ್ರದವರು ಸಹಿಸಲು ಸಾಧ್ಯವಿಲ್ಲ ಎಂಬಂಥ ಕಷ್ಟಗಳನ್ನು ಎದುರಿಸಿ ನಿಲ್ಲುವ ಮಾನವೀಯ ಸತ್ವ ಉಳ್ಳವರು. ಹೀಗೆ ವಾಸ್ತವವನ್ನು ಎದುರಿಸದ, ಜೀವನದ ವಿಮುಖೀ ನಿಲುವಿಗೆ ಜೋತುಬೀಳುವ ಡೋಂಗೀ ವೈರಾಗ್ಯದ ಬಗ್ಗೆ ಕಾರಂತರಿಗೆ ಕೋಪ. ಸೋಗಿನ ಅಧ್ಯಾತ್ಮದ ಬಗ್ಗೆ ತಿರಸ್ಕಾರ. ಪ್ರತಿಯೊಬ್ಬರೂ ಅವನವನ ಬದುಕಿಗೆ ಅವನೇ ಹೊಣೆಗಾರ; ಮನುಷ್ಯ ತನ್ನ ಬದುಕಿನ ಸಮಸ್ಯೆಗಳಿಗೆ ತನ್ನ ಸ್ವಾನುಭವದ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಬೇಕೇ ಹೊರತು ಎರವಲು ತಂದ ವಿಚಾರಗಳ ಮೇಲಾಗಲೀ ಅವರಿವರ ವಿಚಾರಗಳ ಮೇಲಾಗಲೀ ಅವಲಂಬಿಸಬಾರದು- ಎನ್ನುವುದು ಕಾರಂತರ ನಿಲುವು. ಮೂಲತಃ ಕಾರಂತರು ಪ್ರತಿಪಾದಿಸುವುದು ಪೌರುಷ ಪ್ರಧಾನವಾದ ಸ್ವಾವಲಂಬನೆಯನ್ನು. ಮನುಷ್ಯ ಹೀಗೆ ಸ್ವಾವಲಂಬಿಯಾಗಬೇಕಾದರೆ, ತನಗೆ ತನ್ನಲ್ಲಿ ದೃಢವಾದ ವಿಶ್ವಾಸವಿರಬೇಕು. ಜತೆಗೆ ಧೈರ್ಯವಿರಬೇಕು. ಇದಕ್ಕೆ ಪೂರಕವಾಗಿ-ಕನ್ನಡ ವಿಮರ್ಶೆ ಈಗಾಗಲೇ ಗುರುತಿಸಿರುವಂತೆ- ಅವರು ಎತ್ತಿ ಹಿಡಿಯುವ ಮತ್ತೊಂದು ಪರಿಕಲ್ಪನೆ. ‘ಸಾಮಾಜಿಕ ಋಣ’ವನ್ನು ಕುರಿತದ್ದು. ಅದೆಂದರೆ ಮನುಷ್ಯರಾದ ನಾವು ಈ ಸಮಾಜದಿಂದ ಪಡೆದದ್ದಕ್ಕಿಂತ, ಕೊಟ್ಟದ್ದು ಮಿಗಿಲಾಗಿರಬೇಕು-ಎನ್ನುವುದು. ಇದು ಅಹಂಕಾರಜನ್ಯ ಪ್ರತಿಷ್ಠೆಯ ನಿಲುವಲ್ಲ; ಸ್ವಾಭಿಮಾನ ಮತ್ತು ಆತ್ಮಗೌರವಗಳಿಂದ ನಿಷ್ಪನ್ನವಾಗುವ ದಿಟ್ಟತನ. ಇಂಥ ಮನಃಸ್ಥಿತಿಗೆ ವಿಧಿ-ಕರ್ಮ-ದೈವಗಳ ಹಂಗಿಲ್ಲ. ಇದನ್ನು ನಾಸ್ತಿಕ ನಿಲುವೆಂದೂ ಹೇಳುವ ಹಾಗಿಲ್ಲ. ಇದನ್ನು ಅಜ್ಞೇಯತಾವಾದ ಎನ್ನಬಹುದೇನೋ. ಕಾಣದ ಅಥವಾ ಇಲ್ಲದ ದೇವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತ, ಕಣ್ಣೆದುರು ಕಾಣುವ ಈ ಜಗತ್ತು ಮುಖ್ಯ ಎನ್ನುವ ಈ ನಿಲುವು, ಬುದ್ಧನ ನಿಲುವಿಗೆ ಹತ್ತಿರವಾದದ್ದು. ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯಲ್ಲಿ, ಆ ಕೃತಿಯ ಕೇಂದ್ರ ಪಾತ್ರವಾದ ಮೂಕಜ್ಜಿ ಹೇಳುತ್ತಾಳೆ : ‘ಸಂತೆಗೆ ಬಂದವರು ತಮ್ಮ ತಮ್ಮ ಕೆಲಸ ಮುಗಿಸಿಕೊಂಡು ಹೊರಡಬೇಕು; ಬದಲು, ಸಿಕ್ಕವರ ಸಂಗಡ ಮಾತಿನ ಚಪಲ ಹೆಚ್ಚಿ ಸಮಯ ಕಳೆದರೆ ಏನಾದೀತು? ಬಂದ ಕೆಲಸವೇ ಮರೆಯಾಗುತ್ತದೆ. ನಾವು ನೀವೆಲ್ಲ ಮಾಡುತ್ತಿರುವುದು ಅದನ್ನೆ. ನಮಗೆ ದೇವರ ತಲೆ ಬುಡವೇ ಗೊತ್ತಿಲ್ಲ.’

ಕಾರಂತರಿಗೆ ದೇವರು ಧರ್ಮ ಇತ್ಯಾದಿಗಳಲ್ಲಿ ನಂಬಿಕೆಯಿಲ್ಲದಿದ್ದರೂ, ಹಾಗೆ ಅವುಗಳಲ್ಲಿ ನಂಬಿಗೆಯನ್ನಿರಿಸಿಕೊಂಡವರ ಮತ್ತು ಬದುಕುವವರ ಶ್ರದ್ಧೆಯನ್ನು ಎಂದೂ ಅಗೌರವದಿಂದ ಅಥವಾ ಹಗುರವಾಗಿ ನೋಡಿದವರಲ್ಲ. ತಮ್ಮ ಕಾದಂಬರಿಗಳಲ್ಲಿ ಹೀಗೆ ನಂಬಿದಂತೆ ಬದುಕುವ ಅನೇಕ ಮುದುಕಿಯರ ಪಾತ್ರಗಳನ್ನು ತಕ್ಕ ಗೌರವದಿಂದಲೆ ಚಿತ್ರಿಸಿರುವುದರ ಜತೆಗೆ, ಜನ ಸಮುದಾಯದ ಧಾರ್ಮಿಕ ವಿಧಿಗಳನ್ನೂ, ಆಚರಣೆಗಳನ್ನೂ ಉತ್ಸವಗಳನ್ನೂ ತುಂಬ ಸಂಭ್ರಮದಿಂದಲೇ ವರ್ಣಿಸುತ್ತಾರೆ. ಆದರೆ ಧರ್ಮದ ಹೆಸರಿನಲ್ಲಿ ನಡೆಯುವ ಸಾಮಾನ್ಯರ ಶೋಷಣೆಯನ್ನು ಕಾರಂತರು ಅಷ್ಟಾಗಿ ಗುರುತಿಸಿದಂತೆ ತೋರುವುದಿಲ್ಲ. ಮಠಗಳು