ಹರಹರ ಹರನೆ ಜಯತೊ – ಹರಮೂರು
ಪುರವ ಗೆದ್ದವನೆ ಜಯತೊ
ಉರಗಭೂಷಣ ಜಯತೊ ಗರಳಕಂಧರ ಜಯತೊ
ಗಿರಿಜಾಶಂಕರನೆ ಜಯತೊ | ಸೊಲ್ಲು |

ಗಾಂಧಾರಿ ದ್ರುತುರಾಷ್ಟ್ರರು – ಕೊಂತಮ್ಮ
ವಿದುರಾನು ಸಂಜೇಯರು
ಲೋಕದಲ್ಲಿ ಕಂಡದ್ದು ಉಂಡಿದ್ದು ನೋಡಿದ್ದು
ಸಾಕು ಸಾಕೆಂದರಾಗ |

ವನಕೆ ನಾವೊರಡಬೇಕು – ಆಶ್ರಮದ
ಜೀವನವ ನಡೆಸಬೇಕು
ತ್ರಪಸ ಮಾಡಲು ಬೇಕು ಮುಕುತಿ ಪಡೆಯಲು ಬೇಕು
ಪರಮಾತ್ಮನ ಕಾಣಬೇಕು |

ಹೊರಟು ನಿಂತಾಗ ವನಕೆ – ಕೊಂತ್ಯಮ್ಮ
ಪುತ್ತುರರ ಕರೆದಳಾಗ
ಕುಂತಲ್ಲಿ ನಿಂತಲ್ಲಿ ಕೊಂತಮ್ಮನ ಮಕ್ಕಳ
ಹೆಸರುಳಿಯಬೇಕೆಂದಳು – ಕೊಂತ್ಯಮ್ಮ
ಹೆಸರು ಕಾಳೆರಚಿದಳು |

ವನಕೆ ಹೋಗುವ ಹೊತ್ತಲಿ – ಕೊಂತಮ್ಮ
ಮೊಳ್ಳಿಂದ ಅವರೆಕಾಳ
ತಗುದು ಧರ್ಮರ ಕೈಗೆ ಕೊಡುತ ಅಂದಳು ಕೊಂತಿ
ಪಾಂಡವರು ಅವರೆ ಅವರೆ |

ಪಾಂಡವರು ಅವರೆ ಅವರೆ – ಮಕ್ಕಳೆ
ಪಾಂಡವರು ಅವರೆ ಅಂತ
ಜಗತಿಳಿದುಕೊಳ್ಳಲಿ ಅವರೆ ಬಿತ್ತೀರಂತ
ಅವರೆಕಾಳನು ಕೊಟ್ಟಳು – ಕೊಂತ್ಯಮ್ಮ
ಅವರೆ ಬಿತ್ತಿರಿ ಅಂದಳು |

“”ಧರುಂರಾಯ ತಕ್ಕೊಳ್ಳಪ್ಪ ಈ ಅವರೆ ಕಾಳ್ಗಳ
ಗಜಗೌರಿರೊತ ಮಾಡುವಾಗ
ದೇವ್ಲೋಕದಿಂದ ಬಂದಿದ್ದ ಕಾಳುಗಳಲ್ಲಿ
ಈ ಅವರೆ ಕಾಳು ಪಾಂಡವರು ತಕೊಂಡಿದ್ದು
ನಾನು ಈ ನೆಲದ ಮಗಳು

