ತಂದೆ ಕರಿಬಸಪ್ಪ
ತಾಯಿ ಚನ್ನಬಸಮ್ಮ
ಅತ್ತೆ ಗುರುಶಾಂತದೇವಿ
ಮಗನು ಗುರುಶಾಂತಪ್ಪ
ಬಲು ದೊಡ್ಡ ಸಾವುಕಾರಿ
ಅಯ್ಯಾ ಬುದ್ಧಿಯಿಂದ
ಓದೋ ಮಠಕೆ ಕಳಿಸಿ
“ಒಂಟಿ ಲೆಕ್ಕ ಜೋಡಿ ಲೆಕ್ಕ
ಮನದೊಳು ಲೆಕ್ಕ
ಗಟ್ಟಿಯ ಮಾಡಿ
ಸಾಯಂಕಾಲ ಮೂರು ಗಂಟೆವಳಗೆ
ಊರಿಗೆ ಬಾರೊ ಎನ್ನ ಮಗನೆ !”

ಹಂಗಂದು ಹೇಳಿದ ಮ್ಯಾಲೆ
ತಂದೆ ಕರಿಬಸಪ್ಪ
ತಾಯಿ ಚನ್ನಬಸಮ್ಮ
ಅತ್ತೆ ಗುರುಶಾಂತ ದೇವಿ
ಮಗನ ಸಂತುರಣೆ ಮಾಡಿ
ಐನೂರು ರೂಪಾಯಿ ಕೊಟ್ಟು
ರೇಶ್ಮೆ ವಸ್ತ್ರವ ಕೊಟ್ಟು

[ಬಂಗಾರದುಡುದಾರ ಕೊಟ್ಟು
ಸೊಂಟಕ್ಕೆ ನಡುಕಟ್ಟು ಕೊಟ್ಟು
ಕುಸ್ತಿ ಇಜಾರ ಕೊಟ್ಟು
ಒಂಟಿ ಬಾವಲಿ ಕೊಟ್ಟು
ಕಂಟಿ ಹಾರವ ಕೊಟ್ಟು
ಪುತ್ರನ ಕರಡಿಗೆ ಕೊಟ್ಟು
ಕಾಲಿಗೆ ಪಾಪಾಸ ಕೊಟ್ಟು
“ಹೋಗಿಬಾರೊ ಎನ್ನ ಮಗನೆ] ಸುಕ್ರವಾರ ಅದು ಪ್ಯಾಟೆ
ಸಂತೆ ಬಜಾರಕೆ ಹೋಗಿ
ಅಯ್ಯ ಸಂಗದ ಹುಡುಗರ
ಜೊತಿಯ ವಳಗೆ
ಮನದೊಳು ಲೆಕ್ಕವ ಗಟ್ಟಿಯಮಾಡಿ
ಸಾಯಂಕಾಲದ ಮೂರು ಗಂಟೆಯ ವಳಗೆ
ಊರಿಗೆ ಬಾರೊ ಎನ್ನ ಕಂದ