ದೇವಾಲಯ ಹಾಗೂ ಧರ್ಮಕ್ಷೇತ್ರಗಳು, ದೇವರ ಹಾಗೂ ಧರ್ಮದ ಹೆಸರಿನಲ್ಲಿ ಪೋಷಿಸಿಕೊಂಡು ಬಂದ ಅವೈಚಾರಿಕತೆ ಹಾಗೂ ಅರ್ಥಹೀನ ಆಚರಣೆಗಳನ್ನು ಕಾರಂತರು ನೇರವಾಗಿ ವಿಮರ್ಶೆಗೆ ಗುರಿಪಡಿಸಿದಂತೆ ಕಾಣುವುದಿಲ್ಲ. ಈ ವಿಚಾರಗಳ ಬಗ್ಗೆ ಮತ್ತು ಹಿಂದೂ ಧರ್ಮದ ಪುರೋಹಿತ ಶಾಹಿಯ ಬಗ್ಗೆ ಕುವೆಂಪು ಅವರ ವೈಚಾರಿಕತೆಯಲ್ಲಿ ಕಾಣಿಸುವ ಸಿಟ್ಟು ಮತ್ತು ಕಾಳಜಿಗಳು ಕಾರಂತರಲ್ಲಿ ಇಲ್ಲ. ಬದಲು ತಾಟಸ್ಥ್ಯವಿದೆ. ಕ್ವಚಿತ್ತಾದ ವ್ಯಂಗ್ಯವಿದೆ. ಈ ವ್ಯಂಗ್ಯ ಹಾಗೂ ತಾಟಸ್ಥ್ಯವೆ, ಈ ವಿಚಾರಗಳ ಬಗ್ಗೆ ಕಾರಂತರ ಪ್ರತಿಕ್ರಿಯೆಗಳೆಂದು ಭಾವಿಸಬಹುದೇನೊ

ಕಾರಂತರನ್ನು ವಾಸ್ತವವಾದೀ ಕಾದಂಬರಿಕಾರರೆಂದೂ, ಅವರು ಕಣ್ಣಿಗೆ ಕಾಣಿಸುವ ವಾಸ್ತವ ಜಗತ್ತಿನ ಅನುಭವಗಳಿಗೆ ಮಾತ್ರ ಬದ್ಧವಾದವರೆಂದೂ ಸಾಹಿತ್ಯ ವಿಮರ್ಶೆ ಅವರನ್ನು ಚರ್ಚಿಸುತ್ತ ಬಂದಿದ್ದರೂ, ಈ ವಾಸ್ತವವಷ್ಟೆ ಪರಮಸತ್ಯವಲ್ಲವೆಂದೂ, ಮನುಷ್ಯನ ಅರಿವಿಗೆ ಎಟುಕದ ಇನ್ನೂ ಎಷ್ಟೋ ವಾಸ್ತವಗಳೂ ವಿಸ್ಮಯಗಳೂ ಇರುವ ಸಾಧ್ಯತೆಗಳನ್ನು ಕಾರಂತರು ನಿರಾಕರಿಸುವುದಿಲ್ಲ ಎನ್ನುವುದು, ಅವರ ವ್ಯಕ್ತಿತ್ವದ ಹಾಗೂ ಚಿಂತನೆಯ ಮತ್ತೊಂದು ಆಯಾಮವನ್ನು ಅನಾವರಣಗೊಳಿಸುವ ಸಂಗತಿಯಾಗಿದೆ. ಇಂಥ ಒಂದು ಮುಕ್ತವಾದ ವೈಚಾರಿಕವಾದ, ಅದಮ್ಯಜೀವನ ಪ್ರೀತಿಯ ಮತ್ತು ಪ್ರಯೋಗಶೀಲ ಪ್ರತಿಭೆಯ ಮಹಾನ್ ಲೇಖಕರನ್ನು, ಶಂಬಾ ಜೋಷಿಯವರು ‘ಈ ಶತಮಾನದ ಆಶ್ಚರ್ಯ’ ಎಂದದ್ದು ಆಶ್ಚರ್ಯವೇನೂ ಅಲ್ಲ!

ಯಾವುದೂ ಸಣ್ಣದಲ್ಲ ೨೦೦೪