ಈ ನೆಲದ ಮೇಲೆ ನ್ಯಾಯನೀತಿ ಸತ್ಯಧರ್ಮಗಳು ಇರೋನ್ಗಂಟ
ಪಾಂಡವರು ಅವರೆ ಅಂತ
ಈ ಅವುರೆಕಾಳ ನೋಡ್ಕೊಂಡು
ಜಗತ್ಯದ ಜನ ತಿಳುಕೊಳ್ಳಿ ಕಾಣ್ರಪ್ಪ
ಪಾಂಡವರು ಧರ್ಮಕ್ಕಾಗಿ ಹೋರಾಡ್ದೋರು ಅನ್ನುವಂತಾದ್ದಕ್ಕೆ
ಈ ಅವರೆಕಾಳು ಸಾಕ್ಷಿ ಆಗಿರಲ್ರಪ್ಪ
ನಿಮುಗೆ ಒಳ್ಳೇದಾಗಲಿ
ನಾವಿನ್ನು ಗಿಡೀಗೆ ಹೋಯ್ತಿದ್ದೀವಿ
ನಿಮ್ಮ ಹೆಸರು ಹಸುರಾಗಿರಲಿ ಕಣ್ರಪ್ಪ”
ಅಂತ್ಹೇಳಿ ಮಕ್ಕುಳ್ಗೆ ಆಸುರ‍್ವಾದ ಮಾಡುದ್ಲು
ಗಾಂಧಾರಿ ದ್ರುತುರಾಷ್ಟ್ರ ವಿದುರ ಸಂಜೇಯರು
ಕೊಂತಮ್ಮನ ಕರ‍್ಕೊಂಡು ಕಾಡುದಾರಿ ಹಿಡುದ್ರು
ಧರುಂರಾಯ ಒಂದು ಗಳುಗೆ ಕಣ್ಮಚ್ಚುಕೊಂಡು ನಿಂತಿದ್ದೋನು

ಆತ್ರುಸ್ದಂಗೆ ಕಣ್ಬುಟ್ಟು
“ಭೀಮಾರ್ಜುನರೆ ನಕುಲ ಸಾದೇವರೆ
ದ್ರೋಪತಾ ಹೊರಡಿ – ಹೊರಡಿ
ನಾವು ಸೊರ‍್ಗಾರೋಣ ಮಾಡ್ಬೇಕು” ಅಂತ್ಹೇಳಿ
ತುದುಗಾಲಲ್ಲಿ ಹೊಂಟು ನಿಂತ್ರು –

ಪಾಂಡವರು ಸೊರ‍್ಗಾರೋಣ – ಮಾಡುವರು
ಅನುತ್ಹೇಳಿ ಊರ ಜನರು
ಅರಮನೆಯ ಬಾಕಲಲಿ ಬಂದು ನಿಂತಿರುವಾಗ
ಕರವೆತ್ತಿ ಕೈ ಮುಗುದರು – ಧರ್ಮರು
ಕರವೆತ್ತಿ ಕೈ ಮುಗುದರು |

ಧರುಂರಾಯ ಕೈಯ ಮುಗುದು – ಬಂದೋರ‍್ಗೆಲ್ಲ
ಕೇಳೀದ ವಸ್ತೂಗಳ
ಕೇಳೀದ ವಸ್ತ್ರಗಳ ಕೇಳೀದ ವಡವೆಗಳ
ತೆಗೆತೆಗೆದು ಕೊಡುತಿದ್ದರು – ಧರ್ಮರು
ತೆಗೆತೆಗೆದು ಕೊಡುತಿದ್ದರು |

ಮುತ್ತು ರತ್ನವ ಕೊಟ್ಟರು – ಪಾಂಡವರು
ವಜ್ರ ವೈಡೂರ್ಯ ಕೊಟ್ಟರು
ಲಗಲಾಣ್ಯ ಕೊಟ್ಟರು ಗೋವುಗಳ ಕೊಟ್ಟರು
ಬೇಕಾದುದನ್ನೆ ಕೊಟ್ಟರು – ಪಾಂಡವರು
ಕೇಳಿದುದನೆ ಕೊಟ್ಟರು |

ಛತ್ರ ಚಾಮರ ಕೊಟ್ಟರು – ಪಾಂಡವರು
ಸತ್ತೀಗೆ ಸೂರಿಪಾನಿ
ರಥಕುದುರೆ ಆನೆಗಳ ಬೆಲೆಬಾಳೂ ವಸ್ತುಗಳ
ಕೇಳಿದವರಿಗೆ ಕೊಟ್ಟರು |

ಹೂವೀನ ಮಳೆ ಸುರಿಯಿತು – ಆಕಾಸ್ದ
ತುಂಬೆಲ್ಲ ಹೂವಾಯಿತು
ಸಿದ್ಧರು ಸಾಧ್ಯರು ಯಕ್ಷ ಕಿನ್ನರರೆಲ್ಲ
ಹೂವುಗಳ ಮಳೆ ಕರೆದರು |