ಅಯ್ಯ ಹಂಗಂದ ಮಾತಿಗೆ
ತಂದೆ ಕರಿಬಸಪ್ಪ
ಮಗನ ಕರಕೊಂಡು ಬಂದ
ಶುಕ್ರವಾರ ಅದು ಪ್ಯಾಟೆ
ಸಂತೆ ಬಜಾರಿಗೆ ಬಂದು
ಅಂಗಡಿ ಸಾಲಿಗೆ ಹೋಗಿ
ಕಡಲೆ ಬೆಲ್ಲವ ಕೊಡಿಸಿ
ಮಗನ ಪುಂಜಿಯ ಮಾಡಿ
ಓದೊ ಮಠಕೆ ಹೋಗಿ
ನೋಡೊ ಒಳಗೆ
ಮೇಸ್ತ್ರೇ ಬಂದಿರಲಿಲ್ಲ
ಸಂಗದ ಹುಡುಗರ ಜೊತಿ ಒಳಗೆ
ಮನದೊಳು ಲೆಕ್ಕವ ಗಟ್ಟಿ ಮಾಡಿ
ಸಾಯಂಕಾಲ ಮೂರು ಗಂಟೆ ವಳಗೆ
ಊರಿಗೆ ಬಾರೊ ಎನ್ನ ಮಗನೆ
ಹಂಗಂದೇಳಿದ ಮ್ಯಾಲೆ
ತಂದೆ ಕರಿಬಸಪ್ಪ
ಮಗನ ಸಂತರುಣೆ ಮಾಡಿ
ಓದೋ ಮಠದಲ್ಲಿ ಬಿಟ್ಟು
ಊರಿಗೆ ಬಂದಾನು ನೋಡು
ಊರಿಗೆ ಬರುವೊ ಕಾಲದಲ್ಲಿ
ಗುದುಗೂರು ಚನ್ನಣ್ಣ ಬಂದು
ತನ್ನ ತೂಕ ಮಾಡಿ
ಮಗನ ಪೂಜೆಯ ಮಾಡಿ
ಮಗನಿದ್ದ ಚಂದಾವ ನೋಡಿ
ಮಗನಿದ್ದಂದಾವ ನೋಡಿ
“ಅಯ್ಯಯ್ಯೊ ಗುರುಶಾಂತಪ್ಪ
ನಿಮ್ಮಪ್ಪ ಸೋದರುಮಾವ
ಇಲ್ಲಾಕೆ ಬಂದೆ ನೀನು ?
ಇಷ್ಟು ಬಂಗಾರನಿಟ್ಟು
ಇಷ್ಟು ಆಭರಣ ತೊಟ್ಟು
ಓದೊ ಮಠಕೆ ಬಂದು
ವಳಗೆ ಒಬ್ಬಾನೆ ಹೋಗುತೀಯ
ಬಾರಪ್ಪ ಎನ್ನ ಮಗನೆ
ಮೂವರು ಮಕ್ಕಳಲ್ಲಿ
ನೀನೊಬ್ಬ ಮಗನೆ ಹೊರತು’

ಹಂಗಂದು ನೋಡಯ್ಯ
ಮಗನ ಪುಂಜಿಯ ಮಾಡಿ
ಮಗನ ಮಡಲಿಗೆ ಕಟ್ಟಿ
ಬಿಲ್ಲೂರ ಸ್ವಾಮಿತಕ್ಕೆ
ಮಗನ ಕರಕೊಂಡು ಬಂದು
ಸೊಂಟದೊಳ್ಳ ಕಾವು ಬಿಚ್ಚಿ
ಕಂದನ ಕೈಕಾಲು ಕಟ್ಟಿ
ಐನೂರು ರೂಪಾಯಿ ತೆಗೆದ
ರೇಶ್ಮೆ ವಸ್ತ್ರಾವ ತೆಗೆದ
ಬಂಗಾರದ ಉಡುದಾರ ತೆಗೆದ
ಸೊಂಟದ ನಡುಕಟ್ಟ ತೆಗೆದ
ಕುಸ್ತಿ ಇಜಾರ ತೆಗೆದ
ಒಂಟಿ ಬಾವಲಿ ತೆಗೆದ
ಪುತ್ರನ ಕರಡಿಗೆ ತೆಗೆದ
ಮುಂಗೈ ಗಿಲಕಿಯ ತೆಗೆದ
ಮಂಡೆ ರುಮಾಲು ತೆಗೆದ
ಕಾಲೊಳ್ಳ ಪಾಪಾಸ ತೆಗೆದ
’ದಮ್ಮಯ್ಯ ಕಾಣೊ ಚನ್ನಮಾವ
ಬಾವೀಗೆ ಹಾಕು ಬ್ಯಾಡ
ಮೂವರು ಮಕ್ಕಳಲ್ಲಿ
ನಾನೊಬ್ಬ ಮಗನೆ ಹೊರತು
ಎಂದು ಬೇಡಿದ ಕಂದ
ಎಷ್ಟು ಬೇಡಿದರೂ
ಕೇಳದಲೆ ನೋಡಯ್ಯ
ಗುದಗೂರು ಚನ್ನಣ್ಣಸ್ವಾಮಿ
ಬಾವೀಲಿ ಹಾಕಿದ ನೋಡು |

ತುಂಬಿದ ಬಳ್ಳಾರಿ ವಳಗೆ
ಕಂದ ಮಾಯವಾಯಿತೆಂದು
ಊಜೆ ಹೋಯಿತು
ಮೋಸ ಮಾಡಿ ಎಮ್ಮನ್ನ |*      ತುಂಬಿದ ಬಳ್ಳಾರಿ ವಳಗೆ; ನಾಗೇಗೌಡ ಎಚ್.ಎಲ್. ಪದವವೆ ನಮ್ಮ ಎದೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು – ೧೯೭೬