ಹಸ್ತೀನಾಪುರವ ಬಿಟ್ಟು – ಪಾಂಡವರು
ಊರ ಬಾಕಲಿಗೆ ಬರಲು
ಹೊಲಗದ್ದೆ ತೋಟದಲಿ ಗೇಯುತಿದ್ದ ರೈತರು
ಜೋಡಿ ಓಡೋಡಿ ಬಂದರು |

“”ಸ್ವಾಮಿ ನೀವು ಸೊರ‍್ಗಾರೋಣ ಮಾಡಕೆ ಹೊಂಟಿದ್ದೀರಿ ಅಂತ ತಿಳೀತು
ನೀವು ಸತ್ಯವಂತರು ಧರ್ಮಾತ್ಮರು
ನ್ಯಾಯನೀತಿ ಬಲ್ಲೋರು
ನೀವು ನಮ್ಮುನ್ನ ಬಿಟ್ಟು ಹೋದರೆ
ನಮ್ಮ ಜೊತೆ ಸತ್ಯಧರ್ಮ ನ್ಯಾಯನೀತಿ ಒಂದೂ ಉಳೀದಂಗೆ
ಈ ಧರಣಿ ನಾಶವಾಗುವುದಿಲ್ಲವೆ ?
ನಮ್ಮುನ್ನ ಮಾತ್ರ ಬಿಟ್ಟೋಗಬೇಡಿ
ಹಂಗೆ ಹೋಗ್ಲೇ ಬೇಕೂ ಅನ್ನೋದಾದ್ರೆ
ನಮ್ಮುನ್ನು ನಿಮ್ಮ ಜೊತೆ ಕರ‍್ಕೊಂಡೋಗಿ” ಅಂದ್ರು
’ಅಪ್ಪಾ ಒಕ್ಕಲಿಗರೇ
ತಾಯಿ ಕೊಂತಮ್ಮ ಈ ನೆಲದ ಮಗಳು
ತಂದೆ ಪಾಂಡುರಾಜ ಈ ನಾಡಿನ ರಾಜ
ಅಂತಾವುರ ಮಕ್ಕಳಾದ ನಾವು
ಸೊರ‍್ಗಾರೋಣ ಮಾಡ್ದೆ ಉಳಿಯೋಂಗಿಲ್ಲ
ನಾವು ಸೊರ‍್ಗಾರೋಣ ಮಾಡುದ್ರೂ
ಮುಂದೆಂದ್ಗೂ ನಿಮ್ಮ ಜೊತೇಲಿದ್ದೇ ಇರ್ರೀವಪ್ಪ
ಅದು ಹೆಂಗೇ ಅಂದ್ರೆ
ನೋಡಿ ನಮ್ಮ ತಾಯಿ ಕೊಂತಮ್ಮ
ಗಜಗೌರಿ ರೊತ ಮಾಡಿದಂತ ಸಮಯದಲ್ಲಿ
ದೇವುಲೋಕದಿದ ಬಂದ ದವಸ ಧಾನ್ಯಗಳಲ್ಲಿ
ಅವುರೆ ಕಾಳ್ಗಳ ತಗದು ಮಡೀಕೊಂಡಿದ್ರು
ಆ ಅವುರೆ ಕಾಳ್ಗಳ ಕೊಟ್ಟವುರೆ
ನೀವು ಸಾಲೊಡ್ಕೊಂಡೋದ್ರೆ
ನಾನು ಅವುರೇ ಕಾಳ ಬಿತ್ತುತೀನಿ
ಈ ಅವುರೇ ಕಾಳಿನ ಕಾರ‍್ಣದಿಂದ
ಎಲ್ಲೀವರೆಗೆ ಈ ತಾಯಿ ನೆಲದಲ್ಲಿ
ಸತ್ಯ ಧರ್ಮ ನ್ಯಾಯ ನೀತಿ ಇರ‍್ತದೊ
ಅಲ್ಲೀನ್ಗಂಟ ಪಾಂಡವರು ಅವರೆ ಅಂತ ತಿಳ್ಕೊಳ್ರಪ್ಪ
ನಡೀರಿ ನೀವು ಉತ್ಕೊಂಡೋಗಿ
ನಾವು ಬಿತ್ಕೊಂಡೋಯ್ತೀನಿ” ಅಂತ್ಹೇಳಿ
ಧರ್ಮರಾಯರು ಅವುರೇಕಾಳನ್ನು ಬಿತ್ಕೊಂಡೋಯ್ತಿದ್ದಾರೆ –

ಅವರೇಯ ಬಿತ್ತಿದರು – ಪಾಂಡವರು
ಅವರೆ ಅಂತ ಸಾರಿದರು
ಅವುರೇಯ ಗಿಡ ಚಿಗಿತು ಹೂಕಚ್ಚಿ ನಗುವಾಗ
ಪಾಂಡವರ ಹೆಸರಾಯಿತು – ಜಗತ್ಯದಲಿ
ಪಾಂಡವರ ಹೆಸರಾಯಿತು |

ರೈತರೆಲ್ಲ ಹೇಳ್ತಿದ್ದಾರೆ :
“”ಕೊಂತಮ್ಮ ತಾಯಿ ನೀವು ಕೊಟ್ಟಂಥ ಈ ಅವರೆಕಾಳು                  ೧೧೦
ಹೂಕಚ್ಚಿ ಫಲಫಲಾ ಅಂತಾ ಅದೆ
ಇದು ಕಾರ್ತೀಕಮಾಸ ನನ್ನವ್ವ
ಪ್ರತೀ ಕಾರ್ತಿಕದಲ್ಲೂ ಈ ಅವರೇಗಿಡ ಹೂಕಚ್ಚಿದಾಗ
ನಿನ್ನ-ನಿನ್ನ ಮಕ್ಳ ಸೊರಣೆ ಮಾಡಿ
ಕೊಂತಮ್ಮನ ಪೂಜೆ ಅಂತ್ಹೇಳಿ
ನಿನ್ನ ಪೂಜೆ ಮಾಡ್ತೀವಮ್ಮ” ಅಂದ್ರು –
ಇತ್ಲಾಕಡೆ ಯಮಲೋಕದ ನರಕದಲ್ಲಿ
ಶಕುನೀನೂ ದುರ್ಯೋದನೂ
ಒಂದೇ ಒಂದು ಎಳೆ ನೂಲುನ ತಂತೀಲಿ ನ್ಯಾತಾಡ್ತಾ ಅವುರೆ
ಅವುರು ನ್ಯಾತಾಡ್ತಾ ಅವುರಲ್ಲ                 ೧೨೦
ಅದರ ಕೆಳಗೆ ಮಲಮೂತ್ರದ ಗುಂಡಿ ಅದೆ
ಆ ಒಂದು ಎಳೆ ದಾರದಷ್ಟು ಪುಣ್ಯ ಅವುರ‍್ಗೆ ಉಳುದದೆ
ಹಿಂಗೆ ನ್ಯಾತಾಡ್ತಾ ಇರೋಗ ಶಕುನಿ
ದುರ್ಯೋದನನ್ನು ನೋಡಿ
ಇವನಿಗೆ ಇನ್ನೂ ತಕ್ಕನಾದ ಶಾಸ್ತಿ ಮಾಡಿಬೇಕೂಂತ್ಹೇಳಿ

“”ವಸ್ತ ದುರ್ಯೋದ
ನೀನು ಎಷ್ಟು ಹೋರಾಟ ಮಾಡಿ ಏನು ಬಂತು ?
ಎಷ್ಟು ಛಲ ಮಾಡಿ ಏನು ಬಂತು ?
ಅಲ್ನೋಡು ಭೂಮೀಲಿ ಧರುಂರಾಯ
ಪಾಂಡವರು ’ಅವರೆ’ ಅಂತ ಅವರೇಕಾಳ ಬಿತ್ಕೊಂಡು ಬರ್ತಿದ್ದಾನೆ
ಪಾಂಡವರು ಅವರೆ ಅಂದ್ರೆ ಕೌರವರು ಇಲ್ಲ ಅಂತಲ್ಲವ ?
ಹೇಳು ವಸ್ತ ಕೌರವ !”
“”ಮಾವ ನಿಜ ನಾನು ಕೌರವ
ಧರ್ಮರಾಯ ಬಿತ್ಕೊಂಡು ಬರೋ ಅವರೇ ಗಿಡದ ಕಾಯ್ಗಳನೆಲ್ಲ
ನಾನು ಕವರೂವ ನಾನು ಕೌರವ
ಈಗ ನನ್ನ ಶಕ್ತಿ ಸಾಹಸಗಳ ನೋಡು
ಈಗ ನೋಡು ನಾನು ಚಿಟ್ಟೆಮಳೆ ಹುಯ್ಯಿಸ್ತೀನಿ
ಧರ್ಮರಾಯನ ಅವರೇಗಿಡಗಳ್ಗೆಲ್ಲ
ಹಸುರ‍್ಹುಳ ಕಂಬ್ಳಿಹುಳ ಚಿಟ್ಟೆ ಹುಳಹುಪ್ಪಿಗಳ ಉತ್ಪತ್ತಿ ಮಾಡ್ತಿದ್ದೀನಿ
ಗಿಡಗಳ್ನೆಲ್ಲ ಪುಟ್ಟುಗೆ ಹಾಳ್ಮಾಡ್ತೀನಿ
ಕಾಳ್ಗೊಳ್ನೆಲ್ಲ ನುಣ್ಣುಗೆ ಕವುರ‍್ಕೋತೀನಿ
ಹ್ಯಾಗಿದೆ ಮಾವ ನನ್ನ ತಂತು ?”
“”ವಸ್ತ ನಿನ್ನ ಮಾತೇ ಮಾತು
ನಿನ್ನ ಛಲವೇ ಛಲ
ನಡೀಲಿ ನಡೀಲಿ ನರಕದಲ್ಲೂ ನಿನ್ನ ದರಬಾರು !” –

ನರಕದ ಕೂಪದಲ್ಲಿ – ಕೌರವ
ಧರೆಗೆ ಮೊಕ ಮಾಡಿದನು
ಪಾಂಡವರು ಅವರೇಂತ ಅವರೆಗಿಡವಾಯ್ತೆಂದು
ಕಟಕಟನೆ ಹಲ್ಲ ಕಡಿದು – ಕೌರವ
ಕಟಕಟನೆ ಹಲ್ಲ ಕಡಿದು |

“”ಅವರೆಗಿಡ ಉಳಿಯದಂತೆ – ಪಾಂಡವರ
ಹೆಸರುಗಳು ಉಳಿಯದಂತೆ
ಚಿಟ್ಟೇಯ ಮಳೆಹೂದು ಚಿಟ್ಟೇಹುಳು ಆಗಿ
ಅವರೆಗಳ ನಾಶಮಾಡುವೆ – ನಾನಾದರೆ
ಅವರೆಗಳ ನಾಶ ಮಾಡುವೆ’ |

ಮಾವ ಒಪ್ಗೆ ಕೊಟ್ಟ ಅಂತ್ಹೇಳಿ
ಚಿಟ್ಟೆ ಮಳೆ ಹುಯ್ಸಕೆ ಸುರುಮಾಡ್ದ
ಹೂಕಚ್ಚಿ ಚೊಟ್ಟಾಗಿ ಕಾಯಾಗಿರೋ
ಅವರೆ ಗಿಡಗಳಿಗೆಲ್ಲ ಹಸ್ರುಳ ಕಂಬ್ಲೀಹುಳ
ಚಿಟ್ಟೆಹುಳ ಹುಳುಹುಪ್ಪಿಗಳು ಮುತ್ಕೊಂಡು
ಕಾಯ್ಗಳ್ನೆಲ್ಲ ಕವುರ‍್ಕೊತಾ ಅವೆ.
ಇದೇನು ಹಿಂಗಾಯ್ತಲ್ಲ ಅಂತ
ಧರುಂರಾಯ್ರುಗೆ ಐಚೋಜುಗವಾಯ್ತು
ಕತ್ತೆತ್ತಿ ಮೇಲುಕ್ಕೆ ನೋಡುದ್ರು
ದುರ್ಯೋದ ಕೇಕೆ ಹಾಕೊಂಡು ನೆಗ್ತಾ
ಚಿಟ್ಟೆ ಮಳೆ ಹುಯಿಸ್ತಾ ಇದ್ದಾನೆ.
ಆಗ ಧರುಂರಾಯ
“”ವಸ್ತ ನರುಕುಕ್ಕೋದ್ರೂ ನಿನ್ನ ನೀಚ ಬುದ್ಧಿ ಬಿಡ್ನಿಲ್ಲವಲ್ಲ ಇರ್ಲಿ –
ಎಲೋ ಎಲೋ ಕರ್ಮಾತ್ಮನೆ – ಛೇ ಕೌರವ
ನೀನು – ಚಿಟ್ಟೆಹುಳ ಆಗಿ ಸುರಿದರೆ
ವಿಷಾತಿ ಮಳೆಹೂದು ಚಿಟ್ಟೆ ಹುಳ ಸಾಯಿಸುವೆ
ತಿಳುಕೊಪ್ಪ ಮನಸಿನಲ್ಲಿ – ತಮ್ಮಯ್ಯ
ತಿಳುಕೊಪ್ಪ ಮನಸಿನಲ್ಲಿ” |
ಪರಮಾತ್ಮನ ಹೆಸ್ರೇಳಿ ಧರುಂರಾಯ್ರು
ವಿಷಾತಿ ಮಳೆ ಹೂಯಿಸ್ತ್ರು
ಆಗ ಇದ್ದಬದ್ದ ಹಸ್ರುಳ ಕಂಬ್ಳಿಹುಳ ಚಿಟ್ಟೆ ಹುಳ ಹುಳು ಹುಪ್ಪಿಗಳೆಲ್ಲ
ಮರೆಯಾಗಿ ಹೋದೋ
ಇತ್ಲಾಕಡೆ ನರಕದಲ್ಲಿ ಇದ್ದಂತ ದುರ‍್ಯೋದ್ನ
ಇದ್ದ ಒಂದು ಚೂರು ಪುಣ್ಯವೂ ತೀರೋಗಿ
ದಾರ ಕಿತ್ತು ಅವ್ನು ಮಲಮೂತ್ರದ ಗುಂಡಿಗೆ ಬಿದ್ದೋದ
ಅದ ನೋಡಿ ಶಕುನಿ
“ಓಹ್ಹೊಹ್ಹೊ’ ಅಂತ್ಹೇಳಿ ಅಬ್ರುಸ್ಕೊಂಡು ನೆಗತಾ ಅವ್ನೆ
“ದುರ್ಯೋದ, ನೀನು ಕರ್ಣುಂಗೆ ಉಪಕಾರ ಮಾಡಿದ್ದಷ್ಟೇ ನಿನ್ನ ಪುಣ್ಯ
ಅದೂ ಮುಗುದೋಗಿ ಈಗ ನೀನು
ಮಲಮೂತ್ರದ ಗುಂಡೀಲಿ ಒದ್ದಾಡ್ತ ಇರೋದ
ನೋಡಿ ನನುಗೆ ಬಾಳ ಆನಂದವಾಯಿತು
ನಿಂಗೆ ಹಿಂಗಾಗ್ಬೇಕು ಅಂತ್ಲೆ ನಾನು ತಂತು ಮಾಡ್ದೆ”
ಅಂತ್ಹೇಳಿ ಕೈತಪ್ಪಾಳೆ ತಟ್ಕೊಂಡು ನೆಗ್ತಾ ಅವ್ನೆ.
ದುರ್ಯೋದ ಕ್ವೋಪದಿಂದ ಬುಸ್ಗರೀತಾ ಅವುನೆ
“”ದುರ್ಯೋದ ನೀನು ನನ್ನ ನೀಚ ಅಂತಿದ್ದೀಯೆ
ನಾನಲ್ಲ ನೀಚ ನೀನು !
ನನ್ನ ಸೋದರರ‍್ನೆಲ್ಲ ನಾಶನ ಮಾಡಿದ್ಕೆ
ಇದು ನನ್ನ ಸೇಡು
ಈಗ ನನಗೆ ನೆಮ್ಮದಿ ಆಯ್ತು.
ನಿನ್ನ ಎಕ್ಕುಟ್ಸಿ ಕೆಟ್ಟು ಕೆರಾ ಹಿಡಿಯೋಂಗೆ ಈ ದಿನ ಮಾಡಿದ್ದೀನಿ
ನನ್ನ ಅಣ್ಣಂದಿರ ಆತ್ಮುಕ್ಕೆ ಸಾಂತಿ ಸಿಕ್ತು
ಇವತ್ತು ಸಾಂತಿ ಸಿಕ್ತು
ಯಾಕೆ ಹಂಗೆ ಕೆಕ್ಕುರುಸ್ಕೊಂಡು ನೋಡ್ತೀಯೆ ?
ಈಗ ನೀನು ಆ ಗುಂಡಿಯಿಂದ
ಮೇಲುಕ್ಕೆ ಬರ‍್ಬೇಕಾ ಬೇಡವ ?”
ದುರ್ಯೋದ ಹಲ್‌ಹಲ್ ಕಡೀತ “”ಬರ‍್ಬೇಕು” ಅಂದ
“”ಹಂಗಾದ್ಮೇಕೆ ನಾನು ಹೇಳುದಂಗ ಹೇಳುದ್ರೆ
ತಿರ‍್ಗಾ ಪುಣ್ಯ ಪ್ರಾಪ್ತುವಾಗಿ
ನೀನು ಮೇಲುಕ್ಕೆ ಬರ್ತಿಯೆ”
“”ಅದೇನೂಂತ ಹೇಳು |”
“”ಅದು ಇದು ಹೇಳು –
ಪಾಂಡವರ ಸತ್ಯವಾದರೆ – ಲೋಕದಲಿ
ಸ್ಥಿರಂಜಿಯಾಗಿ ನಿಲ್ಲಲಿ
ಪಾಂಡವರು ಅವರೇಂತ ಅವರೆಗಿಡ ನೋಡಿಕೊಂಡು
ಸತ್ಯವಂತರಾಗಿ ಬಾಳಲಿ – ಜನವೆಲ್ಲ
ಸತ್ಯವಂತರಾಗಿ ಬಾಳಲಿ” |
ಶಕುನಿ ಹೇಳ್ತಾ ಇದ್ರೆ ದುರ್ಯೋದ ಹಲ್‌ಹಲ್ ಕಡೀತವುನೆ
“”ಅಪ್ಪಾ ಮಾರಾಜ ಹೇಳುದ್ರೆ ಹೇಳು, ಬುಟ್ರೆ ಬುಡು
ನಾನೇನೂ ನೀನು ಮ್ಯಾಲುಕ್ಕೆ ಬರ್ಲಿ ಅಂತ ಹಂಗೆ ಹೇಳ್ದೆ
ಬ್ಯಾಡಾ ಅನ್ನೋದಾದ್ರೆ ಅಲ್ಲೇ ಇರು !”
ದುರ್ಯೋದ ಶಕುನಿಯ ಮನುಸ್ನಲ್ಲೆ ಬೋಯ್ತ ಅವನೆ ಹೊರುಕ್ಕೆ ಬರ‍್ನೇಬೇಕಲ್ಲ
“”ಮಾವ ಅದೇನು ಹೇಳು ಹೇಳ್ತೀನಿ”
“”ಆಗ್ಲೆ ಹೇಳಿದ್ರೆ ಏನಾಯ್ತಿತ್ತಪ್ಪ
ಹೋಗ್ಲಿ ಹೇಳು –
ಪಾಂಡವರ ಸತ್ಯವಾದರೆ – ಲೋಕದಲಿ
ಸ್ಥಿರಂಜಿಯಾಗಿ ನಿಲ್ಲಲಿ
ಪಾಂಡವರು ಅವರೇಂತ ಅವರೆಗಿಡ ನೋಡಿಕೊಂಡು
ಸತ್ಯವಂತರಾಗಿ ಬಾಳಲಿ – ಜನವೆಲ್ಲ
ಸತ್ಯವಂತರಾಗಿ ಬಾಳಲಿ” |
ಶಕುನಿ ಹೇಳ್ಕೊಟ್ಟಂಗೆ ದುರ್ಯೋದ ಹೇಳ್ದ
ಆಗ ದುರ್ಯೋದುಂಗೆ ಪುಣ್ಯ ಪ್ರಾಪ್ತಿಯಾಗಿ
ಮಲಮೂತ್ರದ ಗುಂಡಿಯಿಂದ ಮೇಲುಕ್ಕೆ ಬಂದ
ಮೇಲಕ್ಕೆ ಬಂದಿದ್ರೂವೆ ಕ್ವೋಪ ಅಂದ್ರೆ ಅಂತಿಂತೆ ಕ್ವೋಪುವಲ್ಲ ರಾಕ್ಷಕ್ವೋಪ ಬಂದು
ದಢದಢನೆ ಬಂದು ಶಕುನಿಯ ಝಾಡ್ಸಿ ಒದ್ದ
ಆ ಕೂಡಲೆ ಶಕುನಿ ನರಕದಿಂದ ಭೂಮಿಗೆ ಧೊಪ್ಪನೆ ಬಿದ್ದ
ಅವತ್ತಿನಿಂದ ಭೂಮಿ ಮೇಲೆ
ಶಕುನಿ ಸಂತಾನ ಹೆಂಗೋ ಉಳುಕೊಂಡದೆ
ಕಲಿಂಗ ಕಳಿಯೋನ್ತನಕೆ
ಶಕುನಿ ಸಂತಾನ ಇದ್ದೇ ಇರ‍್ತದೆ.
ಶಕುನಿ ಬಿದ್ದ ಸ್ಥಳುವೆ ಈವತ್ತುನ
ಶಕುನಿ ಪುರ* ಅಂತಾಗದೆ
ಧರುಂರಾಯ್ರು ರೈತಬಾಂಧವರಿಗೆ ಕರವೆತ್ತಿ ಕೈಮುಗುದು
“”ಅಪ್ಪಾ ಪ್ರಜೆಗಳೇ
ಅಣ್ಣತಮ್ದೀರು ಜಗಳ ಆಡ್ಬೇಡಿ
ತಂದೆ ತಾಯ್ಗಳ ನೋಯುಸ್ಬೇಡಿ
ಗುರುಹಿರಿಯರ ಮಾತ ದಿಕ್ಕರಿಸ್ಬೇಡಿ
ಸತ್ಯವನ್ನು ಬಿಡದೆ ಧರ್ಮವನ್ನು ಮರೀದೆ
ನ್ಯಾಯನೀತಿಯಿಂದ ನಡುದು
ಸುಖಶಾಂತಿ ಸಂತ್ರುಪ್ತಿಯಿಂದ ಬಾಳ್ರಪ್ಪ
ನಿಮುಗೆಲ್ಲ ಪರಮಾತ್ಮ ಒಳ್ಳೇದು ಮಾಡ್ಲಿ” ಅಂತ್ಹೇಳಿ –
ಎಲ್ಲರಿಗೂ ಕೈಯಮುಗುದು – ಪಾಂಡವರು
ಅಲ್ಲಿಂದ ಮುಂದುಕೊರಟರು
ಶ್ರೀ ಕ್ರಿಷ್ಣ ಪರಮಾತ್ಮ ನೀನೇ ಗತಿಯೆಂದು
ಮುಂದು ಮುಂದಕೆ ನಡೆದರು – ಪಾಂಡವರು
ಮುಂದು ಮುಂದಕೆ ನಡೆದರು* ಶಕುನಿಪುರವು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿದೆ. ಪೂರ್ವದಲ್ಲಿ ಶಕುನಿಪುರ ಎಂಬ ಹೆಸರಿದ್ದ ಈ ಊರು ಮಧ್ಯಕಾಲದಲ್ಲಿ ಕಲ್ಲುನಾಥಪುರ ಎಂಬ ಹೆಸರಿನಿಂದ ಕರೆಯಲಾಗಿತ್ತು. ರೆಕಾರ್ಡ್‌ಗಳಲ್ಲಿ ಈ ಊರಿನ ಹೆಸರು ಹುಸೇನ್‌ಪುರ ಎಂದಿದೆ. ಇದು ಆಯರಹಳ್ಳಿಯ ಪಕ್ಕದಲ್ಲಿದೆ.